17 November 2012

ನಿನ್ನ ಹೊರತು ಇನ್ಯಾರಿಗೂ......


ಎಂದೆಂದೂ ಒಂದು ಸೇರಲಾರೆವೆಂದು ನಿರೀಕ್ಷೆಯ ಹಳಿಗಳಿಗೆ ಅರಿವಿದ್ದರೂ..... ಅದರ ಮೇಲೆ ಬಾಳಬಂಡಿ ನಿಲ್ಲದೆ ಓಡಲೆ ಬೇಕು, ಸಂಕಟ ಸಂತಸದ ಬೋಗಿಗಳನ್ನ ಸರಿಸಮನಾಗಿ ಎಳೆದೊಯ್ಯಲೇಬೇಕು.... ತನ್ನ ನಿಟ್ಟುಸಿರಿದ್ದರೂ ನೂರಾರು ತಾನು ಬಿಡುತ್ತಿದ್ದರೂ ಹಾದಿಯುದ್ದ ಅರ್ತನಾದದ ಬಿಸಿಯುಸಿರು/ ಆಗಾಗ ಸಂಭ್ರಮದ ಸೀಟಿ ಹೊಡೆಯುವ ಮನಸಾಗೋದೂ ಹೌದು ಎಲ್ಲೆ ಮೀರಿದಾಗ ಖುಷಿ.... ವಿಧಿ ಅಘಾತದ ಸರಪಳಿಯನ್ನ ಎಳೆದು ಒತ್ತಾಯವಾಗಿ ನಿಲ್ಲಿಸಲೂಬಹುದು, ತುರ್ತು ಅಘಾತದ ಸರಿಗೆ ಎಳೆದಾಗ ನಿಲ್ಲಿಸದೆ ಮುನ್ನುಗ್ಗುವಂತಿಲ್ಲ ಅಂತಿಮ ನಿಲ್ದಾಣ ಎಂದಿಗೂ ಸೇರೆನೆಂಬ ಹಟ ಹಿಡಿಯುವಂತಿಲ್ಲ..... ವಿಧಿ ಹೊಡೆದಟ್ಟಿದಲ್ಲಿ ಹೋಗಲೆ ಬೇಕಾದ ನಿರ್ಜೀವ ಯಂತ್ರಕ್ಕೆ ಸಮಾನ ಮನಸು ಮತ್ತೆ ಒಂದಾಗಲಾರೆವು ಎಂಬ ಖಚಿತ ಸುಳಿವಿರುವಾಗ ಅದೆಂದೋ ಕರಟಿ ಹೋಗಿವೆ ಕಣ್ಣೊಳಗಿನ ಕೋಟಿ ಕನಸು// ಕನಸುಗಳಿಲ್ಲದ ಕುರುಡು ಹಾದಿಯಲ್ಲಿ ಸತ್ತ ಮನಸಿನ ಅಂತಿಮಯಾತ್ರೆ ಸಾಗಿದ ಬರಡು ಬೀದಿಯಲ್ಲಿ.... ಒಂಟಿತನವನ್ನು ಅನುಕ್ಷಣ ಮಾರುವ ಮುರುಕು ಮೌನದ ಅಂಗಡಿ ಅನುಗಾಲವೂ ತೆರೆದೆ ಇದೆ, ಪ್ರತಿ ಸಂಜೆ ಕನವರಿಸುವ ಬೆಳಕಿನ ಕನಸು ಕಡು ಕತ್ತಲಿನಲ್ಲಿಯೆ..... ನಿರಾಸೆಯಲ್ಲಿ ಕೊನೆಗೊಳ್ಳುತ್ತದೆ/ ಉದುರಿದ ಕನಸಿನ ಪಕಳೆಗಳೆಲ್ಲ ಒಲವ ಗಿಡಕ್ಕೇನೆ ಗೊಬ್ಬರವಾಗಿ..... ತನ್ನ ಜಾಗದಲ್ಲಿ ಮತ್ತೊಂದು ಸುಮವರಳಿದ್ದನ್ನು ಕಂಡು ಒಳಗೊಳಗೆ ನರಳುತ್ತಲೆ ನಗುವ ನಟಿಸುತ್ತಿದೆ, ನಿರ್ಮಲ ಮನಸಿಗೆ ಬಿದ್ದ ಕಂಬನಿಯ ಪುಟ್ಟ ಹನಿಯಿಂದ ಬಾಳಿನ ಭಿತ್ತಿಯ ಮೇಲೆ.... ಢಾಳಾದ ಕಲೆಯೆದ್ದಿದೆ// ಇನ್ಯಾರನ್ನೋ ಮುಟ್ಟಿ ಅವರೆದೆಯ ಕಲಕುವ ನನ್ನ ಅನುಗಾಲದ ವೇದನೆಗಳಿಗೆ.... ನಿನ್ನ ಕನಸಿನಲ್ಲಿ ಗೇಣು ಜಾಗವೂ ಇಲ್ಲದ್ದು ವಿಚಿತ್ರವಾದರೂ ಸತ್ಯ, ಕರಗದ ಕಲ್ಲಿಗೂ ಒಂದು ಮನಸಿರಬಹುದು ಅದರೊಳಗೂ ಬಾಡದ ಒಂದು ಕನಸಿರಬಹುದು..... ನನ್ನ ನಿರೀಕ್ಷೆ ತೀರ ಹುಸಿ ಹೋಗಲಿಕ್ಕಿಲ್ಲ/ ಪ್ರೀತಿಸುವಷ್ಟಲ್ಲದಿದ್ದರೂ ದ್ವೇಷಿಸುವಷ್ಟಂತೂ ನಾನು ಕೆಟ್ಟವನಿದ್ದಿರಲಿಕ್ಕಿಲ್ಲ ಅನ್ನಿಸುತ್ತೆ.... ಇಲ್ಲದಿದ್ದರೆ ತೀವೃವಾಗಿ ನನ್ನನಿಂದು ದ್ವೇಷಿಸುವ ನಿನಗೂ ಒಂದೊಮ್ಮೆ ನಾನು ಅಷ್ಟು ಇಷ್ಟವಾಗುತ್ತಿದ್ದೆನ?, ಮನಸು ಪಿಸುಗುಡುವ ಪ್ರತಿ ಗುಟ್ಟಲ್ಲೂ ನೀನೆ ನೀನಾಗಿ ಉಳಿದಿರುವಾಗ... ನನ್ನೊಳಗೆ ಯಾವುದೆ ಸಂಗತಿ ಗುಟ್ಟಿನ್ನೆಲ್ಲಿ?// ಪ್ರತಿ ಬಾರಿ ನಿನ್ನ ನೆನಪು ಸುಳಿವಾಗ ನನ್ನೊಳಗೆ ಮಿಡುಕಾಟ ಮೂಡಿಸುವ..... ಮಧುರ ಭಾವಗಳು ಖಂಡಿತ ನನ್ನ ಹಿತಶತ್ರುಗಳು, ಗುಜುರಿಗೆ ಹಾಕುವಷ್ಟು ಹಾಳಾಗಿ ಹೋಗಿರುವ ಹೃದಯ ನನ್ನದು.... ನಿನ್ನ ಹೊರತು ಇನ್ಯಾರಿಗೂ ಅದರ ಮೌಲ್ಯ ಅರಿವಾಗದು/ ಕನಸ ಕರಗಿಸುವ ಕಡುಗಪ್ಪು ಇರುಳೆ ಹಗಲು ಕನಸು ಕಾಣುವ ನಾನೇನಾದರೂ.... ನಾನು ನಿನ್ನ ಕಣ್ಣಿಗೂ ಮರುಳೆ?, ತುಸುವಾದರೂ ಬೀಳಲಿ ಬರಡು ಬಾಳಲ್ಲಿ ಕನಸು ಮೌನದೊಂದಿಗೆ ಮಾತಿಗೆ.... ಇದ್ಯಾತರ ಮುನಿಸು?//

No comments: