06 October 2012

ವಲಿ.... (ಭಾಗ -10 )

















ಮೆಕ್ಕಾ ಪಟ್ಟಣವನ್ನು ತ್ಯಜಿಸಿದ ಎಂಟನೆ ದಿನ ಅವರ ಸವಾರಿ ಮದೀನ ಪಟ್ಟಣದ ಮೇರೆಯನ್ನು ಹೋಗಿ ಮುಟ್ಟಿತು. ಆದರೆ ಆ ಕೂಡಲೆ ಪುರ ಪ್ರವೇಶಿಸದ ಅವರಿಬ್ಬರೂ ಹತ್ತಿರದ ಕೊಬಾ ಎನ್ನುವ ಹಳ್ಳಿಯಲ್ಲಿಯೆ ಉಳಿದುಕೊಂಡರು. ಮದೀನಾ ವಾಸಿಗಳಲ್ಲಿ ಕೆಲವರು ಅದಾಗಲೇ ನೂತನ ಇಸ್ಲಾಮನ್ನು ಒಪ್ಪಿಕೊಂಡಿದ್ದರೂ ಸಹ ಮೆಕ್ಕಾದಲ್ಲಿ ಆದಂತೆ ಇಲ್ಲಿಯೂ ಅವರ ಬುಡಕಟ್ಟಿನೊಳಗೆ ಅದೆ ಕಾರಣಕ್ಕೆ ಒಡಕು ಉಂಟಾಗಿರಬಾರದೇಕೆ? ಅವರು ಅದೇನೆ ಹೊಸ ಧರ್ಮ ಪಾಲಿಸುವ ಪ್ರಮಾಣ ಮಾಡಿದ್ದರೂ ಅವರನ್ನ ಮುಕ್ತವಾಗಿ ನಂಬೋದು ಹೇಗೆ? ಏಕಾಏಕಿ ನಾವು ಅಲ್ಲಿಗೆ ಕಾಲಿಟ್ಟರೆ ದೊರೆಯುವ ಆತಿಥ್ಯದ ಭೀಕರತೆ ಹೇಗಿರಬಹುದು? ಎನ್ನುವ ಆತಂಕಗಳೆಲ್ಲ ಸಹಜವಾಗಿ ಇದ್ದುದರಿಂದ ಈ ಸಂಶಯಾಸ್ಪದ ಆತ್ಮರಕ್ಷಕ ನಡೆಯನ್ನ ಮಹಮದ್ ಹಾಗೂ ಅಬು ಬಕರ್ ಅನುಸರಿಸಿದರು. ನೂತನ ಮತಾಂತರಿಗಳನ್ನ ಇನ್ನೊಮ್ಮೆ ಪರೀಕ್ಷಿಸಿಯೆ ಅಲ್ಲಿಗೆ ಕಾಲಿಡಲು ಅವರಿಬ್ಬರೂ ನಿರ್ಧರಿಸಿದರು. 




ಕೊಬಾದ ಮುಖಂಡ ಕುಲ್ತ್ಹುಂ ಎಂಬಾತನ ಮನೆಯಲ್ಲಿ ಮುಸಾಫಿರನಾಗಿ ಮಹಮದ್ ಆಶ್ರಯ ಪಡೆದರೆ, ಅಬು ಬಕರ್ ಖಾರಿಜಾ ಎಂಬಾತನ ಅತಿಥಿಯಾದ. ಈ ಆತಿಥ್ಯ ಪಡೆಯುವ ಭರದಲ್ಲಿ ಅಬು ಬಕರ್ ಖಾರಿಜಾನ ಮಗಳನ್ನ ಮುಂದೆ ಮದುವೆಯೂ ಆಗಿ ಮಾವನ ಮನೆಯಳಿಯನಾಗಿ ಅಲ್ಲಿಯೆ ಖಾಯಂ ಠಿಕಾಣಿ ಹೂಡಿದ! ಇದರ ಮೂರು ದಿನಗಳ ನಂತರ ಮಹಮದನ ದೊಡ್ಡಪ್ಪನ ಮಗ ಅಲಿ ಮೆಕ್ಕಾದಿಂದ ಪಾರಾಗಿ ಬಂದು ಕೊಬಾದಲ್ಲಿ ಅಣ್ಣನನ್ನು ಸೇರಿ ಕೊಂಡನು. ಅದರ ಮುಂದಿನ ಶುಕ್ರವಾರ ಮಹಮದ್, ಅಬು ಬಕರ್ ಹಾಗೂ ಅಲಿ ಈ ಮೂವರೂ ಸೇರಿ ಮದೀನಾದ ದಾರಿ ಹಿಡಿದರು. ದಾರಿಯ ಮಧ್ಯದಲ್ಲಿ ಬೆನ್ ಸಾಲಿಂ ಎಂಬ ಸ್ಥಳದಲ್ಲಿ ಪ್ರಯಾಣಕ್ಕೆ ವಿರಾಮ ಕೊಟ್ಟು ಒಂದು ಪ್ರಾರ್ಥನಾ ಸ್ಥಳದಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದರು. ಈ ಸ್ಥಳದಲ್ಲಿ ಒಂದು ಮಸೀದಿ ಕಟ್ಟಿಸಿದ ಮುಸ್ಲೀಮರು ಮುಂದೆ ಇದನ್ನೆ "ಜುಮ್ಮಾ ಮಸೀದಿ" ಎಂದು ಕರೆದರು.. ಮಹಮದ್ ಹಾಗೂ ಅವನ ಅನುಚರರ ಸವಾರಿ ಮದೀನದತ್ತ ಹೆಜ್ಜೆ ಹಾಕುತ್ತಿದ್ದ ಹಾಗೆ ಅದಾಗಲೆ ಇಸ್ಲಾಮಿನತ್ತ ಆಕರ್ಷಿತರಾಗಿದ್ದ ಆಸಕ್ತ ಜನರು ಇವರನ್ನು ದಾರಿಯುದ್ದ ಅವರನ್ನು ಸ್ವಾಗತಿಸಿ ಆದರಿಸಿದರು. ದಾರಿಯಲ್ಲಿ ಬಳಲಿದ ಮಹಮದನ ಒಂಟೆ ಬಳಲಿ ಒಂದು ಖರ್ಜೂರದ ತೋಟದಲ್ಲಿ ನಿಂತಿತು. ಆ ಜಾಗ ಯಾರದ್ದೆಂದು ವಿಚಾರಿಸಲು ಮಹಮದ್ ಒಂಟೆಯಿಂದ ಕೆಳಗಿಳಿದ. ಖರ್ಜೂರದ ಮರಗಳಿಂದ ಆವೃತ್ತವಾಗಿದ್ದ ಆ ಜಾಗ ಬೆನ್ ಆನ್ ನೆಝಾರ್ ಕುಟುಂಬಸ್ಥರದ್ದು ಅನ್ನುವ ಪತ್ತೆಯಾಯಿತು. ಮನೆಯೊಡೆಯ ಅಬು ಅಯೂಬನ ಪರಿಚಯವಾಗಿ ಆತ ಅತಿಥಿಗಳನ್ನ ಸತ್ಕರಿಸಿದ. ಈ ಸತ್ಕಾರಕ್ಕೆ ಮಾರುಹೋದ ಮಹಮದ್ ಮುಂದೆ ಮದೀನದಲ್ಲಿ ತನ್ನ ಮನೆ ಹಾಗೂ ಸ್ವಂತ ಮಸೀದಿಯ ನಿರ್ಮಾಣ ಆಗುವವರೆಗೂ ಅಬು ಅಯೂಬನ ಅತಿಥಿಯಾಗಿಯೆ ಉಳಿದ. ಅಲ್ಲಿ ಮೊದಲಿಗೆ ಒಂಟೆ ಬಳಲಿ ನಿಂತ ಜಾಗವನ್ನು ಖರೀದಿಸಲು ನಿರ್ಧರಿಸಿದ ಮಹಮದ್ ಅದರ ಮಾಲಕರನ್ನು ಹುಡುಕಿಸಿದ. ಅವರು ಅನಾಥ ಬಡಪಾಯಿಗಳಾಗಿದ್ದರು. ಅವರಿಗೆ ಹಣ ಪಾವತಿಸಿ ಜಾಗ ಕೊಂಡ ನಂತರ ಅಲ್ಲಿದ್ದ ಮರಗಳನ್ನ ಕಡಿಸಿ ಅನಂತರ ಅಲ್ಲಿದ್ದ ಎಲ್ಲಾ ಹಳೆ ಗೋರಿಗಳನ್ನ ಆಗಿಸಿ ಸಿಕ್ಕ ಮೂಳೆಯ ಅವಶೇಷಗಳನ್ನ ಅಲ್ಲಿಂದ ದೂರ ಸಾಗಿಸಿದ ನಂತರ ಮನೆ ಹಾಗೂ ಮಸೀದಿ ನಿರ್ಮಾಣಕ್ಕೆ ಅಡಿಪಾಯ ಹಾಕಿಸಿದ ಎನ್ನುತ್ತಾನೆ ತನ್ನ " ಸೀಲ್ದ್ ನೆಕ್ತರ್" ಕೃತಿಯಲ್ಲಿ ಇತಿಹಾಸಕಾರ ಅಲ ಮುಬಾರಖಿ.




 ಇದಾದ ನಂತರ ಮೆಕ್ಕದಿಂದ ಹೆಣ್ಣು ಮಕ್ಕಳಾದ ಉಂಕುಲ್ಸುಂ, ಫಾತಿಮಾ ಹಾಗೂ ಹೆಂಡತಿ ಸೌದಾಳನ್ನು ತಾನಿದ್ದಲ್ಲಿಗೆ ಮಹಮದ್ ಕರೆಸಿಕೊಂಡ. ಮಹಮದನ ಹಿರಿಯ ಮಗಳಾದ ಜೈನಬ್ ಹಾಗೂ ಅವಳ ಗಂಡನ ಹೊರತು ಇನ್ನುಳಿದ ಕುಟುಂಬವರ್ಗದವರೆಲ್ಲ ಮದೀನಕ್ಕೆ ಬಂದು ಮುಟ್ಟಿದರು.ಈ ಹಿಂದೆಯೆ ಮೆಕ್ಕಾದಿಂದ ಓಡಿ ಹೋಗಿದ್ದ ಗುಪಿನಲ್ಲಿ ಇನ್ನೊಬ್ಬ ಮಗಳು ರೋಕೈರಾ ಹಾಗೂ ಅವಳ ಗಂಡ ಒತ್ತೆಮನ್ ಬಂದಿದ್ದರು. ಮಹಮದನ ಆಪ್ತ ಗುಲಾಮ ಜೈದ್ ತನ್ನ ಪತ್ನಿ ಉಂಐಮನ್ ಹಾಗೂ ಮಗ ಒಸಾಮನೊಂದಿಗೆ ಮದೀನದಲ್ಲಿಯೆ ಸ್ವಲ್ಪ ಸಮಯ ಹಿಂದಿನಿಂದ ಬೀಡು ಬಿಟ್ಟಿದ್ದ. ಅಬು ಬಕರನ ಸಂಸಾರವೂ ಮಹಮದನ ವಧುವಾಗಿದ್ದ ಎಳೆಯ ಮಗಳು ಆಯೆಷಾಳೊಂದಿಗೆ ಮದೀನದಲ್ಲಿಯೆ ನೆಲೆ ಕಂಡಿತು. ಆದರೆ ಆ ಸಮಯದಲ್ಲಿ ಮದೀನದ ಹವೆ ಅಷ್ಟೇನೂ ಹಿತಕರವಾಗಿಲ್ಲದೆ ಇದ್ದುದರಿಂದ ಬಂದ ಆರಂಭದಲ್ಲಿ ಅವರೆಲ್ಲರೂ ಒಂದಲ್ಲಾ ಒಂದು ಖಾಯಲೆಗೆ ತುತ್ತಾಗಿ ನರಳಿದರು. ಅನಾರೋಗ್ಯದ ಸರಣಿ ಅವರನ್ನ ಕಾಡಿತು. ಮದೀನದ ಪ್ರಜೆಗಳೊಂದಿಗೆ ಭ್ರಾತ್ತ್ರತ್ವ ಬೆಳೆಸುವ ಇರಾದೆಯಿಂದ ತನ್ನೊಂದಿಗೆ ಬಂದ ಎಲ್ಲಾ ಮೆಕ್ಕಾ ಮೂಲದವರಿಗೂ ಸ್ಥಳೀಯ ಮದೀನ ವಾಸಿಗಳಲ್ಲಿ ಇಬ್ಬರನ್ನು ತಮ್ಮ ಸಹೋದರರೆಂದು ಭಾವಿಸಿ ಅವರ ಜೊತೆಗೂಡಿ ಜೀವನ ಸಾಗಿಸುವ ಸೂತ್ರ ಜಾರಿಗೆ ತಂದ. ಆದರೆ ಈ ಸೂತ್ರ ಕೇವಲ ಪುರುಷ ನಿರಾಶ್ರಿತರಿಗೆ ಅನ್ವಯವಾಗುತ್ತಿತ್ತು ಅನ್ನುವುದು ಗಮನಾರ್ಹ !




ಇತಿಹಾಸಕಾರ ಅಲ್ ಮುಬಾರಖಿ ಈ ಈ ಸ್ನೇಹ-ಸಂಬಂಧ ಹಾಗೂ ಭ್ರಾತ್ರತ್ವದ ಮಹಿಮೆ ಸಾರುವ ಉದಾಹರಣೆಯನ್ನು ನೀಡುತ್ತಾನೆ. ಅಬ್ದುಲ್ ರೆಹಮಾನ್ ಎನ್ನುವ ಮೆಕ್ಕಾವಾಸಿ ಇಸ್ಲಾಂ ಸ್ವೀಕರಿಸಿ ಮದೀನಕ್ಕೆ ನಿರಾಶ್ರಿತನಾಗಿ ಬಂದು ಮುಟ್ಟಿದಾಗ ಅವನನ್ನು ಸಾದ್ ಇಬ್ನ ಅರಬ್ ಎಂಬಾತನ ಮನೆಯಲ್ಲಿ ನಿಲ್ಲಲು ನೆಲೆ ಕಲ್ಪಿಸಿ ಅವನನ್ನು ತನ್ನ ಸಹೋದರನಂತೆ ನೋಡಿಕೊಳ್ಳಲು ಮಹಮದ್ ಸೂಚಿಸಿದ. ನೂತನ ಮತಾಂತರಿಯಾಗಿದ್ದ ಸಾದ್ ಇಬ್ನ ಅರಬ್ ತನ್ನ ಮನೆಯಲ್ಲಿ ಅಬ್ದುಲ್ ರೆಹಮಾನನಿಗೆ ಆಶ್ರಯ ನೀಡುವ ಜೊತೆಗೆ ತನ್ನ ಇಬ್ಬರು ಪತ್ನಿಯರಲ್ಲಿ ಒಬ್ಬಳನ್ನು ತೊರೆದು ಅವನಿಗೆ ಆಕೆಯೊಂದಿಗೆ ಮದುವೆ ಮಾಡಿ ಕೊಟ್ಟ! ಇಸ್ಲಾಂ ಕಟ್ಟಳೆಯಂತೆ ಅಬ್ದುಲ್ ರೆಹಮಾನ್ ವಧುದಕ್ಷಿಣೆಯಾಗಿ ಒಂದು ಖರ್ಜೂರದ ಗಾತ್ರದ ಚಿನ್ನದ ಚೂರನ್ನ ನೀಡಿ ಈ ಲಗ್ನ ಮಾಡಿಕೊಂಡು ಸಂಸಾರಿಯಾದ!!. ತನ್ನ ಅನುಚರರ ಕರಸೇವೆಯಿಂದ ಮಹಮದ್ ತಾನು ಕೊಂಡಿದ್ದ ಜಾಗದಲ್ಲಿ ಮನೆಯೊಂದನ್ನು ಕಟ್ಟಿ ಮುಗಿಸಿದ. ಮನೆಯ ಪೂರ್ವದ ಗೋಡೆಗೆ ಅಂಟಿಕೊಂಡಂತೆ ಮಹಮದ್ ತನ್ನ ಹಾಗೂ ತನ್ನ ಪತ್ನಿಯರ ವಸತಿಗಳನ್ನು ನಿರ್ಮಿಸಿಕೊಂಡ.ಕ್ರಮೇಣ ಪತ್ನಿಯರ ಸಂಖ್ಯೆ ಹೆಚ್ಚಿಸಿ ಕೊಂಡಂತೆ ಈ ಜನಾನವನ್ನು ಕಾಲಕಾಲಕ್ಕೆ ವಿಸ್ತರಿಸಲಾಯಿತು. ಅವೆಲ್ಲ ಕೇವಲ ಮಣ್ಣಿನ ಗುಡಿಸಲುಗಳೆ ಆಗಿದ್ದವು ಎನ್ನುತ್ತಾನೆ ವಾಸ್ತುಶಿಲ್ಪಿಯೂ ಆಗಿದ್ದ ಇತಿಹಾಸಕಾರ ಬರ್ಟನ್.



ಮಹಮದ್ ಮದೀನದಲ್ಲಿ ಮೊತ್ತಮೊದಲಿಗೆ ಕಟ್ಟಿಸಿದ ಮಸೀದಿಯ ಗುಮ್ಮಟ ಹಾಗೂ ಸಪೂರವಾದ ಸ್ಥಂಭಗಳು ಪ್ರಪಂಚದ ಇತರ ಮಸೀದಿಗಳ ನಿರ್ಮಾಣಕ್ಕೆ ಮಾದರಿಯಾದವು. ಅದರ ಸರಳತೆ ಹಾಗೂ ಸುಂದರತೆಯನ್ನ ಇನ್ನಿತರ ಎಲ್ಲಾ ಮಸೀದಿಗಳಲ್ಲೂ ಕಾಣಬಹುದು ಎಂದು ಇತಿಹಾಸಕಾರ ಮ್ಯೂರ್ ಅಭಿಪ್ರಾಯ ಪಡುತ್ತಾನೆ. ಏಳು ತಿಂಗಳ ನಿರ್ಮಾಣ ಕಾರ್ಯ ಮುಗಿದ ನಂತರ ತನ್ನ ಪತ್ನಿ ಸೌದಾಳೊಂದಿಗೆ ಮಹಮದ್ ನೂತನ ಗೃಹ ಪ್ರವೇಶ ಮಾಡಿದ. ಈಗಾಗಲೆ ಆಯೆಷಾಳೊಂದಿಗೆ ನಿಶಿತಾರ್ಥ ಮುಗಿದಿದ್ದರಿಂದ ಆಕೆಯನ್ನು ಮದುವೆಯಾಗಿ ನೂತನ ಮನೆ ತುಂಬಿಸಿಕೊಂಡ. ಹತ್ತು ವಯಸ್ಸಿನ ವಧು ಆಯೆಷಾ ಬಿನ್ ಅಬು ಬಕರ್ , ಐವತ್ತು ಮೂರು ವರ್ಷ ಪ್ರಾಯದ ವರ ಮಹಮದ್ ಬಿನ್ ಅಬ್ದುಲ್ಲಾ ಎಂಬ ವರನನ್ನು ಲಗ್ನವಾಗಿ ಸಂಸಾರ ಸಾಗರಕ್ಕೆ ಅಡಿಯಿಟ್ಟಳು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ. ಮಹಮದನ ನಿರ್ಮಿತಿ ಮಸೀದಿಯೆ ಇಸ್ಲಾಮಿನ ಪ್ರಥಮ ಅಭಯಾಶ್ರಯವಾಯಿತು. ಅಲ್ಲಿಯೆ ಆತನ ದೈವವಾಣಿಗಳು ಪುಂಖಾನುಪುಂಖವಾಗಿ ಮೂಡಿ ಬಂದಿತ್ತು. ದಾರ್ಶನಿಕರನ್ನು ಆತ ಭೇಟಿ ಮಾಡುವ ನಗರದ ಸಭಾಂಗಣವೂ ಅದೆ ಆಯಿತು. ಮಹಮದ್ ನಿರ್ಮಿಸಿದ್ದ ಆ ಮಸೀದಿ ಅತ್ಯಂತ ಸರಳ ವಾಸ್ತು ಹೊಂದಿದ್ದು ಯಾವೊಂದು ಭವ್ಯತೆ ಹಾಗೂ ಆಡಂಬರವಿಲ್ಲದಂತೆ ಇತ್ತು. ವಾಸ್ತವವಾಗಿ ತನ್ನ ನಿರ್ವಹಣೆ ಮದೀನಾವಾಸಿಗಳಿಗೆ ಹೊರೆಯಾಗಬಾರದು ಎನ್ನುವ ಮಹಮದನ ಉದ್ದೇಶ ಇದರ ಹಿಂದಿದ್ದರೂ ಇಸ್ಲಾಮಿನ ಮತ ಪಂಡಿತರು ಅದನ್ನ ಪ್ರವಾದಿಯ ಸರಳತೆಯ ಭೋದನೆ ಎಂದು ವ್ಯಾಖ್ಯಾನಿಸಿ ಅದಕ್ಕೊಂದು ದೈವತ್ವವನ್ನು ಆರೋಪಿಸಿದರು. ಬಿಲಾಲ್ ಎಂಬ ದೊಡ್ಡ ಗಂಟಲಿನ ತನ್ನ ಅನುಚರನಿಗೆ ನಿತ್ಯ ಐದು ಹೊತ್ತಿನ ಪ್ರಾರ್ಥನೆಗೆ ಎಲ್ಲಾ ಇಸ್ಲಾಂ ಶ್ರದ್ಧಾಳುಗಳಿಗೆ ಕರೆ ನೀಡುವ ಮಹತ್ವದ ಜವಾಬ್ದಾರಿಯನ್ನು ಮಹಮದ್ ವಹಿಸಿದ. ಉಚ್ಚ ಧ್ವನಿಯ ಬಿಲಾಲನ ದೊಡ್ಡ ಗಂಟಲಿನ ಉಪಯೋಗವನ್ನು ಮಹಮದ್ ಸರಿಯಾಗಿಯೆ ಪಡೆದುಕೊಂಡ. ಆಜಾನ್ ಎಂದು ಕರೆಯಲಾಗುವ ಈ ವಿಧಿಯನ್ನ ಜಾರಿಗೆ ತರುವಲ್ಲಿ ಮಹಮದ್ ಬಹಳಷ್ಟು ಪ್ರಯಾಸ ಪಡಬೇಕಾಯಿತು.




 ಮಹಮದನೊಂದಿಗೆ ತಾವು ಹೊಸತಾಗಿ ನಂಬಿದ ಧರ್ಮಕ್ಕಾಗಿ ಊರು ಬಿಟ್ಟು ಮದೀನಕ್ಕೆ ಬಂದ ಎಲ್ಲರನ್ನೂ "ಮಜಹರೀನ್" ಅಂದರೆ ನಿರಾಶ್ರಿತರೆಂದು ಮದೀನಾವಾಸಿಗಳು ಕರೆದರು. ತಮ್ಮ ಸಕಲವನ್ನೂ ತ್ಯಾಗ ಮಾಡಿ ಬಹುತೇಕ ಬರಿಗೈಯಲ್ಲಿಯೆ ಬಂದಿದ್ದ ಅವರನ್ನು ಯಾವೊಂದೂ ಕೊರತೆಯಾಗದಂತೆ ಮದೀನಾ ವಾಸಿಗಳು ಆದರಿಸಿದರು. ಹೀಗೆ ಆದರಿಸಿ ಆಶ್ರಯ ನೀಡಿದ ಮದೀನಾವಾಸಿಗಳನ್ನು "ಅನ್ಸಾರಿ"ಗಳೆಂದು ಕರೆಯಲಾಯಿತು. 'ಅನ್ಸಾರ್" ಎಂದರೆ ಅಭಯ ಹಸ್ತ ಚಾಚುವವರು ಅಥವಾ ಸನ್ಮಿತ್ರರು ಎನ್ನುವ ಅರ್ಥ ಬರುತ್ತದೆ. ಮದೀನಾವಾಸಿಗಳಲ್ಲಿ ಆವ್ಸ್ ಹಾಗೂ ಖಸ್ರಾಜ್ ಬುಡಕಟ್ಟಿನವರೆ ಅಧಿಕ ಸಂಖ್ಯೆಯಲ್ಲಿದ್ದು ಶತಶತಮಾನಗಳ ವೈರತ್ವ ಅವರ ನಡುವೆಯಿದ್ದು ರಕ್ತಪಾತವಾಗುವ ಮಟ್ಟಿಗೆ ಅವರು ಪರಸ್ಪರ ಕಾದಾಡುತ್ತಿದ್ದರು. ಆದರೆ ಮಹಮದನ ನೂತನ ಮತ ಒಪ್ಪಿಕೊಂಡ ನಂತರ ಅವರು ಹಳೆಯ ವಯಕ್ತಿಕ ವೈರವನ್ನು ಮರೆತು ಮಹಮದನ ನಾಯಕತ್ವವನ್ನು ಒಪ್ಪಿಕೊಂಡರು. ಆದರೂ ಇಸ್ಲಾಮಿಗೆ ಆರಂಭದಲ್ಲಿ ದೊರೆತ ಗೌರವ, ಭಕ್ತಿ ಹಾಗೂ ಮಹಮದನ ನಾಯಕತ್ವಕ್ಕೆ ದೊರೆತ ಮನ್ನಣೆ ಪೂರ್ಣ ಪ್ರಮಾಣದ್ದಾಗಿರಲಿಲ್ಲ ಅನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ. ಎದುರಿಗೆ ವಿಶ್ವಾಸ ನಟಿಸಿದರೂ ಹಿಂದೆ ಆಕ್ರೋಶ ಪ್ರಕಟಿಸುವವರೂ ಕೊರತೆಯಿಲ್ಲದಷ್ಟು ಇದ್ದರು. ಅವರೆಲ್ಲರನ್ನೂ ಮಹಮದ್ "ಕಪಟ ವಿಶ್ವಾಸಿ'ಗಳೆಂದು ಕರೆದ. ಮದೀನಾ ವಾಸದ ಆರಂಭದ ದಿನಗಳಲ್ಲಿ ಮಹಮದ್ ಯಹೂದಿಗಳ ವಿಶ್ವಾಸ ಗಳಿಸಲು ಅನೇಕ ಸ್ನೇಹ ವರ್ಧಕ ಕ್ರಮಗಳನ್ನು ಕೈಗೊಂಡ.




ಉದಾಹಾರಣೆಗೆ ಯಹೂದಿಗಳು ಆಚರಿಸುತ್ತಿದ್ದ "ಪ್ರಾಯಶ್ಚಿತದ ದಿನ"ವನ್ನು ಉಪವಾಸದ ದಿನವನ್ನಾಗಿ ಆಚರಿಸಲು ಕರೆ ನೀಡಿದ. ಇಸ್ಲಾಮಿಗೆ ಧರ್ಮಾಂತರವಾದ ನಂತರವೂ ಅಸಲಂ ಬುಡಕಟ್ಟಿನ ಯಹೂದಿಗಳಿಗೆ ಅದೆ ಪೂರ್ವ ಧರ್ಮಾಚರಣೆಯ "ಪ್ರಾಯಶ್ಚಿತದ ದಿನ" ಆಚರಿಸಲು ಸಮ್ಮತಿ ನೀಡಿದ. "ಟೋರಾ"ದಲ್ಲಿ ಬರೆದಿರುವಂತೆ ತಮ್ಮ ಮುಂದಿನ ಪ್ರವಾದಿಗಳು ಸಿರಿಯಾದಲ್ಲಿ ಹುಟ್ಟಿ ಬರುವರೆಂಬ ನಂಬಿಕೆ ಹೊಂದಿದ್ದ ಯಹೂದಿಗ;ಳನ್ನ ಭಾವನಾತ್ಮಕವಾಗಿ ಯಾಮಾರಿಸಲು ಸಿರಿಯಾದತ್ತ ಪ್ರಯಾಣ ಬೆಳೆಸಿದರೂ ಸಹ ಉರಿ ಬಿಸಿಲಿನ ಹವಾಮಾನ ವೇಪರಿತ್ಯದಿಂದಾಗಿ ಈ ನಕಲಿ ನಾಟಕ ನಡೆಸಲಾಗಲಿಲ್ಲ ಅನ್ನೋದು ಬೇರೆ ಮಾತು. ಆದರೂ ಈ ಯಹೂದಿಗಳ ವಿಶ್ವಾಸ ಗಳಿಸುವ ಪ್ರಯತ್ನದಲ್ಲಿ ಅವರ ಅನೇಕ ಆಚರಣೆಗಳಿಗೆ ಇಸ್ಲಾಮಿನಲ್ಲಿಯೂ ಗೌರವ ಪೂರ್ವಕ ಒತ್ತು ನೀಡಿದ. ಯಹೂದಿಗಳ ಅಂತಿಮ ಯಾತ್ರೆ ಹಾದು ಹೋಗುವ ಸಂದರ್ಭಗಳಲ್ಲಿ ಮಹಮದ್ ಹಾಗೂ ಅವನ ಅನುಯಾಯಿಗಳು ಎದ್ದು ನಿಂತು ಗೌರವ ಪ್ರಕಟಿಸುತ್ತಿದ್ದರು. ಯಹೂದಿಯೊಬ್ಬ ಒಮ್ಮೆ ಮಹಮದನನ್ನು ತನ್ನ ಮನೆಗೆ ಊಟಕ್ಕೆ ಆಹ್ವಾನಿಸಿ ಅಲ್ಲಿ ರೊಟ್ಟಿ, ಬಾರ್ಲಿ ಹಾಗೂ ಕೊಳೆತ ಮಾಂಸವನ್ನು ನೀಡಿದರೂ ಮಹಮದ್ ಅದನ್ನು ಸಭ್ಯತೆಯಿಂದ ಒಲ್ಲೆ ಎನ್ನದೆ ತಿಂದು ಮುಗಿಸಿದ!





 ಯಹೂದಿಗಳ ಒಡನಾಟದಿಂದ ಅವರ ಧರ್ಮದ ಬಗ್ಗೆ ಮಹಮದ್ ತಿಳಿದು ಕೊಂಡು ಅನೇಕ ಧರ್ಮ ಸೂಕ್ಷ್ಮದ ಮಾಹಿತಿಗಳನ್ನ ಕಲೆ ಹಾಕಿದರೂ ಸಹ ಆತ ಅವರ ಧರ್ಮಗ್ರಂಥದ ಸಂಪೂನ ಅಧ್ಯಯನ ಕೈಗೊಂಡು ಅದರ ಆಚರಣೆಗೆ ಇಳಿದಿರಲಿಲ್ಲ. ಅನಕ್ಷರಸ್ಥನಾದ ಅವನಿಗೆ ಅದು ಅಸಾಧ್ಯವೂ ಆಗಿತ್ತು. "ಬೆನ್ ಕುರೈಜಾ" ಬುಡಕಟ್ಟಿನ ಯಹೂದಿಯೊಬ್ಬ ಬೈಬಲ್ಲಿನ ಹೊಸ ಒಡಂಬಡಿಕೆಯ ಕೆಲ ಅಧ್ಯಾಯಗಳನ್ನು ಅರೆಬ್ಬಿಯಲ್ಲಿ ಅನುವಾದಿಸಿ ಅದರ ಪ್ರತಿಯೊಂದನ್ನು ಅಧ್ಯಯನಕ್ಕೆಂದು ಮಹಮದನ ನೆಂಟ ಓಮರನಿಗೆ ನೀಡಿದಾಗ ಆತ ಮಹಮದನ ಅಪ್ಪಣೆಯಿಲ್ಲದೆ ಅದನ್ನ ಓದುವುದಿಲ್ಲವೆಂದು ಸಾರಿದ. ಇದಕ್ಕೆ ಒಪ್ಪಿಗೆ ನೀಡದ ಮಹಮದ್ ಕೂಡ " ಒಂದೊಮ್ಮೆ ಪ್ರವಾದಿ ಮೂಸ ( ಯಹೂದಿಗಳ ಮೊದಲನೆ ಪ್ರವಾದಿ ಮೋಸೆಸ್.) ಪುನರ್ಜನ್ಮ ತಾಳಿ ಪುನಃ ಭೂಮಿಯಲ್ಲಿ ಹುಟ್ಟಿ ಬಂದರೂ, ಇಸ್ಲಾಮನ್ನ ಒಪ್ಪಿ ನಡೆಯುವವರ್ಯಾರೂ ತನ್ನ ಬಿಟ್ಟು ಮರಳಿ ಅವರ ಹಿಂದೆ ನಡೆಯುವಂತಿಲ್ಲ!" ಎಂದು ಅಬ್ಬರಿಸಿದ! ಇಸ್ಲಾಮಿನಲ್ಲಿ ಸ್ವತಃ ಮಹಮದನೆ ಘೋಷಿಸಿದ ಹಾಗೆ ಪುನರ್ಜನ್ಮದಲ್ಲಿ ನಂಬಿಕೆಯೆ ಇಲ್ಲ ಎನ್ನುವುದು ನೆನಪಿಡಬೇಕಾದ ಸಂಗತಿ?!


 ( ಇನ್ನೂ ಇದೆ...)

No comments: