29 October 2012

ಯಾರದ್ದೋ ಕಸ... ಅಣ್ಣಮ್ಮನ ಜಾತ್ರೆ?!


ನಾಡಿನ -ನುಡಿಯ ಇಲ್ಲಿನ ನೆಲ-ಜಲದ ಕುರಿತು ಪುಟಗಟ್ಟಲೆ ಪತ್ರಿಕೆಗಳಲ್ಲಿ ಹಾರಾಡುವ "ಉಟ್ಟು ಖನ್ನಡ ಓರಾಟಗಾರರು" ಅದೆಲ್ಲಿ ಹಪ್ತಾ ಕಮಾಯಿಸುತ್ತಾ ಅಂಡಲೆಯುತ್ತಿದ್ದಾರೆ? ಈ ವಸೂಲಿ ವೀರರಿಂದ ಮೊದಲು ಕನ್ನಡ ಹಾಗೂ ಕರುನಾಡನ್ನ ಕಾಪಾಡಬೇಕಿದೆ. ಥರೇವಾರಿ ಕಾಯಿಲೆಗಳು ಕಸದ ಹೆದ್ದಾರಿಯೇರಿ ನಗರ ಪ್ರವೇಶಿಸುವ ಮೊದಲು ಇದಕ್ಕಾಗಿ ಹೋರಾಡಲಿಕ್ಕೇನಾಗಿದೆ ರೋಗ ಈ ಅರ್ಜೆಂಟ್ ಕನ್ನಡಮ್ಮನ ಅರ್ಜೆಂಟ್ ಕುವರರ ಅರ್ಭಟಕ್ಕೆ? ನಮ್ಮೂರಿನ ಪೇಪರ್'ಗಳಲ್ಲಿ ಕೈ ಸೋಲುವಷ್ಟು ಬರೆದು ಬರೆದು ಕೈ ಬಿದ್ದು ಹೋಗಿದ್ದರೂ "ಕ್ಯಾರೇ!" ಅನ್ನದ ಎಲ್ಲರೂ ಇದೀಗ ಅಮೇರಿಕಾದ "ನ್ಯೂಯಾರ್ಕ್ ಟೈಮ್ಸ್"ನ ಕಮಂಡಲದಿಂದ ತೀರ್ಥ ಸುರಿದಿದ್ದೇ ತಡ "ಸತ್ತಂತಿಹರನು ಬಡಿದೆಚ್ಚರಿಸಿ"ದಂತೆ ಗಡಿಬಿಡಿ ಮಾಡ್ತಿದಾರೆ. ಇನ್ನು ಇಷ್ಟು ದಿನ "ನಿತ್ಯ" "ಋಷಿ" ಮೂಲದ ತಲಾಷಿನಲ್ಲಿ ನೌಟಂಕಿಯಾಡುತ್ತಿದ್ದ "ಉತ್ತಮ ಸಮ್ 'ಮಜ'"ಕ್ಕಾಗಿ "ನೇರ (ವಾಗಿ)- (ಮೂರೂ) ಬಿಟ್ಟ- ನಿರಂತರ (ಹಡಬೆ)"ಗಳು ಈಗ "ಕಸದಿಂದ ಟಿಆರ್'ಪಿ ರಸ"ವನ್ನ ತೆಗೆಯಲು ಹೊರಟಿದ್ದಾರೆ! ಅಂತೂ ಕೂಗು ಮಾರಿಗಳಿಗೆಲ್ಲ ಅಮೇರಿಕಾದ ಮೋಹನ ಮುರುಳಿಯ ರಾಗಕ್ಕೆ ಅರ್ಜೆಂಟ್ ಎಚ್ಛರವಾಗಿದೆ. ಅಂತೂ ನಮ್ಮೂರಿನವರು ಬರೆದರೆ ರದ್ದಿ, ಅಮೇರಿಕೆಯಲ್ಲಿ ಪ್ರಕಟವಾದರಷ್ಟೆ ಸುದ್ದಿ ಅನ್ನುವುದು ಮತ್ತೆ ಸರಾಸಗಟಾಗಿ ಸಾಬೀತಾಯಿತು. ನಾಚಿಕೆಗೇಡು. ಊರೆಲ್ಲಾ ವಿಲೇವಾರಿಯಾಗದ ಕಸದ ರಾಶಿ ಹೊತ್ತು ನಾರುತ್ತಿದೆ. ನಮ್ಮಲ್ಲಿ ನಿಮ್ಮೂರಿನ ದರಿದ್ರ ಕಸ ತಂದು ಸುರಿಯಬೇಡಿ ಎಂದು ಆಗ್ರಹಿಸುವ ಮಂಡ್ಲೂರು ಮತ್ತಿತರ ಕಸ ಸುರಿವ ತಾಣಗಳ ಜನರ ನೋವೂ ನ್ಯಾಯವೆ ಆಗಿದೆ. ನಮಗದು ಕಸವಾಗಿದ್ದರೆ ಅವರಿಗೂ ಅದು ಕಸವೇ ತಾನೆ? ಸಂಸ್ಕರಿಸುವ ಉದ್ದೇಶ ಹೊತ್ತು ಪಡೆದ ಅಲ್ಲಿನ ಭೂಮಿಗಳಲ್ಲಿ ಮಾಡಬೇಕಿದ್ದ ಕಸ ಸಂಸ್ಕರಣೆಯ ಹೆಸರಲ್ಲಿ ಹಡಬಿಟ್ಟಿ ದುಡ್ಡು ಹೊಡೆದ ಜನಪ್ರತಿನಿಧಿಗಳ, ಪಾಲಿಕೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ದುಷ್ಟ ಗ್ಯಾಂಗ್; ಈಗ ಮ್ಯೂಸಿಕಲ್ ಛೇರಿನಂತೆ ತಪ್ಪನ್ನ ಇನ್ನೊಬ್ಬರ ಮೇಲೆ ಸರಾಗವಾಗಿ ವರ್ಗಾಯಿಸುತ್ತಾ ಮುಸಿಮುಸಿ ನಗುತ್ತಿದ್ದಾರೆ. ಕಸದಲ್ಲಿ ಹೊಡೆದ ಕಾಸು ಅವರ ತಿಜೋರಿಯಲ್ಲಿ ಗಹಗಹಿಸುತ್ತಿದೆ. ಲಜ್ಜೆ ಮರೆತು ಮಾಡುವ ಕೆಲಸಬಿಟ್ಟು ಮೆರೆಯುತ್ತಾ ಇರುವ ಈ ಆಳುವ ಮಂದಿಗೆ ಮಾನ-ಮರ್ಯಾದೆ ಎನಾದರೂ ಇದೆಯ? ಅಂದಹಾಗೆ ಖರ್ಚಿಗೆ ಕಾಸಿಲ್ಲದೆ ಬಿಬಿಎಂಪಿ ಕಂಡಕಂಡವರಲ್ಲಿ ಸಾಲ ಎತ್ತುತ್ತಿದೆಯಂತಪ್ಪ! ಇದಾಗಲೆ ಎತ್ತಿದ್ದ ತೀರಿಸಲಾಗದ ಹಳೆ ಸಾಲ ತೀರಿಸೋಕೆ ಮತ್ತೊಂದು ಹೊಸ ಸಾಲ!! ಇವಕ್ಕೆ ಹಣ ಹೊಂದಿಸೊಕೆ ಪಾಲಿಕೆಯ ದೊಣೆನಾಯಕರು ಜನರ ಆಸ್ತಿಗಳನ್ನ ಕಂಡಕಂಡವರಿಗೆ ಅಡ ಹಾಕುತ್ತಾ ಕಾಲ ಹಾಕುತ್ತಿದ್ದಾರೆ. ಬಡ ಬೆಂಗಳೂರಿಗ ಮಾತ್ರ ಮೂಗು ಮುಚ್ಚಿಕೊಳ್ಳಲು ಪರದಾಡುತ್ತಿದ್ದರೆ ಅಧಿಕಾರದ ಮತ್ತಿನಲ್ಲಿ ಮೇಯೋರು ಮಾತ್ರ ಹಸನಾಗಿ ಮೂರೂ ಬಿಟ್ಟು ಮೇಯ್ತಾನೆ ಇದಾರೆ. ಇವರ ಕೃಪೆಯಿಂದ ಈಗಷ್ಟೆ ಶುರುವಾಗಿರುವ ಚಳಿಯಲ್ಲಿ ನಗರದ ನಾಗರೀಕರ ಚಳಿಯಲ್ಲಿ ನಾಸಿಕಕ್ಕೆ ನಿರಂತರ ಉಚಿತವಾದ ನಾತ. ಇಂತಾ ಸು"ಭಿಕ್ಷ" ಕಾಲದಲ್ಲಿ ತಿರುಪತಿ ತಿಮ್ಮಪ್ಪನ ಹೆಸರಿಟ್ಟು ಕೊಂಡಿರೋ ಮೇಯರ್-ಉಪ ಮೇಯರ್'ಗಳೆಂಬ ಗಳ ಹಿಡುಕರಿಬ್ಬರೂ ಸೇರಿ ಪಾಲಿಕೆಯನ್ನ ಚನ್ನಾಗಿ ಮುಂಡಾಯಿಸಿ ಇಡೀ ಬೆಂದಕಾಳೂರಿನ ಪ್ರಜೆಗಳಿಗೆ ಉಚಿತ ಉಂಡೆನಾಮ ತಿಕ್ಕುತ್ತಿದ್ದಾರೆ. ಇಂತದ್ದರಲ್ಲಿ ಇವರಲ್ಲೊಬ್ಬ ಹೈವಾನ ತನ್ನ ಜಾತಿಯ "ಕುರಿ" ಪುರಸೇವಕರ ಮಂದೆ ಹೊಡಕೊಂಡು ಥೇಟ್ "ಕುರುಬ"ನ ಗೆಟಪ್ಪಿನಲ್ಲಿ ದುಬೈಗೆ ಹೋಗಿ ಬಂದ, ಅಫ್'ಕೋರ್ಸ್ ಬಿಬಿಎಂಪಿಯ ಖಜಾನೆಯ ಖರ್ಚಲ್ಲಿ. ಇದಕ್ಕೆ ಸಡ್ಡು ಹೊಡೆಯುವಂತೆ ಅಳಿದೂರಿಗೆ ಉಳಿದವನೆ "ಗೌಡ"ನಂತಾಡಿದ ಇನ್ನೊಬ್ಬ ತನ್ನ ಜಾತಿಯ ಪುರಸೇವಕರನ್ನೆಲ್ಲ ಥೇಟ್ ಗೌಡಿಕೆಯ ಗತ್ತಲ್ಲಿ ಅದೆ ಪಾಲಿಕೆಯ ಖರ್ಚಿನಲ್ಲಿ ಮೂರ್ಮೂರು ದಿನ ಮಡಿಕೇರಿ ಸುತ್ತಿಸಿದ. ಊರು ನೈರ್ಮಲ್ಯದ ವಿಷಯದಲ್ಲಿ ಹಳ್ಳ ಹಿಡಿಯುತ್ತಿದ್ದರೆ ಈ ಖದೀಮರಿಗೆ ಮಾತ್ರ ತೆರಿಗೆದಾರರ ದುಡ್ಡಲ್ಲಿ ಚಿಲ್ಲರೆ ಶೋಕಿ ಮಾಡುವ ಖಾಯಿಲೆ. ನೆನಪಿಡಿ ಬಿಬಿಎಂಪಿಯೆಂಬ ಬಡ ಗೋಮಾಳವನ್ನ ಈ ಇಬ್ಬರೂ ಮನಸೋ ಇಚ್ಛೆ ಅಧಿಕಾರದ ಹೆಸರಲ್ಲಿ ನಿರಾತಂಕವಾಗಿ ಮೇಯ್ದು "ಮೇಯರ್" ಎನ್ನುವುದು "ಮೇಯುವವರ್" ಕೂಡಾ ಆಗಬಹುದು ಎನ್ನುವುದನ್ನ ಸಾಬೀತು ಪಡಿಸಿ ಪುನೀತರಾದರು. ಇಬ್ಬರ ಪ್ರವಾಸದ ಖರ್ಚನ್ನೂ ಬಡ ಬಿಬಿಎಂಪಿಯೆ ಸಾಲದ ಶೂಲ ಹೊತ್ತೇ ಭರಿಸಲಾಗದೆ ಭರಿಸಿತು. ಮೇರಾ ಭಾರತ್ ಮಹಾನ್!

No comments: