07 October 2012

ನನಸಾಗದ ಕನಸಿನ ಆನೆಯ ಅಂಬಾರಿಯೇರಿ...
















( ಮುಂದುವರೆದದ್ದು...)



 ಆನೆಯ ಸವಾರಿ ಮಾಡುವ ನಾಡದೇವಿ ರಾಮೇಶ್ವರ ದೇವಸ್ಥಾನದಿಂದ ಹೊರಟು ಕುಶಾವತಿಯ ಪಾರ್ಕ್ ಮುಟ್ಟಲು ಆ ಜನಜಂಗುಳಿಯಲ್ಲಿ ಭರ್ತಿ ಎರಡರಿಂದ ಮೂರು ಘಂಟೆಯ ಕಾಲ ಬೇಕಾಗುತ್ತಿತ್ತು. ಹೆಚ್ಚು ಕಡಿಮೆ ಮೂರು ಕಿಲೋಮೀಟರ್ ದೂರವಿದ್ದ ಈ ಅಂತರ ಘಂಟೆಗೆ ಒಂದು ಕಿಲೋಮೀಟರ್ ವೇಗದಲ್ಲಿ ನೆರೆದವರನ್ನು ರಂಜಿಸುತ್ತಾ ಅಕ್ಷರಶಃ ತೆವಳಿಕೊಂಡು ಹೋಗುತ್ತಿದ್ದುದರಿಂದ ಇಷ್ಟು ಗರಿಷ್ಠ ವೇಗ ಇದ್ದದ್ದೆ ಹೆಚ್ಚು. ಇಷ್ಟೊಂದು "ಅತಿವೇಗ" ಇರುತ್ತಿದ್ದುದೆ ಈ ಎಲ್ಲಾ ಕಿರಿಕಿರಿಯನ್ನೂ ಸಹಿಸಿಕೊಂಡು ಸ್ಥಬ್ಧಚಿತ್ರಗಳಾಗಿ ವಿವಿಧ ತೆರೆದ ವಾಹನಗಳಲ್ಲಿ ಚಿತ್ರವಿಚಿತ್ರ ವೇಷ ತೊಟ್ಟು -ಧಾರಾಳ ಬಣ್ಣ ಬಳಿಸಿಕೊಂಡು ಸುಡು ಸೆಖೆಯಲ್ಲಿ ನಿಂತಿರುವ ಪಾತ್ರಧಾರಿಗಳ ಹಾಗೂ ಅಂಬಾರಿ ಹೊತ್ತು ಬಿಸಿಲಲ್ಲಿ ಬರಿಗಾಲಲ್ಲಿ ಅಷ್ಟು ದೂರ ಕಾದ ಟಾರು ರಸ್ತೆಯಲ್ಲಿ ಸಾಗುವ ಆನೆಯಮ್ಮನ ಪೂರ್ವಜನ್ಮದ ಭಾಗ್ಯ!. ಇದು ಸಾಲದು ಎಂಬಂತೆ ನಡುನಡುವೆ ತಟ್ಟಿರಾಯ, ಹುಲಿವೇಷ, ಈಗೀಗ ಜಾಗತೀಕರಣದ ಗಾಳಿ ಬಲವಾಗಿಯೆ ಬೀಸಲಾರಂಭಿಸಿದ ಮೇಲೆ ನೇರ ಅಮೆರಿಕಾದ ಡಿಸ್ನಿಲೋಕದಿಂದ ಹಾರಿ ಬಂದಂತೆ ಕಾಣುವ ಡೋನಾಲ್ದ್ ಡೆಕ್, ಮಿಕ್ಕಿ ಮೌಸ್ ಹೀಗೆ ಅಸಹಜ ಗಾತ್ರದ ಅರ್ಜೆಂಟ್ ಫಾರನ್ ಛದ್ಮವೇಷಗಳು, ಅದೇನನ್ನೋ ನೋಡಿ(?) ಅವಾಕಾಗಿ ಬಾಯಿಗೆ ಬೆರಳಿಟ್ಟು ಕೊಂಡ ಕೂಚುಭಟ್ಟ, ಬೊಚ್ಚು ಬಾಯಿ ಕಳಿದ ಅಜ್ಜ -ಅಜ್ಜಿಯ ಜೋಡಿ ಹೀಗೆ ಇನ್ನೂ ಅನೇಕ ದೊಡ್ಡಗಾತ್ರದ ಬೊಂಬೆಗಳಿಗೂ ಭರಪೂರ ಪ್ರತಿಭಾ(?) ಪ್ರದರ್ಶನಕ್ಕೆ ಅವಕಾಶವಾಗಬೇಕಲ್ಲ? ಹೀಗಾಗಿ ಅನಿವಾರ್ಯವಾಗಿ ಇಡಿ ಮೆರವಣಿಗೆ ಯಾವುದೋ ಸ್ಲೋಮೋಶನ್ ಸಿನೆಮಾದ ಹಾಡಿನ ಶಾಟಿನಂತೆ ನೋಡುವವರ ಕಣ್ಣಿಗೆ ಬೀಳುತ್ತಿತ್ತು.



 ಉತ್ಸಾಹಿ ಹುಲು ಮಾನವರ ಇವೆಲ್ಲ ಕೋಟಲೆಗಳನ್ನ ಸಹಿಸಿಕೊಂಡ ಆನೆಯಮ್ಮನ ಮೆರವಣಿಗೆ ಶಿವಮೊಗ್ಗ ರಸ್ತೆಯಲ್ಲಿದ್ದ ಊರಿನ ಗಡಿ ಮುಟ್ಟುವಾಗ ಅಂತೂ ಬಾನಾಡಿಗಳು ತಮ್ಮ ಗೂಡು ಸೇರುವ ಹೊತ್ತಾಗಿರುತ್ತಿತ್ತು. ಅಲ್ಲಿ ಕುಶಾವತಿಯ ನೆಹರೂ ಉದ್ಯಾನವನದಲ್ಲಿದ್ದ ಶಮಿವೃಕ್ಷದ ಪೂಜೆಯನ್ನ ಆನೆಯಮ್ಮನ ಬೆನ್ನ ಮೇಲಿರುತ್ತಿದ್ದ ಮೂಲದೇವಿಯ ಮುಖಬಿಂಬದ ಮುಂದೆ ನೆರವೇರಿಸಿ ;ಚಿಗುರಿರುತ್ತಿದ್ದ ಆ ಗಿಡದ ಮೇಲೆರಗಿದ ಭಕ್ತಾದಿಗಳೆಲ್ಲ ಭಕ್ತಿಯ ಪರಾಕಾಷ್ಠೆಯಲ್ಲಿ ಸಾಸಿವೆ ಗಾತ್ರದ ಕೊಟ್ಟ ಕೊನೆಯ ಹಸಿರು ಎಲೆಯನ್ನೂ ಬಿಡದಂತೆ ಮರವನ್ನ ಬೋಳಿಸಿ, "ಪ್ರೀತಿ ವಿಶ್ವಾಸವಿರಲಿ" ಅಂತ ಪರಸ್ಪರ ಹೇಳಿಕೊಳ್ಳುತ್ತಾ ಊರಿನುದ್ದ ಎಲ್ಲರೂ ಅವನನ್ನ ವಿನಿಮಯ ಮಾಡಿಕೊಳ್ಳುತ್ತಿರುವಾಗ ಬಾನೆಲ್ಲ ಕಾಡಿಗೆ ತೀಡಿದಂತೆ ಪೂರ್ಣ ಕತ್ತಲಾವರಿಸಿ ದಸರೆಯ ಸಂಭ್ರಮಗಳೆಲ್ಲ ಆ ವರ್ಷದ ಮಟ್ಟಿಗೆ ಕೊನೆಯಾಗಿ ಆನೆಯಮ್ಮ ಮರು ಮೆರವಣಿಗೆಯನ್ನ ದೇವಿಯ ಬಿಂಬವನ್ನ ಮರಳಿ ಹೊತ್ತು ದೇವಸ್ಥಾನಕ್ಕೆ ಮುಟ್ಟಿಸುವ ಶಾಸ್ತ್ರ ಮುಗಿಸಿ ತನ್ನ ಸಕ್ರೆಬೈಲಿನ ಬಿಡಾರಕ್ಕೆ ಹೊರಟು ನಿಲ್ಲುತ್ತಿದ್ದಳು, ಅವಳ ಕಿರು ಸೊಂಡಿಲು ಕುಮಾರ ತನ್ನ ಪುಟ್ಟ ಕಿವಿಯಾಡಿಸುತ್ತಾ ನಮ್ಮೂರಿಗೆ ಸಂತಸದಿಂದಲೇ ವಿದಾಯ ಹೇಳುತ್ತಿದ್ದ.



ದಸರದ ಸಡಗರ ಹೀಗೆ ಪ್ರತಿ ವರ್ಷವೂ ಹೊಸತಾಗಿಯೆ ನಮ್ಮನ್ನ ಆವರಿಸಿ ಕೊಳ್ಳುತ್ತಿದ್ದುದು ಹೀಗೆ. ಆದರೆ 1996ರ ದಸರೆಯನ್ನ ಕೊನೆಯುಸಿರಿರುವ ತನಕವೂ ಬಾಳಿನುದ್ದ ನಾನು ಮರೆಯಲಾರೆ. ಏಕೆಂದರೆ ಅಂತಹ ಒಂದು ಮೆರವಣಿಗೆಯಲ್ಲಿ ಹದಿನೈದು ವರ್ಷಗಳ ಹಿಂದೆ ನಾನೂ ಒಂದು ಪಾತ್ರಧಾರಿಯಾಗಬೇಕಿತ್ತು! ಅದು ಸಮುದ್ರ ಮಥನದ ಸ್ತಬ್ಧಚಿತ್ರ. ನೋಡಲು ಎಳೆತನದಲ್ಲಿ ಕತ್ತೆಯೂ ಮುದ್ದಾಗಿಯೇ ಇರುತ್ತದಂತೆ, ಅಲ್ಲದೆ ನನಗೂ ಕತ್ತೆಮರಿಯ ವಯಸ್ಸಾಗಿದ್ದ ಪುಣ್ಯಕಾಲವದು!! ಹೀಗಾಗಿ ಯಾವುದೋ ಪೂರ್ವಜನ್ಮದ ಪುಣ್ಯದಿಂದ ನಮ್ಮ ಇಂಗ್ಲಿಶ್ ಮಾತಾಜಿ ಅಲಿಯಾಸ್ ಶಾಂತಲಾ ಮಾತಾಜಿಯ ಕಣ್ಣಿಗೆ ನನ್ನ ಚೆಲುವು ರಾಚಿಯೇಬಿಟ್ಟಿತು!!! ಅದು ಅಕಾಲದಲ್ಲಿ ರಾಚಿದ ತಪ್ಪಿಗೆ ನಾನೂ ಅವರು ರೂಪಿಸಿದ್ದ "ಸಮುದ್ರ ಮಥನ" ಸ್ತಬ್ಧ ಚಿತ್ರದಲ್ಲಿ ರಬ್ಬರ್ ವಾಸುಕಿಯನ್ನ ಹಿಡಿದೆಳೆವ ಒಬ್ಬ ವೇಷಧಾರಿ ದೇವತೆಯಾಗಿ ಅನಿರೀಕ್ಷಿತವಾಗಿ ಆಯ್ಕೆಯಾದೆ.



ಅರುಂಧತಿ ಎನ್ನುವ ನಮ್ಮ ಶಾಲೆಯ ಹಿರಿಯ ವಿಧ್ಯಾರ್ಥಿನಿ ವಿಷ್ಣುವಾಗಿ ಅವತಾರ ಎತ್ತಲಿಕ್ಕಿದ್ದಳು ಅಂತ ನೆನಪು. ಅವಳನ್ನ "ಮುಂಗಾರಿನ ಮಿಂಚು" ಚಿತ್ರ ಕೊನೆಯ ದೃಶ್ಯದಲ್ಲಿ ನೀವು ನೋಡಿರುತ್ತೀರಿ. ಈ ಆಯ್ಕೆಯ ಹಿಂದಿನ ಕಾರಣ ಇಷ್ಟೆ. ನಾನಾಗ ಮಂಗಳೂರಿನಲ್ಲಿ ಓದುತ್ತಿದ್ದೆ. ಬೇಸಿಗೆ ರಜೆಯಲ್ಲಿ ತೀರ್ಥಹಳ್ಳಿಗೆ ಹೋದಾಗ "ಮಾತೃ ಮಂಡಳಿ"ಯ ಪರವಾಗಿ ಶಾಂತಲಾ ಮಾತಾಜಿ ಏರ್ಪಡಿಸುತ್ತಿದ್ದ ಬೇಸಿಗೆ ಶಿಬಿರದಲ್ಲಿ ಭಾಗವಹಿಸುತ್ತಿದ್ದೆ. ಅಲ್ಲಿ ಚೂಟಿಯಾಗಿ ಹೇಳಿದ ಕೆಲಸ ಮಾಡಿ ಕೊಡುತ್ತಾ, ಹೇಳಿ ಕೊಡುತ್ತಿದ್ದ ಎಲ್ಲಾ ಶ್ಲೋಕ ಹಾಗೂ ವೇದವನ್ನ ತಪ್ಪಿಲ್ಲದೆ ಕಲಿತು ಒಪ್ಪಿಸುತ್ತಿದ್ದ ನನ್ನ ಉಚ್ಚಾರದ ಸ್ಪಷ್ಟತೆ ಅವರನ್ನ ಮೊದಲಿಗೆ ಆಕರ್ಷಿಸಲಿಕ್ಕೂ ಸಾಕು. ಜೊತೆಗೆ ನನ್ನ ಚೆಲುವು ಎದ್ದು ಕಾಣುವಷ್ಟು ಅವರ ದೃಷ್ಠಿಗೂ ದೋಷ ಇತ್ತೇನೋ! ಅಂತೂ ಮುಂದಿನ ರಜೆಯಲ್ಲಿ ಊರಿಗೆ ಬಂದವ ನಾನೂ ಅರ್ಜೆಂಟ್ ದೇವತೆಯಾದೆ.



ದಸರಾಕ್ಕೆ ಇನ್ನೂ ಹದಿನೈದು ದಿನವಿತ್ತು, ಪರ್ಫೆಕ್ಷನ್ನಿಗೆ ವಿಪರೀತ ಮಹತ್ವ ಕೊಡುತ್ತಿದ್ದ ಶಾಂತಲಾ ಮಾತಾಜಿ ಇನ್ನೂ ಹದಿನೈದು ದಿನ ದೂರವಿದ್ದ ವಿಜಯದಶಮಿಗೆ ಬಹಳ ಕಟ್ಟುನಿಟ್ಟಿನ ಅಭ್ಯಾಸ ಮಾಡಿಸುತ್ತಿದ್ದರು, ಎರಡು ಘಂಟೆ ಗೊಂಬೆಗಳಂತೆ ನಿಲ್ಲುವುದನ್ನು ಕಷ್ಟಪಟ್ಟು ಅಭ್ಯಾಸ ಮಾಡಿಯೆ ಮಾಡಿದೆವು! ನಸುಕಿನಲ್ಲಿ ಎದ್ದು ಬಪಮನ ಮಗ ಸಣ್ಣಣ್ಣ ಕೊಟ್ಟಿದ್ದ  ವೃತ್ತ ಪತ್ರಿಕೆಗಳನ್ನ ಊರ ತುಂಬಾ "ಕನ್ನಡಪ್ರಭ" 'ಇಂಡಿಯನ್ ಎಕ್ಸ್'ಪ್ರೆಸ್" ಹಂಚುವ ಕೆಲಸ ಮುಗಿಸಿ ಬೆಳಗ್ಯೆ ತಿಂಡಿಯ ನಂತರ ಈ "ಕಲ್ಲಾಗಿ ನಿಲ್ಲುವ" ಹಟಯೋಗವನ್ನು ನಾನು ಕಟ್ಟೆ ಚನ್ನಕೇಶವನ ಬೀದಿಯಲ್ಲಿದ್ದ ಶಾಂತಲಾ ಮಾತಾಜಿಯ ಮನೆಯಲ್ಲಿ ಕಲಿತರೆ, ಸಂಜೆ ಮೂರರ ನಂತರ ಅವರದ್ದೆ "ಮಾತೃ ಮಂಡಳಿ"ಯ ರಾಮ ಮಂದಿರದಲ್ಲಿನ ವೇದ ತರಗತಿಯಲ್ಲಿ ಭಗವತ್ಗೀತೆಯ ಸಾಲುಗಳನ್ನ ಉರು ಹೊಡೆಯುತ್ತಾ ಕಾಲ ಹಾಕುತ್ತಿದ್ದೆ. ನಡುನಡುವೆ ಶಾಂತಲಾ ಮಾತಾಜಿ ಮನೆಯ ಚಿಕ್ಕಪುಟ್ಟ ಕೆಲಸಗಳಿಗೆ ದಿನದ ಕಾರ್ಯ ಚಟುವಟಿಕೆ ಸೀಮಿತವಾಗಿರುತ್ತಿತ್ತು. ಪರಿಸ್ಥಿತಿ ಹೀಗಿರುವಾಗ ನನ್ನ ತಾಯಿ ಹಾಗೂ ತಂದೆಗೆ ನಾನೂ ಒಬ್ಬ ದೇವತೆಯಾಗುವ ಸಂಭ್ರಮದಲ್ಲಿ ಅದನ್ನ ಅವರ ಪರಿಚಿತರ ಕಿವಿಗೆಲ್ಲ ಯಾರೂ ಕೇಳದೆ ಇದ್ದರೂ ಇವರೆ ಬಿತ್ತರಿಸಿ ಬೀಗಿದ್ದರು. ಹೀಗೆ ಖುಷಿಖುಷಿಯಾಗಿದ್ದ ದಸರೆಗೆ ವಾರದ ಅಂತರವಿದ್ದಾಗ ನನಗೆ ತಗುಲಿತು ಮೊದಲ ಆಘಾತ.


ನೋಡಲು ಸುಮಾರಾಗಿದ್ದ ಶಾಂತಲಾ ಮಾತಾಜಿಯ  ಇನ್ನೊಬ್ಬ ನನ್ನದೆ ವಯಸ್ಸಿನ ಶಿಷ್ಯೋತ್ತಮನಿಗಾಗಿ ನಾನು ದೇವತೆಯಿಂದ ರಾಕ್ಷಸನಾಗಿ ಪಾತ್ರಾಂತರ ಮಾಡಬೇಕಾಯಿತು. ಸಿರಿವಂತಿಕೆಯೊಂದೆ ಆ ಅರ್ಜೆಂಟ್ ದೇವನಿಗಿದ್ದ ಏಕೈಕ ಯೋಗ್ಯತೆ! . "ಬೇಜಾರು ಮಾಡ್ಕೋಬೇಡ ಪುಟ್ಟು, ರಾಕ್ಷಸರೇನೂ ದೇವತೆಗಳಿಗಿಂತ ಕಡಿಮೆಯವರಲ್ಲ!" ಅಂತ ಹೇಳಿ ಶಾಂತಲಾ ಮಾತಾಜಿ ನನ್ನ ತಲೆ ಸವರಿದರು! ನಾನು ಪಾಲಿಗೆ ಬಂದ ಪಂಚಾಮೃತಕ್ಕೆ ತೃಪ್ತಿಪಟ್ಟು ಅದನ್ನೆ ಶ್ರದ್ದೆಯಿಂದ ಅಭ್ಯಸಿಸಿದೆ. ದಸರೆಗೆ ಇನ್ನೂ ವಾರದ ಅಂತರವಿದ್ದುದರಿಂದ ರಾಕ್ಷಸನಾಗಿಯೆ ನನ್ನ ಸ್ತಬ್ಧ ನಟನಾ ಸಾಮರ್ಥ್ಯ(!) ಮೆರೆಯಲು ಅಭ್ಯಾಸ ನಿರತನಾದೆ. ಆದರೆ ನನ್ನ ಈ ಶ್ರದ್ಧೆಗೆ ಇನ್ನೊಂದು "ಪ್ರಭಾವಿ" ಸಹಪಾಠಿಯ ಪ್ರತಿಭಾ ಪ್ರದರ್ಶನದ ತವಕ ಅಷ್ಟಮಿಯಂದೆ ವೀಟೊ ಚಲಾಯಿಸಿತು. ಪುನಃ " ಪುಟ್ಟೂ... ಛೆ ಆ ಬಿಸಿಲಲ್ಲಿ ಅಷ್ಟೆಲ್ಲ ಹೊತ್ತು ನಿಲ್ಲೋದು ತುಂಬಾ ಕಷ್ಟ! ಅದೆಲ್ಲ ಅಂತವರಿಗೆ(?) ಇರ್ಲಿ ಬಿಡು. ಬಿಸಿಲಲ್ಲಿ ನಿಂತರೆ ನೀನು ಕಪ್ಪಾಗಿ ಬಿಡ್ತೀಯ?!, ನೀನು "ಮಾತೃ ಮಂಡಳಿ"ಯ ಬ್ಯಾನರ್ ಹಿಡಿದು ಕೊಂಡು ಆರಾಮವಾಗಿ ವ್ಯಾನಿನ ಹಿಂದೆ ಕೂತುಕೋ ಆರಾಮಾಗಿರುತ್ತೆ!!!" ಅಂತ ಶಾಂತಲಾ ಮಾತಾಜಿ ಮತ್ತೆ ನಯವಾಗಿಯೆ ನನ್ನ ತಲೆ ಸವರಿದರು!.


ಮೊದಲಿನಿಂದಲೂ ಇಂತಹ ಪಕ್ಷಪಾತ ನೈಪುಣ್ಯತೆಯಲ್ಲಿ ಪಳಗಿದ್ದ ಅವರಿಗದು ಸಹಜವಾಗಿತ್ತು. ಇದಕ್ಕೆ ಒಂಚೂರೂ ಮನಸಿಲ್ಲದಿದ್ದರೂ, ಅಸಹಾಯಕತೆಯಿಂದ ಕಣ್ತುಂಬಿ ಬಂದರೂ ನಾನು ಅವರ ಸಿಹಿ ಲೇಪಿಸಿದ ಕ್ವಿನೈನಿನಂತಹ ಮೃದು ಮಾತುಗಳಿಗೆ ಗೋವಿನಂತೆ ತಲೆಯಾಡಿಸಿದೆ. ವಿಜಯದಶಮಿಯ ಮೆರವಣಿಗೆಯುದ್ದಕ್ಕೂ ಆಗಾಗ ನಾನು ಕಣ್ಣನ್ನ ಒರೆಸಿಕೊಳ್ಳುತ್ತಿದ್ದೆ. ಇಡಿ ಮೆರವಣಿಗೆ ನನಗೆ ಮಂಜುಮಂಜಾಗಿ ಕಾಣಿಸುತ್ತಿತ್ತು. ನನ್ನ "ದೇವತೆ ಪಾತ್ರ"ವನ್ನ ನೋಡಲು ಕೊಪ್ಪ ಸರ್ಕಲ್ಲಿನ ರಸ್ತೆ ಪಕ್ಕದ ಜಂಗುಳಿಯಲ್ಲಿ ಕುತ್ತಿಗೆ ಉದ್ದ ಮಾಡಿಕೊಂಡು ಕಾಯುತ್ತಿದ್ದ ನನ್ನ ತಂದೆ- ತಾಯಿ ಅದೆಷ್ಟೇ ಕಣ್ಣು ಕಿರಿದುಗೊಳಿಸಿಕೊಂಡು ಹುಡುಕಿದರೂ ದೇವತೆಗಳ ಸಾಲಿನಲ್ಲಾಗಲಿ- ರಾಕ್ಷಸರ ಗುಂಪಿನಲ್ಲಾಗಲಿ ನನ್ನನವರು ಕಾಣಲಿಲ್ಲ. ಕಡೆಗೆ ಸ್ತಬ್ಧಚಿತ್ರದ ಮೂಲೆಯಲ್ಲಿ ಬ್ಯಾನರ್ ಹಿಡಿದು ಕೂತ ಉರಿ ಬಿಸಿಲಿಗೆ ಕೆಂಪೇರಿ ಮುದುದಿದ್ದ್ದ ನನ್ನ ಮುಖವನ್ನ ನೋಡಿ ಅವರ ಮುಖದಲ್ಲಿ ಕಂಡ ನಿರಾಸೆ ಇನ್ನೂ ನನ್ನ ನೆನಪಿನಲ್ಲಿಯೆ ಅಚ್ಚು ಹಾಕಿದಂತೆ ಉಳಿದಿದೆ. ನಾನು ಕೊನೆಯ ಕ್ಷಣದವರೆಗೂ ನನ್ನ ಈ ಪಾತ್ರಾಂತರದ ಗುಟ್ಟನ್ನ ಮನೆಯಲ್ಲಿ ಬಿಟ್ಟು ಕೊಟ್ಟಿರಲೇ ಇಲ್ಲ! ನಾನೂ ಒಬ್ಬ ಎಳೆಯನಾಗಿದ್ದ ಕಾಲ ಅದು. ಇನ್ನೊಬ್ಬ ಎಳೆಯನ ಮನ ಅರಳಿಸಲು ಮುಲಾಜಿಲ್ಲದೆ ಒಂದು ಮಗುವಿನ ಮನ ಮುದುಡಿಸಲು ಶಾಂತಲಾ ಮಾತಾಜಿಗೆ ಮನಸಾದರೂ ಹೇಗೆ ಬಂತು? ಎನ್ನುವ ಪ್ರಶ್ನೆ ಇನ್ನೂ ನನ್ನ ಮನಸಿನಲ್ಲಿ ಉಳಿದಿದೆ. ನಾನು ಆ ಪಾತ್ರವನ್ನ ಎಂದೂ ಬೇಡಿರಲಿಲ್ಲ. ಅವರೇ ಕರೆದು ಕೊಟ್ಟರು, ಇನ್ನೊಬ್ಬನ ಪ್ರವೇಶವಾದಾಗ ನನ್ನನ್ನ ಅವರೆ ಕೆಳ ದೂಡಿದರು! ಅವರ ಈ ಕಸರತ್ತಿನಲ್ಲಿ ಹಣವಂತನಾಗಿಲ್ಲದಿದ್ದುದೆ ನನ್ನ ಕೊರತೆಯಾಗಿತ್ತೆ? ಶಿಕ್ಷಕ ವೃತ್ತಿಯಲ್ಲಿರುವವರಿಗೂ ಸಮತೆಯ ದೃಷ್ಟಿ ಇರದಿರುವುದು ಶಿಕ್ಷಣ ವ್ಯವಸ್ಥೆಯ ಕೊರತೆಯಲ್ಲವೆ? ಹೀಗೆ ತಾರತಮ್ಯಕ್ಕೆ ಒಳಗಾದ ಮಗು ಮುಂದೆ ಸಿನ್ಕನಾಗುವ ಅಪಾಯ ಇದೆಯಲ್ಲವೇ? ಹೀಗೆ ಉತ್ತರ ಕಾಣದ ಅನೇಕ ಪ್ರಶ್ನೆಗಳು ನನ್ನೊಳಗೆ ಇನ್ನೂ ಹಾಗೆ ಉಳಿದಿವೆ. ಉತ್ತರಿಸಲು ಶಾಂತಲಾ ಮಾತಾಜಿ ಇಂದೂ ಬದುಕಿ ಉಳಿದಿರುವ ಬಗ್ಗೆ ನನಗೆ ಸಂಶಯವಿದೆ. ಬೇಸರವಿದೆ ನಿಜ ಅದಕ್ಕಿಂತಲೂ ಹೆಚ್ಚು ಅನುಕಂಪ ಅವರ ಮೇಲೆ ಈಗ ನನಗಿದೆ. ಅಷ್ಟು ಸೂಕ್ಷ್ಮವಾಗಿ ಆಲೋಚಿಸದ್ದು ಅವರ ಸಂಸ್ಕಾರದ ಮಿತಿ ಅಂದು ಕೊಳ್ಳುತ್ತೇನೆ. ಎಲ್ಲಿದ್ದರೂ ಅವರ ಆತ್ಮಕ್ಕೆ ಶಾಂತಿಯನ್ನ ಮನಃಪೂರ್ವಕ ಬಯಸುತ್ತೇನೆ.


 ಅದೇನೆ ಇದ್ದರೂ ನನಗೆ ಭಾಷೆಯೊಂದರ ಹೊಸ ಪರಿಚಯ ಮಾಡಿಸಿದ್ದ ಶಾಂತಲಾ ಮಾತಾಜಿಗೆ ನಾನು ಚಿರಋಣಿ. ಗುರು ಋಣವನ್ನ ಎಂದೂ ತೀರಿಸಲಾರೆ. ಪರದೇಶಿ ಇಂಗ್ಲಿಷಿನ ಸೋಂಕನ್ನ ನನಗೆ ಮೊದಲು ತಗಲಿಸಿದ್ದು ಶಾಂತಲಾ ಮಾತಾಜಿ, ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ನಮಗೆ ಅಧಿಕೃತವಾಗಿ ಆಂಗ್ಲ ಭಾಷಾ ಪರಿಚಯ ಆಗಲಿಕ್ಕಿದ್ದುದು ಸರಕಾರಿ ಭಾಷಾ ನೀತಿಯ ಪ್ರಕಾರ ಐದನೆ ತರಗತಿಯಿಂದ. ಆದರೆ ಶಾಂತಲಾ ಮಾತಾಜಿಯ ಕೃಪೆಯಿಂದ ನಾವೆಲ್ಲಾ ಒಂದನೆ ತರಗತಿಯಲ್ಲಿಯೆ "ಕನ್ನಡ ಮಾಧ್ಯಮ"ದಲ್ಲಿದ್ದು ಕೊಂಡೂ "ಇಂಗ್ಲೀಷ್ ಪಂಡಿತ"ರಾಗಿದ್ದೆವು!. ನಾವೆಲ್ಲಾ ಅವರನ್ನ ಇಂಗ್ಲೀಶ್ ಮಾತಾಜಿ ಅಂತ ಕರಿಯುತ್ತಿದ್ದೆವು. ಅವರ ಊರು ನಾವು ಕೇಳಿ ಮಾತ್ರ ಗೊತ್ತಿದ್ದ ದೂರದ ಮದರಾಸಂತೆ. ಅಲ್ಲಿನ ಕಸಗುಡಿಸುವವರೂ ಕೂಡ ಸ್ವಚ್ಛ ತಮಿಳಿನಲ್ಲಿ ಮಾತನಾಡುತ್ತಾರಂತೆ ! ಈ ಸಂಗತಿ ಕನ್ನಡ ಮಾತ್ರ ಗೊತ್ತಿದ್ದ ನಮ್ಮಂತವರಿಗೊಂದು ವಿಸ್ಮಯದ ಸಂಗತಿಯಾಗಿತ್ತು. ಆದರೆ ಅವರು ಬಹಳ ಹಿಂದಿನಿಂದಲೆ ತೀರ್ಥಹಳ್ಳಿಯಲ್ಲಿ ನೆಲೆಸಿದ್ದರು. ಅವರ ಗಂಡನಿಗೆ ಇಲ್ಲಿಯೆ ಏನಾದರೂ ಕೆಲಸ ಇತ್ತೇನೊ ಗೊತ್ತಿಲ್ಲ. ಅವರಿಗೆ ಮಕ್ಕಳ ಭಾಗ್ಯವಿರಲಿಲ್ಲ. ಹೀಗಾಗಿ ಅವರು ನಮ್ಮ ಶಾಲೆ "ಸೇವಾಭಾರತಿ"ಯಲ್ಲಿ ಸ್ವಯಂ- ಶಿಕ್ಷಕಿಯಾಗಿ ಮಕ್ಕಳೊಂದಿಗೆ ಬೆರೆಯುತ್ತಿದ್ದರು, ಗೌಡ ಸಾರಸ್ವತರಾಗಿದ್ದ ಅವರ ಮಾತೃ ಭಾಷೆ ಕೊಂಕಣಿ. ತೀರ ಹಳ್ಳಿಗರಾಗಿದ್ದು ಮಾತೃಭಾಷೆಯಾಗಿದ್ದ ತುಳು, ಕೊಂಕಣಿ, ಬ್ಯಾರಿ, ಕನ್ನಡದ ಹೊರತು ಇನ್ಯಾವುದೆ ಭಾಷೆಯ ಪರಿಚಯವಿಲ್ಲದಿದ್ದ ನಮಗೆ ಏಕಕಾಲದಲ್ಲಿ ಕನ್ನಡ, ಹಿಂದಿ, ಸಂಸ್ಕೃತ, ತಮಿಳು, ಕೊಂಕಣಿ ಹೀಗೆ ಹಲವು ಭಾಷೆಗಳನ್ನ ಮಾತಾಡ ಬಲ್ಲವರಾಗಿದ್ದ ಶಾಂತಲಾ ಮಾತಾಜಿ ನಡೆದಾಡುವ ಆಲ್ ಇಂಡಿಯಾ ರೇಡಿಯೋದಂತೆ ಕಾಣಿಸುತ್ತಿದ್ದರು! ಅವರ ಕೀರಲಾದ ದೊಡ್ಡ ಧ್ವನಿಯೂ ಈ ಉಪಮಾಲಂಕಾರಕ್ಕೆ ಪೂರಕವಾಗಿತ್ತು. ನಮಗೆಲ್ಲರಿಗೂ ಅವರೆ ಇಂಗ್ಲೀಷಿನ ಮೊದಲ ಪರಿಚಯ ಮಾಡಿಸಿದರು.



ರಾಷ್ಟ್ರೋತ್ಥಾನ ಪರಿಷತ್ತಿನ ಅಂಗವಾಗಿದ್ದ ನಮ್ಮ ಶಾಲೆ ಅದೆ ಪರಿಷತ್ತಿನ ಇನ್ನೊದು ಅಂಗವಾಗಿದ್ದ "ಮಾತೃ ಮಂಡಳಿ"ಯ ಕಾರ್ಯಕರ್ತೆಯಾಗಿದ್ದ ಶಾಂತಲಾ ಮಾತಾಜಿಯವರನ್ನ ಗೌರವ ಶಿಕ್ಷಕಿಯಾಗಿ ನಮ್ಮ ಶಾಲೆಯಲ್ಲಿ ಬೋಧಿಸಲು ಅವಕಾಶ ಕೊಟ್ಟಿತ್ತು. ನಾವು ನೋಡುವಾಗಲೆ ಬೆಳ್ಳಿ ಕೂದಲಿನವರಾಗಿದ್ದ ಶಾಂತಲಾ ಮಾತಾಜಿ ತಮ್ಮ ಕೋಳಿ ಜುಟ್ಟಿನಂತಹ ಕಿರು ಕೇಶರಾಶಿಗೆ ಒಂದು ರಿಬ್ಬನ್ ಸಿಕ್ಕಿಸಿಕೊಂಡು ತಮ್ಮ ಗೋಪಾದದಷ್ಟು ಕೂದಲನ್ನ ಬಿಗಿಯಾಗಿ ಕಟ್ಟಿಕೊಳ್ಳುತ್ತಿದ್ದರು. ಅವರ ಇಂಗ್ಲಿಶ್ ಪಾಠಕ್ಕೆ ಅವರೆ ಒಂದು ಪಾಠದ ಕ್ರಮವನ್ನು ರೂಪಿಸಿಕೊಂಡಿದ್ದರು. ವರ್ಷಕ್ಕೊಮ್ಮೆ ಬೆಂಗಳೂರಿನಿಂದ ಅವರೆ ಮಾಡಿಸಿದ ನಾಲ್ಕು ಬಗೆಯ ಪಾಠ ಪುಸ್ತಕಗಳು ನಮ್ಮ ಶಾಲೆಗೆ ಬಂದು ಮುಟ್ಟುತ್ತಿದ್ದವು. ಐದನೆ ತರಗತಿಯಿಂದ ಸರಕಾರದ ಪಾಠ ಪುಸ್ತಕಗಳು ಅಧಿಕೃತ ಇಂಗ್ಲಿಶ್ ಕಲಿಕೆಗಾಗಿ ನಮ್ಮ ಕೈ ಸೇರುವ ಮುಂಚೆಯೆ ಶಾಂತಲಾ ಮಾತಾಜಿಯ ಕೃಪೆಯಿಂದ ಅವುಗಳಲ್ಲಿರುತ್ತಿದ್ದ ಅನೇಕ ಪದ್ಯಗಳು ಈ ಮೂಲಕ ನಮಗೆ ಬಾಯಿಪಾಠವಾಗಿ ಹೋಗಿರುತ್ತಿದ್ದವು! ಅಗತ್ಯವಿತ್ತೋ ಇಲ್ಲವೋ ಅಂತೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾಗಿದ್ದರೂ ನಮಗೆ ಆರಂಭಿಕ ಇಂಗ್ಲಿಶ್ ಕಲಿಕೆಗೂ ಹೀಗೆ ಅವಕಾಶ ಒದಗಿ ಬಂದಿತ್ತು. ಮೊದಲ ಶಾಲೆಯಾಗಿದ್ದ ಬಾಲವಾಡಿಯಲ್ಲಿ ಸಾಥ್ ಕೊಟ್ಟಿದ್ದ ರೊಟ್ಟಿ ಅಂಗಡಿ ಕಿಟ್ಟಪ್ಪನೆ ಶಾಂತಲಾ ಮಾತಾಜಿಯ "ಕ್ಲಾಸ್"ನಲ್ಲಿ ಹಾಟ್ ಕ್ರಾಸ್ ಬನ್ ಮಾರುತ್ತಿದ್ದ! ಮೈಸೂರಿನ ಅರಮನೆಗೆ ದಸರೆ ನೋಡಲು ಹೋಗಿದ್ದ ಮುದ್ದಿನ ಸೊಕ್ಕಾಗಿದ್ದ ಬೆಕ್ಕು ಇವರ ಇಂಗ್ಲಿಶ್ ರಿಮೇಕಿನಲ್ಲಿ ಅದು ಹೇಗೊ ಅಷ್ಟು ದೂರದ ಲಂಡನ್ನಿಗೆ ಫೆಸ್ಟಿವಲ್ ನೋಡಲು ಹೋಗಿ ಬಂದಿರುತ್ತಿತ್ತು!! ಇಲ್ಲಿನ ಬೆಕ್ಕು ರಾಣಿಯ ಜೊತೆಗೆ ರಾಜನೂ ಇದ್ದ ಮೈಸೂರಿನ ಅಂತಃಪುರದೊಳಗೆ ಹೊಕ್ಕಿ ಬಂದಿದ್ದಾರೆ, ಅವರ ಪುಸ್ಸಿ ಕ್ಯಾಟ್ ಲಂಡನ್ನಿನಲ್ಲಿ ಕ್ವೀನನ್ನ ನೋಡಿಯೆ ಬಂದಿರುತ್ತಿದ್ದು ವಿಸ್ಮಯ ಹುಟ್ಟಿಸುತ್ತಿತ್ತು. ಬಾವಿಗೆ ನೀರು ತರಲು ಹೋಗುತ್ತಿದ್ದ ನಮ್ಮ ಪುಟ್ಟಾ-ಪುಟ್ಟಿ ಅವರ ಇಂಗ್ಲಿಷಿನಲ್ಲಿ ಜಾಕ್ ಎಂಡ್ ಜಿಲ್ಲಾಗಿ ನೀರು ಹೊತ್ತು ತರಲು ಗುಡ್ಡಕ್ಕೆ ಹತ್ತಿ ಹೋಗಿರುತ್ತಿದ್ದರು!!! ನಮ್ಮ ತಿಂಡಿ ಬೇಡುತ್ತಿದ್ದ ನಾಯಿ ಮರಿಯೆ ಅವರ ಬಿಸ್ಕೆಟ್ ಬೇಡುವ ಟಾಮಿಯಾಗಿರುತ್ತಿತ್ತು !!! ನೀರು ತರದ ಸೋಮಾರಿ ಮಲ್ಲ, ಜಾನಿಯಾಗಿ ಪಪ್ಪನ ಮುಂದೆ ಎಸ್ ಹೇಳುತ್ತಿದ್ದ!!! ಹೀಗಾಗಿ ಶಾಂತಲ ಮಾತಾಜಿ ನಮಗೆ ಮೋಡಿ ಹಾಕಲು ಹೆಚ್ಚು ಶ್ರಮ ಪಡುವ ಅಗತ್ಯ ಬೀಳಲೆ ಇಲ್ಲ.


ಹೀಗೆ ಇಂಗ್ಲಿಷ್ ಜಗತ್ತಿನ ಕಿರು ಕಿಟಕಿಯನ್ನ ನನ್ನ ಬಾಳಲ್ಲಿ ಮೊದಲಿಗೆ ತೆರೆದು ಇನ್ನೊಂದು ವಿಚಿತ್ರ ಪ್ರಪಂಚದ ವಿಸ್ಮಯಗಳನ್ನು ಪರಿಚಯಿಸಿ ಕೊಟ್ಟವರು ಶಾಂತಲಾ ಮಾತಾಜಿ. ಅಲ್ಲಿಯವರೆಗೂ ಕೇವಲ ಒಂದು ಎರಡಷ್ಟೇ ಕಲಿತು ಗೊತ್ತಿದ್ದ ನನಗೆ ವನ್ ಟೂವನ್ನು ಕಲಿಸಿದ, "ಪ್ರಭಾವ- ವಿಭವ" ದಂತಹ ಸಂವತ್ಸರಗಳ ಹೆಸರನ್ನ, ರವಿವಾರದಿಂದ- ಶನಿವಾರದವರೆಗಿನ ವಾರಗಳನ್ನ, ಚೈತ್ರ - ವೈಶಾಖದಂತಹ ಮಾಸಗಳನ್ನ. ಅನುರಾಧಾ- ಮೂಲದಂತಹ ನಕ್ಷತ್ರಗಳ ಹೆಸರನ್ನಷ್ಟೆ ಉರು ಹೊಡೆದು ನೆನಪಿಟ್ಟುಕೊಳ್ಳುತ್ತಿದ್ದ ನಾನು ಸಂಡೆ ಮಂಡೆಯಿಂದಾರಂಭಿಸಿ ಜನವರಿ- ಡಿಸೆಂಬರಿನ ಗಡಿಯನ್ನ ಶ್ರಮವಿಲ್ಲದೆ ಮುಟ್ಟಿಬರಲು ಸಾಧ್ಯವಾಗುವಂತಾಗಿಸಿದ ಆರಂಭಿಕ ಆಸರೆಯ ಕಿರು ಬೆರಳು ಶಾಂತಲಾ ಮಾತಜಿಯದ್ದೆ. ಹೀಗಾಗಿ ತಂಪು ಹೊತ್ತಿನಲ್ಲಿ ಅವರನ್ನ ನೆನೆಯುತ್ತೇನೆ. ದಸರಾ ಮತ್ತೆ ಮರಳಿ ಬಂದಾಗ ಇವೆಲ್ಲ ಮತ್ತೆಮತ್ತೆ ನೆನಪಾಗುತ್ತವೆ. ಕಹಿಯಾಗಿದ್ದರೂ ನೆನಪು ನನ್ನದೆ ತಾನೆ?

2 comments:

DWARKI said...

ಬಹಳ ಚೆನ್ನಾಗಿ ಬರೆಯುತ್ತೀರಿ... ಒಂದು ಚೂರು ಬೇಸರವಿಲ್ಲದೆ ಓದಿಸಿಕೊಂಡು ಹೋಗುತ್ತದೆ.

Anagha Kirana ಅನಘ ಕಿರಣ said...

ಹೂಂ.