ಮನಸಿನ ಪಡಸಾಲೆಯಲ್ಲಿ ನೆನಪಿನ ನೆರಳು,
ಮತ್ತೆ ಮನದೊಳಗೆ ಸುಳಿದು ಮುದಗೊಳಿಸಿದ್ದು ನಿನ್ನ ಹಣೆಯ ಚುಂಬಿಸೋ ನಿನ್ನದೇ ಬಾಗಿದ ಮುಂಗುರುಳು/
ನಸುಗತ್ತಲ ಬಾನಂಚಿನಿಂದ ಕಡತಂದ ಕಾಡಿಗೆ ತೀಡಿದಂತಾ ನಿನ್ನ ಕಡುಗಪ್ಪು ಕಣ್ಣುಗಳು,
ಇವುಗಳ ಸಾಂಗತ್ಯದಲ್ಲಿ ಅದು ಹೇಗೆತಾನೆ ಚಡಪಡಿಸದೆ ಕಳೆದೀತು ಹೇಳು ನನ್ನಿರುಳು?//
ಎಚ್ಚರ...ನಿನ್ನ ನವಿರು ಕೇಶ ಗುಚ್ಛ,
ಸುಳಿವ ಗಾಳಿಗೂ ಹಿಡಿಸೀತು ಹುಚ್ಚ/
ಮೆಲುವಾಗಿ ಉಲಿವ ತುಟಿಗಳದೆ ಭಿನ್ನ ಕರಾಮತ್ತು,
ಸೌಂದರ್ಯದ ಸೃಷ್ಟಿಯ ಗುಟ್ಟನು ಅದು ಪ್ರಕೃತಿಗೂ ಕಲಿಸೀತು//
ತಡವರಿಸುವ ಮಾತುಗಳಲ್ಲಿ ಅಡಗಿದ ಪ್ರೀತಿಗೆ ಮನಸೋತ ನಿನ್ನ ಕಣ್ಣು,
ನನ್ನ ಭಾವದ ಬಯಲಲ್ಲಿ ಒಲವ ಬೀಜ ಬಿತ್ತುತಿದೆ ಕಾಣು/
ಮೋಹದ ವೀಣೆಗೆ ಮರುಳಾಗಿದೆ ಮನದ ವೇಣುನಾದ,
ಕಾತರಿಸಿ ದಣಿದಿದೆ ನಿರೀಕ್ಷೆ...ನನ್ನೆದೆ ಅಂಗಳಕೆ ಸೋಕೀತೆ ನಿನ್ನ ಪಾದ//
25 July 2010
Subscribe to:
Post Comments (Atom)
No comments:
Post a Comment