02 July 2010

ನೆನಪಲಿ ನಾಲ್ಕು ಸಾಲು...

ನೆಲಕ್ಕಂಟಿದ ತುಂಬೆ ಹೂವಂತೆ ನಾನು,
ನಿನ್ನೋಲವನೆ ಕಚ್ಚಿಕೊಂಡಿರುವೆ...ನಿನ್ನನೇ ಹಚ್ಚಿ ಕೊಂಡಿರುವೆ/
ಮುಗಿಲ ಚುಂಬಿಸೋ ಪಾರಿಜಾತದಷ್ಟು ಕ್ಷಣಿಕ ಈ ಬಾಳು,
ನೀ ಬರದೆ ಇದು ಸುಮಧುರ ಹೇಗಾಗುತ್ತಿತ್ತು ಹೇಳು?//



ಮೋಡ ಮುಗಿಲ ಜೊತೆಗಿದ್ದರೂ ನೆಲದ ಕಡೆಗೆ ಅದರ ಮನಸು,
ಕೆಳಸುರಿದು ಮಣ್ಣನಪ್ಪುವ ಆಸೆ...ಸದಾ ಅದೇ ಕನಸು/
ನನ್ನೆಡೆಗೆ ಅದೇನೇ ಇದ್ದರೂ ನಿನ್ನ ತೀರದ ಮುನಿಸು,
ಕನಸಲಾದರೂ ಆಗಾಗ ಬಂದು ಕಾಡಿಸು...ಸುಳ್ಳೇ ಆದರೂ ನನ್ನನು ಅರೆಕ್ಷಣ ಪ್ರೀತಿಸು//


ಮುಗಿಲ ಮುದ್ದಿಸಿದ ಗಾಳಿ ನೆಲಕೂ ಅದನು ದಾಟಿಸಿತು,
ಜೊತೆ ಸುರಿದ ಮಳೆಹನಿ ಧರೆಯ ಎದೆಯಲೂ ಅನುರಾಗದಲೆಯ ಮೀಟಿಸಿತು/
ಇಳೆಯ ಗಾಢವಾಗಿ ಚುಂಬಿಸಿದ ಗಾಳಿಗೆ ಈ ಇರುಳೆಲ್ಲಿ ನಿದ್ದೆ?,
ನಾಚಿದ ಭೂಮಿಯ ಮೈಯಂತೂ ಅಂಗುಲ ಅಂಗುಲವೂ ಒದ್ದೆ//



ನಿನ್ನ ಕನಸಲ್ಲಿ ನನ್ನ ಜಾಗರಣೆ,
ಹುಡುಕುವವರಿಗೆ ನಾನು ನಿನ್ನ ಕಣ್ಕನ್ನಡಿಯಲಿ ಸಿಗದಿದ್ದರೆ ನನ್ನಾಣೆ/
ನಿನ್ನ ಭಾವದರಮನೆಯಲ್ಲಿ ನಾ ಸದಾ ಬಂಧಿ,
ನನ್ನ ಖಾಯಂ ವಿಳಾಸ ನಿನ್ನ ಬೆಚ್ಚನೆ ಎದೆಯೇ ತಾನೇ?//


ಕನಸೇ ಯಾವ ರಾಗದಲಿ ನಾ ಹಾಡಲಿ? ಎದೆಯ ಕವಿತೆ,
ಮನಸೇ ಯಾವ ಮಾತಿನಲಿ ನಾ ಹೇಳಲಿ? ಮನದ ಚರಿತೆ/
ನೀನಿಲ್ಲದೆ ಖಾಲಿ ಒಲವ ಖಾತೆ,
ನನ್ನ ತಳಮಳ ಹೇಳಲಾಗದೆ ನಾ ಸೋತೆ//

No comments: