ನಿನ್ನ ಮಾತುಗಳಲ್ಲೆಲ್ಲ ನವಿರಾದ ಪರಿಮಳವಿದೆ,
ನನ್ನ ನಿರೀಕ್ಷೆಗಳೆಲ್ಲ ನಿನ್ನ ಕಣ್ಣೋಟದಲ್ಲೇ ಅಡಗಿದೆ/
ನನ್ನೆದೆಯರಮನೆಯ ಪಡಸಾಲೆಯಲ್ಲಿ ನೀನು ಗುನುಗುವ ಚುಂಬಕ ಆಲಾಪದಲ್ಲಿ ನನ್ನ ಮನ ತನ್ಮಯ,
ನಿನ್ನುಸಿರ ವೀಣೆಯಲ್ಲೇ ನನ್ನ ಬದುಕ ನಿನಾದ ನಿಂತಿದೆ//
ಹನಿಯುವ ಮೋಡದ ಚಪ್ಪರದಡಿ ನಿನ್ನನೇ ನೆನೆಯುತ್ತ ಸಾಗುವುದು ನನಗಿಷ್ಟ,
ಸುರಿಯುವ ಬೆಳದಿಂಗಳ ಮಳೆಯಲಿ ನೀನಿತ್ತ ಸಾವಿರ ಮುತ್ತುಗಳ ನೆನಪಲ್ಲೇ ತೋಯುವುದು ಬಲು ಇಷ್ಟ/
ಮರುಳನೆಂದು ನನ್ನ ನೋಡಿ ನಗುವ ಪೂರ್ಣ ಚಂದಿರನ್ನೇ ದೂತನಾಗಿಸಿ,
ಒಲವ ಗುಪ್ತ ಸಂದೇಶವನ್ನು ಅವನಲ್ಲೇ ಕಳಿಸಿಕೊಡಲೇನು?//
22 July 2010
Subscribe to:
Post Comments (Atom)
No comments:
Post a Comment