ನಿನ್ನ ಕನಸುಗಳನ್ನು ಕೊಡು,
ಅವಕ್ಕೆ ಬಣ್ಣ ಹಚ್ಚಿ ಮರಳಿಸುತ್ತೇನೆ....
ಬತ್ತಿರುವ ಭಾವಗಳನ್ನು ಕೊಡು,
ಅವುಗಳನ್ನು ನವಿರಾಗಿ ಕೆರಳಿಸುತ್ತೇನೆ/
ಮುದುಡಿದ ಮೊಗ್ಗುಗಳನು ಮತ್ತೆ ಅರಳಿಸೋಣ ಬಾ,
ಬಾಡಿರುವ ಹೂಗಳ ಮೊಗದಲೂ ಕಳೆಯ ಮಳೆ ಸುರಿಸೋಣ ಬಾ//
ನೀನಿರದ ನೆನಪಿನ ಚಿತ್ರಗಳಲಿ ಬಣ್ಣವಿಲ್ಲ...
ನೀ ಬರದ ಕನಸುಗಳ ಆವರಣದಲಿ ಸಂತಸದ ರಂಗಿಲ್ಲ/
ವಿರಹದ ನೋವನ್ನು ಮತ್ತೊಮ್ಮೆ ಕೊಡಲಾದರೂ ನೀ ಹೀಗೆಯೇ ಬರುತ್ತಿರು...
ಆ ನೋವಿಗೆ ಒಲವಿನ ಮುಲಾಮು ಸವರಲಾದರೂ ನೀ ಹೀಗೆ ಬರುತ್ತಲೇ ಇರು,
ನಿನ್ನ ನಗುವ ನನ್ನೆದೆಯಲಿ ಹೀಗೆ ಸುರಿಯತ್ತಲೇ ಇರು//
ಕಮರಿದ ಕಣ್ಕಾಂತಿಯಲಿ ಹತಾಶೆಯ ಹೊಳಪೇಕೆ?
ಬಾಡಿದ ತುಟಿಗಳಲಿ ಬಿಳುಚಿದ ಬಿಳುಪೇಕೆ?/
ನೀ ನಿಟ್ಟುಸಿರಿಟ್ಟರೆ ನಿಂತೀತು ನನ್ನುಸಿರು.
ನಗುತಲೆ ಇರಬೇಕು ನೀನು ಅಳಿದು ಹೋದರೂನು ನನ್ನುಸಿರು//
ನಿನ್ನೆದೆಯಲಿ ನನ್ನೊಲವಿನ ರಾಗ,
ನಿನ್ನ ನುಡಿಯಲಿ ನನ್ನದೇ ಮನದ ಹಾಡು/
ಸದಾ ಮೌನವಾಗಿ ಹರಿಯುತ್ತಲೇ ಇರುವಾಗ,
ಚಿಂತೆಯೇಕೆ? ಇನ್ನಾದರೂ ಚೂರು ನಕ್ಕುಬಿಡು//
27 June 2010
Subscribe to:
Post Comments (Atom)
No comments:
Post a Comment