09 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೦.👊


"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೦.👊

ಮದುವೆಯಾಗಿ ಪಾರಂಪಳ್ಳಿಯಿಂದ ಪ್ರಸಾದಪುರಕ್ಕೆ ಬಂದ ಶಾಂತಾಮಾಯಿಗೆ ಶಾಂತವಾದ ಬದುಕನ್ನ ಬಾಳಲು ಮತ್ತೆರಡು ದಶಕಗಳ ಅವಧಿ ಕಾಯಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸ. ಅವರ ಬದುಕಿನ ಹೊಸ ಪುಟಗಳು ತೆರೆದುಕೊಳ್ಳಲು ಅವರು ಹೆತ್ತ ಮಕ್ಕಳು ಬೆಳೆದು ಸ್ವತಂತ್ರ್ಯರಾಗಿ ಬದುಕುವ ಕಾಲ ಬರಬೇಕಾಯಿತು. ಅವರಿಗೆ ಒಟ್ಟು ಐದು ಮಕ್ಕಳು. ಹಿರಿಯವರಾದ ಶಂಕರ ಬಸ್ ಕಂಪನಿಯ ಬುಕ್ಕಿಂಗ್ ಏಜೆಂಟರೂ-ಕರ್ನಾಟಕ ರಾಜ್ಯ ಲಾಟರಿ ಮಾರಾಟಗಾರರೂ ಆಗಿದ್ದ ವಿಜಯೇಂದ್ರ ಶಣೈˌ ಮೊದಲಿಗೆ ಆ ಊರಿಗೆ ಸಂಯುಕ್ತ ಕರ್ನಾಟಕದ ಹಂಚಿಕೆದಾರರಾಗಿದ್ದು ಅನಂತರ ಕನ್ನಡಪ್ರಭ-ಇಂಡಿಯನ್ ಎಕ್ಸಪ್ರೆಸ್ ವಿತರಕರಾಗಿ ಬದಲಾದ ರಾಧಾಕೃಷ್ಣಯ್ಯˌ ಗೃಹಿಣಿಯಾಗಿದ್ದ ಮಗಳು ವಿನೀತˌ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಮಗ ವೀರೇಂದ್ರ ಹಾಗೂ ಅವನಿಗೆ ಹೆಸರರಿವಿಲ್ಲದ ಕಿವುಡ-ಮೂಗನಾಗಿದ್ದ ಕೊನೆಯ ಹುಡುಗ. ಹೀಗೆ ಒಟ್ಟು ಐದು ಮಕ್ಕಳು ಬೆಳೆದು ದೊಡ್ಡವರಾಗುವ ಹೊತ್ತಿಗೆ ಅವರ ಗಂಡ ಶ್ರೀನಿವಾಸ ಶಣೈಮಾಮನ ಹೊಟೇಲು ಮುಚ್ಚಿ ಹೋಯಿತು. ಊರು ಬೆಳೆಯುತ್ತಿತ್ತು. ಬೆಳೆಯುತ್ತಿದ್ದ ಊರಿನಲ್ಲಿ ಹೊಸ ಹೊಟೇಲುಗಳು ಉದ್ಭವವಾಗಿ ಹಳೆಯ ಪದ್ಧತಿಯ ಅವರ ಹೊಟೆಲು ಹೊಸತನ ಮೈಗೂಡಿಸಿಕೊಂಡು ಮೆರೆಯಲಾರಂಭಿಸಿದ್ದ ಅನೇಕ ಹೊಸ ಹೊಟೇಲುಗಳ ಮುಂದೆ ಮಂಕು ಬಡಿಯಲಾರಂಭಿಸಿ ವ್ಯಾಪಾರ ಕುಸಿಯಲಾರಂಭಿಸಿದ್ದೂ ಸಹ ಅದು ಮುಚ್ಚಿ ಹೋಗಲು ಕಾರಣವಾಗಿತ್ತು. ಅದೆ ಸಮಯದಲ್ಲಿ ಹೊಸತಾಗಿ ರೂಪಿಸಲಾದ ಸೊಪ್ಪುಗುಡ್ಡೆ ವಿಸ್ತೀರ್ಣದ ಬಡಾವಣೆಯಲ್ಲಿ ಅವರ ಹಿರಿಯ ಮಗನಿಗೂ ಒಂದು ನಿವೇಶನ ಮಂಜೂರಾಗಿ ಅಲ್ಲಿ ಮನೆಯನ್ನ ಹೊಸತಾಗಿ ಕಟ್ಟಿ ನೆಮ್ಮದಿಯ ಬಾಳ್ವೆ ಆರಂಭಿಸಿದವರು.


ಅದರ ಹಿಂದೆಯೆ ಬಂಟ್ವಾಳದ ಹುಡುಗಿ ರತ್ನಾಬಾಯಿಯ ಜೊತೆಗೆ ಅವರ ಹಿರಿಯ ಮಗ ವಿಜಯೇಂದ್ರರ ಮದುವೆಯಾಯಿತು. ಪಟ್ಟಣದ ಕಟ್ಟೆ ಚನ್ನಕೇಶವನ ಬೀದಿಯಲ್ಲಿ ನಿವೇಶನ ಕೊಂಡು ಮನೆ ಕಟ್ಟಿ ನೆಲೆಸಿದ ಅವರ ಎರಡನೆ ಮಗ ರಾಧಾಕೃಷ್ಣಯ್ಯ ಕಾರ್ಕಳ ಮೂಲದ ವಿಮಲಾಬಾಯಿಯನ್ನ ಮದುವೆಯಾದರು. ದೀಪಾವಳಿ ಸಮಯದಲ್ಲಿ ಪಟಾಕಿ ಹಚ್ಚುವ ಮಕ್ಕಳ ಅಚಾತುರ್ಯದಿಂದಾದ ಅಪಘಾತದಲ್ಲಿ ತಮ್ಮ ಶ್ರವಣ ಶಕ್ತಿಯನ್ನ ಅವರು ಭಾಗಶಃ ಕಳೆದುಕೊಂಡರು.


ಮೂರನೆ ಮಗಳು ಸುನೀತಾ ಅಣ್ಣ ವಿಜಯೇಂದ್ರರ ಹೆಂಡತಿಯ ಪೋಸ್ಟ್ ಮಾಸ್ತರರಾಗಿದ್ದ ಹಿರಿಯಣ್ಣನನ್ನೆ ಮದುವೆಯಾಗಿ ಗಂಡನಿಗೆ ವರ್ಗಾವಣೆಯಾದಲೆಲ್ಲಾ ತಮ್ಮ ಬೆಕ್ಕಿನ ಬಿಡಾರದಂತಹ ಮನೆ ಬೆಳಗಿಸಿಕೊಂಡು ಗೃಹಿಣಿಯಾಗಿ ನೆಲೆಸಿದರು. ತಮ್ಮ ತವರಿನ ಬಾಂಧವ್ಯ ಮತ್ತೆ ಬೆಳೆಸಲು ಮನಸು ಮಾಡಿದ ಶಾಂತಾಮಾಯಿ ಕೆನರಾ ಬ್ಯಾಂಕಿನ ಉದ್ಯೋಗಿಯಾಗಿದ್ದ ನಾಲ್ಕನೆಯ ಮಗ ವೀರೇಂದ್ರರಿಗೆ ಸಿಂಡಿಕೇಟ್ ಬ್ಯಾಂಕಿನ ಉದ್ಯೋಗಿಯಾಗಿದ್ದ ತನ್ನಣ್ಣನ ಮಗಳು ಕಸ್ತೂರಿಯನ್ನೆ ತಂದುಕೊಂಡು ಊರಿಂದೂರಿಗೆ ಬ್ರಹ್ಮಚಾರಿಯಾಗಿ ವರ್ಗಾವಣೆಯಾಗಿ ಹೋಗುತ್ತಿದ್ದ ಅವನನ್ನೂ ಗೃಹಸ್ಥನನ್ನಾಗಿಸಿದರು.

ಕಡೆಯ ಮಗ ವಿಶ್ವ ಮಾತ್ರ ಅವರ ಪಾಲಿಗೆ ಹುಟ್ಟಿನಿಂದಲೂ ಯಾತನೆಯ ಕೂಸು. ಹುಟ್ಟಿದ ಮಗು ಉಸಿರು ಹಿಡಿಹಿಡಿದು ಅಳುತ್ತಿತ್ತಂತೆ. ಕಾರಣ ಏನಂತ ಗೊತ್ತಾಗದೆ ಕಕ್ಕಾಬಿಕ್ಕಿಯಾಗಿ ಹುಡುಕಿ ನೋಡಿದರೆ ಹುಟ್ಟಿದ ಕೂಸಿಗೆ ಮಲದ್ವಾರವೆ ಇರಲಿಲ್ಲವಂತೆ! ಅದಿರಬೇಕಾದ ಕಡೆ ಚರ್ಮ ಮುಚ್ಚಿಕೊಂಡಿದ್ದು ಮಲ ವಿಸರ್ಜಿಸಲಾಗದೆ ಮಗು ಹಾಗೆ ಉಸಿರು ಕಟ್ಟಿಕೊಂಡು ಒದ್ದಾಡುತ್ತಾ ಅಳುತ್ತಿತ್ತು. ಆಗೆಲ್ಲಾ ಮನೆಯಲ್ಲಿಯೆ ಹೆರಿಗೆಯಾಗುತ್ತಿದ್ದುದು ಕ್ರಮ. ಹೆರಿಗೆ ಮಾಡಿಸಲು ಬಂದಿದ್ದ ಸೂಲಗಿತ್ತಿ ಆಗಿದ್ದು ಆಗಿಹೋಗಲಿ ಅಂತ ಭಂಡಧೈರ್ಯ ಮಾಡಿ ಒಂದು ದಬ್ಬಣವನ್ನ ಬೆಂಕಿಗೆ ಹಿಡಿದು ಚೆನ್ನಾಗಿ ಬಿಸಿ ಮಾಡಿ ಅನಂತರ ತಣ್ಣೀರಲ್ಲಿ ಚುಂಯ್ ಎನ್ನಿಸಿ ಅಂದಾಜಿನ ಮೇಲೆ ಮಲದ್ವಾರ ಇರಬೇಕಿದ್ದ ಕಡೆ ಚುಚ್ಚಿಯೆ ಬಿಟ್ಟರಂತೆ! ಆ ರಣ ವೈದ್ಯದ ಪರಿಣಾಮ ಅಪಾರವಾದ  ರಕ್ತಸ್ರಾವವಾದರೂ ಗಟ್ಟಿಪಿಂಡವಾಗಿದ್ದ ಮಗು ಬದುಕುಳಿದು ಬಿಟ್ಟಿತು! ಹೊಟ್ಟೆಯೊಳಗೆ ಮಲ ಕಟ್ಟಿಕೊಂಡಿದ್ದ ಬಾಧೆಗಿಂತ ಈ ದಬ್ಬಣದ ಚಿಕಿತ್ಸೆ ಹೆಚ್ಚು ಯಾತನಾದಾಯಕ ಅನ್ನಿಸಲಿಲ್ಲವೇನೋ ಮಗು ಕ್ರಮೇಣ ಗೆಲುವಾಯಿತು. ಆದರೆ ಹುಟ್ಟಿನಿಂದಲೆ ಕಿವಿಯೆರಡೂ ಕೆಪ್ಪಾಗಿಯೆ ಇದ್ದ ಅದಕ್ಕೆ ಮಾತನಾಡುವ ಶಕ್ತಿ ಸಹ ಇಲ್ಲದೆ ಅಸಹಾಯಕವಾಗಿಯೆ ಅಂಗವಿಕಲತೆ ಹೊತ್ತು ಬೆಳೆಯಿತು. ಸಾಕಷ್ಟು ಆರೋಗ್ಯದ ಸಮಸ್ಯೆ ಹೊಂದಿದ್ದ ಆ ಹುಡುಗ ಹೆಚ್ಚು ಕಾಲ ಬದುಕದೆ ಇಪ್ಪತ್ತು ವರ್ಷಗಳ ಪ್ರಾಯ ತುಂಬುವ ಮೊದಲೆ ಅಸು ನೀಗಿದ್ದು ಮಾತ್ರ ಶಾಂತಾಮಾಯಿಗೆ ವಿಶ್ರಾಂತ ಜೀವನವನ್ನು ಸವೆಸುತ್ತಿದ್ದ ಈ ಅವಧಿಯಲ್ಲಿ ದುಃಖ ಹೊತ್ತು ತಂದಂತಹ ಸಂಗತಿ. 


ಕಾಲಕ್ರಮೇಣ ಮದುವೆಯಾಗಿ ಮನೆ ತುಂಬಿಕೊಂಡ ಸೊಸೆಯರಿಗೂ ಮಕ್ಕಳಾಗಿˌ ಅವರೆಲ್ಲರ ಆರೈಕೆ ಮಾಡುವ ಹೊತ್ತಲ್ಲಿ ಶಾಂತಾಮಾಯಿ ಶಾಶ್ವತವಾಗಿ ಮೊಮ್ಮಕ್ಕಳೆಲ್ಲರ "ಬಪಮ"ನಾಗಿ ರೂಪಾಂತರಗೊಂಡು ಅವರ ನಿಜ ನಾಮ ಎಲ್ಲರ ಸ್ಮೃತಿಯಿಂದಲೂ ಮರೆಯಾಗಿ ಹೋಯಿತು. ಅದರಲ್ಲೂ ಹೊಸ ತಲೆಮಾರಿನ ಮಕ್ಕಳಿಗಂತೂ ಅವರ ಹೆಸರೆ ಅರಿವಿಲ್ಲದಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಹಾಗೆ ನೋಡಿದರೆ ಶಾಂತಾ ಅನ್ನೋದು ಸಹ ಅವರ ನಿಜನಾಮವಲ್ಲ. ಗೌಡ ಸಾರಸ್ವತರಲ್ಲಿ ಮದುವೆಯಾದ ನಂತರ ಗಂಡನ ಮನೆಯಲ್ಲಿ ಹೆಣ್ಣಿಗೆ ಹೊಸ ಹೆಸರಿಡುವ ಕ್ರಮವಿದೆ. ಅವರ ಮೊದಲ ಸೊಸೆ ರತ್ನಾಬಾಯಿಯೂ ಇವರ ಮನೆ ತುಂಬಿದ ಮೇಲೆ ಸೀತಮ್ಮನಾದಂತೆˌ ಎರಡನೆ ಸೊಸೆ ವಿಮಲಾಬಾಯಿಯಿಂದ ಲೀಲಮ್ಮನಾದ ಹಾಗೆ ಶಾಂತಾಮಾಯಿ ಆಗಿದ್ದ ಅವರೂ ಹಿಂದೆ ಬೇರೊಂದು ಹೆಸರನ್ನ ಹೊತ್ತಿರಲೆಬೇಕು. ಪುರುಷ ಪ್ರಧಾನ ವ್ಯವಸ್ಥೆಯ ಅಪರೋಕ್ಷ ದಬ್ಬಾಳಿಕೆಯ ಫಲಶ್ರುತಿಯೆ ಈ ಹೆಸರು ಬದಲಾವಣೆ ಹಾಗೂ ಶಾಂತಿಮಾಯಿಯಂತಹ ಆ ತಲೆಮಾರಿನವರೆಲ್ಲರೂ ಅದರ ಬಲಿಪಶುಗಳು. ಬಹುಶಃ ಸ್ವಲ್ಪ ಆಧುನಿಕರಾಗಿದ್ದು ಉದ್ಯೋಗಸ್ಥೆಯಾಗಿದ್ದರಿಂದ ಸ್ವಾವಲಂಬಿತನದ ಪರಿಣಾಮವಾಗಿ ಕೊಂಚ ಸ್ವತಂತ್ರ ಮನೋಭಾವದವರಾಗಿದ್ದ ಮೂರನೆ ಸೊಸೆ ಕಸ್ತೂರಿ ಮಾತ್ರ ಜಯಲಕ್ಷ್ಮಿ ಅನ್ನೋ ಹೊಸ ಹೆಸರು ಇಟ್ಟರೂ ಅದನ್ನ ಹೊತ್ತು ಮೆರೆಸದೆ ಕೇವಲ ಕಸ್ತೂರಿಯಾಗಿಯೆ ಮುಂದುವರೆದರು.

ಕಾಲ ಮುಂದೋಡುತ್ತಿತ್ತು. ಆರ್ಥಿಕವಾಗಿ ಮನೆಯ ಪರಿಸ್ಥಿತಿ ಸುಧಾರಿಸಿತ್ತು. ಮೊಮ್ಮಕ್ಕಳು ಬೆಳೆಯುತ್ತಿದ್ದರುˌ ಕಲಿಕೆಯಲ್ಲಿ ಬುದ್ಧಿವಂತರಾಗಿದ್ಧ ಅವರೆಲ್ಲರೂ ತಮ್ಮ ತಮ್ಮ ಓದಿನ ಕ್ಷೇತ್ರದಲ್ಲಿ ತರಗತಿಗೆ ಮೊದಲಿಗರಾಗಿ ಮುನ್ನೆಲೆಗೆ ಬರತೊಡಗಿದರು. ಬಪಮನಾಗಿದ್ದ ಶಾಂತಾಮಾಯಿಗೂ ಸಹ ವಯಸ್ಸಾಗಿ ಮುಪ್ಪಡರ ತೊಡಗಿತು.

ಎಲ್ಲರ ಮನೆಯ ದೋಸೆಯೂ ತೂತು ಅನ್ನುವ ಹಾಗೆ ಲೋಕದ ಅಲಿಖಿತ ಅಘೋಷಿತ ನಿಯಮವಿರುವಂತೆ ಬಪಮನಿಗೂ ಅವರ ಜೊತೆಯಿದ್ದ ಹಿರಿಯ ಸೊಸೆಯಂದಿರಿಗೂ ಅಷ್ಟೇನು ಮಧುರವಾದ ಬಾಂಧವ್ಯವಿರಲಿಲ್ಲ. ಅಪಾರ ತಾಳ್ಮೆಯಿದ್ದ ಬಪಮ ಸೊಸೆಯಂದಿರ ಸಣ್ಣಪುಟ್ಟ ತಪ್ಪುಗಳು ಕಣ್ಣಿಗೆ ಬಿದ್ದರೂ ಅವನ್ನೆಲ್ಲ ಅವಗಣಿಸಿˌ ಅವರ ಅಸಹನೆಯ ದುಸುಮುಸುಗಳನ್ನ ಎದುರಾಡದೆ ಸಹಿಸಿ ಅಂತಹ ಸಂದರ್ಭಗಳಲ್ಲಿ ಶಾಂತಿಮಂತ್ರ ಪಠಿಸಿ ಮೌನಕ್ಕೆ ಜಾರಿ ಸಂಭವನೀಯ ಕಲಹಗಳಿಂದ ಪಾರಾಗುವ ಕಲೆಯಲ್ಲಿ ನಿಪುಣರಾಗಿದ್ದರು. ಮನೆಯಲ್ಲಿ ಅವರ ಅಂತರಂಗಕ್ಕೆ ಆಪ್ತರಾದವರು ಕೇವಲ ಅವರ ಮೊಮ್ಮಕ್ಕಳು ಮಾತ್ರ.

ಮೊಮ್ಮಕ್ಕಳು ಅಜ್ಜಿಗೆ ಮೊಮ್ಮಕ್ಕಳಿಗಿಂತ ಹೆಚ್ಚು ಸ್ನೇಹಿತರಂತಾದರು. ಶಾಲೆಗೆ ಹೋಗಿರದ ಬಪಮನಿಗೆ ಅಕ್ಷರ ಜ್ಞಾನವಿರಲಿಲ್ಲ. ಅನಕ್ಷರಸ್ಥೆಯಾದ ಅವರಿಗೆ ಮೊದಲಿಗೆ ಮನರಂಜನೆಯ ಮಾಧ್ಯಮವಾಗಿದ್ದುದು ರೇಡಿಯೋ. ಅದನ್ನ ಸಹ ಮೀರಿ ಅವರ ಮನಸನ್ನ ಆವರಿಸುತ್ತಿದ್ದುದು ಪತ್ರಿಕಾ ವಿತರಕರಾಗಿದ್ದ ಅವರ ಎರಡನೆ ಮಗ ತಂದು ಕೊಡುತ್ತಿದ್ದ ಚಂದಾಮಾಮ-ಬೊಂಬೆಮನೆ-ಬಾಲಮಿತ್ರ-ತುಷಾರ-ಮಯೂರ-ಸುಧಾ-ತರಂಗ. 


ಅವುಗಳಲ್ಲಿ ಪ್ರಕಟವಾಗಿರುತ್ತಿದ್ದ ಕಥಾಸರಿತ್ಸಾಗರವೆ ಅವರ ಪ್ರಪಂಚ. ದೂರದರ್ಶನದ ಮೆಘಾ ಧಾರವಾಹಿಗಳ ಕಾಲ ಆರಂಭವಾಗಿ ಅದರಲ್ಲಿ ಕೆಲವು ಅವರ ಮನ ಸೆಳೆದರೂ ಸಹ ಪತ್ರಿಕೆಗಳನ್ನ ಓದಿಸಿ ಕೇಳುವ ಸುಖವೆ ಅವರಿಗಿಷ್ಟ.

( ಇನ್ನೂ ಇದೆ.)


https://youtu.be/pqECyZtYqpA

No comments: