18 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೭.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೭.👊

ವಾಸ್ತವದಲ್ಲಿ ನಾವಿರಬೇಕಿದ್ದದ್ದು ಇನ್ನೆಲ್ಲೋˌ ಇಲ್ಲಿ ಹೀಗಿರೋದು ಒಂಥರಾ ಭಂಡಬಾಳು. ಹೀಗಾಗಿಯೆ ನಮಗೆ ಕುಟುಂಬದಲ್ಲೂ ಅಷ್ಟು ಮರ್ಯಾದೆ ಸಿಗುತ್ತಿಲ್ಲ ಅನ್ನುವ ಅರಿವು ಮೆಲ್ಲಗೆ ಮನಸೊಳಗೆ ಮೊಳಕೆಯೊಡೆದು ಮೂಡ ತೊಡಗುತ್ತಿದ್ದಂತೆ ಇರುಸು ಮುರುಸಾಗಲು ಆರಂಭಿಸಿದ ಕಾರಣಕ್ಕೆ ನಿಧಾನವಾಗಿ ಅವನ ಹದಿಹರೆಯದ ಮನಸ್ಸು ಹಾಗಿಲ್ಲದೆ ಸ್ವಾಭಿಮಾನ ಬಿಟ್ಟು ಹೀಗೆ ಅಜ್ಜನ ಆಶ್ರಯದಲ್ಲುಳಿದಿರುವ ಅಪ್ಪ - ಅಮ್ಮನ ಮೇಲೆಯೆ ಬಂಡೇಳ ತೊಡಗಿತು. ಅದನ್ನ ಕೇವಲ ಮನಸೊಳಗೆ ಇಟ್ಟುಕೊಂಡು ಬೇಯದೆ ಸಮಯ ಸಂದರ್ಭ ನೋಡಿಕೊಂಡು ಒಂದೆರಡು ಬಾರಿ ತಂದೆ-ತಾಯಿಗೂ ಮರ್ಮಕ್ಕೆ ತಾಗುವಂತೆ ಹೇಳಿಯೂ ಬಿಟ್ಟ. ಅವನ ಅಂತಹ ನೇರ ಮಾತುಗಳನ್ನ ಕೇಳಿ ಅಪ್ರತಿಭರಾದ ಕೈಲಾಗದವ ಮೈ ಪರಚಿಕೊಂಡಂತೆ ಅಪ್ಪ ಅಂದಿನಿಂದ ಸಣ್ಣಪುಟ್ಟ ವಿಷಯಕ್ಕೂ ಸಿಡಿಮಿಡಿಗೊಳ್ಳುತ್ತಾ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಆಯುಧವನ್ನಾಗಿಸಿಕೊಂಡು ಅವನನ್ನ ಥಳಿಸುವುದನ್ನೆ ಕಾಯಕವನ್ನಾಗಿಸಿಕೊಂಡರೆˌ ಅಮ್ಮ ಸರಿಯಾಗಿ ಅಡುಗೆ ಮಾಡದೆ - ಒಂದೊಮ್ಮೆ ಮಾಡಿದರೂ ಸಹ ಸರಿಯಾಗಿ ಹೊಟ್ಟೆಗೆ ಹಾಕದೆ ತಮ್ಮ ಮೇಲಿನ್ನೂ ಆಶ್ರಿತನಾಗಿದ್ದ ಅವನನ್ನ ಬೆಳೆಯುವ ಪ್ರಾಯದಲ್ಲಿ ದೈಹಿಕವಾಗಿಯೂ-ಮಾನಸಿಕವಾಗಿಯೂ ಹಿಂಸಿಸಲಾರಂಭಿಸಿದರು.

ಹೀಗೆ ಕೂತಲ್ಲಿ ನಿಂತಲ್ಲಿ ತಪ್ಫಿದ್ದರೂ ಇಲ್ಲದಿದ್ದರೂ ನೆಪ ಹುಡುಕಿ ಚಚ್ಚುವ ಹೆತ್ತವರ ದೌರ್ಜನ್ಯ ಮಿತಿಮೀರ ತೊಡಗಿದಾಗ ಅವನ ಮಾನಸಿಕ ಸ್ಥೈರ್ಯ ಕುಗ್ಗತೊಡಗಿತು. ಓದಿನಲ್ಲಿ ಮುಂದಿದ್ದ ಅವನಿಗೆ ಅಘಾತವಾಗುವಂತೆ ಒಂದು ಜನವರಿಯ ರಾತ್ರಿ ಮನೆಯಲ್ಲಿ ದೊಡ್ಡದೊಂದು ಪ್ರಹಸನವೆ ನಡೆದು ಹೋಯಿತು. ಅವನ ಹತ್ತನೆ ತರಗತಿಯ ಅಂತಿಮ ಪರಿಕ್ಷೆಗಳಿಗೆ ನೆಟ್ಟಗೆ ಎರಡು ತಿಂಗಳ ಸಮಯವೂ ಬಾಕಿಯಿರಲಿಲ್ಲ. ಕುಟುಂಬ ಸಣ್ಣದಾದ ಮೇಲೆ ದೊಡ್ಡ ಮನೆಯನ್ನ ಬಾಡಿಗೆಗೆ ಬಿಟ್ಟ ಅವನಜ್ಜ ಮಗಳು-ಅಳಿಯನ ವಾಸಕ್ಕೆ ಹಿಂದೆ ಬಾಡಿಗೆಗೆ ಬಿಡುತ್ತಿದ್ದ ಸಣ್ಣ ಭಾಗವನ್ನ ಬಿಟ್ಟುಕೊಟ್ಚಿದ್ದರು. ತಮ್ಮ ವಾಸಕ್ಕೆ ಒಂದು ಪ್ರತ್ಯೇಕ ಕೋಣೆಯನ್ನ ಮನೆಯ ಮತ್ತೊಂದು ಮೂಲೆಯಲ್ಲಿ ಕಟ್ಟಿಸಿಕೊಂಡು ಆಗಷ್ಟೆ ಹರೆಯಕ್ಕೆ ಕಾಲಿಡುತ್ತಿದ್ದ ಅವನ ಖಾಸಗಿತನವನ್ನ ಪರಿಗಣಿಸಿ ದನಗಳನ್ನೆಲ್ಲ ಮಾರಿ ದಶಕಗಳಾಗಿದ್ದರಿಂದ ಖಾಲಿ ಹೊಡೆಯುತ್ತಿದ್ದ ಮನೆ ಹಿಂಬದಿಯ ಕೊಟ್ಟಿಗೆಯ ಒಂದು ಭಾಗವನ್ನ ಚೆನ್ನಾಗಿ ದಬ್ಬೆಗಳನ್ನ ಏರಿಸಿ ಬಟ್ಟೆಯಿಂದ ಮರೆ ಮಾಡಿ ಕಟ್ಟಿ ಕೋಣೆಯಂತಾಗಿಸಿ ಬಿಟ್ಟುಕೊಟ್ಟಿದ್ದರು. ತನ್ನ ಚಾಪೆ ಸುರುಳಿ-ಪುಸ್ತಕಗಳು-ಬಟ್ಟೆಬರೆ-ಪಾಕೆಟ್ ರೇಡಿಯೋ-ಪಾಕೆಟ್ ವಾಕಮೆನ್-ಅದಕ್ಕೆ ಅವನೆ ತಯಾರಿಸಿದ್ದ ಮಡಿಕೆ ಧ್ವನಿವರ್ಧಕ-ಗ್ರಂಥಾಲಯದ ಎರವಲು ಪುಸ್ತಕಗಳನ್ನ ವರ್ಗಾಯಿಸಿದ ಅವನಲ್ಲಿಗೆ ಖುಷಿಯಿಂದಲೆ ನೆಲೆ ಬದಲಿಸಿದ್ದ. ಮನೆಯ ಒಳಗೆ ಬಾರದೆಯೆ ಪಕ್ಕದ ಓಣಿಯಿಂದ ನೇರ ಹಿತ್ತಲಿಗೆ ಬಂದು ಅಲ್ಲಿಂದ ತನ್ನ ಕೊಟ್ಟಿಗೆ ಕೋಣೆ ಹೊಕ್ಕುವ ಸ್ವಾತಂತ್ರ್ಯ ಅವನಿಗೆ ತಾನೂ ದೊಡ್ಡವನಾದೆ! ಅನ್ನೋ ಆತ್ಮವಿಶ್ವಾಸದ ಭಾವನೆ ಮೂಡಿಸ ತೊಡಗಿದ್ದ ಕಾಲ ಅದು. ರಾತ್ರಿ ಬೆಳಕಿಗೆ ಒಂದು ವಿದ್ಯುತ್ ಬಲ್ಬ್ ಸಹ ಹಾಕಿಕೊಟ್ಟುˌ ಅದರ ಹೋಲ್ಡರಿನ ಮೂಲಕವೆ ಅವನ ಕ್ಯಾಸೆಟ್ ಕೇಳುವ ಖಯಾಲಿಗೂ ವ್ಯವಸ್ಥೆ ಮಾಡಿಕೊಟ್ಟ ಅಜ್ಜ ಅವನಿಗುಪಕರಿಸಿದ್ದರು. ನೆಲ ನಯವಾಗಿದ್ದ ಹಾಸುಗಲ್ಲಿನದಾಗಿದ್ದರಿಂದ ಗುಡಿಸಿ ಒರೆಸಿಟ್ಟುಕೊಳ್ಳುವುದೊಂದು ಸಮಸ್ಯೆಯೆ ಆಗಿರಲಿಲ್ಲ.

ಹಾಗೊಂದು ದಿನ ಅಜ್ಜ ತನ್ನ ಎರಡನೆ ಮಗಳ ಮನೆಗಂತ ಕಾರ್ಕಳಕ್ಕೆ ಹೋಗಿದ್ದಾಗ ಇವನ ಪಾಲಿನ ಶನಿದೆಸೆ ಆರಂಭವಾಯ್ತು. ಆ ರಾತ್ರಿ ಎಂದಿನಂತೆ ರೇಡಿಯೋದಲ್ಲಿ ಟ್ಯೂನು ಮಾಡುವಾಗ ರಾತ್ರಿಯ ತಂಪಿನಲ್ಲಿ ಸ್ಪಷ್ಟವಾಗಿ ಕೇಳಲಾರಂಭಿಸಿದ್ದ ಎರಡನೆ ಬ್ಯಾಂಡಿನ ಬಿಬಿಸಿ ಹಾಕಿಕೊಂಡು ಅರೆಬರೆ ಅರ್ಥವಾಗುತ್ತಿದ್ದ ಯಾರದ್ದೋ ಆಂಗ್ಲ ಸಂದರ್ಶನ ಕೇಳಿಸಿಕೊಳ್ಳುತ್ತಾ ನೆಲದಲ್ಲಿ ಹಾಸಿದ ಚಾಪೆಯ ಮೇಲೆ ಕಾಲುಚಾಚಿ ಕೂತು ಗೋಡೆಗೊರಗಿ ಮಂಡಿ ಮುಚ್ಚುವಂತೆ ಮಂದರಿ ಹೊದ್ದುಕೊಂಡು ಯಾವುದೋ ನೋಟ್ಸನ್ನ ಓದಿಕೊಳ್ಳುತ್ತಾ ಪರಿಕ್ಷೆಯ ತಯಾರಿಯಲ್ಲಿ ತೊಡಗಿದ್ದ. ಆಗ ಕರ್ಕಶವಾಗಿ ಕೇಳಿ ಬಂತು ಆಗಷ್ಟೆ ಕೆಲಸ ಮುಗಿಸಿ ಮನೆಗೆ ಮರಳಿ ಬಂದಿದ್ದ ಅಪ್ಪನ ಬೆದರಿಕೆಯ ಧ್ವನಿ. "ಇನ್ನು ಮುಂದೆ ನಿನಗೆ ಪುಗಸಟ್ಟೆ ಊಟ ಹಾಕಲು ಆಶ್ರಯ ಕೊಡಲು ಸಾಧ್ಯವಿಲ್ಲ! ದುಡಿದು ದಿನಕ್ಕೆ ಐವತ್ತು ರೂಪಾಯಿ ತಂದು ಕೊಡೋದಾದ್ರೆ ಮಾತ್ರ ಇಲ್ಲಿರು" ಅಂತ ಒಂದು ರಾತ್ರಿ ಚೂರು ಅಮಲೇರಿಸಿಕೊಂಡಿದ್ದ ಅಪ್ಪ ತೊದಲುತ್ತಾ ನುಡಿದಾಗ ಮಾತ್ರ ಇವನ ತಾಳ್ಮೆಯ ಕಟ್ಟೆ ಒಡೆದೆ ಹೋಯಿತು.

ತಕ್ಷಣವೆ ಯಾವ ಹಿಂಜರಿಕೆಯೂ ಇಲ್ಲದೆ "ನೀವು ಮತ್ತು ನಿಮ್ಮ ಹೆಂಡತಿ ನನಗೆ ಅನ್ನ ಹಾಕ್ತಿರೋದು ಅಷ್ಟರಲ್ಲೆ ಇದೆ. ಈಗೆಲ್ಲಾ ಮದುವೆ-ಮುಂಜಿಗಳಿಗೆ ಅಡುಗೆ ಸಹಾಯಕನಾಗಿ ಬಡಿಸಲು ಹೋದಾಗಲಷ್ಟೆ ನಾನು ಹೊಟ್ಟೆ ತುಂಬಾ ಉಣ್ಣುತ್ತಿರೋದು ಗೊತ್ತಿರಲಿ. ನನಗೆ ಅಲ್ಲಿ ಸಿಗೋ ಐವತ್ತು ರೂಪಾಯಿ ಸಂಬಳವನ್ನೂ ನಿಮಗೆ ತಂದು ಕೊಡೋದು ನನ್ನ ಇಷ್ಟವಾಗಬೇಕೆ ಹೊರತುˌ ನಿಮ್ಮ ಒತ್ತಾಯವಲ್ಲ. ಖಂಡಿತ ನಯಾಪೈಸೆಯನ್ನೂ ಕೊಡಲ್ಲ. ಅದನ್ನೂ ಕೊಟ್ಟು ನಾನೇನು ಮಣ್ಣು ತಿನ್ನಲ? ದಿನಾ ಯಾವುದಾದರೂ ಸಮಾರಂಭ ಆಗಿ ಕೆಲಸ ಸಿಗಲು ಇದೇನು ಬೊಂಬಾಯಿಯ? ಆಗೊಮ್ಮೆ-ಈಗೊಮ್ಮೆ ಅದೂ ಮದುವೆ ಹಂಗಾಮಿನಲ್ಲಿ ಮಾತ್ರ ಕೆಲಸ ಇರೋದು. ಬಾಕಿ ದಿನಗಳೆಲ್ಲ ನಾನೇನು ಕದ್ದು ತಂದು ಕೊಡಬೇಕ ಐವತ್ ರೂಪಾಯಿ ನಿಮಗೆ?. ಈಗ ನಾನಿನ್ನೂ ಓದುತ್ತಿರೋ ಹುಡುಗ. ನನ್ನನ್ನ ಓದುವ ತನಕ ಬೆಂಬಲಿಸೋದು ನಿಮ್ಮ ಕೃಪೆಯಲ್ಲ ಕರ್ತವ್ಯ ತಿಳ್ಕಳಿ. ಅದು ಬಿಟ್ಟು ನನ್ನಲ್ಲೆ ದುಡ್ಡು ಕೇಳಕ್ಕೆ ನಾಚಿಕೆಯಾಗಬೇಕು ನಿಮ್ಮಿಬ್ಬರಿಗೂ. ಮರಿಬೇಡಿ ನೀವೆ ನಿಮ್ಮ ಮಾವನ ಆಶ್ರಯದಲ್ಲಿ ನಾಚಿಕೆಗೆಟ್ಟು ಪುಗಸಟ್ಟೆ ವಾಸ ಮಾಡ್ತಾ ಇರೋದು. ಹಾಗೆ ನೋಡಿದರೆ ನಾನಿಲ್ಲಿ ಇರೋದು ತಪ್ಪಲ್ಲ ಇದು ನನ್ನಜ್ಜನ ಮನೆ. ನೀವಿಲ್ಲಿರೋದೆ ಅವಮಾನಕರ. ಮೊದ್ಲು ಬೇರೆ ಮನೆ ಮಾಡಿ ನಾವೂ ಅಲ್ಲಿಗೆ ಬರ್ತಿವಿˌ ಆಗಲ್ಲಿ ನಿಮ್ಮ ಕಟ್ಟಳೆಗಳನ್ನ ನನ್ನ ಮೇಲೆ ಹೇರಿ ಆಗ ಒಪ್ಪಿಕೊಳ್ತಿನಿ. ನೀವೆ ನಮ್ಮಲ್ಲಿ ಬಂದಿರೋವಾಗ ಪೊಗರು ತೋರಿಸಬೇಡಿ. ದಿನ ಐವತ್ತು ರೂಪಾಯಿ ಅತಿಥಿಯಾದ ನಿಮಗೆ ಕೊಟ್ಟು ಹಕ್ಕಿನ ಮೊಮ್ಮಗ ನಾನಿಲ್ಲಿರಕ್ಕೆ ನನ್ನಜ್ಜನ ಮನೆಯೇನು ಲಾಡ್ಜ್ ಅಲ್ಲ. ಹಾಗೇನಾದ್ರೂ ಕೊಡಲೆ ಬೇಕಿದ್ರೆ ಅಜ್ಜನಿಗೆ ಇಲ್ಲಿರೋಕೆ ಬಾಡಿಗೆ ತಿಂಗಳ ತಿಂಗಳ ಸರಿಯಾಗಿ ಕೊಡಬೇಕಾಗಿರೋವ್ರು ದುಡಿಯುತ್ತಿರೋ ನೀವಿಬ್ರು ಗೊತ್ತಾಯ್ತ?!" ಅಂತ ಅವನು ಅಪ್ಪನ ವಿರುದ್ಧ ಕೆರಳಿ ನಿಂತು ಕಿರುಚಿದ. 

ಆಗೆಲ್ಲ ಸಿಕ್ಕಸಿಕ್ಕದ್ದನ್ನೆಲ್ಲಾ ಓದಿ ಸಮೃದ್ಧವಾಗುತ್ತಿದ್ದ ಅವನ ಯೋಚನಾ ಲಹರಿ ಇಷ್ಟು ತರ್ಕಬದ್ಧವಾಗಿ ಕಠಿಣ ನುಡಿಗಳನ್ನ ಅವನಿಂದ ಭಿಡೆಯಿಲ್ಲದೆ ಆಡಿಸಿತ್ತು. ಇನ್ನೂ ಹಿರಿಯರ ಹೊಡೆತ ಬಡಿತಗಳಿಂದ ಪಾರಾಗಲಾಗದ ಪ್ರಾಯದಲ್ಲಿದ್ದ ಸಣಕಲ ದೇಹದವನ ನಾಲಗೆ ಮಾತ್ರ ಸ್ಫುಟವಾಗಿತ್ತು. ಪರಿಣಾಮ ಮಾತ್ರ ಸಹಜವಾಗಿ ಭೀಕರವಾಯ್ತು. ಮೊದಲನೆಯದಾಗಿ ತನ್ನಾಜ್ಞೆಯನ್ನ ಧಿಕ್ಕರಿಸಿ ಎದುರುತ್ತರ ಕೊಡುತ್ತಿರೋ ಮಗˌ ಎರಡನೆಯದಾಗಿ ತನ್ನ ಹುಳುಕುಗಳನ್ನ ಸರಿಯಾಗಿ ಗುರುತಿಸಿ ಕೊಟ್ಟ ಅವನ ಮಾತುಗಳಿಂದಾದ ಮರ್ಮಾಘಾತˌ ಕೊನೆಯದಾಗಿ ಆ ಹೊತ್ತಿನಲ್ಲಿ ಹೊಟ್ಟೆಗಿಳಿದಿದ್ದ ದ್ರವರೂಪಿ ಪರಮಾತ್ಮನ ಕುಮ್ಮಕ್ಕು ಇಷ್ಟೂ ಒಂದಾಗಿ ಕೈಗೆ ಸಿಕ್ಕ ಸೌದೆ-ಇಟ್ಟಿಗೆ-ಹೆಂಚು ಹಿಡಿದು ಮುಖ-ಮೂತಿ ನೋಡದೆ ಚಚ್ಚಿ ಹಾಕಿದರು. ಅವರ ಸೈಂಧವ ಹಿಡಿತದಿಂದ ಅದು ಹೇಗೋ ತಪ್ಪಿಸಿಕೊಂಡು ಪಾರಾಗಿ ಜೀವ ಉಳಿಸಿಕೊಂಡು ಬೀದಿಗೆ ಓಡಿದ ಅವನಿಗೆ ಈ ಅನಿರೀಕ್ಷಿತ ದಾಳಿಯಿಂದ ಬೊಬ್ಬೆ ಹೊಡೆಯುವ ಶಕ್ತಿಯೂ ಉಳಿದಿರಲಿಲ್ಲ. ಬಿದ್ದ ಪೆಟ್ಟಿಗೆ ಬಾಯಿಯೊಳಗಾದ ಗಾಯಕ್ಕೋ-ಹೊಟ್ಟೆಗೆ ಒದ್ದ ರಭಸಕ್ಕೆ ಒಳಗಿಂದ ಚಿಮ್ಮಿ ಬಂದದ್ದೋ ಗೊತ್ತಿಲ್ಲ ರಸ್ತೆಗೆ ಎದುರಾಗಿ ಕೂತು ಕೆಮ್ಮಿದವನ ಬಾಯಿಯಿಂದ ರಕ್ತ ಚಿಮ್ಮಿ ಬಂತು. ಅವ ಸೋತಿದ್ದ.

(ಇನ್ನೂ ಇದೆ.)


https://youtu.be/qhBnygVePWs

No comments: