14 February 2013

ತುಳುಗಾದೆ-೧೪


"ಏಲೆಟ್ ಗುರಿಕಾರ್ಮೆ ತಿಕ್ಯರ ಬಲ್ಲಿ, ಎಲ್ಪೆಟ್ ಪೀ ಸುರುವಾರೆ ಬಲ್ಲಿ" { ಈ ಗಾದೆಯ ಪೂರ್ವಾರ್ಧ ಏಳರ ಎಳೆಪ್ರಾಯದಲ್ಲಿ ಯಾರೂ ಆಧಿಕಾರದ ಚುಕ್ಕಾಣಿ ಹಿಡಿದು ಯಜಮಾನಿಕೆಯನ್ನ ನಿಭಾಯಿಸುವಂತಾಗಬಾರದು. ವಯಸ್ಸಿನ ಎಳಸನ್ನ ಅಧಿಕಾರ ಕೇಂದ್ರದ ಸುತ್ತಮುತ್ತಲಿರುವವರು ಧಾರಾಳ ದುರುಪಯೋಗ ಪಡಿಸಿಕೊಳ್ಳಬಹುದಾದ ಸಕಲ ಸಾಧ್ಯತೆಗಳೂ ಆಗ ಇರುತ್ತವೆ. ಜೊತೆಗೆ ಅನುಭವದ ಲಾಭ ಪಡೆದಿರದ ಎಳಸು ಮನ ಅಧಿಕಾರದ ಹಿಡಿತದ ರುಚಿಕಂಡ ಮೇಲೆ ಅಂಧಾದುಂಧಿ ಅಧಿಕಾರ ಚಲಾಯಿಸಿ ಆಡಳಿತ ಯಂತ್ರವನ್ನೆ ಹಳ್ಳ ಹಿಡಿಸಬಹುದು ಎನ್ನುವ ವಿವೇಕವನ್ನ ಬೋಧಿಸುತ್ತದೆ. ಅಂತೆಯೆ ಎಪ್ಪತರ ಹಿರಿ ವಯಸ್ಸಿನಲ್ಲಿ ದೇಹ ಮುಪ್ಪಾಗುವಾಗ ಶಿಥಿಲವಾಗುತ್ತಾ ಸಾಗುತ್ತದೆ. ಕೆಲವರಲ್ಲಿ ಸೂಕ್ತ ಸ್ಥಳವನ್ನ ಮುಟ್ಟಿ ವಿಸರ್ಜಿಸುವ ತನಕ ಮಲ-ಮೂತ್ರಗಳನ್ನ ಹಿಡಿದಿಟ್ಟುಕೊಳ್ಳುವ ಸ್ನಾಯುಗಳು ದುರ್ಬಲವಾಗಿ ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ ಮಲ, ಮೂತ್ರಗಳು ಅವರ ಹಿಡಿತ ಹಾಗೂ ಮನದ ನಿರ್ದೇಶನಗಳನ್ನ ಧಿಕ್ಕರಿಸಿ ಕೆಳ ಸುರಿಯುವ ಸಂಭವವಿರುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನ ಇನ್'ಕಾಂಟಿನೆನ್ಸ್ ಎಂದು ಕರೆಯುತ್ತಾರೆ. ಅದಾಗುವ ವ್ಯಕ್ತಿಗೆ ನಾಚಿಕೆ ಹಾಗೂ ಮುಜಗರ ಆಗುವುದು ಸಹಜ. ಅದು ಯಾರ ಬಾಳಲ್ಲೂ ಆಗದಿರಲಿ ಎಂದು ಹಾರೈಸುತ್ತದೆ ಈ ಗಾದೆಯ ಉತ್ತರಾರ್ಧ. ಇದು ಈ ಗಾದೆಯ ವಾಚ್ಯಾರ್ಥ. ಅನುಭವ ಹಾಗೂ ಅಸಹಾಯಕತೆ ಎರಡನ್ನೂ ಒಟ್ಟಾಗಿ ವಿವರಿಸುವ ಅಪರೂಪದ ಗಾದೆಯಿದು. ಸರಳವಾಗಿ ಹೇಳುವುದಾದರೆ ಸರಿಯಾದ ಸಮಯಕ್ಕೆ ಸರಿಯಾದದ್ದು ದಕ್ಕಿದರೆ ಸರಿಯಾಗಿ ಬಾಳಬಹುದು ಎನ್ನುವುದು ಇದರ ತಾತ್ಪರ್ಯ.} ( ಏಲೆಟ್ ಗುರಿಕಾರ್ಮೆ ತಿಕ್ಯರ ಬಲ್ಲಿ, ಎಲ್ಪೆಟ್ ಪೀ ಸುರುವಾರೆ ಬಲ್ಲಿ = ಏಳರಲ್ಲಿ ಯಜಮಾನಿಕೆ ಸಿಕ್ಕ ಬಾರದು. ಎಪ್ಪತ್ತರಲ್ಲಿ ಮಲ ಸುರಿಯುವಂತಾಗ ಬಾರದು.)

No comments: