09 August 2013

ಹನಿದ ಹನಿಗಳ ಲೆಕ್ಖವಿಟ್ಟಿಲ್ಲ......ಅನ್ನಿಸಿದ್ದೆಲ್ಲ ಆಗಿಯೆ ಹೋಗುವ
ಹೊಸ ಲೋಕವೆಲ್ಲಾದರೂ ಹುಟ್ಟಿಕೊಂಡಿದ್ದರೆ....
ಹಾಗೆಯೆ ಅಲ್ಲಿಗೆ ನಿನ್ನ ಕೈ ಹಿಡಿದು ದಾಟಿಕೊಳ್ಳ ಬೇಕನ್ನುವ ಕನಸಿದೆ
ಅಲ್ಲಿ ಅಮರನಾಗಿ ನಿನ್ನ ಕಣ್ಣುಗಳನ್ನೆ ದಿಟ್ಟಿಸುತ್ತಾ
ಅವುಗಳಲ್ಲೆ ಕರಗಿ ಇದ್ದು ಬಿಡುವ ಮನಸಿದೆ,
ತಮ್ಮ ತಮ್ಮ ಸರದಿಗೆ ಸಾಲಾಗಿ
ನಿಂತು ಕಾದಿರುವ ಸಂಕಟಗಳ ಕಂಕುಳಲ್ಲಿ....
ಗತದ ನೆನಪಿನ ಬಡ ಗಂಟುಗಳು ಇಡುಕಿಕೊಂಡಿವೆ/
ಸುದೀರ್ಘ ತಾಳ್ಮೆಯ ಪರಿಧಿಯಲ್ಲಿದ್ದೀನಿ
ಸರಿವ ಕಾಲದ ಪರಿವೆ ತುಸುವೂ ಇಲ್ಲ....
ನಾನು ಬದುಕಿದ್ದೇನೋ ಸತ್ತಿದ್ದೇನೋ ಯಾವನು ಬಲ್ಲ!,
ತುಂಡು ನೆಲದ ಮೇಲೆ ನಿಂತು
ನಿರೀಕ್ಷೆಯಾಕಾಶದ ಕಡೆಗೆ ಕೈಚಾಚಿರುವಾಗ....
ಕಿರು ಕನಸಾದರೂ ಸಾಕಾರಗೊಳ್ಳುವ
ಕೊನೆಯ ಅವಕಾಶವಾದರೂ ಸಿಗಲಿ.//


ಎಲೆಯುದುರಿದ ಮೇಲೂ ಬೋಳುಗಿಡದ ಕೊಂಬೆಯ ಮೇಲೆ
ಕೂತಿರುವ ಒಂಟಿ ಹಕ್ಕಿಯಂತೆ....
ನನ್ನ ಬರಡು ಮನದ ರೆಂಬೆಗೆ
ಅಂಟಿ ಕುಳಿತ ನಿನ್ನ ಕನಸು,
ಮನದ ಹೊರಗೆದ್ದಿರುವ ಆರಲಾರದ ಉರಿ ಸೆಖೆಗೆ
ನನ್ನೆದೆಯಂಗಳದಲ್ಲಿ ಬಿದ್ದ....
ಬೆಂಕಿಯ ಸುಡು ಕಾವೆ ಕಾರಣ/
ಕಾರಿರುಳು ಕಳೆದು ಬೆಚ್ಚನೆ ಹಗಲು ಬಳಿ ಸಾರಿದರೂ
ಭುವಿಯೆದೆಯ ನಡುಕ ನಿಲ್ಲುತ್ತಿಲ್ಲ....
ಗೊತ್ತಿಲ್ಲದ ಗುರಿ ಹೊತ್ತಿಲ್ಲದ ಸ್ವಪ್ನ ನಕ್ಷತ್ರ ಕಳಚಿ ಉದುರುವ ಪರಿ....
ಬಾಳು ಬರಿದಾದ ಬಾನು
ಹಸುರೆಲ್ಲ ಒಣಗಿ ಬೋಳಾದ ಬಟಾಬಯಲು ಕಾನು,
ಮನೆಯ ಮಾಡನ್ನೆ ಮುಟ್ಟಲಾಗದಿದ್ದಾಗ
ಆಕಾಶಕ್ಕೆ ಏಣಿಯಿಡುವ ಕುರುಡು ಹಂಬಲವಾದರೂ ಏಕೆ?....
ಸುಮ್ಮನೆ ಆಗದ ಹೋಗದ
ಮಾತುಗಳನ್ನಾಡಲೇಬೇಕ?.//


ಸಣ್ಣ ಸಣ್ಣ ಕನಸುಗಳೂ ಕರಗಿ
ಕಣ್ಮರೆಯಾಗಿ ಹೋಗುವಾಗ....
ದೊಡ್ಡ ಸ್ವಪ್ನಗಳ ಕನವರಿಕೆಯೂ
ದುಬಾರಿಯೆನ್ನಿಸುತ್ತಿದೆ,
ಸಾಕಾರಗೊಳ್ಳದ ಹಗಲ ಕನಸುಗಳು
ಇರುಳಲ್ಲೂ ಹಿತವಾಗಿ ಕಾಡುತ್ತದಾದರೂ....
ಜೊತೆಗೆ ಕಣ್ತುಂಬಿ ಬರುವುದೇಕೋ ಅರಿವಿಲ್ಲ/
ಕರಗಿ ಕರಗಿ ನೀರಾಗಿ ಹಗುರಾದ ಮನಸಿಗೆ
ಮತ್ತೆ ಮತ್ತೆ ಬೆಂಬಿಡದ ಕನಸುಗಳ....
ಈಡೇರದ ಹೊರೆ ಎಡೆಬಿಡದೆ ಏರುತಲೆ ಇದೆ,
ಮೌನವಾದ ಮನದ ಮನೆಯ ಮೂಲೆಯಲ್ಲಿ
ಬಿಕ್ಕಳಿಕೆಗಳ ಅನುರಣನ ಮಾತ್ರ ನಿಂತೆ ಇಲ್ಲ.//


ಹಿಂದುರುಗಿಯೂ ನೋಡದಂತೆ
ನೀ ಮುನ್ನಡೆದು ಮರೆಯಾದರೂ....
ನನ್ನ ಕಣ್ಣುಗಳಿನ್ನೂ ಸಾಗಿ ಬಂದ ಹಾದಿಯಲ್ಲಿ
ಮಾಸದ ನಿನ್ನ ಹೆಜ್ಜೆಗಳನ್ನೆ ಅರಸುತ್ತಿವೆ,
ಇದೊಂದು ಅವರ್ಚನೀಯ ಆಸೆಯಷ್ಟೆ
ನಿನ್ನ ಮುಖವನ್ನೆ ಅನುಗಾಲ....
ಸ್ಮರಿಸುವ ಪರಿಭಾಷೆಯಷ್ಟೆ/
ಬೇಸರದ ಕಾತರಕೆ ಕಾಯುವ
ಅನಿವಾರ್ಯತೆ ಕಲ್ಪಿಸಿದ ಮಧುರ ಒಲವಿಗೆ
ಅವರ್ಚನೀಯ ಸಿಹಿಯ ಲೇಪವಿದೆ.....
ಕನಸ ಹಾದಿಯುದ್ದ ಕಾವಿದ ಕತ್ತಲೆಯ ನೆರಳು
ಬಾಳ ಜಾತ್ರೆಯಲ್ಲಿ ಜೊತೆಯಾಗಿ ಹೊರಟಿದ್ದರೂ....
ಮನ ಮಗುವಿನ ಕೈ ತಪ್ಪಿದೆ ಒಲವಿನ ಕಿರು ಬೆರಳು,
ಮೋಡ ಮಳೆಯ ಮುತ್ತಾಗಿ
ಹನಿ ಹನಿ ಆಡುವ ಮಾತಾಗಿ....
ಮನದ ಆಳಕ್ಕೆ ಅನುದಿನ ಇಳಿಯುತ್ತಿದೆ.//

No comments: