ಕಾಲ ಕಳೆದಂತೆ ಬದಲಾವಣೆಯ ಗಾಳಿ ತೀರ್ಥಹಳ್ಳಿಯಲ್ಲೂ ಬೀಸಿತಲ್ಲ,ಫಕೀರನ ಒಂಟೆತ್ತಿನ ಜಾಗಕ್ಕೆ ಆಟೋರಿಕ್ಷಾ ಆಧುನಿಕತೆಯ ಸ್ಪರ್ಶ ನೀಡಿತು.ಸೋಮವಾರ ತೀರ್ಥಹಳ್ಳಿಯಲ್ಲಿ ಸಂತೆ ಹೀಗಾಗಿ ಬೇರೆಡೆಯಲ್ಲಿ ಶುಕ್ರವಾರ ಸಿನೆಮಾಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕರೆ ಇಲ್ಲಿ ಮಾತ್ರ ಸೋಮವಾರವೇ ಮುಂಬರುವ ಸಿನೆಮಾಗಳನ್ನು ನೋಡಬಹುದಾಗಿತ್ತು.ಹಾಗಂತ ಹೊಸ ಚಿತ್ರಗಳೇನು ದಾಂಗುಡಿಯಿಟ್ಟು ಬರುತ್ತಿರಲಿಲ್ಲ.ಅಲ್ಲಿಯ ಮಟ್ಟಿಗೆ ಹೊಸತು ಎಂದರೆ ಕೇವಲ ಎರಡು ವರ್ಷದ ಹಿಂದೆ ತೆರೆಕಂಡ ಚಿತ್ರಗಲಷ್ಟೇ.ಟಿವಿ ಲಭ್ಯತೆ ಮರಳುಗಾಡಿನ ಓಯಸಿಸ್ ಆ ದಿನಗಳಲ್ಲಿ, ಮನರಂಜನೆಗೆ ಬರಗೆಟ್ಟವರಂತೆ ಸಿನೆಮಗಳನ್ನೇ ನೆಚ್ಚಿಕೊಂಡಿದ್ದ ತೀರ್ಥಹಳ್ಳಿ ಸುತ್ತ-ಮುತ್ತಲಿನವರಿಗೆ ಈ ಹಳಸಲು ಸರಕೆ ಮ್ರಷ್ಟಾನ್ನವಾಗಿತ್ತು.ಆಟೋ ಬಂದಮೇಲೆ ಪ್ರಚಾರದ ಖದರೇ ಬೇರೆಯಾಯ್ತು.ಹೊಸ ಸಿನೆಮಾ ಬಂದ ಮೊದಲದಿನ ಪೇಟೆಯಲ್ಲಿ ,ಇನ್ನುಳಿದದಿನಗಳಲ್ಲಿ ಮಂಡಗದ್ದೆ,ಕೋಣಂದೂರು,ಮೇಗರವಳ್ಳಿ,ದೇವಂಗಿ ಸಮೀಪದ ಹಳ್ಳಿಗಳಲ್ಲೂ ಫಕೀರನ "ಪ್ರತೀ ದಿನ ಕೇವಲ ಮೂರು ದೇಖಾವೆಗಳು...ನೋಡಲು ಮರೆಯದಿರಿ,ಮರೆತು ನಿರಾಶರಾಗದಿರಿ" ಎಂಬ 'ಅಮ್ರತವಾಣಿ' ಮೊಳಗುವಂತಾಯಿತು.
ಇನ್ನು ಸಂತೆಗೆ ಬಂದ ಜನ ಮರಳಿ ಅವರವರ ಊರಿಗೆ ಮರಳುವ ಮುನ್ನ ಟಿಕೇಟ್ ಇಲ್ಲದ ಇನ್ನೊಂದು ಪುಕ್ಕಟೆ ಮನರಂಜನೆಯೂ ಕಾದಿರುತಿತ್ತು.ಗಾಂಧಿಚೌಕದಲ್ಲಿ ನಿಂತಿರುತ್ತಿದ್ದ ಖಾದರ್ ಸಾಬರ ಮೂರುಮಾರ್ಕಿನ ಬೀಡಿಗಳ ಪ್ರಚಾರದ ವ್ಯಾನ್ ಮೇಲೆ ಮಿರಿಮಿರಿ ಸ್ಕರ್ಟ್-ಟೈಟ್ ಪ್ಯಾಂಟ್ ಹಾಕಿದ್ದ ಹೆಣ್ಣು ವೇಷದ ದಿಲೀಪ ಮತ್ತವನ ಹೀರೋನ ಕಾಂಬಿನೇಶನ್ ನಲ್ಲಿ "ಚಳಿಚಳಿ ತಾಳೆನು ಈಚಳಿಯ" (ನಿಜವಾಗಿಯೂ ಆಗ ಚಳಿ ಇರುತ್ತಿತ್ತು!),"ಪ್ರೀತಿಯೇ ನನ್ನುಸಿರೂ" "ಯಾರ್ ಬಿನ ಚೇನ್ ಕಹಾನ್ ರೆ? " "ಡ್ಯಾನ್ಸ್ ವಿತ್ ಮೀ..ಮೇರಿ ಮೇರಿ ಡಿಸ್ಕೋ" "ಮೇರಿ ಮೇರಿ ಮೇರಿ ಐ ಲವ್ ಯೂ" ಮುಂತಾದ ಡಿಸ್ಕೋ ನಂಬರ್ ಗಳಿಗೆ ಮಾದಕ ನ್ರತ್ಯವಿರುತ್ತಿತ್ತು. ಬಪ್ಪಿ ಲಹರಿಯ ಭಕ್ತರನೇಕರು ಆ ಪೀಳಿಗೆಯ ಯುವಕರಾಗಿದ್ದರಿಂದ ಈ ಬಹಿರಂಗ ಲೈವ್ ಬ್ಯಾಂಡ್(!) ನೋಡಲು ಕಲಾರಸಿಕರ (?) ಹಿಂಡೇ ಅಲ್ಲಿ ನೆರೆದಿರುತ್ತಿದ್ದು ನ್ರತ್ಯದ ನಡುವೆ ಅವನ ಮೋಹಕ ಬೆರಳುಗಳು ಎಸೆಯಿತ್ತಿದ್ದ ಮೂರೆಮೂರು ಬೀಡಿಗಳ ಸ್ಯಾಂಪಲ್ ಬೀಡಿಕಟ್ಟಿಗಾಗಿ ಅಕ್ಷರಶ ಪೈಪೋಟಿ ಏರ್ಪಡುತ್ತಿತ್ತು,ಉನ್ಮತ್ತ ಕಲಾರಸಿಕರನ್ನು ನಿಯಂತ್ರಿಸಲು ಒಬ್ಬ ಲಾಠಿಧಾರಿ ಪೇದೆ ಅಲ್ಲಿ ಹಾಜರಿರುತ್ತಿದ್ದ ಹಾಗು ಸುಂದರಿಯರನ್ನೆಲ್ಲ ಮೀರಿಸುವಂತೆ ಮಿಂಚುತ್ತಿದ್ದ ದಿಲೀಪನ ಮಾದಕ(?!) ದೇಹಸಿರಿಯನ್ನ ಹಸಿದ ಕಣ್ಣುಗಳಿಂದ ನೋಡುವುದರಲ್ಲೇ ಮೈಮರೆಯುತ್ತಿದ್ದ.ಅವನೊಬ್ಬ ಹೆಣ್ಣು ವೇಷದ ಗಂಡು ಎಂಬ ಬಹಿರಂಗ ಸತ್ಯ ಅಲ್ಲಿ ನೆರೆದವರಿಗೆಲ್ಲ ಸ್ಪಷ್ಟವಾಗಿ ಗೊತ್ತಿದ್ದರೂ ಕಲೆಯ (!) ಆಸ್ವಾದನೆಯಲ್ಲಿ ನೆರೆದವರ್ಯಾರೂ ಹಿಂದೆ ಬೀಳುತ್ತಿರಲಿಲ್ಲ.ಕಟ್ಟ ಕಡೆಯ "ಐಯಾಮ್ ಎ ಡಿಸ್ಕೋ ಡ್ಯಾನ್ಸರ್" ಕುಣಿತ ನೋಡದೆ ಜಾಗ ಖಾಲಿ ಮಾಡುತ್ತಲೂ ಇರಲಿಲ್ಲ! ದಿಲೀಪನ ನಶೆ ಹೆಚ್ಚಾದ ಅವನ ಕೆಲವು ಕಟ್ಟಾ ಅಭಿಮಾನಿಗಳು ಅವ ವ್ಯಾನ್ ನಿಂದಿಳಿದು ಚೌಕದ ಕಟ್ಟೆಯ ಮೇಲೆ ಅದೇ ಮೂರು ಮಾರ್ಕಿನ ಬೀಡಿ ಸೇದುತ್ತ ಕುಳಿತಿರುವುದನ್ನು ಆಸೆ ಕಂಗಳಿಂದ ನೋಡುತ್ತಿದ್ದರು!
ಇಂದು ಫಕೀರನೂ ಇಲ್ಲ,ಖಾದರ್ ಸಾಬರೂ ಇಲ್ಲ,ಮೂರು ಮಾರ್ಕಿನ ಬೀದಿಗಳೂ ಇಲ್ಲ ಹಾಗು ವ್ಯಾನ್ ಮೇಲೆ ದಿಲೀಪನ ಮಾದಕ ನ್ರತ್ಯವೂ ಇಲ್ಲ.ಹಳೆಯ ಪುಟಗಳ ಸಾಲಿಗೆ ಇವೆಲ್ಲವೂ ಸೇರಿ ಹೋಗಿವೆ.ತೀರ್ಥಹಳ್ಳಿ ನಿಜಾರ್ಥದಲ್ಲಿ ಎಲ್ಲೋ ಕಳೆದು ಹೋಗಿದೆ.
1 comment:
ಪ್ರೀತಿಯ ಗೆಳೆಯ ಹರ್ಷ,
ನನ್ನ ನೆನಪು ಹಾಗು ಗುರುತು ಸುಲಭವಾಗಿ ಸಿಗಬಹುದೆಂದು ಕೊಳ್ಳುತ್ತೇನೆ.
"ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೊಮ್ಮೆ ನೋಡಿದರೆ ಮಗದೊಮ್ಮೆ ಹೀಗೆ ಬಾರಿ ಬಾರಿ ನೋಡಬೇಕೆನಿಸುವ ಕನ್ನಡ ಕಲರ್ ಸ್ಕೋಪ್ ಚಿತ್ರ ************, ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ", ಇದು ಈಗಲೂ ಕಿವಿಯಲ್ಲಿ ಮೊಳಗುತ್ತಿರುವಂತಿದೆ. ಸೋಮವಾರದ ಸಂತೆ ಮಾಳ ಕೂಡ ತನ್ನ ಆವತ್ತಿನ ಜಾಗ ಕಳೆದುಕೊಂಡಿದೆ. Municipality office ಹತ್ತಿರ ಬರುತ್ತಿದ್ದ ಯಕ್ಷಗಾನದ ಟೆಂಟ್ ಕೂಡ ಕಾಣದೆ ವರುಷಗಳು ಉರುಳಿವೆ. ಒಟ್ಟಿನಲ್ಲಿ ನಮ್ಮ ತೀರ್ಥಹಳ್ಳಿಗೆ ಬದಲಾವಣೆಯ ಬಿರುಗಾಳಿ ಬೀಸಿದೆ, ಈ ಬಿರುಗಾಳಿಗೆ ಊರು ತತ್ತರಿಸಿದಂತಿದೆ.
-ರಾಜೇಶ್ ಮಂಜುನಾಥ್
Post a Comment