ನಮ್ಮೂರಿನ ಜನ ಇನ್ಯಾವುದೇ ಭಾರತದ ಹಳ್ಳಿಗಾಡಿನವರಂತೆ ವಿಪರೀತವೆನ್ನುವಷ್ಟು ದೈವಭಕ್ತರು.ಅವರ ಭಕ್ತಿಯ ಬೆಳೆಯಲ್ಲಿ ದೇವರಿಗೆ ಕೊಟ್ಟಷ್ಟೇ ಮಹತ್ವ ಭೂತಕ್ಕೂ ಇತ್ತು,ಈಗಲೂ ಇದೆ.ಘಟ್ಟದ ಮೇಲಿನ ಊರಾಗಿದ್ಧರೂ ತೀರ್ಥಹಳ್ಳಿಯ ಬಹುಸಂಖ್ಯಾತರು ದಕ್ಷಿಣ ಕನ್ನಡ ಮೂಲದವರೇ ಆಗಿರೋದರಿಂದಲೂ ಏನೋ ಭೂತಾರಾಧನೆ ಅಲ್ಲಿ ಸಹಜವಾಗಿ ಬೇರುಬಿಟ್ಟಿತ್ತು.ತೀರ್ಥಹಳ್ಳಿ ಈಗೇನೋ ಬೆಳೆದು ದೊಡ್ಡ ಊರಾಗಿರಬಹುದು ಆದರೆ ಕೇವಲ ಇಪ್ಪತ್ತೇ-ಇಪ್ಪತ್ತು ವರ್ಷಗಳ ಹಿಂದೆ ಹೆಸರಿಗೆ ತಕ್ಕಂತೆ ದೊಡ್ಡದೊಂದು ಹಳ್ಳಿಯಾಗಿಯೇ ಇತ್ತು.
ಹೀಗಾಗಿ ಪ್ರತೀ ಬಡಾವಣೆಗಳಲ್ಲೂ ಭೂತರಾಯಸ್ವಾಮಿಯದ್ದೋ ಇಲ್ಲ ಚೌಡಿಯದ್ದೋ ಬನ ಇದ್ದೆ ಇರುತ್ತಿತ್ತು.ಆಗೆಲ್ಲ ಸಣ್ಣ ಮಕ್ಕಳು ಸಂಜೆ ಕವಿದ ಮೇಲೆ ಹೋಗಲು ಹೆದರುತ್ತಿದ್ದ ಇಂತಹ ಬನಗಳ ಸುತ್ತಮುತ್ತ ಇತ್ತೀಚಿಗೆ ಜೀವಂತ ಭೂತಗಳಂತ ಜನ ಎರಡೋ-ಮೂರೋ ಉಪ್ಪರಿಗೆಯ ಮನೆ ಕಟ್ಟಿಕೊಂಡಿರೋದು ನೋಡಿ ಬೇಜಾರಾಯಿತು.ನಾವೆಲ್ಲ ಚಿಕ್ಕವರಾಗಿದ್ಧಾಗ ಒಂತರಾ ನಿಗೂಡ ಭಯ ಹುಟ್ಟಿಸುವ ತಾಣಗಳೆಲ್ಲ ಇಂದು ಗತ ವೈಭವ ಕಳೆದುಕೊಂಡು ಪಳಯುಳಿಕೆಯಂತೆ ನಿಂತಿವೆ.ಹಿಂದೊಮ್ಮೆ ತಮಗೆ ಹೆದರುತ್ತಿದ್ದ ಹುಲುಮಾನವರಿಗೆ ಇದೀಗ ತಾವೇ ಹೆದರಿ ಸಾಯಬೇಕಾದ ದೈನೇಸಿ ಸ್ಥಿತಿ ಭೂತಗಳಿಗೆ! ಅದಕ್ಕೆ ಇರಬೇಕು ಇಂದಿನ ಮಕ್ಕಳಿಗೆ ನಮಗಿದ್ದಷ್ಟು ಕಲ್ಪನಾ ಸಾಮರ್ಥ್ಯವೂ ಇಲ್ಲ.ನಾವು ಕಂಡ ಚಂದದ ತೀರ್ಥಹಳ್ಳಿಯ ಕಾಣೋ ಭಾಗ್ಯವೂ ಅವರಿಗಿಲ್ಲ.ಒಟ್ಟಿನಲ್ಲಿ ನಾನು ಕಂಡು ಬೆಳೆದಿದ್ದ ಆ ತೀರ್ಥಹಳ್ಳಿ ಎಲ್ಲೋ ಕಳೆದೇಹೋಗಿದೆ.
ಕಣ್ಣು ಮುಚ್ಚಿಕೊಂಡು ತೀರ್ಥಹಳ್ಳಿಯನ್ನು ನೆನಪಿಸಿಕೊಂಡರೆ ಮೊದಲಿಗೆ ನೆನಪಾಗೋದು ವೆಂಕಟೇಶ್ವರ ಟಾಕೀಸು,ಆಮೇಲೆ ಸೋಮವಾರದ ಸಂತೆ,ಅದರ ನಂತರ ರಾಮೇಶ್ವರ ದೇವಸ್ಥಾನ,ಅದಾದ ಮೇಲೆ ನಮ್ಮ ಮನೆ ಕೆಳಗಿದ್ದ ನಾಗರಬನ.ಜೆ ಸೀ ಆಸ್ಪತ್ರೆ.ಕಾರಂತರ ಬಸಸ್ಟ್ಯಾಂಡ್ ಮಯೂರ ಹೋಟೆಲಿನಲ್ಲಿ ಅಜ್ಜ ಕೊಡಿಸುತ್ತಿದ್ದ ಮಸಾಲೆ ದೋಸೆ! ಹೀಗೆ ಇವೆಲ್ಲ ನನ್ನ ಸ್ಮ್ರತಿಯಲ್ಲಿ ಫ್ರೇಮ್ ಹಾಕಿದಂತೆ ಉಳಿದುಬಿಟ್ಟಿವೆ.ಬಹುಶ ನಾನೂ ಅಲ್ಲಿಯೇ ಫ್ರೀಜ್ ಆಗಿದ್ದೇನೆ!
No comments:
Post a Comment