ಹುಟ್ಟಿ ಬೆಳೆದ ಊರನ್ನು..ಸೆಳೆಯುವ ನೆನಪುಗಳನ್ನು ಬಿಟ್ಟು ಮತ್ತೊಂದು ಹೊಸ ಪ್ರಪಂಚಕ್ಕೆ ಕಾಲಿಡುವುದು ಅಪಾರ ಯಾತನೆಯ ಸಂಗತಿ.ಅದರಲ್ಲೂ ಇನ್ನು ಈ ಊರಿನ ಋಣ ಹರಿದಂತೆ ಎನ್ನುವ ಅಗೋಚರ ಭಾವವೊಂದು ಮನದೊಳಗೆ ವೇದನೆಯ ಅಲೆ ಎಬ್ಬಿಸುತಿರುವಾಗಲಂತೂ ಯಾತನೆ ಆಡಲೂ ಅನುಭವಿಸಲೂ ಆಗದಂತಾಗಿ ಮನವ ಹಿಂಡುತ್ತದೆ.ಮೊದಲ ಬಾರಿಗೆ ತೀರ್ಥಹಳ್ಳಿ ತೊರೆದು ಕಾರ್ಕಳದ ಹಾದಿ ಹಿಡಿದಾಗ ನನ್ನೊಳಗೆ ತುಂಬಿದ್ದುದೂ ಅದೇ ಯಾತನೆ.
ನಾನು ಹುಟ್ಟಿ (ಆಗಿನ ಪದ್ದತಿಯಂತೆ ನನ್ನ ಹುಟ್ಟು ಮನೆಯಲ್ಲೇ ಆಗಿತ್ತು) ಬೆಳೆದ ಮನೆ,ಬಾಲ್ಯದಿಂದ ಚಿರಪರಿಚಿತವಾಗಿದ್ದ ನಮ್ಮ ಕೇರಿಯ ಪರಿಸರ.ಮನೆಯ ಹಟ್ಟಿ ತುಂಬಿದ್ದ ಭಾನು,ಲಕ್ಷ್ಮಿ,ಕುರುಡಿ,ಬೂಚ,ತುಂಗೆ,ನೇತ್ರ,ನಂದಿನಿ,ಮತ್ತವರ ಅಸಂಖ್ಯ ಸಂತಾನ...ಚಳಿಯ ದಿನಗಳಲ್ಲಿ ರಾತ್ರೆ ಮನೆಯೊಳಗೆ ಎಳೆಕರುಗಳನ್ನು ಗೋಣಿತಾಟಿನ ಮಲಗಿಸಿ ಕೊಳ್ಳುತ್ತಿದ್ದುದು.ಅದೆಷ್ಟೋಬಾರಿ ಅವುಗಳ ಅಭೋದ ಕಣ್ಣುಗಳಿಗೆ ಮನಸೋತು ಹಟಾಮಾಡಿ ಅವು ಮಲಗುವ ಗೋಣಿಯಲ್ಲೇ ಅವುಗಳ ತಬ್ಬಿಕೊಂಡು ಆ ಸಿನಗುವಾಸನೆಯ ಸವಿಯಲ್ಲೇ ನಿದ್ರೆಗೆ ಜಾರುತ್ತಿದ್ದುದು.ಆದರೆ ಬೆಳಗಾಗೆದ್ದು ನೋಡುವಾಗ ಮಾತ್ರ ಅದುಹೇಗೋ ಅಮ್ಮನ ಕಂಬಳಿಯಿಂದಲೇ ಹೊರಗೆ ಇಣುಕುತ್ತಿದ್ದುದು! ಈಎಲ್ಲ ಸವಿನೆನಪುಗಳ ಬಿಟ್ಟು ಬಲಿಪಶುವಿನಂತೆ ಇನ್ನೆಲ್ಲಿಗೋ ಒತ್ತಾಯಪೂರ್ವಕವಾಗಿ ಹೋಗುವಂತಿತ್ತು ನನ್ನ ಸ್ಥಿತಿ.
ಆದರೆ ಹೋಗದೆ ವಿಧಿಯಿಲ್ಲ ಹೆತ್ತವರ ನಿರ್ಲಕ್ಷ್ಯ,ಸುತ್ತಲಿನವರ ಸಸಾರಗಳ ಸಹಿಸಲಾಗದೆ ಇರುವುದಕ್ಕಾದರೂ ಊರು ಬಿಡಲೇಬೇಕಿತ್ತು.ಅದೇ ನನ್ನ ವಿಧಿ ಹೀಗಾಗಿ ನಾನು ನನ್ನ ನಾಲು ಜೊತೆ ಅಂಗಿ-ಚಡ್ಡಿಗಳ ಜೊತೆ ಬೈರಾಸು ಒಂದೆರಡು ಬಹುಮಾನವಾಗಿ ಬಂದಿದ್ದ ಪುಸ್ತಕಗಳನ್ನು ಜತನವಾಗಿ ಬಟ್ಟೆಯ ಚೀಲದಲ್ಲಿಟ್ಟುಕೊಂಡು,ಕಿತ್ತುಹೋಗಿದ್ದ ಬಾರನ್ನು ಕಳೆದ ವಾರವಷ್ಟೇ ಬದಲಿಸಿದ್ದ ನನ್ನವೇ ಹಳೆಯ ಹವಾಯಿ ಚಪ್ಪಲಿಗಳನ್ನು ಮೆಟ್ಟಿಕೊಂಡು ಅಜ್ಜನ ಬೆನ್ನು ಹಿಡಿದು ಊರು ಬಿಟ್ಟೆ.ದುರಂತವೆಂದರೆ ಎರಡುದಿನ ಹಿಂದಿನ ವರೆಗೂ ನನ್ನ ಈ ಗಡಿಪಾರಿನ ವಿಷಯ ನನಗೆ ಗೊತ್ತೇ ಇರಲಿಲ್ಲ! ಗೊತ್ತಾದ ನಂತರದ ಕಡೆಯ ಎರದುದಿನಗಳು ಮಂಕಾಗಿದ್ದೆ ಹಾಗು ಬೆಳಗ್ಗೆ ಮಲಗಿದ್ದವ ಏಳುವಾಗ ದಿಂಬು ಒದ್ದೆಯಾಗಿರುತಿತ್ತು.
18 November 2008
Subscribe to:
Post Comments (Atom)
No comments:
Post a Comment