09 November 2008

ಆತ್ಮದ ಗೆಳೆಯ....

ನಂಬಿಕೆ!

ಹುಂ,ಇಲ್ಲಿಯವರೆಗಿನ ನನ್ನೆಲ್ಲ ದಿನಗಳೂ ಕಳೆದದ್ದು ಕೇವಲ ನಂಬಿಕೆಯ ಆಧಾರದ ಮೇಲೆ.ಬಾಲ್ಯದಲ್ಲಿ ಚೆನ್ನಾಗಿ ಓದಿ ಮುಂದೆ ಗೆಲ್ಲುತ್ತೇನೆ ಎಂಬ ನಂಬಿಕೆ. ಹಾಸ್ಟೆಲ್ಲಿನಲ್ಲಿ ಅನಿವಾರ್ಯವಾಗಿ ಕೊಳೆಯುವಾಗ ಮುಂದಾದರೂ ಸುಖದ ಕನಸು ಸಾಕಾರವಾಗುತ್ತದೆ ಎಂಬ ನಂಬಿಕೆ. ತೀರ ಒಂಟಿತನ ಕಾಡಿದಾಗ ಯಾರಾದರೂ ಹೃದಯಕ್ಕೆ ಹತ್ತಿರವಾದ ಗೆಳೆಯರು ಸಿಕ್ಕಾರು ಎಂಬ ನಂಬಿಕೆ. ನಿನ್ನನ್ನು ಕಣ್ತುಂಬಿ ಕೊಂಡಾಗ ಎಂದಾದರೊಮ್ಮೆ ನಿನ್ನ ಸಾಂಗತ್ಯ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ. ಹೀಗೆ ನಂಬಿಕೆಯ ನೆಲೆಯಲ್ಲಿಯೇ ಒಂಬತ್ತು ಸಾವಿರ ದಿನಗಳ ಬಾಳ್ವೆ ಕಳೆದೆ ಹೋಗಿದೆ. ಉಳಿದೆಲ್ಲ ನಂಬಿಕೆ ನಿಜವಾದರೂ ನಿನ್ನ ಮನ ಗೆಲ್ಲುವ ನಂಬಿಕೆ ಸುಳ್ಳಾಯ್ತು. ಆದರೂ ನಂಬುವ ಚಟ ಬಿಡಲಾಗುತ್ತಿಲ್ಲ. ಹೀಗಾಗಿ ನನ್ನ ಸಹಿಯಲ್ಲಿ ನೀನು ಸ್ಥಿರವಾಗಿ ಉಳಿದೆ.  ಹೌದು! ನನ್ನ ಹಸ್ತಾಕ್ಷರಗಳ ಅಧಿಕೃತ ರೂಪ ನೀನೆ. ಕಡೆಗೂ ನಿನ್ನನ್ನು ಕೇವಲ ಸಹಿಯಲ್ಲದರೂ ಉಳಿಸಿ ಕೊಂಡ ತೃಪ್ತಿ ನನ್ನದು.


ಹಾಲು ಹಲ್ಲುದುರುವ ಎಳೇ ವಯಸ್ಸಿನಲ್ಲಿ ಅಮ್ಮ ನನ್ನೊಳಗೆ ಬಿತ್ತಿದ್ದ ಒಂದು ನಂಬಿಕೆ ಇಂದು ಬೆಳೆದು ಹೆಮ್ಮರವಾಗಿದೆ. ಮಣ್ಣು ಸಗಣಿ ಉಂಡೆ ಕಟ್ಟಿ ಬಿದ್ದ ಹಲ್ಲನ್ನು ಅದರಲ್ಲಡಗಿಸಿ ಮನೆಯ ಮಾಡ ಮೇಲೆಸೆದು ಬೀಳ್ಕೊಟ್ಟರೆ ಚಿನ್ನದ ಹಲ್ಲು ಮತ್ತೆ ಚಿಗುರುತ್ತಂತೆ!. ಹೀಗಾಗಿ ಎಲ್ಲ ಸವಿ ನೆನಪುಗಳ ಸಿಹಿ ಸಂಭ್ರಮವನ್ನು ಹಾಗೆ ಉಂಡೆಕಟ್ಟಿ ನೆನಪಿನ ಮನೆ ಮಾಳಿಗೆಯ ಮೇಲೆಸೆಯುತ್ತೇನೆ. ಮುಂದಾದರೂ ಹೊಸದಾದ ಚಿನ್ನದ ಬಾಳ್ವೆ ಎದುರಾದೀತು ಎಂಬ ಆಶಯವನ್ನು ಮೊಳಕೆಯಾಗಿಸುತ್ತಾ ಕಾಯುತ್ತಲೇ ಇದ್ದೇನೆ. ಮುಂದೊಮ್ಮೆ ಸಿಗ ಬಹುದಾದ ಬಂಗಾರದ ಬಾಳ್ವೆಗೆ.ಬಾಳ ಬುತ್ತಿ ಹಂಚಿಕೊಳ್ಳಲು ನೀನು ನನಗೆ ಸಿಗದಿದ್ದರೇನು? ಜೀವದ ಗೆಳೆಯ ರುದ್ರಪ್ರಸಾದನ ಜೊತೆ ಸಿಕ್ಕಿದೆ, ನನ್ನ ಒಳ ಬೇಗುದಿಗೆ ಅರ್ಥ ಹುಡುಕುತ್ತಾನವನು. ವಯಸ್ಸಿನಲ್ಲಿ ನನ್ನಿಂದ ಕಿರಿಯ ಸಾಂತ್ವಾನದ ಹೆಗಲಾಗುವುದರಲ್ಲಿ ನನ್ನಿಂದಲೂ ಹಿರಿಯ. ನನ್ನೆಲ್ಲ ರಹಸ್ಯಗಳನ್ನೂ ಬಲ್ಲವ, ನನ್ನದೆಲ್ಲವೂ ಆತ ತಿಳಿಯಲಿ ಎಂದು ನಾನು ಹಾರೈಸುವ ಏಕೈಕ ಜೀವ. ನಿನ್ನ ಹಾಗು ನನ್ನ ನಡುವಿನ ಸಂವೇದನೆಯ ಖಚಿತ ಸುಳಿವು ಇರುವ ಒಂದೇ ಒಂದು ಜೀವ ಅದು. ನೀನು ಸಿಗದ ಕೊರತೆ ಅಷ್ಟಾಗಿ ಕಾಡದೆ ಇರಲು ಅವನೇ ಅವನೊಬ್ಬನೆ ಕಾರಣ. ಅವನಿಗಾಗಿ ಏನನ್ನೇ ಮಾಡಲು ನಾನು ತಯಾರು. ಉಸಿರನ್ನೇ ಕೊಡಬೇಕಾಗಿ ಬಂದರೂ ಮರುಕ್ಷಣ ಯೋಚಿಸುವ ಪ್ರಶ್ನೆಯೇ ಇಲ್ಲ, ಅಷ್ಟು ಗಾಢವಾದ ನಂಬಿಕೆ ಅವನ ಮೇಲೆ ನನಗೆ.ಸದ್ಯ ಪೂನದಲ್ಲಿದ್ದಾನೆ. ಬೆಂಗಳೂರಿನ ಯು,ವಿ,ಸಿ,ಇ ಯಲ್ಲಿ ಬಿಇ ಮುಗಿಸಿ 'ಐಬಿಎಂ'ನಲ್ಲಿ ಮೂರು ವರ್ಷ ಸಾಫ್ಟ್'ವೇರ್ ತಂತ್ರಜ್ಞ ಆಗಿದ್ದ, ಕಳೆದ ತಿಂಗಳಷ್ಟೇ ಕಂಪನಿ ಬದಲಿಸಿದ್ದಾನೆ. ಕೊಡಗಿನ ಶಿರಂಗಾಲದ ಅವನೆಲ್ಲಿ? ತೀರ್ಥಹಳ್ಳಿಯ ನಾನೆಲ್ಲಿ? ಯಾರೂ ಇಲ್ಲದೆ ಒಂಟಿ ಜೀವವಾಗಿದ್ದ ನನಗೆ ಭರವಸೆಯ ಬೆಳಕಾಗಿ ಗೋಚರಿಸಿದ್ದಾನವ. ಈ ವಿಷಯದಲ್ಲಿ ನಾನು ಅದೃಷ್ಟವಂತ. ಇದೊಂದು ಸಂಗತಿಯಲ್ಲಾದರೂ ನನ್ನ ಮನೋ ಕಾಮನೆ ಕೈಗೂಡಿದ್ದಕ್ಕಾಗಿ ನಾನೆಂದೂ ನಂಬದ ಆ ನನ್ನ ದೇವರಿಗೆ ಜನ್ಮಜನ್ಮಾಂತರದ ಸಾಷ್ಟಾಂಗ ನಮನ ಸಲ್ಲಿಸುತ್ತೇನೆ.

No comments: