25 July 2024

ವಡಕ್ಕುನಾಥನೂ - ತೃಶೂರು ರೌಂಡಿನ ರೌಂಡೂ.👍

ನನ್ನ ಯಾವುದೆ ತೃಶೂರು ಭೇಟಿಯೂ ಇಲ್ಲಿನ ವಡಕ್ಕುನಾಥನ ಸನ್ನಿಧಿಯ ವಿಶಾಲ ದೇವಾಲಯದ ಆವರಣದ ಭೇಟಿಗಳಿಲ್ಲದೆ ಪರಿಪೂರ್ಣವಾಗಿಲ್ಲ. ದಕ್ಷಿಣ ಏಷಿಯಾದಲ್ಲೆ ಅತ್ಯಂತ ದೊಡ್ಡದಾಗಿರುವ ವೃತ್ತವಾಗಿರುವ ಹದಿನೇಳು ರಸ್ತೆಗಳು ಸಂಧಿಸುವ "ತೃಶೂರು ರೌಂಡ್" ಅಥವಾ ಸ್ವರಾಜ್ ರೌಂಡ್ ನಡು ಮಧ್ಯದಲ್ಲಿ ವಡಕ್ಕುನಾಥನ ದೇವಸ್ಥಾನ ಇದೆ.🙂


ಅರವತ್ತೈದು ಎಕರೆ ವಿಸ್ತೀರ್ಣದ ಈ ಬೃಹತ್ ವೃತ್ತದ ಹೊರ ವ್ಯಾಸದ ಸುತ್ತಳತೆ ಬರೋಬ್ಬರಿ ಎರಡು ಕಿಲೋಮೀಟರ್. ನಡು ಮಧ್ಯ ನಾಲ್ಕು ದಿಕ್ಕಿಗೂ ನಾಲ್ಕು ಪ್ರತ್ಯೇಕ ದ್ವಾರಗಳಿರುವ ವಡಕ್ಕುನಾಥನ ಬೃಹತ್ ದೇಗುಲ ಸಂಕೀರ್ಣವಿದ್ದರೆˌ ಅವನ ಎಡ ಮಗ್ಗುಲಿಗೆ ತೆಕ್ಕಿನ್ ಕಾಡು ಮೈದಾನವಿದೆˌ ಬಲ ಭಾಗದಲ್ಲಿ ಅರ್ಚಕ ಪರಿವಾರಗಳ ವಸತಿ ಮತ್ತದರ ಒತ್ತಿಗೆ ದೊಡ್ಡ ಉದ್ಯಾನವನವಿದೆ. ವಡಕ್ಕುನಾಥ ಅಂದರೆ ಉತ್ತರದ ಒಡೆಯ ಎಂದರ್ಥ.🙏


ಇಲ್ಲಿನ ಪ್ರಮುಖ ಹತ್ತು ದೇವಸ್ಥಾನಗಳ ದೌಲತ್ತು ಪ್ರದರ್ಶನದ "ತೃಶೂರು ಪೂರಂ" ಅಂದರೆ ತೃಶೂರು ಜಾತ್ರೆ ಜಗತ್ಪ್ರಸಿದ್ಧ. ಆನೆಗಳ ಮೇಳವಾಗಿರುವ ಇದರಲ್ಲಿ ಮುಖ್ಯವಾಗಿ ಪರಮಕ್ಕಾವು ಭಗವತಿ ಹಾಗೂ ತಿರುವಾಂಬಾಡಿ ಭಗವತಿ ದೇವಸ್ಥಾನಗಳ ದೊಡ್ಡಸ್ತಿಕೆಯ ಪೈಪೋಟಿಯ ಮೇಲಾಟದ ಬೃಹತ್ ಪ್ರದರ್ಶನದ ಸಂದರ್ಭ ಅದು. ಚೈತ್ರಮಾಸದ ಪೂರ್ವಾಷಾಢ ನಕ್ಷತ್ರದಲ್ಲಿ ಆಚರಿಸಲಾಗೋ ಈ ಉತ್ಸವ ಈ ಸಲ ಎಪ್ರಿಲ್ ಮೂರನೆ ವಾರ ನಡೆದಿತ್ತು. ನಾನಾಗ ಬೆಂಗಳೂರಲ್ಲೆ ಇದ್ದೆ.😇



ಪರಿವಾರ ದೇವತೆಗಳೊಂದಿಗೆ ಈಶ್ವರನ ಸನ್ನಿಧಿಯಿರುವ ವಡಕ್ಕುನಾಥ ದೇವಸ್ಥಾನದ ಆವರಣದೊಳಗೆ ಅಯ್ಯಪ್ಪˌ ಶಾಸ್ತಾನ್ˌ ನಾಗಬನˌ ಭೂತಸ್ಥಾನˌ ಮೂಲಸ್ಥಳ ಇವೆಲ್ಲಾ ಪ್ರತ್ಯೇಕವಾಗಿವೆ. ಕೊಚ್ಚಿನ್ ದೈವಸ್ವಂ ಬೋರ್ಡು ಇದರ ಮೇಲುಸ್ತುವಾರಿ ನಡೆಸುತ್ತದೆ.   ದೇವಸ್ಥಾನದ ಒಳಾವರಣದಲ್ಲಿ ಹಾಕುವ ಒಂದು ಪ್ರದಕ್ಷಿಣೆ ಒಂದು ಕಿಲೋಮೀಟರ್ ದೂರವಾಗಿದ್ದರೆ - ಹೊರಾವರಣದ್ದು ಎರಡು ಕಿಲೋಮೀಟರ್. ಸಂಜೆ ಸಾಮಾನ್ಯವಾಗಿ ನಾನು ಹೊರ ಆವರಣವನ್ನೆ ಐದು ಸುತ್ತು ಹಾಕುತ್ತಿದ್ದೆ. ದೂರದ ಸ್ಥಳಗಳಿಗೆ ಹೋಗುವಷ್ಟು ಬಿಡುವಿಲ್ಲದೆ ಕೆಲಸ ಬಿಗಿಯಾಗಿದ್ದರೆˌ ಬೆಳಗ್ಯೆಯೂ ಐದು ಸುತ್ತು ಇದೆ ರೌಂಡಿನ ಹೊರಾವರಣದಲ್ಲಿ ಹಾಕಿ ದಿನದ ವಾಕಿಂಗ್ ಕೋಟ ಮುಗಿಸುತ್ತಿದ್ಧೆ.😌



ಮಳೆ - ಚಳಿ - ಬೇಸಿಗೆ ಮೂರೂ ಕಾಲದಲ್ಲಿ ಇಲ್ಲಿಗೆ ನಿರಂತರವಾಗಿ ಬಂದಿದ್ಧೇನೆ. ಇಲ್ಲಿನ ತೇವಾಂಶ ಭರಿತ ವಾತಾವರಣದಲ್ಲಿ ಬೆವರ ಸ್ನಾನದಲ್ಲಿ ಮಿಂದಿದ್ದೇನೆ. ಕೇರಳದ ಸಾಂಸ್ಕೃತಿಕ ರಾಜಧಾನಿಯಾಗಿರುವ ರಾಜ್ಯದ ನಡು ಮಧ್ಯದಲ್ಲಿ ಏಕೀಕರಣ ಪೂರ್ವದಲ್ಲಿ ಕೊಚ್ಚಿನ್ ಸಂಸ್ಥಾನದ ಭಾಗವಾಗಿದ್ದ ತೃಶೂರು ಕೇರಳ ರಾಜ್ಯದಲ್ಲೆ ನನಗೆ ಆಪ್ತವಾದ ಊರು.❤️

No comments: