ಬಾಳಿನ ಸಂತೆಯಲ್ಲಿ ಕಳೆದು ನೀ ಹೋದೆಯಾದರೂ...
ನಿನ್ನವೆಲ್ಲ ನೆನಪುಗಳನ್ನ ಇಲ್ಲಿಯೆ ಬಿಟ್ಟು ಹೋಗಿದ್ದೀಯ,
ಸಾಕಲ್ಲ ನನಗೆ ಬದುಕಿನ ವ್ಯಾಪಾರ ಮುಗಿಸಲು....
ಅಷ್ಟು ಬಂಡವಾಳ?/
ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ನಿನ್ನೊಂದಿಗೆ ಕಳೆದ ಕ್ಷಣಗಳನ್ನೆಲ್ಲ...
ಬೆಚ್ಚಗೆ ನನ್ನ ಎದೆಪೆಟ್ಟಿಗೆಯೊಳಗೆ ಕೂಡಿಟ್ಟಿದ್ದೇನೆ,
ಒಂಟಿತನ ಮರಗಟ್ಟಿಸುವ ರಾತ್ರಿಗಳಲ್ಲಿ ಚೂರು ನೆನಪುಗಲೆದುರು ಕೂತು ಬೆಚ್ಚಗಾಗಲು...
ಕಣ್ತುಂಬಿ ಕಂಡಿದ್ದ ಕನಸುಗಳೆಲ್ಲ ಕಣ್ಣೊಳಗೆ ಕಾಡಿಗೆಯಂತಾಗಿ ಕರಗುತಿವೆ,
ಕಣ್ಣೀರ ಜೊತೆ ಸೇರಿ ಹರಿದು ಹೋಗಲು//
ಕನಸಿನ ಸಾವಿಗೂ ಕಣ್ಣೀರಿನ ಸುಂಕ....
ದಾಟಲಾಗದೆ ನೋವಿನ ನದಿಯ ಕಾಲುಸಂಕ,
ನಿಸ್ಸಾರವಾಗಿ ಕೂತರೂ ನಾನು....
ನನ್ನೆದೆಯಲ್ಲಿ ಇನ್ನೂ ನಿನ್ನ ಪ್ರೀತಿಯ ನೆರಳಿದೆ/
ನಾಳೆಯ ಸಾಲು ಸಾಲು ಸಂಕಟಕ್ಕೆ ನೆನ್ನೆಯ ಸಾವಿರ ಸಂಭ್ರಮಗಳು...
ಕಟ್ಟಿಸಿಕೊಳ್ಳುವ ಬಡ್ಡಿ ಇರಬಹುದು ಬಹುಷಃ ಈ ವಿರಹ,
ವೇದನೆಯ ಸಾಲ ಕೊಟ್ಟಿದ್ದೀಯ ವಿರಹದ ಬಡ್ಡಿಯನೂ ಬಿಟ್ಟಿದ್ದೀಯ....
ಶುದ್ಧ ಪ್ರೀತಿಯ ಅಸಲಿಗೆ ಅಸಲು ಇದೆ ಬೆಲೆನ?//
ನಿಟ್ಟುಸಿರನೆಲ್ಲ ನೆಲದಾಳ ಹೂತು ಮಾಡಿದರೂನು ಮಣ್ಣು.....
ಮರೆಮಾಚಲಾಗದಂತೆ ನೋವನ್ನು ಹನಿಗಳಲ್ಲಿ ಜಾಹೀರುಗೊಳಿಸಿಯೇ ಬಿಟ್ಟಿದೆ ನನ್ನವೆರಡು ಕಣ್ಣು,
ಮಾತು ಮೂಡಲಾರದ ಆ ಹೊತ್ತಲ್ಲಿ,ನಿನ್ನ ತೊಳ್ತೆಕ್ಕೆಯ ಮತ್ತಲ್ಲಿ.....
ಎವೆಯಿಕ್ಕದೆ ನನ್ನ ದೃಷ್ಟಿ ದಿಟ್ಟಿಸುತ್ತಿದ್ದ ನಿನ್ನ ನತ್ತಲ್ಲಿ/
ಹುದುಗಿದ್ದುದು ಬರೀ ನಿರ್ಮಲ ಪ್ರೀತಿ....
ಮಗುಚಿದ ನೆನಪಿನ ಪುಟಗಳಲ್ಲೆಲ್ಲ ನಿನ್ನ ಮಾತುಗಳ ಪಸೆಯೆ ಕಂಡು ಮತ್ತೆ ನನ್ನ ಕಣ್ತುಂಬಿ ಬಂತು,
ಮತ್ತೆ ಅಕ್ಷರಗಳೆಲ್ಲ ಕಣ್ಣೀರಿನಿಂದ ಕಲಸಿ ಹೋಯಿತು//
01 March 2011
ಕುಡಿಯದೆಯೂ ನಾನು ಮತ್ತ...ನಿನ್ನ ಒಲವಲ್ಲಿ?!
Subscribe to:
Posts (Atom)