26 April 2012

ಗಾಲವನ ಗಲ್ಲದ ಮೇಲಿನ ದೃಷ್ಟಿ ಮಚ್ಚೆ ನಾನು.......

ಕನಸಿನಿಂದಾಚೆ ನಟ್ಟಿರುಳಲ್ಲಿ ಗರಿಬಿಚ್ಚಿ ಹಾರಿದ
ನನ್ನ ಮನಸಿಗೆ....ನಿನ್ನೆದೆಯಲ್ಲೆ ಗೂಡು ಕಟ್ಟುವ ಹಂಬಲ...
ನನ್ನೆದೆಯನ್ನಿರಿದ ನಿನ್ನ ಚೂಪು ನೋಟಗಳೆಲ್ಲ
ಹೃದಯದ ಆಳಕ್ಕಿಳಿದು ನನ್ನ ಕೊಂದರೂ
ನಾನಿನ್ನೂ ಬದುಕಿಯೆ ಇದ್ದೇನೆ!,
ಉಸಿರಿನ ಪ್ರತಿ ಆವರ್ತಕ್ಕೆ
ನಿನ್ನ ನೆನಪಿನ ಅಂತರವಿದೆ....
ಪ್ರತಿ ಕ್ಷಣವೂ ಬಾಳಲೇ ಬೇಕೆಂಬ ಭರವಸೆಗೆ
ಅಷ್ಟು ಸಾಕು/
ಕರಿಮೋಡ ನೆನ್ನೆಯಂತೆ ಇಂದೂ
ಸಂತಸದ ಹನಿಗಳಾಗಿ ಧರೆ ಮುಟ್ಟಲಿದೆ....
ಮತ್ತೆ ಭರವಸೆಯ ಹಸಿರ ಹೊಸ ಗರಿಕೆ
ಸಂಭ್ರಮದಿಂದ ಹುಟ್ಟಲಿದೆ,
ಅಪರೂಪಕ್ಕೆ ಬಂದ ಮಳೆಗೆ ರಂಗಾದದ್ದು
ಇಳೆಯಷ್ಟೇ ಅಲ್ಲ
ನಾನು.... ಜೊತೆಗೆ ನನ್ನೊಳಗೆ ಬೆಚ್ಚಗಿದ್ದ ನಿನ್ನ ನೆನಪುಗಳೂ ಕೂಡ//



ಇರುಳಿಡೀ ನಿನ್ನ ನೆನೆಯುತ್ತಿದ್ದೆ
ಹಗಲಲ್ಲೂ ನಿನ್ನ ನೆನಪಿನಲ್ಲಿ ಕ್ಷಣ ಮಾತ್ರವೂ ನಾನು ಸುಳಿದಿರಲಾರೆ
ಎನ್ನುವ ಖಚಿತ ಅರಿವಿದ್ದರೂನೂ...
ಎಲ್ಲೆಲ್ಲೋ ಅಲ್ಲ ಇಂದು ನಮ್ಮೂರಲ್ಲೂ ಮಳೆಯಿದೆ
ಆದರೆ ನನ್ನ ಕಣ್ಣಲ್ಲಿರುವ ಹನಿ ಮಾತ್ರ ಕೇವಲ ನನ್ನ ಸ್ವಂತದ್ದು,
ನೆನೆಯುತ್ತಾ ಮಳೆಯಲ್ಲಿ ನಿನ್ನನೆ ಮನಸಲ್ಲೂ ನೆನೆಯುತ್ತಿರುವಾಗ
ಕಾಲ ಇದ್ದಕ್ಕಿದ್ದಂತೆ ನಿಂತರೆ ಅದೆಷ್ಟು ಚೆಂದ!/
ಸದ್ದಿಲ್ಲದೂರಿಗೆ ಓಡಿ ಹೋಗ ಬೇಕೆನ್ನುವ ಅನುಗಾಲದ ಆಸೆ ನನಗೆ
ನಿನ್ನ ಹೆಜ್ಜೆ ಸದ್ದನ್ನುಳಿದು ಇನ್ನೇನನ್ನೂ ಕೇಳದಂತೆ ಕಿವುಡನಾದ ಮೇಲೆ....
ಅದಾಗೆಯೆ ಇದ್ದಲ್ಲಿಯೆ ಈಡೇರಿಹೋಗಿದೆ,
ಕನಸಿಗೂ ನನಸಿಗೂ ಒಂದೇ ಒಂದು ಅಕ್ಷರದ ಅಂತರ
ಅಂದುಕೊಳ್ಳುತ್ತಿದ್ದೆ ಆಗೆಲ್ಲ....
ಅದರ ನಿಜವಾದ ಅರ್ಥ ಆಗುತ್ತಿದೆ ಈಗೀಗ//


ಎಂದೆಂದೂ ಕರಗದ ಕನಸಿನ ಹಿಮಮಣಿಯಲ್ಲಿ
ಉಳಿದು ಹೋದ ನನ್ನ ಪ್ರೀತಿ
ಅನುಗಾಲ ತಾಜಾ ನಳನಳಿಸುತ್ತಿರುತ್ತದೆ...
ಕಣಕಣದಲ್ಲೂ ಸೇರಿ ಹೋದ ಒಲವ ಭಾವ
ಶಾಶ್ವತವಾಗಿ ಇಲ್ಲವಾಗೋಕೆ....
ನಾನೆ ಕಾಣದಂತೆ ಮರೆಯಾಗಿ ಹೋಗಬೇಕಷ್ಟೆ,
ಏಕಾಂತದಲ್ಲಿ ತನ್ಮಯನಾಗಿ ಯೋಚಿಸುತ್ತೇನೆ
ನನ್ನಷ್ಟಕ್ಕೆ ನಾನು ಅಂದುಕೊಂಡು ಮುಗುಳ್ನಗುತ್ತೇನೆ....
.ಒಂದು ವೇಳೆ ಇದು ಘೋಷಿತ ಅಪರಾಧವೇ ಆಗಿದ್ದರೂ
ನಾನು ಮನಸಾರೆ ನಿನ್ನ ಪ್ರೀತಿಸುತ್ತಿದ್ದೆ/
ಗಾಲವನ ಗಲ್ಲದ ಮೇಲಿನ ದೃಷ್ಟಿ ಮಚ್ಚೆ ನಾನು
ಅಗತ್ಯವಿಲ್ಲದಾಗ ನೀನು ಅದನ್ನ ಒರೆಸಿ ಹಾಕಿದ್ದು
ಅದಕ್ಕೇನೆ ಇರಬೇಕೇನೋ....
ಕೇವಲ ಮನಸಲ್ಲಿದ್ದಿದ್ದರೆ ಸಮಸ್ಯೆ ಅಷ್ಟಿರುತ್ತಿರಲಿಲ್ಲ
ಎದೆಯಾಳದ ತನಕ ವ್ಯಾಪಿಸಿರೋದರಿಂದಲೆ.....
ನಿನ್ನ ನೆನಪುಗಳಿಂದ ನನಗೆ ಬಿಡುಗಡೆಯಿಲ್ಲ,
ಗ್ರಹಿಕೆಗೆ ನಿಲುಕದ ಮೃದು ಭಾವ ನೀನು
ನಿನಗೂ ನಾನು ಹಾಗೇನೆ......
ಅಂತ ತಿಳಿದುಕೊಂಡ ಅನುಗಾಲದ ಮೂಢ ನಾನು//

20 April 2012

ತಪ್ಪಿಲ್ಲವಲ್ಲ ಇದರಲ್ಲಿ?

ಖಾಲಿ ಕಂಗಳಲ್ಲಿ ಕಂಬನಿಯ ಕೊನೆ ಹನಿ ಇನ್ನೂ ಇದೆ
ಎದೆಯಾಳದಲ್ಲಿ ನೋವಿನ ಕಡೇ ಹನಿ ಉಳಿದಿರುವ ತನಕ....
ಮನದೊಳಗೆ ನಿರೀಕ್ಷೆ ಜೀವಂತ,
ಕಿರಣ ತಬ್ಬಿದ ನೆಲದ ಬತ್ತಲೆ ಮ
ನಸುಕಿನಲ್ಲೂ ನವಿರಾಗಿ ಬೆವರಿದಾಗ....
ನನ್ನೊಳಗೆ ಹುಟ್ಟಿದ ಹೊಸ ಕನಸೆ ನೀನು/
ನಿನ್ನ ಕನಸುಗಳು ಸೆರೆಯಾದ ನನ್ನ ಕಣ್ಣುಗಳಲ್ಲಿ
ಸಿರಿ ತುಂಬಿ ತುಳುಕಿತು...
ನಿನ್ನೊಲವಿನ ಜಹಗೀರಿನಲ್ಲಿ ನೆಲೆಯಾದ ನನ್ನ ಮನ
ದೋಚಲಾರದಷ್ಟು ದೊಡ್ಡ ಖಜಾನೆಯಾಯಿತು,
ಮುಂಬೆಳಗಿನ ಬೀಸೊ ಗಾಳಿ ಇಷ್ಟು ತಂಪೆನಿಸೋಕೆ...
.ಅದರಲ್ಲಿ ತೇಲಿ ಬರುತ್ತಿರೊ ನಿನ್ನ ನೆನಪೂ ಕಾರಣ//



ಹಿಮದ ಹಲಗೆಯ ಮೇಲೆ ನಿನ್ನ ಹೆಸರನ್ನ ಪ್ರಾರ್ಥನೆ ಅಂತ ಬರೆದೆ
ಕಲ್ಲಿನ ಎದೆಯ ಮೇಲೆ ನಿನ್ನ ಉಸಿರನ್ನ ವರ ಅಂತ ಕೊರೆದೆ...
ತಪ್ಪಿಲ್ಲವಲ್ಲ ಇದರಲ್ಲಿ?,
ಸಂಜೆ ನೀನೆ
ಮರಳಿ ಬರುವ ಮುಂಜಾನೆಯೂ....
ಮನಸ ಅಂಚಿನಲ್ಲಿ ಹಾಕಿದ ಚಂದದ ಚಿತ್ತಾರವೂ ನೀನೇನೆ/
ಬರುವ ಕ್ಷಣಗಳೆಲ್ಲ ಹೋಗಲೇ ಬೇಕಿದೆ
ಮನದೊಳಗೆ ಅರಳುವ ಕನಸಿನ ಸುಮಗಳೂ.....
ಎಂದಾದರೊಮ್ಮೆ ಮುದುಡಲೇ ಬೇಕಿದೆ,
ನನ್ನೆದೆಯ ಪೊಟರೆಯಲ್ಲಿ ಹಾಡುವ ಕೋಗಿಲೆಯ ಗುಂಜನವನ್ನ
ಹಾಗೆ ಕಾಯ್ದಿರಿಸಿದ್ದೇನೆ....
ಕೇಳುವ ನಿನ್ನ ಕಿವಿಯ ನಿರೀಕ್ಷೆಯಷ್ಟೆ ಇನ್ನಿರೋದು//



ಗೋಳ ಭೂಮಿಯಾಚೆ ನೀನಿದ್ದರೂ
ನಿನ್ನ ನೆನಪಿನ ತಲ್ಲಣದ ಕಂಪನ ನಿತ್ಯ ನನ್ನೆದೆಯಲ್ಲಿ ಏಳಿಸುತ್ತಿದ್ದೀಯ....
ಗಾಬರಿ ಇಲ್ಲ ಭೂಮಿ ಕಂಪಿಸಿದರೆ
ಪಾಪ ಅದಕ್ಕೂ ಅದ್ಯಾರದೋ ಕನಸಿನ ಕನವರಿಕೆ ಆವರಿಸಿದ್ದಿರಬಹುದು,
ನಾನೇನು ಬಯಸಿರಲಿಲ್ಲ
ನೀನೆ ಇಷ್ಟಪಟ್ಟು ಕೂಡಿಸಿದ್ದು ನಮ್ಮಿಬ್ಬರ ಜೀವದ ನಡುವೆ ಬಂಧದ ಕೊಂಡಿ....
ನೀನೇನೆ ಈಗ ಎಲ್ಲಾ ಅಲಿಖಿತ ಒಪ್ಪಂದಗಳನ್ನ
ಏಕಪಕ್ಷೀಯವಾಗಿ ಮುರಿದು ಹಾದಿ ಬದಲಿಸಿಕೊಂಡೆ ನಿನ್ನ ಬಾಳಿನ ಬಂಡಿ....
ಉಳಿದದ್ದು ನನ್ನ ಪಾಲಿಗೆ ನೆನಪಿನ ನೋವು ಮಾತ್ರ....ಇದನ್ನೂ ನಾನು ಬಯಸಿರಲಿಲ್ಲ!/
ನಾನು ಬಯಸಿದ್ದ ಜೀವದ್ದು ಇಷ್ಟೊಂದು ಕಲ್ಲು ಮನಸ?
ನನ್ನನ್ನದು ಆವರಿಸಿ ಒಂದೊಮ್ಮೆ ಮುದಗೊಳಿಸಿದ್ದು ಕೇವಲ ಕನಸ?
ಪಡುವಣಕ್ಕೂ ರಂಗು ರಂಗಾಗುವ ಹಕ್ಕಿದೆ......
ಅದರ ಒಳ ಮನಸಲ್ಲಿ
ಸಂಜೆಯಲ್ಲಾದರೂ ಸರಿ ರವಿ ತನ್ನನ್ನೂ ಅಪ್ಪುತ್ತಾನೆ ಅನ್ನುವ ಸೊಕ್ಕಿದೆ,
ನಸು ಇರುಳ ಮಬ್ಬು ಬೆಳಕಿನಲ್ಲಿ ನಿನ್ನ ಬಿಂಬ ಕಂಡಂತಾದ ನನ್ನ ಕನಸು......
ಎಂದಾದರೊಮ್ಮೆ ಕನಿಷ್ಠ ಕನಸಲ್ಲಾದರೂ(?) ನನಸಾದೀತ ನೀನೆ ಹೇಳು?//