28 April 2014

ಅಧಿಕಾರದ ಮದೋನ್ಮತ್ತ ಮೂರುಕಾಸಿನ ಮಂತ್ರಿಯೂ ಅವನ ಚಿಲ್ಲರೆ ಜಾತಿ ದರ್ಪದ ಅಣಿಮುತ್ತುಗಳೂ......



ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಇಂತಹ ಅಘಾತಕಾರಿ ಹೇಳಿಕೆ ಕೊಟ್ಟ ಕಾರಣ ಒಂದೇ ಸಾಕು ಆತನನ್ನ ಸಂಪುಟದಿಂದ ವಜಾ ಮಾಡಿ ಶಾಸಕ ಸ್ಥಾನದಿಂದಲೂ ಅನರ್ಹಗೊಳಿಸಲಿಕ್ಕೆ . ಎಲ್ಲಿ ಸಲಹೆ ಶೂರ ರಾಜ್ಯಪಾಲರು? ಮುಖ್ಯಮಂತ್ರಿಗಳ ಜೊತೆ ಕುರಿ ಕಾಯ್ತಿದಾರ?!

ಲಿಂಗಾಯತರ ಪ್ರಾಬಲ್ಯವಿರುವ ಸರಕಾರದ ಕಾಲದಲ್ಲಿ ತನ್ನ ಸೊಂಟಕ್ಕೆ ಲಿಂಗ ಕಟ್ಟಿಕೊಂಡು ವಿಭೂತಿ ಪಟ್ಟೆ ಧರಿಸುವ ವಿಧಾನಸೌಧ ಒಕ್ಕಲಿಗರ ಅಧಿಕಾರವಧಿಯಲ್ಲಿ ಆದಿಚುಂಚನಗಿರಿ ಮಠದ ಮುಖ್ಯ ಶಾಖೆ ಆಗಿರುತ್ತದೆ. ಇದು ವಾಸ್ತವದ ಕರ್ಮ. ಎಲ್ಲರೂ ಜಾತಿ ರಾಜಕೀಯ ಮಾಡುವವರೇ ಆದರೂ, ಹಿಂದೆ ನಾಚಿಕೆ ಬಿಟ್ಟು ಲಂಗು ಲಗಾಮಿಲ್ಲದೆ ಅಣಿಮುತ್ತುಗಳನ್ನ ನಿತ್ಯ "ಸಂಸ್ಕೃತ" ಉದುರಿಸುವ ತಮ್ಮ ಬಾಯಿಯಿಂದ ಹೀಗೆ ಹೊರಗೆಡವುವ ಭಂಡ ಧೈರ್ಯವನ್ನ ಮಾತ್ರ ಯಾರೊಬ್ಬರೂ ಮಾಡಿರಲಿಲ್ಲ.  ಕಾಡುಕೋಣನಂತೆ ಬೆಳೆದಿರುವ ಸೊಕ್ಕಿನ ಈ ಸಚಿವನಿಗೆ ಅಂತಹ ನೈತಿಕ ಕಟ್ಟುಪಾಡುಗಳೊಂದೂ ಇದ್ದಂತಿಲ್ಲ.


ನ್ಯಾಯ ನೀತಿಯನ್ನ ಕಟ್ಟುನಿಟ್ಟಾಗಿ ಅನುಸರಿಸಿದರೆ ಸಂಪುಟ ಹಾಗೂ ಶಾಸಕ ಸ್ಥಾನದಿಂದ ವಜಾ ಅಷ್ಟೇ ಅಲ್ಲ, ಅವೆರಡೂ ಅಗುವ ಮುನ್ನ "ನಿಷ್ಪಕ್ಷಪಾತವಾಗಿ ಸಂವಿಧಾನದ ವಿಧಿಯನುಸಾರ ತನ್ನ ಹುದ್ದೆಯ ಜವಾಬ್ದಾರಿಗಳನ್ನ  ನಿರ್ವಹಿಸುತ್ತೇನೆ. ಯಾವುದೇ ಅಮಿಷ ಅಥವಾ ಹಿತಾಸಕ್ತಿಗಳಿಗೆ ಬಲಿಯಾಗುವುದಿಲ್ಲ" ಎಂದು ಉಚ್ಛರಿಸಿದ್ದ ಪ್ರಮಾಣವಚನವನ್ನ ಮೀರಿದ್ದು ದಿಟ. ಆತನನ್ನ ಇದೇ ಕಾರಣಕ್ಕೆ ಸೆರೆಗೂ ಅಟ್ಟಲಿಕ್ಕೆ ಸಾಧ್ಯವಿದೆ. ಆದರೆ ಈ ಕಣ್ಣಿ ಹರಿದ ಹೋರಿಗೆ ಶಾಸಕನ ಪ್ರಮಾಣ ವಚನ ಭೋದಿಸಿದ ವಿಧಾನಸಭಾ ಅಧ್ಯಕ್ಷರು ಹಾಗೂ ಅಧಿಕಾರ ಗೋಪ್ಯತೆಯ ಪ್ರಮಾಣ ವಚನ ಭೋದಿಸಿದ ರಾಜ್ಯಪಾಲರು ಪ್ರಾಮಾಣಿಕವಾಗಿ ದೊಡ್ಡ ಮನಸ್ಸು ಮಾಡಬೇಕು ಅಷ್ಟೇ