23 August 2015

ಅದ್ಯಾರೋ ಹೇಳಿದ ಕಥೆ....



ಗುಡುಗ ಸದ್ದಿನ ಹಿಂದೆ ಈಗ ಹೊಳೆವ ಮಿಂಚಿಲ್ಲ
ನಿತ್ಯದಂತೆ ಮತ್ತೆ ನೆಲವ ತೊಳೆವ ಮಳೆಯಿಲ್ಲ,
ಮನದ ಭೂಮಿಯಲ್ಲಿ ಬಿತ್ತಿದ ಭಾವಗಳ ಬೀಜವೂ ಸಹ ಮುರುಟಿ
ಎದೆಯ ಹೊಲದಲ್ಲಿ ಇದೀಗ ಹೊಸ ಬೆಳೆಯಿಲ್ಲ/
ಕನಸ ಬೀದಿಯ ಕತ್ತಲ ಕಳೆವ ಬೆಳದಿಂಗಳಿಲ್ಲ
ಹಸಿದ ಮನದ ದಾಹ ಮರೆಸುವ
ತುಸು ಸಾಂತ್ವಾನದ ನುಡಿಗಳ ತಂಗಳಿಲ್ಲ,
ನೆನ್ನೆ ಇಂದಿಲ್ಲ ಇಂದು ನೆನ್ನೆಯೂ ಅಲ್ಲ
ನಾಳೆಯ ನಾ ಬಯಸದಿದ್ದರೂ ಒಳ ಆಸೆ ಕೈಬಿಡದಲ್ಲ!//



ಬರಡು ಬಾಳಿಗೂ ಮರಳಿ ಚಿಗುರೋ
ಕುರುಡು ಆಸೆಯ ಕಂಡೆಯಾ?
ಹಳೆಯ ಕನಸ ಕೈ ಬಿಡದೆ
ಹೊಳೆವ ಹಗಲಲ್ಲಿ ಕಾಲು ಜಾರದೆ,
ಇದ ಕಾಣಲು ನೀನೆಂದಾದರೂ ಬಂದೆಯ?/
ಸುಳಿವ ಮುಸ್ಸಂಜೆ ಮುಂಜಾವುಗಳೆಲ್ಲ
ಬರಿ ಬಿಡಿಬಿಡಿ ಹೂವಾಗಿ,
ನನಸ ಸುಮಮಾಲೆಯ ಮುಡಿಗೆ
ಏರಿಸುವ ಹಂಬಲವೆಲ್ಲ ಬರಿ ತೀರದ ನೋವಾಗಿ.....
ಭಾವದ ಬಾವಿ ಅತಿ ಆಳಕ್ಕೆ ಇಂಗಿ ತುಸುವೂ ಪಸೆಯಿಲ್ಲದೆ ಬತ್ತಿದೆ
ಭವಿಷ್ಯದ ಕನಸಿನ ಕೂಸುಗಳೆಲ್ಲ
ಭ್ರೂಣವಾಗಿ ಮೂಡುವ ಮೊದಲೆ ಬಲವಂತದಿಂದ ಸತ್ತಿದೆ//



ತ್ಯಕ್ತ ಮನದ ಅಸಲು ಚಹರೆ ಅರಿಯದೆ ಹೋದೆ
ಮುಕ್ತ ಕಾಮನೆಗಳ ಮೆರೆದಾಟಕ್ಕೆ ಮರುಳಾಗಿ
ವಾಸ್ತವಕ್ಕೆ ಎದೆ ಕಿಟಕಿ ತೆರೆಯದೆ ಹಾಗೆ ಉಳಿದೆ,
ತುಸು ಕೂಡಲು ಹೋಗಿ ಬಹಳಷ್ಟನ್ನ ಕಳೆದೆ
ಸುಖದ ನಿರೀಕ್ಷೆ ಹೊತ್ತು ಸಂಕಟದ ಕಳೆಯನ್ನ ಮಾತ್ರ ಬೆಳೆದೆ/
ತಪ್ಪೆಲ್ಲ ನನ್ನದೆ, ಆದರೂ ನಿನ್ನ ನಡೆಗಳ ಸಾಚಾತನ ನಿನಗೂ ಸಹ ಅರಿವಿದೆ
ಹೀಗಿದ್ದರೂ ಅಮಾಯಕತೆಯ ಪರದೆ ಹೊತ್ತು ನೀ ಮುನ್ನಡೆದೆ
ನೋವ ಸುಳಿ ಹೆಚ್ಚಿರುವ ಕಂಬನಿಯ ಹಿನ್ನೀರಿಗೆ
ಖುದ್ದು ನಾನೆ ಬಯಸಿ ಇಳಿದ ಮೇಲೆ ಬಾಳಲ್ಲಿ ನಲಿವ ನೆರಳು ಇನ್ನೆಲ್ಲಿದೆ?//