"ಮುನಿಸಿನ ಮೂಲ ಮನಸೆˌ
ಅದು ಬಯಸಿದರೆಲ್ಲ ಸೊಗಸೆ."
ಇತ್ತೀಚೆಗೆ ಸೂಕ್ತ ಮರಮತ್ತು ಕಾಣದೆ ಉಪ್ಪರಿಗೆಯ ಸೂರಿಗೆ ಹೊದಿಸಿದ್ದ ಟಾರು ಕಾಗದವೆಲ್ಲಾ ಬಿರುಗಾಳಿಗೆ ಛಿದ್ರ ಛಿದ್ರವಾಗಿ ಅಗಲವಾಗಿ ತೆರೆದುಕೊಂಡಿದ್ದ ಮೇಲ್ಛಾವಣಿಯ ಹಲಗೆಗಳ ಎಡೆಗಳಿಂದ ಮನೆಯ ಒಳ ಸುರಿದಿದ್ದ ಹಿಮ ಒಂದಷ್ಟು ಗುಪ್ಪೆ ಗುಪ್ಪೆಗಳಾಗಿ ನೆಲದಲ್ಲೆಲ್ಲಾ ಹರಡಿಕೊಂಡಿತ್ತು. ಗುಡಿಸಿ ಅವನ್ನೆಲ್ಲಾ ತೆಗೆಯದಿದ್ದರೆ ವಾತಾವರಣದಲ್ಲಿ ಉಷ್ಣತೆ ಏರಿದಾಗ ಮನೆಯೊಳಗೆಲ್ಲಾ ಅದು ನೀರಾಗಿ ಹರಿದು ಮೇಲುಪ್ಪರಿಗೆಯ ಹಲಗೆಯ ನೆಲವೆಲ್ಲಾ ನೀರು ಹೀರಿ ಕುಂಬಾಗುತ್ತಿದ್ದುದು ಮಾತ್ರವಲ್ಲದೆˌ ಮುಂದೆ ಕರಗಿ ಕೆಳಗಿನ ನೆಲಕ್ಕೆ ಹರಿಯಲಿದ್ದ ಜಲಧಾರೆ ನೆಲ ಅಂತಸ್ತಿನಲ್ಲೆಲ್ಲಾ ರಾಡಿಯೆಬ್ಬಿಸುವ ಸಾಧ್ಯತೆ ಇತ್ತು.
ಸುಲ್ತಾನನನ್ನ ಮೊದಲು ಹಟ್ಟಿಯ ಪಕ್ಕದ ಲಾಯದತ್ತ ಮುನ್ನಡೆಸಿದನವನು. ಇದ್ದುದರಲ್ಲಿ ಹಟ್ಟಿಯ ಪರಿಸ್ಥಿತಿ ಪರವಾಗಿರಲಿಲ್ಲ. ಚಕಮಕಿ ಕಲ್ಲುಗಳಿಂದ ಕಿಡಿ ಹೊಮ್ಮಿಸಿ ಅಲ್ಲಿನ ಒಳಾವರಣ ಬೆಚ್ಚಗಾಗಿಸಲು ಅಗ್ಗಿಷ್ಟಿಕೆಗೆ ಪುರುಳೆ ಕಲ್ಲಿದ್ದಲು ತುಂಬಿ ಬೆಂಕಿಯಬ್ಬಿಸಿದ.
ಮನೆಯ ಉಪ್ಪರಿಗೆ ಗುಡಿಸಿ ಹರಡಿಕೊಂಡಿದ್ದ ಹಿಮ ಗೋರಿ ಹೊರಗೆಸದು ಬಿರುಕು ಬಿಟ್ಟಿದ್ದ ಮಾಡಿನ ಜಂತಿಗೆ ಮತ್ತೆ ಟಾರು ಕಾಗದ ಮೊಳೆ ಹೊಡೆದು ಮತ್ತೆ ಹಿಮಪಾತ ಮನೆಯೊಳಗಾಗದಂತೆ ತಡೆದ. ಹಟ್ಟಿಗೆ ಮರಳಿದವನಿಗೆ ಈಗ ತಕ್ಕಮಟ್ಚಿಗೆ ಲಾಯ ಬೆಚ್ಚಗಾಗಿದೆ ಅನಿಸಿತು. ಸುಲ್ತಾನನ ಬಾಯಿ ಚೀಲ ಬಿಡಿಸಿ ನೋಡಿದರೆ ಹಾಕಿದ್ದ ಆಹಾರದಲ್ಲಿ ಬಹುಪಾಲನ್ನ ಕುದುರೆ ತಿಂದು ಮಗಿಸಿತ್ತು. ಮತ್ತೆ ಮೂಗು ಸೋರುವ ಲಕ್ಷಣ ಗೋಚರಿಸಿತು. ಅದಕ್ಕೆ ಕೂಡಲೆ ಔಷಧಿ ಗೊಟ್ಟಕ್ಕೇರಿಸಿ ಕುಡಿಸದೆ ವಿಧಿಯಿರಲಿಲ್ಲ. ಸುಲ್ತಾನನ ಮೈ ತಿಕ್ಕಿ ಕುತ್ತಿಗೆ ಕೆರೆದು ಅವನ ಮೈ ನೋವಿಗೆ ಚೂರು ಬಿಡುಗಡೆ ತಂದವನೆˌ ಅವನ ಮೈಮೇಲೆ ದಪ್ಪನೆಯದೊಂದು ಛಾದರ ಹೊದಿಸಿ ಗೊಂತಿಗಿಷ್ಟು ರೈ ಹುಲ್ಲು ಹಾಕಿˌ ಕುಡಿಯಲಷ್ಟು ಬಿಸಿ ನೀರನ್ನೂ ಸುರಿದುˌ ಲಾಯದ ಬಾಗಿಲೆಳೆದುಕೊಂಡು ಔಷಧಿ ಕೊಂಡು ತರಲು ನೇರ ಗಾಡಿಖಾನೆಯತ್ತ ಲಗುಬಗೆಯಿಂದ ಹೆಜ್ಜೆ ಹಾಕಿದ.
ಮನೆಯಿಂದ ಗಾಡಿಖಾನೆಯ ದಿಕ್ಕಿನತ್ತ ಹೋಗುವಾಗ ನೂರು ಗಜ ಮುಂದೆ ಬಲಕ್ಕೆ ತಿರುಗಿ ಮುನ್ನೂರು ಗಜ ನಡೆದು ಮತ್ತೆ ಎಡಕ್ಕೆ ತಿರುಗಿ ಒಂದೈವತ್ತು ಗಜ ನಡೆದರೆ ಸಾಕು ಅದೋ ಬಲಕ್ಕಿದೆಯಲ್ಲ ಅದೆ ಆಟಿಕೆ ಮಾರುವ ಬಾಬಯ್ಯನ ಮನೆ. ಗೋಪಿ ಈಗವನ ಮನೆಯಳಿಯˌ ಗಾಡಿಖಾನೆಗೆ ಆ ಹಾದಿ ಚೂರು ಬಳಸಾದರೂˌ ಗೆಳೆಯನನ್ನ ಹೋಗಿ ಕೂಗಿ ಜೊತೆಗೆಳೆದುಕೊಂಡು ಹೋಗಲು ಅವನು ನಿರ್ಧರಿಸಿದ. ಸುಲ್ತಾನನಂತಹ ಬೆಳೆದು ನಿಂತಿರುವ ಬಲಿಷ್ಠ ಕುದುರೆಗೆ ಗೊಟ್ಟ ಎತ್ತಿ ಔಷಧಿ ಕುಡಿಸಲು ಒಬ್ಬರಿಂದ ಅಸಾಧ್ಯವಾಗುತ್ತಿತ್ತು. ಸಹಾಯಕ್ಕೆ ಜೊತೆಗೊಬ್ಬರಿದ್ದರೆ ಅನುಕೂಲವಾಗುತ್ತಿತ್ತು. ಪೇಟೆಯಲ್ಲಿ ಗೋಪಿಗಿಂತ ಅನುಕೂಲಕರ ಜೊತೆಗಾರ ಅವನಿಗೆ ಮತ್ತಿನ್ಯಾರಿದ್ದಾರು ಹೇಳಿ?
ಮನೆಯ ಆವರಣದಲ್ಲಿ ಹೊಸಲಿನಿಂದೊಳಗೆ ಆ ಚಳಿಯಲ್ಲೆ ಕುಕ್ಕುರುಗಾಲಲ್ಲಿ ಕೂತು ಬಾಬಯ್ಯ ಹೊಸತಾಗಿ ಹಿಕರಿ ಬೇರಿನಿಂದ ಕೊರೆದಿದ್ದ ಮೃದು ಆಟಿಕೆಗಳಿಗೆ ಬಣ್ಣ ಹಚ್ಚಿ ಮತ್ತಷ್ಟು ಅಂದ ಹೆಚ್ಚಿಸುವ ಮೊದಲು ಕೊನೆಯ ಸ್ಪರ್ಷ ನೀಡಿ ಗೊಂಬೆಯನ್ನ ನಿಖರವಾಗಿ ತಿದ್ದಿ ತೀಡಲು ಕೂತಿದ್ದ. ಅಷ್ಟು ಬೆಳ್ಳಂಬೆಳಗ್ಯೆ ಇವನ ಆಗಮನವನ್ನ ನಿರೀಕ್ಷಿಸಿರದ ಬಾಬಯ್ಯ ಒಂದರೆಕ್ಷಣ ಬೆಚ್ಚಿ ಬಿದ್ದ. ಗೋಪಿಯನ್ನ ಕರೆಯಬೇಕೆಂದೂˌ ತಾನು ಕೆಲಸದ ಮೇಲೆ ಪೇಟೆಗೆ ಬಂದಿರುವೆನೆಂದೂ ಇವತ್ತೆ ಮರಳಿ ತೋಟದ ಮನೆಗೆ ಹೋಗುವ ದರುದು ಇದೆಯೆಂದೂ ಇವ ಹೇಳುತ್ತಿದ್ದರೆ ಅವೆಲ್ಲವನ್ನೂ ಕೇಳುತ್ತಿದ್ದ ಬಾಬಯ್ಯ ಒಂದು ಸಿಟ್ಟಿನ ಪ್ರತಿಕ್ರಿಯೆ ಕೊಟ್ಟು "ರಾಜಾ ರಾಣಿಯರಿಗೆ ಇನ್ನೂ ಹಗಲಾದಂಗಿಲ್ಲಪ್ಪˌ ತಾವು ದಯಮಾಡಿಸಿ ಭೋಪರಾಕು ಹೇಳಿ ಈ ವಿನಮ್ರ ಸೇವಕ ಒಡೆಯ ಒಡತಿಯರನ್ನ ಅವರ ಅಂತಃಪುರದಿಂದ ಹೊರಗೆ ಮೆಲುವಾಗಿ ಕೂಗಿ ಕರೆದುಕೊಂಡು ಬರುತ್ತೇನೆ!" ಅಂತ ಜಾತ್ರೆಯ ನಾಟಕದವರು ಉದುರಿಸುವ ಸಂಭಾಷಣೆಯ ಧಾಟಿಯಲ್ಲಿ ವ್ಯಂಗ್ಯವಾಗಿ ಹೇಳಿದ್ದ.
ಅಲ್ಲಿಗೆ ಅಳಿಯನ ಬಗ್ಗೆ ಮುದುಕನ ಮೊದಲಿಕೆ ಕೇಳಿ ಹಗಲಾಗಿದ್ದರೂ ಇನ್ನೂ ಗಂಡ ಹೆಂಡಿರು ಶಯನ ಕಕ್ಷೆ ಬಿಟ್ಟಿಳಿದಿಲ್ಲ ಅನ್ನೋದೇನೋ ಖಚಿತವಾಯಿತುˌ ಆದರೆ ಇಷ್ಟೊಂದು ಮೊನಚಾಗಿ ನಾಟಕೀಯ ಸಂಭಾಷಣೆ ಮೂಲಕ ಮೊದಲಿಸಿರುದಕ್ಕೆ ಮಾತ್ರ ಕಾರಣ ಹೊಳೆಯಲಿಲ್ಲ. ಇರಲಿˌ ಎದ್ದ ಕೂಡಲೆ ಗಾಡಿಖಾನೆಯತ್ತ ಕಳಿಸಿ ನಾನಲ್ಲೆ ಅವನನ್ನ ಭೇಟಿಯಾಗುತ್ತೇನೆ ಅಂದವನೆ ಅಲ್ಲಿಂದ ಕಾಲ್ಕಿತ್ತ.
ವಾಸ್ತವವಾಗಿ ಅವರ ಮನೆಯ ಒಳ ಜಗಳಗಳ ಮುನಿಸು ಭರ್ತ್ಸನೆಗಳ ಅನಗತ್ಯ ಕಿರಿಕಿರಿಗಳಲ್ಲಿ ಬೆಳ್ಳಂಬೆಳಗ್ಯೆ ತಾನೂ ಪಾಲುದಾರನಾಗಿ ಬೇಡದ ಗೊಂದಲ ಗೋಜಲಿನಲ್ಲಿ ಸಿಲುಕಿಕೊಳ್ಳುವ ಉಸಾಬರಿ ಅವನಿಗೆ ಬೇಕಿರಲಿಲ್ಲ. ಅದೇನಿದ್ದರೂ ತಾನು ಕೇಳದಿದ್ದರೂ ಸಹ ಸಿಕ್ಕಿದಾಗ ಗೋಪಿ ಹೇಳದೆ ಬಿಡಲಾರ! ಸಹಜವಾಗಿ ಕುಪ್ಪಿಯಿಂದ ಕರಗಿ ಹೊರ ಬರುವ ಎಣ್ಣೆಯನ್ನ ಅನಗತ್ಯವಾಗಿ ಬೆಂಕಿಯ ಶಾಖಕ್ಕೆ ಹಿಡಿದು ಕರಗಿಸುವ ಅಗತ್ಯವಿದೆಯೆ? ಎಂದವನು ತರ್ಕಿಸಿ ಗಾಡಿಖಾನೆಯತ್ತ ತಿರುಗಿದ್ದ. ಅದಲ್ಲದೆ ಈಗಾಗಲೆ ಅಂದುಕೊಂಡ ಸಮಯಾವಧಿಗಿಂತ ಹೆಚ್ಚು ಒಮ್ಮುಖ ಪಯಣದಲ್ಲಿಯೆ ವ್ಯರ್ಥವಾಗಿದ್ದುˌ ಈಗ ಮನೆಯ ಕಿರು ರಿಪೇರಿ ಕೆಲಸ ಮತ್ತೊಂದಷ್ಟು ಅಮೂಲ್ಯ ಸಮಯವನ್ನ ಹಾಳು ಮಾಡಿತ್ತು. ಹೀಗಾಗಿ ಒಣ ಹರಟೆ ಹೊಡೆಯುತ್ತಾ ದೇಶಾವರಿ ಮಾತಾಡಿಕೊಂಡು ಕತ್ತು ಹಿಸುಕಿ ಕೊಲ್ಲುವಷ್ಟು ಸಮಯ ಅವತ್ತು ಅವನಲ್ಲಿಯೂ ಇದ್ದಿರಲಿಲ್ಲ. ಆದರೆ ಬಾಬಯ್ಯ ಮತ್ತು ಗೋಪಿಯ ತಿಕ್ಕಾಟದ ಕಾರಣ ಮೂರನೆ ಮೂಲವೊಂದರಿಂದ ಬಯಸದಿದ್ದರೂ ಅವನ ಕಿವಿಗೆ ಬಂದು ಬಿತ್ತು.
ಗಾಡಿಖಾನೆಯ ಬಾಗಿಲಲ್ಲೆ ಹುಲ್ಲು ಮಾರುವ ಪಾಪಮ್ಮ ಅವನಿಗೆ ಎದುರಾದಳು. ಸಮೀಪದ ತೋಟದ ಮನೆಗಳಿಗೆ ಸುಗ್ಗಿಯ ಕಾಲದಲ್ಲಿ ಅಂಡಲೆದು ರೈˌ ಓಟ್ಸ್ˌ ಜವೆಗೋಧಿಯ ಹುಲ್ಲುˌ ಗೋವಿನಜೋಳದ ಕಡ್ಡಿˌ ಕಬ್ಬಿನ ಸಿಪ್ಪೆ ಹಿಂಡಿ ಹಿಪ್ಪೆಯಾದ ಜಲ್ಲೆ ಎಲ್ಲವನ್ನೂ ಕನಿಷ್ಠ ಕ್ರಯ ಕಟ್ಟಿ ಪಾಪಮ್ಮ ಕೊಂಡುಕೊಂಡು ಒಂಟಿ ಫೋನಿ ಕುದುರೆ ಕಟ್ಟಿದ್ದ ಕಿರು ಬಂಡಿಗೆ ಅದನ್ನೇರಿಸಿಕೊಂಡು ಅವೆಲ್ಲವನ್ನೂ ಸಹ ತನ್ನ ಪೇಟೆಯ ಮನೆಗೆ ಸಾಗಿಸುತ್ತಿದ್ದಳು. ಐದು ಕಾಸು ಹತ್ತು ಕಾಸು ಕೊಟ್ಟು ರೈತರ ಒಕ್ಕಣೆಯ ಕಣದಿಂದ ಕೊಂಡು ತಂದ ಆ ಪಶು ಆಹಾರವನ್ನ ಊರೊಳಗೆ ಅದರ ಎರಡು ಬೆಲೆಗೆ ಮಾರಿ ಚೂರು ದುಡಿಮೆ ಮಾಡಿಕೊಳ್ಳುತ್ತಿದ್ದಳು. ಪೇಟೆಯಲ್ಲಿ ಮನೆಯಿರುವ ಪ್ರತಿಯೊಬ್ಬರೂ ಸಹ ಒಂದೆರಡು ಜಾನುವಾರು ಕಟ್ಟಿ ಸಾಕಿದವರೆ ಆಗಿದ್ದರೂˌ ಅವರಲ್ಲಿ ಹೆಚ್ಚಿನವರು ರೈತಾಪಿಗಳೂ ಆಗಿರಲಿಲ್ಲ - ಅವರ್ಯಾರೂ ಹೊಲಮನೆಯ ಒಡೆಯರೂ ಆಗಿರಲಿಲ್ಲ. ಅಂತವರಿಗೆ ಹೀಗೆ ಒಣಹುಲ್ಲನ್ನ ಹಾಗೂ ತೊಂಡು ಮೇವನ್ನ ಪಾಪಮ್ಮನಿಂದ ಖರೀದಿಸದೆ ವಿಧಿಯಿರಲಿಲ್ಲ. ಆ ಕಾರಣದಿಂದ ಊರಿನ ಪ್ರತಿಮನೆಯೊಳಗೂ ಹುಲ್ಲಿನ ಪಾಪಮ್ಮನ ಹೊಕ್ಕು ಬಳಕೆಯಿತ್ತು. ಹಾಗೆ ಹೋದವಳುˌ ಹುಲ್ಲಿನ ಹೊರೆಯ ಕಟ್ಟು ತೆಗೆದಿಳಿಸಿದವಳೆ ವೀಳ್ಯ ಹಾಕಿಕೊಂಡು ನಾಲ್ಕು ಘಳಿಗೆ ಹಿತ್ತಲಲ್ಲಿ ಕೂತು ಆ ಮನೆಯವರ ಕಷ್ಟಸುಖ ಹಂಚಿಕೊಂಡು ಬರುತ್ತಿದ್ದಳು. ಅವಳಿಗೆ ಕುಡಿಯಲೊಂದು ಲೋಟ ಚಹಾ ಕೊಟ್ಟ ಆ ಮನೆಯವರೂ ಸಹ ತಮ್ಮ ಮನೆಯ ವಿಚಾರ ಅವಳಿಗೆ ಹೇಳಿ ಇನ್ಯಾರದೋ ಮನೆಯ ವಿಚಾರ ಅವಳಿಂದ ಕೇಳಿ ತಿಳಿದುಕೊಳ್ಳುತ್ತಿದ್ದರು!
ಒಟ್ಟಿನಲ್ಲಿ ಜನ ಜಾನುವಾರು ಸಹಿತ ಊರಿನ ಸಕಲ ಜೀವಿಗಳ ಲಾಭ ನಷ್ಟಗಳ ಅಂತರಂಗದ ವಿಚಾರಗಳಲ್ಲಿ ಪಾಪಮ್ಮ ಪಾರಂಗತಳಾಗಿರುತ್ತಿದ್ದಳು. ಅವಳಿಗಿದ್ದ ಏಕೈಕ ದುರಭ್ಯಾಸವೆಂದರೆ ಪಾಪಮ್ಮ ಚೂರು ಬಾಯಿಬುಡುಕಿ. ಈಗಿನ ಉದಾಹರಣೆ ಕೊಟ್ಟು ಹೇಳೋದಾದರೆ ಒಂಥರಾ ಆಲಿಂಡಿಯಾ ರೇಡಿಯೋದ ಆ ಊರಿನ ಕೇಂದ್ರ ಪಾಪಮ್ಮ. ಅಂದರೆ ವಿಷಯವೊಂದನ್ನ ಪಾಪಮ್ಮನ ಕಿವಿಗೆ ಹಾಕುವುದೂ ಸರಿˌ ನೇರ ಕಹಳೆಯ ಮೂತಿಗೆ ಹೋಗಿ ಮುತ್ತಿಡುವುದೂ ಸರಿ! ಪಾಪಮ್ಮನ ಅಂತರಂಗ ಹೊಕ್ಕ ವಿಷಯವೊಂದು ವಾರ ಒಪ್ಪೊತ್ತಿನಲ್ಲಿ ಅವಳ ಪರಿಚಿತರೆಲ್ಲರ ಮುಂದೆ ಬೇಧ ಭಾವವಿಲ್ಲದೆ ಬಹಿರಂಗವಾಗುತ್ತಿತ್ತು.
************
"ಹಗಲು ಕಿರಿದು ಇರುಳು ಹಿರಿದು ಚಳಿಯ ಮೊನಚು ಅಲಗುಗಳು ಇಳೆಯ ಅಂಗಾಂಗ ಕೊರೆದುˌ ಶಿಶಿರ ಮಾಡುವ ನಿರಂತರ ಧಾಳಿ ವಸಂತನ ಕನವರಿಸುವಂತೆ ಮಾಡಿದೆ."
ಹೀಗಾಗಿ ಮುಖದ ಮುಂದೆ ಅವಳನ್ನ ಚೆನ್ನಾಗಿ ಮಾತನಾಡಿಸುತ್ತಿದ್ದವರೆ ಅವಳ ಬೆನ್ನ ಹಿಂದೆ ಅವಳನ್ನು "ಒಡಕು ವಾಲಗ ಪಾಪಮ್ಮ" ಅಂತ ಅಡ್ಡ ಹೆಸರಿಟ್ಟು ಕರೆಯುವುದು ರೂಢಿಯಾಗಿತ್ತು. ಆದರೆ ಅದೆಲ್ಲಾ ಅವಳ ಹಿಂದುಗಡೆಯಿಂದ ಮಾತ್ರ. ಅಪ್ಪಿ ತಪ್ಪಿ ಅವಳ ಮುಂದೆ ಯಾರಾದರೂ ಹೀಗೆ ಅವಳನ್ನ ಕರೆಯುವ ಭಂಡ ಧೈರ್ಯ ಮಾಡಿದರೆ ಸಾಕು ಉರಿದು ಬೀಳುತ್ತಿದ್ದ ಪಾಪಮ್ಮ ಅಂತವರ ಜನ್ಮ ಜಾಲಾಡಿ ಝಾಡಿಸಿ ಬಿಡುತ್ತಿದ್ದಳು. ಹಾಗೊಮ್ಮೆ ಅರಿಯದೆ ಅಂದು ಅವಳ ಬಾಯಿಗೆ ಸಿಕ್ಕಿ ಸಿಗಿದು ತೋರಣ ಕಟ್ಟಿಸಿಕೊಂಡವರು ಮತ್ತೆಂದೂ ಜನ್ಮದಲ್ಲಿ ಕನಸು ನನಸಿನಲ್ಲಿಯೂ ಸಹ ಆ ಬಾಯಿಬಡುಕಿಯ ಮಾತಿನ ಕೊರಂಬುಗಳ ಧಾಳಿಗೆ ಸಿಕ್ಕಿಹಾಕಿಕೊಂಡು ನರಳುವ ಸಾಹಸಕ್ಕಿಳಿಯುತ್ತಿರಲಿಲ್ಲ. ಪಾಪಮ್ಮನ ಹರಿತಗೊಳಿಸಿದಂತಿದ್ದ ಚುರುಕು ನಾಲಗೆಯ ಶಕ್ತಿಯೆಂದರೆ ಅದು.
ಅಂತಾ ಒಡಕು ವಾಲಗದ ಪಾಪಮ್ಮ ತನ್ನ ನಿತ್ಯದ ವ್ಯಾಪಾರವನ್ನ ಬೆಳ್ಳಂಬೆಳಗ್ಯೆಯೆ ಆರಂಭಿಸಲು ಹುಲ್ಲಿನ ಕಟ್ಟುಗಳನ್ನ ಗಾಡಿಖಾನೆಯ ಮುಂದೆ ರಾಶಿ ಹಾಕಿಕೊಂಡು ಸಂಭವನೀಯ ಗಿರಾಕಿಗಳ ನಿರೀಕ್ಷೆಯಲ್ಲಿ ಕಾಯುತ್ತಿದ್ದಳು. ಇವನನ್ನ ಅಪರೂಪಕ್ಕೆ ಕಂಡವಳೆ ಅದೂ ಇದೂ ಮಾತಿಗಾರಂಭಿಸಿ ವೀಳ್ಯದ ಖರ್ಚಿಗೆ ನಾಲ್ಕು ಕಾಸು ಕೇಳಿ ಇಸಿದುಕೊಂಡಳು. ಅವಳ ಒಡನಾಟವಿದ್ದ ಅವನೂ ಸಹ ನಗುನಗುತ್ತಲೆ ತಕರಾರು ಮಾಡದೆ ಕಾಸು ಕೊಟ್ಟ. ಗಾಡಿಗನಿಗೆ ಕುದುರೆಯ ವಿಷಮ ಸ್ಥಿತಿ ಹೇಳಿ ಶೀಘ್ರವಾಗಿ ಶೀತಕ್ಕೆ ಔಷಧಿಯನ್ನ ಅರೆದು ಕೊಡುವಂತೆ ವಿನಂತಿಸಿದ. ಔಷಧಿ ಅರೆದು ಕೊಡಲು ಸಮಯವಿದ್ದ ಕಾರಣ "ಏನ್ ಪಾಪಮ್ಮ ಬಾಬಯ್ಯನ ವಿಚಾರ? ಗೋಪಿ ಅಂದ್ರೆ ಮುದುಕ ನಸುಕಿನಲ್ಲೆ ಕೆಂಡಾಮಂಡಲವಾದನಲ್ಲ?" ಅಂತ ವಿಷಯ ಪ್ರಸ್ತಾವಿಸಿದ. ಆಗಷ್ಟೆ ಸುಣ್ಣ ಸವರಿದ್ದ ಕಡು ಖಾರದ ಅಂಬಾಡಿ ಎಲೆ ಮೆದ್ದು ಚುರು ಚುರುಗುಟ್ಟುತ್ತಿದ್ದ ಪಾಪಮ್ಮನ ನಾಲಗೆಗೆ ಜೀವ ಬಂದು ಅವಳ ಬೊಂಬಾಯಿ ಬಾಯಿಯ ತೂಬು ಕೊಚ್ಚಿಕೊಂಡು ಹೋಗಿ ಮಾತಿನ ದಭದಭೆ ಉಕ್ಕಿ ಹರಿಯಲು ಅಷ್ಟು ಪ್ರಚೋದನೆ ಸಾಕಾಯಿತು.
ಪಾಪಮ್ಮನ ಪ್ರಕಾರ ಅದೇನೂ ಬಹಳ ಗಹನ ವಿಚಾರವಾಗಿರಲಿಲ್ಲ. ಆದರೆ ಇತ್ತೀಚೆಗೆ ಗೋಪಿಯ ಪೋಲಿತನ ಹೆಚ್ಚುತ್ತಿದ್ದುದೆ ಬಾಬಯ್ಯ ಉರಿದೇಳಲು ಕಾರಣವಾಗಿತ್ತು. ಹಾಗಂತ ಗೋಪಿಯೇನು ಊರು ಮೇಯುವ ಚಾಳಿಗಿಳಿದಿರಲಿಲ್ಲ. ತುಂಬಿ ತುಳುಕಲಾರಂಭಿಸಿದ್ದ ಅವನ ರಸಿಕತೆಗೆ ಬಲಿಯಾದ ರತಿ ಸ್ವತಃ ಅವನ ಹೆಂಡತಿಯೆ! ತನ್ನೊಂದಿಗೆ ಒಂದೆ ಮುಹೂರ್ತದಲ್ಲಿ ಸಂಸಾರವಂದಿಗನಾಗಿದ್ದ ಗೋಪಿಗೆ ತನ್ನ ರಾಜನಿಗಿಂತ ಮೂರು ತಿಂಗಳಷ್ಟೆ ಕಿರಿಯ ಹೆಣ್ಣುಮಗುವಿತ್ತು. ಅದಾಗಿ ಹೆಚ್ಚು ಕಡಿಮೆ ವರ್ಷದ ಮೇಲೆ ತಿಂಗಳೆರಡು ಕಳೆಯುತ್ತಾ ಬಂದಿವೆ. ಆದರೆ ಆತನಕ ಚುರುಕಾಗಿ ಬಾಬಯ್ಯನ ಗೊಂಬೆ ತಯಾರಿಕೆಯ ಉದ್ಯಮದಲ್ಲಿ ವಿಧೇಯ ವಿದ್ಯಾರ್ಥಿಯಂತೆ ಕೆಲಸ ಕಲಿತ ಗೋಪಿ ಹೊರಗೆ ಹಮಾಲನಾಗಿಯೂ ಮನೆಯೊಳಗೆ ಬಾಬಯ್ಯನ ಸಹಾಯಕನಾಗಿಯೂ ಸಂಸಾರದ ಭಾರ ವಹಿಸಿಕೊಂಡು ಮುನ್ನಡೆಯುತ್ತಿದ್ದವˌ ಕೆಲಸ ಕಡಿಮೆಯಿರುವ ಈ ಚಳಿಗಾಲದಲ್ಲಿ ಮಾತ್ರ ಸಂಸಾರವನ್ನ ಹೆಚ್ಚಿಸುವ ಘನಕಾರ್ಯದಲ್ಲಿ ಸಂಪೂರ್ಣ ತೊಡಗಿಕೊಂಡು ಬಿಟ್ಟಿದ್ದ. ಹಗಲಾಗಿ ಬೆಳಕು ಕಣ್ಣು ಕುಕ್ಕುವಷ್ಟು ನಿಚ್ಚಳವಾದರೂ ಉಪ್ಪರಿಗೆಯ ಶಯನದ ಕೋಣೆಯಿಂದ ಗಂಡ ಹೆಂಡಿರು ಇಳಿದು ಬರುತ್ತಿರಲಿಲ್ಲ! ಹೇಗೂ ಈಗ ಕೆಲಸವಿಲ್ಲವಿಲ್ಲ ಪ್ರಣಯ ಕೇಳಿಯನ್ನಾದರೂ ನಡೆಸೋಣ ಅನ್ನೋದು ಅವನ ಧೋರಣೆ. ಹೀಗಾಗಿ ಇತ್ತೀಚೆಗೆ ನಸುಕಿನಲ್ಲಿಯೂ ಅವನ ಪ್ರೇಮ ಕಲಾಪ ತಾರಕಕ್ಕೇರುವುದೂ ಇತ್ತು. ಆದರೆ ಮುಂಜಾನೆ ಚಳಿಗೆ ಸಶಬ್ಧವಾಗಿ ಮಲಗುವ ಮನೆಯಿಂದ ಹೊರಡುತ್ತಿದ್ದ ಮಗಳು ಅಳಿಯನ ಪ್ರಣಯ ಗೋಷ್ಠಿ ಹೆಂಡತಿಯಿಲ್ಲದೆ ಒತ್ತಾಯದ ಬ್ರಹ್ಮಚಾರಿಯಾಗಿದ್ದ ಬಾಬಯ್ಯನಿಗೆ ಕಿರಿಕಿರಿ ಹುಟ್ಟಿಸುತ್ತಿತ್ತು. ಎಲ್ಲರೂ ಹಗಲು ಮೂಡುವ ಮೊದಲೆ ಎದ್ದು ಕೆಲಸಗಳತ್ತ ಹೊರಳಿದರೆ ಗೋಪಿ ಹಗಲಾಗುತ್ತಿದ್ದುದೆ ತಡ ಹೆಂಡತಿಯತ್ತ ಹೊರಳಿ ಅವಳನ್ನ ತನ್ನ ಪಕ್ಕಕ್ಕೆಳೆದುಕೊಳ್ಳುತ್ತಿದ್ದ. ವಿಷಯ ಇಷ್ಟೆ.
ಆದರೆ ಸ್ವಲ್ಪ ಹೊತ್ತಿನ ಮುಂಚಿನ ಬಾಬಯ್ಯನ ನಾಟಕೀಯ ಪ್ರತಿಕ್ರಿಯೆ ನೆನಪಾಗಿˌ ಅದಕ್ಕೆ ಸರಿಯಾಗಿ ಅಭಿನಯ ಶಾರದೆಯಂತೆ ಇದರ ಹಿಂದಿನ ಕಾರಣವನ್ನು ಪಾಪಮ್ಮ ಬಣ್ಣಿಸಿದ ಪರಿ ಕೇಳಿ ಹೊಟ್ಟೆ ಹುಣ್ಣಾಗುವಂತೆ ಅವನು ಜೋರಾಗಿ ನಕ್ಕ. ಅಲ್ಲಾ ಆ ಊರಿಗೆ ಬಂದು ಸೇರಿ ಆಗಲೆ ವರ್ಷ ನಾಲ್ಕಾಗಿದ್ದರೂˌ ಬಾಬಯ್ಯನ ಮನೆಯಳಿಯನಾಗಿ ವರ್ಷವೆರಡು ಮೀರಿದ್ದರೂ ಇನ್ನೂ ನೆಟ್ಟಗೆ ನಾಲ್ಕು ಸಾಲು ಸ್ಥಳಿಯ ಭಾಷೆ ಕಲಿತಿರದ ಸೋಮಾರಿ ಗೋಪಿ ಹಾಗೂ ಗೋಪಿಯ ಭಾಷೆಯ ಓನಾಮ ಅರಿತಿರದ ಅವನ ಮಡದಿ ಅದಿನ್ಯಾವ ಭಾಷೆಯಲ್ಲಿ ಪರಸ್ಪರ ತಮ್ಮ ಪ್ರಣಯ ವ್ಯವಹಾರ ನಡೆಸುತ್ತಾರೋ! ಒಬ್ಬರ ಭಾಷೆ ಇನ್ನೊಬ್ಬರಿಗೆ ಅರ್ಥವಾಗದ ಹೊತ್ತಿಗೆ ಹೀಗೆˌ ಇನ್ನು ಇಬ್ಬರಿಗೂ ಇಬ್ಬರ ನುಡಿಗಳೂ ಅರ್ಥವಾಗುವಂತಿದ್ದರೆ ಇವರಿಬ್ಬರನ್ನೂ ಹಿಡಿದು ನಿಲ್ಲಿಸಲಿಕ್ಕಾಗುತ್ತಿರಲಿಲ್ಲವಲ್ಲ! ಅನ್ನುವ ಪೋಲಿ ಆಲೋಚನೆ ಮನಸೊಳಗೆ ಸುಳಿದೊಡನೆ ಮತ್ತಷ್ಟು ಜೋರಾಗಿ ನಕ್ಕ. ಜೊತೆಗೆ ಜುಲಮೆಗೆ ಅವಳೂ ಚೂರು ಹಲ್ಲು ಕಿರಿದಳಾದರೂˌ ಅಲ್ಲಾ ತಾನು ಹೇಳಿದ ಈ ಗಂಡ ಹೆಂಡಿರ ಪೋಲಿ ಕಥೆಯಲ್ಲಿ ಅಷ್ಟೊಂದು ಜೋರಾಗಿ ಗಹಗಹಿಸಿ ನಗುವಷ್ಟು ತಮಾಷೆಯಾದರೂ ಏನಿತ್ತು? ಅನ್ನೋದೆ ಅರ್ಥವಾಗದೆ ಪಾಪಮ್ಮ ಕಕ್ಕಾಬಿಕ್ಕಿಯಾಗಿ ನಿಂತಿದ್ದಳು. ಅದು ಅರ್ಥವಾಗುವ ವಯಸ್ಸನ್ನ ಪಾಪಮ್ಮ ಅದಾಗಲೆ ದಾಟಿಯಾಗಿತ್ತು. ಒಂದು ವೇಳೆ ಅವನ ತುಂಟ ನಗುವಿಗೆ ಕಾರಣ ಅರಿವಾಗುವಂತಿದ್ದರೂ ಸಹˌ ಅವನ ಮನೋವ್ಯಾಪಾರವನ್ನ ಅರಿತು ಅದರ ಆಲೋಚನೆಗಳನ್ನ ಓದುವ ಅತಿಮಾನುಷ ಶಕ್ತಿ ಅವಳಿಗಿರಲಿಲ್ಲವಲ್ಲ!
ಹಸಿರು ಮದ್ದನ್ನ ಗಾಡಿಗನೂ ಆಗಿರುವ ಅವನ ಹೆಂಡತಿಯ ಮಾವ ಅರೆದು ಕುಪ್ಪಿಗೆ ಸುರಿದು ಕೊಟ್ಟರೂ ಈ ರಸಿಕ ಚಕ್ರವರ್ತಿ ಗೋಪಿಯ ಪತ್ತೆಯಿಲ್ಲ! ಸರಿ ಈಗ ತಾನೆ ಪುನಃ ಅವನ ಮನೆಯಾಗಿ ಹೋಗಿ ಇನ್ನೂ ಎದ್ದೇಳದೆ ಶೇಲೆ ಮಾಡುತ್ತಿದ್ದರೆ ಆ ರಸಿಕ ಚಕ್ರವರ್ತಿಯನ್ನ ಒದ್ದು ಎಬ್ಬಿಸಿ ಬರಿ ಮೈಯಲ್ಲಾದ್ರೂ ಸರಿ ಕುತ್ತಿಗೆ ಹಿಡಿದು ಎಳೆದುಕೊಂಡು ಹೋಗೋದೆ ಅಂತ ನಿರ್ಧರಿಸದವನೆ ದಾಪುಗಾಲು ಹಾಕುತ್ತಾ ಬಾಬಯ್ಯನ ಮನೆ ಕಡೆಗೆ ಅವನು ಹೆಜ್ಜೆ ಹಾಕಿದ. ಗಾಡಿಗನಿಗೆ ಔಷಧಿಯ ಕಾಸು ಕೊಟ್ಟು ಹೊರಟವನಿಗೆ ತನ್ನ ಹುಲ್ಲಿನ ದಾಸ್ತಾನು ಖಾಲಿಯಾಗುತ್ತಾ ಬಂದಿದೆಯೆಂದೂ ಸೋಮ ಸರೋವರದ ಮಂಜಿನ ತೆರೆ ಮತ್ತೆ ನೀರಾಗಿ ಹರಿಯುವ ಪಕ್ಷದ ಒಳಗೆ ತಾನು ಅವನನ್ನ ಹುಡುಕಿಕೊಂಡು ತೋಟದ ಮನೆಗೆ ಬರುವುದಾಗಿಯೂˌ ಒಂದೆರಡು ಮೆದೆ ರೈ ಹುಲ್ಲುˌ ಕಬ್ಬಿನ ಜಲ್ಲೆಯ ಜೊಂಡುˌ ಕಾಕಂಬಿ ಹಾಗೂ ಒಂದಷ್ಟು ಪೌಂಡು ಗೋವಿನ ಜೋಳವನ್ನ ತನಗೆ ಮಾರಿ ಉಪಕರಿಸಬೇಕೆಂದು ಪಾಪಮ್ಮ ಬೆನ್ನ ಹಿಂದಿದ್ದ ಕೂಗಿ ಹೇಳಿ ಮುನ್ಸೂಚನೆ ಕೊಟ್ಟಳು. ಇವನೂ ಆಗಬಹುದು ಎಂದು ಕೂಗಿ ಒಪ್ಪಿಗೆ ಸೂಚಿಸುತ್ತಲೆ ಮುನ್ನಡೆದ.
ಒಡಕು ಬಾಯಿಯ ಆರೋಪ ಅದೇನೆ ಇದ್ದರೂ ಪಾಪಮ್ಮನ ಮನಸು ಮಾತ್ರ ಸ್ವಚ್ಛ. ಅದೆಷ್ಟೆ ಊರಿಂದೂರಿಗೆ ಸುದ್ದಿ ಹರಡಿದರೂ ಸಹ ಆ ಮುದುಕಿ ಎಂದೂ ಪರಸ್ಪರರ ವಿರುದ್ಧ ಇಲ್ಲಸಲ್ಲದ ಚಾಡಿ ಮಾತು ಹೇಳಿ ಜಗಳ ಹಚ್ಚಿ ಹಾಕಿ ಯಾರದ್ದೂ ಮನೆ ಮನ ಒಡೆದವಳಲ್ಲ. ಈಗ ಇವನಿಗೆ ಗೋಪಿಯ ಕಚ್ಚೆ ಸಡಿಲವಾಗಿರುವ ಸುದ್ದಿ ಮುಟ್ಟಿಸಿದವಳು ಇವನಿಂದ ಇವನ ಹೆಂಡತಿಯ ಎರಡನೆ ಬಸಿರಿನ ವಿಚಾರವನ್ನ ಮೆಲ್ಲನೆ ಬಾಯಿ ಬಿಡಿಸಿಯಾಗಿದೆ. ಖಂಡಿತವಾಗಿ ಅದನ್ನ ಊರಲ್ಲಿ ಕೇಳದವರಿಗೂ ಕರೆದು ಹೇಳದಿರಲಾರಳು. ಸ್ವತಃ ಅವಳ ಮಾವನಿಗೂ ಗೊತ್ತಿಲ್ಲದ ಆ ವಿಷಯ ಅವನ ಕಿವಿಗೂ ಪಾಪಮ್ಮನ ಬಾಯಿಯೆ ಸುರಿದರೂ ಅದರಲ್ಲಿ ಆಶ್ಚರ್ಯ ಪಡುವಂತದ್ದು ಏನೂ ಇರಲಿಲ್ಲ.
ಚಳಿಯ ಮಂದರಿ ಮೆಲ್ಲ ಮೆಲ್ಲನೆ ಸರಿಸಿ ಪಟ್ಟಣ ಪುಟ್ಟದಾಗಿ ಮೈ ಮುರಿದು ಹೊಸತೊಂದು ಹಗಲಿಗೆ ಹೊಂದಿಕೊಳ್ಳತೊಡಗಿತ್ತು. ಸಶಬ್ಧವಾಗಿ ಮಾನವರ ಪ್ರಾಣಿ ಪಕ್ಷಿಗಳ ಕಲರವಗಳೊಂದಿಗೆ ಆಗಷ್ಟೆ ಮೈಮುರಿದೇಳುತ್ತಿತ್ತು ಊರು.
***********
ಬೆಳ್ಳನೆ ಬೆಳಕು ಬಿಟ್ಟುಬಿಟ್ಟು ಸುರಿಯುತ್ತಿದ್ದ ಹಿಮದ ಮಳೆಯ ನಡುವೆಯೂ ನಿಧಾನವಾಗಿ ಕತ್ತಲನ್ನ ಕತ್ತು ಹಿಡಿದು ಊರಿಂದ ಹೊರಗಟ್ಟಿ ತನ್ನ ಸಾಮ್ರಾಜ್ಯವನ್ನ ಯಶಸ್ವಿಯಾಗಿ ಸ್ಥಾಪಿಸಿಯಾಗಿತ್ತು. ಅಲ್ಲಲ್ಲಿ ಮನೆಗಳ ಗಂಡಸರು ಹೊರಡುತ್ತಿದ್ದರು.
ಬಾಬಯ್ಯನ ಮನೆ ಹತ್ತಿರವಾಗುತ್ತಿದ್ದಂತೆ ಪರಸ್ಪರ ಇಬ್ಬರಿಗೂ ಅರ್ಥವಾಗದ ಭಾಷೆಗಳಲ್ಲಿ ಅಳಿಯ ಮಾವ ಬೈದಾಡಿಕೊಳ್ಳುತ್ತಾ ಇರೋದು ಕಿವಿಗಪ್ಪಳಿಸಿತು. ಬಾಬಯ್ಯನ ಅಸಹನೆ ಅವನ ಮಾತುಗಳಲ್ಲಡಗಿದ್ದರೆ ಹುಡುಗು ಮುಂಡೆಗಂಡ ಗೋಪಿ ನೇರವಾಗಿ ಪೋಲಿ ಬೈಗುಳಗಳನ್ನೆ ಉಪಯೋಗಿಸಿ ಮಾವನ ಆಕ್ರಮಣವನ್ನ ಎದುರಿಸುತ್ತಿದ್ದ. ಸದ್ಯ ಊರಿನ ಯಾರಿಗೂ ಅವನ ಭಾಷೆಯಾಗಲಿˌ ಅದನ್ನವನು ಆಡುವ ಧಾಟಿಯಾಗಲಿ ಅರ್ಥವಾಗದಿದ್ದುದರಿಂದ ಬಚಾವು. ಇಲ್ಲದಿದ್ದರೆ ಬೆಳ್ಳಂಬೆಳಗ್ಯೆ ಊರಿನ ಕೆಲವರಿಗಾದರೂ ಅವನ ಅಶ್ಲೀಲ ಬೈಗುಳಗಳು ಪುಗಸಟ್ಟೆ ಮನರಂಜನೆ ಕೊಡುತ್ತಿದ್ದುದರಲ್ಲಿ ಸಂಶಯವಿಲ್ಲ. ದೂರದಿಂದ ಇವನ ಆಗಮನವನ್ನ ಕಂಡವನೆ ಗೋಪಿ ಬೇಲಿ ಬದಿವರೆಗೂ ಬಂದು ಇವನನ್ನ ಎದುರುಗೊಂಡ. ಈಗಷ್ಟೆ ಮಂಚ ಬಿಟ್ಟಿಳಿದ ಸೋಮಾರಿ ಕಳೆ ಢಾಳವಾಗಿ ಅವನ ಮುಖದಲ್ಲಿ ಕಾಣಿಸಿತು. ಕಣ್ಣಿನ ಪಿಸುರು ಹೌದು ಅದು ನಿಜ ಅನ್ನುವ ಸಾಕ್ಷಿ ಹೇಳಿತು. ಇವನ ಮುಖ ದರ್ಶನವಾದದ್ದೆ ಗೋಪಿ ಆನಂದದಿಂದ ಕಿವಿಯಿಂದ ಕಿವಿಯವರೆಗೆ ಹಲ್ಲು ಕಿರಿಯುತ್ತಾ ಇವನನ್ನ ಎದುರುಗೊಂಡ. ಏನೋ ಭಂಡಬಡ್ಡಿ ಮಗನೆ ಬೆಳ್ಳಂಬೆಳಗ್ಯೆ ಅದೇನೋ ನಿನ್ನ ಪ್ರಣಯ ಲೀಲೆ ಅಂತ ಬೈದವನಿಗೆ ತಾನು ಮುಖ ಪ್ರಕ್ಷಾಳನ ಮಾಡಿ ಸಂಗಡ ಬರುವುದಾಗಿಯೂˌ ಇವನು ಹೆಂಡತಿ ಮಾಡಿಕೊಡುವ ಚಹಾ ಸವಿಯಬೇಕಂತಲೂ ಹೇಳುತ್ತಾ ಬೇವಿನ ಕಡ್ಡಿಯನ್ನ ಕಚ್ಚುತ್ತಾ ಹಲ್ಲು ತಿಕ್ಕಿಕೊಳ್ಳ ತೊಡಗಿದ ಗೋಪಿ ಹಿಂದಿನ ಬಚ್ಚಲ ಕಡೆಗೆ ಪರಾರಿಯಾದ.
ಮನೆಯ ಹಜಾರದಲ್ಲಿ ಚೂರು ಕತ್ತಲಿತ್ತು ಹೊರಗಿನಿಂದ ಬಂದ ಅವನಿಗೆ ಆ ಮಂದ ಬೆಳಕಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಬಾಬಯ್ಯನ ಜೊತೆ ಅದೂ ಇದೂ ಕಷ್ಟ ಸುಖ ಮಾತನಾಡುತ್ತಿದ್ದಂತೆ ಗೋಪಿಯ ಹೆಂಡತಿ ತಂದುಕೊಟ್ಟ ಹಾಲು ಸಕ್ಕರೆ ಸುರಿದ ಹಬೆಯಾಡುವ ಚಹಾ ಹಾಗೂ ಇವನೆ ತಂದುಕೊಟ್ಟಿದ್ದ ಜೇನು ಜೊತೆಗೆ ಮನೆಯ ಎಮ್ಮೆಯ ಬೆಣ್ಣೆ ಸವರಿದ್ದ ಅಂಗಡಿಯ ಗಟ್ಟಿರೊಟ್ಟಿಯ ತುಂಡು ಆ ಕಾಡುವ ಚಳಿಗೆ ಹಿತಾನುಭವ ಹುಟ್ಟಿಸಿತು. ತನ್ನ ಗಂಡನ ಹಾಗೂ ಅಪ್ಪನ ಮಧ್ಯೆ ಮುಂಜಾನೆಯೆ ಆರಂಭವಾಗಿರೋ ಕೋಳಿ ಜಗಳˌ ಅದಕ್ಕೆ ಮೂಲ ಕಾರಣ ನಮ್ಮ ಪ್ರೇಮ ಕಲಾಪದ ಅತಿರೇಕವೆ ಅನ್ನೋದೇನಾದರೂ ಒಂದು ವೇಳೆ ಅವನ ಅರಿವಿಗೆ ಬಂದಿದ್ದರೆ! ಅನ್ನುವ ಅನುಮಾನ ಮನದೊಳಗೆ ಹೊತ್ತಿದ್ದ ಆ ಹುಡುಗಿ ಎಂದಿನಂತೆ ಹೆಚ್ಚು ಹರಟೆ ಹೊಡೆಯದೆ ನಾಚಿಕೆಯಿಂದ ನೀರಾದವಳಂತೆ ಬಂದಷ್ಟೆ ಬೇಗ ಅಲ್ಲಿಂದ ಓಡಿ ಹೋಗಿ ಬದುಕಿದೆಯ ಬಡ ಜೀವ ಅಂದು ಕೊಂಡಳು. ಎಷ್ಟಾದರೂ ಹೆಂಗಸರಿಗೆ ಚೂರು ನಾಚಿಕೆ ಜಾಸ್ತಿ ನಿರ್ಲಜ್ಜ ಗಂಡಸರ ಭಂಡತನ ಅವರಿಗಿರಲು ಹೇಗೆ ಸಾಧ್ಯ ಹೇಳಿ?
ಬಾಬಯ್ಯನ ಜೊತೆಗಿನ ಸಂಭಾಷಣೆಯುದ್ದ ಅವನು ಈ ಪೋಲಿಪುಟ್ಟ ಅಳಿಮಯ್ಯನ ನಡುವಳಿಕೆಯಿಂದ ಅನುಭವಿಸುತ್ತಿರುವ ಕಿರಿಕಿರಿಯ ಕುರಿತ ಕಷ್ಟದ ಪಟ್ಟಿಯೆ ಉದ್ದವಾಗಿತ್ತೆ ಹೊರತುˌ ಅದರಲ್ಲೆಲ್ಲೂ ಸುಖದ ಅಂಶಗಳು ಅಷ್ಟಾಗಿ ಇದ್ದಿರಲಿಲ್ಲ. ಗೆಳೆಯನಾದ ನೀನಾದರೂ ಚೂರು ಈ ಹುಡುಗು ಬುದ್ಧಿಯವಕ್ಕೆ ಕಿವಿ ಹಿಂಡಿಯಾದರೂ ಬುದ್ಧಿ ಹೇಳಪ್ಪˌ ದುಡಿಯವ ಕಾಲದಲ್ಲಿ ಹೀಗೆ ಸುಖಲೋಲುಪತೆಯಲ್ಲಿ ಜಡ ಬಿದ್ದು ಹೋದರೆ ಮನೆ ಉಳಿದೀತ ಅಂತ ಮುದುಕ ಮಾತು ಮುಗಿಸುವ ಹೊತ್ತಿಗೆ ಸರಿಯಾಗಿ ಚಳಿಯಿಂದ ರಕ್ಷಣೆಗೆ ತಕ್ಕ ಧಿರಿಸು ಧರಿಸಿದ ಗೋಪಿ ತಾನೂ ಒಂದು ಚಹಾದ ಬಟ್ಟಲು ಹಿಡಿದು ಅಲ್ಲಿ ಹಾಜರಾದ. ಇವರ ಭಾಷೆ ಬಾರದ ಕಾರಣ ಅವರ ಸಂಭಾಷಣೆಯ ಸಾರ ಅವನಿಗರ್ಥವಾಗುವುದು ಅಷ್ಟರಲ್ಲೆ ಇತ್ತು. ಆದರೂ ಇವರಿಬ್ಬರೂ ವಿಷಯ ಬದಲಿಸಿ ವಾತಾವರಣದ ವೇಪರಿತ್ಯ ಹಾಗೂ ಕೊರೆವ ಚಳಿಯ ಈ ಹಿಮಮಳೆಯ ಅಸಾಧ್ಯ ಹಾವಳಿಗಳ ಬಗ್ಗೆ ಹೊರಳಿಕೊಂಡರು.
ತಾನು ಈ ಊರಿಗೆ ಬಂದು ಬರುವ ಮಠದ ಜಾತ್ರೆಗೆ ಸರಿಯಾಗಿ ಇಪ್ಪತ್ತು ವರ್ಷ ತುಂಬುತ್ತದೆಯಂತಲೂˌ ಅದಾಗಲೆ ಸಂಸಾರಸ್ಥನಾಗಿದ್ದ ತಾನು ಮಡದಿ ಹಾಗೂ ಮೂರು ವರ್ಷದ ಗಂಡು ಮಗುವಿನೊಂದಿಗೆ ಮತ್ತಷ್ಟು ನೆಮ್ಮದಿಯ ನೆಲೆಯನ್ನರಸಿ ಈ ಕಾಣದೂರಿಗೆ ಬಂದ ಹೊಸತರಲ್ಲಿ ಇಲ್ಲಿ ಕಂಡ ಭಾರಿ ಹಿಮಪಾತದ ಚಳಿಗಾಲ ಇದು ಎರಡನೆಯದಂತಲೂˌ ಇಲ್ಲಿ ಬಂದ ಮರು ವರ್ಷವೆ ಜನಿಸಿದ ತನ್ನ ಮಗಳು ಹುಟ್ಟಿ ಕೇವಲ ನಾಲ್ಕು ವರ್ಷದ ಕೂಸಾಗಿರುವಾಗ ಇಂತಹದ್ದೆ ಒಂದು ಭಯಂಕರ ಚಳಿಗಾಲವನ್ನ ಆಗಿನ್ನೂ ನವವಲಸಿಗರ ಆರಂಭದ ತಂಡ ಮಾತ್ರ ಆಗಮಿಸಿ ಕಟ್ಟಿಕೊಂಡಿದ್ದ ಈ ಹೊಸ ಪಟ್ಟಣದಲ್ಲಿ ಕಂಡು ಅನುಭವಿಸಿ ಬೆಚ್ಚಿ ಬೆದರಿ ಹೈರಾಣಾಗಿ ಹೋಗಿದ್ದ ಕಥೆಯನ್ನ ಬಾಬಯ್ಯ ವಿವರಿಸಿದ. ತನ್ನ ಹೆಂಡತಿಗೆ ಈ ಪರಿಸರದ ಹವೆ ಆಗಿ ಬರಲಿಲ್ಲವೆಂದೂˌ ಆ ಭಯಂಕರ ಚಳಿಗಾಲದ ನಂತರ ಅವಳ ಉಬ್ಬಸದ ಕಾಯಿಲೆ ಅವಳನ್ನ ವರ್ಷ ವರ್ಷಕ್ಕೂ ಹಿಂಡಿ ಹಿಪ್ಪೆ ಮಾಡಿ ಮುಂದಿನ ಮೂರು ವರ್ಷಗಳೊಳಗೇನೆ ಅವಳ ಇಹಲೋಕದ ವ್ಯಾಪಾರ ಮುಗಿದು ಪ್ರಭುವಿನ ಪಾದವನ್ನವಳು ಸೇರಿಕೊಂಡಳೆಂದೂ ಅದೆಲ್ಲಾ ನೆನ್ನೆ ಮೊನ್ನೆ ನಡೆದ ಸಂಗತಿಯೇನೋ ಅನ್ನುವಂತೆ ಹೇಳ ಹೇಳುತ್ತಲೆ ಅವನು ಹನಿಗಣ್ಣಾಗಿ ಗಂಟಲು ಕಟ್ಟಿಕೊಂಡು ಮುಂದಿನ ಮಾತುಗಳು ಸ್ಪಷ್ಟವಾಗದೆ ಗೊಗ್ಗರಿಸಿತು. ಅಷ್ಟರಲ್ಲಿ ಗೋಪಿಯ ಚಹಾ ಸೇವನೆಯೂ ಮುಗಿದು ಬಾಬಯ್ಯನಿಂದ ಬೀಳ್ಕೊಂಡ ಅವನು ಗೋಪಿಯ ಸಂಗಡ ತನ್ನ ಮನೆಯತ್ತ ಹೆಜ್ಜೆ ಹಾಕಿದ.
ಗೋಪಿಯ ಈ ಪ್ರಣಯ ಚೇಷ್ಟೆಯ ಕಥೆ ಇಷ್ಟೊಂದು ವಿಪರೀತಕ್ಕೆ ಏರಿರೋದರ ಬಗ್ಗೆ ಅರಿವಿದ್ದಿರದ ಇವನು ಆ ಅಯೋಗ್ಯನ ಬೇಜವಬ್ದಾರಿಗೆ ದಾರಿಯುದ್ಧ ಹೀನಾಮಾನ ರೇಗಿದ. ಅಲ್ಲ ಕಣೋ ಪೋಲಿ ಮುಂಡೆಗಂಡ ಬರಿ ಮಕ್ಳು ಮಾಡಿದರೆ ಹೆಂಗೋ? ನಾಳೆ ಅವಕ್ಕೆ ಸರಿಯಾದ ನೆಮ್ಮದಿಯ ಬದುಕು ಕೊಡುವ ಹೊಣೆಗಾರಿಕೆಯಿಲ್ಲದ ಮೇಲೆ ಆ ಮಕ್ಳನ್ನ ಕೇಳಿದವರಿಗೆ ಜಾತ್ರೆಯಲ್ಲಿ ಹಿಕರಿ ಬೇರಿನ ಗೊಂಬೆಗಳಂತೆ ಮಾರಿ ಬಿಡಕ್ಕಾಗ್ತದೇನಲೆ ಭಡವ? ಮೊದ್ಲು ದುಡಿಮೆಗೆ ಗಮನ ಕೊಡು. ದಿನ ಬೆಳಗಾದ್ರೆ ಹೀಗೆ ಪೋಲಿ ಪುಟ್ಟನಾಗ್ತಾ ಹೋದ್ರೆˌ ಈಗ ಕೇವಲ ನಿನ್ನ ಮಾವ ಉಗಿತಿದಾನೆ. ನಾಳೆ ಕಂಡಕಂಡವಲೆಲ್ಲ ಉಗಿದುಗಿದು ಉಪ್ಪಿನಕಾಯಿ ಹಾಕ್ತಾರೆ ನೋಡ್ತಿರು ಅಂತ ಎಕ್ಕಾಮಕ್ಕ ಗದರಿಸುತ್ತಾ ಹೇಳಿದ. ಗೋಪಿಗೆ ಹೀಗೆ ಬೈದು ಬುದ್ಧಿ ಹೇಳುವ ಅಧಿಕಾರ ಇದ್ದದ್ದು ಆ ಊರಿನಲ್ಲಿ ಅವನಿಗೊಬ್ಬನಿಗೆ. ಅವನ ಕಾಳಜಿಯ ಬುದ್ಧಿಮಾತಿನ ನುಡಿಗಳು ಗೋಪಿಗೇನೂ ಆಕ್ಷೇಪಾರ್ಹ ಅನಿಸಲಿಲ್ಲ. ಆದರೂ ಅವನ ಪ್ಯಾಲಿ ನಗು ಹೊತ್ತ ಮುಖ ಅವನೇನು ಈ ಬದುಕುವ ಮಾರ್ಗದ ಮಾರ್ಗದರ್ಶನದ ಮಾತುಗಳಿಗೆ ಗಂಭೀರ ಸಮ್ಮತಿ ಸೂಚಿಸಿರುವ ದ್ಯೋತಕವೋ? ಇಲ್ಲಾ ಅದನ್ನೂ ಅವನು ಹಗುರವಾಗಿ ತೆಗೆದುಕೊಂಡನೋ ಅನ್ನುವುದನ್ನ ಸ್ಪಷ್ಟ ಪಡಿಸದಂತಾಗಿಸಿತು.
ಅಷ್ಟರಲ್ಲಿ ಅವರಿಬ್ಬರೂ ಅವನ ಪೇಟೆಯ ಮನೆಗೆ ಬಂದು ಮುಟ್ಟಿದ್ದರು. ಸುಲ್ತಾನನಿಗೆ ಮೊದಲು ಔಷಧಿಯನ್ನ ಗೊಟ್ಚದಲ್ಲೆತ್ತ ಬೇಕಿತ್ತು. ಅದಕ್ಕೂ ಮೊದಲು ಆಗ ಆ ಹಾಡಿಯಲ್ಲಿ ಮಾಡಿದ್ದಂತೆ ನಸ್ಯದ ಪ್ರಯೋಗ ಮಾಡಿ ಮತ್ತೊಂದು ಸಲ ಅವನ ಕಟ್ಟಿಕೊಂಡಿದ್ದ ಮೂಗಿನ ಹೊಳ್ಳೆಗಳಿಂದ ಗರಣೆ ಗಟ್ಟಿರುವ ಸಿಂಬಳದ ಒಡಕನ್ನ ಹೊರಗೆಳೆದು ಮತ್ತದನ್ನ ಸ್ವಚ್ಛಗೊಳಿಸಿ ನೀಲಗಿರಿ ಎಣ್ಣೆ ಮೂಗಿನ ಹೊರಳೆಗಳಿಗೆ ಸೋಕಿಸಿ ಉಪಚರಿಸಬೇಕಿತ್ತು. ಗಾಡಿಖಾನೆಗೆ ತೆರಳುವ ಮುಂಚೆಯೆ ಒಲೆಯ ಮೇಲೆ ಕುದಿಯಲಿಟ್ಟಿದ್ದ ಹಿಮದ ಗಟ್ಟಿ ಕರಗಿ ನೀರಾಗಿ ಕುದಿಯಲಾರಂಭಿಸಿತ್ತು. ಅವನು ಮರು ಮಾತನಾಡದೆ ತನ್ನ ಪಾಲಿನ ಕೆಲಸದಲ್ಲಿ ನಿರತನಾದಂತೆಯೆˌ ತನ್ನ ಕೆಲಸವನ್ನಾರಂಭಿಸಿದ ಗೋಪಿ ಹಟ್ಟಿಯ ಅಟ್ಟದ ಅಟ್ಟಣಿಗೆಗೆ ಹೊಡೆದ ಮೊಳೆಗೆ ತೂಗು ಹಾಕಿದ್ದ ಮರದ ಗೊಟ್ಟಕ್ಕೆ ಅಂಟಿದ್ದ ಧೂಳು ಒರೆಸಿ ಕುದಿ ನೀರಲ್ಲಿ ಅದನ್ನ ಗಲಬರಿಸಿ ತೊಳೆದುˌ ಗಾಡಿಗ ಕುಟ್ಟಿ ಕೊಟ್ಟಿರುವ ಹಸಿರು ಮದ್ದನ್ನ ಅದರಲ್ಲಿ ಹಾಕಿ ಜೊತೆಗಷ್ಟು ಕುಟ್ಟಿದ ಕಾಳುಮೆಣಸು ಹಾಕಿ ಕಲಕಿ ಕುದುರೆಗೆ ಕುಡಿಸಬೇಕಾದ ಔಷಧಿಯನ್ನ ಸರಿಯಾದ ಪ್ರಮಾಣದಲ್ಲಿ ಸಿದ್ಧಪಡಿಸಿಟ್ಟಿದ್ದ.
***********
"ಕದಡದ ತನಕ ಕೆರೆಯ ನೀರು
ಕಮಲದ ಅವಾಸ ಬಗ್ಗಡವಲ್ಲˌ
ಮುಗಿಯದ ತನಕ ಶಿಶಿರದ ಜೋರು
ಭೂಮಿಯ ಸಹನೆಯೂ ಸಹ ಬತ್ತುವುದಿಲ್ಲ"
ಕುದುರೆಗಳು ಸಾಮಾನ್ಯವಾಗಿ ಅಪರಿಚಿತರ ಸಂಪರ್ಕಕ್ಕೆ ಬಂದರೆ ಹೆದರಿ ಗಲಿಬಿಲಿಗೊಳಗಾಗುತ್ತವೆ. ಹೀಗಾಗಿ ಅವುಗಳನ್ನ ನಿಯಂತ್ರಿಸುವವರು ಯಾವತ್ತೂ ಅವಕ್ಕೆ ಹೊಕ್ಕು ಬಳಕೆಯಿರುವ ಪರಿಚಿತರೆ ಆಗದ್ದಷ್ಟೂ ಒಳ್ಳೆಯದು. ಗೋಪಿ ಸುಲ್ತಾನನಿಗೆ ಅಪರಿಚಿತನೇನೂ ಆಗಿರಲಿಲ್ಲ. ಮದುವೆಗೆ ಮೊದಲು ಗೋಪಿ ಅವನೊಂದಿಗೆ ಹೊಸ ತೋಟದ ಮನೆಯಲ್ಲಿ ಗೇಯುತ್ತಾ ಅರೆಕಾಲಿಕ ರೈತಾಪಿ ಆಗಿದ್ದಾಗ ಈ ಸುಲ್ತಾನ ಇನ್ನೂ ಮರಿಯಾಗಿದ್ದ. ಆಗೆಲ್ಲ ಗೋಪಿಯ ಆರೈಕೆ ಸಹಜವಾಗಿ ಅವನಿಗೆ ಸಿಕ್ಕಿತ್ತು. ಅವನನ್ನು ಬಿಟ್ಟರೆ ತನ್ನ ಬೆನ್ನೇರಿ ಸವಾರಿ ಮಾಡಲು ಸುಲ್ತಾನ ಅವಕಾಶ ಈತನಕ ಇತ್ತಿರೋದು ಗೋಪಿಗೆ ಮಾತ್ರ.
ಹೀಗಾಗಿ ಪರಸ್ಪರ ಪರಿಚಯ ಹಾಗೂ ಸಲುಗೆಯಿದ್ದ ಅವನ ಉಪಸ್ಥಿತಿಯನ್ನ ಅಶ್ವ ಸಹಜವಾಗಿಯೆ ತೆಗೆದುಕೊಂಡಿತು. ಅವನು ಅದರ ಮೂಗಿನ ಒಡ್ಡು ಬಿರಿದು ನೆಲಕ್ಕೆ ಸುರಿದ ಸಿಂಬಳದ ಗಟ್ಟಿಗಳನ್ನೆಲ್ಲ ಎತ್ತಿ ಗುಡಿಸಿ ಹೊರಗೆಸೆಯುವ ಹೊತ್ತಲ್ಲಿ ಗೋಪಿ ಸುಲ್ತಾನನ ಬಳಿ ಸಾರಿ ಅಲ್ಲಿದ್ದ ಬ್ರೆಷ್ಷಿನಿಂದ ಹಿತವಾಗಿ ಅವನ ಬೆನ್ನು ಕುತ್ತಿಗೆ ಸವರಿ ಮರಳಿ ತಮ್ಮ ಸ್ನೇಹ ಸಂಬಂಧದ ತಂತುವನ್ನ ಕುದುರೆಯೊಂದಿಗೆ ಸಾಧಿಸಿಕೊಂಡˌ ಮೆಲುವಾಗಿ ಕೆನೆದ ಕುದುರೆ ಅವನ ಪ್ರೀತಿಯ ಆರೈಕೆಗೆ ಹಿತಾನುಭವ ಅನುಭವಿಸುತ್ತಾ ಪ್ರತಿಸ್ಪಂದಿಸಿತು.
ಅದರ ವಿಶ್ವಾಸವನ್ನ ಮತ್ತಷ್ಟು ಗಿಟ್ಟಿಸಿಕೊಂಡೆ ಗೊಟ್ಟ ಎತ್ತುವ ಉಪಾಯ ಮಾಡಿದ ಗೋಪಿ ರೈ ಹುಲ್ಲಿನ ಕಟ್ಟು ಬಿಡಿಸಿ ಮತ್ತಷ್ಟು ಹುಲ್ಲನ್ನ ಸುಲ್ತಾನನ ಗೊಂತಿಗೆ ತಂದು ಸುರಿದ. ಅಷ್ಟರಲ್ಲಿ ಅವನು ಅವನ ಸಿಂಬಳವನ್ನೆಲ್ಲ ಸ್ವಚ್ಛಗೊಳಿಸಿ ಅದರ ಹನಿಗಳು ಅಂಟಿದ್ದ ಅಶ್ವದ ಕೊಳಕಾಗಿದ್ದ ಮೋರೆಯನ್ನೆಲ್ಲಾ ತೊಳೆದು ಒಣ ಬಟ್ಟೆಯಿಂದ ಒರೆಸಿಯಾಗಿತ್ತು. ಈಗ ಕುದುರೆಯನ್ನ ರಮಿಸುತ್ತಾ ಮೆಲ್ಲನೆ ಬಾಯಿ ಕಳಿಸಿ ಗೊಟ್ಟದ ಕೊಳವೆಯ ಮೂತಿಯನ್ನ ಅದರ ಹಲ್ಲುಗಳ ನಡುವೆ ಇಳಿಸಿ ತಲೆಯೆತ್ತಿಯೆ ಬಿಟ್ಟರು. ಕಟು ರುಚಿಯ ಹಸಿರು ಔಷಧಿ ಕುದುರೆಯ ಕುತ್ತಿಗೆಯಲ್ಲಿಳಿಯಿತು.
ಮನುಷ್ಯರಂತೆ ತಿಂದದ್ದನ್ನೊ ಕುಡಿದಿದ್ದನ್ನೊ ತಿರುಗಿ ತುಪ್ಪುವ ಕಲೆ ಅರಿಯದ ಕುದುರೆಯಂತ ಜಾನುವಾರು ಜಾತಿಗೆ ಸೇರಿದ ಪ್ರಾಣಿಗಳಿಗೆ ಬಾಯಿಗೆ ಬಿದ್ದ ಮದ್ದನ್ನ ನುಂಗದೆ ವಿಧಿಯೆ ಇರುವುದಿಲ್ಲ. ಹಾಗೊಮ್ಮೆ ಬಾಯಲ್ಲಿ ಕೊಂಚ ಮದ್ದು ಉಳಿದರೆ ಅವು ಕಟಬಾಯಿಯಿಂದ ಜೊಲ್ಲು ಸುರಿಸುಕೊಂಡು ನಿಂತಿರುತ್ತವೆಯೆ ಹೊರತು ಉಗಿದು ಬಾಯಿಯನ್ನ ಮುಕ್ಕಳಿಸಿ ಆ ಕಹಿಯಿಂದ ಪಾರಾಗಲು ಅವುಗಳಿಗೆ ಸಾಧ್ಯವಿರುವುದಿಲ್ಲ. ಕ್ಷಣಾರ್ಧದಲ್ಲಿ ನಡೆದು ಹೋದ ಈ ಔಷಧ ಪ್ರಾಶನದಿಂದ ಕಕ್ಕಾಬಿಕ್ಕಿಯಾದ ಸುಲ್ತಾನ ಬಾಯಿಗೆ ಬಿದ್ದ ಮದ್ದಿನ ಕಟು ರುಚಿಗೆ ಮುಖ ಕಿವಿಚಿಕೊಂಡ ಹಾಗೆ ನಿಂತುಕೊಂಡು ಮರಾ ಮೋಸದಲ್ಲಿ ತನಗದನ್ನು ಕುಡಿಸಿದ ಇವರಿಬ್ಬರನ್ನೂ ಮಿಕಿ ಮಿಕಿ ನೋಡುತ್ತಾ ನಿಂತಿತು. ಅದರ ಮೂಗಿನ ಹೊಳ್ಳೆಗಳಿಗೆ ನೀಲಗಿರಿ ತೈಲದ ಹನಿಗಳನ್ನ ಸೋಕಿಸಿದ ಮೇಲೆ ಅವನಿಗೆ ಒಂದು ಮಟ್ಟಿಗೆ ತೃಪ್ತಿಯಾಯಿತು. ಸಂಜೆ ಊರಿಗೆ ಹೊರಡುವ ಮೊದಲು ಮತ್ತೊಮ್ಮೆ ಗೊಟ್ಟ ಎತ್ತಿ ಕುದುರೆಗೆ ಔಷಧಿ ಕುಡಿಸಿದರೆ ಸಾಕುˌ ಮತ್ತೆ ನೆಗಡಿಯ ಬಾಧೆ ಕಾಡದೆ ಖಂಡಿತ ಕಡಿಮೆಯಾಗಿಯೆ ಬಿಡುತ್ತದೆ ಅನ್ನುವ ಭರವಸೆ ಅವನಿಗಿತ್ತು.
ಒಂದೆರಡು ದಿನಗಳ ಹೆಚ್ಚಿನ ಆರೈಕೆ ಇನ್ನೂ ಬೇಕಿರುತ್ತದೆ. ಮನೆಯ ಲಾಯದಲ್ಲಿ ಇನ್ನಿತರ ಜಾನುವಾರುಗಳಿಂದ ಹಾಗೂ ಹಯಗಳಿಂದ ಪ್ರತ್ಯೇಕಿಸಿ ಕಟ್ಟಿ ಆರೈಕೆ ಮಾಡಿದಷ್ಟೂ ಒಳ್ಳೆಯದು. ಸ್ವಚ್ಛ ವಾತಾವರಣದಲ್ಲಿ ಏಕಾಂಗಿಯಾಗಿ ಚಿಕಿತ್ಸೆಗೊಳಗಾಗುವ ಕುದುರೆಯ ಕಾಯಿಲೆ ಆದಷ್ಟು ಬೇಗ ಗುಣವಾಗುತ್ತದೆ. ಜೊತೆಜೊತೆಗೆ ಅವುಗಳಿಂದ ಕೊಟ್ಟಿಗೆಯ ಇನ್ನಿತರ ಜಾನುವಾರುಗಳಿಗೂ ಜೊಲ್ಲುˌ ಬಾಯ ನೊರೆ ಹಾಗೂ ಸಿಂಬಳದ ಲೋಳೆಯ ಮೂಲಕ ನೆಗಡಿಯ ಸೋಂಕು ಹರಡಿ ಹೈರಾಣಾಗಿಸಿ ಕಾಡುವುದು ಕೂಡ ತಪ್ಪುತ್ತದೆ. ಗಾಡಿಗ ಕಟ್ಟಿ ಕೊಟ್ಟಿರುವ ಹಸಿರು ಮದ್ದು ಇನ್ನೂ ನಾಲ್ಕು ದಿನಕ್ಕೆ ಸಾಲುತ್ತಿತ್ತು.
ಗೋಪಿ ವಾಸ್ತವದಲ್ಲಿ ಉಢಾಳನೇನಲ್ಲ. ಹುಡುಗು ಬುದ್ಧಿ ಹಾಗೂ ಭವಿಷ್ಯದ ಬಗ್ಗೆ ಗಂಭೀರವಾಗಿಲ್ಲದೆ ಬಂದ ಹಾಗೆ ಬಾಳನ್ನ ಎದುರಿಸುತ್ತಾ ಹೋಗುವ ಬ್ರಹ್ಮಚಾರಿ ಬಾಳ್ವೆಯ ಹಳೆಯ ಚಾಳಿಯಿಂದ ಅವನು ಇನ್ನೂ ಹೊರಬಂದಿರಲಿಲ್ಲ ಅಷ್ಟೆ. ಪುಟ್ಟ ಮಕ್ಕಳೆಂದರೆ ಅವನಿಗೆ ಮುಚ್ಚಟೆ ಜಾಸ್ತಿ. ಅವನ ಮಗಳಿಗೆ ಅಮ್ಮನಿಗಿಂತ ಅವಳಪ್ಪನೆ ಅಚ್ಚುಮೆಚ್ಚು. ಇನ್ನೂ ತೊದಲು ನುಡಿಗಳನ್ನ ನುಡಿಯಲಾರಂಭಿರುವ ಆ ಬೊಂಬೆಯಂತ ಕೂಸಿಗೆ ಅಮ್ಮನ ಭಾಷೆಯಷ್ಟೆ ಸ್ಥಳಿಯವಲ್ಲದ ಅಪ್ಪನಾಡುವ ಭಾಷೆಯೂ ಅರ್ಥವಾಗುತ್ತದೆ. ಅಪ್ಪನ ಮಾತುಗಳನ್ನ ಆಲಿಸುವ ಮಗು ಅದನ್ನೆ ಪುನರುಚ್ಛರಿಸಿ ಮತ್ತೆ ಮತ್ತೆ ಅದನ್ನೆ ಪಠಿಸಿ ಅಪ್ಪನೊಂದಿಗೂ ಆಡಿ ಅವನ ಮುದ್ದನ್ನ ಗಿಟ್ಟಿಸಿಕೊಳ್ಳುತ್ತದೆ. ಇವನ ಮಗ ರಾಜನಿಗೂ ಗೋಪಿ ಚಿಕ್ಕಪ್ಪ ಅಂದರೆ ಸಾಕು ಖುಷಿಯೋ ಖುಷಿ.
ಮಕ್ಕಳನ್ನೆತ್ತಿ ಗಾಳಿಯಲ್ಲಿ ಹಾರಿಸಿ ಮುತ್ತಿಕ್ಕಿ ಅವರ ಹೊಟ್ಟೆ ಕಂಕುಳಲ್ಲಿ ಕಚಗುಳಿಯೆಬ್ಬಿಸಿ ಗಲಗಲ ನಗಿಸಿ ಪೇಟೆಯಿಂದ ತಾನು ತರುವ ಸಕ್ಕರೆ ಮಿಠಾಯಿಗಳನ್ನ ಅವರ ಕೈಗೆ ಕೊಟ್ಟುˌ ಹಿಕರಿ ಬೇರುಗಳಿಂದ ಅವನೆ ಕೆತ್ತಿ ತಯಾರಿಸುತ್ತಿದ್ದ ಮಾಟವಾದ ಬಣ್ಣ ಹಚ್ಚಿ ಅಂಗಿ ಚಡ್ಡಿ ಫ್ರಾಕು ತೊಡಿಸಿ ತಲೆಬಾಚಿ ಕೂದಲು ಗಂಟು ಹಾಕಿದ ಗೊಂಬೆಗಳನ್ನ ನೀಡಿˌ ಕುದುರೆ ದನ ಎಮ್ಮೆ ಕುರಿ ಮೇಕೆ ಚಿರತೆ ಸಾರಂಗಗಳ ಪ್ರತಿಕೃತಿ ಬೊಂಬೆಗಳನ್ನ ಅವರ ಆಟಿಕೆಯನ್ನಾಗಿಸಿ ಅವರ ಮನಸೂರೆಗೊಳ್ಳುತ್ತಿದ್ದ. ಅವನ ತೋಟದ ಮನೆಯಲ್ಲೂ ಇವನ ಸ್ವಂತ ಮನೆಯಲ್ಲೂ ಎರಡೂ ಮಕ್ಕಳೂ ಗೋಪಿಯ ಪುನರಾಗಮನವನ್ನ ವಸಂತದ ಆಗಮನಕ್ಕೆ ಕಾತರಿಸಿ ಕತ್ತೆತ್ತಿ ಕಾಯುವ ಜಾತಕಪಕ್ಷಿಗಳಂತೆ ಕಾಯುತ್ತಿದ್ದವು.
ಚಳಿಗಾಲ ತೀವೃವಾಗಿದ್ದರೂ ಸಹ ದಿನಕ್ಕೆ ಕನಿಷ್ಠ ಒಂದು ಸಾರಿಯಾದರೂ ಗೋಪಿಯ ಸವಾರಿ ತಪ್ಪದೆ ಊರ ಎಲ್ಲೆಯಂಚಿನ ಬಳಿಯಿದ್ದ ಮಠಕ್ಕೆ ಹೋಗುತ್ತಿತ್ತು. ಬಾಬಯ್ಯನ ಮನ ಒಲಿಸಿ ಅವಳ ಮಗಳನ್ನ ತನ್ನ ಮಡದಿಯನ್ನಾಗಿಸಿ ಮದುವೆಗೆ ಸಮ್ಮತಿಸಿ ತನ್ನನ್ನೂ ಗೃಹಸ್ಥನನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಠದ ಗುರುಗಳೆಂದರೆ ಅವನಿಗೆ ವಿಪರೀತ ಭಯ ಭಕ್ತಿ. ಅನಕ್ಷರಸ್ಥನಾಗಿರುವ ಗೋಪಿಗೆ ನಾಲ್ಕಕ್ಷರ ಕಲಿಸುವ ಗುರುಗಳ ಪ್ರಯತ್ನದ ಸರಣಿಗಳೆಲ್ಲಾ ನೀರ ಮೇಲೆ ಹೋಮ ಮಾಡಿದಂತೆ ವಿಫಲವಾಗಿ ಅವನ ಮಡ್ಡ ಮಂಡೆಗೆ ಅರೆದು ಹಚ್ಚಿ ಅದರಲ್ಲೊಂದು ತೂತು ಕೊರೆದು ವರ್ಣಮಾಲೆಯನ್ನೆ ಮುದ್ದೆ ಮಾಡಿ ಆ ಒಟ್ಟೆಯೊಳಗೆ ಹಾಕಿ ತುಂಬಿದರೂ ಸಹ ನಾಲ್ಕಾಣೆಯ ಪ್ರಯೋಜನವಿಲ್ಲ ಅನ್ನೋದು ಮನದಟ್ಟಾದ ಮೇಲೆ ಗುರುಗಳು ಆ ಕಪ್ಪು ಕುದುರೆಯನ್ನ ಸರೋವರದ ನೀರಲ್ಲಿ ತಿಕ್ಕಿ ತಿಕ್ಕಿ ತೊಳೆದು ಬೆಳ್ಳಗಾಗಿಸುವ ಅಸಾಧ್ಯ ಕೆಲಸವನ್ನ ಕೈ ಬಿಟ್ಟು ಜಾಣರಾಗಿದ್ದರು.
ಬರವಣಿಗೆಯ ಅಕ್ಷರಭ್ಯಾಸ ಅತ್ತಲಾಗಿರಲಿ ಸಂವಹನದ ಸ್ಥಳಿಯ ಆಡುನುಡಿಯ ಕಲಿಕೆಯಲ್ಲೂ ಗೋಪಿ ಅಷ್ಟೆ ಮುಂದಿದ್ದ. ಆದರೆ ಓದಿನಲ್ಲಿ ಹಿಂದೆ ಬಿದ್ದಿದ್ದರೂ ಕಸುಬುಗಳನ್ನ ಕಲಿಯುವುದರಲ್ಲಿ ಅವನು ಜಾಣ. ಮಠದ ಸಣ್ಣಪುಟ್ಟ ಮರಮತ್ತಿನ ಕೆಲಸಗಳಿಗೆ ಗೋಪಿಯಿಲ್ಲದೆ ಗತಿಯಿಲ್ಲ ಅನ್ನುವ ಮಟ್ಟಿಗೆ ಗೋಪಿ ಗುರುಗಳಿಗೆ ಇತ್ತೀಚೆಗೆ ಅನಿವಾರ್ಯ ಭಂಟನಾಗಿದ್ದ. ಬಾಬಯ್ಯನ ಮನೆಯ ಪರಿಸ್ಥಿತಿಯ ಅರಿವಿದ್ದ ಗುರುಗಳು ಬಿಟ್ಟಿ ದುಡಿಸಿಕೊಳ್ಳದೆ ತಪ್ಪದೆ ಅವನ ಶ್ರಮಕ್ಕೆ ತಕ್ಕ ಪ್ರತಿಫಲ ಕೊಡುತ್ತಿದ್ದರು. ಅದನ್ನ ಪಡೆಯಲು ಸಂಕೋಚಿಸುವ ಗೋಪಿಗೆ ಅಧ್ಯಾತ್ಮ ಬೇರೆˌ ಲೌಕಿಕದ ಬದುಕು ಬೇರೆ ಎಂದು ಬೈದು ಬುದ್ಧಿ ಹೇಳಿದ್ದರವರು. ಇತ್ತೀಚೆಗೆ ಗೋಪಿ ಪೋಲಿ ಪುಟ್ಟನಾಗಿರುವ ಸುದ್ದಿ ಇನ್ನೂ ಗುರುಗಳ ಕಿವಿಗೆ ಬಿದ್ದಿಲ್ಲದೆಯಿರುವುದರಿಂದ ಅವರಿಂದ ಕಿವಿ ಹಿಂಡಿಸಿಕೊಳ್ಳದೆ ಗೋಪಿ ಬಚಾವಾಗಿದ್ದ. ಪಾಪಮ್ಮನ ವಾಲಗದ ಆಲಾಪದ ಧ್ವನಿ ಮಠದ ಕೊಟ್ಟಿಗೆ ದಾಟಿ ಮೊಗಸಾಲೆ ಮುಟ್ಟಲಿದ್ದ ದಿನ ಮಾತ್ರ ಅವನಿಗೆ ಗ್ರಹಚಾರ ಕಾದಿರುತ್ತಿತ್ತು.
https://youtu.be/hX5D3uSg42o
https://youtu.be/X6NTxZnjKu0
https://youtu.be/hOuX5UHHnSY
https://youtu.be/z15Jk3W9Xg0