29 September 2022

ಊರೊಂದರ ಕಗ್ಗೊಲೆ.....


ಕಾಲಕ್ಕೆ ತಕ್ಕಂತೆ ಕೋಲ ಕಟ್ಟುವವರ ಮಧ್ಯೆ ನನ್ನೂರು ಸತ್ತು ಮಣ್ಣಾಗಿ ಹೋಗುತಿದೆ.

ಊರೊಂದರ ಪರಿಚಯ ಮಾಡಿಸೋದುˌ ಆ ಊರಿನ ಬಗ್ಗೆ ಆತ್ಮೀಯತೆಯ ಭಾವ ಮೂಡಿಸೋದು ಯಾವಾಗಲೂ  ಅಲ್ಲಿನ ಹಲವು ಜನ ಗುರುತಿಸುವ ಕೆಲವು ಪುರಾತನ ಅಂಗಡಿˌ ಮುಂಗಟ್ಟುˌ ಸ್ಥಳದ ಹೆಗ್ಗುರುತುಗಳು ಹಾಗೂ ಊರ ಲಾಂಛನಗಳಂತೆಯೆ ಆಗಿ ಹೋದ ಕೆಲವು ಸಾಮಾಜಿಕ ಸ್ಥಳದಲ್ಲಿನ ಗುರುತುಗಳು. ಉದಾಹರಣೆಗೆ ಸ್ವರಾಜ್ಯ ಮೈದಾನˌ ಗಾಂಧಿ ಭವನˌ ಪುರಭವನ ಇತ್ಯಾದಿ.


ಇದ್ಯಾವುದೂ ಇಲ್ಲದ ಊರಾಗಿತ್ತು ನನ್ನ ಹುಟ್ಟೂರು. ಆದರೂ ಅದಕ್ಕೂ ಅದರದ್ದೆ ಆದ ಗತ್ತು ಗೈರತ್ತು ಇತ್ತು. ಸಣ್ಣ ಊರಾದರೇನು? ಸ್ವಂತದ ಗುರುತುಗಳಿಗೆ ಬರವೆ? ತೀರ್ಥಹಳ್ಳಿ ಅಂದ ತಕ್ಷಣ ಯಾರಿಗಾದ್ರೂ ನೆನಪಾಗೋದು ಅಲ್ಲಿನ ಕಮಾನು ಸೇತುವೆˌ ಗಾಂಧಿಚೌಕದ ಮೂರು ಸಿಂಹದ ಅಶೋಕನ ಸ್ತಂಭˌ ರಾಮೇಶ್ವರ ದೇವಸ್ಥಾನˌ ತುಂಗಾ ತೀರˌ ಹೊಳೆ ಮಧ್ಯದ ರಾಮಮಂಟಪˌ ಸಿದ್ಧೇಶ್ವರ ಗುಡ್ಡˌ ಆನಂದಗಿರಿ ಗುಡ್ಡ ಹಾಗೂ ಅದಕ್ಕೆ ಮಾಲೆ ತೊಡಿಸಿದಂತೆ ದೂರದಿಂದ ಕಾಣುತ್ತಿದ್ದ ತುಂಗಾ ಕಾಲೇಜಿನ ಕಟ್ಟಡˌ ತಾಲೂಕು ಆಫೀಸು ಮುಂದಿನ ಸ್ವತಂತ್ರ್ಯದ ಬಾವಿˌ ವೆಂಕಟೇಶ ಟಾಕೀಸುˌ ಮೇಲು ಬಸ್ಟ್ಯಾಂಡಿನ ಗಾಂಧಿ ಟಾಕೀಸಿನ ಪಳಯುಳಿಕೆˌ ಅಚ್ಚುಕಟ್ಟಾಗಿದ್ದ ಕುಶಾವತಿ ಗಾಂಧಿ ಪಾರ್ಕು ಹಾಗೂ ಕೆಳಗಿನ ಕಮಾನು ಬಸ್ಟ್ಯಾಂಡು. ಇವೆಲ್ಲವೂ ಇರದ ತೀರ್ಥಹಳ್ಳಿನೂ ಒಂದು ತೀರ್ಥಹಳ್ಳಿನ?

ಇವತ್ತು ಅದ್ಯಾರೋ ಕಾಪಿ ಚಿಟ್ ನಿಪುಣರು ಹೊಡೆದಿರೋ ಕೆಟ್ಟ ಕಾಪಿಯಂತೆ ಬೆಂಗಳೂರಿನ ರಾಜಾಜಿನಗರದ ಆರನೆ ಬ್ಲಾಕನದ್ದೋ ಇಲ್ಲಾ ಜಯನಗರದ ನಾಲ್ಕನೆ ಬ್ಲಾಕನದ್ದೋ ಮೂರನೆ ದರ್ಜೆಯ ಕಾಪಿಯಂತೆ ಚಹರೆಪಟ್ಟಿಯೆ ಬದಲಾಗಿರುವ ತೀರ್ಥಹಳ್ಳಿ ತನ್ನ ತನವನ್ನೆ ಕಳೆದುಕೊಂಡು ಇನ್ಯಾವುದೋ ಮಹಾನಗರದಿಂದ ತೂರಿ ಬಂದಿರೋ ಅಸಡ್ಡಾಳ ತುಂಡಿನಂತೆ ಕಾಣಿಸುತ್ತದೆ. 


ಸದಾ ಬೋಳು ಮಂಡೆಯ ಮುಂಡೆಯೊಬ್ಬಳು ಅದೆಂದೋ ಇದ್ದ ಉದ್ದ ಕೂದಲ ಜಡೆಯ ಕಥೆ ಕೊಚ್ಚಿಕೊಳ್ಳುವಂತೆˌ ಸಮಾಜವಾದದ ನೆಲ ಅಂತೆಲ್ಲಾ ಕೊರೆಯುವ ಅಲ್ಲಿನ 'ಸಂ'ಮಜಾ ವ್ಯಾಧಿಗಳಿಗೆ ಊರಿಗೆ ಪಾರಂಪರಿಕ ಕಟ್ಟಡದಂತದ್ದ ಸಂಸ್ಕೃತಿ ಮಂದಿರವನ್ನ ಅಲ್ಲಿದ್ದ ನ್ಯಾಯಾಲಯ ಸ್ವಂತ ಕಟ್ಟಡಕ್ಕೆ ಗುಳೆ ಹೋದ ನಂತರ ಉಳಿಸಿಕೊಳ್ಳಲಾಗಿಲ್ಲ. ಅಂದವಾಗಿದ್ದ ಸಂಸ್ಕೃತಿ ಮಂದಿರ ಇಂದು ಒತಪ್ರೋತ ಗೋಡೆ ಎಬ್ಬಿಸಿದ ವಿಕೃತರಿಂದ ವಿಕಾರ ಹೊತ್ತ "ಕೇವಲ ಮುನಸಿಪಾಲಿಟಿ" ಕಟ್ಟಡವಾಗಿ ಹೋಗಿದೆ.

ಹೋಗಲಿˌ ಪಕ್ಕದಲ್ಲಿದ್ದ ಗುಡ್ಡದ ಮೇಲಿನ ಯಕ್ಷಗಾನ ಗುಡಾರ ಹಾಕುತ್ತಿದ್ದ ಸಾರ್ವಜನಿಕ ಆಟದ ಬಯಲುˌ ಅದಕ್ಕಿಂತ ಚೂರು ಮೇಲೆ ನೀರಿನ ಟ್ಯಾಂಕಿಯ ಪಕ್ಕದಲ್ಲಿದ್ದ ವಾಲಿಬಾಲ್ ಮೈದಾನವನ್ನಾದರೂ ಉಳಿಸಿಕೊಂಡಿದಾರ ಅಂದ್ರೆ ಅದೂ ಇಲ್ಲ. ಈಗಾಗಲೆ ಅಲ್ಲಿನ ಹಸಿರು ನೆಲದ ಪ್ರಕೃತಿ ಸಹಜ ಪಾರ್ಕಿನ ಒಂದು ಭಾಗವನ್ನ ಕಬಳಿಸಿ ನ್ಯಾಯಾಲಯಕ್ಕೆ ಅಂತ  ಕಟ್ಟಿಸಿದ್ದರೂ ಭೂತ ಬಂಗಲೆಯಂತೆ ಪಾಳು ಬೀಳಿಸಿರುವ ಸರಕಾರಿ ಕಟ್ಟಡವನ್ನೆ ಮರಮತ್ತು ಮಾಡಿಸಿ ಮರುಬಳಸುವ ಅವಕಾಶವಿದ್ದರೂ ಸಹˌ ಅನಗತ್ಯವಾಗಿ ಪರ್ಸಂಟೇಜ್ ಅಭಿವೃದ್ಧಿ ಪೀಡೆಗೆ ಬಲಿಯಾಗಿರೋ ಆ ಮೈದಾನಗಳಲ್ಲಿ ವಿಕಾರವಾಗಿ ಅದ್ಯಾವುದೋ ಸರಕಾರಿ ಕಾಂಕ್ರಿಟ್ ಕಟ್ಟಡ ತಲೆ ಎತ್ತಿ ನಿಂತಿದೆ. ಕೆಳಗೆ ಸೊಪ್ಪುಗುಡ್ಡೆಗೆ ಹಸಿರ ನಡುವೆ ಇಳಿಯಲು ಹಾಕಿದ್ದ ಮೆಟ್ಟಿಲು ಸಾಲು ಮರಗಳೆಲ್ಲ ಇವರ ಪುರ"ಪಿತೃ"ಪಕ್ಷದ ಕಾಗೆಗಳ "ಪಾರ್ಕ್ ಅಭಿವೃದ್ಧಿ" ಪರ್ಸಂಟೇಜ್ ವ್ಯವಹಾರಕ್ಕೆ ಬಲಿಯಾಗಿ ನಿರ್ವಹಣೆಯಿಲ್ಲದೆ ಪಾಳು ಬಿದ್ದಿದೆ.

ಮುಂದಿನ ಸರದಿ ಬಹುಶಃ ಕಮಾನು ಸೇತುವೆಯದ್ದು. ಕುಶಾವತಿಯಿಂದ ಬೊಮ್ಮರಸಯ್ಯನ ಅಗ್ರಹಾರ ಸಂಪರ್ಕಿಸುವಂತೆ ಮಾಡಬೇಕಾಗಿದ್ದ ಹೊಸ ಸೇತುವೆಯನ್ನ ಮತ್ತೆ ಪರ್ಸಂಟೇಜು ಲಾಬಿ ಆಗಬಾರದ ಕಡೆ ಆಗಿಸುತ್ತಿದೆ. ಅದಾದ ನಂತರ ಕಮಾನು ಸೇತುವಗೂ ಇದೆ ಪ್ರಜ್ಞಾವಂತರ ನೆಲದ ಪ್ರಜ್ಞೆ ಕಳೆದುಕೊಂಡು ಮೂರ್ಛೆ ಹೋದವರು ಒಂದು ಗತಿ ಕಾಣಿಸುತ್ತಾರೆ ನೋಡ್ತಿರಿ.


ಕೊಳ್ಳೆ ಹೊಡೆಯುವ ಮನಸ್ಥಿತಿ ಸಾರ್ವತ್ರಿಕವಾದಾಗ ಮಾತ್ರ ಸೂಕ್ಷ್ಮತೆಗಳು ಸತ್ತು ಹೋಗುತ್ತವೆ. ಈಗ ತೀರ್ಥಹಳ್ಳಿಯಲ್ಲಾಗ್ತಿರೋದೂ ಅದೆನೆ. ಇವತ್ತು ಸಿಕ್ಕಾಪಟ್ಟೆ ಅಭಿವೃದ್ಧಿಯಾಗಿರುವ ಅಲ್ಲಿನ ಜೀವನಾಡಿ "ಆಜಾದ ರಸ್ತೆ"ಯಲ್ಲಿ ಹೊರಟರೆ ಯಾವ ಆತ್ಮೀಯ ಭಾವವೂ ಮನಸೊಳಗೆ ಹುಟ್ಟದು.

ಇಂತಿಪ್ಪ ತೀರ್ಥಹಳ್ಳಿಯ ವ್ಯಾಪಾರಿ ಹೆಗ್ಗುರುತುಗಳಲ್ಲಿ ಒಂದಾಗಿತ್ತು "ಕವಿತಾ ಹೋಟೆಲ್". ಸಂತೆ ಮಾರುಕಟ್ಟೆಯ ಕೊನೆಯಲ್ಲಿದ್ದ ಬಹುತೇಕ ಮಲಯಾಳಿಗಳೆ ನಿರ್ವಹಿಸುತ್ತಿದ್ದ ಅದನ್ನ ಬಹುಶಃ ಹೊಸ ಕಟ್ಟಡವನ್ನ ಏಳಿಸುವ ಉದ್ದೇಶದಿಂದ ಒಡೆದು ಹಾಕಲಾಗಿದೆ. ಸೋಮವಾರ ಸಂತೆಗೆ ಬರುವ ಸಮೀಪದ ಹಳ್ಳಿಗರುˌ ಬಯಲುಸೀಮೆಯ ವ್ಯಾಪಾರಿಗಳು ಈ ಮಾಂಸಹಾರಿ ಹೊಟೆಲಿನ ಗಿರಾಕಿಗಳಾಗಿರುತ್ತಿದ್ದ ನೆನಪಿದೆ. "ಅಲ್ಲಿ ಬೆಕ್ಕು ನಾಯಿ ಮಾಂಸವನ್ನೂ ಕುರಿ ಕೋಳಿ ಮಾಂಸದ ಜೊತೆ ಕಲಬೆರಕೆ ಮಾಡಿ ಮಾರುತ್ತಾರಂತೆ" ಅನ್ನುವ ಪುಕಾರಗಳನ್ನ ಕೇಳಿ ಹೌಹಾರುತ್ತಿದ್ದ ಬಾಲ್ಯದ ದಿನಗಳು ನೆನಪಾಗುತ್ತವೆ. ಬೆಳಗ್ಯೆ ತಾಲೂಕಿನ ಕೊನೆಯ ಒಂದೆ ಒಂದು ಬಸ್ಸು ತೀರ್ಥಹಳ್ಳಿ ಮುಟ್ಟಿಸುವ ಊರಿಂದ ಹೊರಟ ಮಲೆನಾಡಿನ ಹಳ್ಳಿಗ ಸಂತೆ ಮುಗಿಸಿ ಕವಿತಾ ಹೊಟೆಲಿನಲ್ಲಿ ಉಂಡು ಅಲ್ಲೆ ಸಮೀಪದ ವೆಂಕಟೇಶ ಟಾಕೀಸಿನಲ್ಲಿ "ಅಂದೆ  ತೆರೆಕಂಡ" ಸೂಪರ್ ಹಿಟ್ ಕನ್ನಡ ಪಚ್ಚರಿನ ಮ್ಯಾಟ್ನಿ ಶೋ ನೋಡಿ ಇಂಟರವೆಲ್ಲಲ್ಲಿ ಪಕ್ಕದ ಪೆಟ್ಟಿಗೆ ಅಂಗಡಿಯ ಖಾರ ಖಾರ ಚುರುಮುರಿ ತಿಂದುˌ ಶೋ ಬಿಟ್ಟ ಮೇಲೆ ಹೊರಗೆ ಕೆಇಬಿ ಆಫಿಸ್ ಕಡೆಗೆ ಮುಖ ಮಾಡಿದ್ದ ಪೂಜಾರರ ಗಣೇಶ ಕಫೆಯಲ್ಲಿ ಬೈಟು ಚಾ ಕುಡಿದು ಗೋಲಿ ಬಜೆ ತಿಂದುˌ ಆದಷ್ಟು ಬೇಗ ಬಿಸಬಿಸ ಓಡಿ ಹೋಗಿ ಶಿಮೊಗ್ಗ ಸ್ಟ್ಯಾಂಡಿನ ಕಮಾನಿನೊಳಗೆ ನಿಂತಿರೋ ಊರಿಗೆ ಮರಳುವ ಅದೆ ಬಸ್ಸು ಮರಳಿ ಹಿಡಿದನೆಂದರೆ ಅಲ್ಲಿಗೆ ಅವನ ವಾರದ ಸಂತೆ ಸಂಪನ್ನ. 


ಮೇಲು ಬಸ್ಟ್ಯಾಂಡಿಂದ ಮಸೀದಿ ರಸ್ತೆಯಿಂದ ಬಂದು ಸಂತೆ ಮಾರ್ಕೆಟ್ಟಿಗೆ ತಿರುಗುವ ಮೂಲೆಯಲ್ಲಿದ್ದ ಕವಿತಾ ಹೊಟೆಲಿನ ಆ ಮೋಟು ಗೋಡೆಯ ಮೇಲೆ ರಿಂಗು ರಿಂಗಾಗಿ ಹೊಗೆಯಗುಳುತ್ತಾ "ಮೂರು ಮಾರ್ಕಿನ ಬೀಡಿಗಳನ್ನೋ" ಇಲ್ಲಾ "ನಸೀಮಾ ಬೀಡಿಗಳನ್ನೋ" ಎಳೆಯದ ಆ ಕಾಲದ ಸೂಪರ್ ಸ್ಟಾರುಗಳ್ಯಾರಾದರೂ ಇದ್ದರೆ? ಲೋಕಲ್ ಅಂಬರೀಶ್ˌ ರವಿಚಂದ್ರನ್ˌ ವಿಷ್ಣುವರ್ಧನ್ˌ ಪ್ರಭಾಕರ್ˌ ಶಂಕರನಾಗ್ ಮೊದಲಾದವರಿಂದ ಹಿಡಿದು ಅಕ್ಕಪಕ್ಕದೂರಿನ ಕಮಲ ಹಾಸನ್ˌ ರಜನಿಕಾಂತˌ ಮಮ್ಮುಟ್ಟಿˌ ನಾಗಾರ್ಜುನˌ ಚಿರಂಜೀವಿ ಎಲ್ಲರೂ ಕಾಲಕಾಲಕ್ಕೆ ಅಲ್ಲಿ ಬಜರ್ದಸ್ತ್ ಸ್ಟೈಲಿನಲ್ಲಿ ಕೂಲಿಂಗ್ ಗ್ಲಾಸ್ ಸಿಕ್ಕಿಸಿಕೊಂಡು ಖಾದರ ಸಾಬರ ಬೀಡಿಯ ಧಮ್ ಎಳೆದವರೆ. ಅವರನ್ನೆಲ್ಲ ಆ ಗೋಡೆಯ ಮೇಲೆ ರಾರಾಜಿಸಿದನ್ನ ಕಂಡಿದ್ದ ಬಾಲ್ಯ ಅವಿಸ್ಮರಣೀಯ.

ಹೊಟೆಲು ದಾಟಿದರೆ ಅದೆ ಸಾಲಿನಲ್ಲಿದ್ದ ಸಾಲು ಮನೆಗಳಲ್ಲಿ ಮಲಯಾಳಿಯೊಬ್ಬರು ಹೋಲ್ಸೇಲ್ ತೆಂಗಿನಕಾಯಿ ಮಾರುತ್ತಿದ್ರು. ಚೂರೆ ಚೂರು ಸಸ್ತಾ ರೇಟಲ್ಲಿ ಸಿಗುತ್ತೆ ಅಂತ ಅಜ್ಜಿ ಅಲ್ಲೆ ಸಂತೆ ದಿನ ಚೌಕಾಸಿ ಮಾಡಿ ಕಾಯಿ ಖರೀದಿಸುತ್ತಿದ್ದುದನ್ನ ಅವರ ಬಾಲವಾಗಿ ಸಂತೆಗೆ ಹೋಗುತ್ತಿದ್ದವ ಪಿಳಪಿಳಿ ಕಣ್ಣು ಬಿಟ್ಟು ನೋಡ್ತಿದ್ದೆ. ನಮ್ಮ ವ್ಯಾಪಾರ ಮುಗಿದ ಮೇಲೆ ಆ ಮಲಯಾಳಿಯ ಮನೆ ಕಂ ಅಂಗಡಿಯಲ್ಲಿ ಪ್ರತ್ಯಕ್ಷವಾಗುತ್ತಿದ್ದ ಅವರ ಹೆಂಡತಿಯ ಆಹ್ವಾನ ಮನ್ನಿಸಿˌ ಅವರ ಜೊತೆ ಒಂಚೂರು ಹರಟೆ ಹೊಡೆದುˌ ಅವರು ಕೊಡುತ್ತಿದ್ದ ಚಾ ಸವಿದು ನಮ್ಮ ಸವಾರಿ ಮನೆ ಕಡೆಗೆ ಹೊರಡುತ್ತಿತ್ತು. ಇನ್ನು ಅವೆಲ್ಲ ನೆನಪು ಮಾತ್ರ. ಊರಿನ ಗುರುತುಗಳಲ್ಲೊಂದಾಗಿದ್ದ ಕವಿತಾ ಹೊಟೆಲ್ಲುˌ ಹೊಟೆಲ್ಲಿನ ಜಾಹಿರಾತು ಗೋಡೆˌ ಮಲೆಯಾಳಿಗಳ ಮನೆಸಾಲು ಎಲ್ಲಾ ಪಳಯುಳಿಕೆಗಳಾಗಿ ನಿಂತಿವೆ. ನಾಳೆ ಅಲ್ಲಿ ಬಹುಮಹಡಿ ಕಟ್ಟಡ ಮೇಲೇರಬಹುದು. ಅಂತೂ ನನ್ನ ತೀರ್ಥಹಳ್ಳಿಯ ಕೊಲೆಯಾಗಿ ಹೋಗಿದೆ.