24 September 2014

ಪುಸ್ತಕದೊಳಗೆ - ೧೧




"ಮೋಹನಸ್ವಾಮಿ"

ಲೇಖಕ; ವಸುಧೇಂದ್ರ,
ಪ್ರಕಾಶಕರು; ಛಂದ ಪುಸ್ತಕ,
ಪ್ರಕಟಣೆ; ೨೦೧೩,
ಕ್ರಯ; ರೂಪಾಯಿ ೧೮೦.


 " ಅದು ಕಾರ್ತೀಕ ಮತ್ತು ರಶ್ಮಿಯ ಮೊದಲ ರಾತ್ರಿ. ಮೋಹನಸ್ವಾಮಿಗೆ ಇಡೀ ರಾತ್ರಿ ನಿದ್ದೆ ಬರಲಿಲ್ಲ. ಕಣ್ಣು ಮುಚ್ಚಿದರೆ ಸಾಕು, ಕಾರ್ತೀಕ ಮತ್ತು ರಶ್ಮಿಯ ಮೈಥುನದ ದೃಶ್ಯಗಳು ಅಲೆಅಲೆಯಾಗಿ ನುಗ್ಗಿ ಬರುತ್ತಿದ್ದವು. ಅವರಿಬ್ಬರ ನಗು, ಉತ್ಸಾಹ, ಉನ್ಮಾದಗಳೆಲ್ಲವೂ ಅವನಿಗೆ ಸ್ಪಷ್ಟವಾಗಿ ಕಾಣಿಸುತ್ತಿದ್ದವು, ಕೇಳಿಸುತ್ತಿದ್ದವು.
ಅದೋ ನೋಡಲ್ಲಿ, ಕಾರ್ತೀಕ ತನ್ನೆಲ್ಲವನ್ನೂ ಅವಳಿಗೆ ಅರ್ಪಿಸುತ್ತಿದ್ದಾನೆ. ದೇಹದ ಕಣಕಣವೂ ಈಗವಳ ಸ್ವತ್ತು. ಅವಳೇನು ಬಯಸಿದರೂ ಎತ್ತಿ ಎತ್ತಿ ಕೊಡುತ್ತಿದ್ದಾನೆ. ಅವನ ಮುಖ ನೋಡು, ಅದೆಷ್ಟು ಖುಷಿಯಿಂದ ಕೂಡಿದೆ. ಅವಳದೊಂದು ಸ್ಪರ್ಶಕ್ಕೆ ಯಾವ ತ್ಯಾಗಕ್ಕಾದರೂ ಸಿದ್ಧವಾಗಿದ್ದಾನೆ. ಅವನಿಗೆ ಈ ಸದ್ಯಕ್ಕೆ ಜಗತ್ತಿನ ಯಾವ ಸಂಗತಿಗಳೂ ಬೇಕಿಲ್ಲ.


ಇಲ್ಲ, ನಾನಿದನ್ನೆಲ್ಲಾ ಯೋಚಿಸುವುದಿಲ್ಲ. ನನ್ನದು ಅತ್ಯಂತ ಕೊಳಕಾದ ಮನಸು. ಅದು ಅವನ ಬದುಕು, ಅವನ ಬಯಕೆ. ನನಗೆ ಸಂಬಂಧಿಸಿದ್ದಲ್ಲ.
ಅದೋ ನೋಡಲ್ಲಿ, ರಶ್ಮಿಯ ಆ ತುಂಬು ಸ್ತನಗಳು ಅವನನ್ನು ಹೇಗೆ ಉನ್ಮತ್ತವಾಗಿಸಿವೆ. ಎಷ್ಟು ಮುಟ್ಟಿದರೂ, ಹೇಗೆ ಮುಟ್ಟಿದರೂ ಅವನ ಬಯಕೆ ತೀರುತ್ತಿಲ್ಲ. ಹೇಗೆ ಖುಷಿಯ ಧಾಳಿಗೆ ಕಂಗಾಲಾಗಿ ಕಣ್ಣನ್ನು ಮುಚ್ಚುತ್ತಿದ್ದಾನೆ ನೋಡು. ಸುಖ ಸೂರೆಗೊಳ್ಳುವುದು ಅದೆಷ್ಟು ಬಗೆ. ಒಮ್ಮೆ ಮೃದುವಾಗಿ, ಒಮ್ಮೆ ಶಕ್ತಿಯನ್ನೆಲ್ಲಾ ಸೇರಿಸಿ ಕಠಿಣವಾಗಿ, ಮಗದೊಮ್ಮೆ ಹಾಗೇ ಸುಮ್ಮನೆ, ಇನ್ನೊಮ್ಮೆ...
ಬೇಡ, ಪ್ಲೀಜ್ ಬೇಡ. ಇವೆಲ್ಲಾ ಕೆಟ್ಟ ದೃಶ್ಯಗಳು ನನ್ನ ಕಣ್ಣಿಂದ ಮರೆಯಾಗಲಿ. ನನಗೆ ಸುಮ್ಮನೆ ಸುಖವಾಗಿ ನಿದ್ದೆ ಬರಲಿ. ಕನಸಿನಲ್ಲಿಯೂ ಅವನು ಬರುವುದು ಬೇಡ. ಇನ್ನೆಂದೂ ನನಗೆ ಅವನ ಸ್ಪರ್ಶವೂ ಬೇಡ, ನೆನಪೂ ಬೇಡ.


ನೋಡು ನೋಡು, ಕಾರ್ತೀಕ ಹೇಗೆ ಮುತ್ತಿನ ಮಳೆಗರೆಯುತ್ತಿದ್ದಾನೆ. ದೇಹದ ಯಾವ ಭಾಗವನ್ನೂ ಬಿಡುತ್ತಿಲ್ಲ. ಯಾವ ಮೂಲೆಗಳೂ ಅವನಿಗೆ ಅಸಹ್ಯ ಬರಿಸುವುದಿಲ್ಲ. ಬರೀ ಒಮ್ಮೆ ಮುತ್ತಿಟ್ಟರೆ ಬಯಕೆ ತೀರುವುದೂ ಇಲ್ಲ. ಮತ್ತೆ ಮತ್ತೆ, ಇನ್ನೊಮ್ಮೆ ಮಗದೊಮ್ಮೆ. ಮುತ್ತಿನ ಧಾಳಿಗೆ ನೋಡವಳು ಹೇಗೆ ಖುಷಿಯಿಂದ ನರಳುತ್ತಿದ್ದಾಳೆ. ತನ್ನ ಓರೆಕೋರೆಗಳನ್ನು ಅವನಿಗೆ ಅನುಕೂಲವಾಗುವಂತೆ ಹೇಗೆ ಒಪ್ಪಿಸುತ್ತಿದ್ದಾಳೆ. ಅವನಿಗೀಗ ಅರ್ಥವಾಗಿ ಹೋಗಿದೆ. ಇದು ಅಪ್ಪಟ ಬಂಗಾರ. ಅಪರಂಜಿ. ಇಷ್ಟು ದಿನ ಕಾಗೆ ಬಂಗಾರವನ್ನು ನಂಬಿದ್ದೆನಲ್ಲಾ ಎಂದು ಪಶ್ಚಾತ್ತಾಪವಾಗುತ್ತಿದೆ.

ಕಾರ್ತೀಕ್, ಪ್ಲೀಜ್, ಹಾಗನ್ನಬೇಡ. ಅದು ಅನ್ಯಾಯ. ಐ ಹೇಟ್ ಯು. ನನಗೂ ಚೂರು ಬದುಕಲು ಬಿಡು. ನನ್ನನ್ನು ಕ್ರಿಮಿಯಾಗಿ ನೋಡಬೇಡ. ನಾನೆಂದೂ ನಿನಗೆ ವಂಚನೆ ಮಾಡಿಲ್ಲ.
ಅವಳ ಗಂಜಲದ ಗುಂಡಿಯಲ್ಲಿ ಮುಖವಿಟ್ಟು ನಲಿಯುವ ಅವನಿಗೆ ಇನ್ನೆಂದೂ ಅವಳಿಂದ ರಹಸ್ಯಗಳನ್ನು ಮುಚ್ಚಿಡುವುದು ಸಾಧ್ಯವಿಲ್ಲ. ಒಂದೆರಡೇ ದಿನವಷ್ಟೇ! ಎಲ್ಲವನ್ನೂ ಹೇಳಿ ಬಿಡುತ್ತಾನೆ. ನಿನ್ನ ವಿಕೃತಿಗಳನ್ನೆಲ್ಲಾ ತೆರೆದಿಟ್ಟುಬಿಡುತ್ತಾನೆ. ಅದೆಷ್ಟು ಸಿಲ್ಲಿ ಎಂದು ನಗುತ್ತಾನೆ. ಅವಳಿಗೆ ಅಚ್ಚರಿ, ಅಸಹ್ಯ. ನೀನೀಗ ಅವಳ ಕಣ್ಣಲ್ಲಿ ಕ್ಷುಲ್ಲಕ. ಮುಂದೆ ಎಲ್ಲೇ ನಿನ್ನ ನೋಡಿದರೂ ಸಾಕು, ಮುಸಿ ಮುಸಿ ನಗಲು ಶುರುವಿಡುತ್ತಾಳೆ. ಅವನೂ ಆ ನಗುವಿಗೆ ಪ್ರೋತ್ಸಾಹ ಕೊಡುತ್ತಾನೆ. ಅವಳು ತನ್ನ ನಗುವಿನ ಕಾರಣವನ್ನು ಉಳಿದವರಿಗೂ ಹೇಳಿಬಿಡುತ್ತಾಳೆ. ಅವರೂ ನಗುತ್ತಾರೆ. ನೀನು ಹೊರಗೆ ಕಾಲಿಟ್ಟರೆ ಸಾಕು, ತಮಾಷೆ, ನಗು ನಿನ್ನನ್ನು ಅಟ್ಟಿಸಿಕೊಂಡು ಬರುತ್ತವೆ. ನೀನು ಇಂದಿನಿಂದ ಸಮಾಜದ ಬಹು ದೊಡ್ಡ ಕುಚೋದ್ಯವಾಗುತ್ತೀಯ. ದಿನದಿನಕ್ಕೆ ನಿನ್ನ ಅಂತಃಶಕ್ತಿ ಕುಸಿಯುತ್ತದೆ. ದೇಹ ಹಿಡಿಯಾಗುತ್ತದೆ. ಬೇಕಿದ್ದರೆ ನೋಡುತ್ತಿರು, ಕೆಲವೇ ದಿನಗಳಲ್ಲಿ ನೀನು ನಿಶ್ಯೇಷನಾಗುತ್ತೀಯ. ಆದರೆ ಅದಕ್ಕೆ ಯಾರಿಗೂ ಬೇಸರವಾಗುವುದಿಲ್ಲ. ಏಕೆಂದರೆ ಯಾರಿಗೂ ನೀನು ಮಹತ್ವದವನಲ್ಲ. ಕ್ಷುಲ್ಲಕ ಹುಳು. ಬೇಡದ ಕ್ರಿಮಿ. ಪಟ್ಟೆಂದು ಕೈಯಲ್ಲಿ ಹೊಡೆದು ಸಾಯಿಸಿದರೆ ಅವರಿಗೆ ಕಿರಿಕಿರಿ ಕಡಿಮೆ.


ಇಲ್ಲ, ಇಲ್ಲ. ನಾನೂ ಬದುಕುತ್ತೀನಿ. ನನಗೂ ಅವಕಾಶ ಕೊಡಿ. ಈ ಕಾಮದ ಸಹವಾಸವೇ ಬೇಡ. ಅದು ಬರೀ ನೋವನ್ನು ಕೊಡುತ್ತದೆ. ಸುಮ್ಮನೆ ಬದುಕುತ್ತೇನೆ. ಊಟ, ಕೆಲಸ, ನಿದ್ದೆ. ಅಷ್ಟೇ! ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡಿ. ಎಷ್ಟೇ ನೋವಾದರೂ ಚಿಂತೆಯಿಲ್ಲ, ಕಾಮದಿಂದ ದೂರವಿರುತ್ತೇನೆ. ಕಾಮವನ್ನು ಜಯಿಸಿ ಬದುಕುತ್ತೇನೆ. ನಿನ್ನ ಸೃಷ್ಟಿಯನ್ನೇ ವಿರೋಧಿಸುತ್ತೇನೆ.

ಅಯ್ಯೋ ಮೂರ್ಖ, ಸಲ್ಲದ ಸಂಗತಿಗಳನ್ನು ಧ್ಯಾನಿಸಬೇಡ. ಸುಮ್ಮನೆ ಮನಸ್ಸಿನಲ್ಲಿ ಕಾರ್ತೀಕನ ಬೆತ್ತಲೆ ದೇಹದ ಕಲ್ಪನೆಗೇ ಹೇಗೆ ನಿನ್ನ ಮೈಯೆಲ್ಲಾ ಉದ್ರೇಕದಿಂದ ಉನ್ಮತ್ತವಾಗಿದೆ ನೋಡು. ಅವನ ಒಂದು ನಗೆ ಸಾಕು, ನಿನ್ನ ಎಲ್ಲಾ ನಿರ್ಧಾರಗಳನ್ನು ಅಲ್ಲಾಡಿಸಿಬಿಡಲು. ಅವನ ಒಂದು ನಡೆ ಸಾಕು, ನಿನ್ನನ್ನು ಅವನ ದಾಸನನ್ನಾಗಿ ಮಾಡಲು. ಅವನ ಕಡೆದಿಟ್ಟ ನಿಲುವು ಸಾಕು, ನಿನ್ನತನವನ್ನು ನಿರ್ನಾಮ ಮಾಡಲು. ಬರೀ ಅವನ ಆಳಾಗಲು ಸರಿ ನೀನು. ಅವನು ಹೇಳಿದ್ದನ್ನು ಮಾಡುತ್ತಾ, ಅವನು ಹೊಡೆದರೆ ಹೊಡೆಸಿಕೊಳ್ಳುತ್ತಾ, ಬಯ್ದರೆ ಬೈಸಿಗೊಳ್ಳುತ್ತಾ, ಎಂದಾದರೊಮ್ಮೆ ನಿನ್ನನ್ನು ಪ್ರೀತಿಯಿಂದ ಮುಟ್ಟಿಯಾನೋ ಎಂಬ ಬಯಕೆಯಲ್ಲಿ ಕಾದು ಕಾದು ಕಾದು... ಊಹೂಂ, ಅವನು ನಿನ್ನ ಕಾಡುತ್ತಲೇ ಹೋಗುತ್ತಾನೆ. ನಿನ್ನ ಬೆಳಗು, ಮಧ್ಯಾಹ್ನ, ರಾತ್ರಿಗಳಲ್ಲೆಲ್ಲಾ ಕೈಗೆ ಸಿಗದಂತೆ ನಿನ್ನನ್ನು ಆಟವಾಡಿಸುತ್ತಾನೆ. ಹಿಡಿಯಲು ಹೋಗಿ ಹೋಗಿ ಸಿಗದೆ ಹತಾಶನಾಗಿ ನೀನು ನಿತ್ರಾಣವಾಗುತ್ತೀಯ. ಅವನು ಬೇಕೇ ಬೇಕೆಂದು ಗೋಗರೆಯುತ್ತೀಯ. ದುಃಖ ಪಡುತ್ತೀಯ. ಆದರೆ ನಿನ್ನ ದುಃಖ ಯಾರಿಗೂ ಅರ್ಥವಾಗುವುದಿಲ್ಲ. ಅದು ತಮಾಷೆಯ ಸಂಗತಿಯಾಗುತ್ತದೆ. ದುಃಖವೇ ತಿಳಿಯದವರ ಮುಂದೆ ಅದು ಹೇಗೆ ನೋವನ್ನು ತೋಡಿಕೊಳ್ಳುತ್ತೀಯ? 

ಅಪ್ಪ, ಅಮ್ಮ, ಅಕ್ಕ, ಅಣ್ಣ, ಸ್ನೇಹಿತ, ಸಹೋದ್ಯೋಗಿ, ಗುರು, ಸೇವಕ, ಸಮಾಜ, ಕೋರ್ಟು, ಕಛೇರಿ, ಜಗತ್ತು – ಊಹೂಂ, ಯಾರೂ ನಿನ್ನನ್ನು ಒಪ್ಪುವುದಿಲ್ಲ. ಎಲ್ಲರ ಕಣ್ಣಲ್ಲಿಯೂ ನೀನು ಪರಮ ನೀಚ. ಯಾರಿಗೂ ನಿನ್ನ ಮೇಲೆ ಹನಿ ಕನಿಕರವೂ ಮೂಡುವುದಿಲ್ಲ. ಯಾವುದೇ ಕಟಕಟೆಯಲ್ಲಿ ನಿಂತು ಗೋಗರೆದರೂ ನೀನು ತಪ್ಪಿತಸ್ಥನಾಗುತ್ತೀಯ.

ಬೇಡ, ಬೇಡ. ಈ ಕೆಟ್ಟ ಆಲೋಚನೆಗಳು ನನಗೆ ಬೇಡ. ನನಗೆ ಒಂದಿಷ್ಟು ನಿದ್ದೆ ಸಾಕು. ಹೇ ಕೃಷ್ಣಾ, ನಿನ್ನನ್ನು ಮನಃಪೂರ್ವಕವಾಗಿ ಆರಾಧಿಸಿದ್ದೇನೆ, ಪ್ರೀತಿಸಿದ್ದೇನೆ. ನಿನ್ನ ಈ ಗೋಪಬಾಲನಿಗೆ ಇಂತಹ ಕಠಿಣ ಶಿಕ್ಷೆ ಕೊಡಬೇಡ. ಕಾಪಾಡು. ಒಂದಿಷ್ಟಾದರೂ ಕರುಣೆ ತೋರು. ನೋವಿನ ಮಡುವಿನಲ್ಲಿ ಮುಳುಗುತ್ತಿರುವ ನನಗೆ ನಿನ್ನ ರಕ್ಷಣೆ ಒದಗಿಸು. ಬೇಡವೆನ್ನಿಸಿದರೆ ನನ್ನನ್ನು ಈ ಕ್ಷಣದಲ್ಲಿಯೇ ನಿರ್ನಾಮ ಮಾಡಿಬಿಡು. ನಿನ್ನೆಡೆಗೆ ಕರೆದುಕೊಂಡು ಬಿಡು. ಸತ್ತರೆ ಅಳುವವರು ಯಾರೂ ಇಲ್ಲವೋ ತಂದೆ. ಜೀವ ಹಿಂಡುವ ನೋವೂ ಪರರ ಕಣ್ಣಲ್ಲಿ ಕ್ಷುಲ್ಲಕವಾಗುವ ಈ ಹೀನ ಅವಸ್ಥೆ ನನಗೆ ಅದೇಕೆ ಕೊಟ್ಟಿರುವೆಯೋ ಗೆಳೆಯ. ಯಾರು ಮಾಡಿದ ಪಾಪಕ್ಕೆ ನನಗೆ ಈ ಶಿಕ್ಷೆಯೋ ಮಿತ್ರ?

ಹೋಗಲಿ ಬಿಡು, ನೀನು ಸಹಾಯ ಮಾಡುವುದಿಲ್ಲವಲ್ಲವೆ? ಸುಮ್ಮನೆ ಕೆಲಸಕ್ಕೆ ಬಾರದ ಆ ಕೊಳಲನ್ನೂದುತ್ತಿರುವೆಯಲ್ಲವೆ? ನನ್ನ ನೋವಿಗೆ ನಾನು ಪರಿಹಾರ ಕಂಡುಕೊಳ್ಳುತ್ತೇನೆ. ನನಗೆ ತಿಳಿದಂತೆ ನಾನು ವರ್ತಿಸುತ್ತೇನೆ. ಇಕೋ ನೋಡಲ್ಲಿ, ಫಳ ಫಳ ಹೊಳೆಯುವ ಚಾಕು. ನೀನು ಸೃಷ್ಟಿಸಿದ ದೇಹವನ್ನು ಹೇಗೆ ಕತ್ತರಿಸುತ್ತಿದೆ ನೋಡು. ಹೆಬ್ಬರಳಿನ ತುದಿಯನ್ನು ಕತ್ತರಿಸಲು ಅದಕ್ಕೆ ಎಷ್ಟೊಂದು ಉತ್ಸಾಹ ನೋಡು. ಅಕೋ ನೋಡಲ್ಲಿ, ಬಳಬಳನೆ ರಕ್ತ ಸುರಿಯುತ್ತಿದೆ. ನನ್ನ ರಕ್ತವೂ ಕಾರ್ತೀಕನದಂತೆ ಕೆಂಪಗಿದೆಯೋ, ಅನುಮಾನ ಬೇಡ. ನಿನಗೆ ನಂಬಿಕೆಯಾಗುತ್ತಿಲ್ಲವಲ್ಲವೆ? ತೊಗೋ, ಅದರದೇ ಅಭಿಷೇಕ ನಿನಗೆ. ಬರೀ ಹಾಲು, ಮೊಸರು, ಜೇನುತುಪ್ಪಗಳ ಸ್ನಾನವನ್ನು ಈವರೆಗೆ ಮಾಡಿದ್ದಿಯಲ್ಲವೇ? ಈ ದಿನ ರಕ್ತದ ರುಚಿಯನ್ನು ನೋಡು. ಬಿಡು ಬಿಡು, ಅದೂ ನಿನಗೆ ಹೊಸತಲ್ಲ. 

ಪ್ರತಿಬಾರಿ ಅವತಾರವೆತ್ತಿ ಈ ಭೂಮಿಗೆ ಬಂದಾಗಲೂ ರಕ್ತದೋಕಳಿಯಲ್ಲಿ ಮುಳುಗಿ ತೇಲಿದ್ದೀಯ. ದುಷ್ಟ ಸಂಹಾರವೆಂದು ಕರೆದು ನಿನ್ನ ಮರ್ಯಾದೆ ಉಳಿಸಿಕೊಂಡಿದ್ದೀಯ. ಹತ್ತು ಅವತಾರ ಮುಗಿಸಿದ್ದೀಯಲ್ಲವೆ? ಅದರ ಬಗ್ಗೆ ಅಪಾರ ಹೆಮ್ಮೆ ನಿನಗಿದೆಯಲ್ಲವೆ? ಹನ್ನೊಂದನೆಯ ಅವತಾರಕ್ಕೆ ತುದಿಗಾಲಲ್ಲಿ ನಿಂತಿದ್ದೀಯಲ್ಲವೆ? ಹಾಗಿದ್ದರೆ ನಿನಗೊಂದು ಶಾಪ ಕೊಡುತ್ತಿದ್ದೇನೆ. ಸ್ವೀಕರಿಸು. ನಿನ್ನ ಹನ್ನೊಂದನೆಯ ಅವತಾರದಲ್ಲಿ ನನ್ನಂತೆ ಹುಟ್ಟು. ಹದಿನಾರು ಸಾವಿರ ಹೆಣ್ಣುಗಳನ್ನು ಅನುಭೋಗಿಸಿದ ನಿನಗೆ ಒಂದೂ ಹೆಣ್ಣನ್ನು ಮುಟ್ಟಲಾಗದ ದುಃಖ, ಅಸಹಾಯಕತೆಯ ಅರಿವಾಗಲಿ. ಯಾರನ್ನೂ ಕೈ ಎತ್ತಿ ಹೊಡೆಯಲೂ ಸಾಧ್ಯವಾಗದ ಈ ನಿತ್ರಾಣ ಬದುಕಿನಲ್ಲಿ ಅದು ಹೇಗೆ ದುಷ್ಟ ಸಂಹಾರ ಮಾಡುತ್ತೀಯೋ ನಾನೂ ನೋಡುತ್ತೇನೆ. ನೊಂದ ಮನಸ್ಸಿನ ಶಾಪ ನಿನಗೆ ತಟ್ಟಿಯೇ ತೀರುತ್ತದೆ. ಮತ್ತೊಮ್ಮೆ ಹುಟ್ಟಿ ಬಾ. ಜನರ ಕಣ್ಣುಗಳಲ್ಲಿ ಕ್ಷುಲ್ಲಕನಾಗು. ಇನ್ನೊಬ್ಬರಿಗೆ ತಟ್ಟದ ನೋವನ್ನು ಏಕಾಂಗಿಯಾಗಿ ಅನುಭವಿಸು."

- ವಸುಧೇಂದ್ರ.


" ಈ 'ಮೋಹನಸ್ವಾಮಿ'ಯನ್ನ ಬರೆದ ನಂತರ ನಾನು ನನ್ನ ಅನೇಕ ಹಿಂದಿನ ಹಿರಿಯ ಓದುಗರನ್ನ ಏಕಾಏಕಿ ಕಳೆದುಕೊಂಡೆನಾದರೂ ಹದಿವಯಸ್ಸಿನ ಹೊಸ ಓದುಗರನೇಕರು ಈಗ ನನ್ನ ಅಭಿಮಾನಿ ಓದುಗರಾಗಿದ್ದರೆ" ಎನ್ನುವ ವಸುಧೇಂದ್ರರು ಮೂಲತಃ ಅನುವಾದಕರಾಗಿ ಬರಹ ಪ್ರಪಂಚಕ್ಕೆ ಕಾಲಿಟ್ಟವರು. ಅವರು ಅನುವಾದಿಸಿದ ತೆಲುಗಿನ ಕೃತಿ ಶ್ರೀರಮಣರ ಮಿಥುನದ ಯಶಸ್ಸು ಅವರನ್ನ ಗಂಭೀರವಾಗಿ ಬರಹ ಕ್ಷೇತ್ರದಲ್ಲಿ ಕಾಲೂರುವಂತೆ ಮಾಡಿತು. ೧೯೯೭ರ ಸಾಲಿನ 'ಅಂಕಿತಾ - ವಿಜಯ ಕರ್ನಾಟಕ' ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ತನ್ನದಾಗಿಸಿಕೊಂಡ ನಂತರ ಅವರು ಸಾಹಿತ್ಯ ಕ್ಷೇತ್ರದಲ್ಲಿ ಏಕಾಏಕಿ ಆಕರ್ಷಣೆಯನ್ನ ಪಡೆದರು. ಅನಂತರ ಅವರು ಬರೆದ್ದದ್ದನ್ನೆಲ್ಲ ಕನ್ನಡಿಗ ಓದುಗರು ಆದರಭಿಮಾನಗಳಿಂದ ಸ್ವೀಕರಿಸಿ ಮನ್ನಿಸಿದ್ದಾರೆ.


ಕಳೆದ ಎರಡು ವರ್ಷಗಳಿಂದ ಸಾಹಿತ್ಯಕ್ಕೆ ತಮ್ಮನ್ನ ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ವಸುಧೇಂದ್ರ ತಮ್ಮ ಆರಂಭಿಕ ಪ್ರಕಟಣೆಯನ್ನ ಹೊರತರುವ ಕಸರತ್ತಿನಿಂದ ಬೇಸತ್ತು, ಅದೆ ಬಗೆಯ ತೊಂದರೆ ಅನುಭವಿಸುವ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 'ಛಂದ ಪುಸ್ತಕ'ವನ್ನ ಆರಂಭಿಸಿದ್ದಾರೆ. ಆವರದ್ದೆ ನಾಲ್ಕು ಕಥಾ ಸಂಕಲನ, ಐದು ಸುಲಲಿತ ಪ್ರಬಂಧ ಸಂಗ್ರಹ, ಒಂದು ಕಾದಂಬರಿ, ಕೇಳುವ ಪುಸ್ತಕ ಹಾಗೂ ಬ್ರೈಲ್ ಕಾದಂಬರಿಗಳ ಜೊತೆಗೆ ಹೆಚ್ಚು ಕಡಿಮೆ ಐವತ್ತರ ತನಕ ಇನ್ನಿತರ ನವ ಬರಹಗಾರರ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಸಾಹಿತ್ಯ ಸಮ್ಮೇಳನಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಅವರ "ಛಂದ ಪುಸ್ತಕ"ದ ಮಳಿಗೆಯನ್ನ ಅಲ್ಲಿ ಕಾಣಬಹುದು.

ಮೂಲತಃ ಬಿಸಿಲ ನಾಡು ಬಳ್ಳಾರಿಯ ಸಂಡೂರಿನವರಾದ ವಸುಧೇಂದ್ರರ ಬರಹಗಳ ಸಾಮಾನ್ಯ ಆಡುನುಡಿ ಬಳ್ಳಾರಿಯ ಆಡುಗನ್ನಡದ ಧಾಟಿಯಲ್ಲಿಯೆ ಇರುತ್ತವೆ ಹಾಗೆಯೆ ಅವರು ಬಳಸುವ ಪಾರಿಭಾಷಿಕ ಪದಗಳೂ ಸಹ ಬಳ್ಳಾರಿ ಸೀಮೆಯ ಘಮವನ್ನೆ ಹೊಂದಿರುತ್ತವೆ. ಸುರತ್ಕಲ್'ನ ಕರ್ನಾಟಕ ಕೇಂದ್ರೀಯ ತಂತ್ರಜ್ಞ ಸಂಸ್ಥೆಯಲ್ಲಿ ಬಂಗಾರದ ಪದಕದೊಂದಿಗೆ ತಮ್ಮ ಬಿ'ಟೆಕ್ ಮುಗಿಸಿದ ಅವರು ಅನಂತರ "ಭಾರತೀಯ ವಿಜ್ಞಾನ ಸಂಸ್ಥೆ"ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಸಾಹಿತಿಯಾಗಿ ಗುರುತಿಸಿಕೊಳ್ಳುವುದಕ್ಕೂ ಮೊದಲು ಎರಡು ದಶಕಗಳ ಸುದೀರ್ಘ ಗಣಕ ತಂತ್ರಜ್ಞನಾಗಿ ದುಡಿದ ಅನುಭವವಿರುವ ಅವರು ಅನೇಕ ಬಹುರಾಷ್ಟ್ರೀಯ ಸಂಶ್ತೆಗಳಲ್ಲಿ ತಂತ್ರಜ್ಞನಾಗಿ ದುಡಿದಿದ್ದಾರೆ. "ಝೆನೆಸಿಸ್ ಸಾಫ್ಟ್'ವೇರ್" ಸಂಸ್ಥೆಯ ಉಪಾಧ್ಯಕ್ಷರಾಗಿಯೂ ದುಡಿದಿದ್ದಾರೆ.

ಮೋಹನಸ್ವಾಮಿ ಮೂಲತಃ ಒಂದು ಕಥಾ ಸಂಗ್ರಹ. ಇದರ ಬಹುತೇಕ ಕಥೆಗಳು ಮಾತನಾಡುವುದು ಸಲಿಂಗ ಸಂಬಂಧಗಳ ಕುರಿತು. ಬಹುತೇಕ ಆತ್ಮ ನಿವೇದನೆಯ ಧಾಟಿಯಲ್ಲಿರುವ ಕಥೆಗಳನ್ನ ಬರೆದ ಲೇಖಕರ ಕೆಚ್ಚನ್ನ ನಾವು ಮೆಚ್ಚದಿರಲು ಕಾರಣಗಳೆ ಇಲ್ಲ. ಇಬ್ಬರು ಗಂಡಸರ ನಡುವೆ ಕಾಮದ ಸಂಬಂಧ ಇರಬಹುದು, ಸಮ ಲಿಂಗಿಗಳ ಮಧ್ಯೆ ದೈಹಿಕ ಸಂಬಂಧ ನಡೆದಿರಬಹುದು ಎನ್ನುವುದನ್ನ ಕಲ್ಪಿಸಿಕೊಳ್ಳಲೂ ಅರಿಯದ ಮನಸ್ಸುಗಳು ಇದರ ಬಗ್ಗೆ ಮೂಗು ಮುರಿದರೆ, ಇದೆಲ್ಲದರ ಸ್ಪಷ್ಟ ಅರಿವಿಟ್ಟುಕೊಂಡೆ ತಾವೂ ಅಲ್ಲೊಮ್ಮೆ ಇಲ್ಲೊಮ್ಮೆ ಅದರ ಸವಿ ಅನುಭವಿಸಿದ್ದರೂ ಸಹ ಆಶಾಡಭೂತಿಗಳಂತೆ ಇಂತಹ ಕೃತಿಗಳನ್ನ ಹಿಯ್ಯಾಳಿಸುವವರ ಗುಂಪೊಂದು ಸಾಹಿತ್ಯದ ಸೃಜನಶೀಲರ ನಡುವೆ ಒಂದಿದೆ. ಹೀಗಾಗಿಯೆ ಬಹುಷಃ ಕನ್ನಡದ ಯಾವೊಂದು ವೃತ್ತ ಪತ್ರಿಕೆಗಳೂ ಈ ಪುಸ್ತಕವನ್ನ ವಿಮರ್ಶಿಸುವ ಗೋಜಿಗೆ ಹೋಗಿಲ್ಲ! ಈ ಬಗ್ಗೆ ಸ್ವತಃ ವಸುಧೇಂದ್ರರಿಗೂ ವಿಷಾದವಿದೆ.


ಈ ಅಸ್ಪರ್ಶ್ಯತೆ ಹಾಗೂ ಹುಸಿ ಮಡಿವಂತಿಕೆಗಳ ನಾಟಕವದೇನೆ ಇರಲಿ ಪ್ರೇಮ ಹಾಗೂ ಕಾಮದ ಅಸಲಿಯತ್ತನ್ನ ಹಸಿಹಸಿಯಾಗಿಯೆ ಓದುಗರ ಮನಸ್ಸಿಗೆ ದಾಟಿಸುವ ಲೇಖಕರ ಒಳ ಉದ್ದೇಶ ಹಾಗೂ ಇದರಿಂದ ಸಾಮಾಜಿಕವಾಗಿ ಎದುರಾಗಬಹುದಾದ ತಿರಸ್ಕಾರಗಳನ್ನ ಮುಲಾಜಿಲ್ಲದೆ ಉಪೇಕ್ಷಿಸಿ ಮುನ್ನಡೆಯುವ ಅವರ ಆತ್ಮಸ್ಥೈರ್ಯ ಮಾತ್ರ ಅಭಿನಂದನೀಯ. ಇದು ಕೇವಲ ಪುಸ್ತಕ ಪರಿಚಯವಾಗಿರುವುದರಿಂದ ವಿಸ್ಕೃತವಾಗಿ ಇದರ ಪ್ರತಿಯೊಂದು ಕಥೆಯನ್ನೂ ನಾನು ವಿಮರ್ಶಿಸಲು ಹೋಗಿಲ್ಲ. ಅವರವರ ಲೈಂಗಿಕ ಅಭಿರುಚಿಗಳು ಅವರವರವೆ ಖಾಸಗಿ ವಿಷಯಗಳು. ಅದರಲ್ಲಿ ಮೂಗು ತೂರಿಸಿ ವಿಕೃತವಾಗಿ ಅದನ್ನ ವಿಶ್ಲೇಷಿಸುವ ಮನಸ್ಸುಗಳೆಲ್ಲ ಒಂದು ಬಾರಿಯಾದರೂ "ಮೋಹನಸ್ವಾಮಿ"ಯನ್ನ ಓದಬೇಕು ಹಾಗೂ ಬಹಿರಂಗವಾಗಿ ಆ ಕೃತಿಯ ಬಗ್ಗೆ ಚರ್ಚಿಸುವ ಛಾತಿಯನ್ನ ಬೆಳೆಸಿಕೊಳ್ಳಬೇಕು. ಆದರೆ ಈ ಹೇಳಿಕೆ ಈಗಾಗಲೆ ಕದ್ದುಮುಚ್ಚಿ ಇದನ್ನ ಓದಿದ್ದರೂ ಸಹ ಏನೂ ಅರಿಯದ ಸುಭಗರಂತೆ ಸೋಗು ಹಾಕುವ ತೋರಿಕೆಯ ಸುಸಂಸ್ಕೃತರಿಗೆ ಖಂಡಿತಾ ಅನ್ವಯಿಸುವುದಿಲ್ಲ!" 

ಪುಸ್ತಕದೊಳಗೆ - ೧೦



( ಬರಹ; ರೂಪಾಲಕ್ಷ್ಮಿ.)

"ಆಡುಕಳ"

(ಕಾದಂಬರಿ)

ಬರೆದಿರುವವರು; ಶ್ರೀಧರ ಬಳಗಾರ,
ಪ್ರಕಾಶಕರು; ಅಂಕಿತ ಪುಸ್ತಕ,
ಪ್ರಕಟಣೆ; ೨೦೧೪,
ಕ್ರಯ; ರೂಪಾಯಿ ೧೫೦.

ಮದ್ಗುಣಿ ಡಾಕ್ಟರ್ ಜೊತೆಗೆ ಅಟ್ಟದ ಕೋಣೆಗೆ ಬಂದ. ದಶರಥ ಕೈ ಮುಗಿಯುತ್ತ ಎದ್ದು ಕುಳಿತ. "ನಿನ್ನೆಗಿಂತ ಹೆಚ್ಚು ಲವಲವಿಕೆ ಕಾಣ್ತದೆ. ಶರೀರದ ಸೂಕ್ಷ್ಮ ಭಾಗ ಅದು. ಗಾಯ ನಿಧಾನ ಮಾಯಬೇಕು. ನಿಮ್ಮ ನಸೀಬು ಚಲೋ ಇತ್ತು. ಸರಿ ಹೊತ್ತಿಗೆ ಗಂಗಣ್ಣನ ಕಣ್ಣಿಗೆ ಬೀಳದಿದ್ದರೆ ಇನ್ನೂ ಹೆಚ್ಚು ಬ್ಲೀಡಿಂಗ್ ಆಗಿ ಜೀವಕ್ಕೆ ಅಪಾಯವಿತ್ತು." ದಶರಥನ ಬೆನ್ನು ತಟ್ಟಿ ಭರವಸೆ ಮೂಡಿಸಿದರು. "ಡಾಕ್ಟ್ರೆ, ದಶರಥನಿಗೆ ಎಮ್ಮೆ ಚಿಂತೆ! ಮನೇದೆ ಧ್ಯಾನ!" ಎಂದು ಗಂಗಣ್ಣ ಮದ್ಗುಣಿಯವರಿಂದ ಸಲಹೆ ಬರಲೆಂದು ನಿರೀಕ್ಷಿಸಿದ. 

ಮದ್ಗುಣಿಯವರು ಒಳವಸ್ತ್ರವನ್ನು ಕಳಚಲು ಹೇಳಿದರು. ಕೋಣೆಯಲ್ಲಿ ನಸುಗತ್ತಲಿರುವುದರಿಂದ ಹೆಚ್ಚು ನಾಚದೆ ದಶರಥ ಬಟ್ಟೆ ಬಿಚ್ಚಿದ. ದೀಪ ಹಾಕಿದರು. ದಶರಥ ತನ್ನ ನಗ್ನತೆಗೆ ತಾನೆ ಅಳುಕಿ ಕತ್ತು ಹೊರಳಿಸಿದ. ಸುತ್ತ ಬಿಗಿದ ಬ್ಯಾಂಡೇಜ್ ನ್ನು ನಾಜೂಕಾಗಿ ಬಿಡಿಸಿದರು. "ಗಾಯ ಒಣಗ್ತಾ ಇದೆ. ನೀರು ತಗಲಬಾರ್ದು, ಇನ್ನೆರಡು ದಿವಸ ಸ್ನಾನ ಬೇಡ" ಎಂದರು.

"ಡಾಕ್ಟರೆ ನನಗೆ ಈ ಗಾಯ ದೊಡ್ಡದಲ್ಲ, ಆ ಕಳ್ಳರ ಭಯವೂ ಅಷ್ಟೆಲ್ಲಾ ಕಾಡೋದಿಲ್ಲ. ಆ ಎಮ್ಮೆ ಕರು ಮಾಡಿದ ಹಲ್ಕಟ್ ದಂಧೆ ನೋಡಿ ತಲೆ ಎತ್ಕಂಡು ತಿರಗಾಡೋದೆ ಕಷ್ಟ" ದಶರಥ ಔಷಧಿಯೆ ಇಲ್ಲದ ತನಗಾದ ಅವಮಾನವನ್ನು ನೆನಪಿಸಿಕೊಂಡು ಸಂಕಟಪಟ್ಟ. "ನಾಚುವಂತಾದ್ದು ಏನಿದೆ ಅದ್ರಲ್ಲಿ? ನಾ ಬರೆದ ಮದ್ದು ಚಾಲೂ ಇರ್ಲಿ, ಒಂದು ವಾರದ ನಂತರ ಮತ್ತೆ ನೋಡ್ತೇನೆ" ಮದ್ಗುಣಿಯವರು ಅವನಿಗೆ ಬಟ್ಟೆ ಹಾಕಲು ಹೇಳಿ ಹೊರನಡೆದರು.

- ಶ್ರೀಧರ ಬಳಗಾರ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಳಗಾರ ಊರಿನ ಶ್ರೀಧರ್ ಅವರ ಎರಡನೆಯ ಕಾದಂಬರಿ ಇದು. ಕುಮಟಾದ ಕಮಲಾಬಾಳಿಗ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕ. ‘ಅಧೋಮುಖ (೧೯೯೫), ‘ಮುಖಾಂತರ (೧೯೯೮), ‘ಇಳೆ ಎಂಬ ಕನಸು’ (೨೦೦೩), ‘ಒಂದು ಫೋಟೋದ ನೆಗೆಟಿವ್’ (೨೦೦೮) ‘ಅಮೃತಪಡಿ’ (೨೦೧೧) ಕಥಾ ಸಂಕಲನಗಳು, ‘ಕೇತಕಿಯ ಬನ’ (೨೦೦೩) ಕಾದಂಬರಿ - ‘ರಥ ಬೀದಿ’ ಮತ್ತು ‘ಕಾಲ ಪಲ್ಲಟ’ ಅಂಕಣ ಬರಹಗಳು. ಕೆಲವು ಕಥೆಗಳು ಇಂಗ್ಲೀಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ.

ಎರಡು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್ ಅನಂತಮೂರ್ತಿ ಕಥಾ ಪ್ರಶಸ್ತಿ, ದ.ರಾ.ಬೇಂದ್ರೆ ಸ್ಮಾರಕ ಸಾಹಿತ್ಯ ಪುರಸ್ಕಾರ, ವಾರಂಬಳ್ಳಿ ಪ್ರತಿಷ್ಠಾನ ಕಥಾ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಡಾ.ಬೆಸಗರಹಳ್ಳಿ ರಾಮಣ್ಣ ಸಂಸ್ಮರಣಾ ಸಾಹಿತ್ಯ ಪ್ರಶಸ್ತಿ, ಅಜೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ ಮತ್ತು ‘ಅಮ್ಮ’ ಪ್ರಶಸ್ತಿ ಪುರಸ್ಕೃತರು.

ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆಯುವ ಘಟನೆಗಳು ಇಡೀ ಊರನ್ನು / ಊರಿನ ಜನರನ್ನು ಒಳಗೊಳ್ಳುವ ಬಗೆ, ಬದುಕಿನ ತಲ್ಲಣಗಳು, ದೂರದೃಷ್ಟಿ, ದುರಾದೃಷ್ಟಿಯ ಮನುಷ್ಯನ ಆಲೋಚನೆಗಳು ದಿಗಿಲನ್ನುಂಟುಮಾಡುತ್ತವೆ. ‘ಆಡುಕಳ’ ಎಂಬ ಫಲವತ್ತಾದ ಭೂಮಿಯ ಆಸೆಗೆ, ಅದರ ಮಾಲೀಕನನ್ನು ತುಳಿಯುವ, ಆತನನ್ನು ಬದುಕಿನಿಂದಲೇ ವಿಮುಖಗೊಳಿಸುವ ಪ್ರಯತ್ನ ಹೇಸಿಗೆ ಹುಟ್ಟಿಸಿದರೂ, ಯಾವುದೂ ಇಲ್ಲಿ ಅನಿರೀಕ್ಷಿತವಲ್ಲ, ಅಸಾಧ್ಯವಲ್ಲ. ಹಿಂದಿನಿಂದಲೂ ಪ್ರಬಲರು ದುರ್ಬಲರನ್ನು ತುಳಿಯುವುದು ಇದ್ದೇ ಇದೆ ಎನ್ನುವ ಒಂದು ರೀತಿಯ ನಿರಾಳ?! ಮನಸ್ಥಿತಿಯನ್ನು ಉಂಟು ಮಾಡಿಬಿಡುವ ಕಾದಂಬರಿ. ಪಾತ್ರ ರಚನೆ, ಅವುಗಳ ಸಂಭಾಷಣೆ ಎಲ್ಲೋ ಒಂದು ಕಡೆ ‘ತೇಜಸ್ವಿ’ಯವರ ‘ಕರ್ವಾಲೋ’ ವನ್ನು ನೆನಪಿಸಿಬಿಡುತ್ತವೆ. ಕೊನೆಯವರೆಗೂ ಎಲ್ಲಾ ಪಾತ್ರಗಳು ಮನಸ್ಸಿನಲ್ಲಿ ಕಾಡಿಬಿಡುತ್ತವೆ ಕಾದಂಬರಿ ಮುಗಿದ ಮೇಲೂ.

ಪುಸ್ತಕದೊಳಗೆ - ೯





"ಕಾಗದದ ದೋಣಿ"

( ಯಾನ ಒಂದು ಹಾಗೂ ಎರಡು.)

ಲೇಖಕ; ಮಧುಸೂದನ ಪೆಜತ್ತಾಯ,
ಪ್ರಕಾಶಕರು; ದೇಸಿ ಪುಸ್ತಕ,
ಪ್ರಕಟಣೆ; ೨೦೧೨,
ಕ್ರಯ; ರೂಪಾಯಿ ೧೮೦*೨.


 " ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗ ಶಂಭು ಎಂಬ ಹುಡುಗನೊಬ್ಬ ನಮ್ಮ ಕ್ಲಾಸಿಗೆ ಸೇರಿಕೊಂಡ. ಆತನು ದೂರದ ಮಹಾರಾಷ್ಟ್ರದ ನಾಸಿಕ ಎಂಬ ಊರಿನಿಂದ ಬಂದು ನಮ್ಮ ಶಾಲೆಗೆ ಸೇರಿಕೊಂಡಿದ್ದ. ಆತ ಪ್ರಾಯದಲ್ಲಿ ನನಗಿಂತ ನಾಲ್ಕು ವರ್ಷ ದೊಡ್ಡವನಾಗಿದ್ದು, ನನಗಿಂತ ಒಂದು ಅಡಿ ಎತ್ತರವಾಗಿದ್ದ. ನಮ್ಮ ಕ್ಲಾಸಿನ ಎಲ್ಲಾ ಆಟ ಓಟ ಸ್ಪರ್ಧೆಗಳಲ್ಲಿ ಅವನೇ ಮೊದಲಿಗನಾಗಿ ಬಿಟ್ಟ. ಆತನಿಗೆ ಆಟೋಟ ಸ್ಪರ್ಧೆಗಳಲ್ಲಿ ಮೊದಲ ಪಟ್ಟ ಸಿಕ್ಕರೂ, ಪಾಠಗಳಲ್ಲಿ ಆತ ಕೊನೆಯ ಪಟ್ಟದಲ್ಲಿ ಮೆರೆಯುತ್ತಾ ಇದ್ದ.  

ಅವನ ತಂದೆತಾಯಂದಿರು ನಾಸಿಕದಲ್ಲಿ ಒಂದು ಚಿಕ್ಕ ಹೋಟೆಲ್ ನಡೆಸುತ್ತಿದ್ದರು. ಅಲ್ಲಿ ಆತನು ಪೋಲಿ ಹುಡುಗರ ಜತೆಗೆ ಸೇರಿಕೊಂಡು ಶಾಲೆಗೆ ಸರಿಯಾಗಿ ಹೋಗುತ್ತಿರಲಿಲ್ಲವಂತೆ. ಪ್ರತೀ ಕ್ಲಾಸಿನಲ್ಲೂ ಎರಡೆರಡು ವರ್ಷ ಕಳೆಯುತ್ತಿದ್ದನಂತೆ. ಆತನ ಪೋಲಿ ಸಹವಾಸ ಬಿಡಿಸುವ ಸಲುವಾಗಿ ಆತನ ತಂದೆ ತಾಯಂದಿರು ಅವನನ್ನು ನಮ್ಮ ಊರಾದ ದಕ್ಷಿಣ ಕನ್ನಡದ ಜಿಲ್ಲೆಯ ಕಿನ್ನಿಕಂಬಳದಲ್ಲಿರುವ ಆತನ ಅಜ್ಜಿಯ ಮನೆಗೆ ಸಾಗಹಾಕಿದ್ದರು. ನಾಸಿಕದಲ್ಲಿ ಆತ ಕಲಿಯುತ್ತಿದ್ದ ಶಾಲೆಯಲ್ಲಿ ಕನ್ನಡ ಭಾಷೆಯನ್ನು ಹೇಳಿಕೊಡುತ್ತಿದ್ದರೂ, ಬಾಕಿಯ ಎಲ್ಲಾ ವ್ಯವಹಾರಗಳು ಮರಾಠಿ ಭಾಷೆಯಲ್ಲಿ ನಡೆಯುತ್ತಿದ್ದುವಂತೆ.

ನಮ್ಮ ಶಾಲೆಗೆ ಬಂದು ಸೇರುವಾಗ ಶಂಭುವಿಗೆ ಅತ್ತ ಮರಾಠಿಯೂ ಬರುತ್ತಿರಲಿಲ್ಲ, ಇತ್ತ ಕನ್ನಡವೂ ಓದಿ ಬರೆಯಲು ಬರುತ್ತಿರಲಿಲ್ಲ! ಆತನಿಗೆ ನಾಸಿಕದ ಆಡು ಭಾಷೆಯಾದ ಮರಾಠಿ ಭಾಷೆ ಮತ್ತು ಆತನ ಮಾತೃ ಭಾಷೆಯಾದ ತುಳು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಲು ಮಾತ್ರ ಬರುತ್ತಿತ್ತು. 

ಶಂಭುವಿನ ತಂದೆತಾಯಿಯರು ನಮ್ಮ ಶಾಲೆಗೆ ಬಂದು ನಮ್ಮ ಹೆಡ್ ಮಾಸ್ತರರನ್ನು ಅಂಗಲಾಚಿ ಕೇಳಿಕೊಂಡು ಕೊನೆಗೆ ನಮ್ಮ ಶಾಲೆಗೆ ಸೇರಿಸುವುದರಲ್ಲಿ ಯಸಸ್ವಿಗಳಾಗಿದ್ದರು. ಶಂಭುವನ್ನು ತಿದ್ದುವುದು, ಮತ್ತು ಅವನಿಗೆ ಕನ್ನಡದಲ್ಲಿ ಪಾಠ ಹೇಳಿಕೊಟ್ಟು ಉತ್ತಮ ವಿದ್ಯಾರ್ಥಿಯನ್ನಾಗಿ ಮಾಡುವುದು ನಮ್ಮ ಮಾಸ್ತರುಗಳಿಗೆ ದೊಡ್ಡ ಸವಾಲೇ ಆಗಿತ್ತು. ಆತನನ್ನು ನನ್ನ ಪಕ್ಕದಲ್ಲಿ ಕುಳ್ಳಿರಿಸಿ, ಆತನಿಗೆ ಕನ್ನಡ ಕಲಿಯಲು ಸಹಾಯ ಮಾಡುವಂತೆ ನನಗೆ ಹೆಡ್ ಮಾಸ್ತರರು ಆಣತಿ ಇತ್ತರು. ಶಂಭುವಿನ ಮನೆ ನಮ್ಮ ಮನೆಯ ಹತ್ತಿರದಲ್ಲೇ ಇತ್ತು. ಪ್ರತೀ ಸಾಯಂಕಾಲ ಶಾಲೆ ಬಿಟ್ಟಮೇಲೆ ನಮ್ಮ ಮನೆಗೆ ಬಂದು ನನ್ನ ಜತೆ ಸೇರಿ ಪಾಠ ಓದಲು ಮತ್ತು ಹೋಮ್ ವರ್ಕ್ ಮಾಡಲು ಶಂಭು ಆರಂಭಿಸಿದ. ಕ್ರಮೇಣ, ತನ್ನ ಕನ್ನಡ ಜ್ಞಾನವನ್ನು ತರಗತಿಯ ಮಟ್ಟಕ್ಕೆ ಸುಧಾರಿಸಿಕೊಂಡೂ ಬಿಟ್ಟ! ಆ ವರ್ಷ ಆತನು ನಾಲ್ಕನೇ ತರಗತಿಯಲ್ಲಿ ತೇರ್ಗಡೆಯಾಗಿಯೂ ಆಗಿ ಬಿಟ್ಟ! 

ನಮಗೆ ಬೇಸಿಗೆಯ ರಜೆ ಶುರುವಾಯಿತು. ಶಂಭು ನಮ್ಮ ಮನೆಗೆ ದಿನಾ ಆಡಲು ಬರುತ್ತಿದ್ದ. ಎಲ್ಲಿಂದಲೋ ಒಂದು ರಬ್ಬರ್ ಸಹಿತವಾದ ಕಬೆ ಕೋಲಿನ ಕವಣೆ ( ಕ್ಯಾಟಾಪುಲ್ಟ್ ) ಹೊಂದಿಸಿಕೊಂಡು ಬಂದು ಮಾವಿನ ಕಾಯಿ, ಗೇರು ಹಣ್ಣು ಮೊದಲಾದುವಕ್ಕೆ ಗುರಿಯಿಟ್ಟು ಬೀಳಿಸಿದ. ಕ್ರಮೇಣ ನನಗೂ ಆ ವಿದ್ಯೆ ಹೇಳಿಕೊಟ್ಟ. ಆ ಮೇಲೆ ಒಂದು ದಿನ ಅದೇ ಕವಣೆಯಿಂದ ಅಳಿಲು, ಗುಬ್ಬಚ್ಚಿ, ಪಾರಿವಾಳ ಮೊದಲಾದುವನ್ನು ತಾನು ಹೊಡೆದು ಶಿಕಾರಿ ಮಾಡುತ್ತಾ ಇದ್ದೇನೆ ಎಂದ. ಅವನ್ನು  " ನೀನೂ ಹೊಡೆ! " ಎಂದು ಪ್ರೇರೇಪಿಸಿದ.  ಅದಕ್ಕೆ ನಾನು ಒಪ್ಪದೇ " ನಾನು ಪ್ರಾಣಿ ಹಿಂಸೆ ಮಾಡುವುದಿಲ್ಲ, ಹಾಗೇನಾದರೂ ಮಾಡಿ, ಅದು ನನ್ನ ಅಜ್ಜಿಗೆ ಗೊತ್ತಾದರೆ, ಅಜ್ಜಿ ನನ್ನ ಜನ್ಮ ಜಾಲಾಡಿ ಬಿಡುತ್ತಾರೆ! " ಎಂದೆ. 

ಅವನಿಗೆ ನನ್ನ ಮಾತು ಬೇಸರ ಉಂಟುಮಾಡಿತೋ ಏನೋ! ಎರಡು ದಿನ ಶಂಭು ಆಡಲು ನಮ್ಮ ಮನೆ ಕಡೆಗೆ ಬರಲೇ ಇಲ್ಲ. ಆತನು ತನ್ನ ‘ಕವಣೆ ಶಿಕಾರಿ’ಯಲ್ಲಿ ನಿರತನಾಗಿರಬೇಕು ಎಂದು ನಾನೂ ಸುಮ್ಮನಿದ್ದೆ. ಮೂರನೇ ದಿನ ನಮ್ಮಲ್ಲಿಗೆ ಬಂದ ಶಂಭು " ನೋಡು ಮಧುಸೂದನ, ನಿನಗೆ ಪ್ರಾಣಿ ಪಕ್ಷಿಗಳನ್ನು ಕೊಲ್ಲಲು ಇಷ್ಟ ಇದ್ದಂತೆ ಇಲ್ಲ. ಆದರೆ, ನಿನಗೆ ಅಳಿಲು, ಮೊಲ, ನವಿಲು, ಪಾರಿವಾಳ, ಗಿಳಿ, ಮೈನಾ, ಕೋಗಿಲೆ ಮೊದಲಾದುವನ್ನು ಹಿಡಿದು ಸಾಕಲು ಇಷ್ಟವಿಲ್ಲವೇ? " ಎಂದು ಕೇಳಿದ. 

ನನಗೆ ಆತನ ಮಾತುಗಳನ್ನು ಕೇಳಿಯೇ ಉಮೇದು ಹುಟ್ಟಿತು! ನಮ್ಮ ಮನೆಯಲ್ಲಿದ್ದ ಬೆಕ್ಕು, ನಾಯಿ, ದನ, ಕರು, ಎಮ್ಮೆ ಇವುಗಳ ಜತೆಗೆ ಒಂದೆರಡು ಅಳಿಲುಗಳು, ಸುಂದರವಾದ ನವಿಲುಗಳು, ಮನುಷ್ಯನಂತೆ ಮಾತನಾಡುವ ಗಿಳಿಗಳು, ಮೈನಾ ಹಕ್ಕಿಗಳು ಮತ್ತು ಹಲವಾರು ಪಾರಿವಾಳಗಳು ಮುಂತಾದುವುಗಳನ್ನು ಹಿಡಿದು ಸಾಕ ಬೇಕೆಂಬ ಆಸೆ ಉಂಟಾಯಿತು. 

" ಅವನ್ನು ಹಿಡಿಯುವ ಬಗೆ ಹೇಗೆ? " ಎಂದು ಶಂಭುವನ್ನು ಕೇಳಿದೆ. ಅದಕ್ಕವನು " ನಿನಗೆ ನಾನು ಆ ಗುಟ್ಟು ಹೇಳಿಕೊಡುತ್ತೇನೆ! ಎಷ್ಟಾದರೂ ನೀನು ನನಗೆ ಪಾಠ ಕಲಿಯಲು ಸಹಾಯ ಮಾಡಿದ ಮಿತ್ರ. ನಿನಗೆ ನಾನು ಏನಾದರೂ ಪ್ರತ್ಯುಪಕಾರ ಮಾಡಲೇ ಬೇಕು ಎಂಬ ಇಚ್ಛೆಯಿದೆ. ನಾನು ನಮ್ಮೂರಿನ ಕಾಡುಗಳಿಗೆ ಬಂದು ಬೇಟೆಯಾಡುತ್ತಿದ್ದ  ಬ್ಯಾಡರ ಗುಂಪಿನ ಹುಡುಗರಿಗೆ ಎರಡು ಸೇರು ಅಕ್ಕಿ ಕೊಟ್ಟು, ಅವರಿಂದ ಚಿಕ್ಕ ಪ್ರಾಣಿ ಮತ್ತು ಪಕ್ಷಿಗಳನ್ನು ಹಿಡಿಯುವ ಎಲ್ಲಾ ಉಪಾಯಗಳನ್ನು ಕಲಿತಿದ್ದೇನೆ! " ಎಂದ. 

"ಅದೇನು ಉಪಾಯ ಮಾರಾಯ? " ಎಂದು ನಾನು ಉದ್ವೇಗ ಹತ್ತಿಕ್ಕಲಾರದೇ ಕೇಳಿದೆ. ಆದಕ್ಕೆ ಅವನು " ಅದುವೇ ಚಿಕ್ಕ ಪುಟ್ಟ ಪ್ರಾಣಿ ಪಕ್ಷಿಗಳನ್ನು ಉರುಳು ಹಾಕಿ ಹಿಡಿಯುವ ಉಪಾಯ!  ಅದನ್ನು ನಿನಗೆ ನಾಳೆಯೇ ಹೇಳಿ ಕೊಡುತ್ತೇನೆ " ಎಂದು ಹೇಳಿದ. ಮರುದಿನ ತಾನು ಬರುವಾಗ ಅದಕ್ಕೆ ಬೇಕಾದ ಸಲಕರಣೆಗಳನ್ನು ತಯಾರಿ ಮಾಡಿ ಕೊಂಡು ಬರುವುದಾಗಿಯೂ ಹೇಳಿದ.

ಅಂದು ರಾತ್ರಿ ನನ್ನ ಕನಸಿನಲ್ಲಿ ನಾನೇ ‘ಕಯ್ಯಾರೆ ’ ಹಿಡಿದು ಸಾಕಿದ ಅಳಿಲು, ಮೊಲ, ಪಾರಿವಾಳ ಮೊದಲಾದುವು, ನಮ್ಮ ಮನೆಯ ಅಂಗಳದ ತುಂಬಾ ನಾನೇ ಹಿಡಿದು ಪಳಗಿಸಿದ ನವಿಲುಗಳೊಂದಿಗೆ ಸೇರಿಕೊಂಡು ಸುಶ್ರಾವ್ಯವಾಗಿ ಹಾಡುತ್ತಾ ಅನಂದವಾಗಿ ಕುಣಿದಾಡಿದ ಕನಸು ಬಿತ್ತು. 

"ನಾನು ಶಂಭುವಿನಿಂದ ಕಲಿಯಲಿರುವ ‘ಉರುಳು’ ಇಟ್ಟು ಪ್ರಾಣಿ ಪಕ್ಷಿಗಳನ್ನು ಹಿಡಿಯುವ ವಿದ್ಯೆಯ ಸಹಾಯದಿಂದ, ನನಗೆ ಬೇಕಾದಷ್ಟು ಮುದ್ದು ಪ್ರಾಣಿ ಪಕ್ಷಿಗಳನ್ನು ಹಿಡಿದು ಪ್ರೀತಿಯಿಂದ ಸಲಹುವೆ! " ಎಂದು ಹಿಗ್ಗಿ ಆ ದಿನ ಶಂಭು ಬರುವ ಸಮಯವನ್ನೇ ಕಾದು ಕುಳಿತೆ. ಕೊನೆಗೂ ಶಂಭು ಬಂದ! 

ನಾವಿಬ್ಬರೂ ಕೂಡಲೇ ಅವನ ಮತ್ತು ನಮ್ಮ ಮನೆಗಳ ನಡುವೆ ಇದ್ದ ಕುರುಚಲು ಗುಡ್ಡಕ್ಕೆ ಹೋಗಿ ಕುಳಿತೆವು. ನಾನು ಶಂಭುವಿನ ಕೈಯಲ್ಲಿ ಏನೂ ಕಾಣದಿದ್ದನ್ನು ಕಂಡು ಸ್ವಲ್ಪ ನಿರಾಶೆ ಗೊಂಡೆ.  
ಆಗ ಶಂಭು " ನೋಡು ಮಧುಸೂದನ, ಎಲ್ಲಾ ಸರಂಜಾಮು ನನ್ನ ಚಡ್ಡಿಯ ಜೇಬಿನಲ್ಲಿವೆ " ಎಂದು ತನ್ನ ಜೇಬಿನಲ್ಲಿನ ವಸ್ತುಗಳನ್ನು ಒಂದೊಂದಾಗಿ ಹೊರ ತೆಗೆದ. ಆ ವಸ್ತುಗಳಲ್ಲಿ ಒಂದು ಸಿಂಬೆ ತೆಳುವಾದ, ಆದರೆ ಬಲು ಗಟ್ಟಿಯಾದ ಕತಾಳೆ ನಾರಿನ ದಾರದ ಉಂಡೆ ಮತ್ತು ಕೆಲವು ವಿವಿಧ ರೀತಿಯ ಚಿಕ್ಕ ಚಿಕ್ಕ ಸನ್ನೆಕಡ್ಡಿಗಳನ್ನು ಹೊರತೆಗೆದ. ಆ ಕಡ್ಡಿಗಳನ್ನು ಸುತ್ತುಮುತ್ತ ಬೆಳೆದಿದ್ದ ಗಟ್ಟಿಜಾತಿಯ ಮರಗಿಡಗಳ ರೆಂಬೆಗಳಿಂದ ಸಂಗ್ರಹಿಸಿದ್ದ. "ಈ ಪುಟ್ಟ ಪುಟ್ಟ ಕಡ್ಡಿಗಳು ನಮ್ಮ ಉರುಳಿನ ಜಾಲದಲ್ಲಿ ಸನ್ನೆ ಕೋಲುಗಳಂತೆ ಕೆಲಸಮಾಡುತ್ತವೆ. " ಎಂದ. 
ಮೊದಲಿಗೆ ತೆಳ್ಳಗಿನ ಗಟ್ಟಿ ದಾರದ ಒಂದು ತುದಿಯನ್ನು ಒಂದು ಐದಾರು ಅಡಿ ಎತ್ತರ ಬೆಳೆದಿದ್ದ ಕಾಡುಗಿಡಕ್ಕೆ ಕಟ್ಟಿದ. ಇನ್ನೊಂದು ತುದಿಯನ್ನು ಕುಣಿಕೆ ಮಾಡಿ ಅದು ಭೂಮಿಯಿಂದ ಸರಿಯಾಗಿ ಎರಡು ಅಡಿ ಮೇಲೆ ನಿಲ್ಲುವ ರೀತಿಯಲ್ಲಿ ಗಂಟು ಹಾಕಿದ. ತಾನು ತಂದ ಚಿಕ್ಕ ಪುಟ್ಟ ಕಡ್ಡಿಗಳಲ್ಲಿ ಕೆಲವನ್ನು ಗಟ್ಟಿಯಾದ ನೆಲದಲ್ಲಿ ನಾಟಿಕೊಳ್ಳುವಂತೆ ಒಂದು ಕಲ್ಲಿನ ಸಹಾಯದಿಂದ ಬಡಿದು ಕೂರಿಸಿದ. ಕುಣಿಕೆಯ ಮೇಲ್ಭಾಗಕ್ಕೆ ಚಿಕ್ಕ " ಕುದುರೆ "  ಅಂದರೆ, ಇಂಗ್ಲಿಷ್ ಭಾಷೆಯಲ್ಲಿ ‘ಟ್ರಿಗ್ಗರ್’ಎಂದು ಕರೆಯಲ್ಪಡಬಹುದಾದ ‘ಅರ್ಧ ಇಂಚು’ ಉದ್ದದ ಕಡ್ಡಿಯನ್ನು ಗಂಟುಹಾಕಿ ಬಿಗಿದ. ನೆಲದಲ್ಲಿ ಹಾಕಿದ ಸನ್ನೆ ಕೋಲುಗಳ ಜಾಲದ ಮೇಲೆ ದಾರದ ಕುಣಿಕೆಯನ್ನು ಹರಡಿದ. ಕುಣಿಕೆಯ ಹರವಿನ ಮೇಲೆ ಕೆಲವು ತರಗೆಲೆಗಳನ್ನು ಹರಡಿ, ಆತನು ನೆಟ್ಟ ಸನ್ನೆ ಕಡ್ಡಿಗಳ ಜಾಲವನ್ನು ಮೇಲ್ನೋಟಕ್ಕೆ ಕಾಣದಂತೆ ಮರೆ ಮಾಡಿದ. 

" ಈಗ ನೋಡು, ನಮ್ಮ ಉರುಳು ತಯಾರಾಯಿತು. ನಿನಗೆ ಯಾವ ಪ್ರಾಣಿ ಪಕ್ಷಿಗಳನ್ನು ಹಿಡಿಯಬೇಕೋ,  ಅವುಗಳಿಗೆ ಪ್ರೀತಿಯಾದ ಆಹಾರವನ್ನು ತಂದು ಈ ಸನ್ನೆಕಡ್ಡಿಗಳ ಮೇಲೆ ಸುರಿದು ಬಿಟ್ಟರೆ ಆಯಿತು! ಆ ಆಹಾರವನ್ನು ತಿನ್ನಲು ಬಂದ ಪ್ರಾಣಿ ಪಕ್ಷಿಗಳು ಸಂಶಯ ಪಡದೆ ಈ ಸನ್ನೆಗಳನ್ನು ತುಳಿಯುತ್ತವೆ. ತುಳಿದೊಡನೇ ಈ ಉರುಳು ಅವುಗಳ ಕುತ್ತಿಗೆಗೆ ಅಥವಾ ಕಾಲಿಗೆ ಬಿಗಿದು ಕೊಳ್ಳುತ್ತದೆ. ಆಮೇಲೆ ನೀನು ಅವನ್ನು ಹಿಡಿದು ಗೂಡಿಗೆ ಹಾಕಿ ಸಾಕುತ್ತಾ ಬುದ್ಧಿ ಕಲಿಸಿ ಪಳಗಿಸಿದರೆ ಆಯಿತು! " ಎಂದ. 

ಆಗ ನಾನು " ಶಂಭೂ, ನಾನು ಉರುಳನ್ನು ಯಾವ ಜಾಗದಲ್ಲಿ ಹಾಕಲಿ? ನಿನ್ನಂತೆ ಎತ್ತರವಾದ ಗಿಡಗಳಿಗೆ ದಾರ ಬಿಗಿದು ಬಿಲ್ಲಿಗೆ ಕೂರಿಸಲು ನನಗೆ ಕಷ್ಟವಾಗಬಹುದು" ಎಂದು ಹೇಳಿದೆ. 
ಆಗ ಶಂಭು ನನಗೆ ಈ ರೀತಿ ಉತ್ತರಿಸಿದ " ನೋಡಪ್ಪಾ, ಮಧುಸೂದನ. ಎಲ್ಲಾ ವಿಚಾರಗಳನ್ನು ಮೊದಲಾಗಿ ಆಲೋಚಿಸಿಯೇ ಈ ಜಾಗದಲ್ಲಿ ಉರುಳು ಹಾಕಿ ತೋರಿಸಿದೆ. ಈಗ ಇದನ್ನು ಇಲ್ಲಿಯೇ ಬಿಡೋಣ. ಈ ಕುರುಚಲು ಕಾಡು ನಿನ್ನ ಅಜ್ಜನವರಿಗೆ ಸೇರಿದ ಜಾಗ. ಊರಿನಲ್ಲಿ ಕಾಣಸಿಗುವ ಎಲ್ಲಾ ತರಹದ ಪಕ್ಷಿಗಳು ಮತ್ತು ಪುಟ್ಟ ಪ್ರಾಣಿಗಳು ಈ ಜಾಗದಲ್ಲೇ ವಾಸವಾಗಿವೆ. ಅಪರೂಪದಲ್ಲಿ ಈ ಜಾಗೆಯಲ್ಲಿ ನವಿಲುಗಳನ್ನು ಕೂಡಾ ನೋಡಿದ್ದೇನೆ. ಇಲ್ಲಿ ಬೇರೆಯವರು ಬಂದು ನಿನ್ನ ಉರುಳಿಗೆ ಸಿಕ್ಕಿದ ಪ್ರಾಣಿ ಪಕ್ಷಿಗಳನ್ನು ಅಪಹರಿಸುವಂತಿಲ್ಲ. ಈ ಜಾಗಕ್ಕೆ ಸದ್ಯಕ್ಕೆ ನೀನೇ ಅಧಿಪತಿ. ಈಗ ಆಲೋಚನೆ ಮಾಡಿ ಯಾವ ಬೇಟೆ ನಿನಗೆ ಬೇಕು ಎಂದು ತೀರ್ಮಾನ ಮಾಡು. ಆ ಬೇಟೆಗೆ ತಕ್ಕ ಆಹಾರ ತಂದು ಇಲ್ಲಿ ಚೆಲ್ಲು. ನಿನ್ನ ಕೆಲಸ ಆಯಿತು ಎಂತಲೇ ತಿಳಿದುಕೋ! " ಎಂದ. 

ಆಗಲೇ, ಸಾಯಂಕಾಲದ ಆರು ಗಂಟೆ ಆಗುತ್ತಿತ್ತು. ನಾನು ಮೊದಲು " ಗಿಳಿಗಳನ್ನೇ ಹಿಡಿಯಬೇಕು! " ಎಂದು ತೀರ್ಮಾನ ಮಾಡಿ, ಗಿಳಿಗಳಿಗೆ ಪ್ರಿಯವಾದ ಕೆಂಪು ಮೆಣಸಿನ ಕಾಯಿಗಳನ್ನು ನಮ್ಮ ತರಕಾರಿ ಹಿತ್ತಿಲಿನ ಮೆಣಸಿನ ಗಿಡಗಳಿಂದ ಒಂದು ಬೊಗಸೆ ಆಗುವಷ್ಟು ಸಂಗ್ರಹಿಸಿ, ನಮ್ಮ ಉರುಳಿನ ಮೇಲೆಲ್ಲಾ ಚೆಲ್ಲಿದೆ.  ಇದಾದ ನಂತರ ಶಂಭು ನನಗೆ " ನಾಳೆಯ ದಿನ ಆಗಾಗ ಬಂದು ಗಿಳಿಗಳಿಗೆ ಸಂಶಯ ಬರದ ರೀತಿಯಲ್ಲಿ ದೂರದಲ್ಲೇ ನಿಂತು ಉರುಳಿನ ಕಡೆಗೆ ನೋಡುತ್ತಿರು. ಗಿಳಿ ಇಲ್ಲಿ ಸಿಕ್ಕಿಬಿದ್ದಿದ್ದರೆ ನನ್ನನ್ನು ಕರೆ! " ಎಂದು ಹೇಳುತ್ತಾ ತನ್ನ ಮನೆಯ ಕಡೆಗೆ ಓಡಿದ. 
ನಾನು ನಮ್ಮ ಮನೆಗೆ ಮರಳಿದೆ.

ಮನೆಗೆ ಬಂದನಂತರ ನನಗೆ ಗಿಳಿಯದೇ ಧ್ಯಾನ! ಸಾಯಂಕಾಲದ ದೇವರ ಭಜನೆಯನ್ನು ‘ತಪ್ಪಾಗಿ ಹಾಡಿ’ ಅಂದು ನನ್ನ ಅಕ್ಕಂದಿರು ಮತ್ತು ಅಣ್ಣಂದಿರ ಅಪಹಾಸ್ಯಕ್ಕೆ ಗುರಿಯಾದೆ.  ನಮ್ಮ ಊರಿನ ಮರಕೆಲಸದ ಬಡಗಿ ಸುಬ್ರಾಯ ಆಚಾರಿಯನ್ನು ಕಾಡಿ ಮರುದಿನವೇ " ಒಂದು ಗಿಳಿಯ ಗೂಡು ಮಾಡಿಸಿಕೊಳ್ಳಬೇಕು! " ಎಂದು ತೀರ್ಮಾನ ಮಾಡಿದೆ. ಆ ರಾತ್ರಿಯ ಕನಸುಗಳಲ್ಲಿ, ಬಹು ಸುಂದರವಾದ ಕೆಂಪು ಕೊಕ್ಕಿನ ಗಿಳಿಯನ್ನು ಹಿಡಿದು ಅವುಗಳ ಲಾಲನೆ ಪಾಲನೆ ಮಾಡುತ್ತಾ, ಹಾಸಿಗೆಯಲ್ಲಿ ಹೊರಳಾಡಿದೆ.

ಬೆಳಗ್ಗೆ ಬಹು ಬೇಗನೇ ಎದ್ದು ಉರುಳನ್ನು ನೋಡಿಕೊಂಡು ಬಂದೆ. ಎಲ್ಲಾ ಸಮರ್ಪಕವಾಗೇ ಇದ್ದಿತು.  ಆ ಮುಂಜಾನೆ ಅಷ್ಟು ಬೇಗನೆ ಯಾವ ಹಕ್ಕಿಗಳೂ ಎದ್ದು ಉಲಿಯಲು ಶುರುಮಾಡಿರಲಿಲ್ಲ. " ಪಾಪ ನಾನು ಹಿಡಿಯಲಿರುವ ಗಿಳಿ ಸ್ವಲ್ಪ ಹೊತ್ತು ನಿದ್ರೆಮಾಡಿ, ಆ ಮೇಲೆ ಖಂಡಿತಾ ಮೆಣಸು ತಿನ್ನಲು ಉರುಳಿನ ಹತ್ತಿರ ಬಂದೇ ಬರುತ್ತದೆ! " ಎಂದುಕೊಳ್ಳುತ್ತಾ ಮನೆಗೆ ಮರಳಿ ಹಲ್ಲುಜ್ಜಿ ಮುಖ ತೊಳೆದೆ. 

ಅನಂತರ ಪದೇ ಪದೇ ನನ್ನ ಉರುಳನ್ನು ವೀಕ್ಷಿಸಿ ನಿರಾಸೆಯಿಂದ ಮರಳಿ ಬರುತ್ತಿದ್ದೆ. ಸಾಯಂಕಾಲವಾಯಿತು. ಶಂಭು ಆಡಲು ನಮ್ಮ ಮನೆಯ ಹತ್ತಿರ ಬಂದ. " ಗಿಳಿ ಬರಲೇ ಇಲ್ಲ! " ನನ್ನ ದುಃಖ ಅವನಲ್ಲಿ ತೋಡಿಕೊಂಡೆ. 

ಅದಕ್ಕವನು, " ಆ ಹಾಳಾದ ಗಿಳಿಗಳು ವೇಗವಾಗಿ ಇತ್ತನೋಡದೇ, ಹಾರುತ್ತಾ, ಎಲ್ಲೋ ದೂರದ ಊರುಗಳಿಗೆ ಹೋಗಿರಬಹುದು. ಅವುಗಳನ್ನು ಮರೆತು ಈಗ ಪಾರಿವಾಳಗಳನ್ನೇ ಹಿಡಿಯೋಣ. ಸ್ವಲ್ಪ ಭತ್ತ ತಂದು ಉರುಳಿನ ಹತ್ತಿರ ಚೆಲ್ಲು! " ಎಂದ. ನಾನು ಅಂತೆಯೇ ಮಾಡಿದೆ. 

ಆದರೆ,  ಮರು ದಿನವೂ ಆದದ್ದು ನಿರಾಸೆ!  ಅಂದಿನ ಸಾಯಂಕಾಲ ಶಂಭು ಮತ್ತು ನಾನು ಉರುಳಿನ ಬಳಿಗೆ ಹೋಗಿ ನೋಡುತ್ತೇವೆ!  ಭತ್ತದ ಕಾಳುಗಳನ್ನು ಇರುವೆಗಳು ಹೊರುತ್ತಿದ್ದುವು! " ಇವುಗಳ ಮನೆ ಹಾಳಾಗ! ಇವು ಎಷ್ಟು ಭತ್ತ ಅವು ಹೊತ್ತಾವು? ಇನ್ನೂ ಸ್ವಲ್ಪ ತಂದು ಚೆಲ್ಲೋಣ! ನಾಳೆ ಪಾರಿವಾಳ ಅಲ್ಲದಿದ್ದರೆ ನವಿಲೇ ಬೀಳಬಹುದು! " ಎಂದ ಶಂಭು. 

ನಾನು ಯಾರಿಗೂ ಗೊತ್ತಾಗದ ರೀತಿಯಲ್ಲಿ ನಮ್ಮ ಮನೆಯ ಹಟ್ಟಿಯ ಪಕ್ಕದಲ್ಲಿದ್ದ ಕಣಜದಿಂದ ಒಂದು ಅರ್ಧ ಸೇರಿನಷ್ಟು ಭತ್ತವನ್ನು ನನ್ನ ಅಂಗಿಯ ಮುಂದಲೆಯಲ್ಲಿ ಹಾಕಿಕೊಂಡು ಬಂದು ಅಲ್ಲಿ ಚೆಲ್ಲಿದೆ. ಆದರೆ, ಮರುದಿನವೂ ಆದದ್ದು ನಿರಾಸೆಯೇ!  ಆ ಸಂಜೆಗೆ ಸಾಕಷ್ಟು ಭತ್ತದ ಕಾಳುಗಳನ್ನು ಇರುವೆಗಳು ಹೊತ್ತರೂ, ಇನ್ನಷ್ಟು ಉಳಿದಿದ್ದುವು. 

ಶಂಭು ಅಂದ " ಈ ನವಿಲು ಪಾರಿವಾಳಗಳನ್ನು ಮಾತ್ರ ನಂಬಬಾರದು! ಮೊಲಗಳಿಗೆ ಏನು ನಮ್ಮಲ್ಲಿ ಬರವೇ?  ಬೇಗ ಬೇಗನೆ ಸ್ವಲ್ಪ ಎಳೇ ಗರಿಕೆ ಹುಲ್ಲು ಕಿತ್ತು ಕೊಂಡು ಬರೋಣ! ಸುತ್ತಲೂ ಚೆಲ್ಲಿದರೆ ಈ ರಾತ್ರಿ ಮೊಲ ಸಿಗುವುದು ಮಾತ್ರ ಖಂಡಿತಾ. ಏಕೆಂದರೆ ಮೊಲಕ್ಕೆ ಎಳೇ ಗರಿಕೆ ಹುಲ್ಲೆಂದರೆ ಬಹಳ ಪ್ರೀತಿ! " ಎಂದ. ನಾವು ನೀರಿನ ತೋಡಿನ ಬಳಿ ಬೆಳೆದ ಗರಿಕೆ ಹುಲ್ಲು ಕಿತ್ತು ಅಲ್ಲೆಲ್ಲಾ ಹರಡಿ ನಮ್ಮ ಮನೆಗಳಿಗೆ ಹಿಂತಿರುಗಿ ಹೋದೆವು. 

ಆ ರಾತ್ರಿ ಹುಣ್ಣಿಮೆ! ಕಿಟಿಕಿಯಿಂದ ಪೂರ್ಣ ಚಂದ್ರ ಕಾಣಿಸುತ್ತಿದ್ದ. ಚಂದ್ರನ ಮೇಲಿನ ಮೊಲವನ್ನು ಕಂಡು, ಚಂದ್ರನಿಗೆ ಹೇಳಿದೆ " ನೋಡು ಚಂದ್ರ ಮಾಮಾ, ದೇವರ ದಯವಿದ್ದರೆ,  ನಾಳೆ ನಿನಗೆ ನನ್ನ ಮೊಲವನ್ನೂ ತೋರಿಸುತ್ತೇನೆ! " ಎಂದು.

ಮರುದಿನ ಬೆಳಗ್ಗೆ ಎಂದಿನಂತೆ ನಿರಾಸೆ! ಮೊಲ ರಾತ್ರಿ ನಮ್ಮ ಉರುಳಿನ ಬಳಿಗೆ ಬಂದಿರಲೇ ಇಲ್ಲ! ಈ ನಿರಾಸೆಗಳ ಜತೆಗೆ ಇನ್ನೊಂದು ದೊಡ್ಡ ನಿರಾಸೆ ಕಾದಿತ್ತು.

ಬೆಳಗ್ಗೆ ಹನ್ನೊಂದರ ಸಮಯಕ್ಕೆ ಶಂಭು ನಮ್ಮ ಮನೆಗೆ ಬಂದ. ನಾಸಿಕದಿಂದ ಆತನ ತಂದೆ ಬಂದಿದ್ದರು. ಆತನ ತಾಯಿಗೆ ಸೌಖ್ಯವಿಲ್ಲವಂತೆ!  ತನ್ನ ಒಬ್ಬನೇ ಮಗ ದೂರವಿರುವುದು ಆಕೆಗೆ ಸಹ್ಯವಾಗುತ್ತಿಲ್ಲವಂತೆ!ಅದಕ್ಕೋಸ್ಕರ ಆತನನ್ನು ಕರೆದೊಯ್ಯಲು ಬಂದಿದ್ದರು!

ಅದೇ ದಿನ ನನ್ನ ಪ್ರೀತಿಯ ಗೆಳೆಯ ಶಂಭುವು ತನ್ನ ತಂದೆಯೊಡನೆ ಮಂಗಳೂರಿನಿಂದ ಹೊರಡುವ ‘ಸಬರ್ಮತಿ’ ಎಂಬ ಸಿಂಧಿಯಾ ಸ್ಟೀಮ್ ಶಿಪ್ ಕಂಪೆನಿಯ ಹಡಗಿನಲ್ಲಿ ಬೊಂಬಾಯಿಯ ಮಾರ್ಗವಾಗಿ ನಾಸಿಕಕ್ಕೆ ಹೊರಟಿದ್ದ." ಮಧುಸೂದನ, ನಮ್ಮ ಉರುಳಿನ ಸಹಾಯದಿಂದ ಇಂದಲ್ಲ ನಾಳೆ ನೀನು ನಿನಗೆ ಬೇಕಾದ ಪ್ರಾಣಿ ಪಕ್ಷಿಗಳನ್ನು ಖಂಡಿತವಾಗಿ ಹಿಡಿಯುತ್ತಿ! ಅವನ್ನು ಚೆನ್ನಾಗಿ ಸಾಕಿಕೋ! ಯಾವತ್ತಾದರೊಂದು ದಿನ ನಾವು ಪುನಃ ಸಿಗೋಣ! " ಎಂದ ಶಂಭು ಕಣ್ಣಿನಲ್ಲಿ ನೀರು ಸುರಿಸುತ್ತಾ. ನಾನು ಕೂಡಾ ಗದ್ಗದಿತನಾಗಿ ಆತನನ್ನು ಬೀಳ್ಕೊಂಡೆ. 

ಆ ದಿನ ಮಧ್ಯಾಹ್ನ ತಿರುಗಿ ನಮ್ಮ ಉರುಳಿನ ಹತ್ತಿರಕ್ಕೆ ಹೋದೆ. ನಮ್ಮ ಉರುಳಿನ ಸುತ್ತ ನಾವು ಹಿಡಿಯ ಬಯಸುತ್ತಿದ್ದ ಎಲ್ಲಾ ತರಹದ ಪ್ರಾಣಿ ಪಕ್ಷಿಗಳಿಗೆ ಪ್ರಿಯವಾದ ಎಲ್ಲಾ ತರಹದ ಆಹಾರಗಳು ಯತೇಚ್ಛವಾಗಿ ಚೆಲ್ಲಿಕೊಂಡಿದ್ದುವು. ಆದರೆ ಯಾವ ಬೇಟೆಯೂ ನಮ್ಮ ಉರುಳಿಗೆ ಸಿಕ್ಕಿರಲಿಲ್ಲ.

ಆ ದಿನ ನನ್ನನ್ನು ಸಮಾಧಾನ ಪಡಿಸಲು ನನ್ನ ಪ್ರಾಣ ಮಿತ್ರ ಶಂಭುವೂ ಇರಲಿಲ್ಲ! ನಾನು ಆ ಸಾಯಂಕಾಲ ಬೇಸರ ಕಳೆಯುವುದಕ್ಕಾಗಿ ನಮ್ಮ ಉರುಳಿನ ಹತ್ತಿರ ನಿರಾಶೆಯಿಂದಲೇ ಹೋದೆ. ಅಲ್ಲಿ ನನಗೆ ಆಶ್ಚರ್ಯ ಕಾದಿತ್ತು! 

ಒಂದು ದೊಡ್ಡ ಪಕ್ಷಿ ನಮ್ಮ ಉರುಳಿಗೆ ಸಿಕ್ಕಿ ಬಿಡಿಸಿಕೊಳ್ಳಲು ಹೆಣಗುತ್ತಿತ್ತು! ನನ್ನ ಎದೆ ಉದ್ವೇಗದಿಂದ ನನ್ನ ಶರ್ಟಿನ ಗುಂಡಿಗಳು ಬಿಚ್ಚಿಕೊಳ್ಳುವಂತೆ ಹೊಡೆದುಕೊಳ್ಳುತ್ತಾ ಇತ್ತು!
ಸ್ವಲ್ಪ ಹತ್ತಿರ ಹೋಗಿ ಪರೀಕ್ಷಿಸಿ ನೋಡಿದೆ! ನಮ್ಮ ಉರುಳಿನಲ್ಲಿ ಸಿಕ್ಕಿ ಬಿದ್ದುದು ನಾವು ಹಿಡಿಯ ಬಯಸಿದ ಬೇಟೆ ಅಲ್ಲ!  ಅದು ನಮ್ಮ ಪಕ್ಕದ ಜಮೀನಿನ ಐತು ಶೆಟ್ಟಿಯ ಕೋಳಿ! ಅದರ ಹೆಸರು ‘ ಮೈರ ’. 

ಮೈರ ಒಂದು ಬಲವಾದ " ಕೋಳಿಕಟ್ಟದ ವೀರ ಹುಂಜ ". ಅದು ಐತು ಶೆಟ್ಟಿಯ ಬಗಲೇರಿ, ಹಲವು ಹಳ್ಳಿಗಳ ಕೋಳಿ ಪಂದ್ಯಗಳಿಗೆ ಹೋಗಿ, ಸೆಣೆಸಿ, ಪಂದ್ಯಗಳಲ್ಲಿ ವಿಜಯಿಯಾಗಿ ಐತುವಿಗೆ ಹಲವಾರು ಕೋಳಿಗಳ ಹೆಣಗಳನ್ನು ಉಡುಗೊರೆಯಾಗಿ ತಂದಿತ್ತು. ಈ ಕೋಳಿಯ ಪರಾಕ್ರಮದಿಂದ ಆತ ಕೋಳಿ ಪಂದ್ಯಗಳಲ್ಲಿ " ಬಾಜಿ " ಕಟ್ಟಿ ನೂರಾರು ರೂಪಾಯಿಗಳನ್ನು ಸಂಪಾದಿಸಿದ್ದನಂತೆ! 

ಐತು ಶೆಟ್ಟಿಯು ಈ ಹುಂಜ ಕೋಳಿಯನ್ನು ತನ್ನ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದನಂತೆ! ಅದಕ್ಕೆ ದಿನಾ ಕುಚ್ಚಿಲು ಅಕ್ಕಿಯ ಅರೆಬೆಂದ ‘ ಮುಗುಳನ್ನ ’ ಮಾಡಿ,  ಅದಕ್ಕೆ ಹಸನಾದ ಬೆಣ್ಣೆಯನ್ನು ಬೆರೆಸಿ, ದಿನಾ ಮುಂಜಾನೆ ತಾನೇ ಕಯ್ಯಾರೆ ತಿನ್ನಿಸುತ್ತಿದ್ದನಂತೆ! ಈ ಧಾಂಡಿಗ ಕೋಳಿ ತುಂಬಾ ದಷ್ಟ ಪುಷ್ಟವಾಗಿ ಬೆಳೆದು ಊರಿನ ಎಲ್ಲಾ ಮನೆಗಳ ಅಂಗಳಗಳನ್ನು ಸುತ್ತಿ ಪಾರುಪತ್ಯ ಮಾಡುತ್ತಿತ್ತು. 

ಈ ಕೋಳಿಯ ಉಪಟಳ ತಾಳದೆ, ಯಾರಾದರೂ ಅಕ್ಕ ಪಕ್ಕದ ಮನೆಗಳವರು ಅದನ್ನು ಕಲ್ಲೆಸೆದು ಓಡಿಸಿದ್ದು ಗೊತ್ತಾದರೆ, ಐತು ಶೆಟ್ಟಿಯು ಅಂಥವರ ಮೇಲೆ ಯುದ್ಧಸಾರಿ ಅವರನ್ನು ಹಿಗ್ಗಾ ಮುಗ್ಗ ಹೊಡೆದೇ ಬಿಡುತ್ತಿದ್ದನಂತೆ! 

ಒಂದು ಸಾರಿ ಇದೇ ಕೋಳಿಯು ನಮ್ಮ ಅಜ್ಜಿ ತಯಾರಿಸಿ ಒಣಗಲು ಹಾಕಿದ್ದ ಸಂಡಿಗೆಗಳನ್ನು ಮೆಲ್ಲಲು ಬಂದಿತ್ತು. ಅಜ್ಜಿಯವರು ನನ್ನನ್ನು ಆ ದಿನ ಒಂದು ತಟ್ಟೆಯಲ್ಲಿ ಬೆಲ್ಲ ಮತ್ತು ನೆಲಗಡಲೆ ಹಾಕಿ ತಿನ್ನಲು ಕೊಟ್ಟು ‘ ಸಂಡಿಗೆ ಕಾಯುವ ಡ್ಯೂಟಿಗೆ ’ ಹಚ್ಚಿದ್ದರು. ಈ ದುಷ್ಟ ‘ ಮೈರ ಕೋಳಿ ’ ಸಂಡಿಗೆ ರುಚಿನೋಡಲು ಬಂದಾಗ, ನಾನು ಅದನ್ನು " ಶು! ಶೂ! " ಎನ್ನುತ್ತಾ ಓಡಿಸಲು ಹೋದೆ. ಅದು ನನಗೆ ಹೆದರದೆ ತಿರುಗಿ ನಿಂತು, ತನ್ನ ಕೆಂಪು ಕಣ್ಣುಗಳನ್ನು ತಿರುವುತ್ತಾ "ಖೊಕ್, ಕೊಖ್ " ಎಂದು ತನ್ನ ಹಳದಿ ಬಣ್ಣದ ಕೊಕ್ಕುಗಳಿಂದ ನನ್ನನ್ನು ಕುಕ್ಕಲು ಬಂದಿತ್ತು. ಸಾಲದ್ದಕ್ಕೆ ಅದು ಅದರ ಭಯಂಕರವಾದ ಹಳದಿ ಬಣ್ಣದ ಕಾಲುಗಳಲ್ಲಿನ ‘ನಖಗಳನ್ನು’ ತೋರಿಸುತ್ತಾ ನನ್ನನ್ನು ಪರಚಲು ನನ್ನೆಡೆಗೆ ಹಾರಿ ಬಂದಿತ್ತು. ತನ್ನ ಬಲವಾದ ರೆಕ್ಕೆಗಳನ್ನು ಬೀಸಿ ನನಗೆ ಹೊಡೆಯಲು ಕೂಡಾ ಬಂದಿತ್ತು!

ನಾನು ಬಹಳ ‘ಬುದ್ಧಿವಂತ ’ ಹುಡುಗನಾದುದರಿಂದ, ಅದನ್ನು ಎದುರಿಸದೇ ‘ಪಲಾಯನ ಸೂತ್ರ ’ ಪಠಿಸಿ, ಅದರ ಭಯಂಕರ ಧಾಳಿಯಿಂದ ಬಚಾವ್  ಆಗಿದ್ದೆ. 

ಈಗ ಅದೇ ‘ ಮಹಾ ಕೋಳಿ ’ ನನ್ನ ಉರುಳಿಗೆ ಸಿಕ್ಕಿ ಒದ್ದಾಡುತ್ತಿದೆ! ಬಿಲ್ಲಿನ ಹಗ್ಗ ಸೆಟೆದು ಕೊಂಡು ಅದು ನೆಲದಿಂದ ಆರು ಇಂಚು ಮೇಲೆ ಕುತ್ತಿಗೆಗೆ ಹಗ್ಗ ಬಿಗಿದು ಒದ್ದಾಡುತ್ತಿದೆ. ತನ್ನನ್ನು ಕಾಪಾಡಿಕೊಳ್ಳಲು ನಾವು ಬಿಲ್ಲು ಕಟ್ಟಿದ ಕುರುಚಲು ಪೊದೆಯ ಒಂದು ರೆಂಬೆಯ ಮೇಲೆ ತನ್ನ ಕಾಲುಗಳನ್ನು ಊರಿಕೊಂಡು ‘ತ್ರಿಶಂಕು ಸ್ವರ್ಗ’ದ ಸುಖವನ್ನು ಅನುಭವಿಸುತ್ತಿದೆ! 

ಒಮ್ಮೆ ಅದು ಹೀಗೆಯೆ ಉರುಳಿಗೆ ಸಿಕ್ಕಿ " ಸತ್ತೇ ಹೋಗಬೇಕು! " ಅಂತ ಅನ್ನಿಸಿದರೂ, ಐತು ಶೆಟ್ಟಿಯ ನೆನಪು ಬಂದೊಡನೆ, ಅದಕ್ಕೆ ಕೆಟ್ಟದ್ದನ್ನು ಬಯಸುವ ವಿಚಾರವೇ ನನ್ನ ಮನಸ್ಸಿನಿಂದ ದೂರವಾಯಿತು." ಅಯ್ಯೋ! ಅದನ್ನು ಹೇಗಾದರೂ ಬಿಡಿಸಬೇಕು! " ಎಂದು ಹತ್ತಿರ ಹೋದರೆ, ಆ ಕೃತಘ್ನ ಕೋಳಿ ತನ್ನ ರೆಕ್ಕೆಗಳನ್ನು ಬೀಸಿ ನನಗೆ ಹೊಡೆಯಲು ಹವಣಿಸುತ್ತಿತ್ತು!

ಈ ಕೋಳಿ ನನ್ನ ಉರುಳಿಗೆ ಸಿಕ್ಕಿದ ವಿಚಾರ ನಮ್ಮ ಊರಿನ ಪೋಲಿ ಐತು ಶೆಟ್ಟಿಗೆ ಗೊತ್ತಾದರೆ, ಅವನು ನನ್ನನ್ನು ಜೀವಸಹಿತ ಬಿಡಲಾರ! ನಾನು ಏನಾದರೂ ಮಾಡಿ ಈ ಕೆಟ್ಟ ಕೋಳಿಯನ್ನು ಕೂಡಲೇ ಬಿಡುಗಡೆ ಮಾಡಬೇಕಿತ್ತು! ಅದು ಉರುಳಿಗೆ ಸಿಕ್ಕಿದ ವಿಚಾರ ಯಾರಿಗೂ ತಿಳಿಸುವಂತಿಲ್ಲ! ನಮ್ಮ ಉರುಳಿನ ಸಂಗತಿ ನನಗೆ ಮತ್ತು ಶಂಭುಗೆ ಮಾತ್ರ ಗೊತ್ತು. 

ಆತ ಈಗ ಹಡಗಿನಲ್ಲಿ ಕುಳಿತು ಸ್ವರ್ಗ ಸುಖ ಅನುಭವಿಸುತ್ತಾ ಬೊಂಬಾಯಿಗೆ ಹೋಗುತ್ತಿದ್ದಾನೆ! ನಾನು ಯಾರನ್ನು ಸಹಾಯಕ್ಕೆ ಕರೆಯಲಿ?  ನನ್ನ ಉರುಳು ಶಿಕಾರಿಯ ಗುಟ್ಟು ಎಂದಿಗೂ ಐತು ಶೆಟ್ಟಿಗೆ ಗೊತ್ತಾಗಬಾರದು!

ಸುಬ್ರಹ್ಮಣ್ಯಕ್ಕೆ ಹೋಗಿದ್ದಾಗನನಗೆ ಧಾರಾಕಾರವಾಗಿ ಕಣ್ಣಲ್ಲಿ ನೀರು ಬರಲು ಶುರುವಾಯಿತು. " ಈ ಕೋಳಿ ಒಮ್ಮೆ ಈ ಉರುಳಿನಿಂದ ತಪ್ಪಿಸಿ ಕೊಂಡರೆ ಸಾಕು! " ಎಂದು ದೇವರಲ್ಲಿ ಮೊರೆ ಇಟ್ಟೆ. ಆದರೆ, ಅದೇ ದೇವರು ಬಹಳ ದಿನಗಳಿಂದ ‘ ನನ್ನ ಆರ್ತ ಪ್ರಾರ್ಥನೆಗಳನ್ನು  ಕೇಳಿ ’ ಇಂದು ನನಗೆ ಬೇಟೆ ಕರುಣಿಸಿದ್ದ!  ಈಗ ಅವನು ಆ ಬೇಟೆಯನ್ನು ಹೇಗೆ ತಪ್ಪಿಸಿಕೊಂಡು ಹೋಗಲು ಬಿಟ್ಟಾನು? ದೇವರನ್ನು ಹೀಗೆ ಸುಖಾಸುಮ್ಮನೆ ದಣಿಸಲು ನಾನು ಎಷ್ಟರವನು?

ಆದ್ದರಿಂದ, " ಈಗ ದೇವರು ಖಂಡಿತಾ ನನ್ನ ಸಹಾಯಕ್ಕೆ ಬರುವುದಿಲ್ಲ! " ಎಂದು ಕೊಳ್ಳುತ್ತಾ,  " ಬೇರೆ ಏನಾದರೂ ಉಪಾಯ ತೋಚುವುದೇ? " ಎಂದು ಆಲೋಚಿಸಹತ್ತಿದೆ.

ಕೊನೆಗೂ ಹೊಳೆಯಿತು ಒಂದು ಉಪಾಯ!

ಒಂದೇ ಓಟಕ್ಕೆ ಮನೆಗೆ ಓಡಿ ನನ್ನ ಅಕ್ಕನ ಕಸೂತಿ ಪೆಟ್ಟಿಗೆಯಿಂದ ಅವಳ ದೊಡ್ಡ ಕತ್ತರಿಯೊಂದನ್ನು ಲಪಟಾಯಿಸಿ ತಂದೆ. ಉರುಳಿನ ಛಾಪಕ್ಕೆ ನಾವು ಬಗ್ಗಿಸಿದ ಪೊದೆಯ ಹಿಂಬದಿಯಿಂದ ಹೇಗೋ ನುಸುಳಿ ಉರುಳಿನ ಮೇಲ್ಭಾಗದ ಹಗ್ಗವನ್ನು ಕೋಳಿಯ ಕೊಕ್ಕಿನಿಂದ ಸಾಕಷ್ಟು ದೂರದಲ್ಲಿ ಕತ್ತರಿಸಿ ಬಿಟ್ಟೆ.  ಕೊನೆಗೂ, ಸಿಕ್ಕು ಬಿದ್ದಿದ್ದ ಕುಕ್ಕುಟ ವೀರನನ್ನು ಬಿಡುಗಡೆ ಮಾಡಿದೆ!

ಆ ಹುಂಜ ಕೋಳಿ ಸಂತೋಷದಿಂದ ಅರಚುತ್ತಾ ಐತು ಮನೆಯ ಕಡೆಗೆ ಓಡಿಯೇ ಹೋಯಿತು. ನನ್ನ ಪುಣ್ಯಕ್ಕೆ " ನನ್ನ ಮೇಲೆ ಧಾಳಿಮಾಡಲಿಲ್ಲವಲ್ಲಾ! " ಎಂದು ಅದಕ್ಕೆ ನಾನು ಮನದಲ್ಲೇ ವಂದಿಸಿದೆ! ಆದರೆ ಒಂದು ಅಚಾತುರ್ಯವಾಗಿತ್ತು! ಹಗ್ಗದ ಉರುಳಿನ ಭಾಗ ಮೈರನ ಕೊರಳಿನಲ್ಲೇ ಉಳಿದಿತ್ತು! ಅದನ್ನು ಬಿಡಿಸಿ ತೆಗೆಯಲು ನನ್ನಿಂದ ಸಾಧ್ಯವೇ ಇರಲಿಲ್ಲ. 

ಈಗ ಐತು ಆ ಹಗ್ಗದ ಮೂಲವನ್ನು ಪತ್ತೆ ಮಾಡಿದರೆ? ಅದಕ್ಕೂ ಒಂದು ಉಪಾಯ ಹೊಳೆಯಿತು.  ಈಗ ನಾನು ನಮ್ಮ ಉರುಳಿನ ಅಸ್ತಿತ್ವದ ಬಗ್ಯೆ ಏನೂ ಸಾಕ್ಷಿ ಉಳಿಸಬಾರದು!

ಕೂಡಲೇ, ನಮ್ಮ ಉರುಳಿನ ಎಲ್ಲಾ ಪರಿಕರಗಳನ್ನು ಕಷ್ಟಪಟ್ಟು ಬಿಚ್ಚಿದೆ. ಪ್ರಯಾಸದಿಂದ ಉಳಿದ ದಾರದ ತುಂಡನ್ನು ಹಿಡಿದು ಚಾಫು ಕಟ್ಟಿದ ಕಾಡು ಗಿಡದ ಗೆಲ್ಲನ್ನು ಪ್ರಯಾಸದಿಂದ ಬಗ್ಗಿಸಿ, ಆ ದಾರದ ತುಂಡನ್ನು ಕೂಡಾ ಬಿಚ್ಚಿದೆ.  ಅಲ್ಲಿ ನಾವು ತಂದು ಹಾಕಿದ್ದ ಸಕಲ ಬಗೆಯ ಪ್ರಾಣಿ ಪಕ್ಶಿಗಳಿಗೆ ಪ್ರಿಯವಾದ ಆಹಾರಗಳ ಸುಳಿವೇ ಕಾಣದಂತೆ, ಅವನ್ನು ಕಾಲಿನಿಂದ ಚಲ್ಲಾ ಪಿಲ್ಲಿಯಾಗಿಸಿದೆ. 

ನಾವು ಉರುಳು ಒಡ್ಡಲು ಉಪಯೋಗಿಸಿದ ಎಲ್ಲ ವಸ್ತುಗಳನ್ನೂ ಒಟ್ಟು ಸೇರಿಸಿ ನನ್ನ ಚಡ್ಡಿಯ ಜೇಬಿಗೆ ಸೇರಿಸಿಕೊಂಡೆ. ಮನೆಗೆ ಬಂದು ಅವನ್ನೆಲ್ಲಾ ನಮ್ಮ ಮನೆಯ ಬಚ್ಚಲಿನ ಒಲೆಗೆ ಹಾಕಿ ಸುಟ್ಟು ಬಿಟ್ಟೆ!  ಅಕ್ಕನ ಕತ್ತರಿಯನ್ನು ಸ್ವಸ್ಥಾನ ಸೇರಿಸುವುದು ಕಷ್ಟವಾಗಲಿಲ್ಲ.

ನನ್ನ ಮೈ ಸಂಪೂರ್ಣ ಬೆವರಿ ಒದ್ದೆಯಾಗಿತ್ತು. ಕೈಕಾಲು ತೊಳೆದುಕೊಂಡು, ನನ್ನ ಸ್ನಾನದ ಟವೆಲಿನಿಂದ ಮೈ ಚೆನ್ನಾಗಿ ಒರೆಸಿ ಕೊಂಡೆ. " ದೇವರೇ! ಇನ್ನೆಂದಿಗೂ ಉರುಳು ಇರಿಸುವ ಸಾಹಸ ಮಾಡುವುದಿಲ್ಲ. ಇದೊಂದು ಸಲಕ್ಕೆ ನನ್ನನ್ನು ಉಳಿಸಿಬಿಡು! " ಎಂದು ದೇವರನ್ನು ಪ್ರಾರ್ಥಿಸಿದೆ.

ಸಧ್ಯ, ದೇವರು ಕರುಣೆ ತೋರಿಸಿಯೇ ಬಿಟ್ಟ!

ಮರುದಿನ ನಮ್ಮ ಕೆಲಸದ ನಾಗು ಗೌಡನಿಂದ ಹಿಂದಿನ ದಿನ ಸಂಜೆ ನಡೆದ ಗಲಾಟೆಯ ಸಂಗತಿ ತಿಳಿಯಿತು. ಅದೇನೆಂದರೆ, ಐತು ಶೆಟ್ಟಿಯು ತನ್ನ ಕೋಳಿ ಪಂದ್ಯದ ‘ ಹಳೇ ದ್ವೇಷಿ’ಯಾದ ಕೊರಗ ಪೂಜಾರಿಯ ಮನೆಗೆ ಹೋಗಿ ಆತನನ್ನು ಹಿಗ್ಗಾ ಮುಗ್ಗ ಬಡಿದು " ಇನ್ನೊಮ್ಮೆ ನನ್ನ ಮೈರನನ್ನು ಉರುಳು ಇಕ್ಕಿ ಹಿಡಿಯಲು ಪ್ರಯತ್ನಿಸಿದರೆ, ನಿನ್ನನ್ನು ಕೊಂದುಹಾಕುವೆ!  ಜೈಲು ಸೇರಿದರೂ ಪರವಾಗಿಲ್ಲಾ! " ಎಂದು ಕೂಗಾಡಿದನಂತೆ. 

" ನನ್ನನ್ನು ಕಾಪಾಡಿದ ದೇವರು ಏಷ್ಟು ದಯಾಮಯನು! " ಎಂದು ಗುಟ್ಟಿನಲ್ಲಿ ದೇವರಿಗೆ ಕೈಮುಗಿದೆ. ನನ್ನಿಂದಾಗಿ ನಿರಪರಾಧಿಯಾದ ಕೊರಗ ಪೂಜಾರಿ ಪೆಟ್ಟು ತಿಂದ, ಸಹಸ್ರನಾಮವನ್ನೂ ಕೇಳಿದ! ಇದಕ್ಕೆ ಹೊಣೆ ನಾನು!  ಆದರೆ, ನನ್ನ ತಪ್ಪಿಗೆ ಕ್ಷಮೆ ಕೇಳುವ ಧೈರ್ಯ ನನಗಿರಲಿಲ್ಲ. 

ಇಂದು ಆ ಐತು ಶೆಟ್ಟಿ ಮತ್ತು ಕೊರಗ ಪೂಜಾರಿ ಇಬ್ಬರೂ ಜೀವಂತ ಇಲ್ಲ. 

ಎಂದಾದರೊಂದು ದಿನ ನಾನು ಸತ್ತು ‘ ನರಕಕ್ಕೆ ’ ( ಸ್ವರ್ಗಕ್ಕೆ ನನ್ನಂತಹರಿಗೆ ಪ್ರವೇಶ ಕೊಡುವುದಿಲ್ಲ! ) ಹೋದಾಗ ಅಲ್ಲಿ ‘ ಕೋಳಿ ಪಂದ್ಯ’ ನಡೆಯುವ ತಾವಿಗೆ ಹೋಗುತ್ತೇನೆ. ಅಲ್ಲಿ ಖಂಡಿತವಾಗಿ ಐತು ಶೆಟ್ಟಿ ಮತ್ತು ಕೊರಗ ಪೂಜಾರಿ ಸಿಕ್ಕೇ ಸಿಗುತ್ತಾರೆ. ಅವರಿಬ್ಬರಿಗೂ ಒಂದೊಂದು ಸಿಂಗಲ್ ಚಹಾ ಕುಡಿಸಿ, ನಾನು ನಿಜ ಸಂಗತಿಯನ್ನು ಅವರಿಗೆ ಹೇಳಿ, ನಾನು ಅವರಿಬ್ಬರ  ಕ್ಷಮೆ ಯಾಚಿಸಿ  ಮನಸ್ಸು ಹಗುರ ಮಾಡಿಕೊಳ್ಳುತ್ತೇನೆ".



- ಮಧುಸೂದನ ಪೆಜತ್ತಾಯ.



 ಸುಲಲಿತ ಪ್ರಬಂಧದ ಶೈಲಿಯಲ್ಲಿ ಜೀವನಾನುಭವವನ್ನ ವಿವರಿಸುವ ಕನ್ನಡದದ ಅಪರೂಪದ ಲೇಖಕರಲ್ಲಿ ಒಬ್ಬರು ಮಧುಸೂದನ ಪೆಜತ್ತಾಯರು. ವಾಸ್ತವದಲ್ಲಿ ಕೃಷಿಕರಾಗಿರುವ ಅವರು ಸಾಹಿತ್ಯ ಕೃಷಿಗೆ ಇಳಿದದ್ದು ತೀರ ಇತ್ತೀಚಿಗೆ. ಅಂತರ್ಜಾಲದ ಸಾಹಿತ್ಯಿಕ ಪತ್ರಿಕೆಯಾಗಿದ್ದ "ಕೆಂಡಸಂಪಿಗೆ"ಗೆ ನಿಯಮಿತವಾಗಿ ಅಂಕಣ ಬರೆಯುವುದರ ಮೂಲಕ. ಅನಂತರ ತಮ್ಮ ಕೃಷಿ ಅನುಭವಗಳನ್ನ ಸತತವಾಗಿ 'ದಟ್ಸ್ ಕನ್ನಡ' 'ಕನ್ನಡ ಕಲಿ' 'ಕನ್ನಡ ಧ್ವನಿ' ಹಾಗೂ 'ಜಗಲಿ' ಅಂತರ್ಜಾಲ ಪುಟಗಳಿಗೂ ಬರೆದಿದ್ದರೆ. 'ವಿಜಯ ಕರ್ನಾಟಕ' ಹಾಗೂ ಕೃಷಿಕರ ಪತ್ರಿಕೆಯಾದ 'ಅಡಿಕೆ ಪತ್ರಿಕೆಗೂ' ನಿರಂತರವಾಗಿ ಬರೆದಿದ್ದಾರೆ.


ರಾಯಚೂರಿನ ಗಂಗಾವತಿ ಬಳಿಯ ಸಿಂಡಿಕೇಟ್ ಬ್ಯಾಂಕಿನ 'ತುಂಗಭದ್ರಾ ಫಾರ್ಮ್"ನ ವ್ಯವಸ್ಥಾಪಕರಾಗಿದ್ದ ಕಾಲದಿಂದ ಹಿಡಿದು ಈಗ ತಮ್ಮ ಸ್ವಂತದ ಕಳಸ ಬಳಿಯ ಬಾಳೆಹೊಳೆಯ 'ಸುಳಿಮನೆ ಎಸ್ಟೇಟ್'ನ ಕೃಷಿ ಚಟುವಟಿಕೆ ಹಾಗೂ ಅದರ ನೋವು ನಲಿವುಗಳ ಕುರಿತ ಅವರ ಬರಹಗಳು ಮಲೆನಾಡಿನ ಕುರಿತ ಅವರ ನಿಖರ ಗ್ರಹಿಕೆಯನ್ನ ಓದುಗರ ಮುಂದೆ ತೆರೆದಿಡುತ್ತವೆ. ಕನ್ನಡದ ಮಟ್ಟಿಗೆ ಕುವೆಂಪು, ಕಾಕೆಮಾನಿ, ಕೆದಂಬಾಡಿ ಜತ್ತಪ್ಪ ರೈ, ಕೋಟ ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ, ಬಿಳುಮನೆ ರಾಮದಾಸ್, ಗಿರಿಮನೆ ಶ್ಯಾಮರಾವ್, ಕಲ್ಕುಳಿ ವಿಠ್ಠಲ ಹೆಗ್ಗಡೆ, ಕಡಿದಾಳು ಶಾಮಣ್ಣ, ಡಾ ನಾ ಡಿ'ಸೋಝಾ ಹಾಗೂ ನಾಗೇಶ ಹೆಗಡೆಯವರ ಪರಿಸರ ಪ್ರೇಮಿ ಬರಹಗಳು ಕೊಡುವ ಸುಖಾನುಭವವನ್ನೆ ಪೆಜತ್ತಾಯರ ಕೃತಿಗಳ ಓದು ಸಹ ನೀಡುತ್ತದೆ.

"ನಮ್ಮ ರಕ್ಷ್ಗಕ ರಕ್ಷಾ" "ರೈತನಾಗುವ ಹಾದಿಯಲ್ಲಿ" "ಕಾಗದದ ದೋಣಿ ಯಾನ ೧ ಹಾಗೂ ೨" ಈ ವರೆಗಿನ ಅವರ ಪ್ರಕಟಿತ ಕೃತಿಗಳು. "ಕಾಗದದ ದೋಣಿ" ಅವರ ಬಾಲ್ಯದ ಅನುಭವಗಳು ಹಾಗೂ ಅವರ ಕೃಷಿ ಸಾಹಸಗಳ ಶಿರೂರು, ಗಂಗಾವತಿ ಹಾಗೂ ಸುಳಿಮನೆಗಳ ಕೇಂದ್ರಿತ ಚಟುವಟಿಕೆಗಳಿಂದ ಪ್ರೇರಿತವಾಗಿವೆ. ಬಿಡಿ ಬಿಡಿ ಬರಹಗಳ ರೂಪದಲ್ಲಿ ಪುಸ್ತಕ ಪ್ರಕಟವಾಗಿದ್ದು ಓದುಗರನ್ನ ನಲವತ್ತು ವರ್ಷ ಹಿಂದಿನ ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನ ಪರಿಸರದ ಜೊತೆಗೆ ರಾಯಚೂರಿನ ಸುಡು ಬಿಸಿಲ ಬದುಕಿನ ಅದು ದರ್ಶನವನ್ನ ಮಾಡಿಸುತ್ತದೆ. ಆಂಗ್ಲ ಭಾಷೆಯ ಮೇಲೆ ಅದ್ಭುತ ಹಿಡಿತ ಸಾಧಿಸಿರುವ ಇವರು ಸಾಮಾನ್ಯವಾಗಿ ಬರೆಯುವುದು ಅದೆ ಭಾಷೆಯಲ್ಲಿ. ಅವರ VOYAGE OF A PAPER BOATನ ಮುಂದುವರೆದ ಯಾನ ೩ ಹಾಗೂ ೪ನ್ನ ಕನ್ನಡಕ್ಕೆ ತರುವ ಹೊಣೆ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಅದರ ಕೆಲಸ ಈಗ ಬಹುತೇಕ ಮುಗಿದಿದೆ. ಇನ್ನು ಕನ್ನಡದ ಕೃತಿಗಳನ್ನ ಇಂಗ್ಲೀಷಿಗೆ ಅನುವಾದಿಸುವಲ್ಲಿ ಅವರ ಉತ್ಸಾಹ ಅದ್ವಿತೀಯ. ಈಗಾಗಲೆ ಡಾ ನಾರಾಯಣ ಭಟ್ಟ ಮೊಗಸಾಲೆಯವರ "ಉಲ್ಲಂಘನೆ" ಹಾಗೂ ಡಾ ನಾರ್ಬರ್ಟ್ ಡಿ'ಸೋಝರ "ಬಾಮಣ್" ಅವರ ಮೂಲಕ ಆಂಗ್ಲಾನುವಾದ ಗೊಂಡಿದ್ದು ಇನ್ನೇನು ಪ್ರಕಟಣೆಯ ಹೊಸ್ತಿಲಿನಲ್ಲಿವೆ. ಸದ್ಯ ಕೆ ಟಿ ಗಟ್ಟಿಯವರ "ಅರಗಿನ ಮನೆ"ಯ ಅನುವಾದ ಅವರಿಂದ ಸಾಗಿದೆ. ಇಷ್ಟಲ್ಲದೆ ಅವರ ಅಮೇರಿಕನ್ ಪೀಸ್ ಕೋರ್ ಗೆಳೆಯ ಕೆನ್ನೆತ್ ಜೊತೆಗೆ ಜಂಟಿಯಾಗಿ ಸರದಿ ಲೇಖನಗಳ ಮೂಲಕ ಗಂಗಾವತಿಯ ಕೃಷಿ ಅನುಭವಗಳನ್ನೂ ಬರೆದಿದ್ದು ಅದು ಅಮೇರಿಕದಲ್ಲಿ ಪ್ರಕಟಣೆ ಕಂಡಿದೆ.

ವಯಸ್ಸಿನ ಅವಕೃಪೆಯ ಕಾರಣ ಸದ್ಯ ಅವರ ಒಂದು ಕಿವಿ ತುಸು ಮಂದ, ಒಂದು ಕಣ್ಣು ಸಂಪೂರ್ಣ ಕತ್ತಲು ಹಾಗೂ ನಡುಗೆ ತುಸು ನಿಧಾನ ಆದರೆ ಇದೆಲ್ಲದರ ನಡುವೆಯೂ ಅವರ ಜೀವನ ಉತ್ಸಾಹ ಮಾತ್ರ ಬೆರಗು ಹುಟ್ಟಿಸುವಂತದ್ದು. "ನನ್ನನ್ನು ಯಾರಾದರೂ ಒಳ್ಳೆಯ ಬರಹಗಾರ ಅಲ್ಲ ಅಂದರೆ ಅಡಿ ಇಲ್ಲ, ಅದು ನಿಜವಿದ್ದೀತು! ಆದರೆ ಒಬ್ಬ ಒಳ್ಳೆ ಕೃಷಿಕ ಅಲ್ಲ ಅಂದರೆ ಮಾತ್ರ ಸಿಟ್ಟು ಬರುತ್ತದೆ?!" ಎನ್ನುವ ಪೆಜತ್ತಾಯರ ಮೂಲಕ ಸದ್ಯದಲ್ಲಿಯೆ ಇನ್ನಷ್ಟು ಕನ್ನಡದ ಬರಹಗಾರರು ಜಾಗತಿಕ ಓದುಗರನ್ನ ಮುಟ್ಟಲಿಕ್ಕಿದ್ದಾರೆ. ಅವರ ನೇರ ಬರಹಗಳೂ ಸಹ ಇನ್ನಷ್ಟು ಮೂಡಿಬರಲಿಕ್ಕಿದ್ದು ತಾನು ಒಳ್ಳೆಯ ಬರಹಗಾರನಲ್ಲ ಎನ್ನುವ ಅವರ ಸಿನಿಕ ಗ್ರಹಿಕೆಯನ್ನ ಸುಳ್ಳು ಮಾಡಲಿಕ್ಕಿವೆ.

ಪುಸ್ತಕದೊಳಗೆ - ೮


"ಮುಳುಗಡೆ"
ಲೇಖಕ; ಡಾ ನಾರ್ಬರ್ಟ್ ಡಿ'ಸೋಝಾ,
ಪ್ರಕಾಶಕರು; ರವೀಂದ್ರ ಪುಸ್ತಕಾಲಯ,
ಪ್ರಕಟಣೆ; ೧೯೮೮,
ಕ್ರಯ; ರೂಪಾಯಿ ೮೦.
" ಸಣ್ಣದೇವೇಗೌಡನಿಗೆ ಶಿವಮೊಗ್ಗದಲ್ಲಿ ನೂರಾರು ಕೆಲಸಗಳು. ಅಂಗಡಿ, ವರ್ಕ್'ಶಾಪು, ಗ್ಯಾರೇಜು ಎಂದೆಲ್ಲ ತಿರುಗಾಡಿದ್ದಾಯಿತು. 'ಇದಕ್ಕಿಂತ ಹಳ್ಳಿಯಲ್ಲಿ ತಿರುಗಾಡೋದೆ ವಾಸಿ' ಅಂದೆ. ಒಂದು ಘಂಟೆಗೆ ಊಟಕ್ಕೆ ಹೋದೆವು, ಊಟ ಅರ್ಧ ಆಗಿರಲಿಲ್ಲ ಅರಮನೆ ಹಕ್ಲು ರಂಗೇಗೌಡರು ಒಳಬಂದರು. ಗೌಡನಿಗೆ ಮೊದಲೆ ಪರಿಚಯವಂತೆ, ಅವನ ಬಳಿಯೆ ಅವರು ಬಂದು ಕುಳಿತರು. ನನ್ನನ್ನು ನೋಡಿ 'ನೀವೂ...' ಎಂದು ರಾಗ ಎಳೆದರು. 'ನಿಮ್ಮಲ್ಲಿಗೆ ಬಂದಿದ್ದೆ ಲಕ್ಷ್ಮಿನಾರಾಯಣ ವಿಗ್ರಹ ಹುಡುಕಿಕೊಂಡು' 'ನೆನಪಾಯ್ತು, ನೆನಪಾಯ್ತು, ಸಿಕ್ಕಿತೆ ಅದು?' ಎಂದು ವಿಚಿತ್ರವಾಗಿ ಕಣ್ಣು ಕಿರಿದುಗೊಳಿಸಿ ಕೇಳಿದರು. 'ಎಲ್ಲಿ ಸಿಗುತ್ತೆ ಸ್ವಾಮಿ? ಯಾವ ದೇಶವನ್ನು ಸುತ್ತಿಕೊಂಡು ಬರಲು ಹೋಗಿದ್ದಾನೋ ಲಕ್ಷ್ಮಿನಾರಾಯಣ!' ಎಂದು ಸೂಕ್ಷ್ಮವಾಗಿ ಅವರ ಮುಖವನ್ನ ದಿಟ್ಟಿಸಿದೆ. 'ಹಾಹಾಹಾ' ಎಂದು ನಕ್ಕರು. ಕ್ಲೋಸ್ ಕಾಲರಿನ ಹಸಿರು ಕೋಟು, ಪ್ಯಾಂಟು, ಟೋಪಿ, ದಪ್ಪ ಕನ್ನಡಕ ಾವರ ಎತ್ತರದ ಮೈಕಟ್ಟಿಗೆ ಉಡುಪು ಸೂಕ್ತವಾಗಿ ಹೊಂದಿಕೊಂಡಿತ್ತು. ಮಾತು ನೋಟದಲ್ಲಿ ಒಂದು ದರ್ಪ, ಗೈರತ್ತು, ಕೈಬೀಸುವುದು, ತೋಳು ಕುಣಿಸುವುದು ಮೊದಲಾದ ಅಂಗ ಚಲನೆಗಳು ಬೇರೆ.
'ಏನು ಸಮಾಚಾರ ಸಣ್ಣದೇವೇಗೌಡ್ರೆ?' 'ಹೇಳಿ ಸ್ವಾಮಿ.... ಮನೆ ಕೆಲಸ ಎಲ್ಲಿಗೆ ಬಂತು?' 'ನಡೀತಿದೆ... ನೀವು ನೋಡಲಿಲ್ಲ ಅಲ್ವೆ?.... ಈಗ ಹೋಗೋಣ.' ಊಟ ಸಾಗಿತು, ಕೇಳದೆಯೆ ರಂಗೇಗೌಡರು ಹೇಳುತ್ತಿದ್ದರು. 'ಪುರುಸೊತ್ತೆ ಇಲ್ಲಾ ನೋಡಿ, ಮೊನ್ನೆ ಬೆಂಗಳೂರಿಗೆ ಹೋಗಿದ್ದೆ, ನೆನ್ನೆ ಬೆಳಗ್ಯೆ ಬಂದೆ, ಮತ್ತೆ ಚೀಪು ಫೋನ್ ಮಾಡಿದಾರೆ, ನಾಳೆ ಹೋಗಬೇಕು, ಈ ಮುಳುಗಡೆ ವ್ಯವಹಾರದಲ್ಲಿ ನಾನೂ ಮುಳುಗಿ ಹೋದೆ, ಊಟ ನಿದ್ದೆ ಯಾವುದಕ್ಕೂ ಪುರುಸೋತ್ತಿಲ್ಲ.' ಸಣ್ಣದೇವೇಗೌಡ 'ಹಾಂಹೂಂ'ಎಂದು ಊಟ ಸಾಗಿಸಿದ. ಒಂದೆರಡು ಸಾರಿ ನಾನು ನೋಡಿದಾಗ ಕಣ್ಣು ಮಿಟುಕಿಸಿದ. ಊಟ ಮುಗಿಯಿತು. 'ಬನ್ನಿ ಕಾರಿದೆ ಹೋಗೋಣ' ಎಂದರು ಗೌಡರು. ನಾವು ಕಾರನ್ನು ಏರಿದೆವು, ನಮ್ಮ ಜೀಪು ಹಿಂಬಾಲಿಸಿತು.
ದುರ್ಗಿಗುಡಿಯಾಚೆಯ ಹೊಸ ಬಡಾವಣೆ ಮನೆ ಅರ್ಧ ಎದ್ದಿತ್ತು. ಆದರೆ ಮಜಭೂತಾಗಿ ಕಟ್ಟಿಸಿದ್ದರು ಗೌಡರು. ಅವರೆ ನಿಂತು ವಿವರಿಸಿದರು, ಇದು ಪೋರ್ಟಿಕೋ, ಇದು ವರಾಂಡ, ಇದು ಆಫೀಸು, ದೇವರ ಮನೆ, ಹಾಲು, ಬೆಡ್ಡು, ಡೈನಿಂಗು, ಅಡುಗೆ ಮನೆ, ಕೆಳಗೆ ನಾಲ್ಕು ರೂಮುಗಳು, ಮೇಲೆ ದೊಡ್ದ ಹಾಲು ಮತ್ತೆ ನಾಲ್ಕು ರೂಮುಗಳು, ಪ್ರತಿಯೊಂದಕ್ಕೂ ತಗುಲಿಕೊಂಡೆ ಕಕ್ಕಸು, ತೋಟ ಸುತ್ತಲೂ ಬರುತ್ತೆ, ಗ್ಯಾರೇಜು. 'ಏನು ಇಷ್ಟೊಂದು ರೂಮುಗಳು!' 'ನಾಲ್ಕು ಜನ ಹುಡುಗರಿಗೆ, ನಾಲ್ಕು ಜನ ಹೆಣ್ಣು ಮಕ್ಕಳೂ ಬಂದರೆ ಅವರಿಗೂ ಬೇಕಲ್ಲ ಸಪರೇಟಾಗಿ, ಇನ್ನು ನೆಂಟ್ರುಪಂಟ್ರು ಬರ್ತಾರೆ, ಅವರಿಗೆ ಬೇಕಲ್ಲ, ಸಾಲದೇನೋ ಅನ್ನಿಸ್ತಿದೆ ನನಗೆ, ಹಳ್ಳಿಲಿದ್ದೆ ಯಾರೂ ಬರ್ತಿರಲಿಲ್ಲ, ಸಿಟಿ ಸೇರಿದ ಮೇಲೆ ಬಂದು ಹೋಗೋರು ಇದ್ದೇ ಇರ್ತಾರೆ ನೋಡಿ' 'ಅಂತೂ ಪೇಟೆಯವರಾಗ್ತಿದೀರ' 'ಆಗೋದಪ್ಪ, ನನಗೂ ಆ ಕೊಂಪೆಲಿದ್ದು ಬೇಸರ ಬಂದು ಹೋಗಿತ್ತು, ಗಾಜನೂರು ದೂರ ಇಲ್ಲ, ಜಮೀನು ಅಲ್ಲಿ, ಮನೆ ಇಲ್ಲಿ' ಮನೆ ನೋಡಿ ಮುಗಿಸಿ ನಾವು ಜೀಪು ಹತ್ತಿದೆವು. ಸಣ್ಣದೇವೇಗೌಡ 'ನೋಡಿದಿರಾ?' 'ನೋಡಿದೆ' 'ಶರಾವತಿಗೆ ಅಣೆಕಟ್ಟು ಕಟ್ಟಬಾರದು ಅಂತ ಇದೆ ಮನುಷ್ಯ ಉಪವಾಸ ಸತ್ಯಾಗ್ರಹ ಮಾಡಿದ್ದ! ಅಮರಣಾಂತ ಉಪವಾಸ ಸತ್ಯಾಗ್ರಹ?!' 'ಹೌದೇನು!' 'ಈಗ ಮುಳುಗಡೆಯಿಂದ ಹೆಚ್ಚು ಲಾಭ ಆಗಿರೋದು ಸಹ ಇವನಿಗೇನೆ!'
ನಾನು ಕೇಳುತ್ತ ಕುಳಿತೆ.
- ಡಾ ನಾ ಡಿ'ಸೋಝಾ.
ಮಲೆನಾಡಿನ ಹಾಗೂ ಪಶ್ಚಿಮ ಘಟ್ಟಗಳ ಕುರಿತು ದಟ್ಟ ಬಣ್ಣನೆ ಬರುವ ಅನೇಕ ಕಥೆ ಕಾದಂಬರಿಗಳನ್ನ ಬರೆದಿರುವ ನಾರ್ಬರ್ಟ್ ಡಿ'ಸೋಝರು ಸಾಗರದಂತಹ ಊರಿನಲ್ಲಿ ಕುಳಿತು ನಡೆಸುವ ತಮ್ಮ ಸಾಹಿತ್ಯಿಕ ಚಟುವಟಿಕೆಗಳಿಂದ ನಾಡಿನಾದ್ಯಂತ ಖ್ಯಾತರಾದವರು. ಲೋಕೋಪಯೋಗಿ ಇಲಾಖೆಯಲ್ಲಿ ಬೆರಳಚ್ಚುಗಾರರಾಗಿದ್ದ ಅವರು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಹಾಗೂ ಸಾಗರ ಉಪವಿಭಾಗಗಳಲ್ಲಿ ಸೇವೆ ಸಲ್ಲಿಸುವಾಗ ಅಣೆಕಟ್ಟುಗಳ ನಿರ್ಮಾಣ ಅದರಿಂದಾಗುವ ಜನ ಸಂಸ್ಕೃತಿಯ ವಿನಾಶ, ಪರಿಸರಕ್ಕೆ ಬಂದೆರಗಿದ ಮಾಸಲಾಗದ ಧಕ್ಕೆ ಇವುಗಳನ್ನೆಲ್ಲ ಬಹಳ ಹತ್ತಿರದಿಂದ ಕಂಡು ನೊಂದವರು. ಹಿರೆ ಭಾಸ್ಕರ ಅಣೆಕಟ್ಟನ್ನ ಮುಳುಗಿಸಿದ ಲಿಂಗನಮಕ್ಕಿ ಅಣೆಕಟ್ಟು, ಅದೆ ಅಣೆಕಟ್ಟೆಯಲ್ಲಿ ಮುಳುಗಿದ ತಡಗಳಲೆ ಒಡ್ಡು, ವಾರಾಹಿಯನ್ನ ತಡೆದು ನಿಲ್ಲಿಸಿದ ಯಡೂರು ಅಣೆಕಟ್ಟು, ಚಕ್ರಾ ನದಿಯನ್ನ ಹಿಡಿದುಕೊಂಡ ಚಕ್ರಾ ಅಣೆಕಟ್ಟು ಹೀಗೆ ಎಲ್ಲಾ ಒಡ್ಡುಗಳೂ ಮಲೆನಾಡಿನ ಜೀವ ವೈವಿಧ್ಯ ಹಾಗೂ ಪರಿಸರಕ್ಕೆ ತಂದೊಡ್ಡಿದ ಹಾನಿಯನ್ನ ಅವರ ಬರಹಗಳಲ್ಲಿ ಸಶಕ್ತವಾಗಿ ಬಿಂಬಿಸಿದ್ದಾರೆ.
ರಾಜಧಾನಿಯ ಚಿಲ್ಲರೆ ಸಾಹಿತ್ಯಿಕ ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಅವರ ತಮ್ಮ ಹುಟ್ಟೂರಿಗೆ ಒಂದು ಸಾಂಸ್ಕೃತಿಕ ಚೌಕಟ್ಟು ಹಾಕಿ ಕೊಟ್ಟಿರುವ ಸಾಗರ ಕೇಂದ್ರಿತ ಚಟುವಟಿಕೆಗಳು ಕೇವಲ ಬರಹಕ್ಕೆ ಮಾತ್ರ ಸೀಮಿತವಾಗಿರದೆ ಪರಿಸರ ಹೋರಾಟ, ತಿರುಗಾಟದ ನಾಟಕ, ನದಿ ಉಳಿಸಿ ಚಳುವಳಿ, ರೈಲ್ವೆ ಹೋರಾಟ ಸಮಿತಿ ಹೀಗೆ ಅಸಂಖ್ಯ. ಅಣೆಕಟ್ಟು ಹಾಗೂ ಮುಳುಗಡೆಗಳ ಸಂಬಂಧ ಕನ್ನಡವಷ್ಟೆ ಅಲ್ಲದೆ ಇನ್ಯಾವುದೆ ಭಾರತೀಯ ಭಾಷೆಗಳಲ್ಲೂ ಇವರಷ್ಟು ಬರೆದವರು ಇನ್ಯಾರೂ ಇದ್ದಿರಲಾರರು. "ಮುಳುಗಡೆ" "ಗುಣವಂತೆ" "ಒಡ್ಡು' ಹಾಗೂ "ದ್ವೀಪ" ಅವರು ಈ ಸಂಗತಿಯ ಕುರಿತು ಬರೆದಿರುವಂತಹ ಕಾದಂಬರಿಗಳು. ಅದರಲ್ಲೂ "ಮುಳುಗಡೆ" ಲಿಂಗನಮಕ್ಕಿ ಅಣೆಕಟ್ಟಿನ ನಿರ್ಮಾಣ ಕಾಲದ ಸಚಿತ್ರ ದರ್ಶನ ಮಾಡಿಸುತ್ತದೆ. ಭೂಹೀನರಾಗಿ ನೆಲ ತೊರೆದ ಆದಿವಾಸಿ ಹಸಲರ ಸಂಕಟ, ಸಮಯಸಾಧಕರಾಗಿ ಊರ ದೇವರ ಪ್ರತಿಮೆಗಳನ್ನೂ ವಿದೇಶಕ್ಕೆ ಮಾರಿಕೊಂಡು ತಿಂದ ಜಮೀನ್ದಾರರ ಸಮಯಸಾಧಕತನ, ಲಂಚಕೋರ ಅಧಿಕಾರಿಗಳ ದುರಾಸೆಯ ಪರಮಾವಧಿ ಹಾಗೂ ದರ್ಪ, ಮೂಕ ಪಶುಗಳ ಒಡಲ ಆಕ್ರಂದನ, ಸರಕಾರಿ ನೀತಿಗಳ ದುರುಳತನ, ಇವೆಲ್ಲವನ್ನೂ ನೋಡಿಕೊಂಡು ನಿರ್ಲಿಪ್ತಳಾಗಿ ಹರಿಯುತ್ತಿದ್ದ ಶರಾವತಿ ಒತ್ತಾಯಕ್ಕೆ ಒಡ್ಡು ಹೊಕ್ಕಿ ನಿಂತದ್ದು ಎಲ್ಲವನ್ನೂ ಅವರು ಸೂಕ್ಷ್ಮವಾಗಿ ನಿರೂಪಿಸಿದ್ದಾರೆ. ಈ ಪೈಕಿ "ದ್ವೀಪ" ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಅದೆ ಹೆಸರಿನ ಚಲನಚಿತ್ರವಾಗಿ ರಾಷ್ಟ್ರೀಯ ಮನ್ನಣೆಯನ್ನೂ ಗಳಿಸಿದೆ.
"ಮುಳುಗಡೆ' ಹಿಂದೆ ಕುವೆಂಪು ವಿಶ್ವವಿದ್ಯಾಲಯದ ಪದವಿ ತರಗತಿಗಳ ಪಠ್ಯವಾಗಿತ್ತು, ಈಗ ಮಂಗಳೂರು ವಿಶ್ವವಿದ್ಯಾಲಯ ಅದನ್ನ ತನ್ನ ಪದವಿ ಪಠ್ಯದಲ್ಲಿ ಅಳವಡಿಸಿಕೊಂಡಿದೆ. ೧೯೮೩ನೆ ಸಾಲಿನ ಸುಧಾ ಕಾದಂಬರಿ ಸ್ಪರ್ಧೆಯ ವಿಜೇತ ಕೃತಿಯಾದ ಇದರ ಓದು ಸ್ವಾತಂತ್ರೋತ್ತರ ಭಾರತದಲ್ಲಿ ಅಣೆಕಟ್ಟಿನ ಹೆಸರಿನಲ್ಲಿ ಆದ ಸರಕಾರಿ ಸೊಕ್ಕಿನ ಪ್ರದರ್ಶನವನ್ನ ಅರಿತುಕೊಳ್ಳಲಿಕ್ಕೆ ಸಹಕಾರಿ.

ಪುಸ್ತಕದೊಳಗೆ - ೫




( ಬರಹ; ರಂಜಿತ್ ಅಡಿಗ.)


ಹೆಸರು : ಖುಷಿಯಿಂದ ರಮೇಶ್
ಲೇಖಕರು : ರಮೇಶ್ ಅರವಿಂದ್ (ನಿರೂಪಣೆ : ಚೇತನ್ ನಾಡಿಗೇರ್)
ಪ್ರಕಾಶಕರು : ಸ್ಪೂರ್ತಿ, ಕಡಲು ಪ್ರಕಾಶನ, ನಂ. ೬೦೧, ೩ನೇ ಹಂತ, ೩ನೇ ಬ್ಲಾಕ್, ಬಸವೇಶ್ವರನಗರ, ಬೆಂಗಳೂರು – ೭೯.
ಮೊದಲ ಮುದ್ರಣ : ೨೦೧೩
ಬೆಲೆ : ರೂ.೨೫೦.

ಪುಸ್ತಕದ ಬಗ್ಗೆ : ಈಗಾಗಲೇ ನಟನೆಯಲ್ಲಿ ಮೂರು ದಶಕಗಳ ಕಾಲ, ಐದು ಭಾಷೆಗಳ ಸಿನಿಮಾರಂಗದಲ್ಲಿ ಗುರುತಿಸಿಕೊಂಡು, ಈಗಲೂ ತಮ್ಮ ಉತ್ತಮ ನಟನೆಯಿಂದ ಹೆಸರುವಾಸಿಯಾದ, ತಮ್ಮ ಕ್ರಿಯಾಶೀಲತೆಯ ವ್ಯಾಪ್ತಿಯನ್ನು, ನಟನೆ, ನಿರ್ದೇಶನ, ನಿರೂಪಣೆ, ಕಥೆಗಾರರಾಗಿ ವಿಸ್ತರಿಸಿಕೊಳ್ಳುತ್ತಿರುವ ಸೃಜನಾತ್ಮಕ ಪ್ರತಿಭೆ ರಮೇಶ್ ಅರವಿಂದ್. ನಟನೆಯ ಜೊತೆಗೆ ತಮ್ಮ ಸರಳತೆ, ಸಜ್ಜನಿಕತೆಗೂ ಪ್ರಸಿದ್ದರು. ಇನ್ನೊಂದು ಮಾತಲ್ಲಿ ಹೇಳಬೇಕೆಂದರೆ ಚಿತ್ರರಂಗದ ಅಜಾತಶತ್ರು. ಓದುವಿಕೆ ಎನ್ನುವ ಉತ್ತಮ ಹವ್ಯಾಸವುಳ್ಳ ರಮೇಶ್ ಅರವಿಂದ್ ಗೆ ವ್ಯಕ್ತಿತ್ವ ವಿಕಸನ ಪುಸ್ತಕದ ಓದಿನಲ್ಲಿ ಹೆಚ್ಚು ಆಸಕ್ತಿ. ಅವರ ಜೀವನಾನುಭವದಲ್ಲಿ ಜೀವನಸ್ಫೂರ್ತಿಯುಳ್ಳ ವಿಚಾರಗಳ ಬಗ್ಗೆ ರೂಪತಾರಾ ಮಾಸಿಕದಲ್ಲಿ ಬರೆಯುತ್ತಿದ್ದುದು ಈಗ ’ಖುಷಿಯಿಂದ ರಮೇಶ್’ ಪುಸ್ತಕವಾಗಿ ಪ್ರಕಟಗೊಳ್ಳುತ್ತಿದೆ.
ರಮೇಶ್ ಒಬ್ಬ ನಟರಾಗಿ ನಿರ್ದೇಶಕರಾಗಿ ವಿವಿಧ ಸ್ಥಳಗಳಿಗೆ ಹೋಗಬೇಕಾಗುತ್ತದೆ. ಬೇರೆ ಬೇರೆ ರೀತಿಯ ವ್ಯಕ್ತಿಗಳೊಡನೆ ವ್ಯವಹರಿಸಬೇಕಾಗುತ್ತದೆ. ಅವರ ಜೀವನಾನುಭವದ ಆಳ ವಿಸ್ತಾರ ಈ ನಿಟ್ಟಿನಲ್ಲಿ ದೊಡ್ಡದು. ಅವರ ಬಾಳ ಹರಿವಿನಲ್ಲಿ ಜೀವನೋತ್ಸಾಹ ಉಕ್ಕಿಸುವ ಅನೇಕ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಮಸ್ಕತ್ ಬಳಿ ಇರುವ ಸುರ್ ಬೀಚ್ ನ ಆಮೆಗಳ ವಿಷಯವನ್ನು ನಮ್ಮ ಬಾಳಿನ ಉತ್ಸಾಹಕ್ಕೆ ಉದಾಹರಣೆಯಾಗಿ ಕೊಟ್ಟಿದ್ದು, ಮಕ್ಕಳಿಗೆ ನೇತ್ರದಾನ ವಿಷಯವನ್ನು ಅದ್ಭುತವಾಗಿ ಡಾ ರಾಜ್ ಉದಾಹರಣೆಯಾಗಿ ವಿವರಿಸಿದ್ದು, ಬಾತುಕೋಳಿ ಈಜು, ಕುಂಗ್ಫು ಪಾಂಡಾ ಸಿನಿಮಾ, ಚೈನೀಸ್ ಭಾಷೆಯ ವೈಜಿ ಅನ್ನುವ ಪದ, ಇವೆಲ್ಲವನ್ನೂ ಸ್ಫೂರ್ತಿಗೊಳ್ಳಬೇಕಾದ ವಿಚಾರವನ್ನಾಗಿ ಹೇಳುವುದು ಈ ಪುಸ್ತಕದ ಹೆಗ್ಗಳಿಕೆ. ಟ್ರಾಫಿಕ್ ಜಾಮ್ ಒಂದರಿಂದ ಪ್ರೆಸ್ ಮೀಟ್ ಗೆ ತಡ ಆಗಿದ್ದನ್ನು, ನಮ್ಮ ಬಾಳಿನ ಗುರಿಗೆ ಅಡ್ಡಿಯಾಗಿಸಬಹುದಾದ ವಿಚಾರಗಳನ್ನು ಆಲೋಚಿಸುವಂತೆ ಪ್ರೇರೇಪಿಸುವ ಬರಹಗಳಿವೆ ಈ ಹೊತ್ತಗೆಯಲಿ.
ಚಿಕ್ಕ ವಿಷಯದಲ್ಲೂ ಬದುಕನ್ನು ನೋಡುವ, ಅದನ್ನೇ ಅನ್ವಯಿಸಿಕೊಂಡು ಬಾಳ್ವೆಯನ್ನು ಬೆಳಕಾಗಿಸುವ ಪ್ರಯತ್ನವೇ ಪುಸ್ತಕ. ಈ ನಿಟ್ಟಿನಲ್ಲಿ ರಮೇಶ್ ಅವರ ಅಬ್ಸರ್ವೇಶನ್ ಶಕ್ತಿಗೆ ಮೆಚ್ಚಿಕೊಳ್ಳಲೇಬೇಕು.
ಜೊತೆಗೆ ರಮೇಶ್ ಸಿನಿರಂಗದ ಮಜಲುಗಳನ್ನು ಪರಿಚಯಿಸುವ ಒಳ್ಳೊಳ್ಳೆ ಫೋಟೋಗಳಿವೆ. ಒಂದು ಫೋಟೋದಲ್ಲಿ ದಕ್ಷಿಣ ಭಾರತದ ದಿಗ್ಗಜ ಕಲಾವಿದರೆಲ್ಲಾ (ವಿಕ್ಟರಿ ವೆಂಕಟೇಶ್,ಅಂಬರೀಶ್, ಸುಮಲತಾ, ರವಿಚಂದ್ರನ್,ಅರ್ಜುನ್ ಸರ್ಜಾ, ಶರತ್ ಕುಮಾರ್, ರಮ್ಯಕೃಷ್ಣ, ಸರಿತಾ, ನಂದಮೂರಿ ಬಾಲಕೃಷ್ಣ, ಮೋಹನ್ ಲಾಲ್, ಸುಹಾಸಿನಿ) ಫೋಟೋ ಒಂದಕ್ಕೆ ಪೋಸು ನೀಡಿದ್ದ ಅಮೂಲ್ಯ ಚಿತ್ರವೂ ಇರುವುದು ವಿಶೇಷ.
ಕೊನೆನುಡಿ : ಪುಸ್ತಕಕ್ಕೆ ಇನ್ನೂರೈವತ್ತು ಹೆಚ್ಚಾಯಿತೆನಿಸಿದರೂ, ಪುಸ್ತಕದೊಳಗಿನ ವಿಚಾರಧಾರೆ ಮತ್ತು ಫೋಟೋಗಳ ಜೊತೆಗೆ, ಬೈಂಡಿಂಗ್ ಮತ್ತು ಪುಟದ ಗುಣಮಟ್ಟ ಚೆನ್ನಾಗಿರುವುದರಿಂದ ಕೊಂಡುಕೊಳ್ಳಬಹುದು. ಪುಟ ವಿನ್ಯಾಸದಲ್ಲಿ ಉಲ್ಟಾ ಆಗಿ ಪ್ರಿಂಟಿಸಿರುವುದು, ಬದಿಯಾಗಿ ಓದಬೇಕಾಗುವಂತೆ ಮಾಡಿರುವುದು ಕೊಂಚ ಅಡ್ಡಿಯೆನಿಸಿದರೂ ಸೃಜನಾತ್ಮಕತೆಯ ಪ್ರಯತ್ನವಾಗಿ ಮೆಚ್ಚಿಕೊಳ್ಳಬೇಕು

ಪುಸ್ತಕದೊಳಗೆ - ೭



( ಬರಹ; ರಂಜಿತ್ ಅಡಿಗ.)

ಹೆಸರು : ಸಿನಿಮಾ, ಒಂದು ಜಾನಪದ ಕಲೆ
ಲೇಖಕರು : ಬರಗೂರು ರಾಮಚಂದ್ರಪ್ಪ
ಪ್ರಕಾಶಕರು : ಅಂಕಿತ ಪುಸ್ತಕ, ೫೩, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು -೪
ಮೊದಲ ಮುದ್ರಣ : ೨೦೦೭
ಬೆಲೆ : ೧೨೦

ಪುಸ್ತಕದ ಬಗ್ಗೆ : ಬರಗೂರರು ಹಗಲು ವೇಷ, ಶಾಂತಿ, ತಾಯಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಬಂಡಾಯ ಸಾಹಿತ್ಯದಲ್ಲಿ ಹೆಸರು ಮಾಡಿದ ಲೇಖಕರಲ್ಲಿ ಮೇಲ್ಪಂಕ್ತಿಯಲ್ಲಿರುವವರು. ಒಂದು ಊರಿನ ಕಥೆಗಳು, ಕಾಂಟೆಸ್ಸಾ ಕಾವ್ಯ, ನೆತ್ತರಲ್ಲಿ ನೆಂದ ಹೂ ಮುಂತಾದ ಕೃತಿಗಳನ್ನು ನೀಡಿದ್ದಾರೆ. ಸಿನಿಮಾ ರಂಗದ ಬಗ್ಗೆ ವಿವಿಧ ಕಾಲಘಟ್ಟದಲ್ಲಿ, ಬೇರೆ ಬೇರೆ ಪತ್ರಿಕೆಗಳಲ್ಲಿ ಬಂದ ಬರಗೂರು ರಾಮಚಂದ್ರಪ್ಪರವರ ಲೇಖನಗಳ ಸಂಗ್ರಹಬುಟ್ಟಿ ಈ ಪುಸ್ತಕ.
ಈ ಪುಸ್ತಕವನ್ನು ಬರಗೂರರು ಎರಡು ವಿಭಾಗವನ್ನಾಗಿ ಮಾಡಿದ್ದಾರೆ. ಮೊದಲ ವಿಭಾಗದಲ್ಲಿ ಸಿನಿಮಾವನ್ನು ಒಂದು ಜನಪದ ಕಲೆಯಾಗಿ ನೋಡುವ ಪ್ರಯತ್ನವಿದೆ. ಸಿನಿಮಾರಂಗವನ್ನು ಕಲೆ ಮಾತ್ರವಲ್ಲದೇ, ಒಂದು ಉದ್ಯಮವಾಗಿ ಮಾತ್ರ ಅಲ್ಲದೇ ಒಟ್ಟಾರೆ ಕಲೋದ್ಯಮವೆಂದು ನೋಡುವ ಬಗೆಯೂ ಇದೆ. ಸಿನಿಮಾದಲ್ಲಿ ಜಾತಿ ಮತ್ತು ವರ್ಗ, ಸಮೂಹ ಮಾಧ್ಯಮ ಸಂಸ್ಕೃತಿ ಮತ್ತು ಮಹಿಳೆ, ಭಾಷೆ ತಂತ್ರಜ್ಞಾನ ಮತ್ತು ಸಿನಿಮಾ, ದೂರದರ್ಶನ ಸಂಸ್ಕೃತಿ ಮುಂತಾದ ಲೇಖನಗಳ ಶೀರ್ಷಿಕೆಗಳೇ ಲೇಖನದ ಸಾರವನ್ನು ಬಿಚ್ಚಿಡುತ್ತದೆ. ಬರಗೂರರು ತಾವೂ ಸಿನಿಮಾ ನಿರ್ಮಾಪಕ ನಿರ್ದೇಶಕರಾದ್ದರಿಂದ ಮತ್ತು ಸಾಹಿತ್ಯದಲ್ಲೂ ತಮ್ಮ ಹೆಸರನ್ನು ಛಾಪಿಸಿದವರಾದ್ದರಿಂದ ಅವರ ದೃಷ್ಟಿಕೋನ ಸಿನಿಮಾವನ್ನು ಅಭ್ಯಸಿಸುವವರಿಗೆ ಒಂದೊಳ್ಳೆ ಮಾಪನವನ್ನು, ಹೊಸದೊಂದು ಪಾಯಿಂಟ್ ಆಫ್ ವ್ಯೂ ಕೊಡಬಹುದು. ಇನ್ನೊಂದು ಭಾಗದಲ್ಲಿ ರಾಜ್ಯ ಪ್ರಶಸ್ತಿಯ ಮಾನದಂಡವನ್ನು ಪ್ರಶ್ನಿಸುವ, ಅಲ್ಲಿ ಸೂಕ್ತ ನ್ಯಾಯ ಬಯಸುವ ಪ್ರಯತ್ನದ ಕುರಿತ ಲೇಖನವಿದೆ. ಪ್ರಶಸ್ತಿಯ ಬಗ್ಗೆ ಪ್ರಶ್ನಿಸುವ ವಿಚಾರದಲ್ಲಿ ತಾವು ಕೋರ್ಟಿಗೆ ಹೋದ ಬಗ್ಗೆಯಲ್ಲಿ ಸ್ವಂತಹಿತವಿಲ್ಲದಿರುವುದರ ಬಗೆಯ ಪ್ರಸ್ತಾಪವಿದೆ. ಒಂದು ಲೇಖನದಲ್ಲಿ ಡಾ ರಾಜ್ ವ್ಯಕ್ತಿತ್ವದ ಕುರಿತು ಚಂದದ ಬರಹವಿದೆ.
ಜೊತೆಗೆ ಚಿತ್ರಯಶಸ್ಸಿಗೆ ಬೇಕಾದ ಮೂಲದ್ರವ್ಯವೇನು, ಹೊಸ ರೀತಿ ಚಿತ್ರಗಳ ವಿತರಣೆಗೆ ಹೊಸ ವ್ಯವಸ್ಥೆ, ನನ್ನ ಸೂತ್ರಗಳನ್ನು ನಾನೇ ಮೀರುವ ಪ್ರಯತ್ನ, ಕಲಾತ್ಮಕ ಚಿತ್ರ ಕೂಡ ಕಮರ್ಷಿಯಲ್ ಚಿತ್ರ ಎಂಬ ಲೇಖನಗಳಿವೆ.
ಕೊನೆನುಡಿ : ಪುಸ್ತಕದ ಕೊನೆಯಲ್ಲಿ ತಮ್ಮ ಸಂದರ್ಶನಗಳನ್ನು ಪ್ರಕಟಿಸಿರುವುದು ಮತ್ತು ಲೇಖನಗಳ ಕೊನೆಯ ಭಾಗಗಳಲ್ಲಿ ತಮ್ಮ ಚಿತ್ರಗಳ ಕುರಿತು ಹೆಚ್ಚು ಬರೆದುಕೊಂಡಿರುವುದು ಓದುವಾಗ ಓದುಗನ ಚಿಂತನೆಗೆ ಅಡ್ಡಿ ಪಡಿಸಿರುವ ಸಂಗತಿಯಾಗಿದೆ. ಶೀರ್ಷಿಕೆ ಓದಿದ ಓದುಗ ಸಿನಿಮಾ ಎಂಬ ಕಲೆ ಅಥವಾ ಕಲೋದ್ಯಮದ ಬಗ್ಗೆ ಒಂದು ಜನರಲ್ ಆಗಿರುವ ಲೇಖನಗುಚ್ಚದ ನಿರೀಕ್ಷೆ ಇಟ್ಟಿರುತ್ತಾನೆ. ಪುಸ್ತಕದ ಎಂಭತ್ತು ಪ್ರತಿಶತ ಭಾಗದಲ್ಲಿ ಅದು ದೊರಕಿದರೂ ಮಿಕ್ಕುಳಿದ ಭಾಗದಲ್ಲಿ ನಿರಾಸೆಯಾಗುತ್ತದೆ. ಸಿನಿಮಾ ಕಲಾಸಕ್ತರು ಒಮ್ಮೆ ಓದಿ ನೋಡಬಹುದಾದ ಪುಸ್ತಕವಿದು.