20 October 2015

ವಲಿ ( ಭಾಗ - ೧೧.)








ಅದೇನೆ ಇದ್ದರೂ ಸಹ ಸಮುದಾಯದೊಳಗೆ ಮುಂದುವರೆದ ವಿರೋಧದ ನಡುವೆಯೂ ಹಲವಾರು ಯಹೂದಿಗಳು ಮಹಮದನ ನೂತನ ಧರ್ಮಕ್ಕೆ ಮತಾಂತರಗೊಂಡರು. ಅವರಲ್ಲಿ ಕೈನುಜಾ ಬುಡಕಟ್ಟಿನ ಯಹೂದಿ ಅಬು ಬಿನ್ ಅಬ್ದುಲ್ಲಾ ಪ್ರಮುಖನಾಗಿದ್ದ. ಮಹಮದನ ಬಳಿ ಬಂದ ಆತ ತನ್ನನ್ನ ನೂತನ ಮತಕ್ಕೆ ಸೇರಿಸಿಕೊಳ್ಳುವ ಮುನ್ನ ಸದ್ಯದ ತನ್ನ ಯೋಗ್ಯತೆಯನ್ನ ತನ್ನ ಜನರಿಂದ ಕೇಳಿ ಅರಿತುಕೊಳ್ಳಬೇಕೆಂದು ವಿನಂತಿಸಿದ. ಆತನ ಕೋರಿಕೆಯನ್ನ ನೆರವೇರಿಸಲಾಯಿತು. ಅಬ್ದುಲ್ಲಾನ ಬಗ್ಗೆ ಅವರಿವರಲ್ಲಿ ವಿಚಾರಿಸಿದಾಗ ಅತ ಅತ್ಯಂತ ಯೋಗ್ಯ, ಸಂಭಾವಿತ ಹಾಗೂ ಸುಸಂಸ್ಕೃತ ವ್ಯಕ್ತಿ ಅನ್ನುವುದು ಪತ್ತೆಯಾಯಿತು. ಹೀಗಾಗಿ ಮಹಮದ್ ಅತ್ಯಂತ ಸಂತೋಷದಿಂದಲೆ ಅವನನ್ನ ಮತಾಂತರಿಸಿದನಲ್ಲದೆ "ಈಗಾಗಲೆ ಅಬ್ದುಲ್ಲಾ ಸ್ವರ್ಗಾರೋಹಣ ಸಹ ಮಾಡಿ ಆಗಿದೆ!" ಎಂದು ಬಹಿರಂಗವಾಗಿ ಹಾಡಿ ಹೊಗಳಿದ. ಅಬ್ದುಲ್ಲಾನ ಹೊರತು ಇಂತಹ ಮೆಚ್ಚುಗೆಯ ಆಶಿರ್ವಾದಗಳನ್ನ ಆತ ಇನ್ಯಾರಿಗೂ ನೀಡಿರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಮಹಮದ್ ಆರಂಭದಲ್ಲಿ ಯಹೂದಿಗಳ ರೂಢಿ, ಕಟ್ಟಳೆ ಹಾಗೂ ಆಚರಣೆಯ ವಿಧಿ ವಿಧಾನಗಳನ್ನ ತನ್ನ ನೂತನ ಧರ್ಮದಲ್ಲಿಯೂ ಅಳವಡಿಸಿಕೊಂಡ. ಇದು ಆಗ ಅಲ್ಲಿನ ಸಮಾಜದಲ್ಲಿ ಬಹುಸಂಖ್ಯಾತರೂ ಹಾಗೂ ಬಲಿಷ್ಠರೂ ಆಗಿದ್ದ ಯಹೂದಿಗಳನ್ನ ಮೆಚ್ಚಿಸುವ ಮಾರ್ಗವಾಗಿತ್ತು. ಕಾಲ ಕಳೆದು ತಾನು ಬಲಿಷ್ಠ ಹಾಗೂ ತಮ್ಮವರು ಬಹುಸಂಖ್ಯಾತರಾದ ನಂತರ ಇಂತಹ ಅನುಕರಣೆಗಳನ್ನೆಲ್ಲ ಮುಲಾಜಿಲ್ಲದೆ ಕಿತ್ತೆಸೆದು ತನ್ನ ನಿಜರೂಪವನ್ನೂ ಸಹ ತೋರಿಸಿ ಅವರೆಲ್ಲರನ್ನೂ ಕಂಗಾಲು ಮಾಡಿದ್ದೂ ಇದೆ. ಅದೇನೆ ಇದ್ದರೂ ಸಹ ಆರಂಭದಲ್ಲಿ ಇದರೊಂದಿಗೆ ಯಹೂದಿಗಳ ಸ್ನೇಹ ಸಂಪಾದನೆಗೆ ಅವರೊಂದಿಗೆ ಕೆಲ ಒಳ ಒಪ್ಪಂದಗಳನ್ನೂ ಸಹ ಮಾಡಿಕೊಂಡ.


ಈ ಒಪ್ಪಂದದ ಪ್ರಕಾರ ಯಹೂದಿಗಳು ತಮ್ಮ ಮತದ ಅಖಂಡತೆಯನ್ನ ಕಾಪಾಡಿಕೊಳ್ಳಬಹುದಿತ್ತು. ಮುಸ್ಲೀಮರೊಂದಿಗೆ ಸಮರಸ್ಯದಿಂದ ಬಾಳುತ್ತಾ ಪರಸ್ಪರ ಎಂದೂ ಕಚ್ಚಾಡಿಕೊಳ್ಳದೆ ಸ್ನೇಹ ಭಾವದಿಂದ ಇದ್ದು ಸಮಾನ ವೈರಿಗಳೊಂದಿಗೆ ಮಾತ್ರ ಒಂದಾಗಿ ಸೇರಿ ಹೋರಾಡಿ ಹಿಮ್ಮೆಟ್ಟಿಸಬೇಕಿತ್ತು. ಯಾರಾದರೂ ಶತ್ರುಗಳು ಇಬ್ಬರ ಪೈಕಿ ಒಬ್ಬರ ಮೇಲೆ ಯುದ್ಧ ಸಾರಿದರೆ ಇನ್ನೊಂದು ಸಮುದಾಯ ಅವರ ನೆರವಿಗೆ ಶರತ್ತಿಲ್ಲದೆ ಧಾವಿಸಬೇಕಿತ್ತು. ಇತ್ತ ಯಹೂದಿಗಳು ತಮ್ಮ ಪವಿತ್ರಗ್ರಂಥದಲ್ಲಿ ಸಾರಲ್ಪಟ್ಟ ಹಾಗೆ ತಮ್ಮ ಧರ್ಮದ ಉದ್ಧಾರಕ್ಕಾಗಿ ಭವಿಷ್ಯದಲ್ಲಿ ಸಂತನಂತಹ ವ್ಯಕ್ತಿಯೊಬ್ಬ ಮತ್ತೆ ಹುಟ್ಟಿ ಬರುತ್ತಾನೆ ಎಂದು ಬಲವಾಗಿ ನಂಬಿದ್ದರು. ಮಹಮದ್ ಸಹ ಅವರ ಗ್ರಂಥದ ಈ ಉದ್ಗಾರವನ್ನೆ ಉದಹರಿಸಿ ಅವರ ಧಾರ್ಮಿಕ ನಂಬಿಕೆಯ ಅನುಸಾರವೆ ಪ್ರವಾದಿಯೊಬ್ಬನ ಹುಟ್ಟು ತನ್ನಿಂದಲೆ ಆಗಿದೆ ಎಂದು ಹೇಳಲಾರಂಭಿಸಿದ್ದ. ಯಹೂದಿಗಳ ಹಾಗೂ ಕ್ರೈಸ್ತರ ದೇವಾಧಿದೇವನಾದ ಅಲ್ಲಾಹನೆ ತನ್ನನ್ನ ಈ ಭೂಮಿಗೆ ಕಳುಹಿಸಿದ್ದಾನೆ ಅನ್ನುವ ವಾದವನ್ನ ಆತ ಮಂಡಿಸಿದ. ಆದರೆ ಯಹೂದಿಗಳಿಗೆ ಇದರಲ್ಲಿ ನಂಬಿಕೆ ಹುಟ್ಟಲಿಲ್ಲ. ಅವರ ಪ್ರಕಾರ ತಮ್ಮ ಸಮುದಾಯದ ಒಳಗಿನಿಂದಲೆ ಅಂತಹ ಪ್ರವಾದಿಯೊಬ್ಬ ಹುಟ್ಟಿ ಬರಬೇಕಿತ್ತು. ಇತ್ತ ಮಹಮದನೋ ಮೂರ್ತಿ ಪೂಜಕರ, ಹೆಚ್ಚಾಗಿ ಪೌರಾತ್ಯ ಧಾರ್ಮಿಕಾಚರಣೆಗಳ ಅನುಸಾರ ಬದುಕುತ್ತಿದ್ದ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಅರೆ ವೈದಿಕನಾಗಿದ್ದ. ಹೀಗಾಗಿ ಈ ಅರಬ್ಬಿ ಖುರೈಷಿ ಬುಡಕಟ್ಟಿನ ಮಹಮದನ ಬುಡಬುಡಿಕೆಯನ್ನವರು ನಂಬುವ ಗೋಜಿಗೆ ಹೋಗಲಿಲ್ಲ. ಆದರೂ ಮೇಲಿಂದ ಮೇಲೆ ಆತ ಅದನ್ನೆ ಸಾರಲು ತೊಡಗಿದಾಗ ಅವರ ಸಮುದಾಯದ ಒಳಗೆ ಅಸಹನೆ ಭುಗಿಲೊಡೆಯಿತು. ಇದೆ ಮುಂದೆ ಕಲಹ, ದ್ವೇಷ, ದೊಂಬಿ, ವೈರತ್ವ ಹಾಗೂ ಕೊನೆಗಾಣದ ವೈಮನಸ್ಸಿಗೆ ಮೂಲ ಕಾರಣವಾಯ್ತು.


ಈ ನಡುವೆ ಈ ಯಹೂದಿಗಳನ್ನ ಮತಾಂತರವಾಗದೆ ಹಾಗೆ ಇರಲು ಬಿಟ್ಟರೆ ತನಗೂ, ತನ್ನ ನವ ಮತಕ್ಕೂ ಸಂಚಕಾರ ತಪ್ಪಿದ್ದಲ್ಲ ಎನ್ನುವ ಅರಿವು ಮಹಮದನಿಗಿತ್ತು. ತನ್ನ ಪ್ರವಾದಿತ್ವದ ಘೋಷಣೆಗೆ ವಿರುದ್ಧವಾಗಿ ಅವರು ವರ್ತಿಸುವುದನ್ನ ಕಾಣುವಾಗ ಆತನಿಗೆ ಮುಂಬರುವ ಅಪಾಯದ ಮುನ್ಸೂಚನೆ ದೊರಕತೊಡಗಿತು. ಯಹೂದಿಗಳ ಸಾಮುದಾಯಿಕ ಒಗ್ಗಟ್ಟು, ಮದೀನಾದ ಇನ್ನಿತರ ಬುಡಕಟ್ಟಿನವರೊಂದಿಗೆ ಅವರ ಸಮುದಾಯ ಒಂದಿದ್ದ ಬಾಂಧವ್ಯ ಮುಂದೊಮ್ಮೆ ಮಹಮದನಿಗೆ ಕಂಟಕ ಪ್ರಾಯವಾಗುವುದು ಖಚಿತವಿತ್ತು. ಹೀಗಾಗಿ ಆತ ಧಾರ್ಮಿಕತೆ ಮುಸುಕಿನೊಳಗೆ ಅವರ ವಿರುದ್ಧ ನಿಧಾನವಾಗಿ ತಾನೂ ದ್ವೇಷ ಕಾರುತ್ತಾ ಶತ್ರುತ್ವವನ್ನ ಸಾರ ತೊಡಗಿದ. ಇದರ ಲಕ್ಷಣಗಳನ್ನ ಸುರಾ ೨/೨೮೬, ೫/೪೦-೪೫ರಲ್ಲಿ ಖುರ್ಹಾನಿನಲ್ಲಿ ಸ್ಪಷ್ಟವಾಗಿ ಕಾಣಬಹುದು.


"ಅಲ್ಲಾಹ ಭೂಮಿ ಹಾಗೂ ಆಕಾಶದ ಅಧಿಪತಿ ಎನ್ನುವುದನ್ನ ನೀವು ತಿಳಿದಿಲ್ಲವೆ? ಅವನು ತಾನಿಚ್ಛಿಸಿದವನನ್ನು ಶಿಕ್ಷಿಸುತ್ತಾನೆ! ಮತ್ತು ತನಗಿಷ್ಟ ಬಂದವರನ್ನು ಕ್ಷಮಿಸುತ್ತಾನೆ!! ಅವನಿಗೆ ಈ ಎಲ್ಲಾ ಅಧಿಕಾರಗಳೂ ಇವೆ?!"

"ಓ ಸಂದೇಶವಾಹಕರೆ! ಸತ್ಯ ನಿಷೇಧದ ಮಾರ್ಗದಲ್ಲಿ ಭಾರಿ ಶ್ರಮ ಪಡುತ್ತಿರುವವರು ನಿಮ್ಮನ್ನ ವ್ಯಾಕುಲಗೊಳಿಸದಿರಲಿ. ಅವರಲ್ಲಿ ನಾವು ವಿಶ್ವಾಸವಿಟ್ಟೆವು ಎನ್ನುವ ಬಾಯಿ ಮಾತನ್ನ ಅದೇನೆ ಹೇಳಿಕೊಂಡರೂ ಹೃದಯದಲ್ಲಿ ವಿಶ್ವಾಸವಿರಿಸದ ಜನರಾಗಲಿ ಅಥವಾ ಅಸತ್ಯ ಮಾತುಗಳನ್ನ ಕೇಳುವ ಹವ್ಯಾಸವುಳ್ಳ ಯಹೂದಿಯರಾಗಲಿ, ಅವರು ನಿಮ್ಮ ಬಳಿಗೆ ಎಂದೂ ಬಾರದಿರುವ ಇತರ ಜನಾಂಗದವರಿಗಾಗಿ ನಿಮ್ಮ ಮಾತುಗಳಿಗೆ ಕಿವಿಗೊಡುತ್ತಾರೆ. ದೇವ ಗ್ರಂಥಗಳ ಪದಗಳ ಇಂಗಿತವು ನಿಶ್ಚಿತವಾಗಿದ್ದರೂ ಅವುಗಳನ್ನ ಅವುಗಳ ನಿಜಾರ್ಥದಿಂದ ದೂರ ಸರಿಸಿ ಬಿಡುತ್ತಾರೆ. ಮತ್ತು ಜನರೊಡನೆ ನಿಮಗೆ ಅಂತಹ ಆಜ್ಞೆ ದೊರೆತರೆ ಅದನ್ನು ಒಪ್ಪಿಕೊಳ್ಳಿರಿ. ಇಲ್ಲವಾದರೆ ಒಪ್ಪಿಕೊಳ್ಳಬೇಡಿ ಎಂದು ಯಾರನ್ನು ಅಲ್ಲಾಹನೆ ಗೊಂದಲಕ್ಕೀಡು ಮಾಡಿರುವನೋ ಅವನನ್ನು ಅಲ್ಲಾಹನ ಹಿಡಿತದಿಂದ ತಪ್ಪಿಸಲು ನೀವು ಏನನ್ನೂ ಮಾಡಲಾರಿರಿ. 'ಅಲ್ಲಾಹನ ಹಿಡಿತದಿಂದ ತಪ್ಪಿಸಿಕೊಳ್ಳಿರಿ ಇಲ್ಲವೆ ಅವನನ್ನ ಒಪ್ಪಿಕೊಳ್ಳಬೇಡಿ' ಎಂದೂ ಸಹ ಅವರು ಹೇಳುತ್ತಾರೆ. ಅಲ್ಲಾಹನು ಶುದ್ಧಗೊಳಿಸಲು ಇಚ್ಛಿಸದಿರುವುದು ಬರಿ ಇಂತವರ ಹೃದಯಗಳನ್ನೆ. ಇವರಿಗೆ ಇಹಲೋಕದಲ್ಲಿ ಅವಮಾನ ಹಾಗೂ ಪರಲೋಕದಲ್ಲಿ ಘೋರಾತಿಘೋರ ಶಿಕ್ಷೆ ಕಾದಿದೆ."



"ಇವರು ಸುಳ್ಳನ್ನು ಆಲಿಸುವವರು ಹಾಗೂ ನಿಷೇಧಿತ ಸಂಪತ್ತನ್ನ ಭಕ್ಷಿಸುವವರೂ ಆಗಿದ್ದಾರೆ. ಆದುದರಿಂದ ಅವರು ತಮ್ಮ ವ್ಯಾಜ್ಯಗಳೊಂದಿಗೆ ನಿಮ್ಮ ಮುಂದೆ ಒಂದು ವೇಳೆ ಬಂದರೆ, ಅವುಗಳನ್ನ ಇತ್ಯರ್ಥಗೊಳಿಸುವ ಅಥವಾ ನಿರಾಕರಿಸುವ ಅದಿಕಾರವನ್ನು ನಿಮಗೆ ಕೊಡಲಾಗುತ್ತದೆ. ನೀವು ನಿರಾಕರಿಸಿದರೆ ಅವರು ನಿಮಗೆ ಯಾವ ಕೇಡನ್ನೂ ಉಂಟು ಮಾಡಲಾರರು. ಅಥವಾ ನೀವು ತೀರ್ಪು ನೀಡುವುದಿದ್ದರೆ, ಅವರು ನಿಮಗೆ ಯಾವುದೆ ಕೇಡನ್ನೂ ಉಂಟು ಮಾಡುವುದಿದ್ದಲ್ಲಿ ಸರಿಯಾಗಿ ಹಾಗೂ ನ್ಯಾಯಪೂರ್ಣವಾಗಿ ನೀವಿರಬೇಕು" ( ಖುರ್ಹಾನ್ ಕನ್ನಡಾನುವಾದ.)



ಇದೆ ಸಮಯದಲ್ಲಿ ಅಂದರೆ ಕ್ರಿಸ್ತಶಕ ೬೩೩ರಲ್ಲಿಮಹಮದ್ ತನ್ನ ಸ್ವತಃ ಮತ ಪ್ರಚಾರದ ಕಾರ್ಯಗಳಲ್ಲಿ, ಅಲ್ಲಾಹನ ಆರಾಧನಾ ವಿಷಯದಲ್ಲಿ ಕೆಲವು ನವ ಸಂಪ್ರದಾಯಗಳಿಗೆ ನಾಂದಿ ಹಾಡಿದನು. ದಿನಕ್ಕೆ ಐದು ಬಾರಿ ದೇವರನ್ನ ಪ್ರಾರ್ಥಿಸುವ ಆಚರಣೆ ಆರಂಭವಾದದ್ದು ಆಗಿನಿಂದ. ವಾಸ್ತವವಾಗಿ ಇದು ಯಹೂದಿ ಪ್ರಾರ್ಥಾನಾ ಕ್ರಮದ ನಕಲಾಗಿತ್ತು. ಅವರಲ್ಲಿ ಪ್ರಚಲಿತವಿದ್ದ ಈ ಆಚಾರವನ್ನ ಈತನೂ ಯಥಾವತ್ ಬಳಸಿಕೊಂಡ. ಆದರೆ ಯಹೂದಿಗಳ ವಾರದ ಪ್ರಾರ್ಥನಾ ದಿನವಾದ ಶನಿವಾರವನ್ನ ಮಾತ್ರ ಒಪ್ಪದೆ ಅದನ್ನ ಶುಕ್ರವಾರಕ್ಕೆ ಬದಲಿಸಿಕೊಂಡ. ಆ ದಿನ ಮಸೀದಿಯಲ್ಲಿ ಮತ ಬಾಂಧವರೆಲ್ಲ ಒಟ್ಟಾಗಿ ಖಡ್ಡಾಯವಾದ ಸಭಾಪೂರ್ವಕ ಪ್ರಾರ್ಥನೆ ನಡೆಸುವುದನ್ನ ರೂಢಿಗೆ ತಂದ. ಹಾಗೆ ನೆರೆದವರಿಗೆ ತಾನೆ ಖುದ್ದಾಗಿ ಮತ ಪ್ರಚಾರವದ ಮೂಲಸ್ವರೂಪವಾಗಿ ಪ್ರವಚನವನ್ನೂ ಆರಂಭಿಸಿದ. ಪ್ರಾರ್ಥನೆಯನ್ನ ಯಹೂದಿಗಳ ಪವಿತ್ರ ನಗರವಾದ ಜುರೇಸಲಂ ಕಡೆಗೆ ಮುಖ ಮಾಡಿ ಪ್ರಾರ್ಥಿಸಲು ಕರೆ ನೀಡಿದ. ಹೀಗಾದರೂ ಯಹೂದಿಗಳ ಮನಗೆದ್ದು ಅವರನ್ನ ತನ್ನ ಮತದತ್ತ ಆಕರ್ಷಿಸುವ ಪ್ರಯತ್ನಕ್ಕೆ ಮಹಮದ್ ಇಳಿದ. ಕಾಲಾನುಕ್ರಮದಲ್ಲಿ ನವಧರ್ಮವಾದ ಇಸ್ಲಾಮಿನಲ್ಲಿ ಯಹೂದಿಗಳೂ ಸಹ ಬೆರೆತು ಒಂದಾದರೆ ನೂತನ ಧರ್ಮದ ಪ್ರವಾಧಿ ಹಾಗೂ ಧರ್ಮಾಧಿಕಾರಿಯಾಗಿ ಮೆರೆಯುವ ಉದ್ದೇಶ ಅವನಿಗೆ ಇತ್ತೆಂದು ಎಲ್ಲಾ ಇತಿಹಾಸಕಾರರೂ ಹೇಳಿದ್ದಾರೆ. ವಾಸ್ತವದಲ್ಲಿ ಸದ್ಯ ಹೀಗೆಯೆ ಆಗಿದೆ. ಅರೆಬಿಯಾದ ಯಹೂದಿಗಳೆಲ್ಲ ಮುಸಲ್ಮಾನರಾಗಿ ಪರಿವರ್ತಿತರಾಗಿದ್ದಾರೆ ಹಾಗೂ ಅವರ ಪ್ರವಾದಿಯಾಗಿ ಮಹಮದ್ ಗುರುತಿಸಲ್ಪಡುತ್ತಿದ್ದಾನೆ.


ಇತ್ತ ಯಹೂದಿಗಳಿಗೆ ತಮ್ಮ ಬಹುತೇಕ ಸಂಪ್ರದಾಯಗಳನ್ನ ಮಹಮದ್ ಆಚರಿಸಲು ಕರೆ ನೀಡಿದ್ದು ಖುಷಿ ತಂದಿತ್ತು. ಆತನ ಸ್ವಯಂ ಘೋಷಿತ ಪ್ರವಾದಿತ್ವದ ಕುರಿತ ತಮ್ಮ ಅಸಮ್ಮತಿಯ ಹೊರತಾಗಿಯೂ ಈ ಉದಾರತೆಯಿಂದ ಆತ ತಮ್ಮದೆ ಧರ್ಮಾಚರಣೆಯನ್ನ ನಕಲು ಮಾಡಿ ಆಚರಿಸುತ್ತಿರೋದು ಹಾಗೂ ಅದರ ಆಸರೆಯಲ್ಲಿಯೆ ನೂತನ ಧರ್ಮವನ್ನ ಪ್ರಚಾರ ಮಾಡುತ್ತಿರೋದು ಆತಂಕದ ಕಾರಣವಾಗಿರಲಿಲ್ಲ. ಇದೆ ಹಂತದಲ್ಲಿ ತನ್ನ ಆಚರಣೆಯ ಕರೆಗಳ ಬಗ್ಗೆ ಸ್ವತಃ ಮಹಮದನೆ ಕೊಂಚ ಸಂದೇಹಕ್ಕೆ ಈಡಾದ. ತಾನೊಂದು ವೇಳೆ ಯಹೂದಿಗಳಿಗಿಂತ ಧಾರ್ಮಿಕ ವಿಧಿಯಾಚರಣೆಗಳನ್ನ ಬೇರೆಯಾಗಿ ರೂಪಿಸದೆ ಹೋದಲ್ಲಿ ಯಹೂದಿ ಧರ್ಮದ ಪ್ರಾಬಲ್ಯ ಮತ್ತಷ್ಟು ಹೆಚ್ಚಾಗಿ ತನ್ನ ಧರ್ಮದ ಹೊಳಪು ಮಾಸಬಹುದು ಎನ್ನುವ ಶಂಕೆಗೆ ಆತ ಒಳಗಾದ. ತನ್ನ ನವ ಧರ್ಮದ ಅಳಿವು ಉಳಿವಿನ ಪ್ರಶ್ನೆ ಅವನನ್ನ ಬಾಧಿಸತೊಡಗಿತು. ಹೀಗಾಗಿ ತನ್ನ ಕೆಲವು ಆಪ್ತೇಷ್ಟರ ಜೊತೆಗೆ ಈ ಬಗ್ಗೆ ಆತ ಚರ್ಚಿಸಿದ. ಅವರ ಕಡೆಯಿಂದಲೂ ಸಹ ಪ್ರಾರ್ಥನಾ ವಿಧಿಯಾಚರಣೆಯಲ್ಲಿ ಬದಲಾವಣೆಯ ಸಲಹೆ ಮೂಡಿ ಬಂತು.


ಅವರೆಲ್ಲರ ಒತ್ತಾಯ ಹಾಗೂ ಸಮ್ಮತಿಯನ್ನ ಆಧರಿಸಿ ಕ್ರಿಸ್ತಶಕೆ ೬೨೪ರಲ್ಲಿ ಜುರೇಸಲಂ ಕಡೆಗಿನ ದಿಕ್ಕನ್ನ ಬದಲಿಸಿ ಮೆಕ್ಕಾದಲ್ಲಿರುವ ಕಾಬಾ ಗುಡಿಯ ಕಡೆಗೆ ಮುಖ ಮಾಡಿ ಪ್ರಾರ್ಥನೆಗೆ ತೊಡಗುವ ಬದಲಾವಣೆಯನ್ನ ಅಳವಡಿಸಿಕೊಳ್ಳಲಾಯಿತು. ಮೊದಲಿಗೆ ಆತ ಅನುಸರಿದ ಆ ಪ್ರಾರ್ಥನೆಯ ದಿಕ್ಕನ್ನ ಆತನ ಅನುಯಾಯಿಗಳೂ ಸಹ ಅನುಸರಿಸಲು ಆರಂಭಿಸಿದರು. ಹೀಗೆ ಆರಂಭವಾದದ್ದೆ 'ಕಿಬ್ಲಾ'ದ ದಿಕ್ಕಿನೆಡೆಗೆ ಮುಖ ಮಾಡಿ ನಮಾಝ್ ಮಾಡುವ ಪದ್ಧತಿ. ಈ ಬಗ್ಗೆ ಯಹೂದಿಗಳು ಅಸಮ್ಮತಿಯಿಂದ ಎತ್ತಿದ ಆಕ್ಷೇಪಗಳಿಗೆ 'ಇದು ಅಲ್ಲಾಹನ ಮೂಲಕ ನನಗೆ ದೊರಕಿದ ಆಜ್ಞೆ' ಎನ್ನುವ ತಿಪ್ಪೆ ಸಾರಿಸಿ ಅವರ ಅಸಹನೆ ಹಾಗೂ ನಿಂದನೆಯ ಆಕ್ರೋಶಗಳನ್ನೆಲ್ಲ ಸುರಾ ೨/೧೪೪ರ ಮೂಲಕ ಮುಲಾಜಿಲ್ಲದೆ ತಳ್ಳಿ ಹಾಕಿದ. ಇದು ನವ ಮತಾಂತರಿತ ಯಹೂದಿಗಳಿಗೆ ಆತ ಕೊಟ್ಟ ಮೊದಲ ಅಘಾತ. ಅದರೆ ಈ ನಡೆಯಿಂದ ಯಹೂದಿಗಳೇನೂ ಸುಮ್ಮನೆ ಉಳಿಯಲಿಲ್ಲ. ವಿಗ್ರಹಾರಾಧನೆಯನ್ನೆ ಒಪ್ಪದ ಮಹಮದ್ ಮೆಕ್ಕಾದ ಕಡೆಗೆ ಮುಖ ಮಾಡಿ ಪ್ರಾರ್ಥಿಸಲು ಹೇಳೋದೆ ಢಾಂಭಿಕ ನಡೆ ಎಂದು ಅವರು ಟೀಕಿಸಲಾರಂಭಿಸಿದರು. ಅದು ಅವರ ಪ್ರಕಾರ ಅದು ನೀಚ ಅಧಾರ್ಮಿಕ ನಡೆಯಾಗಿತ್ತು. ಆದರೆ ಮಹಮದ್ ಇನ್ನೂ ಮುಂದುವರೆದು ಸುರಾ ೨/ ೧೩೬-೩೯ರ ಮೂಲಕ ದೇವರು ನನಗೆ ವಿಧಿಸಿದ ಹೊಸ ಆಜ್ಞೆ ಎಂದೆ ಸಾಧಿಸಲಾರಂಭಿಸಿದ.



ಒಂದು ರಾಜಿ ಸೂತ್ರವಾಗಿ ಯಹೂದಿಗಳು ಆಚರಿಸುತ್ತಿದ್ದ ಪ್ರಾಯಶ್ಚಿತ್ತ ಶಾಸನದ ಉಪವಾಸದ ವಿಧಿಗಳನ್ನು ಮಾತ್ರ ಪವಿತ್ರ ರಂಝಾನ್ ತಿಂಗಳಿನಲ್ಲಿ ಆಚರಿಸಲು ಸುರಾ ೨/೪೩ರ ಮೂಲಕ ಖುರ್ಹಾನ್ ಸಮ್ಮತಿಯೊಂದಿಗೆ ದೇವರ ಆಜ್ಞೆಯ ಹೆಸರಿನಲ್ಲಿ ಸಮ್ಮತಿಸಿದ. ಒಂದು ತಿಂಗಳ ಅವಧಿಯಲ್ಲಿ ಕೇವಲ ಹಗಲು ಹೊತ್ತಿನಲ್ಲಿ ಮಾತ್ರ ಒಂದು ತೊಟ್ಟು ನೀರನ್ನೂ ಸಹ ಸೇವಿಸದೆ ಮಾಡುವ ನಿಟ್ಟುಪವಾಸದ ಈ ವಿಧಿ ಅತ್ಯಂತ ಕಠಿಣವಾಗಿತ್ತು. ಈ ಕಟ್ಟಳೆಯನ್ನ ಅವನೆ ಮುತುವರ್ಜಿ ವಹಿಸಿ ಜಾರಿಗೆ ತಂದ. ಆ ತಿಂಗಳು ಕಳೆದ ಬಳಿಕ ಚಂದ್ರೋದಯ ಆದ ನಂತರ ಆರ್ಥಿಕವಾಗಿ ಬಲಹೀನರಾದ ಬಡ ಜನರಿಗೆ ತಮ್ಮ ಕೈಲಾದಷ್ಟು ಖರ್ಜೂರ, ಗೋಧಿ ಅಥವಾ ದ್ರಾಕ್ಷಿಯನ್ನ ದಾನ ಮಾಡುವ ಮೂಲಕ ಸಂಭ್ರಮವನ್ನ ಎಲ್ಲರಿಗೂ ಹಂಚಿಕೊಂಡು ಸಂಭ್ರಮದಿಂದ 'ಈದ್ ಉಲ್ ಫಿತರ್' ಎನ್ನುವ ಹೊಸ ಹಬ್ಬವನ್ನ ಆಚರಿಸುವ ಹೊಸ ಕ್ರಮವನ್ನ್ನ ಮಹಮದ್ ಜಾರಿಗೆ ತಂದ. ಇಂದು ಮುಸಲ್ಮಾನ ಜಗತ್ತಿನಲ್ಲಿ ಅತ್ಯಂತ ದೊಡ್ಡ ಹಬ್ಬವಾಗಿ ಇದು ಆಚರಿಸಲ್ಪಡುತ್ತಿದೆ ಎಂದರೆ ತಪ್ಪಿಲ್ಲ.


( ಇನ್ನೂ ಇದೆ.....)

23 August 2015

ಅದ್ಯಾರೋ ಹೇಳಿದ ಕಥೆ....



ಗುಡುಗ ಸದ್ದಿನ ಹಿಂದೆ ಈಗ ಹೊಳೆವ ಮಿಂಚಿಲ್ಲ
ನಿತ್ಯದಂತೆ ಮತ್ತೆ ನೆಲವ ತೊಳೆವ ಮಳೆಯಿಲ್ಲ,
ಮನದ ಭೂಮಿಯಲ್ಲಿ ಬಿತ್ತಿದ ಭಾವಗಳ ಬೀಜವೂ ಸಹ ಮುರುಟಿ
ಎದೆಯ ಹೊಲದಲ್ಲಿ ಇದೀಗ ಹೊಸ ಬೆಳೆಯಿಲ್ಲ/
ಕನಸ ಬೀದಿಯ ಕತ್ತಲ ಕಳೆವ ಬೆಳದಿಂಗಳಿಲ್ಲ
ಹಸಿದ ಮನದ ದಾಹ ಮರೆಸುವ
ತುಸು ಸಾಂತ್ವಾನದ ನುಡಿಗಳ ತಂಗಳಿಲ್ಲ,
ನೆನ್ನೆ ಇಂದಿಲ್ಲ ಇಂದು ನೆನ್ನೆಯೂ ಅಲ್ಲ
ನಾಳೆಯ ನಾ ಬಯಸದಿದ್ದರೂ ಒಳ ಆಸೆ ಕೈಬಿಡದಲ್ಲ!//



ಬರಡು ಬಾಳಿಗೂ ಮರಳಿ ಚಿಗುರೋ
ಕುರುಡು ಆಸೆಯ ಕಂಡೆಯಾ?
ಹಳೆಯ ಕನಸ ಕೈ ಬಿಡದೆ
ಹೊಳೆವ ಹಗಲಲ್ಲಿ ಕಾಲು ಜಾರದೆ,
ಇದ ಕಾಣಲು ನೀನೆಂದಾದರೂ ಬಂದೆಯ?/
ಸುಳಿವ ಮುಸ್ಸಂಜೆ ಮುಂಜಾವುಗಳೆಲ್ಲ
ಬರಿ ಬಿಡಿಬಿಡಿ ಹೂವಾಗಿ,
ನನಸ ಸುಮಮಾಲೆಯ ಮುಡಿಗೆ
ಏರಿಸುವ ಹಂಬಲವೆಲ್ಲ ಬರಿ ತೀರದ ನೋವಾಗಿ.....
ಭಾವದ ಬಾವಿ ಅತಿ ಆಳಕ್ಕೆ ಇಂಗಿ ತುಸುವೂ ಪಸೆಯಿಲ್ಲದೆ ಬತ್ತಿದೆ
ಭವಿಷ್ಯದ ಕನಸಿನ ಕೂಸುಗಳೆಲ್ಲ
ಭ್ರೂಣವಾಗಿ ಮೂಡುವ ಮೊದಲೆ ಬಲವಂತದಿಂದ ಸತ್ತಿದೆ//



ತ್ಯಕ್ತ ಮನದ ಅಸಲು ಚಹರೆ ಅರಿಯದೆ ಹೋದೆ
ಮುಕ್ತ ಕಾಮನೆಗಳ ಮೆರೆದಾಟಕ್ಕೆ ಮರುಳಾಗಿ
ವಾಸ್ತವಕ್ಕೆ ಎದೆ ಕಿಟಕಿ ತೆರೆಯದೆ ಹಾಗೆ ಉಳಿದೆ,
ತುಸು ಕೂಡಲು ಹೋಗಿ ಬಹಳಷ್ಟನ್ನ ಕಳೆದೆ
ಸುಖದ ನಿರೀಕ್ಷೆ ಹೊತ್ತು ಸಂಕಟದ ಕಳೆಯನ್ನ ಮಾತ್ರ ಬೆಳೆದೆ/
ತಪ್ಪೆಲ್ಲ ನನ್ನದೆ, ಆದರೂ ನಿನ್ನ ನಡೆಗಳ ಸಾಚಾತನ ನಿನಗೂ ಸಹ ಅರಿವಿದೆ
ಹೀಗಿದ್ದರೂ ಅಮಾಯಕತೆಯ ಪರದೆ ಹೊತ್ತು ನೀ ಮುನ್ನಡೆದೆ
ನೋವ ಸುಳಿ ಹೆಚ್ಚಿರುವ ಕಂಬನಿಯ ಹಿನ್ನೀರಿಗೆ
ಖುದ್ದು ನಾನೆ ಬಯಸಿ ಇಳಿದ ಮೇಲೆ ಬಾಳಲ್ಲಿ ನಲಿವ ನೆರಳು ಇನ್ನೆಲ್ಲಿದೆ?//

21 March 2015

ಬತ್ತದ ನಿರೀಕ್ಷೆಯ ನಾಳೆಗಳ ಕನವರಿಕೆಯಲ್ಲಿ.....




ಹಬ್ಬವಂತೆ ಊರಿಗೆಲ್ಲ ಗಬ್ಬವಂತೆ ಮುಡುಡಿದ ಮೌನಿ ಮನಸುಗಳೆಲ್ಲ
ಆದರೆ ಚಂದ್ರನಿಗಾಗಿ ಮಾತ್ರ ಅರಸುವ ಎಲ್ಲರ ಬಾನಲ್ಲಿ
ಈ ದಿನ ರವಿ ಮಾತ್ರ ಮೂಡಲೆ ಇಲ್ಲ,
ಶೋಕಕ್ಕೆ ಸ್ಮಶಾನ ಮಾತ್ರ ಮಿತಿ
ಅಂತರಂಗದ ನೋವಿಗೆ ತನ್ನೊಡಲ ಕಿರು ಸಾಂತ್ವಾನ ಮಾತ್ರವೆ ಗತಿ....
ನಿತ್ಯ ಆಗುತ್ತಿರೋದು ಮೊನ್ನೆ ಕೊಲೆಯಾಗಿ ಸತ್ತವನದಲ್ಲ
ಬದ್ಧತೆಯ ಚೌಕಟ್ಟಿನಲ್ಲಿ ಬದುಕುತ್ತಿರುವ ಪ್ರತಿ ಸಜ್ಜನರ ತಿಥಿ/
ಮತ್ತೆ ಮೇಲೆತ್ತಿ ಕೊಲ್ಲಬೇಡಿ ಒಮ್ಮೆ ಹೂಳಿದ ಆ ಕಾಯಕ ನಿಷ್ಠನ ಹೆಣವನ್ನ
ಕೆಸರೆರೆಚಿ ಮಸಿ ಹಚ್ಚಿ ವಿಕಾರವಾಗಿಸಬೇಡಿ ಅಳಿಸಲಾಗದ ಅವನ ಸಾತ್ವಿಕ ಗುಣವನ್ನ,
ಇನ್ನು ಅವನಿಲ್ಲ ಇನ್ಯಾರಿಗೂ ಆ ಧೈರ್ಯವೂ ಇರೋಲ್ಲ
ಚಿಂತೆ ಇನ್ನಿಲ್ಲ ಮುಕ್ಕಿ ಎರಡೂ ಕೈಗಳಿಂದ ಗೋರಿ ಗೋರಿ ಸಿಗುವ ಹಡಬೆ ಹಣವನ್ನ//



ಜಡ ಗಟ್ಟಿದ ವ್ಯವಸ್ಥೆಯಲ್ಲಿ ನೈಜವಾದ
ನಸು ಕಾಳಜಿ ಹೊಂದಿದವನೆ ಕಡುಪಾಪಿ....
ಮುಖವೆ ಕಾಣದ ಮುಸಿಯಗಳ ನಾಡಿನಲ್ಲಿ
ಸ್ವಚ್ಛ ಮನದ ಸುಂದರ ಮನುಷ್ಯನೆ ಪರಮ ಕುರೂಪಿ,
ಬಟಾ ಬಯಲಲ್ಲಿ ಎಲ್ಲಾ ಬಿಚ್ಚಿ ಹಾಕಿ ಬರಿ ಬತ್ತಲು ತಿರುಗುವ
ತಲೆ ತಿರುಕರ ಪ್ರಕಾರ ಅಂಗಿ ಚೊಣ್ಣ ಧರಿಸಿರೋವವನೆ ಮಾನಗೆಟ್ಟವ...
ಮರ್ಯಾದೆಯ ಪರಿಧಿಯಲ್ಲಿ ಬಾಳಲು ಹವಣಿಸುವವನೆ
ಎಲ್ಲರಿಂದ ಅನ್ನಿಸಿಕೊಳ್ಳುತ್ತಾನೆ ಇಲ್ಲಿ ಮೂರೂ ಬಿಟ್ಟವ/
ಸಂಪನ್ನರಿದ್ದಾರೆ ಎಚ್ಚರಿಕೆ ನೀವು ಖದೀಮರಾದೀರ!
ಕಾಸಿನ ಮುಂದೆ ಕೂಸಿನ ಮನಸಿದ್ದವರೂ ಕಂಗಾಲಾಗಲೆಬೇಕು
'ಹಣವ ಕಂಡರೆ ಹೆಣವೂ ಬಾಯಿ ಬಿಡುತ್ತದೆ' ಎನ್ನುವ ಗಾದೆ ಇಲ್ಲಿ ಅಜರಾಮರ,
ವಾಸ್ತವಕ್ಕೆ ತೋರಿಸಲು ಸ್ವಂತದ್ದೊಂದು ಮುಖ ಇಲ್ಲದವರೆ ಹೆಚ್ಚು
ಮುಖ ಪುಸ್ತಕದ ಮಾರಿ ಮನೆಮನೆ ಹೊಕ್ಕಿರುವ ಈ ಹೊತ್ತು
ಅಧಮ ಮಾನಸಿಕ ಭ್ರಷ್ಟ ವ್ಯಭಿಚಾರಿಚಾರಿಗಳೆ ಪರಮ ಗೌರವಾನ್ವಿತರು ಇಲ್ಲಿ ಯಾವತ್ತೂ//



ಭಾರವಾದ ಮನಸ್ಸಿನಿಂದ ಬೀಳ್ಕೊಟ್ಟೆ ನಾನು
ನೆನ್ನೆಯ ಕೆಲವು ಈಡೇರದ ಕನಸುಗಳನ್ನ...
ಅವಕ್ಕೂ ಸುಮ್ಮನೆ ಕಸಿವಿಸಿ ನನಗೂ ವೇದನೆ ಇನ್ನೆಷ್ಟು ಕಾಲ ಅಂತ ಕಾಯಲಿ?
ಸಾಕಾರವಾಗದೆ ಸದಾ ಕೊಳೆಯುತ್ತಿರುವ ಅವುಗಳ ಹೆಣ,
ಪುನರ್ಜನ್ಮದ ಬಗ್ಗೆ ನನಗೇಕೋ ವಿಪರೀತ ಮೋಹ ಹಾಗೂ ನಂಬಿಕೆ
ಆಗಲಾದರೂ ನನ್ನವಾದಾವವೆಲ್ಲ ಇದ್ದರೆ ಒಂದೊಮ್ಮೆ ಋಣ...
ಅಂತೆಯೆ ನಾಲ್ಕು ಹನಿ ಕಂಬನಿ ಅದರ ಅಂಗೈ ಮೇಲೆ ಉರುಳಿಸುತ್ತಾ
ದುಃಖ ತಪ್ತ ಧ್ವನಿಯಲ್ಲಿ ಇಂತುಸುರಿದೆ
ವಿಧಿ ಬಯಸಿದರೆ ಆಗ ಮತ್ತೆ ಪುನಃ ಭೇಟಿಯಾಗೋಣ/
ಇಂದು ಬಾಳುವ ನನಗೆ ನೆನ್ನೆಯ ನೆರಳೂ ಬೇಕು
ಜೊತೆಗೊಂದಿಷ್ಟು ನಾಳಿನ ನೆರವೂ ಸಹ ಇದ್ದಿರಬೇಕು...
ಮನ ಕಲ್ಲಾದಷ್ಟೂ ಮೌನ ಗಟ್ಟಿಯಾಗಿ ಅಲ್ಲಿಂದ ಮರಳಿ ಮಾರ್ದನಿಸುತ್ತದೆ
ನನಗೂ ಕಳೆದು ಹೋದ ಆ ಸಾಂಗತ್ಯ ಮತ್ತೆ ಮತ್ತೆ ಬೇಕೆನಿಸುತ್ತದೆ,
ಅದೇನೆ ಇದ್ದರೂ ಕೊನೆಗೆ ನಾನೂ ಒಬ್ಬ ಮಾನವ
ಹಂಚಿಕೊಳ್ಳಲು ಕಷ್ಟ ಸುಖ ಬೇಕನಿಸುತ್ತದೆ ಇರಲೊಂದು ಜೊತೆಗೆ ಜೀವ//

26 January 2015

ನಾನು ತುಂಬ ಇಷ್ಟ ಪಡುತ್ತಿದ್ದ ಇಬ್ಬರು ಎರಡು ದಿನದ ಅಂತರದಲ್ಲಿ ಇನ್ನಿಲ್ಲವಾಗಿದ್ದಾರೆ.






ಬಾಲ್ಯದ 'ಮಾಲ್ಗುಡಿ ಡೇಸ್'ನ ಚಿತ್ರಗಳಾಗಿ ಪರಿಚಯವಾಗಿ ವಿದೇಶಿ ಅಕ್ಷರ ಕಲಿತು ಬಾಲ ಭಾಷೆಯಲ್ಲಿ ಅಕ್ಷರ ಕೂಡಿಸಿ ಕೂಡಿಸಿ ಆಂಗ್ಲ ಪತ್ರಿಕೆ ಓದುವ ಆರಂಭದಲ್ಲಿ  'ಟೈಮ್ಸ್ ಆಫ್ ಇಂಡಿಯಾ'ದ ಶ್ರೀಸಾಮಾನ್ಯನಾಗಿ ನಿಧಾನವಾಗಿ ನನಗೆ ಅರ್ಥವಾದ ನಮ್ಮದೆ ಮೈಸೂರಿನ ಆರ್ ಕೆ ಲಕ್ಷ್ಮಣ್ ಪುಣೆಯಲ್ಲಿ ಎಲ್ಲವನ್ನ ಬಿಟ್ಟು ಹೊರಟಿದ್ದಾರೆ. ಕನ್ನಡದ ಹಾಸ್ಯ ಮಾಸಿಕ 'ಕೊರವಂಜಿ'ಯಿಂದ ತನ್ನ ವ್ಯಂಗ್ಯಚಿತ್ರಕಾರನ ವೃತ್ತಿ ಬದುಕನ್ನ ಆರಂಭಿಸಿದ ಲಕ್ಷ್ಮಣ್ ಬಾಲ್ಯದ ಸವಿ ನೆನಪು 'ಮಾಲ್ಗುಡಿ ಡೇಸ್'ನ ವ್ಯಂಗ್ಯ ಚಿತ್ರಗಳಾಗಿ ಚಿರ ನೆನಪಿನಲ್ಲಿ ಉಳಿದಿರುತ್ತಾರೆ.


ಇನ್ನು ನನ್ನ ಹುಟ್ಟೂರು ತೀರ್ಥಹಳ್ಳಿಯ ತುಂಗೆ ಮಡಿಲಿನ ಮಹಿಷಿಯಿಂದ ನೆರೆಯ ಕಾರಣಕ್ಕೆ ದೂರದ ಧಾರವಾಡಕ್ಕೆ ಗುಳೆ ಹೋಗಿದ್ದ ಅಗ್ರಹಾರವೊಂದರ ಕುಡಿ ಅನಂತರ ನಾನಾ ಕಾರಣಕ್ಕೆ ಖ್ಯಾತರಾಗಿ, ಸಂಸತ್ತಿನ ಎರಡೂ ಮನೆಗಳಲ್ಲಿ ಒಟ್ಟು ಆರು ಬಾರಿ ಸದಸ್ಯರಾಗಿ ಕೇಂದ್ರದಲ್ಲಿ ಪ್ರಬಲ ಖಾತೆಗಳ ಸಚಿವರೂ ಆಗಿದ್ದು ಕರ್ನಾಟಕದೊಳಗೆ ಕನ್ನಡಿಗರಿಗೇನೆ ಉದ್ಯೋಗದಲ್ಲಿ ಆದ್ಯತೆಯನ್ನ ಆಗ್ರಹಿಸುವ ವರದಿಯನ್ನ ಸರಕಾರಕ್ಕೆ ಕೊಟ್ಟ ದಿಟ್ಟೆ ಸರೋಜಿನಿ ಮಹಿಷಿ ಸಹ ದೂರದ ಘಾಝಿಯಾಬಾದಿನಲ್ಲಿ ನಮ್ಮನ್ನಗಲಿ ಮತ್ತೆ ಬಾರದೆಡೆಗೆ ಹೆಜ್ಜೆ ಹಾಕಿದ್ದಾರೆ. ಅವರಿಬ್ಬರಿಗೂ ಅವರಿದ್ದಲ್ಲಿಯೆ ನಮ್ಮೆಲ್ಲರ ಸ್ಮರಣೆಗಳು ಮುಟ್ಟಲಿ.

ಬಡ ಭಾರತೀಯರ ಕಾಸು, ಬಂದ ಭಿಕ್ಷುಕ ಅಮೇರಿcunningರೆ ಅದರ ಬಾಸು.....





ಅಣು ಒಪ್ಪಂದದ ಹೆಸರಿನಲ್ಲಿ ಕಾಸು ಕೊಟ್ಟು ಮಣ್ಣು ಕೊಂಡೆವು. ತನ್ನ ಸ್ವಂತ ನೆಲದಲ್ಲಿ ಸ್ವತಃ ಅಮೇರಿಕಾ ಅಣು ಸ್ಥಾವರಗಳ ಸ್ಥಾಪನೆಗೆ ನಿಷೇಧ ಹೇರಿಕೊಂಡು ಒಂದೂವರೆ ದಶಕ ಕಳೆದಿದೆ ನೆನಪಿರಲಿ. ಅವರಿಗೆ ವಿಷವಾಗುವ ಅದು ನಮಗೆ ಅಮೃತವಾಗುವುದು ಹೇಗೆ?


ಹಾಗೊಂದು ವೇಳೆ ಇಲ್ಲಿ ಅಮೇರಿಕಾ ಸ್ಥಾಪಿಸಿ ಅವರೆ ನಿರ್ವಹಿಸುವ ಅಣು ಸ್ಥಾವರದಲ್ಲಿ ವಿಕಿರಣ ಸೋರಿಕೆಯಾಗಿ ಒಂದೊಮ್ಮೆ ದುರಂತ ಘಟಿಸಿದರೆ ಅದಕ್ಕೆ ಅವರು ಹೊಣೆಯಲ್ಲವಂತೆ! ಸ್ಥಾಪನೆಯ ಜೊತೆ ನಿರ್ವಹಣೆಯ ಹಕ್ಕು ಮಂಡಿಸುವ ಹಾಳು ಅಮೇರಿCunningರು ಸಂಕಟದ ಸ್ಥಿತಿ ಬಂದಾಗ ಮಾತ್ರ ಯಾವುದೇ ಬಾಧ್ಯತೆಯ ಹೊಣೆಗೆ ಹೆಗಲು ಕೊಡದೆ ನುಣ್ಣಗೆ ನುಣುಚಿಕೊಳ್ಳಲು ಮೈಯೆಲ್ಲ ಎಣ್ಣೆ ಹಚ್ಚಿಕೊಂಡು ತುದಿಗಾಲಲ್ಲಿ ತಯಾರಾಗಿರುತ್ತಾರೆ ಅಂತಾಯಿತು.


ವಾಸ್ತವವಾಗಿ ಈ ಅಣು ತಂತ್ರಜ್ಞಾನ ಅಮೇರಿಕನ್ ಕೋಡಂಗಿಗಳ ಪಾಲಿಗೆ ಈಗಾಗಲೆ out dated ಆಗಿರೋವಂತದ್ದು ಹಾಗೂ ಅವರ ಗುಜುರಿಯನ್ನ ಹೊಸತರ ಬೆಲೆಗೆ ಕೊಳ್ಳುವ ಈರಭದ್ರರು ನಾವಾಗುತ್ತಿದ್ದೇವೆ ಅಷ್ಟೆ, ಅಲ್ಲದೆ ಇಲ್ಲಿ ಅಮೇರಿಕನ್ನರು ತಮ್ಮ ಯಾವುದೆ ತಂತ್ರ"ಜ್ಞಾನ"ವನ್ನ ನಮಗೆ ಮಾರುತ್ತಿಲ್ಲ ಅನ್ನೋದು ನಿಮ್ಮ ಗಮನಕ್ಕೆ. ಅದರ ಗುಟ್ಟನ್ನ ತಮ್ಮಲ್ಲಿಯೆ ಇರಿಸಿಕೊಂಡು ಉಸ್ತುವಾರಿಗೂ ಅಲ್ಲಿಂದಲೆ ತಮ್ಮ ತಂತ್ರಜ್ಞರನ್ನೆ ಕಳಿಸಿಕೊಡುತ್ತಾರೆ. ಸ್ಥಳಿಯರೇನಿದ್ದರೂ ಸ್ಥಾವರ ಸ್ಥಾಪನೆಗೆ ಜಮೀನು ಕಳೆದುಕೊಳ್ಳುವುದಕ್ಕೆ, ಅಲ್ಲಿ ಕಸ ಹೊಡೆಯುವ ನೆಲ ಒರೆಸುವ ಚಪ್ರಾಸಿಯ ಕೆಲಸಕ್ಕೆ ಹಾಗೂ ಅನಂತರ ಅದರ ಸೋರಿಕೆ ಆದಲ್ಲಿ ರೋಗ ರುಜಿನಗಳಿಂದ ನರಳೊಕ್ಕೆ ಮಾತ್ರ ಸೀಮಿತ. ಮತ್ತೊಂದು ಭೋಪಾಲ್ ದುರಂತ ಹಾಗೂ ರಾಜಮರ್ಯಾದೆ ಸಹಿತ ಓಡಿ ಹೋದ ಆಂಡರ್ಸನ್ ಪ್ರಕರಣದ ಎರಡನೆ ಕಂತಿನ ಮರುಕಳಿಕೆಯನ್ನ ಸದ್ಯದಲ್ಲಿಯೆ ನಿರೀಕ್ಷಿಸಿ.


ಇದೆ ಕಾರಣಕ್ಕೆ ಇದೆ ಮಾತಿನ ಮೋಡಿಗಾರನ ಪಕ್ಷ ಮನಮೋಹನನ ಕಾಲಕ್ಕೆ ಈ ಒಪ್ಪಂದವನ್ನ ಪ್ರಬಲವಾಗಿ ವಿರೋಧಿಸಿ ಲೋಕಸಭೆಯಲ್ಲಿ ಅದರ ಕರಡನ್ನ ಅಂಗೀಕಾರಗೊಳ್ಳದಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಆಗ ಗುಜರಾತಿನ ಚುಕ್ಕಾಣಿ ಹಿಡಿದಿದ್ದ ಇದೆ ಮಾತಿನ ಮೋಡಿಯವನೂ ಸಹ ಅದನ್ನ ಕಟು ಶಬ್ದಗಳಲ್ಲಿ ವಿರೋಧಿಸಿದ್ದ. ತುಸು ಅಧಿಕ ವೆಚ್ಚದ್ದಾದರೂ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಸೌರ ಫಲಕಗಳ ಸರಳ ದೇಶೀಯ ತಂತ್ರಜ್ಞಾನವನ್ನ ತನ್ನ ರಾಜ್ಯದ ಎಲ್ಲಾ ನದಿ ಕಾಲುವೆಗಳಲ್ಲಿ ಹಾಗೂ ಕಚ್ಛಿನ ರಣಭೂಮಿಯಲ್ಲಿ ಹಾಕಿಸಿ ಶಬ್ಭಾಸ್ ಅನ್ನಿಸಿಕೊಂಡಿದ್ದ. ದೀರ್ಘಕಾಲೀನ ಉತ್ಪಾದನೆಯ ಹಾಗೂ ಸ್ಥಳಿಯ ವಿತರಣೆಯ ದೃಷ್ಟಿಯಿಂದ ಇದು ಅಭಿನಂದನೀಯವೆ ಆಗಿತ್ತು. ಆದರೆ ಈಗ ಏಕಾಏಕಿ ಆತನಿಗೆ ದೇಶದ ವಿದ್ಯುತ್ ಬೇಡಿಕೆ ವಿಪರೀತ ಅನ್ನಿಸಿ ಬಿಟ್ಟಿದೆ! ಸಿಗುವ ಎಂಜಲು ಕಾಸಿನ ಕಮೀಷನ್ನಿನ ರುಚಿ ಹೆಚ್ಚು ಅಂತ ಕೇಳಿ ಮಾತ್ರ ಗೊತ್ತಿದ್ದ ಭಾರತೀಯ ಎ'ಬಡ' ಪ್ರಜೆಗಳಾದ ಹುಲು ಮಾನವರಿಗೆ ಈಗ ಅದನ್ನು ಕಣ್ಣಾರೆ ನೋಡುವ ಭಾಗ್ಯವೂ ಸಿಕ್ಕಿ ಮತ್ತೊಂದು ಮಗದೊಂದು 'ಅಚ್ಚೆ ದಿನ್' ಕಂಡು ಅವರೆಲ್ಲ ಧನ್ಯರಾದರು!


ಹೌದು, ನಮಗೆ ವಿದುತ್ ಅತ್ಯವಶ್ಯಕ ನಿಜ. ಹಾಗಂತ ಅಣು ವಿದ್ಯುದಾಗಾರಗಳೆ ಅದಕ್ಕೆ ಕೊನೆಯ ಪರಿಹಾರ ಅನ್ನೋದೆಲ್ಲ ಕಾಗಕ್ಕ ಗೂಬಕ್ಕನ ಕಥೆಗಳಷ್ಟೆ. ಇಲ್ಲಿ ಉತ್ಪಾದನ ವೆಚ್ಚವೂ ಅಧಿಕ ಮಾತ್ರವಲ್ಲ ಪರಿಸರಕ್ಕೆ ಇದರಿಂದ ಆಗುವ ಹಾನಿಯಂತೂ ಸಿಗುವ ಒಟ್ಟು ಮೊತ್ತದ ವಿದ್ಯುತ್ತಿಗೆ ಅದರಿಂದಾಗುವ ಒಟ್ಟಾರೆ ಲಾಭಕ್ಕೆ ಹೋಲಿಸಿ ನೋಡಿದರೆ ಅತ್ಯಂತ ನಷ್ಟದ ಬಾಬ್ತು ಅನ್ನೋದು ಸಹ ಸರಳ ಲೆಕ್ಕಾಚಾರ ಬಲ್ಲವರಿಗೆ ಅರ್ಥವಾಗುತ್ತದೆ. ಸಮುದ್ರಮುಖಿಯಾಗಿರುವ ದೇಶದ ಪ್ರತಿಯೊಂದು ನದಿಯನ್ನೂ ಸಾಗರ ಸಂಗಮಕ್ಕೂ ಕನಿಷ್ಠ ಐವತ್ತು ಕಿಲೋಮೀಟರ್ ಅಂತರದಲ್ಲಿ ಸಣ್ಣ ಮಟ್ಟಿಗೆ ತಡೆದು ನಿಲ್ಲಿಸಿ ವಿದ್ಯುತ್ ಉತ್ಪಾದಿಸಿದ್ದೇ ಆದರೆ ನಮ್ಮ ಮುಕ್ಕಾಲು ವಾಸಿ ಬೇಡಿಕೆಯನ್ನ ಪೂರೈಸಿಕೊಳ್ಳಬಹುದು ಹಾಗೂ ಅಸಂಪ್ರದಾಯಿಕ ಸೌರ ವಿದ್ಯುತ್ ಉತ್ಪಾದನೆಯನ್ನ ಆಳುವ ಸರಕಾರಗಳ ಜೊತೆಜೊತೆಗೆ ಖಾಸಗಿಯಾಗಿ ಜನರೂ ತಮ್ಮತಮ್ಮ ಮನೆಗಳಲ್ಲಿಯೆ ಉತ್ಪಾದಿಸಿಕೊಂಡು ಹೆಚ್ಚುವರಿಯನ್ನ ಸಾರ್ವಜನಿಕ ಗ್ರಿಡ್ ಮೂಲಕ ಮಾರುವ ಯೋಜನೆಯನ್ನ ಪ್ರೋತ್ಸಾಹಿಸಿದ್ದರೆ ಯಾವ ಹಾನಿಯೂ ಇಲ್ಲದೆ ನಾಡು - ದೇಶ ವಿದ್ಯುತ್ ಕೊರತೆಯನ್ನ ನೀಗಿಸಿಕೊಳ್ಳುತ್ತಿತ್ತು ಅನ್ನೋದು ಅರಿವಿರದಷ್ಟು ನಮ್ಮ ಪ್ರಧಾನಿಗಳು ಮೂರ್ಖರಾಗಿರಲಿಕ್ಕಿಲ್ಲ.


ಕಂಡವರ ನಡೆಯನ್ನ ಕೂತಲ್ಲಿ ನಿಂತಲ್ಲಿ ಯೂ ಟರ್ನ್ ಅಂತ ಎಲುಬಿಲ್ಲದ ನಾಲಗೆಯಲ್ಲಿ ಟೀಕಿಸಿ 'ಕ್ರೇಜಿ'ಪ್ರಾಣಿಗಳಂತೆ ಆಡುವ ಮೋಡಿಗಾರನ ಬಾಲಬುಡುಕರು ಈ ಸಂಪೂರ್ಣ ಓ ಟರ್ನ್ ಬಗ್ಗೆ ಮಾತ್ರ ತುಟಿ ಎರಡು ಮಾಡಲೊಲ್ಲರು! ಎಷ್ಟೆಂದರೂ ಇವರು ನಿ'ರಾಧಾರ'ವನ್ನ ವಿರೋಧಿಸಿಕೊಂಡೆ ಅಧಿಕಾರ ಕದ್ದು ಈಗ ಅದನ್ನೆ ಜಾರಿಗೊಳಿಸಿ ನಮ್ಮ ಖಾಸಗಿ ಮಾಹಿತಿಯನ್ನ ಅಮೇರಿಕೆಗೆ ಮಾರಿಕೊಂಡ, 'ಧನ'ವೆ ಇಲ್ಲದ ಖಾತೆಯನ್ನ ಸಿಕ್ಕಸಿಕ್ಕವರಿಗೆಲ್ಲ ಮಾಡಿಕೊಟ್ಟು ದೇಶದ ಜನರನ್ನೂ ದನ ಮಾಡಿದ ಅತಿಜಾಣರ ತಿಜೋರಿಯಲ್ಲಿ ಸ್ವಂತ್ದ ಮೆದುಳನ್ನ ಅಡವಿಟ್ಟವರ ಅಡ್ಡ ಸಂತಾನದವರಲ್ಲವೆ? ಇದಕ್ಕಿಂತ ಹೆಚ್ಚಿನದೇನನ್ನ ಇಂತಹ ಹಡಬೆಗಳಿಂದ ನಿರೀಕ್ಷಿಸಲು ಸಾಧ್ಯ?.


ಇನ್ನು ಇಂದು ಪಥ ಸಂಚಲನದಲ್ಲಿ ಪ್ರದರ್ಶಿತವಾದ ರಷ್ಯನ್ ನಿರ್ಮಿತ ಆಯುಧಗಳ ಜಾಗಕ್ಕೆ ಅಮೇರಿಕನ್ ಉತ್ಪಾದನೆಗಳು ಲಗ್ಗೆ ಹಾಕಲಿವೆ. ಜೀವರಕ್ಷಕ ಔಷಧಿಗಳ ನಿಯಂತ್ರಿತ ಬೆಲೆಯನ್ನ ನಮ್ಮ ಆಳುವ ಮಂದಿ ಕಿತ್ತು ಹಾಕಿ ಅಮೇರಿಕನ್ ಔಷಧ ಉತ್ಪಾದಕರ ಜೋಳಿಗೆಯನ್ನ ತುಂಬಿಸಲಿದ್ದಾರೆ. ಒಟ್ಟೊಟ್ಟಿಗೆ ಕೂತು ಅರ್ಧರ್ಧ ಚಾ ಕುಡಿದ ಮಾತ್ರಕ್ಕೆ ಭೋಪರಾಕ್ ಹಾಕುವವರ ಹಾಗೂ ಮಾಧ್ಯಮಗಳೆಂಬ ಭಟ್ಟಂಗಿಗಳ ಕೃಪೆಯಿಂದ ಭಾರತೀಯ ಬರಿ ಕೈ ನೆಕ್ಕಿ ಕೊಂಡು ನಮ್ಮ ಮೋಡಿಗಾರ ಆ ಓಬಮ್ಮನ ಆಪ್ತಮಿತ್ರನಾದ ಎನ್ನುವ ಹುಸಿ ಹೆಮ್ಮೆಯಲ್ಲಿ ತೇಲುತ್ತಾನೆ, ನಿಜದಲ್ಲಿ ಎಲ್ಲಾ ಜೇನನ್ನೂ ಗೂಡಿನ ಸಮೇತ ಅಪಹರಿಸಿ ಅಮೇರಿಕನ್ನರು ಮತ್ತೊಂದು ಸುತ್ತು ನುಣ್ಣಗೆ ನಮ್ಮ ಚೌರ ಮಾಡಿರುತ್ತಾರೆ.


ಅಮೇರಿಕ ಈ ಆಹ್ವಾನದ ಕಾರಣಕ್ಕೆ ನಮ್ಮನ್ನು ಅತಿಯಾಗಿ ಆದರಿಸಿ ಇನ್ನು ನಮ್ಮ ರಾಗಕ್ಕೆ ತಮ್ಮ ರಾಗವನ್ನೂ ಸೇರಿಸುತ್ತಾರೆ ಅನ್ನೋದು ಕಡು ಮೂರ್ಖತನ. ಲಾಭವಿಲ್ಲದ ಕಡೆಗೆ ಅವರ ಎಡಗಾಲಿನ ಚಪ್ಪಲಿಯೂ ಸಹ ಹೋಗುವುದಿಲ್ಲ. ಮೊನ್ನೆ ಇಲ್ಲಿಗೆ ಬಂದು ನಮ್ಮ ಬೆನ್ನು ತಡವಿ ಹೋಗಿದ್ದ ಜಾನ್ ಕೆರ್ರಿ ಮರುದಿನವೆ ರಾವಳಪಿಂಡಿಗೆ ಹೋಗಿ ಅಲ್ಲಿ ರಾಹಿಲ್ ಶರೀಫನ ಬೆನ್ನನ್ನೂ ಹಿತವಾಗಿ ಕೆರೆದೆ ವಾಷಿಂಗ್'ಟನ್ನಿಗೆ ಮರಳಿದ್ದ ಅನ್ನುವ ತಾಜಾ ಉದಾಹರಣೆಯೊಂದಾದರೂ ನಮಗೆ ನೆನಪಿದ್ದರೆ ಸಾಕು. ಒಟ್ಟಿನಲ್ಲಿ ಹಣ ನಮ್ಮದು, ಈ ಬಿಟ್ಟಿ ಸಿಗುವ ಸಾಲದ ಹಣದಲ್ಲಿ ಮೋಜು ಮಾಡುವವರು ಮಾತ್ರ ಅಮೇರಿಕನ್ನರು. ಅಲ್ಲಿಗೆ ಜಯ ಜಯ ಜಯ ಹೇಏಏಏಏಏಏಏಏಏಏ.

05 January 2015

ನೆನಪುಗಳ ನದಿದಂಡೆಯ ಮೇಲೆ........


ಭಾವಗಡಲ ಅಲೆಗಳೆಲ್ಲ ಎದೆ ತೀರಕ್ಕೆ ಹಿತವಾಗಿ ಸೋಕಿ
ನಿರೀಕ್ಷೆ ಅಡ್ಡ ಮಳೆಯ ಹನಿಗಳ ತುಂತುರು
ಎದೆ ಕಿಟಕಿಯ ಗಾಜನ್ನ ಒಂದೊಂದಾಗಿ ತಾಕಿ,
ಅದುವರೆಗೆ ಹಸಿದು ಬರಡಾಗಿದ್ದ
ಮನದ ಒಣ ನೆಲದಲ್ಲಿ ಅನಿರೀಕ್ಷಿತವಾಗಿ
ಅನೇಕ ಆಸೆಯ ಅಣಬೆಗಳು ತುಸುವೂ ಸುಳಿವುಕೊಡದೆ ಅರಳಿದ್ದವು/
ಕಾಲಚಕ್ರ ಅತಿವೇಗವಾಗಿ ತಿರುಗಿ
ಸ್ವಪ್ನದಿಳೆ ತಡೆಯಲಾಗದ ವಿರಹದ ಚಳಿಗೆ ತಾನು ಮುದುಡಿ....
ಅಲ್ಲಿ ಬಿದ್ದ ನಿರಾಕರಣೆಯ ಇಬ್ಬನಿಯ ಹನಿಗಳೆಲ್ಲ ಮೂಡಿ
ತುಸುವೂ ಹೊತ್ತಾಗಿರದಿದ್ದ ಆಕಾಂಕ್ಷೆಯ ಮೊಗ್ಗುಗಳನ್ನೆಲ್ಲ
ಅವು ನಗುವ ಮೊದಲೆ ಮುದುಡಿಸಿದವು,
ಆಗಷ್ಟೆ ತಿಳಿಯಾಗಿದ್ದ ಪ್ರಕ್ಷುಬ್ಧ ಮನ ಸರೋವರವನ್ನ
ಮತ್ತೆ ಮೊದಲಿಗಿಂತ ಹೆಚ್ಚಾಗಿ ಕದಡಿಸಿದವು//



ಹೋದ ನಿನ್ನ ಬಗ್ಗೆ ದೂರುಗಳಿಲ್ಲ
ಹೋಗಲು ನೀ ಕೊಟ್ಟ ಕಾರಣಗಳನ್ನೂ ಸಹ ನಾ ನಂಬುವುದಿಲ್ಲ,
ನಿಜವನ್ನೆ ನುಡಿದು ನೀ ನನ್ನ ತೊರೆಯಬಹುದಿತ್ತು...
ನನಗಂತೂ ಅದು ಅಸಾಧ್ಯ ಆದರೂ ನೀ ನನ್ನ ಈಗಿನದ್ದಕ್ಕಿಂತ
ವೇಗವಾಗಿ ಮರೆಯಬಹುದಿತ್ತು/
ಇನ್ಯಾರಿಗಾದರೂ ಅಪ್ಪಿತಪ್ಪಿ ನಾವಂಚಿಸಿಯೇನು
ಆದರೆ ನಿನ್ನ ಮುಂದೆ ತನುವಷ್ಟೆ ಅಲ್ಲ ನನ್ನ ಮನ ಸಹ ಬರಿ ಬೆತ್ತಲೆ,
ಬೆಳಕನ್ನ ನಿನ್ನಿಂದ ಕೇಳಿ ಮಾತ್ರ ಗೊತ್ತಿದ್ದ ಕುರುಡ ನಾನು
ಈಗ ನಿನ್ನ ಸಾಂಗತ್ಯವೂ ಇಲ್ಲದೆ...
ಬಾಳೆಲ್ಲ ನನಗೆ ಮೊದಲಿಂದ ಜೊತೆಯಾಗಿರುವ ಬರಿ ಕತ್ತಲೆ//



ಮುಗ್ಢವಾಗಿ ನಗುವ ಮಕ್ಕಳ ಅಭೋದ ಕಣ್ಣುಗಳಲ್ಲಿ
ನಾನಿನ್ನ ಅಡಿಗಡಿಗೆ ಕಾಣುತ್ತೇನೆ.....
ನಿನ್ನಲ್ಲೂ ಅಂತಹ ಕುತೂಹಲಕ್ಕೆ ಅರಳುವ ಮುಗ್ಧ ಮನಸೊಂದಿತ್ತಲ್ಲ
ಅನ್ನೊದನ್ನ ಬಾಳಿನ ಅನುಕ್ಷಣ ಮನಗಾಣುತ್ತೇನೆ,
ನಾನೇನೂ ತ್ಯಾಗಿಯಲ್ಲ ನಿನ್ನನ್ನಷ್ಟೆ ಪ್ರೀತಿಸಿದ ಪರಮ ಸ್ವಾರ್ಥಿ
ಇನ್ಯಾರಿಗೂ ತುಸುವೂ ಎಡೆ ಕೊಡದ ಹಾಗೆ
ಆವರಿಸಿಕೊಂಡಿದ್ದೀಯ ನೀನೆ ನನ್ನ ಕಿರು ಬಾಳ ಭರ್ತಿ/
ನಿನ್ನ ನಾಮದ ಹಣೆ ಪಟ್ಟಿ ಹಚ್ಚಿಕೊಳ್ಳುವ ಉಮೇದು ನನಗೂ ಇಲ್ಲ
ನನ್ನ ಹೆಸರ ಠಸ್ಸೆಯ ನಿನ್ನ ಖಾಸಗಿ ಬಾಳಲ್ಲಿ  ಒತ್ತುವ
ಹಪಾಹಪಿಯೂ ಈಗ ಉಳಿದಿಲ್ಲ,
ಬಾಳು ಅಂದುಕೊಂಡದ್ದಕ್ಕಿಂತ ಕಿರಿದು ಅನ್ನುವ ಸತ್ಯ ನನಗೂ ಅರಿವಿದೆ
ನಾ ವಾಸ್ತವವಾದಿ....
ಹೆಚ್ಚೆಂದರೆ ಸಾವನ್ನ ದಯಪಾಲಿಸಬಹುದೆ ವಿನಃ
ಇನ್ನೇನೂ ಕಿತ್ತುಕೊಳ್ಳಲಾರದು ನನ್ನಿಂದ
ಈಗಾಗಲೆ ನಿನ್ನ ಅಗಲಿಸಿರುವ ಕರುಣೆಯಿಲ್ಲದ ಕ್ರೂರ ವಿಧಿ//

04 January 2015

ವಾಸ್ತವ ಇರೋದೆ ಬೇರೆ, ಆದರ್ಶ ಅದೇ ಬೇರೆ.......



ಬೇರು ಮರೆತ ಹೂವು ಬಾಡೋದು ಖಚಿತ
ಋಣ ಹರಿದ ಮನಸಿಗೆ ನೋವು ಮಾತ್ರ ಉಚಿತ,
ಕಾಲ ಯಾರಿಗೂ ಕ್ಷಣ ಮಾತ್ರವೂ ಕಾಯುವುದಿಲ್ಲ
ನಾಳೆ ಇಂದಿಗೆ ಹತ್ತಿರದ ನೆಂಟ ಹಾಗಂತ ನೆನ್ನೆಯಾಗದೆ
ಅದು ನಿಂತಲ್ಲಿಯೆ ಸುಮ್ಮನೆ ಕಾಯುತ್ತಾ ಉಳಿಯುವುದಿಲ್ಲ/
ಹಳಬರಾಗುವುದು ಕೇವಲ ನಾವು ಮಾತ್ರ
ಕಾಲಮಾನ ಯಾವತ್ತೂ ಹೊಚ್ಚ ಹೊಸದು,
ನಮ್ಮದಿಲ್ಲೇನಿದ್ದರೂ ಕೇವಲ ನಾಟಕದ ಪಾತ್ರ
ವಿಧಿ ನಿರ್ಧರಿಸಿದಾಗ ನಾವು ನಿರ್ಗಮಿಸಬಹುದು//


ಕೆಲವೊಮ್ಮೆ ಮನದ ಮರುಳ ಕಂಡು
ಕನಸು ಇರುಳ ನಿದ್ದೆಯಲ್ಲಿ ಅದನ್ನ ಅಣಗಿಸುತ್ತದೆ,
ಸಾಕಾರವಾಗದ ಅದರ ಆಸೆಗಳನ್ನ ತನ್ನ ನೆರಳ ಛಾವಣಿಯೊಳಗೆ ಎಳೆದುಕೊಳ್ಳದೆ
ಬರ್ಬರ ನಿರೀಕ್ಷೆಯ ಬಿಸಿಲಿನಲ್ಲಿಯೇ ನಿರ್ದಯವಾಗಿ ಒಣಗಿಸುತ್ತದೆ/
ಪ್ರಾಮಾಣಿಕತೆಗೆ ಇಲ್ಲಿ ಸಿಗದು ಕಿಂಚಿತ್ತೂ ಕರುಣೆ
ಶುಭ್ರ ಮನಸಿನ ಯಾಚನೆಗೆ ಯಾವತ್ತೂ
ಮುಲಾಜಿಲ್ಲದೆ ಹೆಗಲು ಜಾರಿಸುತ್ತದೆ ಜಗತ್ತು ಹೊರಲೊಪ್ಪದೆ ಹೊಣೆ,
ಇನ್ನೊಬ್ಬರ ವಂಚಿಸ ಹೊರಟವರಿಗೆ ಇಲ್ಲಿ
ಯಾವತ್ತೂ ಸಿಗುತ್ತಲೇ ಇರುತ್ತದೆ ರಾಜ ಮನ್ನಣೆ...
ಬರೆದದ್ದನ್ನ ಬೇಡವೆಂದಾಗ ಬರಿಗೈಯಲ್ಲಿ ಒರೆಸುವಂತಿಲ್ಲವಲ್ಲ
ಇದು ವಿಧಿಯ ಕಪ್ಪುಹಲಗೆಯಾಗಿರುವ ಕರ್ಮದ ಹಣೆ//


ಅಕಾಶ ಅತಿ ಚಿಕ್ಕದು ಇಲ್ಲಿ ಅನಿರೀಕ್ಷಿತವಾಗಿ ಸಿಗುವ ಅವಕಾಶದ ಮುಂದೆ
ಅಯೋಗ್ಯರ ಕರಗ ಹೊತ್ತು ತಿರುಗುವ ತಲೆತಿರುಕರ ಜಗತ್ತಿದು
ಜನ ಇಲ್ಲಿ ಬಿಕರಿಗೆ ಮೆದುಳಡವಿಟ್ಟ ಬರಿ ಕುರಿ ಮಂದೆ,
ಗೊತ್ತು ಗುರಿಯಿಲ್ಲದಿದ್ದರೂ ಕಾಂಚಣದ ಝಣಝಣ ಕಿವಿ ತುಂಬಿದರೆ ಸಾಕು
ಹಾಕುತಾರೆ ಮತಿಗೆಟ್ಟವರಂತೆ ಹೆಜ್ಜೆ ಹೊರಟ ಜಾತ್ರೆಯ ಗುಂಪಿನ ಹಿಂದೆ/
ಪ್ರತಿಭೆ ಇಲ್ಲಿ ಯಾವತ್ತೂ ಕಾಡ ಸುಮದ
ಕಾಣದೆ ಅರಳಿ ಬಾಡುವ ಸುಗಂಧದ ಮೊಗ್ಗು,
ಸುರೂಪವದೆಷ್ಟೆ ಇದ್ದರೂ ಬಡವನ ಕೂಸನ್ನ ಯಾರೂ ಎತ್ತಿ ಮುದ್ದಿಸರು
ಅವಕಾಶವಾದಿ ಜಗತ್ತಿನ ಕಣ್ಣಿಗೆ ಯಾವತ್ತೂ....
ಹಣವಂತರು ಹೆತ್ತದ್ದೆ ವಿಶ್ವದ ಅತಿಸುಂದರ ಮಗು//