30 March 2009

ಒಗರು ಒಲವು...

ಅಗೋಚರ ಚಹರೆ ನಿನ್ನದು,

ಅಪೂರ್ಣ ಕನಸ ಹೊಸೆಯೋ ಕರ್ಮ ನನ್ನದು/

ಅರವಳಿಕೆಯೇ ನೀಡದೆ ಎದೆಯ ಬಗೆಯೋ ಶಸ್ತ್ರಕ್ರಿಯೆ,

ಈ ಒಲವೆನ್ನುವ ಒಗರು ಭಾವ//

ನಿನ್ನರಮನೆಯ ಬೀದಿಯಲಿ,

ಒಲವ ಯಾಚಿಸಿ ಅಲೆವಾಗ/

ನನ್ನ ಹಣೆಯಿಂದ ಸುರಿದ ಸ್ವೇದ ಬಿಂದು,

ನೋಡು ಹದವಾಗಿ ಚಿಗುರಿ...ಪ್ರತಿ ಹನಿಯೂ ಸುಂದರ ಸುಮಗಳಾಗಿವೆ//

ಕೇವಲ ನಿರೀಕ್ಷೆಯ ನೇಣಿಗೆ ಏರಿಸಿ,

ಕ್ಷಣ ಕ್ಷಣವೂ ಒಲವ ಮುಳ್ಳಿನ ಮೊನೆಯಿಂದ ಚುಚ್ಚಿ ಇಂಚಿಂಚಾಗಿ ನನ್ನನು ಕೊಲ್ಲುವ ಜೀವವೇ/

ನನ್ನೆದೆಯ ಬೇಗೆ ನಿನ್ನ ಮನೆಯ ಬೆಚ್ಚಗಾಗಿಸೋದಾದರೆ,

ನಗು ಚಿಮ್ಮಿಸುತಲೇ ತುಟಿಯಂಚಿನಲಿ ಸುಟ್ಟು ಬೂದಿಯಾಗಲು ನಾನು ತಯಾರು//

ಕಚಗುಳಿಯನಿಟ್ಟಿತು...

ಮೌನ ಕಲಕೋ ವೀಣೆಯ ಮಾರ್ದನಿ,

ಉಲಿವ ಕೊಳಲಿನ ಇಂಪಾದ ಇನಿದನಿ/

ನೆಲಕೆ ಬೆಚ್ಚನೆ ಚಾದರ,

ಹೊದಿಸಿ ತಬ್ಬುವ ಇಬ್ಬನಿ...ಮುಗಿಲ ದಾಟಿ ಜಾರುವ ಮಳೆ ಹನಿಯೂ ನೀನು//

ಯಾವಾಗಲೂ ನೀ ನನ್ನ ಸೋಕಲು,

ಈ ಜೀವನ ನನ್ನೊಳಗೆ ಕಚಗುಳಿಯನಿಟ್ಟಿತು/

ನೆನಪಿನ ನಾವೆಯ ನಿನ್ನ ಜೊತೆಯಲೇ ಏರಲು,

ಸಂಭ್ರಮದ ತಂತಿಯೂ ಮೀಟಿತು//

29 March 2009

ಪಲಕು...

ಕಂಗಳಲೆ ಒಲವನು ಸೂಸಿ,

ಎದೆಯೊಳಗೆ ಪ್ರೀತಿಯ ರಾಶಿ...ಹಾಕಿರುವ ನಿನ್ನ ಹೊಗಳಲೇ?/

ನಸು ನಗುವೇ ಹೇಳಿದೆ ಎಲ್ಲ,

ಗುಟ್ಟೇನೂ ಉಳಿದೆ ಇಲ್ಲ...ತೆರೆದ ಮನವ ನಾನು ಓದಲೇ?//

28 March 2009

ನೆನಪು

ಜೇನಿನ ಕಂಗಳಲ್ಲಿ,

ಮನಸ ಸೆಳೆವ ಹಾಡಿನಲ್ಲಿ/

ಮತ್ತೆ ಸುಳಿವ ಗಾಳಿಯಲ್ಲಿ ಬೆರೆತು ನವಿರು ಕಂಪ ಚಲ್ಲಿ,

ಇಳಿದೆ ಕನಸ ಛಾಯೆಯಾಗಿ ನನ್ನೊಳಗೆ ನೀನು//

ಮುಗಿಲಿಗೆ ನೆಗೆಯೋ ಕನಸು,

ಕನಿಷ್ಠ ಬೆಟ್ಟವನ್ನಾದರೂ ಏರಿಸೀತು/

ನುಗ್ಗುವ ಛಲ ಮುಖ್ಯ

ಗೆಲುವಿನ ಛಾತಿ ಖಂಡಿತ ಕೈಸೇರೀತು//

25 March 2009

ಮತ್ತೆ ಯುಗಾದಿ....

ಸೋತ ಮುಗಿಲಿಗೆ ಹನಿ ಸಾಂತ್ವಾನ...

ಅಕ್ಕರೆಯ ಜೊತೆ ಬಿರಿದ ನೆಲದ ಆಸರ/

ಹನಿದ ಬೆವರ ಒರೆಸೋ ಒಲವು,

ಇನ್ನಷ್ಟು ಸುರಿವ ಹಂಬಲ...ತುಸು ಕಾತರ//

ನೀನು ಮುಗಿಲು-

ನಾನು ನೆಲ ಇದೆಲ್ಲ ಹಳೆ ಕಥೆ/

ಮುಗಿಲು ಕರಗಿ ಸೇರಿ ನೆಲದ ಜೊತೆ,

ಅರಳಲಿ ಹೊಸತೊಂದು ಲತೆ...ಇಷ್ಟವಾಯ್ತಾ ನನ್ನ ಈ ಹೊಸ ಕವಿತೆ//

ಬೀಸುವ ಗಾಳಿಯ ಒಳ ಗುಟ್ಟು,

ಕಂಪಿಸುವ ಚಿಗುರೆಲೆಗಳ ಪಾಲು/

ಮತ್ತೆ ಬಂದ ಉಗಾದಿ ಒಂದು ನೆಪವಷ್ಟೇ,

ಸಂಭ್ರಮ ಹಂಚಿಕೊಳ್ಳಲು ಈ ನಾಲ್ಕು ಸಾಲು//

23 March 2009

ಸ್ಮರಣೆ...

ಅಳಿದ ಮೇಲೂ ಹೆಜ್ಜೆ ಜಾಡನುಳಿಸಲು,
ಅಳಿಯದ ನೆನಪ ರಂಗೋಲಿ ಉಳಿಸಲು/
ಸಾಧ್ಯ....ಅನ್ನೋದ ತೋರಿಸಿಕೊಟ್ಟ,
ನಗುತಲೆ ನೇಣಿಗೆ ಕೊರಳೊಡ್ಡಿದ ಅವನೆದೆ ದಿಟ್ಟ//

ಭಗತ್,ರಾಜಗುರು,ಸುಖದೇವರನ್ನ ಕನಿಷ್ಠ ಇವತ್ತಾದರೂ ಸ್ಮರಿಸೋಣ...

22 March 2009

ತೃಸ್ತ...

ಚೂರಾದರೂ ಒಲವ ಹನಿ ಹನಿಸಿದ್ದರೆ ಮೋಡ,

ಬಾಯಾರಿದ ನೆಲವೂ ತುಸು ನಗುತ್ತಿತ್ತು/

ಸಂತೃಪ್ತಿಯ ತೋರ್ಪಡಿಕೆಗೆ,

ಒದ್ದೆ ಮಣ್ಣೂ ಘಮಗುಡುತ್ತಿತ್ತು//

ಖಾಲಿ ಬಾನ ವಿಷಾದದ ಚಿತ್ರ,

ಮಳೆಯ ಸುಳಿವಿರದೆ ಕಾದ ನೆಲದ ಅಪೂರ್ಣ ನಿರಾಸೆಯ ಪತ್ರ/

ನನಗಾಪ್ತ,

ಏಕೆಂದರೆ... ಒಲವಿನ ಬರದಲ್ಲಿ ನಾನೂ ತೃಸ್ತ//