"ಹೆಸರೆ ಇಲ್ಲದವರೂರಿನಲ್ಲೊಂದು ಕೊಲೆಯಾದ ಕಥೆ"
೨
ನನ್ನ ವೃತ್ತಿಯ ಆರಂಭದ ದಿನ ರಾಜ್ಯದ ಮುಖ್ಯಮಂತ್ರಿ ಕೆಲಿನ್ ಹಜಾ಼ನ್ ಪುಲೋಂಗ್ ರಾಜಧಾನಿ ಬಿಟ್ಟು ಆಗಲೆ ಎರಡು ವಾರಗಳ ಮೇಲಾಗಿತ್ತು. ಸ್ವತಂತ್ರ ಚಳುವಳಿ ಹಿನ್ನೆಲೆಯ ಪಕ್ಷದಿಂದಲೆ ರಾಜಕೀಯ ಜೀವನ ಆರಂಭಿಸಿ ಸಂಸತ್ತಿನ ಸಭಾಪತಿಯಂತಹ ಉನ್ನತ ಹುದ್ದೆಯವರೆಗೂ ಮೇಲೇರಿದ್ದರೂˌ ಭರಪೂರ ಅಧಿಕಾರಗಳನ್ನು ಅದೆ ಪಕ್ಷದ ಮೂಲಕ ಅನುಭವಿಸಿದ್ದರೂ. ಮುಂದೆ ಅವಕಾಶವಾದಿಯಾಗಿ ಪಕ್ಷದ ಮೆಲೆ ಹಿಡಿತ ಸಾಧಿಸಿದ್ದ ಕುಟುಂಬದ ಸೊಸೆ ಪಕ್ಷದೊಳಗೆ ಪ್ರಬಲವಾದ ಹಿನ್ನೆಲೆಯಲ್ಲಿ ಅವರ ವಿದೇಶಿ ಜನ್ಮಸ್ಥಳದ ಕುಂಟು ನೆಪ ತೆಗೆದು ತನ್ನ ಇನ್ನಿಬ್ಬರು ಮಹತ್ವಾಕ್ಷಾಂಶಿ ಮಿತ್ರರೊಂದಿಗೆ ಪಕ್ಷ ಒಡೆದು ಹೊಸ ರಾಜಕೀಯ ಪಕ್ಷ ಕಟ್ಟಿದ್ದ ಭೂಪನೀತ. ಕಾಲಾಂತರದಲ್ಲಿ ಆ ಪಕ್ಷವನ್ನೂ ಒಡೆದು ತನ್ನ ಗುಂಪಿನೊಂದಿಗೆ ಹೊರ ಬಂದು ಹೊಸ ಚಿನ್ಹೆಯೊಂದಿಗೆ ಸ್ಪರ್ಧಿಸಿ ರಾಜ್ಯದಲ್ಲಿ ಕಳೆದ ಮೂರು ಅವಧಿಗಳಿಂದ ನಿರಂತರವಾಗಿ ಅಧಿಕಾರದಲ್ಲಿದ್ದ.
ಪ್ರಾದೇಶಿಕ ಪಕ್ಷದ ಸರ್ವೋಚ್ಛ ನಾಯಕ ತಾನೆ ಆಗಿದ್ದರಿಂದ ದೆಹಲಿಯ ನಾಯಕರ ಅಂಕೆಯಿಲ್ಲದೆˌ ಸ್ಥಳಿಯ ಕಾರ್ಯಕರ್ತ ದೆವ್ವಗಳ ಕಾಟವೂ ಇಲ್ಲದೆ ಸಂಸಾರ ಸಮೇತನಾಗಿ ಕೂತುಣ್ಣುತ್ತಾ ರಾಜ್ಯದ ಖಜಾನೆಯನ್ನ ನಿರಂತರವಾಗಿ ದೋಚುತ್ತಿರುವ ಕೌಟುಂಬಿಕ ರಾಜಕಾರಣಿ ರತ್ನರಲ್ಲೆ ಅಗ್ರಣಿಗಳಲ್ಲೊಬ್ಬ ಈ ಪುಲೋಂಗ್. ವಯೋ ಸಹಜವಾಗಿಯೋ ಇಲ್ಲಾ ಕರ್ಮಫಲಾನುಸಾರವಾಗಿಯೋ ಹೃದಯದಲ್ಲಿ ರಕ್ತಪರಿಚಲನೆಯ ಗಂಭೀರ ಸಮಸ್ಯೆಯಿಂದ ನರಳಿˌ ಬೈಪಾಸ್ ಶಸ್ತ್ರಕ್ರಿಯೆ ಮಾಡಿಸಿಕೊಂಡು ಮುಂಬೈಯ ಪಂಚತಾರಾ ದರ್ಜೆಯ ಐಶಾರಾಮಿ ಆಸ್ಪತ್ರೆಯ ತೀವೃ ನಿಗಾ ಘಟಕದಲ್ಲಿ ಮುಲುಕಾಡುತ್ತಾ ಮಲಗಿಕೊಂಡಿದ್ದ ಕಾಲದಲ್ಲಿ ನಾನು ಹೊಸ ನೇಮಕಾತಿಯ ಛಾರ್ಜ್ ತೆಗೆದುಕೊಂಡಿದ್ದೆ.
ಮುಖ್ಯಮಂತ್ರಿ ತಾನು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೂ ಸಹ ಅಧಿಕಾರ ಹಸ್ತಾಂತರಿಸದೆˌ ತತ್ಕಾಲಿಕ ವ್ಯವಸ್ಥೆಯಾಗಿ ತನ್ನ ನಂಬಿಕಸ್ಥ ಬಂಟ ಗುಡ್ಡಗಾಡು ಖಾತೆಯ ಮಂತ್ರಿ ಕರ್ಲೂಕಿ ಮುವ್ರಿ ಬೋಯ್ ಅನ್ನೋ ಬೆನ್ನುಮೂಳೆಯಿಲ್ಲದ ಗುಲಾಮನೊಬ್ಬನನ್ನ ಇಲ್ಲಿ ಪ್ರಭಾರಿಯಂತೆ ಒಂದು ತಿಂಗಳು ಮೇಲುಸ್ತುವರಿ ನಡೆಸಲು ನೇಮಿಸಿದ್ದ. ಅದೇನೆ ವಿಧೇಯನಾಗಿದ್ದರೂ ಕೂಡ ಅವನೆಲ್ಲಾದರೂ ಪರಿಸ್ಥಿತಿಯ ಲಾಭ ಪಡೆದು ಬಂಡಾಯ ಹೂಡಿದರೆ ಕಷ್ಟ ಅಂತಂದು ತನ್ನ ರಾಜಕೀಯ ಉತ್ತರಾಧಿಕಾರಿ ಎಂದೆ ಗುರುತಿಸಲ್ಪಟ್ಟಿದ್ದ ಹಿರಿಯ ಮಗ ಫ್ರಾನ್ಸಿಸ್ ಕೆಲೀನ್ ಪುಲೋಂಗ್ ಸಮ್ಮತಿಯಿಲ್ಲದೆ ಯಾವುದೆ ಆಡಳಿತಾತ್ಮಕ ನಿರ್ಧಾರಗಳನ್ನ ಕೈಗೊಳ್ಳದಂತೆ ನಿರ್ಬಂಧಿಸಿದ್ದ. ಅನುಭವದಲ್ಲೂ - ಪ್ರಾಯದಲ್ಲೂ ಇನ್ನೂ ಎಳಸಾಗಿದ್ದ ಈ ಇಮ್ಮಡಿ ಪುಲೋಂಗ್ ಸಿಕ್ಕಿದ್ದೆ ಛಾನ್ಸು ಅಂತ ಕಂಡಕಂಡವರ ಮೇಲೆ ಯಾವೊಂದು ಸಾಂವಿಧಾನಿಕ ಹುದ್ದೆ ಇಲ್ಲದಿರುವಾಗಲೂ ದಬ್ಬಾಳಿಕೆ ನಡೆಸುತ್ತಾ ಇದ್ದ ಹೊತ್ತಿನಲ್ಲಿˌ ಈ ನಾಗೇಶ್ವರ ರಾವುಗಳಂತಹ ಸರಕಾರಿ ಅಧಿಕಾರಿಗಳು ಆಪತ್ತಿನಲ್ಲಿಯೂ ಅವಕಾಶವನ್ನ ಅರಸಿಕೊಂಡು ಆದಷ್ಟು ಕೊಳ್ಳೆ ಹೊಡೆದುಕೊಂಡು ಆರಾಮಾಗಿದ್ದರು.
ಈಗ ಚಿಕಿತ್ಸೆ ಮುಗಿದು ಚೇತರಿಸಿಕೊಂಡ ಮುಖ್ಯಮಂತ್ರಿ ಮರಳಿ ಮನೆಗೆ ಬರೋ ಕಾಲ ಎದುರಾಗಿ ಇಂತಹ ಹೆಗ್ಗಣಗಳಿಗೆ ತಮ್ಮ ಸುಗ್ಗಿ ಕಾಲ ಮುಗಿದ ವೇದನೆಯಲ್ಲಿ ಸಹಜವಾಗಿ ಹಳಹಳಿಸುವಂತೆ ಆಗಿತ್ತು. ಮೂಲಭೂತವಾಗಿ ಕೊಳೆತ ಮೆದುಳಿನವನಾಗಿದ್ದ ನಾಗೇಶ್ವರ ರಾವು ತನ್ನ ವಿಕೃತ ಚಿಂತನೆಯಂತೆ ಮುಖ್ಯಮಂತ್ರಿಯನ್ನ ದೇಸಿ ತಳಿಯ ನಾಯಿ ಅಂದಿದ್ದರೆˌ ರಾಜ್ಯದ ಅಧಿಕಾರಿಯಾಗಿದ್ದು ಸದ್ಯ ಐಎಎಸ್ ದರ್ಜೆಗೆ ಮೇಲೇರಿಸಲ್ಪಟ್ಟಿದ್ದ ಮುಖ್ಯ ಕಾರ್ಯದರ್ಶಿ ಮುಕ್ತಿಪ್ರಸಾದ ಸರ್ಮಾನನ್ನ ಮುದಿಯ ಅಂತ ವಾಡಿಕೆಯಂತೆ ಮೊದಲಿಸಿದ್ದ. ನೇರ ಕೇಂದ್ರ ಸೇವೆಯ ಐಎಎಸ್ ಮುಗಿಸಿದ ತಾನು ಆ ಸ್ಥಳಿಯ ನೇಮಕಾತಿಯಿಂದ ಮೇಲೇರಿ ಬಂದು ನಿವೃತ್ತಿಯಂಚಿನಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ "ಎರಡನೆ ದರ್ಜೆಯ ಐಎಎಸ್" ಅಸ್ಸಾಮಿ ಸರ್ಮನಂತಹ ನಿಶ್ಕೃಷ್ಟ ಜೀವಿಯ ಮುಂದೆ ಕೈ ಕಟ್ಟಿ ನಿಲ್ಲಬೇಕಿರುವ ಘೋರ ವಿಧಿ ವಿಲಾಸ ತನ್ನಂತಹ "ಏ ವನ್ ದರ್ಜೆಯ ಐಎಎಸ್" ಮುಗಿಸಿರೋವವನಿಗೆ ಆಗುತ್ತಿರುವ ಬಹಿರಂಗದ ಅಪಮಾನ ಅನ್ನುವ ಮುಳ್ಳೊಂದು ಅವನ ಮನದೊಳಗೆ ಮುರಿದುಳಿದು ಕೀವು ಕಟ್ಟಿಸಿತ್ತು ಬೇರೆ. ಹೀಗಾಗಿ ಔಷಧಿಗೆ ಬೇಕೆನ್ನುವಷ್ಟು ತೆಲುಗೂ ಬಾರದವರ ಮುಂದೆ ಧಾರಾಳವಾಗಿ ಹೀಗೆ ಓತಪ್ರೋತವಾಗಿ ನಾಲಗೆ ಹರಿಯ ಬಿಟ್ಟು ತನ್ನ ಹತಾಶೆಯನ್ನ ಕಾರಿಕೊಳ್ಳುತ್ತಿದ್ದ.
ಹದಿನಾರು ವರ್ಷಗಳಿಂದ ಜಹಗೀರಿನಂತೆ ಅಂಧಾ ದರಬಾರು ನಡಿಸಿದ್ದರೂ ಕನಿಷ್ಠ ರಾಜಧಾನಿ ಶಿಲ್ಲಾಂಗಿನಲ್ಲಾದರೂ ಒಂದು ಸುಸಜ್ಜಿತ ಆಸ್ಪತ್ರೆ ಕಟ್ಟಿಸಬೇಕೆಂದೆ ಮುಖ್ಯಮಂತ್ರಿ ಕಲೀನನಿಗೆ ಅನ್ನಿಸಿರಲೆ ಇಲ್ಲ! ಹಾಗೊಮ್ಮೆ ಅನ್ನಿಸಿದ್ದರೆ ಯಕಶ್ಚಿತ್ ಬೈಪಾಸ್ ಸರ್ಜರಿಗೆ ಮುಂಬೈವರೆಗೆ ಹೋಗುವ ಅವಶ್ಯಕತೆಯೆ ಬೀಳುತ್ತಿರಲಿಲ್ಲ ಅಂತ ಇಟ್ಕಳಿ. ತೀವೃ ಆರೋಗ್ಯ ಬಾಧೆಗಳಿಗೆ ಒಂದಾ ಪಕ್ಕದ ಅಸ್ಸಾಂನ ಗುವಾಹಟಿಯಲ್ಲಿರುವ ಇದ್ದುದರಲ್ಲಿ ಉತ್ತಮ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡುˌ ಅಗತ್ಯ ಬಿದ್ದಲ್ಲಿ ಸಮೀಪದ ಕೊಲ್ಕೊತಾಗೆ ಹೋಗುವ ಅಭ್ಯಾಸಕ್ಕೆ ಜನ ಕಟ್ಟು ಬಿದ್ದಿದ್ದರು. ರಾಜಧಾನಿಯಲ್ಲೆ ಪರಿಸ್ಥಿತಿ ಇಷ್ಟು ಶೋಚನೀಯವಾಗಿರೋವಾಗ ಬಾಂಗ್ಲಾ ಗಡಿಯಂಚಿನ ದುರ್ಗಮ ಪ್ರದೇಶಗಳ ಜನತೆಯ ಗಂಭೀರ ಆರೋಗ್ಯ ಸಮಸ್ಯೆಗಳ ಸಂಗತಿ ಚಿಂತಾಜನಕವಾಗಿತ್ತು. ಒಟ್ಟಿನಲ್ಲಿˌ ರಾಜ್ಯದ ಆರೋಗ್ಯ ವ್ಯವಸ್ಥೆಯೆ ತೀವೃ ನಿಗಾ ಘಟಕದಲ್ಲಿದ್ದಂತಿತ್ತು. ಹೀಗಾಗಿ ಹೋಬಳಿಗಳಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ಅಷ್ಟೇನೂ ನಂಬಿಕೆ ಹುಟ್ಟದ ಬುಡಕಟ್ಟಿನ ಪ್ರಜೆಗಳು ತಮ್ಮ ಸಾಂಪ್ರದಾಯಿಕ ನಾಟಿ ಔಷಧಿಯ ಚಿಕಿತ್ಸೆಗಳನ್ನೆ ಅವಲಂಬಿಸಿಕೊಂಡಿದ್ದರು. ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಕನಿಷ್ಠ ಮಟ್ಟದಲ್ಲಿದ್ದದು - ನಾಗರೀಕತೆಯ ಕರಾಳ ಚರಿತೆ ಅವರತ್ತಲೂ ಇನ್ನೂ ತನ್ನ ತೋಳು ಚಾಚದಿದ್ದುದು - ಅಭಿವೃದ್ಧಿಯ ಮಾರಕ ಹೊಡೆತದ ಬಿಸಿ ಇನ್ನೂ ಅವರ ಅವಾಸ ಹೊಕ್ಕಿರದಿದ್ದುದುˌ ಹೀಗೆ ನಾನಾ ಕಾರಣಗಳಿಂದ ಕ್ಯಾನ್ಸರ್ - ಏಡ್ಸ್ - ಸಕ್ಕರೆ ಕಾಯಿಲೆ - ಹೃದ್ರೋಗಗಳಂತಹ ಪೀಡೆಗಳಿನ್ನೂ ಅವರಲ್ಲಿ ಸಾಂಕ್ರಾಮಿಕವಾಗಿರದಿದ್ದುದು ಅವರ ಪೂರ್ವಜನ್ಮದ ಪುಣ್ಯವಾಗಿತ್ತು. ಇನ್ನುಳಿದ ಋತುಮಾನಗಳನುಸಾರ ಬರುವ ಸೀಕುಗಳಿಗೆ ಅವರದ್ದೆ ಆದ ಗಾಂವಟಿ ಮದ್ದುಗಳನ್ನ ಅರೆದು ಗುಣ ಪಡಿಸಿಕೊಳ್ಳುವ ನಾಟಿ ಚಿಕಿತ್ಸೆಗಳು ಇದ್ದೆ ಇದ್ದವು.
ಕ್ಯಾಬಿನ್ನಿಗೆ ಬಂದು ಕುಕ್ಕರು ಬಡಿದುˌ ವೃತ್ತಿ ಬದುಕಿನ ಮೊದಲನೆ ಕ್ಯಾಬಿನೆಟ್ ಮೀಟಿಂಗಿನಲ್ಲಿ ಹೇಗೆ ವರ್ತಿಸಬೇಕೆಂದು ಲೆಕ್ಕ ಹಾಕುತ್ತಾ ಕೂತಿದ್ದ ವೇಳೆ ಎದುರಿನ ಮೇಜಿನಲ್ಲಿದ್ದ ಫೋನು ಕಿರುಚಿಕೊಳ್ಳಲಾರಂಭಿಸಿತು. ಕರೆ ನನಗೆ ಆಗಿರೋದರಿಂದ ಮೊದಲು ಉತ್ತರಿಸಿದ ಆಪ್ತ ಕಾರ್ಯದರ್ಶಿ ಕರೆಯನ್ನ ಇಂಟರಕಾಮಿನಲ್ಲಿ ವರ್ಗಾಯಿಸಿರುತ್ತಾನೆ ಅಂದುಕೊಂಡು ಕ್ರೆಡಲ್ ಎತ್ತಿ "ಹಲೋ" ಅಂದೆ. "ಸರಿಗಾ ವಿನಂಡಿ ಬಾಬು. ಅಪ್ಪುಡು ಚಪ್ಪೇದಿ ನಾಕಿ ಮರೆಚಿಪೋಯಿಂದಿ. ನುವ್ವೊಕ್ಕ ಆಫೀನಸಿನಿಂಚಿ ಬಂಡಿ ಪೋಂದಂವೆಚ್ಚು ಕಾದ? ಆ ಜೋನಂಗಿ ಜಾಗಿಲವಾಡಿ ವಂಡಿ ಉಂಟದಿ. ಅದಿಕೋಸಂ ಕೊತ್ತ ಬಂಡಿ ಕೊನುಗೊಲಾರಂಟ. ಅಂದುವಲನೆ ಪಾತದಿ ಮೀಕಿ ಅಲಾಟ್ ಚೇಸ್ತಾ ಏಮಿ?" ಅಂದ. "ಅಲಾಗೆ ಸಾರ್" ಅಂದು ಫೋನಿಟ್ಟೆ. ಕಛೇರಿಯಲ್ಲಿ ವಿಚಾರಿಸಿದಾಗ ಆ ವಿದೇಶಿ ಬ್ರಾಂಡಿನ ಕಾರನ್ನ ತರಿಸಿಕೊಂಡು ಇನ್ನೂ ಸರಿಯಾಗಿ ಒಂದೂವರೆ ವರ್ಷಗಳೂ ಆಗಿಲ್ಲ ಅನ್ನುವ ವಿಚಾರ ತಿಳಿದುಬಂತು. ಹಾಗಿದ್ದರೆ ಅದು ಕಳಪೆ ಗುಣಮಟ್ಟದ್ದೂ ಆಗಿರಲಿಕ್ಕಿಲ್ಲ - ಅಷ್ಟು ಹಳೆಯ ವಾಹನವೂ ಆಗಿರಲ್ಲ ಅನ್ನುವ ಅರಿವಾಯಿತು. ಮುಖ್ಯಮಂತ್ರಿಗಳ ಉಪಯೋಗದಲ್ಲಿದ್ದ ಕಾರೆಂದರೆ ಕೇಳಬೇಕೆ? ಐಶಾರಾಮಿಯೆ ಆಗಿರುತ್ತದೆˌ
ಹಾಗಿದ್ದರೂˌ ಶಸ್ತ್ರಚಿಕಿತ್ಸೆಯ ನಂತರ ದೇಹಾರೋಗ್ಯದ ಪರಿಸ್ಥಿತಿ ತುಂಬಾ ನಾಜೂಕಿನದಾಗಿದೆಯಂತೆ! ಹೆಚ್ಚು ಕುಲುಕಾಡುವ ಕಾರಿನಲ್ಲಿ ಅಡ್ಡಾಡಬೇಡಿ ಅಂತ ವೈದ್ಯರು ಮುನ್ನೆಚ್ಚರಿಕೆ ಇತ್ತಿದ್ದಾರಂತೆ. ಹೀಗಾಗಿ ಹಳೆ ಕಾರಿನ ಬದಲು ಅದಕ್ಕಿಂತ ಸುಸಜ್ಜಿತವಾದ ಮತ್ತೊಂದು ಕಾರನ್ನ ಮಾನ್ಯ ಮುಖ್ಯಮಂತ್ರಿಗಳ ವಯಕ್ತಿಕ ಬಳಕೆಗಂತಲೆ ನವ ದೆಹಲಿಯಿಂದ ವಿಶೇಷವಾಗಿ ತರಿಸಲಾಗಿದೆಯಂತೆ. ಈಗ ಕೆಲಸಕ್ಕೆ ಬಾರದ ಆ ಹಳೆಯ ಕಾರನ್ನ ಈ ಕಾರಣದಿಂದ ಇನ್ನೂ ವಾಹನ ಹಂಚಿಕೆ ಮಾಡಿರದ ನನಗೆ ಹಂಚಿಕೆ ಮಾಡಲಾಗುತ್ತಿತ್ತು ಅಷ್ಟೆ. ಕೇವಲ ಅಂಬಾಸಡರ್ ಕಾರಿಗೆ ಮಾರು ಹೋಗಿ ಜಿಲ್ಲಾಧಿಕಾರಿಯಾಗುವ ಕನಸು ಕಟ್ಟಿದ್ದವನಿಗೆ ಇದು ನಿಜವಾದ ಶಾಕ್ ಆಗಿತ್ತು.
ಕಳೆದೊಂದು ತಿಂಗಳಿಂದ ಶಿಲ್ಲಾಂಗ್ ಹಾಗೂ ರಾಜಧಾನಿಯ ಹೊರ ವಲಯಗಳಲ್ಲೆಲ್ಲಾ ಭರ್ಜರಿ ಮಳೆ. ಇಲ್ಲಿನ ಮುಂಗಾರಿನ ಹೊಡೆತ ಹೆಚ್ಚೂ-ಕಡಿಮೆ ಹುಟ್ಟೂರು ತೀರ್ಥಹಳ್ಳಿ-ಇದ್ದೂರು ಕಾರ್ಕಳˌ ಮಂಗಳೂರುಗಳಲ್ಲಿ ಇವತ್ತಿಗೆ ಮೂರು ದಶಕಗಳ ಹಿಂದೆ ಭೋರ್ಗರೆದು ಬಿರಿದ ಬಾನಿನಿಂದ ಮುಸಲಧಾರೆ ಸುರಿಯುತ್ತಿದ್ದಂತೆಯೆ ಇದ್ದವು. ಬಾಲ್ಯದ ಹಲವಾರು ಸಿಹಿ-ಕಹಿ ನೆನಪುಗಳು ಬಾಲ್ಕನಿಯ ಕುರ್ಚಿಯಲ್ಲಿ ರಾತ್ರಿ ಉಂಡಾದ ಮೇಲೆ ಕತ್ತಲಾಗಿಸಿಕೊಂಡೆ ದೀಪವಾರಿಸಿ ಕೂತುˌ ಮಳೆ ಹನಿಗಳ ತಾಳಕ್ಕೆ ಶೃತಿಬದ್ಧವಾಗಿರುತ್ತಿದ್ದ ಜೀರುಂಡೆಗಳ ಏಕತಾರಿ ಗಾಯನವನ್ನ ಆಲಿಸುತ್ತಾ ಬಿಟ್ಟೂ ಬಿಟ್ಟೂ ಬಂದೆರಗುತ್ತಿದ್ದ ಇರಚಲು ಮಳೆಯನ್ನ ಆಸ್ವಾದಿಸುವಾಗ ನೆನಪಾಗಿˌ ಚಿಕ್ಕಂದಿನ ಆ ಸುಖದ ಸಮಯಕ್ಕೆ ನನ್ನ ಹಿಡಿತ ಮೀರಿ ಮನಸ್ಸು ಜಾರಿ ಹೋಗುತ್ತಿತ್ತು. ಕೆಲವೊಮ್ಮೆ ಈ ತನಕ ಬದುಕಲ್ಲಿ ನಡೆದ ಸುಖ-ದುಃಖಗಳ ಏನೇನನ್ನೋ ನೆನಪಿಸಿಕೊಂಡು ಒಬ್ಬೊಬ್ಬನೆ ಮುಗುಳ್ನಕ್ಕು - ಮನಸಾರೆ ಅತ್ತು ದಣಿದ ಮನಸಿನ ಭಾರ ಹೊತ್ತು ಆ ಆರಾಮ ಕುರ್ಚಿಯಲ್ಲಿಯೆ ಮುದುಡಿ ಮಲಗಿ ರಾತ್ರಿಯನ್ನ ಬೆಳಗಾಗಿಸಿದ್ದೂ ಇದೆ.
ಅದೆಂತದ್ದೆ ಝ಼ಡಿಮಳೆ ಧುಮ್ಮಿಕ್ಕುತ್ತಿದ್ದರೂ ಸಹ ರೈನ್ ಕೋಟು ತೊಟ್ಟಾದರೂ ನಿತ್ಯ ವೃತದಂತೆ ಆರೂವರೆಯಿಂದ ಎಂಟೂವರೆಯತನಕ ಕನಿಷ್ಠ ಹತ್ತು ಕಿಲೋಮೀಟರುಗಳಾದರೂ ಜಾಗಿಂಗ್ ಮಾಡುವ ಕಟ್ಟುನಿಟ್ಟಿನ ಅಭ್ಯಾಸ ಇದ್ದುದರಿಂದ ಮುಂಜಾನೆ ಆರಕ್ಕೆಲ್ಲ ಬಿಸಿ ಕಾಫಿ ತಂದು ಕೊಡಬೇಕು ಅನ್ನೋ ತಾಕೀತು ಮಾಡಿದ್ದ ಕಾರಣˌ ಗೊಣಗಿಕೊಳ್ಳುತ್ತಿದ್ದನಾದರೂ ಲಾಂಪಾರ್ಗ್ ಬೆಳಗ್ಯೆ ಐದೂವರೆಗೆ ಹತ್ತಿರದ ಮಿಥುನ್ ಸಾಕಿದವರ ಮನೆಯಿಂದ ಹಾಲು ಕ್ಯಾನಿನಲ್ಲಿ ಹೊಯ್ಯಿಸಿಕೊಂಡು ಗಮ್ ಬೂಟು ತೊಟ್ಟು ಅಡುಗೆ ಮನೆಯಲ್ಲಿ ಹಾಜರಿ ಹಾಕುತ್ತಿದ್ದ. ತನ್ನ ಮನೆಯ ಕೆಲಸಗಳನ್ನೆಲ್ಲ ಮಾಡಿ ಮುಗಿಸಿಟ್ಟು ನಾನು ಜಾಗಿಂಗ್-ವಾಯುವಿಹಾರ ಮುಗಿಸಿ ಕ್ವಾಟರ್ಸಿಗೆ ಹಿಂದಿರುಗುವಾಗ ಮಾರ್ಟೀನಾ ಅವನ ಜೊತೆಯಾಗಿರುತ್ತಿದ್ದಳು. ಮತ್ತೆ ಅವರಿಬ್ಬರು ಕೂಡಿ ಲಾಂಪಾರ್ಗ್ ಅನ್ನೋ ಆ "ಹೈದ್ರಾಬಾದ್ ರಿಟರ್ನ್ಡ್ ಶೆಫ್" ಕುದಿಯುವ ನೀರಿಗಷ್ಟು ಹುರಿದಿರದ ರವೆ ಸುರಿದು ಮುದ್ದೆಗಟ್ಟುವ ಅದಕ್ಕಿಷ್ಟು ಬೇವಿನ ಸೊಪ್ಪು-ಹಸಿಮೆಣಸು-ಈರುಳ್ಳಿ ಕೊಚ್ಚಿ ಹಾಕಿˌ ಮೇಲೊಂದಷ್ಟು ಎಣ್ಣೆ-ಅರಿಷಿಣದ ಪುಡಿ ಸುರಿದು ಅರೆಬರೆ ಬೇಯಿಸಿ. ಅತ್ತಲಾಗೆ ಗಂಜಿಯೂ ಅನ್ನಲಾಗದ - ಇತ್ತಲಾಗೆ ಉಪ್ಪಿಟ್ಟಿನ ಲಕ್ಷಣ ದೂರದೂರದ ತನಕವೂ ಗೋಚರಿಸದ ಅದೆಂತದೋ ಒಂದನ್ನ "ಉಪ್ಮಾ" ಅಂತ ಅವರೆ ಹೆಸರಿಟ್ಟು ಊಟದ ಮೇಜಿನ ಮೇಲೆ ತಂದಿರಿಸಿ ತಿನ್ನಲು ಪೀಡಿಸುತ್ತಿದ್ದರು.
"ಮಾರಾಯ ನೀನು ತುಂಬಾ ಚೆನ್ನಾಗಿ ಮೇಘಾಲಯದ ಶೈಲಿಯ ಮೀನು-ಕೋಳಿ-ಬಾತುಕೋಳಿ-ಹಂದಿ ಪದಾರ್ಥ ಮಾಡ್ತೀಯ. ಅದೆ ಸಾಕಪ್ಪ! ಸೂಪರ್ ಆಗಿರುತ್ತೆ." ಅಂತ ಸೂಕ್ಷ್ಮವಾಗಿ ನಿನಗೆ ಬಾರದ ಅಡುಗೆ ಮಾಡಲು ಹೋಗಿ ನನ್ನ ಹೊಟ್ಟೆ ಕೆಡಿಸಬೇಡಿ ದಂಪತಿಗಳಿಬ್ಬರು ಅನ್ನೋ ಸೂಚನೆ ಇತ್ತಿದ್ದರೂ ಅವರ ಬಡ್ಡ ಮಂಡೆಗಳಿಗೆ ಈ ಸೂಕ್ಷ್ಮ ಹೊಕ್ಕಿರದೆ ಪರಿಸ್ಥಿತಿ ಇನಿತೂ ಕೂಡ ಸುಧಾರಿಸಿರಲಿಲ್ಲ. "ದಯವಿಟ್ಟುˌ ಮಧ್ಯಾಹ್ನದೂಟಕ್ಕೆ ಶುದ್ಧ ಸಸ್ಯಾಹಾರಿ ಖಾದ್ಯಗಳ ಜೊತೆ ಒಂದು ಮುಷ್ಠಿ ಅನ್ನ ಮತ್ತು ಲೋಟ ಮಜ್ಜಿಗೆಯ ವ್ಯವಸ್ಥೆ ಮಾಡಿ - ರಾತ್ರಿಗೆ ಒಂದೈದಾರು ಜೋಳದ್ದೋ ರಾಗಿಯದ್ದೋ ರೊಟ್ಟಿ ಮತ್ತೆ ಹುರಿದ ಮೀನುˌ ಹಂದಿ ಅಥವಾ ಬಾತುಕೋಳಿ ಯಾವುದಾದರೊಂದು ಮಾಂಸದ ಗಟ್ಟಿ ಗಸಿ ಮಾಡಿ ಒಂದ್ಲೋಟ ಮಜ್ಜಿಗೆ ಉಪ್ಪಿನಕಾಯಿ ಸಹಿತ ಬಡಿಸಿದ್ರೆ ಸಾಕ್ರಯ್ಯ ನಿಮ್ಮ ದಮ್ಮಯ್ಯ!" ಅಂತ ಆ ನಳಪಾಕ ನಿರತ ದಂಪತಿಗಳ ಕಾಲೊಂದನ್ನ ಗಟ್ಟಿಯಾಗಿ ಹಿಡಿದಿರಲಿಲ್ಲ ಇಷ್ಟೆ. ಜಾತಿಯ ಬಗ್ಗೆ ನಂಬಿಕೆ ಕಳೆದುಕೊಂಡು ಬಹುಕಾಲವಾಗಿದ್ದ ನನಗೆ ತಿನ್ನೋ ಆಹಾರದಲ್ಲಿ ಇದು ಸಸ್ಯಾಹಾರ ಉಚ್ಛ - ಅದು ಮಾಂಸಾಹಾರ ನೀಚ ಅನ್ನುವ ಕೇಮೆಯಿಲ್ಲದ ಬೇಧ-ಭಾವ ಮಾಡುವ ಬುದ್ಧಿಯೆ ಇರಲಿಲ್ಲ. "ನೋಡಪ್ಪˌ ನಳ ಮಹರಾಜˌ ನಾನು ಹಾವು-ಹಲ್ಲಿ-ದನ-ಎಮ್ಮೆ-ಮನುಷ್ಯ-ನಾಯಿ-ನರಿ-ಬೆಕ್ಕುಗಳನ್ನ ಬಿಟ್ಟು ಬಿಸಿಬಿಸಿಯಾಗಿ ಬೇಯಿಸಿ ಹಾಕಿದರೆ ಏನನ್ನಾದರೂ ತಿನ್ನಕ್ಕೆ ತಯ್ಯಾರ್. ನನ್ನೂರಿನಂತೆ ಇಲ್ಲೂ ಸೊಪ್ಪು-ಸದೆˌ ಬಸಳೆˌ ಸೌತೆˌ ಹರಿವೆˌ ಕಳಲೆˌ ತಿಮಿರೆˌ ನುಗ್ಗೆˌ ಹಾಗಲ ಎಲ್ಲಾ ಧಾರಾಳವಾಗಿ ಸಿಗುತ್ತಲ್ಲ ಮಧ್ಯಾಹ್ನ ಅದರಲ್ಲೊಂದರ ಸಾರು-ಒಂದು ಪಲ್ಯ ಮಾಡು ಸಾಕು. ಮೀನು ಮತ್ತೆ ಬಾತುಕೋಳಿ ನನ್ನ ಇಷ್ಟದ ಮಾಂಸಾಹಾರಗಳು. ದಿನ ಬದಲಿಸಿ ಅಕ್ಕಿ-ರಾಗಿ-ಜೋಳ-ಗೋಧಿ ಅಂತ ರಾತ್ರಿಯೂಟಕ್ಕೆ ನಿತ್ಯಕ್ಕೊಂದು ಧಾನ್ಯದ ರೊಟ್ಟಿ ಮಾಡು. ಮೇಲೋಗರಕ್ಕೆ ನಿನಗಿಷ್ಟವಾದ ನಾ ತಿನ್ನೋ ಯಾವುದಾದರೊಂದು ತಾಜಾ ಮಾಂಸ ಬೇಯಿಸು. ಇನ್ನುಳಿದಂತೆ ದಿನಾ ಊಟದ ಮೆನು ಕೇಳುವ ಯಾವ ಅವಶ್ಯಕತೆಯೂ ಇಲ್ಲ." ಅಂತ ತಾಕೀತು ಮಾಡಿದ್ದೆ.
ತರಬೇತಿ ಮುಗಿಸಿ ಹೊಸ ಜವಬ್ದಾರಿ ವಹಿಸಿಕೊಂಡು ಅಧಿಕಾರಿಗಳ ಸಾಲಿನಲ್ಲಿ ನಾನೂ ಒಬ್ಬನಾಗಿ ಹೋಗಲುˌ ಒಬ್ಬಂಟಿಯಾಗಿ ಮೇಘಾಲಯದ ದಿಕ್ಕಿನತ್ತ ಹೊರಟ ಹೊಸತರಲ್ಲಿ 'ಮುಂದೆ ಹೊಸ ಜಾಗದಲ್ಲಿ ಹೊಟ್ಟೆಪಾಡು ಹೇಗೋ ಏನೋ! ಅಲ್ಲಿ ತಲುಪಿಯಾದ ಮೇಲೆ ಮನೆ ಹೊಂದಿಸಿಕೊಂಡಾದ ಮೇಲೆ ಅಡುಗೆ ನಾನೆ ಮಾಡಿಕೊಳ್ಳೋಕೆ ಸಮಯವಿಲ್ಲದಿದ್ದರೆˌ ಮನೆ ಗುಡಿಸಿ ಒರೆಸಲು ಹಾಗೂ ಅಡುಗೆಯನ್ನ ಮಾಡಲು ಯಾರನ್ನಾದರೂ ತಿಂಗಳ ಸಂಬಳದ ಮೇಲೆ ನೇಮಿಸಿಕೊಳ್ಳೋಣ' ಅಂತ ಮನಸೊಳಗೆ ಯೋಜಿಸಿಕೊಂಡಿದ್ದೆ. ಅರಿವು ಮೂಡುವ ಪ್ರಾಯದುದ್ದ ವಿದ್ಯಾರ್ಥಿ ನಿಲಯಗಳ ಖಾಯಂ ಅತಿಥಿಯಾಗಿದ್ದ ಕಾರಣ ಅಡುಗೆ ಮಾಡಿಕೊಳ್ಳುವ ಸ್ವಯಂಪಾಕದ ಪ್ರಾವೀಣ್ಯತೆ ತಕ್ಕಮಟ್ಟಿಗೆ ಅಭ್ಯಾಸವಾಗಿದೆ. ಹೀಗಾಗಿ ಉಪವಾಸವಂತೂ ಬೀಳಲಾರೆ! ಅಡುಗೆ ಸರಂಜಾಮು ಸಲಕರಣೆಗಳನ್ನ ಹಾಗೂ ಅಗತ್ಯ ದಿನಸಿಯನ್ನ ಮೊದಲಿಗೆ ಹೊಂದಿಸಿಕೊಳ್ಳೋದರಲ್ಲಷ್ಟೆ ಹಾಳು ಹೊಟ್ಟೆಯ ಜವಬ್ದಾರಿ ಮುಗಿದು ಹೋಗುತ್ತದೆ. ಚಹಾ-ಕಾಫಿ-ಶರಬತ್ತುಗಳ ಹೊರತು ಅದು ಅದೆಷ್ಟೆ ವೈಭವಿಕರಿಸಲಾಗಿರುವ "ಶುದ್ಧ ಸಸ್ಯಾಹಾರ"ವಾಗಿದ್ದರೂ - ರುಚಿ'ಕಟ್ಟಾದ' ಮಾಂಸಾಹಾರ ಖಾದ್ಯಗಳ ಲೋಭ ಒಡ್ಡಿದರೂ ಹೊರಗಡೆಯ ಆಹಾರಕ್ಕೆ ಬಾಯಿ ಜೊಲ್ಲು ಸುರಿಸದೆ ಒಲ್ಲೆ ಅನ್ನುವುದು ನನ್ನ ಪುರ್ವಜನ್ಮದ ಸುಕೃತ. ಅದರಲ್ಲೂ ಈಶಾನ್ಯದ ರಾಜ್ಯˌ ಅಲ್ಲಿನವರು ಖಾದ್ಯಗಳ ತಯಾರಿಯಲ್ಲಿ ಅದಿನ್ನೆಂತಾ ಎಣ್ಣೆಗಳನ್ನ ಬಳಸುತ್ತಾರೋ ಅನ್ನೋ ಆತಂಕ ಬೇರೆ ಇತ್ತು.
ಮನಸಿನಾಳದ ಪೂರ್ವಗ್ರಹದ ಕಾರಣ ಇಂತಹ ಅನುಮಾನಗಳು ಎದೆಯೊಳಗೆ ಹೊಗೆಯಾಡುತ್ತಿದ್ದುದು ನಿಜವಾದರೂˌ ನನ್ನ ಅನುಮಾನ ಪೂರ್ತಿ ಸುಳ್ಳಲ್ಲ ಅನ್ನುವುದನ್ನ ಒಂದೆರಡು ಬಾರಿ ಈ "ಹೈದ್ರಾಬಾದ್ ರಿಟರ್ನ್ಡ್ ಶೆಫ್" ಲಾಂಪಾರ್ಗ್ ನಿರೂಪಿಸಿಬಿಟ್ಟಿದ್ದ. ಹೇಳಿ-ಕೇಳಿ ತೆಲುಗರ ಹೃದಯನಗರಿ ಹೈದರಾಬಾದಿನಲ್ಲಿ ದಕ್ಷಿಣದ ಅಡುಗೆ ಕಲಿತ ಕಲಿ ಬೇರೆ ಈತ! "ಗುಂಟೂರು ಖಾರಂ" ಮೆಲ್ಲುವ ತಿಗಳರ ಬಾಯಿರುಚಿಯಂತೆ ಸಮಸ್ತ ದಕ್ಷಿಣ ಭಾರತೀಯರೂ ಯಮಖಾರ ಪ್ರಿಯರು ಅನ್ನುವ ಭ್ರಮೆ ಅವನಿಗಿತ್ತು. ಪರಿಣಾಮವಾಗಿˌ ತನ್ನ ಪಾಕ ವೈವಿಧ್ಯಕ್ಕೆ ಧಾರಾಳವಾಗಿ ಖಾರ ಸುರಿದು ಆಹಾರದ ರುಚಿಯ ಜೊತೆಜೊತೆಗೆ ನನ್ನ ಹೊಟ್ಟೆಯನ್ನೂ ಕೆಡಿಸಿ ಕೆರ ಹಿಡಿಸಿ ಬಿಡುತ್ತಿದ್ದ. ಎಲ್ಲಾ ದಕ್ಷಿಣ ಭಾರತೀಯರಿಗೂ ಖಾರ ಆಪ್ತವಲ್ಲ ಕಣಪ್ಪ ಭೀಮಸೇನˌ ಈಗ ಹಾಕುತ್ತಿರೋ ಖಾರದ ಪ್ರಮಾಣದಲ್ಲಿ ಕಾಲುಭಾಗಕ್ಕಿಂತ ಕಡಿಮೆ ಹಾಕು ಸಾಕು ಅಂದರೆ ನನ್ನನ್ನ ನಂಬಲೊಲ್ಲ! ಕಡೆಗೂ ಅವನಿಗಿರುವ ಈ ದುರಭ್ಯಾಸ ಬಿಡಿಸಲು ನನ್ನ ಹೆಣ ಬಿದ್ದು ಹೋಯಿತು.
ಇನ್ನೊಂದು ಪ್ರಕರಣದಲ್ಲಿˌ ಇವನು ಮಾಡುತ್ತಿದ್ದ ದೋಷದ ಪ್ರಮುಖ ದೋಷವೆಂದರೆ ಒಂಥರಾ ಮುಗ್ಗಲು ಬಂದ ಒಂಥರಾ ಅಡ್ಡ ವಾಸನೆ ಅದರಿಂದ ಹೊಮ್ಮುತ್ತಿದ್ದುದು. ಅದ್ಯಾಕೆ ಅಂತ ಒಂದು ಸಲ ಪತ್ತೆದಾರಿಕೆ ಮಾಡಿ ಕಾರಣ ಕಂಡು ಹಿಡಿದು ಗರ ಬಡಿದವನಂತಾದೆ. ದಕ್ಷಿಣದ ಜಾತಿ ಪದ್ಧತಿ ಹಾಗೂ ಅದರ ಹಿನ್ನೆಲೆಯ ಆಹಾರ ಸಂಸ್ಕೃತಿಯ ಬಗ್ಗೆ ಪ್ರಾಥಮಿಕ ಕಲ್ಪನೆಯೂ ಇಲ್ಲದ ಅವˌ ಬಂದ ಹೊಸತರಲ್ಲೊಂದು ದಿನ ಸಹಜವಾಗಿ ಅಲ್ಲಿನ ಪ್ರಮುಖ ಖಾದ್ಯ ಹಂದಿ ಸಾರು 'ದೋಹ್ ನ್ಹಿಯೋಂಗ್' ಮಾಡಿ ರಾತ್ರಿಯೂಟಕ್ಕೆ ಬಡಿಸಿದ. ವಿಭಿನ್ನ ರುಚಿಯ ಅದು ಇಷ್ಟವಾಗಿ 'ಚೆನ್ನಾಗಿದೆಯಪ್ಪ' ಅಂತ ಪ್ರಶಂಸಿದ್ದೆ. ಅದನ್ನೆ ತಪ್ಪಾಗಿ ಗ್ರಹಿಸಿದ್ದ ಅವನುˌ ಅಲ್ಲಿನ ಚಳಿಯ ವಾತಾವರಣಕ್ಕೆ ಸರಿಯಾಗಿ ಹುದುಗು ಬಾರದಿದ್ದ ದೋಸೆ ಹಿಟ್ಟಿನ ಸಂಪಣವನ್ನ ಕಾವಲಿಗೆ ಎರೆಯುವ ಮುನ್ನˌ ಅಮೇರಿಕಾದ ಪ್ಯಾನ್ ಕೇಕಿಗೆ ಮಾಡುವಂತೆ ಎಣ್ಣೆಯ ಬದಲು ಹಂದಿ ಮಾಂಸ ಹದ ಹಾಕುವಾಗ ಕ್ಯೂಬುಗಳಾಗಿ ಕತ್ತರಿಸಿಟ್ಟಿರುತ್ತಿದ್ದ ಹಂದಿಯ ಕೊಬ್ಬನ್ನ ಉಜ್ಜುಜ್ಜಿ ದೋಸೆ ಮಾಡುತ್ತಿದ್ದˌ ಸಾಲದ್ದಕ್ಕೆ ದಾವಣಗೆರೆ ಬೆಣ್ಣೆ ದೋಸೆಯ ಮೇಲೆ ಬೆಣ್ಣೆಮುದ್ದೆಯ ಹೆಸರಿನಲ್ಲಿ ಡಾಲ್ಡಾ ಸುರಿಯುವಂತೆ ಅದೆ ಹಂದಿ ಕೊಬ್ಬನ್ನ ಚಿಕ್ಕದಾಗಿ ಹೆಚ್ಚಿಕೊಂಡು ಟಾಪಿಂಗ್ ಮಾಡಿ ದೋಸೆ ಬೇಯಿಸುತ್ತಿದ್ದ! ಕರಗಿ ದೋಸೆಯೊಳಗೆ ಅಂತರ್ಗತವಾಗುತ್ತಿದ್ದ ಅದರ ದುರ್ವಾಸನೆಗೆ ಹೊಟ್ಟೆ ತೊಳೆಸುತ್ತಿತ್ತು. 'ಅಯ್ಯಾ ಪುಣ್ಯಾತ್ಮ ತುಸು ದುಬಾರಿಯಾದರೂ ಅಡ್ಡಿಯಿಲ್ಲ ಕೃಷ್ಣದಾಸನಿಂದ ಬಜಾರಿನಿಂದ ತೆಂಗಿನೆಣ್ಣೆ ತರಿಸಿಯೆ ಅಡುಗೆ ಮಾಡಿ ಬಡಿಸ ತಕ್ಕದ್ದು ಅಂತ ತಾಕೀತು ಮಾಡಿ ಪಾರಾದೆ. ಅಂದಿನಿಂದ ಅವನ ದೋಷಾ ಕೊಂಚಮಟ್ಟಿಗೆ ದೋಷಮುಕ್ತವಾಯಿತು. ತನ್ನ ಕೈ ರುಚಿಯ ಹಂದಿ ಗಸಿಯನ್ನ ಇಷ್ಟಪಟ್ಟು ಹೊಗಳಿದ್ದ ಈ "ಮದ್ರಾಸಿ ಶಾಬ್" ಅದೆ ಹಂದಿಯ ಕೊಬ್ಬನ್ನ ರುಚಿ ಹೆಚ್ಚಿಸಲು ದೋಸೆಗೆ ಸವರಿದ್ದ ನವ ಪಾಕಾನ್ವೇಷಣೆಯಂತಹ ಕ್ಷುಲ್ಲಕ ಕಾರಣಕ್ಕೆ ಮೈಮೇಲೆ ದೇವರು ಬಂದಂತೆ ಎಗರಿದ್ದು ಅವನನ್ನ ಗೊಂದಲದ ಮಡುವಿಗೆ ದೂಡಿತ್ತು. ಅವನ ತರ್ಕದ ಪ್ರಕಾರ "ಏಕಂ ಸತ್ ವಿಪ್ರಾ ಬಹುಧಾ ವದಂತಿ" ಅನ್ನುವಂತೆ ಹಂದಿ ತಿನ್ನೋದೆ ಉಂಟಂತೆˌ ಅದರ ಸಾರಾದರೇನು? ಛರ್ಬಿಯಾದರೇನು? ಅನ್ನುವ ವಾದ ಸರಣಿ ಇದ್ದಂತಿತ್ತು.
ಮತ್ತೊಂದು ರಾತ್ರಿˌ ಹಸಿದು ಊಟದ ಮೇಜಿನೆದುರು ಕೂತವನ ಮುಂದೆ ಹಬೆಯಾಡುವ ಮಾಂಸದ ಸೂಪು ಹಾಗೂ ಜೋಳದ ರೊಟ್ಟಿಯ ಜೊತೆಗೆ ನಂಚಿಕೊಳ್ಳಲು ಅದೆಂತದ್ದೋ ದೊಡ್ಡ ದೊಡ್ಡ ಮಾಂಸದ ತುಂಡುಗಳು ಸಾರಿನಲ್ಲಿ ಮುಳುಗಿದ್ದ ಬೌಲನ್ನು ತಂದಿಟ್ಟ. ಸೂಪಿನ ಬೌಲಿನಲ್ಲಿದ್ದ ಮೂಳೆಯ ಗಾತ್ರದಿಂದ ಅನುಮಾನಿತನಾಗಿˌ 'ಏನಯ್ಯ ಇದು?' ಅಂದರೆ ಸಂಪೂರ್ಣ ಹಲ್ಕಿರಿದುಕೊಂಡು "ಮಿಥುನ್ ಮುಖ್ಬಾಂಗ್ ಶಾಬ್" ಅಂತನ್ನುತ್ತಾ ಶಭಾಸ್ಗಿರಿ ನಿರೀಕ್ಷಿಸುತ್ತಾ ನಿಂತ. ಬದುಕಿದೆಯ ಬಡಜೀವವೆ ಅಂತ ತಕ್ಷಣ ಬಾಯಿಗಿಡುವ ಮುನ್ನವೆ ಬಣ್ಣ ಬಯಲಾದದ್ದಕ್ಕೆ ಖುಷಿ ಪಟ್ಟು "ಲೇಯ್ ನಾನು ದನ ತಿನ್ನಲ್ಲ ಅಂತ ಹೇಳಿರಲಿಲ್ವ? ನಿನ್ ಸುಳಿ ಸುಡ!" ಅಂತ ಅಯಾಚಿತವಾಗಿ ಕನ್ನಡದಲ್ಲೆ ಉಗಿದು ಉಪ್ಪಿನಕಾಯಿ ಹಾಕಿದಾಗ ಅರ್ಥವಾಗದೆ ಪಿಳಿಪಿಳಿ ಕಣ್ಣು ಬಿಟ್ಟ. ಅರ್ಥ ಮಾಡಿಸುವಂತೆ ಹೇಳಿದಾಗˌ ನಾನು ದನ-ಎಮ್ಮೆಯ ಬೀಫ್ ತಿನ್ನಲ್ಲ ಎಂದಿದ್ದೆನೆ ಹೊರತು ಮಿಥುನ್ ತಿನ್ನಲಾರೆ ಅಂದಿರಲಿಲ್ಲವಲ್ಲ ಅಂತ ನನ್ನ ವಾಕ್ ದೋಷವನ್ನ ನನಗೆ ಪುನಃ ನೆನಪಿಸಿ ತಿವಿದ. ಹೌದಲ್ಲ! ನಾನು ಬೀಫ್ ತಿನ್ನಲ್ಲ ಮಡಿ ಅಂದಿದ್ದೆನೆ ಹೊರತು ಮಿಥುನ್ ಮಾಂಸ ತಿನ್ನಲ್ಲ ಅಂದಿರಲಿಲ್ಲವಲ್ಲ! ಈ ಭಾಷಾ ಪಂಡಿತನ ಪ್ರಕಾರ ನಮ್ಮೂರ ದನದ ಬಾದರಾಯಣ ಕಜಿ಼ನ್ ದೂರದ ಮೇಘಾಲಯದ ಮಿಥುನ್ ಎನ್ನುವ ದಾಯಾದಿಯ ಮಾಂಸವಾಗಲಿ ಕೊಬ್ಬಾಗಲಿ "ಬೀಫ್" ಶ್ರೇಣಿಯಲ್ಲಿ ಬರುತ್ತಿರಲಿಲ್ಲ! ಕಡೆಗೂ ಆ ರಾತ್ರಿ ನನ್ನ ರೊಟ್ಟಿಯೂಟ ಲಿಂಬೆಹಣ್ಣಿನ ಉಪ್ಪಿನಕಾಯಿ ಜೊತೆಗೆ ಸಂಪನ್ನಗೊಂಡಿತು. ಹೀಗೆ ಅವನನ್ನಷ್ಟಷ್ಟೆ ತಿದ್ದುತ್ತಾ ನನ್ನ ದಾರಿಗವರಿಬ್ಬರನ್ನೂ ತೆಗೆದುಕೊಳ್ಳುತ್ತಾ ನನ್ನ ಸನ್ಯಾಸಿಯ ಸಂಸಾರವನ್ನ ಮೇಘಾಲಯದ ರಾಜಧಾನಿಯಲ್ಲಿ ಆರಂಭಿಸಿದ್ದೆ.
ಈ "ಹೈದ್ರಾಬಾದ್ ರಿಟರ್ನ್ಡ್ ಮಾಸ್ಟರ್ ಶೆಫ್" ಲಾಂಪಾರ್ಗ್ ಮಹಾಶಯನಿಗೆ ನನ್ನೊಳಗೆ ಅಂತರ್ಗತವಾಗಿದ್ದ ಸಹಜ ಬಾಣಸಿಗನ ಚಾಕ್ಯತೆಯನ್ನ ಕೊಂಚ ಮಟ್ಟಿಗಾದರೂ ಧಾರೆ ಎರೆದು ಮಾಸ್ಟರ್ ಅಲ್ಲದಿದ್ದರೂ "ಮಿಸ್ಟರ್ ಶೆಫ್"ನನ್ನಾಗಿಯಾದರೂ ರೂಪಾಂತರಿಸಲು ಪಣ ತೊಡಲು ಇಂತಹ ಕೆಲವೊಂದು ಅಡುಗೆಮನೆಯ ಅಘಾತಕಾರಿ ಘಟನೆಗಳು ಕಾರಣವಾದವು. ನಾನಂತೂ ಇಲ್ಲಿಗೆ ನಾಲ್ಕಾರು ದಿನಗಳ ಅತಿಥಿ. ಆದರೆ ಲಾಂಪಾರ್ಗ್ ಕುಟುಂಬ ಈ ಬಂಗಲೆಯ ಪಾಲಿಗೆ ಖಾಯಂ ಅತಿಥೇಯರು. ಹೀಗಾಗಿ ಮುಂದೊಮ್ಮೆ ಬರಬಹುದಾದ ನಿವಾಸಿ ಅಧಿಕಾರಿಗಳ ಹೊಟ್ಟೆಯ ಯೋಗ-ಕ್ಷೇಮದ ಹಿತದೃಷ್ಟಿಯಿಂದ ಲೋಕೋದ್ಧಾರ ನಿರತನಾಗಿ ಲಾಂಪಾರ್ಗ್ ಪಾಕ ವೈವಿಧ್ಯಗಳಿಂದ ಅವರ ಸಂಭಾವ್ಯ ತಿಥಿಯಾಗುವುದನ್ನ ತಪ್ಪಿಸುವ ಪಣ ತೊಟ್ಟುˌ ಅವನನ್ನ ಬಿಡುವಿನ ಸಮಯ ಸಿಕ್ಕಾಗಲೆಲ್ಲ ಅವನದ್ದೆ ಅಡುಗೆ ಮನೆ ಸಾಮ್ರಾಜ್ಯಕ್ಕೆ ಲಗ್ಗೆಯಿಟ್ಟು "ಸರಿಯಾದ" ದಕ್ಷಿಣ ಭಾರತೀಯ ಖಾದ್ಯಗಳ ಬಗೆಗಳ ಕ್ಲಾಸ್ ತೆಗೆದುಕೊಳ್ಳತೊಡಗಿದೆ.
ಉಪ್ಪಿಟಿನ ರವೆಯನ್ನ ಹದವಾಗಿ ಘಮ್ಮೆನ್ನುವಂತೆ ಹುರಿಯುವ ಪೂರ್ವ ಪ್ರಾಥಮಿಕ ಪಾಠದಿಂದ ಆರಂಭವಾದ ಲಾಂಪಾರ್ಗ್ - ಮಾರ್ಟೀನಾ ದಂಪತಿಗಳ ಪಾಕಶಾಸ್ತ್ರ ಪ್ರಾವಿಣ್ಯತೆಯ ಅಂಗನವಾಡಿ ಕಲಿಕೆˌ ಮುಂದೆ ಚಿತ್ರಾನ್ನಕ್ಕೆ ಸೂಕ್ತ ಬಗೆಯಲ್ಲಿ ಒಗ್ಗರಿಸಿ ಕೊಂಡು ಅನ್ನ ಬೆರೆಸುವುದುˌ ಮೆಂತೆಗಂಜಿಯನ್ನ ನಾಲಗೆಗೆ ಒಪ್ಪುವಂತೆ ತಯಾರಿಸುವುದುˌ ಮಲೆನಾಡು ಕಡುಬು ಹಾಗೂ ಕಾಯಿಚಟ್ನಿ ತಯಾರಿಸುವುದು. ಉದ್ದಿನ ದೋಸೆ - ಇಡ್ಲಿಯ ಹಿಟ್ಟಿಗೆ ಹಾಕಬೇಕಾದ ಧಾನ್ಯಗಳ ಸೂಕ್ತ ಪರಿಮಾಣ - ಪರಿಮಳ ಹೆಚ್ಚಿಸಲು ಅದಕ್ಕೆ ಹಾಕಬೇಕಾದ ಮೆಂತೆ - ಗರಿಗಟ್ಟಲು ಹಾಕಲೆಬೇಕಾದ ಹಳೆಯನ್ನ - ಕಡೆಯುವಾಗಲೆ ರುಚಿಗೆ ತಕ್ಕಷ್ಟು ಉಪ್ಪನ್ನ ಹಾಕಿ ಅಡುಗೆ ಮನೆಯ ಬೆಚ್ಚನೆ ಸ್ಥಳದಲ್ಲಿ ದಪ್ಪ ಗೋಣಿಚೀಲದಲ್ಲಿ ಸಂಪಣದ ಪಾತ್ರೆ ಸುತ್ತಿಟ್ಟು ಎಂಥಾ ಚಳಿಯಲ್ಲೂ ಹುದುಗು ಬರಿಸುವ ತಂತ್ರˌ ಶಂಕರಪೋಳಿˌ ಕೋಡುಬಳೆˌ ಗೋಧಿ ಹಿಟ್ಟಿನ ಊಬ್ಬುಪೂರಿˌ ಸತ್ಯನಾರಾಯಣ ಕಥೆಯ ಸಪಾತಭಕ್ಷ್ಯˌ ಪುಳಿಯೊಗರೆˌ ಬೀಟ್ರೂಟಿನ ಹಲ್ವಾˌ ಕಾಶಿ ಹಲ್ವಾˌ ಕಡಲೆಬೇಳೆ ಪಾಯಸˌ ಹಯಗ್ರೀವ ಮಡ್ಡಿˌ ಕೊಬ್ರಿ ಮಿಠಾಯಿˌ ರವೆ ಜಾಮೂನುˌˌ ಮೊಟ್ಟೆ ದೋಸೆಗೆ ಈರುಳ್ಳಿ-ಟೊಮ್ಯಾಟೋ-ಹಸಿಮೆಣಸು-ಅರಿಶಿಣ-ಉಪ್ಪು ಬೆರೆಸಿ ಕಾದ ಕಾವಲಿಗೆ ಸುರಿಯುವ ಮೊದಲು ಚೆನ್ನಾಗಿ ಚಿಕ್ಕದಾಗಿ ಹೆಚ್ಚಿಕೊಂಡ ಒಂದು ಬೆಳ್ಳುಳ್ಳಿಯನ್ನ ಕಾವಲಿಯ ಮೇಲೆ ಹರಡಿ ಘಮ ಬರಸಿ ಅದರ ಮೇಲೆ ಮೊಟ್ಟೆಯ ಲೋಳೆ ಮಿಶ್ರಣ ಸುರಿದು ಆಮ್ಲೇಟಿನ ರುಚಿ ಹೆಚ್ಚಿಸುವ ರಹಸ್ಯˌ ತುಳುನಾಡು ಶೈಲಿಯ ರವೆಯಲ್ಲಿ ಹೊರಳಿಸಿ ಮೀನು ಹುರಿಯುವ ಟೆಕ್ನಿಕ್ˌ ತುಳುನಾಡು ಶೈಲಿಯ ಹೆಸರು ಒಗ್ಗರಿಸಿದ್ದು - ಬನ್ಸು - ಖಾರ ಬಜಿಲ್ - ಕಡಲೆ ಉಪ್ಕರಿ - ನೀರುದೋಸೆ - ಶಿರ - ಅಕ್ಕಿರೊಟ್ಟಿ - ಬೇಳೆತೊವ್ವೆ - ಟೊಮ್ಯಾಟೋ ಸಾರು - ಟೊಮ್ಯಾಟೋ ಹಾಕದ ದೇವಸ್ಥಾನದ ತಿಳಿಸಾರು - ಸುವರ್ಣಗೆಡ್ಡೆ ಪದಾರ್ಥ - ನುಗ್ಗೆ ಆಲುಗೆಡ್ಡೆ ಸಾರು - ಹುಳಿ ಖಾರ ಎರಡೂ ಹೆಚ್ಚು ಹಾಕಿದ ಬಾಯಲ್ಲಿ ನೀರೂರುವಂತಹ ಮೀನುಸಾರು - ಕೋಳಿ ಗಸಿ - ಕುರಿ ಸುಕ್ಕ - ಪುಂಡಿ ಕಡಲೆಗಸಿ ಮಾಡುವ ವಿಧಾನˌ ನಮ್ಮ ಜೀಗುಜ್ಜೆಯನ್ನ ಹೋಲುವ ಅವರ ನೀರುಗುಜ್ಜೆಯ ರವಾಫ್ರೈ - ಅಲ್ಲಿಯೂ ಲಭ್ಯವಿದ್ದ ಎಳೆಗುಜ್ಜೆಯ ಕಡಲೆ ಸುಕ್ಕಾˌˌ ಕೊಡವರ ಶೈಲಿಯ ಪಂದಿಕರಿ -ಕರಂಬಟ್ಟು - ಪಾತ್ತಿರಿˌ ಮಲಯಾಳಿಗಳ ಶೈಲಿಯ ಅಡೈ - ಪಾಲ್ ಪಾಯಸಂ - ಮೀನ್ ವೆರ್ತದು - ಪಣಂಪೂರಿ - ಕಾಯಿಚಿಪ್ಪಿನಲ್ಲಿ ಪುಟ್ಟು ಮುಂತಾದ ನನಗರಿವಿದ್ದ ಒಂದಷ್ಟು ಅಡುಗೆಯ ವಿದ್ಯೆಯನ್ನ ನಿಷ್ಕಾಮಕರ್ಮದಿಂದ ಧಾರೆ ಎರೆದು ತಕ್ಕ ಮಟ್ಟಿಗೆ ಆ ನಳ"ಪಾತಕ" ದಂಪತಿಗಳನ್ನ ಆದಿಮಾನವರಿಂದ ನಾಗರೀಕರನ್ನಾಗಿಸಿದೆ.
ಒಂದೊಂದೆ ಅಡುಗೆಗಳನ್ನ ಮಾಡಿದಾಗಲೂˌ ಅವುಗಳ ರುಚಿಗೆ ಮಾರು ಹೋಗಿ ಬೆರಗಾದ ಮಾರ್ಟೀನ. ಮುಂದೆ ಅವೆಲ್ಲಾ ಮರೆತು ಹೋಗದಂತೆ ತಯಾರಿಕೆಯ ವಿಧಾನಗಳನ್ನೆಲ್ಲ ಸಾವಧಾನದಿಂದ ಕೇಳಿ ತಿಳಿದುಕೊಂಡು ಮೋಟು ನೋಟು ಪುಸ್ತಕವೊಂದರಲ್ಲಿ ಅವನ್ನೆಲ್ಲಾ ವಿವರವಾಗಿ ಬರೆದುಕೊಂಡಳು. ನಾನೂ ಅವಳ ಎಲ್ಲಾ ವಿದ್ಯಾರ್ಥಿ ಸಹಜ ಕುತೂಹಲಗಳಿಗೆ ತಾಳ್ಮೆಯಿಂದಲೆ ಉತ್ತರಿಸುತ್ತಾ ಚಹಾ ಕಾಯಿಸುವ "ಸರಿಯಾದ" ವಿಧಾನವನ್ನೂ ಜೊತೆಜೊತೆಯಲ್ಲೆ ಬೋಧಿಸಿ ಇನ್ನೂ "ಅಡುಗೆಯಲ್ಲಿ ಆದಿಮಾನವ"ನಾಗಿದ್ದ ಒಡ್ಡ ಲಾಂಪಾರ್ಗನನ್ನು ನನ್ನ ಕೈಲಾದಷ್ಟು ತಿದ್ದಿದೆ. ಜೊತೆಗೆ ಗುರು ದಕ್ಷಿಣೆಯಾಗಿ ಖಾಸಿ - ಗ್ಹಾರೋಗಳ ವಿಶೇಷ ಖಾದ್ಯಗಳನ್ನ ಅವರಿಬ್ಬರಿಂದಲೂ ಆಗೀಗ ಕೇಳಿ ಕಲಿತೆ. ಈ ಪರಸ್ಪರ ಕಲಿಕೆಯ ಹಂತದಲ್ಲಿ ಅವರ ನಾಲ್ಕು ವರ್ಷದ ಕೂಸು ಕ್ರಿಸ್ಟೀನಾ ಹಾಗೂ ಅವಳ ಆರು ವರ್ಷದ ಅಣ್ಣ ಐಸಾಕ್ ನನ್ನ ಬಿಟ್ಟಿರಲಾರದಷ್ಟು ಅಂಟಿಕೊಳ್ಳುವಂತಹ ಗೆಳೆಯರಾದರು. ದಕ್ಷಿಣದ ಸಿಹಿ ತಿಂಡಿಗಳನ್ನ ತಯಾರು ಮಾಡಿದಾಗ ಮಕ್ಕಳು ಖುಷಿ ಪಟ್ಟು ತಿಂದು "ಶಾಹೆಬ್ ಅಂಕಲ್" ಅನ್ನಲು ತೊಡಗಿದವು. ಅಂಕಲ್ ಅಲ್ಲ "ಶಾಹೆಬ್ ಮಾಮ" ಅಂತ ತಿದ್ದಲು ಸಾಕಷ್ಟು ಪ್ರಯಾಸವಾದರೂˌ ಆಗಾಗ ಅವುಗಳ ಫೇವರೆಟ್ ಶಿರಾ - ಬಾಸುಂದಿ - ಬನ್ಸ್ - ಜಾಮೂನು - ಕ್ಯಾರೆಟ್ ಹಲ್ವಾ - ಸಪಾತ ಭಕ್ಷ್ಯ ತಿನ್ನುತ್ತಾ ತಿನ್ನುತ್ತಾ "ಹೊಟ್ಟೆಯ ದಾರಿಯಾಗಿ ಮನಸನು ಮುಟ್ಟಿ" ನನ್ನ ದಾರಿಗೆ ಅವುಗಳನ್ನ ಎಳೆದುಕೊಳ್ಳಲು ಹೆಚ್ಟು ಶ್ರಮವಾಗಲಿಲ್ಲ.
ಅಡುಗೆ ಮಾಡುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಬಹುಶಃ ಅಪ್ಪನಿಂದ ವಂಶಪಾರಂಪರ್ಯವಾಗಿ ಬಂದ ಏಕೈಕ ವಿದ್ಯೆ ಅಡುಗೆ ತಯಾರಿ. ಬೇರೆ ಇನ್ನೇನೆ ಆಕ್ಷೇಪಗಳಿದ್ದರೂ ಸಹ ನಮ್ಮಪ್ಪ ಒಳ್ಳೆಯ ಬಾಣಸಿಗನಾಗಿದ್ದ. ಇನ್ನು ವಿದ್ಯಾರ್ಥಿ ನಿಲಯಗಳ ಸಾಮೂಹಿಕ ಅಡುಗೆ ಮನೆಗಳಲ್ಲೂ ಅಷ್ಟಿಷ್ಟು ಕಲಿತದ್ದು ಕರಗತವಾಗಿ ಹೋಗಿದೆ. ಅದರಲ್ಲಿ ಅರೆಬರೆ ವಿದ್ಯೆಗಳನ್ನಾದರೂ ಲಾಂಪಾರ್ಗ್ ಧಾರೆ ಎರಿಸಿಕೊಂಡು ಧನ್ಯನಾದ. ಇನ್ನುಮೇಲವನು ಹೈದ್ರಾಬಾದ್ ರಿಟರ್ನ್ಡ್ ಶೆಫ್ ಅನ್ನೋ ಬೋರ್ಡು ಹಾಕಿಕೊಳ್ಳುವ ಅಗತ್ಯವೇನೂ ಉಳಿದಿರಲಿಲ್ಲ.
ಅವತ್ತು ಬೆಳಗ್ಯೆ ಲಾಂಪಾರ್ಗನ ಕೈ ಚಳಕದ ಬಾತುಮೊಟ್ಟೆಯ ಡಬಲ್ ಆಮ್ಲೇಟ್ - ಮೊಲದ ಮಾಂಸದ ಸೂಪು - ಖಡಕ್ ಚಹಾ ಕುಡಿದು ಕಛೇರಿಗೆ ಅವಸರವಸರವಾಗಿ ಬರುವಾಗಲೆ ಗಡಿಯಾರದ ಚಿಕ್ಕಮುಳ್ಳು ಒಂಬತ್ತನ್ನ ದಾಟಿ ಚೂರೆ ಚೂರು ಮುಂದು ಸರಿದಿದ್ದರೆˌ ದೊಡ್ಡದ್ದು ಇನ್ನೂ ಒಂಬತ್ತರ ಮೇಲೆಯೆ ನಿಂತು ಆಕಳಿಸುತ್ತಿತ್ತು. ಕ್ಯಾಬಿನೆಟ್ ಮೀಟಿಂಗ್ ಇರುವ ಕಾರಣ ಸಿಬ್ಬಂದಿಗಳು ಬಹುಬೇಗ ಬಂದಿರುತ್ತಾರೆ ಅನ್ನುವ ನಿರೀಕ್ಷೆಯಲ್ಲಿ ಊರಿಂದ ಮೊದಲು ನಾನು ಬಂದಿದ್ದರೆ - ಕಸ ಹೊಡೆಯುವ ಬೆಂಜ಼ಮಿನ್ ಹೊರತು ಮತ್ತೊಂದು ಹುಳ ಅಲ್ಲಿ ಕಾಣ ಸಿಗಲಿಲ್ಲ. ನನಗೋ ಇದು ಮೊತ್ತ ಮೊದಲ ಸಂಪುಟ ಸಭೆಯ ಅನುಭವ. ಉಳಿದವರಿಗೆಲ್ಲ ಅದೆಷ್ಟನೆಯದೋ! ಅನ್ನುವ ಜ್ಞಾನೋದಯವಾಗಿ ನನ್ನ ಛೇಂಬರ್ರಿನ ಆಸನದಲ್ಲಿ ಕುಕ್ಕರಿಸಿ ಸುಧಾರಿಸಿಕೊಂಡೆ. ಗುರುತು ಹಾಕಿಕೊಟ್ಟಿದ್ದ ಕಡತಗಳನ್ನೆಲ್ಲ ಅದೆಲ್ಲೆಂಲಿಂದಾನೋ ಹುಡುಕಿ ತಯ್ಯಾರಾಗಿಟ್ಟುಕೊಂಡಿದ್ದ ಕಾರಣ ಸ್ವಲ್ಪ ನಿರಾಳನೂ ಆಗಿದ್ದೆ. ಅದನ್ನ ಹೊರತು ಪಡಿಸಿ ಮತ್ತಿನ್ಯಾವ ತಾಕೀತನ್ನೂ ನನ್ನ ಮೇಲಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಇತ್ತಲೆ ನಾಗ ಮಾಡಿರದಿದ್ದರಿಂದ ಮುಂದೇನು ಮಾಡಬೇಕೆಂಬ ಸ್ಪಷ್ಟತೆ ನನಗಿರಲಿಲ್ಲ. ಸಚಿವಾಲಯದ ಸಂಪುಟ ಸಭೆ ನಡೆಯುವ ಮೀಟಿಂಗ್ ಹಾಲಿಗೆ ಹನ್ನೊಂದರ ಹೊತ್ತಿಗೆ ಹೋಗಿ ಮುಟ್ಟಿದ್ದರೆ ಸಾಕಿತ್ತು ಅಷ್ಟೆ.
ಮೊದಲ ಸಲ ಮುಖ್ಯಮಂತ್ರಿಗಳನ್ನ ಎದುರುಗೊಳ್ಳುವ ಸಂದರ್ಭವಾಗಿದ್ದರಿಂದ ಅಷ್ಟಿಷ್ಟು ಉದ್ವೇಗವಿದ್ದರೂˌ ಒಬ್ಬ ಪಳಗಿದ ಆಡಳಿತ ಸೇವೆಯ ಅಧಿಕಾರಿಯಂತೆ ಮುಖದಲ್ಲಿ ತೃಣ ಮಾತ್ರವೂ ಅದನ್ನ ತೋರಿಸಿಕೊಳ್ಳದಂತೆ ಗಾಂಭೀರ್ಯದ ಸೋಗು ಹಾಕಿಕೊಂಡು ಕೂತಿದ್ದೆ. ತನ್ನ ಕಛೇರಿಗೆ ಹೋಗುವ ದಾರಿಯಲ್ಲಿ ನಾಗೇಶ್ವರ ರಾವ್ ನನ್ನ ಛೇಂಬರಿಗೂ ಇಣುಕಿ "ಮೀಟಿಂಗುಲಪೈ ಸಿದ್ಧಂಗಾ ಉನ್ನಾರವುನಂಡಿ? ಪದಗೊಂಡು ಗಂಟಾಲುಕು ದೊರಗಾ ಅಕ್ಕಡ ಸೆಕ್ರೆಟಿಯೇಟುಕಿ ರಂಡಿ" ಅಂತ ಒಂದೆ ಉಸುರಿಗೆ ಒದರಿದ ಅವನಿಗೆ "ಔನು ಸಾರ್" "ಅಲಗೆ ರಾವುಗಾರು" ಅಂತ ಚುಟುಕಾಗಿ ಮಾರುತ್ತರಿಸಿ ಎದ್ದು ನಿಂತ ಶಾಸ್ತ್ರ ಮಾಡಿ ಮತ್ತೆ ಕೂತಲ್ಲೆ ಕುಕ್ಕರ ಬಡಿದೆ.
ನನ್ನ ಆಪ್ತ ಕಾರ್ಯದರ್ಶಿಯನ್ನ ಒಳ ಕರೆಯಲು ಕರೆಘಂಟೆ ಒತ್ತಿದರೆˌ ಆಗಷ್ಟೆ ಕಛೇರಿ ತಲುಪಿದ್ದ ದ್ವಿತಿಯ ದರ್ಜೆಯ ಗುಮಾಸ್ತ ಅದೆ ಅವತಾರದಲ್ಲಿ ಓಡೋಡಿ ಬಂದು ಇನ್ನೂ ಅವರು ಬಂದಿಲ್ಲವೆಂದು ತಿಳಿಸಿ ಕೃತಾರ್ಥನಾದ. ಮೀಟಿಂಗು ಇರುವ ದಿನವೂ ಹೀಗೆ ಮದುವೆ ಮನೆಗೆ ಬೀಗರೂಟಕ್ಕೆ ಬರುವ ನೆಂಟರಂತೆ ಒಬ್ಬೊಬ್ಬರಾಗಿ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಹಾಕುವ ಹೊತ್ತಿಗೆ ಹತ್ತೂವರೆಯಾಗಿ ಹೋಗಿತ್ತು. ಇಂತಹ ಜೋಭದ್ರಗೇಡಿಗಳ ಈ ಪರಿಯ ಬೇಜವಬ್ದಾರ ಸೋಮಾರಿತನ! ಅದೂ ಮುಖ್ಯಮಂತ್ರಿಗಳ ಸಭೆ ಕರೆದಿರುವಂತಹ ತಲೆಬಿಸಿಯ ದಿನದಂದೆ ಕಂಡು ಮೈಯುರಿದು ಹೋಯಿತು. ಇರಲಿˌ ಈ ಸಂಪುಟ ಸಭೆಯೊಂದು ಮುಗಿಯಲಿ ಆಮೇಲೆ ಈ ಭಂಡಮುಂಡೆಗಂಡರೆಲ್ಲರ ರಿವಿಟ್ ಬಿಗಿ ಮಾಡ್ತೀನಿ ಅಂತ ಕ್ಷುದ್ರವಾಗಿದ್ದ ಮನಸಿನೊಳಗೆ ನಿರ್ಧರಿಸಿˌ ಫೈಲುಗಳ ಹೊರೆ ಹೊತ್ತು ಸಚಿವಾಲಯಕ್ಕೆ ಬರಲು "ಲೇಟ್ ಲತೀಫ್" ಆಪ್ತ ಕಾರ್ಯದರ್ಶಿಗೆ ತುಸು ಒರಟಾಗಿಯೆ ಆಜ್ಞಾಪಿಸಿ ಕೂಗಳತೆಯ ದೂರದಲ್ಲಿದ್ದ ಸಚಿವಾಲಯದತ್ತ ಬಿರುಸಿನ ಹೆಜ್ಜೆ ಹಾಕಿದೆ.
ಹನ್ನೊಂದಕ್ಕೆ ಇನ್ನೂ ಹತ್ತು ನಿಮಿಷ ಮುಂಚಿತವಾಗಿಯೆ ನಾನು ನನ್ನ ಬಾಸ್ ನಾಗೇಶ್ವರ ರಾವುರೆದುರು ಸೆಕ್ರೆಟಿಯೆಟ್ ಸೆನೆಟ್ ಹಾಲಿನೆದುರು ಹಾಜರಿದ್ದೆ. "ಅದೆಲಾ ಬಾಬು ಪೂಲಗುತ್ತಿ ತೀಸೆ ಲೇಖ ವಚ್ಯಾರಂಡಿ? ಮುದಟಿಸಾರಿ ಮುಖ್ಯಮಂತ್ರಿಗಾರಿನಿ ಕಲುಸುಕುಂಟ ಪೋತುನ್ನಾರು ಪೂಲಿಚ್ಯಾಕ ಎಲಾ ಮರಿ?" ಅಂತಂದು ಆಕ್ಷೇಪಣೆಯ ಧ್ವನಿಯಲ್ಲಿ ತಕರಾರು ತೆಗೆದು ನಾಗ ನನ್ನನ್ನ ಬೆಚ್ಚಿ ಬೀಳಿಸಿದ. ಮುಖ್ಯಮಂತ್ರಿಗಳೊಂದಿಗೆ ನನ್ನ ಮೊದಲ ಭೇಟಿಯೇನೋ ಹೌದಿದು. ಆದರೆˌ ಅವರ ರಾಜ್ಯಕ್ಕೆ ಅಧಿಕಾರಿಯಾಗಿ ನಾಗರಿಕ ಸೇವೆಯ ನೆಪದಿಂದ ಆಗಮಿಸಿದ ನನ್ನಂತವರನ್ನು ಸ್ಥಳಿಯರಾದ ಅವರು ಹೂಗುಚ್ಛ ಕೊಟ್ಟು ಸ್ವಾಗತಿಸಿ ಒಳ ಬಿಟ್ಟುಕೊಳ್ಳಬೇಕೋ? ಅಥವಾˌ ನಾನೆ ಅವರ ಜೀತಕ್ಕೆ ಬೀಳಲು ತಯ್ಯಾರಾಗಿ ಬಂದಿದೀನಿ ಅಂತ ಸೂಚನೆ ಕೊಡುವಂತೆ ಹೂಗುಚ್ಛವನ್ನ ಅವರಿಗಿಂತ ಮುಂಚೆ ಅವರಿಗಿತ್ತು ಅಧಿಕಾರಸ್ಥರಾಗಿರುವ ಅವರಿಗೆ ಬೆಣ್ಣೆ ಹಚ್ಚಬೇಕೆ? ಅನ್ನುವ ಗೊಂದಲಕ್ಕೆ ಬಿದ್ದೆ. ಸೇವಾ ಶಿಷ್ಟಾಚಾರದ ನಿಯಮಗಳ ಕಲಿಕೆಯಲ್ಲೆಲ್ಲೂ ನನಗೆ ಈ "ರಾಜಕಾರಣಿಗಳ ಭೇಟಿಗೆ ಹೋಗುವಾಗ ಸ್ವಂತ ಖರ್ಚಿನಲ್ಲಿ ದುಬಾರಿ ಹೂಗುಚ್ಛವನ್ನು ಕೊಂಡೊಯ್ದು ಕೊಟ್ಟು ಹಲ್ಕಿರಿಯತಕ್ಕದ್ದು." ಅನ್ನುವ ಯಾವ ಸೂಚನೆಯನ್ನೂ ಸಹ ಕೊಡಲಾಗಿರಲಿಲ್ಲ. ಹೀಗಾಗಿˌ ಆರಾಮವಾಗಿ ಕೆಲಸದ ಫೈಲುಗಳನ್ನಷ್ಟೆ ಹೊತ್ತಿಸಿಕೊಂಡು ಬರುವ ಕರ್ತವ್ಯಪರತೆಯಿಂದ ಕೈ ಬೀಸಿಕೊಂಡು ಬಂದಿದ್ದೆ.
"ತೀಸ್ಕೊಂಡಿ. ತದುಪರಿಸಾರಿ ಅದೆ ಪರಿಸ್ಥಿತಿಲು ಮರಚಿಪೋಕುಂಡ ಕೊನ್ನಿ ನಿರ್ವಹಣ ನಿಯಮಾಲನು ಅನುಸರಿಚಂಡಿ." ಎಂದು ಒಂದು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದ ಹೂಗುಚ್ಛವೊಂದನ್ನ ನನ್ನ ಕೈಗೆ ಡಿಸಿ ನಾಗ ದಾಟಿಸಿದ. ಅವನ ಬಾಸ್ ಸರ್ಮಾ ಇತ್ತಿದ್ದ ನಿರ್ದೇಶನದಂತೆ ಅಂತಹ ಒಂದು ಡಝ಼ನ್ನಿಗೂ ಅಧಿಕ ಹೂಗುಚ್ಛಗಳನ್ನವ ತರಿಸಿ ರಾಸಿ ಒಟ್ಟಿದ್ದ. ಬಹುಶಃ ಯಾವುದಕ್ಕೂ ಕೊಸರಿಗಿರಲಿ ಅಂತ ಒಂದೆರಡು ಹೆಚ್ಚುವರಿ ಗುಚ್ಛಗಳನ್ನೆ ತರಿಸಿರಬೇಕು. ಅದರಲ್ಲೊಂದು ಹೀಗೆ ನನ್ನ ಕೈದಾಟಿತ್ತು.
ಈ ಈಶಾನ್ಯದ ರಾಜ್ಯಗಳಲ್ಲಿ ಹಾಗೆ ನೋಡಿದರೆ ಶಾಲಾ ಹಾಗೂ ಕಛೇರಿ ಅವಧಿಗಳಲ್ಲಿ ಈಗಿರುವ ಕಾಲಾವಧಿ ಮಿತಿ ದೋಷಪೂರ್ಣವಾಗಿದೆ ಅನ್ನೋದೆ ನನ್ನ ಖಚಿತ ಅಭಿಪ್ರಾಯ. ನನಗನಿಸುವಂತೆ ಭಾರತದಂತಹ ವಿಶಾಲ ದೇಶದಲ್ಲಿ ಏಕರೂಪದ "ಇಂಡಿಯನ್ ಸ್ಟ್ಯಾಂಡರ್ಡ್ ಟೈಂ" ಅನುಸರಿಸೋದೆ ತಪ್ಪು. ಇಲ್ಲಿ ಪೂರ್ವಕ್ಕೊಂದು - ಮಧ್ಯಕ್ಕೊಂದು - ಪಶ್ಚಿಮಕ್ಕೊಂದು ಹೀಗೆ ಕನಿಷ್ಠ ಮೂರು ಟೈಂ ಜೋ಼ನ್ಗಳನ್ನಾದರೂ ಅನುಷ್ಠಾನಗೊಳಿಸೋದು ಸೂಕ್ತ. ಈ ಪ್ರಮಾಣಿಕೃತ ಸಮಯ ನಿಗದಿಯು ಸ್ಥಳಿಯ ಸೂರ್ಯೋದಯದ ಹಾಗೂ ಸೂರ್ಯಾಸ್ತದ ಸಮಯಕ್ಕೆ ಪೂರಕವಾಗಿರಬೇಕು. ಆಗ ಮಾತ್ರˌ ಖಂಡಿತವಾಗಿ ವಿದ್ಯಾರ್ಥಿಗಳಿಂದಾಗಲಿ - ಕಾರ್ಮಿಕರಿಂದಾಗಲಿ - ಉದ್ಯೋಗಿಗಳಿಂದಾಗಲಿ ಈಗಿನದಕ್ಕಿಂತ ಹೆಚ್ಚು ದಕ್ಷತೆ ಹಾಗೂ ಫಲವತ್ತ ಫಲಿತಾಂಶಗಳನ್ನ ನಿರೀಕ್ಷಿಸಬಹುದು. ಅಂಡಮಾನ್ - ನಿಕೋಬಾರ್ ದ್ವೀಪ ಸಮುಚ್ಛಯವೂ ಸೇರಿˌ ಪೂರ್ವ ಕರಾವಳಿಯ ಚೆನ್ನೈ-ವಿಶಾಖಪಟ್ಟಣ-ಭುವನೇಶ್ವರ-ಕೊಲ್ಕತಾ ಮಹಾನಗರಗಳ ಸಹಿತ ಸಿಕ್ಕಿಂ ಕೂಡ ಸೇರಿದ ಈಶಾನ್ಯದ ಮತ್ತುಳಿದ ಏಳು ರಾಜ್ಯಗಳಲ್ಲಿ ಬೆಂಗಳೂರಿನ ನಾಲ್ಕು ಘಂಟೆಯ ಚುಮುಚುಮು ಮುಂಜಾವಿನಲ್ಲಿಯೆ ನಿಚ್ಚಳ ಬೆಳಕಾಗಿರುತ್ತದೆ. ಬೆಂಗಳೂರಿನ ಬಹುತೇಕರು ಸಾಮಾನ್ಯವಾಗಿ ತಮ್ಮ ಕಣ್ಣ ಪಿಸಿರು ಜಾರಿಸುತ್ತಾ ಬೆಳಗಿನ ಕಾಫಿ ಹೀರುವ ಏಳು ಘಂಟೆಯ ಹೊತ್ತಿಗೆ ಪೂರ್ವೋತ್ತರದ ರಾಜ್ಯಗಳ ಮಂದಿಯ ಜೈವಿಕ ಗಡಿಯಾರದಲ್ಲಿ ಬೆಳಗಿನ ಅವಧಿ ಜಾರಿ ಮಧ್ಯಾಹ್ನ ಮುಖ ಮಾಡಲು ಕಾತರಿಸುತ್ತಿರುತ್ತದೆ. ಹೀಗಾಗಿ ಹತ್ತರ ಹೊತ್ತಿಗೆ ಇಲ್ಲಿ ಬೆಂಗಳೂರಿನ ನಡು ಮಧ್ಯಾಹ್ನದ ವಾತಾವರಣ ಕವಿದು ದೈಹಿಕ ಗಡಿಯಾರ ಆ ಸಮಯದ ಮೂರು ತಾಸು ಮುಂದಿರಬೇಕಾದ ವಾಸ್ತವವನ್ನ ಒಪ್ಪಿಕೊಳ್ಳುವಂತೆ ಒಳಗೊಳಗೆ ಒತ್ತಡ ಹಾಕುತ್ತಲೆ ಇರುತ್ತದೆ. ಸಹಜವಾಗಿ ಸಂಜೆ ನಾಲ್ಕಕ್ಕೆಲ್ಲ ಮುಸ್ಸಂಜೆಯ ಮಬ್ಬು ಆವರಿಸಿˌ ಗಡಿಯಾರದ ಮುಳ್ಳು ಏಳು ಮುಟ್ಟುವ ಹೊತ್ತಿಗೆಲ್ಲ ಶಿಲ್ಲಾಂಗಿನ ದೈನಿಕ ವ್ಯವಹಾರಗಳು ಸ್ಥಬ್ಧವಾಗಲಾರಂಭಿಸಿˌ ಮತ್ತೊಂದು ತಾಸು ಕಳೆಯುವುದರೊಳಗೆ ಅಲ್ಲಿನ ಪೇಟೆಬೀದಿಗಳು ನಿರ್ಜನವಾಗಿ ಮಂದಿ ಮನೆ ಸೇರಿಕೊಂಡು ಇರುಳಿನೂಟ ಉಂಡು ಬೆಚ್ಚಗೆ ಹೊದ್ದು ಮಲಗಲಾರಂಭಿಸುತ್ತಾರೆ.
ಇಂತಿಪ್ಪ ಸಾವಕಾಶದ ಹೊತ್ತಲ್ಲೂ ಸಚಿವಾಲಯದಲ್ಲಿ ಸಂಪುಟ ಸಭೆ ಇದ್ದ ಸಮಯದಲ್ಲೂ ಆಡಿಸಿಕೊಂಡು ಬಂದ ನನ್ನ ಕಛೇರಿ ಸಿಬ್ಬಂದಿಯ ಬೇಜವಬ್ದಾರ ನಡೆ ನನ್ನಲ್ಲಿ ರೇಜಿಗೆ ಹುಟ್ಟಿಸಿದ್ದು ಇದೆ ಕಾರಣದಿಂದ. ಕ್ರಮೇಣ ಕಿರಿ-ಮರಿ-ಹಿರಿ-ಕಿರಿಕಿರಿ ಸಂಪುಟ ದರ್ಜೆಯ ಸಚಿವರಾಗಿರುವಂತಹ ರಾಜಕಾರಣಿಗಳ ಆಪ್ತ ಸಹಾಯಕ - ಭದ್ರತಾ ಸಿಬ್ಬಂದಿ ಸಹಿತದ ದಂಡು ಒಬ್ಬೊಬ್ಬರಾಗಿ ಬಂದು ಸಚಿವಾಲಯದ ಪಡಸಾಲೆಯಲ್ಲಿ ನೆರೆಯ ತೊಡಗಿತು. ಸರ್ಮಾ ಸೂಚನೆಯಂತೆ ಅವರೆಲ್ಲರಿಗೂ ಲಘು ಉಪಹಾರ ಹಾಗೂ ಚಹಾ ಸೇವೆಯ ವ್ಯವಸ್ಥೆಯನ್ನು ನಾಗೇಶ್ವರ ರಾವು ಆಪ್ತ ಸಿಬ್ಬಂದಿ ಪಡೆ ಮಾಡಿತ್ತು. ಅವರೆಲ್ಲ ಮೆಲುಕು ಹಾಕುವಂತೆ ಸಿಂಗಾಡ-ಚೆಟ್ನಿ-ಸಾಕಿನ್ ಘಟ್ಹಾ-ಚಹಾ ಮೇಯ್ದು ಮೆಲುಕು ಹಾಕಿ ತಯಾರಾಗುವ ಹೊತ್ತಿಗೆಲ್ಲˌˌ ನಾವೆಲ್ಲ ಚಿಕಿತ್ಸೆ ಮುಗಿಸಿ ಚೇತರಿಸಿಕೊಂಡು ಮರಳಿ ಬಂದಿರುವ ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರಲು ಕಾತರದಿಂದ ನೆರೆದಿದ್ದರೂ ಸಹˌ ಮುಖ್ಯಮಂತ್ರಿ ಎಂಬ ಜೋಭದ್ರ ಬಹುಶಃ ಆರಾಮಾಗಿ ಮಧ್ಯಾಹ್ನದ ಭರ್ಜರಿ ಭೋಜನವನ್ನೂ ಮನೆಯಲ್ಲಿ ತೀರಿಸಿಕೊಂಡು ಹನ್ನೆರಡರ ಸುಮಾರಿಗೆ ಗಾಲಿಕುರ್ಚಿಯಲ್ಲಿ ಸಚಿವಾಲಯದ ಪೋರ್ಟಿಕೋದಲ್ಲಿ ಬಂದಿಳಿದ. ಶಿಷ್ಟಾಚಾರ ಪ್ರಕಟಿಸುತ್ತಾ ನೆರೆದಿದ್ದ ಎಲ್ಲರ ಅಭಿವಂದನೆ ಸ್ವೀಕರಿಸುತ್ತಾ ಒಕ್ಕೈ ನಮಸ್ಕಾರ ಮಾಡುತ್ತಾ ಗಾಲಿಕುರ್ಚಿ ನೂಕಿಸಿಕೊಂಡು ನೇರ ಸಭಾಗೃಹ ಹೊಕ್ಕ. ಇಲ್ಲಿ ತಡವಾಗಿ ಬರೋದು ಬಹುಶಃ ಅಡಿಯಿಂದ ಮುಡಿಯವರೆಗೆ ಪ್ರತಿಯೊಬ್ಬರ ದುರಭ್ಯಾಸ. "ಯಥಾ ರಾಜ ತಥಾ ಪ್ರಜಾ". ಈ ಮುಖ್ಯಮಂತ್ರಿಯಲ್ಲಿಲ್ಲದ ಸಮಯ ಪಾಲನೆಯ ಶಿಸ್ತು ನನ್ನ ಕಛೇರಿಯ ಕೆಳಹಂತದ ಸಿಬ್ಬಂದಿಗಳಿಂದ ನಿರೀಕ್ಷಿಸೋದು ಮೂರ್ಖತನ ಅಂತ ಅಂದಾಜಿಸಿದೆ.
ಚಿಕಿತ್ಸೆ ಮುಗಿಸಿ ತುಸು ಕಳೆಗುಂದಿದಂತಿದ್ದರೂ ಸಹ ಯಶಸ್ವಿಯಾಗಿ ಮರಳಿ ಬಂದಿರುವ ಮುಖ್ಯಮಂತ್ರಿಗಳನ್ನ ಒಬ್ಬೊಬ್ಬರಾಗಿ ಅಭಿನಂದಿಸಲು ಮುಗಿ ಬಿದ್ದರು. ರಾಜಕಾರಣಿಗಳ "ನಾಯಿ ನಿಷ್ಠಾ ಪ್ರದರ್ಶನ" ಮುಗಿದ ನಂತರ ಅಧಿಕಾರಿ ವರ್ಗದವರ ಓಲೈಕೆಯ ಬೃಹನ್ನಾಟಕ ಆರಂಭವಾಯಿತು. ನನ್ನ ಬಾಸು ನಾಗೇಶ್ವರ ರಾವುವಂತೂ ತಾನು ಕೂತಲ್ಲಿ ನಿಂತಲ್ಲಿ ಬಾಯ್ತುಂಬ ತಿರಸ್ಕಾರದಿಂದ ಜರಿಯುವ ಈ "ಜೋನಂಗಿ ಜಾಗಿಲವಾಡು" ಮುಂದೆ ತನ್ನ ಹಲ್ಲು ಸೆಟ್ಟು ಪೂರ್ತಿ ಪ್ರದರ್ಶನವಾಗುವಂತೆ ನಗುನಗುತ್ತಾ ಧೂರ್ತ ಲಕ್ಷಣವಾದ ಅತಿವಿನಯ ತೋರಿಸುತ್ತಾ ನಿಂತಿದ್ದ. ಎಡಗಣ್ಣ ಹುಬ್ಬು ಹಾರಿಸಿ ಆಜ್ಞಾಪಿಸಿದರೆ ಸಾಕು ಈಗ ಅದೆ "ಕುಕ್ಕಲನು ತಿನೆ ಕುಕ್ಕ"ನ ಮುಂದೆ ತಾನೆ ಸಾಕಿದ ಕುಕ್ಕನಾಗಿ ಕಾಲಿಡಿ ನೆಕ್ಕುತ್ತಾ ಕುಂಯ್ ಕುಂಯ್ಗುಡುತ್ತಾ ಬೊಗಳಿಕೊಂಡಿರಲೂ ತಯ್ಯಾರಾಗಿರುವನಂತೆ ಆ ಕ್ಷಣ ನನ್ನ ಕಣ್ಣಿಗವನು ಕಂಗೊಳಿಸಿದ.
"ಕಮ್ ಯಂಗ್ ಮ್ಯಾನ್ˌ ಲೆಟ್ ಮಿ ಇಂಟ್ರಡ್ಯೂಜ಼್ ಯು ಟು ಅವರ್ ಹಾನರೆಬಲ್ ಸಿಎಂ ಸಾರ್!" ಅಂತ ನನ್ನನ್ನು ಮುಂದಕ್ಕೆ ಕರೆದುˌ ಅದೆ ಪ್ರಥಮ ಬಾರಿಗೆ ತನ್ನ ಆಂಗ್ಲೋಚ್ಛಾರಣೆಯ ಉದ್ಗಾರದಿಂದ ನನ್ನನ್ನವ ಬೆಚ್ಚಿ ಬೀಳಿಸಿದ. ಶಿಷ್ಟಾಚಾರದಂತೆ ಮುಂದೆ ಬಂದು "ಹಲೋ" ಹೇಳಿದವನ ಪ್ರವರವನ್ನೂ ಮುಖ್ಯಮಂತ್ರಿಗಳಿಗೆ ತಾನೆ ಒಪ್ಪಿಸಿˌ ಕೊಟ್ಟಿರುವ ಪ್ರೊಬೆಷನರಿ ಪೋಸ್ಟಿಂಗ್ ಬಗ್ಗೆಯೂ ಮಾಹಿತಿ ನೀಡಿತು ಈ ನಾಗೇಶ್ವರ ರಾವು ಎಂಬ ನರಿ.
ಮೊದಲಿಗೆ ನಿರ್ಲ್ಯಕ್ಷದಿಂದಲೇನೋ ಎಂಬಂತೆ ನನ್ನತ್ತ ತಿರುಗಿದ ಮುಖ್ಯಮಂತ್ರಿಗಳಿಗೆ "ಸ್ಪೀಡಿ ರಿಕವರಿ ಸಾರ್ˌ ಜೆಮ್ ನೋ ಕ್ಹೋಯ್ˌ ಲಾಹ್." ಅಂತˌ ಅಂದರೆ "ಬೇಗ ಚೇತರಿಸಿಕೊಳ್ಳಿ ಸಾರ್ˌ ಆದಷ್ಟು ಶೀಘ್ರ ಗುಣಮುಖರಾಗಿರಿ." ಎಂದು ಖಾಸಿಯಲ್ಲೆ ಅಭಿವಂದಿಸಿದ ತಕ್ಷಣ ಅವರ ನೋಟದಲ್ಲಿದ್ದ ಈ ಹಿಂದಿನ ಅಸಡ್ಡೆ ತಕ್ಷಣಕ್ಕೆ ಮಾಯವಾಗಿ ಮುಖದಲ್ಲಿ ಮುಗುಳ್ನಗೆ ಮೂಡಿ ಬಂತು. "ಯೂ ಸಮ್ಲಾ ಉಬಾಲ ತ್ರೇಯ್ ಬಾˌ ನಗ ಸ್ನಾಗೆವಂಗು ಈ ಕ." ಅಂದರೆ "ಅಭಿನಂದನೆಗಳು ಯುವ ಅಧಿಕಾರಿಗಳೆˌ ನಾನಿದನ್ನ ಮೆಚ್ಚಿದೆ." ಅಂತ ಮುಖ್ಯಮಂತ್ರಿ ಪುಲೋಂಗ್ ಬಹಿರಂಗವಾಗಿಯೆ ಎಲ್ಲರೆದುರು ಹೊಸತಾಗಿ ರಾಜ್ಯಕ್ಕೆ ಬಂದ ಯುವ ಅಧಿಕಾರಿಯಾಗಿದ್ದವನನ್ನ ಮೆಚ್ಚಿ ಪ್ರಶಂಸಿದ.
ಬಂದ ತಿಂಗಳೊಳಗೆ ಈವರೆಗೂ ಖಾಸಿಯ ಗಂಧ-ಗಾಳಿಯೂ ಇಲ್ಲದ ದಕ್ಷಿಣ ಭಾರತೀಯ ಯುವ ಅಧಿಕಾರಿಯೊಬ್ಬ ಈ ಮಟ್ಟಿಗೆ ಖಾಸಿ ಮಾತನಾಡಲು ಕಲಿತದ್ದರ ಬಗ್ಗೆ ಮುಖ್ಯ ಕಾರ್ಯದರ್ಶಿ ಮುಕ್ತಿಪ್ರಸಾದ ಸರ್ಮಾ ಸಹ ಸಖೇದಾಶ್ಚರ್ಯ ಮುಖದಲ್ಲಿ ಪ್ರಕಟಿಸಿಕೊಂಡು ಪಕ್ಕದ ಕುರ್ಚಿಯಿಂದ ನನ್ನತ್ತ ದಿಟ್ಟಿಸಿದ. ಬಂದು ಎರಡು ದಶಕಗಳಾದರೂ ನೆಟ್ಟಗೆ ನಾಲ್ಕು ಪದ ಖಾಸಿ ಕಲಿಯಲಾಗಿರದಿದ್ದ ನನ್ನ ಬಾಸ್ ಇನ್ನೇನು ಈ ತಿಂಗಳಿನಲ್ಲಿಯೆ ಕಾರ್ಯದರ್ಶಿ ಹುದ್ದೆಗೆ ಭಡ್ತಿ ನಿರೀಕ್ಷಿಸುತ್ತಿದ್ದ ನಾಗೇಶ್ವರ ರಾವು ಬೆಪ್ಪನಾಗುವ ಸರದಿಯಲ್ಲಿ ಈಗಿದ್ದ. ಕೇವಲ ಹಿಂದೊಂದು - ಮುಂದೊಂದು ಮಾಡಿಕೊಂಡುˌ ಮಾಡಬೇಕಾದ ಅಧಿಕಾರ ವ್ಯಾಪ್ತಿಯ ಕರ್ತವ್ಯಗಳಲ್ಲಿ ಕೆಲಸ ಕದಿಯುತ್ತಾ ಮೈಗಳ್ಳನಾಗಿದ್ದುಕೊಂಡುˌ ಬೇಕಾಬಿಟ್ಟಿಯಾಗಿ "ಆರ್ಡರ್ಲಿ" ಸೇವೆಯನ್ನ ದುರುಪಯೋಗ ಪಡಿಸಿಕೊಳ್ಳುತ್ತಾ - ಸರಕಾರಿ ಸಂಬಳದಲ್ಲಿ ಮನಸೋ ಇಚ್ಛೆ ಮೇಯ್ದು ಕೊಂಡಿರೋದನ್ನೆ "ಕರ್ತವ್ಯ ನಿಷ್ಠೆ" ಅಂದುಕೊಂಡಿದ್ದ ನಾಗೇಶ್ವರ ರಾವುಗಳಂತಹ ಹಳೆಯ ಹೆಗ್ಗಣಗಳಿಗೆˌ ತಾವು ಅನ್ನದಗಳು ಸಂಪಾದಿಸುವ ನೆಲದ ಭಾಷೆಯನ್ನ ಕಲಿತು ಮಾತನಾಡುವುದು ಅಲ್ಲಿಗೆ ನಾವು ಮಾಡುವ ಉಪಕಾರವೇನಲ್ಲ. ಬದಲಿಗೆ ನಾವು ಆ ನೆಲಕ್ಕೆ ತೋರಿಸಬೇಕಾದ ಕನಿಷ್ಠ ನಿಷ್ಠೆ - ಅದು ನಿತ್ಯದ ಅನ್ನಕ್ಕೆ ದಾರಿಯಾಗಿರುವ ಕೆಲಸಕ್ಕೆ ಸಲ್ಲಿಸುವ ಪ್ರಾಥಮಿಕ ಮರ್ಯಾದೆ ಅನ್ನುವ ಸ್ವಯ ಇದ್ದಂತಿರಲಿಲ್ಲ.
ಈಗಾಗಲೆ ವ್ಯಥಾ ಕಾಲಯಾಪನೆಯಿಂದ ಸಂಪುಟಸಭೆ ಆರಂಭವಾಲು ಬಹಳ ತಡವಾಗಿತ್ತು. ಆದರೂ ಅಭಿವಂದನೆ-ಯೋಗಕ್ಷೇಮ ಕುಶಲ ವಿಚಾರಣೆ-ಬಾಯುಪಚಾರ-ಪರಿಚಯದ ಶಾಸ್ತ್ರಗಳೆಲ್ಲ ಮುಗಿಯಲು ಇನ್ನೂ ಕಾಲು ತಾಸು ತಗುಲಿತು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿˌ ಸಂಪುಟ ಸಚಿವರು ಹಾಗೂ ಅಗತ್ಯ ಅಧಿಕಾರಿ ವರ್ಗದ ಹೊರತು ಸಂಪುಟ ಸಭೆಗೆ ಸಂಬಂಧಿಸಿರದ ಮರಿ-ಕಿರಿ-ಕಿರಿಕಿರಿ ಪುಢಾರಿಗಳನ್ನೆಲ್ಲ ಹೊರಗೆ ಓಡಿಸಿ ಎಂದು ವಿಧಾನ ಸಭೆಯ ಭದ್ರತಾ ಸಿಬ್ಬಂದಿಗಳಾದ ಮಾರ್ಷೆಲ್ಗಳಿಗೆ ಸೂಚನೆ ಕೊಡಲು ಮುಖ್ಯ ಕಾರ್ಯದರ್ಶಿ ಸರ್ಮಾ ತಮ್ಮ ಬೆರಳ ನಿಲುಕಿನಲ್ಲಿದ್ದ ಗುಂಡಿಯನ್ನು ಸುದೀರ್ಘವಾಗಿ ಅದುಮಿ ಅಲರಾಂ ಕಿರ್ರೆನಿಸಿ ತಮಗಾಗುತ್ತಿರೋ ಕಿರಿಕಿರಿಯನ್ನ ಆ ಮೂಲಕ ವ್ಯಕ್ತ ಪಡಿಸಿದರು. ಕ್ಷಣಾರ್ಧದಲ್ಲಿ ಜೊಳ್ಳುಗಳೆಲ್ಲ ಜಾಗ ಖಾಲಿ ಮಾಡಿˌ ಗಟ್ಟಿ ಕಾಳುಗಳಷ್ಟೆ ಸಭಾಮಂದಿರದೊಳಗೆ ಉಳಿದು ಹೋದವು.
ಅಧಿಕೃತವಾಗಿ ಸಭೆ ಆರಂಭವಾಯಿತು. ತನ್ನ ಅನುಪಸ್ಥಿತಿಯಲ್ಲಿ ರಾಜ್ಯದ ದೈನಂದಿನ ಆಗುಹೋಗುಗಳ ನಿರ್ವಹಣೆಯ ಬಗ್ಗೆˌ ಬಹುಶಃ ಸರ್ಮಾ ನೆನ್ನೆ ಅವರ ಗೃಹ ಕಛೇರಿಗೆ ಭೇಟಿ ಇತ್ತಿದ್ದಾಗಲೆ ಮುಖ್ಯಮಂತ್ರಿಗಳಿಗೆ ವಿಷದವಾಗಿ ವಿವರಿಸಿರಬಹುದುˌ ಹೀಗಾಗಿ ಇನ್ನೊಂದು ತಿಂಗಳಲ್ಲಿ ಮಂಡಿಸಬೇಕಿರುವ ರಾಜ್ಯ ಅಯವ್ಯಯದ ಕುರಿತು - ಕಳೆದ ವರ್ಷದ ಅಯವ್ಯಯದ ಅನುಷ್ಠಾನಗಳ ಬಗ್ಗೆ - ರಾಜ್ಯದಲ್ಲಿ ಕಳೆದೆರಡು ತಿಂಗಳಲ್ಲಿ ನಡೆದಿದ್ದ ಗುರುತರ ಅಪರಾಧ ಪ್ರಕರಣಗಳ ಪ್ರಸಕ್ತ ತನಿಖೆಯ ಹಂತದ ವಿವರ - ರಾಜ್ಯದ ಕಳೆದೊಂದು ತಿಂಗಳ ಆಡಳಿತ ನಿರ್ವಹಣಾ ಖರ್ಚುವೆಚ್ಚದ ತಪಶೀಲು - ತುರ್ತು ಪರಿಸ್ಥಿತಿಗಳಲ್ಲಿ ಬಳಸಬೇಕಾದ ವಿಪತ್ತು ನಿರ್ವಹಣಾ ನಿಧಿಯಿಂದಾದ ದುಡ್ಡಿನ ಬಳಕೆ - ಎಲ್ಲಕ್ಕೂ ಮುಖ್ಯವಾಗಿ ತಾನಿರದಾಗ "ಬೇಡದ ಸರಕಾರಿ ನೆಂಟನಾಗಿ" ಬಂದು ರಾಜಭವನದಲ್ಲಿ ಒಕ್ಕರಿಸಿ ಝಾಂಡಾ ಊರಿಕೊಂಡುˌ ಬರಿ ರಾಜ್ಯ ಸರಕಾರಕ್ಕೂ - ಕೇಂದ್ರ ಸರಕಾರಕ್ಕೂ ಮಧ್ಯ ವಿವಾದಗಳನ್ನ ತಂದಿಡೋದನ್ನೆ - ಅಪನಂಬಿಕೆಯ ಕಂದರ ಆದಷ್ಟು ಆಳ ಅಗಲ ಮಾಡೋದನ್ನೆ ತನ್ನ ಪೂರ್ಣಾವಧಿ ಕಸುಬು ಮಾಡಿಕೊಂಡಿರುವ; ಬಂದು ಕೂತುಕೊಂಡಲ್ಲೆ ಮುಕುಳಿಯಲ್ಲಿ ಬೇರು ಇಳಿಸಿಕೊಂಡಿರೋ ಗವರ್"ನರಿ" ಮಾಡಿರೋ ಆಡಳಿತದಲ್ಲಿನ ಹಸ್ತಕ್ಷೇಪದ ಕಿರಿಕಿರಿ. ಮತ್ತವನ ಕಿತಾಪತಿಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಸ್ಥಳಿಯ ರಾಜಕೀಯದ ಬಗ್ಗೆ - ಅಲ್ಲಿನ ಪಕ್ಷ ರಾಜಕರಣದ ಕುರಿತು ಮೇಲ್ನೋಟದ ಜ್ಞಾನ ಮಾತ್ರವಿದ್ದ ನಾನು ಬಾಯಿ ಮುಚ್ಚಿಕೊಂಡು ಕಿವಿಗಳೆರಡನ್ನ ಸಾವಕಾಶವಾಗಿ ತೆರೆದಿಟ್ಟುಕೊಂಡು ಸಭೆಯ ಮಾತುಕತೆಗಳನ್ನ ಆಲಿಸುತ್ತಾ ಆದಷ್ಟು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ತನ್ನ ಮಂತ್ರಿಗಳ ಜೊತೆಗೆ ಮಾತನಾಡುವಾಗ ಖಾಸಿ-ಗ್ಹಾರೋ ಬೆರಕೆ ಭಾಷೆ ಬಳಸುತ್ತಿದ್ದ ಮುಖ್ಯಮಂತ್ರಿ ಅದೆ ಸರ್ಮಾ ಜೊತೆ ತುಸು ಅಸ್ಸಾಮಿ ಬೆರೆಸಿರೋ ಖಾಸಿಯಲ್ಲಿ ಸಂಭಾಷಿಸುತ್ತಿದ್ದ. ನಾಗೇಶ್ವರ ರಾವು ಮತ್ತಿತರ ಅಧಿಕಾರಿಗಳಿಂದ ಏನಾದರೂ ವಿವರಣೆ ಪಡೆಯಬೇಕಿದ್ದಲ್ಲಿ ಮಾತ್ರ ಅವರತ್ತ ತಿರುಗಿ ಹರುಕು ಮುರುಕು ಹಿಂದಿಗೆ ಧಾರಾಳವಾಗಿ ಸತ್ತ"ಕುರು" ಶೈಲಿಯ 'ಬಟ್ಲರ್ಇಂಗ್ಲೀಷ್' ಬಳಸಿ ವ್ಯವಹರಿಸುತ್ತಿದ್ದ. ಇವೆಲ್ಲ ಅತಿ ಸಹಜವೆನ್ನುವಂತೆ ಸಭೆ ಸಾಗಿತು.
ಹಿಂದಿನ ಬಜೆಟ್ಟಿನಲ್ಲಿ ನಾಲ್ಕರಿಂದ ಹನ್ನೊಂದಾಗಿಸಿ ಏಳು ಹೊಸ ಜಿಲ್ಲೆಗಳನ್ನ ರಚಿಸುವ ಪ್ರಸ್ತಾವನೆಯನ್ನ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಆ ಪ್ರಸ್ತಾವನೆಗೆ ಕುಂಟು ನೆಪ ತೆಗೆದಿದ್ದ ರಾಜ್ಯಪಾಲನೆಂಬ ಬ್ರೋಕರ್ˌ ಹೇಗಾದರೂ ಸರಿ ವಿರೋಧ ಪಕ್ಷದವರ ಹಿಡಿತದಲ್ಲಿರೋ ರಾಜ್ಯ ಸರಕಾರಕ್ಕೆ ಕಿರುಕುಳ ಕೊಡಲೆ ಬೇಕೆಂದು ನಿರ್ಧರಿಸಿದವನಂತೆ ಅದನ್ನ ಅಂಡಿನಡಿ ಹಾಕಿಕೊಂಡು ಸಹಿ ಜ಼ಡಿಯದೆ ಸತಾಯಿಸುತ್ತಿದ್ದ. ರಾಜ್ಯಪಾಲನ ಅನುಮತಿ ಸಿಗದ ಹೊರತುˌ ಸಾಂವಿಧಾನಿಕ ಸರಕಾರಿ ಪ್ರಮುಖನ ಸಮ್ಮತಿ ಇಲ್ಲದ ಕಾರಣˌ ಹೊಸ ಜಿಲ್ಲೆಗಳ ಸರಕಾರಿ ಕಛೇರಿಗಳ ನಿರ್ಮಾಣದಂತಹ - ಅದಕ್ಕೆ ಬೇಕಾದ ಪೀಠೋಪಕರಣಗಳನ್ನ ಖರೀದಿಸುವ - ಆಡಳಿತದ ಅನುಕೂಲಕ್ಕಾಗಿ ಕಲ್ಪಿಸಬೇಕಿದ್ದ ಮೂಲಭೂತ ಸೌಕರ್ಯಗಳಿಗೆ ಪ್ರಸ್ತಾವಿಸಲಾಗಿದ್ದ ನಿಧಿಯನ್ನ ಉಪಯೋಗಿಸುವಂತಿರಲಿಲ್ಲ. ಅಂದರೆˌ ಸರಳ ಭಾಷೆಯಲ್ಲಿ ವಿವರಿಸಬೇಕಂತಿದ್ದರೆ ಅದಕ್ಕಾಗಿ ಬಿಡುಗಡೆ ಮಾಡಲಾಗಿದ್ಧ ಅನುದಾನದ ಚಿಕ್ಕಾಸು ಕೂಡ ಖರ್ಚಾಗದೆ ಪುನಃ ಕೇಂದ್ರಾನುದಾನದ ಖಾತೆಗೆ ಮರಳಿ ಹೋಗುತ್ತಿತ್ತುˌ ಹೀಗೆ "ಖರ್ಚಾಗಿರದ" ಕಾರಣ ಮುಂದೊಡ್ಡಿ ಹಿಂದಿರುಗಿ ಹೋಗುವ ನೂರಾರು ಕೋಟಿ ರೂಪಾಯಿ ಹಣದಲ್ಲಿ ತಮ್ಮ ಪಾಲಿನ ಕಮಿಷನ್ ಕೊಳ್ಳೆ ಹೊಡೆಯಲುˌ ಸ್ಥಳಿಯ ರಾಜಕಾರಣಿಗಳಿಗಾಗಲಿ ಅಥವಾ ಅಧಿಕಾರಿ ವರ್ಗಕ್ಕಾಗಲಿ ಸಾಧ್ಯವಾಗುತ್ತಿರಲಿಲ್ಲ! ಮುಂದಿನ ವಿಧಾನಸಭಾ ಚುನಾವಣೆಗೆ ಕೇವಲ ಒಂದೂವರೆ ವರ್ಷವಷ್ಟೆ ಬಾಕಿ ಉಳಿದಿದ್ದ ಈ ಕಿರು ಅವಧಿಯಲ್ಲಿ ತಮ್ಮ ಸರಕಾರಿ ಖಜಾನೆಯ ಕೊಳ್ಳೆಗೆ ಹೀಗೆಲ್ಲ ವಿಘ್ನ ಎದುರಾಗಿರೋದು ಅವರನ್ನೆಲ್ಲ ಹತಾಶೆಗೆ ದೂಡಿತ್ತು. ಹೇಗಾದರೂ ಸರಿˌ ಇನ್ನೆರಡು ತಿಂಗಳೊಳಗೆ ಇದಕ್ಕೆ ಮದ್ದರೆಯಲೆ ಬೇಕು. ಕಾನೂನು ಕ್ರಮ ಅನುಸರಿಸಿ ರಾಜ್ಯಪಾಲನ ಅಧಿಕಾರ ಮೊಟಕುಗೊಳಿಸಲು ಸಾಧ್ಯವೆ? ರಾಜ್ಯಪಾಲ ಆಡಿಸುವ ಕಡ್ಡಿಯನ್ನ ಕಡೆಗಣಿಸಿ ಅನುದಾನವನ್ನ ಉಳಿಸಿಕೊಳ್ಳೋದು ಹೇಗೆ ಅನ್ನುವುದರ ಬಗ್ಗೆ ಗಂಭೀರವಾಗಿ ಚಿಂತಿಸಲು ಮುಖ್ಯಮಂತ್ರಿ ಪುಲೋಂಗ್ ನಿಷ್ಠುರವಾಗಿ ಸರ್ಮಾನಿಗೆ ಆದೇಶವಿತ್ತ.
ಇನ್ನುˌ ಖಜಾನೆಯಲ್ಲಿ ಸಾಕಷ್ಟು ತೆರಿಗೆ ಸಂಗ್ರಹವಾಗಿರದಿದ್ದರೂ ಸಹ ಪ್ರಸ್ತಾವಿತ ಏಳೂ ಹೊಸ ಜಿಲ್ಲೆಗಳನ್ನ "ಬರಪೀಡಿತ" ಎಂದು ಘೋಷಿಸಿ ಅದಕ್ಕೆ ಪರಿಹಾರವನ್ನಾಗಿ ಕೋಟ್ಯಂತರ ರೂಪಾಯಿಗಳ ಅನುದಾನವನ್ನ ಬೇರೆ ಊರಿಂದ ಮುಂದೆ ಘೋಷಿಸಿದ್ದರು. ಭಾರತದಲ್ಲೆ ಅತ್ಯಧಿಕ ಮಳೆ ಸುರಿಯುವ ರಾಜ್ಯವಾಗಿರುವ ಮೇಘಾಲಯಕ್ಕೆ "ಮೋಡಗಳ ಬಾಣಂತಿ ಕೋಣೆ" ಅನ್ನೋ ಅಡ್ಡ ಹೆಸರು ಬೇರೆ ಇದೆ. ಆದರೆ ಇಲ್ಲಿನ ಅಡ್ಡದಿಡ್ಡಿಯಾಗಿರುವ ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವ ನೆಲದ ಮೇಲೆ ಭೋರ್ಗರೆದು ಸುರಿವ ನೀರನ್ನ ಕೂಡಿಟ್ಟು ಬಳಸಲು ಯಾವ ಸೂಕ್ತ ವ್ಯವಸ್ಥೆಯೂ ಇಲ್ಲ. ತಮಾಷೆಯೆಂದರೆˌ ಭಾರತದಲ್ಲೆ ಅತಿ ಹೆಚ್ಚು ಮಳೆ ಪ್ರಮಾಣ ದಾಖಲಾಗುವ ಚಿರಾಪುಂಜಿಯೂ ಸೇರಿ ಅದನ್ನ ಒಳಗೊಂಡಿರೋ ಪೂರ್ವ ಖಾಸಿ ಜಿಲ್ಲೆಯೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ರಾರಾಜಿಸುತ್ತಿತ್ತು! ಸುರಿವ ಮಳೆಯೆಲ್ಲ ಹಾಗೆ ವ್ಯರ್ಥವಾಗಿ ಇಳಿದು ಕೊರಕಲು ಕಣಿವೆಗಳಲ್ಲಿ ಹರಿದು ಪಕ್ಕದ ಬಾಂಗ್ಲಾದೇಶದಲ್ಲಿ ಪ್ರವಾಹ ಉಕ್ಕಿಸಿಕೊಂಡು ಹರಿದು ಬಂಗಾಳಕೊಲ್ಲಿ ಪಾಲಾಗುತ್ತಿತ್ತು. ಮಳೆಯ ವಿಚಾರದಲ್ಲಿ ಚಿರಾಪುಂಜಿಯ ನಂತರದ ಸ್ಥಾನದಲ್ಲಿದ್ದ ಆಗುಂಬೆಯಿರುವ ತೀರ್ಥಹಳ್ಳಿ ತಾಲೂಕಿನಿಂದ ಬಂದ ನನ್ನಂತವನಿಗೆ ಇದು ವಿಸ್ಮಯದ ಸಂಗತಿಯಾಗಿತ್ತು. ಹಾಗೆ ನೋಡಿದರೆˌ ದೇಶದಲ್ಲೆ ಅತಿಯಾದ ಮಳೆ ಬೀಳುವ ವಿಷಯದಲ್ಲಿ "ಬೆಳ್ಳಿ ಪದಕ" ವಿಜೇತವೆಂಬ ಸ್ಥಾನ ಮಾನಗೆಟ್ಟುˌ ಆಗುಂಬೆ ಬದಲಿಗೆ ಪಕ್ಕದ ಹೊಸನಗರ ತಾಲೂಕಿನ ಹುಲಿಕಲ್ ಏರಿ ದಶಕದ ಮೇಲಾಗಿದೆ. ಅವ್ಯಾಹತವಾಗಿ ಅಭಿವೃದ್ಧಿಯ ಹೆಸರಿನಲ್ಲಿ ನಡೆದಿರುವ ಪಶ್ಚಿಮಘಟ್ಟಗಳ ವನಸಿರಿಯ ನಿರಂತರ ಕೊಳ್ಳೆಯ ಕಾರಣ ವಾರಾಹಿ-ಮಾಲತಿ ಅವಳಿ ನದಿಗಳು ಹುಟ್ಟುವˌ ಸೀತಾ ನದಿಯ ಪ್ರವಾಹ ಹತ್ತಿರದಲ್ಲೆ ಹರಿದು ಹೋಗುವ ಆಗುಂಬೆಯೂ ಸಹ ಬೇಸಿಗೆಯಲ್ಲಿ ಬಾಯಾರಿ ತ್ರಾಹಿ ತ್ರಾಹಿ ಅನ್ನುವ ಸ್ಥಿತಿ ತಲುಪಿದೆ. ಕರ್ನಾಟಕ ಸರಕಾರವು ಕಳೆದೊಂದು ದಶಕದಿಂದ ಆಗುಂಬೆಯನ್ನೂ ಒಳಗೊಂಡಿರುವ ತೀರ್ಥಹಳ್ಳಿಯನ್ನೂ ಸಹ "ಬರಪೀಡಿತ ತಾಲೂಕು"ಗಳ ಪಟ್ಟಿಯಲ್ಲಿ ಸೇರಿಸಿರೋದು ಮತೀಯ ರಾಜಕರಣದ ಮಲೆತ ಮನಸ್ಥಿತಿಯಲ್ಲಿ ಮೈಮರೆತು ಮಾನಸಿಕ ಅಸ್ವಸ್ಥತೆಯ ಉತ್ತುಂಗಕ್ಕೇರಿರುವ ನಗೆ ನಾಚಿಕೆ ಬಿಟ್ಟು ತಾನರಳಲು ಕೆಸರನ್ನ ಹಬ್ಬಿಸುವುದನ್ನೆ ಕುಲಕಸುಬು ಮಾಡಿಕೊಂಡಿರೋ ನೀಚ ರಾಜಕೀಯ ಪಕ್ಷವೊಂದರ ಬಾಲಬುಡುಕರಾಗಿರೋ ಮಲೆನಾಡಿಗರಿಗೆ ನಾಚಿಕೆಗೇಡಿನ ವಿಷಯ.
ಇದನ್ನೆಲ್ಲ ಕಂಡು ನೋಡಿ ಅನುಭವಿಸಿಯೆ ಇಲ್ಲಿಗೆ ಕಾಲಿಟ್ಟಿದ್ದವನಿಗೆ ಚಿರಾಪುಂಜಿಯೂ ಬರಪೀಡಿತವಾಗಿರೋದನ್ನ ಕಂಡು ವಿಚಿತ್ರ ತೃಪ್ತಿಯಾಯಿತು! ಸದ್ಯ ನಮ್ಮ ತೀರ್ಥಹಳ್ಳಿಯಷ್ಟೆ ಅಲ್ಲˌ ಈ ವಿಷಯದಲ್ಲಿ ಮೇಘಾಲಯವೂ ಏನೂ ಕಡಿಮೆ ಕೆಟ್ಟಿಲ್ಲ ಅನ್ನೋ ಒಳ ಮನಸಿನ ವಿಕೃತಿ ಹುಟ್ಟಿಸಿರೋ ತೃಪ್ತ ಭಾವದಿಂದ ಒಂದೊಂದಾಗಿ ವಿಷಯ ಪ್ರಸ್ತಾವಿಸಿ ಸಂಬಂಧ ಪಟ್ಟ ಇಲಾಖಾ ಕಾರ್ಯದರ್ಶಿಗಳಿಂದ ವಿವರ ಪಡೆದುˌ ಕಡತಗಳಲ್ಲಿ ತನ್ನ ಸಹಿ ಜ಼ಡಿದು ವಿಲೇವಾರಿ ಮಾಡೋದನ್ನೆ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಕಡೆಯದಾಗಿ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರ ಪ್ರಸ್ತಾವವಾಯಿತು. ಗೃಹ ಕಾರ್ಯದರ್ಶಿಗಳಿಂದ ವಿವರಣೆ ಪಡೆಯುತ್ತಿದ್ದಂತೆ ಏಕಾಏಕಿ ಪುಲೋಂಗ್ ತೀವೃ ಮುನಿಸಿನಿಂದ ಕೋಪದ ಧ್ವನಿಯಲ್ಲಿ ತನ್ನ ಎಣ್ಣೆ ಸುರಿವ ಪುಟ್ಟ ಕಣ್ಣುಗಳೆರಡು ಆಳದೆಲ್ಲೆಲ್ಲೋ ಹೂತು ಹೋದಂತಿದ್ದ-ಮೂಗೆ ನಾಪತ್ತೆಯಾದಂತಿರೋ ಮುಖಾರವಿಂದದ ತುಂಬಾ ಅಸಹನೆಯನ್ನ ಪ್ರಕಟಿಸುತ್ತಾˌ ಅವರ ಸಮಜಾಯಷಿಗಳಿಗೆಲ್ಲಾ ಅಸಮ್ಮತಿಯ ಧಾಟಿಯಲ್ಲಿ ಹರುಕು ಮುರುಕು ಹಿಂದಿಯಲ್ಲಿ ಉಗಿದು ಉಪ್ಪಿನಕಾಯಿ ಹಾಕಲಾರಂಭಿಸಿದ! ನಾಟಕೀಯವಾಗಿ ಹೀಗೆ ಸನ್ನಿವೇಶ ಬದಲಾದದ್ದೆˌ ಏನೇನೋ ತುರ್ತಿನ ಕ್ರಮದ ನಿರ್ದೇಶನಗಳನ್ನ ದಯಪಾಲಿಸಿˌ ಸಭೆಯ ಅಜೆಂಡಾದಲ್ಲಿ ಕಟ್ಟಕಡೆಯದಾಗಿದ್ದ ಅಧಿಕಾರಿಗಳ ಭಡ್ತಿಯ ವಿಷಯ ಮಂಡನೆಯನ್ನ ಮುಂದೂಡಿ ಮುಖ್ಯಮಂತ್ರಿ ಅಸಮಧಾನದ ಮೋರೆ ಹೊತ್ತು ಸಂಪುಟಸಭೆಯನ್ನ ಮೊಟಕುಗೊಳಿಸಿ ಮನಯತ್ತ ಹೊರಟ.
ಏಕೆ ಹೀಗೆ ತರಾತುರಿಯಲ್ಲಿ ಸಭೆ ಮುಗಿಯಿತು ಅನ್ನುವ ವಿಷಯ ಅರಿವಾಗದೆ ತಲೆ ಕೆರೆದುಕೊಳ್ಳುವ ಸರದಿ ಈಗ ನನ್ನದಾಗಿತ್ತು. ತನ್ನ ಭಡ್ತಿಯ ವಿಚಾರ ಇವತ್ತು ಇತ್ಯರ್ಥವಾಗಲಿದೆ ಎಂದು ಭಾವಿಸಿದ್ದ ಇತ್ತಲೆ ನಾಗ ಮತ್ತವನ ನಾಲ್ವರು ಬ್ಯಾಚ್ಮೇಟ್ ಸಹುದ್ಯೋಗಿ ಅಧಿಕಾರಿಗಳಿಗೆ ಈ ಪ್ರಹಸನದಿಂದ ಸಿಕ್ಕಾಪಟ್ಟೆ ನಿರಾಸೆಯಾಯಿತು. ಆದರೂ ದೇವರೊಂದಿಗೆ ಸೇರಿ ಪೂಜಾರಿಯೂ ಒಲಿದು ವರ ದಯಪಾಲಿಸುವ ತನಕ ತಾಳಿಕೊಳ್ಳದೆ ವಿಧಿ ಇಲ್ಲದಾಗಿರೋದರಿಂದˌ ಅದೆಷ್ಟೆ ಅತೃಪ್ತಿಯಾದರೂ ಮುಚ್ಚಿಕೊಂಡು ಬಲವಂತದ ಕೃತಕ ಮುಗುಳುನಗುವನ್ನ ಮುಖಾರವಿಂದದ ಮೇಲಂಟಿಸಿಕೊಂಡು ಮುಚ್ಚಿಕೊಂಡು ಅವರೆಲ್ಲರೂ ಸುಮ್ಮನಾದರು. ಅಂತೂ ಇಂತೂ ವೃತ್ತಿ ಬದುಕಿನ ಮೊತ್ತಮೊದಲ ಸಂಪುಟಸಭೆಯ ಅನುಭವ ಗಳಿಸಿˌ ಹೊರಗೆ ಕಾದುಕೊಂಡು ನಿಂತಿದ್ದ ನನ್ನ ಆಪ್ತ ಕಾರ್ಯದರ್ಶಿಗೆ ನಮ್ಮ ಕಛೇರಿಯಿಂದ ತರಿಸಲಾಗಿದ್ದ ಕಡತಗಳನ್ನೆಲ್ಲ ಜತನದಿಂದ ಹಿಂದೆ ಹೊರೆಸಿಕೊಂಡು ಬರಲು ಆಜ್ಞಾಪಿಸಿ ಮರಳಿ ನನ್ನ ಕಛೇರಿಗೆ ಹಿಂದಿರುಗಿ ಬಂದು ಕುರ್ಚಿಯಲ್ಲಿ ಕುಸಿದು ಕುಕ್ಕರಬಡಿದೆ.
ಇಂದಿನ ಸಂಪುಟಸಭೆಯಲ್ಲಿ ಒಬ್ಬ ಅಧಿಕಾರಿಯಾಗಿ ನನ್ನದೇನೂ ಪ್ರಾಮುಖ್ಯತೆ ಇಲ್ಲದಿದ್ದುದರಿಂದ ಸಭೆಯಲ್ಲಿ ನಾನು ಇದ್ದೆನೋ? ಇರಲಿಲ್ಲವೋ! ಎಂಬಂತೆ ಹಾಜರಿದ್ದು ಹೊರಬಂದಿದ್ದೆನಾದರೂˌ ಶಿಸ್ತಿನ ಶಿಷ್ಟಾಚಾರದೊಂದಿಗೆ ಶುರುವಾಗಿ ತಕ್ಕಮಟ್ಟಿಗೆ ಅಚ್ಚುಕಟ್ಟಾಗಿಯೆ ಸರಿಸುಮಾರು ಒಂದೂವರೆ ತಾಸಿನ ತನಕ ನಡೆದಿದ್ದ ಕ್ಯಾಬಿನೆಟ್ ಮೀಟಿಂಗ್ ಇದ್ದಕ್ಕಿದ್ದಂತೆ ಗಂಭೀರ ಸ್ವರೂಪ ಪಡೆದು ದಢೀರನೆ ಮೊಟಕುಗೊಂಡು ಅನಪೇಕ್ಷಿತ ರೀತಿಯಲ್ಲಿ ಕೊನೆಗೊಂಡದ್ದಾದರೂ ಅದ್ಯಾಕೆ? ಅನ್ನುವ ಪುಕುಳಿ-ಬಾಯಿ ಅರ್ಥವಾಗದೆ ಗೊಂದಲದಲ್ಲಿ ನಾನಿದ್ದೆ. ಹೊರಗೆ ಬಿಟ್ಟು ಬಿಟ್ಟು ಮಳೆ ಜಿನುಗುತ್ತಿದ್ದರೂ ಸಹˌ ಒಂಥರಾ ಸೆಖೆಯ ವಾತಾವರಣ ಆವರಿಸಿಕೊಂಡಂತಿತ್ತು. ಬಹುಶಃ ಒಂದೂವರೆ ಫರ್ಲಾಂಗ್ ದೂರದ ಸಚಿವಾಲಯದಿಂದ ನನ್ನ ಕಛೇರಿ ನಡುವಿನ ದೂರವನ್ನ ನಡೆದುಕೊಂಡೆ ಕ್ರಮಿಸಿ ಬಂದಿದ್ದರಿಂದಲಿದ್ದಿರಲಿಕ್ಕೂ ಸಾಕು; ನನಗಷ್ಟೆ ಸೆಖೆಯ ಧಗೆ ಅನುಭವಕ್ಕೆ ಬರುತ್ತಿರೋದು. ದೂರ ನಿಯಂತ್ರಕದಿಂದ ಹವಾನಿಯಂತ್ರಕದ ಶೀತಲತೆಯ ಮಟ್ಟವನ್ನ ಮತ್ತೆರಡು ಡಿಗ್ರಿ ಕೂತಲ್ಲಿಯೆ ಕುಗ್ಗಿಸಿ ನನ್ನ ತಿರುಗು ಕುರ್ಚಿಯ ಹೆಡ್ ರೆಸ್ಟಿಗೆ ತಲೆಯಾನಿಸಿ ಸೂರು ದಿಟ್ಟಿಸುತ್ತಾ ಆಲೋಚಿಸಲಾರಂಭಿಸಿದೆ. ಎರಡು ಟನ್ನಿನ ಏಸಿ ಅಳವಡಿಸಿದ್ದರೂ ಸಹ ಎರಡೆರಡು ಫ್ಯಾನುಗಳು ಹಾಸ್ಯಾಸ್ಪದವಾಗಿ ಸೂರಿಗೆ ನೇಣು ಹಾಕಿಕೊಂಡು ನೇತಾಡುತ್ತಿದ್ದದ್ದನ್ನ ಕಂಡು ನಗು ಬಂತು.
ಹಾಗೆ ನೋಡಿದರೆˌ ಆದಾಯ ಕ್ರೋಢಿಕರಣದ ದೃಷ್ಟಿಯಿಂದ ಅಷ್ಟಿಷ್ಟು ಆಧುನಿಕ ಹಾಗೂ ನವ ಉದ್ದಿಮೆಗಳಿಗೆ ಮುಕ್ತವಾಗಿರುವ ಅಸ್ಸಾಂ ಹೊರತು ಪಡಿಸಿˌ ಈ ಈಶಾನ್ಯ ಭಾರತದ ರಾಜ್ಯಗಳಿಂದ ಕೇಂದ್ರದ ಖಜಾನೆಗೆ ಸಲ್ಲುವ ಕಪ್ಪ ನಗಣ್ಯ ಅನ್ನುವ ಮೊತ್ತಗಳಲ್ಲಿದೆ. ಬದಲಿಗೆ ಭಾರತ ಸರಕಾರವೆ ವಿವಿಧ ಅನುದಾನಗಳನ್ನ ಒದಗಿಸುವ ನೆಪದಲ್ಲಿ ಸಿಕ್ಕಿಂ ಸಹಿತವಾದ ಉಳಿದ ಎಂಟು ರಾಜ್ಯಗಳ ಅಗತ್ಯಗಳಿಗೆ ಅನುಸಾರವಾಗಿ ಅವುಗಳ ಆರ್ಥಿಕ ಆರೋಗ್ಯದ ಹಿತದ ಕಾಳಜಿ ವಹಿಸಿದೆ ಎಂದರೂ ತಪ್ಪಿಲ್ಲ. ಅದರಲ್ಲೂ ಸಿಕ್ಕಿಂ ರಾಜ್ಯವನ್ನ ವಿಶೇಷ ವಿನಾಯತಿ ಕೊಟ್ಟು ಆದಾಯ ತೆರಿಗೆ ವ್ಯಾಪ್ತಿಯಿಂದಲೂ ಹೊರಗಿಟ್ಟುˌ ಅಲ್ಲಿಂದ ಸಂಗ್ರಹವಾಗಬಹುದಾದ ನಾಲ್ಕಾಣೆ ತೆರಿಗೆಯಿಂದಲೂ ಸ್ಥಳಿಯರನ್ನ ವಿಮೋಚಿತರನ್ನಾಗಿರಿಸಲಾಗಿದೆ. ಭಾರತ ಸರಕಾರ ಅಲ್ಲಿನ ಎಂಟೂ ರಾಜ್ಯಗಳಿಗೆ ಒದಗಿಸುವ ಆರ್ಥಿಕ ಅನುದಾನದ ದೊಡ್ಡಪಾಲು ಸಲ್ಲುವುದು ಅಸ್ಸಾಂ ರಾಜ್ಯಕ್ಕೆˌ ಅಸ್ಸಾಮಿಗೆ ಸಂದಾಯವಾಗುವ ಮೊತ್ತದ ಮೂರರಲ್ಲಿ ಎರಡು ಭಾಗ ಪಡೆಯುವ ಅರುಣಾಚಲ ಪ್ರದೇಶ ಹಾಗೂ ಅರ್ಧದಷ್ಟು ಪಡೆಯುವ ಮೇಘಾಲಯ ಕ್ರಮವಾಗಿ ಮುಂದಿನೆರಡು ಸ್ಥಾನಗಳಲ್ಲಿ ರಾರಾಜಿಸುತ್ತಿವೆ. ಇದು ಮೂರು ಕಾಸು ತೆರಿಗೆಯನ್ನೂ ನ್ಯಾಯವಾಗಿ ಸಂಗ್ರಹಿಸದ ರಾಜ್ಯಗಳ ಆರು ಕಾಸಿನ ಅನುದಾನದ ಆದಾಯದಿಂದಲೆ ಸ್ಥಳಿಯ ಆರ್ಥಿಕತೆಯ ಬೆನ್ನೆಲುಬು ನೆಟ್ಟಗೆ ನಿಂತಿರುವ ಕಥೆ.
ಕರ್ನಾಟಕ ರಾಜ್ಯದ ಬೆಂಗಳೂರು ಮಹಾನಗರ ಪಾಲಿಕೆಯೊಂದೆ ಸರಿಸುಮಾರು ಹದಿನೆಂಟು ಸಾವಿರ ಕೋಟಿ ವಾರ್ಷಿಕ ಬಜೆ಼ಟ್ ಮಂಡಿಸುವಾಗˌ ಹೆಚ್ಚು-ಕಡಿಮೆ ಅದೆ ಗಾತ್ರದ ಬಜೆ಼ಟ್ ಹೊಂದಿರುವ ಮೇಘಾಲಯ ಅಧಿಕಾರಿ ವರ್ಗದವರಲ್ಲಿˌ ಅದರಲ್ಲೂ ವಿಶೇಷವಾಗಿ ಹೊರರಾಜ್ಯಗಳ ಮೂಲದ ಉನ್ನತಾಧಿಕಾರಿಗಳಿಗೆ ಹೇಳಿಕೊಳ್ಳುವಂತಹ ರೋಮಾಂಚನವನ್ನೇನನ್ನೂ ಮೂಡಿಸುತ್ತಿರಲಿಲ್ಲ. ಇಲ್ಲಿನ ಎಂಟೂ ರಾಜ್ಯಗಳ ಕೇಡರಿನಲ್ಲಿ ಬಂದು ಅಧಿಕಾರ ವಹಿಸಿಕೊಳ್ಳುವ ಪ್ರತಿಯೊಬ್ಬ ಕೇಂದ್ರ ಆಡಳಿತ ಸೇವೆಯ ಅಧಿಕಾರಿಯೂ ತನ್ನ ಎರಡೂ ಚಿಲ್ಲರೆ ವರ್ಷಗಳ ಪ್ರೊಬೆಷನರಿ ಅವಧಿ ಹಾಗೂ ಆರಂಭದ ಪದನಾಮದಿಂದೊದಗುವ ಹುದ್ದೆಯಲ್ಲೂ ಬಹುತೇಕ ಅಷ್ಟೆ ಅವಧಿಯ ಅಧಿಕಾರ ಚಲಾಯಿಸಿ ಆದಷ್ಟು ಬೇಗ ತನ್ನ ಮಾತೃ ರಾಜ್ಯಕ್ಕೆ ಎರವಲು ಸೇವೆಯ ಮೇಲೆ ಹೋಗುವ ಅವಕಾಶವನ್ನೆ ಹಸಿದ ಹಿಂಸೃ ಮೃಗದಂತೆ ಹೊಂಚು ಹಾಕುತ್ತಾ ಕಾಯುತ್ತಿರುತ್ತಾನೆ. ಅದರಲ್ಲೂˌ ತನ್ನ ಸಂಗಾತಿಯಾದ ಗಂಡನೋ/ಹೆಂಡತಿಯೋ ಇನ್ಯಾವುದಾದರೂ ದೊಡ್ಡ ರಾಜ್ಯಗಳ ಕೇಡರಿನಲ್ಲಿ ಅಧಿಕಾರಸ್ಥರಾಗಿದ್ದರೆˌ ನಿಗದಿತ ಅವಧಿಯ ಸ್ಥಳಿಯ ಸೇವೆಯ ನಂತರ ಅದನ್ನೆ ನೆಪ ಮಾಡಿಕೊಂಡು ಬೇರೆ ರಾಜ್ಯಗಳಿಗೆ ಬದಲಾಯಿಸಿಕೊಂಡು ವರ್ಗವಾಗುವುದು ಅಂತವರಿಗೆ ಅತಿ ಸುಲಭವಾಗುತ್ತದೆ.
ಹಾಗಂತˌ ಐದು ವರ್ಷಗಳ ನಂತರ ಹೀಗೆ ತವರಿಗೆ ಹೋಗಿದ್ದ ತಂಗಿಯಾಗಲಿ/ತವರಿಗೆ ಹೋದ ತಮ್ಮನಾಗಲಿ ಇಲ್ಲಿನ ಹೆಸರಲ್ಲಿ ಅಲ್ಲ್ಯಾವುದೋ ಒಂದು "ಸಮೃದ್ಧ ರಾಜ್ಯ"ದ ಅನ್ನವುಂಡು ಒಂದೆರಡು ದಶಕಗಳ ಸೇವೆ ಮುಗಿಸಿ ಮರಳಿ ಮಣ್ಣಿಗೆ ಖುಷಿ ಖುಷಿಯಾಗಿ ಬಂದು ದೇಶಸೇವೆ ಮಾಡ್ತಾರೆ ಅಂತ ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು! ಎರವಲು ಸೇವೆಯ ಗರಿಷ್ಠ ಅವಧಿ ಮುಗಿದ ನಂತರ ಸೇವಾ ಹಿರಿತನದ ಆಧಾರದ ಮೇಲೆ ಮಾತೃ ರಾಜ್ಯದ ಕೇಡರಿನಡಿ ಅವರು ಬಂದು ಗೇಯಬೇಕಾದರೆ ಹಣಕಾಸು ಕಾರ್ಯದರ್ಶಿ-ರಾಜ್ಯ ಪೊಲೀಸ್ ವರಿಷ್ಠ-ಕಂದಾಯ ಕಾರ್ಯದರ್ಶಿ-ಕೃಷಿ ಕಾರ್ಯದರ್ಶಿ-ಕೈಗಾರಿಕಾ ಕಾರ್ಯದರ್ಶಿ-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ-ಸಹ ಮುಖ್ಯ ಕಾರ್ಯದರ್ಶಿ-ಮುಖ್ಯಕಾರ್ಯದರ್ಶಿಯಂತಹ ಉನ್ನತ ಹುದ್ದೆಗಳು ದೊರಕುವಂತಿದ್ದ ಪಕ್ಷದಲ್ಲಿ ಮಾತ್ರ ಅದಕ್ಕೆ ಅಧಿಕಾರಿ ವರ್ಗ ಆದ್ಯತೆ ನೀಡುತ್ತದೆ. ಇಲ್ಲದಿದ್ದಲ್ಲಿˌ ಕೇಂದ್ರ ಸರಕಾರಿ ಎರವಲು ಸೇವೆಯ ಪಿಳ್ಳೆನೆವ ಹೂಡಿಕೊಂಡು ನೇರ ರಾಷ್ಟ್ರ ರಾಜಧಾನಿಗೋ ಇಲ್ಲವೆ ಕೇಂದ್ರ-ರಾಜ್ಯಗಳ ನಡುವಿನ ಕೊಂಡಿಯಾದ ಅನೇಕ ಆಯೋಗ-ಮಂಡಳಿಗಳ ಆಯಕಟ್ಟಿನ ಸ್ಥಾನ-ಮಾನಗಳಿಗೋ ಹೇಗಾದರೂ ಸರಿ ಕಾಡಿ-ಬೇಡಿ-ಖರೀದಿಸಿ ಗಿಟ್ಟಿಸಿ ಅಮರಿಕೊಂಡು ಬೆಂಗಳೂರು-ಹೈದರಾಬಾದು-ಅಹಮದಾಬಾದು-ಲಕ್ನೋ-ಪಾಟ್ನಾ-ಕೊಲ್ಕತಾ-ಮುಂಬೈ-ಪಣಜಿ-ಚೆನ್ನೈಗಳಂತಹ ಸಿರಿವಂತ ರಾಜ್ಯಗಳ ರಾಜಧಾನಿಗಳಿಗೆ ಪದನಾಮದ ಹುದ್ದೆ ಹೊಂದಿ ಮತ್ತಷ್ಟು ಸಮೃದ್ಧವಾಗಿ ಹೊಟ್ಟೆ ಬಿರಿಯುವಂತೆ ಮೇಯಲು ಮರು ವಲಸೆ ಹೋಗುವುದಂತೂ ಇದ್ದೆ ಇದೆ.
ಅಷ್ಟರಲ್ಲಿˌ ದೇಹಕ್ಕೆ ವಯಸ್ಸಾಗಿ ಪ್ರಾಯ ಸಂದ ಕಾರಣ; ಸೇವಾ ನಿವೃತ್ತಿ ಸಿಕ್ಕಿˌ ಕೇಂದ್ರದ ಇನ್ಯಾವುದಾದರೂ ಯೋಜನಾ ಅನುಷ್ಠಾನದ ಆಯಕಟ್ಟಿನ ಸ್ಥಾನಮಾನಗಳಲ್ಲಿ ಮತ್ತೊಂದು ದಶಕ ಮೆರೆದಾಡಿˌ ಕಾಸು ಕೊಳ್ಳೆ ಹೊಡೆಯುವ ಸದಾವಕಾಶವಂತೂ ಇದ್ದೆ ಇರುತ್ತದೆ. ಈ ಎಲ್ಲಾ ಕಾರಣಗಳಿಂದ ಸಣ್ಣ-ಪುಟ್ಟ ರಾಜ್ಯಗಳ ಕೇಡರ್ ಗಳಿಸುವ ಕೇಂದ್ರ ಆಡಳಿತ ಸೇವೆಯ ಅಧಿಕಾರಿಗಳ ಜೀವನವೆನ್ನೋದು ಅದೃಷ್ಟ ಕೆಟ್ಟು ಅನಿರೀಕ್ಷಿತ ಅಡೆತಡೆಗಳು ಎದುರಾಗದ ಹೊರತು ಒಂಥರಾ ಸುಖದ ಸುಪ್ಪೊತ್ತಿಗೆಯಲ್ಲದೆ ಮತ್ತಿನ್ನೇನೂ ಆಗಿರಲ್ಲ. ಒಟ್ಟಿನಲ್ಲಿ 'ಹುಟ್ಟಿದರೆ ಸಣ್ಣ ರಾಜ್ಯಗಳ ಕೇಡರಿನ ಅಧಿಕಾರಿಗಳಾಗುವ ಹುಟ್ಟು ಮಚ್ಚೆ ಹೊತ್ತು ಹುಟ್ಟಬೇಕು' ಅನ್ನುವ ಪೂರ್ ಜೋಕೊಂದು ಅಧಿಕಾರಿ ವರ್ಗದಲ್ಲಿ ಚಾಲ್ತಿಯಲ್ಲಿದೆ. ಈ ಸಣ್ಣ ರಾಜ್ಯಗಳ ಕೇಡರ್ ಅನ್ನೋದೊಂತರಾˌ ಚಿನ್ನದ ಮೊಟ್ಟೆ ಇಡುವ ಕೋಳಿ. ಕಡಿಮೆ ಜವಾಬ್ದಾರಿ-ದೊಡ್ಡ ಸಂಬಳ-ಐಶಾರಾಮದ ಬದುಕು-ಕೊಳ್ಳೆ ಹೊಡೆಯಲೊಂದಷ್ಟು ಹಡಬಿಟ್ಟಿ ಜನರ ಕಾಸು. ಇಂತವರ ಬಾಳು ದಷ್ಟಪುಷ್ಟವಾಗಿ ಬೆಳಗಲು ಇನ್ನೇನು ತಾನೆ ಅಪ್ಪಂತ ಕಾರಣ ಬೇಕು?
ಕೇಂದ್ರ ಸರಕಾರ ಸಿಕ್ಕಿಂ ಸಹಿತ ಈಶಾನ್ಯದ ಏಳೂ ರಾಜ್ಯಗಳ ಹಿತಾಸಕ್ತಿ ಕಾಪಾಡುವ ಹಿತದೃಷ್ಟಿಯಿಂದ ಐದು ದಶಕಗಳ ಹಿಂದೆಯೆˌ ಆ ರಾಜ್ಯಗಳನ್ನ ರಚಿಸುವಾಗ "ಈಶಾನ್ಯ ರಾಜ್ಯಗಳ ಪರಿಷತ್ತು" ಅನ್ನುವ ಆ ರಾಜ್ಯಗಳನ್ನ ಕೇಂದ್ರದೊಂದಿಗೆ ಆಡಳಿತಾತ್ಮಕವಾಗಿ ಬೆಸೆಯುವ ಸಾಂವಿಧಾನಿಕ ಸಂಸ್ಥೆಯೊಂದನ್ನ ರಚಿಸಿದೆ. ನಮ್ಮ ಶಿಲ್ಲಾಂಗಿನಲ್ಲೆˌ ನನ್ನ ಕಛೇರಿಯಿಂದ ಕೂಗಳತೆಯ ದೂರದಲ್ಲಿ ಅದರ ಮುಖ್ಯ ಕಛೇರಿ ಇದೆ. ಈ ಎಂಟೂ ರಾಜ್ಯಗಳ ರಾಜಕೀಯ ರಗಳೆಗಳನ್ನ ಪರಿಶೀಲಿಸಿ ಬಗೆಹರಿಸುವ-ಎಂಟೂ ರಾಜ್ಯಗಳ ಆರ್ಥಿಕ ಅಭ್ಯುದಯಕ್ಕೆ ಒತ್ತು ಕೊಟ್ಟು ಸೂಕ್ತ ಯೋಜನೆಗಳನ್ನ ರೂಪಿಸಿ ಅದಕ್ಕೆ ಬೇಕಿರುವ ಬಂಡವಾಳವನ್ನ ಕೇಂದ್ರ ಸರಕಾರದ ಅನುದಾನವನ್ನಾಗಿ ದಯಪಾಲಿಸೋದು ಕೇಂದ್ರ ಗೃಹಮಂತ್ರಿಯ ಅಧ್ಯಕ್ಷತೆಯಲ್ಲಿ ನಡೆಯುವ ಈ ಪರಿಷತ್ತಿನ ಮೂಲ ಜವಬ್ದಾರಿ. ವಾಸ್ತವದಲ್ಲಿ ಇದೊಂತರ ಈ ವಲಯಕ್ಕೂ ದೆಹಲಿಗೂ ನಡುವಿನ ಸ್ನೇಹ ಸೇತುವೆಯಂತಹ ಕೊಂಡಿಯಾಗಬೇಕಿತ್ತು.
ಜೊತೆಗೆ ಆಂತರಿಕ ಭದ್ರತೆಯ ಬಗ್ಗೆಯೂ ಈ ಪರಿಷತ್ತು ತಲೆಕೆಡಿಸಿಕೊಳ್ಳುವುದರಿಂದ ಆಗಾಗ ಸಂಬಂಧಪಟ್ಟ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನಾಗಲಿ-ಅರಕ್ಷಕ ಅಧೀಕ್ಷಕರನ್ನಾಗಲಿ ಸ್ಥಳಿಯ ರಾಜ್ಯ ಸರಕಾರಗಳ ಘನ ಗಮನಕ್ಕೂ ತಾರದೆ ಸೂಚನೆ ನೀಡಿ ಶಿಲ್ಲಾಂಗಿನ ಕೇಂದ್ರ ಕಛೇರಿಗೆ ಕರೆಸಿಕೊಂಡು ವಿವರಣೆ ಪಡೆಯುವ ಅಧಿಕಾರ ಈ ಪರಿಷತ್ತಿನ ಮುಖ್ಯಾಧಿಕಾರಿಯಾಗಿರೋ ಭಾರತೀಯ ಆಡಳಿತ ಸೇವೆಯ ಅಧಿಕಾರಿ ವರ್ಗಗಳಿಗಿದೆ. ಪರಿಸ್ಥಿತಿಯ ವ್ಯಂಗ್ಯವೇನೆಂದರೆˌ ಕೇಂದ್ರದ ಎರವಲು ಸೇವೆಗೆ ನಿಯುಕ್ತನಾಗಿ ಹೋಗಿ ಅಲ್ಲಿಂದ ಇದೆ ಕೌನ್ಸಿಲ್ಲಿಗೆ "ಹೋದೆಯ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ" ಎಂಬಂತೆ ಹೀಗೆ ಹೋಗಿ ಹಾಗೆ ಮರು ನಿಯುಕ್ತರಾಗಿ ಬರುವ ಇದೆ ರಾಜ್ಯದ ಕೇಡರಿನ ಅಧಿಕಾರಿಗಳುˌ ಕೇಂದ್ರ ಸರಕಾರದ ಕುಮ್ಮಕ್ಕಿನಿಂದ ತಮ್ಮದೆ ಮಾತೃ ರಾಜ್ಯಗಳ ಸರಕಾರಗಳಿಗೆ ನಾನಾ ವಿಧದ ಸಂಕಷ್ಟ ತಂದಿಟ್ಟು "ಕುಲಕ್ಕೆ ಮೂಲ ಕೊಡಲಿ ಕಾವು"ಗಳಂತೆ ಪೀಡಿಸುವ ಕಳ್ಳಾಟ ಆಡುವುದೂ ಇದೆ.
ಇದೆಲ್ಲ ಸಾಲದು ಅಂತˌ ರಾಜಭವನಗಳೆಂಬ ಸರಕಾರಿ ಪಂಚತಾರಾ ರೆಸಾರ್ಟುಗಳಲ್ಲಿˌ ಕೇಂದ್ರದ ಆಡಳಿತ ಪಕ್ಷದ ಗಂಜಿಕೇಂದ್ರದ ಗಿರಾಕಿಗಳಾಗಿ ಅಗತ್ಯವೆ ಇಲ್ಲದಿದ್ದರೂ ಸಹ; ಆದಷ್ಟು ಕಾಲ ಜನರ ಕಾಸಲ್ಲಿ ಮೋಜು-ಮಸ್ತಿ ಮಾಡಲು ಅದೆಲ್ಲಿಂದಲೋ ಬಂದು ಒಕ್ಕರಿಸುವ ರಾಜ್ಯಪಾಲನೆಂಬ ಪೀಡೆಯನ್ನ ಕುಡಿಸಿ-ತಿನ್ನಿಸಿ-ಕೊಬ್ಬಿಸಿˌ ಮತ್ತವನಿಂದಲೆ ಸಮಯ ಸಿಕ್ಕಾಗಲೆಲ್ಲಾ ತಿವಿಸಿಕೊಳ್ಳುವ ಹಿಂಸೆ ಬೇರೆ. ಹೀಗೆˌ ಇಂತಹ ರಾಜ್ಯಗಳ ಮುನಸಿಪಾಲಿಟಿ ಮಟ್ಟದ ಸರಕಾರಗಳನ್ನ ಮುನ್ನಡೆಸುವುದು-ಇಲ್ಲಿಗೆ ಒದಗಿ ಬರುವ ಅನುದಾನಗಳಲ್ಲಿ ಹೊಂಚು ಹಾಕಿ ಸಕಲೆಂಟು ಹಿಂಸೆ ಅನುಭವಿಸಿಯೂ ಕಾಸು ಕೊಳ್ಳೆ ಹೊಡೆಯುವುದು ಸ್ಥಳಿಯ ರಾಜಕಾರಣಕ್ಕೆ ಎದುರಾಗುವ ಒಂದು ದೊಡ್ಡ ಸವಾಲು. ಅವನ್ನ ಸಾಧಿಸಲು ಶಕ್ತರಾದ ಜಗಭಂಡರಷ್ಟೆ ಇಂತಲ್ಲಿ ರಾಜಕಾರಣ ಮಾಡಿ ಯಶಸ್ವಿ ಆಡಳಿತಗಾರರಾಗಲು ಸಾಧ್ಯ.
ಮೇಲ್ನೊಟಕ್ಕೆ ಇನ್ಯಾವುದೆ ಸಂಗತಿಗಳಿಗೆ ಥಳುಕು ಹಾಕದೆ ನೋಡಿದರೆˌ ಜನ ನಿಬಿಡತೆಯ ಹೋಲಿಕೆಯಲ್ಲಿ ಹಾಗೂ ಭೂ ವ್ಯಾಪ್ತಿಯ ಗಾತ್ರದಲ್ಲಿ ಸಾಕಷ್ಟು ವಿಶಾಲವಾಗಿರುವ ದಕ್ಷಿಣ ಹಾಗೂ ಉತ್ತರ ಭಾರತದ ಪ್ರಮುಖ ನಗರಗಳ ಜನಸಂಖ್ಯೆಯ ಮುಂದೆ ನಗಣ್ಯವೆನ್ನುವಂತಿರುವ - ದೇಶದ ಆದಾಯದ ಖಾತೆಗೆ ಕನಿಷ್ಠ ಕಾಣಿಕೆ ಸಲ್ಲುವ - ಭೂ ವ್ಯಾಪ್ತಿಯ ಗಾತ್ರದಲ್ಲೂ ಕಿರಿದಾಗಿರುವ ಈಶಾನ್ಯದ ಚಿಲ್ಟಾರಿ-ಪುಲ್ಟಾರಿ ರಾಜ್ಯಗಳು ದೇಶದ ಆರ್ಥಿಕತೆಗೆ ಒಂಥರಾ ಹೊರೆ ಅನ್ನಿಸಬಹುದು. ದಕ್ಷಿಣದ ಕೇರಳ-ಗೋವಾ-ಪಾಂಡಿಚೆರಿˌ ಉತ್ತರದ ಹರಿಯಾಣ-ಪಂಜಾಬ್ˌ ಪೂರ್ವೋತ್ತರದ ಎಂಟು ತಥಾಕಥಿತ "ರಾಜ್ಯ"ಗಳಿಗಿಂತ ಗಾತ್ರದಲ್ಲಿ ಗುಜರಾತಿನ ಕಛ್ "ಜಿಲ್ಲೆ"ಯೊಂದೆ ಹೆಚ್ಚು ವಿಸ್ತಾರವಾಗಿದೆ. ಹಾಗಂತ ಗಾತ್ರದಲ್ಲಿ ನಗಣ್ಯ - ಆದಾಯ ಅಲ್ಪ ಅನ್ನುವ ರೊಳ್ಳೆ ತೆಗೆದು ಇವ್ಯಾವುವನ್ನೂ ಕಡೆಗಣಿಸುವಂತಿಲ್ಲ. ಹೊರ ನೋಟಕ್ಕೆ ಕಾಣಿಸುವಷ್ಟು ಇಲ್ಲಿನ ವಿಷಯ ಸರಳವಾಗಿಲ್ಲ. ಭಾರತದ ಇನ್ನಿತರ ಭೂಭಾಗವನ್ನು "ಮೈನ್ ಲ್ಯಾಂಡ್" ಅಂದರೆ ಮುಖ್ಯಭೂಮಿ ಅಂತಲೆ ಕರೆಯುವˌ ಈ ಪ್ರತ್ಯೇಕತೆಯ ಸುಶುಪ್ತ ಮನಸ್ಥಿತಿ ಹೊಂದಿರುವವರದ್ದೆ ಬಹುಸಂಖ್ಯೆಯಿರುವ ಪೂರ್ವೋತ್ತರದ ಚಿಕ್ಕ-ಪುಟ್ಟ ರಾಜ್ಯಗಳನ್ನ ಅದೆಷ್ಟೆ ಕಷ್ಟವಾದರೂ "ಸಾಕುವುದು" ಈ ಮೈನ್ ಲ್ಯಾಂಡ್ ಭಾರತೀಯರಿಗೆ ಅನಿವಾರ್ಯ ಕರ್ಮ. ದೇಶದ ಭದ್ರತೆಯ ದೀರ್ಘಕಾಲೀನ ಆಯುರಾರೋಗ್ಯದ ಸ್ಥಿರತೆಯನ್ನ ಕಾಪಾಡಿಕೊಳ್ಳಲು ಹಾಗೂ ದೇಶದ ಇನ್ನುಳಿದ ಭಾಗಗಳನ್ನ ಪರಕೀಯ ಪ್ರಭಾವದಿಂದ ಮುಕ್ತವಾಗಿಟ್ಟುಕೊಳ್ಳಲು ಈ ಕಿರು ರಾಜ್ಯಗಳು ಯಾವುದೆ ಕಿಡಿಗೇಡಿ ವಿದೇಶಿ ಶಕ್ತಿಗಳ ಕೈಗೊಂಬೆಗಳಾಗದಂತೆ ನಮ್ಮ ಬೆರಳ ಇಷಾರೆಯಲ್ಲೆ ಅವುಗಳ ಹಣೆಬರಹ ನಿರ್ಧಾರವಾಗುವಂತಹ ವಾತಾವರಣ "ನಿರ್ಮಿಸುವುದು" ಅವರಿಗಿಂತ ನಮ್ಮ ಹಿತದೃಷ್ಟಿಗೇನೆ ಹೆಚ್ಚು ಪೂರಕ.
ಹಾಗೇನಾದರೂˌ ಆ ರಾಜ್ಯಗಳನ್ನ ಪರಪುಟ್ಟರಂತೆ ಕಂಡು-ಅವುಗಳ ಅಭಿವೃದ್ಧಿಗೆ ದೇಣಿಗೆ ನೀಡದೆ ಕಡೆಗಣಿಸಿದರೆ; ಪರಿಸ್ಥಿತಿ ಎಲ್ಲಾದರೂ ಹದಗೆಟ್ಟು ತಾರತಮ್ಯದ ನೆಪ ಒಡ್ಡಿ ಭಾರತೀಯ ಗಣರಾಜ್ಯದಿಂದ ಬೇರ್ಪಟ್ಟು ಅವೇನಾದರೂ ಸ್ವತಂತ್ರಗೊಂಡರೆˌ ಭಾರತ ವಿರೋಧಿಗಳಾದ ಪ್ರಬಲ ವಿದೇಶಿ ಸರಕಾರಗಳು ಆರ್ಥಿಕ-ಸಾಮರಿಕ-ಸಾಮಾಜಿಕ ಸಹಾಯ ಹಸ್ತ ಚಾಚುವ ಪಿಳ್ಳೆನೆವ ಹೂಡಿಕೊಂಡು ಅಲ್ಲಿ ಶಾಶ್ವತವಾಗಿ ತಮ್ಮ ಝ಼ಂಡಾ ಊರಿ ಭಾರತದ ಹಿತಕ್ಕೆ ಶಾಶ್ವತವಾಗಿ ಚುಚ್ಚುವ ಮಗ್ಗುಲ ಕಾಸರ್ಕನ ಮುಳ್ಳಾಗುತ್ತವೆ. ಹಾಗೆ ನೀಡಲಾಗುವ ಅನುದಾನಗಳು ಸಹ ಪುಕ್ಕಟೆಯಾಗಿರದೆˌ ಈಗ ಸಹಾಯ ಮಾಡುವ ಸೋಗು ಹಾಕಿಕೊಂಡು ಬಂದಿದ್ದರೂ ಉಪಾಯವಾಗಿ ಅಮೇರಿಕಾ ಉಕ್ರೇನನ್ನ "ಸರಿಯಾದ" ಸಮಯ ಸಾಧಿಸಿಕೊಂಡು 'ಇತ್ತ ದರಿˌ ಅತ್ತ ಪಿಲಿ' ಅನ್ನುವ ಅಯೋಮಯ ಸ್ಥಿತಿಗೆ ದೂಡಿ ಪೀಡಿಸಿ ಮನಸೋಇಚ್ಛೆ ಸುಲಿಯಲು ಹೊರಟಿರುವಂತೆˌ ಕಾಲಾಂತರದಲ್ಲಿ ಆ ನೆಲದ ನೈಸರ್ಗಿಕ ಸಿರಿ ಸಂಪತ್ತನ್ನ ತಮ್ಮ ಕೈಲಾದಷ್ಟು ದೋಚುವ ಲೆಕ್ಕಾಚಾರದ ದೂರದೃಷ್ಟಿಯನ್ನೆ ಹೊಂದಿರುತ್ತವೆ. ಹಡಬಿಟ್ಟಿ ದುಡ್ಡೆಂದರೆ ಹೊಂಚು ಹಾಕಿ ಹೊಡೆಯಲು ಬಾಯಿ ಕಳೆದುಕೊಂಡಿರೋ ಅಲ್ಲಿನ ಸ್ಥಳಿಯ ರಾಜಕಾರಣಿಗಳೂ ಸಹˌ ಹಾಗೇನಾದರೂ ಆದಲ್ಲಿ ರಾತ್ರೋರಾತ್ರಿ ಭಾರತ ವಿರೋಧಿಗಳಾಗಿ ಪಾತ್ರಾಂತರವಾಗಿ ತಮ್ಮ ಆ ನವ ನಿರ್ಮಿತ ದೇಶವನ್ನ ತಕರಾರಿಲ್ಲದೆ ಹೀಗೆ ಹಡಬಿಟ್ಟಿ ಹಣ ಸುರಿಯಲು ಕಾದುಕೊಂಡಿರೋ ಪರಕೀಯರಿಗೆ ನಿರ್ಲಜ್ಜರಾಗಿ ತಲೆ ಹಿಡಿಯಲು ಸಹ ಹೇಸರು. ಹೀಗಾಗಿˌ ತಮ್ಮ ಸ್ವಂತಿಕೆಯಿಂದ ಮೇಲೇರಲು ಕಷ್ಟಸಾಧ್ಯವಾಗಿರುವ ಈಶಾನ್ಯದ ಕಿರು ರಾಜ್ಯಗಳನ್ನ ಸಾಕುವ ಅನಿವಾರ್ಯತೆ ಭಾರತ ಸರಕಾರಕ್ಕಿದ್ದೇಯಿದೆ. ನಾವೆಲ್ಲಾದರೂ ನಿರ್ಲ್ಯಕ್ಷಿಸಿ ಕೈ ಬಿಟ್ಟರೆ ನಮಗಾಗದವರು ಕೈ ಹಿಡಿಯಲು ಕಾತರರಾಗಿರುವ ಅಯೋಮಯದ ಪರಿಸ್ಥಿತಿ ಇರೋವಾಗˌ ಸ್ವಲ್ಪ ದುಡ್ಡು ಖರ್ಚಾದರೂ ಸರಿ ಇದೊಂಥರದ "ಅನುದಾನ"ದ ಹೆಸರಿನ ಸಿಹಿ ಸುಳ್ಳನ್ನ ನಮಗೆ ನಾವೆ ಹೇಳಿಕೊಳ್ಳುತ್ತಾ ಸರಕಾರಿ ಪ್ರಾಯೋಜಿತ "ಹಫ್ತಾ" ಸಂದಾಯ ಮಾಡಿಯಾದರೂ ಸರಿ ನಾವು ಆ ಭೂಭಾಗವನ್ನ ಹಿಡಿದಿಟ್ಟುಕೊಳ್ಳದೆ ವಿಧಿಯಿಲ್ಲದಿರುವ ವಿಪರೀತ ಪರಿಸ್ಥಿತಿ.
ಈ ಮುಖ್ಯ ಕಾರಣದಿಂದˌ ಪ್ರವಾಸೋದ್ಯಮ ಹೊರತು ಅಂತಹ ಹೇಳಿಕೊಳ್ಳುವ ಸ್ವಂತದ ಆದಾಯ ಹುಟ್ಟದ ಬಹುತೇಕ ಕೃಷಿ ಪ್ರಧಾನ ಆರ್ಥಿಕತೆಯಲ್ಲೆ ನಡೆಯುತ್ತಿರುವ ಕಡು ಭ್ರಷ್ಟರನ್ನೆ ಒಳಗೊಂಡಿರುವ-ಸ್ಥಳಿಯ ವಂಶಪಾರಂಪರ್ಯ ರಾಜಕಾರಣದ ಬಲಿಪಶುವಾಗಿರುವ ಈ ಎಂಟು ರಾಜ್ಯಗಳನ್ನˌ ಕಟ್ಟಿ ಹಾಕಿಕೊಂಡು ಸಾಕುವ ವಿದೇಶಿ ತಳಿ ಶ್ವಾನಗಳಿಗೆ ನಾಲ್ಕಾಣೆ ಲಾಭವಿಲ್ಲದ ಹೊರತಾಗಿಯೂ ಕೇವಲ ಶೋಕಿಯ ಕಾರಣಕ್ಕೆ ದುಬಾರಿ ದರದ ಪೆಡಿಗ್ರಿ ತಂದು ಸುರಿದು ಸಾಕುವಂತೆˌ ಮನಸಿಲ್ಲದಿದ್ದರೂನು ಭಾರತ "ಅನುದಾನದ ಹೊಳೆ" ಹರಿಸಿ ಕಾಪಿಟ್ಟುಕೊಳ್ಳಲೆಬೇಕು. ಅಲ್ಲಿನ ಆಳುವವರ ಅಂಧಾದುಂಧಿ ಖರ್ಚಿನ ಶೋಕಿಯನ್ನ ನೋಡಿಯೂ ನೋಡಿರದಂತೆ ಕಡೆಗಣಿಸಬೇಕು. ಉದಾಹರಣೆಗೆˌ ತಮ್ಮ ತಮ್ಮ ಸರಕಾರಗಳಿರುವಲ್ಲಿ ಅತ್ಯಂತ ಬೇಜವಬ್ದಾರರಾಗಿ ವರ್ತಿಸುತ್ತಿದ್ದರೂ ಸಹ ಅರುಣಾಚಲ ಪ್ರದೇಶದ ಪೆಮಾ ಖಂಡು-ಮಣಿಪುರದ ಬಿರೇನ್ ಸಿಂಗ್-ಅಸ್ಸಾಮಿನ ಹಿಮಂತ ಬಿಸ್ವಾ ಸರ್ಮನ ಕರ್ಮಕಾಂಡಗಳು ದಿನಕ್ಕೊಂದರಂತೆ ಬಟಾಬಯಲಾಗುತ್ತಿದ್ದರೂ ಕೇಂದ್ರ ಸರಕಾರ ರಾಜಕೀಯ ಕಾರಣಗಳಿಂದ ಮೂರೂ ಮುಚ್ಚಿಕೊಂಡು ಸೂಕ್ತ ಕ್ರಮಗಳನ್ನ ಕೈಗೊಳ್ಳದೆ ಸುಮ್ಮನಿರೋದನ್ನ ಗಮನಿಸಬಹುದು. ಇದು ಅಲ್ಲಿನವರಿಗಿಂತ ನಮಗೆ ಹೆಚ್ಚು ತುರ್ತು. ಮೇಘಾಲಯವೂ ಅಂತಹ ರಾಜ್ಯಗಳ ಪರಿಭಾಷೆಗೆ ಒಳಪಟ್ಟಿದೆ. ಇದರ ಫಲಶ್ರುತಿಯಾಗಿ ಭಾರತದ ಅನುದಾನವನ್ನ ಕೊಳ್ಳೆ ಹೊಡೆದೆ ಕೊಬ್ಬಿರುವ ಸ್ಥಳಿಯ ಪುಢಾರಿಗಳಿಗೂ ಹಾಗೂ ಆ ಅನುದಾನವನ್ನ ಅವರಿಗೆ ತಲುಪಿಸಲು ಸರಕಾರಿ ಸೇವೆಯ ಸೋಗಿನಲ್ಲಿ ದಳ್ಳಾಳಿ ಕಸುಬು ಮಾಡುವ ಅಧಿಕಾರಿ ವರ್ಗಕ್ಕೆ ನಿರಂತರವಾಗಿ ಹಬ್ಬವೋ ಹಬ್ಬˌ ಪರಿಸ್ಥಿತಿಯ ವ್ಯಂಗ್ಯವೇನೆಂದರೆ ವಿಧಿ ವಿಪರೀತಕ್ಕೆ ಬಲಿಪಶುವಾದ ನಾನೂ ಇಂದು ಒಂದಿಲ್ಲೊಂದು ರೂಪದಲ್ಲಿ ಈ ಕೊಳ್ಳೆಕೋರರ ಮಂದೆಯ ಮಧ್ಯದಲ್ಲಿ ಬಂದು ನಿಂತಿದ್ದೇನೆ! ನಿಷ್ಠುರ ನುಡಿಗಳಲ್ಲಿ ಹೇಳಬೇಕಂತಿದ್ದರೆˌ ದೇಶದ ಈಶಾನ್ಯ ಭಾಗದಲ್ಲಿರುವ ಈ ಅಷ್ಟ ರಾಜ್ಯಗಳ ಸಮೂಹ ಒಂಥರಾ ಭಾರತದ ಸೆರಗಲ್ಲಿ ಕಟ್ಟಿಕೊಂಡ ನಿಗಿನಿಗಿ ಕೆಂಡ. ಕಟ್ಟಿಕೊಳ್ಳದೆ ವಿಧಿಯಿಲ್ಲ. ಎತ್ತಿ ಅತ್ತಲಾಗೆ ಎಸೆದು ಸುಡು ಶಾಖದಿಂದ ಪಾರಾಗುವಂತೆಯೂ ಇಲ್ಲ.
ತನ್ನ ಭಡ್ತಿಯ ವಿಚಾರ ಇತ್ಯರ್ಥವಾಗದೆಲೆ ಮುಗಿದ ಮೀಟಿಂಗ್ ಬಗ್ಗೆ ವಿಪರೀತ ಅಸಮಧಾನಗೊಂಡು ದುಸುಮುಸು ಗುಡುತ್ತಲೆ ನಾಗ ಮತ್ತವನ ಸಮಾನ ಮನಸ್ಕ ಸಹುದ್ಯೋಗಿಗಳು ತಮ್ಮ ಮುಂದಿನ ಹೆಜ್ಜೆಗಳ ರೂಪುರೇಷೆಯನ್ನ ಚರ್ಚಿಸಲು ಒಂದಾಗಿ ಅವನ ಕಛೇರಿ ಹೊಕ್ಕು ಬಾಗಿಲು ಝ಼ಡಿದುಕೊಂಡರು. ನ್ಯಾಯವಾಗಿ ನೋಡಿದರೆˌ ಸಚಿವ ಸಂಪುಟ ಸಭೆಯ ನಿರ್ಣಯಗಳ ಅನುಷ್ಠಾನದ ಬಗ್ಗೆ ಆದ್ಯತೆ ನೀಡಿ ಕೂತು ಚರ್ಚಿಸಬೇಕಿರೋ ಹೊತ್ತಿನಲ್ಲಿˌ ಕಛೇರಿಯ ಸಮಯದಲ್ಲೆ ಸರಕಾರಿ ಸವಲತ್ತುಗಳನ್ನ ಬಳಸಿಕೊಂಡೆ ಸಂಜೆ ಹೊತ್ತಿಗೆ "ಆಫಿಸರ್ಸ್ ರಿಕ್ರಿಯೇಷನ್ ಕ್ಲಬ್"ನಲ್ಲಿ ನಡೆಸಬೇಕಿರೋ ಚರ್ಚಾಕೂಟವನ್ನ ಈಗಲೆ ಇಲ್ಲೆ ಏರ್ಪಡಿಸಿಕೊಂಡು ತಮಗಾಗಿರುವ ನಿರಾಸೆಯನ್ನ ಪ್ರಕಟವಾಗಿ ತೋರಿಸುವಲ್ಲಿ ಅವರಿಗ್ಯಾವ ನಗೆ ನಾಚಿಕೆಯೂ ಇರಲಿಲ್ಲ. ಸರಕಾರಿ ವೆಚ್ಚದಲ್ಲಿ ಹನಿಮೂನು ಟ್ರಿಪ್ಪಿಗೆ ಬಂದಂತಾಡುತ್ತಿದ್ದ ಈ ಉನ್ನತಾಧಿಕಾರಿ ವರ್ಗಕ್ಕೆ ಆಡಳಿತದ ಹಿತಾಸಕ್ತಿಗಿಂತˌ ತಮ್ಮ ತಮ್ಮ ವಯಕ್ತಿಕ ಹಿತಾಸಕ್ತಿಯೆ ಸದಾ ಮುಖ್ಯವಾಗುತ್ತಿದ್ದುದು ದುರದೃಷ್ಟಕರ. ಒಟ್ಟಿನಲ್ಲಿˌ ಯಾರದ್ದೋ ದುಡ್ಡಿನಲ್ಲಿ ಇವರೆಲ್ಲರ ಯಲ್ಲಮ್ಮನ ಜಾತ್ರೆ ಆ ಕಾಲದಿಂದ ಅನೂಚಾನವಾಗಿ ವಿಜೃಂಭಣೆಯಿಂದಲೆ ನಡೆದುಕೊಂಡು ಬರುತ್ತಿತ್ತು. ಬಾಳಿನಲ್ಲಿ ಭಾರತೀಯ ಆಡಳಿತ ಸೇವೆಗಳ ಬಗ್ಗೆ ಅಪಾರ ಆದರ್ಶ ಹೊತ್ತು ನಿಯುಕ್ತಿಯಾಗಿ ಇಂತವರಿದ್ದಲ್ಲಿ ಬರುವ ಕಿರಿಯ ಅಧಿಕಾರಿಗಳನ್ನೂ ಸಹ ಆದಷ್ಟು ಬೇಗ ಸಿನಿಕರನ್ನಾಗಿಸಿˌ ಅವರ ಬಾಳ ಧ್ಯೇಯೋದ್ದೇಶಗಳನ್ನೂ ಸಹ ದಾರಿ ತಪ್ಪಿಸಲು ಇಂತಹ ಮೈಗಳ್ಳ ಪರಪುಟ್ಟ ಅಧಿಕಾರಿಗಳು ಯಶಸ್ವಿಯಾಗುತ್ತಿದ್ದರು. ಕಾಲಾಂತರದಲ್ಲಿ ಇಂತವರಿಂದ ಪದೆ ಪದೆ ಕಚ್ಚಿಸಿಕೊಂಡ ಕಿರಿಯ ಶ್ರೇಣಿಯ ಅಧಿಕಾರಿಗಳು ಸಹಜವಾಗಿ ತಾವು ಸೇವಾ ಹಿರಿತನಕ್ಕೇರುವಾಗ ಸಂಪೂರ್ಣವಾಗಿ ಜ಼ಡ್ಡುಗಟ್ಟಿ ಹೋಗಿ ಜೋಂಬಿಗಳಾಗಿ ಪರಿವರ್ತಿತರಾಗುತ್ತಿದ್ದರು.
ತಮ್ಮ ಭಡ್ತಿಯ ಗಂಭೀರ ವಿಷಯವನ್ನ ಘನಘೋರವಾಗಿ ಚರ್ಚಿಸಲು ನೆರೆದಿದ್ದ ಕಾಗೆಗಳ ಗುಂಪಿಗೆ ಮುಖ್ಯಕಾರ್ಯದರ್ಶಿ ಸರ್ಮಾನ ಒಂದು ಗಂಭೀರ ಕರೆ ಕಲ್ಲೆಸೆಯಿತು. ಉಳಿದ ಮೂವರು ಎದ್ದೆನೋ ಬಿದ್ದೆನೋ ಅಂತ ತಮ್ಮ ತಮ್ಮ ಕಛೇರಿಗಳತ್ತ ಓಡಿ ತಲೆಮರೆಸಿಕೊಂಡರೆˌ ಇತ್ತ ಈ ಇತ್ತಲೆ ನಾಗ ಮತ್ತೆ ಬ್ಲೇಜ಼ರ್ ಏರಿಸಿಕೊಂಡು ಕಟ್ಟಿಕೊಂಡಿದ್ದ ಟೈ ಮತ್ತೆ ಸರಿಪಡಿಸಿಕೊಂಡು ಅವಸರವಸರವಾಗಿ ಮತ್ತೆ ಸೆಕ್ರೆಟೆಯೆಟ್ ಕಡೆಗೆ ಸಾಗಲು ಕಾರೇರಿದ. ಕೂ ಹಾಕಿದರೆ ಕೇಳುವಷ್ಟು ದೂರದಲ್ಲಿದ್ದ ನಡೆದೆ ಕ್ಷಣಾರ್ಧದಲ್ಲಿ ಮುಟ್ಟ ಬಹುದಾಗಿದ್ದ ಕಟ್ಟಡಕ್ಕೆ ಹೋಗಲೂ ಸಹ "ಲೆವೆಲ್" ತೋರಿಸುತ್ತಾ ಕಾರಿನ ಸುಖತೂಲಿಕಾತಲ್ಪದ ರಥವೇರಿ ತೇಲಿಕೊಂಡು ಸಾಗುವ ಅವನ ತಿರುಪೆ ಶೋಕಿ ಕಂಡು ಒಳಗೊಳಗೆ ನಗು ಬಂತು. ಹೋಗುವಾಗˌ ಪಡಸಾಲೆಯಲ್ಲಿ ಎದುರಾದ ನನ್ನನ್ನ ನೋಡಿ "ಬಾಬು ನೇನು ತಿರುಗಿ ವಚ್ಚಿನಪ್ಪುಡು ಮೀಕು ಅಫೀಷಿಯಲ್ಗಾ ಬಂಡಿ ಅಲಾಟ್ ಚೇಸ್ತಾನಂಡಿ. ಮೀ ಪಿಎಸ್ನಿ ಪಂಪಿ ರಾವಾಲ್ಸುಂದಿ ಚೆಸುವುಲೇಮುಂದೋ ಚೇಯಕ ಚೆಪ್ಪಂಡಿ. ಕೊತ್ತ ಡ್ರೈವರ್ನಿ ಬಂಡಿತೋ ಪಂಪಿಸ್ತಾ. ಏಮಿ?" ಅಂದು "ಅಲಾಗೆಂಡಿ" ಅನ್ನುವುದನ್ನು ಕೇಳಿಸಿಯೂಕೊಳ್ಳದೆ ತನ್ನ ಪಿಎಸ್ ಜೊತೆ ಮುಂದೆ ಸಾಗಿ ಹೋದ.
ಮುಖ್ಯಮಂತ್ರಿ ಉಪಯೋಗಿಸಿದˌ ಅದೂ ಕಳೆದ ವರ್ಷವಷ್ಚೆ ಕೊಂಡು ಹೆಚ್ಚೆಂದರೆ ಏಳೋ-ಎಂಟೋ ತಿಂಗಳಷ್ಟೆ ಅವರ ಪೋರ್ಟಿಕೋದಿಂದವರನ್ನ ಹೊತ್ತು ಸಾಗಿದ ಆಧುನಿಕ ಕಾರು ಇನ್ನೇನು ನನ್ನದಾಗಲಿತ್ತು! ಪ್ರೊಟೋಕಾಲಿನ ಪ್ರಕಾರ ಅದರ ಮೇಲಿದ್ದ ಜುಟ್ಟಿನಂತಹ ಸೈರನ್ ಬಳಸಲು ನನ್ನ ಅಧಿಕಾರದ ದರ್ಜೆಗೆ ಅನುಮತಿ ಇತ್ತೋ-ಇಲ್ಲವೋ ಗೊತ್ತಿರಲಿಲ್ಲ. ಗಾಡಿ ಕೈಗೆ ಬಂದಾಗ ನೋಡಿಕೊಂಡರಾಯಿತು ಅಂತಂದುಕೊಂಡು ಸುಮ್ಮನಾದೆ. ಅಲ್ಲಾˌ ಬಹಳಷ್ಟು ಹಿರಿಯ ದರ್ಜೆಯ ಅಧಿಕಾರಿಗಳು ಸರದಿಯಲ್ಲಿರುವಾಗಲೂ ಇಷ್ಟು ದುಬಾರಿ ಕಾರನ್ನ ಸಿಬ್ಬಂದಿ ಹಾಗೂ ಶಿಷ್ಟಾಚಾರ ವಿಭಾಗಕ್ಕೆ ಶಿಫಾರಸ್ಸು ಮಾಡಿ ನನ್ನಂತಹ ಪ್ರೊಬೆಷನರಿ ಕಿರಿಯ ಅಧಿಕಾರಿಗೆ ಮಂಜೂರು ಮಾಡಿಸುತ್ತಿರುವ ಮಜುಕೂರು ಏನಂತ ಇನ್ನೂ ಅರ್ಥವಾಗಿರಲಿಲ್ಲ. ಸೂಕ್ತ ಕಾಗದ ಪತ್ರಗಳಿಗೆ ನನ್ನ ಸಹಿ ಪಡೆದು ಕಾರನ್ನ ಮಂಜೂರು ಮಾಡಿಸಲು ಜಿಲ್ಲಾಧಿಕಾರಿಗಳ ಕಛೇರಿಯತ್ತ ನನ್ನ ಆಪ್ತಸಹಾಯಕ ತೆರಳಿದ ನಂತರˌ ಸಂಪುಟ ಸಭೆಗೆ ಕೊಂಡು ಹೋಗಿ ಹಿಂದೆ ತರಿಸಲಾಗಿದ್ದ ಕಡತಗಳನ್ನ ನನ್ನ ಕಛೇರಿಯೊಳಗೆ ತರಿಸಿ ಒಂದೊಂದಾಗಿ ಕಣ್ಣಾಡಿಸುತ್ತಾ ಕೂತುಕೊಂಡೆ. ಗೋಡೆಯ ಮೇಲೆ ತೂಗು ಹಾಕಿದ್ದ ಗಡಿಯಾರ ಸಮಯ ಮೂರೂವರೆಯಾಗಿದ್ದನ್ನ ಖಚಿತ ಪಡಿಸುತ್ತಿತ್ತು. ಈ ಗಡಿಬಿಡಿಯಲ್ಲಿ ಮಧ್ಯಾಹ್ನದ ಊಟ ಮಾಡೋದೆ ಮರೆತು ಹೋಗಿತ್ತು. ಲಾಂಪಾರ್ಗ್ ಹೊತ್ತು ತಂದು ಕಛೇರಿಯಲ್ಲಿರಿಸಿ ಹೋಗಿದ್ದ ಮಧ್ಯಾಹ್ನದ ಊಟ ತುಂಬಿದ್ದ ಟಿಫಿನ್ ಡಬ್ಬಿ ನನ್ನನ್ನ ಕಂಡು ಅಣಕಿಸಿದಂತಾಯಿತು. ಮೀಟಿಂಗಿನ ಮುಂಚಿನ ಸಾಕಿನ್ ಘ್ಹಟ್ಟಾ - ಸಿಂಗಾಡ - ಚಹಾ ಸಮಾರಾಧನೆಯಿಂದ ಹೊಟ್ಟೆ ಹಸಿವೆ ಮರೆತು ಹೋದಂತಾಗಿತ್ತು. ಅಕ್ಕಿಯ ಕಣಕದೊಳಗೆ ಕರಿ ಎಳ್ಳಿನ ಹೂರಣ ತುಂಬಿ ಮಾಡಿದ್ದ ಸಿಹಿ-ಹುಳಿ ರುಚಿಯ ಬೇಕರಿಯ ದಿಲ್ ಪಸಂದಿನಂತಹ ಸಾಕಿನ್ ಘ್ಹಟ್ಟಾದ ಎರಡು ತುಂಡು ಜ಼ಮಾಯಿಸಿ ತಿಂದು ಹೊಟ್ಟೆಗೆ ಮಧ್ಯಾಹ್ನದೂಟದ ಹಸಿವೆಯೆ ಮರೆತು ಹೋಗಿತ್ತು ಬಹುಶಃ.