06 March 2025

"ಹೆಸರೆ ಇಲ್ಲದವರೂರಿನಲ್ಲೊಂದು ಕೊಲೆಯಾದ ಕಥೆ"

"ಹೆಸರೆ ಇಲ್ಲದವರೂರಿನಲ್ಲೊಂದು ಕೊಲೆಯಾದ ಕಥೆ"


ಚಿಕ್ಕಂದಿನಿಂದಲೂ ಅಪರೂಪಕ್ಕೆ ಅಲ್ಲಿಲ್ಲಿ ಸರಕಾರಿ ಅಂಬಾಸಡರ್ ಕಾರಿನಲ್ಲಿ ಓಡಾಡುವ ಜಿಲ್ಲಾಧಿಕಾರಿಗಳನ್ನ ಕಾಣುವಾಗ ನನ್ನೊಳಗೆ ಒಂಥರಾ ಆಕರ್ಷಣೆ ಹುಟ್ಟುತ್ತಿತ್ತು. ಕನಿಷ್ಠ ಬಾಗಿಲುಗಳಿಗೂ ಗತಿಯಿಲ್ಲದ ಹಸಿರು ರಂಗಿನ ಟಾರ್ಪಾಲ್ ಟಾಪಿನ ಒರಟು ಜೀಪಿನಲ್ಲಿ ಅವರೆದುರು ವಿನೀತರಾಗಿ ಹೋಗಿ ನಿಲ್ಲುವ ತಹಶಿಲ್ದಾರರಾಗಲಿ - ಅಂತಹದ್ದೆ ಜೀಪಾಗಿದ್ದರೂ ಬಿಳಿಯ ಗಟ್ಟಿಮುಟ್ಟು ಲೋಹದ ಟಾಪು ಹಾಗೂ ಬಾಗಿಲುಗಳಿದ್ದ ಜೀಪಿನಲ್ಲೆ ಬರುತ್ತಿದ್ದ ಉಪ ವಿಭಾಗಧಿಕಾರಿಗಳಾಗಲಿ ಅಂತಹ ಯಾವೊಂದು ಕುತೂಹಲವನ್ನೂ ಕೆರಳಿಸುತ್ತಿರಲಿಲ್ಲ. 


ಆಗೆಲ್ಲ ನನ್ನದು ಶಾಲೆ ಬಿಟ್ಟು ನಿತ್ಯ ಸಾಯಂಕಾಲ ಸಂಜೆ ಪತ್ರಿಕೆಗಳನ್ನ ಜಿಲ್ಲಾಧಿಕಾರಿ ಕಛೇರಿಯಿಂದ ಹಿಡಿದು ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿˌ ಜಿಲ್ಲಾ ನ್ಯಾಯಾಲಯˌ ಜಿಲ್ಲಾ ಅಭಿವೃದ್ಧಿ ಸಹಕಾರಿ ಬ್ಯಾಂಕು ಹೀಗೆ ಸಾಲಾಗಿ ಎಲ್ಲಾ ಕಡೆಯೂ ದೊಗಳೆ ಖಾಕಿ ಚಡ್ಡಿ ಹಾಕಿಕೊಂಡು ಲಡಕಾಸಿ ಸೈಕಲ್ ತುಳಿದುಕೊಂಡು ತೇಲಾಡುತ್ತಾ ಹೋಗಿ ಹಾಕುವ ಕಾಯಕ. ಅಂತಹ ಸನ್ನಿವೇಶದಲ್ಲಿ ಆಗಷ್ಟೆ ತೊಳೆದಿಟ್ಟಂತಿರುತ್ತಿದ್ದ ಕೊಕ್ಕರೆ ಬಿಳಿ ಅಂಬಾಸಡರಣಿಯಲ್ಲಿ ಕಿಟಕಿಯ ಗಾಜುಗಳಿಗೂ ತೆಳು ನೈಲಾನಿನ ಪರದೆ ಇಟ್ಟುಕೊಂಡಿರುತ್ತಿದ್ದ - ಕಾರೊಳಗೆ ಒಂದಲ್ಲ ಅಂತ ಮೂರ್ಮೂರು ಪುಟ್ಟ ನೀಲಿ ಸೀಲಿಂಗ್ ಫ್ಯಾನುಗಳನ್ನ ಸಿಕ್ಕಿಸಿಕೊಂಡಿರುತ್ತಿದ್ದ ಕರ್ಕಶ ಜೀಪಿನ ಸದ್ದಿನ ಮಧ್ಯೆ ನಯ ನಾಜೂಕಿನಲ್ಲಿ ಹೌದೋ ಅಲ್ಲವೋ ಅನ್ನುವಷ್ಟು ಶಬ್ದ ಹೊರಡಿಸುತ್ತಾ ಬರುವ ಅಂಬಾಸಡರಿನ ಒಡಲಿನಿಂದ ಆಸನಗಳ ಬಿಳಿ ತಲೆ ಒರಗುಗಳಿಂದೀಚೆ ಕಛೇರಿಯ ಪೇದೆ ಇಳಿದು ಬಂದು ತೆಗೆಯುತ್ತಿದ್ದ ಹಾಗೆˌ ಬಾಗಿಲಿನಿಂದೀಚೆ ಠಾಕು ಠೀಕಾಗಿ ಇಳಿದು ಟಕ್ ಟಿಕ್ ಷೂ ಸದ್ದೇಳಿಸುತ್ತಾ ಸಾಗುತ್ತಿದ್ದ ಜಿಲ್ಲಾಧಿಕಾರಿಗಳನ್ನ ಕಾಣುವಾಗˌ ನಾನೂ ಹೀಗಾಗಬೇಕು ಅನ್ನಿಸುತ್ತಿದ್ದುದು ಅದೆಷ್ಟು ಸಲವೋ!



ಶಿವಮೊಗ್ಗದ ಹಳೆ ಸೇತುವೆ ಕೆಳಗಿನ ತುಂಗೆ ಹರಿದು ಹೋದಷ್ಟೆ ವೇಗವಾಗಿ ಕಾಲವೂ ಸರಿದು ಹೋಗಿˌ ಓದಿನ ನಿರಂತರತೆಗೆ ಒದಗಿ ಬಂದ ನಾನಾ ವಿಧಗಳ ಅಡೆತಡೆಗಳನ್ನೆಲ್ಲ ದಾಟಿ ಏಗಿ ಕೊಂಡು ಲೋಕದ ಕಣ್ಣಿಗೊಂದು ವೈದ್ಯಕೀಯ ಪದವಿ ರಾಚಿದರೂˌ ನನ್ನೊಳಗಿನ "ಜಿಲ್ಲಾಧಿಕಾರಿ"ಯಾಗುವ ದಾಹ ಕಿಂಚಿತ್ತೂ ಇಳಿದಿರಲಿಲ್ಲ. ಆದರೆ ಜಿಲ್ಲಾಧಿಕಾರಿಯಷ್ಟೆ ಅಲ್ಲ ಅದಕ್ಕಿಂತ ಆಕರ್ಷಕವಾದ ಸರಕಾರಿ ಹುದ್ದೆಗಳು ಇನ್ನೂ ಅನೇಕ ಇವೆ ಅನ್ನುವ ಜ್ಞಾನೋದಯ ಶಿವಮೊಗ್ಗವೆಂಬ ಬಾವಿಯ ಕಪ್ಪೆಯಾಗಿದ್ದವನಿಗೆ ಬೆಂಗಳೂರೆಂಬ ಸಮುದ್ರ ಕಂಡ ಮೇಲಾಗಿತ್ತು.


ಪರಿಶ್ರಮದ ಫಲವಾಗಿ ಕಡೆಗೂ ಭಾರತ ಆಡಳಿತ ಸೇವೆಯನ್ನ ಸೇರಲು ಮತ್ನಾಲ್ಕು ವರ್ಷಗಳು ಹಿಡಿದವು. ಪ್ರಾಯ ಚಿಕ್ಕದಾದರೂ ಸಹˌ ಜವಬ್ದಾರಿ ದೊಡ್ಡದಾಗಿತ್ತು. ಸಿಗುತ್ತಿದ್ದ ಸಾರ್ವಜನಿಕ ಗೌರವ ವ್ಯಕ್ತಿಯಾದ ನನಗಲ್ಲ - ಅದು ಆ ಹುದ್ದೆಯಿಂದ ಆದ ಕೃಪೆ ಅಂತ ಬಹುಬೇಗ ಅರಿತುಕೊಂಡೆ. ಮೌಖಿಕ ಸಂದರ್ಶನದಲ್ಲೂ ಉತ್ತೀರ್ಣನಾದ ಮೇಲೆ ಕೇರಳ-ಮೇಘಾಲಯ-ಪಶ್ಚಿಮ ಬಂಗಾಳ-ಗುಜರಾತ್ ರಾಜ್ಯಗಳ ಸೇವೆಯ ಆಯ್ಕೆ ಇತ್ತು. ಅದ್ಯಾಕೋ ನಿರ್ದಿಷ್ಟ ಕಾರಣಗಳಿಲ್ಲದೆ ಮೇಘಾಲಯದ ಕೇಡರ್ ಆಯ್ದುಕೊಂಡು ಮಸ್ಸೂರಿಯ ತರಬೇತಿ ಅವಧಿಯ ನಂತರ ಅಧಿಕಾರ ಹಂಚಿಕೆಗಾಗಿ ನೇರ ಶಿಲ್ಲಾಂಗಿನ ಹಾದಿ ಹಿಡಿದೆ. 


ಪೂರ್ವ ಖಾಸಿ ಜಿಲ್ಲೆಯ ಉಪ ವಿಭಾಗಧಿಕಾರಿಯಾಗಿ ಮೊದಲ ಹುದ್ದೆ ದೊರಕಿತ್ತು. ಅರಿಯದೂರು - ಅರ್ಥವಾಗದ ಭಾಷೆ - ಅಪರಿಚಿತ ಮುಖಚರ್ಯೆಯ ಮಂದಿಯ ಮಧ್ಯೆ ಅಧಿಕಾರಿಯಾಗಿ ವೃತ್ತಿ ಬದುಕಿನ ಶುರುವಾದ ತಿಂಗಳು ಅಲ್ಲಿ ಜ಼ಡಿಮಳೆಯ ಮಾನ್ಸೂನಿನ ಅಗೋಸ್ತಿನ ಆರಂಭದ ದಿನಗಳು. ಮೇಘಾಲಯದಷ್ಟೆ ಮಳೆ ಕಾಣುವ ಮಲೆನಾಡಿನವನಾಗಿದ್ದವನಿಗೆ ಅಲ್ಲಿನ ಮಳೆಯೇನೂ ರೇಜಿಗೆ ಹುಟ್ಟಿಸಲಿಲ್ಲ. ಹಂಚಿಕೆಯಾಗಿದ್ದ ಭೂತಬಂಗಲೆಯಷ್ಟು ವಿಶಾಲವಾದ ಸರಕಾರಿ ಬಂಗಲೆಯೂ ಅಂತಹ ವಿಶಾಲ ಕೋಣೆಗಳ ವಿದ್ಯಾರ್ಥಿ ನಿಲಯಗಳಲ್ಲೆ ಬಹುಪಾಲು ವಿದ್ಯಾರ್ಥಿ ಜೀವನ ಕಳೆದಿದ್ದವನಿಗೆ ಭಯವನ್ನೂ ಸಹ ಹುಟ್ಟಿಸಲಿಲ್ಲ. ಒಬ್ಬಂಟಿಯಾಗಿದ್ದವನ ಸೇವೆಗೆ ಅಡುಗೆಯವನೂ ಸೇರಿ ಮೂರು ಮಂದಿ ಸರಕಾರಿ ಆಳುಗಳು ಅಲ್ಲಿದ್ದರೂ ಭಾಷೆ ಬಾರದೆ ಪರಸ್ಪರ ಕೈ ಸನ್ನೆ ಬಾಯ್ಸನ್ನೆಯಲ್ಲೆ ಸಂವಹನ ನಡೆಸುವ ಅನಿವಾರ್ಯತೆ ಬೇರೆ ಇತ್ತು.


ಆದಷ್ಟು ಬೇಗ ಖರ್ಚಿಗೆ ಸಾಕಾಗುವಷ್ಟು ಖಾಸಿ ಹಾಗೂ ಗ್ಹಾರೋದಲ್ಲಿ ವ್ಯವಹರಿಸೋದನ್ನ ಕಲಿಯದೆ ವಿಧಿಯಿರಲಿಲ್ಲ. ಸ್ಥಳಿಯ ಶಿಕ್ಷಕರ್ಯಾರಾದರೂ ಈ ನಿಟ್ಟಿನಲ್ಲಿ ಮನೆಪಾಠ ಕೊಟ್ಟು ಸಹಕರಿಸಬಹುದೆ ಅಂತ ಕಛೇರಿಯಲ್ಲಿ ಆಪ್ತ ಕಾರ್ಯದರ್ಶಿಗೆ ಕೋರಿಕೊಂಡಿದ್ದೆ. ದೂರದ "ಮದ್ರಾಸಿ"ನಿಂದ ಬಂದ ಮದರಾಸಿ ಅಧಿಕಾರಿ ಸ್ಥಳಿಯ ಭಾಷೆ ಕಲಿಯಲು ಇಷ್ಟು ಉತ್ಸುಕನಾಗಿರೋದನ್ನ ಕಂಡು ಉತ್ತೇಜಿತನಾದ ಆತನೂ ಆದಷ್ಟು ಶೀಘ್ರವಾಗಿ ಅದಕ್ಕೊಂದು ವ್ಯವಸ್ಥೆ ಮಾಡುವುದಾಗಿ ಹೇಳಿ ಹರ್ಷವನ್ನ ಮುಚ್ಚಿಡಲಾಗದಂತೆ ತನ್ನ ಕಣ್ಣುಗಳೆರಡು ಅದೆಲ್ಲೋ ಆಳದಲ್ಲಿ ಮುಚ್ಚಿ ಹೋಗಿದ್ದಂತ ಮುಖದಲ್ಲಿ ವ್ಯಕ್ತಪಡಿಸಿದ್ದು ಕಂಡಿತು.

***********


ತರಬೇತಿಯ ಅವಧಿಯಲ್ಲಿ ಚೂರುಪಾರು ಖಾಸಿ ಕಲಿಸಿಕೊಟ್ಟದ್ದು ಹೌದಾದರೂ ಸ್ಥಳಿಯರ ಭಾಷಾ ಬಳಕೆಯ ಮುಂದೆ ಅಲ್ಲಿನ ಕಲಿಕೆ ಮೂರು ಕಾಸಿಗೂ ಉಪಯೋಗಕ್ಕೆ ಬರಲಿಲ್ಲ. ಕಛೇರಿಯಲ್ಲಾಗಲಿ ಮನೆಯಲ್ಲಾಗಲಿ ಸಿಬ್ಬಂದಿಗಳೊಡನೆ ಸಂವಹಿಸುವಾಗ ಕೆಲವೊಮ್ಮೆ ನರಳಿದಂತೆ ಅವರಾಡುತ್ತಿದ್ದ "ಬಟ್ಲರ್ ಇಂಗ್ಲೀಷ್"ಗೆ ಕಿರಿಕಿರಿ ಹುಟ್ಟಿ ಅಪ್ರಚೋದಿತವಾಗಿ ಕನ್ನಡದಲ್ಲೆ ಉತ್ತರಿಸಿ ಬಿಡುತ್ತಿದ್ದೆ. ನನ್ನ "ಮದ್ರಾಸಿ" ಭಾಷೆ ಅರ್ಥವಾಗದೆ ಮುಖದಲ್ಲಿ ಇದೆಯೋ ಇಲ್ಲವೋ ಅನ್ನುವಷ್ಟು ಸಣ್ಣದಾಗಿರುತ್ತಿದ್ದ ಅವರ ಕಣ್ಣುಗಳನ್ನ ಪಿಳಿಪಿಳಿ ಬಿಟ್ಟು ಕಕ್ಕಾಬಿಕ್ಕಿಯಾಗುವ ಸರದಿ ಆಗ ಅವರದ್ದಾಗಿರುತ್ತಿತ್ತು.


ಇಡಿ ಮೇಘಾಲಯವೆ ಗುಡ್ಡಗಾಡು ರಾಜ್ಯ. ಅಲ್ಲಿನ ಜನಸಂಖ್ಯೆಯ ನೂರಕ್ಕೆ ನೂರರಷ್ಟು ಮಂದಿ ಬುಡಕಟ್ಟು ಜನಾಂಗೀಯರು. ಇರೋ ನಾಲ್ಕೆ ನಾಲ್ಕು ಜಿಲ್ಲೆಗಳೂ ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಳ್ಳುವ ಕಾರಣ ಗುಡ್ಡಗಾಡು ಆಡಳಿತದ ವಿಶೇಷಧಿಕಾರಗಳು ಅಧಿಕಾರಿಗಳಿಗೆ ಇವೆ. ಪೊಲೀಸ್ ಸೇವೆಯಲ್ಲಿ ಖಾಸಿ - ಗ್ಹಾರೋ ಬುಡಕಟ್ಟಿನವರಿಗೆ ಪ್ರಾತಿನಿಧ್ಯ ಅತಿಯಾಗಿ ನೀಡಿದ್ದ ಹೊತ್ತಿಗೆ ಆಡಳಿತ ಸೇವೆಯ ನಿರ್ಣಾಯಕ ಹುದ್ದೆಗಳಲ್ಲಿ ಸ್ಥಳಿಯರ ಪಾತ್ರ ಬಹುತೇಕ ಇಲ್ಲವೆ ಇಲ್ಲ ಅನ್ನುವಷ್ಟು ನಗಣ್ಯ. ಹೀಗಾಗಿ ಗುಂಪುಗಾರಿಕೆ - ಸ್ವ ಬುಡಕಟ್ಟಿನ ಪರ ವಿಶೇಷ ಕಾಳಜಿ ವಹಿಸುವ ಆರೋಪಗಳು ಏಳುವ ಅಪರಾಧ ಪ್ರಕರಣಗಳಲ್ಲಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರೋ ನಾಗರೀಕ ಸೇವಾ ಅಧಿಕಾರಿಗಳನ್ನೆ ತನಿಖಾಧಿಕಾರಿಗಳನ್ನಾಗಿ ತತ್ಕಾಲಿಕ ಹೆಚ್ಟುವರಿ ಜವಬ್ದಾರಿ ವಹಿಸೋದು ಅಲ್ಲಿನ ಕ್ರಮ. ಬೇರೆ ರಾಜ್ಯಗಳ ಹಿನ್ನೆಲೆಯ ಈ ಸ್ಥಳಿಯರಲ್ಲದ ಅಧಿಕಾರಿಗಳು ನಿರ್ಮಮವಾಗಿ ತಮ್ಮ ಕರ್ತವ್ಯ ನಿರ್ವಹಿಸಿಯಾರು ಅನ್ನೋ ಆಶಯದಿಂದ ಮಾಡುವ ಈ ವ್ಯವಸ್ಥೆಯೇನು ಅಂದುಕೊಂಡಷ್ಟು ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತದೆ ಅಂತೇನಲ್ಲ.


ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಗುವಂತೆ ಗುರತರ ಅಪರಾಧ ಪ್ರಕರಣಗಳಲ್ಲಿ ಸ್ಥಳಿಯನಲ್ಲ ಅನ್ನುವ ಏಕೈಕ ವೈಶಿಷ್ಟ್ಯದ ಲಾಭ ಪಡೆದುಕೊಳ್ಳುವ ಹೊರಗಿನೂರ ಅಧಿಕಾರಿಗಳು ಇತ್ತಂಡಗಳನ್ನೂ ಸುಲಿದು ಬ್ರಹ್ಮಾಂಡ ಭ್ರಷ್ಟಾಚಾರವೆಸಗಿˌ ದೇಶದ ಆಂತರಿಕ ಭದ್ರತೆ - ಮಾದಕದ್ರವ್ಯ ಕಳ್ಳ ಸಾಗಣೆ - ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರದಂತಹ ಪ್ರಕರಣಗಳ ವಿಚಾರಣಾ ಮೇಲುಸ್ತುವರಿಯಲ್ಲಿ ಸಾಕು ಸಾಕೆನ್ನುವಷ್ಟು ಹಣವನ್ನ ಕೊಳ್ಳೆ ಹೊಡೆಯುವುದೂ ಇದೆ. ವ್ಯವಸ್ಥೆಯ ಹುಳುಕು ಹೀಗಿದ್ದರೂ ಸಹ ಹೋಲಿಕೆಯಲ್ಲಿ ಅದು ಹೆಚ್ಚು ನಿಶ್ಪಕ್ಷಪಾತಿ ಅನ್ನುವ ಭ್ರಮೆಯಲ್ಲಿ ಇದೆ ಕ್ರಮವನ್ನ ಪ್ರತಿಯೊಬ್ಬರೂ ನಂಬಿ ಅನುಸರಿಸುತ್ತಿದ್ದರು.


ಪ್ರೊಬೆಷನರಿ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನನಗೂ ಹೀಗೊಂದು ಹೆಚ್ಚುವರಿ ವ್ಯಾಪ್ತಿ ಮೀರಿದ ಅಧಿಕಾರ ಚಲಾಯಿಸುವ ಅವಕಾಶ ಬಂದರೂ ಆಶ್ಚರ್ಯ ಪಡುವಂತಿರಲಿಲ್ಲ. ಮಲೆನಾಡಿನ ಮಲತಂಗಿಯಂತಿದ್ದ ಮೇಘಾಲಯದ ವಾತಾವರಣ ತೀರ್ಥಹಳ್ಳಿಯಂತಹ ಏರುತಗ್ಗಿನ ಭೂಲಕ್ಷಣದ ಊರಿಂದ ಬಂದ ನನಗೆ ಮೊದಲ ದಿನದಿಂದಲೆ ಪರಕೀಯ ಭಾವನೆ ಹುಟ್ಟಿಸಲಿಲ್ಲ. ನಮ್ಮೂರ ಕಾಡುಗಳಲ್ಲಿ ಕಾಡುಪ್ರಾಣಿಗಳೂ ಇದ್ದಾವೆˌ ಆದರೆ ಇಲ್ಲಿನ ಚೈನೀಸುಗಳ ಒಡಹುಟ್ಟಿದಂತಿರೋ ಸಣ್ಣ ಕಣ್ಗಳ ಚಿಂಗ್ ಚಾಂಗ್ ತಳಿಯ ಸ್ಥಳಿಯರು ಅಳಿಯದಿರೋ ಕಾಡಿನಲ್ಲಿ ಒಂದೆ ಒಂದು ವನ್ಯಜೀವಿಯನ್ನೂ ಉಳಿಸಿರದೆ ಕಬಳಿಸಿ ತಿಂದು ತೇಗಿಯಾಗಿದೆ ಅನ್ನುವ ಒಂದೆ ಒಂದು ಪ್ರಮುಖ ವ್ಯತ್ಯಾಸದ ಹೊರತುˌ ಬಾಕಿ ಉಳಿದಂತೆ ಇದು ಮಲೆನಾಡಿನ ಪಡಿಯಚ್ಚಿನಂತೆಯೆ ಭಾಸವಾಯಿತು.


ರಾಜ್ಯದ ರಾಜಧಾನಿಯಲ್ಲೆ ಕರ್ತವ್ಯ ನಿರ್ವಹಿಸಲು ಆರಂಭಿಸಿದ್ದ ಕಾರಣದಿಂದ ಸಹಜವಾಗಿ ಅಲ್ಲಿನ ಸಾಮಾಜಿಕ ವೈವಿಧ್ಯತೆಯ ಕುರಿತು ನಾನು ಆರಂಭಿಕ ಅಜ್ಞಾನಿಯಾಗಿದ್ದೆ. ಆದರದನ್ನ ತೋರಿಸಿಕೊಳ್ಳದೆ ಎದುರಿರುವ ಸ್ಥಳಿಯ ಕೈ ಕೆಳಗಿನ ಅಧಿಕಾರಿಗಳಿಗಳ ಕೈಗೆ ನನ್ನ ಜುಟ್ಟು ಸಿಗದಂತೆ ನನ್ನ ಹುದ್ದೆಯ ಘನತೆಯನ್ನ ಕಾಪಾಡಿಕೊಳ್ಳಲು ಹೆಣಗಾಡುತ್ತಲೆ ನನ್ನ ವೃತ್ತಿ ಬದುಕು ಕಣ್ತೆರೆದಿತ್ತು. ನನ್ನ ಮೇಲಾಧಿಕಾರಿ ಜಿಲ್ಲಾಧಿಕಾರಿಯಾಗಿದ್ದ ನಾಗೇಶ್ವರ ರಾವು ಕಡಪದಿಂದ ಅಲ್ಲಿಗೆ ಬಂದಿದ್ದ ತೆಲುಗು ಬಿಡ್ಡ. ಮೈತುಂಬಾ ಭ್ರಷ್ಟಾಚಾರದ ಬೆರಣಿ ತಟ್ಟಿಸಿಕೊಂಡಿದ್ದ ಆಸಾಮಿ ಹೆಸರಿಗೆ ತಕ್ಕಂತೆ ಹೆಡೆಯಾಡಿಸುವ ನಾಗೇಶ್ವರನೆ ಆಗಿದ್ದˌ ಆದರೆ ಎರಡು ತಲೆಯ ನಾಗ.


ಎದುರಾಗೋವಾಗ ಯಾವತ್ತೂ ಸ್ಥಳಿಯ ರಾಜಕಾರಣಿಗಳ ಹಾಗೂ ಕಛೇರಿಯ ಕೆಳ ವರ್ಗಗಳ ಸಿಬ್ಬಂದಿಗಳ ಜೊತೆಗೆ ನಗುಮೊಗದಿಂದಲೆ ವ್ಯವಹರಿಸುತ್ತಿದ್ದ ರಾವು ಒಳಗೊಳಗೆ ಭಯಂಕರ ಜನಾಂಗೀಯ ದ್ವೇಷಿಯಾಗಿದ್ದ. ಮೇಘಾಲಯದ ಬುಡಕಟ್ಟಿನವರನ್ನ ಚೀನಾದವರೆಂದೆ ಪರಿಭಾವಿಸಿಕೊಂಡಿದ್ದ ನಾಗೇಶ್ವರನ ಸೀಳು ನಾಲಗೆ ಖಾಸಗಿಯಾಗಿ ನಮ್ಮಂತಹ ಹೊರಗಿನˌ ಅದರಲ್ಲೂ ದಕ್ಷಿಣ ಭಾರತೀಯರ ಜೊತೆಗಿನ ಸಂವಾದದಲ್ಲಿ ಸ್ಥಳಿಯರ ಬಗ್ಗೆ ಧಾರಾಳವಾಗಿ ವಿಷ ಕಕ್ಕುತ್ತಿತ್ತು. "ಚೂಡಂಡಿ ಬಾಬು ಆಕಳಿಸ್ತೆ ಕುಕ್ಕಲನು ತಿನೆ ಈ ಕುಕ್ಕಲನು ಇರುವೈ ಸಂವತ್ಸರನನಿಂಚಿ ದಗ್ಗರಗಾ ಚೂಸ್ತುನ್ನˌ ಇಂಕ ಮುರಿಕಿ ವಾಳ್ಳಪೈ ಮೀಕು ತೆಲಯನಿ ಸಂಗತಿಲು ಚಾಲ ಉನ್ನಾಯಿ. ಏಮೈನ ಜಾಗ್ರತಗ ಉಂಡಂಡಿ" ಅಂತ ಪುಗಸಟ್ಟೆ ಜ್ಞಾನವನ್ನ ಅವಕಾಶ ಸಿಕ್ಕಾಗಲೆಲ್ಲಾ ದಯಪಾಲಿಸುತ್ತಿತ್ತು ಪ್ರಾಣಿ.



ನಾಗೇಶ್ವರ ರಾವಿಗೆ ಈ ಪರಿ ಈಶಾನ್ಯ ಭಾರತೀಯರೊಂದಿಗೆ ಅಸಮಧಾನ ಏರ್ಪಡಲು ಮೂಲ ಕಾರಣ ಏನಿರಬಹುದು ಅನ್ನೋ ಪ್ರಶ್ನೆ ಕಡೆಗೂ ಬಗೆಹರಿಯದ ಒಗಟಾಗಿಯೆ ಉಳಿಯಿತು. ಡೆಪ್ಯುಟೇಷನ್ ಮೇಲೆ ಕೇಂದ್ರ ಸೇವೆಯ ನೆಪದಲ್ಲಿ ಡೆಲ್ಲಿಗೆ ವರ್ಗಾವಣೆ ಪಡೆದು ಶಾಶ್ವತವಾಗಿ ಶಿಲ್ಲಾಂಗ್ ಬಿಟ್ಟು ಹೋಗುವವರೆಗೂ ಅವನ ಅಸಹನೆಯ ಮಟ್ಟವಂತೂ ಚೂರೂ ಇಳಿದಿರೋದು ಕಾಣ ಸಿಗಲಿಲ್ಲ. ನನ್ನ ವೃತ್ತಿ ಬದುಕಿನಲ್ಲಂತೂ ಆ ಪರಿ ರೇಜಿಗೆಗೊಳ್ಳಲು ಅವರು ಅರ್ಹರು ಅಂತ ನನಗಂತೂ ಯಾವತ್ತೂ ಅನಿಸಲಿಲ್ಲ. ಸರಳವಾಗಿ ಹೇಳಬೇಕೆಂದರೆ ಇಲ್ಲಿ ಜನಾಂಗೀಯ ದ್ವೇಷಿಯೂ - ಹುಟ್ಟೂರಲ್ಲಿ ಜಾತಿ ತಾರತಮ್ಯಕೋರನೂ ಆಗಿದ್ದ ನಾಗೇಶ್ವರ ರಾವು ಮಾನಸಿಕವಾಗಿ ಒಳಗೊಳಗೆ ಕೊಳೆತಿದ್ದ ಅಷ್ಟೆ.


*********ˌ


ಭಾರತದ ಈಶಾನ್ಯ ರಾಜ್ಯಗಳಲ್ಲಿ ನಾಯಿ ಮಾಂಸದ ಭಕ್ಷಣೆಯ ಚಪಲ ಚಿತ್ತ ಬುಡಕಟ್ಟುಗಳು ಇರೋದು ನಿಜವಾದರೂ ಮೇಘಾಲಯ ಹಾಗೂ ತ್ರಿಪುರ ಸಂಪೂರ್ಣವಾಗಿ ಇದಕ್ಕೆ ಹೊರತು. ಅವಿಭಜಿತ ಬಂಗಾಳದ ವಿಸ್ತರಿತ ಭಾಗವಾಗಿದ್ದ ತ್ರಿಪುರದ ಪಾಳೆಪಟ್ಟಿನಲ್ಲಿ ಅದೆ ಕಾರಣಕ್ಕೆ ಇಂದೂ ಉಳಿದು ಬಂದಿರುವ ಬಂಗಾಳಿ ಸಂಸ್ಕೃತಿಯ ಕಾರಣ ಅದು ನಿಶಿದ್ಧವಾಗಿದ್ದರೆˌ ಮೇಘಾಲಯದ ಬುಡಕಟ್ಟಿನವರೆಂದೂ ನಾಯಿ ಮಾಂಸ ಭಕ್ಷಣೆಯನ್ನ ರೂಢಿಸಿಕೊಳ್ಳುವ ಗೋಜಿಗೆ ಹೋಗಲೆ ಇಲ್ಲ. ಬ್ರಿಟಿಷರ ಕಾಲದ ಈಶಾನ್ಯ ಪ್ರದೇಶದ ರಾಜಧಾನಿ ಇದೆ ಶಿಲ್ಲಾಂಗ್ ಆಗಿತ್ತು. ಇದು ಆ ಪ್ರದೇಶದ ನೈಋತ್ಯ ಭಾಗ. ಪೂರ್ವ ಹಾಗೂ ಆಗ್ನೇಯ ದಿಕ್ಕಿನವರ ಆಚಾರ - ವಿಚಾರˌ ಆಹಾರ ಪದ್ಧತಿಗಳಿಂದ ಇವರದ್ದು ಸಂಪೂರ್ಣವಾಗಿ ವಿಭಿನ್ನ. ಪ್ರದೇಶವಾರು ವಿಭಜನೆಯಾದ ಅಸ್ಸಾಂ ನೂತನವಾಗಿ ಏಳು ವಿಭಿನ್ನ ರಾಜ್ಯಗಳಾಗಿ ಎಪ್ಪತ್ತರ ದಶಕದಲ್ಲಿ ಮೇಲ್ದರ್ಜೆಗೇರಿದಾಗ ಅದರ ಪಾರಂಪಾರಿಕ ರಾಜಧಾನಿಯಾಗಿದ್ದ ಶಿಲ್ಲಾಂಗ್ ನಾಲ್ಕು ಜಿಲ್ಲೆಗಳ ರಾಜ್ಯ ಮೇಘಾಲಯದ ಪಾಲಾಗಿತ್ತು.



ಕನಿಷ್ಠ ಈ ಸರಳ ಸಂಗತಿಯನ್ನೂ ಅರಿಯದ ನಾಗೇಶ್ವರ ರಾವುಗಳಂತಹ ಜಂತುಗಳು ಇಪ್ಪತ್ತಲ್ಲ ಇನ್ನೂರು ವರ್ಷ ಒಂದೆ ಸ್ಥಳದಲ್ಲಿ ಝ಼ಂಡಾ ಊರಿಕೊಂಡಿದ್ದರೂ "ಮಾನವ"ರಾಗೋದು ದೂರದ ಮಾತು. ಸಮಯ ದೊರೆತಾಗಲೆಲ್ಲ ಸ್ಥಳಿಯರನ್ನ ಮನಸ್ಪೂರ್ತಿಯಾಗಿ ಹೀಯ್ಯಾಳಿಸುವ ಚಾಳಿಯಿದ್ದ ಆ ಮೇಲಧಿಕಾರಿಯೆಂಬ ಪ್ರಾಣಿ "ಈ ಕುಕ್ಕಲನು ತಿನೆ...." ಮಂತ್ರವನ್ನ ತಪ್ಪದೆ ಪಠಿಸುವಾಗ "ಅಟ್ಲ ಲೇದಂಡಿ ರಾವುಗಾರುˌ ಈ ಈಶಾನ್ಯಮುಲ ಪ್ರಜಲಂತ ಒಕೆ ಮಾದರಿ ಸಂಸ್ಕಾರವಂತುಲು ಕಾದು. ಅನ್ನಂ ತಪ್ಪ ವಾಟಿ ಮಧ್ಯಲೋ ತಿನೆ ಆಹಾರಂಲೋ ಚಾಲ ತೇಡಲುನ್ನಾಯಿ. ಇಕ್ಕಡ ಈ ಮನಿಷುಲು ಅವು ಮರಿ ಪಂದಿ ಮಾಂಸಲನು ಬಾಗ ಇಷ್ಟಪಡಿ ತಿನ್ತಾರು ತಪ್ಪˌ ಕುಕ್ಕಲನು ಎಪ್ಪಡಕಿ ಕಾನಿ ತಿನಲೇರಂಡಿ." ಅಂತ ತಿದ್ದಬೇಕೆಂದು ಅನಿಸುತ್ತಿದ್ದರೂ. ಎಲ್ಲಿ ನನ್ನ ಈ ತಿದ್ದುಪಡಿಯನ್ನ ವಯಕ್ತಿಕ ಅವಮಾನವನ್ನಾಗಿ ಪರಿಗಣಿಸುವ ಈ ಇತ್ತಲೆ ನಾಗ ಅವಕಾಶ ನೋಡಿಕೊಂಡು ನನ್ನನ್ನೆ ಎಲ್ಲಿ ಕಚ್ಚಿಯಾನೋ ಎಂಬ ವಾಸ್ತವದರಿವಿರುವ ಕಾರಣ ಕಷ್ಟಪಟ್ಟು ಬಾಯಿ ಮುಚ್ಚಿಕೊಂಡು ಸುಮ್ಮನಾಗುತ್ತಿದ್ದೆ.



ಮೇಘಾಲಯದ ಒಟ್ಟು ಜನಸಂಖ್ಯೆಯಲ್ಲಿ ಸರಿಸುಮಾರು ತೊಂಬತ್ತರಷ್ಟು ಮಂದಿ ಖಾಸಿ ಹಾಗೂ ಗ್ಹಾರೋ ಬುಡಕಟ್ಟಿನವರೆ ಆಗಿದ್ದರೂˌ ಹಜೋ಼ಂಗ್-ಕೋಛ್-ರಬಾ಼ದಂತಹ ಅಲ್ಪಸಂಖ್ಯಾಂತರ ಬುಡಕಟ್ಟುಗಳೂ ಸಹ ಅಲ್ಲಿವೆ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇಖಡಾ ಐವತ್ತರಷ್ಟು ಮಂದಿ ಖಾಸಿಗಳೆ. ಅವರಿಗಿಂತ ಚೂರು ಕಡಿಮೆ ಸಂಖ್ಯೆಯಲ್ಲಿ ಗ್ಹಾರೋಗಳಿದ್ದಾರೆ. ಬ್ರಿಟಿಷರ ಕಾಲದಲ್ಲಿ ಕ್ರೈಸ್ತ ಮಿಷನರಿಗಳಿಗೆ ಮುಕ್ತ ಅವಕಾಶಗಳನ್ನ ಒದಗಿಸಿದ್ದ ಕಾರಣ ಧಾರ್ಮಿಕ ಮತಾಂತರ ನಿರಾತಂಕವಾಗಿ ನಡೆದು ರಾಜ್ಯದ ಮುಕ್ಕಾಲುವಾಸಿ ಮಂದಿ ಕ್ರೈಸ್ತರಾಗಿ ಮತಾಂತರಿತವಾಗಿದ್ದಾರೆ. ಇನ್ನುಳಿದವರಲ್ಲಿ ಅರ್ಧದಷ್ಟು ಮಂದಿ ಬಂಗಾಳಿ ಸಂಸ್ಕೃತಿ ಪ್ರಭಾವದಿಂದ ಕಾಳಿಯನ್ನ ಆರಾಧಿಸೋ ಹಿಂದೂಗಳು. ಅಳಿದುಳಿಯುವ ಹನ್ನೆರಡು ಶೇಖಡಾ ಮಂದಿಯಲ್ಲಿ ವಿಭಜನೆಯ ಕಾಲಕ್ಕೆ ಬಾಂಗ್ಲಾದಿಂದ ಇತ್ತ ವಲಸೆ ಬಂದ ಸಾಬರು ಹಾಗೂ ಹಳೆಯ ಬುಡಕಟ್ಟು ಸಂಸ್ಕಾರಗಳಿಗೆ ಮಾತ್ರ ಬದ್ಧವಾಗಿರುವವರು ಇದ್ದಾರೆ.


ಬುಡಕಟ್ಟು ಯಾವುದಾದರೂನು ಕ್ರೈಸ್ತರಾಗಿ ಮತಾಂತರಿತರಾದ ನಂತರವೂ ಸಹ ಹಳೆಯ ಬುಡಕಟ್ಟು ಆಚರಣೆಗಳನ್ನ ಬಿಟ್ಟುಕೊಡದೆˌ ಅವುಗಳ ಸಂಪ್ರದಾಯಗಳನ್ನೂ ಸಹ ಪಾಲಿಸಿಕೊಂಡು ಬಾಳುವ ವಿಚಿತ್ರ ಧಾರ್ಮಿಕ ಸಂಸ್ಕಾರ ಇಲ್ಲಿನವರದ್ದು. ಪಾರಿವಾಳದ ಮಾಂಸˌ ಬಾತುಕೋಳಿ ಮಾಂಸˌ ಕೋಳಿ ಮಾಂಸ ಹಾಗೂ ಹಂದಿ ಮಾಂಸದ ಖಾದ್ಯಗಳು ಸಾಂಕ್ರಾಮಿಕವಾಗಿರುವ ಇವರ ಅಡುಗೆಮನೆಯಲ್ಲಿ ದನದ ಹೋಲಿಕೆಯ ಮಿಥುನ್ ಮಾಂಸದ ಬಳಕೆಯೂ ಅಷ್ಟೆ ಪ್ರಚಲಿತದಲ್ಲಿದೆ. ಇನ್ನುಳಿದ ಈಶಾನ್ಯ ರಾಜ್ಯಗಳ ಜನರಂತೆ ಸಸ್ಯಾಹಾರಕ್ಕಿಂತ ಜಾಸ್ತಿ ಮಾಂಸಾಹಾರ ತಿನ್ನುವ ಇಲ್ಲಿನ ಸ್ಥಳಿಯ ಜನಾಂಗೀಯರು ನಾಗಾಲ್ಯಾಂಡ್-ಮಣಿಪುರ-ಮಿಜೋರಾಂಗಳ ಬುಡಕಟ್ಟುಗಳು ಇಷ್ಟ ಪಟ್ಟು ಸೇವಿಸುವ ನಾಯಿ ಮಾಂಸವನ್ನ ಇನ್ನುಳಿದ ಭಾರತೀಯರು ಅಸಹ್ಯಿಸುವಂತೆಯೆ ತಿರಸ್ಕಾರದ ದೃಷ್ಟಿಯಿಂದ ನೋಡುತ್ತಾರೆ. ಅವರ ಪ್ರಕಾರ ನೆಚ್ಚಿನ ಸಾಕುಪ್ರಾಣಿ ನಾಯಿಮಾಂಸವನ್ನ ಮೆಲ್ಲೋದು ಮನುಷ್ಯನ ಹೆಣ ತಿನ್ನೋದಕ್ಕಿಂತಲೂ ಹೀನಾಯ. ಇದನ್ನ ಹೊರತುಪಡಿಸಿˌ ಮಾಂಸಹಾರಿ ಅನ್ನುವ ಕಾರಣಕ್ಕೋ ಏನೋˌ ರಾಜ್ಯದ ಘೋಷಿತ ನಾಡ ಪ್ರಾಣಿ ಚುಕ್ಕಿ ಚಿರತೆಯೊಂದನ್ನ ಬಿಟ್ಟು ಬಾಕಿಯುಳಿದ ಮೊಲ-ಚಿಗರೆ-ನರಿ-ಅಳಿಲು-ಕಾನುಕುರಿ-ಕಾಡುಹಂದಿ-ಮುಂಗುಸಿ-ಮೀನು-ಮೊಸಳೆ-ಆಮೆ-ಹಾವು-ಉಡ ಎನ್ನುವ ಯಾವೊಂದು ಬೇಧಭಾವಗಳನ್ನೂ ತೋರದೆ ಎಲ್ಲವನ್ನೂ ಒಂದು ಹಂತಕ್ಕೆ ನುಣ್ಣಗೆ ಕೊಂದು ತಿಂದು ಅವುಗಳ ಕುಲಕ್ಕೆ ಎರವಾಗಿದ್ದರು. ಅವರ ಜಿಹ್ವಾ ಚಾಪಲ್ಯಕ್ಕೆ ಬಲಿಯಾಗದೆ ಹಾಗೂ ಹೀಗೂ ಪ್ರಾಣ ಉಳಿಸಿಕೊಂಡಿರುತ್ತಿದ್ದ ಅಳಿದುಳಿದ ಈ ಪ್ರಭೇದದ ಜೀವಿಗಳುˌ ನಾಳೆ ಹೇಗೋ? ಏನೋ! ಅನ್ನುವ ಅಸ್ಥಿರತೆಯ ಚಿಂತೆಯಲ್ಲೆ ಹೇಗೋ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಭಾವದಲ್ಲಿ ಕಾಲ ಹಾಕುತ್ತಿದ್ದವು.



ಇದ್ಯಾವುದರ ಕನಿಷ್ಠ ಅರಿವೂ ಕೂಡ ಇರದ ನಾಗೇಶ್ವರ ರಾವುಗಳಂತಹ ಸಂಕುಚಿತ ಮನಸ್ಸಿನ ಅಧಿಕಾರಿಯೊಬ್ಬ ರಾಜ್ಯದ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯ ಹಂತದವರೆಗೂ ಭಡ್ತಿಯಾಗಿ ಅಲ್ಲಿ ಎರಡು ದಶಕಗಳ ಕಾಲ ಸಂಸಾರವಂದಿಗನಾಗಿ ಬಾಳಿದ್ದೆ ಆಶ್ಚರ್ಯ. ಅವನ ಈ ಮಾನಸಿಕ ವಿಕೃತಿ ಆಡಳಿತದ ನಿರ್ಧಾರಗಳಲ್ಲಿ ಅದೆಷ್ಟು ಬಾರಿ ಪಕ್ಷಪಾತಿ ತೀರ್ಮಾನಗಳಿಗೆ ಕಾರಣವಾಗಿರಬಹುದು ಅನ್ನೋದನ್ನ ನೆನೆದರೇನೆ ಹೆದರಿಕೆ ಹುಟ್ಟುತ್ತಿತ್ತು. 


ಭಯಂಕರ ಜಾತಿವಾದಿಯಾಗಿದ್ದ ಅವನ ಗುಣಲಕ್ಷಣಗಳನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಲು ನನಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಅವನಿಗಿಂತ ಮೇಲ್ಜಾತಿಯವನಾಗಿದ್ದ ಕಾರಣ ಅವನನ್ನ ಸರ್ ಎನ್ನದೆ "ರಾವುಗಾರು" ಎನ್ನುವಷ್ಟು ಸಲುಗೆಯನ್ನ ನನಗವನು ಪರಿಚಯವಾದ ಆರಂಭದಲ್ಲೆ ದಯಪಾಲಿಸಿದ್ದ. "ಕನ್ನಡವಾಳ್ಳು ಉಂಡೊಚ್ಚುಗಾನಿˌ ಅದೆಟ್ಲಾಂಡಿ ಇಂತ ಬಾಗ ಮಾ ತೆಲುಗುಲೋ ಮಾಟ್ಲಾಡ್ತಾರು ಮೀರು!" ಅಂತ ನನ್ನ ಭಾಷಾ ಶೀಘ್ರ ಗ್ರಹಿಕೆಯ ಗುಣವನ್ನ ಹಾಡಿ ಹೊಗಳುತ್ತಿದ್ದ. ಆರಂಭದಲ್ಲಿ ಅವರ ಮನೆಗೆ ಆಹ್ವಾನದ ಮೇರೆಗೆ ಒಂದೆರಡು ರಾತ್ರಿಯೂಟಕ್ಕೆ ಅತಿಥಿಯಾಗಿ ಅವನ ಸರಕಾರಿ ನಿವಾಸಕ್ಕೆ ಹೋಗಿದ್ದೆನಾದರೂˌ ಅವನ ದಢೂತಿ ಹೆಂಡತಿˌ ಚೆಲ್ಲು ಚೆಲ್ಲಾಗಿ ವರ್ತಿಸುವ ಇಬ್ಬರು ಹೆಣ್ಣು ಮಕ್ಕಳ ಸಾಂಗತ್ಯ ಏಕೋ ಹಿತವೆನಿಸುತ್ತಿರಲಿಲ್ಲವಾದ ಕಾರಣ ಅನಂತರದ ಆಹ್ವಾನಗಳನ್ನ ಬೇರೆ ಕೆಲಸದ ನೆಪ ಒಡ್ಡಿ ತಪ್ಪಿಸಿಕೊಳ್ಳಲಾರಂಭಿಸಿದೆ. 


ಆಹ್ವಾನ ಮನ್ನಿಸಿ ಹೋಗಿದ್ದ ಆರಂಭದಲ್ಲೊಂದು ಬಾರಿ ಊಟಕ್ಕೂ ಮೊದಲು ಲಾನಿನಲ್ಲಿ ಆರಾಮವಾಗಿ ಕೂತು ಶಿವಾಸ್ ರೀಗಲ್ ಬಾಟಲು ತೆರೆದುˌ ಕುಡಿತದ ಅಭ್ಯಾಸವಿಲ್ಲದ ನನ್ನನ್ನಷ್ಟು ಕಿಚಾಯಿಸಿ - ಒತ್ತಾಯದಿಂದ ಬದುಕಲ್ಲೆ ಮೊದಲ ಬಾಟಲಿ ಬಿಯರ್ ಕುಡಿಯುವಂತೆ ಮಾಡಿ ತನ್ನ ಪ್ರವರ ಪುರಾಣವನ್ನ ತೆಗೆದು ತಲೆ ಚಿಟ್ಟು ಹಿಡಿಸುವಂತೆ ಮಾಡಿದ್ದ. ಅವನ ಬಡತನದ ಬಾಲ್ಯˌ ಕಡಪ ಜಿಲ್ಲೆಯಲ್ಲಿನ ಕುಗ್ರಾಮವೊಂದರಲ್ಲಿ ಕಳೆದಿದ್ದ ಕಳಪೆ ದರ್ಜೆಯ ಜೀವನದ ದಿನಗಳು ಇವೆಲ್ಲವನ್ನೂ ಭಾವುಕವಾಗಿ ಹೇಳಿಕೊಂಡುˌ ಅದೆಷ್ಟೋ ದಿನಗಳ ಕಾಲ ಯಾರೊಂದಿಗೂ ಹೇಳಲಾಗದೆ ಎದೆಯೊಳಗೆ ಉಳಿಸಿಕೊಂಡಿದ್ದ ಸಂಕಟದ ಹೊರೆಯನ್ನ ಕೆಳಗಿರಿಸಿ ನಿಸೂರಾಗಿದ್ದ. ತಕ್ಕಮಟ್ಟಿಗೆ ಬೆಂಗಳೂರಲ್ಲಿ ಕಲಿತಿದ್ದ ತೆಲುಗನ್ನ ಬಳಸಲು ಸಮರ್ಥನಾಗಿದ್ದ ಕಾರಣ ನನ್ನ ಮೇಲವನಿಗೆ ವಿಶೇಷ ವಿಶ್ವಾಸ ಮೂಡಿತ್ತು. ಮೇಲಧಿಕಾರಿ ಅನ್ನುವ ಮುಲಾಜಿಗೆ ಒಳಪಟ್ಟ ನನಗೂ ಅವನ ಬಡಿವಾರಗಳನ್ನ ಸಹಿಸಿಕೊಳ್ಳದೆ ವಿಧಿಯಿರಲಿಲ್ಲ.


**********


ಪ್ರೊಬೆಷನರಿ ಅವಧಿಯ ಕಿರಿಯ ಅಧಿಕಾರಿಯಾಗಿದ್ದರೂ ಸಹ ಹಂಚಿಕೆಯಾಗಿದ್ದ ನನ್ನ ಸರಕಾರಿ ನಿವಾಸ ದಕ್ಷಿಣ ಭಾರತದ ಯಾವೊಬ್ಬ ಹಿರಿಯ ಆಡಳಿತ ಸೇವೆಯ ಅಧಿಕಾರಿಯ ವಸತಿಗೆ ಕಡಿಮೆ ಇಲ್ಲದಷ್ಟು ವಿಶಾಲ ಹಾಗೂ ಭವ್ಯವಾಗಿತ್ತು. ಬ್ರಿಟಿಷರ ಕಾಲದ ಬಂಗಲೆ. ಶಿಲ್ಲಾಂಗ್ ಪ್ರದೇಶದ ರಾಜಧಾನಿಯಾಗಿದ್ದ ಕಾಲದಲ್ಲಿ ತಮ್ಮ ಐಶಾರಾಮಕ್ಕೆ ಕೊರತೆಯಾಗದಂತೆ ವೈಭವೋಪೇತ ಬಂಗಲೆಗಳನ್ನಷ್ಟು ಕಟ್ಟಿಸಿದ್ದ ಬ್ರಿಟಿಷರುˌ ಒಂದೊಮ್ಮೆ ಹೋಗುವಾಗ ಹೊತ್ತೊಯ್ಯಲು ಸಾಧ್ಯವಿದ್ದಿದ್ದರೆ ಖಂಡಿತವಾಗಿ ಇವೆಲ್ಲವನ್ನೂ ಮರೆಯದೆ ಬುಡ ಸಹಿತ ಕಿತ್ತಾದರೂ ಸರಿ ಹಡಗಿನಲ್ಲಿ ಹೇರಿಕೊಂಡೆ ದೇಶ ಬಿಡುತ್ತಿದ್ದರೇನೊ! ತಾವಿಲ್ಲಿ ಸೂರ್ಯ-ಚಂದ್ರರಿರುವ ತನಕ ಅಜರಾಮರ ಅಂತಂದುಕೊಂಡೆ ಕಟ್ಟಿಸಿದ್ದ ಹಾಗಿವೆ ಅವೆಲ್ಲ. ಮುಖ್ಯ ಕಟ್ಟಡದಾಚೆಯ ಕೆಲಸಗಾರರ ವಸತಿಗಳೆ ಮಹಾನಗರಗಳ ಮಾನದಂಡದಲ್ಲಿ ಕಿರುಗಾತ್ರದ ಬಂಗಲೆಗಳಂತಿವೆ ಅಂದರೆ ಊಹಿಸಿ. ಬಂಗಲೆ ಅಂದರೆ ಸಾಕುˌ ಎದುರಿಗೊಂದು ವಿಶಾಲ ಪೋರ್ಟಿಕೋ-ಕಣ್ಣು ಹಾಯಿಸಿದಷ್ಟು ದೂರದ ಹಸಿರಿನ ಲಾನಂಗಳ-ಅದರ ಅಂಚಿನಲ್ಲೊಂದು ನೀಲ ನೀರ ಈಜುಕೊಳ ಇವೆಲ್ಲ ಆ ಬಂಗಲೆಯ ಅಂಕಣದೊಳಗಿವೆ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ.


ಇಂತಿಪ್ಪ ಬಂಗಲೆಯೊಂದರಲ್ಲಿ ನನ್ನ ಠಿಕಾಣಿ. ಪಶ್ಚಿಮ ಮೂಲೆಯಲ್ಲಿದ್ದ ಇತ್ತೀಚಿನ ದಿನಗಳಲ್ಲಿ ಅದಕ್ಕೆ ಹೊಂದಿಕೊಂಡಂತೆ ಮೊಸಾಯಕ್ ಹಾಕಿಸಿದ್ದ ಶವರ್-ಬಾತ್ ಟಬ್-ಅತ್ಯಾಧುನಿಕ ಕಾಮೋಡ್ ಅಂಟಿಕೊಂಡಿದ್ದ ರೆಡ್ ಆಕ್ಸೈಡಿನ ನೆಲದ ಮೇಲೆ ಬರ್ಮಾ ಟೀಕಿನ ಹಲಗೆಗನ್ನ ಜೋಡಿಸಿ ಅದರ ಮೇಲೆ ಹಾಸುಗಂಬಳಿಯನ್ನ ಠಾಕು ಹೊಡೆದಿದ್ದ ಆ ವಿಶಾಲ ಕೋಣೆ ಯಲ್ಲಿ ನಾನು ನನ್ನ ಹಡಪ ಬಿಚ್ಚಿ ಅದನ್ನೆ ನನ್ನ ಮೊಕ್ಕಾಂ ಆಗಿಸಿಕೊಂಡೆ. ಬ್ರಿಟಿಷರ ಕಾಲದ ಮಾಸ್ಟರ್ ಬೆಡ್ರೂಮೋ ಇಲ್ಲಾ ಮಿನಿ ಬಾಲ್ರೂಮೋ ಆಗಿದ್ದಿರಬಹುದಾದ ಆ ಹಾಲಿಗಿಂತ ವಿಶಾಲವಾಗಿದ್ದ ಕೋಣೆಯ ಹೊರಗೋಡೆಗೆ ಅಂಟಿಕೊಂಡಂತೆ ಮೂವರು ದಢೂತಿಗಳು ಅಗಲಿಸಿ ಹೊರಳಾಡುವಷ್ಟು ದೊಡ್ಡ ಬರ್ಮಾ ತೇಗದ ಮಂಚವಿತ್ತು. ಅದರೆದುರಿಗೊಂದು ದೊಡ್ಡ ಹಳೆಯ ಕಾಲದ ಮೇಜು ಹಾಗೂ ಅದಕ್ಕೆರಡು ದೊಡ್ಡ ಕುರ್ಚಿಗಳಿದ್ದವು. ಮಂಚದ ಎರಡೂ ಪಕ್ಕಗಳಲ್ಲಿ ಕೈಗೆಟುಕುವಂತೆ ರಾತ್ರಿಯ ಮಂದ ದೀಪಗಳು-ಕೋಣೆಯ ನಡು ಮಧ್ಯಕ್ಕೆ ತೂಗು ಬಿಟ್ಟಿದ್ದ ದೀಪದ ಗೊಂಚಲು-ನಾಲ್ಕು ಗೋಡೆಗಳಾಗೂ ನಾಲ್ಕು ಮಂದ್ರ ದೀಪಗಳು ಇದ್ದ ಆ ಕೋಣೆಯನ್ನ ಹಿಂದೆ ಈ ಮನೆಯಲ್ಲಿ ವಾಸವಿದ್ದ ದೆಹಲಿಯ ದೊರೆ ಮಗನಂತಹ ಆಹಾರ ಕಾರ್ಯದರ್ಶಿ ಒಂದಲ್ಲ ಅಂತ ಎರಡೆರಡು ಹವಾನಿಯಂತ್ರಕಗಳನ್ನ ಅಳವಡಿಸಿ ವಾತಾನುಕೂಲಿಯಾಗಿಸಿದ್ದ. 



ಹೀಗಾಗಿ ಹಳೆಯ ಕಾಲದ ಬಾಗಿಲುಗಳಷ್ಟೆ ಎತ್ತರವಾಗಿದ್ದ ತೇಗದ ಫ್ರೇಮಿನ ಕಿಟಕಿಗಳನ್ನ ಬಾಗಿಲು ತೆಗೆಯಲಾಗದಂತೆ ಸೀಲ್ ಮಾಡಿಸಿದ್ದ. ಶುದ್ಧ ನೈಸರ್ಗಿಕ ಗಾಳಿಯ ಉಸಿರೆಳೆದುಕೊಳ್ಳಬೇಕಂತಿದ್ದರೆ ಒಂದಾ ಕೋಣೆಯ ಎರಡೂ ಹೊರ ಅಂಚಿಗೆ ಚಾಚಿಕೊಂಡಿದ್ದ ಬಿಸಿಲು ಮಚ್ಚೆಗೆ ಹೋಗಿ ಅಲ್ಲಿದ್ದ ಕುರ್ಚಿಯ ಮೇಲೆ ಕುಕ್ಕರಿಸಬೇಕಿದೆ. ಅಥವಾˌ ಕೋಣೆಯ ಹೊರಗಿನ ಹಜಾರಕ್ಕೆ ಮರಳಬೇಕು. ಒಟ್ಟಿನಲ್ಲಿ ಅಲ್ಲಿರುವ ಅವಧಿಯಲ್ಲಿ ಹಿರಿ-ಕಿರಿ-ಮರಿಗಳನ್ನುವ ಯಾವುದೆ ಬೇಧಭಾವವಿಲ್ಲದೆ ಸಕಲ ಇಲಾಖೆಗಳ ಸರಕಾರಿ ಬಿಳಿಯಾನೆಗಳೂ ಜನರ ದೋಚಿದ ತೆರಿಗೆಯ ಸುಲಿಗೆಯ ಬಲದಲ್ಲಿ ಸಕುಟುಂಬಿಕರಾಗಿ ಭರ್ಜರಿ ಮೋಜು ಉಡಾಯಿಸಿಕೊಂಡು ಕಾಲ ಹಾಕುವುದರಲ್ಲಿ ನಿಸ್ಸೀಮರಾಗಿದ್ದರು. 



ಆದರಿನ್ನೂ ಬ್ರಹ್ಮಚರ್ಯ ಪರ್ವದಲ್ಲಿದ್ದ ನನಗೆ ಆ ಬಂಗಲೆಯ ವಿಪರೀತ ವೈಶಾಲ್ಯವೆ ಉಸಿರುಗಟ್ಟಿಸುವಂತಿದ್ದುˌ ಇದ್ದುದರಲ್ಲಿ "ಸಣ್ಣದಾಗಿದ್ದ" ಕೋಣೆಯನ್ನ ನನ್ನದಾಗಿಸಿಕೊಂಡು ಉಳಿದಂತೆ ಬಂಗಲೆಯ ಬೇರೆ ಭಾಗಗಳನ್ನ ಬೀಗ ತೆರಿಸಿಯೂ ನೋಡದೆ ನಿರ್ಲ್ಯಕ್ಷಿಸಿ ವಸತಿ ಹೂಡಿದೆ. ಗ್ಹಾರೋ ಬುಡಕಟ್ಟಿನ ಲಾಂಪಾರ್ಗ್ ಹಾಗೂ ಮಾರ್ಟೀನಾ ದಂಪತಿಗಳು ನನ್ನ ಬಾಣಸಿಗರಾಗಿದ್ದರೆˌ ಖಾಸಿಗಳಾಗಿದ್ದ ಶೆಲ್ಡನ್ ಹಾಗೂ ಲಿಂಡಾ ಸ್ವಚ್ಛತೆಯ ಸಿಬ್ಬಂದಿಗಳಾಗಿದ್ದರು. ಹಿಂದೂಗಳಾಗಿದ್ದ ಪೂರ್ಣಿಮಾ ಮತ್ತವಳ ತಂಗಿ ಕ್ರಿಸ್ಟಿನಾ ತೋಟದ ಮಾಲಿಗಳಾಗಿದ್ದರು. ಹೊರಗಿನ ತರಕಾರಿ-ದಿನಸಿ ಸಾಮಾನು ಸರಂಜಾಮು ತಂದುಕೊಡಲು ಅಸ್ಸಾಮಿ ಕೃಷ್ಣದಾಸ್ ಇದ್ದ.



ಬೆಳಗ್ಯೆ ಹಾಸಿಗೆ ಬಿಟ್ಟೆದ್ದಲ್ಲಿಂದ ಜಾಗಿಂಗ್-ವಾಕಿಂಗ್-ತಿಂಡಿ-ಊಟ-ಕಛೇರಿ ಕೆಲಸ-ಕ್ಷೇತ್ರಕಾರ್ಯ ಅಂತ ಬೆಳಗ್ಗಿನಿಂದ ರಾತ್ರಿಯವರೆಗೂ ಹೊರಗಡೆಯೆ ಇರುತ್ತಿದ್ದ ನಾನುˌ ಲಘು ವ್ಯಾಯಾಮ-ಸ್ನಾನ-ರಾತ್ರಿ ನಿದ್ರೆಯ ಹೊರತು ಆ ಬಂಗಲೆಯೊಳಗೆ ಉಳಿಯುತ್ತಿದ್ದುದೆ ಅಪರೂಪ. ಸರಕಾರಿ ರಜೆಯ ದಿನಗಳಲ್ಲೂ ಸಹ ಒಂದಿಲ್ಲೊಂದು ತುರ್ತು ಕರೆಗಳಿಗೆ ಓಡಬೇಕಿದ್ದ ಕಿರಿಯ ದರ್ಜೆಯ ಹಿರಿಯ ಹುದ್ದೆಯ ಅಧಿಕಾರಿಯಾಗಿದ್ದ ಕಾರಣ ಆ ಮನೆಯ ಐಶಾರಾಮಗಳೆಲ್ಲಾ ಸದಾ ಅಲ್ಲಿಯೆ ಇರುವ ಬಹುತೇಕ ಆ ನೌಕರ-ಚಾಕರ ವರ್ಗಗಳಿಗೆ ಮೀಸಲಿಟ್ಟಂತಿತ್ತು. ಅವರ ಸುಖ ಸಮೃದ್ಧತೆಯನ್ನ ಕಂಡಾಗˌ ಎಲಾ ಇವರ! ಇಲ್ಲಿ ನಾನು ಯಜಮಾನಿಕೆ ಮಾಡ್ತಿದ್ದೆನ? ಇಲ್ಲಾ ನನ್ನ ಹೆಸರಲ್ಲಿ ಇವರೆಲ್ಲರ ಯಜಮಾನಿಕೆ ನಡೆಯುತ್ತಿದೆಯ ಅಂತ ನನಗೆ ನಾನೆ ಹೇಳಿಕೊಳ್ತಿದ್ದೆ.


ನನ್ನ ಊಟ ತಿಂಡಿಯ ವಯಕ್ತಿಕ ಖರ್ಚಿನ ಹೊರತು ಬಾಕಿ ಎಲ್ಲವನ್ನೂ ಸರಕಾರ ನೋಡಿಕೊಳ್ತಿತ್ತು. ಅದರಂತೆ ಖರ್ಚುವೆಚ್ಚದ ಓಚರಿಗೆ ನನ್ನ ಸಹಿ ಬಿದ್ದರೆ ಸಾಕಿತ್ತು ಅಷ್ಟೆ.  ನಾನಿಲ್ಲಿಗೆ ಬರುವ ಮೊದಲೂ ಹೀಗೆಯೆ ಇದ್ದ ಈ ವ್ಯವಸ್ಥೆ ನಾನಿಲ್ಲಿಂದ ಹೊರಟ ನಂತರವೂ ಹೀಗೆಯೆ ಮುಂದುವರೆಯಲಿಕ್ಕಿತ್ತು. ಈ ಐಎಎಸ್ ತಳಿಗಳಲ್ಲಿ ಎರಡು ಬಗೆ. ಮೊದಲನೆಯವರದ್ದು ನೇರವಾಗಿ ಕೇಂದ್ರ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಿ ನೇರವಾಗಿ ಉನ್ನತಾಧಿಕಾರಿಗಳಾಗುತ್ತಿರುವವರದ್ದು - ಎರಡನೆಯದಾಗಿ ಸ್ಥಳಿಯ ರಾಜ್ಯಗಳ ಸೇವಾಧಿಕಾರದಲ್ಲೆ ಇದ್ದು ನಾಲ್ಕಾರು ಮುಂಭಡ್ತಿಗಳಾದ ನಂತರ ಐಎಎಸ್ ದರ್ಜೆಗೆ ರಾಜ್ಯಾಡಳಿತದ ಶಿಫಾರಸ್ಸಿನಂತೆ ಉನ್ನತೀಕರಿಸಲ್ಪಟ್ಟವರು. ಈ ಎರಡನೆ ವರ್ಗದವರ ಬಗ್ಗೆ "ದ್ವಿತಿಯ ದರ್ಜೆ"ಯ ಪ್ರಜೆಗಳು ಅನ್ನೋ ತಾತ್ಸಾರದ ಭಾವನೆ ಮೊದಲನೆ ವರ್ಗದ ಆಡಳಿತ ಸೇವೆಯ ಅಧಿಕಾರಿಗಳಲ್ಲಿ ಜನ್ಮಜಾತವಾಗಿವೆ. ಸಾಲದ್ದಕ್ಕೆ ಐಪಿಎಸ್ - ಐಎಫ್ಎಸ್ - ಐಆರ್ಎಸ್ ಅಧಿಕಾರಿ ವರ್ಗದ ಬಗ್ಗೆಯೂ ಈ ಬಗೆಯ ವರ್ಗ ತಾರತಮ್ಯದ ಅಸಡ್ಡೆ ಐಎಎಸ್ಸಿನವರ ವಲಯದಲ್ಲಿ ಧಾರಾಳವಾಗಿವೆ. ತಾವು ಮಾತ್ರ ನೇರ ಸ್ವರ್ಗದಿಂದಿಳಿದು ಬಂದಿರುವ ಅಮೃತ ಸ್ತನ ಪಾನ ಮಾಡಿದವರು! ಉಳಿದವರೆಲ್ಲ ತಮಗಿಂತ ಹೀನ ಕನಿಷ್ಠ ಕ್ರಿಮಿಗಳು ಅನ್ನೋ ಈ ಆಳವಾದ ಮಾನಸಿಕ ವ್ಯಾಧಿಯ ಬಗ್ಗೆ ಹೇಳಿ ಪ್ರಯೋಜನವಿಲ್ಲ.


ಈ ಲಾಂಪಾರ್ಗ್ ಹೈದರಾಬಾದಿನ ಯಾವುದೋ ಸಾಬರ ರೆಸ್ಟೋರೆಂಟಿನಲ್ಲಿ ಅದ್ಯಾವ್ದೋ ಓಬಿರಾಯನ ಕಾಲದಲ್ಲಿ ಬಾಣಸಿಗನಾಗಿದ್ದನಂತೆ. ಹೀಗಾಗಿ ಅಷ್ಟಿಷ್ಟು ದಕ್ಷಿಣ ಭಾರತೀಯ ಖಾದ್ಯಗಳ ಹೆಸರುಗಳನ್ನ ಬಾಯಿಪಾಠ ಮಾಡಿಕೊಂಡಿದ್ದ. ಸಾಬರ ಹೊಟೆಲ್ಲಿನ ಅಡುಗೆಯವನೆ ಆಗಿದ್ದನೋ ಇಲ್ಲಾ ಟೇಬಲ್ ಒರೆಸುವ ಕ್ಲೀನರ್ರೆ ಆಗಿದ್ದನೋ! ಅಂತೂ ಉಪ್ಮಾ-ರೈಸ್ ಬಾತ್-ಇಡ್ಲಿ-ದೋಶೆ-ಪೆಸರಿಟ್ಟು ಅಂತ ಮಾರ್ಟೀನಾ ಮಾಡಿ ಕೊಡುತ್ತಿದ್ದ ದಿನಕ್ಕೊಂದು ಖಾದ್ಯ ವೈವಿಧ್ಯಗಳಿಗೆ ಕೆಲವೊಮ್ಮೆ ತಿನ್ನಲು ಕೂತಾದ ಮೇಲೆ ಅವುಗಳ ಯೋಗ್ಯತಾನುಸಾರ ಗುಣಮಟ್ಟ ಪರೀಕ್ಷಿಸಿ ನಾನೆ ಹೆಸರಿಡಬೇಕಾದ ಪರಿಸ್ಥಿತಿ ಅಲ್ಲಿತ್ತು.


ಅಂತಹˌ ದೋಷಗಳೆ ತುಂಬಿದ್ದ ದೋಸೆ ಚಟ್ನಿಯೆಂದು ಹೆಸರಿಡಲಾಗಿದ್ದ ಅದೆನನ್ನೋ ತಿಂದು "ಕೈಶಾ ಹೈಂ ಶಾಬ್" ಅನ್ನೋ ಅವನ ಹಲ್ಕಿರಿತದ ಪ್ರಶಂಸಾ ಅಪೇಕ್ಷಿತ ಪ್ರಶ್ನೆಗೆˌ ಅವನಿಗರ್ಥವಾಗದ ಕನ್ನಡದಲ್ಲಿ ಅವನಷ್ಟಲ್ಲದಿದ್ದರೂ ಚೂರು ಹಲ್ಕಿರಿದುಕೊಂಡು ಭಾವಕ್ಕೂ ಭಾಷೆಗೂ ಸಂಬಂಧವೆ ಇಲ್ಲದಂತೆ ಕಸ್ತೂರಿ ಕನ್ನಡದಲ್ಲಿ "ಅದಿನ್ನೆಂತೆಂತಾ ಕರ್ಮಾಂತರ ಮಾಡಿ ತಿನ್ನೀಸ್ತೀಯಯ್ಯೋ! ನಿನ್ ಮನೆ ಕಾಯ್ಹೋಗ." ಅಂತ ಮುಖಸ್ತುತಿ ಮಾಡಿ ಆ "ದೋಷ"ದ ದೋಷಾರೋಪಣ ಪಟ್ಟಿಯನ್ನ ಅವನ ಮುಂದೆಯೆ ಒದರಿ ಅಂದು ಕಛೇರಿಗೆ ಬಂದು ಕುರ್ಚಿಯಲ್ಲಿ ಅಂಡೂರಿ ಕೂತು ಸುಧಾರಿಸಿಕೊಳ್ತಿದ್ದೆನಷ್ಟೆˌ ಸೆಕ್ರೆಟರಿಯೇಟಿನಿಂದ ರಾವು ಬಂದು ಕಾಣಲು ಕರೆ ಕಳಿಸಿದ್ದನ್ನ ಪೇದೆ ಹೇಳಿದ. ಆಗಲೆ ಎರಡು ಸಾರಿ ಕರೆ ಮಾಡಿದ್ದನಂತೆ. ಏನೋ ಮುಖ್ಯ ವಿಷಯವೆ ಇರಬೇಕೆಂದರಿತು ಓಡೋಡಿ ಕಣ್ಣಳತೆ ದೂರದಲ್ಲಿದ್ದ ಅವನ ಕಛೇರಿಗೆ ಅಡಿಯಿಟ್ಟೆ. ಆಪ್ತಸಹಾಯಕ ಹೋಗಿ ಉಸುರಿದ್ದೆ ಒಳಗಿನ ಛೇಂಬರಿನಿಂದ ಬುಲಾವು ಬಂತು. "ಚೂಡಂಡಿ ಬಾಬು ರೇಪು ಆ ಜೋನಂಗಿ ಜಾಗಿಲವಾಡು ಮುಂಬೈನಿಂಚಿ ವಸ್ತುಂದಂಟˌ ಎಳ್ಳುಂಡಿ ಆ ಮುಸಲವಾಡು ಕ್ಯಾಬಿನೆಟ್ ಮೀಟಿಂಗ್ ಪೆಟ್ಟಿಂದಿ. ಮೀರು ಕೂಡ ರಾಂಡಿ. ಕೊನ್ನಿ ಪನಿಲುನ್ನಾಯಿ. ಪಾಟು ನಾ ಪಿ ಎಸ್ ಚೆಪ್ಪಿನಟ್ಟು ಫೈಲ್ಸ್ ಕಲಿಗಿ ರಾವಾಲಿ ಗುರ್ತು ಪಟ್ಕೋಂಡಿ" ಅಂದು ಎಂದಿನಂತೆ ಉಭಯಕುಶಲೋಪರಿ ಸಾಂಪ್ರತದ ಸರಸವಾಡದೆ ವಿಪರೀತ ಒತ್ತಡದಲ್ಲಿರುವವನಂತೆ ಮತ್ತೆ ಕಡತವೊಂದರೊಳಗೆ ತಲೆ ತೂರಿಸಿದ.


ಅದು ಸರಿ ಯಾರದು "ಜೋನಂಗಿ ಕುಕ್ಕ"ವಾಡು! ಅದ್ಯಾವುದೋ ಲೋಕಲ್ ಬ್ರೀಡ್ ನಾಯಿ ನಾಳೆ ಬರೋದಕ್ಕೂ - ಅದ್ಯಾವನೋ "ಮುಸಲ"ವಾಡು ನಾಳಿದ್ದು ಕ್ಯಾಬಿನೆಟ್ ಮೀಟಿಂಗ್ ಕರೆಯೋದಕ್ಕೂ ಏನು ಸಂಬಂಧ ಅಂತ ಕ್ಷಣಕಾಲ ಅರಿವಾಗದೆ ತಲೆ ಕೆರೆದುಕೊಂಡೆ. ಆದರೆ ಕ್ಯಾಬಿನ್ನಿನ ಹೊರಗೆ ಬಂದಾಗ "ಸರ್ ಪ್ಲೀಸ್ ಮೇಕ್ ಶ್ಯೂರ್ ಯು ಪುಟ್ ಅಪ್ ದೀಸ್ ಫೈಲ್ಸ್ ಬಿಫೋರ್ ಸಿಎಂ ಆನ್ ಕ್ಯಾಬಿನೆಟ್ ಮೀಟಿಂಗ್ ಡೇ ಆಫ್ಟರ್ ಟುಮಾರೋ!" ಅಂತ ನಾಗೇಶ್ವರನ ಸ್ಥಳಿಯ ಪಿಎಸ್ ತರಬೇಕಿದ್ದ ಕಡತಗಳ ಪಟ್ಟಿ ಕೊಟ್ಟಾಗ ನನ್ನ ಮಂಡೆಯೊಳಗಿನ ಟ್ಯೂಬ್ ಲೈಟ್ ಫಕ್ಕನೆ ಹೊತ್ತಿಕೊಂಡಿತು. ಅಯ್ಯೋ ಈ ನಾಗೇಶ್ವರನ ಮೆದುಳಲ್ಲಿರೋ ವೃಷಭಾವತಿ ತೀರ್ಥವನ್ನ ಮರೆತೆ ಬಿಟ್ಟಿದ್ದೆನಲ್ಲ! ಅಂತ ನನ್ನ ಅಜ್ಞಾನಕ್ಕೆ ನಾನೆ ಹಳಹಳಿಸಿ ಮರುಗಿದೆ.


( ಸಶೇಷ.)

No comments: