22 April 2011

ರಾಗ ಹಳೆಯದೆ...

ಚಂದ್ರ ಬರದ ಇರುಳಿನಲ್ಲೂ ನನ್ನ ಎದೆಯಂಗಳ ಮಾತ್ರ....
ನಿರಂತರ ಬೆಳಕಲ್ಲಿ ಮಿಂದಿತು ನಿನ್ನ ನಗೆಯ ದೀಪದ ಕೃಪೆಯಿಂದ,
ಇರುಳು ಕದ್ದ ಹಗಲಿನ ನೆಮ್ಮದಿಯೆ...
ನಿದಿರೆಯೆಡೆಯಲ್ಲಿ ಬಂದು ಕಾಡುವ ಕನಸು/
ನಿತ್ಯವೂ ನೀನೆ ಅದರ ಹುಟ್ಟಿಗೆ ಕಾರಣವಾಗಿ...
ಇನ್ನಷ್ಟು ಸಂತಸದ ಮಳೆಯ ನನ್ನೆದೆಯಲ್ಲಿ ಸುರಿಸು,
ಬಾ ಇನ್ನಷ್ಟು ಮನಸ ಆರ್ದ್ರವಾಗಿಸು...
ನೀನಿತ್ತಿದ್ದ ಖುಷಿಯ ಕ್ಷಣಗಳನ್ನ ಮೆಲಕು ಹಾಕುತ್ತಲೆ ಅರಿವಿಗೆ ಬಾರದಂತೆ,
ನನ್ನ ಬಾಳು ಸಂತಸದ ಜಾತ್ರೆಯಲ್ಲಿ ಕಳೆದೆಹೋಗಿದೆ//


ಮೆಲ್ಲ ಮೆಲ್ಲ ನೀನಿಟ್ಟ ಹೆಜ್ಜೆಯ ಗುರುತುಗಳಷ್ಟೆ ಈಗ ಉಳಿದಿರುವ ನನ್ನ ಹೃದಯದಲ್ಲಿ....
ನಿನ್ನ ನೆನಪಿನ ಪರಿಮಳವೂ ಉಳಿದೆ ಹೋಗಿದೆ,
ಹೊಳೆವ ಬಾನಂಚಿನ ಚಂದಿರನನ್ನೂ ಮಂಕಾಗಿಸುವ,
ನಿನ್ನೊಂದು ಮುಗುಳ್ನಗೆಯನ್ನ ಮತ್ತೆ ಕಾಣಲು ಮನಸು ಕಾತರಿಸುತಿದೆ/
ಬಿಡುವಿರದ ಇರುಳ ಕನಸುಗಳ ಜಾತ್ರೆಯಲ್ಲಿ ನಿತ್ಯ ನೀನೆ ಉತ್ಸವ ಮೂರ್ತಿ...
ಸರಿ ಹೊತ್ತಲ್ಲಿ ಒಡೆದ ನಿದ್ದೆಯಲ್ಲಿ ಅಗಲಿಕೆಯ ನೋವಿನ ಕಹಿ ಮಡುಗಟ್ಟಿತ್ತು,
ಕಾಲಾತೀತನಾಗಿ-ದೇಶಾತೀತನೂ ಆಗಿ...
ಅಲೆಯುತ್ತ ದಿಕ್ಕು ತಪ್ಪಿದ ನನ್ನ ಉಡಾಳ ಬಾಳಿಗೆ ನೀನು ತಡೆಬೇಲಿ ಹಾಕಿದ್ದರೆ ಖುಷಿ ಖಂಡಿತ ಹುಟ್ಟುತ್ತಿತ್ತು//

ಹಗಲಿಗೆ ಬೆಳಕಿನ ಸ್ನಾನ ಮಾಡಿಸುವ ಸೂರ್ಯ....
ಸಂಜೆ ಮರಳಿ ಹೋಗುವ ಮುನ್ನ ಭೂಮಿಯ ತುಟಿ ಚುಂಬಿಸಿ ಅವಳ ಕೆನ್ನೆಯಲ್ಲಿ ಕೆಂಪು ಹೊಮ್ಮಿಸಿದ,
ಕತ್ತಲ ಕಾಡಿಗೆ ಹಚ್ಚಿಕೊಳ್ಳುವ ಅವಳ ಕಂಗಳಲ್ಲಿ ನಾಚಿಕೆ ತುಳುಕಿಸಿದ/
ಮುತ್ತು ಸುರಿವ ಮೋಡಗಳ ಮೋಹಕ ಪ್ರೀತಿಗೆ....
ಧರಿತ್ರಿ ನಾಚಿ ನೀರಾದಳು,
ಬೆಟ್ಟ ಸಾಲುಗಳ ಬೆತ್ತಲಿನ ಉಬ್ಬು ತಗ್ಗುಗಳಲ್ಲಿ ಉಕ್ಕಿದ ಸಂತಸದ ಬುಗ್ಗೆ ....
ಸಂಕೋಚದ ಎಲ್ಲೆ ಮೀರಿ ನೆಲದೆದೆಯಲ್ಲಿ ನದಿಯಾಗಿ ಹರಿದಾಗ ಇಳೆ ಸೋತು ಶರಣಾದಳು//

No comments: