17 November 2012
ನಿನ್ನ ಹೊರತು ಇನ್ಯಾರಿಗೂ......
12 November 2012
ನಾನೂ ನನ್ನಾ ಕ(ನ)ಸಾ..........!
11 November 2012
ಸಾವಿರದ ಸಾವಿರ ಕನಸುಗಳು.....
ಶಾರದೆ ದಯೆ ತೋರಿದೆ.....
ನನ್ನ ಹಳೆಯ ನೆನಪುಗಳಲ್ಲೊಂದು ಗರಿ ದಸರೆಯ ಶಾರದಾ ಪೂಜೆಯಲ್ಲಿ ಹುದುಗಿ ಹೋಗಿದೆ. ನಾನು ಹುಟ್ಟಿದ್ದು ಘಟ್ಟದ ಮೇಲಿನ ತೀರ್ಥಹಳ್ಳಿಯಲ್ಲಾದರೂ ನನ್ನ ಬೇರುಗಳಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ನಮ್ಮಲ್ಲಿ ಶಾರದ ಪೂಜೆಯೆ ದಸರೆಯ ಮಹತ್ವದ ದಿನ, ಆಯುಧ ಪೂಜೆ ಹಾಗೂ ವಿಜಯ ದಶಮಿಗಿಂತಲೂ ಶಾರದೆಯನ್ನ ಆರಾಧಿಸುವ ದಿನ ನಮಗೆ ಆಚರಣೆಯ ದೃಷ್ಟಿಯಿಂದ ಶ್ರೇಷ್ಠವಾಗಿದೆ. ನಾವು ಶೃಂಗೇರಿ ಶಾರದಾ ಪೀಠದ ಅನುಯಾಯಿಗಳಗಿದ್ದು, ಅಲ್ಲಿನ ಗುರುಗಳೆ ನಮ್ಮ ಕುಲಗುರುಗಳಾಗಿರುವುದೂ ಕೂಡ ಈ ಪ್ರತ್ಯೇಕ ಶ್ರದ್ಧೆಗೆ ಕಾರಣವಾಗಿರಬಹುದು. ನಮ್ಮ ಮನೆಯ ಎಲ್ಲಾ ಧಾರ್ಮಿಕ ನಿಲುವುಗಳೂ ಶೃಂಗೇರಿ ಶಾರದಾ ಪೀಠದ ಅದ್ವೈತ ಸಭ್ಯತೆಗೆ ಅನುಸಾರವಾಗಿಯೆ ನಡೆಯುತ್ತಿದ್ದುದು ಆ ಕಾಲದಿಂದಲೂ ನಡೆಯುತ್ತ ಬಂದ ಪದ್ಧತಿ.
ಸಾಮಾನ್ಯವಾಗಿ ಮಧ್ಯಂತರ ರಜೆಯ ಕಾಲ ಅದಾಗಿರುತ್ತಿದ್ದರಿಂದ ಶಾಲೆಯೆಂಬ ಜೈಲಿನಿಂದ ತತ್ಕಾಲಿಕ ಪರೋಲ್ ಮೇಲೆ ಬಿಡುಗಡೆ ಸಿಕ್ಕು ಬಂದ ಖೈದಿಯ ಮನಸ್ಥಿತಿಯಲ್ಲಿ ನಾನಿರುತ್ತಿದ್ದೆ. ಅಮ್ಮ ನನ್ನನ್ನು ಆ ರಜಾವಧಿಯಲ್ಲಿ ತನ್ನ ತವರು ಮನೆಯಾದ ಸಾಗಿನಬೆಟ್ಟಿಗೆ ಕರೆದೊಯ್ಯುತ್ತಿದ್ದರು. ಶಾರದಾ ಪೂಜೆಯ ದಿನ ಮನೆಯಲ್ಲಿ ವಿಪರೀತ ಗೌಜಿ ಗದ್ದಲ ಏರ್ಪಡುತ್ತಿತ್ತು. ಮನೆಯ ದೇವರ ಮನೆಯನ್ನ ವಿಶೇಷವಾಗಿ ಅಲಂಕರಿಸಲಾಗುತ್ತಿತ್ತು. ನನ್ನ ಓರಗೆಯ ಸಹೋದರ ಸಂಬಂಧಿ ಹುಡುಗಿಯರಾದ ಕವಿತಾ, ಮಮತಾ, ಸುಷ್ಮಾ, ಅಮಣಿ ಎಲ್ಲರೂ ಹಿಂದಿನ ದಿನವೆ ದೇವರ ಮನೆಯ ಅಷ್ಟೂ ಪಾತ್ರೆ ಪಡಗ, ಕಾಲು ದೀಪಗಳನ್ನ ಹುಣಸೆ ಹಣ್ಣಿನಲ್ಲಿ ತಿಕ್ಕಿ ತಿಕ್ಕಿ ಹೊಳಪು ಬರುವಂತೆ ತೊಳೆದು ಒಣ ಬಟ್ಟೆಯಿಂದ ಒರೆಸಿಡುತ್ತಿದ್ದರು. ಅವರಿಗೆ ಪೂಜೆಯ ಹಿಂದಿನ ದಿನ ಮೈಮುರಿವ ಕೆಲಸ ಕಾದಿರುತ್ತಿತ್ತು. ನಮ್ಮದು ನಾಲ್ಕೆಂಟು ಒಕ್ಕಲುಗಳಿರುವ ತುಂಬು ಸಂಸಾರ. ಮನೆಯ ಎಲ್ಲಾ ಹಬ್ಬ ಹರಿದಿನಗಳಲ್ಲಿ ಒಕ್ಕಲುಗಳ ಮನೆಮಂದಿಯೂ ಬರುತ್ತಿದ್ದರಿಂದ ಎಲ್ಲರ ಊಟವೂ ಅವತ್ತು ನಮ್ಮಲ್ಲಿಯೆ.
ಅವತ್ತಿಗೆ ಮುಖ್ಯವಾಗಿ ಮಾಡಲೆ ಬೇಕಾದ ಬುಟ್ಟಿಗಟ್ಟಲೆ ಉದ್ದಿನ ದೋಸೆಗಾಗಿ ಹಿಂದಿನ ದಿನವೆ ಸೇರುಗಟ್ಟಲೆ ನೆನೆಸಿಟ್ಟ ಅಕ್ಕಿ ಮತ್ತು ಉದ್ದನ್ನ ರುಬ್ಬುವ ಕಲ್ಲಿನಲ್ಲಿ ಹಾಕಿಕೊಂಡು ರುಬ್ಬಿಡ ಬೇಕಾಗಿತ್ತು. ಮರುದಿನ ಬೆಳಗ್ಯೆ ಚಟ್ನಿಗಾಗಿ ಸುಲಿದು ಒಡೆವ ಕಾಯಿಗಳ ರಾಶಿಯನ್ನ ತುರಿದು ತೆಗೆಯುವುದು, ಮಧ್ಯಾಹ್ನದ ಪದಾರ್ಥಕ್ಕಾಗಿ ತರಕಾರಿ ಹೆಚ್ಚುವುದು, ಸೌದೆ ಒಲೆಯ ಮುಂದೆ ಕೂತು ಎಂದೆಂದಿಗೂ ಮುಗಿಯದಷ್ಟಿರುತ್ತಿದ್ದ ಬಂದವನ್ನ ಮೊಗೆಮೊಗೆದು ದೋಸೆ ಹೊಯ್ಯುವುದು, ಇಡಿ ಮನೆಯನ್ನ ಚನ್ನಾಗಿ ಗುಡಿಸಿ ತೊಳೆಯುವುದು, ಅಂಗಳವನ್ನ ನೀರು ಹೊಡೆದು ಗುಡಿಸಿ ಸಗಣಿ ಸಾರಿಸಿ ರಂಗೋಲಿ ಬಿಡಿಸುವುದು ಹೀಗೆ ಅನೇಕ ಕೆಲಸಗಳ ಸರಣಿಯೆ ಆ ಎರಡು ದಿನಗಳು ಅವರನ್ನ ತುರಿಸಿ ಕೊಳ್ಳುವುದಕ್ಕೂ ಬಿಡುವಾಗದಂತೆ ಬಿಸಿಯಾಗಿಡುತ್ತಿತ್ತು. ಎಲ್ಲಾದರೂ ಅವರ ಕೆಲಸದ ನಡುವೆ ನಾನು ಮಂಗಾಟ ಮಾಡಿದರೆ ಎಲ್ಲಾ ಹುಡುಗಿಯರ ಗ್ಯಾಂಗ್ ಎಲ್ಲಿ ಹೊಡೆದು ಹೊಸಕಿ-ಬಿಸಾಕಿ ಒದ್ದು ಓಡಿಸಿ ಬಿಡುತ್ತಾರೋ ಎನ್ನುವ ರೀತಿ ಉಗ್ರವಾಗಿ ಎಗರಿ ಬೀಳುತ್ತಿದ್ದರು! ಇಂತಹ ಅಕಾಲದ ಅಪಾಯಗಳ ಖಚಿತ ಅರಿವಿದ್ದೂ ನಾನು ಆಗಾಗ ಅಲ್ಲಲ್ಲಿ ಬತ್ತಿಯುಟ್ಟು ಮಜಾ ತಗೊಳ್ಳುತ್ತಿದ್ದೆ. ಹಿಡಿದು ಬಡಿದು ಬುದ್ದಿ ಕಲಿಸಲು ಬರುವ ವೀರ ವನಿತೆಯರಿಂದ ಪಾರಾಗಲು ಹಟ್ಟಿಯ ಅಟ್ಟವಂತೂ ಇದ್ದೇ ಇತ್ತು! ಅದೇನೆ ಆಕಾಶ ಭೂಮಿ ಒಂದಾದರೂ ಲಂಗ ಹಾಕಿಕೊಂಡ ಅಡೆತಡೆಯ ಕಾರಣ ಅವರು ಅಟ್ಟ ಹತ್ತುವ ಸಾಹಸ ಮಾಡುತ್ತಿರಲಿಲ್ಲ ಎನ್ನುವ ಭರವಸೆ ನೂರಕ್ಕೆ ಇನ್ನೂರರಷ್ಟಿದ್ದಾಗ ಅದು ಬಾಲ್ಯದುದ್ದಕ್ಕೂ ನನ್ನ "ಅಜ್ಞಾತ ಸ್ಥಳ"ವಾಗಿ ಅಗತ್ಯ ಬಿದ್ದಾಗಲೆಲ್ಲಾ ಅಂತಹ ತುರ್ತು ಪರಿಸ್ಥಿತಿಯಲ್ಲಿ ಬಳಕೆಯಾಗುತ್ತಿತ್ತು.
ಮರುದಿನ ಬೆಳಗ್ಯೆ ಮನೆಯ ಬಾಗಿಲುಗಳಿಗೆ, ಹಟ್ಟಿಯ ಮುಂಬಾಗಿಲಿಗೆ ಮಾವಿನ ಎಲೆಗಳ ತೋರಣ ಕಟ್ಟಿ ಬೆಳಗ್ಗಿನ ತಿಂಡಿಗಾಗಿ ಎಲ್ಲರಿಗೂ ದೋಸೆಯ ಸಮಾರಾಧನೆ ನಡೆಸಿ, ಅಂದಿನ ಪೂಜೆಯ ಎಡೆಯ ನೈವೇದ್ಯಕ್ಕಾಗಿ ಪಾಯಸ, ಅತಿರಸ ಇವನ್ನೆಲ್ಲ ಮಿಂದು ಮಡಿಯಲ್ಲೆ ಮಾಡಿ ಮಧ್ಯಾಹ್ನದ ಪೂಜೆಗೆ ಅರಳಿನ ಪ್ರಸಾದ, ಪಂಚಾಮೃತ ತಾಯಾರು ಮಾಡಿಟ್ಟು ಎಲ್ಲರೂ ಕೂಡಿದ ಮೇಲೆ ಅಮ್ಮನ ಅಣ್ಣ ಸುಂದರ ಮಾವ ಪೂಜೆ ಮಾಡಿ ಮಂಗಳಾರತಿ ಮುಗಿಸಿದ ಮೇಲೆ ಪಾಯಸದೂಟದ ಸೊರ ಸೊರ ಶುರು ವಾಗುತ್ತಿತ್ತು. ಎರಡೆರಡು ಬಗೆಯ ತೊಂಡೆ ಮತ್ತು ಗುಜ್ಜೆ ಪಲ್ಯ, ಕೋಸಂಬರಿ, ಹಪ್ಪಳ-ಸಂಡಿಗೆ. ಅತಿರಸ, ಪ್ರಸಾದದ ಶಿರಾ, ಸೌತೆಯ ಪದಾರ್ಥ, ಎಲ್ಲಕ್ಕೂ ಹೆಚ್ಚಾಗಿ ಕಡಲೆ ಬೇಳೆಯ ಪಾಯಸ ಹೀಗೆ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಸದಾವಕಾಶವನ್ನ ಅಲ್ಲಿ ನೆರೆದ ಯಾರೊಬ್ಬರೂ ಕಳೆದು ಕೊಳ್ಳುತ್ತಿರಲಿಲ್ಲ. ಸಂಜೆಯಾದಾಗ ಮನೆ ಮಂದಿಯೆಲ್ಲ ಕೂಡಿ ಕೊಣಾಜೆ ಕಲ್ಲಿಗೆ ಹೋಗುತ್ತಿದ್ದೆವು. ಇಂದು ಪ್ರವಾಸಿ ಸ್ಥಳವಾಗಿ ಹೆಸರು ಮಾಡುತ್ತಿರುವ ಕೊಣಾಜೆ ಕಲ್ಲು ಒಂದು ಕಾಲಕ್ಕೆ ನಂಬಿದ ಕೆಲವು ಮಂದಿಯ ಹೊರತು ಇನ್ಯಾರೂ ಹೋಗದ ಗುಡ್ಡದ ನೀತಿಯ ಮೇಲಿನ ಬೃಹತ್ ಜೋಡಿ ಬಂಡೆಗಳು ನನ್ನಮ್ಮನ ಕುಟುಂಬದ ಜೊತೆ ಭಾವನಾತ್ಮಕ ಸಂಬಂಧ ಹೊಂದಿದೆ.
ನನ್ನಮ್ಮ ಇನ್ನೂ ಮೂರ್ನಾಲ್ಕು ವರ್ಷದ ಕೂಸಾಗಿದ್ದಾಗ ಒಬ್ಬ ಸಂನ್ಯಾಸಿ ಮನೆಯಂಗಳಕ್ಕೆ ಬರಿಗಾಲಲ್ಲಿ ಅವರಪ್ಪನನ್ನು ಹುಡುಕಿಕೊಂದು ಬಂದರಂತೆ. ಹೀಗೆ ಬಂದ ಅನಾಮಿಕ ಕಾವಿಧಾರಿಗಳನ್ನ ಚಾವಡಿಯೇರಿಸಿ ಸತ್ಕರಿಸಿದಾಗ "ಹೆಗಡೆರೆ ನನಗೆ ಮುಡಿಯಕ್ಕಿ ಬೇಕು, ಮೊಗೆ ತೆಂಗಿನೆಣ್ಣೆ ಬೇಕು. ಜೊತೆಗೆ ಈಗಲೆ ನನ್ನ ಜೊತೆ ಕೈಗತ್ತಿ ಹಿಡಿದು ನೀವೂ ಬರಬೇಕು!" ಅಂದಾಗ ಅಮ್ಮನ ಅಪ್ಪ ಮರು ಮಾತನಾಡದೆ ಎಳೆಯ ಮಗಳಾಗಿದ್ದ ನನ್ನಮ್ಮನನ್ನು ಹೆಗಲ ಮೇಲೆ ಹೂರಿಸಿಕೊಂದು ಮನೆಯಾಳಿನ ಕೈಯಲ್ಲಿ ಅವರು ಕೇಳಿದ್ದನ್ನ ಹೊರೆಸಿ, ತಾನೊಂದು ಕೈಗತ್ತಿ ಹಿಡಿದು ಹೊರಟರಂತೆ. ಸೀದ ಅವರ ಅವರ ಸವಾರಿ ಸಾಗಿದ್ದು ಮನೆಯಿಂದ ನಾಲ್ಕು ಫರ್ಲಾಂಗ್ ದೂರದಲ್ಲಿ ಸರಕಾರಿ ರಾಜ ರಸ್ತೆಯಾಚೆಗೆ ಮತ್ತೆರಡು ಕಿಲೋಮೀಟರ್ ಮೇಲ್ಮುಖ ಸಾಗಿ ಹತ್ತಿ ಸಿಗುವ ಕೊಣಾಜೆ ಕಲ್ಲಿನತ್ತ. ತನ್ನ ದೈತ್ಯಾಕಾರದಿಂದ ಬಲು ದೂರದ ವರೆಗೂ ಕಾಣಲಿಕ್ಕೆ ಸಿಗುವ ಈ ದೊಡ್ಡ ಬಂಡೆಗಳ ಒಳಗೆ ತಳದಲ್ಲಿ ವಿಶಾಲವಾದ ಗುಹೆಗಳಿವೆ. ಕರಡಿ ಮತ್ತು ಹುಲಿಗಳು ವಾಸವಿದ್ದ ಜಾಗ ಅದಾಗಿದ್ದಂತೆ. ಅದನ್ನ ಮುತ್ತಲು ದಾರಿ ಅನ್ನುವಂತದ್ದೊಂದು ಅಲ್ಲದೆ ಇದ್ದುದ್ದರಿಂದ ಕೈಗತ್ತಿಯಲ್ಲಿ ಮುಳ್ಳು ಕಂಟಿ, ಕಾಡು ಬಳ್ಳಿಗಳನ್ನ ಕಡಿದು ಅಮ್ಮನ ಅಪ್ಪ ದಾರಿ ಮಾಡಿಕೊಂಡು ಮುಂದೆ ಸಾಗಿ ಸಂನ್ಯಾಸಿ ಹೇಳಿದಂತೆ ದಾರಿ ಸಾಗಿದರಂತೆ. ಕಡೆಗೂ ಗುಹೆಗಳೆದುರಾದಾಗ ಅಲ್ಲಿಯೆ ನಿಂತ ಆ ಸಂನ್ಯಾಸಿಗಳು ಅಲ್ಲಿಯೆ ನೆಲೆ ನಿಲ್ಲುವುದಾಗಿ ಘೋಷಿಸಿ ಅಲ್ಲಿ ಶಾರದೆಯ ನೆಲೆ ಇದೆ ಇನ್ನು ಮುಂದೆ ಇದೆ ನನ್ನ ನೆಲೆ ಎಂದರಂತೆ. ಅಲ್ಲಿ ಗುಂಪುಗುಂಪಾಗಿದ್ದ, ಈಗಲೂ ಇರುವ ರೌಡಿ ವಾನರ ಪಡೆ ಸಂನ್ಯಾಸಿಗಳ ತಂಟೆಗೆ ಬರದೆ ಅವರಿಗೆ ದೂರದಲ್ಲಿಯೆ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಇವರ ಕಾರುಬಾರನ್ನೆಲ್ಲ ನೋಡುತ್ತ ನಿಂತವಂತೆ. ಜೊತೆಯಲ್ಲಿ ಬಂದ ಆಳಿನ ಸಹಾಯದೊಂದಿಗೆ ಅಮ್ಮನ ಅಪ್ಪ ಆ ಜಾಗವನ್ನೆಲ್ಲ ಸ್ವಚ್ಛ ಮಾಡಿ ಒಪ್ಪಗೊಳಿಸಿ ಕೊಟ್ಟು ಸಂನ್ಯಾಸಿ ಮಾಡಿದ ಮೊದಲ ಪೂಜೆಯ ಹೂ ಪ್ರಸಾದ ತಗೊಂಡು ಮರಳಿ ಮನೆಗೆ ಬಂದರಂತೆ,
ಮರುದಿನ ಇನ್ನಷ್ಟು ನಿತ್ಯೋಪಯೋಗಿ ಸಾಮಾನು, ಪಾತ್ರೆ ಪಡಗ ಹೊತ್ತು ಕೊಣಾಜೆ ಕಲ್ಲಿಗೆ ಮಕ್ಕಳು ಮತ್ತು ಹೆಂಡತಿ ನಮ್ಮ ಅವ್ವನನ್ನು ಕರೆದುಕೊಂಡು ಹೋಗಿ ಬಂದರಂತೆ. ಅಂದು ಅವರೆಲ್ಲರ ಊಟ ಅಲ್ಲಿಯೆ ಸಂನ್ಯಾಸಿಗಳ ಕೈಯಡುಗೆಯಲ್ಲಿಯೆ ಆಯಿತಂತೆ. ಅಲ್ಲಿಂದೀಚೆಗೆ ಅದು ನಮ್ಮೆಲ್ಲರ ಶ್ರದ್ಧಾ ಸ್ಥಳವಾಗಿದೆ. ಇವತ್ತಿಗೂ ನಾವು ಶ್ರದ್ಧಾ ಭಕ್ತಿಯಿಂದ ಅಲ್ಲಿಗೆ ವರ್ಷಕ್ಕೆ ನಾಲ್ಕಾರು ಬಾರಿ ಹೋಗಿ ಒಂದು ರಾತ್ರಿ ಅಲ್ಲಿಯೆ ಉಳಿದು ಮರುದಿನದ ಬೆಳಗಿನ ಝಾವದ ಫಲಾಹಾರ ಮತ್ತು ಚಾವನ್ನ ಅಲ್ಲಿಯೆ ತೀರಿಸಿ ಮರಳಿ ಬರುತ್ತೇವೆ. ಅಲ್ಲಿ ಸಂನ್ಯಾಸಿಗಳು ಬದಲಾಗುತ್ತಲೇ ಬಂದಿದ್ದಾರೆ. ಅವರು ಎಲ್ಲಿ ಹೋಗಿ ಮರೆಯಾಗುತ್ತಾರೆ? ಹೊಸ ಸಂನ್ಯಾಸಿಗಳು ಆ ಕೂಡಲೆ ಹೇಳಿ ಕಳಿಸಿದಂತೆ ಅದೆಲ್ಲಿಂದ ಬರುತ್ತಾರೆ? ಯಾರೊಬ್ಬರಿಗೂ ಗೊತ್ತಿಲ್ಲ! ಆದರೆ ಬಂದ ಹೊಸಬರಿಗೆ ನಮ್ಮ ಮನೆಯವರ ಸ್ಪಷ್ಟ ಪರಿಚಯವಿರುತ್ತದೆ. ಮತ್ತವರು ನಮ್ಮಲ್ಲಿಗೆ ಮೊದಲ ಕರೆ ಕಳಿಸುತ್ತಾರೆ! ಇಂದಿಗೂ ನಮ್ಮ ಸಾಗಿನ ಬೆಟ್ಟಿನ ಮನೆಯಿಂದ ಅಲ್ಲಿಗೆ ತಿಂಗಳಿಗೊಂದು ಮುಡಿ ಅಕ್ಕಿ, ಇನ್ನಿತರ ದಿನಸಿ ಸಾಗಣೆಯಾಗುತ್ತದೆ. ಕಾಲಕ್ರಮೇಣ ಸುತ್ತಮುತ್ತಲಿನ ವಿವಿಧ ಜಾತಿ ಪಂಗಡಗಳ ಮಂದಿ ಅಲ್ಲಿಗೆ ಬರುತ್ತಿದ್ದರೂ ನಮ್ಮ ಕುಟುಂಬಕ್ಕೆ ಈಗಲೂ ಅಲ್ಲಿ ಮೊದಲ ಮರ್ಯಾದೆಯಿದೆ. ಶಾರದಾ ಪೂಜೆಯ ದಿನದ ಸಂಜೆ ನಮ್ಮ ಕುಟುಂಬ ದಂಡು ಕಟ್ಟಿಕೊಂಡು ಅಲ್ಲಿಗೆ ಹೋಗಿ ತಪ್ಪದೆ ಪೂಜೆ ಮಾಡಿಸಿ ಬರಲಿಕ್ಕೂ ಈ ಅಂಟಿನ ನಂಟೆ ಕಾರಣ.
ದೇವರಲ್ಲಿ ನಂಬಿಕೆಯಿರದ ನಾನೂ ಇದನ್ನ ಎಂಜಾಯ್ ಮಾಡ್ತೇನೆ, ವರ್ಷಕ್ಕೊಂದಾವರ್ತಿಯಾದರೂ ಅಲ್ಲಿಗೆ ಹೋಗಿದ್ದು ರಾತ್ರಿ ಉಳಿದು ಬರುತ್ತೇನೆ. ಅಲ್ಲಿನ ಸ್ವಾಮಿಗಳಿಗೂ ಗೊತ್ತು ನಾನು ದೇವರಿಗೆ ಕೈ ಮುಗಿಯುವುದಿಲ್ಲ ಅಂತ. ಆದರೆ ನನ್ನ ಅಲ್ಲಿನ ತಲೆಮಾರುಗಳ ಮುಂದುವರೆದ ಸೌಹಾರ್ದ ಬಾಂಧವ್ಯಕ್ಕೆ ಇದು ಎಂದೂ ತೊಡಕಾಗಿ ಪರಿಣಮಿಸಿಲ್ಲ. ಇಂದು ಅನೇಕ ಕಾರಣಗಳಿಂದ ಸಾಗಿನಬೆಟ್ಟು ಮನೆಯಲ್ಲಿ ಶಾರದಾ ಪೂಜೆ ಆಚರಣೆ ಚಾಲ್ತಿಯಲ್ಲಿದ್ದರೂ ಮೊದಲಿನ ಗೌಜಿಯನ್ನ ಕಳೆದುಕೊಂಡಿದೆ. ನಗರೀಕೃತ ಯಾಂತ್ರಿಕ ಬದುಕು ಹಬ್ಬದ ಹಳೆಯ ಲವಲವಿಕೆಯನ್ನ ನಮ್ಮೆಲ್ಲರಿಂದ ಕದ್ದುಕೊಂಡಿದೆ. ಇದು ಗೊತ್ತಿದ್ದೂ ಮಾಡುತ್ತಿರುವ ಸ್ವಯಂಕೃತಾಪರಾಧವಾಗಿದ್ದರೂ ಸಹ ನಾವು ಕನಿಷ್ಠ ಅದೇನನ್ನೋ ಕಳೆದುಕೊಂಡಂತೆ ನಟಿಸುತ್ತೇವೆ! ಅನ್ನದ ಬೆಲೆ ನನಗೆ ಅಮ್ಮನಿಂದ ಸಣ್ಣಂದಿನಿಂದಲೆ ಅರಿವಿಗೆ ಬರ ತೊಡಗಿತ್ತು. ತುಂಬಿದ ಸಂಸಾರದ ಕಿರಿಯ ಕೂಸು ನಾನಾಗಿದ್ದೆ. ಅಜ್ಜನ ದುಡಿಮೆಯನ್ನೆ ಆಧರಿಸಿದ್ದ ಎಲ್ಲರ ಹೊಟ್ಟೆಗೆ ತುಂಬುವಷ್ಟನ್ನು ಹೊಂದಿಸುವ ಅಮ್ಮನ ಕಷ್ಟವನ್ನು ಊಹಿಸಬಲ್ಲೆ. ಅನ್ನದ ಪ್ರತಿ ಅಗುಳಿನ ಮಹತ್ವ ಆಕಾರಣದಿಂದಲೆ ಬಹುಷಃ ನನಗೆ ಗೊತ್ತಾಗಿದೆ. ನಮ್ಮ ಮನೆಯಲ್ಲಿ ಅನ್ನಕ್ಕೆ ಬರವಿರಲಿಲ್ಲ ಆದರೆ ಚಲ್ಲುವಷ್ಟು ಸಮೃದ್ಧಿಯಂತೂ ಖಂಡಿತ ಇರಲಿಲ್ಲ. ಹೀಗಿದ್ದರೂ ಹಂಚಿಕೊಂಡು ತಿನ್ನುವ ಸ್ವಭಾವ ಆಗಿನಂದಲೆ ಮನೆಯ ಹಿರಿಯರನ್ನ ನೊಡಿಕಂಡು ಕಲಿಯುವುದು ನನಗೆ ರೂಢಿಯಾಗಿತ್ತು. ನಮ್ಮ ಮನೆಗೆ ವಾರದ ಎಲ್ಲಾ ದಿನಗಳಲ್ಲೂ ಅನೆಕರು ಬೇಡಲು ಬರುತ್ತಿದ್ದರು. ಇವರನ್ನ ಭಿಕ್ಷುಕರೆಂದು ಕರೆಯುವುದು ಅಷ್ಟು ಸಮಂಜಸವಾಗಲಾರದು. ಸೋಮವಾರದ ಅಜ್ಜಿ, ಶಿವಾಯನಮಃದ ಜೋಗಿ, ಕುರುಕುರು ನರ್ಸಣ್ಣ ಮಾಮ, ಜಾಗಟೆ ದಾಸಯ್ಯ, ಕುಯ್ಯೋ ಢಕ್ಕೆ ಡೋಲಿನ ಅಮ್ಮಾ-ಮಗ, ಅಪರೂಪಕ್ಕೊಬ್ಬ ಕರಡಿ ಮಾಮ, ಅಮವಾಸ್ಯೆಗೊ ಹುಣ್ಣಿಮೆಗೊ ಬರುತ್ತಿದ್ದ ಹಾವಾಡಿಗ ಈ ಎಲ್ಲರಿಗೂ ನಮ್ಮ ಮನೆಯ ಹೊಸಿಲ ಬಳಿ ಅವರವರ ಅನುಕೂಲದ ದಿನಗಳಲ್ಲಿ ಸ್ವಾಗತವಿರುತ್ತಿತ್ತು. ಇವರೆಲ್ಲರಿಗೂ ನಮ್ಮ ಅಜ್ಜನ ಕಷ್ಟದ ದಿನಗಳ ದುಡಿಮೆಯಲ್ಲಿ ಒಂದು ಪಾಲಿರುತ್ತಿತ್ತು. ನಾನು ಅವರಲ್ಲಿ ಯಾರಾದರು ಮನೆ ಬಾಗಿಲಿಗೆ ಬಂದದ್ದೆ ತಡ ಅಮ್ಮ ಕೊಡುತ್ತಿದ್ದ ಒಂದು ಮುಷ್ಠಿ ಅಕ್ಕಿಯನ್ನೋ, ಇಲ್ಲವೆ ಮಾಡಿರುತ್ತಿದ್ದ ಬೆಳಗಿನ ತಿಂಡಿಯಲ್ಲಿ ಒಂದು ಪಾಲನ್ನೋ ಅಡುಗೆ ಮನೆಯಂದ ಓಯ್ದು ಅವರ ಕೈಪಾತ್ರೆಗೆ ಹೆಮ್ಮಯಿಂದ ಹಾಕುತ್ತಿದ್ದೆ.
ಪ್ರತಿ ಸೊಮವಾರ ನಮ್ಮ ಬೀದಿಯ ಎಲ್ಲಾ ಮನೆಯ ಮಂಬಾಗಿಲಿನಲ್ಲೂ "ಶಿವಾಯ ನಮಃ.... ಅಮ್ಮಾ ಅಮ್ಮಾ..." ಎನ್ನುವ ಧ್ವನಿ ಕೇಳಿ ಬರುತ್ತಿತ್ತು. ಕಾವಿ ಅಥವಾ ಕಪ್ಪು ಶಾಠಿ ಹೊದ್ದು ಅಂತಹದ್ದೆ ಇನ್ನೊಂದು ಬಟ್ಟೆಯ ತುಂಡನ್ನ ಅವರು ಸೊಂಟಕ್ಕೆ ಬಿಗಿದುಕೊಂಡಿರುತ್ತಿದ್ದರು.ಬಿಳಿ ಗಡ್ಡದ ಕಡುಗಪ್ಪು ಮುಖದ ಅವರ ಕಣ್ಣುಗಳ ನಡುವಿನಲ್ಲಿ ದೊಡ್ಡ ಕುಂಕುಮದ ಬೊಟ್ಟಿದ್ದು ಅದಕ್ಕೂ ಮೇಲೆ ಮೂರು ವಿಭೂತಿ ಪಟ್ಟಿಯಿರುತ್ತಿತ್ತು. ಮೂಗಿನ ಕೊನೆಯಲ್ಲೊಂದು ಕಪ್ಪು ಅಂಚಿನ ದಪ್ಪ ಗಾಜಿನ ಕನ್ನಡಕ ಇಷ್ಟು ಅವರ ಅನುಗಾಲದ ವೇಷ. ಒಂದುವೇಳೆ ಅವರ ಒಂದು ಕೂಗಿಗೆ ಮನೆಯೊಳಗಿನಿಂದ ಯಾವುದೆ ಪ್ರತಿಕ್ರಿಯೆ ಬಾರದಿದ್ದರೆ ಮತ್ತೆ ಅದೆ ರಾಗವನ್ನ ಅವರು ಹಾಡಿಯೇ ಹಾಡುತ್ತಿದ್ದರು. ಅವರ ಬಗಲಲ್ಲಿ ಸದಾ ಒನ್ದು ಕಪ್ಪು "ಸಾಹಿತಿ ಚೀಲ"ದಂತಹ ಜೋಳಿಗೆ ನೇತಾಡುತ್ತಿತ್ತು. ಕೈಯಲ್ಲೊಂದು ಸಿಲವಾರದ ಕೈಪಾತ್ರೆಯನ್ನ ಅವರು ಹಿಡಿದಿರುತ್ತಿದ್ದರು. ನಾವು ಅದರಲ್ಲಿ ಹಾಕುತ್ತಿದ್ದ ಪಾವಕ್ಕಿಯನ್ನ ಅನಂತರ ಅವರು ಆ ಜೋಳಿಗೆಗೆ ಸುರಿದುಕೊಳ್ಳುತ್ತಿದ್ದರು. ಮೇಲುಬಸ್ಟಾಂಡಿಗೆ ಹೋಗುವ ದಾರಿಯಲ್ಲಿ ಖಾದರ್ ಸಾಬರ ಬಂಗಲೆಯ ಮಂದೆ ಮಸೀದಿ ರಸ್ತೆಗೆ ಹೊಗಲಿಕ್ಕಿದ್ದ ಸಣ್ಣ ದಾರಿಯ ಮೂಲೆಯಲ್ಲಿದ್ದ ಕಲ್ಲಿನ ಬಿಡಾರದಲ್ಲಿ ಅವರ ವಾಸ್ತವ್ಯವಿತ್ತು. ಪ್ರತಿ ಸೋಮವಾರ ಮಾತ್ರ ಅವರ ಸವಾರಿ ನಮ್ಮ ಮನೆಯಂಗಳದಲ್ಲಿ ಕಾಣಲಿಕ್ಕೆ ಸಿಗುತ್ತಿತ್ತು. ಅವತ್ತಿನ ಹೊರತು ಇನ್ಯಾವುದೇ ದಿನವೂ ಅವರು ಯಾರ ಮನೆಗೂ ಬೇಡಲು ಬರುತ್ತಲೆ ಇರಲಿಲ್ಲ. ದೂರದ ಪಡುಬಿದ್ರಿಯಲ್ಲಿ ಅವರ ಕುಟುಂಬ ಇತ್ತಂತೆ, ಅವರಿಗೆ ಊರಲ್ಲಿ ಹೆಂಡತಿ-ಮಕ್ಕಳೂ ಇದ್ದಾರಂತೆ. ಗುರುಪುರದ ಬಳಿಯಿರುವ ಲಿಂಗಾಯತ ಮಠದ ಅನುಯಾಯಿಗಳಾಗಿದ್ದ ಜೋಗಿ ಜಂಗಮರಂತೆ ಅವರು. ಹೀಗೆ ಬೇಡುವುದೇ ಅವರ ಕುಲ ಕಸುಬಂತೆ! ಅವರು ಹೇಗೆ ಬೇಡಿ ಬೇಡಿಯೇ ತಮ್ಮ ಮನೆ ನಡೆಸಿಕೊಂಡು ಮಕ್ಕಳ ಮದುವೆಯನ್ನೂ ಮಾಡಿ ಮುಗಿದಸಿದ್ದರಂತೆ!! ಆಗೆಲ್ಲಾ ಅವರು ಬಾರದ ಸೋಮವಾರಗಳಲ್ಲಿ ಏನೋ ಮಿಸ್ ಆದಂತೆ ಅನ್ನಿಸುತ್ತಿತ್ತು.
( ಮುಂದೂ ಇದೆ....)
09 November 2012
ನನ್ನ ಆಸೆ ವಾಸ್ತವಕ್ಕೆ ಬಹು ದೂರ.....
08 November 2012
ದಿಕ್ಕು ತಪ್ಪಿದ ಅನಾಮಿಕ ನಾವೆಗೆ....
07 November 2012
ಸಕಾರಣವಿದೆ.......
ಸುರಿವ ಹನಿಮಳೆಯೂ .......
ಒಲವೂ, ವಿರಹವೂ, ಸಂತಸವೂ, ಸಂಕಟವೂ
ನೋವೂ, ನಲಿವೂ ನೀನೆ ತಾನೆ ನನಗಿತ್ತ ಗೋಳು....
ಎಲ್ಲವೂ ನಿನ್ನ ಭಿಕ್ಷೆ,
ಅತಿರೇಕದ ಅವಲಂಬನೆಗೆ ಮನಸು ತೆತ್ತ ದುಬಾರಿ ದಂಡ
ಎಕಾಂತದ ದೀರ್ಘ ಬಾಳು...
ಇದೊಂಥರಾ ಸ್ವಯಂ ಶಿಕ್ಷೆ./
ಬಲು ಬೇಸರದ ಸಂಜೆ ಅದೇಕೊ ಆವರಿಸಿ
ಮೆಲ್ಲನೆ ಮನಸ ಹಿಂಡುತ್ತಿದೆ....
ಕಣ್ಣ ಮರೆಯ ಕಡು ನೋವಲ್ಲೂ
ತುಟಿಯಂಚಲ್ಲಿ ನಸು ನಗು ಅರಳಿಸುವಲ್ಲಿ ಯಶಸ್ವಿಯಾದ
ನಿನ್ನ ನೆನಪುಗಳಿಗೆ ಎಂದೂ ಬೆಲೆ ಕಟ್ಟಲಾಗದು,
ನಗುವಿನ ಮೊಗವಾಡ ಹೊತ್ತು
ನಿನಗೆ ಶುಭ ಹಾರೈಸುವ ನನ್ನೊಳಗೆ...
ನೋವಿನ ಮಡು ತುಂಬಿ ನಿಂತಿದೆ//
ಮುರಿದ ಮನದ ಮೂಲೆಯಲ್ಲೂ
ನಿನ್ನ ನೆನಪುಗಳದೆ ಮಾರ್ದನಿ...
ಮನಸ ಪುಸ್ತಕದ ನಡು ಪುಟದಲ್ಲಿ
ಇಟ್ಟು ಮರೆತಿದ್ದ ಬಣ್ಣದ ನವಿಲುಗರಿ ನೀನು,
ಒಲವಲ್ಲಿ ನಲಿವಿಲ್ಲ ಬರಿದೆ ನೋವಿನ ಸುಳಿಯೆ ಈ ಮಡುವಲ್ಲಿ ತುಂಬಿದೆಯಲ್ಲ!
ಆದೇನೆ ಇದ್ದರೂ....
ಮಳ್ಳ ಮನಸಿಗೆ ಇದರಿಂದ ಪಾರಾಗುವ ಇರಾದೆಯೆ ಇಲ್ಲ?!/
ಗತ್ತಿನಿಂದ ಹೇಳುವ ನನ್ನ ನೆನಪುಗಳಲ್ಲೆಲ್ಲ
ನೀನೆ ಬಹುಪಾಲು ಆವರಿಸಿರುತ್ತೀಯಲ್ಲ....
ಇದೆಂಥಾ ವಿಸ್ಮಯ,
ಕಣ್ಣು ಕದ್ದು ಕಾಣುವ ಕನಸುಗಳಿಗೆ ಸುಂಕವಿಲ್ಲ
ಒಂದು ವೇಳೆ ಇದ್ದಿದ್ದರೆ....
ನಾನಿವತ್ತು ಪೂರ್ತಿ ದಿವಾಳಿಯಾಗಿರುತ್ತಿದ್ದೆ//
ಕೆಲವನ್ನು ಹೇಳದೆ ಕೆಲವನ್ನ ಕೇಳದೆ ಅರಿತುಕೊಳ್ಳ ಬೇಕಿತ್ತು ನೀನು
ನಾನಿನ್ನನರಿತಂತೆ....
ಸಂಜೆ ಅಚಾನಕ್ಕಾಗಿ ಕವಿಯುವ ಮೋಡ ಹನಿಯಾಗಿ ಧರೆಯ ಸೋಕುವಾಗ
ಮನಕ್ಕೀಯುವ ಮುದ ವರ್ಣನೆಗೆ ಹೊರತು,
ಕಳೆದ ಕೆಲವು ಕ್ಷಣಗಳ ಕದದ ಮರೆಯಲ್ಲಿ
ಕುತೂಹಲದ ಕಳ್ಳ ಕಣ್ಣುಗಳು ಕಾಯುತ್ತಿರುವುದು ನಿನ್ನನ್ನೆ/
ಕರೆಯದೆ ಬರುತ್ತಿದ್ದ ನೀನು ನಿನ್ನ ನೆನಪಿನಲ್ಲೂ
ಪೂರಾ ಹಾಗೆಯೆ ಹೋಲುತ್ತೀಯ....
ನೆನಪುಗಳೂ ಹೇಳದೆ ಕೇಳದೆ ದಾಳಿಯಿಡುತ್ತಿವೆಯಲ್ಲ !,
ಕಣ್ಣಾಡಿಸುತ್ತಾ ಕಾದಿರುವ ಹಾದಿಯಲ್ಲಿ
ನಿನ್ನ ಹಳೆಯ ಹೆಜ್ಜೆಗುರುತುಗಳು ಮಾಸುವ ಮುನ್ನ....
ಹೊಸತನ್ನ ಮತ್ತೆ ಮೂಡಿಸಲು
ನೀ ಬಂದರೆ ನನಗಷ್ಟೇ ಸಾಕು.//
ನೀರಲ್ಲಿ ಕರಗದ ಗಾಳಿ ಅಪಹರಿಸಲಾಗದ
ಬಾನಲ್ಲಿ ಲೀನವಾಗದ ನನ್ನ ಒಲವಿಗೆ....
ಅಪ್ಪಟ ಮಣ್ಣಿನ ವಾಸನೆಯಿದೆ,
ಇದೆಂದೂ ಮುಗಿಯದ ಕಥೆ
ನಿನ್ನ ನೆನಪು ಮಾಸುವ ಇರಾದೆ ಇಟ್ಟುಕೊಂಡಂತಿಲ್ಲ....
ನನ್ನದು ನಿರಂತರ ವ್ಯಥೆ/
ಕಳೆದು ಕೊಂಡ ನಷ್ಟ ನನಗೋ?
ಪಡೆಯದೆ ಹೋದ ಪಾಪಿ ನೀನೋ....
ಒಂದಂತೂ ನಿಜ ಎಲ್ಲೋ ಎನೋ ತಾಳತಪ್ಪಿದೆ,
ಸುರಿವ ಹನಿಮಳೆಯೂ
ಇಷ್ಟೊಂದು ಭೀಕರ ಶೀತಲ ಅನುಭವ ತರುವಾಗ...
ನಿನ್ನ ಬೆಚ್ಛನೆ ಅಪ್ಪುಗೆಯಿಲ್ಲದ
ಮುಂದಿನ ದೀರ್ಘ ಬಾಳು ದುರ್ಭರವೆನ್ನಿಸುತ್ತದೆ?!//
06 November 2012
ಬಾಣ ಹೋಯ್ತು, ಪಿಸ್ತೂಲ್ ಬಂತು ಡುಂ ಡುಂ ಡುಂ....!
Subscribe to:
Posts (Atom)