06 October 2013

ನಾನೂ ನನ್ನ ಹೆಂಡ್ತೀರು.......






ತೀರ್ಥಹಳ್ಳಿಯ ನಮ್ಮ ಮನೆ ಪೇಟೆಯ ಮಗ್ಗುಲಲ್ಲೆ ಇರುವ ಸೊಪ್ಪುಗುಡ್ಡೆ ವಿಸ್ತರಣದಲ್ಲಿದ್ದದ್ದರಿಂದ ಗುರುತಿನ ಸುತ್ತಮುತ್ತಲ ಅನೇಕ ಹಳ್ಳಿಗರು ತಾಲೂಕು ಕೇಂದ್ರಕ್ಕೆ ಆಸ್ಪತ್ರೆ, ಕೋರ್ಟು-ಕಛೇರಿ, ಸಿನೆಮಾ, ಸಂತೆ, ಜಾತ್ರೆ. ದೇವಸ್ಥಾನದ ಹರಕೆ ಹಾಗೂ ಸ್ವಂತದ ಇನ್ನಿತರ ಚಿಕ್ಕಪುಟ್ಟ ಕೆಲಸಗಳ ನಿಮಿತ್ತ ಬಂದಾಗ ನಮ್ಮಲ್ಲಿ ಬರುವ ರೂಢಿಯಿತ್ತು. ನನ್ನಜ್ಜ "ಗಜಾನನ ಕಂಪನಿಯ" ಜನಪ್ರಿಯ "ಡೈವರ್ ಹೆಗಡೇರು" ಆಗಿದ್ದರಿಂದ ಹಾಗೂ ಆ ಕಾಲಕ್ಕಿನ್ನೂ ಬಸ್ ಚಾಲಕರು ಮಲೆನಾಡಿನ ಮಟ್ಟಿಗೆ ಬ್ರಿಟಿಷ್ ಏರ್'ವೇಸ್'ನ ಪೈಲೆಟ್'ಗಳಷ್ಟು ಮರ್ಯಾದೆ ಗಳಿಸುತ್ತಿದ್ದರಿಂದ ಈ ಎಲ್ಲಾ ಆವ್ಯಕ್ತ ಸಂಬಂಧಗಳು ಸುದ್ದಿ-ಸಾಮಾನುಗಳನ್ನ ಊರಿಂದೂರಿಗೆ ಮುಟ್ಟಿಸುವ ಅಜ್ಜನ ಮೂಲಕ ನಮ್ಮ ಮನೆಯೊಂದಿಗೆ ಬೆಸೆದುಕೊಂಡಿತ್ತು.

ಹೀಗೆ ನಮ್ಮಲ್ಲಿ ಬರುತ್ತಿದ್ದವರಲ್ಲಿ ಬೊಬ್ಬಿಯ ಇಂದ್ರಾ ಕಿಣಿ, ಮಂಡಗದ್ದೆಯ ಕುಸುಮಕ್ಕ, ಸಿಗದಾಳಿನ ಶಾಮ ಮಾವನ ಮಕ್ಕಳು, ದಬ್ಬಣಗದ್ದೆಯ ಪುಟ್ಟೇಗೌಡರ ಮನೆ ಮಂದಿ, ಅವರ ಆಳುಗಳಲ್ಲಿ ಪ್ರಮುಖವಾಗಿ ಮಂಜಿ, ಆಗುಂಬೆಯ ಅಪ್ಪಿಯಕ್ಕ, ಶೇಡ್ಗಾರಿನ ಕೆಲವರು, ಕಟ್ಟೆಹಕ್ಕಲಿನ ಹಲವರು, ಅಲ್ಮನೆಯ ಸ್ವಲ್ಪ ಮಂದಿ ಹೀಗೆ ಬಹುತೇಕರು ಹಾಗೂ ಆಗಾಗ ನಮ್ಮಲ್ಲಿಗೆ ಬರುತ್ತಿದ್ದ ರೆಹಮತ್ ಬೀಬಿ ನಮ್ಮ ಮನೆಗೆ ತಿಂಗಳಲ್ಲಿ ಕನಿಷ್ಠ ಒಂದು ಬಾರಿಯಾದರೂ ಬಂದೇ ಬರುತ್ತಿದ್ದರು. ಅದರಲ್ಲೂ ಹದಿಹರೆಯದ ಹುಡುಗಿಯರು-ಹೆಂಗಸರು ಬಹಿರ್ದೆಸೆ, ಮುಟ್ಟಿನಂತಹ ತಮ್ಮ ಅನಿವಾರ್ಯಯತೆಗಳೊಂದಿಗೆ ನಿಗದಿತ ಕೆಲಸವನ್ನೂ ಪೂರೈಸುವ ಒತ್ತಡದಲ್ಲಿ ಇಂತಹ ತತ್ಕಾಲಿಕ ವಸತಿಗಳನ್ನ ವ್ಯವಸ್ಥೆ ಮಾಡಿಕೊಳ್ಳದೆ ವಿಧಿಯೂ ಇರಲಿಲ್ಲವಲ್ಲ, ಅದಕ್ಕಾಗಿ ನಾವು ಹಾಗೂ ನಮ್ಮಂತಹ ಪೇಟೆ ಮಂದಿಯ ಜೊತೆ ಅವರಿಗೆಲ್ಲ ಒಂದು ಸೌಹಾರ್ದಯುತ ಸಂಬಂಧ ಏರ್ಪಡಿಸಿಕೊಳ್ಳುತ್ತಿದ್ದರು ಅನ್ನಿಸುತ್ತೆ. 

ಹಾಗಂತ ಅವರು ಬರುವಾಗ ಬರಿಗೈಯಲ್ಲೇನೂ ನಮ್ಮಲ್ಲಿ ಬರುತ್ತಿರಲಿಲ್ಲ. ಏನಾದರೊಂದು ತರಕಾರಿ, ಮನೆಯಲ್ಲಿಯೆ ಹಾಕಿದ್ದ ಉಪ್ಪಿನಕಾಯಿ, ದೊಡ್ಲಿ ಕಾಯಿ, ಬಸಳೆ ಸೊಪ್ಪು, ಮಾವಿನ ಕಾಯಿ, ಹಲಸಿನ ಹಣ್ಣು, ಬಾಳಕ, ಜೇನುತುಪ್ಪ, ತುಪ್ಪ, ಕಳಲೆ ಹೀಗೆ ಏನಾದರೊಂದು ಹಳ್ಳಿಯ ಉತ್ಪನ್ನ ಅವರ ಮೂಲಕ ನಮ್ಮಲ್ಲಿಗೆ ಬಂದೇ ತೀರುತ್ತಿತ್ತು. ಹರಿಜನರ ಮಂಜಿಯಂತೂ ತನ್ನ ಬೆತ್ತದ ಕೌಶಲ್ಯದಿಂದ ಮಾಡುತ್ತಿದ್ದ ನಿತ್ಯದ ಬಳಕೆಯ ವಸ್ತುಗಳಾದ ಇರ್ಕೆ ( ಬಿಸಿ ಪಾತ್ರೆಗಳನ್ನ ನೆಲದ ಮೇಲೆ ಇಳಿಸಿಡಲು ಬಳಸುವ ಬೆತ್ತದ ಸ್ಟ್ಯಾಂಡ್.), ಮೊರ, ಗೆರಸಿ, ಅನ್ನ ಬಸಿವ ಸಿಬ್ಬಲ ಹೀಗೆ ಏನಾದರೊಂದು ಮಾಡಿ ತಂದುಕೊಡುತ್ತಿದ್ದಳು. ಅದಕ್ಕೆ ಆಕೆಗೆ ಅಮ್ಮನಿಂದ ದರ ಸಲ್ಲುತ್ತಿದ್ದರೂ ಲಾಭದ ಮುಖ ಕಾಣುವಷ್ಟೇನೂ ಅದರಲ್ಲಿ ಇರುತ್ತಿರಲಿಲ್ಲ ಅನ್ನುವುದು ಸ್ಪಷ್ಟ, ಬಹುಷಃ ಆಕೆಯ ಶ್ರಮದ ಅಸಲಿಗೆ ಮೋಸವಾಗುತ್ತಿರಲಿಲ್ಲ ಅಷ್ಟೆ. 

ಇನ್ನು ಕುಸುಮಕ್ಕ, ಇಂದಿರಾ ಇವರೆಲ್ಲರಂತೂ ಅಮ್ಮನ ಜೊತೆಗೆ ಅಡುಗೆಯಲ್ಲೂ ಸಹಾಯಕ್ಕೆ ನಿಂತು ಮಂಜಿ ತಂದು ಕೊಟ್ಟ ಗೆರಸಿ-ಮೊರ ಮುಂತಾದವಕ್ಕೆ ಕಾಗದ ಕೂಡಿಸಿ ಕಡೆದ ಮೆಂತೆಯ ಲೇಪ ಹಚ್ಚುವಲ್ಲಿ ಕೈಜೋಡಿಸುತ್ತಿದ್ದುದೂ ಉಂಟು. ತೀರ್ಥಹಳ್ಳಿಯಲ್ಲಿ ತಮಗಿರುವ ಕೆಲಸಕ್ಕೆ ತೆರಳುವ ಮುನ್ನ ಬಸ್ಟ್ಯಾಂಡಿನಿಂದ ನೇರ ನಮ್ಮ ಮನೆಗೆ ಬಂದು ತಮ್ಮ ಕೈಚೀಲವನ್ನ ಅಲ್ಲಿಯೆ ಬಿಟ್ಟು, ಮುಖ ತೊಳೆದು-ತಲೆ ಬಾಚಿಕೊಂಡು. ಅಲ್ಲಿಂದ ಹೊರಟು ಕೆಲಸ ಮುಗಿಸಿ ಮತ್ತೆ ಮನೆಗೆ ಬಂದು ಊಟ ಮಾಡಿ ವಿರಾಮದಲ್ಲಿ ಸ್ವಲ್ಪ ಹರಟಿ, ಅನಂತರ ಒಂದು ಸಣ್ಣ ಕೋಳಿ ನಿದ್ದೆ ತೆಗೆದು ಮತ್ತೆ ಸಂಜೆ ಮುಖ ತೊಳೆದು ತಲೆ ಬಾಚಿಕೊಂಡು ಚಾ ಕುಡಿದು ಅನಂತರ ತಮ್ಮ ಊರಿನ ಕಡೆಯ ಬಸ್ಸೇರಲು ಅವರೆಲ್ಲ ಸಾಮಾನ್ಯವಾಗಿ ಬಸ್ಟ್ಯಾಂಡಿನ ದಾರಿ ಹಿಡಿಯುತ್ತಿದ್ದರು. ಕುಸುಮಕ್ಕ ಮುಖ ತೊಳೆದು ಹಚ್ಚಿಕೊಳ್ಲುತ್ತಿದ್ದ ಪಾಂಡ್ಸ್ ಕ್ರೀಂನ ಘಮ, ಇಂದಿರಾರ ಫೇರ್ ಎಂಡ್ ಲವ್ಲಿಯ ಪರಿಮಳ, ಸುನಿಯಕ್ಕನ ವಿಕೊ ಟರ್ಮರಿಕ್ ಕ್ರೀಂನ ಸುಗಂಧ ಅವರು ಹೋಗಿ ಬಹುಕಾಲದ ನಂತರವೂ ಅಲ್ಲೆ ಕನ್ನಡಿಯ ಸುತ್ತಮುತ್ತ ಸುಳಿದಾಡುತ್ತಿರುತ್ತಿತ್ತು. ಈಗಲೂ ಅದರ ಗಂಧ ನನ್ನ ಉಸಿರಿನಿಂದ ಮಾಸಿಲ್ಲ.

ನಾವಷ್ಟೆ ಅಲ್ಲ ಎದುರು ಮನೆಯ ಬಾಲರಾಜಣ್ಣ, ಸಮೀಪದ ಮನೆಯ ಪದ್ದಯ್ಯ, ಒತ್ತಿನ ಮನೆಯ ರಾಜೀವಕ್ಕ, ಕೊನೆಯ ಮನೆಯ ಗಾಯತ್ರಿ ಆಂಟಿ ಹೀಗೆ ಎಲ್ಲರ ಮನೆಗೂ ಇಂತಹ ಅವ್ಯಕ್ತ ಬಾಂಧವ್ಯದ ಬಂಧುಗಳು ವಾರದ ಒಂದಿಲ್ಲೊಂದು ದಿನ ಬಂದೇ ಬರುತ್ತಿದ್ದರು. ಇದು ಪೇಟೆಯ ನಿವಾಸಿಗಳಲ್ಲಿ ಬಹುತೇಕರ ಪಾಲಿಗೆ ನಿತ್ಯದ ರೂಢಿಯೊಳಗೊಂದಾಗಿತ್ತಷ್ಟೆ. ತಾಲೂಕಿನ ಒಂದೊಂದು ಮೂಲೆ ತೀರ್ಥಹಳ್ಳಿಯಿಂದ ಒಂದು-ಒಂದೂವರೆ ಘಂಟೆ ಪ್ರಯಾಣದ ಸುದೀರ್ಘ ಅಂತರದಲ್ಲಿರುತ್ತಿದ್ದರಿಂದ ಈ ತಾತ್ಕಾಲಿಕ ಬಿಡಾರಗಳು ಅವರಿಗೆ ಅನಿವಾರ್ಯವಾಗಿದ್ದರೆ. ಹಳ್ಳಿಗರೊಂದಿಗಿನ ಸುಮಧುರ ಒಡನಾಟಕ್ಕೆ ನಮಗಿದು ಅವಕಾಶವನ್ನೊದಗಿಸಿಕೊಟ್ಟಿತ್ತು.

ಹೀಗೆ ಮನೆಗೆ ಬರುತ್ತಿದ್ದ ಮಂಡಗದ್ದೆ ಸಮೀಪದ ಸರವಿನಗದ್ದೆಯ ಕುಸುಮಕ್ಕ ಆಗಿನ್ನೂ ಮೂರೋ-ನಾಲ್ಕೋ ವರ್ಷದ ಪೋರನಾಗಿದ್ದ ನನ್ನನ್ನ "ನನ್ನ ಗಂಡ" ಅಂತ ಚುಡಾಯಿಸುತ್ತಿದ್ದರು. ಬರಿ ಮೈಯಲ್ಲಿ ಆಥವಾ ಬಹುತೇಕ ಚಡ್ಡಿಯಿಲ್ಲದೆ ಅಂಗಿ ಮಾತ್ರ ತೊಟ್ಟುಕೊಂಡು ಓಡಾಡುತ್ತಿದ್ದ ನನ್ನ "ಗಂಡಸ್ತನ"ಕ್ಕೆ ಈ ಮಾತಿನಿಂದ ವಿಪರೀತ ಗಲಿಬಿಲಿ, ನಾಚಿಕೆ(!) ಅಗುತ್ತಿತ್ತು. ನನ್ನನ್ನ ಹಿಡಿದೆತ್ತಿಕೊಳ್ಳಲಿಕ್ಕೆ ಬಯಸುತ್ತಿದ್ದ  ಅವರ ಕೈಗೆ ಸಿಕ್ಕದೆ ನಾನು ಪುಸಕ್ಕನೆ ಓಡಿ ಹೋಗಿ ಅಮ್ಮನ ಸೀರೆಯಲ್ಲಿ ಮುಖ ಮುಚ್ಚಿಕೊಳ್ಳುತ್ತಿದ್ದೆ ( ಗಮನಿಸಿ ಮುಖ ಮಾತ್ರ!.). ಕುಸುಮಕ್ಕ ಮಂಡಗದ್ದೆಯ ದಿಟ್ಟ ಹುಡುಗಿ. ಆಗ ಅವರ ಪ್ರಾಯ ಬಹುಷಃ ಇಪ್ಪತ್ತಾರರ ಆಸುಪಾಸಿನಲ್ಲಿತ್ತು ಅನ್ನಿಸುತ್ತೆ. 

ಅಪ್ಪನ ನಿಷ್ಕ್ರಿಯತೆಯ ಕಾರಣ ಮನೆಯ ಹಿರಿ ಮಗಳಾಗಿ ಒಬ್ಬ ಹುಡುಗನ ಹಾಗೆ ಜಮೀನಿನ-ತೋಟದ ಎಲ್ಲಾ ಜವಾಬ್ದಾರಿ ಹೊತ್ತು ಖುದ್ದು ಉತ್ತಿ-ಬಿತ್ತಿ-ಕಟಾವು ಮಾಡಿ, ಅಡಿಕೆಯ ಮರಕ್ಕೆ ನಿಂತು ಔಷಧಿ ಹೊಡೆಸಿ-ಫಸಲು ಕುಯ್ಯಿಸಿ, ಆಡಿಕೆ ಸುಲಿಸಿ-ಒಣಗಿಸಿ ಮಂಡಿಗೆ ಹಾಕಿ ಹಣ ಪಡೆಯುವ ತನಕ ಎಲ್ಲಾ ಕೆಲಸಗಳಿಗೂ ತಾವೆ ಹೆಗಲು ಕೊಟ್ಟ ಕಾರಣ ಅವರಿನ್ನೂ ಅವಿವಾಹಿತೆಯಾಗಿಯೆ ಉಳಿದಿದ್ದರು. ಸಾಲದ್ದಕ್ಕೆ ತನ್ನ ಬೆನ್ನಿಗೆ ಹುಟ್ಟಿದ್ದ ಇಬ್ಬರು ತಂಗಿಯರ ಹಾಗೂ ಒಬ್ಬ ತಮ್ಮ ಉಮೇಶಣ್ಣನ ವಿದ್ಯಾಭ್ಯಾಸದ ಜವಾಬ್ದಾರಿಯೂ ಅವರ ಹೆಗಲ ಹೊಣೆಗಾರಿಕೆಯೆ ಆಗಿತ್ತು. ಅವರನ್ನೆಲ್ಲ ಒಂದು ದಡ ಮುಟ್ಟಿಸಿ ತಾವು ಸಂಸಾರವಂದಿಗರಾಗುವ ಹೊತ್ತಿಗೆ ಬಹುಷಃ ಅವರ ಪ್ರಾಯ ಮೂವತ್ತರ ಗಡಿ ಮೀರಿ ಹೋಗಿತ್ತು ಅನ್ನಿಸುತ್ತೆ. ಹೀಗಾಗಿ ಅವರು ನಮ್ಮಲ್ಲಿಗೆ ಬಂದಾಗ ಅಮ್ಮನ ಜೊತೆಯ ಹರಟೆಯಲ್ಲಿ ಅವರ ಮದುವೆಯ ಮಾತು ಬಂದಾಗಲೆಲ್ಲ ಅವರು ಆ ಮಾತನ್ನ ಹಾರಿಸುತ್ತಿದ್ದರು ಹಾಗೂ ನನ್ನನ್ನೆ ಆವರ ಗಂಡ ಎನ್ನುತ್ತಿದ್ದರು! 

ನಾನು ಅಗೆಲ್ಲ ವಿಪರೀತ ಗಲಿಬಿಲಿಗೊಂಡು ಅಗತ್ಯ ಮೀರಿ ನಾಚಿ ಕೆಂಪಾಗುತ್ತಿದ್ದೆ. ಟಿವಿ ಮತ್ತು ಅಗಾಗ ಮಾತ್ರ ನೋಡಲಿಕ್ಕೆ ಸಿಗುತ್ತಿದ್ದ ಸಿನೆಮಾಗಳಲ್ಲಿ ಮಾತ್ರ "ಗಂಡ-ಹೆಂಡತಿ"ಯರನ್ನ ಕಂಡು ಗೊತ್ತಿದ್ದ ನನಗೆ ಇನ್ನುಳಿದಂತೆ "ಗಂಡ" ಏನೆನ್ನುವುದು ಗೊತ್ತೇ ಇರದಿದ್ದರೂ ಸಹ ನಾನು ಆ ಕ್ಷಣ ನಾಚಿ ಟೊಮ್ಯಾಟೋ ಹಣ್ಣಿನಂತೆ ಆಗಿರುತ್ತಿದ್ದೆ! ಕಾಲಾನುಕ್ರಮದಲ್ಲಿ ಕುಸುಮಕ್ಕ ಮದುವೆಯಾಗಿ ನಿಜದಲ್ಲಿ "ಗಂಡ"ನನ್ನು ಹೊಂದುವ ಕಾಲಕ್ಕೆ ಕಾರ್ಕಳದಲ್ಲಿ ನನ್ನ ವನವಾಸದ ಕೊನೆಯ ವರ್ಷ ನಡೆಯುತ್ತಿತ್ತು ಅನ್ನಿಸುತ್ತೆ. ಹೀಗೆ ನನ್ನ ಮೊದಲ "ಹೆಂಡತಿ"ಯ ಅಧಿಕೃತ ಗಂಡನನ್ನ ನಾನು ಇದುವರೆಗೂ ಕಾಣಲಿಕ್ಕೆ ಸಾಧ್ಯವಾಗಲೇ ಇಲ್ಲ. ಆದರೆ ನನಗೆ ಚಿಗುರು ಮೀಸೆ ಹೌದೋ ಇಲ್ಲವೋ ಅನ್ನುವ ಹಾಗೆ ಮೂಡಿ ಗಂಟಲು ಆಗಷ್ಟೆ ಒಡೆಯಲು ಆರಂಭಿಸುವ ಹೊತ್ತಿನಲ್ಲಿ ಒಮ್ಮೆ ಮಂಗಳೂರಿನಲ್ಲಿದ್ದವ ನಾನು ತೀರ್ಥಹಳ್ಳಿಗೆ ಹೋಗಿದ್ದಾಗ ಕುಸುಮಕ್ಕ ಕಾಣಸಿಕ್ಕಿದ್ದರು, ಐದು ತಿಂಗಳ ಬಸುರಿ ಕುಸುಮಕ್ಕ ವೈದ್ಯರ ಹತ್ತಿರ ನಿಯಮಿತ ಪರೀಕ್ಷೆಗಾಗಿ ಅವತ್ತು ಬಂದಿದ್ದವರು ಮನೆಗೂ ಬಂದಿದ್ದರು. ಅವರನ್ನ ಆ ಅವತಾರದಲ್ಲಿ ನೋಡಿ ಅದೇಕೋ ನನಗೆ ಇರುಸುಮುರುಸಾಗಿತ್ತು ಅನ್ನೋದು ಇಂದಿಗೂ ಚೆನ್ನಾಗಿ ನೆನಪಿದೆ. ಆದರೆ ಆ ಇರುಸುಮುರುಸಿಗೆ ಖಚಿತ ಕಾರಣ ಕೊಡಲಾರೆ!  ಕುಸುಮಕ್ಕ ಈಗಲಾದರೂ ಜವಾಬ್ದಾರಿಗಳೆಲ್ಲವಿಂದ ಮುಕ್ತರಾಗಿ ಸುಖವಾಗಿ ಇದ್ದಾರು ಅನ್ನಿಸುತ್ತೆ.

ಬೊಬ್ಬಿಯ ಇಂದಿರಾ ಕಿಣಿ ಕುಸುಮಕ್ಕನಂತೆ ನಮ್ಮಲ್ಲಿಗೆ ಆಗಾಗ ಕೆಲಸದ ನಿಮಿತ್ತ ಬರುತ್ತಿದ್ದ ಇನ್ನೊಬ್ಬ ಚಲುವೆ. ಅವರದ್ದೂ ಹೆಚ್ಚೂ ಕಡಿಮೆ ಅದೇ ಕಥೆ. "ನನಗ್ಯಾಕಮ್ಮ ಇಷ್ಟು ಬೇಗ(?) ಮದುವೆ?, ನನ್ನ ಗಂಡ ಇಲ್ಲೇ ಇದ್ದಾನಲ್ಲ! ಇದು ನನ್ನ ಅತ್ತೆ ಮನೆಯಲ್ವ?! ಹಾಗಾಗಿಯೆ ನಾನು ಆಗಾಗ ಇಲ್ಲಿಗೆ ಬರೋದು!!!" ಅಂತ ಅನುಗಾಲದ ಪಲ್ಲವಿಯನ್ನವರು ಹಾಡುತ್ತಿದ್ದರೆ, ಅಮ್ಮ ಅದಕ್ಕೆ ಉತ್ತರವಾಗಿ "ಸಾಕಾಗಿದೆ ಮಾರಾಯ್ತಿ ಇವನ ಕೀಟಲೆ! ನಿನ್ನ ಗಂಡನನ್ನ ನೀನು ನಿಮ್ಮ ಮನೆಗೆ ಕರ್ಕೊಂಡು ಹೋಗಿ ಮನೆ ಅಳಿಯ ಮಾಡಿಟ್ಟುಕೋ. 'ಅಳಿಯ ಮನೆ ತೊಳಿಯ' ಅಂತ ಗಾದೆಯೆ ಉಂಟಲ್ವಾ. ತಂಟೆಕೋರನಾದ ಇವನಿಗೆ ಮೂರು ಹೊತ್ತು ಅನ್ನ ಹಾಕಿ ನಿಮ್ಮ ಮನೆಯನ್ನ ನಿತ್ಯ ಚನ್ನಾಗಿ ತೊಳಿಸಿ!!" ಅಂತ ಪ್ರ್ತತ್ಯುತ್ತ್ರರ ನೀಡುತ್ತಿದ್ದ್ರುದು ಇವೆಲ್ಲಾ ನೆನ್ನೆ ಮೊನ್ನೆ ನಡೆದಂತಿದೆ. ನಾನು ಇಂದಿರಾ ಬಂದಾಗಲೆಲ್ಲ ಈ ಮಾತು ಕೇಳಿ ಅವರಿಬ್ಬರ ಮೇಲೂ ಗಲಿಬಿಲಿಯ ಸಿಟ್ಟನ್ನ ವ್ಯಕ್ತ ಪಡಿಸುತ್ತಿದ್ದೆ. ಆದರೂ ಬರುಬರುತ್ತಾ ನನಗದು ಅಭ್ಯಾಸವಾಗಿ ಹೋಗಿತ್ತು ಅನ್ನಿಸುತ್ತೆ. ಹೀಗಾಗಿ ಅವರು ಬಲವಂತವಾಗಿ ಓಡುತ್ತಿದ್ದ ನನ್ನನ್ನ ಹಿಡಿದು ಲೊಚಲೊಚನೆ ಮುತ್ತಿಡುವಾಗ ಮೇಲ್ನೋಟಕ್ಕೆ ಆ ಒತ್ತಾಯದ ಚುಂಬನವನ್ನ ಪ್ರತಿಭಟಿಸುತ್ತಾ ನಾನು ಕೊಸರಾಡುತ್ತಿದ್ದಂತೆ ಇನ್ನಿತರರಿಗೆ ಗೋಚರಿಸುತ್ತಿದ್ದರೂ ಸಹ ನನಗೆ ಮಾತ್ರ ಒಳಗೊಳಗೆ ಒಂಥರಾ ಖುಷಿಯೆ ಅನ್ನಿಸುತ್ತಿತ್ತು! ಇಂದಿರಾರಿಗೂ ಆನಂತರದ ದಿನಗಳಲ್ಲಿ ಅವರ ಪ್ರಾಯಕ್ಕಿಂತ ಸ್ವಲ್ಪ ಹಿರಿಯ ವಯಸ್ಸಿನ ವ್ಯಕ್ತಿಯ ಜೊತೆ ಮದುವೆಯಾಯಿತಂತೆ. ನಾನವರ ಮದುವೆಗೂ ಹೋಗಲಾಗಿಲ್ಲ, ಅವರೀಗ ಹೇಗಿದ್ದಾರೋ ಅನ್ನುವ ಅರಿವೂ ಸಹಿತ ನನಗಿಲ್ಲ.

ಮಂಜಿ ನಾನು ನೋಡುವಾಗಲೆ ಹಣ್ಣುಹಣ್ಣು ಮುದುಕಿ. ಬುಟ್ಟಿ-ಗೊರಬು ಮತ್ತಿತರ ಬಿದಿರು ಹಾಗೂ ಬೆತ್ತದ ಉತ್ಪನ್ನಗಳ ತಯಾರಿಕೆಯಲ್ಲಿ ಮಂಜಿ, ಮತ್ತವಳ ಗಂಡನದ್ದು ಎತ್ತಿದ ಕೈ. ಅವಳು ಏನಾದರೂ ಕೆಲಸದ ನಿಮಿತ್ತ ನಮ್ಮಲ್ಲಿಗೆ ಬಂದರೆ ಅವಳ ಕೈಯಲ್ಲಿ ಏನಾದರೊಂದು ಬೆತ್ತದ ಉತ್ಪನ್ನ ಇದ್ದೇ ಇರುತ್ತಿತ್ತು. ಅವಳ ಮಗಳ ಮದುವೆ ಇನ್ನೂ ಆಗಿರಲಿಲ್ಲ ಹೀಗಾಗಿ ನಾನು ಅವಳ ಪಾಲಿಗೆ "ಅಳಿಯ"ನೂ ಆಗಿದ್ದೆ ಕೆಲಕಾಲ. ಮಗಳ ಮದುವೆಯ ಪ್ರಸ್ತಾಪವಾದಾಗಲೆಲ್ಲ ನುಣ್ಣಗೆ ತಾನೆ ಕೆತ್ತಿ ಮಾಟವಾಗಿ ಲೋಟದಂತಾಗಿಸಿದ್ದ ಗರಟೆಯಲ್ಲಿ ಚಹಾ ಹೀರುತ್ತಾ "ನನ್ನ ಅಳಿಯ ಇಲ್ಲೆ ಇದಾನಲ್ಲಮ್ಮ, ಮದಿ ಮಾಡಿಸಿಕೊಡ್ನಿ ಕರ್ಕೊಂಡ್ ಹೋಗ್ತೆ!" ಅಂತ ತನ್ನ ಎಲೆ ಅಡಿಕೆ ತಿಂದು ತಿಂದು ಕೆಂಪಾಗಿ ಕಲೆಗಟ್ಟಿ ಹೋಗಿದ್ದ ತನ್ನ ಅಷ್ಟೂ ಹಲ್ಲು ಬಿಟ್ಟು ಕುಶಾಲಿನ ನಗುವನ್ನ ಹೊಮ್ಮಿಸುತ್ತಿದ್ದಳು. ತಕ್ಷಣ ಸಿಟ್ಟಿಗೇಳುತ್ತಿದ್ದ ನಾನು ಅವಳು ಕೊಟ್ಟಿದ್ದ ಗೆರಸೆ, ಸಿಬ್ಬಲವನ್ನ ಸವರುತ್ತಾ ಕುಳಿತಿದ್ದವ ತಟಕ್ಕನೆ ಎದ್ದು ಅವಳ ಬೆನ್ನಿಗೆ ಮುಷ್ಠಿ ಕಟ್ಟಿಕೊಂಡು ನನ್ನ ಪುಟ್ಟ ಪುಟ್ಟ ಕೈಗಳಿಂದ ಬಡಬಡನೆ ಗುದ್ದುತ್ತಿದ್ದೆ. ಮೆಲ್ಲಗೆ ಮಸಾಜ್ ಮಾಡಿದಂತಾಗುತ್ತಿದ್ದ ಆ ಎಳೆ ಕೈಯ ಗುದ್ದುಗಳನ್ನ ಆ ಮುದುಕಿ ನಗುನಗುತ್ತಲೆ ಸಹಿಸಿಕೊಂಡು ಎಂಜಾಯ್ ಮಾಡುತ್ತಿದ್ದಳು. ಆದರೆ ನನ್ನ ಪೆಟ್ಟಿಗೆ ನೋವಾದಂತೆ ನಟಿಸಿ ಅಳುವಂತೆ ಮಾಡಿದಾಗ ಮಾತ್ರ ನನಗೆ ತೃಪ್ತಿಯಾಗಿ ಗುದ್ದುಗಳನ್ನ ನಿಲ್ಲಿಸುತ್ತಿದ್ದೆ. ತನಗಿಂತ ಎರಡರಷ್ಟು ಪ್ರಾಯದ 'ಹುಡುಗ'ನ ಜೊತೆ ಮುಂದೆ ಮಂಜಿ ಮಗಳ ಮದುವೆಯೂ ಆಯಿತಂತೆ.

ಆಮ್ಮ ಅಂದರೆ ನನ್ನ ಅಜ್ಜಿಯ ಖಾಸಾ ಸ್ನೇಹಿತೆ ವಾರಿಜಕ್ಕ. ಗಣಪತಿ ಕಟ್ಟೆಯ ಪಕ್ಕ ಅವರ ಮನೆ ಸಂದಿಯೊಂದರಲ್ಲಿತ್ತು. ಅವರ ಗಂಡ ಪದ್ಮನಾಭಣ್ಣ ಮಾರಿಗುಡಿಯ ಎದುರು ಎಳನೀರು ಹಾಗೂ ಪಟಾಕಿಯ ಅಂಗಡಿ ಇಟ್ಟುಕೊಂಡಿದ್ದರು. ಆಗೆಲ್ಲ ಆಮ್ಮನ ಬಾಲವಾಗಿ ಅವರು ಹೋದಲ್ಲೆಲ್ಲ ತಪ್ಪದೆ ಹೋಗುತ್ತಿದ್ದ ನಾನು ಅವರು ದೇವಸ್ಥಾನಕ್ಕೆ ಹೋದಾಗಲೆಲ್ಲ ಬೆನ್ನು ಹಿಡಿಯುತ್ತಿದ್ದೆ. ಆಗೆಲ್ಲ ನಾವು ವಾರಿಜಕ್ಕನ ಮನೆಗೂ ಹೋಗಿ ಚಾ ಅಥವಾ ಪಾನಕ ಕುಡಿದು ಬರೋದಿತ್ತು. ವಾರಿಜಕ್ಕನ ಎರಡನೆ ಮಗಳು ನಿಮ್ಮಿ ನನ್ನ ಹೆತ್ತಮ್ಮನ ಸಮಪ್ರಾಯದವರು ಅವರನ್ನ ಚಿಕ್ಕಮಗಳೂರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ನನಗಿಂತ ಎರಡು ವರ್ಷಕ್ಕೆ ಕಿರಿಯಳಾದ ಮಗಳು ನಿರ್ಮಲಾರಿಗಿದ್ದಳು. ನೋಡಲು ಮುದ್ದುಮುದ್ದಾಗಿಯೂ ಅವಳಿದ್ದಳು. ಅವರು ನನ್ನ ಕಂಡಾಗಲೆಲ್ಲ "ನನ್ನ ಅಳಿಯ" ಅಂತ ಹಿಡಿದು ಹಿಂಡಿ ಮುದ್ದಿಸುತ್ತಿದ್ದರು. ಆಗೆಲ್ಲಾ ಅವರು ಹಾಗಂದದ್ದೆ ರುಮ್ಮನೆ ನನಗೆ ಸಿಟ್ಟು ಏರುತ್ತಿತ್ತು. "ಇಲ್ಲಾ ನಾನಲ್ಲಾ" ಆಂತ ನಾನು ಕಿರುಚುತ್ತಿದ್ದೆ, ಹೀಗೆ ಪ್ರತಿಭಟಿಸಿದಾಗಲೆಲ್ಲ ಅವರಿಗೆ ಇನ್ನಷ್ಟು ಉತ್ತೇಜನ ಸಿಕ್ಕಂತಾಗಿ "ಓಹೋಹೊ ಇವ ದೊಡ್ದ ಗಂಡಸು! ಮದ್ವೆ ಆಗಲ್ಲಂತೆ, ಹಿಡ್ಕೊಂಡ್ ಹೋಗಿ ಮನೆ ಅಳಿಯ ಮಾಡ್ಕಂತಿನಿ!" ಅಂತ ರೇಗಿಸುತ್ತಲೆ ಬೆದರಿಕೆ ಒಡ್ಡುತ್ತಿದ್ದರು! ಇದೇನೆ ಇದ್ದರೂ ಬರುಬರುತ್ತಾ ನಾನು ಅವರ ಮನೆಗೆ ಹೋದಾಗಲೆಲ್ಲ ಅವರು ನನ್ನನ್ನ ರೇಗಿಸಲಿ ಅಂತಲೆ ಮಳ್ಳನಂತೆ ಕಾಯುತ್ತಿದ್ದೆನೇನೋ ಅಂತ ಕಾಣಿಸುತ್ತದೆ! ಅವರ ಮಗಳೂ ಅವರಂತೆ ಈಗ ಸುರಸುಂದರಿಯೆ ಆಗಿರಲಿಕ್ಕೆ ಸಾಕು. ೧೯೯೪ರಲ್ಲಿ ನನ್ನ ಮೊದಲ ಚಿಕ್ಕಮ್ಮನ ಆರತಕ್ಷತೆಯಲ್ಲಿ ಅವಳನ್ನ ನೋಡಿದ್ದೆ ಕೊನೆ ಈಗ ಅವಳಿಗೆ ಬಹುಷಃ ೨೮ ವರ್ಷ ಪ್ರಾಯವಿದ್ದೀತು. ಮದುವೆಯೂ ಆಗಿರಬಹುದು.

ಈಗ ಮನೆಯಲ್ಲಿ ಅದರಲ್ಲೂ ವಿಶೇಷವಾಗಿ ಕಳೆದ ಎರಡು ಮೂರುವರ್ಷಗಳಲ್ಲಿ ಸಾಗಿನಬೆಟ್ಟಿಗೆ ಹೋದಾಗಲೆಲ್ಲ ಮದುವೆಯಾಗುವಂತೆ ಅಮ್ಮನ ಕಿರಿಕಿರಿ ಹೆಚ್ಚುತ್ತಿರುವಾಗ ಇವರೆಲ್ಲ ಸ್ಮೃತಿಯಲ್ಲಿ ಹಾಗೆಯೆ ಸುಳಿದು ಮರೆಯಾದರು. ಬಾಳು ಬಾಲ್ಯದಲ್ಲಿಯೇ ಬಹಳ ಗಂಭೀರವಾಗಿದ್ದರೆ ಈಗ ನನಗೆ ಸರಿಸುಮಾರು ಅರ್ಧ ಡಝನ್ ಹೆಂಡಿರಿರಬೇಕಿತ್ತು! ಪ್ರೀತಿ ಗಿಟ್ಟದೆ ಇನ್ನು ಮದುವೆ ಈ ಜನ್ಮಕ್ಕೆ ಇಲ್ಲ ಎನ್ನುವ ಖಚಿತ ನಿರ್ಧಾರಕ್ಕೆ ಬಂದ ನನ್ನ ಭಗ್ನ ಹೃದಯವನ್ನ ಬಗೆದು ಅಮ್ಮನಿಗೆ ಹೇಗೆ ತೋರಿಸಲಿ? ಏನಂತ ಅವರಿಗೆ ಅರ್ಥ ಮಾಡಿಸಲಿ?

1 comment:

Shantharam V.Shetty said...

ಹಳೆ ಕಾಲದಲ್ಲಿ ಪ್ರೀತಿ ಹೃದಯದಲ್ಲಿ ಹುಟ್ಟಿ ಕಣ್ಣಲ್ಲಿ ಸೂಸುತಿತ್ತು. ಈಗ ಕಣ್ಣಲ್ಲೆ ಹುಟ್ಟಿ ಕಣ್ಣಲ್ಲೆ ಸವರಿ ಬಿಟ್ಟು ಬಿಡುವಷ್ಟು ಸಲೀಸಾಗಿದೆ ಬಹುಶಃ ಆಗಿನ ಕಾಲದ ಕಲ್ಪನೆಯ ಸಂಬಂಧಗಳು ಕೊಟ್ಟ ಸುಖ ಈಗಿನ ನೈಜ (?) ಸಂಬಂಧಗಳೂ ಕೊಡಲಿಕ್ಕಿಲ್ಲ! ಗೋಪಿಯರಿಗೆ ಕೃಷ್ಣನಂತೆ ಆಗಿನ ಹದಿ ಹರೆಯದ ಹೆಣ್ಣುಗಳಿಗೆಲ್ಲಾ ಎಳೆಯ ಮುದ್ದು ಗಂಡಂದಿರಾದ ಅನುಭವ ಅನೇಕ ಎಳೆ ಹಳ್ಳಿ ಹುಡುಗರದು ! ಸುಂದರ ಭಾಂದವ್ಯ ಗಳ ನವಿರು ನಿರೂಪಣೆ