10 March 2022
ಪುಸ್ತಕ ಪರಿಚಯ - ೨೪
08 March 2022
ಅವನ ಜೊತೆ ಅವಳ ಕಥೆ - ೮
ಬರುವ ವಾರ ಬಗ್ಗಿ ಬಂಡಿಗೆ ಸುಲ್ತಾನನನ್ನೆ ಕಟ್ಟಿಕೊಂಡು ಈ ಕ್ಯಾಂಪಿನ ಮನೆಗೆ ಬಂದು ತನಗೆ ಇನ್ನು ಮೂರು ತಿಂಗಳಿಗೆ ಬಳಕೆಗೆ ಬೇಕಾಗುವ ಸಾಮಾನು ಸರಂಜಾಮುಗಳನ್ನ ಅಲ್ಲಿಂದ ಸಾಗಿಸಿಬಿಡಲು ನಿರ್ಧರಿಸಿದ. ಇದರಿಂದ ಆ ಸಾಮಾನುಗಳು ಹಾಳಾಗಿ ಕೊಳೆತು ವ್ಯರ್ಥವಾಗಿ ಮಣ್ಣು ಸೇರೂದೂ ಸಹ ತಪ್ಪುತ್ತದೆˌ ಜೊತೆಗೆ ತನಗೆ ಈ ಭೀಕರ ವಾತಾವರಣದಲ್ಲಿ ಅಪಾಯವನ್ನ ಮೈಮೇಲೆಳೆದುಕೊಳ್ಳುತ್ತಾ ಅಲ್ಲಿಂದ ಇನ್ನೂ ಹದಿನೇಳು ಮೈಲಿ ಪಟ್ಟಣಕ್ಕೆ ಹೋಗಿ ಮತ್ತೆ ಅಷ್ಟೆ ದೂರ ಮರುಪ್ರಯಾಣ ಮಾಡಿಯೂ ಸಹ ಗುಲಗಂಜಿಯಷ್ಟು ಸಾಮಾನು ಸರಂಜಾಮುಗಳನ್ನ ಅಲ್ಲಿಂದ ಪದೆ ಪದೆ ಹೊತ್ತು ತರುವ ಸಂಕಷ್ಟವೂ ತಪ್ಪುತ್ತದೆ. ಇನ್ನು ಬಳಸಿದ ವಸ್ತುಗಳ ಸೂಕ್ತ ಮೌಲ್ಯವನ್ನ ಪರಿಸ್ಥಿತಿಯನ್ನ ಅರುಹಿ ಅನಂತರ ಗುತ್ತಿಗೆದಾರನಿಗೆ ನೇರವಾಗಿ ಪಾವತಿಸಿದರಾಯಿತು. ಬರುವ ವಾರ ಪಟ್ಟಣದಲ್ಲಿ ಕೊಂಡ ಸಾಮಾನುಗಳನ್ನ ಮನೆ ಬಾಗಿಲಿಗೆ ಮುಟ್ಟಿಸಲು ಬರುವ ಗೋಪಿಗೆ ಕಟ್ಟು ಬಿಚ್ಚದೆ ಅವೆಲ್ಲವನ್ನೂ ಹಿಂದೆ ಕೊಂಡೊಯ್ದು ಸ್ವಂತಕ್ಕೆ ಉಪಯೋಗಿಸಲು ಹೇಳಬೇಕು. ಇಲ್ಲಿರುವ ಹೆಚ್ಚುವರಿ ವಸ್ತುಗಳಲ್ಲಿ ಕೆಲವನ್ನು ಅವನ ಕುಟುಂಬದವರ ಬಳಕೆಗೂ ಕಟ್ಟಿ ಕೊಟ್ಟು ಕಳಿಸಬೇಕು ಎಂದು ಮನದೊಳಗೆ ಹಂಚಿಕೆ ಹಾಕಿದ. ಅವರಿಬ್ಬರು ಹಾಗೆ ಕೊಂಡೊಯ್ದರೂ ಸಹ ಇನ್ನಷ್ಟು ಆಹಾರ ಪದಾರ್ಥ ಖಂಡಿತವಾಗಿ ಅಲ್ಲೆ ಉಳಿದು ವ್ಯರ್ಥವಾಗಲಿತ್ತು. ಅಷ್ಟೊಂದು ಅಸಾಧ್ಯ ದಿನಸಿಯ ದಾಸ್ತಾನು ಅಲ್ಲಿತ್ತು.
ಹಾಳಾಗಬಹದಾಗಿದ್ದ ಆಹಾರ ಖಾದ್ಯಗಳನ್ನ ಕೊಂಡು ಬಳಸಿದ ಬಗ್ಗೆ ಹಣ ಪಾವತಿಸಿ ಸಮಜಾಯಷಿ ಕೊಟ್ಟರೆ ಗುತ್ತಿಗೆದಾರನೂ ಸಹ ಗೊಣಗುಟ್ಟಲಾರ. ಅಲ್ಲಿಗೆ ಸ್ವಾಮಿ ಕಾರ್ಯ ಸ್ವಕಾರ್ಯ ಎರಡೂ ಸಾಧಿಸಿದಂತಾಗುತ್ತದೆˌ ಎಂದವನು ಹಂಚಿಕೆ ಹೂಡಿದ. ಸದ್ಯ ಅವನಿಗೆ ಬೇಕಾಗಿದ್ದುದು ಚಹಾ ಕಾಯಿಸಲು ಕೈ ಪಾತ್ರೆˌ ಆದರದು ಅಲ್ಲಿರಲಿಲ್ಲ. ಹೀಗಾಗಿ ಹಸಿಯುತ್ತಿದ್ದ ಹೊಟ್ಟೆಯನ್ನ ತಣಿಸಲು ಚಹಾದ ಜೊತೆಗೆ ತಿನ್ನಲು ನಾಲ್ಕಾರು ಉಪ್ಪು ಬಿಸ್ಕತ್ತುಗಳನ್ನ ನಂಚಿಕೊಳ್ಳಲು ತೆಗೆದುಕೊಂಡು ಮೊದಲಿನಂತೆ ಆ ನೆಲಮಾಳಿಗೆಯ ಬಾಗಿಲನ್ನ ಭದ್ರ ಪಡಿಸಿ ಮೇಲೆ ಬಂದು ಮತ್ತೆರಡು ಕೋಣೆಯನ್ನ ಹುಡುಕಾಡಿದ. ಪುಣ್ಯಕ್ಕೆ ಅಲ್ಲಿ ಕೆಲವು ಪಾತ್ರೆ ಪಗಡಗಳು ಸಿಕ್ಕವು. ಅದರಲ್ಲೊಂದನ್ನ ತಂದವನೆ ಇನ್ನೂ ಹಿಮಪಾತ ನಿಲ್ಲದಿದ್ದ ಹೊರಾವರಣದ ಬಾಗಿಲನ್ನ ಚೂರೆಚೂರು ಸರಿಸಿ ಕೊಂಚವೆ ಹಿಮವನ್ನ ಕೈ ಪಾತ್ರೆಯಲ್ಲಿ ಗೋರಿ ತಂದು ಬೆನ್ನ ಚೀಲದ ಅರೆಯಿಂದ ತೆಗೆದ ಚಹಾಪುಡಿಯನ್ನ ಅದಕ್ಕಿಷ್ಟು ಸುರಿದು ಅಗ್ಗಿಷ್ಟಿಕೆಯ ಉರಿಯ ಮೇಲಿಟ್ಟ. ಪಕ್ಕದಲ್ಲಿಯೆ ಬೆಚ್ಚನೆ ವಾತಾವರಣದ ಆನಂದ ಅನುಭವಿಸುತ್ತಾ ಸುಲ್ತಾನ ಮಂಡಿಯೂರಿ ಕೂತಿದ್ದ.
ಹುಟ್ಟಿದ ದೇಶ ತೊರೆದು ಈ ನವನಾಡಿಗೆ ಹೊಸ ಬದುಕನ್ನ ಅರಸಿ ವಲಸೆ ಹೂಡುವ ಪ್ರವೃತ್ತಿ ತೀರಾ ಹೊಸತೇನಲ್ಲ. ಮೊತ್ತಮೊದಲಿಗೆ ಹಾಗೆ ಈ ನಾಡಿಗೆ ಕಾಲಿಟ್ಟವರ ನಾಲ್ಕನೆಯದೋ ಐದನೆಯದೋ ತಲೆಮಾರು ಪೂರ್ವದಂಚಿನ ತೀರ ಪ್ರದೇಶದುದ್ದ ಈಗ ತಲೆಯೆತ್ತಿ ನಿಂತಿದ್ದವು. ಆದರೆ ಈ ಕಳೆದ ಐದಾರು ವರ್ಷಗಳಿಂದ ಖಂಡಾಂತರದ ದೇಶಗಳಲ್ಲಿ ರಾಜಕೀಯ ಪರಿಸ್ಥಿತಿ ಹದಗೆಟ್ಟು ಹಣಕಾಸಿನ ಜಾಗತಿಕ ಪರಿಸ್ಥಿತಿ ನೆಲಕಚ್ಚಿ ಪರಸ್ಪರ ಯುದ್ಧ ಹೂಡಲು ದೇಶ ದೇಶಗಳ ಚುಕ್ಕಾಣಿ ಹಿಡಿದವರು ಸಂಚು ಹೂಡಲು ಆರಂಭಿಸುತ್ತಿದ್ದಂತೆ ಏಕಾಏಕಿ ಈ ವಲಸೆಯ ಪ್ರಕ್ರಿಯೆ ಹಲವು ಪಟ್ಟು ಹಚ್ಚಿತ್ತು. ಹಗೆˌ ಯುದ್ಧˌ ಹೋರಾಟದ ಕಾರಣ ಕೊನೆಗಾಣದ ಕಷ್ಟ ಕಾರ್ಪಣ್ಯಗಳಿಗೆ ಬಲಿಯಾದ ಸಮಾಜದ ಕೆಳಸ್ತರದ ದುಡಿಯುವ ವರ್ಗದ ಮಂದಿಯ ಕೈಗಳಿಗೆ ಸಾಕಷ್ಟು ಕೆಲಸವೂ ಸಿಗದೆ ಬಡತನದ ರಸಾತಳ ಮುಟ್ಟಿ ಕಂಗಾಲಾದವರು ಹೀಗೆ ಜೀವಮಾನದ ದುಡಿಮೆಯನ್ನೆಲ್ಲ ಪಣಕ್ಕಿಟ್ಟು ಹುಳುಗಳಂತೆ ಸಿಕ್ಕ ಹಡಗುಗಳನ್ನೇರಿ ಹೇಗಾದರೂ ಸರಿ ಬದುಕುವ ಅವಕಾಶವೊಂದು ಸಿಕ್ಕರೆ ಸಾಕು ಎಂಬ ಸದಾಶಯದಲ್ಲಿ ಈ ನೆಲಕ್ಕೆ ಬಂದಿಳಿಯುತ್ತಿದ್ದಾರಂತೆ.
ಅವರಿಗೆಲ್ಲರಿಗೂ ನೆಲೆ ನಿಲ್ಲಲು ಹಾಗೂ ದುಡಿಯಲು ಸಾಕಾಗುವಷ್ಟು ನೆಲ ಪೂರ್ವದಲ್ಲಿಲ್ಲ. ಈಗಾಗಲೆ ಪೂರ್ವ ತೀರದ ಪಟ್ಟಣ ಪ್ರದೇಶಗಳ ಜನ ವಸತಿಗಳು ಜನ ಸಾಂದ್ರತೆಯಿಂದ ಬಿರಿದು ಹೋಗುತ್ತಿವೆ. ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿಯೂ ಕಾಡಿನ ಹೊದಿಕೆಯ ಮೇಲೆ ಅಸಾಧ್ಯ ಒತ್ತಡ ಬಿದ್ದು ಸಾಮಾಜಿಕ ವ್ಯವಸ್ಥೆಯೆ ಏರುಪೇರಾಗುವ ಸ್ಥಿತಿ ಬರಲಿರುವದನ್ನ ಅಂದಾಜಿಸಿದ ಆಳುವ ವರ್ಗ ಈಗ ಅವರೆಲ್ಲರ ಕಣ್ಣುಗಳಿಗೂ ಸಮೃದ್ಧತೆಯ ಕನಸುಗಳನ್ನ ತುಂಬಿ ಸಾಧ್ಯವಾದಷ್ಟು ಪಶ್ಚಿಮದ ನೆಲೆಗಳತ್ತ ಅಟ್ಟುತ್ತಿದೆ.
ಈ ಮೂಲಕ ಒಂದೆ ಕಲ್ಲಿಗೆ ಎರಡು ಹಕ್ಕಿಗಳನ್ನ ಉರುಳಿಸುವ ಜಾಣ್ಮೆ ರಾಜಧಾನಿಯಲ್ಲಿ ಆಳಲು ಕೂತ ರಾಜಕಾರಣಿಗಳದ್ದು. ಒಂದುˌ ಭೂಮಿ ಮಂಜೂರು ಮಾಡಿ ಕಂದಾಯ ವಸೂಲಿ ಮಾಡಿಕೊಂಡು ಅರಾಮವಾಗಿ ತಾವು ಕೂತಿದ್ದರೂ ಸಾಕುˌ ಸ್ಥಳಿಯ ಬುಡಕಟ್ಟಿನವರ ಜೊತೆ ಈ ವಲಸಿಗರೆ ಹೋರಾಡಿ ತಮ್ಮ ಹಕ್ಕುಗಳನ್ನ ಸ್ಥಾಪಿಸಿಕೊಳ್ಳುತ್ತಾರೆ. ಮೂಲದವರನ್ನ ಅಲ್ಲಿಂದ ಒಕ್ಕಲೆಬ್ಬಿಸುವ ಸಂಕಟ ಸರಕಾರಕ್ಕಿರೋದಿಲ್ಲ. ಕೇವಲ ಎರಡೂವರೆ ದಶಕದ ಹಿಂದೆಯಷ್ಟೆ ಎರಡು ವಲಸಿಗ ಜನಾಂಗಗಳ ನಡುವೆ ನಡೆದಿದ್ದ ನಾಗರೀಕ ಯುದ್ಧವನ್ನ ಕೊನೆಗಾಣಿಸಲು ಹೆಣಗಿ ಹೈರಾಣಾಗಿದ್ದ ಸರಕಾರಕ್ಕೆ ಈಗ ಮತ್ತೊಂದು ತಲೆನೋವಿನ ಕಾರ್ಯಾಚರಣೆ ಮಾಡುವ ಹಮ್ಮಸ್ಸೂ ಇರಲಿಲ್ಲˌ ಅದಕ್ಕೆ ಸಾಲುವಷ್ಟು ಸಂಪನ್ಮೂಲಗಳೂ ಅದರ ಬೊಕ್ಕಸದಲ್ಲಿರಲಿಲ್ಲ. ಎರಡನೆಯದಾಗಿˌ ಕಾಡು ಕಡಿದು ನಾಡು ಕಟ್ಟುವ ವಲಸಿಗ ಮಂದಿ ಪಶ್ಚಿಮದ ಬರಡು ನೆಲವನ್ನೆಲ್ಲ ಫಲವತ್ತಾಗಿಸಿ ದೇಶವನ್ನ ಸಹಜವಾಗಿ ವಿಸ್ತರಿಸುತ್ತಾರೆ. ದೇಶದ ಆದಾಯ ಹೆಚ್ಚಿ ಸಿರಿ ಸಂಪತ್ತು ಶ್ರಮವಿಲ್ಲದೆ ಹೆಚ್ಚುತ್ತಾ ಹೋಗುತ್ತದೆ. ಹೀಗೆ ಹೂಡಿದ ಹಂಚಿಕೆಯ ಫಲವೆ ಈ ಮಹಾವಲಸೆ ಅನ್ನುವುದು ಸ್ವಲ್ಪವಾದರೂ ಆಲೋಚನಾ ಶಕ್ತಿಯಿರುವ ಯಾವ ಮಡ್ಡ ಮಂಡೆಗಾದರೂ ಹೊಳೆದೆ ಹೊಳಿಯುತ್ತಿತ್ತು.
"ದೇಶವೊಂದನ್ನ ಒಂದೆ ರಾತ್ರಿಯಲ್ಲಿ ಕಟ್ಟಲಕ್ಕಾಗುವದಿಲ್ಲ. ಅಪಾರ ಶ್ರಮ ಬೇಡುವ ಅನವರತ ದುಡಿಮೆ ದೇಶವೊಂದು ಸ್ವಾವಲಂಬಿಯಾಗಿ ತನ್ನ ಸುತ್ತಮುತ್ತಲ ನಾಡುಗಳ ನಡುವೆ ಸ್ವಾಭಿಮಾನದಿಂದ ತಲೆಯೆತ್ತಿ ನಿಲ್ಲುವಂತೆ ಮಾಡುತ್ತದೆ. ದೇಶವೊಂದು ಬಲಿಷ್ಠವಾಗಿ ಬೆಳೆದು ನಿಂತು ತನ್ನ ನಾಗರೀಕರಿಗೆ ಇತರರ ಕಣ್ಣಲ್ಲಿ ಹೊಟ್ಟೆಕಿಚ್ಚು ಹುಟ್ಟಿಸುವ ವಿಸ್ಮಯ ಹಾಗೂ ಬೆರಗು ಹೊತ್ತ ಮೆಚ್ಚುಗೆ ಬರಿಸಬೇಕಿದ್ದಲ್ಲಿ ಅದರ ಏಳ್ಗೆಗೆ ವಿವಿಧ ಸ್ತರಗಳಲ್ಲಿ ವೈವಿಧ್ಯಮಯವಾಗಿ ಪಳಗಿದ ಕುಶಲ ಕರ್ಮಿಗಳ ಶ್ರಮವೂ ಸಹ ಉನ್ನತ ಸ್ತರದ ಘನತೆ ಹೊತ್ತ ಕಸುಬು ಮಾಡುವ ವರ್ಗದವರಷ್ಟೆ ಮುಖ್ಯವಾಗುತ್ತದೆ. ನಾಡೊಂದು ಸಶಕ್ತವಾಗಲು ರೈತಾಪಿಗಳಷ್ಟೆ ಕಾರ್ಮಿಕರಿಗೂ ಕಾರ್ಮಿಕರಷ್ಟೆ ನಿರ್ವಾಹಕರಿಗೂ ನಿರ್ವಾಹಕರಷ್ಟೆ ವೈದ್ಯರಿಗೂ ವೈದ್ಯರಷ್ಟೆ ರಾಜಕಾರಣಿಗಳಿಗೂ ರಾಜಕಾರಣಿಗಳಷ್ಟೆ ವ್ಯಾಪಾರಿಗಳಿಗೂ ವ್ಯಾಪಾರಿಗಳಷ್ಟೆ ಕೂಲಿಗಳಿಗೂ ಕೂಲಿಗಳಷ್ಟೆ ವಲಸೆಗಾರರಿಗೂ ಪ್ರಮುಖ ಪಾತ್ರವಿರುತ್ತದೆ" ಅನ್ನುತ್ತಿದ್ದ ಅಪ್ಪನ ದೃಢ ವಿಶ್ವಾಸದ ನುಡಿಗಳು ಆಗಾಗ ಅವನಿಗೆ ನೆನಪಾಗುತ್ತಿದ್ದವು.
ಬಾಲ್ಯದಲ್ಲಿ ಅವನು ಈ ಮಾತುಗಳನ್ನ ಕೇಳಿಕೊಂಡೆ ಬೆಳೆದಿದ್ದ. ದಿನ ಕಳೆದಂತೆ ಹೆಚ್ಚುತ್ತಿರುವ ವಲಸೆ. ಆ ವಲಸೆಗಾರರ ಒತ್ತಡದಿಂದ ತಾವಿರುವ ವಠಾರದ ಸುತ್ತಮತ್ತಲೂ ದಿನ ಕಳೆದಂತೆ ಹೆಚ್ಚುತ್ತಿರುವ ಜನ ದಟ್ಟಣೆ ಅವನ ಅಮ್ಮನಿಗೆ ಕಿರಿಕಿರಿ ಹುಟ್ಟಿಸುತ್ತಿತ್ತು. ಮೊದಲಿನಷ್ಟು ಸೊಗಸಾಗಿಲ್ಲದೆ ನಾಡು ಸೊರಗುತ್ತಿದೆ. ಅದಕ್ಕೆ ಈ ಅಪರಾ ತಪರಾ ದೇಶದ ಒಳ ನುಗ್ಗುತ್ತಿರುವ ವಲಸಿಗರೆ ನೇರ ಕಾರಣ ಎಂದವಳು ಅಸಹನೆಯಿಂದ ಪೇಚಾಡುತ್ತಿದ್ದಳು. ಒಟ್ಟಿನಲ್ಲಿ ಅವಳಿಗೆ ಹೀಗೆ ಹೆಚ್ಚುತ್ತಿರುವ ಜನಸಂಖ್ಯೆ ಹಿತಕಾರಿಯಾಗಿರಲಿಲ್ಲ. ಹಾಗೆಲ್ಲ ಅವಳು ವಲಸೆಗಾರರನ್ನ ಮೊದಲಿಸಿ ಮಾತನಾಡುವ ಸಂದರ್ಭಗಳಲ್ಲಿ ಅಪ್ಪ ಮೇಲಿನ ಮಾತುಗಳನ್ನ ಹೇಳಿˌ ಸೂಕ್ಷ್ಮವಾಗಿ ಮಾತಿನ ನಡುನಡುವೆ ನಾವೂ ವಲಸಿಗರ ಸಂತಾನವೆ ತಾನೇ? ಹೀಗೆ ವಿರೋಧಿಸಲು ನೈತಿಕ ಅಧಿಕಾರ ನಮಗಿಲ್ಲ ಎನ್ನುವುದನ್ನೂ ಅವಳಿಗೆ ನೆನಪಿಸುತ್ತಿದ್ದ.
***********
"ಐದು ಬೆರಳು ಸರಿಸಮವಲ್ಲˌ
ಪ್ರಾಪಂಚಿಕರೆಲ್ಲರೂ ಒಂದೆ ತರಹ ಆಲೋಚಿಸಲ್ಲ"
ಈ ಪ್ರಪಂಚವೆ ವಿಚಿತ್ರ. ಇಲ್ಲಿ ಅಸಮಾನತೆಯೆ ಬದುಕಿನ ಮೂಲಮಂತ್ರ. ತಾನು ಮಾಡಿದ್ದು ಸರಿಯೆನ್ನುವ ನಾವು ಅದೆ ಕೃತ್ಯವನ್ನು ತನಗಾಗದವರ್ಯಾರಾದರು ಮಾಡಿದ ತಕ್ಷಣ ಟೀಕಿಸುತ್ತೇವೆ. ಕೈಯೆತ್ತಿ ಕೊಡುವ ಅವಕಾಶವಿದ್ದರೂ ಕೃಪಣತೆ ತೋರಿದವರನ್ನ ಸ್ತುತಿಸುತ್ತೇವೆ. ಕೂಲಿ ಕೆಲಸ ಮಾಡುವ ಶ್ರಮಿಕರನ್ನ ಕೀಳಾಗಿ ಕಾಣುತ್ತೇವೆˌ ವಿದ್ಯಾವಂತ ಜೀತದಾಳುಗಳನ್ನ ಗೌರವಾದರಗಳಿಂದ ನೋಡುತ್ತೇವೆ. ಕಷ್ಟಪಟ್ಟು ಗೇಯ್ದು ಬೆಳೆವ ರೈತನಿಗೆ ಸಲ್ಲದ ಮರ್ಯಾದೆ ಅದೆ ಬೆಳೆಯನ್ನ ಮಧ್ಯವರ್ತಿಯಾಗಿ ಮಾರಿ ದಳ್ಳಾಳಿ ಸಂಪಾದಿಸುವ ವ್ಯಾಪಾರಿಗೆ ಸಲ್ಲುತ್ತದೆ. ತಾವೆ ವಲಸೆ ಬಂದಿದ್ದವರ ಮತ್ತೊಂದು ತಲೆಮಾರಿನ ಅಮ್ಮ ತನ್ನಂತದ್ದೆ ಮತ್ತೊಂದು ಕುಟುಂಬ ನೆಮ್ಮದಿಯ ನಾಳೆಯನ್ನ ಕಟ್ಟಿಕೊಳ್ಳಲು ಬಂದ ತಕ್ಷಣ ಸಿಡುಕಿದಳುˌ ಕೂಡಿಟ್ಟ ದಿನಸಿಯನ್ನ ತಿಂಗಳಾನುಗಟ್ಟಲೆ ಹಾಗೆ ಬಿಟ್ಟರೆ ಹುಳ ಬಂದುˌ ಬೂಷ್ಟು ಹಿಡಿದುˌ ಕಡೆಗೆ ಕೊಳೆತು ಹೋಗುವ ಅದೆಲ್ಲವನ್ನೂ ನೆಲದಲ್ಲಿ ಗುಂಡಿ ತೋಡಿ ಮಣ್ಣುಪಾಲು ಮಾಡಬೇಕಾಗಿ ಬರುತ್ತೆ ಅನ್ನುವ ಅರಿವಿದ್ದರೂ ಆ ರೈಲ್ವೆ ಗುತ್ತಿಗೆದಾರನಿಗೆ ಉಟ್ಟ ಬಟ್ಟೆಯಲ್ಲೆ ಚಳಿಯ ಪ್ರಕೋಪಕ್ಕೆ ಹೆದರಿ ಹಿಂದಿರುಗಿ ಹೊರಟಿದ್ದ ಕಾರ್ಮಿಕರಿಗೆ ಕೈಯೆತ್ತಿ ಹಂಚಿಯಾದರೂ ಅವೆಲ್ಲವನ್ನ ಖಾಲಿ ಮಾಡುವ ಅಂತನಿಸಲಿಲ್ಲ! ಒಟ್ಟಿನಲ್ಲಿ ಸಮಾನತೆ ಒಂದು ಸುಂದರ ಕಲ್ಪನೆಯಷ್ಟೆ. ಎಲ್ಲರೂ ಸರಿಸಮಾನರಾಗಿˌ ತಮ್ಮ ಬಣ್ಣˌ ವೃತ್ತಿ ಹಾಗೂ ಲಿಂಗದ ಹೊರತೂ ಸಹ ಉಳಿದೆಲ್ಲರಿಗೂ ಸಮಾನರಾಗಿ ಗೌರವಾದರ ಗಿಟ್ಟಿಸುವ ದೇಶ ಇಂದಲ್ಲ ನಾಳೆಯಾದರೂ ತಮ್ಮದಾದೀತೆ? ಎಂದವನು ಯೋಚಿಸುತ್ತಿದ್ದ.
ಚಹಾ ಕುದಿಯಲಿಟ್ಟ ಕೈಪಾತ್ರೆಯೊಳಗೆ ನೀರು ಚಹಾ ಸೊಪ್ಪಿನೊಡನೆ ಮರಳುತ್ತಾ ಕುದಿಯುತ್ತಿರುವದನ್ನೆ ತದೇಕ ಚಿತ್ತನಾಗಿ ನೋಡುತ್ತಾ ಇರುವಂತೆ ಅವನ ಮನೋವ್ಯಾಪಾರ ಈ ದಿಕ್ಕಿನಲ್ಲಿ ಸಾಗುತ್ತಿತ್ತು. ಕೊರೆವ ಚಳಿಗೆ ಕುದ್ದ ಚಹಾ ಮತ್ತೆ ಉಪ್ಪು ಬಿಸ್ಕತ್ತುಗಳು ಚೇತೋಹಾರಿ ಅನುಭವ ನೀಡಿದವು. ದೇಹದ ನರನಾಡಿಗಳಲೆಲ್ಲಾ ಒಂಥರಾ ಬೆಚ್ಚನೆ ಭಾವ ಹರಿದಾಡಿದಂತಾಯಿತು. ಸುಲ್ತಾನ ಮಂಡಿಯೂರಿ ಸುಸ್ತನ್ನ ಸುಧಾರಿಸಿಕೊಳ್ಳುತ್ತಿದ್ದ. ಅವನ ಕುತ್ತಿಗೆಯ ಜೋಳಿಗೆಯಲ್ಲಿದ್ದ ಮೇವು ಬಹುತೇಕ ತೀರಿ ಹೋಗಿತ್ತು. ಇಲ್ಲಿ ಅವನಿಗೆ ತಿನ್ನಿಸುವ ಆಹಾರ ಪದಾರ್ಥವೇನೂ ಇರಲಿಲ್ಲ. ಬೆಚ್ಚನೆ ವಾತಾವರಣದ ಹೊರತು ಮತ್ತಿನ್ನೇನೂ ಅವನಿಗೆ ಲಭ್ಯವಿರಲಿಲ್ಲ.
ಹಿಮ ಮಳೆಯ ಪ್ರಕೋಪ ಕೊಂಚ ಕಡಿಮೆಯಾದ ಹಾಗಿತ್ತು. ಒಂದೆ ಸಮನೆ ಏಕತಾನದಂತೆ ಸೂರಿಗೆ ಬಡಿದು ಸದ್ದೆಬ್ಬಿಸುತ್ತಿದ್ದ ಹಿಮದ ಹನಿಗಳ ಸದ್ದು ಕೊಂಚ ಕೊಂಚವಾಗಿ ಕಡಿಮೆಯಾಗುತ್ತಾ ಬಂದು ಕ್ರಮೇಣ ಇಲ್ಲವಾಯಿತು. ಆದರೆ ಗಾಳಿ ಬೀಸುವ ವೇಗವೇನೂ ಸೋತು ನಿಂತಿರಲಿಲ್ಲ. ಅಗ್ಗಿಷ್ಟಿಯ ಚುಮಣಿಯೊಳಗಿಂದಲೂ ಸಹ ಮನೆಯೊಳಗೆ ನುಗ್ಗಲು ಅದು ಹುಯ್ಯಲಿಡುತ್ತಾ ಹವಣಿಸುತ್ತಿತ್ತು. ಒಂದರೆ ಘಳಿಗೆ ಅವನಿಗೆ ಈ ಬೆಚ್ಚನೆ ಆವರಣದಾಚೆ ಕಾಲಿಡುವುದೆ ಬೇಡˌ ಹಾಗೆಯೆ ಕೊಂಚ ಅಗ್ಗಿಷ್ಟಿಕೆಯ ಉರಿ ಹೆಚ್ಚಿಸಿ ಅದರ ಉರಿಗೆ ಬೆಂಕಿ ಕಾಯಿಸಿಕೊಳ್ಳುತ್ತಾ ಹಾಗೆಯೆ ಸುಖವಾಗಿ ಮಲಗಿ ನಿದ್ರಿಸೋಣ ಅನ್ನಿಸಿತು. ಮರುಕ್ಷಣವೆ ತನ್ನ ಸುಖಲೋಲುಪ ಮನಸಿನ ಸೋಮಾರಿ ಆಲೋಚನೆಗೆ ಅವನೆ ನಾಚಿಕೊಂಡ. ಕರ್ತವ್ಯದ ಕರೆಯನ್ನ ಮೀರುವಂತಿರಲಿಲ್ಲ. ಎಲ್ಲೆಂದರಲ್ಲಿ ಮಲಗಿ ನಿಶ್ಚಿಂತೆಯಿಂದ ಕಾಲ ಹಾಕಲು ಈಗ ನಾನು ಒಂಟಿಯಲ್ಲ. ತನಗೂ ಸಂಸಾರವಿದೆˌ ಸಾಂಸಾರಿಕ ಜವಬ್ದಾರಿಗಳಿವೆ ಅನ್ನುವ ವಾಸ್ತವ ಅವನನ್ನು ಎಚ್ಚರಿಸಿತು. ಅವಳಿಗೆ ಬೇರೆ ಅದೇನೆ ಆದರೂ ಈ ರಾತ್ರಿಯೆ ಮರಳಿ ಬರುತ್ತೇನೆ ಅನ್ನುವ ಭರವಸೆ ಕೊಟ್ಟು ಬಂದಿದ್ದ. ಸಾಲದ್ದಕ್ಕೆˌ ಕುದುರೆ ಕಳ್ಳರ ಅವ್ಯಕ್ತ ಭಯˌ ಎಮ್ಮೆ ತೋಳಗಳ ದಾಳಿಯ ಕಲ್ಪಿತ ಗುಮ್ಮ ಇವೆಲ್ಲವೂ ಅವನ ಮನೆಯೆಡೆಗಿನ ಸೆಳೆತವನ್ನು ಮತ್ತಷ್ಟು ಉದ್ದೀಪಿಸಿದವು. ಆಗಿದ್ದಾಗಲಿ ಹೊರಡೋದೆ ಸರಿ ಎಂದು ನಿರ್ಧರಿಸಿ ಮರು ಆಲೋಚನೆಗೆ ಆಸ್ಪದ ಕೊಡದವನಂತೆ ಕೈ ಪಾತ್ರೆ ತುಂಬ ಹೊರಗಿನ ಹಿಮ ಗೋರಿಕೊಂಡು ತಂದು ಅಗ್ಗಿಷ್ಟಿಕೆಯಿಂದೇಳುತ್ತಿದ್ದ ದೇದೀಪ್ಯಮಾನ ಉರಿಯ ಮೇಲೆ ಸುರಿದು ಅದನ್ನ ನಂದಿಸಿದ.
ಇನ್ನೊಂಚೂರು ಚಳಿ ಕಾಯಿಸುತ್ತಾ ಹಾಗೆ ಕೂತರೆ ಮತ್ತೆ ಜಡ ಆವರಿಸಬಹುದು ಅನ್ನುವ ಹೆದರಿಕೆ ಅವನನ್ನ ಕಾಡಿತ್ತು. ಅಲ್ಲದೆ ಹಾಗೆಲ್ಲ ಅರೆಬರೆ ಬೆಂಕಿ ಉಳಿಸಿ ಹೋಗುವುದು ಅಪಾಯಕಾರಿ. ಒಂದೊಮ್ಮೆ ಚುಮಣಿ ದಾರಿಯಲ್ಲಿ ಒಳ ನುಗ್ಗುವ ಗಾಳಿ ಒಂದೆ ಕಿಡಿಯನ್ನ ನೆಲಕ್ಕೆ ದಾಟಿಸಿದರೂ ಸಾಕು ಇಡಿ ಮನೆಗೆ ಉರಿ ವ್ಯಾಪಿಸಿಕೊಂಡು ಅನಾಹುತವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿರಲಿಲ್ಲ. ಮಂದರಿಯಡಿ ಮುದುಡಿ ಮಂಡಿ ಹಾಕಿಕೊಂಡು ಕೂತಿದ್ದ ಸುಲ್ತಾನನ ಬೆನ್ನು ಚಪ್ಪರಿಸಿ ಮೇಲೆಬ್ಬಿಸಿದ. ಬಿಗಿದ ಜೀನು ಸರಿಯಾಗಿದೆಯೆ ಎಂದು ಪರಿಕ್ಷಿಸಿ ತನ್ನ ಕೈಗವಸು ತೊಟ್ಟು ಮೂಗುದಾರ ಹಿಡಿದು ಕುದುರೆಯನ್ನ ಹೊರ ನಡೆಸಿಕೊಂಡು ಬಂದ. ಔಷಧೋಪಚಾರದ ಕಾರಣ ಕುದುರೆಯ ಶೀತ ಬಾಧೆ ಕಾಡದೆ ನಿಂತು ಹೋಗಿತ್ತು. ಹತ್ತು ಹದಿನಾಲ್ಕು ಮೈಲಿಯಾಚೆ ಮನೆ. ಇನ್ನೇನು ಮುಟ್ಟಿ ಬಿಟ್ಟೆವು. ಅನಂತರ ಅದೇನೆ ಶೀತ ಇದ್ದರೂ ಅದರಿಂದ ಹಯ ಹೈರಾಣಾಗದಂತೆ ಕಾಪಾಡಿಕೊಳ್ಳುವ ಆತ್ಮವಿಶ್ವಾಸ ಅವನಲ್ಲಿತ್ತು. ಕ್ಯಾಂಪು ಮನೆಯ ಬಾಗಿಲು ಭದ್ರ ಪಡಿಸಿˌ ಒಳಗಿಂದಲೆ ತಂದಿದ್ದ ಹಗ್ಗವೊಂದನ್ನ ಚಿಲಕಕ್ಕೆ ಕಟ್ಟಿ ಬಿಗಿದು ಕುದುರೆಯನ್ನೇರಿದ.
ಹಾಗೆಯೆ ದಿಕ್ಸೂಚಿಯ ಸೂಚನೆ ಅನುಸರಿಸುತ್ತಾ ಮುಂದಕ್ಕೆ ಇಬ್ಬರೂ ಚಲಿಸಿದರು. ಮಳೆಯೇನೋ ನಿಂತಿತ್ತು ಸರಿˌ ಆದರೆ ಚಳಿ ಮಾತ್ರ ಗಾಳಿಯೊಡನೆ ಕೂಡಿ ಕಾಡುತ್ತಲೆ ಇತ್ತು. ಒಂದೆರಡು ಮೈಲಿ ದೂರ ಅವರ ಪಯಣ ಸಾಗಿರಬಹುದುˌ ಆಗಸದಲ್ಲಿ ಮೋಡ ಕ್ರಮೇಣ ಕಾಣೆಯಾಗಿ ಬೆಳದಿಂಗಳ ಬೂದು ಬೆಳಕು ಸೂಸುತ್ತಾ ಚಂದ್ರ ಹೊಳೆಯುವದು ಗೋಚರವಾಗುತ್ತಿತ್ತು. ಆಕಾಶಕ್ಕಂಟಿಸಿದ ಮಂದ ಬೆಳಕಿನ ದೊಂದಿಯ ಹಾಗೆ ಚಂದ್ರ ಸುರಿಯುತ್ತಿದ್ದ ಬೆಳದಿಂಗಳಲ್ಲಿ ಭೂಮಿಯನ್ನ ಆವರಿಸಿದ್ದ ಮಂಜು ಬೆಳ್ಳಗೆ ಹೊಳೆಯತ್ತಿತ್ತು. ಆ ಬೆಳ್ಳನೆ ಮಂಜಿನ ಮೇಲಿಂದ ಒಂದು ಕಪ್ಪು ತೆರೆ ಇವರತ್ತಲೆ ಸಾಗಿ ಬರುತ್ತಿರವಂತೆ ಇವನಿಗೆ ಕಂಡಿತು. ಅದೊಂದು ಭ್ರಮೆಯಾಗಿರಬಹುದೆ? ಎಂದು ಯೋಚಿಸುವ ಹೊತ್ತಿಗೆಲ್ಲ ಆ ಅಲೆ ಮುಖಾಮಖಿಯಾಗಿ ಒಂದೈನೂರು ಗಜದಷ್ಟು ಸನಿಹ ಬಂದಾಗಿತ್ತು.
ಓ ದೇವರೆ ಎಮ್ಮೆತೋಳಗಳ ಹಿಂಡು! ಈಗಿರುವ ಪರಿಸ್ಥಿತಿಯಲ್ಲಿ ಸಮಯಾವಧಾನದಿಂದ ಶಾಂತ ಚಿತ್ತರಾಗಿ ಅವುಗಳನ್ನ ಕೆರಳಿಸದಂತೆ ಮುಂದುವರಿಯದೆ ಬೇರೆ ಉಪಾಯವೆ ಇಲ್ಲ. ಹಿಂತಿರುಗಿ ದೌಡಾಯಿಸಲೂ ಸಹ ಅಸಾಧ್ಯ ಅನ್ನುವ ಪರಿಸ್ಥಿತಿ. ಹಾಗೊಮ್ಮೆ ಹುಚ್ಚು ಸಾಹಸಕ್ಕಿಳಿದರೆ ಅಟ್ಟಿಸಿಕೊಂಡು ಬಂದು ತಮ್ಮಿಬ್ಬರನ್ನೂ ಹರಿದು ಹಂಚಿ ತಿನ್ನಲು ಅವಕ್ಯಾವ ತಡೆ? ಇಂತಹ ಪರಿಸ್ಥಿತಿ ವಿಪರೀತ ಎದುರಾದರೆ ಶಾಂತವಾಗಿ ಅದನ್ನ ಎದುರಿಸಬೇಕು ಅಂತ ಅಪ್ಪ ಹೇಳುತ್ತಿದ್ದ ಮಾತು ನೆನಪಾಯಿತು. ಅಲ್ಲದೆ ಅಂತಹ ಅನುಭವ ಬಾಳಲ್ಲೆ ಮೊದಲ ಬಾರಿ ಆಗುತ್ತಿದೆ. ಹಿಂಡು ತೀರಾ ಹತ್ತಿರಕ್ಕೆ ಬಂತು.
ಗುಂಪಿನ ನಾಯಕಿ ಇಪ್ಪತ್ತೋ ಮೂವತ್ತೋ ಎಮ್ಮೆತೋಳಗಳನ್ನ ಮುನ್ನಡೆಸಿಕೊಂಡು ಶಾಂತವಾಗಿ ಹೋಗುತ್ತಿದೆ. ರಸ್ತೆಯ ಎಡ ಅಂಚಿಗೆ ಇವರಿಬ್ಬರ ಇರುವನ್ನ ಅದು ಗಮನಿಸಿತಾದರೂ ಅಲಕ್ಷ್ಯಿಸಿ ಮುನ್ನಡೆಯಿತು. ಅದರ ಬಾಯಲ್ಲಿನ ರಕ್ತ ಅಂಟಿದ ಕಲೆ ಬೆಳದಿಂಗಳಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಅಂದರೆ ಹತ್ತಿರದಲ್ಲೆ ಎಲ್ಲೋ ಭರ್ಜರಿ ಬೇಟೆಯಾಡಿ ಭೂರಿ ಭೋಜನ ಮುಗಿಸಿವೆ. ಹಸಿದ ಹೊಟ್ಚೆಯಲ್ಲಿಲ್ಲದ ಕಾರಣ ಆಕ್ರಮಣದ ಭಯವಿರಲಿಲ್ಲ. ಹಿಂಡು ಅವರ ಪಕ್ಕದಲ್ಲಿಯೆ ಒಂದೆ ಗುರಿಯಟ್ಟಂತೆ ತಮ್ಮ ನಾಯಕರ ಹಿಂದೆ ಶಿಸ್ತಿನಿಂದ ಸಾಗಿ ಹೋಗುವಾಗ ಅವುಗಳ ಪುಟ್ಟ ವಯಸ್ಕ ಪುಂಡ ತೋಳಗಳನ್ನೆಲ್ಲ ಗುಂಪಿನ ಮಧ್ಯದಲ್ಲಿದ್ದವು. ಹಿರಿಯ ಅನುಭವಿ ಪ್ರಾಯಸ್ಥ ಮಾಗಿದವುಗಳು ಗುಂಪಿನ ಸುತ್ತಲೂ ಸಾಗಿ ಮಂದುವರೆಯುತ್ತಿದ್ದವು. ಅವುಗಳಲ್ಲೂ ಒಂದು ರೀತಿಯ ಶಿಸ್ತಿದೆ!
*************
ಎಮ್ಮೆತೋಳಗಳ ಉಸಿರು ಸೋಕುವಷ್ಟು ದೂರದಲ್ಲಿ ಅವುಗಳು ಗುಟುರು ಹಾಕುತ್ತಾ ಸಾಗುತ್ತಿದ್ದಾಗ ಮಿಸುಕಾಡದಂತೆ ಸುಲ್ತಾನನ ಲಗಾಮನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದ. ಇವನ ಎದೆ ಬಡಿತ ನಗಾರಿಯಂತಾಗಿ ಸ್ವತಃ ಇವನಿಗೆ ಅದರ ಸದ್ದು ಕೇಳುತ್ತಿತ್ತು. ಅಂತೂ ಗಂಡಾಂತರ ಕಳೆಯಿತು. ಇವರ ವಿರುದ್ಧ ದಿಕ್ಕಿಗೆ ಮತ್ತೊಂದು ಐನೂರು ಗಜ ಆ ಹಿಂಡು ಸಾಗಿ ಹೋದ ಮೇಲೆ ಇವ ಬಿಗಿಯಾಗಿ ಎಳೆದು ಲಗಾಮನ್ನ ಸಡಿಲ ಬಿಟ್ಟ. ಬದುಕಿದೆಯ ಬಡಜೀವವೆ ಅನ್ನುವಂತೆ ಕುದುರೆ ಒಂದೆ ನೆಗೆತಕ್ಕೆ ಚಿಮ್ಮಿ ಮನೆಯ ದಿಕ್ಕಿಗೆ ದೌಡಾಯಿಸುತ್ತಾ ಓಡಿತು. ಆ ರಣಭೀಕರ ಚಳಿಯಲ್ಲಿಯೂ ಸುಲ್ತಾನ ಹೆದರಿ ಬೆವರಿ ತೊಪ್ಪೆಯಾಗಿದ್ದುದು ಅವನ ಅನುಭವಕ್ಕೆ ಬಂತು. ಪರವಾಗಿಲ್ಲ ಅವನಿಗೆ ಒಡೆಯನ ಅಣತಿಗೆ ತಕ್ಕಂತೆ ವರ್ತಿಸುವ ಗುಣ ತನ್ನ ತಂದೆ ತಾಯಿಂದಲೆ ಬಳುವಳಿಯಾಗಿ ಬಂದಿದೆ. ಅವನೇನಾದರೂ ಹೆದರಿಕೆಯಲ್ಲಿ ಕೆನೆದಾಡಿ ಹಾರಿ ರಂಪ ಮಾಡಿದ್ದಿದ್ದರೆ ಎಡವಟ್ಟಾಗುವ ಸಂಭವವಿತ್ತು. ಮೆಚ್ಚುಗೆಯಿಂದ ಅವನು ಸುಲ್ತಾನನ ಕುತ್ತಿಗೆ ಚಪ್ಪರಿಸಿದ.
ಸೋಮ ಸರೋವರಕ್ಕೆ ಇನ್ನೂ ಮೈಲು ದೂರದಲ್ಲಿರವ ಹಾಗೆ ಚಂದ್ರನ ತಂಪು ಬೆಳಕಿನಲ್ಲಿ ಎಡಕ್ಕೆ ಒಂದು ಮುನ್ನೂರು ಗಜ ದೂರದಲ್ಲಿದ್ದ ದಿಬ್ಬದ ಮೇಲೆ ಗಡವ ಎಮ್ಮೆತೋಳವೊಂದು ಒಬ್ಬಂಟಿಯಾಗಿ ತನ್ನ ಹಿಂಗಾಲಗಳ ಮೇಲೆ ಚಂದ್ರನನ್ನ ಒಮ್ಮೆ ಆ ಹಿಂಡು ಸಾಗಿ ಬಂದ ದಾರಿಯನ್ನೊಮ್ಮೆ ಅವಲೋಕಿಸುತ್ತಾ ಶಾಂತವಾಗಿ ಕೂತಿದ್ದು ಕಂಡಿತು. ಬಹುಶಃ ಆ ಪ್ರದೇಶದಲ್ಲೆ ಅಳಿದುಳಿದು ಹೋಗಿರುವ ಕಡೆಯ ಕಂತಿನ ತೋಳಗಳಿವು. ದಿನದಿಂದ ದಿನಕ್ಕೆ ಮಾನವರ ಅತಿಕ್ರಮಣದಿಂದ ಕುಗ್ಗುತ್ತಿರುವ ತಮ್ಮ ನೆಲೆಯನ್ನ ತ್ಯಜಿಸಿ ಶಾಶ್ವತವಾಗಿ ಅವು ಉತ್ತರದಿಂದ ದೂರದ ದಕ್ಷಿಣಕ್ಕೆ ಆ ಹಾಡಿಯ ಮಂದಿಯಂತೆ ಗುಳೆ ಹೋಗುತ್ತಿರಬಹುದು. ಇನ್ನು ಮುಂದೆ ಅವು ಇಲ್ಲಿಂದ ಶಾಶ್ವತವಾಗಿ ಕಣ್ಮರೆಯಾಗಬಹುದು ಅನಿಸಿ ಪೆಚ್ಚಾದನವನು. ತಮ್ಮ ದುರಾದೃಷ್ಟವನ್ನ ನೆನೆದುಕೊಂಡು ಹಿಂದೊಮ್ಮೆ ತಾವು ನೆಲೆಸಿದ್ದ ತಾಣವನ್ನ ಆ ಒಂಟಿತೋಳ ಕಣ್ತುಂಬಿಸಿ ಕೊಳ್ಳುತ್ತಿರುವಂತೆ ಅವನಿಗೆ ಭಾಸವಾಯಿತು. ಅದೂ ಸಹ ಅವನನ್ನ ಕ್ಷಣಕಾಲ ದಿಟ್ಟಿಸಿ ಅನಂತರ ಅಲಕ್ಷ್ಯಿಸಿ ಚಂದ್ರನಿಗೆ ಮುಖ ಮಾಡಿ ಸುದೀರ್ಘವಾಗಿ ಬಾಯೆತ್ತಿ ಊಳಿಟ್ಟಿತು. ಅದೊಂದು ವಿಷಾದದ ಅರ್ತನಾದದಂತೆ ಅದೆ ವೇಗದಲ್ಲಿ ಸಾಗಿ ಹೋಗುತ್ತಿದ್ದ ಅವನ ಕಿವಿಗೆ ಅಲೆಯಲೆಯಾಗಿ ಕೇಳಿಸಿತು.
ಸೋಮ ಸರೋವರ ಮತ್ತಷ್ಟು ಗಡುಸಾಗಿ ತಣ್ಣಗೆ ಮಲಗಿತ್ತು. ಸರೋವರದ ಮೇಲೆ ಸಾಗಿಯೆ ಅವರು ಆಚೆ ದಡ ಮಟ್ಟಿದರು. ಮನೆಗಿನ್ನು ಮೂರೆ ಮೈಲಿ ಅಂತರ! ಬೆಳಗ್ಗಿನಂತೆ ಮತ್ತೆ ಕುದುರೆ ಮಗ್ಗರಿಸದಿರಲಿ ಎಂದು ಹಾರೈಸುತ್ತಲೆ ನಾಗಲೋಟ ಮಂದುವರೆಸಿದ. ಗಮ್ಯ ದೃಗ್ಗೋಚರವಾದದ್ದೆ ನೆಮ್ಮದಿಯ ಸುಳಿಗಾಳಿ ಸೋಕಿದಂತಾಗಿ ಪಟ್ಟ ಪ್ರಯಾಣದ ಕಷ್ಟ ಕಾರ್ಪಣ್ಯಗಳೆಲ್ಲ ಮರೆತು ಹೋಯಿತು. ಮತ್ತೊಂದು ಹಿಮದ ಮಳೆ ಬೀಳುವ ಮೊದಲು ಮನೆಯ ಬೇಲಿಯನ್ನವನು ದಾಟಿಯಾಗಿತ್ತು. ಸುಲ್ತಾನನ ಬೆನ್ನಿಂದ ಹಾರಿ ಕೆಳಗಿಳಿದು ಮನೆಯೆಡೆಗೆ ದಿಟ್ಟಿಸಿದವನಿಗೆ ಲಾಟೀನಿನ ಹಾಗೂ ಅಗ್ಗಿಷ್ಟಿಕೆಯ ಬೆಳಕು ದೂರದಿಂದಲೆ ಮನೆಯೊಳಗೆ ಬೆಳಕಾಗಿರಿಸಿರುವುದು ಕಂಡಿಯ ಗಾಜಿನ ಮೂಲಕ ಮಂದವಾಗಿ ಕಾಣಿಸಿತು. ಹಟ್ಟಿಯ ಬಾಗಿಲು ಸರಿಸಿದಾಗ ಒಂದರೆ ಕ್ಷಣ ಶೀತಗಾಳಿ ಒಳನುಗ್ಗಿ ಒಳಗಿನ ಬೆಚ್ಚನೆ ಹವೆ ಮತ್ತೆ ಚಳಿಯ ತಕ್ಕೆಗೆ ಜಾರಿದ ಕಾರಣ ಒಂದರೆಕ್ಷಣ ಕೊಟ್ಟಿಗೆಯ ಸಹವಾಸಿಗಳು ನವಿರಾಗಿ ನಡುಗಿದವು. ಹೊತ್ತಲ್ಲದ ಹೊತ್ತಿನಲ್ಲಿ ಕೊಟ್ಟಿಗೆಯ ಮುಖದ್ವಾರ ತೆಗೆದದ್ದಕ್ಕೊ ಏನೋ ಕ್ಷಣಕಾಲ ಗಾಬರಿಯಾದ ಜಾನುವಾರುಗಳು ಒಳಗೆ ಬಂದದ್ದು ತಮ್ಮೆಜಮಾನ ಹಾಗೂ ಸುಲ್ತಾನನೆಂದು ಅರಿವಾಗುತ್ತಲೆ ನಿರಾಳವಾದವು. ಅವರಿಬ್ಬರ ಪರಿಚಿತ ಮೈ ಗಂಧ ಅವುಗಳ ಮೂಗಿಗೆ ಆ ಮಂದ ಬೆಳಕಿನಲ್ಲಿ ಕಣ್ಣ ದೃಷ್ಟಿಗಿಂತ ಮೊದಲು ಮುಟ್ಟಿತ್ತು. ಇವನ ಆಗಮನ ಕಂಡು ನೆಮ್ಮದಿಯಿಂದ ಮೆಲುವಾಗಿ ಕೂಗಿದವು. ಅವುಗಳ ಗೊಂತಿಗಳಲ್ಲಿ ಅವಳು ಸಂಜೆ ಸುರಿದಿರಬಹುದಾದ ಮೇವು ಹಲ್ಲು ತುಂಬಿದ್ದವುˌ ಸುಲ್ತಾನನ್ನ ಅವನ ಲಾಯದ ಗೊಂತಿಗೆ ಮುನ್ನಡೆಸಿ ಕಟ್ಟಿ ಚೂರು ಹುಲ್ಲು ನೀರಿಟ್ಟು ಉಪಚರಿಸಿ ಜೀನು ಬಿಚ್ಚಿ ಬ್ರೆಷ್ಷಿನಿಂದ ಕುದುರೆಯ ದಣಿದ ಮೈಯುಜ್ಜಿ ಆರೈಕೆ ಮಾಡಿದ. ಬೆಳಗ್ಯೆ ಎಣ್ಣೆ ಮಾಲೀಸು ಮಾಡಲು ನಿರ್ಧರಿಸಿದವ ಒಂದೊಂದೆ ದನ ಕರು ಎಮ್ಮೆಗಳ ಮುಖಕ್ಕೆ ಮುಖ ತಾಗಿಸಿ ಅವುಗಳ ಗಂಗೆದೊಗಲ ಮೆಲುವಾಗಿ ಕೆರೆದು ನೇವರಿಸಿ ಜಾನುವಾರುಗಳಿಗೆ ಶುಭರಾತ್ರಿ ಹೇಳಿˌ ಗೋಡೆಗೆ ನೇತು ಬಿದ್ದಿದ್ದ ಲಾಟೀನಿನ ಉರಿ ಚೂರು ಕುಗ್ಗಿಸಿ ಕೊಟ್ಟಿಗೆಯಿಂದ ಹೊರ ಬಿದ್ದ. ಆ ಸಂಜೆ ಹಾಲು ಹಿಂಡಲಾಗದು ಅನ್ನುವ ಅರಿವಿದ್ದಿದ್ದರಿಂದಲೆ ಕರುಗಳನ್ನ ಕಟ್ಟಿರಲಿಲ್ಲ. ಈಗ ಕೊಟ್ಟಿಗೆಯಿಂದ ಹೊರಬೀಳುವ ಮುನ್ನ ಅವುಗಳನ್ನ ಗೂಟದ ಹಗ್ಗಕ್ಕೆ ಬಿಗಿಯದಿದ್ದರೆ ಬೆಳಗಿನ ಹಾಲಿಗೆ ಸೊನ್ನೆಯಾಗುವ ಸಂಭವವಿತ್ತು. ಅವುಗಳ ಅಮ್ಮಂದಿರಿಗೆ ಒರಗಿ ಮಲಗಿದ್ದ ಆ ಎಳೆ ಬೊಮ್ಮಟೆಗಳ ನಿದ್ರಾ ಸುಖಕ್ಕೆ ಅಡ್ಡಿಯಾಗದಂತೆ ಮೆಲ್ಲನೆ ಅವುಗಳ ಕುತ್ತಿಗೆ ಎತ್ತಿ ಕುಣಿಕೆಯೊಳಗೆ ಮುಖ ತೂರಿಸಿ ಅವಕ್ಕೆ ಅರಿವಾಗದ ಹಾಗೆ ಅವುಗಳನ್ನ ಕಟ್ಟಿ ಹಾಕಿಯೆ ಅವನು ಹೊರಗೆ ಬಂದಿದ್ದ.
ಹಿಮಮಳೆಯ ಪ್ರಕೋಪ ಮತ್ತೆ ಮರುಕಳಿಸಲಾರಂಭಿಸಿತ್ತು. ಕೊಟ್ಟಿಗೆಯಿಂದ ಮನೆ ಮುಟ್ಟಲು ಕಟ್ಟಿದ್ದ ಹಗ್ಗವಿಲ್ಲದಿದ್ದರೆ ಕಷ್ಟವಿತ್ತು. ಅಲ್ಲಿಂದ ಮನೆಯ ಬಾಗಿಲ ತನಕ ಕಟ್ಟಿದ್ದ ಹಗ್ಗ ಹಿಡಿದು ಬಂದವ ಬಾಗಿಲು ತಟ್ಟಿದ. ಇವನ ದಾರಿಯನ್ನೆ ನಿರೀಕ್ಷಿಸುತ್ತಾ ಊಟವನ್ನೂ ಮಾಡದೆ ಆರಾಮ ಕುರ್ಚಿಯಲ್ಲಿ ಮಗುವನ್ನ ತಬ್ಬಿ ಮಲಗಿಸಿಕೊಂಡಿದ್ದವಳಿಗೆ ಮೆಲ್ಲನೆ ಹತ್ತಿದ್ದ ಮಂಪರು ಈ ಸದ್ದಿನಿಂದ ಕಳಿಯಿತು. ಶಬರಿಯಂತೆ ಅವನಾಗಮನ ಕಾದಿದ್ದವಳು ಓಡೋಡಿ ಬಂದು ಬಾಗಿಲು ತೆಗೆದಳು. ಸೋತ ಇವನು ಮನೆಗೆ ನುಗ್ಗಿ ಚಳಿಗಾಳಿ ಹಿಂಬಾಲಿಸದಂತೆ ತಲೆ ಬಾಗಿಲು ಜಡಿದ. ಅವನನ್ನ ಚಳಿಗೆ ಬೆಚ್ಚಗಾಗಿಸಲು ಎಮ್ಮೆ ಮಾಂಸದ ಸೂಪು ಕುದಿಸಲು ಅವಳು ಅಡುಗೆ ಮನೆಯತ್ತ ಓಡದಳು. ಇವನು ಹಾಕಿದ್ದ ಬಟ್ಟೆ ಕಳಚಿ ಮುಖ ಕೈ ಕಾಲು ತೊಳೆದುಕೊಳ್ಳಲು ಉದ್ಯುಕ್ತನಾದ. ಕೇಳಿಕೊಳ್ಳಲು ಹೇಳಿಕೊಳ್ಳಲು ಇಬ್ಬರಿಗೂ ಸುಮಾರು ವಿಚಾರಗಳಿದ್ದವು. ಗೋಡೆಗೆ ಜಡಿದಿದ್ದ ಗಡಿಯಾರ ಹನ್ನೆರಡು ಸಲ ಘಂಟೆ ಬಾರಿಸಿ ಸುಮ್ಮನಾಯಿತು. ಅವನು ಕಡೆಗೂ ಮನೆಗೆ ಬಂದು ಮುಟ್ಟಿದ್ದ.
( ನಾನು ಮೂಲತಃ ಲಾರಾ ಇಂಗಲ್ಸ್ ವೈಲ್ಡರ್ರ ಅಭಿಮಾನಿ. ಪುಸ್ತಕ ಪ್ರಕಾಶನˌ ಮೈಸೂರು ಇವರು ಪ್ರಕಟಿಸಿದ್ದ ಅವರು ತಾನು ಚಾರ್ಲ್ಸ್ ಇಂಗಲ್ಸನ ಮಗಳಾಗಿ ಅನಂತರ ಅಲ್ಮಾಂಜೋ ವೈಲ್ಡರನ ಹೆಂಡತಿಯಾಗಿ ಸರಿಯಾಗಿ ಒಂದೂಕಾಲು ಶತಮಾನದ ಹಿಂದಿನ ಅಮೇರಿಕಾದ ಪರಿಸರ - ಬದುಕು ವಿವರಿಸಿ ಬರೆದಿರುವ ಕೇವಲ ಒಂಬತ್ತು ಡೈರಿಗಳ ಕನ್ನಡನುವಾದ ಓದಿ ಸಣ್ಣಂದಿನಂದೆ ಅವರತ್ತ ಆಕರ್ಷಿತನಾಗಿದ್ದೆ. ಮುಂದೆ ಬುದ್ಧಿ ಬೆಳದ ಮೇಲೆ ಕಷ್ಟಪಟ್ಟು ಹುಡುಕಿ ಮೂಲ ಆಂಗ್ಲದಲ್ಲಿಯೆ ಅವರ ಬರಹ ಓದಿದ ನಂತರ ಲಾರಾ ನನ್ನ ಮನಸಿಗೆ ಮತ್ತಷ್ಟು ಆಪ್ತರಾಗಿದ್ದರು.
ಅವರ ಬಾಳು ಸವೆದ ಊರುಗಳನ್ನ ಸ್ವತಃ ಹೋಗಿ ನೋಡುವುದು ಅಂದಿನಿಂದಲೆ ನನ್ನ ಬದುಕಿನ ಆದ್ಯತೆಯಾಗಿತ್ತು. ಅವರ ಬದುಕು ಸಂದ ಜಾಗಗಳನ್ನ ಹೋಗಿ ನೋಡುವ ಅವಕಾಶ ಹತ್ತು ವರ್ಷಗಳ ಹಿಂದೆ ಬಾಳಿನಲ್ಲಿ ಬಂದದ್ದು ನನ್ನ ಸುಕೃತ. ಆ ಪ್ರವಾಸದಲ್ಲಿ ಕಂಡ ಮತ್ತೊಂದು ಸ್ಥಳ ಡೆಟ್ರಾಯಿಟ್ ನಗರ. ಅಲ್ಲಿ ಭೇಟಿಯಾಗಿದ್ದ ಬಿಳಿಯ ಹಿರಿಯರೊಬ್ಬರು ಹೇಳಿದ್ದ ಅವರ ಹಿರಿಯರ ವಲಸೆಯ ಮೆಲುಕನ್ನ ನೆನಪಿಸಿಕೊಂಡು ಈ ಕಥೆಯನ್ನ ಬರೆದಿದ್ದೇನೆ. ನನ್ನ ಅನುಭವಕ್ಕೆ ಬಂದ ಇಂದಿನ ಮಿಚಿಗನ್ ರಾಜ್ಯದ ಅಂದಿನ ದಿನಗಳ ಕಲ್ಪನೆ ಇದರಲ್ಲಿದೆ. ಈ ಮೂಲಕ ನನ್ನ ಐಡಲ್ ಲೇಖಕಿ ಲಾರಾಳ ಶೈಲಿಯಲ್ಲಿ ಬರೆಯುವ ಬಹು ದಿನಗಳ ಮನದಾಸೆಯನ್ನ ಈಡೇರಿಸಿಕೊಂಡಿದ್ದೇನೆ. ಶೈಲಿ ಮಾತ್ರ ಲಾರಾರದ್ದು. ಕಥೆ ನನ್ನದೆ.
ಇಲ್ಲಿ ಮೂಲ ನಿವಾಸಿಗಳು ರೆಡ್ ಇಂಡಿಯನ್ನರುˌ ಸ್ಥಳಿಯ ವಲಸಿಗರ ಭಾಷೆ ಆಂಗ್ಲˌ ಗೋಪಿಯ ಭಾಷೆ ಫ್ರೆಂಚ್ ಅನ್ನುವುದು ನಿಮ್ಮ ಮಾಹಿತಿಗೆ.🙏)
https://youtu.be/Gs57exxcs5g
https://youtu.be/jtFQrXIsfps
https://youtu.be/6vVJZiWOHSA
ಅವನ ಜೊತೆ ಅವಳ ಕಥೆ - ೭
ಊರಿನ ಅಂಗಡಿ ಬೀದಿಯ ಮರ್ತಪ್ಪಯ್ಯನ ಅಂಗಡಿಯಿಂದ ಕಳೆದ ಹಂಗಾಮಿಗೆ ಮಾರಿದ್ದ ಚೀಸ್ˌ ಉಪ್ಪು ಬೆರೆಸಿದ ಗಿಣ್ಣು ಗಟ್ಟಿˌ ತುಪ್ಪ ಹಾಗೂ ಬೆಣ್ಣೆಯ ಬಾಬ್ತು ಹತ್ತು ರೂಪಾಯಿ ವಸೂಲಿ ಮಾಡೋದಿತ್ತು. ಈ ಬಾರಿ ತೋಟದ ಮನೆಯಲ್ಲಿ ತಯಾರಾಗಿದ್ದ ಪೂರ್ತಿ ಹೈನೋತ್ಪನ್ನಗಳನ್ನ ಮರ್ತಪ್ಪಯ್ಯನೆ ಕೊಂಡಿದ್ದ. ಇತ್ತೀಚೆಗೆ ಹೊಸ ಊರುಗಳಿಗೂ ತನ್ನ ಸಗಟು ವ್ಯಾಪಾರದ ಉದ್ಯಮ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದ ಮರ್ತಪ್ಪಯ್ಯ ಹೈನೋತ್ಪನಗಳ ಜೊತೆ ಮೇಪಲ್ ಸಕ್ಕರೆˌ ಜೇನುತುಪ್ಪˌ ಆಲಿವ್ ಎಣ್ಣೆˌ ಸೋಪುಗಳುˌ ಮೇಣದ ಬತ್ತಿಗಳುˌ ದೀಪದ ಬತ್ತಿಗಳುˌ ಲಾವಂಚದ ಬೇರಿನ ಕತ್ತಗಳುˌ ಮನೆಯಲ್ಲೆ ಕ್ರೋಷಾ ಹಾಕಿ ಅವಳು ನೇಯ್ದಿಟ್ಟಿದ್ದ ಉಣ್ಣೆಯ ಕಿವಿಗಾಪು ಸಹಿತವಾದ ಬೆಚ್ಚನೆ ಟೊಪ್ಪಿಗಳುˌ ಕೈಗವಸುಗಳು ಹಾಗೂ ಕಾಲ್ಚೀಲಗಳನ್ನೂ ಇವನಿಂದ ಎರಡು ಮೂರು ಭೇಟಿಗಳಲ್ಲಿ ಪಡೆದಿದ್ದ. ಅವೆಲ್ಲವನ್ನೂ ಅವನು ಪಶ್ಚಿಮದ ದೆಸೆಯಲ್ಲಿ ಹೊಸತಾಗಿ ಆರಂಭವಾದ ಊರುಗಳ ಗ್ರಾಹಕರಿಗೆ ಪೂರೈಸಿ ದಳ್ಳಾಳಿ ದರದಲ್ಲಿಯೆ ನೂರಾರು ರೂಪಾಯಿ ಲಾಭ ಸಂಪಾದನೆ ಮಾಡಿಬಿಟ್ಟಿದ್ದ.
ಆದರೆ ಆರಂಭದಲ್ಲಿ ಪೂರ್ತಿ ಹಣ ಪಾವತಿಸಿ ಸರಕುಗಳನ್ನ ಒಮ್ಮೆಲೆ ಖರೀದಿಸಲು ಬಂಡವಾಳ ಹೂಡುವಷ್ಟು ಕಳೆದ ಸಲ ಅವನ ವ್ಯಾಪಾರ ಚೆನ್ನಾಗೇನೂ ನಡೆದಿರಲಿಲ್ಲ. ಅವನು ಕಳೆದ ಸಾಲಿನಲ್ಲಿ ಇತರ ರೈತರಿಂದ ಖರೀದಿಸಿದ್ದ ಕೆಲವು ತೋಟದುತ್ಪನ್ನಗಳ ಗುಣಮಟ್ಟ ನಿರೀಕ್ಷೆಗೂ ಮೀರಿ ಕಳಪೆಯಾಗಿದ್ದುದೆ ಅದಕ್ಕೆ ಕಾರಣವಾಗಿತ್ತು. ಖರೀದಿದಾರರು ಇವನು ಹೇಳಿದ್ದ ಬೆಲೆ ಪಾವತಿಸಿ ಆ ಮೂರನೆ ದರ್ಜೆಯ ಸರಕನ್ನ ಖರೀದಿಸಲು ಸುತಾರಂ ಒಪ್ಪಿರಲಿಲ್ಲ. ಈಗ ಇಷ್ಟು ದೂರ ಮೈಲುಗಟ್ಟಲೆ ಪಶ್ಚಿಮದ ಊರುಗಳಿಗೆ ಸರಕನ್ನ ಸಾಗಿಸಿಯಾದ ಮೇಲೆ ಹಾಗೆಲ್ಲಾ ಅದನ್ನ ಮರಳಿ ಕೊಂಡೊಯ್ಯುವ ಹಾಗೂ ಇರಲಿಲ್ಲ. ಅವುಗಳಲ್ಲಿ ಕೆಲವು ವಸ್ತುಗಳಂತೂ ತೀರ ವಾರೊಪ್ಪತ್ತಿನಲ್ಲಿ ಬಳಸದಿದ್ದರೆ ಕೆಡುವ ಆಹಾರ ಪದಾರ್ಥಗಳೂ ಆಗಿದ್ದುದು ಅವನ ಸಂಕಟವನ್ನ ಮತ್ತಷ್ಟು ಹೆಚ್ಚಿಸಿತ್ತು.
ಹೀಗಾಗಿ ಹೂಡಿದ ಬಂಡವಾಳಕ್ಕೆ ಚೂರು ಮೋಸವಾದರೂನು ಬಂದಷ್ಟು ಬರಲಿ ನಷ್ಟ ಕಡಿಮೆಯಾಗಲಿ ಅನ್ನುವ ಧೋರಣೆಗೆ ಜೋತು ಬಿದ್ದ ಮರ್ತಪ್ಪಯ್ಯ ದಕ್ಕಿದ ಬೆಲೆಗೆ ಸರಕುಗಳನ್ನ ಮಾರಾಟ ಮಾಡಿ ಸಂಭವನೀಯ ಭಾರಿ ನಷ್ಟಕ್ಕೊಳಗಾಗುವ ಸಂಕಟದಿಂದ ಹೇಗೋ ಪಾರಾಗಿದ್ದ. ಇವನ ತೋಟದ ಮೂಲದ ಸರಕುಗಳ ಹೊರತು ಮಿಕ್ಕೆಲ್ಲರದೂ ಕಳಪೆ ದರ್ಜೆಯ ಉತ್ಪನ್ನಗಳಾಗಿತ್ತು ಅನ್ನುವ ಅಂಶವನ್ನ ಅಂತಹ ಸೋಲಿನ ಸಮಯದಲ್ಲೂ ಮರ್ತಪ್ಪಯ್ಯನ ಹಟ್ಟು ವ್ಯಾಪಾರಿ ಬುದ್ಧಿ ಗುರುತಿಸಿತ್ತು. ಹೀಗಾಗಿ ಈ ಸಾರಿ ಮುಂಗಡವಾಗಿ ಬಾಯಿ ಮಾತಿನ ಒಪ್ಪಂದ ಮಾಡಿಕೊಂಡು ಈ ಇವನ ಎಲ್ಲಾ ತಯಾರಿಕೆಗಳನ್ನೂ ಸೂಕ್ತ ಬೆಲೆ ಕೊಟ್ಟು ಖರೀದಿಸಲು ಅವನು ತಯ್ಯಾರಾದ. ಮರ್ತಪ್ಪಯ್ಯನ ಕಳೆದ ಹಂಗಾಮಿನ ನಷ್ಟದ ವ್ಯವಹಾರದ ಅರಿವಿದ್ದ ಇವನೂ ಸಹ ಒಂದು ನಂಬಿಕೆಯ ಮೇಲೆ ಕೇವಲ ಕನಿಷ್ಠ ಮುಂಗಡದ ಮೇಲೆ ಊರಿಟ್ಟ ಮಾಂಸ ಮೀನು ಮೊಟ್ಟೆ ಹಾಗೂ ಚರ್ಮದ ಹೊರತು ಬಾಕಿ ಇನ್ನುಳಿದ ತನ್ನ ಸಕಲ ಉತ್ಪನ್ನಗಳನ್ನೂ ಅವನಿಗೆ ವಿಕ್ರಯಿಸಲು ಒಪ್ಪಿಸಿದ್ದ.
ಮಾಂಸದ ಉತ್ಪನ್ನಗಳನ್ನ ಅವನು ಕಳೆದ ಮೂರು ವರ್ಷಗಳಿಂದಲೂ ಕಸಾಯಿ ಕುಬೇರಣ್ಣನಿಗೆ ಮಾರುತ್ತಿದ್ದನಾಗಿˌ ಅದನ್ನ ತಪ್ಪಿಸಿ ಬೇರೆಯವರಿಗೆ ಕೊಡುವಂತೆ ಇರಲಿಲ್ಲ. ಅಲ್ಲದೆ ತನ್ನ ಎಲ್ಲಾ ಮೊಟ್ಟೆಗಳನ್ನ ಒಂದೆ ಬುಟ್ಟಿಯಲ್ಲಿಡೋದು ಅಷ್ಟು ಜಾಣತನವೂ ಆಗಿರೋದಿಲ್ಲವಲ್ಲ. ಧಾನ್ಯˌ ಹಣ್ಣು ಹಾಗೂ ತರಕಾರಿಗಳನ್ನ ಅವನೆಂದೂ ಪಟ್ಟಣಕ್ಕೆ ತಂದು ಮಾರಿದವನಲ್ಲ. ಶೆಟ್ಟರ ಅಂಗಡಿಯ ಸಹೋದರರು ಒಕ್ಕಣೆಯ ಸಮಯ ತೋಟದ ಮನೆಯ ಕಣಕ್ಕೆ ತಾವೆ ನೇರ ಭೇಟಿ ಕೊಟ್ಟು ಹಣ ಪಾವತಿಸಿ ಸಾಗಿಸಿ ಬಿಡುತ್ತಿದ್ದರು. ಹೀಗಾಗಿ ಅವುಗಳನ್ನೂ ಸಹ ಮರ್ತಪ್ಪಯ್ಯನಿಗೆ ಮಾರುವ ಸಂಭವವಿರಲಿಲ್ಲ. ಟೊಮೇಟೋ ಹಾಗೂ ಹಣ್ಣುಗಳನ್ನ ನೇರವಾಗಿ ಕಿತ್ತು ಮಾರುವ ಬದಲು ಅದನ್ನ ಮೊರಬ್ಬˌ ಉಪ್ಪಿನಕಾಯಿ ಮಾಡಿ ಮಾರಿದರೆ ಹೆಚ್ಚು ಬಾಳಿಕೆ ಬರುವ ಕಾರಣ ಲಾಭದಾಯಕ ಎಂದೂˌ ದಯವಿಟ್ಟು ಮುಂದಿನ ಹಂಗಾಮಿನಿಂದ ಅವನ್ನ ತಯಾರಿಸಿ ತನಗೆ ಕೊಡುವಂತೆಯೂˌ ಪಶ್ಚಿಮದಲ್ಲಿ ಅವಕ್ಕೆ ಭಾರಿ ಬೇಡಿಕೆಯಿದೆಯಂತಲೂ ಮರ್ತಪ್ಪಯ್ಯ ವಿನಂತಿಸಿದ್ದ. ಈ ಚಳಿಗಾಲದ ನಂತರ ವಸಂತದಲ್ಲಿ ಅದರ ಶ್ರೀಕಾರವನ್ನೂ ಹಾಡುವ ಉತ್ಸಾಹದಲ್ಲಿ ಅವನಿದ್ದ.
ಈ ಬಾಕಿಯೆಲ್ಲ ಸೇರಿದರೆ ಸುಮಾರು ನೂರಿಪ್ಪತ್ತು ರೂಪಾಯಿ ಬಾಯಿ ಮರ್ತಪ್ಪಯ್ಯನೊಬ್ಬನಿಂದಲೆ ವಸೂಲಿಯಾಗಬೇಕಿದ್ದುದುˌ ಅವನಿಂದ ಇಪ್ಪತ್ತೈದು ರೂಪಾಯಿಯ ಕಂತಾದರೂ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದ. ಇನ್ನುಳಿದಂತೆ ಅವನ ಅಂಗಡಿಯಲ್ಲೆ ಮನೆಗೆ ಅಗತ್ಯವಾದ ಉಣ್ಣೆ ಉಂಡೆˌ ಚಹಾ ಪುಡಿˌ ಬಿಳಿ ಸಕ್ಕರೆˌ ಜೋಳದ ಹಿಟ್ಟುˌ ಅಕ್ಕಿ ಹಿಟ್ಟುˌ ರಾಗಿ ಹಿಟ್ಟುˌ ಚುಮಣಿ ಎಣ್ಣೆˌ ಉಪ್ಪುˌ ಹಲ್ಲುಪುಡಿˌ ಕಾಳು ಮೆಣಸುˌ ಲವಂಗˌ ಏಲಕ್ಕಿˌ ಜಾಯಿಕಾಯಿˌ ಚಕ್ಕೆˌ ಒಣಮೆಣಸು ಹೀಗೆ ಪೂರ್ವದಿಂದ ಅಮದಾಗುವ ವಸ್ತುಗಳನ್ನ ಖರೀದಿಸುವವನಿದ್ದುˌ ಅದರ ದರ ಎರಡರಿಂದ ಎರಡೂವರೆ ರೂಪಾಯಿಗಳಾದರೂ ಆಗಲಿದ್ದವು.
ಜೊತೆಗೆ ಕುಬೇರಣ್ಣ ಕೊಡಬೇಕಿದ್ದ ಹಣ ಹದಿನೈದು ರೂಪಾಯಿಯೂ ಈ ಬಾಬ್ತಿಗೆ ಸೇರಿದರೆ ಒಟ್ಟು ವಸೂಲಾಗುವ ನಲವತ್ತು ರೂಪಾಯಿಗಳಲ್ಲಿ ಮಠದ ವಾರ್ಷಿಕ ವಂತಿಗೆಯ ಬಾಬ್ತು ಎಂಟಾಣೆ ಕೊಟ್ಟುˌ ರಾಜನಿಗೆ ಮೂರು ಕಾಸಿನ ಬೆಂಡು ಬತ್ತಾಸು ಖರೀದಿಸಿˌ ಹನ್ನೆರಡಾಣೆಯ ಬೂಸಾ ಹಿಂಡಿ ಖರೀದಿಸಿ ಅವೆಲ್ಲವನ್ನೂ ಬರುವ ವಾರ ತೋಟಕ್ಕೆ ತಂದು ಕೊಡುವ ಜವಬ್ದಾರಿಯನ್ನು ಗೋಪಿಗೆ ವಹಿಸಿˌ ಬ್ಯಾಂಕಿಗೆ ಮೂವತ್ತು ರೂಪಾಯಿ ಹಣ ಉಳಿತಾಯಕ್ಕೆ ಕಟ್ಟಿ ಗೋಪಿಗೆ ಅಗತ್ಯವಿದ್ದ ಒಂದು ರೂಪಾಯಿ ಕೊಟ್ಟು, ಬಾಕಿ ಎಂಟೂ ಚಿಲ್ಲರೆ ರೂಪಾಯಿಗಳನ್ನ ತುರ್ತು ಅಗತ್ಯಗಳಿಗೆ ಮನೆಗೊಯ್ಯಲು ನಿರ್ಧರಿಸಿದ್ದ.
ಅಂಗಡಿ ಅಂಗಡಿ ಅಲೆದು ಬರಬೇಕಿದ್ದ ಬಾಕಿಗಳೆಲ್ಲವನ್ನೂ ವಸೂಲು ಮಾಡುವಾಗ ಮಧ್ಯಾಹ್ನದ ಎರಡು ಘಂಟೆಯ ಮೇಲಾಗಿತ್ತು. ನೇರ ಬ್ಯಾಂಕಿಗೆ ನಡೆದವನೆ ಮೂವತ್ತು ರೂಪಾಯಿ ಕಟ್ಟಿದ್ದಕ್ಕೆ ಬ್ಯಾಂಕಿನ ಗುಮಾಸ್ತೆ ಠಸ್ಸೆ ಒತ್ತಿಕೊಟ್ಟ ರಸೀದಿಯನ್ನ ಜೇಬಿಗಿಳಿಸಿ ನೇರ ಮನೆಯತ್ತ ಹಜ್ಜೆ ಹಾಕಿದವನಿಗೆ ಆಶ್ಚರ್ಯ ಕಾದಿತ್ತು. ಅವನು ಸೂರಿನ ಸಂದಿನಿಂದ ಸುರಿದ ಹಿಮದ ಕಾರಣ ಮಾಡಿದ ಮರಮತ್ತು ಅಷ್ಟಾಗಿ ಸರಿಯಾಗಿರಲಿಲ್ಲವೆಂದು ಕಾಣುತ್ತದೆˌ ಕಸುಬುದಾರ ಬಡಗಿಯಂತೆ ಗೋಪಿ ಮನೆಗೆ ಹೋಗಿ ಉಳಿ ಕಿಸೋಳಿ ಮೊಳೆ ಸುತ್ತಿಗೆಗಳನ್ನ ತಂದು ಹೆರದು ಕೆರೆದು ಇವನಿಗೆ ಕಂಡಿದ್ದˌ ಹಾಗೂ ಕಾಣದಿದ್ದ ಛಾವಣಿಯ ತೂತುಗಳನ್ನೆಲ್ಲಾ ಚತುರತೆಯಿಂದ ಟಾರು ಕಾಗದ ಹೊಡೆದು ಬಿರುಕುಗಳಿಗೆ ಜೇನು ಮೇಣ ಬೆರೆಸಿದ ಡಾಮಾರಿನ ಅಂಟು ತುಂಬಿ ಕಾಣದಂತೆ ಮರೆಸಿದ್ದ.
ಈ ಇಡಿ ಚಳಿಗಾಲದ ಹಂಗಾಮಿನಲ್ಲಿ ಮನೆಗೆ ಇನ್ಯಾವ ಮರಮತ್ತಿನ ಅವಶ್ಯಕತೆಯೂ ಇರದಂತೆ ಅವನ ಕೆಲಸದ ಜಾಣ್ಮೆ ಎದ್ದು ಕಾಣುತ್ತಿತ್ತು. ಆದರೆ ನೆಲ ಮಹಡಿಯ ಗೋಡೆಗಳ ಸಂದು ಗೊಂದುಗಳಲ್ಲಿ ಹೊಸ ಬಿರುಕು ಮೂಡಿವೆಯೆಂದೂ ಮುಂದಿನ ಒಂದು ವಾರ ಇದನ್ನೆ ಆದ್ಯತೆಯನ್ನಾಗಿಸಿಕೊಂಡು ತಾನು ಅವನ್ನ ಸರಿಪಡಿಸುತ್ತೇನೆಂದೂ ಗೋಪಿ ಹೇಳಿದ ಮಾತು ಕೇಳಿ ಅವನಿಗೆ ನೆಮ್ಮದಿಯೆನಿಸಿತು. ಹೀಗಾದರೂ ಸರಿ ಅವನು ಮರಳಿ ಜಡ ಬಿಟ್ಟು ಕೆಲಸಗಳತ್ತ ಹೊರಳಿಕೊಳ್ಳಲಿˌ ಬಾಬಯ್ಯನ ಜೊತೆಯ ಅವನ ಕೋಳಿ ಜಗಳ ಈ ಮೂಲಕವಾದರೂ ಕಡಿಮೆಯಾಗಲಿ ಎಂದು ಆಶಿಸಿದ ಆತ ಗೊಂಬೆ ತಯಾರಿಕೆಗೆ ಬಂಡವಾಳ ಹೂಡಲು ಗೋಪಿ ಕೇಳಿದ್ದ ರೂಪಾಯಿಗೆ ಮತ್ತೊಂದು ರೂಪಾಯಿ ಸೇರಿಸಿ ಅವನ ಜೇಬಿಗೆ ಹಾಕಿ ಗೋಪಿಯ ಬೆನ್ತಟ್ಟಿದ. ಇವನ ಕಾಳಜಿ ಕಂಡ ಗೋಪಿಗೂ ಕಣ್ತುಂಬಿ ಬಂತು. ಮತ್ತೆ ಚಿಗುರಿ ನುರಿತ ಕೆಲಸಗಾರನಾಗುವ ಕನಸು ಅವನ ನೀಲಿ ಕಣ್ಗಳಲ್ಲೂ ಹೊಳೆದಂತಾಯಿತು.
ಹೊರಗೆ ಮೆಲ್ಲಗೆ ಚಳಿಯ ಪ್ರಕೋಪ ಹೆಚ್ಚುತ್ತಿತ್ತು. ಸುಲ್ತಾನನಿಗೆ ಮೇವು ನೀರು ಮತ್ತೊಮ್ಮೆ ಇರಿಸಿದ ಇಬ್ಬರೂ ಬಾಬಯ್ಯನ ಮನೆ ಕಡೆಗೆ ಹೆಜ್ಜೆ ಹಾಕಿದರು. ಬಿಸಿ ಬಿಸಿ ಊಟ ತಯಾರಾಗಿತ್ತುˌ ಇವನು ಅವಳು ಕಟ್ಟಿಕೊಟ್ಟಿದ್ದ ಬುತ್ತಿಯನ್ನೂ ಜೊತೆಗೆ ಬಿಚ್ಚಿದ.
*********
ಅವಳ ಕೈ ರುಚಿಯೆ ಬೇರೆ ಎನಿಸಿದರೆˌ ಗೋಪಿ ಮನೆಯ ಅಡುಗೆಯ ಸ್ವಾದವೆ ವಿಭಿನ್ನ. ಇಬ್ಬರ ತಲೆಮಾರುಗಳ ಹಿನ್ನೆಲೆ ಪ್ರಾದೇಶಿಕವಾರು ಭಿನ್ನವಾಗಿದ್ದುದೆ ಅದಕ್ಕೆ ನೇರ ಕಾರಣ ಅಂದರೂ ತಪ್ಪಿಲ್ಲ. ಅವರ ಹಿರಿಯರು ವಲಸಿಗರಾಗಿ ಬರುವ ಮೊದಲು ನೆಲೆಸಿದ್ದ ವಿದೇಶದ ವಿಭಿನ್ನ ಪ್ರದೇಶಗಳ ಸೊಗಡು ಅವರ ಪಾಕಶಾಸ್ತ್ರವನ್ನೂ ಸಹಜವಾಗಿ ಪ್ರಭಾವಿಸಿತ್ತು. ಹೀಗಾಗಿ ಒಂದೆ ಬಗೆಯ ಖಾದ್ಯಗಳನ್ನ ಅವರಿಬ್ಬರ ಅಡುಗೆ ಮನೆಗಳಲ್ಲಿ ತಯಾರಿಸಿದ್ದರೂ ಬಳಸುವ ಖಾದ್ಯತೈಲˌ ಮಸಾಲೆ ಹಾಗೂ ಉಪ್ಪು ಹುಳಿ ಖಾರದ ಪ್ರಮಾಣದಲ್ಲಾಗುತ್ತಿದ್ದ ಚೂರುಪಾರು ವ್ಯತ್ಯಾಸದ ಕಾರಣ ಸಹಜವಾಗಿ ರುಚಿ ಬದಲಾಗಿ ಅಡುಗೆಯ ವೈವಿಧ್ಯತೆ ಚಪ್ಪರಿಸಿ ಮೆಲ್ಲುವವರ ರುಚಿಮೊಗ್ಗುಗಳಿಗೆ ಅರಿವಿಗೆ ಖಂಡಿತವಾಗಿ ಬರುತ್ತಿತ್ತು. ಗೋಪಿಯ ಹೆಂಡತಿ ಬುತ್ತಿಯಲ್ಲಿ ಚಳಿಗೆ ಮರಗಟ್ಟಿ ಕಲ್ಲಾಗಿದ್ದ ರೊಟ್ಟಿ ಹಾಗೂ ಇನ್ನಿತರ ಮೇಲೋಗರಗಳನ್ನ ಬಿಸಿ ಮಾಡಿ ತಿನ್ನಲು ಸಹನೀಯವಾಗಿಸಿದಳು.
ಚಳಿಯ ಹೊಡೆತಕ್ಕೆ ಜರ್ಜರಿತರಾಗಿದ್ದ ನಾಲ್ವರೂ ಚೂರು ದೇಹದ ಉಷ್ಣತೆ ಹೆಚ್ಚಿಸಿಕೊಳ್ಳಲು ಕಟು ರುಚಿಯ ದ್ರಾಕ್ಷಾರಸವನ್ನೂ ಊಟದೊಂದಿಗೆ ಸೇವಿಸಿದರು. ಬೆಂದ ಬಾತುˌ ಬೇಕನ್ˌ ರೈ ರೊಟ್ಟಿˌ ಎಮ್ಮೆ ಮಾಂಸದ ಸೂಪು ಹಾಗೂ ಹುರಿದ ಊರಿಟ್ಟ ಮೀನನ್ನ ಒಳಗೊಂಡ ಊಟ ರುಚಿಕರವಾಗಿತ್ತು. ಊಟ ಮುಗಿಸಿದ ಮರುಕ್ಷಣವೆ ಅವನು ಮತ್ತೆ ಮನೆಯತ್ತ ಮುಖ ಮಾಡಿ ಹೊರಡಲೆ ಬೇಕಿತ್ತು. ಸಾಧ್ಯವಾದಷ್ಟು ಬೇಗ ಬೆಳಕಿರುವಾಗಲೆ ಹೊರಟಷ್ಟೂ ಒಳ್ಳೆಯದೆ. ಆಗಲೆ ಸಮಯ ಮೂರೂವರೆಯ ಸಮೀಪವಾಗಿದ್ದು ಚಳಿಗಾಲದ ರಾತ್ರಿ ಸಂಜೆ ಐದರ ಹೊತ್ತಿಗೆಲ್ಲಾ ಇಳಯನ್ನ ಆವರಿಸಿಕೊಳ್ಳಲು ಮಸಲತ್ತು ಮಾಡುತ್ತಿದೆಯೇನೋ ಅನ್ನುವಂತೆ ಉತ್ತರದ ಸುಳಿಗಾಳಿ ಹುಯ್ಯಲಿಡುತ್ತಾ ನಿಧಾನವಾಗಿ ಮತ್ತೆ ಬೀಸಲು ಹವಣಿಸುತ್ತಿತ್ತು.
ಚಳಿಗಾಳಿಯ ಪ್ರಕೋಪ ಪಟ್ಟಣಿಗರನ್ನೂ ಕಾಡಿಸಿ ಕೆಂಗೆಡೆಸದೆ ಇರಲಿಲ್ಲ. ಅವರ ನೆಲೆಗಳು ಸುದೂರದ ತೋಟದ ಮನೆಗಳ ಅವಾಸಗಳಂತೆ ಪರಸ್ಪರ ಮೈಲುಗಟ್ಟಲೆ ದೂರವಿಲ್ಲದೆ ಕೆಲವೆ ಗಜಗಳಷ್ಟು ದೂರ ಮನೆಗಳಿರುವುದರಿಂದ ತೀರಾ ಕಷ್ಟದ ಸಂದರ್ಭಗಳು ಎದುರಾದಲ್ಲಿ ಕಷ್ಟ ನಷ್ಟ ವಿಚಾರಿಸಿ ಧೈರ್ಯ ಹೇಳಲುˌ ಸಹಾಯಕ್ಕೆ ಧಾವಿಸಲು ನೆರೆಕರೆ ಸಮೀಪದಲ್ಲೆ ಇರುತ್ತಿದ್ದರು. ಹೀಗಾಗಿ ಹಳ್ಳಿಗ ರೈತಾಪಿಗಳಂತೆ ವಿಪರೀತ ಸನ್ನಿವೇಶಗಳಲ್ಲಿ ತೀರಾ ಕೆಂಗೆಟ್ಟು ಸಹಾಯ ಹಸ್ತಗಳಿಲ್ಲದೆ ಹತಾಶರಾಗುವ ಪರಿಸ್ಥಿತಿ ಅವರಿಗೆ ಮುಖಾಮುಖಿಯಾಗುವ ಸಂಭವ ಇರುತ್ತಿರಲಿಲ್ಲ ಅಷ್ಟೆ.
ಊಟ ಮುಗಿಸಿ ಚಳಿಗೆ ಮದ್ದಿನಂತೆ ಒಂದು ತಂಬಾಕಿನ ಚುಟ್ಟಾವನ್ನ ಗೋಪಿಯೊಂದಿಗೆ ಹಂಚಿಕೊಂಡು ಅವನು ಸೇದಿ ಮುಗಿಸಿದ. ಮೈ ಮನ ಚೂರು ಹಗುರಾದಂತೆˌ ಗೋಪಿಯ ಜೊತೆ ಪಟ್ಟಣದ ಸುತ್ತಮತ್ತಲಾಗುತ್ತಿರುವ ಹೊಸ ಹೊಸ ಬೆಳವಣಿಗೆಗಳ ವರದಿಯೊಪ್ಪಿಸುತ್ತಿದ್ದ ಗೋಪಿಯ ಮಾತುಗಳನ್ನ ಮೌನವಾಗಿ ಆಲಿಸುತ್ತಾ ಜೊತೆಜೊತೆಗೆ ಹೆಜ್ಜೆ ಹಾಕುತ್ತಾ ಸಾಗಿದ. ಅವನ ಕೆಲವು ವರದಿಗಳು ಇವನಿಗೂ ಹೊಸತಾಗಿದ್ದವು. ಕೆಲವಂತೂ ಅವನಿಗೆ ಸರಿಯಾಗಿ ಅರ್ಥವಾಗದ್ದುˌ ಇವನಿಗೂ ಸರಿಯಾಗಿ ಅರ್ಥ ಮಾಡಿಸುತ್ತಾ ವಿವರಿಸಲು ಗೋಪಿಯೂ ಸಹ ಸೋತಿದ್ದ. ಜೊತೆಗೆ ಸ್ಥಳಿಯ ಭಾಷೆಯನ್ನ ಇನ್ನೂ ಕೂಡ ಸ್ಪಷ್ಟವಾಗಿ ಕಲಿತಿರದ ಅವನ ಸೋಮಾರಿತನ ಗ್ರಹಿಕೆ ಸರಿಯಾಗಿದ್ದರೂ ಮನವರಿಕೆ ಮಾಡಿಸಿಕೊಡಲು ಅವನು ಸೋಲಲು ನೇರ ಕಾರಣವಾಗಿತ್ತು.
ಸುಲ್ತಾನನ ಶೀತದ ಬಾಧೆ ಹಿಡಿತಕ್ಕೆ ಬಂದಿತ್ತು. ಇಬ್ಬರೂ ಸೇರಿ ಮತ್ತೊಂದು ಸುತ್ತು ಗೊಟ್ಟ ಎತ್ತಿ ಅವನ ಬಾಯಿ ಕಳಿಸಿ ಔಷಧವನ್ನ ಸುರಿದರು. ಮದ್ದಿನ ಕಹಿ ಮರೆಸಲು ಚೂರು ಮುದ್ದಿಸಿ ಅವನ ಇಷ್ಟದ ಕ್ಯಾರೆಟ್ ಬೂಸಾ ಓಟ್ಸ್ ಹಾಗೂ ಹುರುಳಿ ಬೆರೆಸಿ ಬೇಯಿಸಿದ ಮಿಶ್ರಣವನ್ನ ಅವನ ಬಾಯಿ ಚೀಲದಲ್ಲಿ ಹಾದಿಯಲ್ಲಿ ಮೆಲ್ಲಲು ಕಟ್ಟಿˌ ಚಳಿಗೆ ಹೊದೆಸಿದ್ದ ದಪ್ಪ ಮಂದರಿ ತೆಗೆದ. ಅಗ್ಗಿಷ್ಟಿಕೆಯ ಉರಿ ಆರಿಸಿ ಬೆನ್ನಿಗೆ ಜೀನು ಏರಿಸಿ ಕಟ್ಟುತ್ತಿದ್ದಂತೆ ಕುದುರೆಗೂ ಮರಳಿ ಮನೆಗೆ ಹೊರಡುವ ಹೊತ್ತಾಗಿದೆ ಅನ್ನುವುದು ಅರಿವಾಗಿ ಬಾಲದ ಕುಚ್ಚನ್ನ ಆಡಿಸುತ್ತಾ ಕೆನೆತದ ಜೊತೆಗೆ ತನಗಾದ ಖುಷಿಯನ್ನ ಅದು ಪ್ರಕಟಿಸಿತು.
ಹಾಡಿಯಲ್ಲಿ ಕಂಡಿದ್ದ ಕಲ್ಲಿದ್ದಲ ಖಜಾನೆಯ ದೆಸೆಯಿಂದ ಪಟ್ಟಣದಲ್ಲಿ ಅವನಿಗೆ ಕಲ್ಲಿದ್ದಲು ಖರೀದಿಸುವ ಅಗತ್ಯ ಅವನಿಗೆ ಬಂದಿರಲಿಲ್ಲ. ಹೀಗಾಗಿ ಬೆನ್ನ ಚೀಲದಲ್ಲಿ ಉಳಿದ ಜಾಗದಲ್ಲಿ ಕೊಂಡ ಅನೇಕ ಸಾಮಾನುಗಳನ್ನ ತುಂಬಲು ಸಾಧ್ಯವಾಯಿತು. ಉಳಿದಂತೆ ಬಿಟ್ಟು ಮುನ್ನಡೆಯುವ ತೀರಾ ಖಾಲಿಯಾಗಿರದ ಸಾಮಾನುಗಳನ್ನ ಗೋಪಿಯೆ ತಂದು ತೋಟದ ಮನೆಗೆ ಮುಟ್ಟಿಸುತ್ತಾನೆˌ ಹೀಗಾಗಿ ಚಿಂತಿಸುವ ಅಗತ್ಯವಿರಲಿಲ್ಲˌ ಕುದುರೆಯ ಮೂಗುದಾರ ಹಿಡಿದು ಮುನ್ನಡೆಸಿದವ ಬೀದಿಗೆ ಬಂದದ್ದೆ ಅದರ ಬೆನ್ನೇರಿ ಕುಳಿತು ಎಡಗೈಯಲ್ಲಿ ಲಗಾಮು ಎಳೆದು ಹಗೂರ ಸಡಿಲ ಬಿಡುತ್ತಾ ಬಲಗೈಯನ್ನ ಗೋಪಿಯೆಡೆಗೆ ವಿದಾಯದ ಗುರುತಾಗಿ ಬೀಸುತ್ತಾ ಮನೆಯ ದಿಕ್ಕಿನತ್ತ ವೇಗವಾಗಿ ಸುಲ್ತಾನನ್ನ ಓಡಿಸಿಕೊಂಡು ಹಿಮದ ಗಾಳಿ ಕವಿಸಿದ್ದ ತೆರೆಯೊಳಗೆ ಮರೆಯಾಗಿ ಹೋದ.
ಚಳಿ ಹಾಗೂ ಕತ್ತಲು ಪೈಪೋಟಿಯ ಮೇಲೆ ಸುತ್ತಲೂ ಆವರಿಸಲು ಹೊಂಚು ಹಾಕುತ್ತಿರುವಂತಿತ್ತು ವಾತಾವರಣ. ಥಂಡಿಗಾಳಿ ಬೆಳಗ್ಗಿನಂತೆಯೆ ಮೂಳೆ ಕೊರೆಸುವಂತಿದ್ದು ಹಾಕಿಕೊಂಡಿದ್ದ ಬೆಚ್ಚನೆ ಧಿರಿಸನ ಮೇಲೆ ಹೊದ್ದುಕೊಂಡಿದ್ದ ಬೆಚ್ಚನೆ ದಪ್ಪ ಕಂಬಳಿಯನ್ನೂ ತೂರಿ ಒಳ ಹೊಕ್ಕು ಕಾಡಲು ಹವಣಿಸುತ್ತಿತ್ತು. ಸುಲ್ತಾನನ ಓಟ ವೇಗವನ್ನ ಹೆಚ್ಚಿಸಿಕೊಳ್ಳುತ್ತಿದ್ದ ಹಾಗೆ ಚಳಿಗಾಳಿಯೂ ತೆರೆದ ಮುಖ ಹಾಗೂ ಮೂಗಿಗೆ ತಣ್ಣಗೆ ಅಡರುತ್ತಿತ್ತು. ಕುದುರೆ ಒಂದೆ ಲಯದಲ್ಲಿ ಓಡುತ್ತಲಿರುವಾಗ ಅವನ ಮನೋವ್ಯಾಪಾರವೂ ಕೊಂಚ ಬಾಲ್ಯದ ದಿನಗಳತ್ತ ಹಿಮ್ಮುಖ ಓಡಿ ನಿಂತಿತು.
ಗೋಪಿ ಕೊಟ್ಟ ವರದಿಯಂತೆ ಈ ಊರಿಗೆ ಹೊಸ ಹೊಸ ವಲಸೆಗಾರರು ಸದ್ಯದಲ್ಲಿಯೆ ಲಗ್ಗೆ ಇಡಲಿಕ್ಕಿದ್ದಾರಂತೆ. ಅವರ ವಸತಿ ಸೌಕರ್ಯಗಳಿಗೆ ಸೂಕ್ತ ಸ್ಥಳ ಗುರುತಿಸಿ ಅವರಿಗೆ ಮನೆ ಕಟ್ಟಿಕೊಳ್ಳಲು ನಿವೇಶನಗಳನ್ನ ಮಂಜೂರು ಮಾಡತಕ್ಕದ್ದು ಎನ್ನುವ ಆದೇಶ ಮೇಲಿನಿಂದ ರಾಜಧಾನಿಯವರು ಕಳಿಸಿಯಾಗಿದೆಯಂತೆ. ಪಟ್ಟಣದ ಆಡಳಿತದ ಚುಕ್ಕಾಣಿ ಹಿಡಿದ ಶರೀಫನ ಕಛೇರಿಯ ಕಂದಾಯದ ಅಧಿಕಾರಿಗಳು ಈ ನಿಟ್ಟಿನಲ್ಲಿ ಇವನ ತೋಟದತ್ತ ಸಾಗುವ ಹಾದಿಯ ದಿಕ್ಕಿನಲ್ಲಿಯೆ ಹೊಸ ವಿಸ್ತರಣವನ್ನು ಕಲ್ಪಿಸಲು ನಿರ್ಧರಿಸಿ ಸುಮಾರು ನೂರು ಹಕ್ಟೇರ್ ಕಾಡಂಚಿನ ಭೂಮಿಯನ್ನೆ ಬರಲಿರುವ ವಲಸಿಗರಿಗೆ ನಿವೇಶನವಾಗಿ ಹಂಚಲು ಗುರುತಿಸಿದ್ದಾರಂತೆ.
ಇದರರ್ಥ ಇಷ್ಟೆ ಕ್ರಮೇಣ ಈ ಭಾಗ ಜನನಿಬಿಡವಾಗಲಿದೆ. ಅವರ ನಿವೇಶನವಾಗಲು ಹಾಗೂ ಮಂಜೂರಾದ ನಿವೇಶನದಲ್ಲಿ ಕಟ್ಟುವ ಮನೆಯ ಮೋಪಾಗಲು ಈಗ ಯಾರಪ್ಪನ ಅಪ್ಪಣೆಗೂ ಕಾಯದೆ ಬೆಳೆದು ನಿಂತಿರುವ ಅರಣ್ಯದಂಚಿನ ಬೃಹತ್ ಪೈನ್ˌಮೇಪಲ್ ಹಾಗೂ ಓಕ್ ಮರಗಳೆಲ್ಲ ಗರಗಸದ ಹಲ್ಲುಗಳಿಗೆ ಸಿಕ್ಕಿ ಹಾಕಿಕೊಂಡು ಕೊನೆಯುಸಿರೆಳೆಯಲಿವೆ. ತಮ್ಮ ಕಾರ್ಯಚಟುವಟಿಕೆಗಳಿಂದ ಕಾಡನ್ನ ಸಮೃದ್ಧವಾಗಿಸಿ ಅರಣ್ಯದ ಅರಳುವಿಕೆಗೆ ಬೀಜ ಪ್ರಸರಣದ ಪ್ರಮುಖ ಕೊಂಡಿಯಾಗಿ ಈಗ ಅದನ್ನೆ ತಮ್ಮ ಅವಾಸವಾಗಿಸಿಕೊಂಡಿರುವ ವನ್ಯ ಖಗ ಮೃಗಗಳೆಲ್ಲ ತಮ್ಮ ನೈಸರ್ಗಿಕ ನೆಲೆ ಕಳೆದುಕೊಂಡು ನಿರಾಶ್ರಿತರಾಗಿ ಗುಳೆ ಬರುವವವರ ಒತ್ತಡ ಕಿರುಕುಳ ತಾಳಲಾರದೆ ತಾವೆ ಸ್ವತಃ ನಿರಾಶ್ರಿತರಾಗಿ ಸ್ಥಳಾಂತರಗೊಳ್ಳುವ ದುಸ್ಥಿತಿಗೆ ಸದ್ಯದಲ್ಲಿಯೆ ಒಳಗಾಗಲಿಕ್ಕಿವೆ.
ಸರಕಾರದ ಉದ್ದೇಶ ಜನಸಂಖ್ಯೆಯನ್ನ ಹೆಚ್ಚಿಸುವುದೆ ಆಗಿರುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಸಹಜವಾಗಿ ಅದರ ವಲಸೆ ನೀತಿಗಳು ಆ ನವನಾಡಿನತ್ತ ತಾವಿರುವ ನೆಲದಲ್ಲಿ ಬರಕತ್ತಾಗದೆ ಭರವಸೆ ಕಳೆದುಕೊಂಡು ಹೊಸ ಅವಕಾಶಗಳಿಗಾಗಿ ಕಾತರಿಸಿ ಕಾಯುತ್ತಿರುವ ವಲಸಿಗರನ್ನ ಪ್ರೋತ್ಸಾಹಿಸುವಂತೆಯೆ ರೂಪುಗೊಂಡಿವೆ. ಅದರ ಆಸರೆಯಲ್ಲಿ ಹೊಸ ಬದುಕನ್ನ ಕಟ್ಟಿಕೊಳ್ಳಲು ಸಾಗರದ ಅಲೆಗಳಂತೆ ನುಗ್ಗಿ ಬರುತ್ತಿರುವ ಜನ ಪ್ರವಾಹಕ್ಕೆ ಪೂರಕವಾಗಿರುವ ಸರಕಾರಿ ನೀತಿಗಳು ಸ್ಥಳಿಯ ಬುಡಕಟ್ಟಿನವರ ಹಾಗೂ ಸ್ಥಳಿಯ ವನ ಜೊತೆಗೆ ವನ್ಯಮೃಗಗಳಿಗೆ ಮಾರಕವಾಯಿತು.
*********
ಹಾದಿ ಸಾಗುವ ಪಯಣದುದ್ದ ಇವನ ಮನಸಿನಲ್ಲಿದ್ದುದು ಒಂದೆ ಗುರಿ. ಆದಷ್ಟು ಬೇಗ ಮನೆಯನ್ನ ಹೋಗಿ ಮುಟ್ಟಬೇಕು. ಪಟ್ಟಣದ ಹೊರ ವಲಯ ದಾಟಿದ ಕೂಡಲೆ ನಾಟಕೀಯವಾಗಿ ಪರಿಸರದ ಭೀಭತ್ಸತೆ ಬಾಯಿ ಕಳೆದು ನಿಂತಿರುವ ಭಾವ ಸಾಕಾರವಾದಂತೆನಿಸಿತು. ಚಳಿಗಾಳಿಯ ಅರ್ಭಟ ಏಕಾಏಕಿ ಏರಿದಂತನಿಸ ಹತ್ತಿತು.
ಸಹಜವಾಗಿ ಸಂಜೆಯ ನಂತರ ಶೀತ ಮಾರುತಗಳ ಪ್ರಕೋಪ ಹೆಚ್ಚಿ ಹಗಲಲ್ಲಿ ಇಳಿದು ಕೊಂಚ ಹಿಡಿತಕ್ಕೆ ಬರುವುದು ಹೊಸತೇನಲ್ಲ. ಅವನ ಆಲೋಚನಾ ಲಹರಿ ಥಟ್ಟನೆ ಕಡಿದು ಬೀಳುವಂತೆ ಸುಲ್ತಾನನ ಕಾಲು ಇದ್ದಕ್ಕಿದ್ದಂತೆ ಮುಗ್ಗುರಿಸಿತು. ಕೊರಕೊಲೊಂದರಲ್ಲಿ ಅವನ ಮುಂದಿನ ಎಡಗಾಲು ಹೊಕ್ಕು ಕುದುರೆ ಎಡವಿ ಬಿತ್ತು. ವೇಗ ಹಿಡೀತದಲ್ಲಿದ್ದುದರಿಂದ ಕಾಲು ಮೂಳೆಯೇನೂ ಮುರಿದಿರುವ ಸಂಭವವಿರಲಿಲ್ಲ. ಅಂತೆಯೆ ಕುದುರೆಯ ಕುತ್ತಿಗೆಗೆ ಅಪ್ಪಳಿಸಿದ ತನ್ನ ಮುಖಕ್ಕೂ ಅಂತಹ ಹಾನಿಯೇನೂ ಆಗಿರಲಿಲ್ಲ. ಒಂದೊಮ್ಮೆ ಪಟ್ಟಣದಿಂದ ಹೊರಟಿದ್ದ ವೇಗದಲ್ಲೆ ಓಡಿ ಬರುವಾಗ ಎಲ್ಲಾದರೂ ಅಪ್ಪಿತಪ್ಪಿ ಮುಗ್ಗರಿಸಿ ಬಿದ್ದಿದ್ದರೆ ಇಬ್ಬರಿಗೂ ಅತೀವ ನೋವಾಗುವಂತೆ ಸುಲ್ತಾನನ ಕಾಲಿನದ್ದೂˌ ಅವನ ಮೂಗಿನದ್ದೂ ಮೂಳೆ ಮುರಿಯವ ಸಾಧ್ಯತೆಯನ್ನ ತಳ್ಳಿ ಹಾಕುವಂತಿರಲಿಲ್ಲ.
ಸಣ್ಣದರಲ್ಲೆ ಸಂಭವನೀಯ ಭೀಕರ ಅಫಘಾತ ತಪ್ಪಿ ಹೋದದ್ದಕ್ಕೆ ಅವನು ನಿಟ್ಟುಸಿರು ಬಿಡತ್ತಾ ಅಶ್ವವನ್ನ ಮೃದು ಮಾತುಗಳಿಂದ ಹುರಿದುಂಬಿಸಿ ಕುತ್ತಿಗೆ ಬೆನ್ನು ಸವರುತ್ತಾ ಪುಸಲಾಯಿಸಿ ಗುಂಡಿಯಿಂದ ಮೇಲೆಬ್ಬಿಸಿದ. ಕೊಂಚ ದೂರ ಅವರಿಬ್ಬರೂ ಜೊತೆಜೊತೆಯಾಗಿಯೆ ನಡೆದರು. ಹುಯ್ಯಲಿಡುವ ಸುಳಿಗಾಳಿಯ ಪ್ರಕೋಪಕ್ಕೆ ತನ್ನ ಹೆಜ್ಜೆಯ ಸದ್ದು ತನಗೆ ಕೇಳುವುದೆ ಅಸಾಧ್ಯವಾಗಿತ್ತು. ಪಟ್ಟಣದ ಕಡೆಗೆ ವಲಸೆ ಹೆಚ್ಚುವ ಸೂಚನೆ ಕೊಟ್ಟಿದ್ದ ಗೋಪಿ ಹೇಳಿದ್ದ ಇನ್ನೂ ಅನೇಕ ಹೊಸ ಹೊಸ ವಾರ್ತೆಗಳ ಬಗ್ಗೆ ಮನಸೊಳಗೆ ಮಂಥನ ನಡೆಸುತ್ತಾ ಅವನು ಒಂದು ಕೈಯಲ್ಲಿ ಕುದುರೆಯ ಮೂಗುದಾರ ಹಿಡಿದಂತೆಯ ಮುನ್ನಡೆಯುತ್ತಿದ್ದˌ.
ಪೂರ್ವದಿಂದ ಇಲ್ಲಿಗೆ ಸಂಪರ್ಕ ಕ್ರಾಂತಿ ತರಲಿರುವ ರೈಲು ದಾರಿಯ ಸಮಾನಾಂತರವಾಗಿ ಕಂಭ ಹೂಡಿ ತಂತಿ ಎಳೆದು ಅದೇನೂ ತುರ್ತು ಸಮಾಚಾರ ಹರಡುವ ತಂತಿ ಸೇವೆಯನ್ನ ರಾಜಧಾನಿಯಿಂದ ಆಳುವ ಮಂದಿ ಈ ಪಟ್ಟಣಕ್ಕೂ ವಿಸ್ತರಿಸಲಿದ್ದಾರಂತೆ. ಅದರ ಮೂಲಕ ಕ್ಷಣಾರ್ಧದಲ್ಲಿ ದೂರದ ಒಂದು ಪ್ರದೇಶದಿಂದ ಕಳಿಸಿದ ಸುದ್ದಿಯನ್ನ ಇನ್ಯಾವುದೋ ಮೈಲಿಗಟ್ಟಲೆ ಅಂತರದಲ್ಲಿರುವವರು ಕೂಡಲೆ ಪಡೆದು ಓದಬಹುದಂತೆ! ಅಲ್ಲಿಗೆ ಪತ್ರ ಬರೆದು ಅದನ್ನ ಹೊತ್ತು ಕುದುರೆ ಮೇಲೇರಿ ವಾರಗಟ್ಟಲೆ ಊರೂರಿಗೆ ಪಯಣಿಸಿ ಅವುಗಳನ್ನ ತಲುಪಿಸಿ ಬರುವ ಸದ್ಯದ ಸುತ್ತುಬಳಸಿನ ಸೇವೆ ಮರೆಗೆ ಸರಿದ ಹಾಗೆಯೆ! ಅದರಲ್ಲೂ ಈಗಿರುವ ಅಂಚೆ ಸೇವೆ ಕೇವಲ ನಗರ ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿವೆ. ಹೊರವಲಯದಲ್ಲಿ ಮೈಲುಗಟ್ಟಲೆ ದೂರದಲ್ಲಿ ನೆಲೆಯಾಗಿರವ ತೋಟದ ಮನೆಯ ರೈತಾಪಿಗಳಿಗೆ ಯಾವ ಅಂಚೆ ಸೇವೆಯೂ ಇರಲಿಲ್ಲ. ಒಂದು ಅಂದಾಜಿನ ಮೇಲೆ ಅವರೆ ಪಟ್ಟಣಗಳಿಗೆ ಬಂದಾಗ ಅಂಚೆ ಕಛೇರಿಯನ್ನ ಎಡತಾಕಿ ತಮ್ಮ ಹೆಸರಿಗೇನಾದರೂ ಪತ್ರ ಬಂದಿದೆಯೆ ಎಂದು ವಿಚಾರಿಸಿ ಪಡೆದುಕೊಳ್ಳಬೇಕಾಗಿತ್ತು.
ಕೆಲವೊಮ್ಮೆ ಹೀಗೆಲ್ಲಾ ಊರೂರಿನ ಸುದ್ದಿ ಮತ್ತೊಂದೂರಿನ ಮತ್ತೊಬ್ಬರಿಗೆ ಹೋಗಿ ಮುಟ್ಟುವಾಗ ಎರಡೆರಡು ಮೂರು ಮೂರು ತಿಂಗಳ ಅವಧಿಯೆ ಕಳೆದು ಹೋಗಿರುತ್ತಿದ್ದವು. ಆ ಪತ್ರದಲ್ಲಿ ಬರೆದ ಸುದ್ದಿಯೂ ಸಹ ಆಗ ಸಹಜವಾಗಿ ಹಳೆಯದಾಗಿರುತ್ತಿತ್ತು. ಹೀಗಿರುವ ಪರಿಸ್ಥಿತಿ ಏಕಾಏಕಿ ಬದಲಾಗೋದೇನು ಸಾಧಾರಣ ವಿಷಯವೆ? ಎಂದಾತ ತರ್ಕಿಸಿದ. ಮಧ್ಯಾಹ್ನ ಬ್ಯಾಂಕಿನ ಕೆಲಸ ಮುಗಿಸಿ ಗೋಪಿಯ ಮನೆಗೆ ಊಟಕ್ಕೆ ಹೋಗುವ ಮೊದಲು ಅವನೂ ಅಂಚೆ ಕಛೇರಿಗೆ ಹೋಗಿದ್ದ. ನಾಲ್ಕು ಪತ್ರಗಳುˌ ಚಂದಾದಾರಿಕೆಯಿದ್ದ ರಾಜಧಾನಿಯಿಂದ ಪ್ರಕಟವಾಗಿದ್ದ ನಿಯತಕಾಲಿಕೆಗಳ ಆರು ಪ್ರತಿಗಳು ಇವನ ಹಾದಿ ಕಾಯುತ್ತಾ ಅಲ್ಲಿನ ತಿಜೋರಿಯಲ್ಲ ಭದ್ರವಾಗಿ ಬಿದ್ದಿದ್ದವು. ಸುಮಾರು ಎರಡು ತಿಂಗಳುಗಳಿಂದ ಅವು ಅವನ ಹಾದಿ ಕಾಯಲು ಅಲ್ಲಿಗೆ ಬಂದು ಮುಟ್ಟಿದ್ದವೇನೋ. ಚಳಿಗಾಲದಲ್ಲಿ ಪಟ್ಟಣದತ್ತ ರೈತಾಪಿಗಳು ತಲೆಯಿಟ್ಟು ಮಲಗುವುದೆ ಅಪರೂಪವಾಗಿರುವಾಗ ಇಂತಹ ನಿರೀಕ್ಷಿತ ನಿಧಾನಗಳೆಲ್ಲ ಆಗುವುದರಲ್ಲಿ ಆಶ್ಚರ್ಯ ಪಡುವಂತದ್ದೇನೂ ಇಲ್ಲ. ಅದರಲ್ಲೂ ಈ ಸಾಲಿನ ಚಳಿಯ ಅಬ್ಬರದ ಸಮಯದಲ್ಲಿ ಇವನಂತೆ ಪಟ್ಟಣದ ಪಯಣ ಮಾಡುವ ಧೈರ್ಯವನ್ನ ಅಳ್ಳೆದೆಯವರೇನೂ ಮಾಡುತ್ತಿರಲಿಲ್ಲ ಅಂತ ಇಟ್ಕೊಳಿ.
ಇದೂ ಸಾಲದು ಅಂತ ಪಟ್ಟಣದಲ್ಲಿ ಒಂದು ರೇಡಿಯೋ ಕಟ್ಟೆಯನ್ನ ಸರಕಾರದ ವತಿಯಿಂದ ಕಟ್ಟಲಿದ್ದಾರಂತೆ! ಸದ್ಯ ರಾಜಧಾನಿಯ ಸಮೀಪದ ನಗರಗಳಲ್ಲಿ ಮಾತ್ರ ಇರುವ ವಿದ್ಯುತ್ ಅನ್ನುವ ಅದ್ಭುತ ಶಕ್ತಿಯನ್ನ ಈ ಪಟ್ಟಣದ ಸಾರ್ವಜನಿಕರ ಬಳಕೆಗೂ ತಂದು ಮುಟ್ಟಿಸಿ ಅದರ ಮೂಲಕವೆ ರೇಡಿಯೋ ಅನ್ನುವ ಹೊಸ ಅನ್ವೇಷಣೆಯನ್ನೂ ಸಾರ್ವಜನಿಕ ಸೇವೆಗೆ ಅರ್ಪಿಸಲು ಆ ರೇಡಿಯೋ ಕಟ್ಟೆಯನ್ನ ನಿರ್ಮಾಣ ಮಾಡೋದಂತೆ! ರಾಜಧಾನಿಯಲ್ಲಿ ಕೂತು ಮಾತನಾಡುವವರ ಮಾತುಗಳು ಗಾಳಿಯ ಅಲೆಗಳ ಮೂಲಕವೆ ತೇಲಿ ಬಂದು ಆ ರೇಡಿಯೋ ಯಂತ್ರದ ಮೂಲಕ ಕೇಳುಗರೆಲ್ಲರಿಗೂ ಕ್ಷಣಾರ್ಧದಲ್ಲಿ ಕೇಳುವ ಅದ್ಭುತಗಳೂ ಇನ್ನೇನು ಘಟಿಸಲಿವೆಯಂತೆ. ಇವೆಲ್ಲವನ್ನೂ ದೂರದೂರಿನಿಂದ ಪ್ರಕಟವಾಗಿ ಅಂಚೆಯಲ್ಲಿ ಬಂದ ವೃತ್ತ ಪತ್ರಿಕೆಯಲ್ಲಿ ಬರೆದಿದ್ದನ್ನ ಓದಿ ಮಠದ ಗುರುಗಳು ತನ್ನ ಶಿಷ್ಯರೊಂದಿಗೆ ಚರ್ಚಿಸುವಾಗ ಅಲ್ಲಿಯೆ ಏನೋ ಕೆಲಸ ಮಾಡುತ್ತಿದ್ದ ಗೋಪಿ ಕೇಳಿಸಿಕೊಂಡಿದ್ದ.
ಬೇಡದೆ ಬರುತ್ತಿರುವ ಅಥವಾ ಸರಕಾರ ತರುತ್ತಿರುವˌ ನೇರವಾಗಿ ಹೇಳಬೇಕೆಂದರೆ ತಂದು ಹೇರುತ್ತಿರುವ ಈ ಬದಲಾವಣೆಯ ಹೊಸಗಾಳಿ ಆಹ್ಲಾದಮಯವೊ? ಇಲ್ಲಾ ಅಪಾಯಕಾರಿಯೋ? ಅನ್ನುವ ನಿಶ್ಕರ್ಷೆಗೆ ಬರಲಾಗದ ಅವನು ಬಂದದ್ದೆಲ್ಲಾ ಬರಲಿ ಗೋವಿಂದನ ದಯವೊಂದಿರಲಿ ಎನ್ನುವ ವೇದಾಂತಕ್ಕೆ ಜೋತು ಬಿದ್ದಿದ್ದ. ಒಂದು ವೇಳೆ ತಾನು ಬಯಸದಿದ್ದರೂ ಸಹ ಆಗುವ ಆಗುತ್ತಿರುವ ಆಗಲಿರುವ ಬದಲಾವಣೆಗಳನ್ನ ತಡೆದು ನಿಲ್ಲಿಸಿಲಾಗಲಿˌ ನಿರ್ದಿಷ್ಟವಾಗಿ ನಿರ್ದೇಶಿಸಲಾಗಲಿ ತನ್ನಿಂದ ಸಾಧ್ಯವಿಲ್ಲ. ಹೀಗಾಗಿ ತನ್ನ ಕೈ ಮೀರಿದ ವಿಷಯಗಳಲ್ಲಿ ಕುತೂಹಲ ಹೊತ್ತು ಭಾಗಿಯಾಗುವುದರ ಹೊರತು ಬೇರೆ ಇನ್ಯಾವ ಆಯ್ಕೆಗಳೂ ಅವನಿಗಿದ್ದಿರಲಿಲ್ಲ. ಬಹುಶಃ ಅಭಿವೃದ್ಧಿಯೆಂದರೆ ಅದೆ ಇರಬಹುದು.
ವಲಸೆಯ ಹೆಚ್ಚಳದ ಕುರಿತು ಸಹ ಅವನ ಅಭಿಪ್ರಾಯ ವಿಭಿನ್ನವಾಗಿತ್ತು. ಗಿಜಗುಡುವ ಜನಜಂಗುಳಿ ಗೊಂದಲˌ ಕಾಯಿಲೆಯ ಸೋಂಕುˌ ಅರಾಜಕತೆˌ ಅಸಮಾನತೆˌ ಕೊಳಕುˌ ಅಪರಾಧ ಚಟುವಟಿಕೆಗಳನ್ನ ಹೆಚ್ಚಿಸುತ್ತವೆ ಅನ್ನುವುದು ಅವನ ಖಚಿತ ಅಭಿಪ್ರಾಯವಾಗಿತ್ತು. ಹೀಗಾಗಿಯೆ ಅನಿವಾರ್ಯ ಸಂದರ್ಭಗಳನ್ನ ಹೊರತು ಪಡಿಸಿ ಪಟ್ಟಣ ವಾಸದ ನಿರ್ಬಂಧಗಳನ್ನ ತಪ್ಪಿಸಿಕೊಳ್ಳಲು ಅವನು ಆದ್ಯತೆ ನೀಡುತ್ತಿದ್ದ. ತೋಟದ ಮನೆಯಲ್ಲಿ ಕೃಷಿ ಚಟುವಟಿಕೆಗಳ ಮಧ್ಯದ ಬಾಳ್ವೆಯಲ್ಲಿ ಸಿಗುತ್ತಿದ್ದ ಮನಃಶಾಂತಿ ಅವನಿಗೆ ಪಟ್ಟಣದ ಗದ್ದಲದ ಗಲಾಟೆಯ ಬದುಕಿನಲ್ಲಿ ಎಂದೂ ಕಂಡು ಬಂದದ್ದಿಲ್ಲ. ಅದಾಗಲೆ ಕನಿಷ್ಠ ಒಂದು ಮೈಲಿಯನ್ನಾದರೂ ನಡೆದು ಕಾಲೂ ದಣಿದಿತ್ತಾಗಿ ಮರಳಿ ಸುಲ್ತಾನನ ಬೆನ್ನೇರಿದ. ಆರಂಭಿಕ ಅಫಘಾತದಿಂದಾಗಿದ್ದ ಅಘಾತದಿಂದ ಚೇತರಿಸಕೊಂಡಿದ್ದ ಕುದುರೆಯೂ ತಕರಾರಿಲ್ಲದೆ ಮುಂದಡಿಯಿಡುತ್ತಾ ಮನೆಯತ್ತ ಓಡ ತೊಡಗಿತು.
ಕೂತು ಕೂತು ಚಳಿಗೆ ಜೋಮು ಹಿಡಿದಿದ್ದ ಮೈ ಮನಸ್ಸಿಗೆ ಈ ನಡಿಗೆ ಸ್ವಲ್ಪ ಚೈತನ್ಯ ತುಂಬಿತ್ತು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಅನ್ನುವ ಹಾಗೆˌ ಒಂದೈದು ಮೈಲಿ ದೂರ ಚಲಿಸಿದ್ದರೋ ಇಲ್ಲವೋˌ ಮನೆಯಿಂದ ಕೇವಲ ಹನ್ನೆರಡೋ ಹದಿ ಮೂರೋ ಮೈಲು ದೂರದ ಅಂತರ ಉಳಿದಿರುವಂತೆ ಇದ್ದಕ್ಕಿದ್ದಂತೆ ಉತ್ತರದ ದಿಕ್ಕಿನಿಂದ ಒಕ್ಕರಿಸಿ ಬಂದು ಬೀಸಿದ ಕಾರ್ಮೋಡದ ಹಿಮಪಾತದ ಹೊಡೆತವನ್ನ ಮೀರಿ ಮತ್ತಷ್ಟು ಮುಂದುವರೆಯುವುದೆ ಅಸಾಧ್ಯವಾಯಿತು. ಪುಣ್ಯಕ್ಕೆ ಅವರಿಬ್ಬರೂ ಆಗಲೆ ರೈಲು ಹಾದಿಯ ಕಾರ್ಮಿಕರು ನೆಲೆಸಿದ್ದ ಸದ್ಯ ಬೀಗ ಬಿದ್ದಿದ್ದ ಕ್ಯಾಂಪಿನ ಮನೆಗೆ ಹೆಚ್ಚೆಂದರೆ ಸಾವಿರ ಗಜ ದೂರದಲ್ಲಿದ್ದರು.
*********
ಮುಳುಗುವವರಿಗೆ ಹುಲ್ಲಿನಾಸರೆ ಅನ್ನುವಂತೆ ಕೂಡಲೆ ಅದರತ್ತ ಸುಲ್ತಾನನ್ನ ದೌಡಾಯಿಸಿದ ಅವನು ಇನ್ನೇನು ಹಿಮ ಮಳೆಯ ಅರ್ಭಟ ಹೆಚ್ಚಿ ನಡುನಡುವೆ ಸಿಡಿಲು ಹೊಡೆಯುವ ಭಯಂಕರ ವಿದ್ಯಾಮಾನಗಳು ಘಟಿಸುವ ಮುನ್ನವೆ ಆ ಮನೆಯ ಅಂಗಳಕ್ಕೆ ಬಂದು ಮುಟ್ಟಿದ್ದರು. ಯೋಚಿಸಲು ಹಚ್ಚು ಸಮಯವಿರಲಿಲ್ಲ. ಬೆನ್ನಿಗೆ ಕಟ್ಟಿಕೊಂಡಿದ್ದ ಕೈ ಕೊಡಲಿಯಿಂದ ಬೀಗ ಹಾಕಿ ಬಿಗಿದಿದ್ದ ಹಗ್ಗದ ಹುರಿಯನ್ನ ಕಡಿದವನೆ ಕುದುರೆಯನ್ನೂ ಒಳಗೆಳೆದುಕೊಂಡು ಬಾಗಿಲನ್ನ ಮುಚ್ಚಿ ಹಿಮ ಮಳೆಯ ಮಾರಕ ಪ್ರಕೋಪದಿಂದ ಪಾರಾದ.
ಹೊರಗೆ ಹುಯ್ಯಲಿಡುವ ಗಾಳಿಯ ಜೊತೆಜೊತೆಗೆ ಚಚ್ಚಿ ಬಿಸಾಡುವಂತೆ ಹಿಮದ ಮಳೆ ಸುರಿಯುತ್ತಿದ್ದ ರಣ ಭೀಕರ ಸದ್ದು ಕಿವಿಗಪ್ಪಳಿಸುತ್ತಿತ್ತು. ಹೊರಗೆ ಮಳೆˌ ಒಳಗೆ ಗವ್ವೆನ್ನುವ ಭೀಕರ ಕತ್ತಲು. ಅದರಲ್ಲೆ ತಡಕಾಡಿ ಅಗ್ಗಿಷ್ಟಿಕೆಯಿರುವ ಮನೆಯ ಮೂಲೆಯನ್ನ ಹುಡುಕಿದ. ಅವನ ಅದೃಷ್ಟಕ್ಕೆ ಚಕಮಕಿ ಕಲ್ಲುಗಳು ಅಲ್ಲೆ ಬಿದ್ದುಕೊಂಡಿದ್ದವು. ಚೆನ್ನಾಗಿ ಅವನ್ನ ನೆಲಕ್ಕೆ ಉಜ್ಜಾಡಿದವನೆ ಅವುಗಳಿಂದ ಕಿಡಿಯೆಬ್ಬಿಸಿದ. ರೈಲು ಕೂಲಿಗಳ ಕ್ಯಾಂಪಿನಲ್ಲಿ ಕಲ್ಲಿದ್ದಲಿಗೆ ಬರವೆ? ಅಗ್ಗಿಷ್ಟಿಕೆಯ ಒಡಲ ಒಲೆಗೆ ತುಂಬಿದ್ದ ಒಣ ಪುರಳೆಗಳಿಗೆ ಕಲ್ಲು ಗಟ್ಟಿಸಿ ಕಿಡಿ ಹಾರಿಸಿ ಬೆಂಕಿ ಊದಿ ಉರಿಯೆಬ್ಬಿಸಿದವ ಕಲ್ಲಿದ್ದಲನ್ನೂ ಜೊತೆಗೆ ತುಂಬಿದ. ಕ್ರಮೇಣ ಉರಿ ಹೆಚ್ಚಿತು. ಅಗ್ಗಿಷ್ಟಿಕೆಯ ಚಿಮಣಿ ಕೊಳವೆಯಿಂದ ಒಳ ನುಗ್ಗಿ ಬರಲು ಹವಣಿಸುತ್ತಿದ್ದ ಸುಳಿಗಾಳಿಯೂ ಸಹ ಊದು ಕೊಳವೆಯಲ್ಲಿ ಗಾಳಿ ಊದಿದಂತಾಗಿಸಿ ಬೆಂಕಿಯ ಉರಿಯನ್ನ ಹೆಚ್ಚಿಸುವಲ್ಲಿ ಸಹಕರಿಸಿತು. ಅರ್ಧ ತಾಸಿನಲ್ಲಿ ಮನೆಯ ಹಜಾರ ಅಗ್ಗಿಷ್ಟಿಕೆಯ ಉರಿಯಿಂದೆದ್ದ ಬೆಳಕಿನಿಂದ ಬೆಳಗಿ ಹಾಗೂ ಶಾಖದಿಂದ ಬೆಚ್ಚಗಾಗಿ ಹೊರಗಿನ ಚಳಿಯ ಭೀಕರತೆಯ ಹೊತ್ತಿನಲ್ಲಿ ಸ್ವಲ್ಪ ಮಟ್ಟಿಗಾದರೂ ಸುಖಾನುಭವ ನೀಡಲಾರಂಭಿಸಿತು.
ಅಗ್ಗಿಷ್ಟಿಕೆಯ ಹತ್ತಿರವೆ ಕುದುರೆಯನ್ನೂ ನಿಲ್ಲಿಸಿಕೊಂಡು ಅದರ ಬೆನ್ನ ಮೇಲೆ ಹೊದೆಸುವ ಮುನ್ನ ದಪ್ಪನೆ ಮಂದರಿಯನ್ನ ಬೆಂಕಿಯುರಿಯ ಶಾಖಕ್ಕೆ ಹಿಡಿದು ಬೆಚ್ಚಗಾಗಿಸುವಾಗ ಶಾಖದ ಉರಿಗೆ ಚಟಪಟಿಸುತ್ತಾ ನಾಲ್ಕಾರು ರಕ್ತ ಹೀರುವ ಉಣ್ಣೆಗಳು ಬೆಂಕಿಗೆ ಬಿದ್ದವು. ಹಳ್ಳಿಯ ಲಾಯದಲ್ಲಿ ಇದ್ದಿರದ ಈ ಉಣ್ಣೆ ಅದೆಲ್ಲಿ ಇವನ ಬೆನ್ನೇರಿತಪ್ಪ! ಎಂದು ಅಚ್ಚರಿಗೊಳಗಾದ ಆತˌ ಬಹುಶಃ ಹಟ್ಟಿ ಹಟ್ಟಿ ಅಲಿಯುವ ಪಾಪಮ್ಮನೋˌ ಇಲ್ಲವೆ ಗಾಡಿನ ಕಮ್ಮಾರಸಾಲೆಯಲ್ಲೋ ಕುದುರೆಯ ಮೈ ವಾಸನೆ ಢಾಳವಾಗಿದ್ದ ತನ್ನ ಮೇಲು ಹೊದಿಕೆಯನ್ನೇರಿ ಅವು ಅಲ್ಲಿಯ ತನಕ ಪಯಣಿಸಬಹುದೇನೋ ಎಂದು ಊಹಿಸಿದ. ಸರಿಯಾಗಿ ಕೊಡವಿ ಬೆಂಕಿಯಲ್ಲಿ ಉಣ್ಣೆಗಳನ್ನೆಲ್ಲಾ ಕೊಂದುˌ ಕುದುರೆಯ ಮೈಯನ್ನ ಬ್ರೆಷ್ಷಿನಿಂದ ತಿಕ್ಕಿ ಒರೆಸಿ ಮೈಗಂಟಿಕೊಂಡಿರಬಹುದಾದ ಅಳಿದುಳಿದ ಆ ಕ್ರಿಮಿಕೀಟಗಳನ್ನ ತೆಗೆದು ಅನಂತರವಷ್ಟೆ ಬೆಚ್ಚಗಾಗಿದ್ದ ಮಂದರಿಯನ್ನ ಅವನು ಸುಲ್ತಾನನ ಬೆನ್ನಿಗೆ ಹೊದೆಸಿದ. ಅಪ್ಪಿತಪ್ಪಿ ಅವೇನಾದರೂ ಹಳ್ಳಿಮನೆಯ ಲಾಯಕ್ಕೂ ಬಂದಿದ್ದರೆ ಅಲ್ಲಿ ತಮ್ಮ ಸಂತಾನಭಿವೃದ್ಧಿ ಮಾಡಿಕೊಂಡು ಇನ್ನುಳಿದ ಜಾನುವಾರುಗಳ ಬಾಳನ್ನೂ ನರಕವಾಗಿಸುವ ಸಾಧ್ಯತೆಯನ್ನ ಯೋಚಿಸಿಯೆ ಹೌಹಾರಿದನವನು.
ಚಳಿಯ ಹೊಡೆತಕ್ಕೆ ಚಹಾದ ಔಷಧ ಅಗತ್ಯವೆನಿಸಿತು. ಬೆನ್ನ ಚೀಲದಲ್ಲಿ ಚಹಾಪುಡಿಯೇನೋ ಇತ್ತುˌ ಬೆರೆಸಲು ಖರೀದಿಸಿ ತಂದಿರುವ ಬಿಳಿ ಸಕ್ಕರೆಯೂ ಈಗಿತ್ತು. ಆದರೆ ಹಿಮ ಕಾಯಿಸಿ ಕುದಿಸಲು ಕೈ ಪಾತ್ರೆಯೊಂದು ಮಾತ್ರ ಸಮೀಪದಲ್ಲಿ ಕಂಡು ಬರಲಿಲ್ಲ. ಪುರುಳೆಗಳ ಸಣ್ಣ ಸೂಟೆ ಮಾಡಿಕೊಂಡು ಅಲ್ಲೆ ಎಲ್ಲಾದರೂ ಬಿದ್ದಿರುವ ಪಾತ್ರೆ ಪಗಡವನ್ನ ಹುಡುಕುತ್ತಾ ಹೊರಟ. ಅಷ್ಟೊಂದು ಜನರಿದ್ದ ಕಾರ್ಮಿಕರ ಕ್ಯಾಂಪಿನಲ್ಲಿ ಒಂದಾದರೂ ಮಡಿಕೆ ಕುಡಿಕೆ ಇರಲೆಬೇಕಲ್ಲ?
ಮಂದ ಬೆಳಕುˌ ಸರಿಯಾಗಿ ಕಾಣದ ಒಳಾವರಣದ ಕೋಣೆಗಳತ್ತ ಮೆಟ್ಟಿಲನ್ನೇರಿ ಹೋದವನಿಗೆ ನಾಲ್ಕನೆ ಹೆಜ್ಜೆಯಿಡುವಷ್ಟರಲ್ಲೆ ಎಡಕ್ಕೆ ಕೆಳಗಿಳಿದ ಮೆಟ್ಟಿಲ ಸಾಲು ಕಾಣಿಸಿತು. ಬಹುಶಃ ಅಡುಗೆಮನೆಯಿರಬಹದೇನೋ! ಎಂದು ಅಂದಾಜಿಸುತ್ತಾ ಅಡಿಯಿಟ್ಟವನಿಗೆ ಅದು ದಾಸ್ತಾನು ಕೋಣೆ ಅನ್ನುವುದು ಖಚಿತವಾಯಿತು. ಗೋಡೆಯ ಜಂತಿಗೆ ಹೊಡೆದ ಅರೆಯಲ್ಲಿ ಮೇಣದಬತ್ತಿಗಳ ಕಂಡˌ ಒಂದೆರಡನ್ನ ಹೊತ್ತಿಸಿಕೊಂಡು ಇನ್ನೇನು ಆರಿ ಹೋಗಲಿದ್ದ ಸೂಟೆಯ ಬೆಳಕಿಲ್ಲದೆ ಕತ್ತಲಲ್ಲಿ ಕುರುಡನಂತೆ ತಡಕಾಡುವ ಕರ್ಮಾಂತರದಿಂದ ಪಾರಾದ. ಈಗ ಕೋಣೆಯೊಳಗಿನ ಆವರಣ ಸ್ಪಷ್ಟವಾಗಿ ಗೋಚರಿವಷ್ಟು ಬೆಳಕು ಮೇಣದಬತ್ತಿಯ ಉರಿ ಸೂಸುತ್ತಿತ್ತು. ಯಾವುದಕ್ಕೂ ಇರಲಿ ಎಂದು ಇನ್ನೆರಡು ಮೊಂಬತ್ತಿಗಳನ್ನ ಜೇಬಿಗಿಳಿಸಿಕೊಂಡ.
ದಾಸ್ತಾನು ಕೋಣೆಯ ತುಂಬಾ ಪಿಪಾಯಿಗಳನ್ನ ಜೋಡಿಸಿಡಲಾಗಿತ್ತು. ಸುಮಾರು ಹತ್ತಡಿ ಉದ್ದ ಇಪ್ಪತ್ತಡಿ ಅಗಲದ ನೆಲಮಾಳಿಗೆಯಂತಹ ರಚನೆ ಅದಾಗಿತ್ತು. ನೆಲಕ್ಕೆ ಥಂಡಿ ಏರದಂತೆ ಪೈನ್ ಹಲಗೆ ಹೊದಿಸಿದ್ದರು. ಒಂದೊಂದೆ ಪೀಪಾಯಿಯ ಬಾಯಿ ಸರಿಸಿ ನೋಡಿದರೆˌ ಒಂದರಲ್ಲಿ ಉಪ್ಪುನೀರಿಗೆ ಹಾಕಿಟ್ಟ ಸಿಗಡಿˌ ಇನ್ನೊಂದರಲ್ಲಿ ಉಪ್ಪುನೀರಲ್ಲಿದ್ದ ಸರೋವರದ ಮೀನುˌ ಮತ್ತೊಂದರಲ್ಲಿ ಓಟ್ಸ್ ಹಿಟ್ಟಿನ ದಾಸ್ತಾನುˌ ಮತ್ತೊಂದರಲ್ಲಿ ಖಾದ್ಯ ತೈಲದ ಭಂಡಾರ ಹೀಗೆ ಆಹಾರ ಸಾಮಗ್ರಿಗಳ ಸಂಗ್ರಹ ಕಾಣಿಸಿತು. ಗುತ್ತಿಗೆದಾರ ತನ್ನ ಅಣತಿಯಂತೆ ದುಡಿಯುವ ಕಾರ್ಮಿಕರ ವಸತಿಯೊಳಗೆ ಊಟದ ಏರ್ಪಾಡಿಗೆ ಅವನ್ನೆಲ್ಲ ಅಲ್ಲಿಗೆ ತಂದಿರಿಸದ್ದ. ಪ್ರತಿ ಬಟವಡೆಯ ದಿನ ಅದನ್ನ ರೇಷನ್ ರೂಪದಲ್ಲಿ ಕಾರ್ಮಿಕರಿಗೆ ಕನಿಷ್ಠ ದರಕ್ಕೆ ಮಾರಲಾಗುತ್ತಿತ್ತು. ಕಾರ್ಮಿಕರ ಹೆಂಗಸರು ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳುತ್ತಿದ್ದುದರಿಂದ ಅವರ ಸಂಸಾರದ ಗಾತ್ರಕ್ಕನುಗುಣವಾಗಿ ಹಿಟ್ಟುˌ ಎಣ್ಣೆˌ ಬೇಳೆˌ ತರಕಾರಿˌ ಮೀನುˌ ಮಾಂಸˌ ದ್ರಾಕ್ಷಾರಸˌ ಮೆಣಸುˌ ಉಪ್ಪುˌ ಚಹಾಪುಡಿˌ ರಸ್ಕುˌ ಗರಿಗರಿ ಬಿಸ್ಕೇಟು ಮುಂತಾದ ಅಂಗಡಿಯ ತಿಂಡಿಗಳನ್ನೂ ಸಹ ಕೊಂಡುಕೊಂಡು ಮನೆವಾರ್ತೆಯನ್ನ ನಿಭಾಯಿಸುತ್ತಿದ್ದರು. ಆಹಾರ ಸಾಮಗ್ರಿಗಳ ಖರೀದಿಗೆ ದೂರದ ಪೇಟೆಗೆ ಹೋಗುವ ಅನಿವಾರ್ಯತೆ ಕಾರ್ಮಿಕರಿಗೆ ಈ ಮೂಲಕ ತಪ್ಪುತ್ತಿತ್ತಾದರೆˌ ಕೊಡುತ್ತಿದ್ದ ಸಂಬಳದಲ್ಲಿ ಕೆಲ ಕಾಸು ಮರಳಿ ಸುತ್ತಿ ಬಳಸಿ ಬಂದು ಗುತ್ತಿಗೆದಾರನ ಬಕ್ಕಣಕ್ಕೆ ಸೇರುತ್ತಿತ್ತು. ಕೆಲಸದ ನಡುವೆ ಆಹಾರದ ಕೊರತೆಯ ಕಾರಣ ಯಾವೊಬ್ಬ ಕಾರ್ಮಿಕನೂ ದುಡಿಮೆಯಿಂದ ತಪ್ಪಿಸಿಕೊಳ್ಳಕೂಡದು ಅನ್ನುವ ದೂರದೃಷ್ಟಿಯಿಂದ ಗುತ್ತಿಗೆದಾರ ಈ ವ್ಯವಸ್ಥೆ ಕಲ್ಪಿಸಿದ್ದ.
ಇದರ ಹಂಚಿಕೆ ಕೆಲಸಕ್ಕೆ ತನ್ನ ನಿಷ್ಠಾವಂತ ಭಂಟನೊಬ್ಬನನ್ನ ಅವನು ನೇಮಿಸಿಯೂ ಇದ್ದ. ಅವನು ಅನಾಗರಿಕ ಕಾರ್ಮಿಕರ ಒರಟುತನದ ನಡುವಳಿಕೆಯನ್ನ ನಿಭಾಯಿಸಿಕೊಂಡು ಅಚ್ಚುಕಟ್ಟಾಗಿ ತನಗೆ ಯಜಮಾನರು ಒಪ್ಪಿಸಿದ್ದ ಜವಬ್ದಾರಿಯನ್ನ ನಿರ್ವಹಿಸಿಕೊಂಡು ಹೋಗುತ್ತಿದ್ದ. ಈ ಹಂಗಾಮಿನ ಭೀಕರ ಚಳಿಗಾಲದ ಎಚ್ಚರಿಕೆಯನ್ನ ಉಳಿದೆಲ್ಲ ವಲಸೆ ಬಂದವರಂತೆ ಹಗುರವಾಗಿ ಪರಿಗಣಿಸಿದ್ದ ಗುತ್ತಿಗೆದಾರ ಕಾರ್ಮಿಕರೆಲ್ಲ ಚಳಿಗಾಳಿಯ ಸರಣಿಗೆ ಹೆದರಿ ಶೀತ ಪ್ರಕೋಪವನ್ನ ತಾಳಲಾರದೆ ವಸಂತಕ್ಕೆ ಬರುತ್ತೇವೆ ಎಂದು ಹೇಳಿ ಪೇರಿ ಕಿತ್ತು ಪೂರ್ವಕ್ಕೆ ಮರಳಿ ದೌಡಾಯಿಸುವ ಒಂದು ವಾರಕ್ಕೆ ಮೊದಲಷ್ಟೆ ಸುಮಾರು ಎರಡು ತಿಂಗಳಿಗೆ ಸಾಕಾಗುವಷ್ಟು ಸಕಲ ದಿನಸಿ ದಾಸ್ತಾನುಗಳನ್ನೂ ತಂದು ಆ ಕೋಣೆಯನ್ನ ಸರಕಿನಿಂದ ತುಂಬಿ ತುಳುಕಿಸಿದ್ದ. ಈಗ ಏಕಾಏಕಿ ಅದನ್ನ ಬಳಸುವವರೆ ಇಲ್ಲದೆ ಸಕಲ ಸರಕೂ ಸುಮ್ಮನೆ ಕೊಳೆಯುತ್ತಾ ಬಿದ್ದಿತ್ತು. ಆ ಪರಿ -೩೦ರ ಹತ್ತಿರದ ಪ್ರಕಾಂಡ ತಂಪಿನ ವಾತಾವರಣ ಇರದಿದ್ದ ಪಕ್ಷದಲ್ಲಿ ಅದರಲ್ಲಿ ಬಹುತೇಕ ಸಾಮಾನು ಸರಂಜಾಮುಗಳು ಕೆಟ್ಟು ಹೋಗಲಿದ್ದವು. ಇನ್ನೂ ಬಹುತೇಕ ಮೂರು ತಿಂಗಳಾದರೂ ಅದೆ ಪ್ರಕಾರದ ಹಿಮಪಾತವಾಗಲಿದ್ದುˌ ಆ ತನಕ ಅವುಗಳು ಸುರಕ್ಷಿತ ಅಂದುಕೊಳ್ಳಬಹುದಾಗಿತ್ತು ಅಷ್ಟೆ. ಹೇಗೂ ಹಾಳಾಗುವ ಆಹಾರ ಖಾದ್ಯ ಪದಾರ್ಥ. ಯಾರಾದರೂ ಬಳಸಿ ಉಪಯೋಗಿಸಿದರೆ ಗುತ್ತಿಗೆದಾರನಿಗೆ ಅದರಿಂದಾಗುತ್ತಿದ್ದ ನಷ್ಟ ಅಷ್ಟರಲ್ಲೆ ಇತ್ತು. ಹೀಗಾಗಿ ಒಂದೊಂದರದ್ದೆ ಗುಣಮಟ್ಟ ಪರೀಕ್ಷಿಸಿ ತೃಪ್ತನಾದ.