ನೀಳ್ಗತೆ.
ಮುಗಿಯದ ಕಥೆಯೊಂದರ ಆರಂಭ - ೧.
( ದಡ ಕಾಣದ ದೋಣಿಯ ಕೊನೆಯಿರದ ಕುರುಡು ಪಯಣ.)
ಈಶ್ವರಯ್ಯನಿಗೀಗ ಈ ನೆಲದ ಸಹವಾಸ ತೊರೆದು ಹೊರಡಲು ಸಜ್ಜಾಗಿರುವ ತುಂಬು ತೊಂಭತ್ತಾರರ ಪ್ರಾಯ. ಇನ್ನೂ ನಾಲ್ಕು ತೀರಿದರೆ ಏನನ್ನೂ ಕಟ್ಟಿ ಕಡಿದು ಹಾಕದೆಲೆ ಪುಗಸಟ್ಟೆಯಾಗಿ "ಶತಾಯುಷಿ"ಯ ಪಟ್ಟ ಸಿಗುತ್ತದಾದರೂ ಅವರಿಗೆ ಈಗ ಅದರಲ್ಲಿ ಯಾವ ಆಸಕ್ತಿಯೂ ಇಲ್ಲ. ಶತಾಯುಷಿಯಾಗಿ ಸಾಧಿಸಬೇಕಾದದ್ದು ಏನೂ ಇಲ್ಲ. ಈಗಾಗಲೆ ನಾನು ಅವಧಿ ಮೀರಿದ ಔಷಧಿಯಂತಾಗಿದ್ದಾಗಿದೆ. ಸ್ವತಃ ತಾನೆ ಬಾಗಿಲು ತಟ್ಟಿ ತಯ್ಯಾರಾಗಿ ನಿಲ್ಲಲು ಸಿದ್ಧನಾಗಿದ್ದರೂ ಸಹˌ ಕಾಲನ ಕರೆ ಬಾರದಿರೋದು ಅವರಿಗೆ ಅಯೊಮಯವೆನಿಸಿದೆ.
ಏಕೆಂದರೆˌ ಅವರು ಕಂಡುಂಡು ಬಾಳಿ "ಬದುಕಿದ್ದ" ಪ್ರಪಂಚದ ಭಾಗವಾಗಿದ್ದ ಬಹುತೇಕರು ಇಂದು ದಿವಂಗತರಾಗಿ ಈ ಭೂಮಿಯ ಮೇಲಿರೋದೆ ಅವರಿಗೆ ಅಸಹನೀಯವೆನಿಸ ತೊಡಗಿದೆ. ಈಶನಾಗಿದ್ದವ ಈಶ್ವರನೆನ್ನಿಸಿಕೊಂಡು ಸದ್ಯ ಈಶ್ವರಯ್ಯನಾಗಿರುವ ತನ್ನನ್ನ ಅಕ್ಕರೆಯಿಂದ ಈಶನೆಂದೆ ಕರೆಯುವ ಕೊರಳುಗಳ್ಯಾವುವೂ ಇಂದುಳಿದಿಲ್ಲ. ಆತ್ಮೀಯತೆಯಿಂದ ಈಶ್ವರನೆನ್ನುವವರು ಅಲ್ಲೊಬ್ಬ ಇಲ್ಲೊಬ್ಬ ತನ್ನಂತೆಯೆ ಬಿಡುಗಡೆಗೆ ತಹಹತಹಿಸುತ್ತಾ ಬದುಕಿದ್ದಾರಾದರೂ ವಯೋಸಹಜವಾದ ಜರ್ಜರಿತ ಮನಸನ್ನು ಹೊತ್ತ ದುರ್ಬಲ ದೇಹದಲ್ಲಿ ಬಂಧಿಯಾಗಿರುವ ಅವರ್ಯಾರಿಗೂ ತನ್ನ ನೆನಪಿರೋದು ಕಷ್ಟಸಾಧ್ಯ ಅನ್ನುವ ಅರಿವು ಈಶ್ವರಯ್ಯರಿಗೆ ಇದೆ. ಈ ಪ್ರಪಂಚದಲ್ಲಿ ಅವರ ಮನದ ಕೊಳಕ್ಕೆ ಕಲ್ಲೆಸೆದು ಅದರಿಂದೇಳುವ ಅಲೆಗಳ ಆವರ್ತನೆಗೆ ಬೆರಗಾಗುವವರ್ಯಾರೂ ಇರದೆ ಇಂದು ಅಕ್ಷರಶಃ ಒಬ್ಬಂಟಿಯಾಗಿರುವ ಈಶ್ವರಯ್ಯರ ಮೌನದಾಭರಣ ಧರಿಸಿ ಬಹಳ ಕಾಲವಾಗಿ ಹೋಗಿದೆ. ಕಳೆದೇಳೆಂಟು ವರ್ಷಗಳ ಅವಧಿಯಲ್ಲಿ ಅವರ ನಾಲಗೆ ಲೆಕ್ಖ ಹಾಕಿ ಹೆಚ್ಚೆಂದರೆ ಒಂದು ನೂರು ಪದಗಳನ್ನಷ್ಟೆ ಉಚ್ಛರಿಸಿರಬಹುದೇನೋ. ತೀರಾ ನಡೆಸಲೆ ಬೇಕಿರುವ ದೈನಂದಿನ ಅಗತ್ಯಗಳಿಗೆ ಸಂಪೂರ್ಣ ಯಾಂತ್ರೀಕೃತವಾಗಿರುವ ಕೃತಕ ಬುದ್ಧಿಮತ್ತೆಯ ರಾಜ್ಯಭಾರ ಆರಂಭವಾಗಿರುವ ಈ ಯಕಶ್ಚಿತ್ ಮಾನವ ಲೋಕದಲ್ಲಿ ಅವರ ಕೈ ಬೆರಳ ಇಷಾರೆ ಹಾಗೂ ಅಗತ್ಯ ಬಿದ್ದಲ್ಲಿ ಅದು ಬೆರಳಚ್ಚಿಸುವ ಪದಗಳೆ ಧಾರಾಳವಾಗಿ ಸಾಕಾಗುತ್ತಿರುವಾಗ ಬಾಯಿ ತೆರೆದು ಪ್ರಯತ್ನಪೂರ್ವಕವಾಗಿ ಅವರು ಭಾಷಾ ಪ್ರಯೋಗದ ಮೂಲಕ ಯಾರೊಂದಿಗೂ ಸಂವಹಿಸುವ ಅವಶ್ಯಕತೆಯೆ ಉದ್ಭವಿಸಿರಲಿಲ್ಲ.
ಸಾಹಿತ್ಯ ಹಾಗೂ ಸಂಗೀತ ಪ್ರಿಯರಾಗಿರುವ ಈಶ್ವರಯ್ಯನವರ ಜೀವದ್ರವ್ಯ ಅವೆರಡೆ ಸದ್ಯಕ್ಕೆ. ಆದರೆˌ ಅವನ್ನೂ ಸಹ ಅವರು ಸ್ವಗತದ ಮಾತುಗಳಲ್ಲಿ ಮೆಲುಕಾಡಿಕೊಂಡು - ತನ್ನಷ್ಟಕ್ಕೆ ತಾನೆ ಗುನುಗಾಡಿಕೊಂಡು ಬಹುಕಾಲವಾಗಿ ಹೋಗಿದೆ. ಇನ್ನೂ ಸುಸ್ಪಷ್ಟವಾಗಿರುವ ಕಣ್ಣ ದೃಷ್ಟಿ ಕನ್ನಡಕದ ಹಂಗಿಲ್ಲದೆಯೆ ಓದಲು ಸಾಕಾಗುವಷ್ಟಿದ್ದರೆˌ ಚೂರೂ ಸಹ ಮಂದವಾಗಿರದ ಶ್ರವಣ ಶಕ್ತಿಯ ಕೃಪೆಯಿಂದ ಆದಷ್ಟು ಸುನಾದಗಳನ್ನಷ್ಟೆ ಕಿವಿ ತುಂಬಿಸಿಕೊಳ್ಳುತ್ತಾ ಜೀವ ಸವೆಸುವ ಈಶ್ವರಯ್ಯ ಹಾಗೆ ನೋಡಿದರೆ ತೀರಾ ಒಬ್ಬಂಟಿ ಮೂಕನಂತಾಗಿ ಹೋಗಿದ್ದಾರೆ. ಇದೊಂತರ ಅವರಿಗೆ ಅವರೆ ವಿಧಿಸಿಕೊಂಡಿರುವ ಅಜೀವಾವಧಿ ಶಿಕ್ಷೆ.
ಇದೀಗ ನಡೆಯುತ್ತಿರೋ ೨೦೭೮ರ ವಿದ್ಯಾಮಾನಗಳಿಂದೆಲ್ಲ ಈಶ್ವರಯ್ಯ ಬಹುತೇಕ ವಿಮುಖರಾಗಿದ್ದಾರೆ. ಅವರದ್ದೆ ಆಗಿರುವ ಸಕಲ ದೈನಂದಿನ ನಾಗರೀಕ ಸೌಲಭ್ಯಗಳೂ ಲಭ್ಯವಿರುವ ಅಪಾರ್ಟ್ಮೆಂಟ್ ಒಂದರ ಕೊಟ್ಟಕೊನೆಯ ಏಳನೆ ಮಹಡಿಯ ವಿಶಾಲವಾದ ಮೂರು ಬೆಡ್ ರೂಂಗಳ ವಿಶಾಲವಾದ ಫ್ಲಾಟಿನಲ್ಲಿ ಯಾವ ಮನುಷ್ಯ ಸಂಪರ್ಕವೂ ಇಲ್ಲದ ಅವರ ವಾಸ ಸಾಗಿದೆ. ಊರಲ್ಲಿದ್ದಾಗ ಬಹುತೇಕ ಮನೆಯೊಳಗೆ ಬಹುತೇಕ ಬಂಧಿಯಾಗಿರಲು ಬಯಸುವ ಅವರು ಹಳೆಯ ನೆನಪುಗಳು ತೀವೃವಾಗಿ ಕಾಡುವಾಗ ಮಾತ್ರ ಒಂಬ್ಬಂಟಿಯಾಗಿಯೆ ತನ್ನ ಬಾಲ್ಯದಿಂದ ಯವ್ವನದವರೆಗೂ ತನ್ನನ್ನ ತಾನಾಗಿಸಿರುವ ತಾವುಗಳಿಗೆಲ್ಲ ತಾವೊಬ್ಬರೆ ಹೋಗಿ ಬರೋದಿದೆ. ಚಾಲಕನ ಅಗತ್ಯವೂ ಇದ್ದಿಲ್ಲದ - ಇಂಧನದ ಅನಿವಾರ್ಯತೆಯನ್ನೆ ಹೊಂದಿರದ ಸೌರಶಕ್ತಿ ಆಧರಿತ ಅತ್ಯಾಧುನಿಕವಾಗಿರುವ ತಂತ್ರಜ್ಞಾನದಿಂದಷ್ಟೆ ಕಾರ್ಯ ನಿರ್ವಹಿಸುವ ಅವರ ಕಾರಿಗೆ ಹೋಗಿ ಕೂತು ಕೊಡುವ ನಿರ್ದೇಶನಗಳನ್ನ ಪಾಲಿಸುವ ಅದುˌ ಆ ನಿಗದಿತ ಗಮ್ಯಗಳಿಗೆ ಕೊಂಡೊಯ್ದು ಅವರನ್ನಿಳಿಸಿˌ ಮರಳಿ ಅವರು ತನ್ನನ್ನ ಏರುವವರೆಗೆ ತಾನೆ ಹೋಗಿ ಲಭ್ಯವಿರುವ ವಿರಾಮ ತಾಣಗಳಲ್ಲಿ ಸ್ವಯಂ ಪಾರ್ಕಿಂಗ್ ಮಾಡಿಕೊಂಡು ವಿಶ್ರಮಿಸುತ್ತಿರುತ್ತದೆ.
ತನ್ನ ಬದುಕಿನ ಸುವರ್ಣ ಯುಗದಲ್ಲಿ ಅಡ್ಡಾಡಿದ್ದ ಬೀದಿಗಳಲ್ಲಿ ಅಲೆದಾಡುತ್ತಾ ಹಳೆಯ ನೆನಪುಗನ್ನ ತಡವಿ ಸಾಗುತ್ತಾ ಕೆಲ ಹೊತ್ತಾದರೂ ಈಶ್ವರಯ್ಯ ಹಳೆಯ ಈಶ - ಈಶ್ವರನಾಗಿ ಅಲ್ಲಿ ಜೀವಿಸುತ್ತಾರೆ. ತನ್ನ ಆತ್ಮೀಯ ಜೀವಗಳು ತನ್ನನ್ನ ಕೂಗಿ ಕರೆದಂತೆ ಭ್ರಮಿಸಿ ಸುಖಿಸುತ್ತಾರೆ. ಹಳೆಯ ರುಚಿ ಉಳಿದಿಲ್ಲದ ಕೇವಲ ಬೋರ್ಡುಗಳಿಗಷ್ಟೆ ಸೀಮಿತವಾಗಿರುವ ಹಳೆಯ ಹೊಟೇಲುಗಳನ್ನ ಹೊಕ್ಕು ಇಷ್ಟದ ತಿಂಡಿಗಳನ್ನ ತರಿಸಿಕೊಂಡು ಚೂರು ಪಾರು ಮೆದ್ದು ಮೇಲೇಳುತ್ತಾರೆ. ಹಲ್ಲುಗಳು ಗಟ್ಟಿಯಾಗಿದ್ದರೂ ಜೀರ್ಣಶಕ್ತಿ ಕುಂದಿರೋದರಿಂದ ಹೆಚ್ಚು ತಿಂದು ಗಿಟ್ಟಿಸಿಕೊಳ್ಳುವ ಸ್ಥಿತಿಯಲ್ಲಿ ಅವರಿಂದಿಲ್ಲ. ಅವೆ ಹಳೆಯ ಪುಸ್ತಕದಂಗಡಿಗಳ ರ್ಯಾಕುಗಳ ಮಧ್ಯೆ ಅಡ್ಡಾಡಿˌ ಒಂದೆರಡು ಹಳೆಯ ಪುಸ್ತಕಗಳನ್ನಾಚೆ ಎಳೆದು ಅದರ ಪುಟಗಳ ಸುವಾಸನೆಯನ್ನ ಅಘ್ರಾಣಿಸಿ ಸುಖಿಸುತ್ತಾರೆ. ನೆಪ ಮಾತ್ರಕ್ಕೆ ಒಂದೆರಡು ಪುಸ್ತಕಗಳನ್ನ ಖರೀದಿಸಿ ತಾನು ಓದಿದ್ದ ಕಾಲೇಜುಗಳತ್ತ ನಿಧಾನವಾಗಿ ಕಾಲೆಳೆದುಕೊಂಡು ನಡೆಯುತ್ತಾರೆ.
ನವ ಯವ್ವನದ ದಿನಮಾನಗಳಲ್ಲಿ ಅಲ್ಲಿ ಕಳೆದ ಅಪ್ರಬುದ್ಧತೆಯ ಕೀಟಲೆಯ ಕ್ಷಣಗಳನ್ನ ನೆನಪಿಸಿಕೊಂಡು ಭಾವುಕರಾಗುತ್ತಾರೆ. ಹಳೆಯ ಸ್ನೇಹ - ಕಳೆದು ಹೋದ ಪ್ರೀತಿ - ಮೆಚ್ಚಿನ ಮಾಸ್ತರುಗಳು - ಕೋಪಿಷ್ಠ ಲೇಡಿ ಲೆಕ್ಚರುಗಳು ಎಲ್ಲರೂ ನೆನಪಿನ ನಾವೆಯೇರಿ ಬಂದು ದರ್ಶನ ದಯಪಾಲಿಸಿ ಹೋಗುತ್ತಾರೆ. ಕಾಲೇಜಿನಿಂದಾಚೆ ತಮ್ಮ ತಂಡದ ಗೆಳೆಯ-ಗೆಳತಿಯರೊಂದಿಗೆ ಹಾಡು ಹರಟೆ ಹೊಡೆಯುತ್ತಿದ್ದ ಪಾರ್ಕಿನ ಕಲ್ಲುಬಂಡೆಗಳ ಹತ್ತಿರ ಕ್ಷಣ ಕಾಲ ಮೌನಾಶ್ರು ಸುರಿಸುತ್ತಾರೆ. ನವ ಪೀಳಿಗೆಯ ಆಸಕ್ತಿಗಳೆ ಬದಲಾಗಿರುವ ಕಾರ ಅನಾಥವಾಗಿರುವ ಆಟದ ಬಯಲನ್ನ ಆಕ್ರಮಿಸುವವರಿಲ್ಲದೆ ಸ್ಮಶಾನ ಮೌನ ಆವರಿಸಿರುವ ಕಾಲೇಜಿನ ಕ್ರೀಡಾಂಗಣದಲ್ಲಿ ಒಬ್ಬಂಟಿಯಾಗಿ ಒಂದು ಸುತ್ತು ಹಾಕುತ್ತಾ ತಾವಲ್ಲಿ ಸಹಪಾಠಿಗಳೊಂದಿಗೆ ಕಳೆದಿದ್ದ ಮಧುರ ಕ್ಷಣಗಳನ್ನ ಮೆಲುಕು ಹಾಕುತ್ತಾರೆ. ಹೊರಗಿನ ಪರಿಸರದ ಪ್ರತಿಯೊಂದೂ ಸ್ಥಿತ್ಯಂತರವಾಗಿರುವ ಈ ಕಾಲಾನುಕ್ರಮಣಿಕೆ ಅವರಿಗೆ ಅಪಥ್ಯವಾಗಿದ್ದರೂˌ ಅವರ ಹಿಡಿತದಲ್ಲಿ ತಾನೆ ಏನಿದೆ? ಸ್ವಂತದ ಬಾಳ್ವೆಯ ಆಯ್ಕೆಗಳ ಹೊರತು.
*********
ಕಾಲ ಅದೆಷ್ಟು ಬೇಗ ಸರಿದು ಹೋಗುತ್ತಿತ್ತು ಅಂತಂದು ಕೊಳ್ಳುವ ಒಂದು ಸಮಯವೂ ಈಶ್ವರಯ್ಯನವರ ಬದುಕಿನಲ್ಲಿತ್ತು. ಆದರದು ಕಿರು ಅವಧಿಯದ್ದಾಗಿದ್ದು ಮಾತ್ರ ಆಶ್ಟರ್ಯಕರವೇನಲ್ಲ. ಏಕೆಂದರೆˌ ಮೊದಲಿನಿಂದಲೂ ಈಶ್ವರಯ್ಯ ಆರಾಮಪ್ರಿಯ ನಿಧಾನಿ. ಬಾಳಿನ ಬಾಲ್ಯದ ಮೊದಲ ದಶಕದಲ್ಲಿ ಕಾಲದ ಬೆಲೆ ಇನ್ನೆಲ್ಲರಂತೆ ಸಹಜವಾಗಿ ಅವರಿಗೂ ಅರಿವಿರಲಿಲ್ಲ. ಆದರೆ ದುಡಿಮೆಗೆ ಸಿದ್ಧವಾಗುವ ಹದಿಹರೆಯದ ಪ್ರಾಯದಲ್ಲಿ ತನ್ನಷ್ಟು ಹಾಗೂ ತನಗಿಂತ ಹೆಚ್ಚು ಪ್ರತಿಭಾವಂತರಾಗಿದ್ದ ಸಮಪ್ರಾಯದವರೊಂದಿಗೆ ಆಟ-ಪಾಠ-ಊಟಯಾವದರಲ್ಲಾಗಲಿ ಸ್ಪರ್ಧಿಸಿಯೆ ಮುಂದುವರೆಯದೆ ಗತ್ಯಂತರವಿಲ್ಲದ ಒತ್ತಡ ಬಿದ್ದಿತ್ತು. ಮುಂದಿನ ದುಡಿಮೆಗೆ ಇಂದಿನ ತಳಪಾಯ ಹಾಕಲು ಶ್ರಮ ಪಟ್ಟು ಓದಿನಲ್ಲಿ ಅಗ್ರ ಸ್ಥಾನ ಕಾಪಾಡಿಕೊಳ್ಳಲು ಹೆಣಗಾಡುತ್ತಲೆ ಅವರ ಬಹುಪಾಲು ವಿದ್ಯಾರ್ಥಿ ಜೀವನದ ಜಂಜಾಟ ಮುಗಿದು ಹೋಗಿತ್ತು.
ಹಾಗಂತˌ ವಿಶೇಷ ಅಸ್ಥೆ ವಹಿಸಿಕೊಂಡೇನೂ ಬಾಳಿನ ಭವಿಷ್ಯದ ಚಿಂತೆ ಮಾಡಿ ಅವರು ಓದಿನವಧಿಯಲ್ಲೆ ವೈದ್ಯರಾಗುವ ಗುರಿ ಸಾಧಿಸಿ ಹೊರಟಿರಲಿಲ್ಲ. ಹಾಗೆ ನೋಡಿದರೆˌ ಆ ತಲೆಮಾರಿನಲ್ಲಿ ಪದವಿ ಪಡೆವ ಹುಡುಗರಿಗಿರುತ್ತಿದ್ದ ಮಹತ್ವಾಕ್ಷಾಂಶೆಯ ಗುರಿ ಬಹುತೇಕ ಕೊನೆಯಾಗುತ್ತಿದ್ದುದೆ ತಂತ್ರಜ್ಞಾನ ಕ್ಷೇತ್ರ ಅಥವಾ ವೈದ್ಯಕೀಯದಲ್ಲಿ. ಓದಿನಲ್ಲಿ ಜಾಣರಾಗಿದ್ದರೂ ಸಹ ಜೀವಶಾಸ್ತ್ರವನ್ನ ಅರಗಿಸಿಕೊಳ್ಳಲಾಗದೆ ಪರದಾಡುವವರು ಇಂಜಿನಿಯರುಗಳಾಗಿಯೂˌ ಗಣಿತವೆಂದರೆ ರೇಜಿಗೆ ಪಟ್ಟುಕೊಳ್ಳುವವರು ವೈದ್ಯರಾಗಿಯೂ ಹೊರ ಹೊಮ್ಮುತ್ತಿದ್ದ ಈ ಶತಮಾನದ ಆರಂಭದ ದಿನಗಳವು. ಗಣಿತವೆಂದರೆ ಸಾಕು ಮಾರು ದೂರ ಹಾರುತ್ತಿದ್ದ ಲೆಕ್ಖಾಚಾರವನ್ನ ಬದುಕಿನ ಯಾವ ಹಂತದಲ್ಲೂ ಅಳವಡಿಸಿಕೊಳ್ಳಲರಿಯದಿದ್ದ ಈಶ್ವರಯ್ಯ ಸಹಜವಾಗಿ ವೈದ್ಯಕೀಯ ಕ್ಷೇತ್ರದತ್ತ ಚಿತ್ತ ಹರಿಸಿದ್ದರು. ಹೆಸರಿನ ಮುಂದೆ ಡಾ ಎಂದು ಕೆತ್ತಿಸಿಕೊಳ್ಳುವ ಆರಂಭಿಕ ತೆವಲುಗಳೆಲ್ಲ ಆದಷ್ಟು ಬೇಗ ತಣಿದು "ಮೊದಲು ಮನುಷ್ಯ"ರಾದ ಕೂಡಲೆˌ ತಾನು ಕಲಿತಿದ್ದ ವಿದ್ಯೆಗಿಂತ ತನಗಂಟಿದ್ದ ಸಾಹಿತ್ಯ ಹಾಗೂ ಸಂಗೀತದ ಗೀಳನ್ನೆ ಬಹುತೇಕ ಬದುಕಾಗಿಸಿಕೊಂಡರು.
ಆಗೆಲ್ಲ ಬದುಕು ಅದೆಷ್ಟು ಅರ್ಥಪೂರ್ಣವಾಗಿತ್ತು. ನೋವು ನಲಿವುಗಳನ್ನ ಹಂಚಿಕೊಳ್ಳಲು ಗೆಳೆಯ-ಗೆಳತಿಯರಿದ್ದರು. ಅಷ್ಟೇನೂ ಸರಳವಾಗಿರದಿದ್ದರೂ ಬದುಕನ್ನೋ ಓಟ ಈಗಿನಷ್ಟು ಕ್ಲಿಷ್ಟವಂತೂ ಆಗಿರಲಿಲ್ಲ. ಮನುಷ್ಯ ಸಂಬಂಧಗಳಿಗೆ - ಮಾನವೀಯ ಸ್ಪರ್ಷಗಳಿಗೆಲ್ಲ ಜೀವಂತಿಕೆಯಿದ್ದ ದಿನಮಾನಗಳವು. ಮನಸಿನ ಆಪ್ತ ವಲಯದಲ್ಲಿ ಮೂಡಿ ಬಂದಿದ್ದ ಸ್ನೇಹದ ಮೊಗ್ಗುಗಳೆದೆಷ್ಟೋ. ಎರಡೆರಡು ಸಲ ಪ್ರೇಮದ ಜಾಲದಲ್ಲೂ ಸೆರೆಯಾಗಿದ್ದಾಗಿತ್ತು. ಆದರೆ ಬಾಳಿನುದ್ದ "ಅಧಿಕೃತ"ವಾಗಿ ಮದುವೆಯಾಗದೆಯೆ ಉಳಿವ ನಿರ್ಧಾರಕ್ಕೆ ಬದ್ಧರಾಗುವ ವೇಳೆ ಬದುಕಿನ ಮೊದಲ ನಾಲ್ಕೂವರೆ ದಶಕ ಸರಿದೆ ಹೋಗಿತ್ತು. ಆ ಹಂತದಲ್ಲಿ ಮತ್ತೆ ಹೊಸಬಳೊಂದಿಗೆ ಹೊಂದಾಣಿಕೆಯ ಜೀವನ ಮಾಡುವ ಉಮೇದು ಅವರಲ್ಲಿ ಉಳಿದಿರಲಿಲ್ಲ. ತಮಗೆ ಅನುಕೂಲವಾಗುವಂತೆ ರೂಪಿಸಿಕೊಂಡ ದಿನಚರಿಯಲ್ಲಿ ಬದುಕುತ್ತಾ ದಿನ ಕಳೆಯುತ್ತಿದ್ದವರಿಗೆˌ ಬೇರೆಯವರ ಅಗತ್ಯಗಳನುಸಾರ ಅದರಲ್ಲಿ ಹೊಸತಾಗಿ ಬದಲಾವಣೆ ಮಾಡಿಕೊಳ್ಳೋದು ಇಷ್ಟವಿರಲಿಲ್ಲ.
ಹಾಗಂತˌ ಒಂಟಿಯಾಗಿಯೆ ಇರುವ ನಿರ್ಧಾರವನ್ನೇನೂ ಮಾಡಿರಲಿಲ್ಲ ಈಶ್ವರಯ್ಯ. ಒಂದು ಮಟ್ಟಿಗೆ ನೆಮ್ಮದಿಯ ಬಾಳ್ವೆ ಮಾಡುವಷ್ಟು ಸಂಪಾದನೆ ಆಗುತ್ತಿತ್ತು. ದುಡ್ಡಿದ್ದರೆ ಸಕಲ ಸೌಲಭ್ಯಗಳೂ ಕೈಗೆಟಕುವ ಹೊಸ ಕಾಲಮಾನ ಆಗಷ್ಟೆ ಕಣ್ತೆರೆದಿತ್ತು. ಅಂತರ್ಜಾಲದ ಮಾಯಾಜಾಲ ತೀರಾ ಶೈಶವದ ಆರಂಭದ ಹಂತದಲ್ಲಿದ್ದ ಕಾಲಮಾನವದುˌ ಆ ಅಂತರ್ಜಾಲದ ಕೊಳಕು ಕೆಸರಿನ ಹೊಂಡಕ್ಕೆ ಬಿದ್ದಷ್ಟೆ ಬೇಗ ಮೇಲೆದ್ದು ಬಂದು ದಡದಂಚಿನಲ್ಲಿ ಮೈ-ಮನಸಿಗಂಟಿದ್ದ ಅಲ್ಲಿನ ಹೇಸಿಗೆಯ ಕೊಳೆಗಳನ್ನ ಕಿತ್ತು ಒರೆಸಿ ಹಾಕುತ್ತಾ ಕೂತಿದ್ದಾಗ ಅದೆ ಕೆಸರ ಕೂಪದಲ್ಲಿ ಆಗಷ್ಟೆ ಬಿದ್ದವಳಾಗಿˌ ಪುನಃ ಪುನಃ ಮುಳುಗೇಳುತ್ತಾ ಕಣ್ಣಿಗೆ ಬಿದ್ದವಳು ಪ್ರಕೃತಿ. ಹುಡುಗಿಯರ ಆಸಕ್ತಿಗಳಿಂದ ಹೊರತಾದ ಗಂಡುಬೀರಿ ವ್ಯಕ್ತಿತ್ವದ ಪ್ರಕೃತಿ ತ್ಯಾಗಿಯಾಗಿ ಪರಿಚಯವಾದವಳುˌ ಕ್ರಮೇಣ ಕೇವಲ ಪ್ರಕೃತಿಯೆನ್ನುವ ಸಲುಗೆ ದಯಪಾಲಿಸಿ ಮತ್ತಷ್ಟು ಆಪ್ತಳಾದಳು.
ಪ್ರೇಮಿಸಲೇನೋ ಇಷ್ಟ - ಆದರೆ ಹೇಳಿಕೊಳ್ಳಲು ಕಷ್ಟ ಅನ್ನುವಷ್ಟು ಪ್ರಾಯದ ಅಂತರ ಇಬ್ಬರ ನಡುವೆ ಇದ್ದುದ್ದರಿಂದ ಈಶ್ವರಯ್ಯ ಆ ಬಗ್ಗೆ ಚಕಾರವೆತ್ತದೆ ಸ್ನೇಹ ಮಾತ್ರ ಬೆಸೆದುಕೊಂಡರು. ತನಗಿಂತ ಹದಿನಾರು ವರ್ಷ ಹಿರಿಯರಾಗಿದ್ದರೂ ಸಮಾನವಯಸ್ಕರಂತೆಯೆ ಅವರೊಂದಿಗೆ ವರ್ತಿಸುತ್ತಿದ್ದ ಪ್ರಕೃತಿಯ ಅಸಡಾ ಬಸಡಾ ವ್ಯಕ್ತಿತ್ವಕ್ಕೆ ಅದೊಂದು ಸಮಸ್ಯೆ ಎನ್ನಿಸಿಯೆ ಇರಲಿಲ್ಲವೇನೋ ಎನ್ನುವಂತಿತ್ತು ಅವಳ ನಡುವಳಿಕೆ. ತಾನು ಬೆಂಗಳೂರಿನಲ್ಲಿದ್ದರೂ ದೂರದ ಹಿಸ್ಸಾರಿನಲ್ಲಿದ್ದ ಪ್ರಕೃತಿಯ ಜೊತೆಗಿನ ವರ್ಚುವಲ್ ಸಂಬಂಧ ಒಂಥರಾ ತೀರಾ ಒಂಟಿಯಾಗಿ ಬೇಸತ್ತಿದ್ದ ಈಶ್ವರಯ್ಯನ ಅನುಕ್ಷಣದ ಗೀಳಾಗಿ ಹೋಯ್ತು. ಇಂತಹ ಒಂದು ಹಂತದಲ್ಲಿಯೆ ಅವರಿಗೆ ಅವಳ ಮೇಲ್ನೋಟದ ತೋರಿಕೆಯ ಡೌಲಿನ ಹಿಂದಿದ್ದ ಅಸಹಾಯಕತೆಯ ಪರಿಚಯವೂ ಅವರಿಗಾಯ್ತು.
ಹದಿನಾರರ ಪ್ರಾಯದಲ್ಲೆ ಬಾಲ್ಯ ವಿವಾಹವಾಗಿ ಹದಿನೇಳರಲ್ಲೆ ಪ್ರಕೃತಿಯನ್ನ ಹುಟ್ಟಿಸಿದ್ದˌ ಪ್ರಕೃತಿಯ ಅಪ್ಪˌ ಅದರ ಮರು ವರ್ಷವೆ ಮತ್ತೊಂದು ಹೆರಿಗೆಯ ಹೊತ್ತಿಗೆ ದೇಹಾರೋಗ್ಯ ವಿಷಮಿಸಿದ ಹೆಂಡತಿಯನ್ನ ಕಳೆದುಕೊಂಡು ವಿಧುರನಾದ. ಹರಿಯಾಣದ ಜಮೀನ್ದಾರಿಕೆಯ ಕುಟುಂಬದ ಸಂಪ್ರದಾಯದಂತೆ ಪ್ರಕೃತಿಗೆ ವರ್ಷ ತುಂಬಿ ಎರಡು ತಿಂಗಳಾಗುವ ಮೊದಲೆ ಮರು ಮದುವೆ ಮಾಡಿಕೊಂಡು ಪುನಃ ಸಂಸಾರಿಯೂ ಆದ. ಮಗುವಾಗಿದ್ದ ಪ್ರಕೃತಿಯ ಮನೆಗೆ ಮಲತಾಯಿ ಬಂದಳುˌ ಅವಳಿಗೂ ಮೂರು ಮಕ್ಕಳಾದವು. ಮನೆಯ ಯಜಮಾನಿಕೆ ಮಲತಾಯಿಯದ್ದಾದ ಮೇಲೆ ಉಟ್ಟುಂಡಿರಲು ಯಾವ ತೊಂದರೆ ಎದುರಾಗದಿದ್ದರೂ ಸಹˌ ಪ್ರೀತಿ-ಮಮತೆ-ಲಾಲನೆ-ಪಾಲನೆಯ ವಿಷಯಗಳಲ್ಲಿ ಸ್ಪಷ್ಟ ತಾರತಮ್ಯ ಕಣ್ಣಿಗೆ ರಾಚುವಂತಿದ್ದುˌ ಅವಳ ಎಳೆಯ ಮನಸು ಮುದುಡಿಕೊಂಡೆ ಬೆಳೆಯಿತು. ತನ್ನದೆ ಮನೆಯಲ್ಲಿ ಪರಕೀಯ ಭಾವನೆಯ ಕೀಳರಿಮೆ ಹೊತ್ತು ಬದುಕುವ ಅನಿವಾರ್ಯತೆ ಪ್ರಕೃತಿಯದ್ದಾಯ್ತು.
ಬೆಳವಣಿಗೆಯ ಹಂತದಲ್ಲಿ ಗಂಡು ಮಕ್ಕಳಿಗೆ ಅಪ್ಪನ ಹಾಗೂ ಹೆಣ್ಣು ಮಕ್ಕಳಿಗೆ ಅಮ್ಮನ ಆರೈಕೆ ಹಾಗೂ ನಿಗಾ ಅತ್ಯಗತ್ಯ. ಅದಿಲ್ಲದಾಗ ಬಾಲ್ಯ ಸೊರಗುತ್ತದೆ. ಸೂಕ್ತ ಪ್ರಾಯದಲ್ಲಿ ಹೆಂಗರುಳ ಪೋಷಣೆ ದೊರೆಯದೆ ಬೆಳೆದ ಪ್ರಕೃತಿಯ ಪ್ರಪಂಚದಲ್ಲಿ ಹೆಣ್ತನಕ್ಕಿಂತ ಗಂಡುಬೀರಿ ನಡುವಳಿಕೆಯೆ ಢಾಳಾಗಿ ಬೆಳೆದುˌ ತನಗೆ ಹೇಗೆ ಬೇಕೋ ಹಾಗೆ ಒರಟೊರಟಾಗಿ ಹುಡುಗಿ ಬೆಳೆದು ಬಲಿತಳು. ಊರ ಉಸಾಬರಿಯ ಪಟೇಲಿಕೆಯ ರಾಜಕೀಯದಲ್ಲೆ ದಿನದ ಬಹು ಸಮಯ ವ್ಯಸ್ಥನಾಗಿರುತ್ತಿದ್ದ ಅವಳಪ್ಪನಿಗೆ ಇದೆಲ್ಲದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಹ ಪುರುಸೊತ್ತು ಇದ್ದಂತಿರಲಿಲ್ಲ.
ಮನೆಗಾತ ನಿತ್ಯ ಬರುತ್ತಿದ್ದುದೆ ಹೆಂಡತಿ ಬೇಯಿಸಿ ಹಾಕುತ್ತಿದ್ದುದ್ದನ್ನ ಮೇಯಲು ಹಾಗೂ ಹೆಂಡತಿ ಜೊತೆಗೆ ಮಲಗೇಳಲು ಅನ್ನುವಂತಿತ್ತು. ಈ ಎರಡು ಸಂಗತಿಗಳಲ್ಲಿ ಅವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಬೀಜದ ಕೋಣಕ್ಕೂ ಪ್ರಕೃತಿಯ ಅಪ್ಪನಿಗೂ ಎಳ್ಳಷ್ಟೂ ವ್ಯತ್ಯಾಸವಿರಲಿಲ್ಲ. ಹೀಗಾಗಿ ಸಹಜವಾಗಿ ಮನೆಯ ಸರ್ವಾಧಿಕಾರವೂ ಪ್ರಕೃತಿಯ ಅಜ್ಜಿಯ ನಂತರ ಅವಳ ಮಲತಾಯಿಯದ್ದೆ ಆಗಿ ಹೋಗಿˌ ತನ್ನ ಮನೆಯಲ್ಲೆ ತಾನು ಅನಾಥಳಂತೆ ಬೆಳೆಯಬೇಕಾಯಿತು.
******
ಕೈ ಫೋನಿನ ಪರದೆಯ ಮೇಲೆ ಇನ್ನೆರಡು ಮೂರು ದಿನಗಳಿಗೆ ಸಾಕಾಗುವಷ್ಟು ಹಾಲು-ಮೊಟ್ಟೆ-ಮೀನು-ಅಕ್ಕಿ-ಹಿಟ್ಟು-ತರಕಾರಿ ಹೀಗೆ ಅಗತ್ಯವಿರುವ ದಿನಸಿಗಳಿಗೆ ಆರ್ಡರ್ ಕೊಟ್ಟು ಆನ್ಲೈನ್ ಪೇಮೆಂಟ್ ಮಾಡಿˌ ಬೆಳಗಿನ ಕಾಫಿ ಹೀರುತ್ತಾ ಹೊಂಜು ತುಂಬಿದ್ದ ಆಗಸವನ್ನೆ ದಿಟ್ಟಿಸುತ್ತಾ ಹೊರಗಿನ ಗಾಳಿ ಅಪ್ಪಿತಪ್ಪಿ ಕೂಡಾ ಒಳ ನುಸುಳಲಾರದಂತೆ ಸೀಲ್ ಮಾಡಲಾಗಿದ್ದ ಗಾಜಿನ ಪರದೆ ಅಳವಡಿಸಿದ್ದ ಬಿಸಿಲುಮಚ್ಚೆಯಲ್ಲಿ ಕೂತು ಬೆಂಗಳೂರಿನ ಚಳಿಯ ಮುಂಜಾವನ್ನ ನೆನೆಯುತ್ತಿದ್ದರು ಈಶ್ವರಯ್ಯ. ಈಗೆಲ್ಲ ಮೊದಲಿನಂತೆ ತಿಂಗಳಿಗಾಗುವ ದೀನಸಿಯನ್ನ ತಂದು ಕೂಡಿಟ್ಟು ಕೊಳ್ಳುವ ಪದ್ಧತಿಯನ್ನ ಅವರು ಕೈ ಬಿಟ್ಟಿದ್ದರು. ದೀರ್ಘ ಕಾಲ ಕಾಪಿಡುವ ಆಹಾರ ಪದಾರ್ಥಗಳಿಗೆಲ್ಲ ಬೆಳವಣಿಗೆಯ ಹಂತದಿಂದಲೆ ಸುರಿಯುವ ರಾಸಾಯನಿಕಗಳು ಅವುಗಳ ಸಂಸ್ಕರಣೆಯ ಹಂತದಲ್ಲಿ ಅಪಾಯಕಾರಿ ಮಟ್ಟ ಮುಟ್ಟಿ ಹಸಿವಿನಿಂದ ಸಾಯುವವರಿಗಿಂತ ತಿಂದು ಕಾಯಿಲೆ-ಕಸಾಲೆಗಳಾಗಿ ಸಾಯುವ ಸಾಧ್ಯತೆಯನ್ನೆ ಹೆಚ್ಚಿಸಿತ್ತು. ಹೀಗಾಗಿˌ ದುಬಾರಿಯಾದರೂ ಸಹ ಹೆಚ್ಚು ಕಾಲ ಸಂರಕ್ಷಿಸಿಡಲಾರದ "ಸಾವಯವ" ಎನ್ನುವ ಹಣೆಪಟ್ಟಿ ಹೊತ್ತ ಆಹಾರ ಪದಾರ್ಥಗಳನ್ನ ಸೀಮಿತ ಪ್ರಮಾಣದಲ್ಲಷ್ಟೆ ತರಿಸಿ ಎರಡು ಮೂರು ದಿನಗಳಲ್ಲೆ ಅವುಗಳ ವಿಲೆವಾರಿ ಮಾಡುವ ಅಭ್ಯಾಸ ಅವರಿಗೆ ರೂಢಿಯಾಗಿತ್ತು.
ಅಲ್ಲಾˌ ಹೇಗಿದ್ದ ಬೆಂಗಳೂರು? ನೋಡ ನೋಡುತ್ತಿದ್ದಂತೆ ಹೇಗಾಗಿ ಹೋಯಿತು! ಮುದ ನೀಡುತ್ತಿದ್ದ ಇಲ್ಲಿನ ಚಳಿಗಾಲ ಈಗ ಅಪ್ಪಟ ಶಿಕ್ಷೆ. ಉಳ್ಳವರು ಅದು ಹೇಗೋ ಒಂದಷ್ಟು ದುಡ್ಡು ಖರ್ಚು ಮಾಡಿ ಇದರಿಂದ ಪಾರಾಗುವ ಮಾರ್ಗ ಕಂಡುಕೊಳ್ಳುತ್ತಾರೆ. ಆದರೆ ಆರ್ಥಿಕ ಸಾಮರ್ಥ್ಯ ಅಷ್ಟಿಲ್ಲದಿರುವ ಕೆಳವರ್ಗದ ಜನತೆಯದ್ದು ಮಾತ್ರ ಹೊಗೆ ತುಂಬಿದ ವಾತಾವರಣದ ಇಬ್ಬನಿ ಸುರಿವ ಮಂಜಿನ ಚಳಿಗಾಲದ ಬೆಂಗಳೂರಿನ ವಿಷಮಯ ವಾತಾವರಣದಲ್ಲಿ ಅಕ್ಷರಶಃ ನಾಯಿಪಾಡು. ಕೇವಲ ಅರ್ಧ ಶತಕದಲ್ಲಿ ಸಹನೀಯವಾಗಿದ್ದ ನಗರದ ವಾತಾವರಣˌ ಮನುಷ್ಯನ ದುರಾಸೆಯ ಫಲದಿಂದ ಈಗ ಅಸಹನೆಗೆ ಅಸಹನೆ ಹುಟ್ಟಿಸುವ ಮಟ್ಟಿಗೆ ಮಾರ್ಪಾಡಾಗಿ ಹೋಗಿದೆ. ಇದನ್ನೆಲ್ಲ ಬಿಸಿ ಕಾಫಿ ಬಟ್ಟಲನ್ನ ತುಟಿಗಾನಿಸಿ ಸೊರ ಸೊರ ಹೀರುತ್ತಾ ಕೂತಿದ್ದ ಕುರ್ಚಿಯಲ್ಲೆ ಮರುಗುತ್ತಾ ಯೋಚಿಸಿದರು ಈಶ್ವರಯ್ಯ.
ಕೈಫೋನಿನ ಪರದೆ ದಿಟ್ಟಿಸಿದರೆˌ ಇಂದಿನ ನಗರದ ಏಕ್ಯೂಐ ಎರಡು ಸಾವಿರದ ಹತ್ತಿರ ಹತ್ತಿರ ಇದೆಯಂತೆ. ಹೊಂಜು ದಾಟದಂತೆ ರೂಪಿಸಲಾಗಿರುವ ಮುಖ ಕವಚ ಧರಿಸದೆ ಯಾರೂ ಸಾರ್ವಜನಿಕವಾಗಿ ಓಡಾಡುತ್ತಿಲ್ಲ. ಗಾಳಿ ಶುದ್ಧೀಕರಣದ ಯಂತ್ರ ಮನೆ ಮನೆಗೂ ತಲುಪಿದೆ. ಈಗದು ಐಶಾರಾಮದ ಲಕ್ಷಣವಾಗುಳಿಯದೆ ಅತ್ಯಗತ್ಯದ ವಸ್ತುವಾಗಿ ಪರಿಣಮಿಸಿದೆ. ಒಂದೆ ಒಂದು ಸಮಾಧಾನದ ಅಂಶವೇನೆಂದರೆˌ ಹತ್ತು ವರ್ಷಗಳ ಹಿಂದೆ ಗಾಳಿಯ ಗುಣಮಟ್ಟ ತೀವೃವಾಗಿ ಕುಸಿದು ಐದು ಸಾವಿರದ ಆಸುಪಾಸು ಮುಟ್ಟಿದ್ದಾಗ ಜೀವವಾಯುವಿನ ಪುಟ್ಟ ಪುಟ್ಟ ಸಿಲೆಂಡರುಗಳನ್ನ ಬೆನ್ನಿಗೆ ಕಟ್ಟಿಕೊಂಡು ಹೋಗುತ್ತಿದ್ದ ಅನಿವಾರ್ಯತೆ ಈಗಿಲ್ಲದಿರೋದು.
ನಗರದಲ್ಲಿದ್ದ ಉದ್ಯಾನವನಗಳಲ್ಲಿ ಮಾತ್ರ ಅಷ್ಟಿಷ್ಟು ಹಸಿರ ಪಸೆ ಉಳಿದಿದ್ದುˌ ದಿನ ಬೆಳಗಾದರೆ ಕನಿಷ್ಠ ಅಲ್ಲಾದರೂ ಮಾಸ್ಕೇರಿಸದೆ ಮುಖ ತೆರೆದುಕೊಂಡಿರಬಹುದು ಎನ್ನುವ ಏಕೈಕ ಕಾರಣದಿಂದ ವಾಯು ವಿಹಾರಕ್ಕೆ ಬರುವ ಜನಸಂದಣಿಯೆ ಕಿಕ್ಕಿರಿದು ತುಂಬಿರುತ್ತದೆ. ನಡು ಹಗಲಿನಲ್ಲಿ ಒಂಚೂರು ಈ ಜನಪ್ರವಾಹ ತಗ್ಗಿರುತ್ತದಾದರೂˌ ಆ ಪಾರ್ಕುಗಳ ಸಾಮರ್ಥ್ಯ ಮೀರುವಷ್ಟು ಜನರು ಸದಾಕಾಲವೂ ಅಲ್ಲಿದ್ದೆ ಇರುತ್ತಾರೆ. ಹೀಗಾಗಿˌ ಈಶ್ವರಯ್ಯ ಮೊದಲಿನಂತೆ ವಾಯುವಿಹಾರಕ್ಕೆ ಪಾರ್ಕಿನತ್ತ ಬಿಜಯಂಗೈಯುವುದನ್ನ ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಬದಲಿಗೆ ಮನೆಯಲ್ಲಿನ ಟ್ರೆಡ್ ಮಿಷನ್ ಮೇಲೆಯೆ ಅವರ ದಿನದ ಲೆಕ್ಖಾಚಾರದ ಹತ್ತು - ಹದಿನೈದು ಕಿಲೋಮೀಟರುಗಳ ನಡುಗೆ ಸಾಗುತ್ತದೆ. ಅದೆ ಅಪಾರ್ಟ್ಮೆಂಟ್ ಸಂಕೀರ್ಣದ ಮತ್ತೊಂದು ಅಂತಸ್ತಿನಲ್ಲಿ ಒಂದು ಎರಡು ಮಲಗುವ ಮನೆಗಳ ಫ್ಲಾಟ್ ಖರೀದಿಸಿˌ ಅದರಲ್ಲಿ ನಿಯಂತ್ರಿತ ವಾತಾವರಣದಲ್ಲಿ ಹೈಡ್ರೋಫೋನಿಕ್ ತಂತ್ರಜ್ಞಾನ ಬಳಸಿ ವಾಣಿಜ್ಯ ಪರಿಮಾಣದಲ್ಲಿ ಸ್ಟೀವಿಯಾ-ಕೇಸರಿ-ಲ್ಯಾವೆಂಡರ್ ಬೆಳೆಗಳ ಸೀಮಿತ ನಗರ ಕೃಷಿಯನ್ನ ಕಳೆದ ಐದು ದಶಕಗಳಿಂದ ರೂಪಿಸಿಕೊಂಡಿದ್ದಾರೆ. ಸಾಲದ್ದಕ್ಕೆˌ ಖಾಲಿ ಬಿದ್ದು ಬಿಸಿಲಿಗೆ ಒಣಗುತ್ತಿದ್ದ ಕಟ್ಟಡದ ಮೇಲ್ಛಾವಣಿಯ ದೊಡ್ಡ ಭಾಗವನ್ನೂ ಸಹ ಸ್ವಂತಕ್ಕೆ ಖರೀದಿಸಿ ಅಲ್ಲಿ ಸಂಪೂರ್ಣ ನಿಯಂತ್ರಿತ ವಾತಾವರಣದ ಮುಚ್ಚಿಗೆಯಿರುವ ಅದರಡಿ ಖಾಸಗಿ ಉದ್ಯಾನವನ ರೂಪಿಸಿಕೊಂಡು - ಸಾಧ್ಯವಿರುವ ಸಸ್ಯಗಳನ್ನೆಲ್ಲ ಬೆಳೆಸಿಕೊಂಡು ವಿವಿಧ ಪ್ರಾಯದಲ್ಲಿ ಚಿಗುರಿ ಬೆಳೆದು ನಿಂತಿರುವ ಅವುಗಳ ನಡುವಿನ ಪುಟ್ಟಪಥದಲ್ಲಿ ಅಡ್ಡಾಡಿ ಅಲ್ಪತೃಪ್ತಿ ಪಡುತ್ತಾರೆ. ಹೀಗಾಗಿˌ ಪಾರ್ಕಿನ ಅನಿವಾರ್ಯತೆಯಿಂದ ಈಶ್ವರಯ್ಯ ಮುಕ್ತ. ಅವರಿಗೆ ಬೇಕಾದ ಆಹ್ಲಾದಮಯವಾದ ಪ್ರಾಣವಾಯು ಇಲ್ಲೆ ಸಿಗುತ್ತದೆ. ಮೊದಲೆ ಹೇಳಿದಂತೆ ಇದೆಲ್ಲ ಉಳ್ಳವರ ವ್ಯವಹಾರ. ಕೈಯಲ್ಲಿ ಕಾಸು ಓಡಾಡುತ್ತಿರೋದರಿಂದˌ ಈಶ್ವರಯ್ಯ ಇದನ್ನೆಲ್ಲ ಖರ್ಚು ಮಾಡಿಯಾದರೂ ಗಿಟ್ಟಿಸಿಕೊಳ್ಳುವ ಸಾಮರ್ಥ್ಯ ಗಳಿಸಿಕೊಂಡಿದ್ದಾರೆ ಅಷ್ಟೆ.
No comments:
Post a Comment