24 May 2010

ನೆನಪು ನೆನಪು...

ಕಡಲ ಆಳದಲಿ ಚಿಪ್ಪುಗಳೊಳಗೆ ಅಡಗಿ ಕುಳಿತ ಸಾಲು ಮುತ್ತುಗಳು.../
ಗಾಳಿಯಲ್ಲಿ ನೀನಿತ್ತ ಒಂದೇ ಒಂದು ಮುತ್ತಿಗೆ ಸಾಟಿಯೇ...?//






ಕರಿ ಕತ್ತಲಲ್ಲಿ ದಿಕ್ಕೆಟ್ಟು ಹೆದರಿ,
ಹಾದಿ ತಪ್ಪಿ ನಿಂತಿದ್ದ ನನ್ನನು/
ಸಾಂತ್ವಾನಗೊಳಿಸಿದ್ದು,
ಅದು...ನಿನ್ನ ಕಣ್ಣ ಹೊಂಬೆಳಕು//




ಹಣೆಯ ಮೇಲಿನ ಬೆವರ ಹನಿ ಸಾಲು,
ಕಣ್ಣ ತಾಕುವಂತಿದ್ದ ಜೊಂಪೆ ಕೂದಲು/
ಆಳದಲ್ಲೆಲ್ಲೋ ತುಂಟ ನಗುವಿದ್ದ ಕಡು ಕಪ್ಪು ಕಂಗಳು.
ನೀನೆಂದರೆ...ನನಗೆ ನೆನಪಾಗೋದು ಇದೇನೇ//

13 May 2010

ಕರಗಿದ ಕನಸು...

ಬಿಸಿಲ ಬಿಸಿಯೂ ತಾಕುತ್ತಿಲ್ಲ,
ಉರಿ ಸೆಕೆಗೂ ನನ್ನನು ಮಣಿಸುವ ತಾಖತ್ತಿಲ್ಲ/
ನಿನ್ನ ಒಲವ ಬೇಗೆಯಲ್ಲಿ ನೀರಾಗಿ ಹೋಗಿದ್ದೇನೆ,
ಕರಗಿ ಹರಿಯಲು ಇನ್ನೇನು ತಾನೇ ಬಾಕಿ ಉಳಿದಿದೆ?//



ಬಂಡೆ ಮೇಲೆ ಬರೆದ ಅಕ್ಷರಗಳೆಲ್ಲ ಮಳೆಗೆ ಕರಗಿ ಹೋದವು,
ಮರದ ಮೈಯಲ್ಲಿ ಕೊರೆದ ಒಲವ ಹೆಸರು ಒಣಗಿ ಹೋದವು/
ಮುತ್ತಿನ ನೆನಪೊಂದೆ ಶಾಶ್ವತ,
ಆದರೆ ಅದು ಕೊಟ್ಟದ್ದೋ..ಇಲ್ಲ ಪಡೆದದ್ದೋ ಎನ್ನುವ ಸಣ್ಣ ಗೊಂದಲ//

09 May 2010

ಮತ್ತೇರಿದೆ... ಮುತ್ತಿನದೆ....

ಹಿಮಗಿರಿಯ ಎತ್ತರದಲಿ ಆಗುವ ಪುಳಕ,
ಕಣ್ಣಲೆ ಸೋಕಿ ನೀ ತಂದ ರೋಮಾಂಚನಕ್ಕೆ ಸಾಟಿಯೇ?/
ಕಡಲ ಆಳದಲಿ ಚಿಪ್ಪುಗಳೊಳಗೆ ಅಡಗಿ ಕುಳಿತ ಸಾಲು ಮುತ್ತುಗಳು,
ಗಾಳಿಯಲಿ ನೀನಿತ್ತ ಒಂದೇ ಒಂದು ಮುತ್ತಿಗೆ ಸಾಟಿಯೇ...?//

08 May 2010

ಒಂದು ಭಾವುಕ ಸಂಜೆ...

ಮೌನದ ಕಾಯ ಹೊರ ಹೊಮ್ಮಿಸಿದ,
ಭಾವುಕ ಸ್ವೇದ ಬಿಂದುಗಳು/
ಒಳ ಮನವ ಮೆಲ್ಲಗೆ ಸೋಕಿ,
ನೆನಪುಗಳನ್ನೆಲ್ಲ ಆರ್ದ್ರವಾಗಿಸಿವೆ//



ಹಳೆಯ ಕಡತಗಳಲ್ಲಿ ಅಡಗಿ ಕುಳಿತಿದ್ದ,
ನೆನಪಿನೋಲೆಯೊಂದರ ಮಾಸಲು ಅಕ್ಷರಗಳು/
ಕಣ್ಣ ಬಿಂಬಕ್ಕೆ ಬಿದ್ದ ಕಂಬನಿಯ ಪರದೆಯ ಹಿಂದೆ,
ಇನ್ನಷ್ಟು ಮಬ್ಬಾಗಿ ಕಂಡವು//

07 May 2010

ಗಾಳಿ ತೀಡಿದ ಕುರುಳು...

ಮೌನದ ಬಲೆಯಲ್ಲಿ ಸೆರೆಯಾದ ಚೆಮ್ಮೀನು,
ಬಾನಂಚಿನಲ್ಲಿ ಮಿನುಗೊ ಬೆಳ್ಳಿ ಚುಕ್ಕಿಯೆ ನೀನು?/
ಚಿತ್ತಾರದಲ್ಲಿ ಕಳೆದು ಹೋದ ಬಣ್ಣದ ಒಂದೇ ಎಳೆ,
ನಿನ್ನ ಬದುಕಿನ ಭಿತ್ತಿಯಲಿ ತುಂಬುವ ಆಸೆಯಿದೆ ನಾಳೆ//

05 May 2010

ನೊಂದು ಬೆಂದ ಸಂತ್ರಸ್ತ ಮನ...

ನಿನ್ನ ತುಟಿಗಳ ಸೋಕಿ ಹೊರಸುರಿವ ಮಾತುಗಳದೆ ಭಾಗ್ಯ,
ಕ್ಷಣಕ್ಕೊಮ್ಮೆ ಆಡಿ ನಿನ್ನೆವೆ ತಾಕುವ ರೆಪ್ಪೆಗಳ ಅದೃಷ್ಟವ ನೋಡಿದೆಯ?/
ಪದೇಪದೇ ನಿನ್ನ ಹಣೆಯ ಚುಂಬಿಸೋ ಕುರುಳುಗಳಿಗಂತೂ ಇಲ್ಲವೇ ಇಲ್ಲ ಭಯ,
ಅದ ಸರಿಸುವ ನೆಪದಲಿ ನಿನ್ನ ಮೊಗವ ಸೋಕುವ ತುಂಟ ಬೆರಳುಗಳಿಗೆ ಸಿಕ್ಕ ಆ ಸೌಭಾಗ್ಯದ...
ನೂರರಲ್ಲಿ ಒಂದು ಪಾಲು ಎಂದಾದರೊಮ್ಮೆ ನೀ ನನಗೂ ನೀಡಲಾರೆಯ?
ಹೇಳು..ಈ ಮೌನ ಸರಿಯ?//

08 April 2010

ಮಾತು ಮರೆತು ಹೋದ ಮೇಲೆ...

ಹತ್ತಿಗಿಂತ ಹಗೂರ,
ಒಲವಲಿ ತೇಲೋ ಮನಸು/
ಕಾರಣವೆ ಇಲ್ಲದ ನಿನ್ನ ಮುನಿಸಿಗೆ...ಹೆದರಿ ಹನಿದ ಕಣ್ಣೀರಲಿ,
ನೆನೆದು ಬಲು ಭಾರವಾಯ್ತು//



ಗಾಜಿಗಿಂತ ನಾಜೂಕು ಕನಸು,
ನಿನ್ನ ನೆನಪಿನ ಹಚ್ಚೆಯ ಚಿತ್ತಾರ ಹೊತ್ತ ಚಿಟ್ಟೆ/
ಮೆಲುವಾಗಿ ರೆಕ್ಕೆ ಆಡಿಸಿದ ಭರಕ್ಕೆ,
ಕನಸೆಲ್ಲ ಒಡೆದು ಚೂರಾಯ್ತು//