21 October 2011

ವಲಿ....(ಭಾಗ-5)

ಮಹಮದನ ನೂತನ ಧರ್ಮದ ವಿರುದ್ಧ ನಡೆದ ಅನೇಕ ಆರಂಭಿಕ ದ್ವೇಶಪೂರಿತ ಹೋರಾಟಗಳು ಇತಿಹಾಸಕಾರರಿಂದ ದಾಖಲಿಸಲ್ಪಟ್ಟಿವೆ.ಅವುಗಳಲ್ಲಿ ಪ್ರಸಿದ್ಧಿ ಪಡೆದ ಕಥೆಯೊಂದು ಹೀಗಿದೆ....'ಮುಸಬ್ ಇಬ್ನ ಒಮೈರ್' ಎಂಬ ಪ್ರಸಿದ್ಧ ಖುರೈಷಿ ಬುಡಕಟ್ಟಿನ ಯುವವ್ಯಕ್ತಿಯೊಬ್ಬ ಅಲ್ ಅಕ್ರಮನ ಮನೆಯಲ್ಲಿ ನಡೆಯುತ್ತಿದ್ದ ಮಹಮದನ ಮತಭೋದನೆಯಿಂದ ಪ್ರಭಾವಿತನಾಗಿ ಅವನ ಧರ್ಮಕ್ಕೆ ಮತಾಂತರಗೊಂಡ.ಅವನ ಈ ಉದ್ಧಟ ನಡುವಳಿಕೆಯಿಂದ ಕುಪಿತಗೊಂಡ ಅವನ ಹತ್ತಿರದ ಸಂಬಂಧಿಕರು ಅವನ ವಿರುದ್ಧ ಬಹಿಷ್ಕಾರ ಹಾಕಿದರು,ಅದರಲ್ಲೂ ಈ ಬಗ್ಗೆ ವಿಪರೀತ ನೊಂದುಕೊಂಡ ಆತನ ತಾಯಿ ತನ್ನ ನಿಲುವಿಗೆ ವಿರುದ್ಧವಾಗಿ ಮಗ ಮತಾಂತರಗೊಂಡದ್ದರಿಂದ ಮಗ ಹಾಗೂ ಮಹಮದನ ಮೇಲೆ ಕೆರಳಿ ಕೆಂಡವಾದಳು.ಅವಳ ಈ ಕೋಪ ಮಗನನ್ನು ಗೃಹಬಂಧನದಲ್ಲಿರುವ ಮೂಲಕ ಪರ್ಯಾವಸನಗೊಂಡಿತು.ಆದ್ರೆ ಆತ ಅದು ಹೇಗೊ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಅಬಿಸೀನಿಯಕ್ಕೆ ಓಡಿಹೋದ.ಅಲ್ಲಿಂದ ಕೆಲಕಾಲದ ಬಳಿಕ ಆತ ಮೆಕ್ಕಾಗೆ ಹಿಂದಿರುಗಿದಾಗ ಆತನ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ತೀರಾ ಶೋಚನೀಯವಾಗಿತ್ತು.ಆದರೆ ಮಗನ ಬಗ್ಗೆ ಕಠಿಣ ನಿಲುವು ತೆಳೆದಿದ್ದ ತಾಯಿ ಆತನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ,ಹೀಗಾಗಿ ವಿಧಿಯಿಲ್ಲದೆ ಆತ ಕ್ಯಾರವಾನ್ ಒಂದರ ಹಿಂದೆ ಅಲೆಮಾರಿಯಾಗಿ ಎತ್ತಲೊ ಹೋಗಬೇಕಾಯಿತು.ಇದಾಗಿ ಎರಡುವರ್ಷಗಳ ನಂತರ ಆತ ಮರಳಿ ಮೆಕ್ಕಾಕ್ಕೆ ಬಂದ.ಆಗಲೂ ಅವನ ಪರಿಸ್ಥಿತಿ ಹೆಚ್ಚು ಸುಧಾರಿಸಿರಲಿಲ್ಲ.ಈ ಸಾರಿ ಆತನ ಕಡೆಗೆ ಕೊಂಚ ಮೃದುವಾಗಿದ್ದ ಆತನ ತಾಯಿ ಹಳೆಯ ಮಮತೆಯಿಂದ "ಈಗಲೂ ನೀನು ಸ್ವ-ಮತ ಭ್ರಷ್ಟನಾಗಿದ್ದೀಯ?" ಎಂದು ಪ್ರಶ್ನಿಸಿದಳು.ಆತ "ನಾನು ಸತ್ಯಧರ್ಮವಾದ ಇಸ್ಲಾಮನ್ನು ಹಾಗೂ ಪ್ರವಾದಿಯನ್ನು ಹಿಂಬಾಲಿಸುತ್ತಿದ್ದೇನೆ!" ಎಂದು ಉತ್ತರಿಸಿದ."ಬಾಳಿನ ಉದ್ದಕ್ಕೂ ಹೀಗೆಯೆ ಶೋಚನೀಯ ಸ್ಥಿತಿಯಲ್ಲೆ ಕಾಲ ಹಾಕಬೇಕೆನ್ನುವುದೆ ನಿನ್ನ ಅಂತಿಮ ನಿರ್ಧಾರವ?" ಎಂದಾಕೆ ಮರಳಿ ಪ್ರಶ್ನಿಸಿದಳು.ತನ್ನನ್ನು ಈಕೆ ಮತ್ತೆ ಗೃಹ ಬಂಧನಕ್ಕೆ ಒಳಪಡಿಸಬಹುದು ಎಂಬ ಆತಂಕಕ್ಕೆ ಒಳಗಾದ ಆತ "ಏನು ಒಬ್ಬ ಶ್ರದ್ಧಾವಂತ ಮುಸ್ಲೀಮನನ್ನು ಧರ್ಮ ತ್ಯಜಿಸಲು ನೀನು ಆಮಿಷ ಒಡ್ಡುತ್ತಿದ್ದೀಯ! ಹಾಗೊಂದು ವೇಳೆ ನನ್ನನ್ನು ಇಚ್ಛೆಗೆ ವಿರುದ್ಧವಾಗಿ ಬಂಧನಕ್ಕೆ ಒಳಪಡಿಸಿದೆಯಾದಲ್ಲಿ ನಾನು ನಿನ್ನನ್ನು ಕೊಲ್ಲಲೂ ಹೇಸುವುದಿಲ್ಲ?!" ಎಂದು ಆವೇಶದಿಂದ ಕೂಗಿದ.ತಾಯಿಯೂ ಕನಲಿ "ತೊಲಗು! ಹಾಗಿದ್ದಲ್ಲಿ ಕ್ಷಣ ಮಾತ್ರವೂ ನನ್ನೆದುರು ನಿಲ್ಲಬೇಡ!!" ಎಂದು ಕೂಗಿದಳು.ಆತ ದುಃಖತಪ್ತನಾಗಿ " ಅಮ್ಮಾ,ನಿನಗೆ ಕರುಣಾಮೃತವಾದ ಉಪದೇಶ ನೀಡುತ್ತೇನೆ ಕೇಳು.ದೇವರೊಬ್ಬನೇ ಮಹಮದ್ ಆತನ ಸೇವಕ ಹಾಗೂ ಪ್ರವಾದಿ ಎನ್ನುವುದನ್ನ ನುಡಿದು ನರಕದಿಂದ ಪಾರಾಗು" ಎಂದು ನುಡಿದಾಗ ಆಕೆಗೆ ಕೋಪ ಕಟ್ಟೆಯೊಡೆದು " ನಿನ್ನ ಸೈತಾನಧರ್ಮಕ್ಕೆ ಸೇರುವ ಬೆಪ್ಪಳಾಗಲಾರೆ! ತೊಲಗು ಇಲ್ಲಿಂದ, ಇಂದಿಗೆ ನೀ ನನ್ನ ಪಾಲಿಗೆ ಸತ್ತೆ" ಎಂದು ಚೀರಿದಳು.


ಮಹಮದ್ ಆರಂಭದಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದ ಸಮಾಜದ ಕೆಳವರ್ಗದ ಮಂದಿಯನ್ನ ತನ್ನ ಪ್ರಭಾವಲಯದೊಳಗೆ ಮೆಕ್ಕಾದ ಸುತ್ತಮುತ್ತ ಸೆಳೆದುಕೊಳ್ಳುವ ಪ್ರಯತ್ನಮಾಡಿದ.ಅನಂತರ ಖುರೈಶಿಗಳಲ್ಲಿ ಪ್ರತಿಷ್ಠಿತವಾದವರತ್ತ ತನ್ನ ಮೋಹಜಾಲ ಬೀಸಲು ಆರಂಭಿಸಿದ.ಹೀಗೊಮ್ಮೆ ಖುರೈಶಿಗಳಲ್ಲೇ ಉನ್ನತ ವರ್ಗದವನಾಗಿದ್ದ ಅಲ್ ವಾಲಿಬನೊಡನೆ ಧಾರ್ಮಿಕ ಚರ್ಚೆಯಲ್ಲಿ ತೊಡಗಿಕೊಂಡಿದ್ದಾಗ ಅಬ್ದುಲ್ಲಾ ಇಬ್ನ ಉಮ್ಜ್ ಮಕ್ತೂಮ್ ಎಂಬ ಅಂಧ ವ್ಯಕ್ತಿಯೊಬ್ಬ ನಡುವೆ ಬಾಯಿಹಾಕಿ ತನಗೂ ಖುರಾನನ್ನು ತಿಳಿಹೇಳಬೇಕೆಂದು ಕೋರಿದ.ಆದರೆ ಆ ಕ್ಷಣ ಕೋಪಕ್ಕೆ ತುತ್ತಾದ ಮಹಮದ್ ಅವನ್ನು ಕಡೆಗಣಿಸಿ ಗಡುಸಾಗಿ ಮಾರುತ್ತರವನ್ನಿತ್ತ.ಆದರೆ ಕೆಲಹೊತ್ತಿನ ನಂತರ ತನ್ನ ಈ ಹೀನ ನಡುವಳಿಕೆಗೆ ಸ್ವತಃ ನಾಚಿಕೆಪಟ್ಟುಕೊಂಡು 'ಯಾವ ದೇವರು ಒಬ್ಬ ಕುರುಡನನ್ನು ಸೃಷ್ಠಿಸಿದ್ದಾನೊ ಅವನನ್ನು ನಾನು ಕಡೆಗಣಿಸಿದ್ದು ತಪ್ಪು,ತೋರಿಕೆಯ ಸಿರಿವಂತನ ಎದುರು ಅವನನ್ನು ಅನಾದರಿಸಬಾರದಿತ್ತು ಎಂದು ಗೋಳಾಡಿದಾಗ ಸಂತೈಸುವ ದೈವವಾಣಿ ಅವನಿಂದಲೆ ಹೊರಬಂತು.ಹಾಗೆ ಹೊರ ಹೊಮ್ಮಿದ್ದೆ ಸುರಾ 80/1-11 ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.ಈ ಘಟನೆಯ ಮುಖಾಂತರ ದೀನ ದಲಿತರ ಬಗ್ಗೆ ಉದಾತ್ತ ಭಾವನೆಯೊಂದು ಮಹಮದನ ಹೃದಯವನ್ನು ಹೊಕ್ಕು ಪ್ರಕಾಶಿಸಿತು ಎನ್ನಬಹುದು.

ಇದೆ ಸಮಯದಲ್ಲಿ ಆತನ ಮತಪ್ರಚಾರದ ದಿಕ್ಕು ಅರಬೇತರರಾದ ಗ್ರೀಕ್ ಸಮುದಾಯಕ್ಕೆ ಸೇರಿದ ಕ್ರೈಸ್ತರ ಕಡೆಗೆ ತಿರುಗಿತು.ಗುಲಾಮನಾಗಿ ಅರಬ್ಬಿ ಬೆದಾವಿನ್ ಬುಡಕಟ್ಟಿಗೆ ಮಾರಲ್ಪಟ್ಟಿದ್ದ ಸಿನಾನನ ಮಗ ಸಾಹೇಬ್ ಎಂಬ ಗ್ರೀಕನೊಬ್ಬ ಈ ಹೊತ್ತಿಗೆ ಇಸ್ಲಾಂ ಸ್ವೀಕರಿಸಿದ.ಮೆಕ್ಕಾದ ಪ್ರಮುಖ ವ್ಯಕ್ತಿಯಾಗಿದ್ದ ಇಬ್ನ ಜುಡಾನನ ಗುಲಾಮನಾಗಿದ್ದ ಅಪ್ಪಟ ಬಿಳಿಯ ಜನಾಂಗದ ಇವನಿಂದ ಕ್ರೈಸ್ತಧರ್ಮದ ಹಲವು ಒಳಮರ್ಮಗಳನ್ನು ಮಹಮದ್ ಅರಿತು ಬಳಸಿಕೊಳ್ಳಲು ಸಾಧ್ಯವಾಯಿತು,ಅದನ್ನೆ ಸುರಾ 4/164-183ರಲ್ಲಿ ಕಾಣಬಹುದು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.ಕುರಾನಿನಲ್ಲಿ ಒಟ್ಟು ಇಪ್ಪತೈದು ಪ್ರವಾದಿಗಳ ಹೆಸರು ಪ್ರಸ್ತಾಪವಾಗಿದೆ.ಅವರಲ್ಲಿ ಮಹಮದ್,ನೂರ್.ಇಬ್ರಾಹಿಮ್,ಜೀಸಸ್ ಹಾಗೂ ಮೂಸಾ ಈ ಐವರಿಗೆ ಪ್ರಬಲ ಆತ್ಮಸ್ಥೈರ್ಯವಿರುತ್ತದೆ ಎನ್ನಲಾಗಿದೆ.

ದಿನಕಳೆದಂತೆ ಹೊಸತಾಗಿ ಮತಾಂತರಿತವಾಗಿದ್ದ ದೀನ,ದಲಿತ ಹಾಗೂ ಗುಲಾಮರ ಮೇಲೆ ಧರ್ಮನಿಷ್ಠ ಖುರೈಷಿಗಳ ಕೆಂಗಣ್ಣು ಬಿಟ್ಟು.ಅವರನ್ನು ಹಿಡಿದು ದೈಹಿಕವಾಗಿ ಹಿಂಸಿಸುವುದು,ಸೆರೆಮನೆಗೆ ತಳ್ಳುವುದು,ಹನಿನೀರನ್ನೂ ಕೊಡದೆ ಸುಡುಬಿಸಿಲಿನಲ್ಲಿ ನಿಲ್ಲಿಸಿ ವಿಧಿಯಿಲ್ಲದೆ ಮರಳಿ ಮಾತೃಧರ್ಮಕ್ಕೆ ಬರುವಂತೆ ಮಾಡುವುದು ಹೀಗೆ ಅನೇಕ ಕುಟಿಲೋಪಾಯಗಳನ್ನು ಅವರು ಹೂಡತೊಡಗಿದರು.ಈ ಬಗೆಯ ಹಿಂಸೆ ಅನುಭವಿಸಿದವರಲ್ಲಿ ಒಬ್ಬನಾಗಿದ್ದ ಬಿಲಾಲ್ ಎಂಬ ಗುಲಾಮ ಮಾತ್ರ ಸುತಾರಾಂ ಅದಕ್ಕೆ ಒಪ್ಪದೆ 'ಅಹಾದ್ ಅಹಾದ್' ಅಂದರೆ ಅರಬ್ಬಿಯಲ್ಲಿ 'ದೇವರೊಬ್ಬನೆ...ಒಬ್ಬನೇ ದೇವರು' ಎಂದು ಕಷ್ಟದಲ್ಲಿದ್ದರೂ ಜಪಿಸಹತ್ತಿದ.ಅವನ ಬಾಯಿಯಿಂದ ಹೊರಬರುತ್ತಿದ್ದ ಈ ಶಬ್ದಗಳನ್ನು ಆಲಿಸಿದ ಅದೆ ದಾರಿಯಲ್ಲಿ ಸಾಗುತ್ತಿದ್ದ ಅಬು ಬಕರ್ ಈ ಶೋಷಣೆಗೆ ಮನನೊಂದು ಕರುಣೆಯಿಂದ ಅವನ ಒತ್ತೆಹಣ ಪಾವತಿಸಿ ಅವನನ್ನು ಗುಲಾಮಗಿರಿಯಿಂದ ಬಿಡಿಸಿದ.

ಇತ್ತ ಮಹಮದನ ಮತಾನುಯಾಯಿಗಳ ಪರಿಸ್ಥಿತಿ ಹೀಗೆ ಹದಗೆಡುತ್ತಿದ್ದರೆ ಅತ್ತ ಮಹಮದ್ ಮಾತ್ರ ಕ್ಷೇಮದಿಂದಿದ್ದ.ಅವನ ದೊಡ್ಡಪ್ಪ ಅಬು ತಾಲಿಬನ ರಕ್ಷಣೆಯಲ್ಲಿ ಅವನನ್ನು ಮುಟ್ಟುವ ಧೈರ್ಯ ಯಾವ ಖುರೈಶಿಗಳಿಗೂ ಹುಟ್ಟಿರಲಿಲ್ಲ.ಅಬು ತಾಲಿಬ್ ವಯಕ್ತಿಕವಾಗಿ ಇಸ್ಲಾಮಿಗೆ ಮತಾಂತರಿತನಾಗಿರದಿದ್ದರೂ ಮಹಮದನ ಪ್ರಭಾವಕ್ಕೆ ಒಳಗಾಗಿದ್ದಂತೂ ಸತ್ಯ.ಅಲ್ಲದೆ ಅನಾಥನಾಗಿದ್ದ ಮಹಮದನ ಮೇಲೆ ಆತನಿಗೆ ಪ್ರೀತಿ ವಾತ್ಸಲ್ಯ ಅಪಾರವಾಗಿದ್ದ ಕಾರಣ ಆತನ ರಕ್ಷಣೆ ತನ್ನ ಹೊಣೆಗಾರಿಕೆ ಎಂಬಂತೆ ಆತ ವರ್ತಿಸುತ್ತಿದ್ದ.ಅದೆ ರೀತಿ ಪ್ರತಿಷ್ಠಿತ ಖುರೈಶಿವರ್ಗಗಳ ಭರ್ತ್ಸನೆಗಳಿಂದ ಅಬು ಬಕರ್ ಮಹಮದನನ್ನು ಪಾರುಮಾಡುತ್ತಿದ್ದ.ಒಂದು ಕುಟುಂಬ ಮತಾಂತರಿತವಾದರೆ ಇಷ್ಟವೋ-ನಷ್ಟವೋ ಅವರ ಸಂಬಂಧಿ ಕುಟುಂಬಸ್ತರು ಒಲ್ಲದ ಮನಸ್ಸಿನಿಂದಲಾದರೂ ನೆರವು ಸಹಕಾರಗಳನ್ನು ಜಾರಿಯಲ್ಲಿ ಇಟ್ಟುಕೊಂಡೆ ಇರುತ್ತಿದ್ದರು.ಆದರೆ ಒಂದಿಡಿ ಬುಡಕಟ್ಟಿಗೆ ಬುಡಕಟ್ಟೆ ಮತಾಂತರವಾದರೆ ಮಾತ್ರ ಅದರ ವಿರೋಧಿ ಬುಡಕಟ್ಟಿನವರಿಂದ ಹಲ್ಲೆಗೆ ಒಳಗಾಗುವ ಸಂದರ್ಭಗಳೆ ಹೆಚ್ಚಾಗಿದ್ದವು.ಹೀಗಾಗಿ ಸ್ವತಃ ತಾನು ಸುರಕ್ಷಿತನಾಗಿದ್ದರೂ ತನ್ನನ್ನು ನಂಬಿ ಬಂದವರ ಸುರಕ್ಷತೆಯ ಬಗ್ಗೆ ಸಹಜವಾಗಿ ಮಹಮದ್ ಆತಂಕಿತನಾಗಿದ್ದ.ಹೀಗಾಗಿ ಅವರಲ್ಲಿ ಆನೇಕರಿಗೆ ಸುರಕ್ಷತೆಯ ದೃಷ್ಟಿಯಿಂದ ಪ್ರಾಣವುಳಿಸಿಕೊಳ್ಳಲು ಅಬಿಸೀನಿಯಾಕ್ಕೆ ವಲಸೆ ಹೋಗುವ ಸಲಹೆ ನೀಡಿದ.ಆಗಿನ ಕಾಲದ ಅಬಿಸೀನಿಯದಲ್ಲಿ ಧಾರ್ಮಿಕ ಸಹಿಷ್ಣುತೆ ನೆಲೆಸಿದ್ದುದೆ ಅದಕ್ಕೆ ಕಾರಣ.ಅಲ್ಲದೆ ಅಲ್ಲಿಗೆ ವಲಸೆ ಹೋಗುವುದು ಸಾಮಾನು ಸರಂಜಾಮುಗಳ ಸಾಗಣೆಯ ದೃಷ್ಟಿಯಿಂದ ಸುಲಭದ್ದಾಗಿತ್ತು.ಹೀಗೆ ಆತನ ಆದೇಶದಂತೆ ಆರಂಭದಲ್ಲಿ ಮಹಮದನ ಸ್ವಂತ ಪುತ್ರಿ ರೋಕೈಯಾ ಹಾಗೂ ಆಕೆಯ ಪತಿ ಒತ್ಥಮಾನನೂ ಸೇರಿದಂತೆ ಹನ್ನೊಂದು ಮಂದಿ ವಲಸೆಹೋದರು.ಇದೆ ಮೊತ್ತ ಮೊದಲ 'ಹಿಜ್ರಾ' ಎಂದು ಕರೆಯಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ.

ಈ ವಲಸೆ ಆರಂಭವಾದ ಮೊದಲ ನಾಲ್ಕು ವರ್ಷಗಳಲ್ಲಿ ಮಹಮದನಿಗೆ ಕುರಾನ್ ಸಂದೇಶಗಳು ಸುಮಾರು ಇಪ್ಪತ್ತು ಸುರಾಗಳ ಮೂಲಕ ಹೊರಬಂದವು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.ಈ ಎಲ್ಲಾ ಸುರಾಗಳಲ್ಲಿ ಮಹಮದ್ 'ಸ್ವರ್ಗ-ನರಕಗಳ ಸ್ಥಿತಿಗತಿಗಳು,ಪುನರುತ್ಥಾನ (ಇಸ್ಲಾಮಿನಲ್ಲಿ ಪುನರ್ ಜನ್ಮದ ಕಲ್ಪನೆ ಇಲ್ಲ ಅನ್ನುವುದನ್ನು ಗಮನಿಸಿ),ಅಂತಿಮ ತೀರ್ಪಿನ ದಿನ,ಧರ್ಮಬದ್ಧರು-ನೀಚರು,ಯಕ್ಷ-ಬೇತಾಳ-ಪಿಶಾಚಿಗಳು ಮಹಮದನ ಉದ್ದೇಶಕ್ಕೆ ಅನುಗುಣವಾಗಿ ಚಾಕಚಾಕ್ಯತೆಯಿಂದ ನುಡಿಯುವ ಚಿತ್ರಣದ ವಿವರಣೆ ತುಂಬಿದೆಅನ್ನುತ್ತಾನೆ' ಇತಿಹಾಸಕಾರ ಮ್ಯೂರ್.

(ಇನ್ನೂ ಇದೆ...)

20 October 2011

ಕಡೆಯದೊಂದು ನಿರೀಕ್ಷೆಯ ಹನಿಯಿದೆ....

ಚಿತ್ತ ಕದಡುವ ಮಾತೇಕೆ? ಅದ ಬಿಡು
ಮೌನದ ನಾವೆಯಲ್ಲೆ ಇನ್ನೊಂದು ಸುತ್ತು....
ಸುಮ್ಮನೆ ಸಾಗೋಣ,
ನೀ ನನ್ನ ಹೀಗೆ ನೋಡುತ್ತಿರು....
ನನ್ನ ಕಣ್ಣ ಕನ್ನಡಿಯಲ್ಲಿ ಎಂದಿಗೂ ನೀನೆ ಕಾಣುತ್ತಿರು,
ಮತ್ತೆ ಒಂದಾಗಿ ದೂರ ಸರಿಯೋಣ ಬಾ....!/
ಎದೆಯ ಅಂಗಳದಲ್ಲಿ ಬಿಡಿಸಿದ ಚಿತ್ತಾರಗಳೆಲ್ಲ
ನಿನ್ನೊಂದು ನುಡಿಗೆ ಕದಡಿಹೋದಾಗ....
ನಾನು ನಿಜವಾಗಿಯೂ ಬಾಳಲ್ಲಿ ಸೋತೆ,
ಇನ್ನುಳಿದುದಿರಲಿ ಕನಿಷ್ಠ ನಿನ್ನೊಲವನ್ನೂ ಗಟ್ಟಿ ಮಾಡಿಕೊಳ್ಳುವ ಯೋಗ್ಯತೆಯಿಲ್ಲದೆ
ತಿರುಕನಂತೆ ಕಂಡಿದ್ದ ಕನಸುಗಳನ್ನೆಲ್ಲ ನೋವಿನ ಜೊತೆ ಗತದ ಗೋರಿಯಲ್ಲಿ ನಗುತಲೆ ಹೂತೆ....!//


ಮೌನವ ತೋಯಿಸುವ ನೆನಪುಗಳ ಸಿಂಚನಕ್ಕೆ
ಒಡ್ಡಿಕೊಂಡ ಮನದ ಮಾಡಿನಿಂದ ....
ಎದೆಯಂಗಳಕ್ಕೆ ಇಳಿಯುತ್ತಿರುವ ಪ್ರತಿ ಹನಿಯಲ್ಲೂ,
ಆಳದಲ್ಲಿ ನಿನ್ನದೇ ಪಿಸುದನಿಯಿದೆ/
ಅದೇನೆ ಮರೆತೆನೆಂದು ಕಳ್ಳ ಸಮಾಧಾನ ನನಗೆ ನಾನೆ ಹೇಳಿಕೊಂಡರೂ...
ನಿನ್ನೊಲವ ಮಳೆ ನಿಂತಿದ್ದರೂನು,
ಅದೆಲ್ಲೊ ಕಣ್ಣಿನಾಳದಲ್ಲಿ ಕನಸ ಸೂರಿನಿಂದ ತೊಟ್ಟಿಕ್ಕುತ್ತಿರುವ
ಕಡೆಯದೊಂದು ನಿರೀಕ್ಷೆಯ ಹನಿಯಿದೆ//


ಸತ್ತ ಭಾವಗಳ ಗೋರಿ ಕಾಯುತ
ಅವ್ಯಕ್ತ ವಾಂಛೆಗಳ ಬಚ್ಚಿಟ್ಟುಕೊಂಡ....
ನನ್ನ ನಿರ್ಜೀವ ಕಂಗಳಲ್ಲಿ ನೀನೊಂದು ಹೊಳಪು ಮಾತ್ರ,
ನಾ ಬಯಸಿದರೂ ಅಳಿಸಿ ಹಾಕಲಾಗದ ನಮ್ಮಿಬ್ಬರ ಗತದ ನೆನಪುಗಳಲ್ಲಿ
ಹುದುಗಿರುವ ನೀನು ಈ ಬಾಳಲ್ಲಿ ಅಚ್ಚಳಿಯದ ಒಂದು ಪಾತ್ರ/
ನಿರೀಕ್ಷೆ ಸತ್ತ ಖಾಲಿ ಕನಸಿನ ಹಾದಿಯಲ್ಲಿ....
ನೀನಿಲ್ಲದೆ ನನ್ನದು ಕುರುಡು ಪಯಣ,
ನೋವಂತೂ ವಿವರಿಸಲಾಗದಷ್ಟು ಭೀಕರ
ಒಡೆದಿದೆ ಹೃದಯದಲ್ಲಿ ನೀ ಮೊಳಕೆಯೊಡೆಸಿದ್ದ....
ಒಂಟಿತನ ಮಾಗಿಸಿರುವ ನೋವಿನ ವೃಣ//


ಕನಸುಗಳ ಸಾಲ ನೀ ಕೊಟ್ಟಿದ್ದೆ
ಅದರ ಬಡ್ಡಿಯನ್ನೂ ಕಟ್ಟಲಾಗದೆ....
ನಾನಾದೆ ವಿಫಲ ಸಾಲಗಾರ,
ಮೌನದ ಹೆಣ ಕಾಯುವ ವೀರಬಾಹುವಿನ ನೌಕರಿ ಸಾಕು ಸಾಕಾಗಿದೆ....
ಬೇಕಿದೆ ಇನ್ನಷ್ಟು ನಿನ್ನ ಪ್ರೀತಿಯ ಪಗಾರ/
ಕನಸ ಕೊಲೆಯಾದ ನಂತರವೂ
ಮನಸು ಅರಳೋದು ತಾನೆ ಹೇಗೆ?,
ನಿರಂತರ ನಿರೀಕ್ಷೆಗಳ ಸುಡುತ್ತಿರುವಾಗ ಬಾಳಿನುದ್ದ
ನೀನಿಲ್ಲದ ವಿರಹದ ಬೇಗೆ//

19 October 2011

ವಲಿ....(ಭಾಗ-4)

ಈ ಧಾರ್ಮಿಕ ಗುಪ್ತಸಂಘದ ಸದಸ್ಯರು ತಾವು ಕೇವಲ ಧಾರ್ಮಿಕ ಕಾರಣಗಳಿಂದ ಮಾತ್ರ ಹೀಗೆ ಮತಾಂತರಿತಗೊಂಡಿದ್ದೇವೆ ಎಂದು ಬಿಂಬಿಸುತ್ತಿದ್ದರೂ ಗುಲಾಮಗಿರಿಯೆಂಬ ನರಕದಿಂದ ಪಾರಾಗುವುದೆ ಬಹುತೇಕರ ಒಳ ಉದ್ದೇಶವಾಗಿತ್ತು.ಅಲ್ಲದೆ ಇಸ್ಲಾಮಿನಲ್ಲಿ ಪಾಪ-ಪುಣ್ಯಗಳಿಗೆ ಅತಿ ಹೆಚ್ಚಿನ ಮಹತ್ವವನ್ನು ನೀಡಿ,ಪುಣ್ಯವಂತರು ಸ್ವರ್ಗವಾಸಿಗಳಾಗುತ್ತಾರೆ ಹಾಗೂ ಪಾಪಿಗಳು ನರಕದ ಉರಿಜ್ವಾಲೆಯಲ್ಲಿ ಬೆಂದುಹೋಗುತ್ತಾರೆ ಎಂದು ನಂಬಿಕೆ ಹುಟ್ಟಿಸಿದ್ದು ಕೂಡ ಅತಿಹೆಚ್ಚಿನ ಸಂಖ್ಯೆಯ ಧರ್ಮಬೀರುಗಳು ಮತಾಂತರವಾಗಿ ನರಕದ ಜ್ವಾಲೆಯಿಂದ ಪಾರಾಗಲು ಮಾಡಿದ್ದ ಲೌಕಿಕ ಪ್ರಯತ್ನವೆ ಅನ್ನುವುದು ಇತಿಹಾಸಗಾರ ಮಾರ್ಗೊಲಿಯತ್ತನ್ನ ಅನಿಸಿಕೆ.ಮಹಮದ್ ತನ್ನ ನೂತನ ಧರ್ಮಾನುಯಾಯಿಗಳಿಗೆ 'ಸಲಾಂ ಆಲೈಕುಂ' ಅಂದರೆ ಅರಬ್ಬಿಯಲ್ಲಿ 'ಶಾಂತಿಯಿರಲಿ ನಿನ್ನ ಮೇಲೆ"ಎಂಬ ಪರಸ್ಪರ ಹಾರೈಕೆಗಳ ವಿನಿಮಯದ ಆಚರಣೆ ಜಾರಿಗೆ ತರಲು ಅದಾಗಲೆ ಅಂತಹ ಹಾರೈಕೆಗಳ ಹಿನ್ನೆಲೆಯಿದ್ದ ಯಹೂದಿ ಹಾಗೂ ಕ್ರೈಸ್ತ ಧರ್ಮಗಳ ಪ್ರಭಾವದ ಕಾರಣದಿಂದಲೆ ಅನ್ನುವುದು ಮಾರ್ಗೊಲಿಯತ್ತನ್ನ ಹೇಳಿಕೆ.

ಮಹಮದನ ಇಸ್ಲಾಮನ್ನು ಅಪ್ಪಿಕೊಂಡವರನ್ನ 'ಮುಸ್ಲಿಂ' ಇಲ್ಲವೆ 'ಹನೀಫಾ'ರೆಂದು ಕರೆಯಲಾಯಿತು.ಹೀಬ್ರೂ ಭಾಷೆಯಲ್ಲಿ 'ಹನೀಫಾ' ಎಂದರೆ 'ಆಷಾಢಭೂತಿ' ಎಂದೂ ಸಿರಿಯಾಕ್ ಭಾಷೆಯಲ್ಲಿ 'ಪಾಷಂಡಿ' ಎಂಬರ್ಥ ಬರುತ್ತದೆ,ಸಿರಿಯಾಕಿನಲ್ಲಿ 'ಮುಸ್ಲಿಂ' ಎಂದರೆ 'ವಿಶ್ವಾಸಘಾತುಕ' ಎಂದರ್ಥ! ಹಾಗೆ ನೋಡಿದರೆ ಇಸ್ಲಾಮಿಗಿಂತಲೂ ಹಿಂದೆಯೆ ಅರೇಬಿಯಾದಲ್ಲಿ ಏಕದೈವಾರಾಧಕರಿದ್ದು ಅವರನ್ನೂ ಸಹ 'ಹನೀಫಾ'ರೆಂದೆ ಕರೆಯಲಾಗುತ್ತಿತ್ತು,ಅನಂತರ ಇಸ್ಲಾಂ ಅನುಯಾಯಿಗಳಿಗೂ ಇದೆ ಹಣೆಪಟ್ಟಿ ಮುಂದುವರೆಯಿತಷ್ಟೆ.ಇದು ಮಹಮದನ ಧರ್ಮವಿರೋಧಿಗಳು ಕುಚೋದ್ಯದಿಂದ ಗೇಲಿಮಾಡಲು ಕೊಟ್ಟಿರಬಹುದಾದ ಹೆಸರಾಗಿರುವ ಸಾಧ್ಯತೆಯೂ ಇದೆ ಎನ್ನುವ ಇತಿಹಾಸಕಾರ ಮೂಯಿರ್ ಹಂಗಿಸುವ ಅರ್ಥದಲ್ಲಿ ಹೀಗೆ ಕರೆಯಲಾಯಿತು ಎಂದಿದ್ದಾನೆ.ಆದರೆ ಮುಂದಿನ ದಿನಗಳಲ್ಲಿ ಮಹಮದ್ ಅದನ್ನೇ ಮುಸಲ್-ಉಲ್-ಇಮಾನ್ ಎಂದು ಉಚ್ಚರಿಸಿ ಹೊಸತೆ ಗೌರವಾರ್ಹವಾದ ಅರ್ಥಕಲ್ಪಿಸುವುದರಲ್ಲಿ ಸಫಲನಾದ.ಒಂದುದಿನ ಧೈರ್ಯ ಮಾಡಿ ಮಹಮದ್ ಕಾಬಾದ ಬಳಿಯೆ ನಿಂತು ಬಹಿರಂಗವಾಗಿ ತನ್ನ ಮತಪ್ರಚಾರವನ್ನು ಆರಂಭಿಸಿದ.ಅಲ್ಲಿ ನೆರೆದ ಜನರ-ಜಂಗುಳಿಯನ್ನು ಉದ್ದೇಶಿಸಿ "ಅಲ್ಲಾ ಒಬ್ಬನೆ ನಿಜವಾದ ದೈವ,ಅವನ ವಿನಃ ಇನ್ಯಾವ ದೈವವಿಲ್ಲ" (ಅಲ್ಲಾ ಹೋ ಅಕ್ಬರ್) ಎಂದು ನಿರಂತರವಾಗಿ ಕೂಗಿಕೂಗಿ ಹೇಳಲು ಆರಂಭಿಸಿದ.ಅವನ ಮಾತಿನಿಂದ ರೊಚ್ಚಿಗೆದ್ದ ಅಲ್ಲಿ ನೆರೆದಿದ್ದ ಬಹುಮಂದಿ ಅವನ ಮೇಲೆ ಹಲ್ಲೆ ನಡೆಸಲು ಶುರುವಿಟ್ಟರು.ಹೀಗೆ ಆತ ಆಪತ್ತಿನಲ್ಲಿ ಸಿಲುಕಿಕೊಂಡಿರುವ ಸಂಗತಿ ಖತೀಜಾ ಕುಟುಂಬಕ್ಕೆ ತಲುಪಿತು.ಆಕೆಯ ಮೊದಲ ಗಂಡ ಅಬು ಹಾಲತ್'ನ ಮಗ ಅಲ್ ಹಾರುಥ್ ತನ್ನ ಮಲತಂದೆಯ ರಕ್ಷಣೆಗಾಗಿ ಕೂಡಲೆ ಧಾವಿಸಿದ.ನಡೆದ ಕಾದಾಟದಲ್ಲಿ ವಿರೋಧಿಗಳು ಅವನನ್ನು ಅಲ್ಲಿಯೆ ಹೊಡೆದುಕೊಂದರು.ಹೀಗಾಗಿ ಅವನು ಇಸ್ಲಾಮಿನ ಪ್ರಪ್ರಥಮ 'ಹುತಾತ್ಮ'ನ ಪಟ್ಟ ಗಳಿಸಿಕೊಂಡ ಅನ್ನುತ್ತಾನೆ ಇತಿಹಾಸಕಾರ ಮಾರ್ಗೊಲಿಯತ್.

"ತಾನು ದೇವದೂತ,ಹೊಸ ಮತವೊಂದರ ಆರಂಭಕ್ಕೆ ದೇವರು ಪ್ರೇರೇಪಿಸಿ ತನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ" ಎಂಬ ಮಹಮದನ ಪ್ರಚಾರವನ್ನ ಕಾಬಾದ ಹುಬಾಬ್ ಸಹಿತ ಇನ್ನುಳಿದ 360 ದೇವರ ಅಚಲ ವಿಶ್ವಾಸಿಗಳಾಗಿದ್ದ ಬಹುತೇಕ ಮೆಕ್ಕಾ ನಿವಾಸಿಗಳು ಬಲವಾಗಿ ವಿರೋಧಿಸಲು ಆರಂಭಿಸಿದರು.ತಮಾಷೆಯೆಂದರೆ ಅವರು ಆರಾಧಿಸುತ್ತಿದ್ದ ಹುಬಾಬ್ ಹೊರತುಪಡಿಸಿದ ಇನ್ನುಳಿದ ಮೂರ್ತಿಗಳಲ್ಲಿ ಅಲ್ಲಾನದ್ದೂ ಒಂದು ಪ್ರತಿಮೆ ಇತ್ತು.ಅದಕ್ಕೂ ನಿತ್ಯ ಪೂಜೆ ಸಲ್ಲುತ್ತಿತ್ತು! ಜನರು ಮಹಮದನಿಗೆ ಜಿನ್ ಅಂದರೆ ದೆವ್ವ ಮೆಟ್ಟಿಕೊಂಡಿದೆ ಎಂದು ತಲೆಗೊಬ್ಬರಂತೆ ಆಡಿಕೊಳ್ಳಲು ಆರಂಭಿಸಿದರು.ಅವರ ಈ ಆಪಾದನೆ ಮಹಮದನನ್ನು ತೀವ್ರವಾಗಿ ಘಾಸಿಗೊಳಿಸಿತು. ಇದರಿಂದ ಅವನು ಬೇಸರಕ್ಕೆ ತುತ್ತಾದ.ಅದನ್ನೆ ಅವನು ಕುರಾನಿನ ಸುರಾಗಳ ಮೂಲಕ (ಸುರಾ 67/24-27) ತೋಡಿಕೊಂಡ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ.ಸುಮಾರು ಹತ್ತುವರ್ಷಗಳವರೆಗೆ ಹೀಗೆಯೆ ವಿರೋಧಿಗಳ ನಡುವೆ ಮೆಕ್ಕಾದಲ್ಲಿಯೆ ಬಾಳಿ ಬದುಕಿದ ಮಹಮದ್ ತನ್ನ ಮತಪ್ರಚಾರ ಯಶಸ್ವಿಯಾಗಿ ಕೈಗೊಳ್ಳಲು ಮಹಮದನ ಪತ್ನಿ ಖತೀಜಳ ಅರ್ಪಣಾ ಭಾವದಿಂದ ಕೂಡಿದ ಭಕ್ತಿ ಹಾಗೂ ಆಕೆಯ ಸಂಪತ್ತಿನ ಪ್ರಭಾವದಿಂದ,ಅಲ್ಲದೆ ದೊಡ್ಡಪ್ಪ ಅಬು ತಾಲಿಬ್'ನ ಪ್ರೀತಿ ಒಲುಮೆ ವಿಶ್ವಾಸ ಹಾಗೂ ಅಬು ಬಾಕರ್'ನ ಪ್ರೇರೇಪಣಾಗುಣದಿಂದ ಹಾಗೂ ಅಂಧ ವಿಶ್ವಾಸಗಳಿಂದ ಮಾತ್ರ ಸಾಧ್ಯವಾಯಿತು ಅನ್ನೋದು ಇತಿಹಾಸಕಾರ ಮ್ಯೂರನ ಅಂಬೋಣ.

ದೊಡ್ಡಪ್ಪ ಅಬುತಾಲೀಬನ ಸಮಯಪ್ರಜ್ಞೆಯಿಂದ ಅನೇಕಬಾರಿ ಖುರೈಷಿಗಳಿಂದ ಒದಗಿಬರಬಹುದಾಗಿದ್ದ ಅತಿ ಹಿಂಸೆ ಅಥವಾ ಪ್ರಾಣಹಾನಿಯಿಂದ ಮಹಮದ್ ತಪ್ಪಿಸಿಕೊಂಡ.ಆದರೆ ಅಪರೂಪವಾಗಿ ಇಸ್ಲಾಮಿಗೆ ಮತಾಂತರವಾದ ಖುರೈಶಿಗಳಲ್ಲಿ ಕೆಲವರು ತಾವು ಅಪ್ಪಿದ ಹೊಸ ಧರ್ಮಕ್ಕಾಗಿ ಸ್ವಂತ ಹೆತ್ತವರ-ಒಡಹುಟ್ಟಿದವರ ವಿರುದ್ಧವೇ ಹೋರಾಡಿದ ನಿದರ್ಶನಗಳೂ ಕಂಡುಬಂದವು.ಧರ್ಮಪ್ರಚಾರದ ಹೊತ್ತಲ್ಲಿ ಪ್ರವಚನ,ಭಾಷಣ ಇಲ್ಲವೆ ಜನರನ್ನು ಉದ್ದೇಶಿಸಿ ಮಾತನಾಡಲು ಉಧ್ಯುಕ್ತನಾಗುತ್ತಿದ್ದ ಸಂದರ್ಭಗಳಲ್ಲಿ ಮಹಮದನ ಕೆನ್ನೆ ಕೆಂಪಗಾಗುತ್ತಿತ್ತು ಮತ್ತು ಧ್ವನಿ ತಾರಕಕ್ಕೆ ಏರುತ್ತಿತ್ತು.ಆ ಕ್ಷಣ ಸ್ವಭಾವ ಉಗ್ರವಾಗುತ್ತಿತ್ತು.ಆತ ಎಷ್ಟು ಪ್ರಬಲ ಭಾಷಣಕಾರನಾಗಿದ್ದನೊ ಅಷ್ಟೆ ಕೆಟ್ಟ ಚರ್ಚಾಪಟುವಾಗಿದ್ದನು.ತನ್ನ ಈ ನ್ಯೂನತೆಯನ್ನು ಬಹಳ ಚೆನ್ನಾಗಿ ಅರಿತಿದ್ದ ಆತ ಅಂತಹ ಪರಿಸ್ಥಿತಿಗಳಲ್ಲಿ ದೈವವಾಣಿಯ ಮೊರೆ ಹೋಗುತ್ತಿದ್ದ.ಅವಿಶ್ವಾಸಿಗಳ ಪ್ರಶ್ನೆಗಳಿಗೆ ತರ್ಕಬದ್ದ ಉತ್ತರ ನೀಡಲಾರದೆ ಅವರು ಅಲ್ಲಿಂದ ನಿರ್ಗಮಿಸುವಂತೆ ಸುರಾದ ಆಜ್ಞೆ ಪಡೆದುಕೊಂಡು ಅದನ್ನ ಪಾಲಿಸಿ ಪಾರಾಗುತ್ತಿದ್ದ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್.

ಮುಂದಿನ ನಾಲ್ಕು ವರ್ಷಗಳಲ್ಲಿ ಕೇವಲ ನಲವತ್ತು ಮಂದಿಯಷ್ಟೆ ಇಸ್ಲಾಮಿಗೆ ಪರವಶವಾದರು.ಮೊದಮೊದಲು ಈ ಬಗ್ಗೆ ಉದಾಸೀನರಾಗಿದ್ದ ಮೆಕ್ಕಾದ ಖುರೈಷಿಗಳು ಕ್ರಮೇಣ ಅದನ್ನ ಅಸಹನೆಗೆ ತಿರುಗಿಸಿಕೊಂಡರು.ಅರೇಬಿಯಾದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಾಬಾದ ಪ್ರಾಮುಖ್ಯತೆ ಮಹಮದನ ಧರ್ಮೊಪದೇಶದಿಂದ ಮುಕ್ಕಾದೀತು ಎಂಬ ಆತಂಕ ಅವರದ್ದಾಗಿತ್ತು.ಹೀಗೆಯೆ ಮುಂದುವರೆಯಲು ಬಿಟ್ಟರೆ ಕಾಬಾದ ಅಸ್ತಿತ್ವಕ್ಕೆ ಖಂಡಿತ ಸಂಚಕಾರ ಬರಲಿದೆ ಎಂಬುದನ್ನು ಅರಿತ ಖುರೈಷಿಗಳು ಹಿಂಸಾತ್ಮಕವಾಗಿ ಮಹಮದನ ಧರ್ಮಪ್ರಚಾರಕ್ಕೆ ಎದಿರೇಟು ಕೊಡಲು ಆರಂಭಿಸಿದರು.ಮತಾಂತರಗೊಂಡ ಒಬ್ಬನ ವಿರುದ್ಧ ಅವರು ದೌರ್ಜನ್ಯ ಎಸಗುತ್ತಿದ್ದಾಗ ಬಿಡಿಸಿಕೊಳ್ಳಲು ಬರುವ ನೆಂಟರೂ ಅವರ ಹಿಂಸೆಗೆ ತುತ್ತಾಗಬೇಕಾಗುತ್ತಿತ್ತು,ಯಾರೊಬ್ಬರ ನೈತಿಕ ಬೆಂಬಲವೂ ಸಿಗದ ಗುಲಾಮರ ಪರಿಸ್ಥಿತಿಯಂತೂ ತೀರಾ ಶೋಚನೀಯವಾಗಿದ್ದಿತು.

ಹೀಗೆ ಶುರುವಾದ ಖುರೈಷಿಗಳ ಹಿಂಸಾ ವಿನೋದದ ವಿರುದ್ಧವಾಗಿ ನೂತನ ಧರ್ಮಾನುಯಾಯಿಗಳು ಆತ್ಮರಕ್ಷಣೆಗೆ ಮುಂದಾದರು.ಅವರೂ ಹಿಂಸಾಚಾರಕ್ಕಿಳಿದರು.ಮಹಮದ್ ಹಾಗೂ ಆತನ ಅನುಯಾಯಿಗಳಿಗೆ ಅದು ಕ್ರಮೇಣ ರೂಢಿಯಾಗಿ ಸಹನೆ,ತಾಳ್ಮೆಗಳನ್ನೆಲ್ಲ ಕಿತ್ತೊಗೆದು ವಿರೋಧಿಗಳ ವಿರುದ್ಧ ನೇರಕಾರ್ಯಾಚರಣೆಗೆ ಅವರಿಳಿಯಲು ಇದರಿಂದ ಮೊದಲಾಯಿತು.ಕ್ರಿಸ್ತಶಕ 613ರ ಸುಮಾರಿಗೆ ಅದೂವರೆಗೂ ಗುಪ್ತವಾಗಿ ಸಾಗುತ್ತಿದ್ದ ಮಹಮದನ ಮತಪ್ರಚಾರ ತೀರ ಬಹಿರಂಗಗೊಂಡಿತು.ಆತ ಖುರೈಷಿಗಳ ವಿಗ್ರಹಾರಾಧನೆಯನ್ನ ಕಟುವಾಗಿ ಖಂಡಿಸಿದ.ಅವರ ಪಿತೃಗಳೂ ವಿಗ್ರಹಾರಾಧಕರಾಗಿ ಆತ್ಮನಾಶಕ್ಕೀಡಾಗಿದ್ದಾರೆ ಎಂದು ಆತ ಹೇಳಿದಾಗ ಖುರೈಷಿಗಳು ಕೆರಳಿ ನಿಂತರು.ಮೆಕ್ಕಾದ ಹೊರವಲಯದಲ್ಲಿ ಮಹಮದನ ಬಂಟ ಸಾದ್ ಬಹಿರಂಗವಾಗಿ ನಮಾಜ್ ಮಾಡುತ್ತಿದ್ದಾಗ ಅದನ್ನು ಕಂಡು ಕೋಪಗೊಂಡ ಖುರೈಷಿಗಳು ಕಲಹಕ್ಕೆ ನಾಂದಿ ಹಾಡಿದರು,ಜಗಳ ರಕ್ತಪಾತಕ್ಕೆ ತಿರುಗಿ ಒಂಟೆಯನ್ನು ಹೊಡೆಯುವ ಮೊನೆಗೋಲಿನಿಂದ ಸಾದ್ ವಿರೋಧಿಯೋಬ್ಬನನ್ನು ಅಲ್ಲಿಯೆ ಹೊಡೆದುಸಾಯಿಸಿದ.ಇತಿಹಾಸಕಾರ ತಮ್ಮಿಮಿಯ ಪ್ರಕಾರ ಇದು 'ಇಸ್ಲಾಮಿಗಾಗಿ ಚಲ್ಲಿದ ಮೊತ್ತ ಮೊದಲನೆಯ ರಕ್ತ'.

ಇದೆ ಸಮಯದಲ್ಲಿ ಪ್ರಾಯಶಃ ಮಹಮದ್ ನೂತನವಾಗಿ ಮತಾಂತರವಾಗಿದ್ದ ಅಕ್ರಂ ಎಂಬಾತನ ಮನೆಯನ್ನ ಆಶ್ರಯಕ್ಕಾಗಿ ಪಡೆದುಕೊಂಡು ಅಲ್ಲಿದ್ದುಕೊಂಡೆ ಮತಪ್ರಚಾರವನ್ನು ಮುಂದುವರೆಸಿದ.ಅದು ಕಾಬಾ ಗುಡಿಯ ಹತ್ತಿರದಲ್ಲೆ ಇದ್ದು ಅಲ್ಲಿಗೆ ಹೋಗಿ ಬರುವ ಯಾತ್ರಿಕರು ಸಾಗುವ ದಾರಿಯಲ್ಲೆ ಇದ್ದುದರಿಂದ ಜನಸಾಂದ್ರತೆ ಸಹಜವಾಗಿ ಹೆಚ್ಚಿದ್ದು ಪ್ರಚಾರಕ್ಕೆ ಹೆಚ್ಚಿನ ಅವಕಾಶಗಳು ಅಲ್ಲಿದ್ದವು.ಮುಂದೆ ಇದೆ 'ಇಸ್ಲಾಮಿನ ಮನೆ' ಎಂಬ ಪಟ್ಟ ಪಡೆಯಿತು.

(ಇನ್ನೂ ಇದೆ....)

ವಲಿ..... (ಭಾಗ-3)

ತನ್ನ ವಯಸ್ಸು ನಲವತ್ತರ ಸಮೀಪ ಮುಟ್ಟುತ್ತಿದ್ದ ಹಾಗೆ ಮಹಮದನ ಒಳಮನಸು ತೀವ್ರವಾಗಿ ಚಡಪಡಿಸಲು ಆರಂಭಿಸಿತ್ತು.ಸ್ವಭಾವತಃ ಅಂತರ್ಮುಖಿಯಾಗಿದ್ದ ಆತ ಈಗ ಹಿಂದಿಗಿಂತಲೂ ಹೆಚ್ಚಾಗಿ ಯೋಚನಾಪರನಾಗಿ ಕಾಲ ಕಳೆಯಹತ್ತಿದ್ದ.ಈ ಪರಿಯ ಆತ್ಮಾವಲೋಕನದ ಸಮಯದಲ್ಲಿ ಆತನಿಗೆ ದೈವತ್ವ ಹಾಗೂ ಧರ್ಮದ ಕುರಿತು ಜಿಜ್ಞಾಸೆ ಒಳಗೊಳಗೆ ಮೂಡಲುಆರಂಭಿಸಿತ್ತು.ಹೀಗೆ ಮುಕ್ಕಾದ ಸುತ್ತಲಿನ ಪರ್ವತದ ಕಣಿವೆಗಳಲ್ಲಿರುವ ಗುಹೆಗಳಲ್ಲಿ ದೀರ್ಘಕಾಲ ಏಕಾಂತದಲ್ಲಿದ್ದು ಚಿಂತಿಸಲು ಆತ ತೊಡಗಿದ.ಹೀರಾ ಪರ್ವತದಲ್ಲಿದ್ದ ಒಂದು ಗುಹೆ ಆತನಿಗೆ ಆಪ್ತವಾದ ಸ್ಥಳವಾಗಿದ್ದಿತು.ಹೀಗೆ ಏಕಾಂತದಲ್ಲಿ ಚಿಂತಿಸುತ್ತಾ ಧ್ಯಾನಾಸಕ್ತನಾಗಿ ಬಹು ಸಮಯವನ್ನ ಅಲ್ಲಿಯೆ ಕಳೆಯಲು ಆರಂಭಿಸಿದ ಕೆಲದಿನಗಳ ನಂತರ ಒಮ್ಮೆ ಅಲ್ಲಿಯೆ ತಿರುಗಾಡುತ್ತಿದ್ದಾಗ ಆಗಸದಿಂದ ಒಬ್ಬ ಯಕ್ಷನ ಗಟ್ಟಿಧ್ವನಿಯೊಂದು ಮಹಮದನಿಗೆ ಕೇಳಿಸಿದಂತಾಗಿ ಆತ ಗಾಬರಿಯಾದ.ತಲೆಯೆತ್ತಿ ನೋಡಿದಾಗ ಅತಿಮಾನುಷ ಯಕ್ಷನ ದರ್ಶನ ಅವನಿಗಾಯಿತು.ಮನೆಗೆ ಹಿಂದಿರುಗಿದ ಆತ ಪತ್ನಿ ಖತೀಜಳಲ್ಲಿ ಈ ವಿಷಯವನ್ನ ಅರಹುತ್ತಾ "ವಿಗ್ರಹಾರಾಧನೆ ಹಾಗು ಭವಿಷ್ಯವಾಣಿ ನುಡಿಯುವುದನ್ನ ನಂಬದಿರುವ ಹಾಗೂ ಅಸಹ್ಯ ಪಡುವ ನಾನೆ ಈಗ ನನಗರಿವಿಲ್ಲದ ಹಾಗೆ ಭವಿಷ್ಯ ನುಡಿವ ಜೋತಿಷಿಯಾಗುತ್ತಿದ್ದಿನೇನೊ!" ಎನ್ನುತ್ತಾ ವಿಹ್ವಲನಾದ. ಆದರೆ ಆತನ ಈ ಮಾತಿಗೆ ಸೊಪ್ಪು ಹಾಕದೆ ಖತೀಜಾ 'ಖಂಡಿತಾ ಇಲ್ಲ! ದೇವರು ನಿನಗೆ ಹಾಗಾಗಲು ಬಿಡನು" ಎಂದು ಸಮಾಧಾನಿಸಿ ಈ ಸಂಗತಿಯನ್ನ ತನ್ನ ಹಿರಿಯ ಸಂಬಂಧಿಕ ವರಾಕನಿಗೆ ತಿಳಿಸುತ್ತಾಳೆ.ಇದನ್ನು ಕೇಳಿ ಹರ್ಷಿತನಾದ ವರಾಕ "ಸಂಶಯವಿಲ್ಲ ಇದೆಲ್ಲ ಒಳ್ಳೆಯದರ ಆರಂಭ! ಆತ ದೇವರ ದಯದಿಂದ ಸತ್ಯವನ್ನಷ್ಟೆ ನುದಿಯುತ್ತಿದ್ದಾನೆ" ಎಂದು ಪ್ರತಿಕ್ರಿಯಿಸಿದ.

ಅಲ್ ವಾಕಿಡಿ,ಇಬ್ನ ಹಿಶಾಮ್ ಹಾಗೂ ಅಲ್ ತಾಬರಿಯಂತಹ ಇತಿಹಾಸಕಾರರು ಮಹಮದ್ ಯಕ್ಷ ಗೇಬ್ರಿಯಲ್'ನಿಂದ ಅಪೌರುಷೇಯವಾದ ದಿವ್ಯಜ್ಞಾನ ಪಡೆದಿದ್ದನ್ನು ದಾಖಲಿಸಿದ್ದಾರೆ.ಇವರನ್ನೆ ಉದಾಹರಿಸುತ್ತ ಇತಿಹಾಸಕಾರ ಸರ್ ವಿಲಿಯಂ ಮೊಯಿರ್ ತಮ್ಮ ಗ್ರಂಥದಲ್ಲಿ ಕೊಡುವ ಸಾರಾಂಶ ಇಷ್ಟು "ಮಹಮದ್ ತನ್ನ ಕುಟುಂಬಸ್ಥರೊಂದಿಗೆ ಒಂದೊಮ್ಮೆ ಹೀರಾಪರ್ವತದ ಗುಹೆಯಲ್ಲಿ ನಿದ್ರಿಸುತ್ತಿದ್ದಾಗ ಅಲ್ಲಿಗೆ ಗೇಬ್ರಿಯಲ್ಲನ ಪ್ರವೇಶವಾಗುತ್ತದೆ.ಅವನ ಕೈಯಲ್ಲಿ ಒಂದು ರೇಷ್ಮೆಯ ತುಂಡಿದ್ದು ಅದರಲ್ಲಿ ಅದೇನೂ ಬರೆದಿರುತ್ತದೆ.ಯಕ್ಷ ಮಹಮದನನ್ನು ಗಟ್ಟಿಯಾಗಿ ಹಿಡಿದುಕೊಂಡು 'ಓದು' ಎಂದು ಆದೇಶಿಸುತ್ತಾನೆ.ಆದರೆ ಅನಕ್ಷರಸ್ಥನಾಗಿದ್ದ ಮಹಮದ್ ಓದಲಾಗದೆ ಯಕ್ಷನ ಬಿಗಿಹಿಡಿತದಿಂದ ವೇದನೆ ಅನುಭವಿಸುತ್ತಾ 'ಏನನ್ನು ಓದಲಿ?' ಎಂದು ಕೇಳಲು...ಗೇಬ್ರಿಯಲ್ ದೇವರ ಹೆಸರಲ್ಲಿ ಓದು ಎಂದಾಗ ಹುಟ್ಟುವುದೆ ಖುರಾನಿನ 96ರಿಂದ 5ರವರೆಗಿನ ಸುರಾಗಳು.ಅವುಗಳನ್ನಾತ ಗಟ್ಟಿಯಾಗಿ ನುಡಿದ ನಂತರ ಯಕ್ಷ ಅಲ್ಲಿಂದ ನಿರ್ಗಮಿಸಿದ ;ಅವಷ್ಟೂ ಸುರಾಗಳೂ ಮಹಮದನ ಹೃದಯದಲ್ಲಿ ಅಚ್ಚು ಹಾಕಿದಂತೆ ಅನುಭವವಾಯಿತು"

ಹೀಗೆ ಕುರಾನಿನ 96ನೆ ಸುರಾದಲ್ಲಿದ್ದ 15 ಪದ್ಯಗಳು ಮಹಮದನಿಗೆ ಮೊದಲು ವ್ಯಕ್ತವಾದದ್ದು ಅಪೌರುಷೇಯವಾಣಿಯೊಂದರಿಂದ.ಹೀಗೆ ಕೆಲತಿಂಗಳುಗಳು ಕಳೆದ ನಂತರ ಯಕ್ಷ ಗೇಬ್ರಿಯಲ್ಲನ ಪುನರಾಗಮನವಾಯಿತು.ಈ ಹಂತದಲ್ಲಿ ಆದ ಮಾನಸಿಕ ತಳಮಳ ಹಾಗು ಆಂತರಿಕ ಹತಾಶೆಯಿಂದ ಮಹಮದ್ ಹತಾಶನಾಗಿಹೋಗಿ ಆತ್ಮಹತ್ಯೆಗೂ ಯೋಚಿಸಿದ್ದ ದಿನಗಳವು! ಆದರೆ ಇದ್ದಕ್ಕಿದಂತೆ ಒಂದು ದಿನ ಆಗಸದಲ್ಲಿ ಸಿಂಹಾಸನದಲ್ಲಿ ಕೂತಿದ್ದ ಗೇಬ್ರಿಯಲ್ಲನ ದರ್ಶನ ಅವನಿಗಾಯಿತು.ಯಕ್ಷ "ಓ ಮಹಮದ್! ನೀನೀಗ ದೇವರ ಪ್ರವಾದಿ ಹಾಗೂ ನಾನು ಯಕ್ಷನಾದ ಗೇಬ್ರಿಯಲ್...ಇದು ಸತ್ಯ!" ಎಂದು ಸಾರಿದ್ದನ್ನು ಮಹಮದ್ ಆಲಿಸಬೇಕಾಯಿತು.ಅವನೊಳಗೆ ಅಡಗಿದ್ದ ಗೊಂದಲಗಳನ್ನೆಲ್ಲಾ ಗೇಬ್ರಿಯಲ್ ಒಂದೊಂದಾಗಿ ಪರಿಹರಿಸಿ ಅವನನ್ನು ಮಾನಸಿಕವಾಗಿ ತಣಿಸಿದ.ಧೃಡಗೊಂಡ ಮನಸ್ಸಿನಿಂದ ಮುಂದಿನ ದಿನಗಳಲ್ಲಿ ಮಹಮದ್ ಮರಳಿ ಮರಳಿ ದೈವವಾಣಿಯ ಸಾರುವಿಕೆಯನ್ನ ಆರಂಭಿಸಿದ್ದು ಹೀಗೆ.ಇದೆ ಮುಂದೆ 'ಖುರಾನ್' ಎಂದು ಪ್ರಸಿದ್ಧವಾದ ಧರ್ಮಗ್ರಂಥವಾಯಿತು.

'ತನಗೆ ದೈವವಾಣಿಯ ಸಾಕ್ಷಾತ್ಕಾರವಾಗಿದೆ,ತಾನಿನ್ನು ಅಲ್ಲಾನ ಪ್ರವಾದಿ' ಎಂದು ಆರಂಭಿಸಿದ ಮಹಮದನ ಮತಪ್ರಚಾರಕ್ಕೆ ಮೊದಲು ಸಮ್ಮತಿಸಿ ಆತನ ಶಿಷ್ಯೆಯಾದವಳು ಸ್ವತಃ ಆತನ ಮಡದಿ ಖತೀಜಾ.ಆಕೆ ಗಂಡನನ್ನು ಪ್ರವಾದಿ ಎಂದು ಒಪ್ಪಿಕೊಂಡ ಮೇಲೆ ನಿಧಾನವಾಗಿ ಸಂಬಂಧಿಕರು,ಸ್ನೇಹಿತರು ಕುಟುಂಬದ ಆತ್ಮೀಯರು ಹೀಗೆ ಒಬ್ಬೊಬ್ಬರಾಗಿ ಆಕೆಯನ್ನು ಹಿಂಬಾಲಿಸಲಾರಂಭಿಸಿದರು.ಕುಟುಂಬದ ಸದಸ್ಯರಲ್ಲಿ ಪ್ರಮುಖವಾಗಿ ಮಹಮದನ ಸಾಕು ಮಗ ಜೈದ್,ದೊಡ್ಡಪ್ಪನ ಮಗ ಆಲಿ,ಪತ್ನಿ ಖತೀಜಾಳ ಬಂಧು ವರಾಕಾ,ಆಪ್ತ ಸ್ನೇಹಿತ ಅಬು ಬಕರ್ ಪ್ರಮುಖರು.ಅಬು ಬಕರ್ ಮಹಮದನಿಗಿಂತ ಕೇವಲ ಎರಡುವರ್ಷಕ್ಕೆ ಕಿರಿಯನಾಗಿದ್ದು ಆತನ ವಿಧೇಯ ಚುರುಕು ಬುದ್ದಿಯ ಆಪ್ತಮಿತ್ರನಾಗಿದ್ದ.ಪ್ರವಾದಿಯೊಂದಿಗೆ ಸಲುಗೆಯ ನಿಕಟ ಬಾಂಧವ್ಯ ಹೊಂದಿದ್ದ ಆತನನ್ನು ಮುಸ್ಲಿಂ ಪ್ರಪಂಚ 'ಅಸ್ ಸಿದ್ಧಿಕಿ' ಎಂದೆ ಗುರುತಿಸುತ್ತದೆ,ಅರಬ್ಬಿಯಲ್ಲಿ ಹಾಗೆಂದರೆ ಸತ್ಯವಂತ ಎಂದರ್ಥ.ವಾಸ್ತವವಾಗಿ ಅವನ ಅಸಲಿ ಹೆಸರು 'ಅಬ್ದುಲ್ಲಾ ಇಬ್ನ ಒತ್ಹಾಮನ್ ಅಬು ಕುಹಾಫಾ' ಎಂದಾಗಿದ್ದರೂ ಒಂಟೆಗಳ ಮೇಲೆ ಅವನಿಗಿದ್ದ ವಿಪರೀತ ಮೋಹ ಹಾಗೂ ಕಾಳಜಿಯ ಕಾರಣದಿಂದ ಆತನಿಗೆ ಅಬು ಬಕರ್ ಎಂಬ ಅಡ್ಡ ಹೆಸರು ಇಡಲಾಗಿತ್ತು ಅನ್ನುತ್ತಾನೆ ಇತಿಹಾಸಗಾರ ಮ್ಯೂರ್.ವ್ಯವಹಾರಸ್ಥನಾಗಿ ಅಪಾರ ಹಣಗಳಿಸಿದ್ದ ಅಬು ಬಕರ್ ತನ್ನ ಹಿತಮಿತ ಹಾಗೂ ಸೌಜನ್ಯಯುತ ಸಂಭಾಷಣೆಗಳಿಂದ ಜನಮನ ಗೆದ್ದಿದ್ದ.ತನ್ನ ನ್ಯಾಯಯುತ ನಡುವಳಿಕೆಗಳಿಂದ ತನ್ನ ಖುರೈಷಿ ಬುಡಕಟ್ಟಿನ ಮುಖಂಡರ ಸ್ನೇಹ ಗೌರವ ಸಂಪಾದಿಸಿದ್ದ.ಒಬ್ಬ ವೀರ ಪೂಜಕನಾಗಿದ್ದ ಆತ ತನ್ನ ಕೊನೆಯ ಉಸಿರಿರುವವರೆಗೂ ತಾನು ನಂಬಿದ ನಾಯಕನನ್ನು ಅತ್ಯಂತ ವಿಧೇಯನಾಗಿ ಆರಾಧಿಸಿದ.ಇಂತಹ ಅಬು ಬಕರ್'ನ ಶ್ರದ್ಧಾಪೂರ್ಣ ನಂಬಿಕೆಗೆ ಪಾತ್ರನಾದದ್ದು ಮತಪ್ರಚಾರದ ದೃಷ್ಟಿಯಿಂದ ಮಹಮದ್ ಸಾಧಿಸಿದ ಮೊತ್ತಮೊದಲ ವಿಜಯವಾಗಿತ್ತು.ಅಬು ಬಕರ್'ನ ಪ್ರಭಾವದಿಂದಲೆ ಮುಂದೆ ಐವರು ಪ್ರಮುಖ ಖುರೈಷಿ ಪ್ರಮುಖರು ನೂತನ ಧರ್ಮಾನುಯಾಯಿಗಳಾಗಳು ಸಾಧ್ಯವಾಯಿತು.ಅವರೆಂದರೆ ತನ್ನ ಹದಿನಾರನೆ ವಯಸ್ಸಿನಲ್ಲಿಯೆ ಹೊಸಧರ್ಮಕ್ಕೆ ಸೇರಿದ ಸಾದ್ ಎಂಬ ಯುವಕ,ಅಲ್ ಗುಬೈರ್ ಎಂಬ ಖತೀಜಾ ಹಾಗೂ ಮಹಮದನ ನಿಕಟ ಸಂಬಂಧಿ,ಮುಂದೆ ಮಹಮದನ ಮಗಳು ರೋಕೈಯಾಳ ಎರಡನೆ ಪತಿಯಾದ 'ಒತ್ಹಮನ್' ಎಂಬ ಯುವಕ ( ಅದಾಗಲೆ ಒತ್ವಾನನ್ನು ವಿವಾಹವಾಗಿದ್ದ ರೋಕೈಯಾ ಮುಂದೆ ಆತನಿಂದ ವಿಚ್ಚೇದಿತೆಯಾಗಿ ಈ ಒತ್ಹಮನ್'ನನ್ನು ಮರುವಿವಾಹವಾದಳು).ತಲ್ಹಾ ಎಂಬ ಅಬು ಬಕರನ ಸಂಬಂಧಿ ಹಾಗೂ ಮಹಾಮದನಿಗಿಂತ ವಯಸ್ಸಿನಲ್ಲಿ ಹತ್ತುವರ್ಷ ಕಿರಿಯನಾಗಿದ್ದ ಅಬ್ದುಲ್ ರೆಹಮಾನ್ ಎಂಬ ಯುವಕ.

ಗುಲಾಮಗಿರಿಯಿಂದ ವಿಮೋಚಿತರಾಗುವ ಆಕರ್ಷಣೆಯಿಂದ ಹಲವಾರು ಗುಲಾಮರು ಮತಾಂತರಗೊಂಡರು.ಆ ಪೈಕಿ ಅಬಿಸೀನಿಯಾ ದೇಶದ ಗುಲಾಮ ಬಿಲಾಲ್ ಪ್ರಮುಖನಾದವ,ಅಬು ಬಾಕರ್ ಆತನನ್ನು ಒತ್ತೆಹಣ ನೀಡಿ ಗುಲಾಮಗಿರಿಯಿಂದ ಬಿಡಿಸಿದ ಮೇಲೆ ಆತನನ್ನು ಸಂತೋಷದಿಂದಲೆ ಮಹಮದ್ ತನ್ನ ಧರ್ಮಕ್ಕೆ ಬರಮಾಡಿಕೊಂಡ.ಇದೆ ಬಿಲಾಲ್ ಮುಂದೆ ಇಸ್ಲಾಮಿಕ್ ಪ್ರಪಂಚದ ಮೊತ್ತಮೊದಲ 'ಮುಯಾಜಿನ್' ಎಂದು ಕರೆಸಿಕೊಂಡ.ಮುಯಾಜಿನ್ ಅಂದರೆ ಅರಬ್ಬಿಯಲ್ಲಿ 'ಪ್ರಾರ್ಥನೆಗೆ ಕರೆನೀಡುವ ವ್ಯಕ್ತಿ' ಎಂದು ಅರ್ಥ ಬರುತ್ತದೆ.ಅಬ್ದುಲ್ಲಾ ಇಬ್ನ ಮಸೂದ್ ಎಂಬ ಇನ್ನೊಬ್ಬ ಮತಾಂತರಿತ ಗುಲಾಮ ಮುಂದೆ ಮಹಮದನ ಆಪ್ತಸೇವಕನಾಗಿ ಪ್ರಸಿದ್ಧಿಗಳಿಸಿದ.ಕಾಬ್ದಾಲ್ ಎಂಬ ಇನ್ನೊಬ್ಬ ಗುಲಾಮನನ್ನೂ ಈ ಪಟ್ಟಿಯಲ್ಲಿ ಹೆಸರಿಸಬಹುದು.ಈ ಬಹುತೇಕ ಮತಾಂತರಿತ ಗುಲಾಮರು ಮೂಲದಲ್ಲಿ ಒಂದೋ ಯಹೂದಿ ಅಥವಾ ಸಿರಿಯನ್ ಕ್ರೈಸ್ತರಾಗಿದ್ದು ತಮ್ಮ ಕೆಟ್ಟ ನಸೀಬಿನಿಂದ ಪಾರಾಗಿ ಗುಲಾಮಗಿರಿಯಿಂದ ಮುಕ್ತರಾಗಲು ಮತಾಂತರವಾದದ್ದು ಸಹಜ ಎನ್ನುತ್ತಾನೆ ಇತಿಹಾಸಕಾರ ಅಲ ಹಾಜ್ ಕಾಸಿಂ ಅಲಿ ಜೈರಾಜಬಿ.

ಹೀಗೆ ಸ್ಥಾಪಿತವಾಗಿದ್ದ ಮಹಮದನ ನೂತನ ಧರ್ಮ ಸಾಮಾಜಿಕ ಭೀತಿಯಿಂದ ಆರಂಭದಲ್ಲಿ ಒಂದು 'ಗುಪ್ತ ಸಂಘ'ವಾಗಿದ್ದಿತು.ಅತ್ಯಂತ ಗೌಪ್ಯವಾಗಿ ಮತಪ್ರಚಾರದ ಕಾರ್ಯಕೈಗೊಳ್ಳಲಾಗುತ್ತಿತ್ತು.ಕ್ರಮೇಣ ಇಸ್ಲಾಂ ಬಲಗೊಂಡಾದ ಮೇಲೆ ಗುಪ್ತ ಪ್ರಚಾರದ ನಿಯಮಗಳನ್ನೆಲ್ಲಾ ಬದಿಗೊತ್ತಿ ಬಹಿರಂಗ ಪ್ರಚಾರಕ್ಕೆ ಹೆಚ್ಚು ಒತ್ತುಕೊಡಲಾಯಿತು ಎನ್ನುತ್ತಾನೆ ಇತಿಹಾಸಕಾರ ಮೋಯಿರ್.ಒಮ್ಮೆ ಯಾರಾದರೂ ಈ ಸಂಘದ ಸದಸ್ಯರಾದರೆ ಅನಂತರ ಕೊನೆಯುಸಿರು ಇರುವವರೆಗೂ ಅವರು ಅಲ್ಲಿನ ಅಜೀವ ಸದಸ್ಯರಾಗಿಯೆ ಬಾಳುವುದು ಕಡ್ಡಾಯವಾಗಿತ್ತು.ಹಾಗೊಂದುವೇಳೆ ಇನ್ಯಾವುದೊ ಹೊಸ ನಂಬಿಕೆಗೆ ಮಾರುಹೋದರೆ ಜೀವ ತೆರಬೇಕಾಗಿದ್ದಿತು.ಇಂದಿಗೂ ಇಸ್ಲಾಮಿನಲ್ಲಿ ಈ ನಿಯಮಪಾಲನೆಯನ್ನು ಕಾಣಬಹುದಾಗಿದೆ.ಒಮ್ಮೆ ಮುಸ್ಲೀಮನಾಗಿ ಮತಾಂತರವಾದವನ ಪುನರ್ ಮತಾಂತರ ದುಸ್ಸಾಧ್ಯ!

( ಇನ್ನೂ ಇದೆ...)

17 October 2011

ವಲಿ...(ಭಾಗ-2)

ಅದಾಗಲೆ ಎರಡೆರಡು ಮದುವೆಯಾಗಿದ್ದು ಎರಡು ಗಂಡು ಹಾಗೂ ಒಂದು ಗಂಡು ಮಗುವನ್ನು ಹೊಂದಿದ್ದ ಖತೀಜ ಮಹಮದ್ ಮೇಲೆ ಅನುರಾಗ ಬೆಳೆಸಿಕೊಂಡು ವಿವಾಹ ಪ್ರಸ್ತಾಪವನ್ನು ಮುಂದಿಟ್ಟಳು.ಆದರೆ ಅವರಿಬ್ಬರ ನಡುವಿನ ಅಂತಸ್ತಿನ ವ್ಯತ್ಯಾಸದ ದೆಸೆಯಿಂದ ಅವಳನ್ನು ಮರುವಿವಾಹವಾಗಲು ಅಷ್ಟರಲ್ಲಿ ಯತ್ನಿಸಿ ಸೋತಿದ್ದ ಖುರೈಷಿ ಗಣ್ಯರಿಂದ ಈ ಮದುವೆಗೆ ಭಾರಿವಿರೋಧ ವ್ಯಕ್ತವಾಯಿತು.ಸಾಲದ್ದಕ್ಕೆ ಸುಂದರಿ ವಿಧವೆ ಖತೀಜಳ ಮುದಿತಂದೆ ಈ ಮದುವೆಗೆ ತನ್ನ ಅಸಮ್ಮತಿ ಪ್ರಕಟಿಸಿದ.ಇದರ ಹಿಂದಿನ ಹುನ್ನಾರ ಗ್ರಹಿಸಿದ ಖತೀಜ ಮದುವೆಗೆ ಮಹಮದ್'ನ ಸಮ್ಮತಿ ದೊರೆತ ನಂತರ ಉಪಾಯವಾಗಿ ಒಂದುದಿನ ಮನೆಗೆ ತನ್ನ ತಂದೆ ಹಾಗೂ ಬುಡಕಟ್ಟಿನ ಗಣ್ಯರನ್ನು ಊಟಕ್ಕಾಗಿ ಆಹ್ವಾನಿಸಿ ಅವರಿಗಾಗಿಯೆ ವಿಶೇಷವಾಗಿ ದನ ಕಡಿಸಿ ಅದರ ಮಾಂಸ ಹಾಗೂ ಮದ್ಯದ ಸಮಾರಾಧನೆಯನ್ನೆ ನಡೆಸಿ,ಅವರೆಲ್ಲ ಮತ್ತಿನಲ್ಲಿ ತೇಲುತ್ತಿದ್ದಾಗ ಕಾಟಾಚಾರಕ್ಕೆ ಅವರೆಲ್ಲರ ಸಮ್ಮತಿ ಪಡೆದು ಅಂದೆ ವಿವಾಹ ನೆರವೇರಿಸಿ ಕೊಂಡುಬಿಟ್ಟಳು! ನಶೆ ಇಳಿದು ಸ್ಮೃತಿ ತಿಳಿಯಾದ ಬಳಿಕ ನಡೆದ ಎಲ್ಲಾ ವಿದ್ಯಾಮಾನವನ್ನರಿತ ಖತೀಜಳ ತಂದೆ ಈ ವಿವಾಹವನ್ನ ವಿರೋಧಿಸಿ ಕಾಲುಕೆರೆದು ಜಗಳಕ್ಕೆ ನಿಂತ.ಆದರೆ ಬುಡಕಟ್ಟಿನ ಮುಖಂಡರ ಸಮಯಸ್ಪೂರ್ತಿಯಿಂದ ಜಗಳ ರಕ್ತಪಾತಕ್ಕೆ ತಿರುಗುವ ಮೊದಲೆ ಸಂಧಾನ-ಸಮಾಧಾನದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.ಹೀಗೆ ನಲವತ್ತು ವರ್ಷದ ಸುಂದರಿ-ಸಿರಿವಂತ ವಿಧವೆ ಖತೀಜ ಇಪ್ಪತ್ತೈದರ ಚಲುವ ತರುಣ ಮಹಮದ್'ನ ಮಡದಿಯಾದಳು.

ಸುಖಮಯವಾಗಿ ಮುಂದಿನ ಹನ್ನೆರಡುವರ್ಷ ಸಾಗಿದ ಅವರ ಸಂಸಾರದ ಫಲವಾಗಿ ಎಂಟು ಗಂಡು ಮಕ್ಕಳೂ.ನಾಲ್ಕು ಹೆಣ್ಣುಮಕ್ಕಳೂ ಜನ್ಮತಾಳಿದರು.ಆದರೆ ದುರದೃಷ್ಟದಿಂದ ಯಾವೊಂದು ಗಂಡು ಮಗುವೂ ಬದುಕುಳಿಯಲಿಲ್ಲ.ಮದುವೆಯ ನಂತರ ಮಡದಿಯ ಅಂತಸ್ತಿಗೆ ತಕ್ಕ ಹಾಗೆ ಮಹಮದ್ ಕುರಿಕಾಯದೆ ಹೆಂಡತಿಯ ವ್ಯಾಪಾರದಲ್ಲಿ ಸಕ್ರಿಯನಾಗಿ ತೊಡಗಿಕೊಂಡ.'ದೇವರು ಕರುಣಾಮಯಿ ;ತನ್ನನ್ನು ನಂಬಿದವರನ್ನೆಂದೂ ಕೈಬಿಡದೆ ಅವರ ವ್ಯವಹಾರಗಳಲ್ಲಿ ವೃದ್ಧಿ ತರುವ ಆತ...ಅವಿಶ್ವಾಸಿಗಳಿಗೆ ನಷ್ಟವನ್ನಷ್ಟೆ ಕೊಡುತ್ತಾನೆ' ಎನ್ನುತ್ತಾ ಆತ ವ್ಯಾಪಾರಕ್ಕೆ ಒಂದು ಧಾರ್ಮಿಕ ಘನತೆಯನ್ನು ಆರೋಪಿಸಿ ಮೋಸ-ವಂಚನೆಗಳನ್ನ ಹಿಡಿತಕ್ಕೆ ತಂದ.

ಹೀಗೆ ಸುಖಮಯವಾಗಿದ್ದ ಮಹಮದ್ ವಯಕ್ತಿಕ ಜೀವನಕ್ಕೆ ಕುತ್ತು ಬಂದದ್ದು ಮದುವೆಯ ಹದಿಮೂರನೆ ವರ್ಷಕ್ಕೆ ಒದಗಿಬಂದ ಕಾಬಾದ ಮರುನಿರ್ಮಾಣ ಕಾರ್ಯದಿಂದ.ಆಗ ಆತನಿಗೆ ಮೂವತ್ತೆಂಟು ವರ್ಷ ವಯಸ್ಸಾಗಿತ್ತು.ಪ್ರಾಕೃತಿಕವಾಗಿ ವಿರಳ ಮಳೆ ಕಾಣುತ್ತಿದ್ದ ಅರೇಬಿಯದಲ್ಲಿ ಕ್ರಿಸ್ತಶಕ 605ರಲ್ಲಿ ಕುಂಭದ್ರೋಣ ವರ್ಷಧಾರೆ ಸುರಿದು ಪ್ರವಾಹ ಬೀದಿಗಳಲ್ಲಿ ಉಕ್ಕಿ ಹರಿಯಿತು.ಕಾಬಾ ಗುಡಿ ಸಹಜವಾಗಿ ಜಖಂ ಆಯಿತು.ಹೀಗಾಗಿ ಗುಡಿಯ ದುರಸ್ತಿ ನಡೆಸಿ ಇನ್ನಷ್ಟು ಎತ್ತರದ ಗೋಡೆ ಹಾಗೂ ಛಾವಣಿ ನಿರ್ಮಿಸಲು ಖುರೈಷಿಗಳು ತೀರ್ಮಾನಿಸಿದರು.ಅವರ ಅದೃಷ್ಟಕ್ಕೆ ಆ ಮಳೆಗಾಲದಲ್ಲಿ ಎದ್ದಿದ್ದ ಬಿರುಗಾಳಿಗೆ ಸಿಲುಕಿ ಕೆಂಪುಸಮುದ್ರದ ದಡಕ್ಕೆ ಬಂದು ಅಪ್ಪಳಿಸಿ ಪತನವಾದ ಗ್ರೀಕ್ ವ್ಯಾಪಾರಿ ನೌಕೆಯೊಂದು ವರದಾನದಂತೆ ಒದಗಿಬಂತು.ಇದರ ಖಚಿತ ಸುದ್ದಿ ತಿಳಿದ ಖುರೈಷಿಗಳ ಮುಖಂಡ ಅಲ್ ವಾಲಿದ್ ಅಲ್ಲಿಗೆ ಧಾವಿಸಿ ನೌಕೆಯ ಅಳಿದುಳಿದ ನಿರುಪಯುಕ್ತ ಮರ ಹಾಗೂ ಲೋಹಗಳ ಅವಶೇಷಗಳನ್ನು ಖರೀದಿಸಿದ.ಮೆಕ್ಖಾ ಸಮೀಪದ ಕೆಂಪುಕಲ್ಲುಗಳ ಕಣಿವೆಯಿಂದ ಕಲ್ಲುಗಳನ್ನೂ ತರಿಸಿ ಬಾಕುನ್ ಎಂಬ ರೋಮನ್ ವಾಸ್ತುಶಿಲ್ಪಿಯ ಮಾರ್ಗದರ್ಶನದೊಂದಿಗೆ ಹೊಸ ಕಾಬಾದ ನಿರ್ಮಾಣ ಕಾರ್ಯ ಆರಂಭಿಸಿದ.ಗೋಡೆಗಳು ಮೇಲೆದ್ದು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದಾಗ 'ಪವಿತ್ರ ಕಪ್ಪುಶಿಲೆ'ಯನ್ನು ಎಲ್ಲಿ,ಹೇಗೆ,ಯಾರು ಇರಿಸಬೇಕು? ಎಂಬ ನೈತಿಕ ಪ್ರಶ್ನೆ ಉದ್ಭವವಾಯ್ತು.ಈ ಶಿಲೆ ಆರು ಇಂಚು ಎತ್ತರ ಹಾಗೂ ಎಂಟಿಂಚು ಅಗಲವಾಗಿತ್ತು,ಭಕ್ತಾದಿಗಳ ಶ್ರದ್ಧಾಭಕ್ತಿಗೆ ಅದು ಒಳಗಾಗಿತ್ತು ಎನ್ನುತ್ತಾನೆ ವಿಲ್ ಡ್ಯೂರಂಟ್.ಆ ಶಿಲೆಯ ಹಣೆಬರಹ ನಿರ್ಧರಿಸುವುದು ತಮ್ಮ ಹಕ್ಕೆಂದು ಕೆಲವು ಖುರೈಸಿ ಗಣ್ಯರು ಗದ್ದಲ ತೆಗೆದರು.ಇನ್ನಿತರರು ತಮ್ಮ ಹಕ್ಕು ಮಂಡಿಸಿ ಅದನ್ನು ಬಲವಾಗಿಯೆ ವಿರೋಧಿಸಿದರು.ಈ ವಾದ ವಿವಾದ ತಾರಕಕ್ಕೇರಿ ಹೊಯ್'ಕೈ ನಡೆದು ಮತ್ತೆ ರಕ್ತದೋಕುಳಿಯಾಡುವ ಎಲ್ಲಾ ಸೂಚನೆಗಳು ಕಂಡುಬಂದಾಗ ಖುರೈಷಿಗಳಲ್ಲೆ ಹಿರಿಯನಾಗಿದ್ದವನೊಬ್ಬ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸಂಧಾನ ಸೂತ್ರವನ್ನೇರ್ಪಡಿಸಿದ.ಅದು ಹೀಗಿತ್ತು 'ಇಂದು ಯಾವ ವ್ಯಕ್ತಿ ಮೊತ್ತ ಮೊದಲನೆಯವನಾಗಿ ಕಾಬಾದ ಒಳಕ್ಕೆ ಹೊರಗಿನಿಂದ ಬರುತ್ತಾನೊ, ಅವನಿಗೆ ಈ ಸಮಸ್ಯೆಗೆ ಪರಿಹಾರ ಸೂಚಿಸುವ ಅಥವಾ ಅವನಿಗೆ ಕರಿಶಿಲೆಯನ್ನ ಸೂಕ್ತ ಸ್ಥಳದಲ್ಲಿರಿಸುವ ಅಧಿಕಾರ ನೀಡೋಣ" ಅನ್ನುವುದಾಗಿತ್ತು.ನೆರೆದಿದ್ದವರ ಸಮ್ಮತಿ ಆ ಸೂತ್ರಕ್ಕೆ ದೊರಕುತ್ತಿದ್ದಾಗಲೆ ಮಹಮದ್ ಮೊದಲನೆಯವನಾಗಿ ಗುಡಿಯ ಒಳ ಪ್ರವೇಶಿಸಿದ್ದು ಎಲ್ಲರ ಕಣ್ಣಿಗೂ ಬಿತ್ತು! ಆವಾಗ ಎಲ್ಲರೂ 'ಅಲ್ ಅಮೀನ್' ಮೊದಲು ಬಂದ,ಹೀಗಾಗಿ ಅವನು ಸೂಚಿಸುವ ಸೂತ್ರಕ್ಕೆ ನಮ್ಮ ಸಮ್ಮತಿಯಿದೆ ಎಂದು ಸಾಮೂಹಿಕವಾಗಿ ಕೂಗಿದರು.


ಅತ್ಯಂತ ಸಾವಧಾನ ಚಿತ್ತದಿಂದ ಮಹಮದ್ ಈ ಕಾರ್ಯಭಾರವನ್ನು ಒಪ್ಪಿಕೊಂಡು ಕಾರ್ಯಪ್ರವೃತ್ತನಾದ.ತಾನು ಹೂದ್ದಿದ್ದ ಬಟ್ಟೆಯನ್ನು ನೆಲಕ್ಕೆ ಹಾಸಿ ಕಪ್ಪುಶಿಲೆಯನ್ನು ಅದರ ಮೇಲಿರಿಸಿ ಖುರೈಷಿಗಳ ನಾಲ್ಕೂ ಗುಂಪಿನ ಸದಸ್ಯರನ್ನು ಕರೆದು ಬಟ್ಟೆಯ ನಾಲ್ಕು ತುದಿಗಳನ್ನು ಅವರಿಂದ ಎತ್ತಿಸಿ ಅವರೆಲ್ಲರೂ ಕೂಡಿ ಕಪ್ಪುಶಿಲೆಯನ್ನು ಗೋಡೆಯ ಬದಿಗೆ ಅಂಟಿಸುವಂತೆ ಮಾಡಿದ.ತಾನೂ ಸ್ವತಹ ಈ ಕಾರ್ಯದಲ್ಲಿ ಅವರೊಂದಿಗೆ ಸಹಕರಿಸಿದ.ಹೀಗಾಗಿ ಕಟ್ಟಡದ ಕಾರ್ಯ ಸುಗಮವಾಗಿ ಸಾಗುವಂತಾಯಿತು.ಇದೆ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು.ಈ ಕಾರ್ಯ ಸಾಗುವಾಗ ಭಯ ಭಕ್ತಿಯಿಂದ ಖುರೈಶಿಗಳು ತಮ್ಮ ಒಳವಸ್ತ್ರವನ್ನು ತೆಗೆದು ಹೆಗಲ ಮೇಲೆ ಇಳಿಬಿಟ್ಟುಕೊಂಡಿದ್ದರು.ಮಹಮದನೂ ಹಾಗೆಯೆ ಮಾಡಿದ್ದವ ಕೊನೆಯಲ್ಲಿ ಎಡವಿ ಮುಖ ಕೆಳಗಾಗಿ ನೆಲಕ್ಕೆ ಬಿದ್ದ.ಆಗ "ನಿನ್ನ ಗುಪ್ತಾಂಗವನ್ನು ಇನ್ಯಾರಿಗೂ ತೋರಿಸಬೇಡ" ಎಂಬ ಒಂದು ಅಶರೀರವಾಣಿ ಅವನಿಗೆ ಕೇಳಿಸಿದಂತಾಯಿತು.ಆದರಿಂದ ಅಂದಿನಿಂದ ಅದನ್ನು ಯಾರೊಬ್ಬರೂ ಕಾಣಲಿಲ್ಲ ಅನ್ನುತ್ತಾನೆ ಇತಿಹಾಸಕಾರ ಅಲ್-ಮುಬಾರಕಿ.

ಈ ಸಮಸ್ಯೆ ಸುರಳಿತವಾಗಿ ನೆಲೆಕಂಡರೂ ಮೆಕ್ಕಾದಲ್ಲಿ ಸೂಕ್ತ ಅಧಿಕಾರ ಕೇಂದ್ರದ ಅಭಾವ ಎದ್ದುಕಾಣುತ್ತಿತ್ತು.ಖುರೈಷಿಗಳ ಒಳ ಪಂಗಡಗಳಲ್ಲೆ ವಿಪರೀತ ಕಚ್ಚಾಟವಿದ್ದರೂ ಅದೊಂದು ಬಗೆಯ ಸಾಮರಸ್ಯವೂ ಅವರಲ್ಲಿದ್ದು ವ್ಯಾಪಾರ-ವ್ಯವಹಾರಗಳಿಗೆ ಅದರಿಂದ ಅಡ್ಡಿಯಾಗದೆ ಮೆಕ್ಕಾ ಆರ್ಥಿಕವಾಗಿ ಬಲಗೊಂಡಿತ್ತು.ಉದ್ದಿಮೆದಾರರು ದೂರದ ಸಿರಿಯಾ,ನೆರೆಯ ಇರಾಕ್ ನಡುವೆ ವ್ಯಾಪಾರ ಸಂವರ್ಧನೆ ಸಾಧಿಸಿದ್ದರು.ಕ್ರಿಸ್ತ ಶಕ 606ರಲ್ಲಿ ಪರ್ಶಿಯಾದೊಂದಿಗೆ ವ್ಯಾಪಾರಿ ಸಂಬಂಧಗಳು ಅಬು ಸಫ್ಯಾನನ ಮುಂದಾಳುತ್ವದಲ್ಲಿ ಧೃಡಗೊಂಡವು.ಹೀಗೆ ಮೆಕ್ಕಾ ಉನ್ನತಿಯತ್ತ ಸಾಗುತ್ತಿದ್ದರೆ ಇತ್ತ ಮಹಮದ್'ನ ವೈವಾಹಿಕ ಜೀವನದಲ್ಲೂ ಶಾಂತಿ ನೆಲೆಸಿತ್ತು.ಮೂವರು ಹೆಣ್ಣು ಮಕ್ಕಳಿಗೆ ವಿವಾಹ ಯೋಗ ಕೂಡಿಬಂದಿತ್ತು. ಮೊದಲನೆಯವಳಾದ ಜನಾಬ್'ಳನ್ನು ಖತೀಜಳ ತಂಗಿಯ ಮಗನಿಗೆ ಕೊಟ್ಟು ಲಗ್ನ ಕುದುರಿಸಲಾಯಿತು (ಗಮನಿಸಿ ಅರಬ್ಬಿಗಳಲ್ಲಿ ಸೋದರಿಕೆಯ ಒಳವಿವಾಹಗಳು ನಿಶಿದ್ಧವಾಗಿರಲಿಲ್ಲ).ಇನ್ನಿಬ್ಬರು ಹೆಣ್ಣುಮಕ್ಕಳಾದ ರೋಶಿಯಾ ಹಾಗು ಉಮ್'ಕುಲ್'ಸುಮ್'ರನ್ನು ಅಬು ಲಹಾಬ್'ನ ಮಕ್ಕಳಾದ ಓತ್ವಾ ಹಾಗೂ ಒಬೈಬಾರಿಗೆ ಕೊಟ್ಟು ಲಗ್ನ ನೆರವೇರಿಸಲಾಯಿತು.

ಮಹಮದ್ ತನ್ನ ಎಳೆಮಗ ಕಾಸಿಂ ಮರಣ ಹೊಂದಿದ ಮೇಲೆ ಅಬು ತಾಲಿಬ್'ನ ಐದು ವರ್ಷದ ಮಗ ಆಲಿಯನ್ನು ದತ್ತಕಕ್ಕೆ ತೆಗೆದುಕೊಳ್ಳುತ್ತಾನೆ.ಅಬು ತಾಲಿಬ್ ಕಡುಬಡತನದಲ್ಲಿದ್ದುದ್ದರಿಂದ ಮಹಮದ್ ಮಗುವನ್ನು ತನ್ನ ಆಶ್ರಯಕ್ಕೆ ತೆಗೆದುಕೊಂಡು ಅವನ ಸಂಕಟವನ್ನು ಕೊಂಚ ನಿವಾರಿಸಿದನು.ಇದೆ ಅಲಿ ಮುಂದೆ ಮಹಮದನಿಗೆ ಪ್ರಾಮಾಣಿಕನಾಗಿದ್ದುಕೊಂಡು ಆತನ ಧರ್ಮಾಭಿಮಾನಿಯಾಗಿ ಮೆರೆಯಲಾರಂಭಿಸಿದ.

ಅದೆ ಸಮಯದಲ್ಲಿ ಆಲಿಯಂತೆಯೇ ತನ್ನ ಕುಟುಂಬಕ್ಕೆ ಪರಕೀಯನಾಗಿದ್ದ ಹಾರಿಥಾ ಎಂಬ ವ್ಯಕ್ತಿಯ ಮಗನಾದ ಜೈದ್'ಎಂಬಾತನನ್ನೂ ಹೀಗೆಯೆ ದತ್ತು ತೆಗೆದುಕೊಳ್ಳಲಾಯಿತು.ಹಾರಿಥಾ ವಾಸ್ತವವಾಗಿ ಸಿರಿಯನ್ ಕ್ರೈಸ್ತ ಬುಡಕಟ್ಟಿಗೆ ಸೇರಿದ್ದ.ಜೈದ್ ಇನ್ನೂ ಮಗುವಾಗಿದ್ದಾಗಲೆ ಅರಬ್ಬಿ ದರೋಡೆಗಾರರ ಕೈಸೇರಿ ಗುಲಾಮಗಿರಿಗೆ ತಳ್ಳಲ್ಪಟ್ಟಿದ್ದ ಹಾಗೂ ಖತೀಜಳಿಗೆ ಗುಲಾಮನಾಗಿ ಮಾರಲ್ಪಟ್ಟಿದ್ದ.ಲಗ್ನದ ನಂತರ ಆಕೆಯ ಕೊಡುಗೆಯಾಗಿ ಜೈದ್ ಮಹಮದ್'ನಿಗೆ ಸಂದಿದ್ದ.ಮಹಮದ್ ಆತನನ್ನು ಗುಲಾಮನಾಗಿ ಪರಿಗಣಿಸದೆ ತನ್ನ ಒಡಹುಟ್ಟಿದವನಂತೆ ಕಂಡು ಕಡೆಗೊಮ್ಮೆ ತನ್ನ ದತ್ತು ಮಗನನ್ನಾಗಿ ಸ್ವೀಕರಿಸಿದ.

ಆದರೆ ಕಾಲಕ್ರಮೇಣ ಹಾರಿಥಾನಿಗೆ ಕಳೆದು ಹೋಗಿದ್ದ ತನ್ನ ಮಗನ ಸುಳಿವು ಸಿಕ್ಕು ಆತ ಮಗನನ್ನು ಗುಲಾಮಗಿರಿಯಿಂದ ಬಿಡಿಸಿಕೊಳ್ಳಲು ಮೆಕ್ಕಾಗೆ ಧಾವಿಸಿದ.ಅದಕ್ಕಾಗಿ ಮಹಮದನಿಗೆ ಅಪಾರ ಒತ್ತೆಹಣ ನೀಡಲು ಆತ ತಯಾರಿದ್ದರೂ ಮಹಮದ್ ಅದನ್ನು ಒಪ್ಪದೆ ಜೈದ್'ನಿಗೆ ತಂದೆಯೊಂದಿಗೆ ಸಾಗುವ ಅಥವಾ ಸ್ವತಂತ್ರವಾಗಿ ಬಾಳುವ ಹಕ್ಕನ್ನು ನೀಡಿದ.ಜೈದ್ ಮಾತ್ರ ತಂದೆಯೊಂದಿಗೆ ಸಾಗಲು ನಿರಾಕರಿಸಿ ಮಹಮದನೆ ತನ್ನ ತಂದೆ-ತಾಯಿಯೆಂದು ಘೋಷಿಸಿಕೊಂಡು ಅಲ್ಲೆ ಉಳಿಯುವ ನಿರ್ಧಾರ ಪ್ರಕಟಿಸಿದ.ಅವನ ಈ ನಡೆಯಿಂದ ವಿಪರೀತ ಹರ್ಷಿತನಾದ ಮಹಮದ್ ಜೈದನ್ನು ಕಾಬಾದ ಕರಿಶಿಲೆಯ ಸಾಕ್ಷಿಯಾಗಿ ತನ್ನ ಉತ್ತರಾಧಿಕಾರಿಯೆಂದು ಪ್ರಮಾಣ ಮಾಡಿದ.ಅಂದಿನಿಂದ ಜೈದ್'ನನ್ನು 'ಜೈದ್ ಇಬ್ನ ಮಹಮದ್' ಅಂದರೆ ಮಹಮದನ ಮಗ ಜೈದ್ ಎಂದು ಗುರುತಿಸಲಾಯಿತು.ಮಹಮದನ ಇಚ್ಛೆಯ ಪ್ರಕಾರವೆ ಜೈದ್ ಮುಂದೆ ಉಮ್ ಐಮನ್ ಎಂಬ ಕೆಲಸದವಳೊಬ್ಬಳನ್ನು ವಿವಾಹವಾಗಬೇಕಾಯಿತು.ಇತಿಹಾಸಕಾರ ಮ್ಯೂರನ ಪ್ರಕಾರ ಆಕೆಯ ವಯಸ್ಸು ಜೈದನ ವಯಸ್ಸಿನ ಎರಡರಷ್ಟಾಗಿತ್ತು.ಹೀಗಿದ್ದರೂ ಅವರ ವೈವಾಹಿಕ ಬದುಕಿಗೆ ಅದರಿಂದೇನೂ ತೊಂದರೆಯಾಗಲಿಲ್ಲ.'ಒಸಾಮಾ'ನೆಂಬ ಮಗ ಅವರಿಗೆ ಹುಟ್ಟಿದ.

(ಇನ್ನೂ ಇದೆ...)

16 October 2011

ವಲಿ.....(ಭಾಗ-1)

ಒಂದೊಮ್ಮೆ ಮೊಹಮದ್'ನ ತಾತ ಅಬ್ದುಲ್ ಮುತ್ತಾಲಿಬ್ ಇಪ್ಪತ್ತನಾಲ್ಕು ವರ್ಷದ ತನ್ನ ಎಳೆಮಗ ಅಬ್ದುಲ್ಲಾನನ್ನು ಜೊತೆಗೆ ಕರೆದುಕೊಂಡು ದೂರದ ಸಂಬಂಧಿ ವಾಹಬ್'ನ ಮನೆಗೆ ಅತಿಥಿಯಾಗಿ ಹೋಗಬೇಕಾಯಿತು.ಅಲ್ಲಿ ವಹಾಬ್'ನ ಸಹೋದರಿಯ ಮಗಳಾದ ಅಮೀನಾಳನ್ನು ಕಂಡು ಸಂಪ್ರೀತನಾದ ಆತ ಆಕೆಯನ್ನು ತನ್ನ ಮಗನಿಗೆ ತಂದುಕೊಳ್ಳಲು ಪ್ರಸ್ತಾಪಿಸಿದ.ಅದಕ್ಕೊಪ್ಪಿದ ವಹಾಬ್ ಈ ವಿವಾಹ ನೆರವೇರಿಸಿಕೊಟ್ಟ,ಜೊತೆಗೆ ಅದಾಗಲೆ ಎಪ್ಪತ್ತರ ಆಸುಪಾಸಿನಲ್ಲಿದ್ದ ಮುತ್ತಾಲಿಬ್ ತಾನು ಸ್ವತಃ ವಹಾಬನ ಸ್ವಂತ ಮಗಳಾದ ಹಲಾಹಳನ್ನು ವಿವಾಹವಾದ! ತಂದೆ-ಮಕ್ಕಳಿಬ್ಬರೂ ಅಕ್ಕ-ತಂಗಿಯರನ್ನೆ ಮದುವೆಯಾದ ನಂತರ ಕೆಲಕಾಲ ಅಲ್ಲಿಯೆ ನೆಲಸಿದರು.ಅಮೀನ ಗರ್ಭವತಿಯಾದಳು.ಅದೇ ಸಮಯಕ್ಕೆ ಆಕೆಯ ಪತಿ ಅಬ್ದುಲ್ಲಾ ವ್ಯಾಪಾರದ ನಿಮಿತ್ತ ಸಿರಿಯಾದ ಕಡೆ ಸಾಗಬೇಕಾಯಿತು.ದುರಾದೃಷ್ಟವಶಾತ್ ಆತ ಅಲ್ಲಿಂದ ಮರಳುವಾಗ ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗಿದ.ಮಗನ ಸಾವಿನ ಸುದ್ದಿ ಮುತ್ತಾಲಿಬನನ್ನು ಬಹುವಾಗಿ ಕಾಡಿಸಿತು.ಆತ ತನ್ನೊಂದಿಗೆ ಉಳಿದಿದ್ದ ಇನ್ನೊಬ್ಬ ಮಗನನ್ನು ಮುಂದಿನ ಉತ್ತರಕ್ರಿಯೆಗಳಿಗಾಗಿ ಮದೀನಕ್ಕೆ ಕಳುಹಿಸಿದ.ಆತ ಮದೀನ ತಲುಪಲು ತಿಂಗಳೆ ತಗುಲಿತು.ಅಲ್ಲಿ ಅಬ್ದುಲ್ಲ ಮರಣ ಹೊಂದುವಾಗ ಕೇವಲ ಐದು ಒಂಟೆಗಳನ್ನೂ,ಕೆಲವು ಮೇಕೆಗಳನ್ನೂ ಹಾಗೂ ಓರ್ವ ಗುಲಾಮಳನ್ನಷ್ಟೆ ಬಿಟ್ಟುಹೋಗಿದ್ದ.

ಕ್ರಿಸ್ತಶಕ 570ರ ಅಗೊಸ್ತು 20ರಂದು ಮಹಮದ್'ನಿಗೆ ಜನ್ಮ ನೀಡುವಾಗ ಅಮೀನಳ ಪಾಲಿಗೆ ಬಂದ ಆಸ್ತಿಯೆಂದರೆ ಇವಿಷ್ಟೆ.ಮಗುವಿನ ಜನನದ ಸುದ್ದಿ ಅರಿತ ಮಾವ ಮುತ್ತಾಲಿಬ್ ಬಂದು ಮೊಮ್ಮಗನನ್ನು ಮುದ್ದಾಡಿ ಕಾಬಾಕ್ಕೆ ಮಗುವನ್ನೊಯ್ದು,ದೇವರಿಗೆ ಕೃತಜ್ಞತೆ ಸಲ್ಲಿಸಿ ಅಲ್ಲಿಯೆ ಕಂದನಿಗೆ 'ಮಹಮದ್' ಎಂದು ನಾಮಕರಣ ಮಾಡಿಬಿಟ್ಟ (ಅರಬ್ಬಿಯಲ್ಲಿ ಮಹಮದ್ ಎಂದರೆ ಕೊಂಡಾಡುವ ಎನ್ನುವ ಅರ್ಥ ಬರುತ್ತದೆ). ಮಹಮದ್ ಹುಟ್ಟಿದ ಆ ವರ್ಷ ಅರಬ್ಬಿಯನ್ ಪಂಚಾಗದ ಪ್ರಕಾರ ಆನೆಯವರ್ಷವಾಗಿತ್ತು.

ಅರೇಬಿಯಾದ ಉತ್ತಮ ಕುಲದವರ ವಾಡಿಕೆಯಂತೆ ಹುಟ್ಟಿದ ಮಗುವಿಗೆ ದಾದಿಯಿಂದ ಮೊಲೆಯೂದಿಸುವ ವ್ಯವಸ್ಥೆ ಮಾಡಲಾಯಿತು.ಇದಕ್ಕಾಗಿ ಥುವೈಬಾ ಎಂಬ ಗುಲಾಮಳ ಕೈಗೆ ಮಗುವನ್ನ ದಾಟಿಸಲಾಯಿತು.ಸ್ವಲ್ಪ ಸಮಯದ ನಂತರ ಹಲೀಮಾ ಎಂಬ ಇನ್ನೊಬ್ಬ ದಾದಿಯನ್ನೂ ಅದಕ್ಕಾಗಿ ನೇಮಿಸಿಕೊಳ್ಳಲಾಯಿತು.'ಬೆನ್ ಸಾದ್' ಬುಡಕಟ್ಟಿನವಳಾದ ಈ ದಾದಿಯ ಎದೆಹಾಲು ಕುಡಿದು ಬೆಳೆದ ಮೊಹಮದ್ ಐದು ವರ್ಷ ಪ್ರಾಯದವನಾದ.ಮರುಭೂಮಿಯ ಭೀಕರ ವಾತಾವರಣದಲ್ಲೂ ಮಗುವಿನ ಆರೋಗ್ಯ ಸ್ಥಿರವಾಗಿರಲಿ ಎನ್ನುವ ಕಾರಣದಿಂದ ತಾಯಿ ಅಮೀನಾ ಈ ವ್ಯವಸ್ಥೆ ಮಾಡಿದ್ದಳು.

ಆರನೆ ವಯಸ್ಸಿನಲ್ಲಿ ಮಗುವನ್ನ ತನ್ನೊಂದಿಗೆ ಬಂಧುಗಳಿಗೆ ತೋರಿಸಲು ಅಮೀನಾ ಮದೀನಕ್ಕೆ ಕರೆದೊಯ್ದಳು.ಅಲ್ಲಿ ಗಂಡನ ಮನೆ ಹಾಗು ಆತನ ಸಮಾಧಿಯ ದರ್ಶನವನ್ನ ಮಗುವಿಗೆ ಮಾಡಿಸಿದಳು.ಒಂದು ತಿಂಗಳು ಅಲ್ಲಿಯೆ ಉಳಿದು ಮರುಪಯಣಕ್ಕಾಗಿ ಮಗು ಹಾಗು ಗುಲಾಮಳಾದ ಲುಮ್' ಐಮನಳೊಂದಿಗೆ ಒಂಟೆಯೇರಿದ ಅಮೀನಾ ವಾತಾವರಣದ ವೈಪರೀತ್ಯದಿಂದ ತೀವ್ರ ಅಸ್ವಸ್ಥಲಾಗಿ ನಡುದಾರಿಯಲ್ಲೆ ಮರಣಿಸಿದಳು.ಆಕೆ ಅಸುನೀಗಿದ 'ಅಲ್-ಅಬ್ಬಾ'ದಲ್ಲಿಯೆ ಆಕೆಯನ್ನ ಮಣ್ಣುಮಾಡಲಾಯಿತು.ಹೀಗೆ ಎಳೆಯ ಪ್ರಾಯದಲ್ಲಿಯೆ ಮಹಮದ್ ತಬ್ಬಲಿಯಾಗಬೇಕಾಯಿತು.ಗುಲಾಮಳಾದ ಲುಮ್-ಐಮನ್ ಮೆಕ್ಕಾಗೆ ಮಗುವನ್ನು ಕರೆದುಕೊಂಡು ಹೋದಳು.ಮುಂದೆ ಆಕೆಯೆ ಮಹಮದ್'ನ ಸಾಕುತಾಯಿಯಾಗಿ ದೇಖಾರೇಕಿ ನೋಡಿಕೊಂಡು ಬೆಳಸಿದಳು.

ಅದರ ಖರ್ಚನ್ನೆಲ್ಲ ತಾತ ಅಬ್ದುಲ್ ಮುತ್ತಾಲಿಬ್ ವಹಿಸಿಕೊಂಡ.ಅದಾಗಲೆ ಎಂಬತ್ತು ವರ್ಷದ ಆಸುಪಾಸಿನಲ್ಲಿದ್ದ ಆತ ಮೊಮ್ಮಗನನ್ನು ಬಲು ಮುದ್ದಿನಿಂದಲೆ ಸಾಕಿ ಬೆಳೆಸಿದ.ಆದರೆ ವೃದ್ದಾಪ್ಯದ ಕಾರಣ ಮುಂದಿನ ಎರಡುವರ್ಷಗಳಲ್ಲಿ ಆತನೂ ಮರಣಿಸಿದ್ದರಿಂದ ಅಜ್ಜನ ಮುಚ್ಚಟೆ-ಪ್ರೀತಿ-ವಿಶ್ವಾಸಗಳನ್ನು ಕಂಡುಂಡಿದ್ದ ಮಹಮದ್ ಆಘಾತಗೊಂಡ.ಆತನ ಮನಸ್ಸಿನ ಮೇಲೆ ಈ ಸಾವು ಗಾಢ ಪರಿಣಾಮಬೀರಿತು.ಹೀಗಾಗಿ ಆತನ ಹೊಣೆಗಾರಿಕೆ ದೊಡ್ಡಪ್ಪ ಅಬು ತಾಲಿಬ್'ಗೆ ಸೇರಿತು.ತನ್ನ ತಂದೆಯಷ್ಟೆ ಕರುಣಾಮಯಿಯಾಗಿದ್ದ ಆತ ಮುಂದಿನ ತಾರುಣ್ಯದವರೆಗೆ ಮಹಮದನನ್ನು ಒಲವಿನಿಂದಲೆ ಸಾಕಿ ಬೆಳೆಸಿದ.

ಮುಂದೆ ಅಬು-ತಾಲಿಬ್ ವ್ಯಾಪಾರಕ್ಕಾಗಿ ಸಿರಿಯಾದತ್ತ ಪ್ರಯಾಣಿಸಬೇಕಾಗಿ ಬಂದಾಗ ಆಗಿನ್ನೂ ಹನ್ನೆರಡರ ಹರೆಯದಲ್ಲಿದ್ದ ಮಹಮದ್ ಮನೆಯಲ್ಲಿ ಒಂಟಿಯಾಗಿರಬಯಸದೆ ಹಠ ಹೂಡಿ ತಾನೂ ಅವನೊಂದಿಗೆ ತೆರಳುತ್ತಾನೆ.ಈ ಪ್ರಯಾಣ ಆತನ ಬದುಕಲ್ಲಿ ಆರಂಭಿಕ ಅನುಭವ ತರುತ್ತದೆ.ಸಿರಿಯಾದಲ್ಲಿ ಆತ ಕ್ರೈಸ್ತರ ಹಾಗೂ ಯಹೂದಿಗಳ ಸಂಪರ್ಕಕ್ಕೆ ಬಂದ.ಮುಖ್ಯವಾಗಿ ಆತನಿಗೆ ಅಲ್ಲಿ ಯಹೂದಿಗಳ ಭಾಷೆ,ಸಂಸ್ಕೃತಿ,ರೀತಿನೀತಿ,ಕಟ್ಟಳೆ-ರಿವಾಜು,ಬದುಕಿನ ನಿಯಮಗಳೆಲ್ಲದರ ಪರಿಚಯವಾಯಿತು ಎಂದಿದ್ದಾನೆ ಇತಿಹಾಸಕಾರ ಮೂಯಿರ್.

'ಒಕಾಜಾ' ಅಕಾಲದ ಅರೇಬಿಯಾದ ಪ್ರಸಿದ್ಧ ಸಂತೆ ಕೂಡುವ ವ್ಯಾಪಾರಿ ಸ್ಥಳವಾಗಿತ್ತು.ಬೆನಿ ಹವಾಜಿನ್ ಹಾಗೂ ಖುರೈಷಿಗಳು ಅಲ್ಲಿ ವ್ಯಾಪಾರಕ್ಕಾಗಿ ಪ್ರತಿವರ್ಷಕ್ಕೊಮ್ಮೆ ಸೇರುವ ಪರಿಪಾಠವಿತ್ತು ವಾಸ್ತವವಾಗಿ ಇವರಿಬ್ಬರಲ್ಲೂ ಜನಾಂಗೀಯ ದ್ವೇಷದ ಭವ್ಯಹಿನ್ನೆಲೆ ಇದ್ದುದ್ದರಿಂದ ಪರಸ್ಪರ ನೆತ್ತರು ಹರಿಸಿ ಅವರು ಕಾದಾಡುತ್ತಿದ್ದರು.ಎರಡೂ ಬುಡಕಟ್ಟಿನ ಹಿರಿಯರು ಈ ಅನಗತ್ಯ ವೈರತ್ವದಿಂದ ಸತ್ತವರ ಕುಟುಂಬಗಳಿಗೆ 'ಪರಿಹಾರ' ನೀಡುವ ಮೂಲಕ ಪರಿಸ್ಥಿತಿಯನ್ನು ಹಿಡಿತಕ್ಕೆ ತರಲು ಹೆಣಗುತ್ತಿದ್ದರು.ಅವರಲ್ಲಿ ಪರಸ್ಪರ ಇದ್ದ ಈರ್ಷ್ಯೆ-ಪ್ರತಿಕಾರದ ಸ್ವಭಾವಗಳ ಬಗ್ಗೆ ಒಂದು ರಂಜನೀಯ ಕತೆ ಚಾಲ್ತಿಯಲ್ಲಿದೆ .'ಕಿನಾನಾ' ಬುಡಕಟ್ಟಿಗೆ ಸೇರಿದ ಒಬ್ಬ ವ್ಯಕ್ತಿ ಹವಾಜಿನ್ ಬುಡಕಟ್ಟಿನ ಸಾಲಗಾರನಿಂದ ಸಾಲ ಪಡೆದು ಅದನ್ನು ಹಿಂದಿರುಗಿಸದಿದ್ದಾಗ ಇದೆ 'ಒಕಾಜ್' ಸಂತೆಯ ಪ್ರಮುಖ ಸ್ಥಳದಲ್ಲಿ ಕೂತು ತನ್ನ ಬಳಿ ಒಂದು ಮಂಗವನ್ನು ಕಟ್ಟಿಹಾಕಿಕೊಂಡು "ಯಾರು ನನಗೆ ಇಂತಹದ್ದೆ ಒಂದು ಮಂಗವನ್ನು ನೀಡುತ್ತಾರೊ ಅವರಿಗೆ ಸಾಲ ಕೊಂಡವನ ಮೇಲೆ ನನಗಿರುವ ಹಕ್ಕನ್ನು ಬಿಟ್ಟು ಕೊಡುತ್ತೇನೆ!' ಎಂದು ಕೂಗಿಕೂಗಿ ಹೇಳಿದ.ಅವನ ಧ್ವನಿಯಲ್ಲಿ 'ಕಿನಾನಾ' ಪಂಗಡದ ಬಗ್ಗೆ ಇದ್ದ ಹೀಯಾಳಿಕೆಯನ್ನ ಕೇಳಿ ಕೆರಳಿದ ಆಗುಂತಕನೊಬ್ಬ ತಕ್ಷಣವೆ ಕೈಗತ್ತಿಯಿಂದ ಆ ಮಂಗದ ಕುತ್ತಿಗೆ ಕಡಿದು ಹಾಕಿದ...ಮುಂದೆ ಎರಡುದಿನ ಬಿಡದೆ ನಡೆದ ಕಾಳಗಕ್ಕೆ ಇಷ್ಟು ಕಾರಣ ಧಾರಾಳ ಸಾಕಾಯಿತು!.

ಇಂತಹ ದುರದೃಷ್ಟಕರ ಘಟನೆಗಳನ್ನು ಮರುಕಳಿಸದಂತಾಗಿಸಲು ಎರಡೂ ಗುಂಪಿನ ಹಿರಿಯರು ಅಲ್ಲಿಗೆ ವ್ಯಾಪಾರಕ್ಕೆ ಬರುವಯಾರೂ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಅಲ್ಲಿಗೆ ತರುವಂತಿಲ್ಲವೆಂದೂ,ಬಳಿಯಿರುವುದನ್ನು ಮೆಕ್ಕಾದ ಅಬ್ದುಲ್ಲ ಇಬ್ನ ಜುಡಾನನ ಬಳಿ ಒತ್ತೆಯಿಸಿ ನಿರಾಯುಧರಾಗಿ ಬರುವಂತೆ ಕಾನೂನನ್ನೆ ಜಾರಿ ಮಾಡಿದರು.ಹೀಗಾಗಿ ಮುಂದೆ ಬಹುಕಾಲ ಅಲ್ಲಿನ ಶಾಂತಿಯನ್ನ ಕಾಪಾಡಿಕೊಳ್ಳುವುದು ಸಾಧ್ಯವಾಯಿತು,ಆದರೆ ಕ್ರಿಸ್ತಶಕ 580ರಲ್ಲಿ ಅಲ್ಲೊಂದು ಕೊಲೆಯಾಯಿತು,'ಅಲ್ ಹಿರಾ' ಪ್ರಾಂತ್ಯದ ರಾಜಕುಮಾರ ವ್ಯಾಪಾರಕ್ಕಾಗಿ ಅಲ್ಲಿಗೊಂದು ಕ್ಯಾರವಾನನ್ನು ಆ ಹಂಗಾಮಿನಲ್ಲಿ ಕಳುಹಿಸಿದ್ದ.ಅವನ ಬಗ್ಗೆ ಈರ್ಷ್ಯೆಯಿದ್ದ ಖುರೈಶಿಗಳಲ್ಲೊಬ್ಬ ಆ ಕ್ಯಾರವಾನನ್ನು ಲೂಟಿಹೊಡೆಯಲಿಕ್ಕಾಗಿ ಹವಾಜಿನರ ಆ ಕ್ಯಾರವಾನಿನ ಮುಖಂಡನನ್ನು ಹತ್ಯೆ ಮಾಡಿ ಸಂಪತ್ತನ್ನು ದೋಚಿದ.ಈ ಸುದ್ದಿ ತಿಳಿದ ಖುರೈಶಿಗಳೆಲ್ಲ ಮೆಕ್ಕಾದಲ್ಲಿ ಒಂದಾದರು ಅವರಿಗೆ ಮುಂದಾಗುವ ಅನಾಹುತದ ಮುನ್ಸೂಚನೆ ಸಿಕ್ಕಿತು.ಅವರ ಎಣಿಕೆಯಂತೆ ಹವಾಜಿನರು ಖುರೈಷಿಗಳ ಬೆನ್ನು ಹತ್ತಿದರು.ಆದರೆ ಅವರಾಗಲೆ ಮೆಕ್ಕಾದಲ್ಲಿದ್ದುದ್ದರಿಂದ ಪವಿತ್ರ ಸ್ಥಳದಲ್ಲಿ ಕಾದಾಡಲಾಗದೆ ಕೈಚೆಲ್ಲ ಬೇಕಾಯಿತು.ಹೀಗಾಗಿ ಮರುವರ್ಷ ಒಕಾಜ್'ನಲ್ಲೆ ಕಾದಾಡಲು ಆಮಂತ್ರಣ ನೀಡಿ ಹವಾಜಿನರು ಅಲ್ಲಿಂದ ನಿರ್ಗಮಿಸಿದರು.ಈ ಆಮಂತ್ರಣವನ್ನು ಒಪ್ಪಿದ ಖುರೈಷಿಗಳು ಮರುವರ್ಷ ತಪ್ಪದೆ ಬಂದು ಜೀವದ ಹಂಗು ಬಿಟ್ಟು ಹವಾಜಿನರೊಂದಿಗೆ ಕಾದಾಡಿದರು.ಹೀಗೆ ನಾಲ್ಕುವರ್ಷ ಕದನ ನಡೆದರೂ ಯಾರೊಬ್ಬರೂ ಗೆಲ್ಲದೆ,ಯಾರೊಬ್ಬರೂ ಸೋಲದೆ ಕಡೆಗೆ ಸಂಧಾನ ಅನಿವಾರ್ಯವಾಯಿತು! ಹವಾಜಿನರಲ್ಲೆ ಹೆಚ್ಚಿನ ಪ್ರಾಣ ಹಾನಿಯಾಗಿದ್ದರಿಂದ ಅವರಿಗೆ 'ರಕ್ತಹಣ' (blood money) ವನ್ನು ನೀಡುವ ನಿಯಮಕ್ಕನುಸಾರವಾಗಿ ಖುರೈಷಿಗಳು ತಮ್ಮ ಜನರನ್ನು ಅವರ ಬಳಿ ಒತ್ತೆಯಿತ್ತರು.ಅವರಲ್ಲಿ ಮುಂದೆ ಮಹಮದ್'ನ ನೆಂಟ ಹಾಗೂ ವೈರಿಯಾಗಿದ್ದ ಅಬು ಸಫ್ಯಾನನೂ ಒಬ್ಬನಾಗಿದ್ದ.ಈ ಕದನದಲ್ಲಿ ಖುರೈಷಿಗಳ ಪೈಕಿ ಎಲ್ಲಾ ಪಂಗಡದವರೂ ಪಾಲ್ಗೊಂಡಿದ್ದರು.ಉಮೈಯ್ಯಾ ಹಾಗೂ ಹಾಶಿಮ್ ಕುಟುಂಬದವರು ಅವರಲ್ಲಿ ಪ್ರಮುಖರಾಗಿದ್ದರು.ಈ ಕಾದಾಟದಲ್ಲಿ ಮಹಮದ್ ನೇರವಾಗಿ ಕತ್ತಿ ಹಿಡಿದು ಕಾದಾಡದಿದ್ದರೂ ರಣರಂಗದಲ್ಲಿ ಬತ್ತಳಿಕೆಯಿಂದ ನೆಲಕ್ಕೆ ಬಿದ್ದ ಬಾಣಗಳನ್ನು ಆಯುವ ಕೆಲಸ ಮಾಡಿ ಯೋಧರಿಗೆ ನೆರವಾದ.

ಈ 'ಅಪವಿತ್ರ ಯುದ್ಧ' ನಾಲ್ಕುವರ್ಷ ನಡೆದು ಶಾಂತಿ ನೆಲೆಸಿದ ನಂತರ ಮಹಮದ್ ಬುಡಕಟ್ಟಿನ ಕುರಿ-ಮೇಕೆಗಳನ್ನು ಊರ ಹೊರಗಿನ ಕಣಿವೆಗಳಲ್ಲಿ ಮೇಯಿಸುವ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ.ಗುಡ್ಡಬೆಟ್ಟಗಳಿಂದ ಆವೃತವಾಗಿದ್ದ ಈ ಪರಿಸರದಲ್ಲಿ ತನ್ನ ಸ್ವಭಾವಕ್ಕನುಗುಣವಾಗಿ ಏಕಾಂತದಲ್ಲಿ ಪ್ರಾಕೃತಿಕ ಸೌಂದರ್ಯ ಆಸ್ವಾದಿಸುತ್ತಾ,ಅಲ್ಲಿನ ಮೌನದಲ್ಲಿ ಲೀನವಾಗುವ -ಕಣಿವೆಯ ಭವ್ಯತೆಯನ್ನು ಅವಲೋಕಿಸಿ ಅನುಭವಿಸುವ ನಿರಾಯಾಸದ ಅವಕಾಶ ಮಹಮದನಿಗೆ ಒದಗಿ ಬಂತು.

ಒಂಟಿಯಾಗಿ ಕುರಿಮಂದೆಯೊಂದಿಗೆ ಹಗಲು ರಾತ್ರಿ ಕಳೆದರೂ ಮಹಮದ್ ಯವ್ವನದ ಸಹಜ ಆಕರ್ಷಣೆಗಳಿಗೆ ಬಲಿಯಾಗದೆ ತನ್ನ ಸದ್-ಚಾರಿತ್ರ್ಯವನ್ನು ಕಾಪಾಡಿಕೊಂಡು ಬಂದನು.ಉಚ್ಛರೀತಿಯ ನಡತೆಹೊಂದಿದ್ದ ಆತ ಮೆಲು ಮಾತಿನ-ನಾಜೂಕಿನ ನಡೆ ಹೊಂದಿದ್ದ ವ್ಯಕ್ತಿಯಾಗಿ ಗುರುತಿಸಲ್ಪಟ್ಟನು.ಗಾಂಭೀರ್ಯದ ರೀತಿಯಲ್ಲಿ ಪಳಗಿದ್ದ ಆತ ಏಕಾಗ್ರಚಿತ್ತನಾಗಿ ತನ್ನದೆ ಭಾವಪ್ರಪಂಚದಲ್ಲಿ ಮುಳುಗಿ ಹೋಗಿರುತ್ತಿದ್ದ.ಅವನ ಇವೆ ಗುಣಗಳಿಂದ ಮೆಕ್ಕಾ ನಿವಾಸಿಗಳಿಂದ ಮಹಮದ್ 'ಅಲ್-ಅಮೀನ್' ಎಂದು ಹೊಗಳಿಸಿಕೊಂಡ.ಹಾಗೆಂದರೆ ಅರಬ್ಬಿಯಲ್ಲಿ 'ಶ್ರದ್ಧಾಳು' ಎಂದರ್ಥ.ಹೀಗೆ ಯವ್ವನವನ್ನು ದೊಡ್ಡಪ್ಪ ಅಬುತಾಲಿಬನ ಮನೆಯಲ್ಲೆ ಕಳೆದ ಆತ ಮುಂದೆ ಅವನ ಸಂಸಾರದ ಸದಸ್ಯರ ಸಂಖ್ಯೆ ಹೆಚ್ಚಾಗಿ,ಸಂಸಾರ ನಿರ್ವಹಣೆಯ ಖರ್ಚು ಹೆಚ್ಚಾದುದರಿಂದ ತಾನೂ ದೊಡ್ಡಪ್ಪನ ಹೊಣೆಗೆ ಹೆಗಲುಕೊಡುವ ಅನಿವಾರ್ಯತೆ ಹುಟ್ಟಿತು.ಹೀಗಾಗಿ ಉದ್ಯೋಗದ ನಿಮಿತ್ತ ಮಹಮದನನ್ನು ಅಬು-ತಾಲಿಬ್ ಸಿರಿಯಾದ ಕಡೆ ಸಾಗುವ ಒಂದು ಕ್ಯಾರವಾನ್'ಗೆ ಸೇರಿಸಿದ.ಆ ಕ್ಯಾರವಾನ್ ಖತೀಜಾ ಎಂಬ ಸಿರಿವಂತ ವಿಧವೆಗೆ ಸೇರಿತ್ತು.ಮೊಹಮದ್ ಆ ಕ್ಯಾರವಾನಿನ ಭಾಗವಾದ,ತಾನು ಹದಿಮೂರುವರ್ಷಗಳ ಹಿಂದೆ ದೊಡ್ಡಪ್ಪನೊಂದಿಗೆ ಸಾಗಿದ ದಾರಿಯಲ್ಲೆ ಮತ್ತೆ ಈಗಲೂ ಆತ ಸಾಗಬೇಕಾಯಿತು.ಕ್ಯಾರವಾನ್ ಸಿರಿಯಾದ ರಾಜಧಾನಿ 'ಡಮಾಸ್ಕಸ್' ಸಮೀಪದ ಬೋಸ್ರಾದಲ್ಲಿ ಲಂಗರು ಹಾಕಿತು.ಮಹಮದ್ ಚಾಕಚಾಕ್ಯತೆಯಿಂದ ಉತ್ತಮ ವ್ಯಾಪಾರವನ್ನೆ ಮಾಡಿ ಲಾಭದೊಂದಿಗೆ ಮರಳಿ ಸ್ವದೇಶದತ್ತ ಹೆಜ್ಜೆ ಹಾಕಿದ.

ಆಗಲೆ ಬೋಸರಾ ಪಟ್ಟಣದಲ್ಲಿದ್ದ ಸಿರಿಯನ್ ಕ್ರೈಸ್ತರ ಸಂಪರ್ಕ ಮಹಮದನಿಗೆ ಆಗಿ ಅವರಿಂದ ಪ್ರಭಾವ ಹೊಂದುವಂತಾಯಿತು.ಅವರ ಪೂಜಾರಿ,ಸನ್ಯಾಸಿಗಳ ಹಾಗೂ ಉಚ್ಚವರ್ಗದವರೊಂದಿಗೆ ಧಾರ್ಮಿಕ ಚರ್ಚೆ-ವಿಚಾರ ವಿನಿಮಯ ನಡೆಯಲು ಅದು ಕಾರಣವಾಯಿತು.ಇದರ ಪರಿಣಾಮವನ್ನು ಮುಂದಿನ ಮಹಮದನ ಧರ್ಮಭೋದನೆಗಳಲ್ಲಿ ಕಾಣಬಹುದಾಗಿದೆ.ಮೆಕ್ಕಾಗೆ ಹಿಂದಿರುಗಿದ ಮೊಹಮದ್ ಖತೀಜಾಳಿಗೆ ವ್ಯಾಪಾರದ ಪ್ರಾಮಾಣಿಕ ಲೆಕ್ಖದ ವರದಿ ಒಪ್ಪಿಸಿದ.ಹೀಗೆ ಆತ ಆಕೆಯ ಮನಗೆದ್ದ.

(ಇನ್ನೂ ಇದೆ...)

15 October 2011

ಮರಳುಗಾಡಿನ ಮರ್ಮರ...(ಭಾಗ -4)

ಇಸ್ಮಾಯಿಲ್'ನ ವಂಶಸ್ಥರಲ್ಲಿ ಅವರ್ ಬಿನ್ ಲುಹಾಯಿ ಪ್ರಸಿದ್ಧನಾಗಿದ್ದ.ಬಲು ಧರ್ಮಿಷ್ಠನಾಗಿದ್ದ ಆತ ತನ್ನ ಉದಾರ ದಾನ-ಧರ್ಮಗಳ ಕಾರಣದಿಂದ ಜನಾನುರಾಗಿಯಾಗಿದ್ದ.ಈ ಜನಪ್ರಿಯತೆಗೆ ಮಾರುಹೋದ ಅಲ್ಲಿನ ಬುಡಕಟ್ಟಿನವರು ಅವನನ್ನೆ ತಮ್ಮ ರಾಜನನ್ನಾಗಿ ಘೋಷಿಸಿಕೊಂಡರು.ಮೆಕ್ಕಾ ಹಾಗು ಅಲ್ಲಿನ ಕಾಬಾ ಅವನ ಆಳ್ವಿಕೆಗೆ ಒಳಪಟ್ಟಿತ್ತು.ಮಧ್ಯಪ್ರಾಚ್ಯದ ದೇಶಗಳಾದ ಸಿರಿಯಾ,ಲೆಬೆನಾನ್ ಹಾಗೂ ಪ್ಯಾಲಸ್ತೈನ್'ಗಳನ್ನು ಸಂದರ್ಶಿಸಿದ ಆತ ಅಲ್ಲಿನ ವಿಗ್ರಹಾರಾಧನೆಗಳಿಂದ ಅತ್ಯಂತ ಪ್ರಭಾವಿತನಾಗಿ ಅಲ್ಲಿಂದ ಮರಳುವಾಗ ತನ್ನ ಜೊತೆಯಲ್ಲಿಯೆ ಮೆಕ್ಕಾಗೆ ಒಂದು ವಿಗ್ರಹ ತಂದ.'ಹುಬಾಬ್' ಎಂದು ಆತ ಅದನ್ನು ಕರೆದು ಕಾಬಾದಲ್ಲಿ ಅದನ್ನ ಪ್ರತಿಷ್ಠಾಪಿಸಿದ.ತನ್ನ ಜನರಿಗೆ ಅದನ್ನ ಆರಾಧಿಸಲು ಆತ ಕರೆನೀಡಿದ.ತಮ್ಮ ರಾಜನ ಆಗ್ರಹಕ್ಕೆ ಮಣಿದ ಬುಡಕಟ್ಟಿನ ಮಂದಿ ಮತ್ತೆ ಹಳೆಯ ವಿಗ್ರಹಾರಾಧನೆಗೆ ಮರಳಿದರು.

ಇಸ್ಲಾಮಿಕ್ ನಂಬಿಕೆಗಳ ಪ್ರಕಾರ ಅಬ್ರಾಹಂ ಹಾಗೂ ಇಸ್ಮಾಯಿಲ್ ಕಾಬಾವನ್ನು ನಿರ್ಮಿಸಿದ ಬಳಿಕ ಅದರ ಒಡೆತನವನ್ನು "ಜೋರ್'ಹೂಮ್" ಬುಡಕಟ್ಟಿನವರು ತಮ್ಮ ವಶಕ್ಕೆ ತೆಗೆದುಕೊಂಡರು.ಆದರೆ ಅವರ ದುಂಡಾವರ್ತಿ ನಡೆ ಹೆಚ್ಚಿದ್ದರಿಂದ ಮೆಕ್ಕಾದ ಖುರೈಷಿ ಪಂಗಡದವರು ಅವರನ್ನು ಅಲ್ಲಿಂದ ಹೊಡೆದೋಡಿಸಬೇಕಾಯಿತು.ಖುರೈಷಿಗಳಲ್ಲಿ ಹುಲುಲ್ ಹಾಗೂ ಅರಾಮ್ ಎಂಬ ಎರಡು ಪಂಗಡಗಳಿದ್ದವು.ಅಲ್ಲದೆ 'ಬಾನ್ ಕಿನಾನಾಹ್' ಎನ್ನುವಲ್ಲಿಂದ ವಲಸೆ ಬಂದಿದ್ದ ಅನೇಕ ಕುಟುಂಬಗಳೂ ಮೆಕ್ಕಾದಲ್ಲಿ ವಾಸವಿದ್ದವು.ಖುರೈಷಿಗಳ 'ಕಹುಜಾಹ್ನ್' ಎಂಬಾತ ಕಾಬಾದ ಪಾರುಪತ್ಯ ವಹಿಸಿಕೊಂಡ.ಅನಂತರದ ಪಾರುಪತ್ಯದ ಜವಾಬ್ದಾರಿ ಅವನ ಸಂತತಿಯವರಿಗೆ ಸಂದಿತು.ಅವರು ಮುಂದೆ ಹಲೀಲ್ ಬಿನ್ ಹುಬೈಷಾ ಎಂಬಾತನಿಗೆ ಅದನ್ನ ವಹಿಸಿಕೊಟ್ಟರು.ಈ ಹಲೀಲ್'ನ ಮಗಳನ್ನು ಕುಸೈ ಬಿನ್ ಕಿಲಾಬ್ ಎಂಬಾತ ಲಗ್ನವಾಗಿ ಹಲೀಲ್ ಮರಣ ಹೊಂದಿದ ಬಳಿಕ ಬುಡಕಟ್ಟಿನ ಇತರ ಆಕ್ಷಾಂಶಿಗಳೊಂದಿಗೆ ಕಾದಾಡಿ ಕಾಬಾದ ಪಾರುಪತ್ಯಕ್ಕೆ ಪ್ರಯತ್ನಿಸಿದ.ಅಂತಿಮವಾಗಿ ಒಪ್ಪಂದವೊಂದು ಜರುಗಿ ಖುರೈಶಿಗಳಿಗೆ ಅಲ್ಲಿ ಹೆಚ್ಚಿನ ಅಧಿಕಾರ ಇರುವುದಾಗಿ ತೀರ್ಮಾನ ಹೊರಬಿದ್ದು ಅವನಿಗೆ ಕಾಬಾದ ಪಾರುಪತ್ಯವನ್ನ ಅವರ ಸಮ್ಮತಿ ಪಡೆದು ವಹಿಸಲಾಯ್ತು.ಅವನು ಕ್ರಮೇಣ ತನ್ನವರನ್ನಲ್ಲಿಗೆ ಬರಮಾಡಿಕೊಂಡು ಮುಂದೆ ತಾನೆ ಅಲ್ಲಿನ ರಾಜ ಎಂದು ಕರೆದುಕೊಂಡ!

ಕುಸೈನ ಆಡಳಿತದಲ್ಲಿ ಕಾಬಾಕ್ಕೆ ಬರುವ ಯಾತ್ರಿಕರಿಗೆ ನೀರು ನೀಡುವ ಪವಿತ್ರ ಕಾರ್ಯ ,'ಎನ್-ನದ್ವಾ' ಸಭಾಂಗಣದ ಯಜಮಾನಿಕೆ,ಯುದ್ಧ ದ್ವಜದ ಸ್ವಾಧೀನತೆ ಅವನ ಬಳಿಯೆ ಇತ್ತು.ಅವನ ನಂತರ ಅವನ ನಾಲ್ವರು ಮಕ್ಕಳು ಸೌಹಾರ್ದತೆಯಿಂದ ಭಿನ್ನಾಭಿಪ್ರಾಯಕ್ಕೆ ಎಡೆ ಮಾಡಿಕೊಡದಂತೆ ತಂದೆ ಹಾಕಿಕೊಟ್ಟಿದ್ದ ದಾರಿಯಲ್ಲೆ ಆಡಳಿತದ ಯಜಮಾನಿಕೆ ನಡೆಸಿದರು.ಆನಂತರ ಅವನ ಸಹೋದರರ ಮಕ್ಕಳ ಕೈಮೇಲಾಗಿ ಖುರೈಶಿಯರ ಅಬ್ಬೆ ಮುನಾಫನ ಮಗ ಅಲ್-ಮುತ್ತಲಿಬ್ ಪ್ರಮುಖನಾಗಿ ಹೊಮ್ಮಿದ.ಅವನ ನಂತರ ಮೆಕ್ಕಾ ಅವನ ತಮ್ಮ ಹಾಶೀಮನ ಕೈಸೇರಿತು.ಆದರೆ ಉಮಯ್ಯ ಎಂಬಾತ ಚಿಕ್ಕಪ್ಪನ ಮೇಲೆ ಹಕ್ಕಿಗಾಗಿ ವಾಜ್ಯ ಹೂಡಿದ.ಇದು ಪ್ರಕೋಪಕ್ಕೆ ತಿರುಗಿ ಹೋರಾಟ ನಡೆದರೂ ಹಾಶೀಮನದೆ ಮೇಲುಗೈಯಾಯಿತು.ಕ್ರಿಸ್ತಶಕ 510ರಲ್ಲಿ ಹಾಶೀಮ್ ಸತ್ತ ನಂತರ ಅವನ ಮಗ ಅಬ್ದುಲ್ ಮುತ್ತಾಲಿಬ್ ಬೆಳಕಿಗೆ ಬಂದ.ಇವನಿಗೆ ಒಟ್ಟು ಹನ್ನೆರಡು ಗಂಡು ಹಾಗು ಆರು ಹೆಣ್ಣು ಮಕ್ಕಳಿದ್ದರು.ಮುಂದೆ ಪ್ರವಾದಿ ಎಂದೆನಿಸಿದ ಮಹಮದ್ದನ ತಂದೆ ಅಬ್ದುಲ್ಲಾ ಇವರಲ್ಲೊಬ್ಬ.ಆತ ನಂತರ 'ಖುರಾಯಿಶ್' ಬುಡಕಟ್ಟಿನ 'ಸುಹ್ರಾ' ಮನೆತನದ ಅಮೀನಾ ಎನ್ನುವ ಕನ್ಯೆಯನ್ನ ವಿವಾಹ ಮಾಡಿಕೊಂಡ,ಇವರ ಒಬ್ಬನೆ ಮಗ ಮಹಮದ್.ದಾಖಲೆಗಳ ಪ್ರಕಾರ ಮಹಮದ್ ಜನಿಸಿದ್ದು ಕ್ರಿಸ್ತಶಕ 571ರಲ್ಲಿ.ಈ ಕಾಲಘಟ್ಟದಲ್ಲಿ ಮೆಕ್ಕಾದ ಮೇಲಿನ ಹಕ್ಕಿಗಾಗಿ ಆಗಾಗ ಹಾಶಿಮ್ ಹಾಗು ಉಮಯ್ಯಾನ ಸಂತತಿಯವರು ಕಾದಾಡುತ್ತಲೆ ಇದ್ದರು.ಅಲ್ಲಿನ ಶೇಖ್ ಪದವಿ ಗಳಿಸಿದ ಹಶೀಂ ಕುಲದವರು ಉಮೈದರನ್ನು ಅವಕಾಶ ಸಿಕ್ಕಾಗಲೆಲ್ಲ ಹೀಯಾಳಿಸಿ-ಕೆಣಕಿ ಈರ್ಷ್ಯೆಯಿಂದ ಅವರ ಸ್ಥಾನಮಾನಗಳಿಗೆ ಧಕ್ಕೆ ತರುತ್ತಲೆಯಿದ್ದರು.ಜೋರ್'ಹೂಮ್' ಬುಡಕಟ್ಟಿನವರು ಕಾದಾಟದಲ್ಲಿ ಸೋತ ನಂತರ ಮೆಕ್ಕಾದ ಒಡೆತನ ಖುಜಾಹ ಬುಡಕಟ್ಟಿಗೆ ಸರಿದಾಗ ಅವರು ಅಲ್ಲಿನ ಪವಿತ್ರ ಕಪ್ಪುಶಿಲೆ 'ಮುಕಾಂ ಇಬ್ರಾಹಿಮ್'ನ್ನು ಹಾಗೂ ಜುಮ್ ಜುಮ್ ಬಾವಿಯನ್ನೂ ಯಾರಿಗೂ ಸಿಗದಂತೆ ಹುಗಿದು ಮೆಕ್ಕಾವನ್ನು ತ್ಯಜಿಸಿ ಹೋದರು.ಕ್ರಮೇಣ ಕುಸೈ ಬಿನ್ ಕಿಲಾಬನ ಕಾಲಕ್ಕೆ ಮತ್ತೆ ಮೆಕ್ಕಾ ಮೆರಗು ಪಡೆಯಿತು.ಖುರೈಷಿಗಳು ಬಂದು ಅಲ್ಲಿ ನೆಲೆಯೂರಿದರು.ಆದರೆ ಅಬ್ದುಲ್ ಮುತ್ತಾಲಿಬನ ಕಾಲದವರೆಗೂ ಜುಮ್ ಜುಮ್ ಬಾವಿ ಪತ್ತೆಯೆ ಆಗಿರಲಿಲ್ಲ.ಮಹಮದ್'ನ ಅಜ್ಜ ಅಬ್ದುಲ್ ಮುತ್ತಲಿಬ್'ನಿಗೆ ಒಂದು ರಾತ್ರೆ ಬಿದ್ದ ಕನಸು ಅದರ ಕುರುಹನ್ನು ತೋರಿಸಿತು .ಆಪ್ರಕಾರವೆ ನೆಲ ಅಗೆದ ಅವನಿಗೆ ಬಾವಿ ಗೋಚರಿಸಿತು.ಇನ್ನೂ ನೆಲ ಅಗೆದಾಗ ಅಪಾರ ಶಸ್ತ್ರಾಸ್ತ್ರ ಹಾಗೂ ಚಿನ್ನಾಭರಣಗಳೂ ಅಲ್ಲಿ ದೊರೆತವು.ಇದರ ವಾಸನೆ ಹಿಡಿದ ಖುರೈಷಿಗಳು ಸಂಪತ್ತಿನ ಹಂಚಿಕೆಗೆ ಕೋರಿದರು,ಆದರೆ ಅಬ್ದುಲ್ ಮುತ್ತಾಲಿಬ್ ನಿರಾಕರಿಸಿದ.ಆದರೆ ಆತ ಸಮಸ್ಯೆಯ ಪರಿಹಾರಕ್ಕೆ ಮಧ್ಯವರ್ತಿಯೋಬ್ಬನ ನೇಮಕಕ್ಕೆ ಒಪ್ಪಿಕೊಂಡ! ಅದೆ ಸಮಯಕ್ಕೆ ಒಂದು ವಿಚಿತ್ರವಾದ ಹರಕೆಯನ್ನೂ ಹೊತ್ತ.

ಅದೇನೆಂದರೆ ದೇವರು ತನಗೆ ಹತ್ತು ಮಕ್ಕಳನ್ನು ಕರುಣಿಸಿದರೆ ಅವರಲ್ಲಿ ಒಬ್ಬನನ್ನು ಆತ ವಯಸ್ಸಿಗೆ ಬಂದ ಕೂಡಲೆ ಕಾಬಾದ ಗುಡಿಗೆ ಬಲಿನೀಡುವೆ! ಎಂಬುದಾಗಿತ್ತು.ಅದೆ ಪ್ರಕಾರ ಅವನಿಗೆ ಸಾಲಾಗಿ ಹತ್ತು ಮಕ್ಕಳಾದವು.ಅವರಲ್ಲಿ ಅಬ್ದುಲ್ಲ ಎಂಬಾತನಿದ್ದ,ಅವನೆ ಮುಂದೆ ಮಹಮದ್'ನ ತಂದೆಯಾದದ್ದು.ಮಕ್ಕಳಿಗೆ ಈ ವಿಷಯ ಅರುಹಿದ ಮುತ್ತಲಿಬ್,ಅವರು ತಂದೆಯ ಹರಕೆ ಪೂರೈಸಲು ಸಿದ್ಧರಾದರು.ಆದರೆ ಯಾರನ್ನ ಬಲಿ ನೀಡೋದು ಎಂಬ ಪ್ರಶ್ನೆ ಉದ್ಭವಿಸಿತು.

ಅದಕ್ಕೆ ಪರಿಹಾರವಾಗಿ ಕಾಬಾದ 'ಹುಬುಲ್' ವಿಗ್ರಹದ ಮುಂದೆ ಹತ್ತೂ ಜನರ ಹೆಸರು ಬರೆದ ಪ್ರತ್ಯೇಕ ಬಾಣಗಳನ್ನಿಟ್ಟು ಅಲ್ಲಿನ ಪೂಜಾರಿಯಿಂದ ಒಂದನ್ನು ಎತ್ತಿಸಲಾಯಿತು.ಸಂಪ್ರದಾಯದ ಪ್ರಕಾರ ಅದನ್ನ ಬಿಲ್ಲಿಗೆ ಹೂಡಿ ಹೊಡೆದಾದ ನಂತರ ನೋಡಿದಾಗ ಅದು ಅಬ್ದುಲ್ಲಾನ ಹೆಸರಿನದಾಗಿತ್ತು! ಅವನ ಬಗ್ಗೆ ಕನಿಕರಗೊಂಡ ಖುರೈಷಿಗಳು ಮುತ್ತಲಿಬ್ ಬಲಿ ನೀಡಲು ಒರೆಯಿಂದ ಕತ್ತಿ ತೆಗೆದಾಗಲೆ ಅವನನ್ನ ತಡೆದರು.ಹೀಗಾದರೆ ಹರಕೆ ಪೂರೈಕೆ ಹೇಗೆಂದು ಆತ ಕೇಳಿದಾಗ,ಅಬ್ದುಲ್ಲಾನ ಬದಲು ಹತ್ತು ಒಂಟೆ ಬಲಿನೀಡಲು ಸೂಚಿಸಲಾಯಿತು.ಅವರ ಸೂಚನೆಯಂತೆ ಒಂಟೆಗಳನ್ನು ಪ್ರತಿನಿಧಿಸುವ ಹೆಸರುಗಳ ಒಟ್ಟಿಗೆ ಅಬ್ದುಲ್ಲಾನ ಹೆಸರಿನ ಚೀಟಿ ಇಟ್ಟು ಎತ್ತಿದಾಗ ಅಬ್ದುಲ್ಲನ ಚೀಟಿಯೆ ಬಂತು! ಹೀಗೆ ಹತ್ತರ ಸಂಖ್ಯೆಗಳಲ್ಲಿ ಒಂಟೆಗಳ ಸಂಖ್ಯೆ ಹೆಚ್ಚಿಸುತ್ತಾ ಹೋದಾಗಲೂ ದುರಾದೃಷ್ಟವಶಾತ್ ಅಬ್ದುಲ್ಲಾನ ಹೆಸರೆ ಮತ್ತೆ ಮತ್ತೆ ಬಂತು! ಕಡೆಗೆ ಅವನ ಹೆಸರು ತಪ್ಪಿದ ಚೀಟಿ ಮೇಲೇಳುವಾಗ ಒಂಟೆಗಳ ಸಂಖ್ಯೆ ನೂರು ಮುಟ್ಟಿತ್ತು.ಹೀಗಾಗಿ ಆ ನೂರೂ ಒಂಟೆಗಳನ್ನ ಬಲಿನೀಡಿ ಮುತ್ತಲಿಬ್ ತನ್ನ ಹರಕೆ ಮುಟ್ಟಿಸಿದ.ಹೀಗಾಗಿ ಮುಂದೆ ಮಹಮದ್ ತಾನು 'ಎರಡು ಬಲಿದಾನಗೈದವರ ಮಗ" ಎಂದು ಹೇಳಿಕೊಳ್ಳಲು ಇದೆ ಕಾರಣ.

ಮೆಕ್ಕವನ್ನ ಯಾವ ಅಧಿಕೃತ ಸರಕಾರಗಳೂ ಎಂದೂ ಆಳಿರಲಿಲ್ಲ.ಅದು ಆಗಾಗ ಬುಡಕಟ್ಟುಗಳ ಅಧೀನದಲ್ಲಷ್ಟೆ ಇತ್ತು.ಅವಕ್ಕೂ ಅವುಗಳದ್ದೆ ಆದ ರೀತಿನೀತಿ,ನಡೆನುಡಿಗಳಿದ್ದವು.ಕ್ಷುಲ್ಲಕ ಕಾರಣಕ್ಕೂ ರಕ್ತಚಲ್ಲಿ ಕಾದಾಡುವ ಹಾಗೂ ಪ್ರತಿಕಾರಕ್ಕಾಗಿ ಹಾತೊರೆಯುವ ಅರಬ್ಬರ ಗುಣ ಇಂದಿಗೂ ಅಷ್ಟೆ ಪ್ರಖರವಾಗಿರುವುದನ್ನು ಕಾಣಬಹುದಾಗಿದೆ.

ಒಂದು ಬಾರಿ ಒಬ್ಬನ ರಕ್ತ ಚಲ್ಲಿದಾಗ ಆ ವ್ಯಕ್ತಿಯ ಕುಟುಂಬ,ಬುಡಕಟ್ಟು,ಪಂಗಡ,ಜನಾಂಗದ ಉಳಿದವರು ಅವನನ್ನು ಕೊಲೆ ಮಾಡಿದ ವ್ಯಕ್ತಿಯನ್ನು ಅಥವಾ ಅವನ ಬುಡಕಟ್ಟನ್ನು ಪ್ರತಿಕಾರದ ಸಲುವಾಗಿ ಬೇಟೆಯಾಡುವುದು ಅಂದೂ ಸಾಮಾನ್ಯವಾಗಿತ್ತು,ಇಂದೂ ಸಾಮಾನ್ಯವಾಗಿಯೆ ಉಳಿದುಬಂದಿದೆ! ಹಾಗೊಂದುವೇಳೆ ಎದುರಾಳಿಗಳು ಬಲಿಷ್ಠರಾಗಿದ್ದಾಗ ಕೆಲಕಾಲ ಹಿಂದಡಿ ಇಡಲಾಗುತ್ತಿತ್ತಾದರೂ ಒಂದೊಮ್ಮೆ ಅವಕಾಶ ಸಿಕ್ಕರೆ ಪ್ರತಿಕಾರ ತೀರಿಸಿಕೊಳ್ಳುವುದು ತಮ್ಮ ಜನ್ಮಸಿದ್ಧ ಹಕ್ಕೆಂದೆ ಅಲ್ಲಿ ಬಗೆಯಲಾಗುತ್ತಿತ್ತು.ಅದಕ್ಕೆ ಅಗತ್ಯವಾಗಿ ಇನ್ನೊಬ್ಬ ಬಲವಂತನ ನೆರವನ್ನು ಪಡೆಯಲಾಗುತ್ತಿತ್ತು.ಅಂತಹ ಒಬ್ಬ ಬಲವಂತನೆ ಪ್ರವಾದಿ ಮಹಮದ್ ಪೂರ್ವಜ ಕೂಸೈ.ಕ್ರಿಸ್ತಶಕ 400ರ ಕಾಲಕ್ಕೆ ಈತ ಪ್ರಶ್ನಾತೀತನಾಗಿರಲು ಜನಬೆಂಬಲಿತ ಈತನ ಬಾಹುಬಲವೆ ಕಾರಣ ಎಂದರೂ ತಪ್ಪಿಲ್ಲ.

(ನಿರೂಪಣೆ ಇಲ್ಲಿಗೆ ಮುಗಿಯಿತು...ಇನ್ನು ಪ್ರವಾದಿಯ ಕಥೆ ಶುರು...)