08 March 2022

ಅವನ ಜೊತೆ ಅವಳ ಕಥೆ - ೭

ಅವಳ ಜೊತೆ ಅವನ ಕಥೆ.....


ಊರಿನ ಅಂಗಡಿ ಬೀದಿಯ ಮರ್ತಪ್ಪಯ್ಯನ ಅಂಗಡಿಯಿಂದ ಕಳೆದ ಹಂಗಾಮಿಗೆ ಮಾರಿದ್ದ ಚೀಸ್ˌ ಉಪ್ಪು ಬೆರೆಸಿದ ಗಿಣ್ಣು ಗಟ್ಟಿˌ ತುಪ್ಪ ಹಾಗೂ ಬೆಣ್ಣೆಯ ಬಾಬ್ತು ಹತ್ತು ರೂಪಾಯಿ ವಸೂಲಿ ಮಾಡೋದಿತ್ತು. ಈ ಬಾರಿ ತೋಟದ ಮನೆಯಲ್ಲಿ ತಯಾರಾಗಿದ್ದ ಪೂರ್ತಿ ಹೈನೋತ್ಪನ್ನಗಳನ್ನ ಮರ್ತಪ್ಪಯ್ಯನೆ ಕೊಂಡಿದ್ದ. ಇತ್ತೀಚೆಗೆ ಹೊಸ ಊರುಗಳಿಗೂ ತನ್ನ ಸಗಟು ವ್ಯಾಪಾರದ ಉದ್ಯಮ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದ ಮರ್ತಪ್ಪಯ್ಯ ಹೈನೋತ್ಪನಗಳ ಜೊತೆ ಮೇಪಲ್ ಸಕ್ಕರೆˌ ಜೇನುತುಪ್ಪˌ ಆಲಿವ್ ಎಣ್ಣೆˌ ಸೋಪುಗಳುˌ ಮೇಣದ ಬತ್ತಿಗಳುˌ ದೀಪದ ಬತ್ತಿಗಳುˌ ಲಾವಂಚದ ಬೇರಿನ ಕತ್ತಗಳುˌ ಮನೆಯಲ್ಲೆ ಕ್ರೋಷಾ ಹಾಕಿ ಅವಳು ನೇಯ್ದಿಟ್ಟಿದ್ದ ಉಣ್ಣೆಯ ಕಿವಿಗಾಪು ಸಹಿತವಾದ ಬೆಚ್ಚನೆ ಟೊಪ್ಪಿಗಳುˌ ಕೈಗವಸುಗಳು ಹಾಗೂ ಕಾಲ್ಚೀಲಗಳನ್ನೂ ಇವನಿಂದ ಎರಡು ಮೂರು ಭೇಟಿಗಳಲ್ಲಿ ಪಡೆದಿದ್ದ. ಅವೆಲ್ಲವನ್ನೂ ಅವನು ಪಶ್ಚಿಮದ ದೆಸೆಯಲ್ಲಿ ಹೊಸತಾಗಿ ಆರಂಭವಾದ ಊರುಗಳ ಗ್ರಾಹಕರಿಗೆ ಪೂರೈಸಿ ದಳ್ಳಾಳಿ ದರದಲ್ಲಿಯೆ ನೂರಾರು ರೂಪಾಯಿ ಲಾಭ ಸಂಪಾದನೆ ಮಾಡಿಬಿಟ್ಟಿದ್ದ.

ಆದರೆ ಆರಂಭದಲ್ಲಿ ಪೂರ್ತಿ ಹಣ ಪಾವತಿಸಿ ಸರಕುಗಳನ್ನ ಒಮ್ಮೆಲೆ ಖರೀದಿಸಲು ಬಂಡವಾಳ ಹೂಡುವಷ್ಟು ಕಳೆದ ಸಲ ಅವನ ವ್ಯಾಪಾರ ಚೆನ್ನಾಗೇನೂ ನಡೆದಿರಲಿಲ್ಲ. ಅವನು ಕಳೆದ ಸಾಲಿನಲ್ಲಿ ಇತರ ರೈತರಿಂದ ಖರೀದಿಸಿದ್ದ ಕೆಲವು ತೋಟದುತ್ಪನ್ನಗಳ ಗುಣಮಟ್ಟ ನಿರೀಕ್ಷೆಗೂ ಮೀರಿ ಕಳಪೆಯಾಗಿದ್ದುದೆ ಅದಕ್ಕೆ ಕಾರಣವಾಗಿತ್ತು. ಖರೀದಿದಾರರು ಇವನು ಹೇಳಿದ್ದ ಬೆಲೆ ಪಾವತಿಸಿ ಆ ಮೂರನೆ ದರ್ಜೆಯ ಸರಕನ್ನ ಖರೀದಿಸಲು ಸುತಾರಂ ಒಪ್ಪಿರಲಿಲ್ಲ. ಈಗ ಇಷ್ಟು ದೂರ ಮೈಲುಗಟ್ಟಲೆ ಪಶ್ಚಿಮದ ಊರುಗಳಿಗೆ ಸರಕನ್ನ ಸಾಗಿಸಿಯಾದ ಮೇಲೆ ಹಾಗೆಲ್ಲಾ ಅದನ್ನ ಮರಳಿ ಕೊಂಡೊಯ್ಯುವ ಹಾಗೂ ಇರಲಿಲ್ಲ. ಅವುಗಳಲ್ಲಿ ಕೆಲವು ವಸ್ತುಗಳಂತೂ ತೀರ ವಾರೊಪ್ಪತ್ತಿನಲ್ಲಿ ಬಳಸದಿದ್ದರೆ ಕೆಡುವ ಆಹಾರ ಪದಾರ್ಥಗಳೂ ಆಗಿದ್ದುದು ಅವನ ಸಂಕಟವನ್ನ ಮತ್ತಷ್ಟು ಹೆಚ್ಚಿಸಿತ್ತು.

ಹೀಗಾಗಿ ಹೂಡಿದ ಬಂಡವಾಳಕ್ಕೆ ಚೂರು ಮೋಸವಾದರೂನು ಬಂದಷ್ಟು ಬರಲಿ ನಷ್ಟ ಕಡಿಮೆಯಾಗಲಿ ಅನ್ನುವ ಧೋರಣೆಗೆ ಜೋತು ಬಿದ್ದ ಮರ್ತಪ್ಪಯ್ಯ ದಕ್ಕಿದ ಬೆಲೆಗೆ ಸರಕುಗಳನ್ನ ಮಾರಾಟ ಮಾಡಿ ಸಂಭವನೀಯ ಭಾರಿ ನಷ್ಟಕ್ಕೊಳಗಾಗುವ ಸಂಕಟದಿಂದ ಹೇಗೋ ಪಾರಾಗಿದ್ದ. ಇವನ ತೋಟದ ಮೂಲದ ಸರಕುಗಳ ಹೊರತು ಮಿಕ್ಕೆಲ್ಲರದೂ ಕಳಪೆ ದರ್ಜೆಯ ಉತ್ಪನ್ನಗಳಾಗಿತ್ತು ಅನ್ನುವ ಅಂಶವನ್ನ ಅಂತಹ ಸೋಲಿನ ಸಮಯದಲ್ಲೂ ಮರ್ತಪ್ಪಯ್ಯನ ಹಟ್ಟು ವ್ಯಾಪಾರಿ ಬುದ್ಧಿ ಗುರುತಿಸಿತ್ತು. ಹೀಗಾಗಿ ಈ ಸಾರಿ ಮುಂಗಡವಾಗಿ ಬಾಯಿ ಮಾತಿನ ಒಪ್ಪಂದ ಮಾಡಿಕೊಂಡು ಈ ಇವನ ಎಲ್ಲಾ ತಯಾರಿಕೆಗಳನ್ನೂ  ಸೂಕ್ತ ಬೆಲೆ ಕೊಟ್ಟು ಖರೀದಿಸಲು ಅವನು ತಯ್ಯಾರಾದ. ಮರ್ತಪ್ಪಯ್ಯನ ಕಳೆದ ಹಂಗಾಮಿನ ನಷ್ಟದ ವ್ಯವಹಾರದ ಅರಿವಿದ್ದ ಇವನೂ ಸಹ ಒಂದು ನಂಬಿಕೆಯ ಮೇಲೆ ಕೇವಲ ಕನಿಷ್ಠ ಮುಂಗಡದ ಮೇಲೆ ಊರಿಟ್ಟ ಮಾಂಸ ಮೀನು ಮೊಟ್ಟೆ ಹಾಗೂ ಚರ್ಮದ ಹೊರತು ಬಾಕಿ ಇನ್ನುಳಿದ ತನ್ನ ಸಕಲ ಉತ್ಪನ್ನಗಳನ್ನೂ ಅವನಿಗೆ ವಿಕ್ರಯಿಸಲು ಒಪ್ಪಿಸಿದ್ದ.

ಮಾಂಸದ ಉತ್ಪನ್ನಗಳನ್ನ ಅವನು ಕಳೆದ ಮೂರು ವರ್ಷಗಳಿಂದಲೂ ಕಸಾಯಿ ಕುಬೇರಣ್ಣನಿಗೆ ಮಾರುತ್ತಿದ್ದನಾಗಿˌ ಅದನ್ನ ತಪ್ಪಿಸಿ ಬೇರೆಯವರಿಗೆ ಕೊಡುವಂತೆ ಇರಲಿಲ್ಲ. ಅಲ್ಲದೆ ತನ್ನ ಎಲ್ಲಾ ಮೊಟ್ಟೆಗಳನ್ನ ಒಂದೆ ಬುಟ್ಟಿಯಲ್ಲಿಡೋದು ಅಷ್ಟು ಜಾಣತನವೂ ಆಗಿರೋದಿಲ್ಲವಲ್ಲ. ಧಾನ್ಯˌ ಹಣ್ಣು ಹಾಗೂ ತರಕಾರಿಗಳನ್ನ ಅವನೆಂದೂ ಪಟ್ಟಣಕ್ಕೆ ತಂದು ಮಾರಿದವನಲ್ಲ. ಶೆಟ್ಟರ ಅಂಗಡಿಯ ಸಹೋದರರು ಒಕ್ಕಣೆಯ ಸಮಯ ತೋಟದ ಮನೆಯ ಕಣಕ್ಕೆ ತಾವೆ ನೇರ ಭೇಟಿ ಕೊಟ್ಟು ಹಣ ಪಾವತಿಸಿ ಸಾಗಿಸಿ ಬಿಡುತ್ತಿದ್ದರು. ಹೀಗಾಗಿ ಅವುಗಳನ್ನೂ ಸಹ ಮರ್ತಪ್ಪಯ್ಯನಿಗೆ ಮಾರುವ ಸಂಭವವಿರಲಿಲ್ಲ. ಟೊಮೇಟೋ ಹಾಗೂ ಹಣ್ಣುಗಳನ್ನ ನೇರವಾಗಿ ಕಿತ್ತು ಮಾರುವ ಬದಲು ಅದನ್ನ ಮೊರಬ್ಬˌ ಉಪ್ಪಿನಕಾಯಿ ಮಾಡಿ ಮಾರಿದರೆ ಹೆಚ್ಚು ಬಾಳಿಕೆ ಬರುವ ಕಾರಣ ಲಾಭದಾಯಕ ಎಂದೂˌ ದಯವಿಟ್ಟು ಮುಂದಿನ ಹಂಗಾಮಿನಿಂದ ಅವನ್ನ ತಯಾರಿಸಿ ತನಗೆ ಕೊಡುವಂತೆಯೂˌ ಪಶ್ಚಿಮದಲ್ಲಿ ಅವಕ್ಕೆ ಭಾರಿ ಬೇಡಿಕೆಯಿದೆಯಂತಲೂ ಮರ್ತಪ್ಪಯ್ಯ ವಿನಂತಿಸಿದ್ದ. ಈ ಚಳಿಗಾಲದ ನಂತರ ವಸಂತದಲ್ಲಿ ಅದರ ಶ್ರೀಕಾರವನ್ನೂ ಹಾಡುವ ಉತ್ಸಾಹದಲ್ಲಿ ಅವನಿದ್ದ.

ಈ ಬಾಕಿಯೆಲ್ಲ ಸೇರಿದರೆ ಸುಮಾರು ನೂರಿಪ್ಪತ್ತು ರೂಪಾಯಿ ಬಾಯಿ ಮರ್ತಪ್ಪಯ್ಯನೊಬ್ಬನಿಂದಲೆ ವಸೂಲಿಯಾಗಬೇಕಿದ್ದುದುˌ ಅವನಿಂದ ಇಪ್ಪತ್ತೈದು ರೂಪಾಯಿಯ ಕಂತಾದರೂ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದ. ಇನ್ನುಳಿದಂತೆ ಅವನ ಅಂಗಡಿಯಲ್ಲೆ ಮನೆಗೆ ಅಗತ್ಯವಾದ ಉಣ್ಣೆ ಉಂಡೆˌ ಚಹಾ ಪುಡಿˌ ಬಿಳಿ ಸಕ್ಕರೆˌ ಜೋಳದ ಹಿಟ್ಟುˌ ಅಕ್ಕಿ ಹಿಟ್ಟುˌ ರಾಗಿ ಹಿಟ್ಟುˌ ಚುಮಣಿ ಎಣ್ಣೆˌ ಉಪ್ಪುˌ ಹಲ್ಲುಪುಡಿˌ ಕಾಳು ಮೆಣಸುˌ ಲವಂಗˌ ಏಲಕ್ಕಿˌ ಜಾಯಿಕಾಯಿˌ ಚಕ್ಕೆˌ ಒಣಮೆಣಸು ಹೀಗೆ ಪೂರ್ವದಿಂದ ಅಮದಾಗುವ ವಸ್ತುಗಳನ್ನ ಖರೀದಿಸುವವನಿದ್ದುˌ ಅದರ ದರ ಎರಡರಿಂದ ಎರಡೂವರೆ ರೂಪಾಯಿಗಳಾದರೂ ಆಗಲಿದ್ದವು.

ಜೊತೆಗೆ ಕುಬೇರಣ್ಣ ಕೊಡಬೇಕಿದ್ದ ಹಣ ಹದಿನೈದು ರೂಪಾಯಿಯೂ ಈ ಬಾಬ್ತಿಗೆ ಸೇರಿದರೆ ಒಟ್ಟು ವಸೂಲಾಗುವ ನಲವತ್ತು ರೂಪಾಯಿಗಳಲ್ಲಿ ಮಠದ ವಾರ್ಷಿಕ ವಂತಿಗೆಯ ಬಾಬ್ತು ಎಂಟಾಣೆ ಕೊಟ್ಟುˌ ರಾಜನಿಗೆ ಮೂರು ಕಾಸಿನ ಬೆಂಡು ಬತ್ತಾಸು ಖರೀದಿಸಿˌ ಹನ್ನೆರಡಾಣೆಯ ಬೂಸಾ ಹಿಂಡಿ ಖರೀದಿಸಿ ಅವೆಲ್ಲವನ್ನೂ ಬರುವ ವಾರ ತೋಟಕ್ಕೆ ತಂದು ಕೊಡುವ ಜವಬ್ದಾರಿಯನ್ನು ಗೋಪಿಗೆ ವಹಿಸಿˌ ಬ್ಯಾಂಕಿಗೆ ಮೂವತ್ತು ರೂಪಾಯಿ ಹಣ ಉಳಿತಾಯಕ್ಕೆ ಕಟ್ಟಿ ಗೋಪಿಗೆ ಅಗತ್ಯವಿದ್ದ ಒಂದು ರೂಪಾಯಿ ಕೊಟ್ಟು, ಬಾಕಿ ಎಂಟೂ ಚಿಲ್ಲರೆ ರೂಪಾಯಿಗಳನ್ನ ತುರ್ತು ಅಗತ್ಯಗಳಿಗೆ ಮನೆಗೊಯ್ಯಲು ನಿರ್ಧರಿಸಿದ್ದ.

ಅಂಗಡಿ ಅಂಗಡಿ ಅಲೆದು ಬರಬೇಕಿದ್ದ ಬಾಕಿಗಳೆಲ್ಲವನ್ನೂ ವಸೂಲು ಮಾಡುವಾಗ ಮಧ್ಯಾಹ್ನದ ಎರಡು ಘಂಟೆಯ ಮೇಲಾಗಿತ್ತು. ನೇರ ಬ್ಯಾಂಕಿಗೆ ನಡೆದವನೆ ಮೂವತ್ತು ರೂಪಾಯಿ ಕಟ್ಟಿದ್ದಕ್ಕೆ ಬ್ಯಾಂಕಿನ ಗುಮಾಸ್ತೆ ಠಸ್ಸೆ ಒತ್ತಿಕೊಟ್ಟ ರಸೀದಿಯನ್ನ ಜೇಬಿಗಿಳಿಸಿ ನೇರ ಮನೆಯತ್ತ ಹಜ್ಜೆ ಹಾಕಿದವನಿಗೆ ಆಶ್ಚರ್ಯ ಕಾದಿತ್ತು. ಅವನು ಸೂರಿನ ಸಂದಿನಿಂದ ಸುರಿದ ಹಿಮದ ಕಾರಣ ಮಾಡಿದ ಮರಮತ್ತು ಅಷ್ಟಾಗಿ ಸರಿಯಾಗಿರಲಿಲ್ಲವೆಂದು ಕಾಣುತ್ತದೆˌ ಕಸುಬುದಾರ ಬಡಗಿಯಂತೆ ಗೋಪಿ ಮನೆಗೆ ಹೋಗಿ ಉಳಿ ಕಿಸೋಳಿ ಮೊಳೆ ಸುತ್ತಿಗೆಗಳನ್ನ ತಂದು ಹೆರದು ಕೆರೆದು ಇವನಿಗೆ ಕಂಡಿದ್ದˌ ಹಾಗೂ ಕಾಣದಿದ್ದ ಛಾವಣಿಯ ತೂತುಗಳನ್ನೆಲ್ಲಾ ಚತುರತೆಯಿಂದ ಟಾರು ಕಾಗದ ಹೊಡೆದು ಬಿರುಕುಗಳಿಗೆ ಜೇನು ಮೇಣ ಬೆರೆಸಿದ ಡಾಮಾರಿನ ಅಂಟು ತುಂಬಿ ಕಾಣದಂತೆ ಮರೆಸಿದ್ದ.

ಈ ಇಡಿ ಚಳಿಗಾಲದ ಹಂಗಾಮಿನಲ್ಲಿ ಮನೆಗೆ ಇನ್ಯಾವ ಮರಮತ್ತಿನ ಅವಶ್ಯಕತೆಯೂ ಇರದಂತೆ ಅವನ ಕೆಲಸದ ಜಾಣ್ಮೆ ಎದ್ದು ಕಾಣುತ್ತಿತ್ತು. ಆದರೆ ನೆಲ ಮಹಡಿಯ ಗೋಡೆಗಳ ಸಂದು ಗೊಂದುಗಳಲ್ಲಿ ಹೊಸ ಬಿರುಕು ಮೂಡಿವೆಯೆಂದೂ ಮುಂದಿನ ಒಂದು ವಾರ ಇದನ್ನೆ ಆದ್ಯತೆಯನ್ನಾಗಿಸಿಕೊಂಡು ತಾನು ಅವನ್ನ ಸರಿಪಡಿಸುತ್ತೇನೆಂದೂ ಗೋಪಿ ಹೇಳಿದ ಮಾತು ಕೇಳಿ ಅವನಿಗೆ ನೆಮ್ಮದಿಯೆನಿಸಿತು. ಹೀಗಾದರೂ ಸರಿ ಅವನು ಮರಳಿ ಜಡ ಬಿಟ್ಟು ಕೆಲಸಗಳತ್ತ ಹೊರಳಿಕೊಳ್ಳಲಿˌ ಬಾಬಯ್ಯನ ಜೊತೆಯ ಅವನ ಕೋಳಿ ಜಗಳ ಈ ಮೂಲಕವಾದರೂ ಕಡಿಮೆಯಾಗಲಿ ಎಂದು ಆಶಿಸಿದ ಆತ ಗೊಂಬೆ ತಯಾರಿಕೆಗೆ ಬಂಡವಾಳ ಹೂಡಲು ಗೋಪಿ ಕೇಳಿದ್ದ ರೂಪಾಯಿಗೆ ಮತ್ತೊಂದು ರೂಪಾಯಿ ಸೇರಿಸಿ ಅವನ ಜೇಬಿಗೆ ಹಾಕಿ ಗೋಪಿಯ ಬೆನ್ತಟ್ಟಿದ. ಇವನ ಕಾಳಜಿ ಕಂಡ ಗೋಪಿಗೂ ಕಣ್ತುಂಬಿ ಬಂತು. ಮತ್ತೆ ಚಿಗುರಿ ನುರಿತ ಕೆಲಸಗಾರನಾಗುವ ಕನಸು ಅವನ ನೀಲಿ ಕಣ್ಗಳಲ್ಲೂ ಹೊಳೆದಂತಾಯಿತು.

ಹೊರಗೆ ಮೆಲ್ಲಗೆ ಚಳಿಯ ಪ್ರಕೋಪ ಹೆಚ್ಚುತ್ತಿತ್ತು. ಸುಲ್ತಾನನಿಗೆ ಮೇವು ನೀರು ಮತ್ತೊಮ್ಮೆ ಇರಿಸಿದ ಇಬ್ಬರೂ ಬಾಬಯ್ಯನ ಮನೆ ಕಡೆಗೆ ಹೆಜ್ಜೆ ಹಾಕಿದರು. ಬಿಸಿ ಬಿಸಿ ಊಟ ತಯಾರಾಗಿತ್ತುˌ ಇವನು ಅವಳು ಕಟ್ಟಿಕೊಟ್ಟಿದ್ದ ಬುತ್ತಿಯನ್ನೂ ಜೊತೆಗೆ ಬಿಚ್ಚಿದ.


*********


ಅವಳ ಕೈ ರುಚಿಯೆ ಬೇರೆ ಎನಿಸಿದರೆˌ ಗೋಪಿ ಮನೆಯ ಅಡುಗೆಯ ಸ್ವಾದವೆ ವಿಭಿನ್ನ. ಇಬ್ಬರ ತಲೆಮಾರುಗಳ ಹಿನ್ನೆಲೆ ಪ್ರಾದೇಶಿಕವಾರು ಭಿನ್ನವಾಗಿದ್ದುದೆ ಅದಕ್ಕೆ ನೇರ ಕಾರಣ ಅಂದರೂ ತಪ್ಪಿಲ್ಲ. ಅವರ ಹಿರಿಯರು ವಲಸಿಗರಾಗಿ ಬರುವ ಮೊದಲು ನೆಲೆಸಿದ್ದ ವಿದೇಶದ ವಿಭಿನ್ನ ಪ್ರದೇಶಗಳ ಸೊಗಡು ಅವರ ಪಾಕಶಾಸ್ತ್ರವನ್ನೂ ಸಹಜವಾಗಿ ಪ್ರಭಾವಿಸಿತ್ತು. ಹೀಗಾಗಿ ಒಂದೆ ಬಗೆಯ ಖಾದ್ಯಗಳನ್ನ ಅವರಿಬ್ಬರ ಅಡುಗೆ ಮನೆಗಳಲ್ಲಿ ತಯಾರಿಸಿದ್ದರೂ ಬಳಸುವ ಖಾದ್ಯತೈಲˌ ಮಸಾಲೆ ಹಾಗೂ ಉಪ್ಪು ಹುಳಿ ಖಾರದ ಪ್ರಮಾಣದಲ್ಲಾಗುತ್ತಿದ್ದ ಚೂರುಪಾರು ವ್ಯತ್ಯಾಸದ ಕಾರಣ ಸಹಜವಾಗಿ ರುಚಿ ಬದಲಾಗಿ ಅಡುಗೆಯ ವೈವಿಧ್ಯತೆ ಚಪ್ಪರಿಸಿ ಮೆಲ್ಲುವವರ ರುಚಿಮೊಗ್ಗುಗಳಿಗೆ ಅರಿವಿಗೆ ಖಂಡಿತವಾಗಿ ಬರುತ್ತಿತ್ತು. ಗೋಪಿಯ ಹೆಂಡತಿ ಬುತ್ತಿಯಲ್ಲಿ ಚಳಿಗೆ ಮರಗಟ್ಟಿ ಕಲ್ಲಾಗಿದ್ದ ರೊಟ್ಟಿ ಹಾಗೂ ಇನ್ನಿತರ ಮೇಲೋಗರಗಳನ್ನ ಬಿಸಿ ಮಾಡಿ ತಿನ್ನಲು ಸಹನೀಯವಾಗಿಸಿದಳು.

ಚಳಿಯ ಹೊಡೆತಕ್ಕೆ ಜರ್ಜರಿತರಾಗಿದ್ದ ನಾಲ್ವರೂ ಚೂರು ದೇಹದ ಉಷ್ಣತೆ ಹೆಚ್ಚಿಸಿಕೊಳ್ಳಲು ಕಟು ರುಚಿಯ ದ್ರಾಕ್ಷಾರಸವನ್ನೂ ಊಟದೊಂದಿಗೆ ಸೇವಿಸಿದರು. ಬೆಂದ ಬಾತುˌ ಬೇಕನ್ˌ ರೈ ರೊಟ್ಟಿˌ ಎಮ್ಮೆ ಮಾಂಸದ ಸೂಪು ಹಾಗೂ ಹುರಿದ ಊರಿಟ್ಟ ಮೀನನ್ನ ಒಳಗೊಂಡ ಊಟ ರುಚಿಕರವಾಗಿತ್ತು. ಊಟ ಮುಗಿಸಿದ ಮರುಕ್ಷಣವೆ ಅವನು ಮತ್ತೆ ಮನೆಯತ್ತ ಮುಖ ಮಾಡಿ ಹೊರಡಲೆ ಬೇಕಿತ್ತು. ಸಾಧ್ಯವಾದಷ್ಟು ಬೇಗ ಬೆಳಕಿರುವಾಗಲೆ ಹೊರಟಷ್ಟೂ ಒಳ್ಳೆಯದೆ. ಆಗಲೆ ಸಮಯ ಮೂರೂವರೆಯ ಸಮೀಪವಾಗಿದ್ದು ಚಳಿಗಾಲದ ರಾತ್ರಿ ಸಂಜೆ ಐದರ ಹೊತ್ತಿಗೆಲ್ಲಾ ಇಳಯನ್ನ ಆವರಿಸಿಕೊಳ್ಳಲು ಮಸಲತ್ತು ಮಾಡುತ್ತಿದೆಯೇನೋ ಅನ್ನುವಂತೆ ಉತ್ತರದ ಸುಳಿಗಾಳಿ ಹುಯ್ಯಲಿಡುತ್ತಾ ನಿಧಾನವಾಗಿ ಮತ್ತೆ ಬೀಸಲು ಹವಣಿಸುತ್ತಿತ್ತು.

ಚಳಿಗಾಳಿಯ ಪ್ರಕೋಪ ಪಟ್ಟಣಿಗರನ್ನೂ ಕಾಡಿಸಿ ಕೆಂಗೆಡೆಸದೆ ಇರಲಿಲ್ಲ. ಅವರ ನೆಲೆಗಳು ಸುದೂರದ ತೋಟದ ಮನೆಗಳ ಅವಾಸಗಳಂತೆ ಪರಸ್ಪರ ಮೈಲುಗಟ್ಟಲೆ ದೂರವಿಲ್ಲದೆ ಕೆಲವೆ ಗಜಗಳಷ್ಟು ದೂರ ಮನೆಗಳಿರುವುದರಿಂದ ತೀರಾ ಕಷ್ಟದ ಸಂದರ್ಭಗಳು ಎದುರಾದಲ್ಲಿ ಕಷ್ಟ ನಷ್ಟ ವಿಚಾರಿಸಿ ಧೈರ್ಯ ಹೇಳಲುˌ ಸಹಾಯಕ್ಕೆ ಧಾವಿಸಲು ನೆರೆಕರೆ ಸಮೀಪದಲ್ಲೆ ಇರುತ್ತಿದ್ದರು. ಹೀಗಾಗಿ ಹಳ್ಳಿಗ ರೈತಾಪಿಗಳಂತೆ ವಿಪರೀತ ಸನ್ನಿವೇಶಗಳಲ್ಲಿ ತೀರಾ ಕೆಂಗೆಟ್ಟು ಸಹಾಯ ಹಸ್ತಗಳಿಲ್ಲದೆ ಹತಾಶರಾಗುವ ಪರಿಸ್ಥಿತಿ ಅವರಿಗೆ ಮುಖಾಮುಖಿಯಾಗುವ ಸಂಭವ ಇರುತ್ತಿರಲಿಲ್ಲ ಅಷ್ಟೆ.

ಊಟ ಮುಗಿಸಿ ಚಳಿಗೆ ಮದ್ದಿನಂತೆ ಒಂದು ತಂಬಾಕಿನ ಚುಟ್ಟಾವನ್ನ ಗೋಪಿಯೊಂದಿಗೆ ಹಂಚಿಕೊಂಡು ಅವನು ಸೇದಿ ಮುಗಿಸಿದ. ಮೈ ಮನ ಚೂರು ಹಗುರಾದಂತೆˌ ಗೋಪಿಯ ಜೊತೆ ಪಟ್ಟಣದ ಸುತ್ತಮತ್ತಲಾಗುತ್ತಿರುವ ಹೊಸ ಹೊಸ ಬೆಳವಣಿಗೆಗಳ ವರದಿಯೊಪ್ಪಿಸುತ್ತಿದ್ದ ಗೋಪಿಯ ಮಾತುಗಳನ್ನ ಮೌನವಾಗಿ ಆಲಿಸುತ್ತಾ ಜೊತೆಜೊತೆಗೆ ಹೆಜ್ಜೆ ಹಾಕುತ್ತಾ ಸಾಗಿದ. ಅವನ ಕೆಲವು ವರದಿಗಳು ಇವನಿಗೂ ಹೊಸತಾಗಿದ್ದವು. ಕೆಲವಂತೂ ಅವನಿಗೆ ಸರಿಯಾಗಿ ಅರ್ಥವಾಗದ್ದುˌ ಇವನಿಗೂ ಸರಿಯಾಗಿ ಅರ್ಥ ಮಾಡಿಸುತ್ತಾ ವಿವರಿಸಲು ಗೋಪಿಯೂ ಸಹ ಸೋತಿದ್ದ. ಜೊತೆಗೆ ಸ್ಥಳಿಯ ಭಾಷೆಯನ್ನ ಇನ್ನೂ ಕೂಡ ಸ್ಪಷ್ಟವಾಗಿ ಕಲಿತಿರದ ಅವನ ಸೋಮಾರಿತನ ಗ್ರಹಿಕೆ ಸರಿಯಾಗಿದ್ದರೂ ಮನವರಿಕೆ ಮಾಡಿಸಿಕೊಡಲು ಅವನು ಸೋಲಲು ನೇರ ಕಾರಣವಾಗಿತ್ತು.

ಸುಲ್ತಾನನ ಶೀತದ ಬಾಧೆ ಹಿಡಿತಕ್ಕೆ ಬಂದಿತ್ತು. ಇಬ್ಬರೂ ಸೇರಿ ಮತ್ತೊಂದು ಸುತ್ತು ಗೊಟ್ಟ ಎತ್ತಿ ಅವನ ಬಾಯಿ ಕಳಿಸಿ ಔಷಧವನ್ನ ಸುರಿದರು. ಮದ್ದಿನ ಕಹಿ ಮರೆಸಲು ಚೂರು ಮುದ್ದಿಸಿ ಅವನ ಇಷ್ಟದ ಕ್ಯಾರೆಟ್ ಬೂಸಾ ಓಟ್ಸ್ ಹಾಗೂ ಹುರುಳಿ ಬೆರೆಸಿ ಬೇಯಿಸಿದ ಮಿಶ್ರಣವನ್ನ ಅವನ ಬಾಯಿ ಚೀಲದಲ್ಲಿ ಹಾದಿಯಲ್ಲಿ ಮೆಲ್ಲಲು ಕಟ್ಟಿˌ ಚಳಿಗೆ ಹೊದೆಸಿದ್ದ ದಪ್ಪ ಮಂದರಿ ತೆಗೆದ. ಅಗ್ಗಿಷ್ಟಿಕೆಯ ಉರಿ ಆರಿಸಿ ಬೆನ್ನಿಗೆ ಜೀನು ಏರಿಸಿ ಕಟ್ಟುತ್ತಿದ್ದಂತೆ ಕುದುರೆಗೂ ಮರಳಿ ಮನೆಗೆ ಹೊರಡುವ ಹೊತ್ತಾಗಿದೆ ಅನ್ನುವುದು ಅರಿವಾಗಿ ಬಾಲದ ಕುಚ್ಚನ್ನ ಆಡಿಸುತ್ತಾ ಕೆನೆತದ ಜೊತೆಗೆ ತನಗಾದ ಖುಷಿಯನ್ನ ಅದು ಪ್ರಕಟಿಸಿತು.

ಹಾಡಿಯಲ್ಲಿ ಕಂಡಿದ್ದ ಕಲ್ಲಿದ್ದಲ ಖಜಾನೆಯ ದೆಸೆಯಿಂದ ಪಟ್ಟಣದಲ್ಲಿ ಅವನಿಗೆ ಕಲ್ಲಿದ್ದಲು ಖರೀದಿಸುವ ಅಗತ್ಯ ಅವನಿಗೆ ಬಂದಿರಲಿಲ್ಲ. ಹೀಗಾಗಿ ಬೆನ್ನ ಚೀಲದಲ್ಲಿ ಉಳಿದ ಜಾಗದಲ್ಲಿ ಕೊಂಡ ಅನೇಕ ಸಾಮಾನುಗಳನ್ನ ತುಂಬಲು ಸಾಧ್ಯವಾಯಿತು. ಉಳಿದಂತೆ ಬಿಟ್ಟು ಮುನ್ನಡೆಯುವ ತೀರಾ ಖಾಲಿಯಾಗಿರದ ಸಾಮಾನುಗಳನ್ನ ಗೋಪಿಯೆ ತಂದು ತೋಟದ ಮನೆಗೆ ಮುಟ್ಟಿಸುತ್ತಾನೆˌ ಹೀಗಾಗಿ ಚಿಂತಿಸುವ ಅಗತ್ಯವಿರಲಿಲ್ಲˌ ಕುದುರೆಯ ಮೂಗುದಾರ ಹಿಡಿದು ಮುನ್ನಡೆಸಿದವ ಬೀದಿಗೆ ಬಂದದ್ದೆ ಅದರ ಬೆನ್ನೇರಿ ಕುಳಿತು  ಎಡಗೈಯಲ್ಲಿ ಲಗಾಮು ಎಳೆದು ಹಗೂರ ಸಡಿಲ ಬಿಡುತ್ತಾ ಬಲಗೈಯನ್ನ ಗೋಪಿಯೆಡೆಗೆ ವಿದಾಯದ ಗುರುತಾಗಿ ಬೀಸುತ್ತಾ ಮನೆಯ ದಿಕ್ಕಿನತ್ತ ವೇಗವಾಗಿ ಸುಲ್ತಾನನ್ನ ಓಡಿಸಿಕೊಂಡು ಹಿಮದ ಗಾಳಿ ಕವಿಸಿದ್ದ ತೆರೆಯೊಳಗೆ ಮರೆಯಾಗಿ ಹೋದ.

ಚಳಿ ಹಾಗೂ ಕತ್ತಲು ಪೈಪೋಟಿಯ ಮೇಲೆ ಸುತ್ತಲೂ ಆವರಿಸಲು ಹೊಂಚು ಹಾಕುತ್ತಿರುವಂತಿತ್ತು ವಾತಾವರಣ. ಥಂಡಿಗಾಳಿ ಬೆಳಗ್ಗಿನಂತೆಯೆ ಮೂಳೆ ಕೊರೆಸುವಂತಿದ್ದು ಹಾಕಿಕೊಂಡಿದ್ದ ಬೆಚ್ಚನೆ ಧಿರಿಸನ ಮೇಲೆ ಹೊದ್ದುಕೊಂಡಿದ್ದ ಬೆಚ್ಚನೆ ದಪ್ಪ ಕಂಬಳಿಯನ್ನೂ ತೂರಿ ಒಳ ಹೊಕ್ಕು ಕಾಡಲು ಹವಣಿಸುತ್ತಿತ್ತು. ಸುಲ್ತಾನನ ಓಟ ವೇಗವನ್ನ ಹೆಚ್ಚಿಸಿಕೊಳ್ಳುತ್ತಿದ್ದ ಹಾಗೆ ಚಳಿಗಾಳಿಯೂ ತೆರೆದ ಮುಖ ಹಾಗೂ ಮೂಗಿಗೆ ತಣ್ಣಗೆ ಅಡರುತ್ತಿತ್ತು. ಕುದುರೆ ಒಂದೆ ಲಯದಲ್ಲಿ ಓಡುತ್ತಲಿರುವಾಗ ಅವನ ಮನೋವ್ಯಾಪಾರವೂ ಕೊಂಚ ಬಾಲ್ಯದ ದಿನಗಳತ್ತ ಹಿಮ್ಮುಖ ಓಡಿ ನಿಂತಿತು.

ಗೋಪಿ ಕೊಟ್ಟ ವರದಿಯಂತೆ ಈ ಊರಿಗೆ ಹೊಸ ಹೊಸ ವಲಸೆಗಾರರು ಸದ್ಯದಲ್ಲಿಯೆ ಲಗ್ಗೆ ಇಡಲಿಕ್ಕಿದ್ದಾರಂತೆ. ಅವರ ವಸತಿ ಸೌಕರ್ಯಗಳಿಗೆ ಸೂಕ್ತ ಸ್ಥಳ ಗುರುತಿಸಿ ಅವರಿಗೆ ಮನೆ ಕಟ್ಟಿಕೊಳ್ಳಲು ನಿವೇಶನಗಳನ್ನ ಮಂಜೂರು ಮಾಡತಕ್ಕದ್ದು ಎನ್ನುವ ಆದೇಶ ಮೇಲಿನಿಂದ ರಾಜಧಾನಿಯವರು ಕಳಿಸಿಯಾಗಿದೆಯಂತೆ. ಪಟ್ಟಣದ ಆಡಳಿತದ ಚುಕ್ಕಾಣಿ ಹಿಡಿದ ಶರೀಫನ ಕಛೇರಿಯ ಕಂದಾಯದ ಅಧಿಕಾರಿಗಳು ಈ ನಿಟ್ಟಿನಲ್ಲಿ ಇವನ ತೋಟದತ್ತ ಸಾಗುವ ಹಾದಿಯ ದಿಕ್ಕಿನಲ್ಲಿಯೆ ಹೊಸ ವಿಸ್ತರಣವನ್ನು ಕಲ್ಪಿಸಲು ನಿರ್ಧರಿಸಿ ಸುಮಾರು ನೂರು ಹಕ್ಟೇರ್ ಕಾಡಂಚಿನ ಭೂಮಿಯನ್ನೆ ಬರಲಿರುವ ವಲಸಿಗರಿಗೆ ನಿವೇಶನವಾಗಿ ಹಂಚಲು ಗುರುತಿಸಿದ್ದಾರಂತೆ.

ಇದರರ್ಥ ಇಷ್ಟೆ ಕ್ರಮೇಣ ಈ ಭಾಗ ಜನನಿಬಿಡವಾಗಲಿದೆ. ಅವರ ನಿವೇಶನವಾಗಲು ಹಾಗೂ ಮಂಜೂರಾದ ನಿವೇಶನದಲ್ಲಿ ಕಟ್ಟುವ ಮನೆಯ ಮೋಪಾಗಲು ಈಗ ಯಾರಪ್ಪನ ಅಪ್ಪಣೆಗೂ ಕಾಯದೆ ಬೆಳೆದು ನಿಂತಿರುವ ಅರಣ್ಯದಂಚಿನ ಬೃಹತ್ ಪೈನ್ˌಮೇಪಲ್ ಹಾಗೂ ಓಕ್ ಮರಗಳೆಲ್ಲ ಗರಗಸದ ಹಲ್ಲುಗಳಿಗೆ ಸಿಕ್ಕಿ ಹಾಕಿಕೊಂಡು ಕೊನೆಯುಸಿರೆಳೆಯಲಿವೆ. ತಮ್ಮ ಕಾರ್ಯಚಟುವಟಿಕೆಗಳಿಂದ ಕಾಡನ್ನ ಸಮೃದ್ಧವಾಗಿಸಿ ಅರಣ್ಯದ ಅರಳುವಿಕೆಗೆ ಬೀಜ ಪ್ರಸರಣದ ಪ್ರಮುಖ ಕೊಂಡಿಯಾಗಿ ಈಗ ಅದನ್ನೆ ತಮ್ಮ ಅವಾಸವಾಗಿಸಿಕೊಂಡಿರುವ ವನ್ಯ ಖಗ ಮೃಗಗಳೆಲ್ಲ ತಮ್ಮ ನೈಸರ್ಗಿಕ ನೆಲೆ ಕಳೆದುಕೊಂಡು ನಿರಾಶ್ರಿತರಾಗಿ ಗುಳೆ ಬರುವವವರ ಒತ್ತಡ ಕಿರುಕುಳ ತಾಳಲಾರದೆ ತಾವೆ ಸ್ವತಃ ನಿರಾಶ್ರಿತರಾಗಿ ಸ್ಥಳಾಂತರಗೊಳ್ಳುವ ದುಸ್ಥಿತಿಗೆ ಸದ್ಯದಲ್ಲಿಯೆ ಒಳಗಾಗಲಿಕ್ಕಿವೆ.

ಸರಕಾರದ ಉದ್ದೇಶ ಜನಸಂಖ್ಯೆಯನ್ನ ಹೆಚ್ಚಿಸುವುದೆ ಆಗಿರುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಸಹಜವಾಗಿ ಅದರ ವಲಸೆ ನೀತಿಗಳು ಆ ನವನಾಡಿನತ್ತ ತಾವಿರುವ ನೆಲದಲ್ಲಿ ಬರಕತ್ತಾಗದೆ ಭರವಸೆ ಕಳೆದುಕೊಂಡು ಹೊಸ ಅವಕಾಶಗಳಿಗಾಗಿ ಕಾತರಿಸಿ ಕಾಯುತ್ತಿರುವ ವಲಸಿಗರನ್ನ ಪ್ರೋತ್ಸಾಹಿಸುವಂತೆಯೆ ರೂಪುಗೊಂಡಿವೆ. ಅದರ ಆಸರೆಯಲ್ಲಿ ಹೊಸ ಬದುಕನ್ನ ಕಟ್ಟಿಕೊಳ್ಳಲು ಸಾಗರದ ಅಲೆಗಳಂತೆ ನುಗ್ಗಿ ಬರುತ್ತಿರುವ ಜನ ಪ್ರವಾಹಕ್ಕೆ ಪೂರಕವಾಗಿರುವ ಸರಕಾರಿ ನೀತಿಗಳು ಸ್ಥಳಿಯ ಬುಡಕಟ್ಟಿನವರ ಹಾಗೂ ಸ್ಥಳಿಯ ವನ ಜೊತೆಗೆ ವನ್ಯಮೃಗಗಳಿಗೆ ಮಾರಕವಾಯಿತು.



*********


ಹಾದಿ ಸಾಗುವ ಪಯಣದುದ್ದ ಇವನ ಮನಸಿನಲ್ಲಿದ್ದುದು ಒಂದೆ ಗುರಿ. ಆದಷ್ಟು ಬೇಗ ಮನೆಯನ್ನ ಹೋಗಿ ಮುಟ್ಟಬೇಕು. ಪಟ್ಟಣದ ಹೊರ ವಲಯ ದಾಟಿದ ಕೂಡಲೆ ನಾಟಕೀಯವಾಗಿ ಪರಿಸರದ ಭೀಭತ್ಸತೆ ಬಾಯಿ ಕಳೆದು ನಿಂತಿರುವ ಭಾವ ಸಾಕಾರವಾದಂತೆನಿಸಿತು. ಚಳಿಗಾಳಿಯ ಅರ್ಭಟ ಏಕಾಏಕಿ ಏರಿದಂತನಿಸ ಹತ್ತಿತು. 

ಸಹಜವಾಗಿ ಸಂಜೆಯ ನಂತರ ಶೀತ ಮಾರುತಗಳ ಪ್ರಕೋಪ ಹೆಚ್ಚಿ ಹಗಲಲ್ಲಿ ಇಳಿದು ಕೊಂಚ ಹಿಡಿತಕ್ಕೆ ಬರುವುದು ಹೊಸತೇನಲ್ಲ. ಅವನ ಆಲೋಚನಾ ಲಹರಿ ಥಟ್ಟನೆ ಕಡಿದು ಬೀಳುವಂತೆ ಸುಲ್ತಾನನ ಕಾಲು ಇದ್ದಕ್ಕಿದ್ದಂತೆ ಮುಗ್ಗುರಿಸಿತು. ಕೊರಕೊಲೊಂದರಲ್ಲಿ ಅವನ ಮುಂದಿನ ಎಡಗಾಲು ಹೊಕ್ಕು ಕುದುರೆ ಎಡವಿ ಬಿತ್ತು. ವೇಗ ಹಿಡೀತದಲ್ಲಿದ್ದುದರಿಂದ ಕಾಲು ಮೂಳೆಯೇನೂ ಮುರಿದಿರುವ ಸಂಭವವಿರಲಿಲ್ಲ. ಅಂತೆಯೆ ಕುದುರೆಯ ಕುತ್ತಿಗೆಗೆ ಅಪ್ಪಳಿಸಿದ ತನ್ನ ಮುಖಕ್ಕೂ ಅಂತಹ ಹಾನಿಯೇನೂ ಆಗಿರಲಿಲ್ಲ. ಒಂದೊಮ್ಮೆ ಪಟ್ಟಣದಿಂದ ಹೊರಟಿದ್ದ ವೇಗದಲ್ಲೆ ಓಡಿ ಬರುವಾಗ ಎಲ್ಲಾದರೂ ಅಪ್ಪಿತಪ್ಪಿ ಮುಗ್ಗರಿಸಿ ಬಿದ್ದಿದ್ದರೆ ಇಬ್ಬರಿಗೂ ಅತೀವ ನೋವಾಗುವಂತೆ ಸುಲ್ತಾನನ ಕಾಲಿನದ್ದೂˌ ಅವನ ಮೂಗಿನದ್ದೂ ಮೂಳೆ ಮುರಿಯವ ಸಾಧ್ಯತೆಯನ್ನ ತಳ್ಳಿ ಹಾಕುವಂತಿರಲಿಲ್ಲ.

ಸಣ್ಣದರಲ್ಲೆ ಸಂಭವನೀಯ ಭೀಕರ ಅಫಘಾತ ತಪ್ಪಿ ಹೋದದ್ದಕ್ಕೆ ಅವನು ನಿಟ್ಟುಸಿರು ಬಿಡತ್ತಾ ಅಶ್ವವನ್ನ ಮೃದು ಮಾತುಗಳಿಂದ ಹುರಿದುಂಬಿಸಿ ಕುತ್ತಿಗೆ ಬೆನ್ನು ಸವರುತ್ತಾ ಪುಸಲಾಯಿಸಿ ಗುಂಡಿಯಿಂದ ಮೇಲೆಬ್ಬಿಸಿದ. ಕೊಂಚ ದೂರ ಅವರಿಬ್ಬರೂ ಜೊತೆಜೊತೆಯಾಗಿಯೆ ನಡೆದರು. ಹುಯ್ಯಲಿಡುವ ಸುಳಿಗಾಳಿಯ ಪ್ರಕೋಪಕ್ಕೆ ತನ್ನ ಹೆಜ್ಜೆಯ ಸದ್ದು ತನಗೆ ಕೇಳುವುದೆ ಅಸಾಧ್ಯವಾಗಿತ್ತು. ಪಟ್ಟಣದ ಕಡೆಗೆ ವಲಸೆ ಹೆಚ್ಚುವ ಸೂಚನೆ ಕೊಟ್ಟಿದ್ದ ಗೋಪಿ ಹೇಳಿದ್ದ ಇನ್ನೂ ಅನೇಕ ಹೊಸ ಹೊಸ ವಾರ್ತೆಗಳ ಬಗ್ಗೆ ಮನಸೊಳಗೆ ಮಂಥನ ನಡೆಸುತ್ತಾ ಅವನು ಒಂದು ಕೈಯಲ್ಲಿ ಕುದುರೆಯ ಮೂಗುದಾರ ಹಿಡಿದಂತೆಯ ಮುನ್ನಡೆಯುತ್ತಿದ್ದˌ.

ಪೂರ್ವದಿಂದ ಇಲ್ಲಿಗೆ ಸಂಪರ್ಕ ಕ್ರಾಂತಿ ತರಲಿರುವ ರೈಲು ದಾರಿಯ ಸಮಾನಾಂತರವಾಗಿ ಕಂಭ ಹೂಡಿ ತಂತಿ ಎಳೆದು ಅದೇನೂ ತುರ್ತು ಸಮಾಚಾರ ಹರಡುವ ತಂತಿ ಸೇವೆಯನ್ನ ರಾಜಧಾನಿಯಿಂದ ಆಳುವ ಮಂದಿ ಈ ಪಟ್ಟಣಕ್ಕೂ ವಿಸ್ತರಿಸಲಿದ್ದಾರಂತೆ. ಅದರ ಮೂಲಕ ಕ್ಷಣಾರ್ಧದಲ್ಲಿ ದೂರದ ಒಂದು ಪ್ರದೇಶದಿಂದ ಕಳಿಸಿದ ಸುದ್ದಿಯನ್ನ ಇನ್ಯಾವುದೋ ಮೈಲಿಗಟ್ಟಲೆ ಅಂತರದಲ್ಲಿರುವವರು ಕೂಡಲೆ ಪಡೆದು ಓದಬಹುದಂತೆ! ಅಲ್ಲಿಗೆ ಪತ್ರ ಬರೆದು ಅದನ್ನ ಹೊತ್ತು ಕುದುರೆ ಮೇಲೇರಿ ವಾರಗಟ್ಟಲೆ ಊರೂರಿಗೆ ಪಯಣಿಸಿ ಅವುಗಳನ್ನ ತಲುಪಿಸಿ ಬರುವ ಸದ್ಯದ ಸುತ್ತುಬಳಸಿನ ಸೇವೆ ಮರೆಗೆ ಸರಿದ ಹಾಗೆಯೆ! ಅದರಲ್ಲೂ ಈಗಿರುವ ಅಂಚೆ ಸೇವೆ ಕೇವಲ ನಗರ ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿವೆ. ಹೊರವಲಯದಲ್ಲಿ ಮೈಲುಗಟ್ಟಲೆ ದೂರದಲ್ಲಿ ನೆಲೆಯಾಗಿರವ ತೋಟದ ಮನೆಯ ರೈತಾಪಿಗಳಿಗೆ ಯಾವ ಅಂಚೆ ಸೇವೆಯೂ ಇರಲಿಲ್ಲ. ಒಂದು ಅಂದಾಜಿನ ಮೇಲೆ ಅವರೆ ಪಟ್ಟಣಗಳಿಗೆ ಬಂದಾಗ ಅಂಚೆ ಕಛೇರಿಯನ್ನ ಎಡತಾಕಿ ತಮ್ಮ ಹೆಸರಿಗೇನಾದರೂ ಪತ್ರ ಬಂದಿದೆಯೆ ಎಂದು ವಿಚಾರಿಸಿ ಪಡೆದುಕೊಳ್ಳಬೇಕಾಗಿತ್ತು.

ಕೆಲವೊಮ್ಮೆ ಹೀಗೆಲ್ಲಾ ಊರೂರಿನ ಸುದ್ದಿ ಮತ್ತೊಂದೂರಿನ ಮತ್ತೊಬ್ಬರಿಗೆ ಹೋಗಿ ಮುಟ್ಟುವಾಗ ಎರಡೆರಡು ಮೂರು ಮೂರು ತಿಂಗಳ ಅವಧಿಯೆ ಕಳೆದು ಹೋಗಿರುತ್ತಿದ್ದವು. ಆ ಪತ್ರದಲ್ಲಿ ಬರೆದ ಸುದ್ದಿಯೂ ಸಹ ಆಗ ಸಹಜವಾಗಿ ಹಳೆಯದಾಗಿರುತ್ತಿತ್ತು. ಹೀಗಿರುವ ಪರಿಸ್ಥಿತಿ ಏಕಾಏಕಿ ಬದಲಾಗೋದೇನು ಸಾಧಾರಣ ವಿಷಯವೆ? ಎಂದಾತ ತರ್ಕಿಸಿದ. ಮಧ್ಯಾಹ್ನ ಬ್ಯಾಂಕಿನ ಕೆಲಸ ಮುಗಿಸಿ ಗೋಪಿಯ ಮನೆಗೆ ಊಟಕ್ಕೆ ಹೋಗುವ ಮೊದಲು ಅವನೂ ಅಂಚೆ ಕಛೇರಿಗೆ ಹೋಗಿದ್ದ. ನಾಲ್ಕು ಪತ್ರಗಳುˌ ಚಂದಾದಾರಿಕೆಯಿದ್ದ ರಾಜಧಾನಿಯಿಂದ ಪ್ರಕಟವಾಗಿದ್ದ ನಿಯತಕಾಲಿಕೆಗಳ ಆರು ಪ್ರತಿಗಳು ಇವನ ಹಾದಿ ಕಾಯುತ್ತಾ ಅಲ್ಲಿನ ತಿಜೋರಿಯಲ್ಲ ಭದ್ರವಾಗಿ ಬಿದ್ದಿದ್ದವು. ಸುಮಾರು ಎರಡು ತಿಂಗಳುಗಳಿಂದ ಅವು ಅವನ ಹಾದಿ ಕಾಯಲು ಅಲ್ಲಿಗೆ ಬಂದು ಮುಟ್ಟಿದ್ದವೇನೋ. ಚಳಿಗಾಲದಲ್ಲಿ ಪಟ್ಟಣದತ್ತ ರೈತಾಪಿಗಳು ತಲೆಯಿಟ್ಟು ಮಲಗುವುದೆ ಅಪರೂಪವಾಗಿರುವಾಗ ಇಂತಹ ನಿರೀಕ್ಷಿತ ನಿಧಾನಗಳೆಲ್ಲ ಆಗುವುದರಲ್ಲಿ ಆಶ್ಚರ್ಯ ಪಡುವಂತದ್ದೇನೂ ಇಲ್ಲ. ಅದರಲ್ಲೂ ಈ ಸಾಲಿನ ಚಳಿಯ ಅಬ್ಬರದ ಸಮಯದಲ್ಲಿ ಇವನಂತೆ ಪಟ್ಟಣದ ಪಯಣ ಮಾಡುವ ಧೈರ್ಯವನ್ನ ಅಳ್ಳೆದೆಯವರೇನೂ ಮಾಡುತ್ತಿರಲಿಲ್ಲ ಅಂತ ಇಟ್ಕೊಳಿ.

ಇದೂ ಸಾಲದು ಅಂತ ಪಟ್ಟಣದಲ್ಲಿ ಒಂದು ರೇಡಿಯೋ ಕಟ್ಟೆಯನ್ನ ಸರಕಾರದ ವತಿಯಿಂದ ಕಟ್ಟಲಿದ್ದಾರಂತೆ! ಸದ್ಯ ರಾಜಧಾನಿಯ ಸಮೀಪದ ನಗರಗಳಲ್ಲಿ ಮಾತ್ರ ಇರುವ ವಿದ್ಯುತ್ ಅನ್ನುವ ಅದ್ಭುತ ಶಕ್ತಿಯನ್ನ ಈ ಪಟ್ಟಣದ ಸಾರ್ವಜನಿಕರ ಬಳಕೆಗೂ ತಂದು ಮುಟ್ಟಿಸಿ ಅದರ ಮೂಲಕವೆ ರೇಡಿಯೋ ಅನ್ನುವ ಹೊಸ ಅನ್ವೇಷಣೆಯನ್ನೂ ಸಾರ್ವಜನಿಕ ಸೇವೆಗೆ ಅರ್ಪಿಸಲು ಆ ರೇಡಿಯೋ ಕಟ್ಟೆಯನ್ನ ನಿರ್ಮಾಣ ಮಾಡೋದಂತೆ! ರಾಜಧಾನಿಯಲ್ಲಿ ಕೂತು ಮಾತನಾಡುವವರ ಮಾತುಗಳು ಗಾಳಿಯ ಅಲೆಗಳ ಮೂಲಕವೆ ತೇಲಿ ಬಂದು ಆ ರೇಡಿಯೋ ಯಂತ್ರದ ಮೂಲಕ ಕೇಳುಗರೆಲ್ಲರಿಗೂ ಕ್ಷಣಾರ್ಧದಲ್ಲಿ ಕೇಳುವ ಅದ್ಭುತಗಳೂ ಇನ್ನೇನು ಘಟಿಸಲಿವೆಯಂತೆ. ಇವೆಲ್ಲವನ್ನೂ ದೂರದೂರಿನಿಂದ ಪ್ರಕಟವಾಗಿ ಅಂಚೆಯಲ್ಲಿ ಬಂದ ವೃತ್ತ ಪತ್ರಿಕೆಯಲ್ಲಿ ಬರೆದಿದ್ದನ್ನ ಓದಿ ಮಠದ ಗುರುಗಳು ತನ್ನ ಶಿಷ್ಯರೊಂದಿಗೆ ಚರ್ಚಿಸುವಾಗ ಅಲ್ಲಿಯೆ ಏನೋ ಕೆಲಸ ಮಾಡುತ್ತಿದ್ದ ಗೋಪಿ ಕೇಳಿಸಿಕೊಂಡಿದ್ದ.

ಬೇಡದೆ ಬರುತ್ತಿರುವ ಅಥವಾ ಸರಕಾರ ತರುತ್ತಿರುವˌ ನೇರವಾಗಿ ಹೇಳಬೇಕೆಂದರೆ ತಂದು ಹೇರುತ್ತಿರುವ ಈ ಬದಲಾವಣೆಯ ಹೊಸಗಾಳಿ ಆಹ್ಲಾದಮಯವೊ? ಇಲ್ಲಾ ಅಪಾಯಕಾರಿಯೋ? ಅನ್ನುವ ನಿಶ್ಕರ್ಷೆಗೆ ಬರಲಾಗದ ಅವನು ಬಂದದ್ದೆಲ್ಲಾ ಬರಲಿ ಗೋವಿಂದನ ದಯವೊಂದಿರಲಿ ಎನ್ನುವ ವೇದಾಂತಕ್ಕೆ ಜೋತು ಬಿದ್ದಿದ್ದ. ಒಂದು ವೇಳೆ ತಾನು ಬಯಸದಿದ್ದರೂ ಸಹ ಆಗುವ ಆಗುತ್ತಿರುವ ಆಗಲಿರುವ ಬದಲಾವಣೆಗಳನ್ನ ತಡೆದು ನಿಲ್ಲಿಸಿಲಾಗಲಿˌ ನಿರ್ದಿಷ್ಟವಾಗಿ ನಿರ್ದೇಶಿಸಲಾಗಲಿ ತನ್ನಿಂದ ಸಾಧ್ಯವಿಲ್ಲ. ಹೀಗಾಗಿ ತನ್ನ ಕೈ ಮೀರಿದ ವಿಷಯಗಳಲ್ಲಿ ಕುತೂಹಲ ಹೊತ್ತು ಭಾಗಿಯಾಗುವುದರ ಹೊರತು ಬೇರೆ ಇನ್ಯಾವ ಆಯ್ಕೆಗಳೂ ಅವನಿಗಿದ್ದಿರಲಿಲ್ಲ. ಬಹುಶಃ ಅಭಿವೃದ್ಧಿಯೆಂದರೆ ಅದೆ ಇರಬಹುದು.

ವಲಸೆಯ ಹೆಚ್ಚಳದ ಕುರಿತು ಸಹ ಅವನ ಅಭಿಪ್ರಾಯ ವಿಭಿನ್ನವಾಗಿತ್ತು. ಗಿಜಗುಡುವ ಜನಜಂಗುಳಿ ಗೊಂದಲˌ ಕಾಯಿಲೆಯ ಸೋಂಕುˌ ಅರಾಜಕತೆˌ ಅಸಮಾನತೆˌ ಕೊಳಕುˌ ಅಪರಾಧ ಚಟುವಟಿಕೆಗಳನ್ನ ಹೆಚ್ಚಿಸುತ್ತವೆ ಅನ್ನುವುದು ಅವನ ಖಚಿತ ಅಭಿಪ್ರಾಯವಾಗಿತ್ತು. ಹೀಗಾಗಿಯೆ ಅನಿವಾರ್ಯ ಸಂದರ್ಭಗಳನ್ನ ಹೊರತು ಪಡಿಸಿ ಪಟ್ಟಣ ವಾಸದ ನಿರ್ಬಂಧಗಳನ್ನ ತಪ್ಪಿಸಿಕೊಳ್ಳಲು ಅವನು ಆದ್ಯತೆ ನೀಡುತ್ತಿದ್ದ. ತೋಟದ ಮನೆಯಲ್ಲಿ ಕೃಷಿ ಚಟುವಟಿಕೆಗಳ ಮಧ್ಯದ ಬಾಳ್ವೆಯಲ್ಲಿ ಸಿಗುತ್ತಿದ್ದ ಮನಃಶಾಂತಿ ಅವನಿಗೆ ಪಟ್ಟಣದ ಗದ್ದಲದ ಗಲಾಟೆಯ ಬದುಕಿನಲ್ಲಿ ಎಂದೂ ಕಂಡು ಬಂದದ್ದಿಲ್ಲ. ಅದಾಗಲೆ ಕನಿಷ್ಠ ಒಂದು ಮೈಲಿಯನ್ನಾದರೂ ನಡೆದು ಕಾಲೂ ದಣಿದಿತ್ತಾಗಿ ಮರಳಿ ಸುಲ್ತಾನನ ಬೆನ್ನೇರಿದ. ಆರಂಭಿಕ ಅಫಘಾತದಿಂದಾಗಿದ್ದ ಅಘಾತದಿಂದ ಚೇತರಿಸಕೊಂಡಿದ್ದ ಕುದುರೆಯೂ ತಕರಾರಿಲ್ಲದೆ ಮುಂದಡಿಯಿಡುತ್ತಾ ಮನೆಯತ್ತ ಓಡ ತೊಡಗಿತು.

ಕೂತು ಕೂತು ಚಳಿಗೆ ಜೋಮು ಹಿಡಿದಿದ್ದ ಮೈ ಮನಸ್ಸಿಗೆ ಈ ನಡಿಗೆ ಸ್ವಲ್ಪ ಚೈತನ್ಯ ತುಂಬಿತ್ತು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಅನ್ನುವ ಹಾಗೆˌ ಒಂದೈದು ಮೈಲಿ ದೂರ ಚಲಿಸಿದ್ದರೋ ಇಲ್ಲವೋˌ ಮನೆಯಿಂದ ಕೇವಲ ಹನ್ನೆರಡೋ ಹದಿ ಮೂರೋ ಮೈಲು ದೂರದ ಅಂತರ ಉಳಿದಿರುವಂತೆ ಇದ್ದಕ್ಕಿದ್ದಂತೆ ಉತ್ತರದ ದಿಕ್ಕಿನಿಂದ ಒಕ್ಕರಿಸಿ ಬಂದು ಬೀಸಿದ ಕಾರ್ಮೋಡದ ಹಿಮಪಾತದ ಹೊಡೆತವನ್ನ ಮೀರಿ ಮತ್ತಷ್ಟು ಮುಂದುವರೆಯುವುದೆ ಅಸಾಧ್ಯವಾಯಿತು. ಪುಣ್ಯಕ್ಕೆ ಅವರಿಬ್ಬರೂ ಆಗಲೆ ರೈಲು ಹಾದಿಯ ಕಾರ್ಮಿಕರು ನೆಲೆಸಿದ್ದ ಸದ್ಯ ಬೀಗ ಬಿದ್ದಿದ್ದ ಕ್ಯಾಂಪಿನ ಮನೆಗೆ ಹೆಚ್ಚೆಂದರೆ ಸಾವಿರ ಗಜ ದೂರದಲ್ಲಿದ್ದರು.


*********



ಮುಳುಗುವವರಿಗೆ ಹುಲ್ಲಿನಾಸರೆ  ಅನ್ನುವಂತೆ ಕೂಡಲೆ ಅದರತ್ತ ಸುಲ್ತಾನನ್ನ ದೌಡಾಯಿಸಿದ ಅವನು ಇನ್ನೇನು ಹಿಮ ಮಳೆಯ ಅರ್ಭಟ ಹೆಚ್ಚಿ ನಡುನಡುವೆ ಸಿಡಿಲು ಹೊಡೆಯುವ ಭಯಂಕರ ವಿದ್ಯಾಮಾನಗಳು ಘಟಿಸುವ ಮುನ್ನವೆ ಆ ಮನೆಯ ಅಂಗಳಕ್ಕೆ ಬಂದು ಮುಟ್ಟಿದ್ದರು. ಯೋಚಿಸಲು ಹಚ್ಚು ಸಮಯವಿರಲಿಲ್ಲ. ಬೆನ್ನಿಗೆ ಕಟ್ಟಿಕೊಂಡಿದ್ದ ಕೈ ಕೊಡಲಿಯಿಂದ ಬೀಗ ಹಾಕಿ ಬಿಗಿದಿದ್ದ ಹಗ್ಗದ ಹುರಿಯನ್ನ ಕಡಿದವನೆ ಕುದುರೆಯನ್ನೂ ಒಳಗೆಳೆದುಕೊಂಡು ಬಾಗಿಲನ್ನ ಮುಚ್ಚಿ ಹಿಮ ಮಳೆಯ ಮಾರಕ ಪ್ರಕೋಪದಿಂದ ಪಾರಾದ.

ಹೊರಗೆ ಹುಯ್ಯಲಿಡುವ ಗಾಳಿಯ ಜೊತೆಜೊತೆಗೆ ಚಚ್ಚಿ ಬಿಸಾಡುವಂತೆ ಹಿಮದ ಮಳೆ ಸುರಿಯುತ್ತಿದ್ದ ರಣ ಭೀಕರ ಸದ್ದು ಕಿವಿಗಪ್ಪಳಿಸುತ್ತಿತ್ತು. ಹೊರಗೆ ಮಳೆˌ ಒಳಗೆ ಗವ್ವೆನ್ನುವ ಭೀಕರ ಕತ್ತಲು. ಅದರಲ್ಲೆ ತಡಕಾಡಿ ಅಗ್ಗಿಷ್ಟಿಕೆಯಿರುವ ಮನೆಯ ಮೂಲೆಯನ್ನ ಹುಡುಕಿದ. ಅವನ ಅದೃಷ್ಟಕ್ಕೆ ಚಕಮಕಿ ಕಲ್ಲುಗಳು ಅಲ್ಲೆ ಬಿದ್ದುಕೊಂಡಿದ್ದವು. ಚೆನ್ನಾಗಿ ಅವನ್ನ ನೆಲಕ್ಕೆ ಉಜ್ಜಾಡಿದವನೆ ಅವುಗಳಿಂದ ಕಿಡಿಯೆಬ್ಬಿಸಿದ. ರೈಲು ಕೂಲಿಗಳ ಕ್ಯಾಂಪಿನಲ್ಲಿ ಕಲ್ಲಿದ್ದಲಿಗೆ ಬರವೆ? ಅಗ್ಗಿಷ್ಟಿಕೆಯ ಒಡಲ ಒಲೆಗೆ ತುಂಬಿದ್ದ ಒಣ ಪುರಳೆಗಳಿಗೆ ಕಲ್ಲು ಗಟ್ಟಿಸಿ ಕಿಡಿ ಹಾರಿಸಿ ಬೆಂಕಿ ಊದಿ ಉರಿಯೆಬ್ಬಿಸಿದವ ಕಲ್ಲಿದ್ದಲನ್ನೂ ಜೊತೆಗೆ ತುಂಬಿದ. ಕ್ರಮೇಣ ಉರಿ ಹೆಚ್ಚಿತು. ಅಗ್ಗಿಷ್ಟಿಕೆಯ ಚಿಮಣಿ ಕೊಳವೆಯಿಂದ ಒಳ ನುಗ್ಗಿ ಬರಲು ಹವಣಿಸುತ್ತಿದ್ದ ಸುಳಿಗಾಳಿಯೂ ಸಹ ಊದು ಕೊಳವೆಯಲ್ಲಿ ಗಾಳಿ ಊದಿದಂತಾಗಿಸಿ ಬೆಂಕಿಯ ಉರಿಯನ್ನ ಹೆಚ್ಚಿಸುವಲ್ಲಿ ಸಹಕರಿಸಿತು. ಅರ್ಧ ತಾಸಿನಲ್ಲಿ ಮನೆಯ ಹಜಾರ ಅಗ್ಗಿಷ್ಟಿಕೆಯ ಉರಿಯಿಂದೆದ್ದ ಬೆಳಕಿನಿಂದ ಬೆಳಗಿ ಹಾಗೂ ಶಾಖದಿಂದ ಬೆಚ್ಚಗಾಗಿ ಹೊರಗಿನ ಚಳಿಯ ಭೀಕರತೆಯ ಹೊತ್ತಿನಲ್ಲಿ ಸ್ವಲ್ಪ ಮಟ್ಟಿಗಾದರೂ ಸುಖಾನುಭವ ನೀಡಲಾರಂಭಿಸಿತು.

ಅಗ್ಗಿಷ್ಟಿಕೆಯ ಹತ್ತಿರವೆ ಕುದುರೆಯನ್ನೂ ನಿಲ್ಲಿಸಿಕೊಂಡು ಅದರ ಬೆನ್ನ ಮೇಲೆ ಹೊದೆಸುವ ಮುನ್ನ ದಪ್ಪನೆ ಮಂದರಿಯನ್ನ ಬೆಂಕಿಯುರಿಯ ಶಾಖಕ್ಕೆ ಹಿಡಿದು ಬೆಚ್ಚಗಾಗಿಸುವಾಗ ಶಾಖದ ಉರಿಗೆ ಚಟಪಟಿಸುತ್ತಾ ನಾಲ್ಕಾರು ರಕ್ತ ಹೀರುವ ಉಣ್ಣೆಗಳು ಬೆಂಕಿಗೆ ಬಿದ್ದವು. ಹಳ್ಳಿಯ ಲಾಯದಲ್ಲಿ ಇದ್ದಿರದ ಈ ಉಣ್ಣೆ ಅದೆಲ್ಲಿ ಇವನ ಬೆನ್ನೇರಿತಪ್ಪ! ಎಂದು ಅಚ್ಚರಿಗೊಳಗಾದ ಆತˌ ಬಹುಶಃ ಹಟ್ಟಿ ಹಟ್ಟಿ ಅಲಿಯುವ ಪಾಪಮ್ಮನೋˌ ಇಲ್ಲವೆ ಗಾಡಿನ ಕಮ್ಮಾರಸಾಲೆಯಲ್ಲೋ ಕುದುರೆಯ ಮೈ ವಾಸನೆ ಢಾಳವಾಗಿದ್ದ ತನ್ನ ಮೇಲು ಹೊದಿಕೆಯನ್ನೇರಿ ಅವು ಅಲ್ಲಿಯ ತನಕ ಪಯಣಿಸಬಹುದೇನೋ ಎಂದು ಊಹಿಸಿದ. ಸರಿಯಾಗಿ ಕೊಡವಿ ಬೆಂಕಿಯಲ್ಲಿ ಉಣ್ಣೆಗಳನ್ನೆಲ್ಲಾ ಕೊಂದುˌ ಕುದುರೆಯ ಮೈಯನ್ನ ಬ್ರೆಷ್ಷಿನಿಂದ ತಿಕ್ಕಿ ಒರೆಸಿ ಮೈಗಂಟಿಕೊಂಡಿರಬಹುದಾದ ಅಳಿದುಳಿದ ಆ ಕ್ರಿಮಿಕೀಟಗಳನ್ನ ತೆಗೆದು ಅನಂತರವಷ್ಟೆ ಬೆಚ್ಚಗಾಗಿದ್ದ ಮಂದರಿಯನ್ನ ಅವನು ಸುಲ್ತಾನನ ಬೆನ್ನಿಗೆ ಹೊದೆಸಿದ. ಅಪ್ಪಿತಪ್ಪಿ ಅವೇನಾದರೂ ಹಳ್ಳಿಮನೆಯ ಲಾಯಕ್ಕೂ ಬಂದಿದ್ದರೆ ಅಲ್ಲಿ ತಮ್ಮ ಸಂತಾನಭಿವೃದ್ಧಿ ಮಾಡಿಕೊಂಡು ಇನ್ನುಳಿದ ಜಾನುವಾರುಗಳ ಬಾಳನ್ನೂ ನರಕವಾಗಿಸುವ ಸಾಧ್ಯತೆಯನ್ನ ಯೋಚಿಸಿಯೆ ಹೌಹಾರಿದನವನು.

ಚಳಿಯ ಹೊಡೆತಕ್ಕೆ ಚಹಾದ ಔಷಧ ಅಗತ್ಯವೆನಿಸಿತು. ಬೆನ್ನ ಚೀಲದಲ್ಲಿ ಚಹಾಪುಡಿಯೇನೋ ಇತ್ತುˌ ಬೆರೆಸಲು ಖರೀದಿಸಿ ತಂದಿರುವ ಬಿಳಿ ಸಕ್ಕರೆಯೂ ಈಗಿತ್ತು. ಆದರೆ ಹಿಮ ಕಾಯಿಸಿ ಕುದಿಸಲು ಕೈ ಪಾತ್ರೆಯೊಂದು ಮಾತ್ರ ಸಮೀಪದಲ್ಲಿ ಕಂಡು ಬರಲಿಲ್ಲ. ಪುರುಳೆಗಳ ಸಣ್ಣ ಸೂಟೆ ಮಾಡಿಕೊಂಡು ಅಲ್ಲೆ ಎಲ್ಲಾದರೂ ಬಿದ್ದಿರುವ ಪಾತ್ರೆ ಪಗಡವನ್ನ ಹುಡುಕುತ್ತಾ ಹೊರಟ. ಅಷ್ಟೊಂದು ಜನರಿದ್ದ ಕಾರ್ಮಿಕರ ಕ್ಯಾಂಪಿನಲ್ಲಿ ಒಂದಾದರೂ ಮಡಿಕೆ ಕುಡಿಕೆ ಇರಲೆಬೇಕಲ್ಲ?

ಮಂದ ಬೆಳಕುˌ ಸರಿಯಾಗಿ ಕಾಣದ ಒಳಾವರಣದ ಕೋಣೆಗಳತ್ತ ಮೆಟ್ಟಿಲನ್ನೇರಿ ಹೋದವನಿಗೆ ನಾಲ್ಕನೆ ಹೆಜ್ಜೆಯಿಡುವಷ್ಟರಲ್ಲೆ ಎಡಕ್ಕೆ ಕೆಳಗಿಳಿದ ಮೆಟ್ಟಿಲ ಸಾಲು ಕಾಣಿಸಿತು. ಬಹುಶಃ ಅಡುಗೆಮನೆಯಿರಬಹದೇನೋ!  ಎಂದು ಅಂದಾಜಿಸುತ್ತಾ ಅಡಿಯಿಟ್ಟವನಿಗೆ ಅದು ದಾಸ್ತಾನು ಕೋಣೆ ಅನ್ನುವುದು ಖಚಿತವಾಯಿತು. ಗೋಡೆಯ ಜಂತಿಗೆ ಹೊಡೆದ ಅರೆಯಲ್ಲಿ ಮೇಣದಬತ್ತಿಗಳ ಕಂಡˌ ಒಂದೆರಡನ್ನ ಹೊತ್ತಿಸಿಕೊಂಡು ಇನ್ನೇನು ಆರಿ ಹೋಗಲಿದ್ದ ಸೂಟೆಯ ಬೆಳಕಿಲ್ಲದೆ ಕತ್ತಲಲ್ಲಿ ಕುರುಡನಂತೆ ತಡಕಾಡುವ ಕರ್ಮಾಂತರದಿಂದ ಪಾರಾದ. ಈಗ ಕೋಣೆಯೊಳಗಿನ ಆವರಣ ಸ್ಪಷ್ಟವಾಗಿ ಗೋಚರಿವಷ್ಟು ಬೆಳಕು ಮೇಣದಬತ್ತಿಯ ಉರಿ ಸೂಸುತ್ತಿತ್ತು. ಯಾವುದಕ್ಕೂ ಇರಲಿ ಎಂದು ಇನ್ನೆರಡು ಮೊಂಬತ್ತಿಗಳನ್ನ ಜೇಬಿಗಿಳಿಸಿಕೊಂಡ.

ದಾಸ್ತಾನು ಕೋಣೆಯ ತುಂಬಾ ಪಿಪಾಯಿಗಳನ್ನ ಜೋಡಿಸಿಡಲಾಗಿತ್ತು. ಸುಮಾರು ಹತ್ತಡಿ ಉದ್ದ ಇಪ್ಪತ್ತಡಿ ಅಗಲದ ನೆಲಮಾಳಿಗೆಯಂತಹ ರಚನೆ ಅದಾಗಿತ್ತು. ನೆಲಕ್ಕೆ ಥಂಡಿ ಏರದಂತೆ ಪೈನ್ ಹಲಗೆ ಹೊದಿಸಿದ್ದರು. ಒಂದೊಂದೆ ಪೀಪಾಯಿಯ ಬಾಯಿ ಸರಿಸಿ ನೋಡಿದರೆˌ ಒಂದರಲ್ಲಿ ಉಪ್ಪುನೀರಿಗೆ ಹಾಕಿಟ್ಟ ಸಿಗಡಿˌ ಇನ್ನೊಂದರಲ್ಲಿ ಉಪ್ಪುನೀರಲ್ಲಿದ್ದ ಸರೋವರದ ಮೀನುˌ ಮತ್ತೊಂದರಲ್ಲಿ ಓಟ್ಸ್ ಹಿಟ್ಟಿನ ದಾಸ್ತಾನುˌ ಮತ್ತೊಂದರಲ್ಲಿ ಖಾದ್ಯ ತೈಲದ ಭಂಡಾರ ಹೀಗೆ ಆಹಾರ ಸಾಮಗ್ರಿಗಳ ಸಂಗ್ರಹ ಕಾಣಿಸಿತು. ಗುತ್ತಿಗೆದಾರ ತನ್ನ ಅಣತಿಯಂತೆ ದುಡಿಯುವ ಕಾರ್ಮಿಕರ ವಸತಿಯೊಳಗೆ ಊಟದ ಏರ್ಪಾಡಿಗೆ ಅವನ್ನೆಲ್ಲ ಅಲ್ಲಿಗೆ ತಂದಿರಿಸದ್ದ. ಪ್ರತಿ ಬಟವಡೆಯ ದಿನ ಅದನ್ನ ರೇಷನ್ ರೂಪದಲ್ಲಿ ಕಾರ್ಮಿಕರಿಗೆ ಕನಿಷ್ಠ ದರಕ್ಕೆ ಮಾರಲಾಗುತ್ತಿತ್ತು. ಕಾರ್ಮಿಕರ ಹೆಂಗಸರು ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳುತ್ತಿದ್ದುದರಿಂದ ಅವರ ಸಂಸಾರದ ಗಾತ್ರಕ್ಕನುಗುಣವಾಗಿ ಹಿಟ್ಟುˌ ಎಣ್ಣೆˌ ಬೇಳೆˌ ತರಕಾರಿˌ ಮೀನುˌ ಮಾಂಸˌ ದ್ರಾಕ್ಷಾರಸˌ ಮೆಣಸುˌ ಉಪ್ಪುˌ ಚಹಾಪುಡಿˌ ರಸ್ಕುˌ ಗರಿಗರಿ ಬಿಸ್ಕೇಟು ಮುಂತಾದ ಅಂಗಡಿಯ ತಿಂಡಿಗಳನ್ನೂ ಸಹ ಕೊಂಡುಕೊಂಡು ಮನೆವಾರ್ತೆಯನ್ನ ನಿಭಾಯಿಸುತ್ತಿದ್ದರು. ಆಹಾರ ಸಾಮಗ್ರಿಗಳ ಖರೀದಿಗೆ ದೂರದ ಪೇಟೆಗೆ ಹೋಗುವ ಅನಿವಾರ್ಯತೆ ಕಾರ್ಮಿಕರಿಗೆ ಈ ಮೂಲಕ ತಪ್ಪುತ್ತಿತ್ತಾದರೆˌ ಕೊಡುತ್ತಿದ್ದ ಸಂಬಳದಲ್ಲಿ ಕೆಲ ಕಾಸು ಮರಳಿ ಸುತ್ತಿ ಬಳಸಿ ಬಂದು ಗುತ್ತಿಗೆದಾರನ ಬಕ್ಕಣಕ್ಕೆ ಸೇರುತ್ತಿತ್ತು. ಕೆಲಸದ ನಡುವೆ ಆಹಾರದ ಕೊರತೆಯ ಕಾರಣ ಯಾವೊಬ್ಬ ಕಾರ್ಮಿಕನೂ ದುಡಿಮೆಯಿಂದ ತಪ್ಪಿಸಿಕೊಳ್ಳಕೂಡದು ಅನ್ನುವ ದೂರದೃಷ್ಟಿಯಿಂದ ಗುತ್ತಿಗೆದಾರ ಈ ವ್ಯವಸ್ಥೆ ಕಲ್ಪಿಸಿದ್ದ.

ಇದರ ಹಂಚಿಕೆ ಕೆಲಸಕ್ಕೆ ತನ್ನ ನಿಷ್ಠಾವಂತ ಭಂಟನೊಬ್ಬನನ್ನ ಅವನು ನೇಮಿಸಿಯೂ ಇದ್ದ. ಅವನು ಅನಾಗರಿಕ ಕಾರ್ಮಿಕರ ಒರಟುತನದ ನಡುವಳಿಕೆಯನ್ನ ನಿಭಾಯಿಸಿಕೊಂಡು ಅಚ್ಚುಕಟ್ಟಾಗಿ ತನಗೆ ಯಜಮಾನರು ಒಪ್ಪಿಸಿದ್ದ ಜವಬ್ದಾರಿಯನ್ನ ನಿರ್ವಹಿಸಿಕೊಂಡು ಹೋಗುತ್ತಿದ್ದ. ಈ ಹಂಗಾಮಿನ ಭೀಕರ ಚಳಿಗಾಲದ ಎಚ್ಚರಿಕೆಯನ್ನ ಉಳಿದೆಲ್ಲ ವಲಸೆ ಬಂದವರಂತೆ ಹಗುರವಾಗಿ ಪರಿಗಣಿಸಿದ್ದ ಗುತ್ತಿಗೆದಾರ ಕಾರ್ಮಿಕರೆಲ್ಲ ಚಳಿಗಾಳಿಯ ಸರಣಿಗೆ ಹೆದರಿ ಶೀತ ಪ್ರಕೋಪವನ್ನ ತಾಳಲಾರದೆ ವಸಂತಕ್ಕೆ ಬರುತ್ತೇವೆ ಎಂದು ಹೇಳಿ ಪೇರಿ ಕಿತ್ತು ಪೂರ್ವಕ್ಕೆ ಮರಳಿ ದೌಡಾಯಿಸುವ ಒಂದು ವಾರಕ್ಕೆ ಮೊದಲಷ್ಟೆ ಸುಮಾರು ಎರಡು ತಿಂಗಳಿಗೆ ಸಾಕಾಗುವಷ್ಟು ಸಕಲ ದಿನಸಿ ದಾಸ್ತಾನುಗಳನ್ನೂ ತಂದು ಆ ಕೋಣೆಯನ್ನ ಸರಕಿನಿಂದ ತುಂಬಿ ತುಳುಕಿಸಿದ್ದ. ಈಗ ಏಕಾಏಕಿ ಅದನ್ನ ಬಳಸುವವರೆ ಇಲ್ಲದೆ ಸಕಲ ಸರಕೂ ಸುಮ್ಮನೆ ಕೊಳೆಯುತ್ತಾ ಬಿದ್ದಿತ್ತು. ಆ ಪರಿ -೩೦ರ ಹತ್ತಿರದ ಪ್ರಕಾಂಡ ತಂಪಿನ ವಾತಾವರಣ ಇರದಿದ್ದ ಪಕ್ಷದಲ್ಲಿ ಅದರಲ್ಲಿ ಬಹುತೇಕ ಸಾಮಾನು ಸರಂಜಾಮುಗಳು ಕೆಟ್ಟು ಹೋಗಲಿದ್ದವು. ಇನ್ನೂ ಬಹುತೇಕ ಮೂರು ತಿಂಗಳಾದರೂ ಅದೆ ಪ್ರಕಾರದ ಹಿಮಪಾತವಾಗಲಿದ್ದುˌ ಆ ತನಕ ಅವುಗಳು ಸುರಕ್ಷಿತ ಅಂದುಕೊಳ್ಳಬಹುದಾಗಿತ್ತು ಅಷ್ಟೆ. ಹೇಗೂ ಹಾಳಾಗುವ ಆಹಾರ ಖಾದ್ಯ ಪದಾರ್ಥ. ಯಾರಾದರೂ ಬಳಸಿ ಉಪಯೋಗಿಸಿದರೆ ಗುತ್ತಿಗೆದಾರನಿಗೆ ಅದರಿಂದಾಗುತ್ತಿದ್ದ ನಷ್ಟ ಅಷ್ಟರಲ್ಲೆ ಇತ್ತು. ಹೀಗಾಗಿ ಒಂದೊಂದರದ್ದೆ ಗುಣಮಟ್ಟ ಪರೀಕ್ಷಿಸಿ ತೃಪ್ತನಾದ.




https://youtu.be/w6YeOoQmvCY

https://youtu.be/hnCfBq4M05k

https://youtu.be/KWqWICCBH6k

https://youtu.be/5NaKuyjjhFY

07 March 2022

ಪುಸ್ತಕ ಪರಿಚಯ - ೨೩

ಪುಸ್ತಕ ಪರಿಚಯ - ೨೩

ಕೃತಿ: ಪುನರ್ವಸು.
ಬಗೆ: ಕಾದಂಬರಿ.
ಲೇಖಕರು: ಗಜಾನನ ಶರ್ಮˌ ಹುಕ್ಕಲು.
ಪ್ರಕಾಶಕರು: ಅಂಕಿತ ಪುಸ್ತಕˌ ಗಾಂಧಿ ಬಜಾರು. ಬೆಂಗಳೂರು - ೫೬೦೦೦೪
ಕ್ರಯ: ₹೪೫೦/.


                  ಅರ್ಪಣೆ

 ಮುಳುಗಡೆಯ ಮಹಾವಿಪತ್ತಿಗೆ ಸಿಲುಕಿ  ಬಿಕ್ಕಳಿಸುತ್ತ ಬೇರಿನಿಂದ ಬೇರ್ಪಟ್ಟು  ಊರುತೊರೆದ ಮುಳುಗಡೆ ಸಂತ್ರಸ್ಥರಿಗೆ
.
ಇಂದಿಗೂ ನೋವಿನ ನಡುಗುಡ್ಡೆಗಳಲ್ಲಿ ನವೆಯುತ್ತಿರುವ ಹಿನ್ನೀರಿನ ಹತಭಾಗ್ಯರಿಗೆ."




ಗಜಾನನ ಶರ್ಮ ಮೂಲತಃ ಸಾಗರದ ಮುಳುಗಡೆ ಸೀಮೆಯವರು. ಅವರ ಬರವಣಿಗೆಯ ಪರಿಚಯ ಕನ್ನಡಿಗರಿಗೆ ಮೊತ್ತ ಮೊದಲಿಗಾದದ್ದು ಅವರ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಕೃತಿ MEMORIES OF MY WORKING LIFEನ ಕನ್ನಡನುವಾದವಾದ "ನನ್ನ ವೃತ್ತಿ ಜೀವನದ ನೆನಪುಗಳು" ಪುಸ್ತಕದ ಮೂಲಕ. ಮುಳುಗಡೆಯ ಸಂತ್ರಸ್ತನಾಗಿದ್ದುಕೊಂಡು ಕಳೆದ ಬಾಲ್ಯ - ವೃತ್ತಿ ನಿರತ ಇಂಜಿನಿಯರನಾಗಿ ಅದೆ ಮುಳುಗಡೆಯಿಂದೆದ್ದ ಶರಾವತಿಯ ಜಲವಿದ್ಯುದಾಗರದ ಜೀವನಾನುಭವ ಈ ಎರಡೂ ದಿಕ್ಕಿನಿಂದ ವಿಸ್ತಾರಗೊಂಡ ಅವರ ಬದುಕಿನ ಸಾಂದ್ರವಾದ ಪರಿಚಯ ಈ ಕೃತಿಯಲ್ಲಾಗುತ್ತದೆ. "ಪುನರ್ವಸು" ಕಾಲ್ಪನಿಕ ಕಾದಂಬರಿಯಾದರೂ ಅದರ ಪಾತ್ರಗಳಲ್ಲಿನ ನೈಜತೆ ಓದುಗರಾದ ನಿಮ್ಮ ಮನಸನ್ನ ಆವರಿಸಿದರೆ ಅದಕ್ಕೆ ಆ ಪಾತ್ರಗಳಲ್ಲಿ ಜೀವಂತಿಕೆ ತುಂಬಿದ ಗಜಾನನ ಶರ್ಮರು ಅಂತಹ ವ್ಯಕ್ತಿಗಳೊಡನೆ ತನಗಿದ್ದ ಬಾಂಧವ್ಯವನ್ನು ಕಲ್ಪನೆಯ ಶಾಯಿಯಲ್ಲಿ ಅಕ್ಷರ ರೂಪಕ್ಕಿಳಿಸಿದ್ದೆ ಕಾರಣ. ಅವರ ಜೀವನದ ಒಡನಾಡಿಗಳೆ ಈ ಕಾದಂಬರಿಯ ಪಾತ್ರಗಳಲ್ಲಿ ಪ್ರತಿಫಲಿಸುತ್ತಾ ಓದುಗರ ಆಲೋಚನೆಯನ್ನೂ ಆವರಿಸಿ ಕಾಡುತ್ತಾರೆ. 

ಪುನರ್ವಸು ಇಂದಿಗಿಂತ  ಮುಕ್ಕಾಲು ಶತಮಾನ ಹಿಂದಿನ ಮಲೆನಾಡಿನ ಚಿತ್ರಣವನ್ನು ಸಶಕ್ತವಾಗಿ ಕಟ್ಟಿಕೊಡುತ್ತಾˌ ಪ್ರಸಕ್ತ ಕಾಲಮಾನದತ್ತ ಎಲ್ಲಾ ಆಗುಹೋಗುಗಳನ್ನ ಮೌನವಾಗಿ ಅನುಭವಿಸಿಕೊಂಡು ನಿರ್ಲಿಪ್ತಳಾಗಿ ಹರಿಯುವ ಶರಾವತಿಯ ಪ್ರವಾಹದಂತೆಯೆ ಓದುಗರ ಮನಸುಗಳ ಕಣಿವೆಯಲ್ಲಿ ಪ್ರವಹಿಸುತ್ತದೆ. ಈಗಾಗಲೆ ಆಗಿ ಹೋಗಿರುವ ಇಂತಹ ಮಾರಕ ಅನಾಹುತಗಳಿಂದ ನಿಸರ್ಗದ ಮೈ ಮನಸಿನ ಮೇಲೆ ನಾವು ಮಾಡಿರುವ ಮಾಯದ ಗಾಯವೆ ಇನ್ನೂ ಹಸಿಯಾಗಿರುವಾಗಲೆ ನಮ್ಮಲ್ಲೆ ಕೆಲವು ದುರಾಸೆಯ ಜೀವಿಗಳು "ಎತ್ತಿನ ಹೊಳೆ ತಿರುವು ಯೋಜನೆ" ಅನ್ನುವ ಮತ್ತೊಂದು ಘಾತಕ ಕಾರ್ಯಕ್ಕೆ ಕೈ ಹಾಕಿ ಅಲ್ಲಿಯೂ ಮತ್ತೊಂದಷ್ಟು ಮಾಡಬಾರದ ಅತ್ಯಾಚಾರಗಳನ್ನ ನಿಸರ್ಗದ ಮೇಲೆಸಗಿದರು. 

ಹೋಗಲಿ ಆಮೇಲಾದರೂ ಆದ ತಪ್ಪಿನಿಂದˌ ಆ ತಪ್ಪು ತಂದ ಅಪರಿಮಿತ ನಷ್ಟದಿಂದ ಪಾಠ ಕಲಿತರ? ಅಂದರೆˌ ಅದೂ ಇಲ್ಲ. ಈಗ "ಮೇಕೆದಾಟು ಅಣೆಕಟ್ಟು ಯೋಜನೆ" ಅನ್ನುವ ಮತ್ತೊಂದು ಖಜಾನೆ ಕೊಳ್ಳೆ ಹೊಡೆಯುವ ಯೋಜನೆಯನ್ನ ಹಾಕಿಕೊಂಡು ಜನರ ತೆರಿಗೆಯ ದುಡ್ಡು ದೋಚಲು ಹಪಹಪಿಸುತ್ತಾ ಕೂತಿದ್ದಾರೆ. ಇವರ ದುರಾಸೆಯಿಂದ ಸರ್ವನಾಶವಾಗಿ ಸೊರಗುವ ಪ್ರಕೃತಿ ಮತ್ತೆಂದೆಂದೂ ಮೊದಲಿನಂತೆ ನಳನಳಿಸಲಾರಳು. ಇಂತಹ ಮುಗಿಯದ ಸಂದಿಗ್ಧದ ಕಾಲದಲ್ಲಿ "ಪುನರ್ವಸು"ವಿನ ಓದು ಸಕಾಲಿಕ.

ತಮ್ಮ ಈ ಕೃತಿಯ ಹಿನ್ನೆಲೆಯನ್ನ ಗಜಾನನ ಶರ್ಮರು ವಿವರಿಸುವುದು  ಹೀಗೆ:- 

"ಪ್ರಾಯಶಃ ಜೋಗದಷ್ಟು ನನ್ನ ಬದುಕನ್ನು ಪ್ರಭಾವಿಸಿದ ಇನ್ನೊಂದು ಸಂಗತಿಯಿಲ್ಲ. ಅದು ನನ್ನ ಬದುಕನ್ನು ಅರಳಿಸಿದ್ದೂ ಹೌದು, ನರಳಿಸಿದ್ದೂ ಹೌದು. ನಾನು ಹುಟ್ಟಿದ್ದು ಜೋಗದ ಸಮೀಪದ ತಲಕಳಲೆ ಹಿನ್ನೀರಿನ ಹುಕ್ಕಲು ಎಂಬ ಪುಟ್ಟಹಳ್ಳಿಯಲ್ಲಿ. ಅಕ್ಷರ ಕಲಿತದ್ದು ಲಿಂಗನಮಕ್ಕಿ ಹಿನ್ನೀರಿನಲ್ಲಿ ಮುಳುಗಡೆಯಾದ ಮೊದಲ ಹಳ್ಳಿ ಕರೂಮನೆಯಲ್ಲಿ. ನಾನು ಹದಿನೇಳು ತಿಂಗಳ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಳ್ಳಲು ಕಾರಣವಾದದ್ದು ಜೋಗ್ ಕಾಲೋನಿಯ ಆಸ್ಪತ್ರೆ. ಒಂದು ಕಾಲದಲ್ಲಿ ಸಾಕಷ್ಟು ಸಮೃದ್ಧವಾಗಿದ್ದ ನಮ್ಮ ಕುಟುಂಬ ಬಡತನದ ಬೇಗೆಯಲ್ಲಿ ಬೇಯುವಂತಾಗಿದ್ದು ಶರಾವತಿ ಯೋಜನೆಯಲ್ಲಿ ಜಮೀನು ಅರ್ಧ ಮುಳುಗಿದ್ದರಿಂದ. 
        


ವಿಪರ್ಯಾಸವೆಂದರೆ ನನಗೆ ಬಾಲ್ಯದಲ್ಲಿ ವಿದ್ಯೆ ನೀಡಿದ್ದೂ ಜೋಗವೇ. ನನ್ನೊಳಗೊಂದು  ವ್ಯಕ್ತಿತ್ವವನ್ನು ರೂಪಿಸಿದ್ದೂ ಜೋಗದ ಶಿಕ್ಷಣ. ಪಿಯೂಸಿಗೆ ಸೇರುವುದೇ ಕಷ್ಟವಾಗಿ ವಿದ್ಯಾಭ್ಯಾಸವನ್ನು ಕೊನೆಗೊಳಿಸಲಿದ್ದ ನನ್ನನ್ನು ಸ್ವತಃ ತಾವೇ ಶುಲ್ಕಕಟ್ಟಿ ಶಾಲೆಗೆ ಸೇರಿಸಿಕೊಂಡದ್ದು ಜೋಗದ ಪ್ರೌಢಶಾಲೆಯ ನನ್ನ ನೆಚ್ಚಿನ ಗುರುವೃಂದ. ಇಂಜಿನಿಯರಿಂಗ್ ಮಾಡಿ, ವಿದ್ಯುತ್ ಇಲಾಖೆಗೆ ಸೇರಿ ಜೋಗಕ್ಕೇ ಬಂದು, ಬಿದ್ದಲ್ಲೇ ಎದ್ದು ಬದುಕು ಕಟ್ಟಿಕೊಳ್ಳಲು ನನಗೆ ಪ್ರೇರಣೆ ನೀಡಿದ್ದು, ನನ್ನ ವೃತ್ತಿಜೀವನಕ್ಕೆ ಮೊದಲು ಆಸರೆ ನೀಡಿದ್ದು ಜೋಗವೇ!


ಆಂತರ್ಯದ ಆಂತರ್ಯದಲ್ಲಿ ನಾನು ಜೋಗವನ್ನು ಪ್ರೀತಿಸುತ್ತೇನೋ, ದ್ವೇಷಿಸುತ್ತೇನೋ ನನಗೆ ಗೊತ್ತಿಲ್ಲ. ಕೆಲವೊಮ್ಮೆ ಜೋಗದ ಕುರಿತು ಬೇಸರವಾದರೂ ಯಾರಾದರೂ ಜೋಗವನ್ನು ತೆಗಳಿದರೆ ನನಗೆ ನೋವಾಗುತ್ತದೆ. ಹೊಗಳಿದರೆ ಹರ್ಷವಾಗುತ್ತದೆ. ಜೋಗದ ಸುದ್ದಿ ಕೇಳುತ್ತಿದ್ದಂತೆ ಮೈಮನಸ್ಸುಗಳಲ್ಲಿ ಭಾವದ ಜಲಪಾತವೊಂದು ಧುಮುಧುಮಿಸುತ್ತದೆ.
          

ಹಾಗೆಯೇ ನಮ್ಮ ಹಳ್ಳಿಗರ ಬದುಕಿಗೆ ಶರಾವತಿ ಜಲವಿದ್ಯುತ್ ಯೋಜನೆ ಮಾಡಿದ ಹಾನಿಯನ್ನು ನೆನಪಿಸಿಕೊಳ್ಳುತ್ತಿದ್ದಂತೆ ಕಣ್ಣು ಒದ್ದೆಯಾಗುತ್ತದೆ. ನಮ್ಮ ಅರೆಹೊಟ್ಟೆಯ ಬಡತನದ ದಿನಗಳು ನೆನಪಾಗುತ್ತವೆ. ದೀನರಾಗಿ ನಿಂತ ನಮ್ಮ ಹಿರಿಯರೆದುರು ಮುಳುಗಡೆ ಅಧಿಕಾರಿಗಳು ತೋರುತ್ತಿದ್ದ ದರ್ಪ ಕಣ್ಣೆದುರು ಬರುತ್ತದೆ. ಮುಳುಗಡೆಯಿಂದಾಗಿ ಅಳುತ್ತ ಊರು ಬಿಟ್ಟ ಬಂಧುಮಿತ್ರರು, ಅನಾಥವಾದ ಕುಟುಂಬಗಳು, ಊರು ತೊರೆಯಲಾರದೇ ಮತಿಗೆಟ್ಟವರು, ಸತ್ತವರು, ಸಂತ್ರಸ್ತರಾದವರು ನೆನಪಾಗುತ್ತಾರೆ. ತೋಟಗದ್ದೆಗಳ ನಡುವಿನ ಕ್ವಾರಿಗಳಲ್ಲಿ ನಡೆಯುತ್ತಿದ್ದ ಸ್ಪೋಟಗಳ ಸದ್ದು ನೆನಪಾಗಿ ಮೈ ಕಂಪಿಸುತ್ತದೆ. ಹಳ್ಳಿಗರ ಕುರಿತು ಕಾಲೋನಿಯವರ ತಾರತಮ್ಯ ನೆನಪಾಗಿ ಆಕ್ರೋಶ ಪುಟಿದೇಳುತ್ತದೆ.
 

ವಿದ್ಯುತ್ ಇಲಾಖೆಯಲ್ಲಿ ಮೂರೂವರೆ ದಶಕಗಳ ಕಾಲ ಸೇವೆಗೈದ ನನಗೆ ಶರಾವತಿ ಪ್ರಾಜೆಕ್ಟಿನ ಮಹತ್ವ ತಿಳಿದಿಲ್ಲವೆಂದಲ್ಲ. ಇಂದಿಗೂ ದೇಶದಲ್ಲಿ ಅತ್ಯಂತ ಅಗ್ಗದಲ್ಲಿ ವಿದ್ಯುತ್ ಉತ್ಪಾದಿಸುವ ಯೋಜನೆಗಳಲ್ಲಿ ಶರಾವತಿಯೂ ಒಂದು. ಕರ್ನಾಟಕದ ವಿದ್ಯುತ್ ಕ್ಷೇತ್ರದಲ್ಲಿ ಇಂದಿಗೂ ಅದರ ಪ್ರಾಮುಖ್ಯತೆ ಅದ್ವಿತೀಯ. 1950ರಲ್ಲಿ ಜೋಗದ ಸಿರಿಬೆಳಕು ಬೆಂಗಳೂರಿಗೆ ಹರಿಯತೊಡಗಿದ ಮೇಲಷ್ಟೇ ಬೆಂಗಳೂರಿನಲ್ಲಿ ಹಲವು ಕೇಂದ್ರೋದ್ಯಮಗಳು ಪ್ರಾರಂಭವಾಗಿ ಬೆಂಗಳೂರಿನ ಬೆಳವಣಿಗೆ ವೇಗೋತ್ಕರ್ಷ ಪಡೆದದ್ದು.


ಹೌದು, ಆಧುನಿಕ ಬದುಕಿಗೆ ವಿದ್ಯುತ್ ಅನಿವಾರ್ಯ. ಇಂದು ವಿದ್ಯುತ್ ಇಲ್ಲದ  ಬದುಕನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಅರೆಕ್ಷಣದ ವಿದ್ಯುತ್ ಅಡಚಣೆ ನಮ್ಮ ಬದುಕನ್ನೇ ಸ್ಥಗಿತಗೊಳಿಸಿಬಿಡುತ್ತದೆ. ಐವತ್ತು ವರ್ಷಗಳ ಹಿಂದೆ ಕೇವಲ ಒಂದೇ ಒಂದು ವರ್ಷದ ಕ್ಷಾಮ ಇಡೀ ದೇಶವನ್ನು ಹಸಿವಿನ ಹಾಹಾಕಾರಕ್ಕೆ ನೂಕುತ್ತಿದ್ದರೆ ಇಂದು ರೈತರ ಹೊಲಗಳಲ್ಲಿ ಚಾಲನೆಗೊಳ್ಳುವ ಕೋಟ್ಯಂತರ ನೀರಾವರಿ ಪಂಪುಗಳು ಅಂತಹ ಆತಂಕವನ್ನು ಬಹುತೇಕ ಇಲ್ಲವಾಗಿಸಿವೆ. ನೂರಿಪ್ಪತ್ತೈದು ಕೋಟಿ ಬಾಯಿಗಳಿಗೆ ಅನ್ನವಿಕ್ಕಬೇಕಾದ, ಇನ್ನೂರೈವತ್ತು ಕೋಟಿ ಕೈಗಳಿಗೆ ಉದ್ಯೋಗ ಒದಗಿಸಬೇಕಾದ ಭಾರತದಂತಹ ಬೃಹತ್ ದೇಶಕ್ಕೆ ಹೊಸ ಹೊಸ ವಿದ್ಯುತ್ ಯೋಜನೆಗಳು ಅನಿವಾರ್ಯ. ಇಂದಿಗೂ ಭಾರತದ ತಲಾವಾರು ವಿದ್ಯುತ್ ಬಳಕೆ ವಿಶ್ವದ ಸರಾಸರಿ ತಲಾವಾರು ಬಳಕೆಯ ಮೂರನೇ ಒಂದರಷ್ಟು ಮಾತ್ರ.


 ಹಾಗೆಂದು ಹೊಸ ಹೊಸ ವಿದ್ಯುತ್ ಯೋಜನೆಗಳನ್ನು ಹುಟ್ಟುಹಾಕುತ್ತ ನಮ್ಮ ನದಿ, ವನ, ಗಿರಿ, ಕಣಿವೆಗಳನ್ನು ಹಾಳುಗೆಡವುತ್ತ ಸಾಗುವುದು ಎಷ್ಟು ಸರಿ? ನೆಲದ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಸದೇ ಯೋಜನೆಗಳ ಮೇಲೆ ಯೋಜನೆಗಳನ್ನು ಹುಟ್ಟುಹಾಕಿ ಮಲೆನಾಡಿನಂತಹ ಸಮೃದ್ಧ ಭೂಮಿಯನ್ನು ಬಂಜರಾಗಿಸಬೇಕೇ? ಈಗಾಗಲೇ ಕಲುಷಿತಗೊಂಡ ಪರಿಸರ ಇನ್ನೆಷ್ಟು ಮಲಿನಗೊಳ್ಳಬೇಕು? ಇನ್ನೆಷ್ಟು ಮುಗ್ಧರ ಬದುಕು ಹದಗೆಡಬೇಕು?


ವಿದ್ಯುತ್ ಯೋಜನೆಗಳ ಕುರಿತು ಜನಮಾನಸದಲ್ಲಿ ಉದ್ಭವಿಸುವ ಇಂತಹ ಇಬ್ಬಂದಿತನವೇ ಈ ಕೃತಿಯ ಅಂತರಾಳ. 1916ರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಜೋಗಕ್ಕೆ ಭೇಟಿ ನೀಡಿ ವಿದ್ಯುತ್ ಯೋಜನೆಗೆ ಸಮೀಕ್ಷೆ ನಡೆಸಲು ಆದೇಶಿಸಿದ ಘಟನೆಯೊಂದಿಗೆ ಶುರುವಾಗುವ ಕಥಾನಕ, ಲಿಂಗನಮಕ್ಕಿಯಲ್ಲಿ ನೀರು ಸಂಗ್ರಹ ಆರಂಭವಾಗುವಲ್ಲಿಗೆ ಮುಕ್ತಾಯಗೊಳ್ಳುತ್ತದೆ.  ಜೋಗದ ಇತಿಹಾಸದೊಂದಿಗೆ ಮುಳುಗಡೆಯ ದಿನಗಳಲ್ಲಿ  ಕಂಡು ಕೇಳಿ ಅನುಭವಿಸಿದ ಹಲವು ಘಟನೆಗಳನ್ನು ಪರಿಭಾವಿಸಿ ಹೆಣೆದ ಕಥಾನಕ ಈ ಪುನರ್ವಸು.

ಶರಾವತಿ ತೀರದ ಕಗ್ಗಾಡು ಕಣಿವೆಯ ನಡುವಲ್ಲಿ  ಶತಶತಮಾನಗಳಿಂದ ಬದುಕನ್ನು ಕಟ್ಟಿಕೊಂಡು ನೆಮ್ಮದಿಯಾಗಿದ್ದವರ ಬದುಕು ಜೋಗ್ ಯೋಜನೆಯಿಂದ ಶಿಥಿಲಗೊಂಡ ಬಗೆಯನ್ನು ಚಿತ್ರಿಸುವುದು ಕೃತಿಯ ಪ್ರಧಾನ ಆಶಯವಾದರೆ ಪ್ರಾಜೆಕ್ಟೊಂದರ ಅನುಷ್ಠಾನದಲ್ಲಿ ವೃತ್ತಿನಿಷ್ಠೆ, ಮತ್ತು ಬದ್ಧತೆಯನ್ನು ಮೆರೆದು ನಾಡಿನ ಶ್ರೇಯೋಭಿವೃದ್ಧಿಗಾಗಿ ಸ್ವತಃ ಸಂಕಷ್ಟಗಳಿಗೆ ಒಳಗಾಗುವವರ ಕುರಿತು  ಹೇಳುವುದು ಅದರ ಇನ್ನೊಂದು ಉದ್ದೇಶ.
 
                                             
- ಗಜಾನನ ಶರ್ಮ, ಹುಕ್ಕಲು."

ಕೃತಿಯ ಆಯ್ದ ಭಾಗ -

ಅಧ್ಯಾಯ - ೨


 ಎರಡನೇ ಮಹಾಯುದ್ದ ಮುಗಿಯುವ ಹೊತ್ತಿಗೆ, ಹಿರೇಭಾಸ್ಕರ ಮತ್ತು ಜೋಗದಲ್ಲಿ ಕೆಲಸದ ರಭಸ ಉತ್ತುಂಗದಲ್ಲಿತ್ತು. ಯುದ್ದದಲ್ಲಿ ಮಿತ್ರಪಡೆ ಜಯ ಸಾಧಿಸಿದ್ದರಿಂದ ಭಾರತವೂ ಸೇರಿದಂತೆ ಬ್ರಿಟಿಷ್ ವಸಾಹತು ದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಸಾಕಷ್ಟು ಉತ್ತೇಜನ ದೊರೆತು, ಮೊದಲೇ ಹೆಚ್ಚುತ್ತಿದ್ದ  ವಿದ್ಯುತ್ ಬೇಡಿಕೆಗೆ ಇನ್ನಷ್ಟು ಕಾವು ಮೂಡಿತ್ತು. ಮಡೇನೂರಿನ ಆಣೆಕಟ್ಟೆ ನೆಲಮಟ್ಟವನ್ನು ದಾಟಿ ಮೇಲೇಳತೊಡಗಿತ್ತು. ಕೃಷ್ಣರಾಯರು ಈಗ ಮಡೇನೂರಿನ ಡ್ಯಾಮಿನ ಕೆಲಸಕ್ಕಿಂತ ಹೆಚ್ಚು ಮುಳುಗಡೆ ಪರಿಹಾರ ನಿಷ್ಕರ್ಷಿಸುವ ಕಾರ್ಯದಲ್ಲಿ ಆಸಕ್ತಿ ವಹಿಸಿ ಮುಳುಗಡೆ ಜಮೀನುಗಳ ಸರ್ವೇಕಾರ್ಯದ ಉಸ್ತುವಾರಿಯಲ್ಲಿ ಮುಳುಗಿದ್ದರು. ಈ ನಡುವೆ ಒಂದು ದಿನ ಕಾಫರ್ ಡ್ಯಾಮ್ ಒಡೆದು ಸಂಭವಿಸಿದ ಪ್ರವಾಹದಲ್ಲಿ ಡ್ಯಾಮಿನ ಬಳಿ ಕಾರ್ಯನಿರತರಾಗಿದ್ದ ಐವರು ಕಾರ್ಮಿಕರು ಶರಾವತಿ ನದಿಗೆ ಆಹುತಿಯಾದ ದುರ್ಘಟನೆ ಸಂಭವಿಸಿತ್ತು.  ಇಂತಹ  ಅನಾಹುತಗಳು  ಬೃಹತ್ ನಿರ್ಮಾಣಗಳ ಸಂದರ್ಭದಲ್ಲಿ ಸರ್ವೇಸಾಮಾನ್ಯವೆಂಬ ರೂಢಿಗತ ಧೋರಣೆಯಲ್ಲಿ ಅಧಿಕಾರಿಗಳು ತಮ್ಮ ಪಾಡಿಗೆ ತಾವು ಕಾಮಗಾರಿಗಳನ್ನು  ಮುಂದುವರೆಸಿದ್ದರು.
        

ಕಾಫರ್ ಡ್ಯಾಂ ಒಡೆದು ಕಾರ್ಮಿಕರು ಬಲಿಯಾದ ಘಟನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಭವಿಸಿದ್ದು ಎಂಬ ಅನಾಮಧೇಯ ಪತ್ರವೊಂದು ದಿವಾನರ ಕಛೇರಿಗೆ ತಲುಪಿದ ಪರಿಣಾಮ ದಿವಾನರ ಸೂಚನೆಯ ಮೇರೆಗೆ  ಹೈಡ್ರೋ ಎಲೆಕ್ಟ್ರಿಕ್ ಸಮಿತಿ ಹಿರೇಭಾಸ್ಕರಕ್ಕೆ ಧಿಡೀರ್ ಭೇಟಿ ನೀಡಿತ್ತು. ಹಿರೇಭಾಸ್ಕರದಲ್ಲಿ ನಡೆದಿದ್ದ ಕಾಮಗಾರಿಗಳ ಸುರಕ್ಷತೆಯನ್ನು ಪರಿಶೀಲಿಸಿದ ಸಮಿತಿ, ಮುಖ್ಯ ಡ್ಯಾಮಿನ ನಿರ್ಮಾಣದ ಸಂದರ್ಭದಲ್ಲಿ ನದೀಪಾತ್ರದ ನೀರಿನ ಮಟ್ಟ ಏರಿಳಿಯುವ ಸಂಭವ  ಮತ್ತಷ್ಟು ಹೆಚ್ಚಾಗುವುದರಿಂದ ಕೂಡಲೇ ನದೀಪಾತ್ರದಲ್ಲಿ ಸೆಕ್ಯೂರಿಟಿಯನ್ನು ಹೆಚ್ಚಿಸಿ, ಸಾರ್ವಜನಿಕರ ಜೀವರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಆದೇಶಿಸಿತು. ಸಮಿತಿಯ ಸೂಚನೆಯಂತೆ ಸುಬ್ಬರಾಯರು ಆಣೆಕಟ್ಟೆ ಕೆಳಭಾಗದ ನದೀಪಾತ್ರದಲ್ಲಿ ಸಾರ್ವಜನಿಕರ ಸುರಕ್ಷತೆಗೆಂದು ಕೆಲವು ಸೆಕ್ಯೂರಿಟಿ ಗಾರ್ಡುಗಳನ್ನು ನೇಮಿಸಿದರು. 


ಹೀಗೆ ನೇಮಕವಾದ ಒಬ್ಬ ಸೆಕ್ಯೂರಿಟಿ ಗಾರ್ಡ್ ಒಂದು ದಿನ  ಭಾರಂಗಿಯ ಬಳಿ ಕಾರ್ಯನಿರತನಾಗಿದ್ದ ಸಮಯದಲ್ಲಿ, ಸಂಜೆಯಾಗುತ್ತ ಬಂದಿದ್ದರೂ ನದಿಯಲ್ಲಿ ದೋಣಿಯೊಂದು  ಸಂಚರಿಸುತ್ತಿರುವುದನ್ನು ಕಂಡು, ಅದನ್ನು ತಡೆದು ವಿಚಾರಣೆ ನಡೆಸಿದ್ದ. ಅದರ ನಾವಿಕ ಗಣಪ, 'ಯಾಕೆ, ಏನು' ಎಂದು ಕೇಳಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್,  ‘ಇನ್ನು ಮುಂದೆ ಹೊಳೆಯಲ್ಲಿ ದೋಣಿ ನಡೆಸಲು ಇಲಾಖೆಯ ಅನುಮತಿ ಪಡೆಯಬೇಕು. ಹೊಳೆಯಲ್ಲಿ ಅನಾಹುತ ಸಂಭವಿಸಿದರೆ ಅದಕ್ಕೆ ಇಲಾಖೆ ಉತ್ತರ ಕೊಡಬೇಕಾಗುತ್ತೆ. ಇನ್ನು ಮುಂದೆ ನಮ್ಮ ಅನುಮತಿಯಿಲ್ಲದೇ ದೋಣಿ ಚಲಾಯಿಸಕೂಡದು. ಹಾಗೆ ಮಾಡಿದರೆ ಸೂಕ್ತ ಕ್ರಮ ಜರುಗಿಸುತ್ತೇವೆ’ ಎಂದು  ಗದರಿಸಿದ್ದ. 

ಅವನ ಬೆದರಿಕೆಗೆ ಜಗ್ಗದ ಗಣಪ, ‘ತಲೆತಲಾಂತರದಿಂದ ಇಲ್ಲಿ ದೋಣಿ ನಡೆಸುತ್ತ ಬಂದಿರುವ ವಂಶ ನಮ್ಮದು. ಇದುವರೆಗೂ ಯಾವತ್ತೂ ನಾವು ಯಾರ ಅನಮತಿಯನ್ನೂ ಪಡೆದಿಲ್ಲ. ಅನುಮತಿ ಪಡೆಯಲು ಹೊಳೆ ಯಾರಪ್ಪನ ಸ್ವತ್ತೂ ಅಲ್ಲ. ಇಷ್ಟು ವರ್ಷವಿಲ್ಲದ ಈ ವ್ಯವಸ್ಥೆಗೆ ನಾವು ಸೊಪ್ಪು ಹಾಕಲ್ಲ’ ಎಂದು ಕಟುವಾಗಿ ಉತ್ತರಿಸಿದ್ದ. ಆ ತರುಣ ಸೆಕ್ಯೂರಿಟಿ ಗಾರ್ಡ್, ಇದು ಹಳ್ಳಿ ಗಮಾರನೊಬ್ಬ ತನ್ನ ಇಲಾಖೆಗೆ ಮತ್ತು ವೃತ್ತಿಗೆ ಮಾಡಿದ ಅವಮಾನವೆಂದು ಬಗೆದು ಗಣಪನನ್ನು ಮತ್ತಷ್ಟು ಒರಟಾಗಿ ತರಾಟೆಗೆ ತೆಗೆದುಕೊಂಡಿದ್ದ. ಇಬ್ಬರ ನಡುವೆ ಮಾತಿನ ಚಕಮಕಿಯೇ ಹೊತ್ತಿಕೊಂಡಿತ್ತು. ಗಣಪನೂ ಸಾಕಷ್ಟು ದಬಾಯಿಸಿದ್ದ. ಅಧಿಕಾರದ ಕೊಬ್ಬಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೂಡ ಅಗತ್ಯಕ್ಕಿಂತ ಹೆಚ್ಚಾಗಿಯೇ ಹಾರಾಡಿದ್ದ. ಗಲಾಟೆ ಕೇಳಿ ಅಲ್ಲಿಗೆ ಬಂದ ಊರಿನ ಕೆಲವರು, 
'ಅಪಾಯವಾಗಬಾರದು ಅನ್ನೋ ಸದುದ್ದೇಶದಿಂದಲೇ  ಸರ್ಕಾರ ಹೇಳಿದೆ ಅಂತಾದರೆ ಅನುಮತಿ ಪಡೆಯೋದ್ರಲ್ಲಿ ತಪ್ಪೇನಿದೆ? ಹೇಗೂ ಈಗ ಓಡಾಡಲು ಬಸ್ಸುಗಳು ಇವೆ. ಸಂಜೆಯ ಹೊತ್ತಿನಲ್ಲೂ ದೋಣಿ ನಡೆಸಲೇಬೇಕು ಅನ್ನುವ ಹಠ ಸರಿಯಲ್ಲ’ ಎಂದು ಉಪೇಕ್ಷೆಯ ಧ್ವನಿಯಲ್ಲಿ ಮಾತನಾಡಿದ್ದರು. 
 ಅವರ ಮಾತಿನಲ್ಲಿ ಅಡಗಿದ್ದ ಉಪೇಕ್ಷೆಯ ಧೋರಣೆ ಗಣಪನ ಮನಸ್ಸನ್ನು ಘಾಸಿಗೊಳಿಸಿತ್ತು. ಆತನಿಗೆ ತಡೆಯಲಾರದಷ್ಟು ಸಂಕಟವಾಗಿತ್ತು. ಅದು ತನ್ನ ವೃತ್ತಿಗೆ ಗೈದ ಅವಮಾನವೆಂದು ಭಾವಿಸಿ ಆತ ಕುಗ್ಗಿಹೋದ. 


ಯಾವನೋ ಮೂರನೆಯವನ ಮುಂದೆ ತಮ್ಮೂರಿನ ಮಂದಿ ತನ್ನನ್ನು ಕಡೆಗೆಣಿಸಿದರೆಂದು ಆತ ಮರುಗಿದ. ಸೆಕ್ಯೂರಿಟಿ ಗಾರ್ಡ್ ಹೋದ ನಂತರ ಹೊಳೆಯಲ್ಲಿದ್ದ ತನ್ನ ದೋಣಿಯನ್ನು ಒಬ್ಬನೇ ಪರಿಶ್ರಮದಿಂದ ಎಳೆದುತಂದು ಎಂದಿನಂತೆ ಭರಣಿಗೆ ಮರಕ್ಕೆ ಕಟ್ಟಿ, ದೋಣಿಕಟ್ಟೆಯ ಮೇಲೆ ಹತಾಶೆಯ ಭಾವದಲ್ಲಿ ಮೌನವಾಗಿ ಕುಳಿತುಕೊಂಡ. ಆತನಿಗೆ ತನ್ನ ಅಸ್ತಿತ್ವವೇ ಅರ್ಥಕಳೆದುಕೊಳ್ಳುತ್ತಿದೆ ಎಂಬ ವಿಷಾದ ಕಾಡಿ ದುಃಖ ಉಮ್ಮಳಿಸಿ ಬರತೊಡಗಿತ್ತು. ಹಳೆಯ ದಿನಗಳ ನೆನಪಿನ ಹೊಳೆಯಲ್ಲಿ ಆತನ ಮನಸ್ಸು  ಮುಳುಗೇಳತೊಡಗಿತ್ತು.
          

ಮೂರು ವರ್ಷಗಳ ಹಿಂದೆ ದತ್ತಪ್ಪ ಹೆಗಡೆಯವರ ಬಂಧನದಿಂದ ಉಂಟಾದ ಆಘಾತದಿಂದ ಧೃತಿಗೆಟ್ಟಿದ್ದ ಗಣಪ ಇದುವರೆಗೂ ಮರಳಿ ಚೇತರಿಸಿಕೊಂಡೇ ಇರಲಿಲ್ಲ. ಆತನ ಮನೆಯಲ್ಲೂ ಪರಿಸ್ಥಿತಿ ಉತ್ಸಾಹದಾಯಕವಾಗಿರಲಿಲ್ಲ. ಅಣ್ಣ ತಮ್ಮಂದಿರು ಹಿಸ್ಸೆಯಾಗಿ ಈಗ ಒಟ್ಟು ಕುಟುಂಬದ  ದೊಡ್ಡಮನೆ ನಾಲ್ಕು ಪಾಲಾಗಿತ್ತು. ಈಗ ಗಣಪನ ಹೆಂಡತಿ ಚೆನ್ನಮ್ಮ, ತಮ್ಮಿಬ್ಬರಿಗೆ ಮಾತ್ರ ಅಡುಗೆ ಬೇಯಿಸುತ್ತಿದ್ದಳು. ಮದುವೆಯಾದಾಗಿನಿಂದ ಇಡೀ ಕುಟುಂಬಕ್ಕಾಗಿ ದೊಡ್ಡ ದೊಡ್ಡ ಚೆರಿಗೆಯಲ್ಲಿ ಅನ್ನ ಬೇಯಿಸಿ ಇಳಿಸುತ್ತಿದ್ದ ಚೆನ್ನಮ್ಮ ಈಗ ಪುಟ್ಟಪಾತ್ರೆಯಲ್ಲಿ ಅಡುಗೆ ಮಾಡಲು ಅಳತೆ ತಿಳಿಯದೇ ಪರಿತಪಿಸುತ್ತಿದ್ದಳು. ಆ ವೃದ್ದ ದಂಪತಿಗಳಿಗೆ ಇದ್ದೊಬ್ಬ ಮಗಳಿಗೆ ಮದುವೆಯಾಗಿತ್ತು. ಮಗ ಹೆಂಡತಿ ಮಗುವಿನ ಜೊತೆ ಸಾಗರದಲ್ಲಿದ್ದ. ಸೊಸೆ ಸಾಗರಕ್ಕೆ ಹತ್ತಿರದ ಊರಿಗೆ ಸೇರಿದವಳು. ನಾಲ್ಕಕ್ಷರ ಕಲಿತಿದ್ದರಿಂದಲೋ ಏನೋ ಭಾರಂಗಿಯೆಂದರೆ ಕುಗ್ರಾಮವೆಂದು ಆಕೆ ಮೂಗು ಮುರಿಯುತ್ತಿದ್ದಳು. ಇತ್ತೀಚೆಗೆ ಚೌಡನಾಯಕನೂ ಊರಿಗೆ ಬರುವುದು ಅಪರೂಪವಾಗಿತ್ತು. ಎಲ್ಲೋ ಗಣೇಶ ಹೆಗಡೆಯೊಂದಿಗೆ ವ್ಯವಹಾರಿಕ ಮಾತುಕತೆ ಇದ್ದಾಗಲಷ್ಟೇ  ಊರಿಗೆ ಬರುತ್ತಿದ್ದ. ಬಂದರೂ ಅಪ್ಪ ಅಮ್ಮನೊಂದಿಗೆ ಉಂಡು ಉಳಿದು ಮಾಡುತ್ತಿರಲಿಲ್ಲ. ಕಾಟಾಚಾರಕ್ಕೆ ಕೆಲವು ಮಾತನಾಡಿ ಹಿಂತಿರುಗಿಬಿಡುತ್ತಿದ್ದ. 
ಈಗ ಮೊದಲಿನಂತೆ ದೋಣಿ ದಾಟುವವರೂ ಇರಲಿಲ್ಲ, ಮನೆ ಬಾಗಿಲಲ್ಲಿ ಗಾಡಿ ತಂದು ನಿಲ್ಲಿಸಿ ಎರಡು ಮೂರು ದಿನ ಎತ್ತುಗಳ ಆರೈಕೆ ಮಾಡುವಂತೆ ಕೇಳುವವರೂ ಇರಲಿಲ್ಲ. ದೋಣಿ ಗಣಪ ಬೆಳಿಗ್ಗೆ ಎದ್ದು ದೋಣಿಕಟ್ಟೆಯ ಮೇಲೆ ಕುಳಿತರೆ, ಇಡೀ ದಿನಕ್ಕೆ ಒಬ್ಬರೋ ಇಬ್ಬರೋ ದೋಣಿ ದಾಟುವವರು ಬಂದರೆ ಉಂಟು, ಇಲ್ಲದಿದ್ದರೆ ಇಲ್ಲ. ಅವನು ಹುಟ್ಟಿದೂರಲ್ಲೇ ಅನಾಥನಾಗತೊಡಗಿದ್ದ. ತನ್ನವರ ನಡುವೆಯೇ ಒಬ್ಬೊಂಟಿಯಾಗತೊಡಗಿದ್ದ.
        

ಕೆಲವೇ ತಿಂಗಳ ಅವಧಿಯಲ್ಲಿ ಜನ ತಾವಿಲ್ಲಿ ದೋಣಿ ದಾಟುತ್ತಿದ್ದೆವು ಎಂಬುದನ್ನು ಮರೆತೇಬಿಟ್ಟಿದ್ದರು. ಹೊಳೆಯಪ್ಪನೂ ದೋಣಿ ಕೆಲಸಕ್ಕೆ ಬರುವುದನ್ನು ಬಿಟ್ಟು ಕಾರ್ಗಲ್ಲಿನಲ್ಲಿ ಪ್ರಾಜೆಕ್ಟ್ ಕೆಲಸಕ್ಕೆ ಹೋಗತೊಡಗಿದ್ದ. ಈಗ ಯಾರಾದರೂ ಹೊಳೆ ದಾಟಿಸಲು ಹೇಳಿದರೆ ಗಣಪನೇ ಕಷ್ಟಪಟ್ಟು ಹಗ್ಗ ಬಿಚ್ಚಿ ತನ್ನ  ಮುದಿ ಕೈಗಳನ್ನು ಸೆಟೆಸಿ ದೋಣಿಯನ್ನು ಹೊಳೆಗೆ ದೂಡುತ್ತಿದ್ದ. ಕೇವಲ ಮೂರೇ ವರ್ಷದಲ್ಲಿ ಅವನನ್ನು ಮುಪ್ಪು ಆವರಿಸಿಕೊಂಡುಬಿಟ್ಟಿತ್ತು. ಆರು ಅಡಿ ಎತ್ತರದ ಆತನ ಸೈಂಧವ ಶರೀರವೀಗ ದುರ್ಬಲಗೊಂಡಿತ್ತು. ಮೂರು ವರ್ಷದ ಹಿಂದೆ ಅಮಲ್ದಾರನೊಡನೆ ದತ್ತಪ್ಪ ಹೆಗಡೆಯವರನ್ನು ಹೊಳೆದಾಟಿಸಿ ಬಿಟ್ಟುಬಂದ ನೋವು ಆತನನ್ನು ಮತ್ತೆ ಮತ್ತೆ ಕುಕ್ಕುತ್ತಿತ್ತು. ಆ ದಿನ ಅವರನ್ನು ಬಂಧಿಸಿ ಒಯ್ದಿದ್ದು ಎಂಬುದು ಗೊತ್ತಾದಮೇಲೆ   ಅವನು ತಡೆಯಲಾರದ ಬೇಗುದಿಯಲ್ಲಿ ಬೆಂದಿದ್ದ. ಆ ವಿಷಯ ಕೇಳಿದ ರಾತ್ರಿ ಆತನಿಗೆ ನಿದ್ದೆ ಬಂದಿರಲಿಲ್ಲ. ಒಂದೆರಡು ದಿನ ಕಳೆಯುವಷ್ಟರಲ್ಲಿ ಭಾರಂಗಿ ಹೆಗಡೆಯವರನ್ನು ಬಂಧಿಸಿ ಬಹುದೂರ ಒಯ್ದಿದ್ದಾರಂತೆ, ದೇಶದ್ರೋಹದ ಆಪಾದನೆಯ ಮೇಲೆ ಮರಾಠಾದ ಯಾವುದೋ ಸೆರೆಮನೆಗೆ ನೂಕಿದ್ದಾರಂತೆ ಎಂದೆಲ್ಲ ವದಂತಿ ಕೇಳಿ ಆತ ತಲ್ಲಣಿಸಿಹೋಗಿದ್ದ. ಎಷ್ಟೋ ದಿನ ದೋಣಿಕಟ್ಟೆಯ ಮೇಲೆ ಒಬ್ಬನೇ ಕುಳಿತು ಗಳಗಳನೆ ಅತ್ತಿದ್ದ. ಸುದ್ದಿ ಕೇಳಿದ ದಿನ ಸಂಜೆ ಚೆನ್ನಮ್ಮ ಭಾರಂಗಿಮನೆಗೆ ಹೋಗಿ ತುಂಗಕ್ಕಯ್ಯನನ್ನು ಮಾತನಾಡಿಸಿಕೊಂಡು ಬಂದಿದ್ದಳು. ಬಂದವಳೇ ಭಾರಂಗಿ ಮನೆಯ ಅಂದವೇ ನಂದಿಹೋಯಿತೆಂದು ಅತ್ತುಕರೆದಿದ್ದಳು. 
ದೋಣಿಕಟ್ಟೆಯ ಮೇಲೆ ಕುಳಿತಿದ್ದ ಗಣಪನಿಗೆ ಶರಾವತಿಯ ಒಡಲಿನಲ್ಲಿ ತಾನು ದತ್ತಪ್ಪ ಹೆಗಡೆಯೊಡನೆ ಈಜು ಕಲಿಯುತ್ತಿದ್ದ ಬಾಲ್ಯದ ದಿನಗಳು ನೆನಪಾಗತೊಡಗಿದ್ದವು. ತನ್ನ ತಂದೆ ರಾಮನಾಯಕನಿಗೆ ದತ್ತಪ್ಪ ಎಂದರೆ ಜೀವ. ಅವರನ್ನು ಆತನೇ ಎತ್ತಿಕೊಂಡು ಹೊಳೆಯ ಆಳದವರೆಗೂ ಹೋಗಿ, ಹೊಟ್ಟೆಯ ಅಡಿಗೆ ಕೈ ಇಟ್ಟು ಕಾಲುಬಡಿಯಲು ಹೇಳಿಕೊಡುತ್ತಿದ್ದ. ತನಗೋ ಈಜುವುದು ಸಹಜವಾಗಿ ಸಿದ್ಧಿಸಿತ್ತು. ತನಗಿಂತ ಮೂರು ವರ್ಷಕ್ಕೆ ಸಣ್ಣವರಾಗಿದ್ದ ದತ್ತಪ್ಪ ಆರಂಭದಲ್ಲಿ ಹೊಳೆಗಿಳಿಯಲು ಬಹಳ ಭಯಪಡುತ್ತಿದ್ದರು. ತನ್ನ ತಂದೆ ಅವರ ಅಂಜಿಕೆಯನ್ನು ಬಿಡಿಸಿ, ತನ್ನ ಸಮಸಮಕ್ಕೆ ಈಜುವುದನ್ನು ಕಲಿಸಿದ್ದ. ತನ್ನಪ್ಪ ಸಾಯುವವರೆಗೂ ತನಗೆ ಎಂದೇ, ಏನೇ ಸಮಸ್ಯೆ ಬಂದರೂ ದತ್ತಪ್ಪಾ ಎನ್ನುತ್ತಿದ್ದ. ಅವರು ಕೂಡ ಎಂದೂ ಸ್ಪಂದಿಸದೇ ನಿರಾಶೆಗೊಳಿಸಿದ್ದಿಲ್ಲ. ಅವರು ಗಾಂಧೀಜಿಯವರ ಬೆಂಬತ್ತಿ ಹೋದ ಕೆಲವೇ ದಿನಗಳಲ್ಲಿ ತನ್ನಪ್ಪ ತೀರಿಹೋದದ್ದು ಕಾಕತಾಳೀಯವೋ, ಅಗಲಿಕೆಯ ಆಘಾತವೋ ಗಣಪನಿಗೆ ಅರ್ಥವಾಗಿರಲಿಲ್ಲ. ತನ್ನ ಮೇಲಾದರೂ ಅದೆಷ್ಟು ಪ್ರೀತಿ ಹೆಗಡೆಯವರಿಗೆ? ಒಮ್ಮೆಯೂ ತನ್ನ ಮೇಲೆ ಸಿಡುಕಿದ್ದಿಲ್ಲ. ಈಗ ಕೆಲವು ವರ್ಷಗಳ ಹಿಂದೆ ತನ್ನ ಹೆಂಡತಿಯ ಓಲೆ ಬುಗುಡಿಗಳನ್ನು ಅಡವಿಟ್ಟುಕೊಂಡು ಸಾಲಕೊಡಿರೆಂದು ಹೋಗಿದ್ದ ದಿನ ಮಾತ್ರವೇ ಅವರು ತನ್ನನ್ನು ಗದರಿದ್ದು. ಅದೂ ಎಂತಹ ಸದಾಶಯದ ಗದರಿಕೆ? 
ಸಜ್ಜನರೆಂದು ದತ್ತಪ್ಪ ಹೆಗಡೆಯವರು ಎಲ್ಲೆಡೆ ಒಳ್ಳೆಯ ಹೆಸರು ಗಳಿಸಿದ್ದರೆಂದು ಗಣಪನಿಗೆ ಹಿಗ್ಗು. ಎಂದೂ ಯಾರೊಬ್ಬರಿಗೂ ಕೇಡು ಬಗೆದವರಲ್ಲ ನಮ್ಮ ದತ್ತಪ್ಪ.  ಧೂಪದ ಕೈ ಪಟೇಲ,  ಕೊಲ್ಲೂರಯ್ಯ ಮತ್ತು ಚಿದಂಬರಯ್ಯ ಮೂರೂಜನ ಸೇರಿಕೊಂಡು ಅನ್ಯಾಯ ಮಾಡಿಬಿಟ್ಟರು ಎಂದು ಪದೇ ಪದೇ ಮರುಗುತ್ತಿದ್ದ. ಬಹುಹೊತ್ತಿನಿಂದ ಸುರಿಯುತ್ತಿದ್ದ ಕಣ್ಣೀರಿನಿಂದಾಗಿ ಆತನ ದೃಷ್ಟಿ ಮಂಜಾಗಿತ್ತು. ದೂರದಲ್ಲಿ ಯಾರೋ ತನ್ನತ್ತಲೇ ಬರುತ್ತಿರುವುದು ಮಸುಕು ಮಸುಕಾಗಿ ಕಾಣಿಸಿತು.  ಯಾರಾದರಾಗಲಿ, ತಾನೀಗ ದೋಣಿಯನ್ನು ದಾಟಿಸಲಾರೆ ಎಂದು ಹೇಳಿಬಿಡಬೇಕು. ‘ಹಾಗೆ ಹೇಳುವುದು ತನ್ನ ರೂಡಿ ಅಲ್ಲವಾದರೂ ಇವತ್ತು ತಾನು ದಾಟಿಸಲಾರೆ. ತನ್ನ ಕಸುವೆಲ್ಲ ಕಣ್ಣೀರಾಗಿ ಕರಗಿ ಹರಿದುಹೋಗಿದೆ’.
‘ನನ್ನ ಕೈ ನಡುಗ್ತಿದೆ. ನೀವೇ ನೋಡಿ. ಕಣ್ಣೂ ಮಂಜಾಗಿದೆ. ನಾಳೆ ಬೆಳಿಗ್ಗೆ ಬನ್ನಿ. ನಿಮ್ಗೆ ಅಡ್ಡಿ ಇಲ್ದಿದ್ರೆ ನಮ್ಮ ಮನೇಲಿ ಉಳೀರಿ. ಇಲ್ಲ ಅಂದ್ರೆ ಅಬ್ಬಿಗದ್ದೆ ಭಟ್ಟರ ಮನೆಗೆ ನಾನೇ ಬಿಟ್ಟುಬರ್ತೀನಿ ‘  ಎಂದು ಹೇಳಿಬಿಡಬೇಕು ಎಂದುಕೊಂಡ. 


ಅಷ್ಟರಲ್ಲಿ ಆ ವ್ಯಕ್ತಿ ಹತ್ತಿರ ಬಂದು, 'ಗಣಪ ನಾಯ್ಕ, ಚೆನ್ನಾಗೈದೀಯ?' ಎಂದಿತು.
ದೃಷ್ಟಿ ಮಂಜಾಗಿದ್ದರಿಂದಲೋ, ಕತ್ತಲೆ ಆವರಿಸುತ್ತಿದ್ದುದರಿಂದಲೋ ಬಂದವರು ಯಾರೆಂದು ಆತನಿಗೆ ತಿಳಿಯಲಿಲ್ಲ. ಧ್ವನಿಯೂ ಗುರುತಾಗಲಿಲ್ಲ.
'ಯಾರು? ' ಎಂದ.
'ನಾನೇ ಗಣಪ, ಮುರಾರಿ' 
'ಓ ನಮ್ಮ ಮುರಾರಿ ಭಟ್ರು, ಇಷ್ಟು ಹೊತ್ತಲ್ಲಿ, ಎಲ್ಲಿಗೆ ಹೊಂಟ್ರಿ?’  


'ಇನ್ನೆಲ್ಲಿಗೆ ಗಣಪ? ಭಾರಂಗಿ ಮನೆಗೆ ಹೋಗೋಣ ಅಂತ ಬಂದೆ, ಯಾಕೋ ಮನಸ್ಸೇ ಬರಲಿಲ್ಲ. ಅಬ್ಬಿಗದ್ದೆ ಭಟ್ರ ಮನೆಗಾದ್ರೂ ಹೋಗಿ ಬೆಳಗು ಮಾಡಿಕೊಂಡು ಊರಿಗೆ ಹೋಗ್ತೀನಿ. ನಿನ್ನನ್ನು ಕಾಣದೇ ಸಾಕಷ್ಟು ದಿನವಾಗಿಬಿಟ್ಟಿತ್ತು. ಕಂಡು ಮಾತಾಡಿಸಿಕೊಂಡು ಹೋಗೋಣ  ಅನ್ನಿಸ್ತು. ಹಾಗಾಗಿ ಬಂದೆ'  
    


ತಾನು ಕುಳಿತ ಜಾಗದ ಪಕ್ಕದ ನೆಲವನ್ನು ಬಾಯಲ್ಲಿ ಊದಿ, ಕೈಯ್ಯಲ್ಲಿ ಒರೆಸಿ,
'ಬನ್ನಿ ಭಟ್ರೇ, ನಂಗೂ ಮನಸ್ಸಿಗೆ ಬಾಳ ಬ್ಯಾಸ್ರಾಗಿತ್ತು. ಹಂಗೇ ಹರಿಯೋ ನೀರಲ್ಲಿ ನೆನಪುಗಳನ್ನು ತೇಲಿಬಿಡ್ತಾ ಕುಂತ್ಗಂಡಿದ್ದೆ' ಎಂದ ಗಣಪ. ಮುರಾರಿ ಕಟ್ಟೆಯೇರಿ ಅವನ ಪಕ್ಕದಲ್ಲಿ ಕುಳಿತುಕೊಂಡ. ಗಣಪ ಒಂದು ನಿಟ್ಟುಸಿರು ಬಿಟ್ಟು ಹೇಳತೊಡಗಿದ,
'ಭಟ್ರೇ, ಅಕಾ ಅಲ್ಲಿ, ಅಪ್ಪಯ್ಯ ನಂಗೂ ಹೆಗ್ಡೇರಿಗೂ ಒಟ್ಟಿಗೇ ಈಜು ಕಲ್ಸಿದ್ದು. ಒಟ್ಟಿಗೇ ಈಜ್ತ ಬೆಳದ್ವು. ಆದ್ರೆ ಈ ಬದ್ಕಿನ ಹಳ್ಳ ಈಜೋದ್ರಲ್ಲಿ ಇಬ್ರೂ ಸೋತ್ವಿ.  ಕಡೇ ತನಕ ಒಟ್ಟಿಗೇ ಈಜ್ತಿರಬೇಕೂ ಅಂತ ನಮ್ಗೆ ಆಸೆ ಇತ್ತು. ಆದ್ರೆ ಆಗ್ಲಿಲ್ಲ ಭಟ್ರೇ, ಈಗಲೇ ಕೈ ಸೋಲ್ತ ಬಂದೈತೆ. ಇನ್ನು ಈಜೋದಿರ್ಲಿ, ದೋಣಿ ನಡ್ಸೋದಕ್ಕೂ ಆಗಾದಿಲ್ಲ. ಇಬ್ಬರೂ ದಡ ಮುಟ್ಟೋದ್ರಲ್ಲಿ ಸೋತೋದ್ವಿ. ಏನಂತೀರಿ?' 
'ಇದೇನು ಗಣಪ, ಎಲ್ಲ ಮುಗ್ದು ಹೋದಾಂಗೆ ಮಾತಾಡ್ತೀಯಲ್ಲ. ಇನ್ನೇನು ಹೆಗಡೇರು ತಿರುಗಿ ಬರ್ತಾರೆ. ಎಷ್ಟು ದಿನ ಅಂತ ಜೈಲಲ್ಲಿ ಇಡ್ತಾರೆ. ಈಗ ಮಹಾಯುದ್ದವೂ ಮುಗೀತಂತೆ.  ತಿಂಗಳೊಪ್ಪತ್ತಲ್ಲಿ ಬಂದೇ ಬರ್ತಾರೆ. ನೀನ್ಯಾಕೆ ಎಲ್ಲವೂ ಮುಗ್ದುಹೋದ ವಿಷಾದದ ಮಾತು ಆಡ್ತೀಯ?' 
'ಮುಗ್ದುಹೋದ ಮಾತು ಅವರಿಗಾಗಿ ಅಲ್ಲ ಭಟ್ರೇ. ಅವರು ಬರ್ಲೀ, ಬಂದು ನೂರ್ಕಾಲ ಬಾಳ್ಲೀ. ಊರಿಗೆ ಬೆಳಕು ತೋರೋ ಅವರಂತೋರು ಬಾಳ್ಬೇಕು. ನೂರು ಮಂದಿಗೆ ಬೆಳಕಾಗಬೇಕು. ವಿಷಯ ಅವರ್ದಲ್ಲ, ನಂದು, ಭಟ್ರೇ. ನಾನು ಇನ್ನೆಷ್ಟು ಕಾಲ ಬಾಳ್ಬಲ್ಲೆ? ಹೋಗ್ಲಿ ಇನ್ನೆಷ್ಟು ಕಾಲ ಬಾಳ್ಬೇಕು? ಈಗ ನೀವೇ ನೋಡಿ ಭಟ್ರೆ, ಊರಲ್ಲಿ  ಒಬ್ರಿಗಾದ್ರೂ ಈಗ ಈ ಗಣಪ ಬೇಕಾ? ಗಣಪನ ದೋಣೀಲಿ ಹೊಳೆ ದಾಟಿದ್ದು ಒಬ್ರಿಗಾದ್ರೂ ನೆನಪೈತ?  ಇಲ್ಲಿ ನನ್ನೆದುರೇ ಬಸ್ಸು ಹತ್ತಿ ಹೋಗ್ತಿದ್ರೂ ಕನಿಷ್ಠ ಒಂದು ಮುಗಳ್ನಗು ತೋರ್ದೇ ಹೋಗ್ತಾರೆ. ಎಲ್ರಿಗೂ ಗಣಪ ಮರ್ತೇಹೋದ ಭಟ್ರೇ. 
ಇವತ್ತು ಸಂಜೆ ಆ ದರಿದ್ರ ಸೆಕ್ರೀಟ್ರಿ ಗದುರ್ತಿದ್ರೆ ಮೊದ್ಲು ದೂರ್ದಲ್ಲಿ  ಸುಮ್ಮನೆ ನಿಂತು ಚೆಂದ ನೋಡಿದ್ರು. ಕೊನೆಗೆ ಅವನ ಪರ ವಹಿಸೇ ಮಾತಾಡಿದ್ರು. ನನಗೆ ನನ್ನ ದೋಣಿಗೆ ಜನ ಕಮ್ಮಿ ಆದ್ರೂ ಅಂತ ನೋವಿಲ್ಲ. ಉತ್ಪತ್ತಿ ಕಮ್ಮಿ ಆತು ಅಂತ್ಲೂ ದುಃಖ ಇಲ್ಲ ಭಟ್ರೇ. ನನಗೆ ಈಗ ದುಡ್ಡು ಬ್ಯಾಡ. ಇರಾದು ನಮ್ಮದೆರಡು ಮುದಿಜೀಂವ. ನಮ್ಗೆ ಬೇಕಾದ್ದು ದುಡ್ಡಲ್ಲ, ಪ್ರೀತಿ ಅಷ್ಟೆ. ಭಟ್ರೇ, ಆವಾಗ ದುಡ್ಡು ಬೇಕಿತ್ತು, ಬದ್ಲಾಗಿ ಜನ್ರ ಪ್ರೀತಿ ಸಿಗ್ತು. ಸಾಕಷ್ಟು ದುಡ್ಡೂ ಸಿಗ್ತಿತ್ತು ಅನ್ನಿ. ಈಗ ದುಡ್ಡೂ ಇಲ್ಲ, ಪ್ರೀತ್ಯೂ ಇಲ್ಲ. ಒಂದೇ ಒಂದು ಪ್ರೀತಿ ಮಾತು, ಒಂದು ಸಣ್ಣ ನಗು, ಗಣಪಾ ನೀನೇ ಸೈ ಅನ್ನೋ ಒಂದು ಪುಟ್ಟ ಭರವಸೆ, ಅರ್ಧ ರಾತ್ರಿಯಾಗಿರ್ಲೀ, ಬೆಳಗಿನ ಝಾಂವ ಆಗಿರ್ಲಿ ದೋಣಿ ಹೊಳೆಗಿಳಿಸೋ ಧೈರ್ಯ ಕೊಡ್ತಿತ್ತು. ಈಗ ಯಾರ್ಗೂ ನನ್ನ ಅವಶ್ಯಕತೆ ಇಲ್ಲ ಅನ್ನೋ ಕೊರಗೇ ನನ್ನ ಕೊಲ್ತ ಐತೆ’.
ಗಣಪ ನೋವಿನಲ್ಲಿ ನಲುಗಿ ಹೋಗಿದ್ದ. ಕಣ್ಣಂಚಲ್ಲಿ ನೀರಿಳಿಯುತ್ತಿತ್ತು. ಮುರಾರಿ ಅವನ ಕುರಿತೇ ಯೋಚಿಸುತ್ತ ಮೌನವಾಗಿದ್ದ. ತುಸು ಹೊತ್ತು ತಡೆದು ಗಣಪನೇ ಮಾತು ಮುಂದುವರೆಸಿದ್ದ,
'ಆ ಕಾಲ್ದಲ್ಲಿ ಅದೆಷ್ಟು ಉಮೇದು ಭಟ್ರೇ? ದಿಬ್ಬಣಕ್ಕೂ ಗಣಪ. ಆಸ್ಪತ್ರೆಗೂ ಗಣಪ. ಅಡಕೆ ಒಯ್ಯಾಕೂ ಗಣಪ, ದಿನಸಿ ತರಾಕೂ ಗಣಪ. ಬೆಳ್ಗೂ ಗಣಪ, ಬೈಗೂ ಗಣಪ. ನಕ್ಕ ನಕ್ಕಂತ ಹೊಸ ಜೋಡಿಗಳು ಬರ್ತಿದ್ವು. ಹೆಣ್ಣುಮಕ್ಕಳು ಪ್ರೀತಿಯಿಂದ ಗಣಪಾ ಅಂತ ನಕ್ಯಂತ ಹಬ್ಬಕ್ಕೆ ತವ್ರಿಗೆ ಬರ್ತಿದ್ವು. ಗಂಡನ ಮನೆಗೆ ಹೋಗ್ತಿದ್ವು. ಬಸ್ರೇರೂ, ಬಾಣಂತೇರೂ, ಮುದ್ಕ್ರೂ ಮುತ್ತೈದೇರೂ ಅಷ್ಟೇ ಯಾಕೆ ಭಟ್ರೇ ಹೆಣ ಕೂಡ ದಾಟತಿದ್ವು. ಆಗ ಹೆಣ ದಾಟ್ಸುವಾಗ ಇದ್ದ ಜೀಂವಂತಿಕೆ ಈಗ ಜೀಂವಂತ ಮನುಷ್ಯರನ್ನು ದಾಟ್ಸುವಾಗ್ಲೂ ಇಲ್ಲ! ದೊಡ್ಡೋರ ಕಣ್ತಪ್ಪಿಸಿ ಹೊಳೇಲಿ ಈಜ್ತಿದ್ದ ನಿಮ್ಮೋರ ಹುಡುಗ್ರಿಗೂ ಕರ್ದು ಬುದ್ದಿ ಹೇಳಿ ಬೈತಿದ್ದೆ. ನದಿಯಲ್ಲಿ ಅಂಡು ತೊಳ್ಯಾದು ಕಂಡ್ರೆ ಬರ್ಲು ಮುರ್ಕೊಂಡು ಬಾಸುಂಡೆ ಬರಾ ಹಾಂಗೆ ಬಾರಿಸ್ತಿದ್ದೆ. ಅವರು ಜೈನ್ರ ಹುಡುಗ್ರಾದ್ರೂ ಆಗ್ಲಿ, ಬ್ರಾಹ್ಮಣ್ರ ಹುಡುಗ್ರಾದ್ರೂ ಆಗ್ಲಿ. ಆದ್ರೆ ಒಬ್ರೂ ನನಗೆ ಅಂದೋರಿಲ್ಲ, ಆಡ್ದೋರಿಲ್ಲ. ದೋಣಿ ದಾಟ್ತ ಹೊಳೆಗೆ ಎಂಜಲು ತುಪ್ಪಿದ್ರೆ, ‘ನಿನ್ನ ತಾಯಿ ಬಾಯಿಗೆ ಹೀಂಗೇ ತುಪ್ತೀಯ’ ಅಂತ ಬೈತಿದ್ದೆ. ಯಾರೂ ಚಕಾರ ಎತ್ತಿ ಆಡಿದ್ದಿಲ್ಲ. ಹಾಂಗಿತ್ತು ಆ ಕಾಲ. ಹೊಳೆ ದಾಟಿದ ಮ್ಯಾಲೂ ಜನ ಅಂಬಿಗನ ನಂಬ್ತಿದ್ದ ಕಾಲ, ಅದು.
ಭಟ್ರೇ, ಈ ನನ್ನ ದೋಣಿ ಅದೆಷ್ಟು ಪುಣ್ಯ ಮಾಡಿತ್ತು ಅಂತೀರ? ಎಂತೆಂತೋರು ಕುಂತ್ರು ಇದ್ರಲ್ಲಿ ಭಟ್ರೇ!? ವಿಶ್ವೇಶ್ವರಯ್ಯ, ಕಡಾಂಬಿ, ಫೋರ್ಬ್ಸೂ, ರಾಮರಾಯರು, ಕೃಷ್ಣರಾಯರು, ಇನ್ನೂ ಎಂತೆಂತವರೋ. ಈಗ ಆಗಿನ ಸಂತೋಷ, ಸಂಭ್ರಮ, ಉತ್ಸಾಹ, ನಗು,  ವಿನೋದ ಯಾವ್ದೂ ಇಲ್ಲ. ಎಲ್ಲ ಶರಾವತೀ ಹೊಳೇಲಿ ತೊಳೆದು ಹೋದ್ವು. ದರಿದ್ರ ಫುಡ್ಡಾಫೀಸಿನೋರು, ಪೋಲೀಸ್ರು,  ಸೈನಿಕರು, ನಂಬ್ಸಿ ಕತ್ತುಕೊಯ್ಯೋ ಶಾನುಭೋಗ್ರೂ, ಪಟೇಲ್ರೂ  ನನ್ನ ದೋಣಿ ಮೈಲಿಗೆ ಮಾಡ್ಬುಟ್ರು. ಅಷ್ಟು ಸಾಲ್ದು ಅಂತ ಕೊನೀಗೆ ನಮ್ಮ  ಹೆಗಡೇರನ್ನೇ ದಸ್ತಗಿರಿ ಮಾಡಿ ಒಯ್ದ ಅಮಲ್ದಾರ ಕೂಡ ಇದೇ ದೋಣೀಲಿ ದಾಟಿಬಿಟ್ಟ. ಆವತ್ತು ಹೆಗಡೇರ್ನ ಬಂಧಿಸಿ ಒಯ್ತಿದ್ದಾಗ, ವಿಷ್ಯ ಹೀಂಗೇ ಅಂತ ಒಂದು ಸಣ್ಣ ಸುಳಿವು ಗೊತ್ತಾಗಿದ್ರೂ ನಡೂ ಹೊಳೇಲಿ ದೋಣಿ ಮಗಚೇಬಿಡ್ತಿದ್ದೆ. ಹ್ಯಂಗೂ ಹೆಗಡೇರಿಗೆ ಈಜು ಬರ್ತಿತ್ತು. ಕೊನೇವರ್ಗೂ ಈ ದಡ್ಡಂಗೆ ಗೊತ್ತೇ ಆಗ್ನಿಲ್ಲ. ಜೀಂವಕ್ಕೆ ಮಾತ್ರ ಅನ್ನಿಸ್ತಲೇ ಇತ್ತು ಭಟ್ರೇ, ಏನೋ ನಡೀಬಾರ್ದ್ದು ನಡೀತಾ ಐತೇ ಅಂತ. ಆದ್ರೆ ಏನೂ ಅಂತ  ಹೊಳೀದೇ ಎಲ್ಲ ಹೊಳೇಲಿ ಹುಳೀ ತೊಳ್ದಾಂಗಾತು' 
ಆತ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದ್ದ. ಅತ್ತೇ ಸಮಾಧಾನ ಆಗುವುದಾದರೆ ಹಾಗೇ ಆಗಲೆಂದು ಮುರಾರಿ ಸಂತೈಸಲು ಹೋಗಲಿಲ್ಲ. ಕೆಲವು ಹೊತ್ತು ಅತ್ತು ಕೊನೆಗೆ ಗಣಪನೇ,
'ಭಟ್ರೇ, ಮಧ್ಯ ಮಳೆಗಾಲ್ದ ಒಂದಿನ ಏನಾಗಿತ್ತು ಗೊತ್ತೈತ? ನಮ್ಮ ಕಂಚಿಕೈ ದ್ಯಾವಪ್ಪಯ್ಯನ ಮಗ್ಳಿಗೆ ಅಸಾಧ್ಯ ಹೆರಿಗೆ ನೋವು, ಉಳಿಯಾದೇ ಕಷ್ಟವಾಗಿತ್ತು. ಕಡೇ ಪ್ರಯತ್ನ ಅಂತ ಸಾಗರದ ಆಸ್ಪತ್ರೆಗೆ ಹೋಗಾಕೆ ಕಂಬಳಿ ಜೋಲಿ ಮಾಡಿ ತೆಂಕೋಡುಮನೆ ಗಾಡಪ್ಪಯ್ಯನ ಗಾಡಿಯಲ್ಲಿ ಹಾಕ್ಯಂಡು ತಂದಿದ್ರು. ಅರ್ಧರಾತ್ರಿ. ಜೋರು ಮಳೆ. ಹೊಳೆ ತುಂಬಿ ಜಬರ್ದಸ್ತಿನಿಂದ ಹರೀತಿದ್ದ ಕಾಲ. 'ಗಣಪಾ ಏನಾದ್ರೂ  ಮಾಡಾದೇ ಸೈ' ಅಂದ್ರು. ಸರಿ ನನ್ನ ತಮ್ಮ ಕೆರಿಯಪ್ಪನ್ನ ಕರ್ಕೊಂಡು, ಅವರನ್ನೆಲ್ಲ ದೋಣೀಲಿ ಕೂರಿಸ್ಕ್ಯಂಡು ಶರಾವತಿ ತಾಯಿಗೆ ಕೈ ಮುಗ್ದು ದೋಣಿ ಹೊಳೆಗೆ ಇಳಸ್ದೆ. ದ್ಯಾವಪ್ಪಯ್ಯನ ಕೈಗೆ ಲಾಟೀನು ಕೊಟ್ಟೆ. ಗಾಳೀ ಮಳೇಲಿ ಹಾಳಾದ್ದು ಲಾಟೀನು ಒಂದೇ ನಂಬಾಕಾಗ್ದು ಅಂತ  ಎರಡು ದೊಂದೀನು ಕಟ್ಟಿ ಹೊತ್ತಿಸಿ ಹಿಡ್ಕಳಾಕೆ ಹೇಳಿ, ದೊಂದಿ ಮುಚ್ಚಲಿಕ್ಕೆ ಒಂದು ಗೊರಬು ಕೊಟ್ಟೆ. ದೋಣಿ ನನ್ನ ಹಿಡಿತಕ್ಕೆ ಸಿಗ್ದೇ ನೀರಿನ ಜೊತೆ ಕೆಳಗೇ ಓಡ್ತಿತ್ತು. ಕೆರಿಯಪ್ಪಂಗೆ ಗಳದಲ್ಲೇ ಕೆಳಮುಖ ಒತ್ತಿ ಹಿಡಿಯಕ್ಕೆ ಹೇಳ್ತ ಸ್ವಲ್ಪ ಸ್ವಲ್ಪವೇ ದೋಣಿ ಮುಂದೆ ಬಿಟ್ಟೆ. ಹಾಂಗೂ ಹೀಂಗೂ  ಅರ್ಧಗಂಟೆ ಜಟಾಪಟಿ ಮಾಡಿ ಮೆಣಸುಗಾರು ತಲುಪಿ, ಹೋಗಿ ಹೆರಿಗೆ ಸುಶೀಲಮ್ಮನ ಕರ್ದೆ. ಆಯಮ್ಮ ಬಂದು ಎಂತದೋ ಔಷ್ಧ ಕೊಟ್ಟು ಮರ್ದಿನ ಬೆಳಿಗ್ಗೆ ಸಾಗರದ ಆಸ್ಪತ್ರೆಗೆ ಕಳಿಸ್ತು. ಕೊನೆಗೆ ಹೆರಿಗ್ಯಾಗಿ ಮಗೂನೂ ಬದುಕ್ತು. ತಾಯೀನೂ ಬದುಕ್ತು. ಹೋದ್ವರ್ಷ ಮೊಮ್ಮಗಳ ಮದ್ವೆಗೆ ದ್ಯಾವಪ್ಪಯ್ಯ ಬಂದು ಕರ್ದಿದ್ರು, ಹೋಗಿದ್ದೆ. ಶರಾವತಿ ತಾಯೇ ಮೈತಳ್ದು ಬಂದಂಗಿತ್ತು ಅರಿಷಿನ ಹಚ್ಚಿದ್ದ ಆ ಮದುವಾಣಗಿತ್ತಿ ಮಖ. ಅದನ್ನು ಕಂಡು ಮನಸ್ಸು ಅರಳಬಿಡ್ತು ಭಟ್ರೇ. ದ್ಯಾವಪ್ಪಯ್ಯ ನನ್ನ ಅಪ್ಗಂಡು ಕಣ್ಣೀರು ಹಾಕಿದ್ರು. ಆನಂದದ ಕಣ್ಣೀರು.
         

ಖಾಯಿಲೆ ಹೆಚ್ಚಾಗಿ ನನ್ನ ದೋಣೀಲೇ ಪ್ರಾಣ ಬಿಟ್ಟವ್ರೂ ಇದ್ರು. ಪ್ರಾಣ ಉಳಿಸ್ಕಂಡೋರೂ ಇದ್ರು. ಈಗ ಅವೆಲ್ಲ ಕನ್ಸು. ಭಟ್ರೇ, ನಿಮ್ಗೊಂದು ವಿಷ್ಯ ಗೊತ್ತಾತ? ಇವತ್ತು ಆ ಸೆಕ್ರೆಟ್ರಿಯವ್ನು ಹೇಳ್ದ, ‘ಇನ್ಮುಂದೆ ದೋಣಿ ನಡ್ಸಾದಕ್ಕೆ ಪರವಾಂಗಿ ತಗಾಬೇಕಂತೆ! ಮೇಲ್ಗಡೆ ಡ್ಯಾಮಿನಿಂದ ಇದ್ದಕ್ಕಿದ್ದ ಹಾಗೇ ನೀರು ಬಿಟ್ಟು ಅಪಾಯ ಆದ್ರೆ ಅವ್ರು ಜವಾಬ್ದಾರಿ ಅಂತೆ. ಅಲ್ಲ, ಆವತ್ತು ದ್ಯಾವಪ್ಪಯ್ಯನ ಮಗಳು ಪ್ರಾಣ ಉಳ್ಸದಕ್ಕೆ ಇವ್ರು ಬಂದಿದ್ರಾ? ಪರವಾಂಗಿ ತಗಾಬೇಕಂತೆ!’  ಗಣಪ ವಿಷಾದದಲ್ಲಿ ನಕ್ಕಿದ್ದ. 


‘ಪರವಾನಗಿ ವಿಚಾರಕ್ಕೆ ನೀನೇನು ತಲೆ ಕೆಡಿಸ್ಕೋ ಬೇಡ, ಗಣಪ. ಕೃಷ್ಣರಾವ್ ಸಾಹೇಬರಿಗೆ ನಮ್ಮ ತುಂಗಕ್ಕಯ್ಯನ ಹತ್ರ ಹೇಳ್ಸನ' 
ಮುರಾರಿಯ ಮಾತು ಕೇಳಿ, ಅವನನ್ನು ನೋಡಿ ಮುಗಳ್ನಗುತ್ತ ಗಣಪ ಹೇಳಿದ, 'ನಿಮಗೊಂದು ಭ್ರಾಂತು ಭಟ್ರೆ, ಡ್ಯಾಮು ಕಟ್ಟಿ ಮುಗ್ಸೋ ತನಕ ಯಾರು ಇರೋವ್ರೋ,ಯಾರು ಸಾಯೋವ್ರೋ, ಯಾರ್ಬಲ್ರು? ಒಂದು ವಿಷ್ಯ ಹೇಳಿ ಭಟ್ರೇ. ರಾಮಾಯಣದಲ್ಲಿ ಗುಹನ ದೋಣೀಲಿ ಯಾವತ್ತಾದ್ರೂ ರಾವಣ ದಾಟಿದ್ನಾ? 
ಗಣಪ ಗಂಭೀರವಾಗಿ ಕೇಳಿದ್ದ. ಅಂತಹದ್ದೊಂದು ಪ್ರಶ್ನೆಯನ್ನು ಮುರಾರಿ ಅವನಿಂದ ನಿರೀಕ್ಷಿಸಿರಲಿಲ್ಲ. ಅವನಿಗೆ ಆಶ್ಚರ್ಯವಾದರೂ ತೋರಗೊಡದೆ,
            

 'ಇಲ್ಲ ಗಣಪ, ಯಾವತ್ತೂ ಅದ್ರಲ್ಲಿ ರಾವಣ ದಾಟಿರಲಿಲ್ಲ. ರಾಮನ ಪರಿವಾರವಷ್ಟೇ ದಾಟಿದ್ದು'                      
           


'ಆದ್ರೆ ನನ್ನ ದೋಣೀಲಿ ರಾವಣಾನೂ ದಾಟ್ಬಿಟ್ಟ. ಬರೀ ರಾವಣ ಅಲ್ಲ, ರಾಕ್ಷಸರ ದಂಡಿಗೆ ದಂಡೇ ನನ್ನ ದೋಣೀಲಿ ದಾಟ್ಬಿಡ್ತು. ನಾನು ಭಾರಂಗೀನ ರಾಕ್ಷಸರಿಗೆ ಒಪ್ಪುಸ್ಬಿಟ್ಟೆ'. ಬಹುಹೊತ್ತು ಹೊಳೆಯನ್ನೇ ನೋಡುತ್ತ ಗಣಪ ಉಮ್ಮಳಿಸಿ ಅಳುತ್ತಲೇ ಕುಳಿತಿದ್ದ. ಮುರಾರಿಯ ಕಣ್ಣೂ  ಒದ್ದೆಯಾಗಿತ್ತು. ಕೊನೆಗೆ  ಗಣಪ ತಲೆಯೆತ್ತಿ ಮುರಾರಿಯನ್ನೇ ದಿಟ್ಟಿಸಿ,


'ನನಗಿನ್ನು ಎಂತದ್ದೂ ಉಳ್ದಿಲ್ಲ ಭಟ್ರೇ. ಮಗಳು ಮದ್ವೆಯಾಗಿ ಗಂಡನ ಮನೇಲಿ ಸುಖವಾಗೈತೆ. ಇಷ್ಟವೋ ಅನಿಷ್ಟವೋ ಮಗನೂ ಒಂದು ಕೆಲ್ಸ ಮಾಡ್ತ ಐದಾನೆ. ತಮ್ಮದೀರು ಬ್ಯಾರೆಯಾಗಿ ಅವರವರ ಬಾಳ್ವೆ ಅವರವರು ನಡೆಸ್ತ ಐದಾರೆ. ಇನ್ನು ಉಳ್ದಿರೋದು ಎರಡೇ. ಒಂದು ಈ ದೋಣಿ, ಇನ್ನೊಂದು ನನ್ನ ಹೆಂಡ್ತಿ ಚೆನ್ನಮ್ಮ. ಈ ದೋಣೀನಾದ್ರೂ ಮೈಗೆ ಕಟ್ಟಿಗ್ಯಂಡು ಸಾಯ್ಬೋದು. ಆದ್ರೆ ನನ್ನ ಹೆಂಡ್ತಿ? ನನಗೆ ಅವಳದ್ದೇ ಚಿಂತೆ. ನನ್ನ ಸೊಸೆ ಅವಳನ್ನು ಮುಟ್ಟಿಸ್ಕಳ್ಳಾದಿಲ್ಲ. ಯಾಕೇ ಅಂದ್ರೆ ಪ್ಯಾಟೇಲೇ ಇದ್ದು ಅದರ ಮೈ ಚರ್ಮವೂ ತುಸು ಬೆಳ್ಗಾಗಿದೆ. ಈ ಹಳ್ಳಿ ಮುದುಕಿ ತನ್ನತ್ತೆ ಅನ್ನೋದಕ್ಕೆ ಅದಕ್ಕೆ ನಾಚ್ಕೆ ಅಂತೆ! ಚೆನ್ನಿ, ಕಷ್ಟವೋ ಸುಖವೋ ಕಳೆದೈವತ್ತು ವರ್ಷ ನನ್ನ ಕಟ್ಟಿಗ್ಯಂಡು ಏಗಿದ್ಲು. ಈಗ ಏನ್ಮಾಡಾದು? ದತ್ತಪ್ಪ ಹೆಗಡೆಯವರಿದ್ರೆ ತಮ್ಮನ ಹೆಂಡ್ತೀ ಅಂತ ಅನಾಥವಾಗಕ್ಕೆ ಬಿಡ್ತಿರ್ಲಿಲ್ಲ. ಈಗ ಅವ್ರೂ ಇಲ್ಲ. ತುಂಗಮ್ಮ ಐದಾರೆ ಅನ್ನದೊಂದೇ ಸಮಾಧಾನ, ಅಷ್ಟೆ' 


ಆತ ಮಾತು ಮುಗಿಸುವ ಹೊತ್ತಿಗೆ ಮುರಾರಿಗೆ ಅವನೊಳಗಿನ ವಿಷಾದ ಅರ್ಥವಾಗಿತ್ತು. ಆತನನ್ನು  ಸಮಾಧಾನ ಪಡಿಸಲು ಸ್ವಲ್ಪ ಗಟ್ಟಿಯಾಗಿ ಹೇಳಿದ,
‘ಗಣಪ ನಿನ್ನ ಮನಸ್ಸು ಯಾವ ಕಡೆಗೆ ಎಳೀತಿದೆ ಅಂತ ನನಗೆ ಅರ್ಥವಾಗ್ತಿದೆ. ಆದ್ರೆ ನಿನ್ನ ಯೋಚನೆ ಎಷ್ಟು ಮಾತ್ರಕ್ಕೂ ಸರಿಯಿಲ್ಲ. ಆ ಯೋಚ್ನೆ ಬಿಟ್ಬಿಡು. ನೋಡು, ಹೆಗಡೆಯವರು ಹೆಚ್ಚೂ ಅಂದ್ರೆ ಇನ್ನು ನಾಲ್ಕೆಂಟು ದಿನಗಳಲ್ಲಿ ಬರ್ತಾರೆ. ಅವರು ತಿರುಗಿ ಬಂದ್ಮೇಲೆ ನಿನ್ನಂತ ಗೆಳೆಯರು ಜೊತೆಗಿಲ್ದಿದ್ರೆ ಅವರಿಗೆ ಸಂಕಟವಾಗೋದಿಲ್ವಾ? ಹುಚ್ಚುಚ್ಚಾಗಿ ಯೋಚಿಸ್ಬೇಡ. ಮಾತು ಸಾಕು. ಮನೇಗೆ ಹೋಗಿ ಊಟ ಮಾಡಿ ನೆಮ್ಮದಿಯಿಂದ ಮಲಗು. ನಾನು ಬೆಳಿಗ್ಗೆ ಬರ್ತೀನಿ. ಮೆಣಸುಗಾರಿಗೆ ಹೋಗ್ಬೇಕು. ಈಗ ಅಬ್ಬಿಗದ್ದೆಗೆ ಹೋಗ್ತೀನಿ. ನಾಳೆ ಮಾತಾಡೋಣ, ಏನಂತೀಯ?' 
ಗಣಪ ಉತ್ತರಿಸಲಿಲ್ಲ. ಮುರಾರಿ ಆತನ ತೋಳು ಹಿಡಿದು ಎಬ್ಬಿಸಿ, ತುಸುದೂರ ತೋಳು ಹಿಡಿದೇ  ಜೊತೆಯಾಗಿ ನಡೆದ. 

ಆತನಿಂದ ಬಿಡಿಸಿಕೊಂಡ ಗಣಪ,
'ಯಾಕೆ ಹೆದರ್ತೀರಿ ಭಟ್ರೇ, ಏನೂ ಆಗಲ್ಲ. ನಾನೇನು ಜೀಂವ ತೆಕ್ಕಳಾದಿಲ್ಲ. ನೀವು ಹೋಗ್ಬನ್ನಿ, ಸುಮ್ಮನೆ ಮನಸ್ಸಿನ ನೋವನ್ನು ನಿಮ್ಮ ಹತ್ರ ತೋಡಿಕ್ಯಂಡೆ ಅಷ್ಟೆ' ಎಂದ. 
        

ತನ್ನ ಮಾತಿನಿಂದ ಆತನಿಗೆ ಸಮಾಧಾನವಾಗಿದೆ ಎಂದು ಭಾವಿಸಿದ ಮುರಾರಿ, ‘ಗಣಪ, ಹಾಗಾದರೆ ನಾನು ಬೆಳಿಗ್ಗೆ ಸಿಕ್ತೀನಿ. ನೀನು ಒಬ್ಬನೇ ಇಲ್ಲಿ ಕೂತಿರ್ಬೇಡ. ಮನೆಗೆ ಹೋಗಿ ಊಟ ಮಾಡಿ ಮಲಗು’ ಎಂದು ಹೇಳಿ ತಾನು ಅಬ್ಬಿಗದ್ದೆಯತ್ತ ಹೊರಟ. 


ಮುರಾರಿ ಮರೆಯಾಗುವವರೆಗೂ ಅವನತ್ತಲೇ ನೋಡುತ್ತ ಅಲ್ಲೇ ನಿಂತಿದ್ದ ಗಣಪ, ನಂತರ ಮನೆಯತ್ತ ಹೋಗುವ ಬದಲು ಹೊಳೆಯ ಕಡೆಗೆ ತಿರುಗಿದ. ಇತ್ತ ಮುರಾರಿ ತನ್ನ ರೂಢಿಯಂತೆ ನಕ್ಷತ್ರದ ಬೆಳಕನ್ನೇ ಅನುಸರಿಸಿ  ಗಟ್ಟಿಯಾಗಿ ಹಾಡಿಕೊಳ್ಳುತ್ತ  ನಡೆಯತೊಡಗಿದ್ದ.

    'ದಂಡೆಗಳೆರಡೂ ಒಂದಾಗಿ ಕೂಡಿರಲು 
            ಕೊಂಡೊಯ್ದ ಅಂಬಿಗನು ಯಾರಿಗೆ ನಂಟೋ?
    ಕಂಡ ಮೊಲೆಗಳ ಹಿಂದೆ ದಿಂಡೆದ್ದು ಹೊರಟಿರಲು
                ಉಂಡಮೊಲೆ ನೆನಪು ಯಾರಿಗೆ ಉಂಟೋ'

 ಗಣಪ ಹೇಳಿದಂತೆ ಈಗ ಯಾರೂ ಆತನ ದೋಣಿಗೆ ಕಾಯುತ್ತಿರಲಿಲ್ಲ. ಇತ್ತೀಚೆಗೆ ಎಣ್ಣೆಹೊಳೆ, ಮಳಲಿ, ಕೆಂಚಗದ್ದೆ ಹೊಳೆಗಳಿಗೆ ಸೇತುವೆಯಾಗಿತ್ತು. ಜೋಗ - ಭಟ್ಕಳ ರಸ್ತೆಯಿಂದ ಎಣ್ಣೆಹೊಳೆ ಸೇತುವೆಯ ಮೂಲಕ ಕರೂರಿಗೆ ಮತ್ತು ವಳಗೆರೆ ಮಾರ್ಗದಲ್ಲಿ ಮಡೇನೂರಿಗೆ ರಸ್ತೆ ಸಿದ್ಧವಾಗಿತ್ತು. ಮಡೇನೂರಿನಲ್ಲಿ ಕಾಸ್ವೇ ನಿರ್ಮಾಣವಾಗಿ ಹೊಳೆ ದಾಟುವುದು ಸುಲಭವಾಗಿತ್ತು. ಇತ್ತೀಚಿನವರೆಗೂ ಕೆಳಮನೆ ಸಮೀಪ ದೋಣಿ ದಾಟಿಸುತ್ತಿದ್ದ ತಿಮ್ಮೇಗೌಡ ಈಗ ದೋಣಿ ದಾಟಿಸುವ ಉದ್ಯೋಗ ಕೈ ಬಿಟ್ಟು, ಆಣೆಕಟ್ಟು ನಿರ್ಮಾಣಕ್ಕೆ ಇಟ್ಟಿಗೆ ಸಾಗಿಸುವ ಉದ್ಯೋಗ ಆರಂಭಿಸಿದ್ದ. ಸಾಗರದಿಂದ ಜೋಗಕ್ಕೆ ಎರಡು ಬಸ್ಸುಗಳು ಓಡಾಡತೊಡಗಿದ್ದವು. ಕಾರ್ಗಲ್ಲಿನಲ್ಲೂ ಕಾಸ್ವೇ ಸಿದ್ಧವಾಗಿತ್ತು. ಇಡುವಾಣಿಯಿಂದ ಮೆಣಸುಗಾರು ಮಾರ್ಗದಲ್ಲಿ ಮಡೇನೂರಿಗೆ ಒಂದು ಬಸ್ಸು, ಹಾಗೆಯೇ ಅರಳುಗೋಡು-ಕಂಚಿಕೈ-ಭಾರಂಗಿ ಮಾರ್ಗದಲ್ಲಿ ಮೆಣಸುಗಾರು-ತಾಳಗುಪ್ಪ ಬಸ್ಸಿಗೆ ಸಂಪರ್ಕ ಕೊಡುವ ಇನ್ನೊಂದು ಬಸ್ಸು ಓಡತೊಡಗಿದ್ದವು. ಚಾರ್ಕೋಲ್ ಉರಿಸಿದ ಉಗಿಯಿಂದ ಓಡುತ್ತಿದ್ದ ಆ ಬಸ್ಸುಗಳು ತಮ್ಮ ಗಮ್ಯವನ್ನು ನಿಶ್ಚಿತವಾಗಿ ತಲುಪುವ ಭರವಸೆ ಇಲ್ಲದಿದ್ದರೂ ಹತ್ತೆಂಟು ಮೈಲು ನಡೆಯುವ ಶ್ರಮ ಮತ್ತು ಸಮಯವನ್ನು ಉಳಿಸುವ ಕಾರಣದಿಂದ ಜನ ಅವುಗಳನ್ನೇ ಅವಲಂಬಿಸತೊಡಗಿದ್ದರು. ಬಸ್ಸನ್ನು ಗಂಟೆಗಟ್ಟಲೇ ಕಾದರೂ ಅದರಲ್ಲಿ ಹೋಗುವುದು ಅವರಿಗೆ ಕುತೂಹಲ, ಸೌಲಭ್ಯ ಮತ್ತು ಪ್ರತಿಷ್ಟೆಯ ಸಂಗತಿಯಾಗಿತ್ತು. ಮಹಾರಾಜರು ಹೇಳಿದಂತೆ ತಮ್ಮ ಭಾಗ್ಯದ ಬಾಗಿಲೇ ತೆರೆದಿದೆಯೆಂದು ಭಾವಿಸಿ ಹಳ್ಳಿಯ ಜನ ಅಗತ್ಯಕ್ಕಿಂತ ಹೆಚ್ಚು ಓಡಾಡತೊಡಗಿದ್ದರು. ಕಾಲೋನಿ ನಿರ್ಮಾಣದ ಕಾಮಗಾರಿ ಆರಂಭವಾದ ಮೇಲೆ ಹಣದ ಚಲಾವಣೆಯೂ ಹಿಂದಿಗಿಂತ ಅಧಿಕವಾಗಿ ಕ್ರಮೇಣ ಜನಗಳ ಕೈಯ್ಯಲ್ಲಿ ಹಣ ಹರಿದಾಡತೊಡಗಿತ್ತು. 


ಸೇತುವೆಗಳು ದಂಡೆಗಳನ್ನು ಜೋಡಿಸಿ ದೋಣಿಗಳನ್ನು ಮುಳುಗಿಸತೊಡಗಿದ್ದವು. ಹಳ್ಳಿಗಳ  ಹಾದಿ ರಸ್ತೆಗಳಾಗಿ ವಿಸ್ತರಿಸತೊಡಗಿದ್ದವು. ಗ್ರಾಮಗಳ ಗಾಡಿರಸ್ತೆಗಳಲ್ಲಿ ಯೋಜನೆಗಳ ವಾಹನಗಳು ಓಡತೊಡಗಿದ್ದವು. ಧನಿಕರ ದೌಲತ್ತು ಹೊಸಕಾರುಗಳಲ್ಲಿ ಸವಾರಿ ಹೊರಟಿದ್ದವು. ಮಲೆನಾಡಿನ ಹಳ್ಳಿಗಳು ಮೆಲ್ಲಗೆ ಕಾಲೋನಿಗಳ ಮಾದಕತೆಗೆ ಮನಸೋಲತೊಡಗಿದ್ದವು.


**********


ಅಧ್ಯಾಯ - ೩

ಮಹಾತ್ಮಾಗಾಂಧಿ ವಿದ್ಯುದಾಗಾರದ ಲೋಕಾರ್ಪಣಾ ಕಾರ್ಯಕ್ರಮ ಮುಗಿಸಿ ಭಾರಂಗಿಗೆ ಬಂದು ಊಟ ಮಾಡಿ ಮಲಗಿ ಎದ್ದ ವಸುಧಾ, ಸುಬ್ರಾಯನ ಹೆಂಡತಿಯ ಒತ್ತಾಯಕ್ಕೆ ಮಣಿದು ತುಂಬಳ್ಳಿಗೆ ಹೋಗಿ ಬಂದರೂ ಕೃಷ್ಣರಾವ್ ಬಂದೇ ಇರಲಿಲ್ಲ. ರಾತ್ರಿ ಇನ್ನೇನು ಊಟಕ್ಕೆ ಎಲೆಹಾಕಬೇಕು ಎನ್ನುವ ಹೊತ್ತಿಗೆ ಬಂದ ಕೃಷ್ಣರಾವ್, ಕೊನೇ ಘಳಿಗೆಯಲ್ಲಿ ಮುಖ್ಯಮಂತ್ರಿಗಳು ಹಿರೇಭಾಸ್ಕರಕ್ಕೆ  ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದ ಕಾರಣ ಹಯಾತ್ ಸಾಹೇಬರು ತನ್ನನ್ನೂ ಒತ್ತಾಯಿಸಿದರು, ಹಾಗಾಗಿ ತಾನು ಹಿರೇಭಾಸ್ಕರಕ್ಕೆ ಹೋಗಲೇಬೇಕಾಗಿ ಬಂದಿದ್ದರಿಂದ  ತಡವಾಯಿತು ಎಂದು  ಸಮಜಾಯಿಷಿ ಕೊಟ್ಟರು.
          

ಊಟ ಮುಗಿದು ರಾತ್ರಿ ಜಗುಲಿಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಮಾತನಾಡುತ್ತಿದ್ದಾಗ ದತ್ತಪ್ಪ  ಜೋಗದ ಸಮೀಕ್ಷೆಯ ವಿಚಾರವನ್ನು ಪುನಃ ಪ್ರಸ್ತಾಪಿಸಿದರು,
‘ಹೊಸದೊಂದು ಡ್ಯಾಮಿನ ಸಮೀಕ್ಷೆ  ನಿಜವಾ? ಅದು ಯಾರ ಆಲೋಚನೆ? ನಿಜವಾಗಿ ಅದರ ಅವಶ್ಯಕತೆ ಇದೆಯಾ?’ 
'ಅದೇ ವಿಚಾರದ ಮೀಟಿಂಗಿನಲ್ಲಿ ಇಷ್ಟು ಹೊತ್ತಾಯಿತು, ಮಾವ. ನೀವೆಲ್ಲ ಹೊರಟ ಮೇಲೆ ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ಕರೆದರು. ಆ ಸಭೆಯಲ್ಲೂ ಅವರು ಮತ್ತೆ ಸಮೀಕ್ಷೆಯ ಕುರಿತೇ ಹೇಳಿದರು. 'ಸ್ವಾತಂತ್ರ್ಯ ಗಳಿಸಿದ ಹುರುಪಿನಲ್ಲಿ ದೇಶದ ಉದ್ದಗಲಕ್ಕೂ ಹೊಸ ಆಶೋತ್ತರಗಳು ಗರಿಗೆದರಿವೆ. ಅದನ್ನು ಈಡೇರಿಸುವುದು ಸರ್ಕಾರದ ಮೊದಲ ಕರ್ತವ್ಯ. ಮತ್ತೆ ದಾಸ್ಯದ ಶೃಂಖಲೆಗೆ ಸಿಲುಕದಂತೆ ಆರ್ಥಿಕ ಸಧೃಢ ಭಾರತವನ್ನು ನಾವೀಗ ಕಟ್ಟಬೇಕಿದೆ. ಅದಕ್ಕಾಗಿ ನಮ್ಮಲ್ಲಿ ಲಭ್ಯವಿರುವ  ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಲು ನಿಮ್ಮಂತಹ ಇಂಜಿನಿಯರುಗಳು ಸಂಕಲ್ಪ ತೊಡಬೇಕು. ಇಂತಹ ದುರ್ಗಮ ಪರಿಸರದಲ್ಲಿ ಅದ್ಭುತ ಸ್ಥಾವರವನ್ನು ಕಟ್ಟಿನಿಲ್ಲಿಸಿದ ನೀವು ಇಷ್ಟಕ್ಕೇ ತೃಪ್ತರಾಗಬಾರದು. ಮೈಸೂರು ರಾಜ್ಯದಲ್ಲಿ ವಿದ್ಯುಚ್ಛಕ್ತಿಯ ಸಮೃದ್ದಿ ಇರುವುದರಿಂದ ಬೆಂಗಳೂರಿನಲ್ಲಿ ಹಲವು ಬೃಹತ್ ಉದ್ಯಮಗಳನ್ನು ಸ್ಥಾಪಿಸಲು ನಮ್ಮ ನೆಚ್ಚಿನ ಪ್ರಧಾನಿ ಜವಹರಲಾಲ್ ನೆಹರು ಉದ್ದೇಶಿಸಿದ್ದಾರೆ. ಬೃಹತ್ ಕಾರ್ಖಾನೆಗಳು ಮತ್ತು ಆಣೆಕಟ್ಟುಗಳೇ ನವಭಾರತದ ದೇವಾಲಯಗಳೆಂಬುದು ಅವರ ಹೇಳಿಕೆ. ಅವುಗಳ ನಿರ್ಮಾಣಕ್ಕಾಗಿ ನಾವು ಪಂಚವಾರ್ಷಿಕ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದ್ದೇವೆ ಎಂದಿದ್ದಾರೆ. ನಮ್ಮ ದೇಶಬಾಂಧವರ ಬದುಕು ಬೆಳಕಾಗಲು, ನೀವೀಗ ಶರಾವತಿಯ ಪೂರ್ಣಶಕ್ತಿಯನ್ನು ಪಳಗಿಸುವ ಪಣತೊಡಬೇಕು. ಅದಕ್ಕಾಗಿ ಅಗತ್ಯ ಸಮೀಕ್ಷೆ ಕೈಗೊಳ್ಳಲು ಈಗಿಂದೀಗ ಸಿದ್ಧರಾಗಬೇಕು' ಎಂದು ಮತ್ತೆ ಉದ್ದದ ಭಾಷಣ ಮಾಡಿದರು. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲೆಂದೇ ಸಾಹೇಬರು ನನ್ನನ್ನು ಹಿರೇಭಾಸ್ಕರಕ್ಕೆ ಕರೆದುಕೊಂಡು ಹೋಗಿದ್ದು. ನನ್ನ ಅನ್ನಿಸಿಕೆಯನ್ನೇ ಹೇಳುವುದಾದರೆ ಹೊಸ ಸಮೀಕ್ಷೆ ಗ್ಯಾರಂಟಿ. ಇವತ್ತಿನ ಸಂದರ್ಭದಲ್ಲಿ ಹೊಸ ಯೋಜನೆ  ಅತ್ಯವಶ್ಯಕ  ಮಾವ' ಎಂದರು.
‘ಅಂದ್ರೆ  ಹಿರೇಭಾಸ್ಕರವನ್ನೇ ವಿಸ್ತರಿಸುತ್ತೀರೋ ಅಥವಾ ಹೊಸ ಆಣೆಕಟ್ಟನ್ನೇ ಕಟ್ತೀರೋ' 
'ಅದನ್ನು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ ಮಾವ. ಆದರೆ ಒಂದು ಮಾತು ಸತ್ಯ. ಶರಾವತಿ ವಿಶಾಲ ಮೈಸೂರು ರಾಜ್ಯದ ಶಕ್ತಿವಾಹಿನಿಯಾಗಿ  ಇಡೀ ನಾಡನ್ನು ಬೆಳಗಲಿದ್ದಾಳೆ.  ದೇಶದ ಆರ್ಥಿಕ ಸ್ವಾವಲಂಬನೆಯನ್ನು ಸಾಕಾರಗೊಳಿಸುವ ಇಂತಹದ್ದೊಂದು ಬೃಹತ್ ಯೋಜನೆಯನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಿಮ್ಮಂತ ಹಿರಿಯರು ತೋಳ್ತೆರೆದು ಸ್ವಾಗತಿಸಬೇಕು. ಮಾವ, ಕೆಲವು ಊರು ಸೀಮೆಗಳು ಮುಳುಗುವುದು ಸತ್ಯ. ಒಂದಿಷ್ಟು ಜನಕ್ಕೆ ಸಣ್ಣಪುಟ್ಟ ತೊಂದರೆ ಆಗುವುದೂ ನಿಜ. ಆದರೆ ದೇಶದಲ್ಲಿ ಹಬ್ಬಿರೋ ಅನಕ್ಷರತೆ, ಅನಾರೋಗ್ಯ, ಹಸಿವು, ಬಡತನಗಳನ್ನು ಬಡಿದೋಡಿಸಿ ಬಲಿಷ್ಠ ಭಾರತ ನಿರ್ಮಾಣವಾಗಬೇಕು ಅನ್ನೋದಾದ್ರೆ ಇಂತಹ ಯೋಜನೆಗಳು ಅನುಷ್ಠಾನಗೊಳ್ಳಲೇಬೇಕು. ಇನ್ನೂ ಎಷ್ಟು ದಿನ ಈ ನಮ್ಮ ಹಳ್ಳಿಗಳು ಕತ್ತಲಲ್ಲೇ ಇರಬೇಕು ಮಾವ? ಇನ್ನೂ ಎಷ್ಟು ದಿನ ತಿಗಳರ, ಕುಣುಬಿಯರ, ಹಸಲರ, ಹೊಲೆಯರ, ಉಪ್ಪಾರರ ಕೇರಿಗಳು ಈ ದಟ್ಟದರಿದ್ರ  ಸ್ಥಿತಿಯಲ್ಲೇ ಮುಂದುವರೆಯಬೇಕು ಹೇಳಿ? ಅವರ ಉದ್ದಾರವೂ ನಮ್ಮ ಆದ್ಯತೆಯಾಗಬೇಕಲ್ವಾ?'  
 'ಅದು ಬೇರೆ ವಿಚಾರ, ಇದು ಬೇರೆ ವಿಚಾರ. ನಮ್ಮ ಗ್ರಾಮಸ್ಥರೂ ದೇಶದ ಅಭಿವೃದ್ಧಿ ಬೇಡ ಅನ್ನುವಷ್ಟು ಮೂರ್ಖರಲ್ಲ ಕೃಷ್ಣರಾವ್. ನಮಗೂ ಬಡವರ, ದೀನ ದಲಿತರ ಸಂಕಷ್ಟಗಳು ಒಂದಿಷ್ಟು ಅರ್ಥವಾಗುತ್ತೆ. ನೀವು ಎಲ್ಲ ಯೋಜನೆಗಳನ್ನು ಒಂದೇ ಪ್ರದೇಶದಲ್ಲಿ ತಂದರೆ ಅದು ಪ್ರಾದೇಶಿಕ ಅಸಮತೋಲನೆಗೆ, ಅಲ್ಲಿಯ ಪರಿಸರದ ನಾಶಕ್ಕೆ ಕಾರಣವಾಗೋದಿಲ್ವಾ? ಜೋಗದ ಜಲಪಾತದ ಕುರಿತು ಲಾರ್ಡ್ ಕರ್ಜನ್ ಸಾಹೇಬ ಏನು ಹೇಳಿದ್ದ ಅನ್ನೋದನ್ನು ನೀವೇ ಹೇಳಿದ್ರಿ. ಆಗ ನೀವು ಹೇಳಿದ್ದು ನಾವು ಕೇವಲ ಪ್ರತಿಶತ ಇಪ್ಪತ್ತರಷ್ಟು ನೀರನ್ನು ಮಾತ್ರ ಬಳಸ್ತಿದ್ದೀವಿ, ಅದರಿಂದ ಜಲಪಾತಕ್ಕೆ ಹಾನಿಯಾಗೋಲ್ಲ ಅಂತ ತಾನೇ? ಈಗ ನೀವು ಸಂಪೂರ್ಣ ನೀರು ಬಳಸಿದ್ರೆ ಆತ ಹೇಳಿದ ಹಾಗೆ ಜಲಪಾತವನ್ನು ಯಾರದೋ ಸ್ವಾರ್ಥಕ್ಕೆ ಬಲಿಕೊಟ್ಟ ಹಾಗೆ ಆಗಲ್ವ? 
ಅದುವರೆಗೂ ಸುಮ್ಮನೆ ಕುಳಿತು ಮಾತು ಕೇಳಿಸಿಕೊಳ್ಳುತ್ತಿದ್ದ ಮುರಾರಿ ಭಟ್ಟ ಹೇಳಿದ,
'ಸಾಹೇಬ್ರೇ, ನಮ್ಮಲ್ಲಿ ಒಂದು ಆಕಳು ಹಾಲು ಕರೆಯುವಾಗ ಕೂಡ ನಾಲ್ಕೂ ಮೊಲೆಗಳನ್ನು ಕರೆಯೋಲ್ಲ. ಒಂದು ಮೊಲೆ ಹಾಲನ್ನು ಕರುವಿಗೆ ಅಂತ ಬಿಡ್ತೀವಿ. ಅದೆಷ್ಟು ಬಡವರಾದ್ರೂ ಸರಿ. ಆದರೆ ನಿಮ್ಮ ಮುಖ್ಯಮಂತ್ರಿಗಳು ಶರಾವತಿಯನ್ನು ಪೂರ್ತಿ ಪಳಗಿಸಬೇಕು ಅಂತಾರೆ. ಅಂದ್ರೆ ನಮ್ಮ ಜೋಗ ಜಲಪಾತ ಪೂರ್ಣ ನಾಶವಾಗಬೇಕಾ? ಮಲೆನಾಡು ಪೂರ್ತಿ ಪ್ರಳಯವಾಗಬೇಕಾ? ಮರಬಿಡಿ, ಕರೂರು, ಹನ್ನಾರ ಸೀಮೆಗಳು ಹೇಳಹೆಸರಿಲ್ಲದಂತಾಗಬೇಕಾ? ನೀವು, ಕಟ್ಟಿದ ಡ್ಯಾಮನ್ನೇ ಮುಳುಗ್ಸಿ ಮತ್ತೆ ಹೊಸ ಡ್ಯಾಮು ಕಟ್ತಾ ಇರ್ತೀರಿ. ನಾವು, ನಿಮ್ಮ ಪುಣ್ಯನಾಮಸ್ಮರಣೆ ಮಾಡ್ತ ಜಲಾಶಯಗಳಲ್ಲಿ ಮುಳುಗಿ ಮುಕ್ತರಾಗ್ಬೇಕು, ಈ ನಿಮ್ಮ ಶೋಷಣೆಗೆ ತ್ಯಾಗ ಅನ್ನೋ ಪವಿತ್ರ ಹೆಸರು ಬೇರೆ!?’ ಆತನ ಧ್ವನಿಯಲ್ಲಿ ಬೆರೆತಿದ್ದ ವ್ಯಂಗ್ಯ  ಕೃಷ್ಣರಾಯರನ್ನು ಕೆರಳಿಸಿತು.


 'ಮುರಾರಿ ಭಟ್ರೇ, ಮಾತಾಡಲು ಬರುತ್ತೆ ಅಂತ ಮಾತಾಡಬೇಡಿ. ನಾವೇನು ದೇಶದ ನಾಶಕ್ಕೆ ಸಂಕಲ್ಪ ತೊಟ್ಟ ವಿದ್ವಂಸಕರಲ್ಲ, ಯಾರನ್ನೋ ಮುಳುಗಿಸಿ ಸಂತೋಷಪಡೋ ವಿಘ್ನಸಂತೋಷಿಗಳೂ ಅಲ್ಲ. ನೀವೂ ಸ್ವಲ್ಪ ಯೋಚನೆ ಮಾಡಿ. ಇಷ್ಟು ದಿನವಂತೂ ಬ್ರಿಟಿಷರ  ದಾಸ್ಯದಲ್ಲಿ ದಟ್ಟದರಿದ್ರರಾಗಿ ಬದುಕಿದ್ವಿ. ಇನ್ನೂ ಹಾಗೇ ಇರ್ಬೇಕಾ? ಈಗ ನಿಮ್ಮ ಪ್ರದೇಶವನ್ನೇ ನೋಡಿ. ಇಲ್ಲಿ ನೆಟ್ಟಗೆ ಒಂದು ರಸ್ತೆ ಇತ್ತಾ? ಸಂಚರಿಸೋದಕ್ಕೆ ವಾಹನಗಳು ಇದ್ವಾ? ಶಿಕ್ಷಣಕ್ಕೆ ಶಾಲೆಗಳು ಇದ್ವಾ? ರೋಗ ರುಜಿನಗಳಿಗೆ ಆಸ್ಪತ್ರೆ ಇತ್ತಾ? ಏನಿತ್ತು ಈ ಕಗ್ಗಾಡಿನ ಕುಗ್ರಾಮಗಳಲ್ಲಿ?’ ಕೃಷ್ಣರಾವ್ ತುಸು ಒರಟಾಗಿ ಹೇಳಿದರು. 



ಇದುವರೆಗೂ ಚರ್ಚೆಯನ್ನು ಕೇಳಿಸಿಕೊಳ್ಳುತ್ತ ಸುಮ್ಮನೆ ಕೂತಿದ್ದ ವಸುಧಾ ಆಸ್ಪತ್ರೆಯ ವಿಚಾರದಿಂದ ವಿಚಲಿತಳಾದಳು. 
 'ಪ್ಲೀಸ್ ಕೃಷ್ಣಾ, ಆಸ್ಪತ್ರೆಯ ವಿಷಯ ಎತ್ತಬೇಡ. ಬೆಂಗಳೂರಲ್ಲಿ ವಾಣಿವಿಲಾಸ,ವಿಕ್ಟೋರಿಯಾದಂತ ದೊಡ್ಡ ಆಸ್ಪತ್ರೆಗಳು ಇದ್ವು. ದೊಡ್ಡ ದೊಡ್ಡ ಖಾಸಗಿ ವೈದ್ಯರೂ ಇದ್ರು. ಅಷ್ಟಿದ್ದೂ ನಿನ್ನ ಹೆಂಡ್ತಿ ಮತ್ತೆ ಬಸಿರಾದ್ರೆ ಸತ್ತೇ ಹೋಗ್ತಾಳೆ ಅಂತ ಭಯ ಬಿತ್ತಿ ವಂಶಾಭಿವೃದ್ಧಿಗೇ ಪೂರ್ಣವಿರಾಮ ಹಾಕಿದ್ರು. ನೀನು ಹೇಳ್ತಿರೂದು ನಿಜ. ದೇಶ ಅಭಿವೃದ್ಧಿಯಾಗಬೇಕು. ಬಡವರ ಉದ್ದಾರವಾಗಬೇಕು. ಹಾಗಂತ ಭಾರಂಗಿಯಂತಹ ಸಮೃದ್ದ ನೆಲ ಉಳೀಬಾರ್ದಾ? ಇಲ್ಲಿಯ ಸಂಸ್ಕೃತಿ, ಪರಂಪರೆ, ಪದ್ದತಿಗಳು ನಾಶವಾಗಬೇಕಾ? ಎಲ್ಲ ಯೋಜನೆಗಳೂ ಇಲ್ಲೇ ಅವತರಿಸಬೇಕಾ?’ 
ಆಕೆಯ ಪ್ರಶ್ನೆ ಕಟುವಾಗಿತ್ತು. ಧ್ವನಿಯೂ ಗಡುಸಾಗಿತ್ತು. ತಮ್ಮ ಚರ್ಚೆಯ ನಡುವೆ ವಸುಧಾ ಮಧ್ಯ ಪ್ರವೇಶಿಸುವಳೆಂದು ಕೃಷ್ಣರಾವ್ ಊಹಿಸಿರಲಿಲ್ಲ. ಅವರು ಒಂದು ಕ್ಷಣ ದಂಗಾದರು. ಆಕೆಯ ಮಾತು ಮುರಾರಿಯನ್ನು ಉತ್ತೇಜಿಸಿತು. ಆತ ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳತೊಡಗಿದ.
 'ನಮ್ಮಲ್ಲಿ ರಸ್ತೆಗಳಿರಲಿಲ್ಲ, ನಿಜ. ಆದ್ರೆ ದಾರಿಗಳಿದ್ವು. ನಮ್ಮಲ್ಲಿ ಶಾಲೆಗಳಿರಲಿಲ್ಲ, ಆದ್ರೆ ಶಿಕ್ಷಣ ಇತ್ತು. ನಮ್ಮಲ್ಲಿ ಆಸ್ಪತ್ರೆ ಇರಲಿಲ್ಲ, ಆದರೆ ವೈದ್ಯೋಪಚಾರ ಇತ್ತು. ನಮ್ಮಲ್ಲಿ ಸೇತುವೆ ಇರಲಿಲ್ಲ, ಆದ್ರೆ ಸಂಪರ್ಕ ಇತ್ತು. ವಿದ್ಯುತ್ ಇರಲಿಲ್ಲ, ಆದ್ರೆ ಬೆಳಕಿತ್ತು. ಸೌಲಭ್ಯಗಳು ಇರಲಿಲ್ಲ, ಆದ್ರೆ ನೆಮ್ಮದಿ ಇತ್ತು. ನಮ್ಮಲ್ಲಿ ದೋಣಿಯಿತ್ತು. ದೋಣಿಗಣಪನಂತಹ ಗುಣವಂತರು ಇದ್ದರು. ಈಗ ನಿಮ್ಮಿಂದಾಗಿ ದೋಣಿಯೂ ಇಲ್ಲ, ಗಣಪನೂ ಇಲ್ಲ' ಎಂದವನೇ ಗಟ್ಟಿಯಾಗಿ ಅಳುತ್ತ,  
'ಯಾಕೆ ಹೇಳಿ? ನೀವು ಅವನನ್ನು ಕೊಂದ್ರಿ. ನಿಮ್ಮ ಪ್ರಾಜೆಕ್ಟ್ ಅವನನ್ನು ಕೊಂದು ಹಾಕ್ತು. ನಾಳೆ, ನೀವು ಉಪ್ಸದ ಗಣೇಶಯ್ಯನನ್ನು ಕೊಲ್ತೀರಿ. ವಟ್ಟಕ್ಕಿ ನ್ಯಾಮಯ್ಯನನ್ನು ಕೊಲ್ತೀರಿ, ಐತೂಮನೆ ಪುಟ್ಟಯ್ಯನನ್ನು ಕೊಲ್ತೀರಿ. ಕೊನೆಗೆ ನಮ್ಮ ಭಾರಂಗಿ ದತ್ತ…..ಬೇಡ. ಹೌದು, ನೀವು ವಿದ್ವಂಸಕರೇ. ನಮ್ಮ ಸಂಸ್ಕೃತಿಯನ್ನು ನಾಶಮಾಡಲೆಂದೇ ಬಂದವರು. ಅನುಮಾನವೇ ಇಲ್ಲ. ನಮ್ಮ ಕಾನಲ್ಲಿರೋ ಇಂಬಳಗಳಾದರೂ ತಮ್ಮ ಹೊಟ್ಟೆ ತುಂಬಿದಮೇಲೆ ನೆತ್ತರು ಹೀರೋದನ್ನು ಬಿಟ್ಟು ಉದುರಿ ಬೀಳ್ತಾವೇ. ಆದ್ರೆ ನೀವು? ಮತ್ತೆ ಮತ್ತೆ ನೆತ್ತರು ಹೀರಲು ಹೊಸ ಸಮೀಕ್ಷೆ ಹುಟ್ಟು ಹಾಕ್ತೀರಿ. ನಮ್ಮ ರಕ್ತ ಪೂರ್ತಿ ಇಂಗಿ, ನಾವು ಸಾಯೋ ತನಕ ಹೀರ್ತಾನೇ ಇರ್ತೀರಿ, ನಿಮ್ಮ ಹೊಟ್ಟೆ ಯಾವತ್ತೂ ತುಂಬೋದಿಲ್ಲ. ಅದಕ್ಕೆ ತೀರದ ರಕ್ತದಾಹ’ ಆವೇಶದಲ್ಲಿ ಕುಸಿದು ಕುಳಿತು ನೆಲವನ್ನು ಗುದ್ದಿ  ಅಳುತ್ತ ಹೆಗಡೆಯವರತ್ತ ತಿರುಗಿ,
'ಹೆಗಡೇರೇ ನೀವು ತಪ್ಪು ಮಾಡಿಬಿಟ್ರಿ. ಇವರನ್ನೆಲ್ಲ ಆದರಿಸಿ ಒಳಗೆ ಬಿಟ್ಟುಕೊಂಡ್ರಿ. ಅಳೆಯೋಕೆ ಬಂದ ಈ ಜನ ಆಳೋದಕ್ಕೆ ಶುರುಮಾಡ್ದ. ನಮ್ಮನ್ನು ಅಳಿಸೋದಕ್ಕೆ ಶುರುಮಾಡ್ದ. ನಿಮಗೇ  ದೇಶೋದ್ಧಾರದ ಉಪದೇಶ ಕೊಡೋ ಮಟ್ಟಕ್ಕೆ ಬೆಳೆದ. ಇವರದ್ದು ಕಬಂಧ ಬಾಹು. ಯೋಜನ ಬಾಹು. ಸಿಕ್ಕಿದ್ದನ್ನು ಸ್ವಾಹಾ ಮಾಡುವ ಸ್ವಾರ್ಥ ಇವರಿಗೆ. ಜೋಗ ಪಟ್ಟಣವಾದಾಗ ಜಗತ್ಪ್ರಳಯ ಅಂತ ಆನು ಅಂದಿನಿಂದ ಹೇಳ್ತಾ ಬಂದಿ. ನೀವು ನಂಬಿದ್ರಿಲ್ಲೆ. ಈಗ ನೋಡಿ, ನಮ್ಮ ಜೋಗಕ್ಕೆ ನಾವು ಹೋಗೋದಕ್ಕೆ ಇವರಪ್ಪನ ಅಪ್ಪಣೆ ತಗಳಕ್ಕು. ಹುಟ್ಟಿದ ಊರನ್ನು ಬಿಟ್ಟುಹೋಗೋ ಸಂಕಟ ಇವರಿಗೆಂತ ಗೊತ್ತಿದ್ದು? ಮುಳುಗಡೆ ಆದೋರು  ಕಣ್ಣೀರು ಸುರಿಸ್ತ ಊರು ತೊರೆಯೋದನ್ನ ನೆನೆಸಿಕ್ಯಂಡ್ರೆ ಹೊಟ್ಟೆಯಲ್ಲಿ ಬೆಂಕಿ ಬೀಳ್ತು. ಕಣ್ಣಲ್ಲಿ ರಕ್ತ ಸುರೀತು. ಇನ್ನು ಈಗ ಮತ್ತೊಂದು ಡ್ಯಾಮು, ಮತ್ತಷ್ಟು ಮುಳುಗಡೆ. ಇದು ಹುಲಿ ಸವಾರಿ ಹೆಗಡೇರೇ, ಹಸಿದ ಹುಲಿ ಸವಾರಿ! ಸವಾರಿ ಹೊರಟ ಮ್ಯಾಲೆ ಇಳಿಯೋ ಹಾಂಗಿಲ್ಲೆ. ಇದು ಸತ್ಯ, ಪರಮ ಸತ್ಯ’ ಎಂದು ಮತ್ತಷ್ಟು ಜೋರಾಗಿ ಅಳತೊಡಗಿದ. 
ಕೃಷ್ಣರಾವ್ ದಿಗ್ಭ್ರಾಂತರಾಗಿ ಅವನನ್ನೇ ನೋಡುತ್ತ ಕೂತಿದ್ದರು. ಅವನ ಅವತಾರ ಕಂಡು ಅವರಿಗೆ ಆಘಾತವಾಗಿ, ಏನು ಮಾಡಬೇಕೆಂದು ತಿಳಿಯದೇ ಅಪ್ರತಿಭರಾಗಿ ಕುಳಿತುಬಿಟ್ಟರು. ಯಾವತ್ತೂ ಅವನನ್ನು ತಡೆಯುತ್ತಿದ್ದ ತುಂಗಕ್ಕಯ್ಯ ಕೂಡ ಇವತ್ತು ಸುಮ್ಮನಾಗಿದ್ದಳು. ಅವಳಿಗೂ  ಉರಿ ತಟ್ಟಿತ್ತು. ಕೊನೆಗೆ ಗಣೇಶ ರತ್ನಕ್ಕನಿಗೆ ಹೇಳಿ ಒಂದು ಚೊಂಬು ನೀರು ತರಿಸಿ ಆತನಿಗೆ ಕುಡಿಯಲು ಕೊಟ್ಟು ಮೆತ್ತಿಗೆ ಕರೆದುಕೊಂಡು ಹೋಗಲು ಭೀಮಯ್ಯನಿಗೆ ಹೇಳಿದ.  ಅವನು ಹೊರಟಮೇಲೆ ದತ್ತಪ್ಪ  ಹೇಳಿದರು,
ಕೃಷ್ಣರಾಯರೇ, ಇವತ್ತು ನಿಮಗೆ ಸಂತೋಷದ ದಿನವಾಗಬೇಕಿತ್ತು. ನಿಮಗೆ ಸನ್ಮಾನವಾಗಿತ್ತು. ನಿಮ್ಮದೇ ವಿದ್ಯುತ್ ಸ್ಥಾವರದ ಲೋಕಾರ್ಪಣೆಯೂ ಆಗಿತ್ತು. ಆದರೆ ಸರ್ಕಾರ ಇಂದೇ ನಮ್ಮ ಸರ್ವನಾಶದ ಯೋಜನೆ ಘೋಷಣೆ  ಮಾಡಿಬಿಡ್ತು. ಉತ್ತರೆಯ ವಿವಾಹೋತ್ಸವದ ಸಂಭ್ರಮದ ಘಳಿಗೆಯಲ್ಲೇ ಮಹಾಯುದ್ದದ ಮುಹೂರ್ತವೂ ನಿಶ್ಚಯವಾದಂತಾಯಿತು. ಇರಲಿ ಮುಂದೇನಾಗುತ್ತೋ, ಅದು ನಿಮ್ಮ ಕೈಯ್ಯಲ್ಲೂ ಇಲ್ಲ, ನಮ್ಮ ಕೈಯ್ಯಲ್ಲೂ ಇಲ್ಲ. ನಾಳೆ ಮಾತನಾಡೋಣ, ಮಲಗಿ. ವಸುಧಾ, ಮಲಗಮ್ಮ' ಎಂದು ಹೇಳಿ ತಾವು ಮಲಗಲು ಹೊರಟರು. 


ಎಲ್ಲರೂ ಮಲಗಿ ದೀಪವನ್ನು ಆರಿಸುತ್ತಿದ್ದಂತೆ ವಸುಧಾ ಕೃಷ್ಣರಾವ್ ಬಳಿ ತಗ್ಗಿದ ಸ್ವರದಲ್ಲಿ ಕೇಳಿದಳು,
'ಕೃಷ್ಣಾ, ಹಾಗೇಕೆ ಮಾತಾಡಿದೆ? ಪಾಪ, ಅವರಿಗೆ ತಮ್ಮ ನೆಲ, ನೆಲೆ, ಪರಂಪರೆ, ಪರಿಸರ ನಾಶವಾಗುತ್ತೆ ಅಂತ  ತುಂಬಾ ಸಂಕಟವಾಗಿತ್ತು. ಅದು ಸಹಜ. ನೀವೂ ಪ್ರಾಜೆಕ್ಟ್ ಮಾಡೋದು ನಿಮ್ಮ ಸ್ವಂತಕ್ಕಲ್ಲ, ದೇಶದ ಅಭಿವೃದ್ಧಿಗಾಗಿ ಅನ್ನೋದೂ ಸುಳ್ಳಲ್ಲ. ಆದ್ರೆ ನಿಮ್ಮ ಪ್ರಾಜೆಕ್ಟುಗಳಿಂದ  ದುಷ್ಪರಿಣಾಮಗಳೇ ಇಲ್ಲ ಅಂತ ಹಠ ತೊಡೋದು ಎಷ್ಟು ಸರಿ? ತೊಂದರೆಗೀಡಾದೋರು ಅದನ್ನು ವಿರೋಧಿಸುವುದು ಸಹಜ. ಅದು ಅವರ ಹಕ್ಕು. ತಮ್ಮ ಬದುಕೇ ನಾಶವಾಗುತ್ತೆ ಅನ್ನೋ ಸಂದರ್ಭದಲ್ಲೂ ದೇಶಾಭಿವೃದ್ಧಿಯ ದೃಷ್ಟಿಯಿಂದ ಅದನ್ನು ಸಹಿಸಿಕೊಳ್ಳಬೇಕು ಅನ್ನೋದು ನನ್ನ ದೃಷ್ಟಿಯಲ್ಲಿ ಕ್ರೌರ್ಯ. ಅದನ್ನೇ ತಾನೆ ನಾವು ಶೋಷಣೆ ಅನ್ನೋದು. ದೇಶದಲ್ಲಿ ನಿಮ್ಮಂತ ನಿಃಸ್ವಾರ್ಥಿಗಳೂ ಇರಬಹುದು, ಕೃಷ್ಣಾ.  ತಮ್ಮದೆಲ್ಲವನ್ನೂ ತ್ಯಾಗ ಮಾಡಿ ದೇಶ ಕಟ್ಟುವ ನಿರ್ಲಿಪ್ತರೂ ಇರಬಹುದು. ಆದರೆ ಎಲ್ಲರೂ ಕಡ್ಡಾಯವಾಗಿ ತ್ಯಾಗ ಮಾಡಲೇಬೇಕು ಅಂದ್ರೆ, ಅದು ಅನ್ಯಾಯ ಅಲ್ವಾ? ಈ ಯೋಜನೆಗೆ ನೀನೊಬ್ಬನೇ ಹೊಣೆಗಾರ ಅನ್ನೋ ದಾಟಿಯಲ್ಲಿ  ಯಾಕೆ ವಾದಮಾಡಬೇಕು? ದೇಶದ ಪ್ರಗತಿ ಅನ್ನೋದು ನಿನ್ನೊಬ್ಬನ ಸ್ವತ್ತ?' 
ಕೃಷ್ಣರಾವ್ ಸ್ವಲ್ಪ ಹಿಂದಕ್ಕೆ ಜಾರಿ ದಿಂಬಿಗೆ ಒರಗಿ ಕುಳಿತು ಹೇಳಿದರು,
'ಮತ್ತೆ ಆ ಮೂರ್ಖ, ಅರೆಮರಳು ಭಟ್ಟ, ನಾವು ಜಗತ್ತಿನ ನಾಶಕ್ಕಾಗಿ ಜನ್ಮ ತಾಳಿದ ರಾಕ್ಷಸರು ಅನ್ನೋ ಹಾಗೆ ಮಾತಾಡಿದರೆ? ನಾವು ರಕ್ತ ಹೀರೋ ಇಂಬಳಗಳಂತೆ! ದೇಶದ ಕಷ್ಟ ಆತನಿಗೇನು ಗೊತ್ತು. ಸುಮ್ಮನೇ ಪೂಜೆ ಮಾಡಿಕೊಂಡು ಊರೂರು ತಿರುಗಿ ಬಾಯಿಗೆ ಬಂದಿದ್ದನ್ನು ಬೊಗಳಿದರೆ ಅದು ಸಮಾಜ ಸೇವೆಯಲ್ಲ’. ಪಿಸುಮಾತಿನಲ್ಲಿ ಹೇಳಿದರೂ ಸ್ವರ ಗಡುಸಾಗಿತ್ತು. ಅವರ ಒರಟು ಮಾತಿಗೆ  ವಸುಧಾ ಕೆರಳಿದಳು.
'ಕೃಷ್ಣಾ ಪ್ಲೀಸ್, ಏನಾಗಿದೆ, ನಿನಗೆ? ಸನ್ಮಾನ ಸಿಕ್ಕಿದ ಪ್ರತಿಷ್ಟೆಗೋ ಅಥವಾ ಸರ್ ಎಂ ವಿಯಂತವರ ಕನಸು ನನಸು ಮಾಡಿದೆ ಅನ್ನೋ ಗರ್ವಕ್ಕೋ ನಿನ್ನ ಅಹಂಕಾರ ನೆತ್ತಿಗೆ ಹತ್ತಿದೆ. ನಿನ್ನ ಗರ್ವ ಸೌಜನ್ಯದ ಗಡಿ ದಾಟ್ತಿದೆ. ನೀನು ಮುರಾರಿ ಭಟ್ಟರನ್ನು ಮೂರ್ಖ, ಅರೆಹುಚ್ಚ ಅಂದ್ಯ? ಅವರ ಬಗ್ಗೆ ನಿನಗೇನು ಗೊತ್ತು? ಕೃಷ್ಣ, ನಿನ್ನ ಸಹನೆ, ವಿವೇಚನೆ, ಸಂಯಮಗಳೆಲ್ಲ ಎಲ್ಲಿ ಕಳೆದು ಹೋದ್ವು? ನಾನು ಎಷ್ಟು ದಿನ ದೇವ್ರೇ ಕೃಷ್ಣನ ಸಹನೆಯನ್ನು ನನಗ್ಯಾಕೆ ಕೊಟ್ಟಿಲ್ಲ ಅಂತ ಕೇಳ್ತಿದ್ದೆ. ಆದ್ರೆ ಇವತ್ತು ನಿನ್ನ ವರ್ತನೆ ನನಗೆ ಜಿಗುಪ್ಸೆ ತರ್ತಿದೆ. ನಿನ್ನ ಅಸಹನೆ ಅಸಹ್ಯ ಅನ್ನಿಸ್ತಿದೆ. ಬೆಳಿಗ್ಗೆ ಸಭೆ ಮುಗಿದ ತಕ್ಷಣ ದತ್ತಪ್ಪ ಮಾವನೊಡನೆ ನಿನ್ನ ವರ್ತನೆ ಎಷ್ಟು ಬಾಲಿಶವಾಗಿತ್ತು, ಗೊತ್ತಾ? ಕೃಷ್ಣಾ, ನೀನು ಮುರಾರಿ ಭಟ್ಟರನ್ನು ಏನಂದ್ಕೊಂಡಿದ್ದೀಯ? ಅವರಿಗೆ ಕಷ್ಟ, ಹಸಿವು, ಯಾತನೆ ಗೊತ್ತಿಲ್ಲ ಅನ್ಕೊಂಡಿದ್ದೀಯ? ನೀನು ಇಂಜಿನಿಯರಿಂಗ್ ಓದುವ ಕಾಲದಲ್ಲೇ ಮುರಾರಿ ಭಟ್ಟರು  ಡ್ಯಾಮನ್ನು ಕಂಡವರು! ಯಾಕೆ ಕೃಷ್ಣಾ, ಈ ಕಲ್ಲು, ಕಟ್ಟೆ, ಕ್ವಾರಿ,ಲಾರಿಗಳ ಜೊತೆಗಿದ್ದೂ ಇದ್ದು ನಿನ್ನ ಹೃದಯವೂ  ಕಲ್ಲಾಗ್ತಿದೆಯೋ ಹೇಗೆ?' 
ಕೃಷ್ಣರಾವ್ ಮುಂದೆ ಮಾತಾಡಲಿಲ್ಲ. ಅವರು ಧನ್ಯತೆಯ ಭಾವದಲ್ಲಿ ಬೀಗುತ್ತಿದ್ದದ್ದು ನಿಜ. ಉನ್ಮಾದದ ಅಲೆಯಲ್ಲಿ ತೇಲುತ್ತಿದ್ದುದೂ ಸತ್ಯ. ಶರಾವತಿ ಯೋಜನೆಯ ಮುಂದಿನ ಹಂತ ಆರಂಭವಾಗುತ್ತಿದೆಯೆಂಬುದು ಅವರಿಗೊಂದು ಹೆಗ್ಗಳಿಕೆಯ ವಿಚಾರವಾಗಿತ್ತು. ಅದರಿಂದ ಇಡೀ ಮೈಸೂರು ರಾಜ್ಯ ಅಭಿವೃದ್ಧಿಯ ನವಮನ್ವಂತರಕ್ಕೆ ತೆರೆದುಕೊಳ್ಳುವುದೆಂಬ ಗರ್ವ ಅವರದಾಗಿತ್ತು.
 

ವಿಶ್ರಾಂತರಾಗುವ ಮುನ್ನ ಫೋರ್ಬ್ಸ್ ಹೇಳಿದ್ದ ಮಾತು ಅವರಿಗೆ ಮತ್ತೆ ಮತ್ತೆ ನೆನಪಾಗುತ್ತಿತ್ತು. ‘ಮಿಸ್ಟರ್ ರಾವ್ ಹಿಯರ್ ಆಫ್ಟರ್ ಜೋಗ್ ವಿಲ್ ಬಿ ಇವರ್ ಚೈಲ್ಡ್. ಯು ಹ್ಯಾವ್ ಟು ಟೇಕ್ ಇಟ್ ಫಾರ್ವಾರ್ಡ್ ವಿತ್ ಕೇರ್ ಅಂಡ್ ಲವ್’. ಹೌದು, ತಾನಿದನ್ನು ಮುಂದುವರೆಸಬೇಕು. ಇದು ತನ್ನ ಶಿಶು. ಇದು ತನಗೆ ಸರ್ ಎಂ ವಿ, ಕಡಾಂಬಿ, ಫೋರ್ಬ್ಸ್ ಮುಂತಾದ ಹಿರಿಯರು ನೀಡಿದ ದತ್ತು. ಇದಕ್ಕೆ ತಾನೇ ವಾರಸುದಾರ! 


‘ಶರಾವತಿಯ ಎರಡನೆಯ ಹಂತ ಅನುಷ್ಠಾನಕ್ಕಿಳಿದರೆ ಸರ್ ಎಂ ವಿಯಂತಹ ಹಿರಿಯರ ದೂರದೃಷ್ಟಿ ಕೃತಿಗಿಳಿದು ಅವರ ಕನಸು ಕೈಗೂಡಿದಂತಾಗುವುದು. ಅಂತಹ ಅನುಪಮ ಸಾಧನೆಗೆ ಎಲ್ಲರೂ ಎಲ್ಲ ಬಗೆಯ ತ್ಯಾಗಕ್ಕೂ ಸಿದ್ಧರಾಗಲೇಬೇಕು. ಅದರಲ್ಲಿ ತಪ್ಪೇನು? ಒಬ್ಬ ಮುರಾರಿ ಭಟ್ಟ ಕೂಗಾಡಿದರೇನು? ಒಬ್ಬರು ದತ್ತಪ್ಪ ಹೆಗಡೆ ಕೊರಗಿದರೇನು? ಒಂದೆರಡು ಸೀಮೆ ಮುಳುಗಿದರೇನು? ಎಂಬುದು ಕೃಷ್ಣರಾವ್ ಯೋಚನೆಯಾಗಿತ್ತು.
        

ವಸುಧಾಳಿಗೆ ನಿಜಕ್ಕೂ ನೋವಾಗಿತ್ತು. ಅವಳು ಕೃಷ್ಣರಾಯರ ಮನಸ್ಥಿತಿಯ ಕುರಿತು ಯೋಚಿಸಿದಷ್ಟೂ ಆಕೆಯ ಸಂಕಟ ಹೆಚ್ಚುತ್ತಲೇ ಹೋಗತೊಡಗಿತ್ತು. ಸರ್ ಎಂ ವಿ, ಕಡಾಂಬಿ, ಮಿರ್ಜಾರಂತಹ ಮಹನೀಯರ ಆದರ್ಶಪಾಲನೆಗಾಗಿ ತನ್ನ ವೈಯುಕ್ತಿಕ ಬದುಕಿನ ಕಷ್ಟನಷ್ಟಗಳನ್ನು ಲೆಕ್ಕಿಸದೇ ಶ್ರದ್ಧೆ, ಮತ್ತು ಪ್ರಾಮಾಣಿಕತೆಯಿಂದ ಮೂರು ದಶಕಗಳ ಕಾಲ ಜೋಗದಂತಹ ಕಠಿಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಕೃಷ್ಣ ಈ ಸಂದರ್ಭದಲ್ಲಿ ಒಂದಿಷ್ಟು ಗರ್ವ ಪಡುವುದು ಸಹಜವೇನೋ? ಅಪೂರ್ವ ಸಾಧನೆಯ ಸಾರ್ಥಕ ಘಳಿಗೆಯಲ್ಲಿ ತುಸು ಹೆಮ್ಮೆಯಿಂದ ಬೀಗುವುದು ದೊಡ್ಡ ತಪ್ಪಲ್ಲ. ಆದರೂ ಈ ಮಟ್ಟದ ಉದ್ದಟತನದ ಅಗತ್ಯವಿತ್ತೇ? ತಮ್ಮ ಬದುಕಿಗೆ ಮರುಜೀವ ಕೊಟ್ಟ ಭಾರಂಗಿ ಅವನಿಗೆ ಏನೂ ಅಲ್ಲವೇ? ಮುರಾರಿ ಭಟ್ಟರು ಹೇಳಿದಂತೆ ಈ ಯೋಜನೆಗಳು ಇಲ್ಲಿನ ಪರಂಪರೆ, ಪರಿಸರಗಳನ್ನು ನುಂಗಿ ನೀರು ಕುಡಿಯುವುದೇ ಹೌದಾದರೆ ಅದು ಪ್ರಗತಿಯೇ? ದೋಣಿಗಣಪ ಸಾಯಲು ಈ ಯೋಜನೆಯೇ ಕಾರಣ ಎಂಬುದು ಒಂದರ್ಥದಲ್ಲಿ ನಿಜವಲ್ಲವೇ? ಅವರು ಹೇಳಿದಂತೆ ಗಣಪ, ನ್ಯಾಮಯ್ಯ, ಪುಟ್ಟಯ್ಯ ಗಣೇಶಯ್ಯ, ದತ್ತಪ್ಪ ಹೆಗಡೆ...ಹೀಗೆ ಈ ನೆಲದ ಗಟ್ಟಿಬೀಜಗಳೆಲ್ಲ ನಾಶಗೊಂಡರೆ ಈ ಮಣ್ಣು ಬಂಜೆಯಾಗುವುದಿಲ್ಲವೇ? ತನಗೆ ಪುನರ್ಜನ್ಮ ಕೊಟ್ಟ ಈ ಪುಣ್ಯಭೂಮಿ ಬಂಜರಾಗಬೇಕೇ? ಇಲ್ಲಿಯ ಸಂಸ್ಕೃತಿ ನಾಶವಾಗಬೇಕೇ? 
ಆಕೆಗೆ ತನ್ನ ಬಂಜೆತನದ ದಿನಗಳು ನೆನಪಾದವು. ತುಂಗಕ್ಕಯ್ಯನ ಅಕ್ಕರೆ, ದತ್ತಪ್ಪ ಹೆಗಡೆಯವರ ವಾತ್ಸಲ್ಯ, ಶರಾವತಿಯ ಅಕಳಂಕ ಪ್ರೇಮ, ರತ್ನಕ್ಕನ ಸಹಜ ಪ್ರೀತಿ ಒಂದೊಂದೂ ನೆನಪಾದವು. ಪಕ್ಕಕ್ಕೆ ತಿರುಗಿ ಮಗಳ ಮುಖ ಸವರಿದಳು. ವಸುಧೆ ರಸ,ಗಂಧ, ಫಲಪುಷ್ಪಗಳಿಲ್ಲದ ಬಂಜರು ಬದುಕಿನಿಂದ ಮರಳಿ ಸಮೃದ್ದಿಗೆ ಮರಳಬೇಕೆಂದರೆ ಇಂತಹ ಪರಂಪರೆ ಉಳಿಯಬೇಕಲ್ಲವೇ? 
ಛೇ! ಈ ಕಗ್ಗಾಡಿನ ಕುಗ್ರಾಮಗಳಲ್ಲಿ ಏನಿತ್ತು ಅಂದುಬಿಟ್ಟನಲ್ಲ, ಕೃಷ್ಣ? ಏನಿರಲಿಲ್ಲ ಇಲ್ಲಿ? ಈ ನೆಲದ ನೆಮ್ಮದಿ ನಾಶವಾಗಲು ತಮ್ಮ ಪ್ರಾಜೆಕ್ಟ್ ಕಾರಣವೆಂಬ ಕಿಂಚಿತ್  ಪಶ್ಚಾತ್ತಾಪ ಇವನಿಗಿಲ್ಲವಲ್ಲ ಎಂದಾಕೆ ತುಂಬ ನೊಂದುಕೊಂಡಳು. ಆತನ ಮಾನಸಿಕ ಸ್ವಾಸ್ಥ್ಯ ಕದಡಿಹೋಗಿದೆ. ಆತ ಉನ್ಮತ್ತನಾಗಿದ್ದಾನೆ. ಇವತ್ತು ಆತನೊಡನೆ ಮಾತನಾಡಬಾರದು. ಇದು ವಾದ ಮಾಡುವ  ಸಂದರ್ಭವಲ್ಲ ಎಂದು ಯೋಚಿಸಿ, ಪುನರ್ವಸುವಿನ  ಹಣೆಗೊಂದು ಮುತ್ತುಕೊಟ್ಟು, ಹೊದಿಕೆ ಎಳೆದುಕೊಂಡು ಮಲಗಿಬಿಟ್ಟಳು.

07 February 2022

ಅವನ ಜೊತೆ ಅವಳ ಕಥೆ......೬

ಅವಳ ಜೊತೆ ಅವನ ಕಥೆ.......೬


"ಮುನಿಸಿನ ಮೂಲ ಮನಸೆˌ
ಅದು ಬಯಸಿದರೆಲ್ಲ ಸೊಗಸೆ."

ಇತ್ತೀಚೆಗೆ ಸೂಕ್ತ ಮರಮತ್ತು ಕಾಣದೆ ಉಪ್ಪರಿಗೆಯ ಸೂರಿಗೆ ಹೊದಿಸಿದ್ದ ಟಾರು ಕಾಗದವೆಲ್ಲಾ ಬಿರುಗಾಳಿಗೆ ಛಿದ್ರ ಛಿದ್ರವಾಗಿ ಅಗಲವಾಗಿ ತೆರೆದುಕೊಂಡಿದ್ದ ಮೇಲ್ಛಾವಣಿಯ ಹಲಗೆಗಳ ಎಡೆಗಳಿಂದ ಮನೆಯ ಒಳ ಸುರಿದಿದ್ದ ಹಿಮ ಒಂದಷ್ಟು ಗುಪ್ಪೆ ಗುಪ್ಪೆಗಳಾಗಿ ನೆಲದಲ್ಲೆಲ್ಲಾ ಹರಡಿಕೊಂಡಿತ್ತು. ಗುಡಿಸಿ ಅವನ್ನೆಲ್ಲಾ ತೆಗೆಯದಿದ್ದರೆ ವಾತಾವರಣದಲ್ಲಿ ಉಷ್ಣತೆ ಏರಿದಾಗ ಮನೆಯೊಳಗೆಲ್ಲಾ ಅದು ನೀರಾಗಿ ಹರಿದು ಮೇಲುಪ್ಪರಿಗೆಯ ಹಲಗೆಯ ನೆಲವೆಲ್ಲಾ ನೀರು ಹೀರಿ ಕುಂಬಾಗುತ್ತಿದ್ದುದು ಮಾತ್ರವಲ್ಲದೆˌ ಮುಂದೆ ಕರಗಿ ಕೆಳಗಿನ ನೆಲಕ್ಕೆ ಹರಿಯಲಿದ್ದ ಜಲಧಾರೆ ನೆಲ ಅಂತಸ್ತಿನಲ್ಲೆಲ್ಲಾ ರಾಡಿಯೆಬ್ಬಿಸುವ ಸಾಧ್ಯತೆ ಇತ್ತು.

ಸುಲ್ತಾನನನ್ನ ಮೊದಲು ಹಟ್ಟಿಯ ಪಕ್ಕದ ಲಾಯದತ್ತ ಮುನ್ನಡೆಸಿದನವನು. ಇದ್ದುದರಲ್ಲಿ ಹಟ್ಟಿಯ ಪರಿಸ್ಥಿತಿ ಪರವಾಗಿರಲಿಲ್ಲ. ಚಕಮಕಿ ಕಲ್ಲುಗಳಿಂದ ಕಿಡಿ ಹೊಮ್ಮಿಸಿ ಅಲ್ಲಿನ ಒಳಾವರಣ ಬೆಚ್ಚಗಾಗಿಸಲು ಅಗ್ಗಿಷ್ಟಿಕೆಗೆ ಪುರುಳೆ ಕಲ್ಲಿದ್ದಲು ತುಂಬಿ ಬೆಂಕಿಯಬ್ಬಿಸಿದ.

ಮನೆಯ ಉಪ್ಪರಿಗೆ ಗುಡಿಸಿ ಹರಡಿಕೊಂಡಿದ್ದ ಹಿಮ ಗೋರಿ ಹೊರಗೆಸದು ಬಿರುಕು ಬಿಟ್ಟಿದ್ದ ಮಾಡಿನ ಜಂತಿಗೆ ಮತ್ತೆ ಟಾರು ಕಾಗದ ಮೊಳೆ ಹೊಡೆದು ಮತ್ತೆ ಹಿಮಪಾತ ಮನೆಯೊಳಗಾಗದಂತೆ ತಡೆದ. ಹಟ್ಟಿಗೆ ಮರಳಿದವನಿಗೆ ಈಗ ತಕ್ಕಮಟ್ಚಿಗೆ ಲಾಯ ಬೆಚ್ಚಗಾಗಿದೆ ಅನಿಸಿತು. ಸುಲ್ತಾನನ ಬಾಯಿ ಚೀಲ ಬಿಡಿಸಿ ನೋಡಿದರೆ ಹಾಕಿದ್ದ ಆಹಾರದಲ್ಲಿ ಬಹುಪಾಲನ್ನ ಕುದುರೆ ತಿಂದು ಮಗಿಸಿತ್ತು. ಮತ್ತೆ ಮೂಗು ಸೋರುವ ಲಕ್ಷಣ ಗೋಚರಿಸಿತು. ಅದಕ್ಕೆ ಕೂಡಲೆ ಔಷಧಿ ಗೊಟ್ಟಕ್ಕೇರಿಸಿ ಕುಡಿಸದೆ ವಿಧಿಯಿರಲಿಲ್ಲ. ಸುಲ್ತಾನನ ಮೈ ತಿಕ್ಕಿ ಕುತ್ತಿಗೆ ಕೆರೆದು ಅವನ ಮೈ ನೋವಿಗೆ ಚೂರು ಬಿಡುಗಡೆ ತಂದವನೆˌ ಅವನ ಮೈಮೇಲೆ ದಪ್ಪನೆಯದೊಂದು ಛಾದರ ಹೊದಿಸಿ ಗೊಂತಿಗಿಷ್ಟು ರೈ ಹುಲ್ಲು ಹಾಕಿˌ ಕುಡಿಯಲಷ್ಟು ಬಿಸಿ ನೀರನ್ನೂ ಸುರಿದುˌ ಲಾಯದ ಬಾಗಿಲೆಳೆದುಕೊಂಡು ಔಷಧಿ ಕೊಂಡು ತರಲು ನೇರ ಗಾಡಿಖಾನೆಯತ್ತ ಲಗುಬಗೆಯಿಂದ ಹೆಜ್ಜೆ ಹಾಕಿದ.

ಮನೆಯಿಂದ ಗಾಡಿಖಾನೆಯ ದಿಕ್ಕಿನತ್ತ ಹೋಗುವಾಗ ನೂರು ಗಜ ಮುಂದೆ ಬಲಕ್ಕೆ ತಿರುಗಿ ಮುನ್ನೂರು ಗಜ ನಡೆದು ಮತ್ತೆ ಎಡಕ್ಕೆ ತಿರುಗಿ ಒಂದೈವತ್ತು ಗಜ ನಡೆದರೆ ಸಾಕು ಅದೋ ಬಲಕ್ಕಿದೆಯಲ್ಲ ಅದೆ ಆಟಿಕೆ ಮಾರುವ ಬಾಬಯ್ಯನ ಮನೆ. ಗೋಪಿ ಈಗವನ ಮನೆಯಳಿಯˌ ಗಾಡಿಖಾನೆಗೆ ಆ ಹಾದಿ ಚೂರು ಬಳಸಾದರೂˌ ಗೆಳೆಯನನ್ನ ಹೋಗಿ ಕೂಗಿ ಜೊತೆಗೆಳೆದುಕೊಂಡು ಹೋಗಲು ಅವನು ನಿರ್ಧರಿಸಿದ. ಸುಲ್ತಾನನಂತಹ ಬೆಳೆದು ನಿಂತಿರುವ ಬಲಿಷ್ಠ ಕುದುರೆಗೆ ಗೊಟ್ಟ ಎತ್ತಿ ಔಷಧಿ ಕುಡಿಸಲು ಒಬ್ಬರಿಂದ ಅಸಾಧ್ಯವಾಗುತ್ತಿತ್ತು. ಸಹಾಯಕ್ಕೆ ಜೊತೆಗೊಬ್ಬರಿದ್ದರೆ ಅನುಕೂಲವಾಗುತ್ತಿತ್ತು. ಪೇಟೆಯಲ್ಲಿ ಗೋಪಿಗಿಂತ ಅನುಕೂಲಕರ ಜೊತೆಗಾರ ಅವನಿಗೆ ಮತ್ತಿನ್ಯಾರಿದ್ದಾರು ಹೇಳಿ?

ಮನೆಯ ಆವರಣದಲ್ಲಿ ಹೊಸಲಿನಿಂದೊಳಗೆ ಆ ಚಳಿಯಲ್ಲೆ ಕುಕ್ಕುರುಗಾಲಲ್ಲಿ ಕೂತು ಬಾಬಯ್ಯ ಹೊಸತಾಗಿ ಹಿಕರಿ ಬೇರಿನಿಂದ ಕೊರೆದಿದ್ದ ಮೃದು ಆಟಿಕೆಗಳಿಗೆ ಬಣ್ಣ ಹಚ್ಚಿ ಮತ್ತಷ್ಟು ಅಂದ ಹೆಚ್ಚಿಸುವ ಮೊದಲು ಕೊನೆಯ ಸ್ಪರ್ಷ ನೀಡಿ ಗೊಂಬೆಯನ್ನ ನಿಖರವಾಗಿ ತಿದ್ದಿ ತೀಡಲು ಕೂತಿದ್ದ. ಅಷ್ಟು ಬೆಳ್ಳಂಬೆಳಗ್ಯೆ ಇವನ ಆಗಮನವನ್ನ ನಿರೀಕ್ಷಿಸಿರದ ಬಾಬಯ್ಯ ಒಂದರೆಕ್ಷಣ ಬೆಚ್ಚಿ ಬಿದ್ದ. ಗೋಪಿಯನ್ನ ಕರೆಯಬೇಕೆಂದೂˌ ತಾನು ಕೆಲಸದ ಮೇಲೆ ಪೇಟೆಗೆ ಬಂದಿರುವೆನೆಂದೂ ಇವತ್ತೆ ಮರಳಿ ತೋಟದ ಮನೆಗೆ ಹೋಗುವ ದರುದು ಇದೆಯೆಂದೂ ಇವ ಹೇಳುತ್ತಿದ್ದರೆ ಅವೆಲ್ಲವನ್ನೂ ಕೇಳುತ್ತಿದ್ದ ಬಾಬಯ್ಯ ಒಂದು ಸಿಟ್ಟಿನ ಪ್ರತಿಕ್ರಿಯೆ ಕೊಟ್ಟು "ರಾಜಾ ರಾಣಿಯರಿಗೆ ಇನ್ನೂ ಹಗಲಾದಂಗಿಲ್ಲಪ್ಪˌ ತಾವು ದಯಮಾಡಿಸಿ ಭೋಪರಾಕು ಹೇಳಿ ಈ ವಿನಮ್ರ ಸೇವಕ ಒಡೆಯ ಒಡತಿಯರನ್ನ ಅವರ ಅಂತಃಪುರದಿಂದ ಹೊರಗೆ ಮೆಲುವಾಗಿ ಕೂಗಿ ಕರೆದುಕೊಂಡು ಬರುತ್ತೇನೆ!" ಅಂತ ಜಾತ್ರೆಯ ನಾಟಕದವರು ಉದುರಿಸುವ ಸಂಭಾಷಣೆಯ ಧಾಟಿಯಲ್ಲಿ ವ್ಯಂಗ್ಯವಾಗಿ ಹೇಳಿದ್ದ.

ಅಲ್ಲಿಗೆ ಅಳಿಯನ ಬಗ್ಗೆ ಮುದುಕನ ಮೊದಲಿಕೆ ಕೇಳಿ ಹಗಲಾಗಿದ್ದರೂ ಇನ್ನೂ ಗಂಡ ಹೆಂಡಿರು ಶಯನ ಕಕ್ಷೆ ಬಿಟ್ಟಿಳಿದಿಲ್ಲ ಅನ್ನೋದೇನೋ ಖಚಿತವಾಯಿತುˌ ಆದರೆ ಇಷ್ಟೊಂದು ಮೊನಚಾಗಿ ನಾಟಕೀಯ ಸಂಭಾಷಣೆ ಮೂಲಕ ಮೊದಲಿಸಿರುದಕ್ಕೆ ಮಾತ್ರ ಕಾರಣ ಹೊಳೆಯಲಿಲ್ಲ. ಇರಲಿˌ ಎದ್ದ ಕೂಡಲೆ ಗಾಡಿಖಾನೆಯತ್ತ ಕಳಿಸಿ ನಾನಲ್ಲೆ ಅವನನ್ನ ಭೇಟಿಯಾಗುತ್ತೇನೆ ಅಂದವನೆ ಅಲ್ಲಿಂದ ಕಾಲ್ಕಿತ್ತ.

ವಾಸ್ತವವಾಗಿ ಅವರ ಮನೆಯ ಒಳ ಜಗಳಗಳ ಮುನಿಸು ಭರ್ತ್ಸನೆಗಳ ಅನಗತ್ಯ ಕಿರಿಕಿರಿಗಳಲ್ಲಿ ಬೆಳ್ಳಂಬೆಳಗ್ಯೆ ತಾನೂ ಪಾಲುದಾರನಾಗಿ ಬೇಡದ ಗೊಂದಲ ಗೋಜಲಿನಲ್ಲಿ ಸಿಲುಕಿಕೊಳ್ಳುವ ಉಸಾಬರಿ ಅವನಿಗೆ ಬೇಕಿರಲಿಲ್ಲ. ಅದೇನಿದ್ದರೂ ತಾನು ಕೇಳದಿದ್ದರೂ ಸಹ ಸಿಕ್ಕಿದಾಗ ಗೋಪಿ ಹೇಳದೆ ಬಿಡಲಾರ! ಸಹಜವಾಗಿ ಕುಪ್ಪಿಯಿಂದ ಕರಗಿ ಹೊರ ಬರುವ ಎಣ್ಣೆಯನ್ನ ಅನಗತ್ಯವಾಗಿ ಬೆಂಕಿಯ ಶಾಖಕ್ಕೆ ಹಿಡಿದು ಕರಗಿಸುವ ಅಗತ್ಯವಿದೆಯೆ? ಎಂದವನು ತರ್ಕಿಸಿ ಗಾಡಿಖಾನೆಯತ್ತ ತಿರುಗಿದ್ದ. ಅದಲ್ಲದೆ ಈಗಾಗಲೆ ಅಂದುಕೊಂಡ ಸಮಯಾವಧಿಗಿಂತ ಹೆಚ್ಚು ಒಮ್ಮುಖ ಪಯಣದಲ್ಲಿಯೆ ವ್ಯರ್ಥವಾಗಿದ್ದುˌ ಈಗ ಮನೆಯ ಕಿರು ರಿಪೇರಿ ಕೆಲಸ ಮತ್ತೊಂದಷ್ಟು ಅಮೂಲ್ಯ ಸಮಯವನ್ನ ಹಾಳು ಮಾಡಿತ್ತು. ಹೀಗಾಗಿ ಒಣ ಹರಟೆ ಹೊಡೆಯುತ್ತಾ ದೇಶಾವರಿ ಮಾತಾಡಿಕೊಂಡು ಕತ್ತು ಹಿಸುಕಿ ಕೊಲ್ಲುವಷ್ಟು ಸಮಯ ಅವತ್ತು ಅವನಲ್ಲಿಯೂ ಇದ್ದಿರಲಿಲ್ಲ. ಆದರೆ ಬಾಬಯ್ಯ ಮತ್ತು ಗೋಪಿಯ ತಿಕ್ಕಾಟದ ಕಾರಣ ಮೂರನೆ ಮೂಲವೊಂದರಿಂದ ಬಯಸದಿದ್ದರೂ ಅವನ ಕಿವಿಗೆ ಬಂದು ಬಿತ್ತು.

ಗಾಡಿಖಾನೆಯ ಬಾಗಿಲಲ್ಲೆ ಹುಲ್ಲು ಮಾರುವ ಪಾಪಮ್ಮ ಅವನಿಗೆ ಎದುರಾದಳು. ಸಮೀಪದ ತೋಟದ ಮನೆಗಳಿಗೆ ಸುಗ್ಗಿಯ ಕಾಲದಲ್ಲಿ ಅಂಡಲೆದು ರೈˌ ಓಟ್ಸ್ˌ ಜವೆಗೋಧಿಯ ಹುಲ್ಲುˌ ಗೋವಿನಜೋಳದ ಕಡ್ಡಿˌ ಕಬ್ಬಿನ ಸಿಪ್ಪೆ ಹಿಂಡಿ ಹಿಪ್ಪೆಯಾದ ಜಲ್ಲೆ ಎಲ್ಲವನ್ನೂ ಕನಿಷ್ಠ ಕ್ರಯ ಕಟ್ಟಿ ಪಾಪಮ್ಮ ಕೊಂಡುಕೊಂಡು ಒಂಟಿ ಫೋನಿ ಕುದುರೆ ಕಟ್ಟಿದ್ದ ಕಿರು ಬಂಡಿಗೆ ಅದನ್ನೇರಿಸಿಕೊಂಡು ಅವೆಲ್ಲವನ್ನೂ ಸಹ ತನ್ನ ಪೇಟೆಯ ಮನೆಗೆ ಸಾಗಿಸುತ್ತಿದ್ದಳು. ಐದು ಕಾಸು ಹತ್ತು ಕಾಸು ಕೊಟ್ಟು ರೈತರ ಒಕ್ಕಣೆಯ ಕಣದಿಂದ ಕೊಂಡು ತಂದ ಆ ಪಶು ಆಹಾರವನ್ನ ಊರೊಳಗೆ ಅದರ ಎರಡು ಬೆಲೆಗೆ ಮಾರಿ ಚೂರು ದುಡಿಮೆ ಮಾಡಿಕೊಳ್ಳುತ್ತಿದ್ದಳು. ಪೇಟೆಯಲ್ಲಿ ಮನೆಯಿರುವ ಪ್ರತಿಯೊಬ್ಬರೂ ಸಹ ಒಂದೆರಡು ಜಾನುವಾರು ಕಟ್ಟಿ ಸಾಕಿದವರೆ ಆಗಿದ್ದರೂˌ ಅವರಲ್ಲಿ ಹೆಚ್ಚಿನವರು ರೈತಾಪಿಗಳೂ ಆಗಿರಲಿಲ್ಲ - ಅವರ್ಯಾರೂ ಹೊಲಮನೆಯ ಒಡೆಯರೂ ಆಗಿರಲಿಲ್ಲ. ಅಂತವರಿಗೆ ಹೀಗೆ ಒಣಹುಲ್ಲನ್ನ ಹಾಗೂ ತೊಂಡು ಮೇವನ್ನ ಪಾಪಮ್ಮನಿಂದ ಖರೀದಿಸದೆ ವಿಧಿಯಿರಲಿಲ್ಲ. ಆ ಕಾರಣದಿಂದ ಊರಿನ ಪ್ರತಿಮನೆಯೊಳಗೂ ಹುಲ್ಲಿನ ಪಾಪಮ್ಮನ ಹೊಕ್ಕು ಬಳಕೆಯಿತ್ತು. ಹಾಗೆ ಹೋದವಳುˌ ಹುಲ್ಲಿನ ಹೊರೆಯ ಕಟ್ಟು ತೆಗೆದಿಳಿಸಿದವಳೆ ವೀಳ್ಯ ಹಾಕಿಕೊಂಡು ನಾಲ್ಕು ಘಳಿಗೆ ಹಿತ್ತಲಲ್ಲಿ ಕೂತು ಆ ಮನೆಯವರ ಕಷ್ಟಸುಖ ಹಂಚಿಕೊಂಡು ಬರುತ್ತಿದ್ದಳು. ಅವಳಿಗೆ ಕುಡಿಯಲೊಂದು ಲೋಟ ಚಹಾ ಕೊಟ್ಟ ಆ ಮನೆಯವರೂ ಸಹ ತಮ್ಮ ಮನೆಯ ವಿಚಾರ ಅವಳಿಗೆ ಹೇಳಿ ಇನ್ಯಾರದೋ ಮನೆಯ ವಿಚಾರ ಅವಳಿಂದ ಕೇಳಿ ತಿಳಿದುಕೊಳ್ಳುತ್ತಿದ್ದರು!

ಒಟ್ಟಿನಲ್ಲಿ ಜನ ಜಾನುವಾರು ಸಹಿತ ಊರಿನ ಸಕಲ ಜೀವಿಗಳ ಲಾಭ ನಷ್ಟಗಳ ಅಂತರಂಗದ ವಿಚಾರಗಳಲ್ಲಿ ಪಾಪಮ್ಮ ಪಾರಂಗತಳಾಗಿರುತ್ತಿದ್ದಳು. ಅವಳಿಗಿದ್ದ ಏಕೈಕ ದುರಭ್ಯಾಸವೆಂದರೆ ಪಾಪಮ್ಮ ಚೂರು ಬಾಯಿಬುಡುಕಿ. ಈಗಿನ ಉದಾಹರಣೆ ಕೊಟ್ಟು ಹೇಳೋದಾದರೆ ಒಂಥರಾ ಆಲಿಂಡಿಯಾ ರೇಡಿಯೋದ ಆ ಊರಿನ ಕೇಂದ್ರ ಪಾಪಮ್ಮ. ಅಂದರೆ ವಿಷಯವೊಂದನ್ನ ಪಾಪಮ್ಮನ ಕಿವಿಗೆ ಹಾಕುವುದೂ ಸರಿˌ ನೇರ ಕಹಳೆಯ ಮೂತಿಗೆ ಹೋಗಿ ಮುತ್ತಿಡುವುದೂ ಸರಿ! ಪಾಪಮ್ಮನ ಅಂತರಂಗ ಹೊಕ್ಕ ವಿಷಯವೊಂದು ವಾರ ಒಪ್ಪೊತ್ತಿನಲ್ಲಿ ಅವಳ ಪರಿಚಿತರೆಲ್ಲರ ಮುಂದೆ ಬೇಧ ಭಾವವಿಲ್ಲದೆ ಬಹಿರಂಗವಾಗುತ್ತಿತ್ತು.



************



"ಹಗಲು ಕಿರಿದು ಇರುಳು ಹಿರಿದು ಚಳಿಯ ಮೊನಚು ಅಲಗುಗಳು ಇಳೆಯ ಅಂಗಾಂಗ ಕೊರೆದುˌ ಶಿಶಿರ ಮಾಡುವ ನಿರಂತರ ಧಾಳಿ ವಸಂತನ ಕನವರಿಸುವಂತೆ ಮಾಡಿದೆ."

ಹೀಗಾಗಿ ಮುಖದ ಮುಂದೆ ಅವಳನ್ನ ಚೆನ್ನಾಗಿ ಮಾತನಾಡಿಸುತ್ತಿದ್ದವರೆ ಅವಳ ಬೆನ್ನ ಹಿಂದೆ ಅವಳನ್ನು "ಒಡಕು ವಾಲಗ ಪಾಪಮ್ಮ" ಅಂತ ಅಡ್ಡ ಹೆಸರಿಟ್ಟು ಕರೆಯುವುದು ರೂಢಿಯಾಗಿತ್ತು. ಆದರೆ ಅದೆಲ್ಲಾ ಅವಳ ಹಿಂದುಗಡೆಯಿಂದ ಮಾತ್ರ. ಅಪ್ಪಿ ತಪ್ಪಿ ಅವಳ ಮುಂದೆ ಯಾರಾದರೂ ಹೀಗೆ ಅವಳನ್ನ ಕರೆಯುವ ಭಂಡ ಧೈರ್ಯ ಮಾಡಿದರೆ ಸಾಕು ಉರಿದು ಬೀಳುತ್ತಿದ್ದ ಪಾಪಮ್ಮ ಅಂತವರ ಜನ್ಮ ಜಾಲಾಡಿ ಝಾಡಿಸಿ ಬಿಡುತ್ತಿದ್ದಳು. ಹಾಗೊಮ್ಮೆ ಅರಿಯದೆ ಅಂದು ಅವಳ ಬಾಯಿಗೆ ಸಿಕ್ಕಿ ಸಿಗಿದು ತೋರಣ ಕಟ್ಟಿಸಿಕೊಂಡವರು ಮತ್ತೆಂದೂ ಜನ್ಮದಲ್ಲಿ ಕನಸು ನನಸಿನಲ್ಲಿಯೂ ಸಹ ಆ ಬಾಯಿಬಡುಕಿಯ ಮಾತಿನ ಕೊರಂಬುಗಳ ಧಾಳಿಗೆ ಸಿಕ್ಕಿಹಾಕಿಕೊಂಡು ನರಳುವ ಸಾಹಸಕ್ಕಿಳಿಯುತ್ತಿರಲಿಲ್ಲ. ಪಾಪಮ್ಮನ ಹರಿತಗೊಳಿಸಿದಂತಿದ್ದ ಚುರುಕು ನಾಲಗೆಯ ಶಕ್ತಿಯೆಂದರೆ ಅದು.

ಅಂತಾ ಒಡಕು ವಾಲಗದ ಪಾಪಮ್ಮ ತನ್ನ ನಿತ್ಯದ ವ್ಯಾಪಾರವನ್ನ ಬೆಳ್ಳಂಬೆಳಗ್ಯೆಯೆ ಆರಂಭಿಸಲು ಹುಲ್ಲಿನ ಕಟ್ಟುಗಳನ್ನ ಗಾಡಿಖಾನೆಯ ಮುಂದೆ ರಾಶಿ ಹಾಕಿಕೊಂಡು ಸಂಭವನೀಯ ಗಿರಾಕಿಗಳ ನಿರೀಕ್ಷೆಯಲ್ಲಿ ಕಾಯುತ್ತಿದ್ದಳು. ಇವನನ್ನ ಅಪರೂಪಕ್ಕೆ ಕಂಡವಳೆ ಅದೂ ಇದೂ ಮಾತಿಗಾರಂಭಿಸಿ ವೀಳ್ಯದ ಖರ್ಚಿಗೆ ನಾಲ್ಕು ಕಾಸು ಕೇಳಿ ಇಸಿದುಕೊಂಡಳು. ಅವಳ ಒಡನಾಟವಿದ್ದ ಅವನೂ ಸಹ ನಗುನಗುತ್ತಲೆ ತಕರಾರು ಮಾಡದೆ ಕಾಸು ಕೊಟ್ಟ. ಗಾಡಿಗನಿಗೆ ಕುದುರೆಯ ವಿಷಮ ಸ್ಥಿತಿ ಹೇಳಿ ಶೀಘ್ರವಾಗಿ ಶೀತಕ್ಕೆ ಔಷಧಿಯನ್ನ ಅರೆದು ಕೊಡುವಂತೆ ವಿನಂತಿಸಿದ. ಔಷಧಿ ಅರೆದು ಕೊಡಲು ಸಮಯವಿದ್ದ ಕಾರಣ "ಏನ್ ಪಾಪಮ್ಮ ಬಾಬಯ್ಯನ ವಿಚಾರ? ಗೋಪಿ ಅಂದ್ರೆ ಮುದುಕ ನಸುಕಿನಲ್ಲೆ ಕೆಂಡಾಮಂಡಲವಾದನಲ್ಲ?" ಅಂತ ವಿಷಯ ಪ್ರಸ್ತಾವಿಸಿದ. ಆಗಷ್ಟೆ ಸುಣ್ಣ ಸವರಿದ್ದ ಕಡು ಖಾರದ ಅಂಬಾಡಿ ಎಲೆ ಮೆದ್ದು ಚುರು ಚುರುಗುಟ್ಟುತ್ತಿದ್ದ ಪಾಪಮ್ಮನ ನಾಲಗೆಗೆ ಜೀವ ಬಂದು ಅವಳ ಬೊಂಬಾಯಿ ಬಾಯಿಯ ತೂಬು ಕೊಚ್ಚಿಕೊಂಡು ಹೋಗಿ ಮಾತಿನ ದಭದಭೆ ಉಕ್ಕಿ ಹರಿಯಲು ಅಷ್ಟು ಪ್ರಚೋದನೆ ಸಾಕಾಯಿತು.

ಪಾಪಮ್ಮನ ಪ್ರಕಾರ ಅದೇನೂ ಬಹಳ ಗಹನ ವಿಚಾರವಾಗಿರಲಿಲ್ಲ. ಆದರೆ ಇತ್ತೀಚೆಗೆ ಗೋಪಿಯ ಪೋಲಿತನ ಹೆಚ್ಚುತ್ತಿದ್ದುದೆ ಬಾಬಯ್ಯ ಉರಿದೇಳಲು ಕಾರಣವಾಗಿತ್ತು. ಹಾಗಂತ ಗೋಪಿಯೇನು ಊರು ಮೇಯುವ ಚಾಳಿಗಿಳಿದಿರಲಿಲ್ಲ. ತುಂಬಿ ತುಳುಕಲಾರಂಭಿಸಿದ್ದ ಅವನ ರಸಿಕತೆಗೆ ಬಲಿಯಾದ ರತಿ ಸ್ವತಃ ಅವನ ಹೆಂಡತಿಯೆ! ತನ್ನೊಂದಿಗೆ ಒಂದೆ ಮುಹೂರ್ತದಲ್ಲಿ ಸಂಸಾರವಂದಿಗನಾಗಿದ್ದ ಗೋಪಿಗೆ ತನ್ನ ರಾಜನಿಗಿಂತ ಮೂರು ತಿಂಗಳಷ್ಟೆ ಕಿರಿಯ ಹೆಣ್ಣುಮಗುವಿತ್ತು. ಅದಾಗಿ ಹೆಚ್ಚು ಕಡಿಮೆ ವರ್ಷದ ಮೇಲೆ ತಿಂಗಳೆರಡು ಕಳೆಯುತ್ತಾ ಬಂದಿವೆ. ಆದರೆ ಆತನಕ ಚುರುಕಾಗಿ ಬಾಬಯ್ಯನ ಗೊಂಬೆ ತಯಾರಿಕೆಯ ಉದ್ಯಮದಲ್ಲಿ ವಿಧೇಯ ವಿದ್ಯಾರ್ಥಿಯಂತೆ ಕೆಲಸ ಕಲಿತ ಗೋಪಿ ಹೊರಗೆ ಹಮಾಲನಾಗಿಯೂ ಮನೆಯೊಳಗೆ ಬಾಬಯ್ಯನ ಸಹಾಯಕನಾಗಿಯೂ ಸಂಸಾರದ ಭಾರ ವಹಿಸಿಕೊಂಡು ಮುನ್ನಡೆಯುತ್ತಿದ್ದವˌ ಕೆಲಸ ಕಡಿಮೆಯಿರುವ ಈ ಚಳಿಗಾಲದಲ್ಲಿ ಮಾತ್ರ ಸಂಸಾರವನ್ನ ಹೆಚ್ಚಿಸುವ ಘನಕಾರ್ಯದಲ್ಲಿ ಸಂಪೂರ್ಣ ತೊಡಗಿಕೊಂಡು ಬಿಟ್ಟಿದ್ದ. ಹಗಲಾಗಿ ಬೆಳಕು ಕಣ್ಣು ಕುಕ್ಕುವಷ್ಟು ನಿಚ್ಚಳವಾದರೂ ಉಪ್ಪರಿಗೆಯ ಶಯನದ ಕೋಣೆಯಿಂದ ಗಂಡ ಹೆಂಡಿರು ಇಳಿದು ಬರುತ್ತಿರಲಿಲ್ಲ! ಹೇಗೂ ಈಗ ಕೆಲಸವಿಲ್ಲವಿಲ್ಲ ಪ್ರಣಯ ಕೇಳಿಯನ್ನಾದರೂ ನಡೆಸೋಣ ಅನ್ನೋದು ಅವನ ಧೋರಣೆ. ಹೀಗಾಗಿ ಇತ್ತೀಚೆಗೆ ನಸುಕಿನಲ್ಲಿಯೂ ಅವನ ಪ್ರೇಮ ಕಲಾಪ ತಾರಕಕ್ಕೇರುವುದೂ ಇತ್ತು. ಆದರೆ ಮುಂಜಾನೆ ಚಳಿಗೆ ಸಶಬ್ಧವಾಗಿ ಮಲಗುವ ಮನೆಯಿಂದ ಹೊರಡುತ್ತಿದ್ದ ಮಗಳು ಅಳಿಯನ ಪ್ರಣಯ ಗೋಷ್ಠಿ ಹೆಂಡತಿಯಿಲ್ಲದೆ ಒತ್ತಾಯದ ಬ್ರಹ್ಮಚಾರಿಯಾಗಿದ್ದ ಬಾಬಯ್ಯನಿಗೆ ಕಿರಿಕಿರಿ ಹುಟ್ಟಿಸುತ್ತಿತ್ತು. ಎಲ್ಲರೂ ಹಗಲು ಮೂಡುವ ಮೊದಲೆ ಎದ್ದು ಕೆಲಸಗಳತ್ತ ಹೊರಳಿದರೆ ಗೋಪಿ ಹಗಲಾಗುತ್ತಿದ್ದುದೆ ತಡ ಹೆಂಡತಿಯತ್ತ ಹೊರಳಿ ಅವಳನ್ನ ತನ್ನ ಪಕ್ಕಕ್ಕೆಳೆದುಕೊಳ್ಳುತ್ತಿದ್ದ. ವಿಷಯ ಇಷ್ಟೆ.

ಆದರೆ ಸ್ವಲ್ಪ ಹೊತ್ತಿನ ಮುಂಚಿನ ಬಾಬಯ್ಯನ ನಾಟಕೀಯ ಪ್ರತಿಕ್ರಿಯೆ ನೆನಪಾಗಿˌ ಅದಕ್ಕೆ ಸರಿಯಾಗಿ ಅಭಿನಯ ಶಾರದೆಯಂತೆ ಇದರ ಹಿಂದಿನ ಕಾರಣವನ್ನು ಪಾಪಮ್ಮ ಬಣ್ಣಿಸಿದ ಪರಿ ಕೇಳಿ ಹೊಟ್ಟೆ ಹುಣ್ಣಾಗುವಂತೆ ಅವನು ಜೋರಾಗಿ ನಕ್ಕ. ಅಲ್ಲಾ ಆ ಊರಿಗೆ ಬಂದು ಸೇರಿ ಆಗಲೆ ವರ್ಷ ನಾಲ್ಕಾಗಿದ್ದರೂˌ ಬಾಬಯ್ಯನ ಮನೆಯಳಿಯನಾಗಿ ವರ್ಷವೆರಡು ಮೀರಿದ್ದರೂ ಇನ್ನೂ ನೆಟ್ಟಗೆ ನಾಲ್ಕು ಸಾಲು ಸ್ಥಳಿಯ ಭಾಷೆ ಕಲಿತಿರದ ಸೋಮಾರಿ ಗೋಪಿ ಹಾಗೂ ಗೋಪಿಯ ಭಾಷೆಯ ಓನಾಮ ಅರಿತಿರದ ಅವನ ಮಡದಿ ಅದಿನ್ಯಾವ ಭಾಷೆಯಲ್ಲಿ ಪರಸ್ಪರ ತಮ್ಮ ಪ್ರಣಯ ವ್ಯವಹಾರ ನಡೆಸುತ್ತಾರೋ! ಒಬ್ಬರ ಭಾಷೆ ಇನ್ನೊಬ್ಬರಿಗೆ ಅರ್ಥವಾಗದ ಹೊತ್ತಿಗೆ ಹೀಗೆˌ ಇನ್ನು ಇಬ್ಬರಿಗೂ ಇಬ್ಬರ ನುಡಿಗಳೂ ಅರ್ಥವಾಗುವಂತಿದ್ದರೆ ಇವರಿಬ್ಬರನ್ನೂ ಹಿಡಿದು ನಿಲ್ಲಿಸಲಿಕ್ಕಾಗುತ್ತಿರಲಿಲ್ಲವಲ್ಲ! ಅನ್ನುವ ಪೋಲಿ ಆಲೋಚನೆ ಮನಸೊಳಗೆ ಸುಳಿದೊಡನೆ ಮತ್ತಷ್ಟು ಜೋರಾಗಿ ನಕ್ಕ. ಜೊತೆಗೆ ಜುಲಮೆಗೆ ಅವಳೂ ಚೂರು ಹಲ್ಲು ಕಿರಿದಳಾದರೂˌ ಅಲ್ಲಾ ತಾನು ಹೇಳಿದ ಈ ಗಂಡ ಹೆಂಡಿರ ಪೋಲಿ ಕಥೆಯಲ್ಲಿ ಅಷ್ಟೊಂದು ಜೋರಾಗಿ ಗಹಗಹಿಸಿ ನಗುವಷ್ಟು ತಮಾಷೆಯಾದರೂ ಏನಿತ್ತು? ಅನ್ನೋದೆ ಅರ್ಥವಾಗದೆ ಪಾಪಮ್ಮ ಕಕ್ಕಾಬಿಕ್ಕಿಯಾಗಿ ನಿಂತಿದ್ದಳು. ಅದು ಅರ್ಥವಾಗುವ ವಯಸ್ಸನ್ನ ಪಾಪಮ್ಮ ಅದಾಗಲೆ ದಾಟಿಯಾಗಿತ್ತು. ಒಂದು ವೇಳೆ ಅವನ ತುಂಟ ನಗುವಿಗೆ ಕಾರಣ ಅರಿವಾಗುವಂತಿದ್ದರೂ ಸಹˌ ಅವನ ಮನೋವ್ಯಾಪಾರವನ್ನ ಅರಿತು ಅದರ ಆಲೋಚನೆಗಳನ್ನ ಓದುವ ಅತಿಮಾನುಷ ಶಕ್ತಿ ಅವಳಿಗಿರಲಿಲ್ಲವಲ್ಲ!

ಹಸಿರು ಮದ್ದನ್ನ ಗಾಡಿಗನೂ ಆಗಿರುವ ಅವನ ಹೆಂಡತಿಯ ಮಾವ ಅರೆದು ಕುಪ್ಪಿಗೆ ಸುರಿದು ಕೊಟ್ಟರೂ ಈ ರಸಿಕ ಚಕ್ರವರ್ತಿ ಗೋಪಿಯ ಪತ್ತೆಯಿಲ್ಲ! ಸರಿ ಈಗ ತಾನೆ ಪುನಃ ಅವನ ಮನೆಯಾಗಿ ಹೋಗಿ ಇನ್ನೂ ಎದ್ದೇಳದೆ ಶೇಲೆ ಮಾಡುತ್ತಿದ್ದರೆ ಆ ರಸಿಕ ಚಕ್ರವರ್ತಿಯನ್ನ ಒದ್ದು ಎಬ್ಬಿಸಿ ಬರಿ ಮೈಯಲ್ಲಾದ್ರೂ ಸರಿ ಕುತ್ತಿಗೆ ಹಿಡಿದು ಎಳೆದುಕೊಂಡು ಹೋಗೋದೆ ಅಂತ ನಿರ್ಧರಿಸದವನೆ ದಾಪುಗಾಲು ಹಾಕುತ್ತಾ ಬಾಬಯ್ಯನ ಮನೆ ಕಡೆಗೆ ಅವನು ಹೆಜ್ಜೆ ಹಾಕಿದ. ಗಾಡಿಗನಿಗೆ ಔಷಧಿಯ ಕಾಸು ಕೊಟ್ಟು ಹೊರಟವನಿಗೆ ತನ್ನ ಹುಲ್ಲಿನ ದಾಸ್ತಾನು ಖಾಲಿಯಾಗುತ್ತಾ ಬಂದಿದೆಯೆಂದೂ ಸೋಮ ಸರೋವರದ ಮಂಜಿನ ತೆರೆ ಮತ್ತೆ ನೀರಾಗಿ ಹರಿಯುವ ಪಕ್ಷದ ಒಳಗೆ ತಾನು ಅವನನ್ನ ಹುಡುಕಿಕೊಂಡು ತೋಟದ ಮನೆಗೆ ಬರುವುದಾಗಿಯೂˌ ಒಂದೆರಡು ಮೆದೆ ರೈ ಹುಲ್ಲುˌ ಕಬ್ಬಿನ ಜಲ್ಲೆಯ ಜೊಂಡುˌ ಕಾಕಂಬಿ ಹಾಗೂ ಒಂದಷ್ಟು ಪೌಂಡು ಗೋವಿನ ಜೋಳವನ್ನ ತನಗೆ ಮಾರಿ ಉಪಕರಿಸಬೇಕೆಂದು ಪಾಪಮ್ಮ ಬೆನ್ನ ಹಿಂದಿದ್ದ ಕೂಗಿ ಹೇಳಿ ಮುನ್ಸೂಚನೆ ಕೊಟ್ಟಳು. ಇವನೂ ಆಗಬಹುದು ಎಂದು ಕೂಗಿ ಒಪ್ಪಿಗೆ ಸೂಚಿಸುತ್ತಲೆ ಮುನ್ನಡೆದ.

ಒಡಕು ಬಾಯಿಯ ಆರೋಪ ಅದೇನೆ ಇದ್ದರೂ ಪಾಪಮ್ಮನ ಮನಸು ಮಾತ್ರ ಸ್ವಚ್ಛ. ಅದೆಷ್ಟೆ ಊರಿಂದೂರಿಗೆ ಸುದ್ದಿ ಹರಡಿದರೂ ಸಹ ಆ ಮುದುಕಿ ಎಂದೂ ಪರಸ್ಪರರ ವಿರುದ್ಧ ಇಲ್ಲಸಲ್ಲದ ಚಾಡಿ ಮಾತು ಹೇಳಿ ಜಗಳ ಹಚ್ಚಿ ಹಾಕಿ ಯಾರದ್ದೂ ಮನೆ ಮನ ಒಡೆದವಳಲ್ಲ. ಈಗ ಇವನಿಗೆ ಗೋಪಿಯ ಕಚ್ಚೆ ಸಡಿಲವಾಗಿರುವ ಸುದ್ದಿ ಮುಟ್ಟಿಸಿದವಳು ಇವನಿಂದ ಇವನ ಹೆಂಡತಿಯ ಎರಡನೆ ಬಸಿರಿನ ವಿಚಾರವನ್ನ ಮೆಲ್ಲನೆ ಬಾಯಿ ಬಿಡಿಸಿಯಾಗಿದೆ. ಖಂಡಿತವಾಗಿ ಅದನ್ನ ಊರಲ್ಲಿ ಕೇಳದವರಿಗೂ ಕರೆದು ಹೇಳದಿರಲಾರಳು. ಸ್ವತಃ ಅವಳ ಮಾವನಿಗೂ ಗೊತ್ತಿಲ್ಲದ ಆ ವಿಷಯ ಅವನ ಕಿವಿಗೂ ಪಾಪಮ್ಮನ ಬಾಯಿಯೆ ಸುರಿದರೂ ಅದರಲ್ಲಿ ಆಶ್ಚರ್ಯ ಪಡುವಂತದ್ದು ಏನೂ ಇರಲಿಲ್ಲ.

ಚಳಿಯ ಮಂದರಿ ಮೆಲ್ಲ ಮೆಲ್ಲನೆ ಸರಿಸಿ ಪಟ್ಟಣ ಪುಟ್ಟದಾಗಿ ಮೈ ಮುರಿದು ಹೊಸತೊಂದು ಹಗಲಿಗೆ ಹೊಂದಿಕೊಳ್ಳತೊಡಗಿತ್ತು. ಸಶಬ್ಧವಾಗಿ ಮಾನವರ ಪ್ರಾಣಿ ಪಕ್ಷಿಗಳ ಕಲರವಗಳೊಂದಿಗೆ ಆಗಷ್ಟೆ ಮೈಮುರಿದೇಳುತ್ತಿತ್ತು ಊರು.



***********


ಬೆಳ್ಳನೆ ಬೆಳಕು ಬಿಟ್ಟುಬಿಟ್ಟು ಸುರಿಯುತ್ತಿದ್ದ ಹಿಮದ ಮಳೆಯ ನಡುವೆಯೂ ನಿಧಾನವಾಗಿ ಕತ್ತಲನ್ನ ಕತ್ತು ಹಿಡಿದು ಊರಿಂದ ಹೊರಗಟ್ಟಿ ತನ್ನ ಸಾಮ್ರಾಜ್ಯವನ್ನ ಯಶಸ್ವಿಯಾಗಿ ಸ್ಥಾಪಿಸಿಯಾಗಿತ್ತು. ಅಲ್ಲಲ್ಲಿ ಮನೆಗಳ ಗಂಡಸರು ಹೊರಡುತ್ತಿದ್ದರು.

ಬಾಬಯ್ಯನ ಮನೆ ಹತ್ತಿರವಾಗುತ್ತಿದ್ದಂತೆ ಪರಸ್ಪರ ಇಬ್ಬರಿಗೂ ಅರ್ಥವಾಗದ ಭಾಷೆಗಳಲ್ಲಿ ಅಳಿಯ ಮಾವ ಬೈದಾಡಿಕೊಳ್ಳುತ್ತಾ ಇರೋದು ಕಿವಿಗಪ್ಪಳಿಸಿತು. ಬಾಬಯ್ಯನ ಅಸಹನೆ ಅವನ ಮಾತುಗಳಲ್ಲಡಗಿದ್ದರೆ ಹುಡುಗು ಮುಂಡೆಗಂಡ ಗೋಪಿ ನೇರವಾಗಿ ಪೋಲಿ ಬೈಗುಳಗಳನ್ನೆ ಉಪಯೋಗಿಸಿ ಮಾವನ ಆಕ್ರಮಣವನ್ನ ಎದುರಿಸುತ್ತಿದ್ದ. ಸದ್ಯ ಊರಿನ ಯಾರಿಗೂ ಅವನ ಭಾಷೆಯಾಗಲಿˌ ಅದನ್ನವನು ಆಡುವ ಧಾಟಿಯಾಗಲಿ ಅರ್ಥವಾಗದಿದ್ದುದರಿಂದ ಬಚಾವು. ಇಲ್ಲದಿದ್ದರೆ ಬೆಳ್ಳಂಬೆಳಗ್ಯೆ ಊರಿನ ಕೆಲವರಿಗಾದರೂ ಅವನ ಅಶ್ಲೀಲ ಬೈಗುಳಗಳು ಪುಗಸಟ್ಟೆ ಮನರಂಜನೆ ಕೊಡುತ್ತಿದ್ದುದರಲ್ಲಿ ಸಂಶಯವಿಲ್ಲ. ದೂರದಿಂದ ಇವನ ಆಗಮನವನ್ನ ಕಂಡವನೆ ಗೋಪಿ ಬೇಲಿ ಬದಿವರೆಗೂ ಬಂದು ಇವನನ್ನ ಎದುರುಗೊಂಡ. ಈಗಷ್ಟೆ ಮಂಚ ಬಿಟ್ಟಿಳಿದ ಸೋಮಾರಿ ಕಳೆ ಢಾಳವಾಗಿ ಅವನ ಮುಖದಲ್ಲಿ ಕಾಣಿಸಿತು. ಕಣ್ಣಿನ ಪಿಸುರು ಹೌದು ಅದು ನಿಜ ಅನ್ನುವ ಸಾಕ್ಷಿ ಹೇಳಿತು. ಇವನ ಮುಖ ದರ್ಶನವಾದದ್ದೆ ಗೋಪಿ ಆನಂದದಿಂದ ಕಿವಿಯಿಂದ ಕಿವಿಯವರೆಗೆ ಹಲ್ಲು ಕಿರಿಯುತ್ತಾ ಇವನನ್ನ ಎದುರುಗೊಂಡ. ಏನೋ ಭಂಡಬಡ್ಡಿ ಮಗನೆ ಬೆಳ್ಳಂಬೆಳಗ್ಯೆ ಅದೇನೋ ನಿನ್ನ ಪ್ರಣಯ ಲೀಲೆ ಅಂತ ಬೈದವನಿಗೆ ತಾನು ಮುಖ ಪ್ರಕ್ಷಾಳನ ಮಾಡಿ ಸಂಗಡ ಬರುವುದಾಗಿಯೂˌ ಇವನು ಹೆಂಡತಿ ಮಾಡಿಕೊಡುವ ಚಹಾ ಸವಿಯಬೇಕಂತಲೂ ಹೇಳುತ್ತಾ ಬೇವಿನ ಕಡ್ಡಿಯನ್ನ ಕಚ್ಚುತ್ತಾ ಹಲ್ಲು ತಿಕ್ಕಿಕೊಳ್ಳ ತೊಡಗಿದ ಗೋಪಿ ಹಿಂದಿನ ಬಚ್ಚಲ ಕಡೆಗೆ  ಪರಾರಿಯಾದ.

ಮನೆಯ ಹಜಾರದಲ್ಲಿ ಚೂರು ಕತ್ತಲಿತ್ತು ಹೊರಗಿನಿಂದ ಬಂದ ಅವನಿಗೆ ಆ ಮಂದ ಬೆಳಕಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಬಾಬಯ್ಯನ ಜೊತೆ ಅದೂ ಇದೂ ಕಷ್ಟ ಸುಖ ಮಾತನಾಡುತ್ತಿದ್ದಂತೆ ಗೋಪಿಯ ಹೆಂಡತಿ ತಂದುಕೊಟ್ಟ ಹಾಲು ಸಕ್ಕರೆ ಸುರಿದ ಹಬೆಯಾಡುವ ಚಹಾ ಹಾಗೂ ಇವನೆ ತಂದುಕೊಟ್ಟಿದ್ದ ಜೇನು ಜೊತೆಗೆ ಮನೆಯ ಎಮ್ಮೆಯ ಬೆಣ್ಣೆ ಸವರಿದ್ದ ಅಂಗಡಿಯ ಗಟ್ಟಿರೊಟ್ಟಿಯ ತುಂಡು ಆ ಕಾಡುವ ಚಳಿಗೆ ಹಿತಾನುಭವ ಹುಟ್ಟಿಸಿತು. ತನ್ನ ಗಂಡನ ಹಾಗೂ ಅಪ್ಪನ ಮಧ್ಯೆ ಮುಂಜಾನೆಯೆ ಆರಂಭವಾಗಿರೋ ಕೋಳಿ ಜಗಳˌ ಅದಕ್ಕೆ ಮೂಲ ಕಾರಣ ನಮ್ಮ ಪ್ರೇಮ ಕಲಾಪದ ಅತಿರೇಕವೆ ಅನ್ನೋದೇನಾದರೂ ಒಂದು ವೇಳೆ ಅವನ ಅರಿವಿಗೆ ಬಂದಿದ್ದರೆ! ಅನ್ನುವ ಅನುಮಾನ ಮನದೊಳಗೆ ಹೊತ್ತಿದ್ದ ಆ ಹುಡುಗಿ ಎಂದಿನಂತೆ ಹೆಚ್ಚು ಹರಟೆ ಹೊಡೆಯದೆ ನಾಚಿಕೆಯಿಂದ ನೀರಾದವಳಂತೆ ಬಂದಷ್ಟೆ ಬೇಗ ಅಲ್ಲಿಂದ ಓಡಿ ಹೋಗಿ ಬದುಕಿದೆಯ ಬಡ ಜೀವ ಅಂದು ಕೊಂಡಳು. ಎಷ್ಟಾದರೂ ಹೆಂಗಸರಿಗೆ ಚೂರು ನಾಚಿಕೆ ಜಾಸ್ತಿ ನಿರ್ಲಜ್ಜ ಗಂಡಸರ ಭಂಡತನ ಅವರಿಗಿರಲು ಹೇಗೆ ಸಾಧ್ಯ ಹೇಳಿ?

ಬಾಬಯ್ಯನ ಜೊತೆಗಿನ ಸಂಭಾಷಣೆಯುದ್ದ ಅವನು ಈ ಪೋಲಿಪುಟ್ಟ ಅಳಿಮಯ್ಯನ ನಡುವಳಿಕೆಯಿಂದ ಅನುಭವಿಸುತ್ತಿರುವ ಕಿರಿಕಿರಿಯ ಕುರಿತ ಕಷ್ಟದ ಪಟ್ಟಿಯೆ ಉದ್ದವಾಗಿತ್ತೆ ಹೊರತುˌ ಅದರಲ್ಲೆಲ್ಲೂ ಸುಖದ ಅಂಶಗಳು ಅಷ್ಟಾಗಿ ಇದ್ದಿರಲಿಲ್ಲ. ಗೆಳೆಯನಾದ ನೀನಾದರೂ ಚೂರು ಈ ಹುಡುಗು ಬುದ್ಧಿಯವಕ್ಕೆ ಕಿವಿ ಹಿಂಡಿಯಾದರೂ ಬುದ್ಧಿ ಹೇಳಪ್ಪˌ ದುಡಿಯವ ಕಾಲದಲ್ಲಿ ಹೀಗೆ ಸುಖಲೋಲುಪತೆಯಲ್ಲಿ ಜಡ ಬಿದ್ದು ಹೋದರೆ ಮನೆ ಉಳಿದೀತ ಅಂತ ಮುದುಕ ಮಾತು ಮುಗಿಸುವ ಹೊತ್ತಿಗೆ ಸರಿಯಾಗಿ ಚಳಿಯಿಂದ ರಕ್ಷಣೆಗೆ ತಕ್ಕ ಧಿರಿಸು ಧರಿಸಿದ ಗೋಪಿ ತಾನೂ ಒಂದು ಚಹಾದ ಬಟ್ಟಲು ಹಿಡಿದು ಅಲ್ಲಿ ಹಾಜರಾದ. ಇವರ ಭಾಷೆ ಬಾರದ ಕಾರಣ ಅವರ ಸಂಭಾಷಣೆಯ ಸಾರ ಅವನಿಗರ್ಥವಾಗುವುದು ಅಷ್ಟರಲ್ಲೆ ಇತ್ತು. ಆದರೂ ಇವರಿಬ್ಬರೂ ವಿಷಯ ಬದಲಿಸಿ ವಾತಾವರಣದ ವೇಪರಿತ್ಯ ಹಾಗೂ ಕೊರೆವ ಚಳಿಯ ಈ ಹಿಮಮಳೆಯ ಅಸಾಧ್ಯ ಹಾವಳಿಗಳ ಬಗ್ಗೆ ಹೊರಳಿಕೊಂಡರು.

ತಾನು ಈ ಊರಿಗೆ ಬಂದು ಬರುವ ಮಠದ ಜಾತ್ರೆಗೆ ಸರಿಯಾಗಿ ಇಪ್ಪತ್ತು ವರ್ಷ ತುಂಬುತ್ತದೆಯಂತಲೂˌ ಅದಾಗಲೆ ಸಂಸಾರಸ್ಥನಾಗಿದ್ದ ತಾನು ಮಡದಿ ಹಾಗೂ ಮೂರು ವರ್ಷದ ಗಂಡು ಮಗುವಿನೊಂದಿಗೆ ಮತ್ತಷ್ಟು ನೆಮ್ಮದಿಯ ನೆಲೆಯನ್ನರಸಿ ಈ ಕಾಣದೂರಿಗೆ ಬಂದ ಹೊಸತರಲ್ಲಿ ಇಲ್ಲಿ ಕಂಡ ಭಾರಿ ಹಿಮಪಾತದ ಚಳಿಗಾಲ ಇದು ಎರಡನೆಯದಂತಲೂˌ ಇಲ್ಲಿ ಬಂದ ಮರು ವರ್ಷವೆ ಜನಿಸಿದ ತನ್ನ ಮಗಳು ಹುಟ್ಟಿ ಕೇವಲ ನಾಲ್ಕು ವರ್ಷದ ಕೂಸಾಗಿರುವಾಗ ಇಂತಹದ್ದೆ ಒಂದು ಭಯಂಕರ ಚಳಿಗಾಲವನ್ನ ಆಗಿನ್ನೂ ನವವಲಸಿಗರ ಆರಂಭದ ತಂಡ ಮಾತ್ರ ಆಗಮಿಸಿ ಕಟ್ಟಿಕೊಂಡಿದ್ದ ಈ ಹೊಸ ಪಟ್ಟಣದಲ್ಲಿ ಕಂಡು ಅನುಭವಿಸಿ ಬೆಚ್ಚಿ ಬೆದರಿ ಹೈರಾಣಾಗಿ ಹೋಗಿದ್ದ ಕಥೆಯನ್ನ ಬಾಬಯ್ಯ ವಿವರಿಸಿದ. ತನ್ನ ಹೆಂಡತಿಗೆ ಈ ಪರಿಸರದ ಹವೆ ಆಗಿ ಬರಲಿಲ್ಲವೆಂದೂˌ ಆ ಭಯಂಕರ ಚಳಿಗಾಲದ ನಂತರ ಅವಳ ಉಬ್ಬಸದ ಕಾಯಿಲೆ ಅವಳನ್ನ ವರ್ಷ ವರ್ಷಕ್ಕೂ ಹಿಂಡಿ ಹಿಪ್ಪೆ ಮಾಡಿ ಮುಂದಿನ ಮೂರು ವರ್ಷಗಳೊಳಗೇನೆ ಅವಳ ಇಹಲೋಕದ ವ್ಯಾಪಾರ ಮುಗಿದು ಪ್ರಭುವಿನ ಪಾದವನ್ನವಳು ಸೇರಿಕೊಂಡಳೆಂದೂ ಅದೆಲ್ಲಾ ನೆನ್ನೆ ಮೊನ್ನೆ ನಡೆದ ಸಂಗತಿಯೇನೋ ಅನ್ನುವಂತೆ ಹೇಳ ಹೇಳುತ್ತಲೆ ಅವನು ಹನಿಗಣ್ಣಾಗಿ ಗಂಟಲು ಕಟ್ಟಿಕೊಂಡು ಮುಂದಿನ ಮಾತುಗಳು ಸ್ಪಷ್ಟವಾಗದೆ ಗೊಗ್ಗರಿಸಿತು. ಅಷ್ಟರಲ್ಲಿ ಗೋಪಿಯ ಚಹಾ ಸೇವನೆಯೂ ಮುಗಿದು ಬಾಬಯ್ಯನಿಂದ ಬೀಳ್ಕೊಂಡ ಅವನು ಗೋಪಿಯ  ಸಂಗಡ ತನ್ನ ಮನೆಯತ್ತ ಹೆಜ್ಜೆ ಹಾಕಿದ.

ಗೋಪಿಯ ಈ ಪ್ರಣಯ ಚೇಷ್ಟೆಯ ಕಥೆ ಇಷ್ಟೊಂದು ವಿಪರೀತಕ್ಕೆ ಏರಿರೋದರ ಬಗ್ಗೆ ಅರಿವಿದ್ದಿರದ ಇವನು ಆ ಅಯೋಗ್ಯನ ಬೇಜವಬ್ದಾರಿಗೆ ದಾರಿಯುದ್ಧ ಹೀನಾಮಾನ ರೇಗಿದ. ಅಲ್ಲ ಕಣೋ ಪೋಲಿ ಮುಂಡೆಗಂಡ ಬರಿ ಮಕ್ಳು ಮಾಡಿದರೆ ಹೆಂಗೋ? ನಾಳೆ ಅವಕ್ಕೆ ಸರಿಯಾದ ನೆಮ್ಮದಿಯ ಬದುಕು ಕೊಡುವ ಹೊಣೆಗಾರಿಕೆಯಿಲ್ಲದ ಮೇಲೆ ಆ ಮಕ್ಳನ್ನ ಕೇಳಿದವರಿಗೆ ಜಾತ್ರೆಯಲ್ಲಿ ಹಿಕರಿ ಬೇರಿನ ಗೊಂಬೆಗಳಂತೆ ಮಾರಿ ಬಿಡಕ್ಕಾಗ್ತದೇನಲೆ ಭಡವ? ಮೊದ್ಲು ದುಡಿಮೆಗೆ ಗಮನ ಕೊಡು. ದಿನ ಬೆಳಗಾದ್ರೆ ಹೀಗೆ ಪೋಲಿ ಪುಟ್ಟನಾಗ್ತಾ ಹೋದ್ರೆˌ ಈಗ ಕೇವಲ ನಿನ್ನ ಮಾವ ಉಗಿತಿದಾನೆ. ನಾಳೆ ಕಂಡಕಂಡವಲೆಲ್ಲ ಉಗಿದುಗಿದು ಉಪ್ಪಿನಕಾಯಿ ಹಾಕ್ತಾರೆ ನೋಡ್ತಿರು ಅಂತ ಎಕ್ಕಾಮಕ್ಕ ಗದರಿಸುತ್ತಾ ಹೇಳಿದ. ಗೋಪಿಗೆ ಹೀಗೆ ಬೈದು ಬುದ್ಧಿ ಹೇಳುವ ಅಧಿಕಾರ ಇದ್ದದ್ದು ಆ ಊರಿನಲ್ಲಿ ಅವನಿಗೊಬ್ಬನಿಗೆ. ಅವನ ಕಾಳಜಿಯ ಬುದ್ಧಿಮಾತಿನ ನುಡಿಗಳು ಗೋಪಿಗೇನೂ ಆಕ್ಷೇಪಾರ್ಹ ಅನಿಸಲಿಲ್ಲ. ಆದರೂ ಅವನ ಪ್ಯಾಲಿ ನಗು ಹೊತ್ತ ಮುಖ ಅವನೇನು ಈ ಬದುಕುವ ಮಾರ್ಗದ ಮಾರ್ಗದರ್ಶನದ ಮಾತುಗಳಿಗೆ ಗಂಭೀರ ಸಮ್ಮತಿ ಸೂಚಿಸಿರುವ ದ್ಯೋತಕವೋ? ಇಲ್ಲಾ ಅದನ್ನೂ  ಅವನು ಹಗುರವಾಗಿ ತೆಗೆದುಕೊಂಡನೋ ಅನ್ನುವುದನ್ನ ಸ್ಪಷ್ಟ ಪಡಿಸದಂತಾಗಿಸಿತು.

ಅಷ್ಟರಲ್ಲಿ ಅವರಿಬ್ಬರೂ ಅವನ ಪೇಟೆಯ ಮನೆಗೆ ಬಂದು ಮುಟ್ಟಿದ್ದರು. ಸುಲ್ತಾನನಿಗೆ ಮೊದಲು ಔಷಧಿಯನ್ನ ಗೊಟ್ಚದಲ್ಲೆತ್ತ ಬೇಕಿತ್ತು. ಅದಕ್ಕೂ ಮೊದಲು ಆಗ ಆ ಹಾಡಿಯಲ್ಲಿ ಮಾಡಿದ್ದಂತೆ ನಸ್ಯದ ಪ್ರಯೋಗ ಮಾಡಿ ಮತ್ತೊಂದು ಸಲ ಅವನ ಕಟ್ಟಿಕೊಂಡಿದ್ದ ಮೂಗಿನ ಹೊಳ್ಳೆಗಳಿಂದ ಗರಣೆ ಗಟ್ಟಿರುವ ಸಿಂಬಳದ ಒಡಕನ್ನ ಹೊರಗೆಳೆದು ಮತ್ತದನ್ನ ಸ್ವಚ್ಛಗೊಳಿಸಿ ನೀಲಗಿರಿ ಎಣ್ಣೆ ಮೂಗಿನ ಹೊರಳೆಗಳಿಗೆ ಸೋಕಿಸಿ ಉಪಚರಿಸಬೇಕಿತ್ತು. ಗಾಡಿಖಾನೆಗೆ ತೆರಳುವ ಮುಂಚೆಯೆ ಒಲೆಯ ಮೇಲೆ ಕುದಿಯಲಿಟ್ಟಿದ್ದ ಹಿಮದ ಗಟ್ಟಿ ಕರಗಿ ನೀರಾಗಿ ಕುದಿಯಲಾರಂಭಿಸಿತ್ತು. ಅವನು ಮರು ಮಾತನಾಡದೆ ತನ್ನ ಪಾಲಿನ ಕೆಲಸದಲ್ಲಿ ನಿರತನಾದಂತೆಯೆˌ ತನ್ನ ಕೆಲಸವನ್ನಾರಂಭಿಸಿದ ಗೋಪಿ ಹಟ್ಟಿಯ ಅಟ್ಟದ ಅಟ್ಟಣಿಗೆಗೆ ಹೊಡೆದ ಮೊಳೆಗೆ ತೂಗು ಹಾಕಿದ್ದ ಮರದ ಗೊಟ್ಟಕ್ಕೆ ಅಂಟಿದ್ದ ಧೂಳು ಒರೆಸಿ ಕುದಿ ನೀರಲ್ಲಿ ಅದನ್ನ ಗಲಬರಿಸಿ ತೊಳೆದುˌ ಗಾಡಿಗ ಕುಟ್ಟಿ ಕೊಟ್ಟಿರುವ ಹಸಿರು ಮದ್ದನ್ನ ಅದರಲ್ಲಿ ಹಾಕಿ ಜೊತೆಗಷ್ಟು ಕುಟ್ಟಿದ ಕಾಳುಮೆಣಸು ಹಾಕಿ ಕಲಕಿ ಕುದುರೆಗೆ ಕುಡಿಸಬೇಕಾದ ಔಷಧಿಯನ್ನ ಸರಿಯಾದ ಪ್ರಮಾಣದಲ್ಲಿ ಸಿದ್ಧಪಡಿಸಿಟ್ಟಿದ್ದ.



***********



"ಕದಡದ ತನಕ ಕೆರೆಯ ನೀರು
ಕಮಲದ ಅವಾಸ ಬಗ್ಗಡವಲ್ಲˌ
ಮುಗಿಯದ ತನಕ ಶಿಶಿರದ ಜೋರು
ಭೂಮಿಯ ಸಹನೆಯೂ ಸಹ ಬತ್ತುವುದಿಲ್ಲ"

ಕುದುರೆಗಳು ಸಾಮಾನ್ಯವಾಗಿ ಅಪರಿಚಿತರ ಸಂಪರ್ಕಕ್ಕೆ ಬಂದರೆ ಹೆದರಿ ಗಲಿಬಿಲಿಗೊಳಗಾಗುತ್ತವೆ. ಹೀಗಾಗಿ ಅವುಗಳನ್ನ ನಿಯಂತ್ರಿಸುವವರು ಯಾವತ್ತೂ ಅವಕ್ಕೆ ಹೊಕ್ಕು ಬಳಕೆಯಿರುವ ಪರಿಚಿತರೆ ಆಗದ್ದಷ್ಟೂ ಒಳ್ಳೆಯದು. ಗೋಪಿ ಸುಲ್ತಾನನಿಗೆ ಅಪರಿಚಿತನೇನೂ ಆಗಿರಲಿಲ್ಲ. ಮದುವೆಗೆ ಮೊದಲು ಗೋಪಿ ಅವನೊಂದಿಗೆ ಹೊಸ ತೋಟದ ಮನೆಯಲ್ಲಿ ಗೇಯುತ್ತಾ ಅರೆಕಾಲಿಕ ರೈತಾಪಿ ಆಗಿದ್ದಾಗ ಈ ಸುಲ್ತಾನ ಇನ್ನೂ ಮರಿಯಾಗಿದ್ದ. ಆಗೆಲ್ಲ ಗೋಪಿಯ ಆರೈಕೆ ಸಹಜವಾಗಿ ಅವನಿಗೆ ಸಿಕ್ಕಿತ್ತು. ಅವನನ್ನು ಬಿಟ್ಟರೆ ತನ್ನ ಬೆನ್ನೇರಿ ಸವಾರಿ ಮಾಡಲು ಸುಲ್ತಾನ ಅವಕಾಶ ಈತನಕ ಇತ್ತಿರೋದು ಗೋಪಿಗೆ ಮಾತ್ರ.

ಹೀಗಾಗಿ ಪರಸ್ಪರ ಪರಿಚಯ ಹಾಗೂ ಸಲುಗೆಯಿದ್ದ ಅವನ ಉಪಸ್ಥಿತಿಯನ್ನ ಅಶ್ವ ಸಹಜವಾಗಿಯೆ ತೆಗೆದುಕೊಂಡಿತು. ಅವನು ಅದರ ಮೂಗಿನ ಒಡ್ಡು ಬಿರಿದು ನೆಲಕ್ಕೆ ಸುರಿದ ಸಿಂಬಳದ ಗಟ್ಟಿಗಳನ್ನೆಲ್ಲ ಎತ್ತಿ ಗುಡಿಸಿ ಹೊರಗೆಸೆಯುವ ಹೊತ್ತಲ್ಲಿ ಗೋಪಿ ಸುಲ್ತಾನನ ಬಳಿ ಸಾರಿ ಅಲ್ಲಿದ್ದ ಬ್ರೆಷ್ಷಿನಿಂದ ಹಿತವಾಗಿ ಅವನ ಬೆನ್ನು ಕುತ್ತಿಗೆ ಸವರಿ ಮರಳಿ ತಮ್ಮ ಸ್ನೇಹ ಸಂಬಂಧದ  ತಂತುವನ್ನ ಕುದುರೆಯೊಂದಿಗೆ ಸಾಧಿಸಿಕೊಂಡˌ ಮೆಲುವಾಗಿ ಕೆನೆದ ಕುದುರೆ ಅವನ ಪ್ರೀತಿಯ ಆರೈಕೆಗೆ ಹಿತಾನುಭವ ಅನುಭವಿಸುತ್ತಾ ಪ್ರತಿಸ್ಪಂದಿಸಿತು.

ಅದರ ವಿಶ್ವಾಸವನ್ನ ಮತ್ತಷ್ಟು ಗಿಟ್ಟಿಸಿಕೊಂಡೆ ಗೊಟ್ಟ ಎತ್ತುವ ಉಪಾಯ ಮಾಡಿದ ಗೋಪಿ ರೈ ಹುಲ್ಲಿನ ಕಟ್ಟು ಬಿಡಿಸಿ ಮತ್ತಷ್ಟು ಹುಲ್ಲನ್ನ ಸುಲ್ತಾನನ ಗೊಂತಿಗೆ ತಂದು ಸುರಿದ. ಅಷ್ಟರಲ್ಲಿ ಅವನು ಅವನ ಸಿಂಬಳವನ್ನೆಲ್ಲ ಸ್ವಚ್ಛಗೊಳಿಸಿ ಅದರ ಹನಿಗಳು ಅಂಟಿದ್ದ ಅಶ್ವದ ಕೊಳಕಾಗಿದ್ದ ಮೋರೆಯನ್ನೆಲ್ಲಾ ತೊಳೆದು ಒಣ ಬಟ್ಟೆಯಿಂದ ಒರೆಸಿಯಾಗಿತ್ತು. ಈಗ ಕುದುರೆಯನ್ನ ರಮಿಸುತ್ತಾ ಮೆಲ್ಲನೆ ಬಾಯಿ ಕಳಿಸಿ ಗೊಟ್ಟದ ಕೊಳವೆಯ ಮೂತಿಯನ್ನ ಅದರ ಹಲ್ಲುಗಳ ನಡುವೆ ಇಳಿಸಿ ತಲೆಯೆತ್ತಿಯೆ ಬಿಟ್ಟರು. ಕಟು ರುಚಿಯ ಹಸಿರು ಔಷಧಿ ಕುದುರೆಯ ಕುತ್ತಿಗೆಯಲ್ಲಿಳಿಯಿತು.

ಮನುಷ್ಯರಂತೆ ತಿಂದದ್ದನ್ನೊ ಕುಡಿದಿದ್ದನ್ನೊ ತಿರುಗಿ ತುಪ್ಪುವ ಕಲೆ ಅರಿಯದ ಕುದುರೆಯಂತ ಜಾನುವಾರು ಜಾತಿಗೆ ಸೇರಿದ ಪ್ರಾಣಿಗಳಿಗೆ ಬಾಯಿಗೆ ಬಿದ್ದ ಮದ್ದನ್ನ ನುಂಗದೆ ವಿಧಿಯೆ ಇರುವುದಿಲ್ಲ. ಹಾಗೊಮ್ಮೆ ಬಾಯಲ್ಲಿ ಕೊಂಚ ಮದ್ದು ಉಳಿದರೆ ಅವು ಕಟಬಾಯಿಯಿಂದ ಜೊಲ್ಲು ಸುರಿಸುಕೊಂಡು ನಿಂತಿರುತ್ತವೆಯೆ ಹೊರತು ಉಗಿದು ಬಾಯಿಯನ್ನ ಮುಕ್ಕಳಿಸಿ ಆ ಕಹಿಯಿಂದ ಪಾರಾಗಲು ಅವುಗಳಿಗೆ ಸಾಧ್ಯವಿರುವುದಿಲ್ಲ. ಕ್ಷಣಾರ್ಧದಲ್ಲಿ ನಡೆದು ಹೋದ ಈ ಔಷಧ ಪ್ರಾಶನದಿಂದ ಕಕ್ಕಾಬಿಕ್ಕಿಯಾದ ಸುಲ್ತಾನ ಬಾಯಿಗೆ ಬಿದ್ದ ಮದ್ದಿನ ಕಟು ರುಚಿಗೆ ಮುಖ ಕಿವಿಚಿಕೊಂಡ ಹಾಗೆ ನಿಂತುಕೊಂಡು ಮರಾ ಮೋಸದಲ್ಲಿ ತನಗದನ್ನು ಕುಡಿಸಿದ ಇವರಿಬ್ಬರನ್ನೂ ಮಿಕಿ ಮಿಕಿ ನೋಡುತ್ತಾ ನಿಂತಿತು. ಅದರ ಮೂಗಿನ ಹೊಳ್ಳೆಗಳಿಗೆ ನೀಲಗಿರಿ ತೈಲದ ಹನಿಗಳನ್ನ ಸೋಕಿಸಿದ ಮೇಲೆ ಅವನಿಗೆ ಒಂದು ಮಟ್ಟಿಗೆ ತೃಪ್ತಿಯಾಯಿತು. ಸಂಜೆ ಊರಿಗೆ ಹೊರಡುವ ಮೊದಲು ಮತ್ತೊಮ್ಮೆ ಗೊಟ್ಟ ಎತ್ತಿ ಕುದುರೆಗೆ ಔಷಧಿ ಕುಡಿಸಿದರೆ ಸಾಕುˌ ಮತ್ತೆ ನೆಗಡಿಯ ಬಾಧೆ ಕಾಡದೆ ಖಂಡಿತ ಕಡಿಮೆಯಾಗಿಯೆ ಬಿಡುತ್ತದೆ ಅನ್ನುವ ಭರವಸೆ ಅವನಿಗಿತ್ತು.

ಒಂದೆರಡು ದಿನಗಳ ಹೆಚ್ಚಿನ ಆರೈಕೆ ಇನ್ನೂ ಬೇಕಿರುತ್ತದೆ. ಮನೆಯ ಲಾಯದಲ್ಲಿ ಇನ್ನಿತರ ಜಾನುವಾರುಗಳಿಂದ ಹಾಗೂ ಹಯಗಳಿಂದ ಪ್ರತ್ಯೇಕಿಸಿ ಕಟ್ಟಿ ಆರೈಕೆ ಮಾಡಿದಷ್ಟೂ ಒಳ್ಳೆಯದು. ಸ್ವಚ್ಛ ವಾತಾವರಣದಲ್ಲಿ ಏಕಾಂಗಿಯಾಗಿ ಚಿಕಿತ್ಸೆಗೊಳಗಾಗುವ ಕುದುರೆಯ ಕಾಯಿಲೆ ಆದಷ್ಟು ಬೇಗ ಗುಣವಾಗುತ್ತದೆ. ಜೊತೆಜೊತೆಗೆ ಅವುಗಳಿಂದ ಕೊಟ್ಟಿಗೆಯ ಇನ್ನಿತರ ಜಾನುವಾರುಗಳಿಗೂ ಜೊಲ್ಲುˌ ಬಾಯ ನೊರೆ ಹಾಗೂ ಸಿಂಬಳದ ಲೋಳೆಯ ಮೂಲಕ ನೆಗಡಿಯ ಸೋಂಕು ಹರಡಿ ಹೈರಾಣಾಗಿಸಿ ಕಾಡುವುದು ಕೂಡ ತಪ್ಪುತ್ತದೆ. ಗಾಡಿಗ ಕಟ್ಟಿ ಕೊಟ್ಟಿರುವ ಹಸಿರು ಮದ್ದು ಇನ್ನೂ ನಾಲ್ಕು ದಿನಕ್ಕೆ ಸಾಲುತ್ತಿತ್ತು.

ಗೋಪಿ ವಾಸ್ತವದಲ್ಲಿ ಉಢಾಳನೇನಲ್ಲ. ಹುಡುಗು ಬುದ್ಧಿ ಹಾಗೂ ಭವಿಷ್ಯದ ಬಗ್ಗೆ ಗಂಭೀರವಾಗಿಲ್ಲದೆ ಬಂದ ಹಾಗೆ ಬಾಳನ್ನ ಎದುರಿಸುತ್ತಾ ಹೋಗುವ ಬ್ರಹ್ಮಚಾರಿ ಬಾಳ್ವೆಯ ಹಳೆಯ ಚಾಳಿಯಿಂದ ಅವನು ಇನ್ನೂ ಹೊರಬಂದಿರಲಿಲ್ಲ ಅಷ್ಟೆ. ಪುಟ್ಟ ಮಕ್ಕಳೆಂದರೆ ಅವನಿಗೆ ಮುಚ್ಚಟೆ ಜಾಸ್ತಿ. ಅವನ ಮಗಳಿಗೆ ಅಮ್ಮನಿಗಿಂತ ಅವಳಪ್ಪನೆ ಅಚ್ಚುಮೆಚ್ಚು. ಇನ್ನೂ ತೊದಲು ನುಡಿಗಳನ್ನ ನುಡಿಯಲಾರಂಭಿರುವ ಆ ಬೊಂಬೆಯಂತ ಕೂಸಿಗೆ ಅಮ್ಮನ ಭಾಷೆಯಷ್ಟೆ ಸ್ಥಳಿಯವಲ್ಲದ ಅಪ್ಪನಾಡುವ ಭಾಷೆಯೂ ಅರ್ಥವಾಗುತ್ತದೆ. ಅಪ್ಪನ ಮಾತುಗಳನ್ನ ಆಲಿಸುವ ಮಗು ಅದನ್ನೆ ಪುನರುಚ್ಛರಿಸಿ ಮತ್ತೆ ಮತ್ತೆ ಅದನ್ನೆ ಪಠಿಸಿ ಅಪ್ಪನೊಂದಿಗೂ ಆಡಿ ಅವನ ಮುದ್ದನ್ನ ಗಿಟ್ಟಿಸಿಕೊಳ್ಳುತ್ತದೆ. ಇವನ ಮಗ ರಾಜನಿಗೂ ಗೋಪಿ  ಚಿಕ್ಕಪ್ಪ ಅಂದರೆ ಸಾಕು ಖುಷಿಯೋ ಖುಷಿ.

ಮಕ್ಕಳನ್ನೆತ್ತಿ ಗಾಳಿಯಲ್ಲಿ ಹಾರಿಸಿ ಮುತ್ತಿಕ್ಕಿ ಅವರ ಹೊಟ್ಟೆ ಕಂಕುಳಲ್ಲಿ ಕಚಗುಳಿಯೆಬ್ಬಿಸಿ ಗಲಗಲ ನಗಿಸಿ ಪೇಟೆಯಿಂದ ತಾನು ತರುವ ಸಕ್ಕರೆ ಮಿಠಾಯಿಗಳನ್ನ ಅವರ ಕೈಗೆ ಕೊಟ್ಟುˌ ಹಿಕರಿ ಬೇರುಗಳಿಂದ ಅವನೆ ಕೆತ್ತಿ ತಯಾರಿಸುತ್ತಿದ್ದ ಮಾಟವಾದ ಬಣ್ಣ ಹಚ್ಚಿ ಅಂಗಿ ಚಡ್ಡಿ ಫ್ರಾಕು ತೊಡಿಸಿ ತಲೆಬಾಚಿ ಕೂದಲು ಗಂಟು ಹಾಕಿದ ಗೊಂಬೆಗಳನ್ನ ನೀಡಿˌ ಕುದುರೆ ದನ ಎಮ್ಮೆ ಕುರಿ ಮೇಕೆ ಚಿರತೆ ಸಾರಂಗಗಳ ಪ್ರತಿಕೃತಿ ಬೊಂಬೆಗಳನ್ನ ಅವರ ಆಟಿಕೆಯನ್ನಾಗಿಸಿ ಅವರ ಮನಸೂರೆಗೊಳ್ಳುತ್ತಿದ್ದ. ಅವನ ತೋಟದ ಮನೆಯಲ್ಲೂ ಇವನ ಸ್ವಂತ ಮನೆಯಲ್ಲೂ ಎರಡೂ ಮಕ್ಕಳೂ ಗೋಪಿಯ ಪುನರಾಗಮನವನ್ನ ವಸಂತದ ಆಗಮನಕ್ಕೆ ಕಾತರಿಸಿ ಕತ್ತೆತ್ತಿ ಕಾಯುವ ಜಾತಕಪಕ್ಷಿಗಳಂತೆ ಕಾಯುತ್ತಿದ್ದವು.

ಚಳಿಗಾಲ ತೀವೃವಾಗಿದ್ದರೂ ಸಹ ದಿನಕ್ಕೆ ಕನಿಷ್ಠ ಒಂದು ಸಾರಿಯಾದರೂ ಗೋಪಿಯ ಸವಾರಿ ತಪ್ಪದೆ ಊರ ಎಲ್ಲೆಯಂಚಿನ ಬಳಿಯಿದ್ದ ಮಠಕ್ಕೆ ಹೋಗುತ್ತಿತ್ತು. ಬಾಬಯ್ಯನ ಮನ ಒಲಿಸಿ ಅವಳ ಮಗಳನ್ನ ತನ್ನ ಮಡದಿಯನ್ನಾಗಿಸಿ ಮದುವೆಗೆ ಸಮ್ಮತಿಸಿ ತನ್ನನ್ನೂ ಗೃಹಸ್ಥನನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಠದ ಗುರುಗಳೆಂದರೆ ಅವನಿಗೆ ವಿಪರೀತ ಭಯ ಭಕ್ತಿ. ಅನಕ್ಷರಸ್ಥನಾಗಿರುವ ಗೋಪಿಗೆ ನಾಲ್ಕಕ್ಷರ ಕಲಿಸುವ ಗುರುಗಳ ಪ್ರಯತ್ನದ ಸರಣಿಗಳೆಲ್ಲಾ ನೀರ ಮೇಲೆ ಹೋಮ ಮಾಡಿದಂತೆ ವಿಫಲವಾಗಿ ಅವನ ಮಡ್ಡ ಮಂಡೆಗೆ ಅರೆದು ಹಚ್ಚಿ ಅದರಲ್ಲೊಂದು ತೂತು ಕೊರೆದು ವರ್ಣಮಾಲೆಯನ್ನೆ ಮುದ್ದೆ ಮಾಡಿ ಆ ಒಟ್ಟೆಯೊಳಗೆ ಹಾಕಿ ತುಂಬಿದರೂ ಸಹ ನಾಲ್ಕಾಣೆಯ ಪ್ರಯೋಜನವಿಲ್ಲ ಅನ್ನೋದು ಮನದಟ್ಟಾದ ಮೇಲೆ ಗುರುಗಳು ಆ ಕಪ್ಪು ಕುದುರೆಯನ್ನ ಸರೋವರದ ನೀರಲ್ಲಿ ತಿಕ್ಕಿ ತಿಕ್ಕಿ ತೊಳೆದು ಬೆಳ್ಳಗಾಗಿಸುವ ಅಸಾಧ್ಯ ಕೆಲಸವನ್ನ ಕೈ ಬಿಟ್ಟು ಜಾಣರಾಗಿದ್ದರು.

ಬರವಣಿಗೆಯ ಅಕ್ಷರಭ್ಯಾಸ ಅತ್ತಲಾಗಿರಲಿ ಸಂವಹನದ ಸ್ಥಳಿಯ ಆಡುನುಡಿಯ ಕಲಿಕೆಯಲ್ಲೂ ಗೋಪಿ ಅಷ್ಟೆ ಮುಂದಿದ್ದ. ಆದರೆ  ಓದಿನಲ್ಲಿ ಹಿಂದೆ ಬಿದ್ದಿದ್ದರೂ ಕಸುಬುಗಳನ್ನ ಕಲಿಯುವುದರಲ್ಲಿ ಅವನು ಜಾಣ. ಮಠದ ಸಣ್ಣಪುಟ್ಟ ಮರಮತ್ತಿನ ಕೆಲಸಗಳಿಗೆ ಗೋಪಿಯಿಲ್ಲದೆ ಗತಿಯಿಲ್ಲ ಅನ್ನುವ ಮಟ್ಟಿಗೆ ಗೋಪಿ ಗುರುಗಳಿಗೆ ಇತ್ತೀಚೆಗೆ ಅನಿವಾರ್ಯ ಭಂಟನಾಗಿದ್ದ. ಬಾಬಯ್ಯನ ಮನೆಯ ಪರಿಸ್ಥಿತಿಯ ಅರಿವಿದ್ದ ಗುರುಗಳು ಬಿಟ್ಟಿ ದುಡಿಸಿಕೊಳ್ಳದೆ ತಪ್ಪದೆ ಅವನ ಶ್ರಮಕ್ಕೆ ತಕ್ಕ ಪ್ರತಿಫಲ ಕೊಡುತ್ತಿದ್ದರು. ಅದನ್ನ ಪಡೆಯಲು ಸಂಕೋಚಿಸುವ ಗೋಪಿಗೆ ಅಧ್ಯಾತ್ಮ ಬೇರೆˌ ಲೌಕಿಕದ ಬದುಕು ಬೇರೆ ಎಂದು ಬೈದು ಬುದ್ಧಿ ಹೇಳಿದ್ದರವರು. ಇತ್ತೀಚೆಗೆ ಗೋಪಿ ಪೋಲಿ ಪುಟ್ಟನಾಗಿರುವ ಸುದ್ದಿ ಇನ್ನೂ ಗುರುಗಳ ಕಿವಿಗೆ ಬಿದ್ದಿಲ್ಲದೆಯಿರುವುದರಿಂದ ಅವರಿಂದ ಕಿವಿ ಹಿಂಡಿಸಿಕೊಳ್ಳದೆ ಗೋಪಿ ಬಚಾವಾಗಿದ್ದ. ಪಾಪಮ್ಮನ ವಾಲಗದ ಆಲಾಪದ ಧ್ವನಿ ಮಠದ ಕೊಟ್ಟಿಗೆ ದಾಟಿ ಮೊಗಸಾಲೆ ಮುಟ್ಟಲಿದ್ದ ದಿನ ಮಾತ್ರ ಅವನಿಗೆ ಗ್ರಹಚಾರ ಕಾದಿರುತ್ತಿತ್ತು.




https://youtu.be/hX5D3uSg42o


https://youtu.be/X6NTxZnjKu0



https://youtu.be/hOuX5UHHnSY


https://youtu.be/z15Jk3W9Xg0



03 February 2022

ಅವನ ಜೊತೆ ಅವಳ ಕಥೆ.....೫

ಅವಳ ಜೊತೆ ಅವನ ಕಥೆ....



"ಹಾದಿಗುಂಟ ಹಿಮದ ಹಾಸು
ಮುಗಿಯಲೊಲ್ಲದು ಚಳಿಗಾಳಿಯ ಬೀಸುˌ
ಬಾಳ ನೊಗಕ್ಕೆ ಬಿಗಿದ ಅಶ್ವದಂತಾಗಿರುವಾಗ ಜೀವನ
ಈ ಶಿಶಿರದ ಹಿಮನ ಹೊಡೆತವೆಲ್ಲ ಅಕ್ಷರಶಃ ತೃಣ."


ತನ್ನ ಹಾಗೂ ತನ್ನನ್ನ ನಂಬಿ ಬಂದವಳ ರಕ್ಷಣೆಯ ಹೊಣೆಯ ಭಾರ ಅವನದಾಗಿತ್ತು. ಹಾಗಂತ ಪಟ್ಟಣದ ಈ ವ್ಯವಹಾರ ನಿಮಿತ್ತ ಯಾತ್ರೆಯನ್ನೂ ಕಡೆಗಣಿಸವಂತಿರಲಿಲ್ಲ. ಇವೆಲ್ಲಾ ಕಾರಣಗಳಿಂದ ಅವನು ಅಂದು ಪಟ್ಟಣ ಮುಟ್ಟಿ ಬಾಕಿ ವಸೂಲಿಯ ಕೆಲಸ ಮೊದಲು ಮುಗಿಸಿ ಅನಂತರ ತನಗೆ ಈ ಚಳಿಗಾಲದಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ಕಲ್ಲಿದ್ದಲು ಕೊಂಡುˌ ಉಳಿದಂತೆ ದಿನಸಿ ಪದಾರ್ಥಗಳನ್ನಷ್ಟು ಖರೀದಿಸಿ ಜೊತೆಗೆ ಔಷಧಿಗಳ ತಯಾರಿಕೆಗಾಗಿ ಚೂರು ಪೂರ್ವದ ಸಾಂಬಾರ ಪದಾರ್ಥಗಳನ್ನೂ ಕೊಂಡುಕೊಳ್ಳಬೇಕಿತ್ತು. ಅಷ್ಟರಲ್ಲಿ ಮಧ್ಯಾಹ್ನದ ಊಟದ ಹೊತ್ತಾಗಿರುವ ಸಂಭವವಿದ್ದುˌ ಕೊಟ್ಟ ಕೊನೆಗೆ ಅವಳು ಕೊಟ್ಟ ಪಟ್ಟಿಯಲ್ಲಿದ್ದ ಉಣ್ಣೆಯ ಉಂಡೆˌ ಕ್ರೋಷಾ ಕಡ್ಡಿˌ ಹೊಲಿಗೆಯ ನೂಲುˌ ಬೇರೆ ಬೇರೆ ಗಾತ್ರಗಳ ಸೂಜಿ ಹೀಗೆ ಅವಳ ಕರಕೌಶಲದ ಕೆಲಸದ ವಸ್ತುಗಳಲ್ಲವನ್ನೂ ಖರೀದಿಸಿ ಊರ ಕಡೆಗೆ ಹೊರಡಲೆಬೇಕಿತ್ತು. ಹಗಲು ಬೇರೆ ಕಿರಿದಾಗಿರುವ ಈ ಚಳಿಗಾಲದ ಶೀತ ಮಾರುತ ನಿರ್ದಯವಾಗಿ ಹಾಕಿ ಚಚ್ಚುತ್ತಿರುವ ವಿಷಮಕಾಲದಲ್ಲಿ ಎಷ್ಟು ಬೇಗ ಹಿಂದಿರುಗಿ ಮನೆಯತ್ತ ಮರುಪ್ರಯಾಣ ಆರಂಭಿಸಿದರೂ ಅಷ್ಟು ಒಳ್ಳೆಯದು ಎನ್ನುವ ಪರಿಸ್ಥಿತಿ ಇತ್ತು. ಹೀಗಾಗಿ ದಿಕ್ಸೂಚಿಯ ಮಾರ್ಗದರ್ಶನದಂತೆ ಮುನ್ನಡೆಯುತ್ತಾ ಸುಲ್ತಾನನನ್ನ ಅವನು ಆದಷ್ಟು ವೇಗವಾಗಿ ನಡೆಯುವಂತೆ ಹುರಿದುಂಬಿಸುತ್ತಲಿದ್ದ. ಆದರೆ ಕುದುರೆಯ ಪ್ರತಿಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿರದೆಯಿರೋದು ಅವನ ಅರಿವಿಗೆ ಬಂತು. ನಿತ್ಯದ ಆಹ್ಲಾದಮಯ ನಡುವಳಿಕೆ ಅಂದು ಅಶ್ವದಲ್ಲಿ ಕಾಣ ಸಿಗಲಿಲ್ಲ.


ಹೀಗೆ ಮುನ್ನಡೆಸುತ್ತಿದ್ದಾಗ ಸುಲ್ತಾನ ಇದ್ದಕ್ಕಿದ್ದಂತೆ ತನ್ನ ಮುಖ ಕೊಡವ ತೊಡಗಿದ. ಚಳಿಯ ತೀವೃತೆಗೆ ಉಸಿರೆ ಹಿಮಗಟ್ಟಿ ಮೂಗಿನ ಹೊಳ್ಳೆಗಳು ಮಂಜಿನಿಂದ ಮುಚ್ಚಿ ಹೋಗಿ ಉಸಿರಾಡಲು ಕಷ್ಟವಾಗುವಾಗ ಕುದುರೆಗಳು ಹೀಗೆ ವರ್ತಿಸುವುದು ಸಹಜ. ಕೂಡಲೆ ಕೆಳಗೆ ಹಾರಿದವನೆˌ ಸುಲ್ತಾನನ ಬೆನ್ನ ಮೇಲಿನ ಕೊಂಚ ಜಾರಿ ಹೋದಂತಿದ್ದ ಮಂದರಿಯನ್ನ ಇನ್ನಷ್ಟು ಸರಿಯಾಗಿ ಹೊದಿಸಿ ಬೆನ್ನಿಗೆ ಸಿಕ್ಕಿಸಿಕೊಂಡಿದ್ದ ಕಿರು ಸುತ್ತಿಗೆ ಹೊರಗೆಳೆದು ಅದರಿಂದ ಸುಲ್ತಾನನ ಮೂತಿ ಮೇಲೆತ್ತಿ ಅವನ ಮೂಗಿನ ಹೊಳ್ಳೆಯ ತುಂಬಿ ಹೋಗಿದ್ದ ಮಂಜನ್ನ ಬಿಡಿಸಿ ತೆಗೆಯ ತೊಡಗಿದ. ಬಲ ಹೊಳ್ಳೆ ತೆಗೆದವ ಎಡಗಡೆಯ ಹೊಳ್ಳೆಯದನ್ನೂ ಇನ್ನೇನು ಕೆರೆದು ತೆಗೆದು ಹೊರಗೆಳೆದು ತೆಗೆಯುವಷ್ಟರಲ್ಲಿ ಸುಲ್ತಾನ ಮತ್ತೆ ತಲೆಕೊಡವಿ ಇವನ ಹಿಡಿತ ಮೀರಿ ಬಲವಾಗಿ ಸೀನಿದ ಪರಿಣಾಮ ಕುದುರೆಯ ಮೂಗಿನ ಎಡಹೊಳ್ಳೆಗೆ ಕಟ್ಟಿಕೊಂಡಿದ್ದ ಹಿಮದ ಪರದೆ ತೂಬು ಒಡೆದ ಕೆರೆಯ ಕೋಡಿಯಂತೆ ಕಿತ್ತು ಎಗರಿ ಹೋದದ್ದಷ್ಟೆ ಅಲ್ಲದೆ ಅದರಿಂದ ಧಾರಾಳವಾಗಿ ಹಳದಿ ಲೋಳೆ ಲೋಳೆ ಸಿಂಬಳದ ಧಾರೆಯೆ ಮುನ್ನುಗ್ಗಿ ಸುರಿದು ಬಂತು. ಕೂಡಲೆ ಅದರ ಮುನ್ಸೂಚನೆ ಗ್ರಹಿಸಿ ಅವನು ಬಲಗಡೆ ಎಗರಿದನಾದರೂ ಸಿಂಬಳದ ಕೆಲವು ಹನಿಗಳ ಸಿಡಿತದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. 


ಕುದುರೆ ಸಿಂಬಳದ ಧಾರೆ ಸುರಿಸುರಿಸುತ್ತಲೆ ಮತ್ತೊಮ್ಮೆ ಪ್ರಚೋದನೆಗೆ ಒಳಗಾದಂತೆ ಬಲವಾಗಿ ತಲೆಯಿತ್ತಿ ಸೀನಿತಾದರೂ ಅದೂ ಸಹ ಇನ್ನಷ್ಟು ಹಳದಿ ಹಸುರು ಲೋಳೆಯ ಒಡಕು ಹಾಲಿನಂತಹ ಗೊಣ್ಣೆಗಟ್ಟಿದ ಸಿಂಬಳವನ್ನ ಎಡಹೊಳ್ಳೆಯಿಂದಲೆ ಸುರಿಸುತ್ತಾ ನಿಂತಿತು. ಈಗ ಅವನಿಗೆ ಸುಲ್ತಾನನ ಅನ್ಯ ಮನಸ್ಕತೆಯ ಕಾರಣ ಹೊಳೆಯಿತು. ಪಾಪˌ ಶೀತಗಾಳಿಯ ಹೊಡೆತಕ್ಕೆ ಲಾಯದೊಳಗೆ ಬೆಚ್ಚಗೆ ಕೊಟ್ಟಿಗೆಯ ಇತರ ಪಶುಗಳ ಮೈ ಶಾಖ ಹಾಗೂ ಎಡೆಬಿಡದೆ ತಾನು ಉರಿಸುತ್ತಿರುವ ಅಗ್ಗಿಷ್ಟಿಕೆಯ ಹಿತವಾದ ಬೆಚ್ಚಗಿನ ವಾತಾವರಣದ ನಡುವೆಯೂ ಸುಲ್ತಾನನಿಗೆ ಶೀತವಾಗಿದೆ. ಅದರ ಬಾಧೆ ತಲೆಯವರೆಗೆ ಏರಿ ಸಿಂಬಳದ ಗಟ್ಟಿ ಹೊಳ್ಳೆಯುದ್ದ ಮೆದುಳ ತನಕ ಕಟ್ಟಿಕೊಂಡದ್ದೆ ಕುದುರೆ ಚಡಪಡಿಸುತ್ತಾ ಸರಿಯಾಗಿ ಉಸಿರಾಡಲಾಗದೆ ಹೇಗ್ಹೇಗೆಯೋ ಆಡುತ್ತಿರಲು ಕಾರಣ. 


ಇದನ್ನ ಮೂಲದಲ್ಲೆ ಚಿವುಟಿ ಹಾಕಬೇಕು. ಇಲ್ಲದಿದ್ದರೆ ತಿಂಗಳುಗಟ್ಟಲೆ ಕುದುರೆ ಕಾಯಿಲೆ ಬೀಳುವ ಸಂಭವವಿತ್ತು. ಕುದುರೆಗಳು ದೈಹಿಕ ಕ್ಷಮತೆಯ ವಿಷಯಗಳಲ್ಲಿ ತುಂಬಾ ಸೂಕ್ಷ್ಮ. ಅವು ಅಷ್ಟು ಶ್ರಮಜೀವಿಗಳೋ ಅಷ್ಟೆ ಆರೋಗ್ಯದ ವಿಷಯದಲ್ಲಿ ಬೇಗ ಸೋಂಕುಗಳಿಗೆ ಬಲಿಯಾಗುತ್ತವೆ. ಮನುಷ್ಯರಂತೆ ಅವಕ್ಕೂ ಚಳಿ ಜ್ವರ ನೆಗಡಿ ಆಗೋದಿದೆ. ಹುಚ್ಚುನಾಯಿ ಅಥವಾ ಹಾವಿನ ಕಡಿತಕ್ಕೆ ಒಳಗಾಗುವ ಮನುಷ್ಯನ ಹಾಗೂ ಕುದುರೆಯ ಇಬ್ಬರ ಅನಂತರದ ನಡುವಳಿಕೆಗಳಲ್ಲೂ ಹೆಚ್ಚಿನ ಅಂತರವಿರುವುದಿಲ್ಲ. ಮಾನವರಂತೆಯೆ ಕುದುರೆಗಳೂ ಕೂಡ ಸೂಕ್ತ ಸಮಯದ ಮಿತಿಯಲ್ಲಿ ಸಿಗುವ ಚಿಕಿತ್ಸೆಗೆ ಸ್ಪಂದಿಸಿ ಸರಿಯಾದ ಔಷಧೋಪಚಾರಗಳಿಂದ ಚೇತರಿಸಿಕೊಳ್ಳುತ್ತವೆ. ಒಂದೊಮ್ಮೆ ವೈದ್ಯಕೀಯ ನೆರವಿನ ಅಲಭ್ಯತೆ ಎದುರಾದಲ್ಲಿ ಥೇಟ್ ಮಾನವರಂತೆಯೆ ನರಳುತ್ತಾ ಆ ರೋಗ ರುಜಿನ ವಿಷಪ್ರಾಶನದಿಂದ ಅಸಹಾಯಕವಾಗಿ ಸಾಯುತ್ತದೆ.



ಇವನಿಗೀಗ ಸುಲ್ತಾನನ ಆರೋಗ್ಯದ ವಿಚಾರವೆ ಮುಖ್ಯವಾಯಿತು. ಪೇಟೆ ಮನೆಗೆ ಹೋದ ಮೇಲೆ ಒಂದು ಹಂತಕ್ಕೆ ಚಿಕಿತ್ಸೆ ನೀಡಬಹುದಾಗಿದ್ದರೂˌ ಅದಿನ್ನೂ ಹನ್ನೆರಡು ಮೈಲಿ ಅಂತರದ ವಿಚಾರ. ತಕ್ಷಣಕ್ಕೆ ಸರಳ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಪ್ರಥಮ ಚಿಕಿತ್ಸೆ ನೀಡದಿದ್ದರೆ ಪರಿಸ್ಥಿತಿ ಕೈ ಮೀರುವ ಸಂಭವವೂ ಇದ್ದೆ ಇತ್ತು. ಆದರೆ ಅವನ ದುರಾದೃಷ್ಟಕ್ಕೆ ಅವರಿಬ್ಬರೂ ಈ ಹಿಂದುಮುಂದಿಲ್ಲದ ಹಿಮಧಾರೆಯಷ್ಟೆ ಖಚಿತವಾಗಿರುವ ಕಾಡ ಹಾದಿಯಲ್ಲಿ ಪ್ರಯಾಣದ ನಡುವೆ ಸಿಕ್ಕು ಹಾಕಿಕೊಂಡಿದ್ದರು. ಕೊಂಚ ಮೆದುಳಿಗೆ ಕೆಲಸ ಕೊಟ್ಟು ದಿಕ್ಸೂಚಿಯನ್ನ ತಿರುಗಿಸಿ ತಾನಿರುವ ನೆಲೆಯನ್ನ ಮನಸಿನೊಳಗೆ ಲೆಕ್ಕ ಹಾಕಿ ಖಚಿತ ಪಡಿಸಿಕೊಂಡವನಿಗೆ ಅಲ್ಲಿಂದ ಒಂದೂವರೆ ಮೈಲಿಯಷ್ಟು ದೂರ ಎಡಕ್ಕೆ ಇಲ್ಲಿನ ಸ್ಥಳಿಯ ಬುಡಕಟ್ಟಿನವರ  ಹಾಡಿಯಿರುವುದು ನೆನಪಿಗೆ ಬಂತು. ಆ ಹಾಡಿಯ ಜನರೆಲ್ಲಾ ಈ ನವ ವಲಸೆಗಾರರ ಹಾವಳಿಯಿಂದ ಬೇಸತ್ತುˌ ಇವರ ಒತ್ತುವರಿಯನ್ನ ಪ್ರತಿಭಟಿಸಲಾರದೆ ತಮ್ಮ ನೆಲೆಯ ವ್ಯಾಪ್ತಿ ದಿನದಿಂದ ದಿನಕ್ಕೆ ಕಿರಿದಾಗುತ್ತಾ ಸಾಗಿˌ ತಮ್ಮ ಸಾಂಪ್ರದಾಯಿಕ ಸಂಚಾರದ ರಸ್ತೆಗಳ ಮೇಲೆಲ್ಲಾ ಹೊಸ ಹೊಲಮನೆಗಳೆದ್ದು ಅಲ್ಲಿ ನೆಲೆ ನಿಂತವರು ಬೇಲಿ ಬಿಗಿದು ಸಾಮಾನ್ಯ ಸಂಚಾರಿ ಮಾರ್ಗಗಳೂ ಸಹ ಮುಚ್ಚಿಹೋಗಿ ಕೆಂಗೆಟ್ಟಂತಾಗಿ ಕಡೆಗೆ ತಾವೆ ಈ ನಿರಂತರ ಕಿರುಕುಳಗಳಿಂದ ಬೇಸತ್ತವರಂತೆ ತಮ್ಮ ತಮ್ಮ ಗಂಟೂ ಮೂಟೆ ಕಟ್ಟಿಕೊಂಡು ಈ ಚಳಿಗಾಲ ಆರಂಭವಾಗುವ ಮೊದಲೆ ಆ ನೆಲೆಯನ್ನ ಶಾಶ್ವತವಾಗಿ ತೊರೆದು ಇನ್ನಷ್ಟು ಪಶ್ಚಿಮದ ಕಾಡುಗಳತ್ತ ಒಲ್ಲದ ಮನಸ್ಸಿನಿಂದಲೆ ಜನ ಜಾನುವಾರು ಸಹಿತ ವಲಸೆ ಹೋಗಿಯಾಗಿತ್ತು. 


ಈಗ ಆ ಹಾಡಿ ಒಂಥರಾ ಯಜಮಾನರಿಲ್ಲದ ಮೌನ ಸ್ಮಶಾನದಂತಹ ಜಾಗವಾಗಿದೆ. ಸದ್ಯಕ್ಕೆ ಅಲ್ಲಿ ಯಾರೂ ವಾಸವಿಲ್ಲ. ಇವನೂ ಸಹ ಈಗಲ್ಲಿಗೆ ಹೋಗದೆ ವಿಧಿಯಿರಲಿಲ್ಲ. ಸಾಧಾರಣ ಶೀತ ವಿಪರೀತ ನೆಗಡಿಯಾಗಿ ಕುದುರೆಯ ಜೀವ ಹಿಂಡಿ ಹಿಪ್ಪೆ ಮಾಡುವುದನ್ನ ತಡೆಯಲು ಅದರ ಸಿಂಬಳದ ಲೋಳೆಗಳೆಲ್ಲವನ್ನ ತೊಳೆದು ತೆಗೆದು ಅನಂತರ ಪ್ರಥಮ ಚಿಕಿತ್ಸೆ ನೀಡಲು ಅವನಿಗೆ ಕೊಂಚ ಬಿಸಿನೀರಿನ ಅವಶ್ಯಕತೆಯಿತ್ತು. ಸುತ್ತಲೂ ನೀರಿನ ಗಟ್ಟಿಯೆ ಸುರಿದು ಹಿಮದ ರೂಪದಲ್ಲಿ ಶೇಖರಣೆಯಾಗಿದ್ದರೂ ಸಹ ಮನುಷ್ಯ ನೆಲೆಯೊಂದರಲ್ಲಿ ಸದ್ಯ ನೆರವನ್ನ ಹುಡುಕದೆ ಗತ್ಯಂತರವೆ ಇರಲಿಲ್ಲ. ಹಾಗೊಮ್ಮೆ ನಿರ್ಲಕ್ಷ್ಯ ವಹಿಸಿದರೆ  ಪರಿಸ್ಥಿತಿ ಕೈಮೀರಿ ಹೋಗುವ ಸಂಭವವಿತ್ತು ಹಾಗೂ ರೈತನಷ್ಟೆ ಅಲ್ಲದೆ ಉತ್ತಮ ಗೌಳಿಯೂ ಅಶ್ವರೋಹಿಯೂˌ ರಥಿಕನೂ ಆಗಿದ್ದ ಅವನಿಗೆ ತನ್ನ ಕೊಟ್ಟಿಗೆಯ ಪಶುಗಳ ಆಯುರಾರೋಗ್ಯ ತನ್ನ ಕುಟುಂಬದ ಕ್ಷೇಮ ಸಮಾಚಾರದಷ್ಟೆ ಮುಖ್ಯವಾಗಿತ್ತು.


ನಿರುತ್ಸಾಹಿಯಂತಾಗಿದ್ದ ಸುಲ್ತಾನನ್ನ ಹುರಿದುಂಬಿಸುತ್ತಾ ಮುನ್ನಡೆಸುತ್ತಾ ಆತ ಆ ಹಾಡಿಯತ್ತ ಅಡ್ಡದಾರಿ ಹಿಡಿದು ಮುನ್ನಡೆದ. ಒಂದರ್ಧ ತಾಸು ಕಳೆಯುವಷ್ಟರಲ್ಲಿ ಅವರಿಬ್ಬರೂ ಆ ಹಾಡಿಯನ್ನ ಒಂದು ಮುಟ್ಟಿದ್ದರು.

***********


"ಜೀವಕಳೆ ಮರೆತಿತುˌ
ಪ್ರೇತಕಳೆಗೆ ಮರಳಿತು"


ಒಂದಾನೊಂದು ಕಾಲದಲ್ಲಿ ನಳನಳಿಸುತ್ತಾ ಅಜ್ಜಂದಿರ ಕೆಮ್ಮುˌ ಅಮ್ಮಂದಿರ ಲಾಲಿ ಬೈಗುಳ ಮುಚ್ಚಟೆˌ ಅಪ್ಪಂದಿರ ದಂಡನೆ ತರಬೇತಿ ಶಿಸ್ತುˌ ಹದಿ ಹರೆಯದವರ ಪ್ರೀತಿ ಪ್ರೇಮದ ಪ್ರಣಯ ಚೇಷ್ಟೆಗಳುˌ ಎಳೆಯರ ತುಂಟಾಟದ ಪರಮಾವಧಿˌ ಅಜ್ಜಿಯಂದಿರ ಕುಟ್ಟಾಣಿಯ ಸದ್ದುˌ ಅಡುಗೆ ಮನೆಗಳಲ್ಲಿ ರೊಟ್ಟಿ ತಟ್ಟುವ ಸದ್ದನ್ನ ಕೂಡಿ ಹಾಡಿಯೆಲ್ಲ ಪಸರಿಸುತ್ತಿದ್ದ ಶಿಕಾರಿಯಾದ ಸಾರಂಗದ್ದೊ ಇಲ್ಲಾ ಕಾಡೆಮ್ಮೆಯದ್ದೋ ಮಾಂಸ ಒಲೆಯ ಉರಿಯ ಮೇಲೆ ದೊಡ್ಡ ಮರಿಗೆಯಲ್ಲಿ ಬೇಯುತ್ತಿದ್ದ ಘಮ ಇವೆಲ್ಲಾ ತುಂಬಿ ಕಳೆಕಳೆಯಾಗಿದ್ದಿರಬಹುದಾದ ಹಾಡಿ ಪ್ರೇತ ಕಳೆ ಹೊತ್ತು ಚಳಿಯ ನಡುಕ ತಾಳಲಾರದೆ ಸ್ಮಶಾನ ಮೌನ ಹೊದ್ದು ಅವಸಾನದ ಕ್ಷಣಕ್ಕೋಸ್ಕರವೆ ಕಾಯುತ್ತಾ ನಿರ್ಜೀವ ಕಣ್ಗಳಲ್ಲಿ ಕನಸೆ ಇಲ್ಲದಂತೆ ಜೀವಚ್ಛವವಾಗಿ ಕೊಳಕು ಚಾಪೆಯೊಂದರ ಮೇಲೆ ದೀರ್ಘ ಶ್ವಾಸವನ್ನೆಳೆದುಕೊಳ್ಳುತ್ತಾ ಮಲಗಿರುವ ವಯೋವೃದ್ಧನಂತೆ ದೂರದಿಂದಲೆ ಗೋಚರಿಸುತ್ತಿತ್ತು. 



ಇಡಿ ಹಾಡಿ ನರ ಮನುಷ್ಯರ ವಾಸವಿಲ್ಲದೆ ಬಿಕೋ ಅನ್ನುತ್ತಿತ್ತು. ಸೂಕ್ತ ನಿರ್ವಹಣೆಯ ಹೊರತಾಗಿಯೂ  ಮಣ್ಣಿನ ಗೋಡು ಸರೋವರದ ಬದಿಯ ಹುಲ್ಲಿನ ಹೆಪ್ಪು ಸವರಿ ನಿರ್ಮಿಸಿದ್ದ ಗೋಡೆಗಳ ಮೇಲೆ ಸೀಳಿದ ಪೈನ್ ತೊಲೆಗಳನ್ನ ಏರಿಸಿ ಅದಕ್ಕೆ ಹಾಕಿದ್ದ ರೈ ಹುಲ್ಲಿನ ಛಾವಣಿಯ ಗುಡಿಸಲುಗಳು ಅಲ್ಲೊಂದು ಇಲ್ಲೊಂದು ಗೋಡೆ ಜರಿದದ್ದೋ ಇಲ್ಲವೆ ಚಳಿಗಾಳಿಗೆ ಛಾವಣಿ ಎಗರಿ ಹೋಗಿರೋದೋ ಬಿಟ್ಟರೆ  ಬಾಕಿ ಉಳಿದಂತೆ ಭದ್ರವಾಗಿಯೆ ಇತ್ತು. ಅಂತಹ ಜರಿದಿದ್ದ ಗೋಡೆಯೊಂದರ ಒಳಗಿನ ಕೋಣೆಗೆ ಸುಲ್ತಾನನ್ನು ಇವನು ಮುನ್ನಡೆಸಿದ. ಆ ಗುಡಿಸಲುಗಳ ತಲೆ ಬಾಗಿಲುಗಳು ಮನುಷ್ಯರೆ ತಗ್ಗಿ ಬಗ್ಗಿ ಹೋಗುವಷ್ಟು ಕಿರಿದಾಗಿರುತ್ತಿದ್ದುˌ ಹಾಗೆಲ್ಲಾ ಕುದುರೆಗಳು ಪ್ರವೇಶಿಸಲು ಸಾಧ್ಯವೆ ಇಲ್ಲದಂತಿದ್ದವು. ಹೀಗಾಗಿ ಕುಸಿದು ಬಿದ್ದಿದ್ದ ಗೋಡೆಯೆ ಗತಿಯಾಯ್ತು ಒಳ ನುಗ್ಗಲು. ಒಳಗೆ ಹೊರಗಿನ ಹಿಮದ ಹೊಡೆತದ ಹೊರತಾಗಿಯೂ ತಕ್ಕಮಟ್ಟಿಗೆ ಬೆಚ್ಚಗಿನ ಹಿತಕರ ವಾತಾವರಣವೆ ಇತ್ತು. ಮನೆಯ ಒಳಗೆಲ್ಲಾ ಒಂಥರಾ ಆ ಬುಡಕಟ್ಟಿನವರ ಮೈ ಗಂಧದ ಘಮ ಇನ್ನೂ ಆವರಿಸಿಕೊಂಡೆ ಇದ್ದಂತೆ ಅವನಿಗೆ ಭಾಸವಾಯಿತು. ಅದಕ್ಕೂ ಹೊರತಾದ ಇನ್ಯಾವುದೋ ಸುಪರಿಚಿತ ವಾಸನೆ ಅವನ ಮೂಗಿಗೆ ಅಡರಿತು. ಹೌದು! ಇದು ಎಮ್ಮೆತೋಳಗಳದ್ದೆ ಮೈಯ ನಾತ. ತೋಳಗಳ ಮೈಗಂಧ ಹೆಚ್ಚು ಕಡಿಮೆ ಸಾಕು ನಾಯಿಗಳ ಮೈ ವಾಸನೆಯನ್ನೆ ಹೋಲುತ್ತದೆ. ಆದರೆ ಕಾಡುವಾಸಿಗಳಾದ ಅವುಗಳ ಮೈ ಗಂಧ ಮನೆಯ ನಾಯಿಗಳಿಂದಲೂ ಕಟುವಾಗಿರುತ್ತದೆ. ಅಂದರೆ ಇಲ್ಲಿಗೆ ತೋಳಗಳು ಇತ್ತೀಚೆಗೆ ಧಾಳಿಯಿಟ್ಟಿವೆ! ಸಾಮಾನ್ಯವಾಗಿ ಸ್ಥಳಿಯ ಬುಡಕಟ್ಟಿನವರದು ವನ್ಯಮೃಗಗಳ ಜೊತೆಗೆ ಸಹಬಾಳ್ವೆ. ಇತ್ತಂಡಗಳೂ ಇನ್ನೊಬ್ಬರ ವಾಸಸ್ಥಳದ ಗಡಿ ಮೀರದೆ ಒಬ್ಬರಿಗೊಬ್ಬರು ಹೊಂದಿಕೊಂಡೆ ಬದುಕುವುದನ್ನ ಕಲಿತು ಶತಮಾನಗಳಿಂದ ಸೌಹಾರ್ದಯುತವಾಗಿ ಬಾಳುತ್ತಲೂ ಇದ್ದರು. ತೋಳಗಳ ಸಹಜಾಹಾರವಾದ ಕಾಡಿನ ಕೆಲವು ಸಸ್ಯಾಹಾರಿ ಪ್ರಾಣಿಗಳನ್ನ ಬೇಟೆಯಾಡಿ ಅವುಗಳ ಅನ್ನದ ತಟ್ಟೆಗೆ ಮನುಷ್ಯ ಮೃಗ ಕೈ ಹಾಕುತ್ತಿದ್ದುದು - ಕೆಲವೊಮ್ಮೆ ಚರ್ಮದ ಅಗತ್ಯಗಳಿಗಾಗಿ ಎಮ್ಮೆತೋಳಗಳಲ್ಲೆ ಕೆಲವನ್ನ ಹೊಡೆದುರುಳಿಸಿ ಶಿಕಾರಿ ಮಾಡುತ್ತಿದ್ದುದನ್ನ ಬಿಟ್ಟರೆˌ ತೋಳಗಳು ತಾವಾಗಿ ಹಾಡಿಗಳತ್ತ ಸುಳಿಯೋದಾಗಲಿˌ ಮನುಷ್ಯ ಅವಾಸದ ಸುತ್ತಮುತ್ತ ಹೊಂಚು ಹಾಕಿ ಅವರ ಸಾಕೆಮ್ಮೆˌ ದನˌ ಕುರಿˌ ಮೇಕೆˌ ಹಂದಿಗಳನ್ನ ಹಿಡಿದು ಕೊಂದು ತಿಂದದ್ದಾಗಲಿ ಅಲ್ಲಿನ ಇತಿಹಾಸದಲ್ಲೆ ಕಂಡು ಕೇಳರಿಯದ ಸಂಗತಿಯಾಗಿತ್ತು! ಈ ಆಕ್ರಮಣಕೋರ ನವ ವಸಾಹತುಶಾಹಿಗಳು ದೂರದ ನಾಡಿನಿಂದ ಬಂದು ಇಲ್ಲಿಯ ಭೂಮಿಯ ಹಾಗೂ ನೈಸರ್ಗಿಕ ಸಂಪತ್ತುಗಳ ಮೇಲೆ ತಮ್ಮ ಹಕ್ಕು ಸಾಧಿಸುವ ತನಕ.



ಇದ್ದಕ್ಕಿದ್ದಂತೆ ಜನಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗಿ ಕ್ರಮೇಣ ಒಳನಾಡುˌ ಗುಡ್ಡಗಾಡು ಪ್ರದೇಶಗಳತ್ತಲೂ ಜನಸಾಂದ್ರಂತೆ ಒತ್ತಿಕೊಂಡು ಬಂತು. ಅವರೆಲ್ಲರೂ ರೈತಾಪಿ ಹಾಗೂ ಕಾರ್ಮಿಕ ವರ್ಗದವರಾಗಿದ್ದರು. ಮಾಂಸ ಹಾಗೂ ಚರ್ಮಕ್ಕೆ ಶಿಕಾರಿ ವಿಪರೀತ ಹೆಚ್ಚಿತುˌ ಈ ಹಿಂದೆ ಆದಿವಾಸಿಗಳು ಬೇಟೆಯಾಡಿದರೂ ಈ ವಸಾಹತು ಹೂಡಲು ಬಂದವರಷ್ಟು ನಿರ್ದಯವಾಗಿ ಬಂದೂಕು ಬಳಸಿ ಅಗತ್ಯ ಮೀರಿ  ವನ್ಯಜೀವಿಗಳನ್ನ ಅವರೆಂದೂ ಕೊಂದು ರಾಶಿ ಹಾಕಿರಲಿಲ್ಲ. ಹೀಗಾಗಿ ಒಂದು ಸ್ಥಿರತೆ ಅವುಗಳ ಸಂಖ್ಯೆಯಲ್ಲೂ ಉಳಿದಿತ್ತು. ಈಗ ಅದೆಲ್ಲಾ ತಲೆ ಕೆಳಗಾಗಿ ಬೇಟೆಯಾಡುವ ಹಿಂಸೃಕ ಪ್ರಾಣಿಗಳ ಸಂಖ್ಯೆಗಿಂತ ಅವುಗಳ ಬೇಟೆಯಾಗಿದ್ದ ಸಾಧು ಪ್ರಾಣಿಗಳ ಸರಾಸರಿ ಶೋಚನೀಯವಾಗಿ ಕುಸಿದು ಎಮ್ಮೆತೋಳಗಳು ಮೇಯಿಸಲು ಬಿಟ್ಟ ಸಾಕು ಪ್ರಾಣಿಗಳನ್ನ ಹೊತ್ತೊಯ್ಯುವ ದೈನೇಸಿ ಸ್ಥಿತಿಗೆ ಬಂದು ಮುಟ್ಟಿದವು. ಗುಂಪುಗುಂಪಾಗಿ ಚಲಿಸುವ ಗುಣದ ಅವು ಕೆಲವೊಮ್ಮೆ ತಮ್ಮ ಸುಷುಪ್ತಿಯಲ್ಲಿ ಅಚ್ಚಾಗಿರುವ ಪರಿಧಿಯ ದಾರಿಗಳಿಗೆ ಅಡ್ಡಲಾಗಿ ಎದ್ದ ತೋಟದ ಮನೆಗಳಿಂದ ಭದ್ರವಾದ ವ್ಯವಸ್ಥೆಯಿಲ್ಲದ ಕೊಟ್ಟಿಗೆˌ ರೊಪ್ಪ ಹಾಗೂ ಲಾಯಗಳಿಗೂ ದಾಳಿಯಿಟ್ಟು ಕುರಿˌ ಕರುˌ ಕುದುರೆಮರಿˌ ಹಂದಿˌ ಕೋಳಿˌ ಬಾತು ಹೀಗೆ ಸಿಕ್ಕಿದ್ದನ್ನ ಸಿಗಿದು ತಿನ್ನುವ ಲೂಟಿಗೂ ಇಳಿದವು. ಇದು ಸಹಜವಾಗಿ ಮನುಷ್ಯ ಹಾಗೂ ಮೃಗಗಳ ನಡುವಿನ ತಿಕ್ಕಾಟ ಹಾಗೂ ನಿರಂತರ ಸಂಘರ್ಷಕ್ಕೆ ಮೂಲವಾಯಿತು. ಇದರ ಸಂಪೂರ್ಣ ಹೊಣೆಗಾರಿಕೆಯೂ ಮಾನವ ಮೃಗದ್ದೆ ಆಗಿತ್ತು ಎನ್ನುವುದನ್ನ ಬಿಡಿಸಿ ಹೇಳಬೇಕಿಲ್ಲ. ತಾನು ಮಾಡಿದ್ದನ್ನೆ ಮುಂದವನು ಉಣ್ಣುತ್ತಿದ್ದ ಅಂತ ಇಟ್ಕಳಿ. ಆದರೆ ಇದೆಲ್ಲದರ ನಡುವೆ ಸ್ಥಳಿಯ ಬುಡಕಟ್ಟಿನ ಜನರಂತೆ ತೋಳಗಳೂ ಸ್ಥಳಿಯ ಕಾಡನ್ನ ತೊರೆದು ಪಶ್ಚಿಮದ ಕಡೆಗೆ ಸಾಮೂಹಿಕ ವಲಸೆ ಹೂಡಲಾರಂಭಿಸಿದ್ದವು. ಅದಕ್ಕೆ ಮಾತ್ರ ಯಥಾಪ್ರಕಾರ ಅವುಗಳ ತುಪ್ಪಟ ಹಾಗೂ ಚರ್ಮಗಳ ದುರಾಸೆಗೆ ಈ ವಸಾಹತು ಹೂಡಲು ಬಂದವರು ನೇರ ಬೇಟೆಯ ಸಂಹಾರಕ್ಕೆ ಇಳಿದದ್ದೆ ಕಾರಣ. ಪ್ರಾಣಿಗಳಾದರೇನು? ಅವುಗಳಿಗೂ ಅಳಿವಿನಂಚಿಗೆ ಬಂದಾಗ ಪರಾರಿಯಾಗಿಯಾದರೂ ಉಳಿಯುವಷ್ಟು ಉಪಾಯ ತೋಚದೆ ಹೋದೀತೆ ಹೇಳಿ?


ಬಹುಶಃ ವಾರಗಳೆರಡರ ಹಿಂದೆ ಇಲ್ಲಿಗೆ ಎಮ್ಮೆತೋಳಗಳ ಹಿಂಡು ಬಂದು ಹೋಗಿರಬಹುದು ಎನ್ನುವುದನ್ನವನು ಗ್ರಹಿಸಿದ. ಒಣಗಿ ಗಟ್ಟಿಯಾಗಿದ್ದ ಅವುಗಳ ಉಚ್ಛಿಷ್ಠ ಅದನ್ನ ಖಚಿತ ಪಡಿಸಿದವು. 


ಕುದುರೆಯ ಬೆನ್ನ ಮೇಲಿಂದ ಕೆಳಗಿಳಿದು ಸುಲ್ತಾನನ್ನ ಗೂಟವೊಂದಕ್ಕೆ ಬಿಗಿದವನೆ ಪಾತ್ರೆ ಪಗಡಗಳೇನಾದರೂ ಅಲ್ಲಿದಾವ ಎಂದು ಹುಡುಕಿದ. ಮೂರು ಗುಡಿಸಲು ದಾಟಿ ತಡಕಾಡಿದವನಿಗೆ ಆ ಬುಡಕಟ್ಟಿನ ಮಂದಿ ಹೊತ್ತೊಯ್ಯಲಾಗದೆ ಬಿಟ್ಟು ಹೋಗಿದ್ದ ಮಣ್ಣಿನ ಮರಿಗೆಗಳು ಸಿಕ್ಕವು. ಕೊಂಚ ಪುರುಳೆಗಳೂˌ ಕಲ್ಲಿದ್ದಲ ಗಟ್ಟಿಗಳೂ ಅದ್ಯಾವುದೋ ಜೋಪಡಿಯ ಒಲೆಯ ಬಳಿ ಅನಾಥವಾಗಿ ಬಿದ್ದದ್ದು ಕಣ್ಣಿಗೆ ಬಿತ್ತು. ಕಲ್ಲಿದ್ದಲಂದರೇನೆಂದೆ ಅರಿವಿರದ ಈ ಅನಾಗರೀಕ ಜನರ ಜೋಪಡಿಯಲ್ಲಿ ಇದನ್ನ ಕಂಡು ಅವನಿಗೆ ವಿಸ್ಮಯವಾಯಿತು. ಅದು ಹೇಗೆಯೋ ರೈಲು ರಸ್ತೆ ಹಾಸಲು ಬಂದಿದ್ದ ಕೂಲಿಗಳ ಜೊತೆ ಸಮನ್ವಯ ಸಾಧಿಸಿದ್ದ ಅವರು ತಾವು ಮನೆಯಲ್ಲೆ ಕೊಳೆಹಾಕಿ ತಯಾರಿಸಿದ್ದ ಒಳ್ಳೆಯ ರೈ ಹುಳಿ ಹೆಂಡವನ್ನು ಪಾನಪ್ರಿಯರಾದ ಅವರಿಗೆ ಕೈ ದಾಟಿಸಿ ಅದಕ್ಕೆ ಬದಲಾಗಿ ಆವರೆಗೂ ತಾವು ಕಂಡರಿತಿರದ ಕಲ್ಲಿದ್ದಲನ್ನ ಅವರಿಂದ ವಿನಿಮಯ ರೂಪದ ಇನ್ನಿತರ ವಸ್ತುಗಳ ಜೊತೆಗೆ ಪಡೆದಿರುವ ಸಂಗತಿ ಅವನಿಗೆ ಗೊತ್ತೆ ಇರಲಿಲ್ಲ. 

ಹಾಗೆ ರಾಶಿ ರಾಶಿ ಕಲ್ಲಿದ್ದಲನ್ನ ಪಡೆದುಕೊಂಡಿದ್ದರೂ ಸಹ ಅದರ ಸಮರ್ಪಕ ಬಳಕೆಯ ಓನಾಮ ಗೊತ್ತಿಲ್ಲದೆ ನಿರುಪಯುಕ್ತ ವಸ್ತು ಎಂದೆ ಪರಿಗಣಿಸಿದ ಅವರೆಲ್ಲˌ ಅಸಡ್ಢೆಯಿಂದ ಅದನ್ನ ತಮ್ಮ ತಮ್ಮ ಗುಡಿಸಲುಗಳ ಅಡುಗೆ ಒಲೆಗೆ ಹತ್ತಿರದ ಮೂಲೆಗಳಲ್ಲಿ ಕಲ್ಲಿದ್ದಲನ್ನ ರಾಶಿ ಹಾಕಿಟ್ಟುˌ ಹಾಡಿ ತೊರೆದು ಹೋಗುವಾಗಲೂ ಜೊತೆಯಲ್ಲಿ ಕೊಂಡೊಯ್ಯದೆ ಅಸಡ್ಡೆ ಮಾಡಿ ಬಿಟ್ಟು ಹೋಗಿದ್ದರು. ಇವನ ಪುಣ್ಯಕ್ಕೆ ಅಷ್ಟು ಕಲ್ಲಿದ್ದಲು ಅದೊಂದೆ ಹಾಡಿಯಲ್ಲಿ ಕಂಡದ್ದೆ ಬಂಪರ್ ಲಾಟರಿ ಹೊಡೆದಂತಾಗಿತ್ತು ಅವನಿಗೆ. ಈಗವನು ಬಿಸಿನೀರಿಗೂ ಪರದಾಡಬೇಕಿರಲಿಲ್ಲ.


**********


ಮುಂದೆಂದಾದರೂ ಇಲ್ಲಿಗೆ ಬಂದು ಸಮ್ಮನೆ ರಾಶಿ ಬಿದ್ದು ಹಾಳಾಗುತ್ತಿರುವ ಆ ಅನಾಥ ಕಲ್ಲಿದ್ದಲನ್ನ ಗಂಟು ಮೂಟೆ ಕಟ್ಟಿಕೊಂಡು ಸಾಗಿಸುವ ಹಂಚಿಕೆಯನ್ನವನು ಮನದೊಳಗೆ ಹಾಕಿದ. ಅಲ್ಲಿರುವ ದಾಸ್ತಾನು ತೀರಾ ದುಂದುವೆಚ್ಚ ಮಾಡಿ ಉರಿಸಿದರು ಸಹ ಇನ್ನೂ ಐದು ವರ್ಷಗಳ ಚಳಿಗಾಲ ಕಳೆಯಲು ಅವನಿಗೆ ಸಾಕಾಗುವಷ್ಟಿತ್ತು. 


ಸದ್ಯ ಪೇಟೆಯಿಂದ ಕಾಸು ಕೊಟ್ಟು ಕೊಂಚ ಕಲ್ಲಿದ್ದಲನ್ನ ಅದೂ ಹೊತ್ತುಕೊಂಡು ಬರುವ ಶ್ರಮ ತಪ್ಪಿತು ಎಂದವನು ಖುಷಿ ಪಟ್ಟ. ಈಗ ಸುಲ್ತಾನನ ಆರೈಕೆ ಮಾಡುವುದು ಆದ್ಯತೆಯಾಗಿತ್ತು ಹೀಗಾಗಿ ಅವುಗಳಲ್ಲೆ ಕೆಲವನ್ನು ಪುರುಳೆಗಳೊಂದಿಗೆ ಆಯ್ದು ಅಲ್ಲೆ ಬಿದ್ದಿದ್ದ ಚಕಮಕಿ ಕಲ್ಲುಗಳನ್ನ ಎತ್ತಿಕೊಂಡು ಮರಿಗೆಗೆ ತುಂಬಿಸಿ ಕುದುರೆ ಕಟ್ಟಿ ಬಂದಿದ್ದ ಗುಡಿಸಿಲ ಕಡೆಗೆ ಹೆಜ್ಜೆ ಹಾಕಿದ.


ಹೊರಗೆ ಬಿದ್ದಿದ್ದ ಹಿಮದಲ್ಲೆ ಸ್ವಲ್ಪ ಮರಿಗೆಗೆ ತುಂಬಿಸಿಕೊಂಡು ಬಂದವ ಒಲೆಯ ಮೇಲೆ ಅದನ್ನಿರಿಸಿ ಚಕಮಕಿ ಕಲ್ಲಿನಿಂದ ಪುರಳೆ ಹೊತ್ತಿಸಲು ಹವಣಿಸಿದˌ ತೀರಾ ಥಂಡಿಯಾಗಿದ್ದರಿಂದಲೋ ಏನೋ ಕಲ್ಲುಗಳಿಂದ ಅದೆಷ್ಟೆ ಕುಟ್ಟಿದರೂ ಕಿಡಿ ಏಳಲಿಲ್ಲ. ಪ್ರಯತ್ನ ಬಿಡದೆ ಚಕಮಕಿ ಕಲ್ಲುಗಳನ್ನ ಚೆನ್ನಾಗಿ ನೆಲಕ್ಕೆ ಹಾಕಿ ಉಜ್ಜಿ ಬಿಸಿಯೇರಿಸಿ ಮತ್ತೆ ಪ್ರಯತ್ನಿಸಿದಾಗ ಪುರುಳೆ ರಾಶಿಗೆ ಕಿಡಿ ಹಾರಿ ಕಡೆಗೂ ಹೊಗೆಯೆದ್ದಿತು. ಮೆಲ್ಲಗೆ ಊದಿ ಕಲ್ಲಿದ್ದಲನ್ನೂ ಒಟ್ಟಿಗೆ ಸೇರಿಸಿ ಕಡೆಗೂ ಒಲೆಯ ಒಡಲಲ್ಲಿ ಸರಿಯಾಗಿ ಜ್ವಾಲೆ ಪ್ರಜ್ವಲಿಸುವಂತೆ ಮಾಡಿದ. ಬೆಂಕಿಯ ಶಾಖಕ್ಕೆ ಒಡ್ಡಿಕೊಂಡ ಮೈ ಕೈಗೆ ತುಂಬಾ ಹಿತಾನುಭಾವ ದೊರಕಿದಂತಾಯಿತು. ಬೆನ್ನ ಚೀಲದಲ್ಲಿ ಕೊಂಚ ಚಹಾದ ಎಲೆಗಳನ್ನ ಕಟ್ಟಿಕೊಂಡು ಬಂದಿದ್ದˌ ಸ್ವಲ್ಪ ಚಹಾ ಹೀರಿ ಚಳಿಗೆ ಮರಗಟ್ಟಿದಂತಾಗಿರುವ ದೇಹದ ನರನಾಡಿಗಳಲ್ಲೂ ಚೈತನ್ಯದ ನೆತ್ತರು ಪ್ರವಹಿಸುವಂತಾಗಿಸಲು ಮನಸು ಮಾಡಿ ಅಲ್ಲೆ ಬಿದ್ದಿದ್ದ ಕುಡಿಕೆಯೊಂದನ್ನಾಯ್ದು ನಿಧಾನವಾಗಿ ನೀರಾಗುತ್ತಿದ್ದ ಹಿಮದಲ್ಲಿ ಗಾಳಿಸಿ ತೊಳೆದು ಕೊಂಚ ಹಿಮ ಜೊತೆಗಿಷ್ಟು ಚಹಾ ಸೊಪ್ಪು ಸುರಿದು ಪಕ್ಕದ ಒಲೆಗೂ ಉರಿ ವಿಸ್ತರಿಸಿ ಕುದಿಯಲಿಟ್ಟ.


ನೀರು ಕುದಿಯಲು ಆ ಕಡು ಚಳಿಯ ವಾತಾವರಣದಲ್ಲಿ ಸಮಯ ತಗುಲುವುದು ಸಹಜˌ ಅದೆಷ್ಟೆ ಕುದಿಬಿಂದುವನ್ನ ತಲುಪಿದರೂ -೨೦ ರಿಂದ -೩೫ರ ತನಕವೂ ಜಾರುವ ಉಷ್ಣತೆಯ ವಿಪರೀತ ಹವಾಮಾನದ ವೇಪರೀತ್ಯದಲ್ಲಿ ಆ ಕುದಿನೀರು ಕೂಡ ಮರಗಟ್ಟಿ ಹೋದ ಹಾಗಿರುವ ಜಡವಾಗುವತ್ತ ಸಾಗಿರುವ ದೇಹಕ್ಕೆ ಬೆಚ್ಚಗಿನ ಭಾವ ಕೊಡಬಲ್ಲದು. ಮನುಷ್ಯರ ಹಾಗೆ ಪ್ರಾಣಿಗಳಿಗೂ ಸಹ. ಸುರಿದ ಸಿಂಬಳದ ಲೋಳೆಯೂ ಚಳಿಗೆ ಗಂಟುಗಟ್ಟಿದ ಹಾಗೆ ಗಟ್ಟಿಯಾಗಿ ಹೋಗಿರುವ ಸುಲ್ತಾನನ ಮುಸುಡಿ ಕೂಡ ಬಿಸಿನೀರಿನಿಂದ ತೊಳಿಸಿಕೊಂಡು ಶುದ್ಧವಾಗಲು ಕಾತರಿಸುತ್ತಿತ್ತು. 

ಬಿಸಿ ನೀರಿನ್ನ ಮೊಗೆ ಮೊಗೆದು ಚೋಪಿ ಚೂರೂ ಅಸಹ್ಯ ಪಡದೆ ಅವನು ಮೆಲ್ಲನೆ ಸುಲ್ತಾನನ ಮೂತಿಯ ಸುತ್ತ ಹರಡಿದ್ದ ಸಿಂಬಳವನ್ನ ತೊಳೆದು ತೆಗೆದು ಕೈ ಬಟ್ಟೆಯಲ್ಲಿ ಒರಸಿದ. ಕುದುರೆಯ ಮೇಲ್ತುಟಿಗೂ ಸಿಂಬಳದ ಒಡಕು ಹಾಲಿನಂತಹ ಗಲೀಜು ಅಂಟಿಕೊಂಡು ಕಲ್ಲಿನಂತಾಗಿ ಹೋಗಿತ್ತು. ಹುಷಾರಾಗಿ ಅದನ್ನ ನೀರು ಸೋಕಿಸಿ ಮೆದುವಾಗಿಸಿ ತಿಕ್ಕಿ ತೊಳೆದು ತೆಗೆಯದೆ ಬಲ ಪ್ರಯೋಗಿಸಿ ಕೀಳಲು ಹವಣಿಸಿದರೆ ತುಟಿಯ ಮೃದು ಚರ್ಮಕ್ಕೆನೆ ಹಾನಿಯಾಗುವ ಸಕಲ ಸಾಧ್ಯತೆಗಳೂ ಇದ್ದವು. ಹೀಗಾಗಿ ಜೋಪಾನವಾಗಿ ನಯ ನಾಜೂಕಿನಿಂದ ಲೋಳೆ ಸಿಂಬಳವನ್ನೆಲ್ಲ ತೊಳೆದು ತೆಗಿಯವಷ್ಟರಲ್ಲಿ ಅವನ ಜಾಣ್ಮೆಯೆಲ್ಲಾ ಉಪಯೋಗಿಸಬೇಕಾಗಿ ಬಂತು. 

ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಚರ್ಮದ ಸೊಂಟಪಟ್ಟಿಯಲ್ಲಿದ್ದ ಸಣ್ಣ ಸಂದೂಕದಲ್ಲಿರಿಸಿಕೊಂಡಿದ್ದ ಪೂರ್ವದ ಭಾರತದಿಂದ ತರಿಸಿದ್ದ ಘಾಟು ಹೊಗೆಸೊಪ್ಪಿನ ನಶ್ಯದ ಪುಡಿ ತೆಗೆದು ಚಿಟಿಕೆಯಷ್ಟನ್ನ ಹೆಬ್ಬೆರಳು ಮತ್ತು ತೋರು ಬೆರಳ ಮಧ್ಯೆ ಹಿಡಿದು ತೆಗೆದವನೆ ಸುಲ್ತಾನ ಉಸಿರೆಳೆದುಕೊಳ್ಳುವ ಕ್ಷಣವನ್ನೆ ಕಾದು ಅವನ ಮೂಗಿನ ಎರಡೂ ಹೊಳ್ಳೆಗಳಿಗೆ ಹಾಕಿ ತುಂಬಿದ. ದೀರ್ಘವಾಗಿ ಉಸಿರೆಳೆದುಕೊಳ್ಳುತ್ತಿದ್ದ ಕುದುರೆಯ ನೆತ್ತಿಗೆ ನಶ್ಯದ ಘಾಟು ಮುಟ್ಟಿದ್ದೆ ತಡ ಎಗರೆಗರಿ ತಲೆ ಕೊಡವುತ್ತಾ ಕುದುರೆ ಸರಣಿ ಸೀನುಗಳನ್ನ ಸೀನ ತೊಡಗಿತು. ಅದರ ಪ್ರತಿ ಸೀನಿಗೂ ಎರಡೂ ಹೊಳ್ಳೆಗಳಿಂದ ಗರಣೆಗಟ್ಟಿದ ಹಸಿರು ಹಳದಿ ಒಡಕಿನ ಸಿಂಬಳದ ಧಾರೆ ಧಾರೆ ಕಿತ್ತುಕೊಂಡು ಬಂದು ನೆಲದ ತುಂಬೆಲ್ಲಾ ಗುಪ್ಪೆ ಗುಪ್ಪೆಯಾಗಿ ಹರಡಿಕೊಂಡು ಸೀನಿನ ಸರಣಿ ಮುಗಿದು ತಲೆಕೊಡವಿದಾಗ ಕುದುರೆಗೆ ಒಂಥರಾ ಸುಖಾನುಭಾವವಾಯಿತು. ಅದರ ನೆತ್ತಿ ಹತ್ತಿದ್ದ ಶೀತದ ಸೋಂಕು ಬುಡ ಸಹಿತ ಕಿತ್ತು ಹೊರ ಚಲ್ಲಿ ಅದರ ತಲೆಭಾರ ಇಳಿದು ಹೋಗಿತ್ತು. ಮತ್ತೆ ಬಿಸಿನೀರನ್ನ ಹಿತವಾಗಿ ಚೋಪಿ ಅವನು ಆ ತಾಜಾ ಲೋಳೆಯ ಸಿಂಬಳದ ಮುಖ ತೊಳಿಸಿ ಅದರ ಹಿತಾನುಭಾವವನ್ನ ಮತ್ತಷ್ಟು ಹೆಚ್ಚಿಸಿದ. ಒಣ ಬಟ್ಚೆಯಲ್ಲಿ ತೊಳೆಸಿದ ಮೂತಿ ಒರೆಸಿದ ನಂತರ ಸೊಂಟಪಟ್ಟಿಯ ಸಂದೂಕದಿಂದ  ತೆಗೆದ ಕಿರುಕುಪ್ಪಿಯಲ್ಲಿದ್ದ ಕಚ್ಚಾ ನೀಲಗಿರಿ ಎಣ್ಣೆಯ ನಾಲ್ಕಾರು ಹನಿಗಳನ್ನ ಕುದುರೆಯ ಎರಡೂ ಮೂಗಿನ ಹೊಳ್ಳೆಗಳಿಗೆ ಸೋಕಿಸಿದ. ಶ್ವಾಸದೊಂದಿಗೆ ನೀಲಗಿರಿಯ ಘಮವನ್ನೂ ಉಸಿರಾಡಿದ ಸುಲ್ತಾನ ಮತ್ತಷ್ಟು ಹಗುರ ಭಾವ ಅನುಭವಿಸುತ್ತಾ ಎಂದಿನ ಲವಲವಿಕೆಗೆ ಮರಳ ತೊಡಗಿದ. ಪಟ್ಟಣ ಸೇರಿ ಗೊಟ್ಟದಲ್ಲಿ ಚಳಿಗೆ ತಕ್ಕ ಔಷಧಿಯನ್ನ ಗಾಡಿಖಾನೆಯಲ್ಲಿ ಏರಿಸಿದರೆ ಅವನ ಶೀತದ ಬಾಧೆ ಸಂಪೂರ್ಣ ಹಿಡಿತಕ್ಕೆ ಬರುವುದರಲ್ಲಿ ಯಾವ ಸಂಶಯವೂ ಈಗ ಉಳಿದಿರಲಿಲ್ಲ. ಪಟ್ಟಣ ಮುಟ್ಟುವ ತನಕ ಈ ಪ್ರಥಮ ಚಿಕಿತ್ಸೆ ಖಂಡಿತವಾಗಿ ಅವನನ್ನ ಸ್ವಸ್ಥವಾಗಿರಿಸುತ್ತಿತ್ತು. 


ಕುದುರೆಯ ಆರೈಕೆ ಮುಗಿಸಿದವನೆˌ ಅದೆ ನೀರು ಮೊಗೆದ ಕೈ ಪಾತ್ರೆಗೆ ಸುಲ್ತಾನನ ಕುತ್ತಿಗೆಯ ಜೋಳಿಗೆಯಲ್ಲಿದ್ದ ಹುರುಳಿಯೊಂದು ಹಿಡಿ ಓಟ್ಸ್ ಒಂದು ಹಿಡಿ ಸೊಂಟಪಟ್ಟಿಯ ಸಂದೂಕದಿಂದ ತೆಗೆದ ನಾಲ್ಕು ಕಾಳು ಭಾರತದ ಕಾಳು ಮೆಣಸು ಕುಟ್ಟಿ ಹಾಕಿ ಕುದಿಯಲು ಇಟ್ಟುˌ ಹಬೆಯೇರುತ್ತಿದ್ದ ಚಹಾವನ್ನ ಬಿಸಿಯಾರಿಸುತ್ತಾ ಗುಟುಕು ಗುಟುಕಾಗಿ ಹೀರುತ್ತಾ ತನ್ನ ಮೈ ಮನಕ್ಕೆ ಉಲ್ಲಾಸದ ಔಷಧಿ ಏರಿಸ ತೊಡಗಿದ. ಕಡುಚಳಿಗೆ ಹಾಲು ಸಕ್ಕರೆ ಸೇರಿಸದ ಕುದ್ದು ಕುದ್ದು ಕಂದು ಕಷಾಯವಾಗಿದ್ದ ಕಹಿ ರುಚಿಯ ಕಣ್ಣಾ ಚಹ ಹೊಸ ಹುಮ್ಮಸ್ಸಿನ ಗಣಿಯಂತೆ ಅವನಿಗೆ ಅನಿಸ ಹತ್ತಿತು. ಬೆಂದ ಹುರುಳಿ ಓಟ್ಸಿನ ಮಿಶ್ರಣವನ್ನ ಕೊಂಚ ಬಿಸಿಯಾರಿಸಿ ಬೆಚ್ಚಗಿರುವಾಗಲೆ ಅದನ್ನ ಕುದುರೆಯ ಬಾಯಿಚೀಲಕ್ಕೆ ತುಂಬಿಸಿ ಸುಲ್ತಾನನ ಮೂತಿಗೆ ಬಿಗಿದ. 


ಅದರ ಬೆಚ್ಚನೆ ಹಬೆಗೆ ಮೂಗು ಮತ್ತೆ ಕಟ್ಟಿಕೊಳ್ಳದಿರಲಿ  ಅನ್ನೋದು ಮೊದಲ ಕಾರಣವಾಗಿದ್ದರೆˌ ಹಾದಿಯದ್ದ ಅವನ ನೆಚ್ಚಿನ ತಿನಿಸನ್ನ ಮೆಲ್ಲುತ್ತಲಿದ್ದರೆ ತಕರಾರಿಲ್ಲದೆ ಮುಂದೆ ಮುಂದೆ ಹೆಜ್ಜೆ ಹಾಕುತ್ತಾ ಆದಷ್ಟು ಬೇಗ ಪಟ್ಟಣವನ್ನ ಹೋಗಿ ಮಟ್ಟಬಹುದು ಅನ್ನುವ ಹಂಚಿಕೆಯೂ ಅದರ ಹಿಂದಿತ್ತು. ಅದಾಗಲೆ ಈ ಕಿರು ವೈದ್ಯದ ಕಾರಣ ಅಮೂಲ್ಯವಾದ ಸುಮಾರು ಎರಡು ತಾಸು ಅಲ್ಲಿ ಕಳೆದು ಹೋಗಿತ್ತು. ಮತ್ತೆ ಕುದುರೆಯನ್ನೇರಿ ಪಟ್ಟಣದ ಹಾದಿಯನ್ನವನು ಹಿಡಿದ. ಬೆನ್ನ ಹಿಂದೆ ದೂರಾಗುತ್ತಾ ಬಂದ ಹಾಡಿ ಯಾರದ್ದೋ ಅನಾಥ ಗೋರಿಯಂತೆ ನಿರ್ಲಿಪ್ತವಾಗಿ ನಿಂತಿದ್ದು ಅವರಿಬ್ಬರನ್ನೂ ಬೀಳ್ಕೊಟ್ಟು ಮತ್ತೆ ಮೌನದಂಚಿಗೆ ಜಾರಲು ಸನ್ನದ್ದವಾಯಿತು. ಮುಂದಿನ ಭವಿಷ್ಯದಲ್ಲಿ ಯಾರೂ ಬಂದು ವಾಸ ಮಾಡುವ ಸಾಧ್ಯತೆಯಿಲ್ಲದ ಆ ಹಾಡಿ ಕಾಲನ ಹೊಡೆತಕ್ಕೆ ಬಲಿಯಾಗಿ ಇನ್ನೇನು ಕೆಲವೆ ದಿನಮಾನಗಳಲ್ಲಿ ಕುಸಿದು ಮಣ್ಣಲ್ಲಿ ಮಣ್ಣಾಗಿ ಹೋಗಿ ಶಾಶ್ವತವಾಗಿ ನಾಮಾವಶೇಷವಾಗುವುದು ಖಚಿತವಾಗಿತ್ತು.


ಅವರ ಪ್ರಯಾಣ ನೀರವತೆಯ ಬೇಧಿಸಿ ಮುಂದುವರೆಯಿತು. ಹೊರಗಿನ್ನೂ ಚಳಿಗಾಳಿಯ ಹುಯಿಲಿನ ಅರ್ಭಟ ಕಡಿಮೆಯಾಗಿರಲಿಲ್ಲ. ಬೆಳಕಿನ ಸೆಲೆ ಕೊಂಚ ಕಾಣುತ್ತಿತ್ತಾದರು ಕತ್ತಲ ಸೆರಗು ಇನ್ನೂ ಇಳೆಯ ಮೈಯಿಂದ ಪೂರ್ತಿ ಜಾರಿ ಹೋಗಿರಲಿಲ್ಲ. ಆ ವರ್ಷವಷ್ಟೆ ಕಾಲಿನ ಗೊರಸುಗಳಿಗೆ ಲಾಳ ಕಟ್ಟಿಸಿಕೊಂಡಿದ್ದ ಸುಲ್ತಾನನ ಓಟದ ಲಯಬದ್ಧ ಸದ್ದನ್ನೂ ಮೀರಿಸಿ ಹಿಮಗಾಳಿ ಬೀಸುತ್ತಿತ್ತು.



**********



"ಮಳೆಗಾಲದಲ್ಲಿ ಅಪರೂಪಕ್ಕೆ ಮೋಡದ ಮುಸುಕಿನೊಳಗಿಂದ ಮೂಡಿಬರುವ ಶುಭ್ರ ನೀಲಿ ಬಾನು, 
ನೀನಿಲ್ಲದೆ ಏಕಾಂಗಿಯಾದ ನನ್ನೊಳಗಿನ ಸಂತಸ ಹಾಗೂ ನಾನು."

ದಾರಿಯುದ್ದ ಚಳಿಗಾಳಿಯ ಅರ್ಭಟ ಎದುರಿಸುತ್ತಾ ಅವರಿಬ್ಬರ ಸವಾರಿ ಬಹುಶಃ ಮೂರೋ ನಾಲ್ಕೋ ಮೈಲಿ ದೂರ ಸಾಗಿದ್ದಿರಬಹುದು. ಪಟ್ಟಣ ಇನ್ನೇನು ಅದರ ಎರಡರಷ್ಟು ದೂರದ ಫಾಸಲೆಯಲ್ಲಿ ಮಾತ್ರ ಇದೆ ಅನ್ನುವಷ್ಟರಲ್ಲಿ ಒಂದು ದೊಡ್ಡ ಹಿಮಸಾರಂಗಗಳ ಗುಂಪು ಚಲ್ಲಾಪಿಲ್ಲಿಯಾದಂತೆ ಇವರ ಹಾದಿ ಕತ್ತರಿಸುತ್ತಾ ರಸ್ತೆಯ ಒಂದು ಭಾಗದ ಕಾಡಿನ ಕಡೆಯಿಂದ ಚಂಗನೆ ನೆಗೆಯುತ್ತಾ ಇನ್ನೊಂದೆಡೆಯ ಬಯಲಿನಂತಹ ಹಿಮಚ್ಛಾದಿತ ತೆರೆದ ಸ್ಥಳದತ್ತ ಜೀವಭಯದಿಂದ ಅನ್ನುವಂತೆ ನುಗ್ಗಿ ಓಡೋಡಿ ಹೋಗುವುದು ಅವನ ಕಣ್ಣಿಗೆ ಬಿತ್ತು. ಒಂದು ನಿರ್ದಿಷ್ಟ ವೇಗದಲ್ಲಿ ಆತನಕ ದಾರಿ ಸವೆಸುತ್ತಿದ್ದ ಅವರಿಬ್ಬರಿಗೂ ಒಮ್ಮೆಲೆ ಮುಗ್ಗರಿಸಿ ಬಿದ್ದಂತಾಗಿ ಸುಲ್ತಾನನ ಕುತ್ತಿಗೆಯ ಲಗಾಮನ್ನ ಅವನು ಎಳೆದ ವೇಗಕ್ಕೆ ಅನಿರೀಕ್ಷಿತವಾಗಿ ಪ್ರಯಾಣ ನಿಂತಿತು. ಹಾರಿ ಓಡಿ ಹೋಗುತ್ತಿದ್ದ ಹಿಮಸಾರಂಗಗಳ ಹಿಂಡಿಗೂ ಇವರಿಬ್ಬರಿಗೂ ನಡುವೆ ಅಂದಾಜು ನೂರು ಗಜ ದೂರವಿದ್ದರೆ ಹೆಚ್ಚು ಹೆಚ್ಚು. ಆದ ಅಘಾತದಿಂದ ಅವನಿನ್ನೂ ಚೇತರಿಸಿಕೊಂಡೆ ಇರಲಿಲ್ಲˌ ಹಿಂಡಿನ ಹಿಂದೆಯೆ ಬಿಲ್ಲಿನಿಂದ ಚಿಮ್ಮಿ ಹೊರಟ ಬಾಣಗಳಂತೆ ಹೆಚ್ಚು ಕಡಿಮೆ ಅದೆ ವೇಗದಿಂದ ಎರಡು ತರುಣ ಪ್ರಾಯದ ಹಿಮಚಿರತೆಗಳು ಅಟ್ಟಿಸಿಕೊಂಡು ವೇಗವಾಗಿ ಓಡಿ ಬಂದು ಅದೆ ವೇಗದಲ್ಲಿ ರಸ್ತೆ ದಾಟಿ ತಮ್ಮ ಬೇಟೆಯ ಹಿಂಡನ್ನ ಬೆಂಬಿಡದೆ ಬೆನ್ನಟ್ಟಿದವು.



ಅದರೊಲ್ಲೊಂದು ಬಲಿಷ್ಠವಾಗಿದ್ದ ಹಿಮಚಿರತೆ ಆ ಅವಸರದ ಬೇಟೆಯ ನಡುವೆಯೂ ಇವರ ಹಾಜರಿಯನ್ನ ಗಮನಿಸಿ ತನ್ನ ವೇಗವನ್ನ ನಿಯಂತ್ರಿಸಿಕೊಂಡಂತೆ ಒಮ್ಮೆಗೆ ನಿಂತು ಇತ್ತ ದಿಟ್ಟಿಸಿˌ ಮರುಕ್ಷಣ ಮರಳಿ ಹಿಂಡಿನ ಹಿಂದೆ ಎಗರಿ ಓಡಿತು. ಬಹುಶಃ ಬೇಟೆಯ ಸಮಯ ಅಷ್ಟು ಸಮೀಪದಲ್ಲಿ ಮನುಷ್ಯನ ಹಾಜರಿಯನ್ನ ಅದು ನಿರೀಕ್ಷಿಸಿರಲಿಲ್ಲವೆಂದು ತೋರುತ್ತದೆ. ಅವುಗಳ ಲಕ್ಷ್ಯವೆಲ್ಲಾ ಕೇವಲ ಹಿಮಸಾರಂಗಗಳತ್ತ ನೆಟ್ಟಿದ್ದ ಕಾರಣ ಅವರಿಬ್ಬರೂ ಹಿಮಚಿರತೆಗಳ ಮುಖಾಮುಖಿಯಾಗುವುದರಿಂದ ಕೂದಲೆಳೆಯಿಂದ ಪಾರಾಗಿದ್ದರು ಅನಿಸುತ್ತೆ. ಬೇರೆ ಸಮಯದಲ್ಲಾಗಿದ್ದರೆ ಮೂಳೆ ಕೊರೆವ ಈ ಭೀಕರ ಚಳಿಯಲ್ಲಿ ಹಸಿದು ಕೆಂಗೆಟ್ಟಿರುವ ಜೋಡಿ ಚಿರತೆಗಳು ಸುಲಭವಾಗಿ ದಕ್ಕಬಹುದಾಗಿದ್ದ ಕುದುರೆಯ ಕೊಂದು ತಿನ್ನಲು ಸಹ ಹೇಸುತ್ತಿರಲಿಲ್ಲ. ಹಸಿವು ತುಂಬಾ ಕೆಟ್ಟದ್ದುˌ ಪ್ರಾಣಿಗಳಿಗಾದರೂ ಸರಿˌ ಮನುಷ್ಯ ಮೃಗಕ್ಕಾದರೂ ಸರಿ. ವಾರಗಟ್ಟಲೆ ಆಹಾರ ಕಾಣದೆ ಕಂಗಾಲಾಗಿದ್ದ ಅವುಗಳ ಹೊಟ್ಟೆ ಹಸಿದಿದ್ದ ಪರಿ ಹೇಗಿತ್ತೆಂದರೆˌ ಸಾಮಾನ್ಯವಾಗಿ ಮನುಷ್ಯರಿಂದ ಅಂತರ ಕಾಯ್ದುಕೊಳ್ಳುವುದನ್ನೆ ಆಯ್ಕೆ ಮಾಡಿಕೊಳ್ಳುತ್ತಿದ್ಢ ಆ ವನ್ಯಮೃಗಗಳು ಇಂದು ಕೊಂಚ ಮಟ್ಟಿನ ಅಪಾಯವನ್ನ ಮೈ ಮೇಲೆಳೆದು ಕೊಂಡಾದರೂ ಸರಿ ತಮ್ಮ ಹಸಿವನ್ನ ನೀಗಿಸಿಕೊಳ್ಳಲು ಹೇಸುತ್ತಿರಲಿಲ್ಲವೆನ್ನಬಹುದು.


ಇವನು ಹಿಮಚಿರತೆಗಳನ್ನ ಕಂಡು ಬೆದರಿದ್ದ ಸುಲ್ತಾನನಿಗೆ ಕುತ್ತಿಗೆ ಸವರಿ ಧೈರ್ಯ ಹೇಳುತ್ತಾ ಮುನ್ನಡೆಸಿದ. ವೇಗ ಕುಗ್ಗಿಸಿಕೊಂಡು ಅವರಿಬ್ಬರೂ ರಸ್ತೆಯಲ್ಲಿ ಸಾಗುತ್ತಿರುವದನ್ನು ಈಗ ಸ್ಪಷ್ಟವಾಗಿ ಅವೆರಡು ಚಿರತೆಗಳೂ ತಮ್ಮ ಕ್ರೂರ ಕಣ್ಣುಗಳ ಚೂಪು ನೋಟದಲ್ಲಿ ಗುರುತಿಸಿದವು. ಬೇಟೆ ಭರ್ಜರಿಯಾಗೆ ಆಗಿತ್ತು. ರಸ್ತೆಯಿಂದ ಒಂದೈನೂರು ಗಜ ದೂರದಲ್ಲಿ ಸರಿ ಸುಮಾರು ನೂರು ಕಿಲೋವಾದರೂ ತೂಗಬಹುದಾದ ಒಂದು ಹೋತ ಹಿಮಸಾರಂಗವನ್ನ ಅವೆರಡೂ ಅಡ್ಡಗಟ್ಟಿ ಗುಂಪಿನಿಂದ ಬೇರ್ಪಡಿಸಿ ಚಾಕಚಾಕ್ಯತೆಯ ಜೊತೆಗಾರಿಕೆಯಿಂದ ಕೆಳಗೆ ಕೆಡವಿ ಕೊಂದಿದ್ದವು. ಒಂದು ನೂರು ಗಜವಾದರೂ ಸಹ ಕುತ್ತಿಗೆಯ ಬುಡಕ್ಕೆ ನಾಟಿಸಿದ್ದ ತನ್ನ ಚೂಪು ಕೋರೆಹಲ್ಲುಗಳ ಆಧಾರದಲ್ಲೆ ನೇತಾಡುತ್ತಾ ಅದರಲ್ಲೊಂದು ಹಿಮಚಿರತೆ ಓಡುತ್ತಿದ್ದ ಹಿಮಸಾರಂಗದ ಜೊತೆಜೊತೆಯೆ ಎಳೆದುಕೊಂಡು ಹೋಗಿತ್ತು. ಸೋತ ಹೋತ ಅಡ್ಡಬಿದ್ದ ಕೂಡಲೆ ಇನ್ನೊಂದೂ ಸಹ ಅದರ ಮೇಲೇರಿ ಇನ್ನೂ ಜೀವಂತವಾಗಿದ್ದ ಹಿಮಸಾರಂಗದ ಮುಖದ ಚರ್ಮ ಹರಿದೆಳೆಯುತ್ತಾ ಚಿಮ್ಮಿ ಹಾರುತ್ತಿದ್ದ ಬಿಸಿ ರಕ್ತವನ್ನ ಹೀರಿ ತನ್ನ ಹಸಿವನ್ನ ತೀರಿಸಿಕೊಳ್ಳಲು ಆರಂಭಿಸಿಯಾಗಿತ್ತು. 


ಈ ರಣ ಭೀಕರ ಬೇಟೆಯಾಟವನ್ನ ನೇರವಾಗಿ ಕಂಡದ್ದು ಅವನಿಗೆ ಬೆರಗು ಹುಟ್ಟಿಸಿದರೂ ಸಹ ಅಂತಹ ಅಪೂರ್ವ ಅರಣ್ಯ ನ್ಯಾಯಕ್ಕೆ ನೇರ ಸಾಕ್ಷಿಯಾಗಲು ತನಗೆ ದೊರೆತ ಅನಿರೀಕ್ಷಿತ ಅವಕಾಶಕ್ಕಾಗಿ ಅವನು ದೇವರಿಗೆ ಮನಸಿನೊಳಗಿಂದಲೆ ಕೃತಜ್ಞತೆ ಸಲ್ಲಿಸಿದ. ತಮ್ಮ ಭೋಜನವನ್ನಾರಂಭಿಸಿದ ಚಿರತೆಗಳ ಚಿತ್ತ ಕದಡದಂತೆ ಪಟ್ಟಣದ ದಿಕ್ಕಿಗೆ ದೌಡಾಯಿಸುವಂತೆ ಸುಲ್ತಾನನ ಲಗಾಮನ್ನ ಸಡಿಲ ಬಿಟ್ಟ. ಇಷಾರೆ  ಅರಿತ ಕುದುರೆ ಕೆನೆಯುತ್ತಾ ವೇಗವಾಗಿ ಮುಂದೋಡಿತು. ತಮ್ಮ ಗುಂಪಿನ ಒಂದು ಹೋತ ಬಿದ್ದು ಬಲಿಯಾದದ್ದನ್ನು ನೋಡಲೂ ಸಹ ಸಮಯವಿಲ್ಲದವುಗಳಂತೆ ಹಿಮಸಾರಂಗಗಳ ಗುಂಪು ಇವರ ಎಡಕ್ಕೆ ಕಾಡಿನತ್ತ ಬದುಕಿದರೆ ಬೇಡಿ ತಿಂದೇವು ಅನ್ನುವ ಭಾವದಲ್ಲಿ ಓಡಿ ಹೋಗಿ ಮರೆಯಾದವು. ಬಹುಶಃ ಅವರಿಬ್ಬರಿಗೆ ಆರಂಭದಲ್ಲಿ ನಸು ಮುಂಜಾನೆಯೆ ಎದುರಾಗಿದ್ದ ಆ ಒಂಟಿ ಗರ್ಭಿಣಿ ಹಿಮಸಾರಂಗ ಸಹ ಇದೆ ಗುಂಪಿನ ಸದಸ್ಯೆಯಾಗಿದ್ದಿರಬಹುದು. ಇನ್ಯಾವುದೋ ಇಂತಹದ್ದೆ ಧಾಳಿ ಅವುಗಳ ಮೇಲೆ ಈ ಹಿಂದೆಯೂ ಆಗಿದ್ದಾಗ ಬೆದರಿ ಓಡಿದ್ದ ಅದು ಗುಂಪಿನಿಂದ ಬೇರ್ಪಟ್ಟಿರಬಹುದು ಎಂದವನು ಗ್ರಹಿಸಿದ.


ಸುಲ್ತಾನ ಇವನ ಮನೋಭಿಲಾಶೆಯನ್ನರಿತಂತೆ ಬಿಸು ಬಿಸುವಾಗಿ ಹೆಜ್ಜೆ ಹಾಕುತ್ತಾ ಗಮ್ಯದೆಡೆಗೆ ತನ್ನ ಸಾಮರ್ಥ್ಯವನ್ನೆಲ್ಲ ಮೀರಿ ಓಡ ತೊಡಗಿದ. ಈಗ ದೂರದಲ್ಲಿ ಗೊಂಬೆಗಳಂತೆ ಪಟ್ಟಣದ ಕಟ್ಟಡಗಳು ಕಾಣ ತೊಡಗಿದವು. ಅವುಗಳ ಮಾಡಿನಿಂದ ಮೊಳೆತು ಮೇಲೆದ್ದಂತಿದ್ದ ಹೊಗೆ ಕೊಳವೆಗಳಿಂದ ಬೂದು ಬಣ್ಣದ ಧೂಮದ ಪರದೆ ಮೇಲೇಳುತ್ತಿರೋದು ಅಸ್ಪಷ್ಟವಾಗಿ ಕಣ್ಣಿಗೆ ಬೀಳತೊಡಗಿತು. ಚಳಿಗಾಲದಲ್ಲಿ ಸಾಮಾನ್ಯವಾಗಿ ಬಿರುಗಾಳಿ ಬೀಸದ ಹೊರತು ಹೊಗೆ ಗೂಡಿನಿಂದ ಎದ್ದ ಹೊಗೆಯ ಪರದೆ ಬರೆದಿಟ್ಟ ಚಿತ್ರದಂತೆ ಸ್ಥಿರವಾಗಿ ಒಂದೆ ಕಡೆ ನಿಂತಂತೆ ಕಾಣತ್ತಿತ್ತು. ಹಳ್ಳಿಮನೆಯ ಸುತ್ತಮುತ್ತˌ ಕಾಡಿನ ಹಾದಿಯದ್ದ ಎಡೆಬಿಡದೆ ಕಾಡಿದ್ದ ಹಿಮಮಾರುತದ ಪ್ರಕೋಪ ಆಶ್ಚರ್ಯಕರವಾಗಿ ಇರುಳಿನ ನಿದ್ದೆ ಕಳೆದು ಹೊಸ ಬೆಳಗಿಗೆ ಮೈ ಮುರಿದುಕೊಂಡು ಮಗ್ಗುಲು ಬದಲಿಸಿ ಏಳಲು ಹವಣಿಸುವಂತೆ ಕಾಣಿಸುತ್ತಿದ್ದ ಪಟ್ಟಣದ ಸಮೀಪ ಅಷ್ಟು ಕಾಡುತ್ತಿದ್ದಂತಿರಲಿಲ್ಲ. 

ಪರಿಸರ ಆಗೊಮ್ಮೆ ಈಗೊಮ್ಮೆ ಬೀಸುತ್ತಿದ್ದ ಚಳಿಗಾಳಿಯ ಮರ್ಮರದ ಹೊರತು ಶಾಂತವಾಗಿಯೆ ಇತ್ತು. ಆ ಶಾಂತತೆಯ ಕೊಳಕ್ಕೆ ಕಲ್ಲೆಸೆದಂತೆ ಆಗೊಮ್ಮೆ ಈಗೊಮ್ಮೆ ಯಾರದ್ದೋ ಲಾಯದಿಂದ ಕುದುರೆಯ ಕೆನೆತˌ ಇನ್ಯಾರದ್ದೋ ಕೊಟ್ಟಿಗೆಯಿಂದ ತನ್ನ ಕರುವ ಕೂಗಿ ಕರೆಯುತ್ತಿದ್ದ ದನದ ಕೂಗುˌ ತನ್ನ ಕಂದನಿಗೆ ಹಾಲೂಡಿಸುವ ಸುಖದ ಪರಾಕೇಷ್ಠೆಯಲ್ಲಿ ಟ್ರೋಂಯ್ ಗುಡುತ್ತಿದ್ದ ಎಮ್ಮೆಯ ಕೂಗು. ಬೆಳಗಾಗಿದ್ದರೂ ಸಹ ಇನ್ನೂ ಹಾಸಿಗೆ ಬಿಟ್ಟೇಳದ ಮಕ್ಕಳನ್ನ ಅಡುಗೆ ಮನೆಯ ಪಾತ್ರೆಯ ಸದ್ದು ಗದ್ದಲದ ನಡುವೆಯೆ ಕೂಗಿ ಬೈದು ಎದ್ದೇಳಿಸಲು ಹೆಣಗುತ್ತಿದ್ದ ಅಮ್ಮಂದಿರ ಕೂಗುˌ ತಮ್ಮ ಯಜಮಾನರು ಅದ್ಯಾವಾಗ ಬೆಳಗಿನ ಮೇವು ಹಾಕಿ ಗೂಡಿನಿಂದ ಹೊರಗೆ ಬಚ್ಚಲ ಕೆಸರಿನ ಹುಳ ಹುಪ್ಪಡಿ ಹುಡುಕಿ ಭೋಜನವನ್ನಾರಂಭಿಸಲು ಹೊರಗೆ ಬಿಟ್ಟಾನೆಯೋ ಎಂದು ಚಡಪಡಿಸುತ್ತಾ ಒಟಗುಟ್ಟುತ್ತಿದ್ದ  ಬಾತುಕೋಳಿಗಳ ಲಯಬದ್ಧ ಕುಕ್ಕೂ ಸ್ವರ ಹೌದೋ ಅಲ್ಲವೋ ಎನ್ನುವಂತೆ ಅವನ ಕಿವಿಗಾಪು ಹಾಕಿದ ಶ್ರವಣದ್ವಯಗಳ ಮೇಲೆ ಬೀಳುತ್ತಿದ್ದಂತೆಯೆ ಅವರಿಬ್ಬರೂ ಕೂಡಿ ಪಟ್ಟಣ ಪ್ರವೇಶಿಸಿದ್ದರು. 


ಮೊದಲಿಗೆ ಸುಲ್ತಾನನ ಆರೈಕೆಯೆ ಅವನ ಆದ್ಯತೆಯಾಗಿತ್ತು ಅನ್ನುವುದನ್ನ ಬಿಡಿಸಿ ಹೇಳಬೇಕಿರಲಿಲ್ಲ. ಅವನ ಶೀತದ ಬಾಧೆ ಕೈ ಮೀರುವ ಮೊದಲೆ ಕುದುರೆಗೆ ಔಷಧೋಪಚಾರ ಮಾಡಿಸಿಯೆ ಮುಂದಿನ ಕೆಲಸಗಳಿಗೆ ಕೈ ಹಾಕಲು ಅವನು ನಿರ್ಧರಿಸಿದ್ದ. ಅವರ ಸವಾರಿ ಮೊದಲು ಊರೊಳಗಿನ ಅವರ ಮನೆಗೆ ಹೋಗಿ ತಲುಪಿತು. ಓಣಿ ದಾಟಿ ಹಟ್ಟಿಯತ್ತ ಅವರು ಸಾಗಿದರು.


***********


https://youtu.be/h7vTDUvLNF8


https://youtu.be/YarwjMttRuM


https://youtu.be/M5OfqPT7HsI


https://youtu.be/_7PDVYYyH5w