ಪಾಪದ ನೆರಳಿದೆ ನನ್ನ ಹಿಂದೆ....
ಪಶ್ಚಾತಾಪಕ್ಕೂ ಇಷ್ಟು ಎಡೆ ಇರದಷ್ಟು ಸಂಕಟ ಚೀತ್ಕಾರದ ಕೊರಳಿದೆ
ನಿನ್ನ ಶಾಪಕ್ಕೆ ಖಂಡಿತಾ ಬಲಿಯಾಗುತ್ತೀನಿ ನಾನು,
ನನ್ನೆದುರಿಗೆ ನೀ ಬಿಟ್ಟ ನಿಟ್ಟುಸಿರುಗಳ ಆಕ್ರಂದನಗಳ ಉರುಳಿದೆ,
ಬಾಳಿನ ತಿರುವೊಂದರಲ್ಲಿ ಅಪ್ಪಿತಪ್ಪಿ ನಾವು ಮತ್ತೊಮ್ಮೆ ಎದುರಾದರೂ/
ನೀ ನನ್ನ ನೋಡಿ ಮುಗುಳ್ನಗ ಬೇಡ!,
ಈಗಾಗಲೆ ಸಂಕಟದ ಕೊನೆಯುಸಿರುಗಳನ್ನ ಎಣಿಸುತ್ತಿರುವ ನನಗೆ....
ಮತ್ತೆ ಮತ್ತಷ್ಟು ದಿನ ಬದುಕುಳಿಯಲು ಸುಲಭದ ನೆಪವೊಂದು ಸಿಕ್ಕ ಹಾಗಾಗುತ್ತದೆ,
ಎದೆಯ ಬಿರಿಸಿದ ಭಾವಗಳೊಂದೊಮ್ಮೆ....
ಮುರುಟಿದ ಮನಸಲ್ಲೂ ಮತ್ತು ಬರಿಸಿತ್ತು
ಕನಸ ಮರೆತ ನನ್ನ ಕಣ್ಗಳಿಗೂ ಒಮ್ಮೆ ಸುಖದ ನಿದ್ರೆ ತರಿಸಿತ್ತು//
ಈ ದಡದಲ್ಲಿ ನಾನಿನ್ನೂ ಕಾದು ನಿಂತೆ ಇದ್ದೇನೆ
ಸಂಜೆ ಸೂರ್ಯ ಕಂತಿದ ಮೇಲೂ ನೀ ಬರಬಹುದು....
ಹೀಗಾಗೆ ನನ್ನ ಕೈಗಳಲ್ಲಿ ನಿರೀಕ್ಷೆ ಮಿಣುಕುತ್ತಿರುವ ಕ್ಷೀಣ ರಶ್ಮಿಯ ಲಾಟೀನಿದೆ
ಕಡೆಯವರೆಗೂ ಹೀಗೆ ಕಾದಿರುತ್ತೇನೆ....ಮರೆಯದೆ ಬರುತ್ತೀಯಲ್ಲ?/
ಕಾಡುವ ನೆನಪುಗಳು ಒಳಗೊಳಗೇ ಕಾದುವಾಗ
ಮನಸು ಅಕಾರಣವಾಗಿ ರಣರಂಗವಾಗಿದೆ,
ಆಸೆಯ ಬೊಟ್ಟನ್ನ ಮಧುರ ಭಾವಗಳ ನೊಸಲಿಗಿಟ್ಟು.....
ಕನಸಿನ ಕಸೂತಿ ಹಣೆದ ಸೆರಗನ್ನ ಹಾಗೆ ಹೊದೆಸಿ,
ಬಿಸಿಲಿಗೆ ಬಾಡದಂತೆ ನಿನ್ನ ಮೌನವನ್ನ ಹಾಗೆ ನನ್ನೆದೆಗೆ ಇಳಿಸಿಕೊಳ್ಳುವ ಕನಸು
ನನಸಾಗುವ ದೂರದೂರದ ಸಾಧ್ಯತೆಗಳೂ ನನಗೆ ಗೋಚರಿಸುತ್ತಿಲ್ಲ//
ಕರೆದಲ್ಲಿಗೆ ಬರುವ ನಿನ್ನ ನೆನಪುಗಳಿಗೆ ನಿನ್ನಷ್ಟು ಭಿಡೆಯಿಲ್ಲ
ನೀನಿತ್ತ ಸುಮಧುರ ಯಾತನೆಗೆ ನನ್ನುಸಿರ ಕೊನೆವರೆಗೂ ತಡೆಯಿಲ್ಲ....
ಗುರಿಯಿರದೆ ಹೊರಟಿದ್ದೇನೆ ಅಂದುಕೊಂಡಿದ್ದಾರೆ ನೋಡಿದವರೆಲ್ಲರೂ
ಅದವರ ತಪ್ಪಲ್ಲ, ನಿನ್ನೆದೆಯ ಗುರಿ ನನಗೆ ಮಾತ್ರ ಕಾಣುತ್ತಿದೆ,
ಮುಗಿಲು ಹೆತ್ತ ಹನಿಗಳು ಸಂಕಟದ ಮಳೆಯೂ ಆಗಿರಬಹುದು
ಸಂತಸದ ಇಬ್ಬನಿ ಹೊಳೆಯೂ ಆಗಿರಬಹುದು
ಕಾಲ ಅದನ್ನ ನಿರ್ಧರಿಸುತ್ತೆ/
ನನ್ನೆದೆಗೆ ನಾನೇ ಹೊಡೆದ ಒಲವಿನ ಮೊಳೆ
ಕೀಳದಿದ್ದರೂ ನೋವೆ....
ಕಿತ್ತರೂ ಖಚಿತವಿದೆ ಸಾವೆ,
ಬರಡು ಬಾಳಿನ ಹಸನು ಹೆಚ್ಚಿಸಿಕೊಳ್ಳೋಕೆ
ಹೃದಯ ಮಾಡಿಕೊಳ್ಳುವ ಹನಿ ನೀರಾವರಿ ಪ್ರೇಮ....
ಅದೊಂಥರಾ ನಮ್ಮ ಕಣ್ಣ ಬಿಳುಪಿನಲ್ಲೆ ಮೂಡಿ
ನಮಗೇನೆ ಕಾಣದೆ ಮಿಂಚುವ ಚಂದದ ಕಪ್ಪು ಮಚ್ಚೆ//
16 January 2012
Subscribe to:
Post Comments (Atom)
No comments:
Post a Comment