24 December 2011

ವಿಮುಖವಾಗಿರುವ ಮನಸಿನ ತುಂಬಾ ಮತ್ತೆ ....

ಕತ್ತಲಲ್ಲಿ ಕಲೆತ ಮನಸಿನ ಭಾವಗಳು ಕಿರುಬೆಳಕಿನ ತಲಾಶಿನಲ್ಲಿದ್ದಾಗ
ನೀನು ಕಂಡಿದ್ದೆ....
ಕೈ ಸಿಗುವ ಮುನ್ನವೆ ಆರಿ ಹೋದ ಮರುಕ್ಷಣ
ಆ ಮಧುರಭಾವಗಳನ್ನ ನೀನೇನೆ ನಿರ್ದಾಕ್ಷಿಣ್ಯವಾಗಿ ಕೊಂದಿದ್ದೆ,
ಒಲವಿನ ದಿನಗೂಲಿ ಸಿಕ್ಕರೂ ಸಾಕಿತ್ತು
ಬಾಳಿಡಿ ಕನಸಿನ ಜೀತ ಮಾಡಿಕೊಂಡು ನಿನ್ನೆದೆಯ ಮೂಲೆಯಲ್ಲೆ ಬಿದ್ದಿರಲು....
ನನ್ನ ಮನಸು ಕೊನೆಯುಸಿರಿನವರೆಗೂ ಸದಾ ತಯಾರು/
ಮನದ ಬರಡಿನಲ್ಲಿ ಚಿಗುರಿದ ನಿರೀಕ್ಷೆಯ ಬಳ್ಳಿಯಲ್ಲಿ
ಅರಳಿದ ಆಕಾಂಕ್ಷೆಯ ಹೂವನ್ನ....
ನನ್ನೆದೆಯ ತೊಟ್ಟಿನಿಂದ ನಿನ್ನ ಬೆರಳುಗಳೆ ಮೃದುವಾಗಿ ಬಿಡಿಸಲಿ,
ನನ್ನ ಮನಃಪಟಲದಲ್ಲೂ ನಿನ್ನ ಕಣ್ ಎರಚಿದ ರಂಗುಗಳೆಲ್ಲ....
ನಿನ್ನ ಚಿತ್ರವನ್ನೆ ಸೊಗಸಾಗಿ ಬಿಡಿಸಲಿ//




ಸಂತಸದ ಹನಿಗಳೆಲ್ಲ ನೋವಿನ ಮೋಡಗಳಾಗಿ
ಕಾಣದ ಊರಿಗೆ ತೇಲಿ ಹೋದ ಮೇಲೆ....
ನನ್ನ ಕಣ್ಣಂಚಲಿ ಉಳಿದದ್ದು ಸಂಕಟದ ನಾಲ್ಕು ಹನಿಗಳಷ್ಟೆ,
ಮನಸಿನ ಕೇರಿಯ ಕೊನೆಯ ತಿರುವಿನಲ್ಲಿ ಕಂಡ ಬಿಂಬ ಕೇವಲ ನಿನ್ನದಾ?
ಇಲ್ಲಾ ನೋವಲಿ ನರಳಿ ಕಾಲೆಳೆದುಕೊಂಡು ಸಾಗಿದ ನನ್ನದಾ?/
ಮೂಕ ಮನದ ಮೌನ ರಾಗದಲ್ಲಿ ಅದೇನೂ ವಿಷಾದದ ಕಿರುಛಾಯೆ
ಕಲಕಿರುವ ಎದೆಯ ಕೊಳದಲ್ಲಿ ನಿನ್ನ ಬಿಂಬವೂ ಕಲಕಿ ಹೋದಂತ ಅನುಭವ...
ಸಾಗದ ದೋಣಿಯ ತಳ ತೂತಾಗಿರುವ ವಾಸ್ತವಕ್ಕೆ,
ವಿಮುಖವಾಗಿರುವ ಮನಸಿನ ತುಂಬಾ ಮತ್ತೆ
ಸುಖಸಾಗರದಲ್ಲಿ ತೇಲುತಾ ಸಾಗುವ ಹಗಲು ಕನಸಿನ ಕಲರವಗಳದ್ದೆ ಸದ್ದು//



ಮೂಕ ಮನದ ಮೌನ ರಾಗದಲ್ಲಿ ಅದೇನೂ ವಿಷಾದದ ಕಿರುಛಾಯೆ
ಕಲಕಿರುವ ಎದೆಯ ಕೊಳದಲ್ಲಿ ನಿನ್ನ ಬಿಂಬವೂ ಕಲಕಿ ಹೋದಂತ ಅನುಭವ...
ಸಾಗದ ದೋಣಿಯ ತಳ ತೂತಾಗಿರುವ ವಾಸ್ತವಕ್ಕೆ
ವಿಮುಖವಾಗಿರುವ ಮನಸಿನ ತುಂಬಾ,
ಮತ್ತೆ ಸುಖಸಾಗರದಲ್ಲಿ ತೇಲುತಾ ಸಾಗುವ ಹಗಲು ಕನಸಿನ ಕಲರವಗಳದ್ದೆ ಸದ್ದು/
ಒಲವ ಗಲ್ಲಿಗಲ್ಲಿ ಸುತ್ತಿ, ನಿರೀಕ್ಷೆಯ ಕೊಡಚಾದ್ರಿ ಹತ್ತಿ
ಕಡೆಗೆ ಈ ನಿರಾಕರಣೆಯ ಕಡಲತೀರದಲ್ಲಿ....
ನನ್ನದೂ ಕೆಲವು ಕಣ್ಣೀರ ಹನಿಗಳನ್ನ ಅದಕ್ಕೆ ಸೇರಿಸುತ್ತಾ ಮೌನವಾಗಿ ನಿಂತಿದ್ದೇನೆ,
ತೆಂಕಣ ಸುಳಿಗಾಳಿಗೆ ತೇಲಿ ಬಂದ ತುಣುಕು ಮೋಡವೊಂದು....
ಇಲ್ಲೂ ನಿರೀಕ್ಷೆಯ ಹನಿಯೊಂದರ ಆಸೆ ಹುಟ್ಟಿಸಿ ಹಾಗೆ ಬಾನಂಚಿನಲ್ಲಿ ತೇಲುತಿದೆ//

No comments: