ಅಲೆಗಳ ಮೇಲೆ ಅಳಿವ ಬಿಂಬ ನಿನ್ನ ಪಾಲಿಗೆ ನಾನಾದರೂ
ನನ್ನ ಪಾಲಿಗೆ ನೀನು ಅಳಿಸಿ ಮರೆಸಲಾಗದ ಶಾಶ್ವತ ಹಚ್ಚೆ....
ಹೇಳು ಇದೂನು ಒಂಥರಾ ಹುಚ್ಚೆ,
ನಿರಾಶ ಮನಸಿನ ಕತ್ತಲಲ್ಲಿ ನಿನ್ನ ಹೆಸರೆ ಬೆಳಕಿನ ಬೆಳ್ಳಿಗೆರೆ
ನಿರೀಕ್ಷೆ ಬತ್ತಿ ಹೋದ ನನ್ನ ಅಮವಾಸ್ಯೆಯ ಬಾನಲ್ಲಿ ನೀನೇನೆ ಹೊಳೆವ ಒಂಟಿ ತಾರೆ/
ಮೆಲ್ಲನೆ ನಾನು ಹೊದ್ದ ಚಾದರದ ಒಳಗಿಂದ ಹೊರಗಿಣುಕಿದ ನಿನ್ನ ಕನಸುಗಳೆಲ್ಲ
ಹೊರಗಿನ ಚಳಿಗೆ ಹೆದರಿ ನಡುಗಿ ಮತ್ತೆ ನನ್ನ ಮನಸೊಳಗೆ ಅಂತಾರ್ಧನವಾದವು.....
ಬಾಯ್ಬಿಡದೆ ಬಾಕಿಯುಳಿದ ಮಾತುಗಳನ್ನೆಲ್ಲ ಬರವಣಿಗೆಗಿಳಿಸಿ
ಮೌನದ ಕಥೆ ಕಟ್ಟುತ್ತಿದ್ದೇನೆ,
ಎಂದಾದರೊಮ್ಮೆ ನೀನಿದನ್ನ ಓದುವ ಕ್ಷೀಣ ಭರವಸೆ ನನಗಿದೆ//
ಹೆಸರಿನ ಹಂಗಿಲ್ಲದ ನನ್ನ ನಿನ್ನ ನಡುವಿನ ಬಂಧ ಅದೆಷ್ಟು ಗಾಢ.....ಅದೂನೂ
ಬಾನ ಆವರಿಸಿ ಬಿಡಲಾರದೆ ಅಪ್ಪಿಕೊಂಡಂತೆ ಶ್ಯಾಮಲ ಮೋಡ....
ಕನಸ ಹೊತ್ತು ತರುವ ಕುಳಿರ್ಗಾಳಿಗೆ
ಖಂಡಿತಾ ನಿನ್ನುಸಿರ ಪರಿಚಯವೂ ಇದ್ದೀತು,
ಹಾಗಿರೋದರಿಂದಲೆ ಅನುಮತಿ ಇಲ್ಲದೆ ನನ್ನ ಮನಸನೂ ಹೊಕ್ಕು
ಅದು ಅಲ್ಲಿರುವ ಮಾತುಗಳನ್ನೂ ಸಹ ಕದ್ದೀತು/
ಸರಾಗ ಶ್ವಾಸದ ಮೆಲುಗಾನದಲ್ಲಿ ಚೂರು ನಿಟ್ಟುಸಿರಿದೆ ಜೊತೆಗೆ ನೀನಿಲ್ಲದಕ್ಕೆ
ಬಿಸಿಯುಸಿರೂ ಅಲ್ಲೊಂದಿಲ್ಲೊಂದು ಇದ್ದೇ ಇದೆ....
ಜೊತೆಗೆ ಕನಸಲ್ಲಾದರೂ ನೀ ನಗು ಚಲ್ಲುವುದಕ್ಕೆ,
ಸರಾಗ ಶ್ವಾಸದ ಮೆಲುಗಾನದಲ್ಲಿ ಚೂರು ನಿಟ್ಟುಸಿರಿದೆ ಜೊತೆಗೆ ನೀನಿಲ್ಲದಕ್ಕೆ
ಬಿಸಿಯುಸಿರೂ ಅಲ್ಲೊಂದಿಲ್ಲೊಂದು ಇದ್ದೇ ಇದೆ
ಜೊತೆಗೆ ಕನಸಲ್ಲಾದರೂ ನೀ ನಗು ಚಲ್ಲುವುದಕ್ಕೆ//
ಅದು ನೀನೊ
ಚಳಿಗೆ ಮೈ ಸೋಕಿದ ಮುಂಜಾನೆ ಸೂರ್ಯನ ಬೆಚ್ಚನೆ ಕಿರಣವೊ?......
ಅದು ನಿನ್ನ ಬಿಸಿಯುಸಿರೊ
ಇಲ್ಲಾ ಅದೆಲ್ಲದಿಂದಲೋ ಬೀಸಿಬಂದ ಮುದದ ಗಾಳಿಯ ಅಂತಃಕರಣವೊ,
ನನ್ನ ನೋವಿಗೆ ನೇರ ಹೊಣೆಯಾದ ನೀನು
ನನ್ನೆದೆಯ ಆಪ್ತ ಮೌನಕ್ಕೆ ಮಾತು ಕೂಡ ಹೌದು......
ಬಿರುಗಾಳಿ ಆರಿಸುವ ದೀಪಕ್ಕೆ ತುಸುಗಾಳಿ ಸಂಜೀವಿನಿಯಾದಂತೆ ನೀನೂನು/
ಈ ಕೊರೆವ ಚಳಿಯಲಿ ಬೇಕೇಬೇಕು
ಎದೆ ಸುಡುವ ನೀನಿತ್ತ ವಿರಹದ ಆರದ ಕಿಚ್ಚು....
ತುಸುವಾದರೂ ಮನಸಿನ ಒಳಗೆ ಬೆಚ್ಚಗಾಗಲು,
ಮನದ ಭಿತ್ತಿಯ ಮೇಲೆ ಬಿದ್ದ ನಿನ್ನೊಲವಿನ ಶಾಯಿಗುರುತು
ಅಳಿಸಲಾಗದಂತೆ ಅಲ್ಲಿಯೆ ಚಿರವಾಗಿದೆ....
ಸಂಯಮದ ನಿರೀಕ್ಷೆ ಕಲಿಸಿದ ನಿನ್ನೊಲವ ನಿರಾಕರಣೆ
ನನ್ನೊಳಗೂ ಹಟಯೋಗವನ್ನೆ ಹುಟ್ಟಿಹಾಕಿರೋದು....
ಚಂಚಲ ಚಿತ್ತನಾದ ನನಗೇನೆ ಒಂದು ಆಶ್ಚರ್ಯ//
24 December 2011
Subscribe to:
Post Comments (Atom)
No comments:
Post a Comment