ನೋವಿನ ನೂರು ಸುಳಿಗಳೆ ಏಕಿವೆ
ಎದೆಯೊಳಗೆ ಸುನಾದ ಗೈಯುತ್ತಾ ಹರಿಯುವ ತಂಪು ತುಂಗೆಯಲ್ಲಿ.....
ಪ್ರಾಮಾಣಿಕ ಪ್ರೀತಿಯೇಕೆ ಮುದುಡಿದ ಪಾರಿಜಾತವಾಗಿ ಬಹು ಬೇಗ ಬಾಡಿ ಹೋಗುತ್ತದೆ?
ಉತ್ತರ ನನಗೂ ಗೊತ್ತಿಲ್ಲ!/
ನನಪುಗಳನ್ನ ಸವರಿಕೊಂಡು ಹೋದ ಗಾಳಿಯಲ್ಲೂ
ತೇಲಿ ಹೋಗುತಿದೆ ಪ್ರೀತಿಯ ಅಮಲು.....
ಹುಲ್ಲ ಮೇಲೆ ಹೊಳೆವ ಹನಿ ಇಬ್ಬನಿಗೂ ಇದೆ ಅದರಲ್ಲಿ ಚೂರು ಪಾಲು,
ಸಾವಿರ ಸುಳ್ಳುಗಳ ಜೀನಿಲ್ಲದ ಬತ್ತಲೆ ಕುದುರೆಯ ಬೆನ್ನನೇರಿ
ಹುಚ್ಚು ಗುರಿಯತ್ತ ಹೊರಟಿರುವ ನಾನು....
ನಿನ್ನ ನಿರಾಕರಣೆಯನ್ನ ವಾಸ್ತವವೆಂದು ಒಪ್ಪಲಾರದ ಅಪ್ಪಟ ಹುಂಬ//
ಖಾಲಿ ಎಲ್ಲಿದೆ? ಹುಡುಕಿದರೂ ಹನಿ ತೂರಿಸುವಷ್ಟೂ ಸ್ಥಳವಿಲ್ಲ
ಇನ್ಯಾರನ್ನಾದರು ಹೇಗೆ ತಾನೆ ಮನಸಿನ ಒಳಕೋಣೆಗೆ ಬಿಟ್ಟುಕೊಳ್ಳಲಿ?
ಆವರಿಸಿ ಕೊಂಡಿರುವಾಗ ನೀನೇನೆ ಅದರ ತುಂಬಾ,
ನದಿಯಂತೆ ಮಂದವಾಗಿ ಹರಿಯುವ ಮನದ ಆವೇಗಕ್ಕೆ...
ನಿನ್ನೊಲವಿನ ಒದ್ದು ಅಡ್ಡ ಸಿಕ್ಕಲಿ ಅನ್ನೋದು ತೀರದ ಒಂದಾಸೆ/
ನನ್ನೆದೆಯ ಸಿತಾರಿನಲ್ಲಿ ನಾ ನುಡಿಸಿದ ಮಧುರ ಮಲ್ಹಾರ....ನೀನು
ನನ್ನುಸಿರ ಕೊಳಲು ಕಾತರಿಸಿದ ಹಂಸಧ್ವನಿ.....
ನಿನ್ನ ಹೆಜ್ಜೆಯ ಸಪ್ಪಳ ಕೇಳಲು ಕಾದಿರುವ ಶಬರಿ
ನಿನ್ನ ನೆನಪಲ್ಲೆ ದಿನ ಎಣಿಸುತ್ತಿರುವ ಆ ಶೋಕವನದ ವೈದೇಹಿ.....
ಈ ಅಜ್ಞಾತವಾಸದಿಂದ ಹೊರಬರಲು ಕನವರಿಸುತ್ತಿರೊ ನಿನ್ನ ಪಾಂಚಾಲಿ....ನಾನು
ನಿನಗಾಗಿಯೆ ಜನಮಜನುಮದಲ್ಲೂ ಕಾತರಿಸುವ ಕ್ಷೀಣ ಆಕ್ಷಾಂಶೆಯ ರಾಧೆ
ಅದೇನೆ ಇರಲಿ ನಿನ್ನೊಳಗೆ ನನ್ನೆಡೆಗಿನ ಇರಾದೆ//
ಎದೆಯ ಕತ್ತಲಲ್ಲಿ ನಿನ್ನ ಕಣ್ಣ ಕುಡಿದೀಪ ಮಿನುಗುತ್ತಿರುವಾಗ
ನೆನಪಿನ ಬುತ್ತಿ ಮನದ ಕೈಚೀಲದಲ್ಲಿ ಜತನವಾಗಿರುವ ತನಕ....
ನಾನೊಂಟಿ ಹೇಗೆ ಆದೇನು?,
ಎದೆಗಡಿಯಾರದಲ್ಲಿ ಟಿಕಟಿಕಿಸುವ ಭಾವದ ಮುಳ್ಳುಗಳೆಲ್ಲ
ಹೃದಯದ ಅಂಚಿಗೆ ಗೀರಿ ನೋವಿನ ನೆತ್ತರು ಚಿಮ್ಮಿದೆ/
ಋತುಗಳ ಕನವರಿಕೆಗಳೆ ಮಳೆಹನಿಗಳಾಗಿ
ಆಗಾಗ ಇಬ್ಬನಿ ಹನಿಗಳಾಗಿಯೂ ನೆಲದೆದೆಯ ಸೋಕುವ ಹಾಗೆ...
ನಿನ್ನ ನೆನಪಿನ ತೇವ ನನ್ನೆದೆಯಲ್ಲಿ ಶಾಶ್ವತ
ಕನಸಿನ ಹಸಿರು ಆಗಾಗ ನನಸಿಗೂ ದಾಟುವಾಗ,
ಅದಕ್ಕೆ ನೆಪವಾಗೋದು ಕೇವಲ ನೀನು....ನಿನ್ನುಸಿರು//
ನಿನ್ನ ಹೊರತು ಇನ್ಯಾರೂ ಇರಲಿಲ್ಲ
ನೀನಲ್ಲದೆ ಇನ್ಯಾರೋ ಇಲ್ಲ.....
ಅದು ನೀನೆ ಆಗಿದ್ದೆ,
ನನ್ನ ಕನಸಲಿ ಸರಿದ ನೆರಳಿನ ಮೂಲದಲ್ಲಿ ನೀನೇನೆ ಇದ್ದೆ/
ಮೌನಕಣಿವೆಯ ಅಂಚಲಿ ನಿಂತು ಕಣ್ಣೀರಿಡುತ್ತಿರುವ ಎದೆಯ ಮೂಕರೋಧನ
ಮೂರ್ದೆಸೆಯಲ್ಲೂ ಮಾರ್ದನಿಸುತ್ತಿದೆ...
ಒಲವಿನ ದಿನಗೂಲಿ ಸಿಕ್ಕರೂ ಸಾಕಿತ್ತು
ಬಾಳಿಡಿ ಕನಸಿನ ಜೀತ ಮಾಡಿಕೊಂಡು ನಿನ್ನೆದೆಯ ಮೂಲೆಯಲ್ಲೆ ತಕರಾರಿಲ್ಲದೆ ಬಿದ್ದಿರಲು,
ನನ್ನ ಮನಸು ಕೊನೆಯುಸಿರಿನವರೆಗೂ ಸದಾ ತಯಾರು//
21 December 2011
Subscribe to:
Post Comments (Atom)
No comments:
Post a Comment