23 June 2014

ಭಾವಶೂನ್ಯ ಬರಿ ಪದಗಳಿಗೆ ಖಂಡಿತಾ ಆ ಬಲವಿಲ್ಲ......





ತೇನೆ ಹಕ್ಕಿ ದೂರದಲ್ಲಿ ತನ್ಮಯವಾಗಿ ಹಾಡಿದ ವಿಷಾದದ ತಾಣಕ್ಕೆ
ಅನಿಯಂತ್ರಿತವಾಗಿ ಹೆಜ್ಜೆ ಹಾಕುವ ಮರುಳಿಗೆ
ಕೊನೆಗೂ ಆ ಜಾಗ ಕಾಣ ಸಿಗಲಿಲ್ಲ.....
ಕಣ್ಣ ರಾಯಭಾರಕ್ಕೆ ಬೆಣ್ಣೆಯಂತೆ ಕರಗುವ ಹೃದಯದ ಕಲ್ಲಿಗೆ
ಬಾಳು ಧೂಳಾಗಿ ಹೋದಾಗಲಷ್ಟೆ ವಾಸ್ತವದ ಕಠೋರತೆ ಅರಿವಿಗೆ ಬರುತ್ತದೆ,
ಇರುಳ ಏಕಾಂತದ ನಶೆಗೆ ಕನ್ನ ಹಾಕಿದ ಕನಸುಗಳಿಗೆಲ್ಲ
ನಿತ್ಯ ನಲಿವಿನ ದೂರದ ಬೆಟ್ಟವನ್ನ ತೋರಿಸಿ ಮನಸ ನಯವಾಗಿ ಯಾಮಾರಿಸುತ್ತವೆ......
ಹುಟ್ಟು ಮೂಗನ ಮೌನದಷ್ಟು ಸಹಜವಲ್ಲ
ವಿರಹ ಹುಚ್ಚೆಬ್ಬಿಸಿ ಮನದೊಳಗೆ ಹುಟ್ಟಿಸುವ ಮೌನಿ ಕೂಸಿನ ನಿಶ್ಯಬ್ಧ./
ಸೋಕಿ ಹೋದ ಗಾಳಿ ಮತ್ತೆ ಬಾನಿನಾಳವ ಸೋಕುವುದಿಲ್ಲ
ತಾಕಿ ಹೋದ ಮಳೆ ಹನಿ ಮರಳಿ ನೆಲದೆದೆಯ ತಣಿಸುವುದಿಲ್ಲ.....
ಕುರುಳು ಕಟ್ಟಿಕೊಂಡು ಸೂಡಿಯಾದ ಕನಸ ಮುಡಿಯೊಳಗೆ
ಅಸಂಖ್ಯ ನಿರೀಕ್ಷೆಯ ಅಮೂಲ್ಯ ಕೇಶರಾಶಿ ಅಡಗಿದೆ,
ಸಿಕ್ಕು ಬಿಡಿಸಿ ಒಂದೊಂದನ್ನೆ ಈಡೇರಿಸಿಕೊಳ್ಳುವಷ್ಟರವರೆಗೆ
ಈ ಸೀಮಿತ ವಾಯಿದೆಯ ಬಾಳು ತಾಳ್ಮೆಯಿಂದ ಕಾದೀತ?.....
ಬಂದು ಸುರಿದು ತಣಿಸುತ್ತದಂತೆ ಖಂಡಿತ ನಾಳೆ
ನಂಬುವುದೋ? ಬಿಡುವುದೋ?
ಇಂದು ಮಾತು ತಪ್ಪಿದ ಮೋಡ ನೆಲದೆದೆಯ ಮೇಲೆ ಒಲವ ಮಳೆ.//


ವಿಧಿ ಆಸೆ ತೋರಿಸಿ ವಿಧಿ ವಂಚಿಸಿದ ಮಗು ನಾನು
ಮೊಗ್ಗಲ್ಲಿ ಮುದ್ದಿಸಿ ಅರಳುವ ಹಂತದಲ್ಲಿ ನೀನೆ ಬಯಸಿ
ಹೊಸಕಿ ಹಾಕಿದ ಹೂ ಮೊಗದ ಮೇಲಿದ್ದ ನಸು ನಗುವಲ್ಲವೇನು?....
ಹುತ್ತ ಕಟ್ಟಿ ಹೋಗಿ ಮತ್ತೆ ಹುಡುಕ ಬಂದರೆ
ಮರಳಿ ಕಾಯ ಕಾಣಿಸುವುದಾದರೂ ಹೇಗೆ?,
ಕನಸು ದೊಡ್ಡದಿದ್ದರೂ ಸಹ ಈಡೇರದೆ ಹೋದ
ಅನೇಕ ಆಸೆಗಳು ಮಾತ್ರ ಅತಿ ಸಣ್ಣದಾಗಿಯೆ ಇದ್ದವು ಅನ್ನೊದು
ಮನದಾಳದ ಪ್ರಾಮಾಣಿಕ ಪಿಸುಮಾತು......
ಯಾರವನೂ ಆಗಿರದ
ಯಾರ ಗಾಳಕ್ಕೂ ಯಾವತ್ತಿಗೂ ಬೀಳದ
ಯಾರಿಗೂ ಹೋಗಿ ಕೊನೆಮೊಮ್ಮೆ ಮುಟ್ಟದ
ಫಕೀರ ಬಾಳಿಗೆ ಖಚಿತ ದಿಕ್ಕು ಇದೆ ಆದರೆ ದೆಸೆ ಮಾತ್ರ ಕಾಣುತ್ತಿಲ್ಲ./
ಮೌನಯಾನದ ನಡುವೆ ನಡುಗಡಲಿನಲ್ಲಿ ಸೋತು ನಿಂತ ನಾವೆಗೆ
ನಾಳೆಯ ನಿರೀಕ್ಷೆಗಳೊಂದಿಷ್ಟು
ದೂರ ತೀರವ ಹೋಗಿ ಮುಟ್ಟುವಂತೆ ಪುಸಲಾಯಿಸುತ್ತವೆ....
ತಂಪು ಸುರಿದ ಹಗಲಿನುದ್ದ ಹನಿ ಮಳೆಯ ಕನಸು ಜೀವಂತವೆ ಆಗಿತ್ತು
ಆದರೆ ದುರುಳ ಬಾನ ಕಣ್ಣಲ್ಲಿ ಕೇವಲ ಮಳೆಯ ಸುರಿವ ಸೋಗಿತ್ತು,
ಮೋಹಕವಾಗಿ ಮನವ ಆಗಾಗ ದೋಚಿದ ವಿರಳ ಮಂದಹಾಸಗಳಿಗೆ
ಬರಡು ಬಾಳನ್ನ ಹಸಿರಾಗಿಸಿದ ಹಿರಿಮೆ ಇದೆ.//



ಒಮ್ಮೆ ಒಂದಕ್ಕೆ ಅಂಟಿದ ಮೇಲೆ
ಕೊನೆಯವರೆಗೂ ನಂಟನ್ನ ಕಳೆದುಕೊಳ್ಳದವನಾದ ಮೇಲೆ....
ಆಗುವ ಕಷ್ಟ ನಷ್ಟಗಳನ್ನೆಲ್ಲ ಸಹಿಸೋದು
ಅನಿವಾರ್ಯ ಕರ್ಮ,
ಒಮ್ಮೆ ಮನ ಸೋತ ಮೇಲೆ ಕಳೆದುಕೊಳ್ಳಲಿಕ್ಕೆ
ನನ್ನಲ್ಲಿ ಇನ್ನೇನೂ ಉಳಿದೇ ಇಲ್ಲ
ಒಮ್ಮೆ ಹಚ್ಚೆಯಾಗಿ ಮೂಡಿದ ನಂತರ
ನೆನಪುಗಳ ಛಾಯೆ ನನ್ನೊಳಗಿಂದ ಅಳಿದೆ ಇಲ್ಲ./
ಕಾಲನ ಕಠಿಣ ಅಣತಿ ಇದ್ದಂತೆ ಅಲ್ಲೆ ಉಳಿದು ಹೋದ
ಮತ್ತೆ ಮರಳಿ ಬಾರದ ನೆನ್ನೆಗಳ ಬಗ್ಗೆ ತಿರುಕನ ಕನಸನ್ನ ಕಾಣುತ್ತಿದ್ದೇನೆ....
ಸುಮ್ಮನೆ ಮೌನವಾಗುಳಿವ ನಿರ್ಧಾರ ಅಯಾಚಿತವಲ್ಲ
ಆದ ಅಪಮಾನಕಾರಿ ಅನುಭವಗಳ ಒತ್ತಾಸೆಯೂ ಅದಕ್ಕಿದೆ,
ಹಾಗೊಮ್ಮೆ ಆಗುವಂತಿದ್ದರೆ ಮತ್ತೆ ನಿನ್ನ ತೆಕ್ಕೆಗೆ ಮರಳಿ ಜಾರಬೇಕಿದೆ
ಇರುಳಿಡಿ ಬರೀ ಪಿಸು ಮಾತುಗಳನ್ನಾಡುತ್ತಾ ನಿನ್ನೊಲವಲ್ಲಿಎ ಜಾಗರಣೆ ಕೂರಬೇಕಿದೆ....
ಶುರುವಿಗೆ ಹುಟ್ಟಿದ ಪ್ರೀತಿ ಕೊನೆಯವರೆಗೂ ಜೊತೆಗಿರಬೇಕು
ನಿಷ್ಠೆ ಪ್ರಾಮಾಣಿಕತೆಗಳಿಲ್ಲದ ಭಂಡ ಬಾಳನ್ನ
ಮತ್ತೆ ಯಾಕಾದರೂ ಬಾಳಬೇಕು?//



ಹಳೆಯ ಹಾದಿಯ ಜಾಡಿನಲ್ಲಿ ಮೂಡಿರುವ ಹೆಜ್ಜೆಗಳು
ಆಳವಾಗಿ ಮನದ ಅವೆ ಮಣ್ಣಿನಲ್ಲಿ ಉಳಿದು ಹೋಗಿರೋವಾಗ
ಕಣ್ಣೀರ ಮಳೆಗೆ ಅಲ್ಲಿ ಕೆಸರೆದ್ದದ್ದು ಸಹಜ ತಾನೆ....
ಭಾವಶೂನ್ಯ ಬರಿ ಪದಗಳಿಗೆ ಆ ಬಲವಿಲ್ಲ
ಕೆಲವೆ ಕೆಲವು ಒಣ ಪದಗಳಿಗೆ ಅಗಲಿಕೆಯ ನೋವನ್ನ ಹಿಡಿದಿಡುವ
ಶಕ್ತಿ ಇರುವಷ್ಟು ಪೇಲವ ಒಲವಲ್ಲ,
ಇರುಳ ಚಳಿಯಲ್ಲಿ ಮುನ್ನೂರು ಮೈಲಿ ನಡುರಸ್ತೆಯ ಮೇಲೆ
ಅನಾಥನಾಗಿ ಒಬ್ಬಂಟಿಯಾಗಿ ತೇಲಿ ಗೂಡು ಮುಟ್ಟುವಷ್ಟು ಹೊತ್ತು
ನನ್ನ ಕೇವಲ ನೀನವರಿಸಿಕೊಂಡಿದ್ದೆ./
ಅದೆಲ್ಲೆ ದೂರ ಇದ್ದರೂನು
ತನ್ಮಯ ರಾಗದಲ್ಲಿ ಮೃಣ್ಮಯ ಮನಸು ತಲ್ಲೀನವಾಗಿ ಹೋಗುವಾಗ.....
ಕಿವಿಗೆ ನಿನ್ನ ಧ್ವನಿಯ ಮಾರ್ದನಿಯ ಹೊರತು
ಇನ್ನೇನೂ ಕೇಳಿಸಲಾಗದ ಹಾಗಾಗುತ್ತಿದೆ,
ನಮ್ಮ ನಾಳೆ ನಮ್ಮ ಇಂದಿನಂತೆಯೆ ಇರುತ್ತೆ
ಇಂದಿನ ನಮ್ಮ ಆಲೋಚನೆಗಳು
ನಮ್ಮ ನಾಳೆಯ ಭವಿಷ್ಯವನ್ನು ಹೊತ್ತು ತರುತ್ತೆ....
ಸುಮ್ಮನೆ ಕಳೆವ ಏಕಾಂತದ ಆಪ್ತ ಕ್ಷಣಗಳು
ಅದೇಕೆ ಅಷೊಂದು ಕ್ರೂರವಾಗಿ
ಕೇವಲ ಕಂಬನಿಯ ಕಪ್ಪ ಕೇಳುತ್ತವೆ?//

No comments: