24 September 2014

ಪುಸ್ತಕದೊಳಗೆ - ೧೬




"ನಾಲ್ಲಕೆಟ್" ( ಮಲಯಾಳಂ.)

"ಚೌಕಟ್ಟಿನ ಮನೆ" ( ಕನ್ನಡಾನುವಾದ.) 

ಲೇಖಕರು; ಮಾಡತ್ತಿಲ್ ತೇಕ್ಕೆಪಾಟ್ ವಾಸುದೇವನ್ ನಾಯರ್,

ಪ್ರಕಾಶಕರು; ಮಲಯಾಳಂ, ಡಿಸಿ ಬುಕ್ಸ್,
ಕನ್ನಡ, ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ,

ಪ್ರಕಟಣೆ; ೧೯೫೮ ( ಮೊದಲ ಆವೃತ್ತಿ.)
೨೦೧೩ ( ಇಪ್ಪತೈದನೆಯ ಆವೃತ್ತಿ.),

ಕ್ರಯ; ರೂಪಾಯಿ ತೊಂಬತ್ತೈದು ( ಮಲಯಾಳಂ.)
ರೂಪಾಯಿ ಎಪ್ಪತೈದು ( ಕನ್ನಡ.).



"ಮನೆಯ ಮುಂಬಾಗಿಲನ್ನು ತೆರೆದು ಯಾರೋ ಬೆಳಕು ಹಿಡಿದುಕೊಂಡು ಬಂದವರು ಹಾಗೆಯೆ ಹಿಂದಿರುಗಿ ಹೋದರು. ಒಳಗಿನಿಂದ ಒಂದು ನಾಮಜಪ ಕೇಳಿಸುತ್ತಿತ್ತು;

'ನಾರಾಯಣಾ... ನಾರಾಯಣಾ..."

ತಾನೆಲ್ಲಿದ್ದೇನೆ ಎಂದು ತಿಳಿಯಲು ಎಷ್ಟೋ ನಿಮಿಷಗಳು ಬೇಕಾದವು.

ಚಳಿಯಾದ ಗಾಳಿ ಬೀಸಿತು, ಕಣ್ಣ ರೆಪ್ಪೆಗಳೆರಡೂ ಭಾರವಾದ ಹಾಗೆ ಅನಿಸುತ್ತಿದ್ದವು. ಒಳಗಿನಿಂದ ಅದೆಲ್ಲಿಂದ ಎಂದು ತಿಳಿಯದು ಯಾರೋ ಸಣ್ಣ ಧ್ವನಿಯಲ್ಲಿ ಹೇಳುತ್ತಿದ್ದಾರೆ.

'ನರನಾಗಿ ಹುಟ್ಟಿ ಭೂಮಿಯ ಮೇಲೆ....'

ಮತ್ತೆ ಕಣ್ಣು ರೆಪ್ಪೆಗಳು ಮುಚ್ಚಿದವು, ಪುನಃ ಕಣ್ಣನ್ನು ತೆರೆದದ್ದು ಒಂದು ತಣ್ಣನೆಯ ಕೈ ತನ್ನ ಮೈಯನ್ನ ತಡವಿದಾಗಲೆ. ಬೆಚ್ಚಿ ಎದ್ದು ನೋಡಿದಾಗ ಅಜ್ಜಿಯೊಬ್ಬರು ಅವನ ಹತ್ತಿರದಲ್ಲಿಯೇ ಕುಕ್ಕರುಗಾಲಿನಲ್ಲಿ ಕೂತಿದ್ದರು. ಕೆಂಪು ಅಂಚಿನ ವಸ್ತ್ರವನ್ನ ಹೊದ್ದಿದ್ದ ಅವರ ತಲೆಗೂದಲೆಲ್ಲ ಬೆಳ್ಳನೆ ಬಿಳಿಯಾಗಿದ್ದು ಚರ್ಮ ಸುಕ್ಕುಗಟ್ಟಿ ಹೋಗಿತ್ತು. ಆಕೆಯ ಗಾಜಿನಂತಹ ಬೆಳಕು ಮಾಸಿದ ಕಣ್ಣುಗಳತ್ತ ನೋಡಿದಾಗ ಅಕೆಯ ಮುಖದಲ್ಲಿ ಸಣ್ಣದೊಂದು ನಗು ಕಾಣಿಸಿಕೊಂಡಿತು. ತತ್ಕಾಲಿಕವಾಗಿ ಅವನು ಹೆದರಿಕೆಯಿಂದ ಹೊರಬಂದ.

ಏನನ್ನೋ ಹೇಳಲು ಬಾಯಿ ತೆರೆದಾಗ 'ಹೆದರಬೇಡ ನಾನು ನಿನ್ನ ಅಜ್ಜಿ' ಎಂದು ಅವರು ಹೇಳಿದರು.

ಅಜ್ಜಿ! ಅವನ ಅಮ್ಮನ ಅಮ್ಮ!!

'ಎದ್ದು ಒಳಗೆ ಬಾ'

ಅಪ್ಪುಣ್ಣಿ ಎದ್ದು ನಿಂತು ಅವರನ್ನು ಹಿಂಬಾಲಿಸಿದ. ಬಾಗಿಲನ್ನು ಅವರು ತಲುಪುವಷ್ಟರಲ್ಲಿ ಪಡಸಾಲೆಯಲ್ಲಿ ನಿದ್ದೆ ಮಾಡುತ್ತಿದ್ದ ಕೆಲವರನ್ನು ಎಡವಿಕೊಂಡು ಹೋಗಬೇಕಾಗಿ ಬಂತು. ಚಿತ್ತಾರದಲ್ಲಿ ಕೊರೆದ ಮನೆಯ ತಲೆ ಬಾಗಿಲನ್ನು ದಾಟಿ ಅವರೊಂದಿಗೆ ಅವ ತೆಂಕು ಬದಿಗೆ ಹೋದ. ಅದರ ಹತ್ತಿರವೆ ನಡು ಅಂಗಳ. ಅದರ ಪಶ್ಚಿಮಕ್ಕೆ ಒಂದು ಕಿರು ದೀಪದ ಸೊಡರು ಉರಿಯುತ್ತಲಿತ್ತು.

ಮನೆಯ ತೆಂಕು ಭಾಗದ ಉದ್ದಗಲಕ್ಕೂ ಹೆಂಗಸರು ಮಲಗಿದ್ದರು, ನಿದ್ದೆ ಮಾಡುತ್ತಿದ್ದ ಅವರ ಹಿಂಡಿನತ್ತ ರಾತ್ರಿ ಕಂಡ ನಾಗಕನ್ನಿಕೆ ಕಣ್ಣಿಗೆ ಬಿದ್ದಾಳೆಯೆ ಎಂದು ಕುತೂಹಲದಿಂದ ಅವನು ಕಣ್ಣು ಹಾಯಿಸಿದ. ನಡು ಅಂಗಳವನ್ನ ಆವರಿಸಿ ನಿಲ್ಲಿಸಿದ ದಪ್ಪ ದಪ್ಪದ ಕಂಭಗಳನ್ನು ನೋಡುವುದೇ ಮನಸಿಗೊಂದು ಆನಂದ.

ಆ ಕಡೆ ಬಡಗು ಮನೆಯ ಕಿಡಕಿಗಳು ಮುಚ್ಚಿದ್ದವು, ಕಡುಗತ್ತಲೆ. ನೆಲದ ಮೇಲೆ ಯಾರೋ ಕೆಲವರು ಒರಗಿ ಕೊಂಡಂತೆ ಅಸ್ಪಷ್ಟವಾಗಿ ಗೋಚರಿಸಿತು. ಕಷ್ಟದಲ್ಲಿ ಹೆಜ್ಜೆ ಹಾಕಿ ಅಟ್ಟವಿಲ್ಲದ ಕಡೆ ಬಂದಾಗ ಹಿಂದಿನ ದಿನ ಮಾತನಾಡಿಸಿದ್ದ ಮಾಳು ಯಾವುದೋ ಕೆಲಸದಲ್ಲಿ ತೊಡಗಿಕೊಂಡಿರುವವಳಾಗಿ ಕಾಣಿಸಿದಳು.

ತಾನೋದು ಮಣೆಯ ಮೇಲೆ ಕೂತು, ಇವನನ್ನೂ ಹತ್ತಿರದಲ್ಲಿಯೇ ಕೂರಿಸಿಕೊಂಡು ಅಜ್ಜಿ 'ನನ್ನ ಕಂದಾ ನೀನು ಬಂದದ್ದೆ ನನಗೆ ಗೊತ್ತಾಗಲಿಲ್ಲ,  ಕೂಟ್ಟಿಗೆಯ ಹಾಳು ಮುದುಕಿ ನನಗೆ ಏನೂ ಹೇಳಲೆ ಇಲ್ಲವಲ್ಲೋ, ಈಗ ಮಾಳು ಹೇಳಿ ಗೊತ್ತಾಯಿತು' ಎಂದರು.

ಅವನ ತಲೆಯನ್ನ ತನ್ನ ಸೊರಗಿ ಸುಕ್ಕಾದ ಕೈಯಿಂದ ನೇವರಿಸುತ್ತಾ 'ನನ್ನ ಕಂದಾ, ಎಲ್ಲಾ ನನ್ನ ಹಣೆಬರಹ' ಎಂದು ಹೇಳಿ ಇನ್ನಷ್ಟು ಯೋಚಿಸುತ್ತಾ 'ಇದೆಲ್ಲಾ ನನ್ನ ಹಣೆಬರಹವಲ್ಲದೆ ಮತ್ತಿನ್ನೇನು?' ಎಂದು ಬಿಕ್ಕಳಿಸಿದರು. ಅವನಿಗೆ ಏನೊಂದನ್ನೂ ಹೇಳಲು ತೋಚಲಿಲ್ಲ. ಒಟ್ಟಿನಲ್ಲಿ ಮನದಾಳದಲ್ಲಿ ಮಾತ್ರ ತಳಮಳವಾಗಲಿಕ್ಕೆ ಶುರುವಾಯಿತು.

'ಪಾಠಶಾಲೆಗೆ ಹೋಗ್ತಿದೀಯ'

'ಹ್ಞುಂ'

'ಅವಳಿಗೆ ನೀನೆ ಗತಿ, ನೀನು ಮೇಲೆ ಬರಬೇಕು, ಅವಳಿಗೆ.... ಅವಳಿಗೆ....' ಅಜ್ಜಿಯ ಗಂಟು ಅಷ್ಟಕ್ಕೆ ಬಿಗಿದುಕೊಂಡು ಬಂತು.

ಅಷ್ಟರಲ್ಲಿ ಬಾಗಿಲಲ್ಲಿ ಒಬ್ಬಳು ಬಂದು ಇಣುಕಿ ನೋಡಿ ಹೋದಳು. ಅನಂತರ ಅಸಂಖ್ಯ ಅಪರಿಚಿತ ಹೆಂಗಸರ ಮುಖಗಳು ಬಾಗಿಲಿನ ಹತ್ತಿರ ಗುಂಪುಗೂಡಿದವು. ಎಲ್ಲರೂ ಅವನನ್ನೆ ದಿಟ್ಟಿಸುತ್ತಿದ್ದರು. ತಮ್ಮತಮ್ಮೊಳಗೆ ಬಾಯಿಗಳು ಮಾತ್ರ ಪಿಸುಗುಡುತ್ತಿದ್ದವು. ಆಗಾಗ ಹೊಸ ಹೊಸ ಮುಖಗಳು ಪ್ರತ್ಯಕ್ಷವಾಗುತ್ತಿದ್ದವು.

ಸ್ವಲ್ಪ ತಲೆಗೂದಲು ನೆರೆತ, ಯಜಮಾನಿಯ ಹಾಗಿದ್ದ ಒಬ್ಬ ಹೆಂಗಸು ಅಜ್ಜಿಯ ಮುಂದೆ ಬಂದು ಒಮ್ಮೆ ಹುಸಿ ಕೆಮ್ಮಿದಳು. ಆಮೇಲೆ ಮೆಲು ದನಿಯಲ್ಲಿ ಆಕ್ಷೇಪಿಸುವಂತೆ ಗಡುಸಾಗಿ 'ಅಮ್ಮಾ ಯಾವುದೋ ತೊಂದರೆ ಯಾಕೆ ತಂದು ಕೊಳ್ಳೋದು?' ಎಂದಳು.

'ಎಂಥಾದ್ದೆ ಅದು ಮಾರಿ ತೊಂದರೆ?'

'ಮಾವನಿಗೆ ಗೊತ್ತಾದರೆ ಉಳಿಗಾಲವಿಲ್ಲ'

ಅಜ್ಜಿ ಸಿಟ್ಟಿನಿಂದ ಕೆಂಡವಾದಳು. 'ಏನಾಯ್ತು ಗೊತ್ತಾದರೆ? ನನ್ನ ಸಿಗಿದು ಕೊಂದು ಹಾಕ್ತಾನೇನು ಅವನು?'

'ನೋಡು ಇದರಿಂದ ನನಗೂ, ನನ್ನ ಮಕ್ಕಳಿಗೂ ಯಾವುದೆ ತೊಂದರೆ ಆಗ ಕೂಡದು. ಅದಷ್ಟೆ ನಾ ಹೇಳೋದು'

'ಲೇ ಕಟುಕಿ, ನಿನ್ನ ಹೆತ್ತ ಹಾಗೆ ಇವನ ತಾಯಿಯನ್ನೂ ನಾನು ಹೊತ್ತು ಹೆತ್ತಿದೀನಿ ಕಣೆ'

'ಇದೆಲ್ಲ ಜಬರದಸ್ತು ಮಾವನ ಹತ್ರ ಮಾಡಿ, ನನ್ನ ಹತ್ರ ಬೇಡ'

ಮತ್ತಿನ್ನೇನನ್ನೂ ಅಜ್ಜಿ ಹೇಳಲಿಲ್ಲ, ತನ್ನ ಅಂಗವಸ್ತ್ರದಿಂದ ಸುಮ್ಮನೆ ಕಣ್ಣಿನಿಂದ ಜಿನುಗಿದ ಹನಿಗಳನ್ನ ಒರೆಸಿಕೊಂಡರಷ್ಟೆ. ವಾದಿಸಲಿಕ್ಕೆ ಬಂದ ಹೆಂಗಸು ಅಸಹಾಯಕತೆಯಿಂದ ಒಮ್ಮೆ ನೆಲವನ್ನ ಝಾಡಿಸಿ ತುಳಿದು ಅಲ್ಲಿಂದ ಜಾಗ ಖಾಲಿ ಮಾಡಿದಳು. ಈಗ ಹೆಂಗಸರು ನಿಂತಿದ್ದ ಬಾಗಿಲಿನ ಹತ್ತಿರ ಕೆಲ ಎಳೆಯ ಹುಡುಗರು ನಿಂತು ಇವನನ್ನೆ ಆಶ್ಚರ್ಯದಿಂದ ನಿರುಕಿಸುತ್ತಿದ್ದರು. ಹಿಂದಿನ ದಿನ ಮಧ್ಯಾಹ್ನದ ನಂತರ ಈಗ ಪುನಃ ಅವನು ಮುತ್ತಜ್ಜಿಯನ್ನ ಕಂಡ. 

ಅಡುಗೆ ಮನೆಯ ಕಡೆಯಿಂದ ಬಂದ ಮುತ್ತಜ್ಜಿ 

'ಅಪ್ಪೂ, ಇನ್ನು ನಾವು ಮನೆಗೆ ಹೋಗಬ್ಯಾಡವ? ನಿನ್ನ ಮನೆಗೆ ಮುಟ್ಟಿಸಿ... ನಾನೂ...'

ಇದಕ್ಕೆ ಅಜ್ಜಿಯೆ ಉತ್ತರಿಸಿದರು.

'ನೀ ಬೇಕಾದರೆ ಹೋಗು ಮುದುಕಿ, ಅವ ಈಗ ಬರಲ್ಲ.'

ಈ ಮಾತು ಕೇಳಿ ಹೆಂಗಸರು ಪರಸ್ಪರ ಮುಖಮುಖ ನೋಡಿಕೊಂಡರು. ಈಗ ಆ ದೊಡ್ಡ ಹೆಂಗಸು ಮತ್ತೆ ಅಸಹನೆ ಸೂಸುವಂತೆ ನೆಲ ಝಾಡಿಸುತ್ತಾ ಪಿರಿಪಿರಿಗುಟ್ಟುತ್ತಾ ಅಲ್ಲಿಂದ ಹೊರ ನಡೆದಳು. ಸಾಲದ್ದಕ್ಕೆ ಬಾಗಿಲ ಪಕ್ಕ ಉಗುರುರು ಕಚ್ಚುತ್ತಾ ನಿಂತಿದ್ದ ಹುಡುಗನೊಬ್ಬನ ಕೈ ಮೇಲೆ ಹೋಗುತ್ತಲೆ ಪಟ್ ಎಂದು ಹೊಡೆದು ಹೋದಳು. 

'ಮಾಳು ಇಲ್ಲಿ ಬಾ'

ಮಾಳು ಬಂದಾಗ 'ಮಾಳು ಅಪ್ಪುಣ್ಣಿಗೆ ಒಂದಿಷ್ಟು ಹಲ್ಲು ಪುಡಿನೂ ನೀರನ್ನೂ ಕೊಡು' ಎಂದರು ಅಜ್ಜಿ.

ಇಷ್ಟಾದರೂ ಕೊಟ್ಟಿಗೆಯ ಮುತ್ತಜ್ಜಿ ಸಂಶಯ ಕಳೆಯದೆ ಅಲ್ಲಿಯೆ ನಿಂತಿದ್ದಳು. 'ಮುದುಕಿ ನೀ ಹೋಗು ನಾನವನನ್ನ ಹೊಲೆಯರ ಹುಡುಗನ ಜೊತೆ ಕಳಿಸ್ತೀನಿ' ಎಂದಾಗ ಒಲ್ಲದ ಮನಸ್ಸಿನಿಂದಲೆ ಮುತ್ತಜ್ಜಿ ಹೊರಟಳು.

ಅಪ್ಪುಣ್ಣಿ ಮಾಳುವಿನ ಜೊತೆ ಹೊರಕ್ಕೆ ಹೋದ, ಹಲ್ಲು ಉಜ್ಜಿ ಮುಖ ತೊಳೆದು ಮತ್ತೆ ಅವನು ಅಜ್ಜಿಯ ಹತ್ತಿರ ಬಂದ. ಮಂಡಿಯ ಮೇಲೆ ಗಲ್ಲವನ್ನ ಇರಿಸಿಕೊಂಡ ಅಜ್ಜಿ ಅದೇನನ್ನೋ ಆಲೋಚಿಸುತ್ತಿದ್ದರು. ಅಪ್ಪುಣ್ಣಿಯೂ ಅವರಂತೆ ಸುಮ್ಮನೆ ಕುಳಿತುಕೊಂಡಿದ್ದ. ತನಗೆ ಬಡಿಸಿದಾಗ ಅವನಿಗೂ ಗಂಜಿ ಬಡಿಸಲಿಕ್ಕೆ ಅಜ್ಜಿ ಹೇಳಿದರು. ಅಡುಗೆ ಮನೆಯಿಂದ ಮಾತ್ರ ಗೊಣಗಾಟ ಸ್ಪಷ್ಟವಾಗಿ ಕೇಳಿಸುತ್ತಲೇ ಇತ್ತು.

ಗಂಜಿಯ ಜೊತೆ ಬಾಳೆಯ ಕೀತಿನಲ್ಲಿ ಚಟ್ನಿ ಹಾಗೂ ಸುಟ್ಟ ಹಪ್ಪಳವನ್ನೂ ಬಡಿಸಿದಾಗ ಅವನಿಗೆ ಉಣ್ನಲು ಯಾಕೋ ಹಸಿವೆಯೆ ಕಾಣಿಸಲಿಲ್ಲ. ಹಲಸಿನೆಲೆಯ ದೊನ್ನೆಯಲ್ಲಿದ್ದ ಗಂಜಿಯನ್ನ ಕುಡಿದದ್ದು ಮಾತ್ರ ಅಷ್ಟರಲ್ಲಿ ಹೆಂಗಸರೆಲ್ಲ ಲಗುಬಗೆಯಿಂದ ಅತ್ತಿತ್ತ ಚದುರುವುದು ಹಾಗೂ ಮಕ್ಕಳೆಲ್ಲ ಅಲ್ಲಲ್ಲಿಯೆ ಮರೆಯಾಗಿ ನಿಲ್ಲುವುದು ಕಾಣಿಸಿತು.

'ಒಡಹುಟ್ಟಿದವಳೆ....' ಸಿಡಿಲಿನ ಹಾಗಿತ್ತು ಆ ಕರ್ಕಶ ಧ್ವನಿ.

ಅಜ್ಜಿ ಹಲಸಿನೆಲೆಯ ದೊನ್ನೆಯನ್ನ ತಟ್ಟೆಯಲ್ಲಿಟ್ಟು 'ನಾರಾಯಣಾ... ನಾರಾಯಣಾ....' ಎಂದು ನಾಮಜಪ ಮಾಡಿದರು ಮೆಲ್ಲಗೆ.

ಬಾಗಿಲಿನ ಎತ್ತರಕ್ಕೆ ಬಾಗಿಲವಾಡದಲ್ಲಿ ಒಬ್ಬ ಅಜಾನುಬಾಹು ಬಂದು ನಿಂತಿದ್ದ. ಹಾ ದೊಡ್ಡ ಮಾವ!

'ಯಾರವ ಹುಡುಗ?'

ಅಜ್ಜಿ ಮೌನವಾಗಿದ್ದರು. 'ನಿನ್ನ ಹತ್ತಿರವೆ ಕೇಳ್ತಿರೋದು ಯಾರದು ಈ ಹುಡುಗ ಅಂತ?'

'ಇವನು ಪಾರುಕುಟ್ಟಿಯ ಮಗ...'

'ಯಾರವಳು ಮುಂಡೆ ಪಾರುಕುಟ್ಟಿ?'

'ಈ ಮನೆಯ ಒಂದು ಜ್ಯೋತಿ' ಅನ್ನಬೇಕೆಂದು ಆವೇಶದಲ್ಲಿ ಅನ್ನಿಸಿದರೂ ಅಜ್ಜಿ ಸಮಾಧಾನದಿಂದಲೆ 'ಅಂಥವಳೊಬ್ಬಳನ್ನ ಇದೆ ಮನೆಯಲ್ಲಿ ನಾನು ಹೆತ್ತೆ!' ಅಂದರು.

'ಥೂ.... ನನ್ನ ಮನೆತನ ಕಂಡ ಕಂಡ ಕೂಳಿಗೆ ಗತಿಗೆಟ್ಟವರೆಲ್ಲಾ ಕಾಲಿಡೋ ಅಂತದ್ದಲ್ಲ! ಯಾವಳೆ ಅವಳು ರಂಡೆ ಈ ಭಿಕಾರಿ ಹುಡುಗನಿಗೆ ಗಂಜಿ ಕೊಟ್ಟವಳು?'

ಅಜ್ಜಿ ಎದ್ದು ನಿಂತರು. ಅವನೂ ನಡುಗುತ್ತಾ ಎದ್ದು ನಿಂತ. ದೊಡ್ಡ ಮಾವ ಸಿಟ್ಟಿನಿಂದ ಮಾತನಾಡುತ್ತಾ ಕಂಪಿಸುತ್ತಿದ್ದರು.

ಈಗ ತನ್ನನ್ನು ಕೊಂದು ಇಲ್ಲೆ ಹುಗಿದು ಹಾಕಿ ಬಿಡುತ್ತಾರೋ ಏನೋ.... ತಾನಿನ್ನು ಬದುಕುವುದೆ ಇಲ್ಲ ಎನ್ನಿಸಿತು.... ಅವನ ಕುತ್ತಿಗೆಯ ಸುತ್ತ ಅವರ ದಪ್ಪ ಕೈಬೆರಳುಗಳು ಬಳಸಿಕೊಂಡು ಬಂದವು. ಹೊರ ಮಾರ್ಗವನ್ನ ತೋರಿಸುತ್ತಾ ಹೊಸ್ತಿಲಿನಾಚೆ ಹೊರಗೆ ತಳ್ಳುತ್ತಾ 'ಹೋಗೋ ಆಚೆ! ಇನ್ನು ಇಲ್ಲಿನ ಅಂಗಳ ಅಥವಾ ಹಿತ್ತಲಿನತ್ತ ಕಾಲಿರಿಸಿದ್ದು ಕಾಣ ಸಿಕ್ಕರೆ ಕಾಲು ಕತ್ತರಿಸಿ ಸಿಗಿದು ತೋರಣ ಕಟ್ಟಿಯೇನು! ಹೋಗ್ ಹೋಗ್....' ಎಂದು ಮಾವ ಗರ್ಜಿಸಿದರು.

ಈಗವನು ಹತಾಶೆ ಅವಮಾನ ಹೇಳಿಕೊಳ್ಳಲಾಗದ ನೋವಿನಿಂದ ನಡೆಯುತ್ತಲಿರಲಿಲ್ಲ ಅಳು ನುಂಗಿಕೊಂಡು ಬಿಸಬಿಸ ಓಡುತ್ತಿದ್ದ. ಕುತ್ತಿಗೆಗೆ ಕೈ ಹಾಕಿ ದೂಡಿದಾಗ ನೊರಜುಗಲ್ಲುಗಳೆ ಹರಡಿದ್ದ ಹೊರಗಿನ ಅಂಗಳದಲ್ಲಿ ಬಿದ್ದು ಮಂಡಿ ತರಚಿ ಹೋಗಿತ್ತು. ಮನೆಯೊಳಗಿನಿಂದ

'ಅನುಭವಿಸ್ತೀರಿ, ಇದರ ಕೆಟ್ಟ ಫಲವನ್ನ ನೀವೆಲ್ಲರೂ ತಪ್ಪದೆ ಅನುಭವಿಸ್ತೀರಿ' ಮಾವನ ಹೂಂಕಾರ ಅತಿದೂರದವರೆಗೆ ಸಿಡಿಲಿನಂತೆ ಕೇಳುತ್ತಲೇ ಇತ್ತು.

......

ಮನೆಬಿಟ್ಟು ಹೋಗಿ ಈಗ ಹಣವಂತನಾಗಿ ಮತ್ತೆ ನಾಲ್ಕು ವರ್ಷದ ನಂತರ ಮರಳಿ ಊರಿಗೆ ಅಪ್ಪುಣ್ಣಿ ಬಂದ ಏಳನೆ ದಿನ ಅದು. ಆದಿನ ತಲೆ ಬಾಗಿಲ ಪಕ್ಕದ ಪಾಲಿನಲ್ಲಿ ದೊಡ್ಡ ಮಾವನ ದರ್ಶನವಾಯಿತು. ಸಿಗರೇಟಿನ ಧಮ್ ಎಳೆಯುತ್ತಾ ಪಡಸಾಲೆಯಲ್ಲಿ ಅತ್ತಿತ್ತ ತಿರುಗಾಡುತ್ತಿದ್ದಾಗ ಮನೆಯ ಮುಂಭಾಗದಿಂದ ಮರದ ಜೋಡುಗಳ ಸದ್ದು ತೇಲಿ ಬಂತು. ಜಗಲಿಯ ಮುಂಭಾಗದಲ್ಲಿಯೆ ಬಂದು ನಿಂತು 'ಅಪ್ಪುಣ್ಣಿ' ಎಂದು ಕರೆದರವರು.

ಇದೆ ಮೊದಲನೆ ಬಾರಿ ಹೆಸರು ಹಿಡಿದು ಕರೆಯಲಿಕ್ಕೆ ದೊಡ್ಡ ಮಾವನ ನಾಲಗೆ ಹಿಡಿದಂತಾಗುತ್ತಿತ್ತು. ಚೂರಿಯಲ್ಲಿ ಇರಿದಂತಾಯ್ತು ಅಪ್ಪುಣ್ಣಿಗೆ.

'ಅಪ್ಪುಣ್ಣಿ ಸ್ವಲ್ಪ ಈಚೆ ಬರ್ತೀಯ ಮಗ!'

'ಏಕೆ?'

'ಇಲ್ಲಿ ಅಂಗಳಕ್ಕೆ ಬಾ' ಶಾಂತಚಿತ್ತ ಧ್ವನಿಯಲ್ಲಿ ಕರೆದರು, ಸಿಡಿಲಿನಂತೆ ಅಬ್ಬರಿಸುತ್ತಿದ್ದ ದೊಡ್ಡ ಮಾವ ಇವರೇನ!

'ಬೇಕಿಲ್ಲ, ಇಲ್ಲೇ ನಿಂತರೂ ಸಾಕು'

'ಬೇಲಿಯ ಆಚೆ ಕಡೆ ಅವರು ನಿಂತಿದ್ದರು, ಈ ಕಡೆ ಆಕ್ರೋಶದಿಂತ ತಪ್ತನಾಗಿದ್ದ ಅಪ್ಪುಣ್ಣಿ. ತನ್ನ ಬೆರಳಿನ ನೆಟಿಗೆ ಮುರಿಯುವುದರ ಮೂಲಕ ಇವನು ಅದನ್ನ ಹೊರ ಹಾಕುತ್ತಿದ್ದ.

ದೊಡ್ಡ ಮಾವನ ಕಂದಿದ ಮುಖದಲ್ಲಿ ಹಿಂದಿನ ವೀರಾವೇಶದ ಪ್ರತಾಪಗಳೊಂದೂ ಕಾಣಿಸಲಿಲ್ಲ. ದೇಹ ಹಾಗೂ ಮನಸ್ಸೆರಡೂ ದುರ್ಬಲಗೊಂಡಿರೋದು ಸ್ಪಷ್ಟವಾಗಿತ್ತು. ತನ್ನ ಕಣ್ಣುಗಳ ಕಡೆಗೆ ನೇರ ನೋಡುತ್ತಾ ಮಾತನಾಡಲು ಅವರು ಕಷ್ಟ ಪಡುತ್ತಿದ್ದರು ಇವರು ಎನ್ನುವುದು ಖಚಿತವಾಯಿತು.

'ಮೂರು ನಾಲ್ಕು ದಿನಗಳಿಂದ ಬರಬೇಕು ಅಂದುಕೊಂಡಿದ್ದೆ'

'ಹ್ಞುಂ'

ಆ ದಿನ ಕುತ್ತಿಗೆ ಹಿಡಿದು ಹುಚ್ಚುನಾಯಿಯನ್ನ ಅಟ್ಟುವಂತೆ ಓಡಿಸಿದ್ದರು, ದೊಡ್ದ ಮಾವನ ಮುಪ್ಪಾದ ಮುಖವನ್ನ ಕಾಣುವಾಗ ಅಪ್ಪುಣ್ಣಿಗೆ ಹಳೆಯ ಕಹಿಯೆಲ್ಲ ಜ್ಞಾಪಕಕ್ಕೆ ಬಂತು. ಅಂಗಳಕ್ಕೆ ಕಾಲಿಟ್ಟರೆ ಕಾಲು ಮುರಿದು ಸಿಗಿದು ತೋರಣ ಕಟ್ಟುವ ಮಾತನಾಡಿದ್ದ ದೊಡ್ಡ ಮನುಷ್ಯನೆ ಈಗ ಅಸಹಾಯಕತೆಯೆ ಮೈವೆತ್ತಂತೆ ತನ್ನ ಮುಂದೆ ದೈನ್ಯದಿಂದ ನಿಂತಿದ್ದಾನೆ. 

'ನಾನು ಬಂದದ್ದು ಒಂದು ಕೆಲಸಕ್ಕಾಗಿ'

'ಹೇಳಿ'

'ಪಾಲಾದಾಗ ತರವಾಡಿನ ಮೂಲಮನೆಯನ್ನ ನಾನು ಪಡೆದೆ. ಕುಟುಂಬದ ಗೌರವ ಅಲ್ಲವ? ಭಗವತಿ ವಾಸ ಮಾಡುವ ಜಾಗ. ಪರಾಧೀನ ಮಾಡಕೂಡದು ಅಂತ ಭಾವಿಸಿ ಹಾಗೆ ಮಾಡಿದ್ದು'

'ಸರಿ ಒಳ್ಳೆಯದೆ ಆಯ್ತಲ್ಲ'

'ಆದರೆ ಈಗ ಈ ಮನೆ ಭಗವತಿ ನಿವಾಸವಾಗಿರುವ ಮನೆ ಕಷ್ಟಕಾಲದಲ್ಲಿ ಐನೂರು ರೂಪಾಯಿಗೆ ಸಾಲದ ಅಡಕ್ಕೆ ಹಾಕಿದೇನೆ! ಅದೆ ಈಗ ಸಂಕಟಕ್ಕೆ ಬಂದಿದೆ'

ಮೌನವಾಗಿ ಅಪ್ಪುಣ್ಣಿ ಅವರನ್ನೆ ಆಲಿಸುತ್ತಿದ್ದ.ಕೆಲವು ನಿಮಿಷ ಮೌನವಾಗಿ ಅನುಮಾನಿಸುತ್ತಲೆ ನಿಂತಿದ್ದ ದೊಡ್ದ ಮಾವ ಕೊನೆಯಲ್ಲಿ ಕಷ್ಟಪಟ್ಟು 'ಹತ್ತನೆ ತಾರೀಕಿನೊಳಗೆ ಹಣದ ಏರ್ಪಾಡಾಗದಿದ್ದರೆ ಮನೆ ಖಾಲಿ ಮಾಡಬೇಕಂತ ತೀರ್ಮಾನ ಆಗಿದೆ. ಎಷ್ಟಾದರೂ ನಮ್ಮ ಕುಟುಂಬದ ಮನೆ ಅಲ್ಲವಾ?' ಅಂದರು

ಅಪ್ಪುಣ್ಣಿ ಸುಮ್ಮನೆ ಹೂಂಗುಟ್ಟಿದ.

'ಖರೀದಿಗೆ ಮುಸ್ಲಿಂ ಮಾಪಿಳ್ಳೆಗಳು ತಯ್ಯಾರಿದ್ದಾರೆ, ಆದರೆ ಭಗವತಿಯ ಸ್ಥಳ ಮಾಪಿಳ್ಳೆಗಳಿಗೆ ಹೇಗೆ ಮಾರೋದು?' ಅವರ ವೇದನೆ ದೈನ್ಯಕ್ಕೆ ಮುಟ್ಟಿದಾಗ ಗಂಟಲೆತ್ತರಿಸಿ ಅಪ್ಪುಣ್ಣಿ 'ಅದಕ್ಕೆ ನಾನೇನು ಮಾಡಲಿ?' ಎಂದ.

'ನಿನ್ನ ಹತ್ತಿರ ದುಡ್ಡಿದೆಯಂತೆ, ಐನೂರು ರೂಪಾಯಿಗೆ ಪ್ರಾಮಿಸರಿ ನೋಟು ಬರೆದು ಕೊಡುತ್ತೇನೆ. ಸಾಲವಾಗಿ ಕೊಟ್ಟಿರು....'

ಬೇಲಿಯಾಚೆ ನಿಂತು ತುಂಬೆ ಗಿಡ ಸವರುತ್ತಿರುವ ಮುದುಕನ ಚಿತ್ರ ಕ್ಷಣ ಕಾಲ ಮರೆಯಾಗಿ ಕುತ್ತಿಗೆಗೆ ಕೈ ಹಾಕಿ ಚಾವಡಿಯಿಂದ ಹುಚ್ಚು ನಾಯಿಯ ಹಾಗೆ ಅಟ್ಟಿದ ದರ್ಪದ ದೈತ್ಯನ ಚಿತ್ರವೆ ಮತ್ತೆ ಮನಸ್ಸಿನಾಳದಿಂದ ಮೂಡಿ ಬಂತು.

'ಹುಸಿ ಗತ್ತಿನ ಗುತ್ತಿನ ಮನೆ ಹೀಗೆ ಉಳಿಯಲಿ ಅಂತ ನನ್ಗೇನೂ ಆಸೆ ಇಲ್ಲ' ಸಿಟ್ಟಿನಿಂದ ಅಪ್ಪುಣ್ಣಿ ಅಂದ.

'ಏನಂದಿ ಅಪ್ಪುಣ್ಣಿ!'

'ಸರಿಯಾಗಿ ಕೇಳದಿದ್ದರೆ ಮತ್ತೊಂದು ಸಲ ಹೇಳ್ತೀನಿ, ಈ ಸೊಕ್ಕಿನ ತರವಾಡು ಮನೆ ಹೀಗೆಯೆ ಇರಬೇಕಂತ ನನಗೇನೂ ಆಸೆ ಇಲ್ಲ. ನೀವು ಮರೆತಿರಬಹುದು ಆದರೆ ಕುತ್ತಿಗೆ ಹಿಡಿದು ತಳ್ಳಿ ಓಡಿಸಿದ ಆ ದಿನವನ್ನ ನಾನಿನ್ನೂ ಮರೆತಿಲ್ಲ.'

ಕ್ಷಣಕಾಲ ನಿಶ್ಯಬ್ಧ ಅಲ್ಲಿ ಆವರಿಸಿತು. "ಆದದ್ದರ ಬಗ್ಗೆ ನನಗೂ ನೋವಿದೆ, ಆಗಿದ್ದು ಆಗಿ ಹೋಯಿತು. ಅದನ್ನ ಮರೆತು ಬಿಡು ಅಪ್ಪುಣ್ಣಿ' ಗದ್ಗದ ಕಂಠದಲ್ಲಿ ದೊಡ್ದ ಮಾವ ಯಾಚಿಸಿದರು!

'ಆದರೆ ಅದಷ್ಟು ಸುಲಭವಲ್ಲ'

'ಎಲ್ಲಾ ದಾರಿ ಮುಚ್ಚಿ ಹೋದಾಗ ನೀನು ಮನೆಗೆ ಬಂದ ವಿಷಯ ಕೇಳಿ ಆಸೆ ಚಿಗುರೊಡೆಯಿತು. ಎಷ್ಟೆಂದರೂ ನಮ್ಮ ಕುಟುಂಬ ಪುರಾತನ ಕಾಲದಿಂದ ಬಾಳಿ ಬದುಕಿದ ಮನೆ'

'ನನ್ನ ಹತ್ತಿರ ದುಡ್ಡೇನೋ ಇದೆ, ಆದರೆ ಯಾರಿಗೂ ಸಾಲ ಕೊಡುವ ಮನಸ್ಸಿಲ್ಲ'

'ತುಂಬೆ ಗಿಡದ ತಲೆ ಸವರುತ್ತಾ ಹನಿಗಣ್ಣಾಗಿ ದೊಡ್ದ ಮಾವ ನಿಂತಿದ್ದರು. ಅಪ್ಪುಣ್ಣಿಯ ದೃಷ್ಟಿಯೂ ನೆಲದ ಕಡೆಗೆ ನೆಟ್ಟಿತ್ತು. ಅಸಹಾಯಕ ಹೆಜ್ಜೆ ಎಳೆಯುತ್ತಾ ಅವರು ಹಿಂದಿರುಗಲು ಹೊರಟಾಗ ಏನನ್ನೋ ನಿರ್ಧರಿಸಿ ಅಪ್ಪುಣ್ಣಿ ಅವರನ್ನು 'ನಿಲ್ಲಿ' ಎಂದು ಕರೆದ. ದೊಡ್ಡ ಮಾವ ಸುಮ್ಮನೆ ನಿಂತರು.

'ಮಾಪಿಳ್ಳೆಗೆ ಮಾರೋದಕ್ಕಲ್ಲವೆ ನಿಮಗೆ ಸಂಕಟ? ನಾನೆ ಕೊಂಡುಕೊಳ್ಳೋದಾದರೆ?'

ದಿಗ್ರಾಂತರಾದ ಮಾವ 'ನಾನು ಯೋಚಿಸ್ತೇನೆ' ಕಂಭದ ಹಾಗೆ ನಿಂತಿದ್ದವರು ಕ್ಷೀಣವಾಗಿ ನುಡಿದರು.

'ಇನ್ನೂ ಆಲೋಚಿಸಿ ಆಗಿಲ್ಲವ! ಇಲ್ಲೆ ಈಗಲೆ ಈ ಕ್ಷಣ ತೀರ್ಮಾನ ಆಗಬೇಕು, ನೋಡುವ ನನ್ನ ಕೈನಲ್ಲಿ ಕೊಂಡುಕೊಳ್ಳೋಕೆ ಸಾಧ್ಯ ಉಂಟೋ ಇಲ್ಲವೋ ಅಂತ. ಈ ಮನೆ ಮತ್ತು ಜಮೀನಿಗೆ ಸೇರಿ ಒಟ್ಟು ಎಷ್ಟು ಕ್ರಯ ಅಂತ ಹೇಳಿ'

ದೊಡ್ಡ ಮಾವ ಗಲಿಬಿಲಿಯಿಂದ ಮುಂದೆ ಮಾತನಾಡೋದಕ್ಕೇನೆ ಸಂಶಯಿಸಿಕೊಂಡು ನಿಂತರು.

'ಹೇಳಿ ಇದು ವ್ಯಾಪಾರ, ಸಂಶಯವೇಕೆ? ನನ್ನ ಯೋಗ್ಯತೆಯ ಒಳಗಿದ್ದರೆ ಖಂಡಿತಾ ಕೊಳ್ಳುತ್ತೇನೆ'

ಮತ್ತೂ ಸಂಶಯಿಸುತ್ತಾ ದೊಡ್ದ ಮಾವ ನಿಂತೆ ಇದ್ದಾಗ ಅಪ್ಪುಣ್ಣಿಗೆ ವಿಪರೀತ ಸಿಟ್ಟು ಬಂತು.

'ಏಕೆ ನನ್ನ ದುಡ್ಡಿಗೆ ಬೆಲೆ ಇಲ್ಲ ಅಂತಲ?'

'ಹಾಗೇನೂ ಅಲ್ಲ...' ಅವರು ತಡವರಿಸಿದರು.

'ಹಾಗಿದ್ದರೆ ಮುರಿದು ಬೀಳುತ್ತಿರುವ ಮುಪ್ಪಾದ ಮನೆ ಅನ್ನೋದನ್ನ ಗಮನದಲ್ಲಿಟ್ಟುಕೊಂಡು ಸರಿಯಾದ ನ್ಯಾಯವಾದ ಒಂದು ಕ್ರಯ ಹೇಳಿ'

'ನಾಲ್ಕು ಸಾವಿರಕ್ಕೆ ಪೋಟುಕುರದ ಹಾಜಿ ಮಾಪಿಳ್ಳೆ ಕೇಳಿದ್ದ...'

'ಗಾಳಿ ಬೆಳಕಿನ ವ್ಯವಸ್ಥೆಯೆ ಸರಿಯಾಗಿಲ್ಲದ ಈ ಮುರಿದು ಹೋಗಲಿಕ್ಕಿರುವ ಮನೆಯಲ್ಲಿ ಮನುಷ್ಯರಾದವರು ಬಾಳುವ ಹಾಗಿಲ್ಲ! ಹೀಗಿದ್ದರೂ ನಾನು ನಾಲ್ಕು ಸಾವಿರಕ್ಕೆ ತಯ್ಯಾರ್. ಕೂಡಲೆ ಕ್ರಯಪತ್ರ ಬರೆಸುವ ಏರ್ಪಾಡು ಮಾಡಿ'

ಮಾವನ ಕುತ್ತಿಗೆ ಹಾಗೂ ಬೆನ್ನು ಮತ್ತಷ್ಟು ಬಾಗಿತು. 

'ಏನು ತೀರ್ಮಾನಿಸಿದಿರಿ?'

ನಾಚಿಕೆಯಿಂದ ಹಿಡಿಯಾದ ಅವರು ಬಾವಿಯ ಆಳದಿಂದ ಎನ್ನುವಂತೆ 'ಆಯ್ತು' ಎಂದು ಮುಲುಕಿದರು.

ನಿಧಾನವಾಗಿ ಅವರು ಅಲ್ಲಿಂದ ಕಾಲೆಳೆದುಕೊಂಡು ಹೋಗುತ್ತಿರೋದನ್ನ ನೋಡಿದವ ಅಲ್ಲಿಂದ ಹಿಂದಿರುಗಿದ. ಚಾವಡಿಗೆ ಬಂದು ಚಾಪೆಯ ಮೇಲೆ ಉರುಳಿಕೊಂಡಾಗ 'ಹೋದರಾ' ಎಂದರು ಮೀನಾಕ್ಷಿಯಕ್ಕ.

'ಹೋದರು'

'ಇದು ಮಾವನಿಗೆ ಎಲ್ಲಾ ಬಗೆಯಲ್ಲಿಯೂ ಕಷ್ಟದ ಕಾಲ'

ಅವರ ಈ ಅನುಕಂಪದ ನುಡಿ ಅಪ್ಪುಣ್ಣಿಗೆ ಅಷ್ಟಾಗಿ ಹಿಡಿಸಲಿಲ್ಲ. 

'ಹೂದೋಟದ ಆಸ್ತಿ ಏನಾಯಿತು?'

'ಅದುಂಟು, ಅಲ್ಲೊಬ್ಬಳು ದೇವತೆ ಇದ್ದಳು, ಈಗ ಅವಳೂ ಇಲ್ಲವಾಗಿ ಹೋದಳು'

'ಯಾರೂ'

'ಅಪ್ಪುಣ್ಣಿಗೆ ಈ ಸಂಗತಿ ಗೊತ್ತಿಲ್ಲವ! ಮೊದಲ ಹೆರಿಗೆ ಪಾಪ...'

'ಯಾರದು ಮೀನಾಕ್ಷಕ್ಕ'

'ಕಳೆದ ಜ್ಯೇಷ್ಠ ಮಾಸದಲ್ಲಿಯೆ ಅಮ್ಮಿಣ್ಣಿಕುಟ್ಟಿ ಸತ್ತಳು'

ಮತ್ತೇನನ್ನೂ ಪ್ರತಿಕ್ರಿಯಿಸದೆ ಆತ ಎದ್ದು ಚಾವಡಿಯ ಕಿಟಕಿಯ ಹತ್ತಿರ ಬಂದ. ತನಗೆ ಅರಿವಿಲ್ಲದಂತೆ ಕಿಟಕಿಯ ಸರಳುಗಳನ್ನ ಗಟ್ತಿಯಾಗಿ ಹಿಡಿದು ಕಣ್ಣೀರು ಸುರಿಸುತ್ತಿದ್ದಾಗ ಮೀನಾಕ್ಷಿಯಕ್ಕ.

'ಪಾಪ ತುಂಬಾ ಒಳ್ಳೆಯ ಹೆಣ್ಣಾಗಿತ್ತದು' ಅಂತ ತನಗೆ ತಾನೆ ಹೇಳಿಕೊಂಡದ್ದು ಕೇಳಿಸಿತು.

.........

ಮುಚ್ಚಿದ್ದ ಮೊಗಸಾಲೆಯ ಬಾಗಿಲನ್ನ ಅಪ್ಪುಣ್ಣಿ ತೆರೆದ. ತೆಂಕಲಾಗೆ ಬರಿ ಕತ್ತಲಾವರಿಸಿತ್ತು. ಕಿಟಕಿಯನ್ನ ಬಲವಾಗಿ ತೆರೆದಾಗ ಅಲ್ಲೆಲ್ಲ ಬೆಳಕಿನ ಕಿರಣಗಳು ಆವರಿಸಿಕೊಂಡವು. ಅಲ್ಲಿನ ಗಾಳಿಯಲ್ಲಿ ಅದೆಂತದೋ ಅಂದು ಬಗೆಯ ವಾಸನೆ ತುಂಬಿಕೊಂಡಂತಿತ್ತು. ಮುಚ್ಚಿದ ಎಲ್ಲಾ ಬಾಗಿಲುಗಳನ್ನೂ ಆತ ಬಿಚ್ಚಿದ. ಮೂಲೆಯಲ್ಲೆಲ್ಲಾ ಕತ್ತಲೆ ಇಡುಕರಿದಿತ್ತು. ಚಪ್ಪಡಿ ಹಾಸಿದ್ದ ನಡು ಅಂಗಳದಲ್ಲಿ ಹಳೆಯ ಮುರಿದ ಚಾಪೆಗಳ ಕಸಕಡ್ದಿಗಳು ತುಂಬಿಕೊಂಡಿದ್ದವು. ದುರಸ್ತಿ ಕಾಣದ ಕಂಭಗಳೆಲ್ಲ ಒರಲೆ ಹಿಡಿದಿದ್ದವು.

ಬಡಗು ಕೋಣೆಯ ಬಡಗು ಭಾಗಕ್ಕೆ ಆತ ಹೋಗಿ ನಿಂತ. ಅದೆ ಏಣಿಯಿರುವ ಕೋಣೆ. ಆ ಕೋಣೆಯಲ್ಲಿಯೆ ಅಲ್ಲವ ಮೂರು ವರ್ಷ ಕಳೆದದ್ದು. ಆ ನೆಲದ ಹತ್ತಿರ ಹೋದಾಗ ಕಣ್ಣೀರು ಧುಮುಕಬಹುದೆ? ಅಲ್ಲಿ ನಿಂತಾಗ ಆ ಕತ್ತಲ ಕೋಣೆಯೊಳಗೆ ಇನ್ನೂ ಬಳೆಗಳು ಸದ್ದು ಮಾಡುತ್ತಿರಬಹುದು, ಮಲ್ಲಿಗೆ ಹೂವಿನ ಘಮ ಇನ್ನೂ ಅಲ್ಲಿ ಅವರಿಸಿರಬಹುದು, ಬಟ್ಟೆಗೆ ಹಾಕಿದ ಸಾಬೂನಿನ ಸೌಗಂಧ ಅಲ್ಲಿ ಇನ್ನೂ ನಿಂತಿರಬಹುದೆ? ಎನ್ನಿಸಿತ್ತು. ವೇದನೆಗಿಂತ ಹೆಚ್ಚು ಷೂನ್ಯತೆ ಮನಸಿನಲ್ಲಿ ಆವರಿಸಿತು.

ಏಣಿಯನ್ನ ಹತ್ತಿ ಮೇಲಿನ ಕೋಣೆಗೆ ಆತ ಹೋದ. ಆದರೆ ಮುಚ್ಚಿದ್ದ ಆ ಒಂದು ಕೋಣೆಯ ಬಾಗಿಲನ್ನ ಮಾತ್ರ ತೆರೆಯಲಿಲ್ಲ. ಬರಲಿರುವ ಗಂಡನಿಗಾಗಿ ತಂಗಕ್ಕ ಅಣಿ ಮಾಡಿಟ್ಟಿದ್ದ ಕೋಣೆಯೊಳಗೆ ಕಿಚಪಿಚ ಎನ್ನುತ್ತಾ ಇಲಿಗಳು ಓಡಾಡುತ್ತಿರುವ ಶಬ್ದ ಕೇಳಿ ಬರುತ್ತಿತ್ತು. ಹಾಗೆ ಬಂದ ಗಂಡು ತಂಗಕ್ಕನನ್ನು ತಿರಸ್ಕರಿಸಿ ಹೋದನೆಂದು ಮೀನಾಕ್ಷಕ್ಕ ಹೇಳಿದ್ದರು. ಆ ಒಂದು ಕೋಣೆ ಈಗಲೂ ಹಾಗೆಯೆ ಇರಬೇಕು ಒಳಗಿನಿಂದ.

ತೇವವಾಗಿದ್ದ ಗೋಡೆಗಳ, ಬಿರುಕು ಬಿಟ್ಟ ನೆಲದ ಈ ತೊಟ್ಟಿ ಮನೆಯಲ್ಲಿ ಹಿಂದೆಲ್ಲ ಓಡಾಡುವಾಗ ಹೆದರಿಕೆಯಾಗುತ್ತಿತ್ತು. ಎಷ್ಟೋ ತಲೆ ಮಾರುಗಳು ಇಲ್ಲಿ ಆಶ್ರಯ ಪಡೆದು ಈ ಕತ್ತಲೆಯೊಳಗೆ ಲೀನವಾಗಿ ಹೋಗಿವೆ. ಪೊರೆಮ್ಮಾನ್ ಮಾವ, ನಾರಾಯಣ ಮಾವನ ಆತ್ಮಗಳು ಇಲ್ಲೆ ಎಲ್ಲಾದಾರೂ ಸುತ್ತಾಡುತ್ತಲೆ ಇರಬಹುದು. ಆ ಹುಡುಗಿಯ ನೆನಪೂ ಸಹ ಆಯಿತು. ಈಗ ಕೇವಲ ಹಳೆಯ ನೆನಪುಗಳು ಮಾತರ ಉಳಿದಿರುವ ಮನೆ ತನ್ನ ಮನೆ, ತನ್ನ ಸ್ವಂತ ಮನೆ.

ಐದು ವರ್ಷ ದುಡಿದು ತಾನು ಕಷ್ಟ ಪಟ್ಟು ಸಂಪಾದಿಸಿದ್ದನ್ನೆಲ್ಲ ಇದಕ್ಕೆ ಸುರಿದಾಗಿದೆ. ಅಂತೂ ಇಲ್ಲೊಂದು ವಿಶಾಲ ಆತ್ಮ ಸಂಸ್ಕೃತಿ ಇದೆ ಅಂದ ಹಾಗಾಯಿತು. ಇಲ್ಲಿಂದಲೆ ಒಂದು ಕಾಲದಲ್ಲಿ ನಾನು ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಆತಂಕದಿಂದ ಓಡಿ ಹೋಗಿ ಪಾರಾದದ್ದು. ಎಲ್ಲರೂ ಆಗ ದೂರ ಸರಿಸಿದರು, ಕಾರಣ? ಇಲ್ಲಿನ ಒಬ್ಬ ಹೆಂಗಸು ತಾನು ಇಷ್ಟ ಪಟ್ಟಿದ್ದ ಬಡವನೊಬ್ಬನನ್ನು ಒಪ್ಪಿ ಮದುವೆಯಾದದ್ದು.

'ಈಗ ಆ ಹೆಂಗಸು ಎಲ್ಲಿರಬಹುದು?' ಎಂಬ  ವಿಷಯಕ್ಕೆ ಬಂದಾಗ ಮನಸೊಳಗೆ ಆತಂಕದ ಅಲೆಗಳು ಎದ್ದವು. ಮನೆಯವರ ಸಮ್ಮತಿ ಇಲ್ಲದ ಕಾರಣ ಮೆಚ್ಚಿದವನಿಗಾಗಿ ಆಕೆ ಈ ಮನೆಯನ್ನ ಬಿಟ್ಟಳು, ಅನಂತರ ಜೀವನ ಪೂರ್ತಿ ಅದಕ್ಕಾಗಿ ಕ್ಲೇಷ ಪಡಬೇಕಾಗಿ ಬಂದಿತು. ಅಕೆಯೆಡೆಗೆ ಯಾರೊಬ್ಬರೂ ತಿರುಗಿ ಸಹ ನೋಡಲಿಲ್ಲ, ಬದಲಿಗೆ ಸತ್ತಳು ಅಂತ ಸೂತಕದ ಸ್ನಾನ ಮಿಂದರು. ಒಳಗಿದ್ದ ಸೂತಕ ತೆಗೆದು ಹಾಕಿದರು, ತಮ್ಮಷ್ಟಕ್ಕೆ ತಾವೆ ಸೂತಕ ಕಳೆಯಿತು ಎಂದು ಅಂದುಕೊಂಡರು.

ಅದೆ ಹೆಣ್ಣಿನ ಮಗ ಇದೀಗ ಇದೆ ದೊಡ್ದ ಮನೆಯ ಮಾಲಿಕ! ಯಜಮಾನನಾದ ಮೇಲೆ ಸಂಕಟದಿಂದ ಆಕೆ ತನ್ನಮ್ಮ ಎನ್ನುವುದು ಅಪ್ಪುಣ್ಣಿಗೆ ನೆನಪಾಯಿತು. ಅವಳನ್ನು ತಾನೂ ಮರೆತೆನಲ್ಲ! ಅಪ್ಪ ಸತ್ತ ನಂತರ ನನ್ನ ಸಾಕಿ ಬೆಳೆಸಿದಳು, ನಂಬೂದರಿ ಮನೆಯ ಜೀತ ಮಾಡಿ ಕಡೆಯುವ ಕಲ್ಲಿನ ಬುಡಲ್ಲಿ ಕೂತು ಎಂಜಲೆಲೆಯ ಅನ್ನವನ್ನುಂಡು.....

ಆಮೇಲೆ ನಾನ್ಯಾಕೆ ಇದನ್ನೆಲ್ಲ ಮರೆತೆ? ಯಾರೂ ದಿಕ್ಕಿಲ್ಲದ ಸ್ಥಿತಿಯಲ್ಲಿ ಶಂಕರನ್ ನಾಯರ್ ಎಂಬ ಒಬ್ಬ ಮನುಷ್ಯ ಆಕೆಗೆ ಆಸರೆಯಾಗಿ ನಿಂತ. ಧರೆಗೆ ಬಿದ್ದು ಹೋಗುತ್ತಿರುವಾಗ ಒದಗಿ ಬಂದ ಸಹಾಯ ಹಸ್ತವನ್ನ ಬೇಡವೆನ್ನುವ ಸ್ಥಿತಿಯಲ್ಲಿ ಅವಳೂ ಸಹ ಇರಲಿಲ್ಲವಲ್ಲ. ಅದು ತಪ್ಪಾ? ಯಾರದ್ದು ತಪ್ಪು? ಯಾವುದು ತಪ್ಪು? ತನ್ನನ್ನು ತಾನು ಮತ್ತೆ ಮತ್ತೆ ಅವನು ಪ್ರಶ್ನಿಸಿಕೊಂಡ. ಅಂತೂ ಅವನಿಗೆ ಉಸಿರು ಕಟ್ಟಿಕೊಂಡ ಹಾಗಾಯಿತು. ಮಧ್ಯಾಹ್ನದ ರಣ ಬಿಸಿಲು ಹೊರಗೆ ಸುಡುತ್ತಿತ್ತು, ಗಾಳಿ ಬೀಸುತ್ತಿರಲಿಲ್ಲ, ಎಲೆ ಅಲುಗಾಡುತ್ತಿರಲಿಲ್ಲ. ಬೆವರಿದ ಮೈಯಿಂದ ಆತ ಚಾವಡಿಗೆ ಇಳಿದು ಬಂದ.

ಇಷ್ಟು ದಿನ ಆತ ಜಗತ್ತಿಗೆ ತನ್ನ ಬಗ್ಗೆಯೆ ಸುಳ್ಳು ಹೇಳಿದ್ದ. ಎಲ್ಲಾ ಇದ್ದೂ ತಾನು ಅನಾಥನೆಂದು ಗುರುತಿಸಿಕೊಂಡಿದ್ದ. ಹಾಗೆ ಹೇಳುವಾಗ ತನ್ನ ಬೆಲೆಯನ್ನ ತಾನೆ ಕಡಿಮೆ ಮಾಡಿಕೊಂಡ ನಾಚಿಕೆ ಒಳಗೊಳಗೆ ಆವರಿಸುತ್ತಿತ್ತು. ಎಷ್ಟೆಲ್ಲಾ ಋಣಭಾರದ ಸಂಕೋಲೆಗಳು ತನ್ನನ್ನು ಆವರಿಸಿವೆ? ವೈನಾಡಿನ ಸೈದಾಲಿ ಕುಟ್ಟಿಯ ಕೆಲಸ ಕೊಡಿಸಿದ ಋಣ, ಬೆವರಿದ ಕೈಯಿಂದ ಶಂಕರನ್ ನಾಯರನ ಗಳಿಕೆಯ ಒದ್ದೆ ನೋಟುಗಳನ್ನ ಪರೀಕ್ಷೆಯ ಫೀಜು ಕಟ್ಟಲು ಕಡೆ ಕ್ಷಣದಲ್ಲಿ ಶಾಲೆಗೆ ತಂದು ಕೊಟ್ಟ ಅಬ್ದುಲ್ಲಾನ ಸಹಾಯದ ಋಣ. ವಿದ್ಯಾರ್ಥಿ ವೇತನ ಕೊಟ್ಟ ಮುಖ್ಯೋಪಧ್ಯಾಯರ ಋಣ. ಆಯಾಸಗೊಂಡ ಮನಸ್ಸಿನಿಂದ ಚಾವಡಿಯ ಕಂಭಕ್ಕೆ ಒರಗಿ ಕಾಲು ಚಾಚಿ ಆತ ಕೂತುಕೊಂಡ. ಸೋಲು ಗೆಲುವುಗಳ ಲೆಕ್ಕಾಚಾರ ಹಾಕುತ್ತಾ ವ್ಯಥಾ ಅವನ ಮನಸು ಪಾಡು ಪಡುತ್ತಿತ್ತು.

.....

ಮನೆಯ ತಲೆ ಬಾಗಿಲಿನ ಮೆಟ್ಟಿಲುಗಳತ್ತ ಬಂದ ಆ ಯುವಕ ನಿಂತ. ಹಿಂದೆ ಬರುತ್ತಿದ್ದ ಹೆಂಗಸಿಗೆ 'ಅಮ್ಮಾ ಒಳಗೆ ಬಾ' ಎಂದ. ಅವಳು ಅನುಮಾನಿಸುತ್ತಾ ನಿಂತಾಗ 'ಧೈರ್ಯವಾಗಿ ಬಾ' ಎಂದ. ತಲೆಯ ನೆತ್ತಿ ಮೇಲಿ ಆಗಲೆ ಬಿಳಿ ಕೂದಲುಗಳು ಕಾಣುತ್ತಿದ್ದ ಅವಳು ಅನುಮಾನಿಸುತ್ತಲೆ ಚಾವಡಿಯನ್ನೇರಿದಳು. ಆದರೂ ಆ ವಯಸ್ಸಾದವ ಇನ್ನೂ ಹೊರಗೆಯೆ ನಿಂತಿರೋವಾಗ 'ಬನ್ನಿ ಒಳಗೆ' ಅಂತ ಈತ. ಆತನೂ ಸಂಕೋಚದಿಂದಲೆ ಒಳಬಂದ.

'ಒಳಗೆ ಎಷ್ಟೊಂದು ಕತ್ತಲೆ ಅಪ್ಪುಣ್ಣಿ" ಎಂದಳು ಆಕೆ.

'ಹಗಲೂ ಸಹ ಇಷ್ಟು ಕತ್ತಲೆ ಇರುವಲ್ಲಿ ಸತ್ತವರ ಪ್ರೇತಗಳೂ ಇದ್ದಾವು' ಹೆದರಿಕೆಯಿಂದಲೆ ಅವಳೆಂದಳು.

'ಅಮ್ಮಾ ಹೆದರಬೇಡ, ಈ ತೊಟ್ಟಿ ಮನೆಯನ್ನ ಮುರಿಸಿ ಹಾಕುವ ಏರ್ಪಾಡು ಮಾಡುವ. ಒಳ್ಳೆಯ ಗಾಳಿ ಬೆಳಕಿರುವ ಒಂದು ಪುಟ್ಟ ಮನೆ ಇಲ್ಲಿ ಕಟ್ಟಿಸುವ ಸಾಕು' ಎಂದ ಅಪ್ಪುಣ್ಣಿ.

'ಮುರಿದು ಹಾಕೋದಾ! ಭಗವತಿ ಇರುವ ಸ್ಥಳ ಅಲ್ಲವ?'

ಆತ ಗಟ್ಟಿಯಾಗಿ ನಕ್ಕ. ಆ ನಗುವಿನ ಅಲೆಗಳು ಹಳೆಯ ಮನೆಯ ಮೂಲೆಮೂಲೆಗಳನ್ನೂ ಮುಟ್ಟಿ ಮಾರ್ದನಿಸಿದವು. ಆ ಮುದಿ ಮನುಷ್ಯ ಮಾತ್ರ ಪರವಶನಾಗಿ ಇನ್ನೂ ನಿಂತೆ ಇದ್ದ.

-ಎಂ ಟಿ ವಾಸುದೇವನ್ ನಾಯರ್.

ತಮ್ಮ ಪ್ರಪ್ರಥಮ ಕಾದಂಬರಿ 'ನಾಲ್ಲಕೆಟ್' ಮೂಲಕವೆ ಬರಹ ಜಗತ್ತಿನಲ್ಲಿ ಅದ್ಭುತ ಪ್ರವೇಶ ಪಡೆದ ವಾಸುದೇವನ್ ನಾಯರ್ ಮಲಯಾಳಂನಲ್ಲಿ ಬರಹದ ದೈತ್ಯರಾಗಿದ್ದರೂ ಸಹ ಸದ್ಯದ ಭಾರತೀಯ ಬರಹ ಜಗತ್ತಿನಲ್ಲಿಯೆ ಒಂದು ದೊಡ್ಡ ಹೆಸರಾಗಿರುವವರು. ಕಾದಂಬರಿಕಾರ, ಪತ್ರಕರ್ತ, ಸಂಪಾದಕ, ಚಿತ್ರ ಸಂಭಾಷಣೆಕಾರ ಹಾಗೂ ನಿರ್ದೇಶಕನಾಗಿ ಎಂಟಿವಿ ತಾವು ಸಾಗಿದೆಡೆಯಲ್ಲೆಲ್ಲ ಮರೆಯಲಾಗದ ಛಾಪನ್ನ ಮೂಡಿಸಿದವರು. ೧೯೯೫ರಲ್ಲಿ ಮಲಯಾಳಿ ಸಾಹಿತ್ಯ ಜಗತ್ತಿಗೆ ಅವರು ಸಲ್ಲಿಸಿದ ಸೇವೆಗೆ 'ಜ್ಞಾನಪೀಠ' ಪ್ರಶಸ್ತಿ ಅವರನ್ನ ಅರಸಿಕೊಂಡು ಬಂತು.

ನಾಯರ್ ಕೂಡು ಕುಟುಂಬವೊಂದರ ವಿಘಟನೆಯ ಕಥೆಯಾದ 'ನಾಲ್ಲಕೆಟ್' ೧೯೫೮ಕ್ಕೆ ಪ್ರಕಟವಾದಲ್ಲಿಂದ ಈಚೆಗೆ ಸುಮಾರು ಐದು ಲಕ್ಷ ಪ್ರತಿಗಳಾಗಿ ಮಲಯಾಳಂ ಭಾಷೆಯೊಂದರಲ್ಲಿಯೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ. ಇದುವರೆಗೆ 'ನಾಲ್ಲಕೆಟ್' ಸುಮಾರು ಇಪ್ಪತೈದು ಬಾರಿ ಮರು ಮುದ್ರಣಗೊಂಡಿದೆ. ೧೯೫೯ರ ಸಾಲಿನ ಕೇರಳ ಸಾಹಿತ್ಯ ಅಕಾಡಮಿ ಪ್ರಶಸ್ತಿಯೂ 'ನಾಲ್ಲಕೆಟ್'ವಿಗೆ ಸಂದಿತ್ತು. ಅದನಂತರ ಸುಮಾರು ಹದಿನಾಲ್ಕು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿರುವ 'ನಾಲ್ಲಕೆಟ್'ವನ್ನ ಅನುವಾದಕರಾದ ಬಿ ಕೆ ತಿಮ್ಮಪ್ಪ 'ಚೌಕಟ್ಟಿನ ಮನೆ' ಅನ್ನುವ ಹೆಸರಿನಲ್ಲಿ ಕನ್ನಡಕ್ಕೂ ಅನುವಾದಿಸಿದ್ದಾರೆ. 'ನ್ಯಾಷನಲ್ ಬುಕ್ ಟ್ರಸ್ಟ್' ಈ ಕನ್ನಡವತರಣಿಕೆಯನ್ನ ಪ್ರಕಟಿಸಿದೆ. ಸ್ವತಃ ಎಂಟಿವಿ ಇದೆ ಕೃತಿಯನ್ನ ತೊಂಬತ್ತರ ದಶಕದಲ್ಲಿ ದೂರದರ್ಶನಕ್ಕಾಗಿ "ಟೆಲಿಫಿಲಂ" ಆಗಿ ನಿರ್ದೇಶಿಸಿದ್ದರು.

ಅಳಿಯ ಕಟ್ಟನ್ನು ಅನುಸರಿಸುವ ಮಾತೃ ಮೂಲ ಸಂಪ್ರದಾಯದ ಕೇರಳದ ನಾಯರ್ ಸಮುದಾಯವನ್ನ ಆಚಾರ, ವಿಚಾರ ಹಾಗೂ ಸಾಂಸ್ಕೃತಿಕ ಅನನ್ಯತೆಯ ದೃಷ್ಟಿಯಿಂದ ಕನ್ನಡ ನಾಡಿನ ಕರಾವಳಿಯ ಬಂಟ ಸಮುದಾಯಕ್ಕೆ ಹೋಲಿಸಬಹುದಾದರೆ, ದೌಲತ್ತು ದರ್ಪದ ವಿಷಯಕ್ಕೆ ಬಂದರೆ ಘಟ್ಟದ ಮೇಲಿನ ಜಮೀನ್ದಾರ ಒಕ್ಕಲಿಗರಿಗೆ ಅವರನ್ನ ಸರಿದೂಗಿಸಬಹುದು. ತನ್ನ ಮೆಚ್ಚಿನ ಹುಡುಗ ಜಾತಿಯವನೆ ಆಗಿದ್ದರೂ ಸಹ ಬಡವನೆಂಬ ಕಾರಣಕ್ಕೆ ಮದುವೆಯಾದ ನಂತರ ಕುಟುಂಬದಿಂದ ಬಹಿಷ್ಕರಿಸಲಾದ ನಿರ್ಭಾಗ್ಯ ಹೆಣ್ಣೊಬ್ಬಳ ಮಗ ಈ ಅಪ್ಪುಣ್ಣಿ. ಚಿಕ್ಕ ವಯಸ್ಸಿನಲ್ಲಿಯೆ ಅಪ್ಪನನ್ನ ಕಳೆದುಕೊಳ್ಳುತ್ತಾನೆ. ಬಡತನದ ಬೇಗುದಿಯಲ್ಲಿಯೆ ಸಿರಿವಂತ ನಂಬೂದರಿಗಳ ಮನೆಯ ಜೀತ ಮಾಡಿ ಸ್ವಾಭಿಮಾನಿ ಹೆಣ್ಣಾದ ಪಾರುಕುಟ್ಟಿ ಅವನನ್ನು ಸಾಕಿದಳು. ಆದರೆ ಮುಂದೆ ಕಾಲ ಬದಲಾಯಿತು. ಸುಳ್ಳು ಸಂಶಯಕ್ಕೆ ಬಲಿಯಾಗಿ ಸಹಾಯಕ್ಕೆ ಬಂದ ಇನ್ನೊಬ್ಬ ಸಹೃದಯಿ ಶಂಕರನ್ ನಾಯರ್ ಜೊತೆ ಆವಳ ಸಂಬಂಧ ಕಲ್ಪಿಸಿ ಮಗನೂ ಅವಳನ್ನ ತಿರಸ್ಕರಿಸಿದ. ಕಡೆಗೆ ಕಾಲದ ವೇಗ ಅವರನ್ನೆಲ್ಲ ಒಗ್ಗೂಡಿಸಿತು. ಆದ ತಪ್ಪು ಗ್ರಹಿಕೆಗಳೆಲ್ಲ ಕರಗಿ ಹೋದವು. ಅಪಮಾನ, ಮಾನಸಿಕ ಹಿಂಸೆ ಹಾಗೂ ಮನದೊಳ ಬೇಗುದಿಗಳಿಂದ ನರಳಿದ ಅಪ್ಪುಣ್ಣಿ ಬಾಳನ್ನ ಗೆದ್ದು ಸಾಧಿಸಿ ತೋರಿಸುವ ಕಥೆಯಲ್ಲಿ ಕಣ್ಣೀರು ತರಿಸುವ ಭಾವನೆಗಳ ತಾಕಲಾಟವಿದೆ.

ನಾನು ಮಲಯಾಳಂ ಕಲಿತದ್ದಕ್ಕೂ ಸಾರ್ಥಕವಾಯಿತು. ನನಗೆ ಮೂಲ ಪುಸ್ತಕ ಹಾಗೂ ಅದರ ಕನ್ನಡಾನುವಾದ ಎರಡನ್ನೂ ಓದುವ ಸುಖ ಸಿಕ್ಕಿತು. ವಾಸ್ತವದಲ್ಲಿ ಮೂಲ ಮಲಯಾಳಿ ನಿಜಕ್ಕೂ ಕನ್ನಡಾನುವಾದಕ್ಕಿಂತ ಹಿತವಾಗಿದೆ. ಆದರೆ ಕನ್ನಡ ಭಾವಾನುವಾದ ಕಳಪೆಯೇನೂ ಅಲ್ಲ. ಇದು ವಾಸ್ತವದಲ್ಲಿ ಎಂಟಿವಿಯವರ ಬಾಲ್ಯದ ಅನುಭವ ಕಥನವೆ ಆಗಿದೆ. ನೋವು, ಅವಮಾನ ಹತಾಶೆಗಳನ್ನ ಅನುಭವಿಸಿದ ಮನಸ್ಸುಗಳಿಗೆಲ್ಲ ಖಂಡಿತ ಇದರ ಕಥನ ತಾಕಿಯೆ ತಾಕುತ್ತದೆ.

No comments: