24 September 2014

ಪುಸ್ತಕದೊಳಗೆ - ೧೨



"ಕೆಂಪು ಕಳವೆ"

ಲೇಖಕ; ಕೂಡ್ಲು ತಿಮ್ಮಪ್ಪ ಗಟ್ಟಿ,
ಪ್ರಕಾಶಕರು; ಸುಮುಖ,
ಪ್ರಕಟಣೆ; ೨೦೧೩,
ಕ್ರಯ; ರೂಪಾಯಿ ೩೦೦.



"ಎರಡು ತಿಂಗಳ ನಂತರ ಅಕ್ಟೋಬರ ತಿಂಗಳಲ್ಲಿ ಒಂದು ಭಾನುವಾರ ಸಾಯಂಕಾಲ ನಾನು 
ಶಿವರಾಮಯ್ಯನ ಮನೆಗೆ ಹೋದೆ. ಮೊಗಸಾಲೆಯ ಬಾಗಿಲಲ್ಲಿ ನಿಂತ ನನ್ನನ್ನು ಯಾರೋ ಕೆಲಸದಾಳು 
ನೋಡಿ ಒಳಗೆ ಹೋಗಿ ಹೇಳಿದ. ಸ್ವಲ್ಪ ಹೊತ್ತಿನಲ್ಲಿ ಶಿವರಾಮಯ್ಯನ ಹೆಂಡತಿ ಕೌಸಲ್ಯಮ್ಮ ಬಂದು, 
`ಯಾರು? ಯಾರು ಬೇಕಾಗಿತ್ತು?’ ಎಂದಳು. 
`ಶಿವರಾಮಯ್ಯನವರನ್ನು ಕಾಣಬೇಕಾಗಿತ್ತು’ ಎಂದೆ. 
`ಅವರ ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಅವರು ಹೊರಗೆ ಬರುವುದಿಲ್ಲ. ನೀವು ಒಳಗೆ 
ಬನ್ನಿ. ನಾನು ಅವರನ್ನು ಕರೀತೇನೆ’ ಎಂದಳು ಕೌಸಲ್ಯಮ್ಮ. ನನ್ನ ಪ್ಯಾಂಟು ಮತ್ತು ಶರ್ಟಿಗೆ ಮರ್ಯಾದೆ 
ಸಿಗುತ್ತಿದೆ ಎಂದು ನನಗೆ ಸ್ಪಷ್ಟವಾಯಿತು. 
`ಒಳಗೆ ಬರುವುದಿಲ್ಲ. ನಾನು ಮಾರರವನು’ ನಾನೆಂದೆ. 
`ಹಾಗಂದ್ರೆ?’ 
`ಮಾರ ಜಾತಿಯವನು’ 
ಅವಳು ಒಂದು ಕ್ಷಣ ಅವಾಕ್ಕಾಗಿ ಹಾಗೇ ನಿಂತಳು. 
ಮರು ಮಾತಾಡದೆ ಒಳಹೋದಳು. ಹತ್ತು ನಿಮಿಷದ ನಂತರ ಶಿವರಾಮಯ್ಯ 
ನಿಧಾನವಾಗಿ ನಡೆಯುತ್ತಾ ಮೊಗಸಾಲೆಗೆ ಬಂದ. ಅವನ ಆರೋಗ್ಯ ಕೆಟ್ಟಿದ್ದಂತೆ ತೋರಲಿಲ್ಲ. ಚೆನ್ನಾಗಿ 
ನೋಡಬೇಕೆಂಬಂತೆ ಅರ್ಧ ನಿಮಿಷ ಕಣ್ಣು ಬಿಟ್ಟು ನೋಡಿದ. 
`ಯಾರು ಗೋಡೆ ಕಟ್ಟುವ ಬಿರುಮನ ಮಗ ಮಾರನಾ?’ 
`ಹೌದು’ 
`ನೀನು ಈಗ ಲಾಯರು ಅಂತ ಗೊತ್ತಾಯಿತು. ಏನು, ಏನಾಗಬೇಕು?’ 
`ಶ್ರೀಮಂತರಾದವರಿಗೆ ಇಷ್ಟು ಮರವೆ ಸ್ವಾಭಾವಿಕವಾ?’ 
`ಹಾಗಂದ್ರೆ?’ 
`ಹದಿಮೂರು ವರ್ಷಗಳ ಹಿಂದೆ ನೀವು ನಮ್ಮಿಂದ ಹತ್ತು ಸೇರು ಕಳವೆ ಭತ್ತ 
ತೆಗೆದುಕೊಂಡಿದ್ದಿರಿ. ಆಗ ಅದರ ಬೆಲೆ ಇಪ್ಪತ್ತು ರುಪಾಯಿ ಆಗಿತ್ತು. ಆ ಹಣಕ್ಕಾಗಿ ನಾನು ನಿಮ್ಮ ಬಳಿ 
ಬಂದಿದ್ದೆ. ನೀವು ಹಣ ಕೊಡಲಿಲ್ಲ. ಹಣ ಕೊಡದಿದ್ರೆ ಏನು ಮಾಡ್ತಿ?’ ಅಂತ ಕೇಳಿದ್ರಿ. ಈಗ ಹತ್ತು ಸೇರು ಭತ್ತದ ಬೆಲೆ ಒಂದು ಸಾವಿರ ರುಪಾಯಿ ಆಗ್ತದೆ’ 
`ಏನು ಹತ್ತು ಸೇರು ಭತ್ತಕ್ಕೆ ಒಂದು ಸಾವಿರ ರುಪಾಯಿ ಆಗ್ತದಾ?’ ಶಿವರಾಮಯ್ಯ 
ಆಶ್ಚರ್ಯದಿಂದ ಕೇಳಿದ. 
`ಆದ್ರೆ ಈಗ ನೀವು ಸಾವಿರ ರುಪಾಯಿ ಕೊಟ್ರೂ ಬೇಡ. ನನಗೆ ಹತ್ತು ಸೇರು ಕಳವೆ 
ಭತ್ತವೇ ಬೇಕು’ 
`ನಾನು ಈಗ ಕಳವೆ ಬೆಳೀತಾ ಇಲ್ಲ’ 
`ಸುಳ್ಳು ಹೇಳ್ಬೇಡಿ. ನಿಮ್ಮ ಗದ್ದೆಯಲ್ಲಿ ಭತ್ತ ಹೂ ಬಿಡುವಾಗ ಅದರ ಪರಿಮಳ ನಮ್ಮ 
ಮನೆಯ ವರೆಗೂ ಬರ್ತದೆ’ 
`ಅದು ನಿನ್ನ ಬಡಾಯಿ’ 
`ಬಡಾಯಿಯಾದರೆ ಬಡಾಯಿ. ಆದರೆ ನನಗೆ ಬೇಕಾದ್ದು ಹತ್ತು ಸೇರು ಕಳವೆ ಭತ್ತ. ಹತ್ತು 
ಸೇರು ಬೇಡ, ಐದು ಸೇರು ಕೊಡಿ’ 
`ಹೇಳಿದೆನಲ್ಲಾ, ನಾವು ಈಗ ಕಳವೆ ಬೆಳೆಯುವುದಿಲ್ಲ ಅಂತ? ನಮ್ಮಲ್ಲಿ ಕೂಡ ಅದರ 
ಬೀಜ ಅಳಿದು ಹೋಗಿದೆ. ಬೇಕಿದ್ರೆ ಹಣ ಕೊಡ್ತೇನೆ’ 
`ಹಣ ಸಹ ಬೇಕಿದ್ರೆ ಮಾತ್ರ ಕೊಡುವುದಾ? ಅದು ಕೂಡ ಬಹುಶಃ ಹತ್ತು ರುಪಾಯಿ
ಅಂತ ಕಾಣುತ್ತೆ’ ಎಂದು ನಾನು ನಕ್ಕು, `ನಿಮ್ಮ ಬಳಿ ಕಳವೆ ಭತ್ತ ಇದೆ ಅನ್ನುವುದರಲ್ಲಿ ನನಗೆ ಸಂದೇಹ 
ಇಲ್ಲ. ನೀವು ಕೊಡಲು ಸಿದ್ಧ ಇಲ್ಲ ಅಂತ ಅರ್ಥ’ 
`ಬೇಕಿದ್ರೆ ಹಾಗೆ ತಿಳ್ಕೊ’ ಎಂದು ಶಿವರಾಮಯ್ಯ ಹೊರಟುಹೋದ. 

ಚಿಕ್ಕಂದಿನಲ್ಲಿ ನನಗೆಷ್ಟೋ ಬಾರಿ ಅನಿಸಿತ್ತು ಬದುಕು ಎಂದರೆ ಬೇರೇನೂ ಅಲ್ಲ, ಹಸಿವೆ 
ಮಾತ್ರ ಎಂದು. ಹಸಿವೆಯನ್ನು ನಾನು ಮನುಷ್ಯನಲ್ಲಿ ಮಾತ್ರವಲ್ಲ, ಮೃಗ ಪಕ್ಷಿಗಳಲ್ಲಿಯೂ ಕಂಡಿದ್ದೆ. 
ಕ್ರಿಮಿ ಕೀಟಗಳಲ್ಲಿಯೂ ಕಂಡಿದ್ದೆ. ಆಗಷ್ಟೇ ಮೊಟ್ಟೆಯಿಂದ ಹೊರಬಂದ ಮರಿಗಳು ಕೊಕ್ಕು ತೆರೆದು 
ಆಹಾರಕ್ಕಾಗಿ ಕೂಗುವ ಪರಿ, ಹಾವು ಕಪ್ಪೆಯನ್ನು ನುಂಗುವ ಪರಿ, ಬೇಲಿಯ ಮೇಲಿಂದ ಜಿಗಿದು 
ಬಂದು ನಾವು ಬೆಳೆಸಿದ ಪೈರನ್ನು ಹಸು ನುಂಗುವ ಪರಿ, ಆಡು ತರಕಾರಿ ಗಿಡಗಳನ್ನು ಪರಪರನೆ 
ಮುಕ್ಕುವ ಪರಿ ಮತ್ತು ಅಂಥದೇ ನೂರಾರು ದೃಶ್ಯಗಳಿಂದ ನನಗೆ ಹಸಿವೆಯ ವಿಶ್ವರೂಪ ದರ್ಶನ 
ಆಗಿತ್ತು. ಮನುಷ್ಯ ಕೂಡ ಅಂಥದೇ ಒಂದು ಪ್ರಾಣಿ, ಹಸಿವೆಯಿಂಗಿಸಿಕೊಳ್ಳುವುದೇ ಅವನ ಬದುಕು 
ಎಂದುಕೊಂಡಿದ್ದೆ. 

ಚಿಕ್ಕಂದಿನಲ್ಲಿ ನಾಯಿ, ಹಸುವಿನ ಹೆರಿಗೆಯ ದೃಶ್ಯಗಳು ತೀರಾ ಸಾಮಾನ್ಯವಾಗಿದ್ದವು ಮತ್ತು 
ಅವು ನಮ್ಮ ಬದುಕಿಗೇ ಸಂಬಂಧಿಸಿದ್ದವು. ಹೆರಿಗೆಗೆ ಸಂಬಂಧಿಸಿರುವ ನಾಯಿ, ಹಸು ಹೋರಿಗಳ 
ಕಾಮಕ್ರೀಡೆ ಕೂಡ ಅಷ್ಟೇ ಸಾಮಾನ್ಯವಾದ ದೃಶ್ಯವಾಗಿತ್ತು. ಬಹುಶಃ ಮನುಷ್ಯ ಕೂಡ ಹೀಗೆಯೇ 
ಎಂದು ಅರ್ಥ ಮಾಡಿಕೊಂಡಿದ್ದೆ. ಅದಕ್ಕಿಂತ ಹೆಚ್ಚು ಹೇಗೆ ಏನು ಎಂದು ತಿಳಿದುಕೊಳ್ಳಲು ಏನೂ 
ಇದ್ದಂತೆ ತೋರಲಿಲ್ಲ. 

ದೊಡ್ಡವನಾದಂತೆ, ಮನುಷ್ಯ ಮೃಗ ಪಕ್ಷಿಗಳ ಹಾಗೆ ಅಲ್ಲ, ಅವನು ಬಹಳ ಭಿನ್ನವಾದ 
ಒಂದು ಸೃಷ್ಟಿ ಎನಿಸಿತು. ಅನಂತರ, ಮನುಷ್ಯನ ಹಸಿವು ಮತ್ತು ಕಾಮದ ವಿವಿಧ ಆಯಾಮಗಳನ್ನು 
ಮತ್ತು ಅವನು ಅವೆರಡನ್ನು ಇಂಗಿಸಿಕೊಳ್ಳುವ ನೂರಾರು ವಿಧಾನಗಳನ್ನು ಕಂಡಾಗ, ನನಗೆ ಅನಿಸಿತು, 
ಜೀವಿತ ಎಂಬುದರ ಸತ್ಯ ಇವೆರಡೇ, ಮನುಷ್ಯ ಅಂದರೆ ಹಸಿವು ಮತ್ತು ಕಾಮ ಮಾತ್ರ ಎಂದು. ಪ್ರಾಣಿ 
ಪಕ್ಷಿಗಳು ಹಸಿವೆ ಮತ್ತು ಕಾಮವನ್ನು ಇಂಗಿಸಿಕೊಳ್ಳುವ ರೀತಿಯನ್ನು ಕಂಡಾಗ ಅದು ನಿಸರ್ಗಸಹಜ 
ಅಂತನಿಸಿತ್ತು. ಅದರಲ್ಲಿ ಅಸ್ವಾಭಾವಿಕವಾದುದು, ಬೆಚ್ಚಿ ಬೀಳಿಸುವಂಥದು ಏನೂ ಕಾಣಿಸಲಿಲ್ಲ. ಆದರೆ 
ಮನುಷ್ಯನ ಹಸಿವೆ ಮತ್ತು ಕಾಮವನ್ನು ಕಂಡಾಗ, ಅವನು ಶಾಪಗ್ರಸ್ತ ಪ್ರಾಣಿ ಅಂತೆನಿಸಿತು. ಛೆ, 
ಇವೆರಡಕ್ಕಾಗಿ ಬದುಕಬೇಕಾಗಿದೆಯೆ ಎಂದನಿಸಿ ಎಷ್ಟೋ ಬಾರಿ ಬದುಕಿನ ಬಗ್ಗೆ ಅಸಹ್ಯವುಂಟಾಗಿತ್ತು. 
ಅಸಹ್ಯವಷ್ಟೇ ಅಲ್ಲ, ಸಿಟ್ಟು ಕೂಡ. ಶ್ರೇಷ್ಠ ಎಂದು ಕೊಂಡಾಡಲ್ಪಡುವ ಮಾನವ ಜನ್ಮ ಇಷ್ಟೆಯೆ ಎಂದು 
ವಿಷಾದವುಂಟಾಗಿತ್ತು. 

ಶಿವರಾಮಯ್ಯನ ಬದುಕು ನನಗೆ ಎಷ್ಟು ಅಸಹ್ಯವೆನಿಸಿತು ಎಂದರೆ, ಇಂಥ ಜಗತ್ತಿನಲ್ಲಿ ಬದುಕಬೇಕಾಗಿರುವ ಅನಿವಾರ್ಯತೆಯ ಬಗ್ಗೆ ನನಗೆ ನನ್ನ ಮೇಲೆಯೇ ಅಸಹ್ಯವುಂಟಾಯಿತು. ನಾನು 
ಬದುಕಿ ಉಳಿಯಲು ಯಾವುದೋ ನೆಪಗಳನ್ನು ಹುಡುಕುತ್ತಿದ್ದೇನೊ ಏನೋ ಎಂಬ 
ಅನುಮಾನವುಂಟಾಯಿತು. ಈ ತನಕ ಬದುಕಿ ಉಳಿಯಲು ಪಟ್ಟ ಪಾಡು ಅಂಥ ಒಂದು ನೆಪವಲ್ಲದೆ 
ಬೇರೇನಲ್ಲ ಎಂದನಿಸಿತು. ಯೋಚಿಸುತ್ತಾ, ಈ ಯೋಚನೆಗಳು ಕೂಡ ಅನಿವಾರ್ಯ, ಬದುಕಬೇಕಾದ್ದು 
ಕೂಡ ಅನಿವಾರ್ಯ, ಬದುಕಿಕಾಗಿ ಹೇಗೆಲ್ಲ ಹೋರಾಡಬೇಕೋ ಹಾಗೆಲ್ಲ ಹೋರಾಡಬೇಕಾದ್ದು ಕೂಡ 
ಅನಿವಾರ್ಯ ಎಂದುಕೊಂಡು ನಗಲು ಪ್ರಯತ್ನಿಸಿದೆ. ಅಮ್ಮನಿಗಾಗಿ ಮುಖದಲ್ಲಿ ಮುಗುಳುನಗೆ 
ಉಳಿಸಿಕೊಂಡು, ಸಪೂರವಾದ ಹುಣಿಗಳ ಮೇಲಿಂದ, ಆ ಕಡೆ ಈ ಕಡೆಯಿರುವ ಗದ್ದೆಗಳ ಕೆಸರಿಗೆ 
ಬೀಳದಂತೆ, ಬಹಳ ಎಚ್ಚರದಿಂದ, ನಿಧಾನವಾಗಿ, ಸುಮಾರು ಎಪ್ಪತ್ತು-ಎಂಬತ್ತು ವರ್ಷ ವಯಸ್ಸಿನ 
ಮನುಷ್ಯ ನಡೆಯುವಂತೆ ಮನೆಗೆ ನಡೆದೆ. 

ಶಿವರಾಮಯ್ಯನೊಡನೆ ಮಾತಾಡುವಾಗ ಒಂದಿಷ್ಟೂ ಉದ್ವೇಗಿತನಾಗಬಾರದು ಎಂದು 
ಮೊದಲೇ ತೀರ್ಮಾನಿಸಿಕೊಂಡಿದ್ದೆ. ಅದರಲ್ಲಿ ನಾನು ಯಶಸ್ವಿಯಾಗಿದ್ದೆ. ನನ್ನ ಉದ್ದೇಶ ಒಂದು ಸತ್ಯವನ್ನು 
ಕಾಣಬೇಕು ಎಂದೇ ಹೊರತು ಭತ್ತದ ಬೀಜ ಪಡೆಯಬೇಕೆಂಬುದಾಗಿರಲಿಲ್ಲ. ಅಮ್ಮನ ಬಳಿ 
ಶಿವರಾಮಯ್ಯ ಮತ್ತು ನನ್ನ ನಡುವೆ ನಡೆದ ಮಾತುಕತೆಯನ್ನು ಹೇಳಿದೆ. ಅಮ್ಮ ಮುಗುಳ್ನಕ್ಕಳು. ಏನೂ 
ಹೇಳಲಿಲ್ಲ. ಕೆಲವು ಸಲ, ಒಂದು ಶಬ್ದದ ಮೂಲಕ ಹೇಳದ್ದನ್ನು ಮೌನ ನೂರು ಮಾತುಗಳಲ್ಲಿ 
ಹೇಳುತ್ತದೆ ಎಂದನಿಸಿತು. 

ಸೋಮವಾರ ಕೋರ್ಟಿನಲ್ಲಿ, ನಾನು ನನ್ನ ಕೋಣೆಯಲ್ಲಿರುವಾಗ ಗೌರಿ ಬಂದಳು. 
`ನಮಸ್ಕಾರ’ ಎಂದಳು. 
`ನಮಸ್ಕಾರ. ಕುಳಿತುಕೊಳ್ಳಿ’ ನಾನೆಂದೆ. 
`ನಿನ್ನೆ ನಮ್ಮ ಮನೆಗೆ ಬಂದಿದ್ರಂತೆ’ 
`ಹೌದು. ಅಪ್ಪ ಹೇಳಿದ್ರಾ, ಅಮ್ಮ ಹೇಳಿದ್ರಾ?’ 
`ಅಮ್ಮ ಹೇಳಿದ್ರು’
`ಅಮ್ಮ ಹೇಳಿದ್ರಾ? ಮಾತಾಡಿದ್ದು ನಿಮ್ಮ ಅಪ್ಪ ಮತ್ತು ನಾನು. ನಿಮ್ಮ ಅಮ್ಮ ಅಲ್ಲೆಲ್ಲೂ 
ಇರ್ಲಿಲ್ಲ’ 
`ಅಮ್ಮನ ಹತ್ರ ಅಪ್ಪ ಹೇಳಿರ್ಬಹುದು’ 
`ಅಮ್ಮನ ಹತ್ರ ಅಪ್ಪ ಹೇಳುವಷ್ಟು ಮುಖ್ಯವಾದ ವಿಚಾರವೇನೂ ಅದರಲ್ಲಿ ಇರ್ಲಿಲ್ಲ’ ನಾನು 
ನಕ್ಕೆ. 
`ನಿಮ್ಗಿದ್ದಿರ್ಲಿಕ್ಕಿಲ್ಲ, ಅಪ್ಪನಿಗಿದ್ದಿರ್ಬಹುದು’ ಗೌರಿ ಮುಗುಳುನಗೆ ಬೀರಿದ್ದನ್ನು ಕಂಡು 
ಪರವಾಗಿಲ್ಲ, ಜಗಳ ಮಾಡಲು ಬಂದಿಲ್ಲ ಎಂದು ಸಮಾಧಾನವಾಯಿತು. 
`ನಾನು ಹದಿಮೂರು ವರ್ಷಗಳ ಹಿಂದೆ ಒಮ್ಮೆ ಅದೇ ರೀತಿ ನಿಮ್ಮ ಮನೆಗೆ ಬಂದಿದ್ದೆ’ 
`ನೆನಪಿದೆ’ 
`ಏನು ಹೇಳಿದ್ರು ನಿಮ್ಮ ಅಮ್ಮ?’ 
`ಅಮ್ಮನೂ ಏನೂ ಹೇಳ್ಳಿಲ್ಲ ಅಪ್ಪನೂ ಏನೂ ಹೇಳಿಲ್ಲ. ನಡೆದ ಮಾತುಕತೆಯ ಬಗ್ಗೆ 
ಮಾತ್ರ ಹೇಳಿದ್ರು’ 
`ಅದ್ರಲ್ಲಿ ಮಾತಿಗಿಂತ ಕತೆಯೇ ಜಾಸ್ತಿ’ ನಾನು ಪುನಃ ನಕ್ಕೆ. 

`ಅದು ಹೋಗಲಿ ಬಿಡಿ. ನೀವು ಹದಿಮೂರು ವರ್ಷದ ಹಿಂದೆ ಕೊಟ್ಟಿದ್ದ ಭತ್ತದ ಹಣ 
ಅಪ್ಪ ಕೊಡ್ಲಿಲ್ಲ. ನೀವು ಹದಿಮೂರು ವರ್ಷದ ನಂತರ ಕೂಡ ಅದನ್ನ ಕೇಳ್ಳಿಕ್ಕೆ ಬಂದದ್ದನ್ನು 
ನೋಡುವಾಗ ನಿಮಗೆ ಭತ್ತದ ಆವಶ್ಯಕತೆ ಇಲ್ಲ, ಜಿದ್ದಿನಿಂದ ಬಂದಿದ್ದಿರಿ ಅಂತ ನಂಗನಿಸ್ತದೆ’ 
ನಾನು ನಕ್ಕೆ. `ಜಿದ್ದಿನಿಂದ ಅಲ್ಲ ಆವಶ್ಯಕತೆಯಿಂದಲೇ ಬಂದದ್ದು. ಮೊದಲನೇ ಸಲ 
ಬಂದಾಗ ನನಗೆ ಇಂಗ್ಲಿಷ್ ಟೆಕ್ಸ್ಟ್ ಬುಕ್ ಕೊಂಡುಕೊಳ್ಳುವುದಕ್ಕೆ ಹಣ ಬೇಕಾಗಿತ್ತು. ಎರಡನೇ ಸಲ, 
ಅಂದರೆ ನಿನ್ನೆ, ಬಂದದ್ದು ಹಣಕ್ಕಲ್ಲ. ಕಳವೆಯ ಬೀಜಕ್ಕೆ. ಆದ್ರೆ ನಿಮ್ಮ ಅಪ್ಪ ಕಳವೆ ಬೆಳೆದೇ ಇಲ್ಲ ಅಂತ 
ಸುಳ್ಳು ಹೇಳಿದ್ರು. ಅದೂ ವಂಚನೆ, ಇದೂ ವಂಚನೆ. ಹದಿಮೂರು ವರ್ಷಗಳಲ್ಲಿ ಲೋಕ ಇಷ್ಟು ಬದಲಾಗಿದೆ. ನಾವು ಕೂಡ ಬದಲಾಗಿದ್ದೇವೆ. ಆದ್ರೆ ನಿಮ್ಮ ಅಪ್ಪ ಬದಲಾಗಲಿಲ್ಲ’ 

`ಅವ್ರು ಇನ್ನು ಕೂಡ ಬದಲಾಗುವವರು ಅಲ್ಲ. ಆ ವಿಚಾರ ಹೋಗಲಿ ಬಿಡಿ’
ಅವಳು ಮಾತು ಮುಂದರಿಸುವ ಮೊದಲು ನಾನು ತಟ್ಟನೆ, `ಇದು ನೀವು ನನಗೆ 
`ಹೋಗಲಿ ಬಿಡಿ’ ಎಂದ ಎರಡನೆಯ ವಿಚಾರ. ಹೀಗೆ ಒಂದೊಂದೇ ವಿಚಾರವನ್ನು ಬಿಡುತ್ತಾ 
ಹೋಗುವುದು ಕಷ್ಟ’ ಎಂದು ನಾನು ನಕ್ಕು, `ಯಾವ ವ್ಯಕ್ತಿಯ ಕುರಿತೂ ತಪ್ಪು ಅಭಿಪ್ರಾಯವನ್ನು 
ಇಟ್ಟುಕೊಳ್ಳುವುದು ನನ್ನಿಂದಾಗದು. ಆದ್ದರಿಂದ ನಿಮ್ಮ ಅಪ್ಪನ ಗುಣ ಬದಲಾಗಿರುವುದೇ ಇಲ್ಲವೆ ಎನ್ನುವ 
ಸತ್ಯವನ್ನು ನನಗೆ ಕಂಡಕೊಳ್ಳಬೇಕಾಗಿತ್ತು’ 

`ಆ ಸತ್ಯವನ್ನು ತಿಳಿದು ನಿಮಗೆ ಏನಾಗ್ಬೇಕು?’ 
ಒರಟುತನವೋ ಅಸಹನೆಯೋ ಏನೋ ಒಂದು ಅವಳ ದನಿಯಲ್ಲಿದ್ದುದರಿಂದ ನಾನು
ಹೇಳಿದೆ, `ನನಗೆ ನಿಮ್ಮ ಅಪ್ಪನ ಜೀವನ ಚರಿತ್ರೆ ಬರೆಯೋ ಯೋಚನೆ ಇದೆ’ 
`ನೀವು ನನ್ನ ಅಪ್ಪನ ಜೀವನ ಚರಿತ್ರೆ ಬರೆಯೋದಾದ್ರೆ ನಾನು ನಿಮ್ಮ ಜೀವನ ಚರಿತ್ರೆ 
ಬರೀತೇನೆ’ ಅವಳು ಗಂಭೀರವಾಗಿದ್ದಳು. 
ನಾನು ಜೋರಾಗಿ ನಕ್ಕೆ. `ನಿಮ್ಮ ಅಪ್ಪನ ಬಗ್ಗೆ ನಂಗೆ ಗೊತ್ತಿಲ್ಲದಿರೋ ಎಷ್ಟೋ 
ವಿಚಾರಗಳು ನಿಮ್ಗೆ ಗೊತ್ತಿರ್ಬಹುದು, ನಿಮ್ಗೆ ಗೊತ್ತಿಲ್ಲದಿರೋ ಎಷ್ಟೋ ವಿಚಾರಗಳು ನಂಗೆ 
ಗೊತ್ತಿರ್ಬಹುದು. ನೀವು ನಂಗೆ ಸಹಕಾರ ನೀಡಿದ್ರೆ ನಾನು ಶಿವರಾಮಯ್ಯನವರ ಒಂದು ಪರಿಪೂರ್ಣ 
ಜೀವನ ಚರಿತ್ರೆಯನ್ನು ಬರೀಬಹುದು’ 
`ನಾನು ಸಹಕಾರ ನೀಡದಿದ್ರೆ?’ 

`ಏನ್ಮಾಡೋಕಾಗುತ್ತೆ? ಊರು ಸುತ್ತಿ ನೂರಾರು ಮಂದಿಯನ್ನ ಕೇಳ್ಬೇಕಾಗುತ್ತೆ. ಅದೇ 
ಒಳ್ಳೆಯದು ಅಂತನಿಸ್ತದೆ. ಆಗ ಸಿಗುವ ಮಾಹಿತಿ ಅಪಾರ ಮತ್ತು ವಸ್ತುನಿಷ್ಟ ಎನ್ನುವುದರಲ್ಲಿ 
ಸಂದೇಹವಿಲ್ಲ’

`ನೀವು ಅದನ್ನು ಬರೆಯುವ ಉದ್ದೇಶವಾದರೂ ಏನು?’
`ಉದ್ದೇಶ ಇರಲೇಬೇಕು ಎಂದೇನೂ ಇಲ್ಲ. ಕ್ರಿಯೆಯೇ ಕ್ರಿಯೆಯ ಉದ್ದೇಶವಾಗಿರಬಹುದು. 
ಆದರೆ ನನಗೆ ಅದರಲ್ಲಿ ಉದ್ದೇಶ ಇದೆ’

`ಏನದು?’ ಗೌರಿ ಕುತೂಹಲದಿಂದ ಕೇಳಿದಳು. 
`ಅದನ್ನು ಬರೆಯದೆ ನನಗೆ ಸ್ವಸ್ಥವಾಗಿ ನಿದ್ದೆ ಮಾಡಲಿಕ್ಕೆ ಆಗದು’ ನಾನು ನಕ್ಕೆ. 
ಗೌರಿಯ ಮುಖದಲ್ಲಿ ತುಸು ಆತಂಕದ ಭಾವನೆ ಕಾಣಿಸಿಕೊಂಡಿತು. ಕೂಡಲೇ ಅವಳಿಂದ 
ಮಾತಾಡಲಾಗಲಿಲ್ಲ. ಕ್ಷಣ ಕಳೆದು ಸೋತ ದನಿಯಲ್ಲಿ ತುಸು ಕಟುವಾಗಿ ಕೇಳಿದಳು, `ನಿಮ್ಮ ಜೀವನ 
ಚರಿತ್ರೆ ಬರೆಯಲು ನಂಗೆ ನೀವು ಸಹಕಾರ ನೀಡ್ತೀರಾ?’ 

`ಖಂಡಿತ. ಆದ್ರೆ ನನ್ನ ಜೀವನ ಚರಿತ್ರೆ ನಿಜವಾಗಿ ಅಷ್ಟು ದೊಡ್ಡದೇನಲ್ಲ. ಆದರೆ ಅದನ್ನು 
ಬರೆಯಹೊರಟರೆ ಅದು ನಿಮ್ಮ ಅಪ್ಪನ ಜೀವನ ಚರಿತ್ರೆಯ ನಾಲ್ಕು ಪಾಲು ಆಗಬಹುದು. ಅದಕ್ಕಾಗಿ 
ನನ್ನ ಸಹಕಾರದಿಂದ ಏನೂ ಪ್ರಯೋಜನ ಇಲ್ಲ. ನೀವು ನನ್ನ ಅಮ್ಮನ ಸಂದರ್ಶನ ಮಾಡ್ಬೇಕಾಗುತ್ತೆ’ 
`ನಿಮ್ಮ ಅಮ್ಮನ ಸಂದರ್ಶನವೆ? ಯಾಕೆ?’ 

`ಯಾಕೆಂದರೆ, ನನ್ನ ಕತೆ ಅಂದ್ರೆ ಅದು ಮುಕ್ಕಾಲು ಪಾಲು ಅವಳ ಜೀವನ ಚರಿತ್ರೆಯೇ 
ಆಗಿರ್ತದೆ. ಬರೀರಿ, ಬರೆಯದಿರಿ. ಅದು ನಿಮ್ಮಂತೆ ಅರಮನೆಯಲ್ಲಿರುವವರು ಕೇಳಬೇಕಾದ ಕತೆ’ 

`ನಾವಿರುವುದು ಅರಮನೆಯಲ್ಲಿ ಅಲ್ಲ’ 

`ಹಾಗೆ ಹೇಳುವುದು ನಿಮ್ಮ ದೊಡ್ಡ ಗುಣ’ ಎಂದು ನಾನು ನಕ್ಕು, `ನೀವಿರುವುದು 
ಅರಮನೆಯಲ್ಲಿಯೇ. ನೀವು ಈ ಊರಿನಲ್ಲಿರುವ ನಮ್ಮಂಥವರನ್ನು ಯಾರನ್ನಾದರೂ ಕಂಡಿದ್ದೀರಾ? 
ಅವರು ಹೇಗೆ ಜೀವಿಸ್ತಾರೆ ಅಂತ ಗೊತ್ತಿದೆಯಾ ನಿಮ್ಗೆ? ಅವರು ಸತ್ತು ಸತ್ತು ಸಾಯದೆ ಹೇಗೆ 
ಉಳಿದರು ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಾ ನಿಮ್ಗೆ? ಅರಮನೆಯಲ್ಲಿ ವರ್ಷದ 
ಮುನ್ನೂರರುವತ್ತು ದಿನವೂ ಒಂದೇ ದಿನ ಆಗಿರ್ತದೆ. ನಮ್ಮ ಗುಡಿಸಲಿನಲ್ಲಿ ನಿಜವಾಗಿಯೂ ಅದು ಮುನ್ನೂರರುವತ್ತು ದಿನ ಆಗಿರ್ತದೆ. ನಿಜವಾಗಿ ಹೇಳ್ಬೇಕಂದ್ರೆ, ನಮ್ಮಂಥವರಿಗೆ ನಿಮ್ಮ ಜೀವನ ಚರಿತ್ರೆ 
ಬರೆಯೋದು ಸುಲಭ. ಎಷ್ಟೋ ಜನ ಬರ್ದಿದ್ದಾರೆ. ನಿಮ್ಮಂಥವರಿಗೆ ನಮ್ಮ ಜೀವನಚರಿತ್ರೆ ಬರೆಯಲು 
ಸಾಧ್ಯವೇ ಇಲ್ಲ. ನೀವು ಪ್ರಯತ್ನಿಸಿ ನೋಡ್ಬಹುದು’ 

`ಆ ವಿಚಾರ...’ 

ಅವಳ ಮಾತನ್ನು ತಡೆದು ನಾನು ನಗುತ್ತಾ ಹೇಳಿದೆ, `ಆ ವಿಚಾರ ಮಾತ್ರ ಅಲ್ಲ. ಯಾವ 
ವಿಚಾರವನ್ನೂ ಬಿಡಲು ಸಾಧ್ಯ ಇಲ್ಲ. ನನಗೆ ಪ್ರತಿಯೊಂದು ವಿಚಾರವೂ ಬೇಕು’ 
ಅವಳನ್ನು ಮಾತಾಡಲು ಬಿಡದಿದ್ದುದರಿಂದ ತುಸು ಅಪ್ರತಿಭಳಾದರೂ ಗೌರಿ ಒಂದು 
ನವಿರು ನಗುವಿನಲ್ಲಿ ಅದನ್ನು ಮರೆಸಿ ಹೇಳಿದಳು, `ಅಪ್ಪ ಹಣ ಕೊಡ್ತೇನೆ ಎಂದಾಗ ಹಣ ಬೇಡ 
ಭತ್ತವೇ ಬೇಕು ಅಂದ್ರಂತೆ. ಭತ್ತದ ಬದಲು ಬೇರೆ ಏನು ಕೊಟ್ಟರೆ ತೆಗೆದುಕೊಳ್ತೀರಿ?’ 

`ಒಂದು ಪವನು ಚಿನ್ನ ಕೊಡಿ ಅಂದ್ರೆ ಕೊಡ್ತಾರಾ ನಿಮ್ಮ ಅಪ್ಪ?’
`ಅಪ್ಪ ಕೊಡುವುದು ಬೇಡ. ನಾನು ಕೊಡ್ತೇನೆ’ ಗೌರಿಯ ಮುಖ ಗಂಭೀರವಾಗಿತ್ತು’ 
`ನನಗೆ ಚಿನ್ನ ಕೂಡ ಬೇಡ’ 
`ಬೇರೇನು ಬೇಕು?’
`ನಿಮ್ಗೆ ಸಿಟ್ಟು ಬರುವುದಿಲ್ಲ ಅಂತಾದ್ರೆ ಹೇಳ್ತೀನಿ’
`ಇಲ್ಲ. ಹೇಳಿ’ 
`ತಮಾಷೆಯ ಮಾತು ಕೂಡ ಅಲ್ಲ ಅಂತ ತಿಳ್ಕೊಳ್ಳಿ’ 
`ಸರಿ’ 
`ನಾನು ಕೇಳ್ತಿರೋದು ನನಗಾಗಿರೋ ನಷ್ಟಕ್ಕೆ ಪರಿಹಾರ ಮಾತ್ರ’ 
`ಏನದು?’ ` 
`ನನ್ನನ್ನು ಮದುವೆಯಾಗಿ’ ನಾನು ಗಂಭೀರವಾಗಿ ಹೇಳಿದೆ. 
ಗೌರಿ ಶಾಕಿಗೆ ತುತ್ತಾದವಳಂತೆ ನನ್ನನ್ನೇ ದಿಟ್ಟಿಸಿ ಕುಳಿತುಬಿಟ್ಟಳು. ಹೀಗೂ ಮಾತಾಡ್ತಾರಾ 
ಎಂದವಳಿಗೆ ಆಶ್ಚರ್ಯವಾಗಿರಲೇ ಬೇಕು. ಆದರೆ ನಾನು ಆಡಿದ್ದು ಆಡಬಾರದ ಮಾತೇನೂ ಆಗಿರಲಿಲ್ಲ. 
ಹೆಚ್ಚೆಂದರೆ, `ಏನು ಧೈರ್ಯ ನಿನಗೆ?’ ಎಂದು ಆಕೆ ಹೇಳಬಹುದು ಎಂದಷ್ಟೇ ನನಗನಿಸಿದ್ದು. 
ಅನಂತರ ಗೌರಿ ಮಾತಾಡದೆ ನಿಧಾನವಾಗಿ ಎದ್ದು ಹೊರಟುಹೋದಳು. 

ಗೌರಿ ಮತ್ತು ನಡುವೆ ನಡೆದ ಸಂಭಾಷಣೆಯನ್ನು ಸಾಯಂಕಾಲ ನಾನು ಅಮ್ಮನಿಗೆ ಹೇಳಿದೆ. 
ಅವಳು ಬುದ್ಧನ ಮೂರ್ತಿಯ ಹಾಗೆ ಮುಗುಳ್ನಕ್ಕಳು. ಏನೂ ಹೇಳಲಿಲ್ಲ. ಹೇಳಬೇಕೆನಿಸಿದ್ದನ್ನು ಅಮ್ಮ 
ಹೇಳುತ್ತಿಲ್ಲ ಎಂದನಿಸಿತು. ಅಮ್ಮನ ಮೌನವೇ ದಿನದಿಂದ ದಿನಕ್ಕೆ ಹೆಚ್ಚು ಹೇಳುತ್ತಿದೆ, ಹೆಚ್ಚು ಹೆಚ್ಚು 
ಅರ್ಥಪೂರ್ಣವಾಗುತ್ತಿದೆ ಎಂದನಿಸಿ ಅದೇಕೋ ಸ್ವಲ್ಪ ಭಯವೂ ಉಂಟಾಯಿತು. 
ಅನಂತರ ಒಂದು ವಾರ ದಾಟಿತು. ನಾನು ಗೌರಿಯ ಮುಖ ನೋಡಲಿಲ್ಲ. ಅವಳು ನನ್ನ 
ಮುಖ ನೋಡಿದಳೇ ಎಂದು ನನಗೆ ತಿಳಿಯಲಿಲ್ಲ. ಒಂದು ದಿನ ಸಾಯಂಕಾಲ ಮನೆಗೆ ಬಂದಾಗ 
ಜಗಲಿಯಲ್ಲಿ ಒಂದು ಗೋಣಿಚೀಲ ಕಾಣಿಸಿತು. ಗೋಣಿಚೀಲದೊಳಗೆ ಏನೋ ಇದೆ ಅನಿಸಿತು. 


`ಜಗಲಿಯಲ್ಲಿರುವ ಗೋಣಿಚೀಲದಲ್ಲಿ ಏನು?’ ನಾನು ಅಮ್ಮನನ್ನು ಕೇಳಿದೆ. 
`ಭತ್ತ ಮಾದ. ಕಳವೆಯ ಭತ್ತ. ಶಿವರಾಮಯ್ಯನ ಕೆಲಸದವನು ಕೊಟ್ಟು ಹೋದ’
`ಯಾರು ಚಿಂಡನಾ?’ 
`ಅಲ್ಲ. ಬೇರೆ ಯಾರೋ ಒಬ್ಬ. ಯಾರು ಕಳಿಸಿದ್ದು ಅಂತ ಕೇಳಿದ್ದಕ್ಕೆ, `ಅಮ್ಮ ಕಳಿಸಿದ್ದು’
ಅಂದ. 
`ಅಮ್ಮ ಅಂದ್ರೆ ಯಾರು, ಶಿವರಾಮಯ್ಯನವರ ಹೆಂಡತಿಯೆ ಅಂತ ಕೇಳಿದ್ದಕ್ಕೆ ಹೌದು ಅಂದ’ 
 

ಎರಡು ದಿನಗಳ ಬಳಿಕ ಒಂದು ಸಾಯಂಕಾಲ ನಾನು ಕೋರ್ಟಿನ ಕೆಲಸ ಮುಗಿಸಿ ಮನೆಗೆ ಹೊರಡುವ ಹೊತ್ತಿನಲ್ಲಿ ಗೌರಿ `ನಮಸ್ಕಾರ’ ಎಂದು ನನ್ನ ಕೋಣೆಯೊಳಗೆ ಬಂದಳು. 
`ನಮಸ್ಕಾರ. ಬನ್ನಿ ಕೂತ್ಕೊಳ್ಳಿ’ ಎಂದೆ. ಗೌರಿ ಯಾವ ಮಾತಿಗೆ ಬಹುತೇಕ ಅನಿಯಂತ್ರಿತ 
ಎಂಬಂತೆ ಪ್ರತಿಕ್ರಿಯಿಸುತ್ತಾಳೆ ಅನ್ನುವುದನ್ನು ನಾನು ಅಷ್ಟರಲ್ಲೇ ಕಂಡುಕೊಂಡಿದ್ದೆ. ಕೂತುಕೊಳ್ಳಲು 
ಹೇಳಿದ ಕ್ಷಣವೇ ಹೇಳಿದೆ, 

`ನಾನು ಮೊನ್ನೆ ಆಡಿದ್ದು ಬರೀ ತಮಾಷೆಗೆ ಅಂತ ತಿಳ್ಕೊಳ್ಳಿ. ನನ್ನ ಜಾತಿ ಅಥವಾ 
ನಿರ್ಜಾತಿ, ನನ್ನ ಸಾಮಾಜಿಕ ಮಟ್ಟ ಮತ್ತು ನನ್ನ ಹಣೆಬರಹ ನಂಗೆ ಸರಿಯಾಗಿ ಗೊತ್ತಿದೆ. ನಿಮ್ಮದೂ 
ಗೊತ್ತಿದೆ. ನೀವು ಬ್ರಾಹ್ಮಣರು ಮೇಲು ಜಾತಿಯವರು’
`ನಾವು ಬ್ರಾಹ್ಮಣರು ಅಂತ ಬ್ರಾಹ್ಮಣರೇ ಒಪ್ಪುವುದಿಲ್ಲ. ನಾವು ಬ್ರಾಹ್ಮಣರಲ್ಲಿ ಅತ್ಯಂತ 
ಕೆಳಗಿನವರು’ ಗೌರಿ ಹೇಳಿಬಿಟ್ಟಳು. ಅನಂತರ ತಾನೇಕೆ ಇದನ್ನು ಹೇಳಿದೆನೋ ಎಂದು 
ಪಶ್ವಾತ್ತಾಪಪಡುತ್ತಿರುವಂತೆ ತೋರಿತು. ಎಲ್ಲರ ಎದೆಯಾಳದಲ್ಲೂ ಇದೆ ಅವಮಾನದಿಂದ ಬದುಕಲು 
ಅವರವರದೇ ಆದ ಕಾರಣಗಳು ಎಂದುಕೊಂಡೆ. 
`ಅದೇನಿದ್ದರೂ ಮಾರ ಎಂಬುದು ಶೂದ್ರಪಂಚಮ. ನಾನು ಹೇಳಿದ್ದು ಬರೀ ತಮಾಷೆಗೆ. 
ಯಾವ ರೀತಿಯಲ್ಲಿಯೂ ನಿಮ್ಮನ್ನು ಮದುವೆಯಾಗುವ ವಿಚಾರ ನನ್ನ ಕನಸಿನಲ್ಲಿ ಕೂಡ ಬರಲು 
ಸಾಧ್ಯವಿಲ್ಲ’

`ಆ ವಿಚಾರಬಿಡಿ’ ಎಂದು ತನ್ನ ಮಾತಿಗೇ ಬಂದ ನಗು ತಡೆದು ತುಟಿ ಬಿಗಿ 
ಮಾಡಿಕೊಂಡಳು. 
ಕ್ಲೀಷೆ ನಾಲಗೆಯಿಂದ ಹೊರಬಿದ್ದಾಗಿತ್ತು. ಸರಿಪಡಿಸುವಂತಿರಲಿಲ್ಲ. ಅದನ್ನೇ ನಿರೀಕ್ಷಿಸಿದ್ದ 
ನಾನು ಕ್ಷಣ ಕೂಡ ತಡಮಾಡದೆ, 
`ಹಾಗಾದರೆ ಇನ್ನೂ ಕೆಲವು ಬಿಡಬೇಕಾದ ವಿಚಾರಗಳಿವೆ ಅಂತಾಯ್ತು. ಪರ್ವಾಗಿಲ್ಲ. ಹೇಳಿ’
ನಾನು ನಕ್ಕೆ. 
ನನ್ನ ಮಾತನ್ನು ಗಮನಿಸಿಕೊಳ್ಳದವಳಂತೆ ಗೌರಿ ಹೇಳಿದಳು, 
`ನಿಮ್ಮ ಹತ್ತು ಸೇರು ಕಳವೆ ಭತ್ತವನ್ನು ನಿನ್ನೆ ಕಳಿಸಿದ್ದೇವೆ’
`ಅದನ್ನು ನೀವು ಹೇಳಬೇಕಾಗಿಯೇ ಇಲ್ಲ. ಆದ್ರೆ ಥ್ಯಾಂಕ್ಸ್ ಹೇಳಬೇಕಾದ್ದು ನಿಮ್ಗೋ ನಿಮ್ಮ 
ಅಪ್ಪನಿಗೋ ಅಂತ ಗೊತ್ತಿಲ್ಲ’
`ಯಾರಿಗೂ ಥ್ಯಾಂಕ್ಸ್ ಹೇಳಬೇಕಾದ ಅಗತ್ಯ ಇಲ್ಲ. ವಿಷಯ ತಿಳಿದ ಮೇಲೆ ಅಮ್ಮ 
ಕಳಿಸಿದ್ದು’
`ಅಪ್ಪನಿಗೆ ಗೊತ್ತಿಲ್ಲದ ಹಾಗೆ?’ ನಾನು ಆಶ್ಚರ್ಯ ವ್ಯಕ್ತಪಡಿಸಿದೆ. 
`ಅದು ನಿಮ್ಗೆ ಯಾಕೆ?’
`ನಾನು ಬರೆಯುತ್ತಿರುವ ಶಿವರಾಮಯ್ಯನವರ ಜೀವನ ಚರಿತ್ರೆಗೆ ಅದು ಅಗತ್ಯ ಇದೆ’
ಮತ್ತೆ ನನ್ನ ಮಾತನ್ನು ಬದಿಗೊತ್ತಿ ಗೌರಿ ಹೇಳಿದಳು, 
``ಅಮ್ಮ ಕಳಿಸಿದ್ದು ಅಂತ ಕೆಲಸದವನು ಹೇಳಿದ್ದಕ್ಕೆ ನಿಮ್ಮ ಅಮ್ಮ, `ಅಮ್ಮ ಅಂದ್ರೆ ಯಾರು, 
ಶಿವರಾಮಯ್ಯನವರ ಹೆಂಡತಿಯೆ ಅಂತ ಕೇಳಿದ್ರಂತೆ’ 
ಅದು ಅಮ್ಮ ಕೇಳಿದ ಅನಗತ್ಯ ಪ್ರಶ್ನೆ ಎನ್ನುವಂತೆ ಗೌರಿಯ ಮುಖ ಭಾವವಿತ್ತು. 

`ಕರೆಕ್ಟ್! ಅಮ್ಮ ಹಾಗೆ ಕೇಳಿದ್ದು ಸರಿ. ನಾನಾದರೂ ಆ ಪ್ರಶೆ ಕೇಳಿಯೇ ಕೇಳ್ತಿದ್ದೆ. ಅಪ್ಪ 
ಕಳಿಸಿದ್ದು ಅಂತ ಕೆಲಸದವರು ಹೇಳುವುದಿಲ್ಲ. `ಧನಿಗಳು’ ಕಳಿಸಿದ್ದು ಅಂತ ಹೇಳ್ತಾರೆ. ಹೆಂಡತಿ 
ಧನಿಯಾದ್ರೂ `ಅಮ್ಮ’ ಅಂತ್ಲೇ ಹೇಳೋದು. `ಧನಿಗಳು’ ಅಂತ ಹೇಳುವುದಿಲ್ಲ. ಭಾಷೆಗೆ ಸಂಬಂಧಪಟ್ಟ 
ಈ ಸಾಮಾಜಿಕ ವೈಶಿಷ್ಟ್ಯಗಳನ್ನು ನಾನು ಕಂಡುಕೊಂಡಿದ್ದೇನೆ. ಆದ್ರೆ ಅಮ್ಮ ಆ ಪ್ರಶ್ನೆಯನ್ನು ಕೇಳಿದ್ದು ಭತ್ತ 
ಕಳಿಸಿದ್ದು ಶಿವರಾಮಯ್ಯನ ಹೆಂಡತಿಯೆ ಮಗಳೆ ಎಂದು ತಿಳಿದುಕೊಳ್ಳುವ ಉದ್ದೇಶದಿಂದಾಗಿರಬಹುದು. 
ಯಾಕೆಂದರೆ ನನ್ನ ಮತ್ತು ನಿಮ್ಮ ನಡುವೆ ನಡೆದ ಸಂಭಾಷಣೆಯನ್ನು ನಾನು ಹಾಗೆಯೇ ಅಮ್ಮನಿಗೆ 
ಹೇಳಿದ್ದೇನೆ’ 

`ನಿಮ್ಮ ತಮಾಷೆಯ ಮಾತನ್ನು ಕೂಡ?’ ಆಶ್ಚರ್ಯದಿಂದ ಕೇಳಿದಳು ಗೌರಿ. `ಹೌದು. ಹುಟ್ಟಿದ ದಿನದಿಂದ್ಲೇ ನಾವು ಮೂರು ಮಕ್ಕಳೂ ಪ್ರತಿದಿನ ನಮಗಾದ 
ಅನುಭವಗಳನ್ನು ಅಮ್ಮನ ಬಳಿ ಹೇಳ್ತಾ ಬಂದಿದ್ದೇವೆ’ 

`ಹುಟ್ಟಿದ ದಿನದಿಂದ್ಲೆ?’ ನನ್ನ ಉತ್ಪ್ರೇಕ್ಷೆಗೆ ಅವಳು ವ್ಯಂಗ್ಯವಾಗಿ ಕೇಳಿದಳು. 
`ಅದನ್ನು ಉತ್ಪ್ರೇಕ್ಷೆ ಅಂತ ತಿಳೀಬೇಕಾಗಿಲ್ಲ, ಬರೀ ರೆಟರಿಕ್’ ಎಂದು ನಾನು ನಕ್ಕು, `ಅಮ್ಮ 
ಮತ್ತು ಅವಳ ಮೂರು ಮಕ್ಕಳ ನಡುವೆ ಯಾವುದೇ ಮುಚ್ಚುಮರೆ ಇಲ್ಲ. ಆದ್ದರಿಂದ ಸ್ವಲ್ಪ ಮಟ್ಟಿಗೆ 
`ನಾನು’ ಅಂತ ನಾನು ಹೇಳಿದ್ರೆ `ನನ್ನ ಅಮ್ಮ’ ಅಂತ್ಲೂ ಅರ್ಥ’ ನಾನು ನಕ್ಕೆ. 

ಗೌರಿ ತಾನು ಬಂದಿರುವುದೇಕೆ ಎಂದು ಮರೆತುಬಿಟ್ಟಂತೆ ತೋರಿತು. 
`ನಿಮ್ಮ ತಮಾಷೆಗೆ ಅಮ್ಮ ಏನೂ ಹೇಳ್ಳಿಲ್ವೆ?’
`ಹೇಳಿದ್ರು. `ಈಡಿಯೆಟ್’ ಅಂದ್ರು’
`ನಿಮ್ಮ ಅಮ್ಮನಿಗೆ ಇಂಗ್ಲಿಷ್ ಬರುತ್ಯೆ?’ ಗೌರಿಯ ಮುಖದಲ್ಲಿ ಪುನಃ ಆಶ್ಚರ್ಯ. 
`ಅಮ್ಮನಿಗೆ ಇಂಗ್ಲಿಷ್ ಬರುವುದಿಲ್ಲ. ಕನ್ನಡ ಸಹ ಬರುವುದಿಲ್ಲ. ನಮ್ದೂ ನಿಮ್ದೂ 
ಮನೆಭಾಷೆ ಒಂದೇ. ಅಮ್ಮ ಹೇಳಿದ ಶಬ್ದವನ್ನು ನಾನು ನಿಮ್ಗೆ ಇಂಗ್ಲಿಷಿಗೆ ತರ್ಜುಮೆ ಮಾಡಿ ಹೇಳಿದೆ 
ಅಷ್ಟೆ’

ಅಮ್ಮ ಹೇಳಿದ ಶಬ್ದ ಯಾವುದು ಎಂದು ಕೇಳುವ ಕುತೂಹಲ ಅವಳಿಗೆ ಇದ್ದಂತೆ 
ತೋರಿತು. ಆದರೆ ಹಾಗೆ ಕೇಳಲು ಬಿಗುಮಾನವನ್ನು ಬಿಡಬೇಕಾಗಿತ್ತು. ಅದಕ್ಕೆ ಅವಳು ಸಿದ್ಧಳಿರಲಿಲ್ಲ. 
`ಸರಿ’ ಎಂದಷ್ಟೇ ಹೇಳಿ ಎದ್ದುಹೋದಳು ಗೌರಿ. 
ಸಾಯಂಕಾಲ ನನ್ನ ಮತ್ತು ಗೌರಿಯ ನಡುವೆ ನಡೆದ ವiತುಕತೆಯನ್ನು ಅಮ್ಮನಿಗೆ ತಿಳಿಸಿದೆ. 
ಅಮ್ಮ ಏನೂ ಹೇಳಲಿಲ್ಲ. 
ಮರುದಿನ ಸಾಯಂಕಾಲ ಮನೆಗೆ ಬಂದಾಗಲೇ ಅಮ್ಮ ಹೇಳಿದರು, 

`ಶಿವರಾಮಯ್ಯನ ಮಗಳು ಗೌರಿ ಬಂದಿದ್ದಳು ಮಾದ’
ನಾನು ಆಶ್ಚರ್ಯದಿಂದ ಅಮ್ಮನ ಮುಖವನ್ನೇ ದಿಟ್ಟಿಸಿದೆ. ಅಮ್ಮ ಹೇಳಿದರು, `ಬೆಳಗ್ಗೆ ನೀನು 
ಹೋದ ಸ್ವಲ್ಪ ಹೊತ್ತಿನಲ್ಲಿಯೇ ಬಂದಳು. ನಾನು ಒಳಗೆ ಅಡಿಗೆ ಕೆಲಸದಲ್ಲಿದ್ದೆ. ತರಕಾರಿ ಗಿಡಗಳಿಗೆ 
ನೀರು ಎರೆಯುತ್ತಿದ್ದ ಜೂಜ ಗೌರಿ ಬರುವುದನ್ನು ದೂರದಿಂದಲೇ ಕಂಡು, ಮನೆಗೆ ಯಾರೋ ಒಬ್ಬಳು 
ಹೆಂಗಸು ಬಂದಳೆಂದುಕೊಂಡು ಅಂಗಳಕ್ಕೆ ಬಂದ. `ನಮಸ್ಕಾರ. ನಾನು ಶಿವರಾಮಯ್ಯನವರ ಮಗಳು 
ಗೌರಿ ಅಂತ’ ಎಂಬ ಮಾತು ಕೇಳಿಸಿ ನಾನು ಹೊರಗೆ ಬಂದೆ. `ನಮಸ್ಕಾರಮ್ಮ, ನಾನು ಗೌರಿ ಅಂತ. 
ಶಿವರಾಮಯ್ಯನವರ ಮಗಳು. ನಂಗೆ ನಿಮ್ಮ ಹತ್ರ ಸ್ವಲ್ಪ ಮಾತಾಡುವುದಿದೆ’ ಎಂದು ಜೂಜನ ಮುಖ 
ನೋಡಿದಳು. ಜೂಜ ಮುಗುಳ್ನಕ್ಕು `ಸರಿ’ ಎಂದು ಅಲ್ಲಿಂದಲೇ ಪುನಃ ತರಕಾರಿ ಹೊಲಕ್ಕೆ ಹೋದ. 
ಗೌರಿ ಜಗಲಿಯಲ್ಲಿ ಕುಳಿತಳು. ನಾನು `ಒಳಗೆ ಬನ್ನಿ’ ಎಂದೆ. ಗೌರಿ ಒಳಗೆ ಬಂದಳು. 

ಅಮ್ಮ ಹುಲ್ಲಿನ ಚಾಪೆ ಹಾಸಿ ಕುಳಿತುಕೊಳ್ಳಲು ಹೇಳಿದಳು. ಗೌರಿ ಕುಳಿತುಕೊಳ್ಳುತ್ತಾ, 
`ನಂಗೆ ಈ ಚೂರಿ ಅನ್ನುವ ಹಳ್ಳಿ ಹೇಗಿದೆ ಅಂತ್ಲೇ ಗೊತ್ತಿಲ್ಲ. ನೋಡಿಕೊಂಡು ಹೋಗೋಣ 
ಅಂತನಿಸಿತು. ಕಳವೆ ಭತ್ತ ಕಳಿಸಿಕೊಟ್ಟ ನಂತರ ಯಾಕೋ ನಿಮ್ಮ ಬಳಿ ಕೂಡ ಮಾತಾಡಬೇಕು ಅನ್ನೋ 
ಯೋಚನೆ ಬಂತು. ನಿಮ್ಮ ಮಗ ಮಾದ ತುಂಬಾ ಜಿದ್ದಿನ ಮನುಷ್ಯ ಅಂತ ಅನಿಸಿದ್ದರಿಂದ ಅವರ ಅಮ್ಮ 
ಹೇಗೆ ಅಂತ ತಿಳಿದುಕೊಳ್ಳುವ ಮನಸ್ಸಾಯಿತು’ ಎಂದು ನಕ್ಕು, `ನಿಮ್ಮ ಹೆಸರು ಕೇಳ್ಬಹುದೆ?’ ಎಂದಳು. 

`ಮಾನು ಅಂತ’
`ಮಾನಮ್ಮ, ನಿಮ್ಗೆ ಎಷ್ಟು ಮಕ್ಕಳು? ನೀವು ಇಲ್ಲಿ ಮೊದಲೇ ಇದ್ದವರಾ, ಮತ್ತೆ 
ಬಂದವರಾ?’
`ಮತ್ತೆ ಬಂದವರು’
`ಎಲ್ಲಿಂದ?’
`ಕಾಡೂರಿನಿಂದ’ `ಅದೆಲ್ಲಿ?’
`ಎಲ್ಲಿ ಅಂತ ನಂಗೆ ಗೊತ್ತಿಲ್ಲ. ಬಹಳ ದೂರ’ 
`ನೀವು ಈ ಹಳ್ಳಿಗೆ ಯಾವಾಗ ಬಂದ್ರಿ? ಹೇಗೆ ಬಂದ್ರಿ’ 
`ಅದನ್ನೆಲ್ಲ ಹೇಳ್ಳಿಕ್ಕೆ ಹೋದ್ರೆ ತುಂಬಾ ಉಂಟಮ್ಮ’

`ಪರ್ವಾಗಿಲ್ಲ ಹೇಳಿ. ಅದನ್ನೆಲ್ಲ ತಿಳ್ಕೋಬೇಕು ಅಂತ ನಂಗೆ ತುಂಬಾ ಆಸೆಯಿದೆ’ 
ಯಾಕೆ ಎಂದು ಅಮ್ಮ ಕೇಳಲಿಲ್ಲ. ಅಮ್ಮ ತನ್ನ ಕತೆ ಹೇಳುತ್ತಾ ಹೋದಳು. ತನ್ನ ಗಂಡ 
ಬಿರುಮ ಮತ್ತು ಕಾಡಿನವರ ಕತೆಯನ್ನು ಹೇಳಿದಳು. ಕಾಡಿನವರ ಗುಣ ಧರ್ಮಗಳು, ನೀತಿ 
ನಿಯತ್ತುಗಳ ಬಗ್ಗೆ ಹೇಳಿದಳು. ತಾವು ಹೇಗೆ ಈ ಊರಿಗೆ ಬಂದೆವು, ಯಾಕೆ ಬಂದೆವು ಎಂದೆಲ್ಲವನ್ನೂ 
ವಿವರಿಸಿದಳು. ಮನೆ ಕಟ್ಟಿದ ಬಗ್ಗೆ, ಗಂಡನ ಬಗ್ಗೆ, ಮಕ್ಕಳ ಬಗ್ಗೆ ತಮ್ಮ ಅವಿರತ ದುಡಿತದ ಬಗ್ಗೆ 
ಕಷ್ಟಗಳ ಬಗ್ಗೆ ಸಂತೋಷಗಳ ಬಗ್ಗೆ ಹೇಳಿದಳು. ಮಾದ ಮತ್ತು ಬೂದನ ಓದಿನ ಬಗ್ಗೆ, ಜೂಜ 
ಕಾಲೇಜು ಓದುವ ಬದಲು ತೋಟ ಮಾಡಿದ್ದರ ಬಗ್ಗೆ ರಮಾನಂದ ಜೋಷಿ ಎನ್ನುವ ಅದ್ಭುತವಾದ 
ಹುಡುಗನ ಬಗ್ಗೆ ಹೇಳಿದಳು. ಪೇತ್ರುವಿನ ತಂಟೆ ತಕರಾರುಗಳ ಬಗ್ಗೆ ಕೆಲವೇ ವಾಕ್ಯಗಳಿಗಿಂತ ಹೆಚ್ಚು 
ಹೇಳಲಿಲ್ಲ. ಗೌರಿಯ ಅಪ್ಪನ ಪೀಡೆ ಮತ್ತು ಅದಕ್ಕೆ ತಮ್ಮ ಪ್ರತಿಕ್ರಿಯೆಗಳ ಬಗ್ಗೆ ಹೇಳಲಿಲ್ಲ. 
ಕತೆಯ ನಡುವೆ ಅಮ್ಮ ಹಲವು ಸಲ ಕಣ್ಣೀರು ಹರಿಸಿರಬಹುದು. ಅದನ್ನು ಅಮ್ಮ ನನಗೆ 
ಹೇಳಲಿಲ್ಲ. ಅವಳ ಕತೆಯನ್ನು ಕೇಳುತ್ತಾ ಗೌರಿ ಕಣ್ಣೊರಸಿಕೊಳ್ಳುತ್ತಾ ಇದ್ದಳು ಎಂದು ಹೇಳಿದಳು. 
ಅಮ್ಮನ ಕತೆಯನ್ನು ಕೇಳಿದ ನಂತರ ಗೌರಿ `ನಿಮ್ಮ ಮಗನ ಹತ್ತಿರ ಹೇಳಿ. ನಂಗೆ ನಿಮ್ಮ ತೋಟ 
ನೋಡ್ಬೇಕು’ ಅಂದಳು. ಜೂಜನ ಜೊತೆ ಹೋಗಿ ನಮ್ಮ ಏಳೂವರೆ ಎಕರೆ ಭೂಮಿಯಲ್ಲಿ ಎಲ್ಲಾ ಕಡೆ 
ಹೋದಳು. ಜೂಜನ ಬಳಿ, ತೋಟದ ಬಗ್ಗೆ, ಅವನು ಮಾಡುತ್ತಿರುವ ಕೃಷಿಯ ಬಗ್ಗೆ ನೂರಾರು 
ಪ್ರಶ್ನೆಗಳನ್ನು ಕೇಳಿದಳು. ತೋಟ ಸುತ್ತಾಡಿ ಬಂದಾಗ ಗಂಟೆ ಹನ್ನೆರಡಾಗಿತ್ತು. ಅಮ್ಮ ಗೌರಿಗೆ ಹಾಲು 
ಹಣ್ಣು ತಂದಿತ್ತಾಗ, ಜೂಜ, `ತೋಟ ಸುತ್ತಿ ಸುಸ್ತಾಗಿದ್ದಾರಮ್ಮ, ಹಾಲು ಹಣ್ಣು ಎಲ್ಲಿಗೆ ಸಾಕು? ಊಟ 
ಮಾಡಿಕೊಂಡು ಹೋಗಿ ಅಂತ ಹೇಳ್ಬಾರ್ದಾ?’ ಎಂದು ನಕ್ಕ. 

`ಅವರು ನಮ್ಮ ಮನೆಯಲ್ಲಿ ಊಟ ಮಾಡ್ತಾರಾ?’ ಎಂದಳು ಅಮ್ಮ. 
`ಖಂಡಿತ ಮಾಡ್ತೇನೆ. ಆದ್ರೆ ತೊಂದರೆ ತಗೋಬೇಡಿ’ 
`ಅದು ಪಟ್ಟಣದವರು ಆಡೋ ಮಾತು. ಅಂಥ ಮಾತು ನಮ್ಮ ಬಳಿಯಲ್ಲಿ ಇಲ್ಲ. ನಮ್ಗೆ 
ತೊಂದರೆ ಅಂದ್ರೆ ಏನೂಂತ ಗೊತ್ತೇ ಇಲ್ಲ’ ಎಂದ ಜೂಜ. 
`ಆಗ್ಲಿ ಇನ್ನೊಂದ್ಸಲ ಬಂದಾಗ ಊಟ ಮಾಡ್ತೀನಿ’
ಜೂಜ ನಕ್ಕ. `ಏನೋ ವಿಶೇಷ ಆಸಕ್ತಿಯಿಂದ, ಈ ವರೆಗೆ ಕಾಣದ್ದನ್ನು ಕಾಣುವ 
ಕುತೂಹಲದಿಂದ ಬಂದಿದ್ದೀರಿ. ಇನ್ನೊಂದು ಸಲ ನೀವು ಬರುವುದಿಲ್ಲ. ನಮ್ಮ ಮನೆಯಲ್ಲಿ ನೀವು 
ಯಾವತ್ತೂ ಊಟ ಮಾಡುವುದಿಲ್ಲ ಅಂತ ನಂಗೆ ಗೊತ್ತು’ ಎಂದ. 
`ಯಾಕೆ ಮಾಡ್ಬಾರ್ದು?’
`ಮಾಡ್ಬಾರ್ದು ಅಂತ ನಾವು ಹೇಳ್ತೇವೆಯೆ? ಮಾಡಿದ್ರೆ ಭೂಕಂಪ ಆಗ್ತದೆ’ ಜೂಜ ನಕ್ಕ. 
`ಹಾಗಾದ್ರೆ ನೋಡೋಣ ಏನಾಗುತ್ತೆ ಅಂತ. ಊಟ ಮಾಡ್ತೇನೆ’
`ನಿಜವಾಗ್ಲೂ?’
`ನಿಜವಾಗ್ಲೂ’
ಜೂಜ ಅಮ್ಮನ ಕಡೆಗೆ ತಿರುಗಿ ಕೇಳಿದ `ಅಡಿಗೆ ಆಗಿದ್ಯೇನಮ್ಮ?’
`ಆಗಿದೆ. ಅವರಿಗೆ ನಮ್ಮ ಅಡಿಗೆ ಆಗ್ಲಿಕ್ಕಿಲ್ಲ’ 
`ಹೇಗೆ ಹೇಳ್ತೀರಿ ಆಗ್ಲಿಕ್ಕಿಲ್ಲ ಅಂತ?’ ಎಂದಳು ಗೌರಿ 
`ಬರೀ ಅನ್ನ, ಸೌತೆ ಸಾಂಬಾರು ಮತ್ತು ಅಲಸಂಡೆ ಪಲ್ಯ. ಬೇರೇನೂ ಇಲ್ಲ’
`ಅದೇ ನಮ್ಮ ಮನೆಯಲ್ಲಿಯೂ ಮಾಡೋದು’ ಎಂದು ನಕ್ಕಳು ಗೌರಿ. 

ಊಟ ಮಾಡಿ, ಮತ್ತೊಂದಷ್ಟು ಪ್ರಶ್ನೆಗಳನ್ನು ಕೇಳಿ, ಒಂದಷ್ಟು ಮಾತಾಡಿ ಅಮ್ಮನ ಕಾಲು ಮುಟ್ಟಿ ನಮಸ್ಕಾರ ಮಾಡಿ ಗೌರಿ ಹೋದಳು. "

- ಕೆ ಟಿ ಗಟ್ಟಿ

 ಐವತ್ತನಾಲ್ಕಕ್ಕೂ ಹೆಚ್ಚು ಕಾದಂಬರಿಗಳಲ್ಲಿನ ತಮ್ಮ ಹರಿತ ಲೇಖನ ಶೈಲಿಯಿಂದ ಖ್ಯಾತರಾದ ಕೂಡ್ಲು ತಿಮ್ಮಪ್ಪ ಗಟ್ಟಿಯವರು ಮನೋ ವಿಶ್ಲೇಷಣೆಗಳಿಂದ ಕೂಡಿದ ತಮ್ಮ ಕಥನ ಶೈಲಿಯಿಂದ ಓದುಗರ ಮೆಚ್ಚುಗೆ ಗಳಿಸಿರುವ ಕೆಲವೆ ಕೆಲವು ಕನ್ನಡದ ಕಥನ ಕಾರರಲ್ಲಿ ಒಬ್ಬರು. ಕನ್ನಡ, ತುಳು ಹಾಗೂ ಇಂಗ್ಲೀಷಿನಲ್ಲಿ ಸಾಹಿತ್ಯ ರಚಿಸಿರುವ ಅವರ ಕಥೆಗಳು ಹಾಗೂ ಕಾದಂಬರಿಗಳಿಗಾಗಿ ಓದುಗರ ನೆಚ್ಚಿನ ಲೇಖಕರಲ್ಲೊಬ್ಬರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಭದ್ರವಾಗಿ ಅವರು ನೆಲೆಯೂರಿದ್ದಾರೆ. ಇಂಗ್ಲೀಷಿನ ಪ್ರಸಿದ್ಧ ಕವಿಗಳ ಸುಮಾರು ಎಪ್ಪತ್ತು ಪ್ರೇಮಕವಿತೆಗಳ ತುಳು ಅನುವಾದ "ಎನ್ನ ಮೋಕೆದ ಪೊಣ್ಣು" ಹಾಗೂ ನೇರ ಕಾದಂಬರಿ "ಬೊಂಬಾಯಿದ ಇಲ್ಲ್" ತುಳುವಿನಲ್ಲಿ ಅವರು ಮೂಡಿಸಿರುವ ಹೆಜ್ಜೆ ಗುರುತುಗಳು. ಅಂಕಣಕಾರರಾಗಿಯೂ ಗುರುತಿಸಿಕೊಂಡಿದ್ದ ಅವರ ರೇಡಿಯೋ ಭಾಷಣಗಳ ಸಂಗ್ರಹ "ನಮ್ಮ ಬದುಕಿನ ಪುಟಗಳು", ಗುರುಗಳಾಗಿ ತಾಯಿತಂದೆ parents as educators, ಉತ್ಕೃಷ್ಟತೆಗಾಗಿ ತಂದೆತಾಯಿ Parenting for excellence, ಉಭಯಭಾಷಾಭ್ಯಾಸಿ bilingual master, ಪ್ರಬಂಧ ಸಂಗ್ರಹ ನಮ್ಮೊಳಗಿನ ಆಕಾಶ, ಸುಮಾರು ಹದಿನೆಂಟು ರೇಡಿಯೋ ನಾಟಕಗಳು, ಮೂರು ರೇಡಿಯೋ ಧಾರವಾಹಿಗಳು, ನಾಲ್ಕು ನಾಟಕಗಳು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿವೆ. ಅವರ ಕಾದಂಬರಿಗಳಾದ "ರಾಗಲಹರಿ" ಧಾರವಾಹಿಯಾಗಿ ತೊಂಬತ್ತರ ದಶಕದ ಆರಂಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದರೆ, 'ಶಬ್ದಗಳು' ಹಾಗೂ 'ಕಾರ್ಮುಗಿಲು' ಸೆಲ್ಯುಲಾಯ್ಡಿಗೆ ಏರಿ ಚಲನಚಿತ್ರಗಳಾಗಿವೆ. ಅವರ ಎಲ್ಲಾ ಪುಸ್ತಕಗಳ ವಿದ್ಯುನ್ಮಾನ ಆವೃತ್ತಿ ಈಗಾಗಲೆ ತಯಾರಾಗಿದ್ದು ಎಲ್ಲವೂ ಸದ್ಯದಲ್ಲಿಯೆ 'ಇ ಪುಸ್ತಕ"ಗಳಾಗಿ ಅವೆಲ್ಲ ಸಿಗಲಿಕ್ಕಿವೆ. ಪುತ್ತೂರು ಕನ್ನಡ ಸಂಘ ಅವರಿಗೆ "ನೆಲದ ಬದುಕು" ಎನ್ನುವ ಅಭಿನಂದನಾ ಗ್ರಂಥ  ಅರ್ಪಿಸಿದ್ದು  'ವಿಕ್ರಾಂತ ಕರ್ನಾಟಕ' ವಾರಪತ್ರಿಕೆಗಾಗಿ ನಾನು ಹಾಗೂ ಆತ್ಮಸಖ ರುದ್ರಪ್ರಸಾದ ಮಾಡಿದ್ದ ಅವರ ಸಂದರ್ಶನವೂ ಅದರಲ್ಲಿ ಸೇರಿಹೋಗಿದೆ. 'ಕೆಂಪು ಕಳವೆ' ಅವರ ಇತ್ತೀಚಿನ ಕಾದಂಬರಿ. ವಾಸ್ತವದಲ್ಲಿ ಕಾಸರಗೋಡು ಪರಿಸರದಲ್ಲಿ ಕಳೆದ ಅವರ ಬಾಲ್ಯ ಜೀವನದ ಸಂಕ್ಷಿಪ್ತ ಪರಿಚಯ ಹಾಗೂ ಜೀವನಾನುಭದ ನಿರೂಪಣೆಯಾಗಿರುವ ಇದು ಅವರ ಆತ್ಮಕಥೆ "ತೀರ"ದ ಮುಂದುವರೆದ ಭಾಗದಂತೆ ಭಾಸವಾಗುತ್ತದೆ.

ಕಳವೆ ಒಂದು ಬಗೆಯ ಸುವಾಸಿತ ಭತ್ತದ ತಳಿ. ಬಾಸುಮತಿ ಬೆಳೆಯಲು ತಕ್ಕ ವಾತಾವರಣ ಇಲ್ಲದ ದಕ್ಷಿಣ ಭಾರತದ ಪಶ್ಚಿಮಘಟ್ಟ ಹಾಗೂ ಕರಾವಳಿಯುದ್ದ ಇದನ್ನ ಒಂದು ನಿರ್ಧರಿತ ಪ್ರಮಾಣದಲ್ಲಿ ಕೃಷಿಕರು ಬೆಳೆಯುತ್ತಾರೆ ಹಾಗೂ ವಿಶೇಷ ದಿನಗಳ ಅಮೂಲ್ಯ ತಿನಿಸುಗಳಿಗೆ ಮಾತ್ರ ಇದರ ಅಕ್ಕಿ ಮೀಸಲಾಗಿರುತ್ತದೆ. ಕರಾವಳಿಯಲ್ಲಿ ಕಳವೆ ಎಂದು ಕರೆಸಿಕೊಳ್ಳುವ ಈ ತಳಿಯ ಅಕ್ಕಿಯನ್ನ ಘಟ್ಟದ ಮೇಲೆ ಗಂಧಸಾಲೆ ಅಥವಾ ಗಂಸಾಲೆ ಎಂದು ಕರೆಯಲಾಗುತ್ತದೆ. ಕಾದಂಬರಿಯಲ್ಲಿನ ಭಾವಗಳ ತಾಕಲಾಟ ಹಾಗೂ ಕಥೆಯ ಮೂಲ ಸೆಲೆಯನ್ನಾಗಿ ಲೇಖಕರು ಕಳವೆಯನ್ನ ರೂಪಕವಾಗಿ ಬಳಸಿಕೊಂಡಿದ್ದಾರೆ. 


ಕಾದಂಬರಿಯ ಆರಂಭದಲ್ಲಿ ಅವರೆ ಹೇಳಿಕೊಳ್ಳುವಂತೆ "ಬದಲಾಗುತ್ತಾ ಇರುವ ಜಗತ್ತಿನಲ್ಲಿ ಯಾವ ಕತೆಯನ್ನೂ ಹೇಳಿ ಅಥವಾ ಬರೆದು ಪೂರ್ಣಗೊಳಿಸಲಾಗುವುದಿಲ್ಲ. ಕತೆ ನಡೆಯುತ್ತಲೇ ಇರುವಂಥದು. ಬರವಣಿಗೆಯಲ್ಲಿ ಹಿಡಿದಿಡಲು ಸಾಧ್ಯ ಕತೆಯ 
ಯಾವುದೋ ಒಂದು ಘಟ್ಟವನ್ನು ಮಾತ್ರ. ಅಂಥ ಕತೆ ಕೆಲವು ಪ್ರಕರಣಗಳನ್ನು ಪೋಣಿಸಿದ ಒಂದು 
ಕಥಾನಕವಾಗಬಹುದು. ಅಥವಾ ಒಂದು ದೀರ್ಘ ಆಖ್ಯಾನವಾಗಬಹುದು. ಅದನ್ನು `ಕಾದಂಬರಿ’ ಎನ್ನುವುದು 
ಒಂದು ಸಾಹಿತ್ಯ ಸಂಪ್ರದಾಯ. ಆ ವ್ಯಾಖ್ಯೆ ಇತರ ಅನೇಕ ವ್ಯಾಖ್ಯೆಗಳಂತೆ ಆರ್ಬಿಟ್ರರಿಯಾಗಿರಬಹುದು. 
ಸೃಷ್ಟಿಯ ಆರಂಭವೋ ಎಂಬಂತೆ ಒಂದು ಬದುಕಿನ ಆರಂಭದ ವಿವರಗಳಿಂದ ತೊಡಗಿ ಆ ಬದುಕಿನ 
ಮುನ್ನಡೆಯ ಒಂದು ಹಂತದ ವರೆಗಿನ ಕಥೆಯನ್ನು `ಕೆಂಪು ಕಳವೆ’ ನೂರಾರು ದೃಶ್ಯಗಳಂತೆ, ನೂರಾರು ಚರಣಗಳ ಒಂದು ಹಾಡಿನಂತೆ ಕಟ್ಟಿಕೊಡುತ್ತದೆ. 

ಅದು ಚಿತ್ರಿಸುವ ಬದುಕು ಮಹತ್ತಾದ ಏರುಪೇರುಗಳಿಲ್ಲದ, ಪ್ರಕೃತಿಯೇ ಕಟ್ಟಿಕೊಟ್ಟಂತಿರುವ ಅಥವಾ ಪ್ರಕೃತಿಯನ್ನೇ ಗೂಡಾಗಿಸಿ ಒಂದು ಕುಟುಂಬ ಹೆಣೆದುಕೊಂಡಿರುವ ಬದುಕು. ದುಃಖದಿಂದ ಸಂತೋಷವನ್ನು, ಅಥವಾ ಸುಖದಿಂದ ನೋವನ್ನು ಬೇರೆಯಾಗಿ ಕಾಣಲಾಗದ ಬದುಕು. ವಾಸ್ತವದ ನೈಜ ರೋಚಕತೆಯಿಂದ ಕೂಡಿದ ಬದುಕು. ಬದುಕೇ ಒಂದು ಬೆರಗು. ಕೆಂಪು ಕಳವೆ ಒಂದು ಗ್ರಾಮದ  ಅಂತರಾಳದಲ್ಲಿರುವ ಪುಟ್ಟ ವಿಶ್ವವನ್ನು ಪದರ ಪದರವಾಗಿ ಬಿಚ್ಚಿಡುವ ಕಥೆ."

ಶಬ್ದಗಳು, ಅರಗಿನಮನೆ, ಇತಿಹಾಸದ ಮೊಗಸಾಲೆ ಹಾಗೂ ನೆನ್ನೆ ಇಂದು ನಾಳೆಗಳಂತೆ ಇಲ್ಲಿಯೂ ಪಾತ್ರಗಳ ಮನೋ ವಿಶ್ಲೇಷಣೆ ಆಲವಾಗಿ ಮಾಡಿದ್ದಾರೆ. ವೃತ್ತಿಯಿಂದ ಆಂಗ್ಲ ಉಪನ್ಯಾಸಕರಾಗಿದ್ದ ಗಟ್ಟಿಯವರು ಇಥಿಯೋಪಿಯಾದಲ್ಲಿ ಭಾರತ ಬಾಂಧವ್ಯ ಬೆಸುಗೆ ಕಾರ್ಯಕ್ರಮದಡಿ ದೀರ್ಘ ಕಾಲದವರೆಗೆ ಬೋಧಕರಾಗಿದ್ದವರು. ಬರಹಕ್ಕಿಂತ ಕ್ಷುಲ್ಲಕ ಕುತ್ಸಿತ ರಾಜಕೀಯದ ಹೀನ ಪರಂಪರೆಯನ್ನೆ ಹೊಂದಿರುವ ರಾಜಧಾನಿಯ ಆಸ್ಥಾನ ಶ್ವಾನಗಳಂತಹ ಸಾಹಿತಿಗಳು ತಮ್ಮ ತಮ್ಮ ಆಂತರ್ಯದಲ್ಲಾದರೂ ನಾಚುವ ಹಾಗೆ ಬೆಳ್ತಂಗಡಿ ಬಳಿಯ ಉಜಿರೆಯಲ್ಲಿ "ವನಶ್ರಿ"ಯೆಂಬ ತಮ್ಮ ತೋಟದ ನಡುವೆ ಅಪ್ಪಟ ಕೃಷಿಕನಾಗಿ, ಸಾಹಿತ್ಯ ಸೇವಕನಾಗಿ ಗಟ್ಟಿಯವರ ಬಾಳ್ವೆ ಬಾಳ ಸಂಗಾತಿ ಯಶೋದಾರೊಂದಿಗೆ ಸಾಗಿದೆ. 

No comments: