17 November 2015

ವಲಿ - ೩೨









ಇನ್ನೊಂದು ವರ್ಷವೂ ಸುಖವಾಗಿ ಸವೆದು ಹೋಯಿತು. ಈಗ ಖುರೈಷಿಗಳೊಂದಿಗಿನ ಅಲ್ ಹೊಡೈಬಿಯಾದಲ್ಲಾದ ಒಪ್ಪಂದಕ್ಕೆ ಎರಡು ವರ್ಷಗಳ ಪ್ರಾಯವಾಗಿತ್ತು. ಈ ಎರಡು ವರ್ಷಗಳ ಅವಧಿಯಲ್ಲಿ ಖುರೈಷಿಗಳೊಂದಿಗಿನ ಬಾಂಧವ್ಯಗಳಲ್ಲಿ ಯಾವುದೆ ತಂಟೆ ತಕರಾರು ಎದುರಾಗದೆ ಕದನ ಕಚ್ಚಾಟ ರಹಿತವಾದ ಶಾಂತ ಸಮಾಧಾನದ ದಿನಗಳಾಗಿ ಪರಿವರ್ತಿತವಾಗಿದ್ದವು. ಈ ಒಪ್ಪಂದದ ಪ್ರಕಾರ ಇನ್ನುಳಿದ ಅರೇಬಿಯಾದ ಬುಡಕಟ್ಟುಗಳ ಜನರು ಒಂದೋ ಖುರೈಷಿಗಳಿಗೆ ಅಥವಾ ಮಹಮದನಿಗೆ ತಮ್ಮ ನಿಷ್ಠೆ ಹಾಗೂ ಸೈನಿಕ ಸಹಾಯದ ಬಾಂಧವ್ಯವನ್ನ ಸೂಚಿಸ ಬಹುದಾಗಿತ್ತು. ಅದರ ಅನುಸಾರ ಮೆಕ್ಕಾ ಸುತ್ತಮುತ್ತಲು ವಾಸಿಸುತ್ತಿದ್ದ ಖೋಝಾ ಬುಡಕಟ್ಟಿನವರು ಮಹಮದನ ನಿಷ್ಠರಾಗಿ ಗುರುತಿಸಿಕೊಂಡು ಅವನಿಗೆ ಅಧೀನರಾಗಿದ್ದರು. ಬೆನ್ ಬಕರ್ ಬುಡಕಟ್ಟಿನ ಮಂದಿ ಮೆಕ್ಕಾದ ಖುರೈಷಿಗಳ ಪಾಳಯ ಸೇರಿಕೊಂಡಿದ್ದರು. ಈ ಎರಡೂ ಬುಡಕಟ್ಟುಗಳವರಿಗೆ ಪರಸ್ಪರ ಆಗಿ ಬರುತ್ತಿರಲಿಲ್ಲ.


ಹೀಗಿರುವಾಗ ಒಂದು ಪುಟ್ಟ ಕಾರಣಕ್ಕೆ ಆ ಎರಡೂ ಪಂಗಡಗಳ ನಡುವೆ ಕದನ ಹುಟ್ಟಿಕೊಂಡಿತು. ಈ ಪುಟ್ಟ ಕಾರಣವೆ ರಕ್ತರಹಿತವಾದ ಒಂದು ದೊಡ್ದ ಕ್ರಾಂತಿಗೆ ಕಾರಣವಾಯಿತು ಅನ್ನುವುದು ನಂಬುವುದು ಕಷ್ಟವಾದರೂ ವಾಸ್ತವ. ಪರಸ್ಪರ ಕತ್ತಿ ಮಸೆಯುತ್ತಲಿದ್ದುದರಿಂದ ಈ ಸಣ್ಣಪುಟ್ಟ ಕಾರಣಗಳಿಗೂ ಪರಸ್ಪರರ ಮೇಲೆ ಎಗರಿ ಬೀಳೋದು ಅವರಿಗೆ ವಿಶೇಷವೇನೂ ಆಗಿರಲಿಲ್ಲ. ಈ ಕೋಳಿಜಗಳದಂತಹ ಚಿಲ್ಲರೆ ಗಲಾಟೆ ವಿಕೋಪಕ್ಕೆ ಹೋಗಿ ಒಂದು ರಾತ್ರಿ ಬೆನ್ ಬಕರ್ ಬುಡಕಟ್ಟಿನವರು ಸಮಯ ಸಾಧಿಸಿ ಖೋಝಾಗಳ ವಸತಿಯ ಮೇಲೆ ಮುಗಿ ಬಿದ್ದು ಅವರ ಹಲವಾರು ಪ್ರಮುಖರನ್ನ ಕೊಚ್ಚಿ ಕೊಂದು ಬಂದರು. ತಮ್ಮ ಅಹವಾಲನ್ನ ಈಗ ಖೋಝಾಗಳು ತಮ್ಮ ಪಕ್ಷದಲ್ಲಿದ್ದ ಮಹಮದನ ಬಳಿಗೆ ಒಯ್ದರು. ಅವನ ಮುಂದೆ ತಮ್ಮ ಗೋಳನ್ನ ಹೇಳಿಕೊಂಡು ಕಷ್ಟ ನಷ್ಟಗಳನ್ನ ತೋಡಿಕೊಂಡರು. ಬೆನ್ ಬಕರ್'ಗಳ ಮೇಲೆ ಪ್ರತಿಕಾರದ ಧಾಳಿ ನಡೆಸಬೇಕಿದೆ ಅನ್ನುವುದನ್ನ ಅವನಿಗೆ ಖೋಝಾ ಮುಖಂಡರು ಮನವರಿಕೆ ಮಾಡಿಸಿ ಕೊಟ್ಟರು. ಮಹಮದ್ ಅಂತಹ ಪ್ರತಿಕಾರದ ಕಾರ್ಯಾಚರಣೆಗೆ ಸಮ್ಮತಿ ನೀಡಿದನಷ್ಟೇ ಅಲ್ಲ ಅಂತಹ ಹೋರಾಟದ ಹೊತ್ತಿನಲ್ಲಿ ಮುಸಲ್ಮಾನರ ಪಡೆಯೂ ಸಹ ಅವರ ಪರವಾಗಿ ಹೋರಾಡಲು ಸಮರಾಂಕಣಕ್ಕೆ ಧುಮುಕಲಿದೆ ಎಂದು ಪ್ರಕಟಿಸಿದ.



ಮಹಮದನ ಈ ಸಂಕಲ್ಪದ ಸುದ್ದಿ ಖುರೈಷಿಗಳ ಕಿವಿಯನ್ನ ಮುಟ್ಟಿದಾಗ ಅವರು ಸಹಜವಾಗಿ ಗಾಬರಿಬಿದ್ದರು. ಈ ಪಿಳ್ಳೆ ನೆವದಿಂದೆಲ್ಲಾ ತಮ್ಮ ನಡುವೆ ಕಳೆದೆರಡು ವರ್ಷಗಳಿಂದ ನೆಲೆಸಿದ್ದ ಶಾಂತಮಯ ವಾತಾವರಣ ಕಲಕಿ ಹೋಗುವುದು ಅವರಿಗೆ ಅಪಥ್ಯವಾಗಿತ್ತು. ಹೀಗಾಗಿ ಅವರ ಮುಖಂಡನಾದ ಅಬು ಸಫ್ಯಾನನನ್ನು ಸಂಧಾನ ನಡೆಸಲು ಮದೀನಕ್ಕೆ ಕಳುಹಿಸಲಾಯಿತು. ಸಮರ ನಿಲ್ಲಿಸುವ ಧಾವಂತದಲ್ಲಿದ್ದ ಅಬು ಸಫ್ಯಾನನ ಯಾವುದೆ ಪಟ್ಟಿಗೂ ಮಹಮದ್ ತನ್ನ ಹಠವನ್ನ ಸಡಿಲಿಸಸಲಿಲ್ಲ. ಯುದ್ಧದ ನಿರ್ಧಾರ ಅಂತಿಮಗೊಂಡಿತ್ತು. ಸಂಧಾನ ಪ್ರಕ್ರಿಯೆ ಆರಂಭದಿಂದಲೆ ಹಳಿ ತಪ್ಪಿ ಹೋಗಿದ್ದು ಅಸಲಫತೆಯಲ್ಲಿ ಅದು ಕೊನೆಗೊಂಡಿತು. ಮಹಮದನ ಧಾಳಿ ವಾಸ್ತವವಾಗಿ ಖೋಝಾಗಳಿಗೆ ಸಹಾಯ ನೀಡುವಂತಿದ್ದರೂ ಆತ ಮೆಕ್ಕಾದ ಮೇಲೂ ಮುಗಿ ಬೀಳುವ ಸಾಧ್ಯತೆಯನ್ನ ತಳ್ಳಿ ಹಾಕುವುದಕ್ಕೂ ಸಾಧ್ಯವಿರಲಿಲ್ಲ. ಹೀಗಾಗಿ ಆತನ ಸಮರ ಸಿದ್ಧತೆಯೂ ಸಹ ತೀರಾ ಗೌಪ್ಯವಾಗಿಯೆ ಆತ ನಡೆಸಿದ. ತನ್ನ ಆಪ್ತೇಷ್ಟರಿಗೂ ಸಹ ಇದರ ಗುಟ್ಟು ಬಿಟ್ಟು ಕೊಡದೆ ಸಾಮರಿಕ ವ್ಯೂಹವನ್ನ ಹೆಣೆದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ 'ದ ಸೀಲ್ಡ್ ನೆಕ್ಟರ್'ರಿನ ಪುಟ ಸಂಖ್ಯೆ ೭೭೩ರಲ್ಲಿ ಸ್ಪಷ್ಟವಾಗಿ.


ಕ್ರಿಸ್ತಶಕ ೬೩೦ರ ಜನವರಿ ಒಂದನೆ ತಾರೀಕಿಗೆ ಮಹಮದನ ಸುಸಜ್ಜಿತ ಸೈನ್ಯ ಮೆಕ್ಕಾದ ದಿಕ್ಕಿನತ್ತ ಪ್ರಯಾಣಿಸಿತು. ಮಹಮದನ ಪಡೆ ಬೆದಾವಿನರ ಹಾಗೂ ಮುಸಲ್ಮಾನರ ಯೋಧರಿಂದ ತುಂಬಿಹೋಗಿತ್ತು. ಎಂಟು ಸಾವಿರ ಮಂದಿಗೂ ಮೀರಿದ ಸೈನಿಕರಿದ್ದ ಈ ಬೃಹತ್ ಪಡೆಯ ನೇತೃತ್ವವನ್ನ ಅದರ ಸಂಖ್ಯಾ ಬಾಹುಳ್ಯತೆಯ ಬಗ್ಗೆ ಅಪಾರ ಭರವಸೆ ಇದ್ದ ಮಹಮದ್ನೆ ಖುದ್ದಾಗಿ ವಹಿಸಿದ್ದ. ಎಂದಿನಂತೆ ಝೈನಬ್ ಹಾಗೂ ಉಮ್ ಸಲ್ಮಾ ಯುದ್ಧದ ಕಣದಲ್ಲಿ ಪತಿಗೆ ಸಾಂಗತ್ಯ ಒದಗಿಸಲು ದಂಡಿನೊಂದಿಗೆ ಹೊರಟು ನಿಂತಿದ್ದರು. 



ಒಂದು ವಾರದ ಪ್ರಯಾಣದ ನಂತರ ಮಹಮದನ ಸೈನ್ಯ ಅಝ್ ಜೆಹ್ರಾನ್ ಎನ್ನುವ ಸ್ಥಳದಲ್ಲಿ ಅಂತಿಮವಾಗಿ ಬೀಡು ಬಿಟ್ಟಿತು. ಮಹಮದನ ಚಿಕ್ಕಪ್ಪ ಅಲ್ ಅಬ್ಬಾಸ್ ಪರಿಸ್ಥಿತಿಯ ಗಹನತೆ ಹಾಗೂ ಗೆಲುವಿನ ಗಾಳಿ ಬೀಸುತ್ತಿದ್ದ ದಿಕ್ಕನ್ನ ಗ್ರಹಿಸಿ ಸಮಯ ಸಾಧಕನಾಗಿ ಮಹಮದನ ಬಣ ಸೇರಿಕೊಂಡ. ಖುರೈಷಿಗಳ ಒಳಗುಟ್ಟುಗಳೆಲ್ಲ ಮಹಮದನಿಗೆ ಸೋರಿಕೆಯಾಗಲು, ಆ ಮೂಲಕ ಮಹಮದನ ಗೆಲುವಿನ ಹಾದಿ ಸುಗಮವಾಗಲು ಈ ಬೆಳವಣಿಗೆಯಿಂದ ಸುಲಭ ಸಾಧ್ಯವಾಗಿತ್ತು. ಚತುರನಾದ ಮಹಮದ್ ಅವನನ್ನ ಆದರದಿಂದ ಬರ ಮಾಡಿಕೊಂಡು ಸೂಕ್ತ ಸ್ಥಾನಮಾನ ಹಾಗೂ ಸತ್ಕಾರಗಳಿಂದ ಅವನ ಮನಸ್ಸನ್ನು ಗೆದ್ದುಕೊಂಡ.


ಇನ್ನು ಖುರೈಷಿಗಳ ಆತ್ಮಸ್ಥೈರ್ಯವನ್ನ ಕುಗ್ಗಿಸುವ ಮಾನಸಿಕ ಯುದ್ಧದಲ್ಲಿ ಗೆಲುವು ಸಾಧಿಸಬೇಕಾದ ಮೊದಲ ಹೆಜ್ಜೆಯನ್ನಾತ ಇಡಬೇಕಿತ್ತು. ಅದಕ್ಕಾಗಿ ತನ್ನ ಪ್ರತಿಯೊಬ್ಬ ಯೋಧರ ಮೂಲಕವೂ ತಮ್ಮ ಪಕ್ಷದ ಶಕ್ತಿಯ ಸಂಪೂರ್ಣ ಪರಿಚಯ ಮಾಡಿಸಿ ಮಾನಸಿಕವಾಗಿ ಗಾಬರಿ ಹುಟ್ಟಿಸಿ ವಿರೋಧಿ ಪಾಳಯದ ಆತ್ಮಸ್ಥೈರ್ಯವನ್ನ ಕುಗ್ಗಿಸಲು ಹಂಚಿಕೆ ಹಾಕಿದ. ಹೀಗಾಗಿ ಕತ್ತಲಲ್ಲಿ ಪ್ರತಿಯೊಬ್ಬ ಯೋಧರೂ ಸಹ ಸಾಧ್ಯವಾದಷ್ಟು ಕಟ್ಟಿಗೆಯನ್ನ ಪೇರಿಸಿ ಬೆಂಕಿ ಉರಿಸಲು ಆತ ಆದೇಶಿಸಿದ. ಅದರ ಖಚಿತ ಪರಿಣಾಮವನ್ನ ಖುರೈಷಿ ಪಡೆಗಳ ಮೇಲೆ ಆಗುವುದನ್ನ ಆತ ಗ್ರಹಿಸಿದ್ದ. ಆ ಅಗಾಧ ಕಾಂತಿಯನ್ನ ಕಂಡ ಖುರೈಷಿಗಳು ಮೆಕ್ಕಾದ ಒಳಗೆಯೆ ಬೆವರಿ ನೀರಾಗಿ ಹೋದರು. ಹೀಗಾಗಿ ಕಡೆಯದೊಂದು ಪ್ರಯತ್ನ ಮಾಡಿ ಯುದ್ಧದ ಸಾಧ್ಯತೆಯನ್ನ ತಪ್ಪಿಸಲು ಅಬು ಸಫ್ಯಾನನನ್ನು ಬೇಡಿಕೊಂಡರು. ರಕ್ತಪಾತವಾಗುವುದು ಇಷ್ಟವಿಲ್ಲದಿದ್ದ ಅಬು ಸಫ್ಯಾನ್ ಸಹ ಈ ಮಾತಿಗೆ ಸಮ್ಮತಿ ಸೂಚಿಸಿ ಖೋಝಾ ಬಣದ ಮುಖಂಡ ಬುಡೈಲ್'ನೊಂದಿಗೆ ಮಹಮದನನ್ನು ಭೇಟಿ ಮಾಡಲು ಆತನ ಬಿಡಾರದತ್ತ ಹೊರಟ. 



ದೂರದ ಬೆಟ್ಟದ ಕಣಿವೆಯಲ್ಲಿ ಎಂಟರಿಂದ ಹತ್ತು ಸಾವಿರ ದೊಂದಿಯ ಬೆಳಕುಗಳು ಒಂದು ಅದ್ಭುತ ಪ್ರಕಾಶವಲಯವನ್ನೆ ಸೃಷ್ಟಿಸಿತ್ತು. ದೂರದಿಂದ ಅದನ್ನ ಕಾಣುವಾಗಲೆ ಅಬು ಸಫ್ಯಾನ್ ಅವಾಕ್ಕಾಗಿ ಹೋದ. ಆತ ಮುಂದೆ ಸಾಗುವಾಗ ಪಕ್ಷಾಂತರಿ ಅಲ್ ಅಬ್ಬಾಸ್ ಅವನನ್ನು ಅನಿರೀಕ್ಷಿತವಾಗಿ ಎದುರುಗೊಂಡ. ಕತ್ತಲಿನಲ್ಲಿ ದಢೀರ್ ಪ್ರತ್ಯಕ್ಷನಾದಂತೆ ಕಂಡು ಬಂದ ಅವನನ್ನು 'ನೀನು ಏನಿಲ್ಲಿ?' ಎಂದು ಅಬು ಸಫ್ಯಾನ್ ಪ್ರಶ್ನಿಸಿದ. ಆತ ತನ್ನ ನಡೆಯನ್ನ ವಿಶದ ಪಡಿಸಿ ಮಹಮದನ ಪಡೆ ಎಂಟರಿಂದ ಹತ್ತು ಸಾವಿರ ಯೋಧರ ಅಪಾರ ಸಂಖ್ಯೆಯಿಂದ ಕೂಡಿದೆಯೆಂದೂ, ಯಾವುದೇ ಕಾರಣಕ್ಕೂ ಶಸ್ತ್ರಸಜ್ಜಿತರಾದ ಅವರನ್ನ ಒಂದೊಮ್ಮೆ ಯುದ್ಧವಾದರೆ ಮಣಿಸುವುದು ಸಾಧ್ಯವೆ ಇಲ್ಲ ಅಂತಲೂ ಹೇಳಿ ಅವನ ಮನದಲ್ಲಿ ಭಯ ಹುಟ್ಟಿಸಿದ. ಜೊತೆಗೆ ನೀನೂ ಸಹ ನಮ್ಮೊಂದಿಗೆ ಈ ಮುಸಲ್ಮಾನರ ಪಡೆಗೆ ಪಕ್ಷಾಂತರ ಮಾಡಿಬಿಡು! ಹಾಗೂ ಸುಂದರವಾಗಿರುವ ಇಸ್ಲಾಮಿನಲ್ಲಿ ನಂಬಿಕೆ ಇಡು. ನಿನಗೆ ಬೇಕಾದ ಪಟ್ಟ ಪದವಿಗಳನ್ನ ಕೊಡಿಸುವುದು ನನ್ನ ಹೊಣೆ ಎಂದು ಪುಸಲಾಯಿಸಿದ. ಅದಕ್ಕೂ ಬಗ್ಗದಿದ್ದರೆ ನಾಳೆ ನಿನ್ನ ಹೆತ್ತವರು, ಕಟ್ಟಿಕೊಂಡವರು ಹಾಗೂ ನೀನು ಹುಟ್ಟಿಸಿದವರು ನಿನ್ನನ್ನ ನೆನೆಸಿಕೊಂಡು ಕಣ್ಣೀರಿಡುವರು ಎಂದು ಮೆಲುವಾಗಿ ಬೆದರಿಸಿದ. 



ಆತನನ್ನ ತನ್ನ ಕುದುರೆ ಏರಿ ಮಹಮದನ ಭೇಟಿಗೆ ಅಬ್ಬಾಸ್ ಆಹ್ವಾನಿಸಿದ. ಬಿಡಾರಕ್ಕೆ ಬಂದ ಪ್ರತಿಪಕ್ಷದ ಅತಿಥಿಯನ್ನ ಮಹಮದ್ ಯಥೋಚಿತವಾಗಿ ಸತ್ಕರಿಸಿದ. ಇರುಳು ತಂಗಲು ಸುಖ ಸುಪ್ಪೊತ್ತಿಗೆಯ ವ್ಯವಸ್ಥೆ ಮಾಡಿಕೊಡಲಾಯಿತು. ಬೆಳಕು ಹರಿದು ಮಹಮದನನ್ನು ಮತ್ತೆ ಅಬು ಸಫ್ಯಾನ್ ಕಾಣಲು ಬರುವಾಗ, ದೂರದಲ್ಲಿ ಆತ ಕಾಣುತ್ತಲೆ ಮಹಮದೆ ದೊಡ್ದ ಧ್ವನಿಯಲ್ಲಿ 'ದೇವರೊಬ್ಬನೆ! ಅದು ನಿನಗಿನ್ನೂ ಅರಿವಾಗಲಿಲ್ಲವೆ?" ಎಂದು ಎಲ್ಲರಿಗೂ ಕೇಳುವಂತೆ ಪ್ರಶ್ನಿಸಿದ. "ಹಾಗೇನಾದರೂ ದೇವರು ಬೇರೊಬ್ಬನಿದ್ದಿದ್ದರೆ ನನಗೂ ಉಪಯೋಗವಾಗುತ್ತಿತ್ತು?!" ಅಬು ಸಫ್ಯಾನ್ ಮಾರುತ್ತರಿಸಿದ. "ನಾನು ದೇವರ ಪ್ರವಾದಿ ಎಂದೇಕೆ ನೀನು ನಂಬುವುದಿಲ್ಲ?" ಎಂದು ಮಹಮದ್ ಮರು ಪ್ರಶ್ನಿಸಿದ.


ಇದಕ್ಕೆ ಏನು ಉತ್ತರಿಸೋದು ಎನ್ನುವುದು ಅರಿವಾಗದೆ ಅಬು ಸಫ್ಯಾನ್ ಕಕ್ಕಾಬಿಕ್ಕಿಯಾಗಿ ನಿಂತಿರೋವಾಗ ಪಕ್ಕದಲ್ಲಿದ್ದ ಅಲ್ ಅಬ್ಬಾಸ್ "ಇದು ಹಿಂಜರೆಯುವ ಹೊತ್ತಲ್ಲ! ಒಂದೋ ದೇವರ ಪ್ರವಾದಿಯ ಮೇಲೆ ನಂಬಿಕೆ ಇಡು ಹಾಗೂ ಇಸ್ಲಾಮಿಗೆ ಶರಣಾಗು, ಇಲ್ಲವೆ ಇನ್ನು ಕೆಲವೆ ಕ್ಷಣದಲ್ಲಿ ನೆಲಕ್ಕೆ ಬಿದ್ದ ನಿನ್ನ ರುಂಡ ಬೇರೆಯಾದ ನಿನ್ನದೆ ಮುಂಡವನ್ನ ದಿಟ್ಟಿಸಿ ನೋಡಲಿದೆ?!" ಎಂದು ಗುಡುಗಿದ. ಈ ಒತ್ತಡದ ವಾತಾವರಣದ್ಲ್ಲಿ ಇನ್ನೇನೂ ಅನ್ಯ ಮಾರ್ಗವನ್ನ ಕಾಣದೆ "ದೇವರೊಬ್ಬನೆ ಹಾಗೂ ಮಹಮದ್ ಆತನ ಪ್ರವಾದಿ!" ಎಂದು ಸಾಕ್ಷಿ ನುಡಿದು ಅಬು ಸಫ್ಯಾನ್ ಇಸ್ಲಾಮಿಗೆ ಶರಣಾದ! ಜೀವ ಉಳಿಸಿಕೊಳ್ಳಲು ಬೇರೆ ಉಪಾಯಗಳೊಂದೂ ಸಹ ಒಂಟಿಯಾಗಿ ಸಂಧಾನಕ್ಕೆ ಬಂದ ತಪ್ಪಿಗೆ ಅ ಕ್ಷಣ ಆತನ ಮುಂದೆ ಉಳಿದಿರಲೆ ಇಲ್ಲ. ತನ್ನ ಕಡು ವೈರಿಯೆ ಆದ ಖುರೈಷಿಗಳ ನಾಯಕ ಹಾಗೂ ತನ್ನ ಹೆಂಡತಿಯ ಅಪ್ಪ ಈಗ ಮತ ಬಾಂಧವನೂ ಆಗಿ ಇನ್ನಷ್ಟು ಆಪ್ತನಾಗಿದ್ದು ಮಹಮದನ ಇಸ್ಲಾಂನ ಚರಿತ್ರೆಯಲ್ಲಿಯೆ ಒಂದು ಮಹತ್ವದ ಯಶಸ್ಸಿನ ಮೈಲುಗಲ್ಲಾಗಿತ್ತು. 

 

ಮೆಕ್ಕಾಗೆ ಹಿಂದಿರುಗಿ ಅವರೆಲ್ಲರೂ ಇಸ್ಲಾಮಿನತ್ತ ಹೆಜ್ಜೆ ಹಾಕಿದಲ್ಲಿ ಯಾವುದೆ ತೊಂದರೆ ಆಗಲಾರದು ಎನ್ನುವ ಭರವಸೆ ನೀಡಿ ಅವರೆಲ್ಲರನ್ನೂ ಇಸ್ಲಾಮಿನತ್ತ ಕರೆತರುವ ಹೊಣೆಯನ್ನ ನವ ಮತಾಂತರಿ ಅಬು ಸಫ್ಯಾನನಿಗೆ ವಹಿಸಲಾಯಿತು. ಅದರಂತೆಯೆ ಕೂಡಲೆ ಮೆಕ್ಕಾದತ್ತ ಮುಖ ಮಾಡಿದ ಅಬು ಸಫಾಯನ್ ಅಲ್ಲಿಗೆ ಮುಟ್ಟುತ್ತಲೆ ಮಹಮದನ ಲೀಲಾ ವಿನೋದ ಹಾಗೂ ಹೃದಯವಂತಿಕೆಯನ್ನು ತನ್ನೆಲ್ಲಾ ಬೆಂಬಲಿಗರ ಮುಂದೆ ಹಾಡಿ ಹೊಗಳುತ್ತಲೆ ಆತನ ಅಪರಾ ಸೈನ್ಯದ ಬಲಾಬಲವನ್ನೂ ಸಹ ವರ್ಣಿಸಿ, ತನ್ನೊಂದಿಗೆ ನಂಬಿ ಬಂದು ತನ್ನ ಮನೆಯಲ್ಲಿ ಉಳಿಯುವವರಿಗೆ ಮಾತ್ರ ಅಭಯ ನೀಡಲಾಗುವುದು ಎಂದು ಘೋಷಿಸಿದ. ತನ್ನ ಮತಾಂತರದ ಸಂಗತಿಯನ್ನೂ ಸಹ ಕಡೆಯಲ್ಲಿ ಮೆತ್ತಗೆ ಉಸುರಿ ತಾನೀಗ ಮುಸಲ್ಮಾನನಾಗಿರುವುದನ್ನ ಖಚಿತ ಪಡಿಸಿದ. ಜೀವ ಭಯಕ್ಕೆ ಬಿದ್ದ ಅನೇಕ ಖುರೈಷಿಗಳು ಅಬು ಸಫ್ಯಾನನ ಮನೆ ಹಾಗೂ ಕಾಬಾ ಗುಡಿಯ ಆವರಣ ಹೊಕ್ಕು ಆಶ್ರಯ ಪಡೆದರು. 


ಈಗ ರಾಜಕೀಯ ಹಾಗೂ ಸಾಮಾಜಿಕವಾಗಿ ಅಬು ಸಫ್ಯಾನನ ನಾಯಕತ್ವ ಶಿಥಿಲವಾದದ್ದು ಸುಸ್ಪಷ್ಟವಾಗಿತ್ತು. ಅವನಿಗೆ ಖುರೈಷಿ ಸಮಾಜದ ಮೇಲೆ ಹಿಂದೆ ಇದ್ದ ಹಿಡಿತ ಉಳಿದಿರಲಿಲ್ಲ. ಆತ ತೀರಾ ಅಶಕ್ತ ಹಾಗೂ ಪಲಾಯನವಾದಿ ವ್ಯಕ್ತಿಯಾಗಿ ಒಂದೆ ಒಂದು ರಾತ್ರಿಯಲ್ಲಿ ಮಾರ್ಪಾಡಾಗಿದ್ದ. ಆತನ ಪ್ರತಿಷ್ಠೆ ಹಾಗೂ ಧೈರ್ಯ ಇವೆಲ್ಲಾ ಮಣ್ಣು ಪಾಲಾಗಿ ಹೋಗಿದ್ದೆವು. ಇತ್ತ ಮಹಮದ್ ಇದೆ ಅವಧಿಯಲ್ಲಿ ತನ್ನ ಸೈನ್ಯವನ್ನ ನಾಲ್ಕು ಭಾಗಗಳಾಗಿ ವಿಂಗಡಿಸಿ ಚಾಕಚಾಕ್ಯತೆಯಿಂದ ಊರನ್ನ ನಾಲ್ಕೂ ದಿಕ್ಕಿನಿಂದ ನುಗ್ಗಲು ನಿಯೋಜಿಸಿದ. ಶಾಂತಿ ಕಾಪಾಡುವ ಆಜ್ಞೆಯನ್ನ ಕಟ್ಟುನಿಟ್ಟಾಗಿ ಹೇರಿ ರಕ್ತಪಾತ ಅನಿವಾರ್ಯವಲ್ಲದಲ್ಲಿ ಮಾಡಲೆ ಕೂಡದು ಎಂದು ಆದೇಶಿಸಲಾಯಿತು. ಖುರೈಷಿಗಳ ನಾಯಕ ಅಬು ಸಫ್ಯಾನನಎ ಇಸ್ಲಾಮನ್ನ ಒಪ್ಪಿಕೊಂಡು ತನ್ನ ಅನುಯಾಯಿ ಆಗಿರುವಾಗ ಹೆಚ್ಚಿನ ಪ್ರತಿರೋಧವಿಲ್ಲದೆ ಮೆಕ್ಕಾ ತನ್ನ ಕೈವಶವಾಗುವುದು ಆತನಿಗೆ ಖಚಿತವಿತ್ತು. ಆತನ ದಾರಿ ನಿರೀಕ್ಷೆಯಂತೆ ಸುಗಮವಾಗಿತ್ತು. 


ಆದರೆ ಮಹಮದ ಶಾಂತ ಸೇರ್ಪಡೆಯ ಆಸೆ ಅದೆಷ್ಟೆ ಇದ್ದರೂ ಸಹ ಖುರೈಷಿಗಳ ಒಂದು ಪಡೆಯ ಪ್ರತಿರೋಧವನ್ನ ಎದುರಿಸುವುದೂ ಸಹ ಆತನ ಪಡೆಗೆ ಅನಿವಾರ್ಯವಾಯಿತು. ದಕ್ಷಿಣ ದಿಕ್ಕಿನಲ್ಲಿ ನಿಯೋಜಿಸಿದ್ದ ತುಕುಡಿಯನ್ನ ಖುರೈಷಿಗಳಾದ ಸೊಹೈಲ್, ಸಫ್'ವಾನ್ ಹಾಗೂ ಇಕ್ರಮ್ ಇವರೆಲ್ಲರ ತೀವೃ ಪ್ರತಿರೋಧವನ್ನ ಎದುರಿಸಬೇಕಾಯಿತು. ಮುಸಲ್ಮಾನ ಪಡೆಯ ನೇತೃತ್ವ ವಹಿಸಿದ್ದ ಖಲೀಲ್ ವೀರಾವೇಶದಿಂದ ಹೋರಾಡಿ ಈ ಮೂವರು ಯೋಧರನ್ನೂ ಹಿಮ್ಮೆಟ್ಟಿಸಿದ. ಬಾಕಿ ನಾಯಕರು ಪಲಾಯನಗೈದರು, ಎರಡು ಪಡೆಗಳಲ್ಲಿ ಅಪಾರ ಸಾವುನೋವು ಉಂಟಾದವು. ಈ ಸುದ್ದಿ ಮಹಮದನ ಕಿವಿಗೆ ಬಿದ್ದದ್ದೆ ಆತ ಕ್ರೋಧಗೊಂಡ. ತನ್ನ ಯುದ್ಧ ಹೂಡದೆ ರಕ್ತಪಾತ ಮಾಡದೆ ಮುನ್ನಡೆಯುವ ಆಜ್ಞೆಯನ್ನ ಖಲೀದ್ ಉಲ್ಲಂಘಿಸಿದ್ದು ಆತನಿಗೆ ನೋವಿನ ಸಂಗತಿಯಾಗಿ ಪರಿಣಮಿಸಿತ್ತು. ಆದರೆ ಸಮರ ಹೂಡಲೇ ಬೇಕಾದ ಅನಿವಾರ್ಯತೆಯನ್ನ ವಿವರಿಸಿ ಖಲೀದ್ ಸಮಜಾಯಷಿ ನೀಡಿದಾಗ ಮಾತ್ರ "ಎಲ್ಲಾ ದೈವೇಚ್ಛೆ!" ಎಂದು ಆತ ಸುಮ್ಮನಾದ.



ಈಗ ಗೆದ್ದ ನಗರವಾದ ಮೆಕ್ಕಾದತ್ತ ಮಹಮದನ ಸವಾರಿ ಹೊಕ್ಕಿತು. ಯಾವ ಊರಿನಿಂದ ಬೆನ್ನಟ್ಟಿ ಬಂದು ಕೊಲ್ಲಲು ಹವಣಿಸಿ ಪ್ರಾಣಭೀತಿಯಿಂದ ಆತನನ್ನು ಒದ್ದು ಓಡಿಸಲಾಗಿತ್ತೋ ಇಂದು ಏಳು ವರ್ಷದ ಅವಧಿಯಲ್ಲಿಯೆ ಆತ ಅಲ್ಲಿನ ಪ್ರಭುವಾಗಿ ಪರಿಣಮಿಸಿದ್ದ! ನಗರದ ಒಂದು ಭಾಗದಲ್ಲಿ ಒಂದು ಪ್ರಶಸ್ತ ಸ್ಥಳವನ್ನು ಆರಿಸಿಕೊಂಡು ಆತ ಅಲ್ಲಿ ನೆಲೆಸಿದ. ತನ್ನ ಸ್ವಂತ ಮನೆಯಾಗಿದ್ದ ಹಳೆಯ ಸ್ಥಳಕ್ಕೆ ಹೋಗಿ ನೆಲೆಸಲು ಆತ ಅಷ್ಟು ಆಸಕ್ತಿ ತೋರಲಿಲ್ಲ. ಅಲ್ಲಿಂದ ಆತ ಸೀದ ಕಾಬಾ ಗುಡಿಯತ್ತ ಕಾತರದಿಂದ ಚಲಿಸಿದ. ತನ್ನ ನೆಚ್ಚಿನ ಒಂಟೆ ಏರಿ ಸಾಗಿದ್ದ ಆತ ಭಕ್ತಿಯಿಂದ ಹೊರ ಆವರರಣದಲ್ಲಿದ್ದ ಪವಿತ್ರ ಕರಿಕಲ್ಲನ್ನ ಒಂಟೆ ನಡೆಸುವ ಕೈಕೋಲಿನಿಂದಲೆ ಮುಟ್ಟಿ ತಲೆ ಬಾಗುತ್ತಾ ವಂದಿಸಿದ. ಗುಡಿಯನ್ನ ನಂಬಿಕೆಯ ಅನುಸಾರ ಏಳು ಸಾರಿ ಪ್ರದಕ್ಷಿಣೆ ಸಹ ಒಂಟೆ ಏರಿಯೆ ಹಾಕಿದ. ಅನಂತರ ವಿಗ್ರಹಗಳೆ ತುಂಬಿದ್ದ ಗುಡಿಯ ಒಳಗೆ ಕಾಲಿಡಲು ಹೇಸಿಕೊಳ್ಳುತ್ತಾ ಅಸಹ್ಯದ ಮುಖಭಾವ ಹೊತ್ತು ತನ್ನ ಕೈಕೋಲಿನಿಂದ ಗುಡಿಯನ್ನ ನಿರ್ದೇಶಿಸುತ್ತಾ ಅಲ್ಲಿನ ಮೂರ್ತಿಗಳನ್ನೆಲ್ಲ ಕಿತ್ತೆಸೆಯಲು ತನ್ನ ಅನುಯಾಯಿಗಳಿಗೆ ಆಜ್ಞೆ ಇತ್ತ. 


ಮುಖ್ಯ ಆರಾಧ್ಯ ಮೂರ್ತಿಯಾಗಿದ್ದ ಬಹುತೇಕ ಆಕಾರ ಹಾಗೂ ಕಲ್ಪನೆಯಲ್ಲಿ ಹಿಂದೂಗಳ ಮಹಾವಿಷ್ಣುವನ್ನ ಹೋಲುತ್ತಿದ್ದ 'ಹುಬಾಲ್' ಎನ್ನುವ ಮೂರ್ತಿ ಸಬ್ಬಲಿನ ಏಟಿಗೆ ನೆಲಕ್ಕೆ ಭಾರಿ ಸದ್ದಿನೊಂದಿಗೆ ಒರಗುತ್ತಿದ್ದಂತೆ ಸಂತೋಷತಿರೇಕದಲ್ಲಿ 'ದೇವರು ದೊಡ್ಡವನು! ಸತ್ಯ ಬಂದಿದೆ ಅಸತ್ಯ ಮಾಯವಾಗಿದೆ! ಎಷ್ಟೆಂದರೂ ಸತ್ಯದ ಮುಂದೆ ಅಸತ್ಯ ಮಂಕಾಗುವುದಷ್ಟೆ?!" ಎಂದು ದೊಡ್ಡ ಧ್ವನಿಯಲ್ಲಿ ಘೋಷಿಸಿದ ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ೪೦೮ರಲ್ಲಿ.


ಅಲ್ಲಿಂದ ಆತ ಸೀದ ಸೆಮೆಟಿಕ್ ವಂಶದ ಪಿತಾಮಹ ಅಬ್ರಾಹಮನ ಗುಡಿಯತ್ತ ತೆರಳಿದ. ಅಲ್ಲಿ ತದೇಕ ಚಿತ್ತನಾಗಿ ಪ್ರಾರ್ಥನೆಯನ್ನೂ ಸಹ ಸಲ್ಲಿಸಿದ. ಅನಂತರ ತನ್ನ ಬಂಟ ಬಿಲಾಲನನ್ನು ಕರೆದು ಕೂಡಲೆ ಒಥಮನ್ ಇಬ್ನ್ ತಲ್ಹಾ ಎಂಬ ಅರ್ಚಕನ ಮನೆಗೆ ತೆರಳಿ ಆತನ ವಶದಲ್ಲಿದ್ದ ಗುಡಿಯ ಇನ್ನಿತರ ಭಾಗಗಳ ಕೀಲಿ ಕೈಗಳ ಗೊಂಚಲನ್ನ ತರಲು ಆದೇಶಿಸಿದ. ಬೀಗದ ಕೀಲಿಯಿಂದ ಎಲ್ಲಾ ಮುಚ್ಚಿದ ಬಾಗಿಲುಗಳನ್ನ ತೆಗೆದ ನಂತರ ತಲೆ ಬಾಗಿಸಿ ನೆಲಕ್ಕೆ ಹಣೆಯೂರುತ್ತಾ ಆತ ಗುಡಿಯ ಹೊಸ್ತಿಲಿಗೆ ನಮಸ್ಕರಿಸಿದ. ಅನಂತರ ಅದೆ ಪೂಜಾರಿಯ ಕೈಗೆ ಕೀಲಿ ಕೈಗಳ ಗೊಂಚಲನ್ನ ಹಿಂತಿರುಗಿಸಿಕೊಡುತ್ತಾ ಇಂದಿನಿಂದ ಮೂರ್ತಿ ಪೂಜೆ ಹಾಗೂ ಅಭಿಷೇಕ ಪೂಜೆ ಆರಾಧನೆಗಳಂತಹದ್ದು ನಡೆಸುವಂತಿಲ್ಲವೆಂದೂ ಗುಡಿಯ ಉಸ್ತುವಾರಿಯಾಗಿ ನಿಮ್ಮ ವಂಶದವರೆ ಮುಂದುವರೆಯಿರಿ ಎಂದು ಹೊಣೆಗಾರಿಕೆಯನ್ನ ದಯಪಾಲಿಸಿದ. ತನ್ನ ಪಕ್ಷ ಸೇರಿದ್ದ ಚಿಕ್ಕಪ್ಪ ಅಲ್ ಅಬ್ಬಾಸನ ಕುಟುಂಬದವರಿಗೆ ಪವಿತ್ರ ಝಮ್ ಝಮ್ ಬಾವಿಯ ನೀರನ್ನು ಅಲ್ಲಿಗೆ ಬರುವ ಯಾತ್ರಿಕರಿಗೆ ಕುಡಿಸುವ ಹೊಣೆಗಾರಿಕೆಯನ್ನು ನೀಡಿದ ಅನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ 'ದ ಸೀಲ್ಡ್ ನೆಕ್ಟರ್' ಕೃಅತಿಯ ಪುಟ ಸಂಖ್ಯೆ ೭೮೨ರಲ್ಲಿ.



ಅಲ್ಲಾಹನದೂ ಸೇರಿ ಅಲ್ಲಿ ಇರಿಸಲಾಗಿದ್ದ ಎಲ್ಲಾ ಇನ್ನಿತರ ಮುನ್ನೂರಾ ಅರವತ್ತು ಆರಾಧನಾ ಮೂರ್ತಿಗಳನ್ನ ಆತನ ನಿರ್ದೇಶನದ ಮೇರೆಗೆ ಆಲಿ ಹಾಗೂ ಉಮರ್ ಒಡೆದೊಡೆದು ಕಸದಂತೆ ರಾಶಿ ಹಾಕಿದರು. ಯಹೂದಿ ಪ್ರವಾದಿಗಳ ಲೀಲೆಗಳನ್ನ ಚಿತ್ರಿಸಿ ಬರೆಯಲಾಗಿದ್ದ ಜಾತಕ ಕಥೆಗಳ ಚಿತ್ರವನ್ನು ಗೋಡೆಗಳಿಂದ ಅಳಿಸಿ ಇನ್ನಿಲ್ಲವಾಗಿಸಲಾಯಿತು. ಇದಾದ ನಂತರ ದೊಡ್ಡ ಗಂಟಲಿನ ಬಿಲಾಲನಿಗೆ ಕಾಬಾದ ಗುಡಿಯೊಳಗಿನ ಇಸ್ಲಾಮಿನ ಪ್ರಪ್ರಥಮ ನಮಾಝಿಗೆ ಕರೆ ಕೊಡಲು ತಿಳಿಸಲಾಯಿತು. ಜನರೆಲ್ಲಾ ಬಂದು ನೆರೆದ ನಂತರ ಮದೀನಾದ ಮಸೀದಿಯಲ್ಲಿನ ಪದ್ಧತಿಯಂತೆಯೆ ಅಲ್ಲಿ ಎಲ್ಲರ ಮುಂದೆ ಪ್ರಾರ್ಥನಾ ವಿಧಿಗಳನ್ನ ಮಹಮದ್ ನೆರವೇರಿಸಿದ. 'ಏಕ ದೈವ ಹಾಗೂ ಅಂತಿಮ ದಿನದ ವಿಚಾರಣೆಯನ್ನ ನಂಬುವ ಯಾರೊಬ್ಬರೂ ಇನ್ನು ಮುಂದೆ ತಮ್ಮ ಮನೆಯ ದೇವರ ಮನೆಗಳಲ್ಲಿ ವಿಗ್ರಹಾರಾಧನೆಗಳನ್ನ ಮಾಡುವಂತಿಲ್ಲ!" ಎಂದು ಸಾರ್ವಜನಿಕವಾಗಿ ಘೋಷಿಸಿದ. ಅದನ್ನ ಮೀರಿದವರಿಗೆ ಕಠಿಣ ಶಿಕ್ಷೆಯ ಎಚ್ಚರಿಕೆಯನ್ನೂ ಸಹ ನೀಡಲಾಯಿತು. ಎಲ್ಲರೂ ನಗರದಲ್ಲಿ ವಾಸಿಸುವ ಇಚ್ಛೆ ಇದ್ದಲ್ಲಿ ಬೇಷರತ್ತಾಗಿ ಇಸ್ಲಾಮನ್ನ ಒಪ್ಪಿಕೊಳ್ಳಬೇಕೆಂದು ನಗರದ ಬೀದಿಬೀದಿಗಳಲ್ಲಿ ಡಂಗೂರ ಹೊಡೆಸಲಾಯಿತು. 



ನಗರದ ಖಚಿತ ಸರಹದ್ದುಗಳನ್ನ ಗುರುತಿಸುವ ಗಡಿ ಕಂಭಗಳನ್ನ ಹೊಸತಾಗಿ ನಿಲ್ಲಿಸಲಾಯಿತು. ಮಹಮದ್ ಮೆಕ್ಕಾದ ವಿಗ್ರಹಗಳನ್ನ ಒಡೆಸಿ ಹಾಕಿದರೂ ನಗರದ ಪಾವಿತ್ರ್ಯತೆಯನ್ನ ಹಿಂದಿನಂತೆಯೆ ಕಾಪಾಡಿಕೊಂಡು ಹೋಗುವ ನಿರ್ಧಾರಕ್ಕೆ ಬಂದದ್ದು ಮೆಕ್ಕಾವಾಸಿಗಳ ಅಭದ್ರತೆಯಿಂದ ನರಳುತ್ತಿದ್ದ ಮನಕ್ಕೆ ನೆಮ್ಮದಿ ತಂದಿತ್ತು. ತಮ್ಮ ನಗರ ಮೊದಲಿನಂತೆಯೆ ಯಾತ್ರಾ ಕ್ಷೇತ್ರವಾಗಿ ಉಳಿಯುವ ಬಗ್ಗೆಯೂ ಅವರಿಗೆ ಖುಷಿಯಿತ್ತು. ಇಷ್ಟೆಲ್ಲವನ್ನೂ ಮಾಡಿ ನಾಟಕೀಯವಾಗಿ ಮೆಕ್ಕಾದ ಮೇಲೆ ತನ್ನ ಅಧಿಕಾರವನ್ನ ಅಧಿಕೃತವಾಗಿ ಪ್ರಾರಂಭಿಸಿದ ಮಹಮದನ ಹಿಝರತ್ ಅಂದರೆ ತತ್ಕಾಲಿಕ ವಲಸೆ ಈ ಮೂಲಕ ಮುಗಿದಿತ್ತು. ಈಗ ನಿರಾಶ್ರಿತರ ಪಟ್ಟದಿಂದ ಆತ ಹಾಗೂ ಆತನ ಹಿಂಬಾಲಕರು ಮುಕ್ತರಾಗಿದ್ದರು. ಬಿಡಾರಕ್ಕೆ ಆತ ಬರುವಾಗ ಅಬು ಸಫ್ಯಾನ್ ತನ್ನ ಮುದಿ ತಂದೆಯನ್ನ ಕರೆತಂದು ಆತನ ದಾರಿಯನ್ನೆ ನಿರೀಕ್ಷಿಸುತ್ತಿದ್ದ. ತನ್ನ ಅಳಿಯನ ಆಸೆಯಂತೆ ಆತನ ಅಪ್ಪನಿಗೆ ಸ್ವತಃ ಪ್ರವಾದಿಯಾದ ತಾನೆ ಇಸ್ಲಾಮಿನ ದೀಕ್ಷೆ ಕೊಟ್ಟ ಮಹಮದ್ ಅತ್ಯಂತ ಆನಂದದಿಂದಲೆ ಕಣ್ಣು ಮಂಜಾದ ಆ ಮುಪ್ಪಾನುಮುಪ್ಪಾದ ಮುದುಕನನ್ನೂ ಸಹ ಮುಸಲ್ಮಾನನಾಗಿಸಿ ಸಂತುಷ್ಟನಾದ.


( ಇನ್ನೂ ಇದೆ.)

No comments: