13 July 2020

ಕಳ್ಳ ಖದೀಮರಿದ್ದಾರೆ ಎಚ್ಚರ.

ಪಶ್ಟಿಮಘಟ್ಟದ ಸೆರಗು ಕರಾವಳಿ ಹಾಗೂ ನೆರಿಗೆ ಮಲೆನಾಡಿನ ಪ್ರಾಕೃತಿಕ ಸಿರಿಯನ್ನ ದರೋಡೆ ಮಾಡಿರುವ ಕುಕೃತ್ಯಕ್ಕೆ ವಿವಿಧ ಸ್ತರಗಳ ಸರಕಾರಗಳನ್ನ ದೂರುವುದು ಹಾಗೂ ಅದರ ಕುರಿತು ಆಗಿರುವ - ಆಗುತ್ತಿರುವ - ಮುಂದಾಗಲಿರುವ ದೌರ್ಜನ್ಯಗಳನ್ನ ಪಟ್ಟಿ ಮಾಡಿಕೊಂಡು ಆಳುವ ಅಧಮರನ್ನ ಬೈದಾಡುವುದು ತಪ್ಪೇನಲ್ಲ.

ಹಾಗಂತˌ ಒಮ್ಮೆ ಎದೆ ಮುಟ್ಟಿಕೊಂಡು ನಮ್ಮ ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಬಾಕಿ ಇನ್ಯಾರಿಗಲ್ಲದಿದ್ದರೂ ನಿಮಗಷ್ಟೆ ಕೇಳಿಸುವಂತೆ ನೀವು ನೀವೆ ನಿಮ್ಮ ನಿಮಗೆ ಒಂದುಕ್ಷಣ ನಿಜವಾದ ಪ್ರಾಮಾಣಿಕತೆಯಿಂದ ಹೇಳಿ.

ಅರ್ಧ ಎಕರೆ ಅಡಿಕೆ ತೋಟದಂಚಿಗೆ ಆರೆಕರೆ ಕಾಡಿಗೆ ಬೇಲಿ ಸುತ್ತಿ ಅಲ್ಲೂ ಸಸಿ ನೆಟ್ಟು ತೋಟ ವಿಸ್ತರಿಸಿದˌ ಕಾಲೆಕರೆ ಕಾಫಿ ಎಸ್ಟೇಟಿನ ಪಕ್ಕದ ಕೆಲವಾರು ಎಕರೆ ಕಾಡನ್ನ ಕಬಳಿಸಿ ಅಲ್ಲೂ ಕಾಫಿ - ಏಲಕ್ಕಿ ಹಾಕಿ ತಮ್ಮ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಂಡˌ ಮೂರೆಕರೆ ಗದ್ದೆಯ ಸುತ್ತಮುತ್ತಲ ನೂರೆಕರೆ ಕಾನು ಗುಡ್ಡಕ್ಕೆ ಲಗ್ಗೆಯಿಟ್ಟು ಅದನ್ನೂ ತನ್ನ ಬೇಲಿಯೊಳಗೆ ಎಳೆದುಕೊಂಡ ಮಲೆನಾಡು - ಕರಾವಳಿಯ "ಮುಗ್ಧ"(?) ರೈತಾಪಿ ಬೆಳೆಗಾರರ ತಪ್ಪೇನಿಲ್ವ?!


ವಸಾಹತುಶಾಹಿ ಮನಸ್ಥಿತಿˌ ವ್ಯಕ್ತಿ ಪೂಜಕ ವ್ಯಕ್ತಿತ್ವ ಹಾಗೂ ಗುಲಾಮಗಿರಿಗೆ ಸುಶುಪ್ತ ಸಮ್ಮತಿ ನಮ್ಮ "ಭಾರತೀಯ ತಳಿ"ಯ ಹೋಮೋಸೇಪಿಯನ್ ವರ್ಗದ ಪ್ರಮುಖ ಹಾಗೂ ಅನುವಂಶೀಯ ಸಮಸ್ಯೆ.

ಹೀಗಾಗಿಯೆˌ ಆಗುವ ನ್ಯಾಯ - ಅನ್ಯಾಯಗಳನ್ನ ಈ ಮಾನದಂಡಗಳನುಸಾರವೆ ಅಳೆದು ನಮ್ಮ ಮೇಲೆ ನಾವು ನಾವೆ ಹೇರಿಕೊಳ್ಳುತ್ತಿರುತ್ತೇವೆ. ಅದರ ಅಡ್ಡˌ ನೇರˌ ಬಳಸು ಹೀಗೆ ಥರಾವರಿ ಪರಿಣಾಮಗಳಿಂದ ಬಯಸಿ ಬಯಸಿ ಎನ್ನುವಂತೆ ನಿರಂತರ ನರಳುತ್ತಲೂ ಇರುತ್ತೇವೆ. ಈ ಸ್ವಯಂ ಬಂಧನದ ಸ್ವ ಲಿಖಿತ ಲಕ್ಷ್ಮಣ ರೇಖೆಗಳನ್ನ ದಾಟದೆ ಜನ್ಮಜನ್ಮಾಂತರಕ್ಕೂ ನಮಗೆ ಮುಕ್ತಿ ಮರೀಚಿಕೆ.

ಬಿಳಿಯರು ಸಾಹೇಬರುಗಳೆಲ್ಲ ಭಾರತ ತೊರೆದರು ನಿಜ. ಆದರೆˌ ಈ ನಕಲಿ ತಳಿಯ ಕರಿಯ ಸಾಹೇಬರುಗಳೆಲ್ಲ ಸೇರಿ ದೇಶ ದೋಚುವಲ್ಲಿ ತೋರುತ್ತಿರುವ ಅಟ್ಟಹಾಸದ ಮುಂದೆ ಹೋಲಿಸಿದರೆ ಪಾಪˌ ೧೯೦ವರ್ಷಗಳ ಕಾಲ ಯುರೋಪಿಯನ್ನರು ಇಲ್ಲಿ ಆಡಿದ್ದ ಆಟ ತೃಣಕ್ಕೂ ಸಮನಲ್ಲ!


ವಿವೇಕದ ನುಡಿ. ಯಾವಾಗ ಒಬ್ಬ ದುರುಳ ಹಾಗೂ ಧೂರ್ತ ಆಡಳಿತಗಾರ ತನ್ನ ಪ್ರಜೆಗಳ ಅಭಿವೃದ್ಧಿ ಸಾಧಿಸುವುದಲ್ಲಿ ವಿಫಲನಾಗುತ್ತಾನೋˌ ಆಗಾಗ ಅಂತಹ ಅಧಮ ಅಧಿಕಾರಸ್ಥ ದೇಶದ ಐತಿಹಾಸಿಕ ಉನ್ನತಿಯ ಹರುಕು ಬಾವುಟವನ್ನ ಎತ್ತೆತ್ತಿ ಬೀಸುತ್ತಾ ಜನರ ಗಮನವನ್ನ "ಬೋಳು ಮಂಡೆ ಮುಂಡೆಯ ಹಳೆ ತುರುಬಿನತ್ತ" ಸೆಳೆದುˌ ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಾನೆ. ಸಾಲದ್ದಕ್ಕೆˌ ಧರ್ಮ - ಜಾತಿ - ಭಾಷೆ ಹಾಗೂ ಪ್ರಾದೇಶಿಕತೆಯ ಈಟಿ ಭರ್ಜಿ ಖಡ್ಗ ಹಾಗೂ ಗದೆಗಳನ್ನ ತನ್ನ ಮೂರ್ಖ ಪ್ರಜೆಗಳ ಕೈಗಳಿಗೆ ತಲುಪಿಸಿ ಪರಸ್ಪರ ಕಚ್ಚಾಡುತ್ತಾ ಅದರಲ್ಲೆ ಮಗ್ನರಾಗಿರಲು ಮೇಲಿಂದ ಮೇಲೆ ಮಾತಿನ ಪ್ರಚೋದನೆ ಕೊಟ್ಟು ಬಹಿರಂಗವಾಗಿ ಪರಸ್ಪರರ ಮೇಲೆ ಛೂ ಬಿಟ್ಟುˌ ಅವರ ಜಗಳದ ಲಾಭ ಪಡೆದು ಪ್ರಾಕೃತಿಕ ಸಿರಿಯನ್ನ ಕಾನೂನುಬದ್ಧವಾಗಿಯೆ ಸೂರೆ ಮಾಡುತ್ತಾ ದರೋಡೆ ಮಾಡುವವರಿಗೆ ಅನುಕೂಲ ಮಾಡಿಕೊಡುವಂತೆ ಕಾಯಿದೆಗಳನ್ನ ತಿದ್ದಿಸುತ್ತಾ ಇಡಿ ದೇಶವನ್ನˌ ಅದರ ಸಮಸ್ತ ಜನಸಂಖ್ಯೆಯ ಸಮೇತ ಹಾಳು ಗುಂಡಿಗೆ ನೂಕಲು ಹವಣಿಸುತ್ತಲೆ ಇರುತ್ತಾನೆ.

ಟರ್ಕಿ ಚೀನಾ ಮಾತ್ರವಲ್ಲ ಇವತ್ತಿನ ದಿನಮಾನಗಳಲ್ಲಿ ಭಾರತದಲ್ಲೂ ಇದನ್ನೆ ಮಾಡ್ತಾ ಇದ್ದಾರೆ. ಅವರನ್ನ ಹಾಡಿ ಹೊಗಳಿ ಸುಳ್ಳು ಪಳ್ಳು ಕಥೆಗಳನ್ನ ಕಟ್ಟಿ ನಿರಂತರ ಬಹುಪರಾಕ್ ಹಾಕುತ್ತಾ ಅವರ ವೈಫಲ್ಯದ ತೂತುಗಳಿಗೆ ತೇಪೆ ಹಾಕಲು ಅವರವರ ಆಸ್ಥಾನ ಭಟ್ಟಂಗಿಗಳಂತೂ ಸದಾ ಸಿದ್ಧವಾಗಿ ಇದ್ದೆ ಇರ್ತಾರೆ.

No comments: