31 July 2020

ಮರುಕ ಹುಟ್ಟಿಸುವ ಮಲೆನಾಡಿನ ಮರುಳ ಮರಳ ಕಥೆ.

ಈ ವರ್ಷ ಮಲೆನಾಡಿನಲ್ಲಾಗಲಿ ಕರಾವಳಿಯಲ್ಲಾಗಲಿ ವಾಡಿಕೆ ಮಳೆಯಲ್ಲಿ ಶೇಕಡಾ ಮೂವತ್ತು ಅಂದರೆ ಮೂರರಲ್ಲೊಂದು ಭಾಗದಷ್ಟೂ ಮಳೆ ಹನಿದಿರದಿದ್ದರೂ ತುಂಗಾˌ ಭದ್ರಾˌ ಸೀತೆˌ ವಾರಾಹಿˌ ಕಾವೇರಿ ಹಾಗೂ ನೇತ್ರಾವತಿಯಲ್ಲಿ ಭರಪೂರ ನೀರು ಹರಿದು ಹೋಗಿದ್ದು ಅಣೆಕಟ್ಟೆಗಳೆಲ್ಲ ತಮ್ಮ ಗರಿಷ್ಠ ಮಟ್ಟಕ್ಕೆ ತಲುಪಿ ಕೆಲವೆಡೆ ಕ್ರೆಸ್ಟ್ ಗೇಟ್ ತೆಗೆದು ನೀರು ಹೊರ ಬಿಟ್ಟ ಪವಾಡಗಳೂ ನಡೆದು ಹೋಗಾಗಿದೆ!🤨

ಅದ್ಹೆಂಗೆ ಹೀಗಾಗಿದೆ? ಅನ್ನುವ ಪ್ರಶ್ನೆ ನಿಮಗಿದ್ದರೆˌ ಕ್ಷಮಿಸಿ ನಿಮ್ಮಷ್ಟು ಬೋಳುಬೆಪ್ಪರೋ ಅಥವಾ ಜಾಣಕುರುಡರೋ ಮತ್ತೊಬ್ಬರಿರಲಿಕ್ಕಿಲ್ಲ. ಅಲ್ರಿ ಮನಸೋ ಇಚ್ಛೆ ಇರೋ ಬರೋ ಹೊಳೆಗಳಂಚಿಂದ ಅಪರಾ ತಪರಾ ಮರಳು ದೋಚಿದರೆ ಇನ್ನೆಂತ ಆಗ್ತದೆ ಮತ್ತೆ?😬

ಮನುಷ್ಯನ ಮಿತಿ ಮೀರಿದ ದುರಾಸೆ ಹಾಗೂ ಧನ ದಾಹಕ್ಕೆ ಬಲಿಯಾದದ್ದು ಸಮೃದ್ಧ ಮರಳ ದಂಡೆ ಹೊಂದಿದ್ದ ಹೊಳೆಗಳಂಚಿನ ಹೊಯಿಗೆ ದಿಬ್ಬಗಳು. ಮೊದಲೆಲ್ಲ ಗಂಧ ಕಳ್ಳಸಾಗಣಿಕೆ ಮಾಡಿ ಊರು ಮನೆಯಲ್ಲಿ ಸಂಭಾವಿತರಂತೆ ಸೋಗು ಹಾಕಿಕೊಂಡು ಬದುಕುತ್ತಿದ್ದ ಬಸ್ಟ್ಯಾಂಡ್ ಮೂರು ಮಾರ್ಕಿನ ಬೀಡಿ - ಹಾಫ್ ಕ್ವಾಟ್ರು ರಮ್ಮಿನ ಗಿರಾಕಿಗಳೆಲ್ಲ ಈಗ ಸುಲಭವಾಗಿ ದೋಚಲು ಸಾಧ್ಯವಿರುವ ಮರಳನ್ನ ದೋಚಿ ಬೆಂಗಳೂರಿಗೆ ಸ್ಮಂಗ್ಲಿಂಗ್ ಮಾಡಿಕೊಂಡು ದುಂಡಗಾಗ್ತಿವೆ. ದಯವಿಟ್ಟು ಇನ್ಯಾರೂ ಮಲೆನಾಡಿಗರು ಮುಗ್ಧರು ಹಳ್ಳಿಗರು ವಿಶಾಲ ಹೃದಯದವರು ಅಂತೆಲ್ಲ ಬೊಗಳೆ ಹೊಡೆದು ತೇಪೆ ಹಾಕಬೇಡಿ. ಯಾವಾಗ ಹೋಂ ಸ್ಟೇಯಂತ ಆತಿಥ್ಯವನ್ನೆ ಹಣ ಗಬರುವ ಮಾರ್ಗವಾಗಿಸುವತ್ತ ಮಲೆನಾಡಿಗ ಹೊರಳಿದರೋ ಅವತ್ತೆ ಅವರ ಮುಗ್ಧತೆಯಲ್ಲಿ ಮಲೆ ಹತ್ತಿ ಹೋಗ್ಯಾಗಿದೆ.🤧

ಉದಾಹರಣೆಗೆ ತೀರ್ಥಹಳ್ಳಿಯಿಂದ ಶಿವಮೊಗ್ಗದ ತನಕ ಹರಿವ ತುಂಗಾ ತಟವನ್ನೆ ತಗೊಳ್ಳಿˌ ಹೆಚ್ಚಂದ್ರೆ ಎಪ್ಪತ್ತು ಕಿಲೋಮೀಟರ್ ಹರಿವಿನ ಪಾತ್ರವಿರೋ ಅಲ್ಲೀಗ ಹದಿನಾಲ್ಕು ಲೀಗಲ್ ಹಾಗೂ ಅದರ ದುಪ್ಪಟ್ಟು ಅಕ್ರಮ ಮರಳು ಕ್ವಾರಿಗಳು ತಲೆಯೆತ್ತಿ ಲೂಟಿ ನಿರಂತರವಾಗಿದೆ. ಅಧಿಕಾರಿ ವರ್ಗ ಹಾಗೂ ರಾಜಕಾರಣಿಗಳ ದುಷ್ಟಕೂಟದ ಮಿಲಾಖತ್ ಇರೋ ಈ ದಂಧೆ ಕೋಟ್ಯಾಂತರ ರೂಪಾಯಿ ವಾಹಿವಾಟಿನದಾಗಿದ್ದುˌ ಹತ್ತು ಹನ್ನೆರಡು ಸಾವಿರಕ್ಕೆ ಸ್ಥಳಿಯವಾಗಿ ತೆಗೆಯಲಾಗುವ ಲೋಡು ಮರಳಿಗೆ ಬೆಂಗಳೂರಲ್ಲಿ ಅದರ ಎಂಟು ಪಟ್ಟು ಬೆಲೆ ಕಟ್ಟಲಾಗ್ತಿದೆ ಅಂದ್ರೆ ಕೊಳ್ಳೆ ಹೊಡೆಯಲಾಗುತ್ತಿರೋ ಮರಳಿನ ಹಾಗೂ ಹಡಬೆ ದುಡ್ಡಿನ ಪ್ರಮಾಣ ಊಹಿಸಿ ಒಂದು ಕ್ಷಣ.😉

ಇದಕ್ಕೆ ಆಳುವ ಅಧಿಕಾರಿ ಹಾಗೂ ರಾಜಕೀಯ ನಾಲಾಯಕರನ್ನ ದೂರಿ ಪ್ರಯೋಜನವಿಲ್ಲ. ಊರಿನ ದೇವಸ್ಥಾನˌ ಜಾತ್ರೆˌ ಕ್ರಿಕೆಟ್ ಪಂದ್ಯಾವಳಿˌ ಮಾರಿ ಜಾತ್ರೆˌ ಯುವಕ ಸಂಘದ ಕ್ರೀಡಾಕೂಟˌ ಗಣಪತಿ ಕೂರ್ಸದುˌ ಕಬಡಿ ಪಂದ್ಯಾವಳಿ ಮುಂತಾದ ತರತರದ ಹೆಸರಿನ ಚಂದಾ ಪುಸ್ತಕಗಳಿಗೆ ಕಣ್ಣುಮುಚ್ಚಿ ಸಾವಿರಾರು ರೂಪಾಯಿಯ ಮೂಳೆ ಎಸೆದು ಸ್ಥಳಿಯ ಆಶಾಢಭೂತಿ ಯುವಕರನ್ನ ಬುಕ್ ಮಾಡಿಕೊಂಡಿರೋ ಅವರ ತಪ್ಪೇನಿದೆ ಇದರಲ್ಲಿ? ಅವರ ಎಂಜಲು ದುಡ್ಡಿಗೆ ಸ್ಥಳಿಯರೆ ತಮ್ಮನ್ನ ತಾವು ಮಾರಿಕೊಳ್ಳಕ್ಕೆ ತಯಾರಾಗಿರೋವಾಗ? ಜೊತೆಗೆ ಇವಕ್ಕೂ ಅಷ್ಟಿಷ್ಟು ಪುಗ್ಸಟ್ಟೆ ಮರಳು ದೋಚಲು ಮುಕ್ತ ಅವಕಾಶ ಬೇರೆ ಇರ್ತದಲ್ಲ. ಕೋಟಿ ಕೊಳ್ಳೆ ಹೊಡೆಯುವವರಿಗೆ ಸಾವಿರಾರು ರೂಪಾಯಿಯ ಚಂದಾ ಕೊಡೋದೇನೂ ದೊಡ್ ವಿಷ್ಯ ಅಲ್ಲ ಬಿಡಿ.🤪

ಹೀಗಾಗೆˌ ಅಂತರ್ಜಲ ವೃದ್ಧಿಸುವ ನೈಸರ್ಗಿಕ ಫಿಲ್ಟರ್ ಆಗಿದ್ದˌ ಮೀನುˌ ಆಮೆˌ ಮೊಸಳೆ ಹಾಗೂ ಹಾವುಗಳ ಹೆರಿಗೆ ಮನೆಯಾಗಿದ್ದ ಮರಳ ದಂಡೆಗಳು ರಾತ್ರೋರಾತ್ರಿ ಮಾಯವಾಗ್ತಿವೆ. ಹೀಗಾಗಿ ಇಂಗಲಾರದ ಅಲ್ಪ ಮಳೆಯ ನೀರೂ ಸಹ ಇಕ್ಕೆಲ ದಡಗಳ ಮೆಕ್ಕಲು ಮಣ್ಣನ್ನ ಕೊರೆಯುತ್ತಾ ಅಣೆಕಟ್ಟುಗಳ ಕೆಸರಿನ ಸಿಲ್ಟು ಹೆಚ್ಚಿಸ್ತಾ ತುಂಬಿದ ಹಾಗೆ ಕಾಣೋ ಅಣೆಕಟ್ಟೆಗಳಿಂದ ತುಂಬಿ ತುಳುಕಿ ಸಮುದ್ರಮುಖಿಯಾಗ್ತಿವೆ. ನಿಧಾನವಾಗಿ ಮಲೆನಾಡು ಬರಿದಾಗಿ ಬಯಲು ಸೀಮೆಯಾಗ್ತಿದೆ.😖

ಮೊದಲು ನೂರಿನ್ನೂರು ಅಡಿಗೆ ನೀರು ಸಿಗ್ತಿದ್ದ ಹೊಳೆ ಬದಿ ಬಾವಿಗಳಲ್ಲೂ ಈಗ ಸಾವಿರ ಅಡಿ ಕೊರೆದರೆ ಮಾತ್ರ ನೀರು ಅನ್ನೋ ದುರಾವಸ್ಥೆಗೆ ಬಂದಾಗಿದೆ. ಹಣದ ದುರಾಸೆ ಮಲೆನಾಡಿಗರ ಮನಸು ಕೆಡಿಸಿದೆ. ನಿಸರ್ಗದ ಸ್ಥಿರತೆ ಯಾರಿಗೂ ಬೇಕಾಗೆ ಇಲ್ಲ ಅನ್ನೋ ಹಂಗಾಗಿದೆ.😎

No comments: