15 September 2012

ಬೈಟು ಮಸಾಲೆ ದೋಸೆ.....




ಚಿಕ್ಕಂದಿನಲ್ಲಿ ನನಗೆ ವಿಪರೀತ ತಿನ್ನುವ ರಾವು ಬಡಿದುಕೊಂಡಿತ್ತು. ಚಂದ-ಬಣ್ಣಬಣ್ಣವಾಗಿ ಕಂಡದ್ದೆಲ್ಲ ಕೊಂಡು ತಿನ್ನುವ ಚಪಲ ನನಗಾಗ. ಆದರೆ ನನ್ನ ಚಡ್ಡಿಯ ಜೇಬು ಒಂದು ಬದಿ ತೂತಾಗಿರುತ್ತಿದ್ದರೆ, ಇನ್ನೊದು ಬದಿ ಖಾಲಿ ಹೊಡೆಯುತ್ತಿತ್ತು. ಇನ್ನು ಹಿರಿಯರೋ, ಯಾರೂ ಅಂಗಡಿ ತಿಂಡಿಗಳನ್ನ ಕೊಡಿಸುತ್ತಲೇ ಇರಲಿಲ್ಲ. ಅಂಗಡಿ ತಿಂಡಿ ತಿಂದರೆ ಆರೋಗ್ಯ ಹುಷಾರು ತಪ್ಪುತ್ತದೆ ಅನ್ನೋದು ಅವರ ಅನುಗಾಲದ ಪಲ್ಲವಿ. ಮನೆಯ ಖರ್ಚುವೆಚ್ಚಗಳನ್ನ ಇರುತ್ತಿದ್ದ ಅಲ್ಪ ಆದಾಯದಲ್ಲೆ ಸರಿದೂಗಿಸುವ ತಂತಿ ಮೇಲಿನ ನಡಿಗೆಯನ್ನ ಮಾಡುವ ಕಾರಣಕ್ಕಾಗಿಯೆ ಬಹುಷಃ ಈ ಸಿದ್ಧ ಎಚ್ಚರಿಕೆಯನ್ನ ಕೊಟ್ಟುಕೊಟ್ಟೆ ಹೊರಗಡೆ ಅಂಗಡಿಗಳ ಮುಂದೆ ಹುಟ್ಟುತ್ತಿದ್ದ ನಮ್ಮಂತಾ ಹಟಮಾರಿ ಮಕ್ಕಳ ತೀರದ ಬೇಡಿಕೆಗಳಿಂದ ಆಗಬಹುದಾಗಿದ್ದ ಸಂಭಾವ್ಯ ಮುಜುಗರಗಳಿಂದ ದೊಡ್ಡವರು ತಪ್ಪಿಸಿಕೊಳ್ಳುವ ಹರ ಸಾಹಸವಾಗಿತ್ತು ಅಂತಾ ಈಗ ಅನ್ನಿಸುತ್ತೆ. ನಮ್ಮ ಮನೆಯಲ್ಲಿ ತೀರ ಹೊಟ್ಟೆ ಬಿರಿಯುವಷ್ಟಲ್ಲದಿದ್ದರೂ ಹೊಟ್ಟೆ ತುಂಬುವಷ್ಟು ಊಟಕ್ಕೆ ಕೊರತೆಯಿರಲಿಲ್ಲ. ನಮ್ಮ ಮನೆ ಅಗತ್ಯಗಳಿಗೆ ಕೇವಲ ಒಂದೆರಡು ಕುಡ್ತೆ ಕರೆದ ಹಾಲನ್ನ ಉಳಿಸಿ ಕೊಂಡ ಅಮ್ಮ ಉಳಿದ ಎಲ್ಲವನ್ನೂ ಮಾರಿ ಮನೆಖರ್ಚಿಗೆ ನಾಲ್ಕು ಕಾಸು ಹೊಂದಿಸುತ್ತಿದ್ದರು. ಅದೂ ಸಾಲದೆ ಬರುತ್ತಿದ್ದರಿಂದ ಹೊಲಿಗೆ ಯಂತ್ರವನ್ನ ಇಟ್ಟುಕೊಂಡು ಯಾರ್ಯಾರದ್ದೋ ಸೀರೆಗಳಿಗೆ ಫಾಲ್ ಹಾಕಿಯೋ, ಇನ್ಯಾರದ್ದೋ ಲಂಗಕ್ಕೆ-ಬ್ಲೌಸಿಗೆ ಅಂಚು ಹೊಲೆದೋ ಇನ್ನೊಂದು ಮೂರು ಕಾಸನ್ನ ಕೂಡುತ್ತಿದ್ದರು. ಪ್ರತಿ ಸಂಜೆ ಮನೆಯ ಜಗಲಿಯ ಮೂಲೆಯಲ್ಲಿದ್ದ ಹೊಲಿಗೆ ಮಿಶೀನಿನ ಎದುರು ಸ್ಟೂಲೊಂದರಲ್ಲಿ ಕೂತು ದಪ್ಪ ಕನ್ನಡಕವೊಂದನ್ನ ಏರಿಸಿಕೊಂಡು ಅವರು ತನ್ಮಯರಾಗಿ ಬೀಳುವ ಹೊಲಿಗೆಯನ್ನೇ ದಿಟ್ಟಿಸುತ್ತಾ, ಯಾಂತ್ರಿಕವಾಗಿ ಮಿಷನ್ನಿನ ಪೆಡಲನ್ನು ತನ್ಮಯರಾಗಿ ತುಳಿಯುತ್ತಿರುವ ಚಿತ್ರ ಹಾಗೆಯೆ ನಿಶ್ಚಲವಾಗಿ ಕಟ್ಟುಹಾಕಿದ ಚಿತ್ರದಂತೆ ನನ್ನ ಮನಸಿನ ಭಿತ್ತಿಯ ಕೀಳಲಾರದ ಮೊಳೆಗೆ ಭದ್ರವಾಗಿ ತೂಗುಬಿದ್ದಿದೆ.

ಅಷ್ಟಕ್ಕೂ ಆಗ ಶಿವಮೊಗ್ಗದ "ಶ್ರೀಗಜಾನನ ಮೋಟರ್ ಸರ್ವಿಸ್"ನಲ್ಲಿ ಡ್ರೈವರ್ ಆಗಿದ್ದ ನಮ್ಮಜ್ಜನಿಗೆ ಬರುತ್ತಿದ್ದ ಪಗಾರವಾದರೂ ಎಷ್ಟು? ಪಿಎಫ್ ವಗೈರೆಗಳೆಲ್ಲ ಕಳೆದನಂತರ ಸುಮಾರು ನಾಲ್ಕುನೂರ ಐವತ್ತಿತ್ತೇನೊ. ಕಳೆದ ಶತಮಾನದ ಎಂಭತ್ತರ ದಶಕದ ಅಂತ್ಯದ ದಿನಗಳವು. ಮದುವೆ ಮಾಡಿ ಕೊಟ್ಟರೂ ತವರಿಗೆ ಮರಳಿ ಬಂದು ಠಿಕಾಣಿ ಹಾಕಿರುವ ಮಗಳು-ಮತ್ತವಳ ಸಂತಾನ ನಾನು, ಇನ್ನುಳಿದಂತೆ ಐದು ಮಕ್ಕಳು, ಹೆಂಡತಿ ಇವರೆಲ್ಲರ ಊಟ ಬಟ್ಟೆಯ ಖರ್ಚು ಕಳೆದು ತನ್ನ ಸಣ್ಣಪುಟ್ಟ ಶೋಕಿಗಳಿಗೂ ಅದರಲ್ಲೆ ನಾಲ್ಕು ಕಾಸು ಉಳಿಸಿಕೊಂಡು ಸಂಬಳದ ಸಣ್ಣ ಪಾಲೊಂದನ್ನ ಅವರು ಆರ್'ಡಿ ಕಟ್ಟುತ್ತಿದ್ದರು. ಮುಂದೆ ಇನ್ನು ಮೂರು ಹೆಣ್ಣು ಮಕ್ಕಳ ಮದುವೆ ಮಾಡುವ ಜವಾಬ್ದಾರಿತೂ ಹೆಗಲ ಮೇಲಿತ್ತಲ್ಲ. ಹೀಗಾಗಿ ಅನಿವಾರ್ಯವಾಗಿ ಕೈಹಿಡಿತದಲ್ಲೇ ಖರ್ಚು-ವೆಚ್ಚಗಳನ್ನ ನಿಭಾಯಿಸುವ ಅನಿವಾರ್ಯತೆ ಅವರಿಗಿತ್ತು. ಹಾಗೆ ನೋಡಿದರೆ ಅಜ್ಜನಿಗೆ ಚಟಗಳೇನೂ ಇರಲಿಲ್ಲ. ನನ್ನಜ್ಜ ಧೂಮಪಾನಿಯಲ್ಲ. ಆದರೆ ಕುಡಿತದ ಶೋಕಿ ಚೂರಿತ್ತು, ಆದರೂ ತನ್ನ ಸ್ವಂತ ಖರ್ಚಿನಲ್ಲಿ ಅವರು ಕೊಂಡು ಕುಡಿದಿದ್ದನ್ನ ನಾಕಾಣೆ! ಯಾರೊ ಸಹುದ್ಯೋಗಿಗಳು ಕೊಡಿಸಿದ್ದಾರೆ ಅಪರೂಪಕ್ಕೊಮ್ಮೆ ಏರಿಸಿರಬಹುದಷ್ಟೆ. ಆಗಾಗ ನಶ್ಯ ಏರಿಸುವ ಸುಖ ಅನುಭವಿಸುವುದನ್ನ ಕಂಡಿದ್ದೆನಾದರೂ ಅದು ನಿರಂತರ ಹವ್ಯಾಸವೇನೂ ಆಗಿರಲಿಲ್ಲ. ಮನೆಗೆ ಬಂದಾಗಲೆಲ್ಲ ಬೆನ್ನಿಗೆ ಕೈ ಕಾಲಿಗೆ ತೆಂಗಿನೆಣ್ಣೆ ಮಾಲೀಸು ಮಾಡಿಸಿಕೊಂಡು ಬಿಸಿಬಿಸಿ ನೀರಲ್ಲಿ ಮೀಯುವ ಚಟ ಮಾತ್ರಾ ಸ್ವಲ್ಪ ಹೆಚ್ಚೇ ಇತ್ತು ಅವರಿಗೆ. ನಾವು ಕಿರಿಯರ್ಯಾರಾದರೂ ನಮ್ಮ ಪುಟ್ಟ ಪುಟ್ಟ ಕೈಗಳಿಂದ ಅವರು ಸಾಕು ಸಾಕು ಅನ್ನುವ ವರೆಗೂ ಬೆನ್ನಿಗೆ ಎಣ್ಣೆ ಹಚ್ಚಿ ತಿಕ್ಕ ಬೇಕಿತ್ತು. ಎಣ್ಣೆ ಹಚ್ಚಿದ ಉಪಕಾರಕ್ಕೆ ಅವರು ಒಂದು ಚೂರು ಚಿಕ್ಕಿ ದಯಪಾಲಿಸುತ್ತಿದ್ದರು ಅನ್ನೋದೇ ನಮ್ಮ ಅಂದಿನ ನಿಷ್ಕಾಮಕರ್ಮಕ್ಕೆ ಪ್ರೇರಕ ಶಕ್ತಿ! ಅದಾದ ಮೇಲೆ ಕಟ್ಟಿ ಕೊಂಡಿರುತ್ತಿದ್ದ ಬರೀ ಲಂಗೋಟಿಯಲ್ಲೆ ಮನೆ ಹಿತ್ತಲಿನಲ್ಲಿದ್ದ ತೆಂಗಿನ ಮರವನ್ನ ಏಣಿಯಿಟ್ಟು ಹತ್ತಿ ಅದರ ಕಸ ಕಿತ್ತು, ಹುಳ ಹುಪ್ಪಡಿ ಕೂರದಂತೆ ಅದರ ಮಡಿಲುಗಳ ಬುಡದಲ್ಲಿ ಅಲ್ಲಲ್ಲಿ ಉಪ್ಪು ತುಂಬಿ, ಪಕ್ಕದಲ್ಲಿದ್ದ ಗೊಬ್ಬರದ ಗುಂಡಿಯನ್ನೊಮ್ಮೆ ಮೇಲೆ ಕೆಳಗೆ ಮಾಡಿ ಹೊಸ ಸೊಪ್ಪು ತುಂಬಿ, ಹೊಸತಾಗಿ ಹಿತ್ತಲಲ್ಲಿ ಎರಡು ಗಿಡ ನೆಟ್ಟು, ಹಿಂದೆ ನೆಟ್ಟಿದ್ದ ಗಿಡಗಳ ಯೋಗಕ್ಷೇಮ ವಿಚಾರಿಸಿಕೊಳ್ಳುವ ಹೊತ್ತಿಗೆ ಅವರ ಬೆವರು ಬಸಿದು ಹೋಗಿರುತ್ತಿತ್ತು. ಅಲ್ಲಿಂದ ನೇರ ಕೊಟ್ಟಿಗೆಗೆ ಧಾವಿಸಿ ತಮ್ಮ ನೆಚ್ಚಿನ ದನಗಳಿಗಷ್ಟು ಅಟ್ಟದಿಂದ ಹುಲ್ಲೆಳೆದು ಹಾಕಿ ಅವುಗಳ ಗಂಗೆದೊಗಳು ತುರಿಸಿ ಅಲ್ಲಲ್ಲಿ ಅವಕ್ಕೆ ಅಂಟಿರಬಹುದಾದ ಉಣುಗನ್ನ ಕಿತ್ತು ಹಾಕುವ ಕಾಯಕ ಮಾಡುತ್ತಿದ್ದರು. ಅಷ್ಟಾಗುವಾಗ ಅಮ್ಮ ಹಂಡೆಯಲ್ಲಿ ಕುದಿಕುದಿ ನೀರು ತಯಾರಿಟ್ಟಿರುತ್ತಿದ್ದರು ಅಲ್ಲಿಗೆ ಅಜ್ಜನ ಮಹಾ ಮಜ್ಜನಕ್ಕೆ ವೇದಿಕೆ ಸಿದ್ಧ ವಾಗಿರುತ್ತಿತ್ತು. ಈ ಸ್ನಾನದ ಮಧ್ಯದಲ್ಲೊಮ್ಮೆ ಅಜ್ಜಿಗೆ ಅವರು ಬೆನ್ನುಜ್ಜಲು ಕೂಗು ಹಾಕೊದಿತ್ತು. ಅಜ್ಜಿ ಆಗ ಏನಾದರೂ ಕೆಲಸದಲ್ಲಿ ವ್ಯಸ್ಥವಾಗಿದ್ದರೆ ಆ ಹೊಣೆ ನನ್ನ ಅಥವಾ ಕಿರಿ ಚಿಕ್ಕಮನ ಕೈಗೆ ಬೀಳುತ್ತಿತ್ತು. ಬಿಡಿಸಿದ್ಸ ಕಾಯಿ ಜುಟ್ಟಿನಲ್ಲಿ ಅವರ ಎಣ್ಣೆಮಯ ಬೆನ್ನನ್ನು ಉಜ್ಜಿ ಉಜ್ಜಿ ಕುದಿ ನೀರನ್ನ ನಾವು ಚೋಪುತ್ತಿದ್ದೆವು. ಅಲ್ಲಿಗೆ ಅಜ್ಜ ಸಂತೃಪ್ತ ಸಂತೃಪ್ತ. ಮತ್ತರ್ಧ ಘಂಟೆ ಅದೇ ಹಬೆಯ ಮತ್ತಿನಲ್ಲಿ ಹಂಡೆ ಎದುರಿನ ಮಣೆಯ ಮೇಲೆ ಕೂತು ಮೆಲ್ಲ ಮೆಲ್ಲ ಮೀಯುತ್ತಾ, ತನ್ನ ಈ ಶೋಕಿಗೆ ಅಜ್ಜಿಯಿಂದ ಪದೆಪದೆ ಅಣಗಿಸಿಕೊಳ್ಳುತ್ತಾ ಅಂತೂ ಹಂಡೆಯ ಕೊನೆಹನಿ ನೀರು ಖಾಲಿಯಾಗುತ್ತಲೂ ಅಜ್ಜನ ಸ್ನಾನ ಕೊನೆಗೂ ಮುಗಿಯುತ್ತಿತ್ತು.


ಅಜ್ಜನ ಕಂಪನಿ ಇದ್ದದು ಸಾಗರದಲ್ಲಿ. ಅವರ ನಿತ್ಯದ ರೂಟು ಇದ್ದದ್ದು ಶಿವಮೊಗ್ಗದಿಂದ ಉಡುಪಿಗೆ. ಕಂಪನಿಯ ಗ್ಯಾರೇಜು ಶಿವಮೊಗ್ಗ ಹೊರವಲಯದ ತೀರ್ಥಹಳ್ಳಿ ರಸ್ತೆಯಲ್ಲಿತ್ತು. ಹತ್ತು ದಿನ ಅಥವಾ ಹದಿನೈದು ದಿನಕ್ಕೊಮ್ಮೆ ಅಜ್ಜ ಮನೆಗೆ ಬರುವುದಿತ್ತು. ಉಳಿದ ದಿನಗಳಲ್ಲಿ ಗ್ಯಾರೇಜಿನ ಮರದ ಬೆಂಚೆ ಅವರ ಶಯನ ತೂಲಿಕಾ ತಲ್ಪ. ಬೆಳಗ್ಯೆ ಐದು ಮೂವತ್ತಕ್ಕೆ ಶಿವಮೊಗ್ಗ ಬಿಡುತ್ತಿದ್ದ ಅವರ ಬಸ್ಸು "ವಿನಯ" ಮಧ್ಯಾಹ್ನ ಉಡುಪಿ ಮುಟ್ಟಿ ಅಲ್ಲಿಂದ ಎರಡೂವರೆಗೆ ಮರಳಿ ಹೊರಟು ರಾತ್ರಿ ಏಳೂವರೆಯ ಸುಮಾರಿಗೆ ಶಿವಮೊಗ್ಗ ಮುಟ್ಟುತಿದ್ದರು. ಹೋಲಿಕೆಯಲ್ಲಿ ಈ ಹೆಗಡೇರ ಬಸ್ಸು ಇನ್ನಿತರ ಮಿನಿ ಬಸ್ಸುಗಳಾದ "ಲಾವಣ್ಯ" "ಗಜೇಂದ್ರ"ಗಳಿಗಿಂತ ವೇಗದಲ್ಲಿ ನಿಧಾನ ಎಂಬ ಆರೋಪ ಹೊತ್ತಿದ್ದರೂ ಸುರಕ್ಷತೆಗೆ ಹೆಸರುವಾಸಿಯಾಗಿತ್ತು. ತಮ್ಮ ಸರ್ವಿಸಿನ ಉದ್ದಕ್ಕೂ ಅವರ ಸೇವಾವಧಿಯ ದಾಖಲೆಯಲ್ಲಿ ಅಫಘಾತದ ಕರಿಚುಕ್ಕೆಯಿಲ್ಲ. ಈ ಐದು ತಾಸಿನ ಒಮ್ಮುಖ ಪ್ರಯಾಣದಲ್ಲಿ ಅವರು ಎರಡು ಕಡೆ ಪ್ರಯಾಣಿಕರ "ಚಾ-ಕಾಪಿ"ಯ ನಿಲುಗಡೆ ನೀಡುತ್ತಿದ್ದರು. ಸಾಮಾನ್ಯವಾಗಿ ಈ ನಿಲುಗಡೆ ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ಮರ್ಜಿಗೆ ಒಳಪಟ್ಟಿರುತ್ತಿತ್ತು. ಅಜ್ಜ ಒಂದು ನಿಲುಗಡೆ ತೀರ್ಥಹಳ್ಳಿಯಲ್ಲಿ ಅವರ ಗೆಳೆಯ ಕಾರಂತರ ಬಸ್ಟ್ಯಾಂಡ್ ಮಯೂರ ಹೋಟೆಲಿನ ಎದುರು ಕೊಡುತ್ತಿದ್ದರೆ, ಇನ್ನೊಂದನ್ನ ಸೋಮೇಶ್ವರದಲ್ಲಿ ಘಾಟಿ ಇಳಿವಲ್ಲಿದ್ದ ಕಾಮತರ ಮನೆ ಹೋಟೆಲಿನಲ್ಲಿ ಕೊಡುತ್ತಿದ್ದರು.

ಅಮ್ಮ ಚಳಿ-ಮಳೆ ಲೆಕ್ಖಿಸದೆ ರಾತ್ರಿ ಅದೆಷ್ಟೇ ಹೊತ್ತಿಗೆ ಹಾಸಿಗೆ ಸೇರಿದ್ದರೂ ಪ್ರತಿನಿತ್ಯ ನಸುಕಿನ ಐದಕ್ಕೆ ಹಾಸಿಗೆ ಬಿಟ್ಟೆದ್ದು, ಬೆಳಗಿನ ತಿಂಡಿಗೂ ಮೊದಲೆ ಅನ್ನ-ಸಾರನ್ನು ತರಾತುರಿಯಲ್ಲಿ ತಯಾರಿಸಿ ಅಜ್ಜನ ಮಧ್ಯಾಹ್ನದ ಬುತ್ತಿಯನ್ನ ತಯಾರಿಸಿ ಕಟ್ಟಿಟ್ಟು ಬಿಡುತ್ತಿದ್ದರು. ನೀರಿನ ಬಾಟಲಿ-ಚಾದ ಬಾಟಲಿ ಜೊತೆಗೆ ಬಟ್ಟೆಯ ಕೈ ಚೀಲವೊಂದರಲ್ಲಿ ಹಾಕಿಟ್ಟ ಆ ಊಟದ ಬುತ್ತಿಯನ್ನ ಮೊದಮೊದಲಿಗೆ ನನ್ನ ಚಿಕ್ಕಮ್ಮಂದಿರು ಬೆಳಗ್ಯೆ ಸಂಜೆ ಬಸ್ಟ್ಯಾಂಡ್'ಗೆ ಹೋಗಿ ತಲುಪಿಸಿ ಬರುತ್ತಿದ್ದರು. ಹೊತ್ತಿಗೊಬ್ಬರಂತೆ ಚಿಕ್ಕಮ್ಮಂದಿರು ಈ ಕೆಲಸವನ್ನ ಹಂಚಿಕೊಂಡು ಮಾಡುವ ಪೈಪೋಟಿಯ ಹಿಂದಿದ್ದ "ರಾಜರಹಸ್ಯ" ಏನೆಂಬುದು ಅರಿವಾದ ನಂತರ ನಾನೂ ಈ ಅನ್ನ ಹೊರುವ ಪುಣ್ಯ ಕಾರ್ಯದಲ್ಲಿ ಯಾರೂ ಬಯಸದೆ ಬಂದ(?) ಪಾಲುದಾರನಾದೆ. ಅಮ್ಮನ ಕಟ್ಟುನಿಟ್ಟಿಗೆ ಎದುರಾಡಲಾಗದೆ ತಮ್ಮ ಬೇಡಿಕೆ ಪಟ್ಟಿಗಳನ್ನೆಲ್ಲ ಒಳಗೊಳಗೇ ಅದುಮಿಡುತ್ತಿದ್ದ ಅವರಿಬ್ಬರಿಗೂ ಅಜ್ಜನ ಮುಂದೆ ಅವನ್ನ ಇಟ್ಟು ಮಂಜೂರು ಮಾಡಿಸಿಕೊಳ್ಳೋದು ಅಷ್ಟು ಕಷ್ಟವಾಗುತ್ತಿರಲಿಲ್ಲ. ಮೊದಮೊದಲು ಪ್ರತಿ ಬಾರಿ ಇಂತಹ ಬೇಡಿಕೆ ಬಂದಾಗಲೂ ಸಿಟ್ಟಾದಹಾಗೆ ವಾಡಿಕೆಯಂತೆ ನಟಿಸುತ್ತಿದ್ದ ಅಜ್ಜ. ಇನ್ನೇನು ಸ್ಟಿಯರಿಂಗ್ ಮುಂದಿನ ತಮ್ಮ ಸಿಂಹಾಸನದಲ್ಲಿ ವಿರಾಜಮಾನರಾಗುವ ಹೊತ್ತಲ್ಲಿ ಏನೋ ದೊಡ್ಡ ಯೋಜನೆಯೊಂದನ್ನು ಮಂಜೂರು ಮಾಡುವ ಪ್ರಧಾನಮಂತ್ರಿಯ ಗೆಟಪ್ಪಿನಲ್ಲಿ ಚಿಕ್ಕಮಂದಿರ ಚಿಲ್ಲರೆ ಬೇಡಿಕೆಗಳನ್ನೆಲ್ಲ ಕ್ಷಣಮಾತ್ರದಲ್ಲಿ ತಮ್ಮ ಜೇಬಿಗೆ ಕೈ ಇಳಿಸಿ ದಯಪಾಲಿಸಿ ಬಿಡುತ್ತಿದ್ದರು! ಅದಕ್ಕೂ ಮೊದಲು ಅವರಿಗೆ ಕಾರಂತರ ಹೋಟೆಲಿನ ಮಸಾಲೆದೋಸೆ ಅಥವಾ ಗೋಲಿಬಜೆಯ ಸಮಾರಾಧನೆ ನೊರೆನೊರೆ ಕಾಫಿಯೊಂದಿಗೆ ಆಗುತ್ತಿತ್ತು. ಇವೆರಡರ ಆಕರ್ಷಣೆಗೆ ಬಲಿಯಾದ ಚಿಕ್ಕಮ್ಮಂದಿರು ಅಪ್ಪನಿಗೆ ಬುತ್ತಿ ಹೊರಲು ಪೈಪೋಟಿ ನಡೆಸುವಾಗ ನಾನು ಎರಡನೆ ಕಾರಣಕ್ಕೆ ಮಾತ್ರ ಮನಸೋತಿದ್ದೆ. ಹಣ ಎಂಬ ಕ್ಷುಲ್ಲಕ ವಸ್ತುವಿನ ಮೌಲ್ಯ ಆಗಿನ್ನೂ ನನ್ನ ಮಡ್ಡ ತಲೆಗೆ ಏರಿರಲಿಲ್ಲವಲ್ಲ.

ಬಸ್ಸೊಂದು ತನ್ನ ಪ್ರಯಾಣದ ಮಧ್ಯೆ ಹೀಗೆ ಹೋಟೆಲಿನ ಮುಂದೆ ವಿರಾಮಾಕ್ಕೆ ನಿಂತಾಗ ಆಗುವ ವ್ಯಾಪಾರಕ್ಕೆ ಬದಲಾಗಿ ಹೋಟೆಲಿನ ಮಾಲೀಕ ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಗೆ ಪುಡಿಗಾಸು ಹಾಗೂ ಉಚಿತ ಕಾಫಿ-ತಿಂಡಿ ಒದಗಿಸುತ್ತಿದ್ದರು. ಆ ಉಚಿತ ತಿಂಡಿಯನ್ನ ಅಜ್ಜ ಬುತ್ತಿ ಕೊಂಡೊಯ್ಯುವ ನಮಗೆ ತಿನ್ನಿಸುತ್ತಿದ್ದರು. ಬೆಳಗ್ಯೆ ಗ್ಯಾರೇಜಿನ ತಮ್ಮ ಕೋಣೆಯಲ್ಲಿಯೇ ಕಾಸಿದ ಕಣ್ಣ ಚಹಾ (ಹಾಲು ಹಾಕದ ಚಹಾದ ಕಷಾಯ) ಹಾಗೂ ಒಣಗಿದ ಒಂದು ಬನ್ನನ್ನಷ್ಟೆ ಹೊಟ್ಟೆಗೆ ಹಾಕಿರುತ್ತಿದ್ದ ಆ ಜೀವ ನಿಜವಾದ ಬೆಳಗಿನ ತಿಂಡಿಯನ್ನ ಕಾಣುತ್ತಿದ್ದುದೆ ಸೋಮೇಶ್ವರದ ಕಾಮತರ ಮನೆ ಹೋಟೆಲನ್ನ ಮುಟ್ಟಿದಾಗ. ಆ ನಡುವೆ ಮೂರೂ ಮುಕ್ಕಾಲು ಘಂಟೆ ತಗಲುತ್ತಿದ್ದ ನೂರಾ ಹತ್ತು ಕಿಲೋಮೀಟರಿನ ಧೀರ್ಘ ಪ್ರಯಾಣಕ್ಕೆ ಅವರಿಗೆ ಬಲ ಸಿಗುತ್ತಿದ್ದುದು ಶಿವಮೊಗದ್ದಲ್ಲಿ ಕುಡಿದಿರುತ್ತಿದ್ದ ಕಣ್ಣ ಚಾ ಹಾಗೂ ಕಾರಂತರ ಹೋಟೆಲಿನ ಅರ್ಧ ಕಾಫಿಯಿಂದ ಮಾತ್ರ! ಈ ಹಸಿದ ಹೊಟ್ಟೆ ಹೊತ್ತೇ ಅವರು ನಿತ್ಯ ಸಾವಕಾಶವಾಗಿ ಪ್ರಯಾಣಿಕರಿಂದ ಕಿಕ್ಕರಿದು ತುಂಬಿದ ಬಸ್ಸನ್ನ ಕಡಿದಾದ ರಸ್ತೆಯ ಆಗುಂಬೆ ಘಾಟಿಯಲ್ಲಿಳಿಸುತ್ತಿದ್ದರು.

ಕಾರಂತರ ಹೋಟೆಲಿಗೆ ಹೋಗುವ ಬುತ್ತಿ ಯಾತ್ರೆಯಲ್ಲಿ ನಾನೂ ಬಾಲವಾದ ನಂತರ ನನಗೂ ಬೈಟು ಮಸಾಲೆ ದೋಸೆ ಸವಿಯುವ ಭಾಗ್ಯ ಲಭ್ಯವಾಯಿತು. ಮಸಾಲೆ ದೋಸೆ ಸಿಗುತ್ತಿದ್ದುದು ಅರ್ಧವೆ ಆದರೂ ಚಟ್ನಿ ಮಾತ್ರ ಮೂರ್ನಾಲ್ಕು ಬಾರಿ ಕೇಳಿ ಹಾಕಿಸಿಕೊಳ್ಳುತ್ತಿದ್ದೆ! ಕಾಫಿಗೆ ತುಂಬಾ ನೊರೆ ಬೇಕೇಬೇಕು ಅಂತ ನಾವಿಬ್ಬರೂ ಹಟ ಹಿಡಿಯುತ್ತಿದ್ದರಿಂದ ಅಡುಗೆ ಭಟ್ಟರು ಕೈಪಾತ್ರೆಯಲ್ಲಿ ಎತ್ತಿಎತ್ತಿ ಹೊಡೆದು ನೊರೆ ಎಬ್ಬಿಸಿಯೆ ಕಾಫಿ ಕೊಡುತ್ತಿದ್ದರು. ನೋರೆಯಿಲ್ಲದ ಕಾಫಿ ಕಾಫಿಯೇ ಅಲ್ಲ ಅನ್ನೋದು ನಮ್ಮ ಒಕ್ಕೊರಲ ಅಭಿಪ್ರಾಯವಾಗಿತ್ತು. ನಾವು ಬರಗೆಟ್ಟವರಂತೆ ದೋಸೆ ಮುಕ್ಕುತ್ತಿದ್ದದ್ದನ್ನ ಅಜ್ಜ ಅಕ್ಕರೆ ತುಂಬಿದ ಮಮತೆಯ ಕಂಗಳಿಂದ ದಿಟ್ಟಿಸುತ್ತಾ ಅರ್ಧ ಕಾಫಿ ಕುಡಿದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು! ಮನೆಯ ಏಕತಾನತೆಯ ತಿಂಡಿ ತಿನುಸುಗಳ ನಡುವೆ ನಮಗೆ ಸಿಗುತ್ತಿದ್ದ ಏಕೈಕ ಹೊರಗಿನ ತಿಂಡಿ ಎಂದರೆ ಇದೊಂದೆ.

ಇಂದು ಅದನ್ನೆಲ್ಲ ನೆನೆದರೆ ಅದೇ ಮಸಾಲೆ ದೋಸೆಗಾಗಿ ಒಂದು ಕಾಲದಲ್ಲಿ ಚಡಪಡಿಸುತ್ತಿದ್ದ ನನ್ನ ಕರಳು ಚುರುಕ್ ಎನ್ನುತ್ತದೆ. ತಾನು ಉಪವಾಸವಿದ್ದು ನಮ್ಮೆಲ್ಲರ ಹೊಟ್ಟೆ ತುಂಬಿಸಿದ್ದ ಅಜ್ಜ ಹಾಗೂ ಅಮ್ಮನ ತ್ಯಾಗಕ್ಕೆ ಕಣ್ತುಂಬಿ ಬರುತ್ತದೆ. ಬೆಳಗ್ಯೆ ಕಟ್ಟಿಕೊಟ್ಟ ಅನ್ನ ನೂರು ಕಿಲೋಮೀಟರ್ ದೂರದ ಉಡುಪಿ ಮುಟ್ಟುವಾಗ ಆರಿ ಸೆಖೆಗೆ ಹಳಸಿ ಹೋಗಿದ್ದರೂ, ಸಂಜೆಯ ಬುತ್ತಿ ಅರವತ್ತು ಕಿಲೋಮೀಟರ್ ದೂರದ ಶಿವಮೊಗ್ಗ ಮುಟ್ಟುವಾಗ ಆರಿ ತಣ್ಣಗಾಗಿ ಹೋಗಿದ್ದರೂ ಅಜ್ಜ ಅದನ್ನೆ ತಿಂದು ತಮ್ಮ ಎಲ್ಲಾ ಸುಖಗಳನ್ನ ನಮಗೆ ದಾಟಿಸಿ ಕಷ್ಟದಲ್ಲಿ ಬಾಳುವುದನ್ನೆ ಮನಪೂರ್ವಕವಾಗಿ ಆಯ್ದುಕೊಂಡಿದ್ದರು. ಇಂದು ನನ್ನಜ್ಜ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಸೇರಿದ್ದಾರೆ. ಅಮ್ಮ ಅವರನ್ನ ಮೊದಲಿನ ಅದೇ ಮುತುವರ್ಜಿಯಿಂದ ಅಷ್ಟೆ ಅಸ್ಥೆ ವಹಿಸಿ ನೋಡಿಕೊಳ್ಳುತ್ತಿದ್ದಾರೆ. ನಾವೆ ಅನ್ನದ ಬೆನ್ನು ಹತ್ತಿ ರುವ ಪಿಳ್ಳೆನೆವ ಹೇಳುತ್ತಾ ದೂರದ ಊರುಗಳಲ್ಲಿ ಗಾಣದೆತ್ತಿನಂತೆ ದುಡಿಯುತ್ತಾ ನಮ್ಮ ನೈತಿಕ ಜವಾಬ್ದಾರಿಗಳಿಂದ ನುಣುಚಿ ಕೊಳ್ಳುತ್ತಿದ್ದೆವೇನೋ ಅನ್ನುವ ಅಪರಾಧಿ ಪ್ರಜ್ಞೆ ಈ ನಡುವೆ ಎಡಬಿಡದೆ ಕಾಡುತ್ತಿದೆ.

14 September 2012

ಬಿಡೆನು ನಿನ್ನ ಪಾದ.......




















( ಒಂದು ಸೀಮೆಯ ಎಣ್ಣೆ ಪುರಾಣ! )




ಮಳೆ ನಾಡೂ ಆಗಿದ್ದ ಮಲೆನಾಡಿನ ತೀರ್ಥಹಳ್ಳಿ ಒಂಥರಾ ಬಸಿರಾದ ಮೋಡಗಳ ಹೆರಿಗೆ ಮನೆ. ಪರವೂರಿಗೆ ಮದುವೆ ಮಾಡಿಕೊಟ್ಟಿದ್ದರೂ ಮನೆ ಮಗಳಂದಿರಾದ ಮುಗಿಲ ಸುಂದರಿಯರು ತಪ್ಪದೆ ತಮ್ಮ ಪ್ರತಿ ಹೆರಿಗೆಗಾಗಿಯೂ ತಪ್ಪದೆ ತವರನ್ನೆ ಹುಡುಕಿಕೊಂಡು ಬಂದು ಮುಟ್ಟುತ್ತಿದ್ದರು. ಹೀಗಾಗಿ ಅಲ್ಲಿ ನಿರಂತರ ವರ್ಷದ ಎಂಟು ತಿಂಗಳೂ ಮಳೆಯದ್ದೆ ಕಾರುಬಾರು. ಅವರ ಹೆರಿಗೆ ಮಾಡಿಸುವ ಸೂಲಗಿತ್ತಿಯರಾಗುವ ನಿರಂತರ ಕೆಲಸಕ್ಕೆ ಮಾನಸಿಕವಾಗಿ ಸಿದ್ಧರಾಗಿರುತ್ತಿದ್ದ ಇಲ್ಲಿನ ಸತ್ಪ್ರಜೆಗಳು ತಮ್ಮ ಎಲ್ಲಾ ಸಣ್ಣತನಗಳ ಸಹಿತ ಮಳೆಯನ್ನೂ ಮನೆಯ ಒಬ್ಬ  ಸದಸ್ಯನಂತೆಯೆ ಪರಿಗಣಿಸಿ ಅದರ ಬಗ್ಗೆ ಪರಮ ನಿರ್ಲಕ್ಷ್ಯ ವಹಿಸುವುದನ್ನು ರೂಢಿ ಮಾಡಿಕೊಂಡಿದ್ದರು. ಅಪರೂಪಕ್ಕೆ ಬರುವ ನೆಂಟರಿಗೆ ಮಾತ್ರ ತಾನೆ ವಿಶೇಷ ಮರ್ಯಾದೆ? ದಿನ ಬಿಟ್ಟು ದಿನ ಬರುವವಳು ಮನೆ ಮಗಳೇ ಆಗಿರಲಿ ಏನೀಗ? ಅನ್ನೋ ಉದಾಸೀನತೆ ಅದು. ಮಳೆಗೆ ಕ್ಯಾರೆ ಅನ್ನದೆ ತೀರ್ಥಹಳ್ಳಿ ತನ್ನ ಸೀಮಿತ ಪ್ರಪಂಚದಲ್ಲಿ ಸದಾ ತನ್ಮಯವಾಗಿಯೇ ಇರುವುದನ್ನು ಅಭ್ಯಾಸ ಮಾಡಿಕೊಂಡಿತ್ತು. ಎಲ್ಲರ ಮನೆಗೂ ಇಂದಿನಂತೆ ಅಡುಗೆ ಅನಿಲ ಸಂಪರ್ಕ ಇದ್ದಿಲ್ಲದ ದಿನಗಳವು. ಅಂದಿಗೆ ಅದು ಕೇವಲ ಉಳ್ಳವರ ಸೊತ್ತಾಗಿದ್ದು, ಮೇಲ್ಮಧ್ಯಮವರ್ಗ ಕರೆಂಟಿನ ಜೊತೆ ಸೀಮೆ ಎಣ್ಣೆಯನ್ನೂ ಹೊಂದಿಸಿಕೊಂಡು ಹೇಗೋ ಕಾಳಿಬೋಳಿ ಮಾಡಿ ಕಾಲ ಹಾಕುತ್ತಿದ್ದರೆ, ಬಡವರ್ಗ ಕೇವಲ ಸೀಮೆ ಎಣ್ಣೆಗೆ ಶರಣು ಹೋಗಿರುತ್ತಿತ್ತು. ಸರಕಾರಿ ನ್ಯಾಯ ಬೆಲೆ ಅಂಗಡಿಯ ಸೀಮೆ ಎಣ್ಣೆ ವಿತರಕ ಪದ್ಮನಾಭ ಪಟ್ಟಣದ "ವಿನೀತ" (ಈ ವಿನೀತ ಭಾವ ನೀರ ಮೇಲಿನ ಗುಳ್ಳೆಯಂತೆ ಸೀಮೆ ಎಣ್ಣೆ ಕೊಡುವ ದಿನಕ್ಕೆ ಮಾತ್ರ ಸೀಮಿತ ಅನ್ನೋದು ಗಮನಾರ್ಹ) ಪ್ರಜೆಗಳ ಪಾಲಿಗೆ ಸೀಮೆ ಎಣ್ಣೆ ಸ್ಟಾಕ್ ಇರುವ ಎರಡು ಮೂರು ದಿನ ಸಾಕ್ಷಾತ್ ಧರೆಗಿಳಿದ ಭಗವಂತನೆ ಆಗಿರುತ್ತಿದ್ದ.

ನೊರೆನೊರೆ ಸೀಮೆ ಎಣ್ಣೆಯನ್ನ ಆತ ಮೊಗೆ ಮೊಗೆದು ಕೊಡುವಾಗ ಕ್ಷೀರ ಸಾಗರದಿಂದ ಆತ ಅಮೃತವನ್ನೇ ಮೊಗೆದು ತಮ್ಮ ಬಾಟಲು-ಕ್ಯಾನುಗಳಿಗೆ ಯಥಾಶಕ್ತಿ ತುಂಬುತ್ತಿದ್ದಾನೇನೋ(?) ಎನ್ನುವಂತೆ ಭಕ್ತಿ ಪರವಶರಾಗಿ ಅವನ ಟೆಂಪರ್ವರಿ ಭಕ್ತ ಕೋಟಿ ಅರ್ಧ ನಿಮೀಲಿತ ಕಣ್ಣುಗಳಿಂದಲೆ ಆ ಪುಣ್ಯ ಕಾರ್ಯವನ್ನ ದಿಟ್ಟಿಸುತಿದ್ದರು. ತಮ್ಮ ಕ್ಯಾನಿನ ಸರದಿ ಬಂದ ಆ ಶುಭ ಸಮಯದಲ್ಲಿ ಕಳೆದ ನಾಲ್ಕಾರು ಘಂಟೆಗಳ ಕಾಲ ಕೇವಲ ಹತ್ತು ಲೀಟರ್ ಸೀಮೆಎಣ್ಣೆಗಾಗಿ ಅಂಗಡಿಯ ಅಂಗಳ ದಾಟಿ ರಸ್ತೆಯಾಚೆ ಮುಂದೆ ಹೋಗಿದ್ದ ಉದ್ದಾನುದ್ದಾ ಸಾಲಿನಲ್ಲಿ ನಿಂತು ಜಾತಕ ಪಕ್ಷಿಯಂತೆ ಕಾತರಿಸಿದ್ದ ಕಾಲು ನೋವೆಲ್ಲ ಅವರಿಗೆ ಮರೆತೆ ಹೋಗಿರುತ್ತಿತ್ತು. ಸೀಮೆಎಣ್ಣೆಗೆ ಪೈಪೋಟಿ ಕೊಡುವಂತೆ ಎಣ್ಣೆ ಸುರಿಯುತ್ತಿದ್ದ ವಿತರಕನ ಎಣ್ಣೆಮುಖವೂ ಆ ಒಂದು ಕ್ಷಣ ಪ್ರಪಂಚದಲ್ಲಿಯೆ ಪರಮ ಸುಂದರವಾಗಿ ಅವರ ಸೋತು ಸುಣ್ಣವಾದ ಕಣ್ಣಿಗೆ ಕಾಣಿಸುತ್ತಿತ್ತು. ಇನ್ನೂ ಅವನ ಕೃಪಾ ಕಟಾಕ್ಷ ಗಿಟ್ಟಿಸಿ ನಾಲ್ಕಾರು ಹಾನಿ ಹೆಚ್ಚು ಹಾಕಿಸಿಕೊಳ್ಳುವ ತವಕದಲ್ಲಿ ಕೆಲವರಂತೂ ಆವನ ಮುಂದೆ ವಿಪರೀತ ವಿನಯ ನಟಿಸುತ್ತಿದ್ದರು. ಅದೇನೆ ಇದ್ದರು ಆತ ಲೀಟರಿನಲ್ಲಿ ಕನಿಷ್ಠ ಹತ್ತರಲ್ಲೊಂದು ಭಾಗ ಮುಲಾಜಿಲ್ಲದೆ ದೋಖಾ ಹಾಕುತ್ತಿದ್ದ. ಅದರರಿವಿಲ್ಲದ ಈ ಮುಗ್ಧರು ಅಂತಹ ಯಕಶ್ಚಿತ್ ಮೋಸಕ್ಕೆಲ್ಲ ತಾವು ತಲೆಕೆಡಿಸಿಕೊಳ್ಳದೆ ಬರುವ ತಿಂಗಳು ಮತ್ತೆ ಯಾವತ್ತು ಮತ್ತೆ ಈ ಕ್ಯೂ ನಿಲ್ಲಬೇಕು? ಅಲ್ಲಿಯವರೆಗೂ ಈ ತಿಂಗಳ ಕೋಟಾವನ್ನ ಹೇಗೆ ಸಂಭಾಳಿಸಿಕೊಳ್ಳಬೇಕು ಅಂತ ಮನದಲ್ಲಿಯೇ ಲೆಕ್ಖ ಹಾಕುತ್ತಾ ಮನೆಯ ಹಾದಿ ಹಿಡಿಯುತ್ತಿದ್ದರು. ಈ ಸಭ್ಯತೆಯ ಸೋಗೆಲ್ಲ ಕೇವಲ ಆ ಮೂರು ಪವಿತ್ರ ದಿನಗಳೊಂದಿಗೆ ಮುಗಿದು ಹೋಗಿ ಮುಂದಿನ ಕೋಟಾದ ದಿನ ತಡವಾದಂತೆಲ್ಲಾ  (ಅದು ಹೇಗೊ ಪ್ರತಿ ತಿಂಗಳೂ ಸೀಮೆಎಣ್ಣೆ ತೀರ್ಥಹಳ್ಳಿಗೆ ತಡವಾಗಿಯೆ ಬರುತ್ತಿತ್ತು! ಎಂದೂ ಸರಿಯಾದ ತಾರೀಕಿಗೆ ಬಂದದ್ದೆ ಇಲ್ಲ. ಅದೊಂಥರಾ ಅಲ್ಲಿನವರ ಪಾಲಿಗೆ ಭಾರತೀಯ ರೈಲಿನಂತೆ! ) ವಿತರಕನ ಅಕ್ಕ-ಅಮ್ಮನನ್ನೂ ಬಿಡದೆ ಮನೆಯಲ್ಲೆ ಕೂತು ಅವನ ಎಲ್ಲಾ ಕುಟುಂಬಸ್ಥರ ಜನ್ಮವನ್ನ ಬಾಯಿ ಸೋಲುವವರೆಗೂ ಜಾಲಾಡುತ್ತಿದ್ದರು. ಬಾಯಿ ಸೋತ ನಂತರ ಸುಮ್ಮನಾಗದೆ ವಿಧಿಯಿರುತ್ತಿರಲಿಲ್ಲ!

ಶಾಲೆಗೇ ಹೋಗುವ ಮಕ್ಕಳು ತಮ್ಮ ಪೋಷಕರ ಪ್ರತಿನಿಧಿಗಳಾಗಿ ಮೊದಲಿಗೆ ತಮ್ಮತಮ್ಮ ಕ್ಯಾನ್'ಗಳೊಂದಿಗೆ ಬಂದು ತಮ್ಮ ಸಹ ಸ್ಪರ್ಧಿಗಳೊಡನೆ ಕುಸ್ತಿ ಮಾಡಿಯಾದರೂ ಸರಿ ಸಾಲಿನಲ್ಲಿ ಆದಷ್ಟು ಮುಂದಿನ ಜಾಗವನ್ನ ಖಾತ್ರಿ ಮಾಡಿಕೊಳ್ಳುತ್ತಿದ್ದರು. ಭವ್ಯ ಭಾರತದ ಮುಂದಿನ ಭವಿಷ್ಯವಾದ ಅವರಿಗೆ ಮುಂದಿನ ಹೋರಾಟದ ಬದುಕಿಗೆ ಇದೊಂದು ಪ್ರಶಸ್ತ ರಂಗ ತಾಲೀಮಿನ ಸ್ಥಳವಾಗಿರುತ್ತಿತ್ತು. ಇಲ್ಲಿ ಜಯಿಸಿದವನು ಎಲ್ಲೂ ಜಯಿಸಬಹುದು ಎನ್ನುವ ಆತ್ಮ ವಿಶ್ವಾಸವನ್ನದು ಮೂಡಿಸುತ್ತಿತ್ತು. ಮನೆ ಗೆದ್ದವ ತಾನೆ ಮಾರು ಗೆಲ್ಲುವುದು! ಇಷ್ಟಾಗಿಯೂ ಕೆಲವರಿಗೆ ಸಾಲಿನ ಬಾಲದ ಕಡೆಯಿಂದ ಮೊದಲನೆಯವರಾಗುವುದರಿಂದ ತಪ್ಪಿಸಿಕೊಳ್ಳೋಕೆ ಆಗ್ತಲೇ ಇರಲಿಲ್ಲ! ಇನ್ನು ಮಕ್ಕಳ ಹಿಂದೆಯೆ ಧಾವಿಸಿ ಬರುತ್ತಿದ್ದ ಹಿರಿಯರು ಕ್ಷಣಕಾಲ ತಮ್ಮ ಸಾಂಸಾರಿಕ ತಾಪತ್ರಯಗಳನ್ನೆಲ್ಲ ಮರೆತು, ದುಃಖ-ದುಮ್ಮಾನಗಳನ್ನೆಲ್ಲ ನಿಯಂತ್ರಣಕ್ಕೆ ತಂದುಕೊಂಡು ಮುಂದಿನ ಮೂರು ಘಂಟೆಗಳ ಕಾಲ ಸಾಲಿನಲ್ಲಿಯೆ ನಿರ್ಲಿಪ್ತರಾಗಿ ನಿಂತು ತಮ್ಮ ಪಾಲಿಗೆ ಬರುವ ಪಂಚಾಮೃತಕ್ಕಾಗಿ ಕಾಯುವ ಮನಸ್ಥಿತಿಯನ್ನ ಮೈಗೂಡಿಸಿ ಕೊಳ್ಳುತ್ತಿದ್ದರು. ಅದೊಂತರಾ ಧ್ಯಾನಸ್ತ ಸ್ಥಿತಿ.

ಅಂದಮಾತ್ರಕ್ಕೆ ಹೀಗೆ ಬಂದು ಸಾಲು ನಿಂತ ಎಲ್ಲರಿಗೂ ಸೀಮೆ ಎಣ್ಣೆ ಅಂದೆ ಸಿಗಬೇಕೆಂಬ ನಿಯಮವೇನೂ ಇಲ್ಲ! ಮಧ್ಯದಲ್ಲಿಯೆ ಸೀಮೆಎಣ್ಣೆಯ ಸ್ಟಾಕ್ ಮುಗಿದು ಹೋಗಬಹುದು. ಅಥವಾ ಈ ಸಾರಿ ಕೆಲವೊಂದು ನಿರ್ದಿಷ್ಟ ಸರಣಿ ಸಂಖ್ಯೆಯ ಕಾರ್ಡುದಾರರಿಗೆ ತಡವಾಗಿ ವಿತರಿಸಬೇಕು ಎನ್ನುವ ಸರಕಾರಿ ಸುತ್ತೋಲೆ ಬಂದಿರಬಹುದು, ಹೀಗೆ ಅಂತ ಹೇಳೋಕಾಗಲ್ಲ! ಇಂತಹ ಅನಿರೀಕ್ಷಿತ ಕಂಟಕಗಳು ಎದುರಾಗದಿರಲಿ ಅಂತ ಆ ಜಗನ್ನಿಯಾಮಕನಲ್ಲಿ ಮೊರೆಯಿಡುವುದನ್ನು ಬಿಟ್ಟು ಈ ಬಡಪಾಯಿ ಹುಲು ಮಾನವರಿಗೆ ಬೇರೆ ಇನ್ನೇನನ್ನೂ ಮಾಡಲಾಗುತ್ತಿರಲಿಲ್ಲ. ಹೀಗಾಗಿಯೆ ಬಹುಷಃ ಊರಿನ ಎಲ್ಲರೂ ತಪ್ಪದೆ ಸಂಕಷ್ಟಹರವೃತ, ಏಕಾದಶಿ ಉಪವಾಸ, ಮಾಂಸಹಾರಿಗಳಾಗಿದ್ದರೆ ನಿರ್ದಿಷ್ಟ ದಿನಗಳಂದು ಸಸ್ಯಾಹಾರಕ್ಕೆ ಕಟಿ ಬದ್ಧತೆ ಹಾಗೂ ಗೊತ್ತು ಪಡಿಸಿದ ದಿನ ಗೊತ್ತು ಪಡಿಸಿದ ದೇವಸ್ಥಾನಕ್ಕೆ ತಪ್ಪದೆ ಹೋಗಿ ಭಗವಂತನಿಗೆ ಹಣ್ಣು ಕಾಯಿ ಮಾಡಿಸಿ ದೀನವಾಗಿ ಅಡ್ಡಬಿದ್ದು ಆರ್ತವಾಗಿ ಮೊರೆಯಿಡುವುದನ್ನು ರೂಢಿಸಿಕೊಂಡಿದ್ದರು. ಜನರಲ್ಲಿ ಆಸ್ತಿಕ ಭಾವವನ್ನ ಜಾಗೃತವಾಗಿಡುವಲ್ಲಿ ಸೀಮೆ ಎಣ್ಣೆಯ ಪಾತ್ರ ಯಾವಾಗಲೂ ಹಿರಿದಾಗಿರುತ್ತಿತ್ತು ಅನ್ನೋದು ನನ್ನ ಗುಮಾನಿ. ಎನ್ ಮಾಡ್ತೀರಿ ಸೀಮೆಎಣ್ಣೆ ಎಂಬ ಮಾಯಾ ಲೋಕದ ವಸ್ತುವಿಗಾಗಿ ಜನ ಬೇಕಿದ್ದರೆ ಮನೆಯಿಂದ ನ್ಯಾಯ ಬೆಲೆ ಅಂಗಡಿಯವರೆಗೂ ತೆವಳಿ ಬರಲೂ ಸಿದ್ಧರಾಗಿದ್ದ ಆ ಕಾಲದಲ್ಲಿ ಈ ಹರಕೆ ಉಪಾವಾಸ ವನವಾಸಗಳೆಲ್ಲ ಯಾವ ಲೆಕ್ಖ! ಹೀಗಿದ್ದೂ ಅವರು ನಂಬಿದ್ದ ಭಗವಂತ ತಾನು ಕಲ್ಲು ಎನ್ನುವುದನ್ನು ಕಾಲಕಾಲಕ್ಕೆ ಸೀಮೆಎಣ್ಣೆಯ ಅನಾವೃಷ್ಟಿ ಸೃಷ್ಟಿಸಿ ಸಾಬೀತು ಪಡಿಸುತ್ತಿದ್ದ. ಇದರಲ್ಲಿ ಸೀಮೆ ಎಣ್ಣೆ ವಿತರಕ ಪದ್ಮನಾಭನ ಕೈವಾಡ ಇರೋದು ಎಲ್ಲರಿಗೂ ಸ್ಪಷ್ಟವಿದ್ದರೂ ಇದೆಲ್ಲ ತಮ್ಮ ಜನ್ಮಜನ್ಮಾಂತರದ ಕರ್ಮ ಎಂದು ನಿಡುಸುಯ್ದು ತಮ್ಮ ದುರ್ವಿಧಿಯನ್ನ ಅನುಭವಿಸುವುದನ್ನೇ ಎಲ್ಲರೂ ಅಭ್ಯಾಸ ಮಾಡಿಕೊಂಡಿದ್ದರು. ತಾವೊಂದು ಬಗೆದರೆ ವಿಧಿ ತೀರ್ಥಹಳ್ಳಿಯ ನಾಗರೀಕರ ಪಾಲಿಗೆ ಪ್ರತಿ ತಿಂಗಳೂ ಇನ್ನೇನನ್ನೋ ಬಗೆದಿರುತ್ತಿತ್ತು.

ಆಗಾಗ ಕೈ ಕೊಡುವ ಕರೆಂಟು. ಸದಾ ಮಳೆಯ ರೇಜಿಗೆ ಇರೋದರಿಂದ ಹಸಿ ಕಟ್ಟಿಗೆಯಲ್ಲಿಯೇ ಹಂಡೆಯ ನೀರು ಕಾಯಿಸುವ ಹಣೆಬರಹ. ಅಡುಗೆಯ ಒಲೆಗೂ ಅದರಲ್ಲಿಯೆ ಹೊಂದಿಸಿಕೊಂಡು ತಿಂಗಳು ಪೂರ್ತಿ ಸಂಭಾಳಿಸ ಬೇಕಾಗುತ್ತಿದ್ದ ಕರ್ಮ, ಮನೆಯ ಅಡುಗೆಯ ಹೊಣೆ ಹೊತ್ತ ಹೆಂಗಸರಿಗಂತೂ ಪ್ರತಿ ತಿಂಗಳ ಕೊನೆ ದಿನಗಳನ್ನ ದೂಡುವುದು ಪರಮ ಹಿಂಸೆಯಾಗಿ ಪರಿಣಮಿಸುತ್ತಿತ್ತು. ತೀರ್ಥಹಳ್ಳಿಯಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಇದ್ದ ಹಂಡೆ ಒಲೆ ಈ ಕಾಲದಲ್ಲಿ ಮಂಗಮಾಯವಾಗಿದೆ. ಆ ಜಾಗದಲ್ಲಿ ಬಾಯ್ಲರ್- ಗೀಸರ್- ಗ್ಯಾಸ್ ಗೀಸರ್'ಗಳು ಪ್ರತಿಷ್ಠಾಪಿತವಾಗಿವೆ . ಫೋನು ಮಾಡಿ ಮುಂಗಡ ಕಾದಿರಿಸಿದ ವಾರಕ್ಕೆಲ್ಲ ಅಡುಗೆ ಅನಿಲ ತಪ್ಪದೆ ಮನೆ ಬಾಗಿಲಿಗೆ ಬರುವುದರಿಂದ ಬಹುಷಃ ಸೀಮೆಎಣ್ಣೆ ವಿತರಿಸುವ ನ್ಯಾಯ ಬೆಲೆ ಅಂಗಡಿಗೆ ಮೊದಲಿನ ಗ್ಲಾಮರ್ ಕೂಡ ಉಳಿದಿಲ್ಲ. ದುರಂತವೆಂದರೆ ಇಂದಿನ ಮಕ್ಕಳಿಗೆ ಈ "ಸೀಮೆಎಣ್ಣೆ " ಅಂದರೆ ಏನು? ಆನ್ನೋದರ ಅರಿವೆ ಇಲ್ಲ. ಕಾಲ ನಿಜಕ್ಕೂ ಬದಲಾಗಿದೆ. ಇಪ್ಪತ್ತು ವರ್ಷಗಳಲ್ಲಿ ಅದೆಷ್ಟು ಬದಲಾವಣೆಯ ಗಾಳಿ ಬೀಸಿದೆ ಅನ್ನೋದನ್ನ ಯೋಚಿಸುವಾಗ ವಿಸ್ಮಯವಾಗುತ್ತದೆ.

13 September 2012

ಮಳೆಯ ನೆನಪಲ್ಲಿ....



ಮಳೆಯೆಂದರೆ ನನಗ್ಯಾಕಷ್ಟು ಇಷ್ಟ? ಅನ್ನುವ ಪ್ರಶ್ನೆಗೆ ನನ್ನ ಬಳಿಯೆ ಖಚಿತ ಉತ್ತರವಿಲ್ಲ. ಆದರೆ ಮನೋವೈಜ್ಞಾನಿಕ ನೆಲೆಯಲ್ಲಿ ಇದನ್ನ ವಿಶ್ಲೇಷಿಸಬಲ್ಲೆ. ನಾನು ಹುಟ್ಟಿದ್ದ ವರ್ಷ ಅತಿವೃಷ್ಟಿಯಾಗಿತ್ತು. ತುಂಗೆ ಅಪಾಯದ ಮಟ್ಟ ಮೀರಿ ಹರಿದು ತೀರ್ಥಹಳ್ಳಿಯಲ್ಲಿನ ನದಿಪಾತ್ರದಲ್ಲಿ ಸಾಕಷ್ಟು ಆಸ್ತಿ-ಜೀವ ಹಾನಿಯಾಗಿತ್ತು. ತುಂಗಾತೀರದ ಛತ್ರಕೇರಿ, ರಥಬೀದಿಗಳಲ್ಲಿನ ಜನರನ್ನ ಸ್ಥಳಾಂತರಿಸಿದ್ದರೆ ಸೇತುವೆಯಾಚೆಯ ಕುರುವಳ್ಳಿ ಹಾಗೂ ಬೊಮ್ಮರಸಯ್ಯನ ಅಗ್ರಹಾರದ ನಿವಾಸಿಗಳನ್ನೂ ಮನೆ ಬಿಡಿಸಲಾಗಿತ್ತು. ನಾನಿನ್ನೂ ತೀರ್ಥಹಳ್ಳಿಯಲ್ಲಿದ್ದಾಗಲೊಮ್ಮೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಲು ಕಲ್ಲು ಸಾರದಾಚೆಯ ಪುತ್ತಿಗೆ ಮಠಕ್ಕೆ ಹೋಗಿದ್ದೆ. ಅಲ್ಲಿ ೧೯೮೨ರ ಅಗೊಸ್ತು ೨೬ರಂದು ದೊಡ್ಡ ನೆರೆ ಬಂದಾಗ ನೀರು ಇಲ್ಲಿಗೆ ಮುಟ್ಟಿತ್ತು ಅಂತ ನೆಲ ಮಹಡಿಯ ಸೂರಿನ ಹತ್ತಿರ ಬಾಣದ ಗುರುತು ಹಾಕಿ ಬರೆದಿದ್ದನ್ನ ಓದಿದಾಗ ಗಾಬರಿಯಾಗಿದ್ದೆ. ಏಕೆಂದರೆ ಅಂದೇ ನನ್ನ ಹುಟ್ಟಿನ ದಿನ.

ಬಹುಷಃ ಹುಟ್ಟುವ ಕ್ಷಣದಲ್ಲಿ ಧಾರಾಕಾರ ಮಳೆಯ ಇರುಳಿದ್ದಿರಬೇಕು, ಗುಡುಗಿನ ಆರ್ಭಟದ ಸದ್ದನ್ನ ಕಿವಿ ತುಂಬಿಸಿ ಕೊಂಡೆ ನಾನು ಕಷ್ಟಮಯಯೂ-ಠಕ್ಕಮಯವೂ ಆದ ಈ ಸುಂದರ ಪ್ರಪಂಚಕ್ಕೆ ಉರುಳಿ ಬಿದ್ದೆನೇನೋ. ನನ್ನ ಅಳುವಿನ ಆರ್ಭಟ ಮಳೆಯ ಆರ್ಭಟದ ಮುಂದೆ ಸೋತು ಸಪ್ಪಗಾಗಿ ಮಳೆಯ ಏಕತಾನವನ್ನ ಕೇಳುತ್ತಾ ಪ್ರಪಂಚದಲ್ಲಿ ಬಾಳುವ ಕಲೆಯ ತರಗತಿಗೆ ಭರ್ತಿಯಾದೆನೇನೋ. ಅದಕ್ಕೇನೆ ನನಗೆ ಮಳೆ ಹಾಗೂ ಕತ್ತಲೆಯೆಂದರೆ ಅಗತ್ಯಕ್ಕಿಂತ ಜಾಸ್ತಿ ಆಪ್ತತೆ ಅನ್ನಿಸುತ್ತದೆ. ಬಾಲ್ಯದುದ್ದಕ್ಕೂ ಆತ್ಮಸಖನಂತೆ ಮಳೆ ಬದುಕನ್ನ ಆವರಿಸಿತ್ತು. ಬೆಳೆಯುತ್ತಾ ಬಂದಂತೆ ಪಿರಿಪಿರಿಗುಟ್ಟುವ ಮಳೆ ಕೆಲವೊಮ್ಮೆ ರೇಜಿಗೆ ಹುಟ್ಟಿಸುತ್ತಿದ್ದುದೂ ಸುಳ್ಳಲ್ಲ. ಶಾಲೆಗೇ ಹೋಗುವಾಗ ನನ್ನ ಹತ್ತಿರ ಇದ್ದದು ಒಂದೇ ಜೊತೆ ಸಮವಸ್ತ್ರ. ವಾರವಿಡೀ ಒಂದನ್ನೇ ಒಗೆಯದೆ ಹಾಕಿಕೊಲ್ಲುವುದಂತೂ ಅಸಾಧ್ಯದ ಮಾತು ಅದನ್ನ ಒಗೆದು ಹಾಕಿದರೆ ಒಣಗಲು ಆ ತೆವದಿಂದ ಕೂಡಿದ ವಾತಾವರಣದಲ್ಲಿ ಕನಿಷ್ಠ ಮೂರ್ನಾಲ್ಕು ದಿನಗಳಾದರೂ ಬೇಕೆ ಬೇಕು. ಆದರೆ ಅದಕ್ಕೆ ಅವಕಾಶವೆಲ್ಲಿ? ಹಿಡಿದ ಮಳೆ ಕ್ಷಣವಾದರೂ ಬಿಟ್ಟರೆ ತಾನೇ ಆ ಆಲೋಚನೆ. ಹೀಗಾಗಿ ಮಳೆಯಲ್ಲಿ ಇನ್ನೂ ಒದ್ದೆಯಾಗಿಯೇ ಇರುತ್ತಿದ್ದ ಹಸಿ ಚಡ್ಡಿಗಳನ್ನ ಹಾಕಿ ಹಾಕಿ ಸೊಂಟದ ಸುಟ್ಟ ಫಂಗಸ್ ಖಾಯಮಾಗಿ ಆಗುತ್ತಿದ್ದವು. ಇದು ಸಾಲದು ಎಂಬಂತೆ ಅಂಗಿ ಬಟ್ಟೆಯ ಮೇಲೆ ನೀರ ಕಲೆ ಉಳಿದು ಕಪ್ಪುಕಪ್ಪು ಚುಕ್ಕಿಗಳಾಗಿ ಉಳಿದು ಬಿಡುತ್ತಿತ್ತು. ಆಗೆಲ್ಲಾ ವಿಪರೀತ ಸಿಟ್ಟು ಉಕ್ಕುತ್ತಿತ್ತು ಮಳೆಯ ಮೇಲೆ.

ಅಮ್ಮ ಬೆಳಗ್ಯೆ ಸಂಜೆ ಕರೆದು ಬಾಟಲುಗಳಲ್ಲಿ ಹಾಕಿಟ್ಟ ಹಾಲನ್ನ ಕೊಡೋದಕ್ಕೆ ಹೋಗಲೂ ಮಳೆಯ ಕಾಟ. ಒಂದು ಕಂಬಳಿ ಕೊಪ್ಪೆಗೆ ಹೊಂದುವ ಒಳಗೆ ಜಾಡಿ ಹಾಕಿಟ್ಟ ಪ್ಲಾಸ್ಟಿಕ್ಕಿನ ಗೊಬರೊಂದು ನನಗಾಗಿ ಮಾಡಿಟ್ಟಿದ್ದರು ಕೊಡೆ, ರೈನ್'ಕೋಟ್ ಯಾವೊಂದರ ಕಲ್ಪನೆಯೂ ಇಲ್ಲದ ದಿನಗಳವು. ನಾನು ಈ ಗೊಬರೊಳಗೆ ಅಡಗಿಕೊಂಡು ಮನೆಮನೆಗೂ ಹೋಗಿ ಹಾಲನ್ನ ತಲುಪಿಸಿ ಬರುತ್ತಿದ್ದೆ. ಹಾಕಿರುತ್ತಿದ್ದ ಹವಾಯಿ ಚಪ್ಪಲಿಯ ಕೃಪೆಯಿಂದ ಬೆನ್ನಿನ ಭಾಗದಲ್ಲಿ ಕೆಸರು ಸಿಡಿದು ರಾಡಿಯಾಗಿರುತ್ತಿತ್ತು. ಮಳೆಯೆಂದರೆ ಮನೆಯ ಸುತ್ತ ವಿಪರೀತ ಎರೆಹುಳ(ನಕ್ರು), ಮಳೆಯೆಂದರೆ ಕತ್ತಲಲ್ಲಿ ಮಲಗುವ ಹೊತ್ತಲ್ಲಿ ಗೊಂಕರು ಕಪ್ಪೆಗಳ ನಿರಂತರ ಡ್ರೊಂಕ್ ಡ್ರೊಂಕ್ ಗಾಯನ, ಮಳೆಯೆಂದರೆ ಮನೆಯ ಅಂಗಳ-ಹಿತ್ತಲಲ್ಲೆಲ್ಲ ಜಾರುವ ಪಾಚಿ ಹಾವಸೆಯ ಕಾಟ, ಮಳೆಯೆಂದರೆ ಕರೆಂಟು ಕೈಕೊಡುವ ಸಂಜೆಗಳು, ಮಳೆಯೆಂದರೆ ಸಂಜೆ ಚಾದ ಜೊತೆ ಸವಿಯಲಿಕ್ಕೆ ಹಲಸಿನ ಹಪ್ಪಳ, ಮಳೆಯೆಂದರೆ ಅಪರೂಪದ ಅರಿಶಿನದೆಲೆಯ ಕಡುಬು ಬೆಳಗಿನ ತಿಂಡಿಗೆ, ಮಳೆಯೆಂದರೆ ಬೆಚ್ಚಗೆ ಮೆಂತೆ ಗಂಜಿ ಕುಡಿಯಲಿಕ್ಕೊಂದು ಪಿಳ್ಳೆನೆವ, ಮಳೆಯೆಂದರೆ ಸುಟ್ಟ ಹಲಸಿನ ಬೋಳೆಗಳನ್ನ ಉಪ್ಪು ಸೇರಿಸಿ ಕಟುಂ-ಕುಟುಂ ತಿನ್ನುವ ಸುಖ, ಮಳೆಯೆಂದರೆ ಹೊಳೆ ಉಕ್ಕಿ ಹರಿಯುವ ನೆಪಕ್ಕೆ ಶಾಲೆಗೇ ಸಿಗುತ್ತಿದ್ದ ನಿರಾಯಾಸ ರಜೆ, ಮಳೆಯೆಂದರೆ ಊಟಕ್ಕೆ ಕಳಲೆಯ ಪಲ್ಯ, ಮಳೆಯೆಂದರೆ ಮನೆ ಸುತ್ತಲ ಹೂಗಿಡಗಳಿಗೆ ನೀರು ಹಾಕುವ ಕೆಲಸಕ್ಕೆ ಮಾಫಿ, ಮಳೆಯೆಂದರೆ ಮಾಡಿನ ಮೂಲೆಯಿಂದ ಸುರಿವ ನೀರಧಾರೆಯಲ್ಲಿ ಆಡುವ ಚಪಲ, ಮಳೆಯೆಂದರೆ ನೋಟು ಬುಕ್ಕಿನ ಹಾಳೆಗಳಲ್ಲಿ ದೋಣಿ ಮಾಡಿ ಹಳ್ಳದ ನೀರಲ್ಲಿ ಬಿಡುವ ಖುಷಿ , ದೊಡ್ಡವರ ಕಣ್ಣಿಗೆ ಅದು ಬಿದ್ದರೆ ನೋಟು ಬುಕ್ಕಿನ ಹಾಳೆಯನ್ನ ಹರಿದು ಹಾಳು ಮಾಡಿದ್ದಕ್ಕೆ ಬೆನ್ನ ಮೇಲೆ ಉಚಿತ ಬಹುಮಾನ...... ಹೀಗೆ ಮಳೆಗೆ ವಿವಿಧ ಮುಖ. ದುಃಖದೊಂದಿಗೆ ಸಮಪಾಲಿನ ಸುಖ. ಹೀಗಾಗಿ ನನ್ನದೂ ಮಳೆಯದೂ ಒಂಥರಾ ಗಂಡ-ಹೆಂಡಿರ ಸಂಬಂಧ!

ನೋವಲ್ಲಿ ಅಳುವಾಗ ಮಳೆ ಬಂದರೆ ಕಣ್ಣೀರು ಯಾರಿಗೂ ಕಾಣಿಸೋದೆ ಇಲ್ಲ, ಇದು ಆಗಾಗ ಉಪಯೋಗಕ್ಕೆ ಬಂದದ್ದೂ ಇದೆ. ಅಮ್ಮ ಹಾಗು ಮನೆಯನ್ನ ಬಿಟ್ಟು ಕಾರ್ಕಳಕ್ಕೆ ಹೋದಾಗ, ಕೊನೆಯ ಬಾರಿ ಊರನ್ನ ಶಾಶ್ವತವಾಗಿ ತೊರೆದು ಬೆಂಗಳೂರು ಪಾಲಾದಾಗ ಇತ್ತ ನನ್ನ ಕಣ್ಣು ಮಂಜಾದ ಹಾಗೆ ಅತ್ತ ಆಗಸದ ಎದೆಯೂ ಭಾರವಾಗಿ ಸುರಿದ ನೆನಪಿದೆ. ಈಗ ಊರಲ್ಲಿ ಅಷ್ಟು ಮಳೆ ಇಲ್ಲವಂತೆ. ಹಾಸ್ಟೆಲ್ಲಿನಲ್ಲಿ ಮುಸುಗು ಹೊದ್ದು ಮನೆಯ ನೆನಪಾದಾಗಲೆಲ್ಲ ಮಲಗಿಯೇ ಬಿಕ್ಕಳಿಸುವಾಗ ಹೊರಗಿನ ಜೋರು ಮಳೆಯ ಸದ್ದಿನೊಂದಿಗೆ ನನ್ನ ಅಳುವಿನ ಸದ್ದೂ ಕರಗಿ ಹೋಗಿ "ಹುಡುಗನಾಗಿಯೂ ಅಳ್ತಾನೆ" ಎನ್ನೋ ಇತರರ ಗೇಲಿಯಿಂದ ನನ್ನ ಅದೆಷ್ಟೋ ಸಾರಿ ಪಾರು ಮಾಡಿತ್ತು ಈ ಜೋರು ಮಳೆ. ಮಳೆಯ ದಿನಗಳಲ್ಲಿ ಉಕ್ಕಿ ಹರಿವ ತುಂಗೆಯ ಒಡಲನ್ನ ಹಿರಿಯರೊಂದಿಗೆ ಕಮಾನು ಸೇತುವೆ ಮೇಲೆ ನಿಂತು ದಿಟ್ಟಿಸುತಿದ್ದ ನೆನಪೆ ಒಂಥರಾ ಭಯ ಹುಟ್ಟಿಸುತ್ತಿತ್ತು. ಬೇರೆ ಕಾಲದಲ್ಲಿ ಮನೆಗೆ ಬಂದ ದೂರದೂರುಗಳ ನೆಂಟರನ್ನ ವಾಯುವಿಹಾರಕ್ಕೆ ನದಿ ತೀರಕ್ಕೆ ಕರೆದೊಯ್ದಾಗ ಏನೂ ಅರಿಯದ ಮಳ್ಳಿಯಂತೆ ಪಕ್ಕದಲ್ಲಿಯೇ ಹರಿಯುವ ತುಂಗೆ ಇವಳೇನಾ ಎನ್ನುವ ಪ್ರಶ್ನೆ ಮನಸಿನಲ್ಲೇಳುತ್ತಿತ್ತು. ಅವಳ ಅಂದಿನ ರೌದ್ರಾವತಾರಕ್ಕೆ ನಡುಕ ಹುಟ್ಟುತ್ತಿತ್ತು. ಇಂದು ತುಂಗೆಗೆ ಮೊದಲ ಬಲವಿಲ್ಲ, ಮರಗಳೆಲ್ಲ ಕಡಿವ ಪಾಪಿಗಳ ಪಾಲಾದ ಮಲೆನಾಡಿನಲ್ಲಿ ಮೊದಲಿನಷ್ಟು ಮಳೆಯೂ ಇಲ್ಲ. ಮಳೆಯೂ ಈಗ ಬರಿ ನೆನಪಷ್ಟೆ.

ಮಲೆನಾಡಿನೊಂದಿಗೆ ಬೆಸೆದ ನನ್ನ ನಂಟಿನ ಹಿಂದಿನ ಕಥೆ....




ನನ್ನಜ್ಜ ತೀರ್ಥಹಳ್ಳಿಗೆ ಬಂದು ಮುಟ್ಟಿದ್ದು ತೀರಾ ಆಕಸ್ಮಿಕವಾಗಿ ಕಾರ್ಕಳ ತಾಲೂಕಿನ ಅಜೆಕಾರು ಬಳಿಯ ಗುಡ್ಡೆಮನೆಯಲ್ಲಿ ಅವರು ಹುಟ್ಟಿ ಬೆಳೆದದ್ದು. ಅವರಿಗೆ ಒಬ್ಬ ಅಣ್ಣ, ಒಬ್ಬಳು ಅಕ್ಕ ಹಾಗು ಒಬ್ಬ ತಮ್ಮನಿದ್ದರು. ಕಾಸರಗೋಡಿನ ಕಡೆಯ ಹೆಣ್ಣೊಬ್ಬಳನ್ನ ಮದುವೆಯಾಗಿದ್ದ ಅಣ್ಣನ ಯಜಮಾನಿಕೆಯಲ್ಲಿ ಅವರ ಮನೆ ನಡೆಯುತ್ತಿತ್ತು. ಅಜ್ಜ ಎರಡನೆ ಕ್ಲಾಸಿನವರೆಗೆ ಶಾಲೆಗೂ ಹೋಗಿದ್ದರಂತೆ. ಕನ್ನಡವನ್ನ ಸ್ಪಷ್ಟವಾಗಿ ಓದಲಿಕ್ಕೆ ಹಾಗೂ ಇಂಗ್ಲಿಷಿನಲ್ಲಿ ರುಜು ಮಾಡಲಿಕ್ಕೆ ಅವರಿಗೆ ಬರುತ್ತಿತ್ತು.. ಅಪ್ಪ-ಅಮ್ಮ ಸತ್ತ ನಂತರ ಎಳೆಯ ತಮ್ಮಂದಿರನ್ನ ಅಣ್ಣ ಬಹಳ ಮೋಕೆಯಿಂದ ಸಾಕಿದನಷ್ಟೇ ಅಲ್ಲ ತಂಗಿಗೊಂದು ಮದುವೆಯನ್ನೂ ಮಾಡಿದ್ದ. ಮನೆಯನ್ನ, ಇದ್ದ ತೋಟ-ಗದ್ದೆಯನ್ನ ಊರ್ಜಿತ ಮಾಡುವ ಕಾಲದಲ್ಲಿ ಹಾವುಕಚ್ಚಿ ಅಣ್ಣ ಕೊನೆಯುಸಿರೆಳೆದದ್ದೆ ತಡ ಅಜ್ಜ ಮತ್ತವರ ತಮ್ಮನ ಬಾಳು ನರಕವಾಯಿತು.


ಅದನ್ನ ನರಕ ಆಗ ಮಾಡಿದವರು ಸ್ವತಃ ಒಡಹುಟ್ಟಿದ ಅಕ್ಕ ಹಾಗೂ ಮನೆಹಾಳ ಭಾವ. ಕಾರಣ ಸರಳ, ಆಸ್ತಿಯ ಮೇಲಿನ ದುರಾಸೆ. ಅಣ್ಣನ ಹೆಂಡತಿ ಮರಳಿ ಕಾಸರಗೋಡಿನ ತವರು ಮನೆ ಸೇರಿಕೊಂಡಳು, ಅಲ್ಲಿಗೆ ಆಕೆಗೆ ಇಲ್ಲಿನ ಋಣ ಹರಿಯಿತು. ಇಂದಿಗೂ ನಮಗ್ಯಾರಿಗೂ ಅವರ ಸಂಪರ್ಕವಿಲ್ಲ, ಅವರೆಲ್ಲಿದ್ದರೆಂತಲೂ ಗೊತ್ತಿಲ್ಲ. ಹುಡುಕುವ ಪ್ರಯತ್ನವನ್ನ ನಾನಂತೂ ಮಾಡುತ್ತಿದ್ದೇನೆ. ಅಜ್ಜನ ಅಣ್ಣ ಸಾಯುವಾಗ ಅವರಿಗೊಂದು ಕೈಕೂಸಿತ್ತಂತೆ. ದಿನ ನಿತ್ಯದ ಅಕ್ಕ-ಭಾವನ ಕಿರುಕುಳ ಒದೆಗಳನ್ನ ಸಹಿಸಲಾಗದೆ ಕಿರಿಯರಿಬ್ಬರು ಕೈಕೈ ಹಿಡಿದುಕೊಂಡು ಮನೆ ಬಿಟ್ಟರು. ಎಲ್ಲಿಗೆ ಹೋಗಬೇಕಂತ ನಿರ್ಧರಿಸಿ ಅವರು ಹೊರಟದ್ದೇನೂ ಅಲ್ಲ. ಅಲ್ಲಿಂದ ಪಾರಾದರೆ ಸಾಕು ಅಂತ ಹೊರಟದ್ದಷ್ಟೇ.

ಆವಾಗ ಆಗುಂಬೆ ಘಾಟಿಗೆ ಈಗಿನಂತೆ ರಸ್ತೆ ಸಂಪರ್ಕ ಇರಲಿಲ್ಲ. ಕಾಲು ಹಾದಿಯೊಂದಿದ್ದು (ಕಾಲುಹಾದಿ ಈಗಲೂ ಇದೆ ಆದರೆ ನಿರ್ವಹಣೆಯಿಲ್ಲದೆ ಹಾಳುಬಿದ್ದಿದೆ.) ದಕ್ಷಿಣ ಕನ್ನಡ ಜಿಲ್ಲೆಗೆ ತೀರ್ಥಯಾತ್ರೆಗೆ ಬಂದು ಹೋಗುವ ಘಟ್ಟದ ಮೇಲಿನವರು, ವರ್ಷಕ್ಕೊಂದಾವರ್ತಿ ಸಂಭಾವನೆಗೆ ಘಟ್ಟ ಹತ್ತುತ್ತಿದ್ದ ಬಡ ಬ್ರಾಮ್ಹಣರು, ಘಟ್ಟದ ಗೌಡರ ತೋಟಗಳಿಗೆ ದುಡಿಯಲು ಇಲ್ಲಿಂದ ಆಳುಗಳನ್ನು ಕರೆದೊಯ್ಯುತ್ತಿದ್ದ ಸೇರೆಗಾರರು, ದಕ್ಷಿಣ ಕನ್ನಡದಿಂದ ಘಟ್ಟಕ್ಕೆ ಶಾಶ್ವತ ಆನ್ನ ಅರಸಿ ವಲಸೆ ಹೋಗುವವರು ಹಾಗೂ ಬೇಸಿಗೆಯಲ್ಲಿ ತಮ್ಮ ಒಣಮೀನಿಗೆ ಘಟ್ಟದಲ್ಲಿ ಗಿರಾಕಿ ಹುಡುಕುತ್ತಿದ್ದ ಸಾಹಸಿ ಬ್ಯಾರಿಗಳು ಈ ಕಾಲು ಹಾದಿಯನ್ನ ಬಳಸಿ ಕಾರ್ಕಳ ತಾಲೂಕಿನ ಸೋಮೇಶ್ವರದಿಂದ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸೇರಿಕೊಳ್ಳುತ್ತಿದ್ದರು. ಎಲ್ಲಕ್ಕೂ ತಮಾಷೆಯ ಸಂಗತಿಯೆಂದರೆ ಅದು ಅಂತರರಾಜ್ಯ ಗಡಿರೇಖೆಯೂ ಆಗಿತ್ತು. ಮದರಾಸು ಪ್ರಾಂತ್ಯಕ್ಕೆ ಸೇರಿದ್ದು ಬ್ರಿಟಿಷರ ನೇರ ಆಳ್ವಿಕೆಯಲ್ಲಿದ್ದ ದಕ್ಷಿಣ ಕನ್ನಡವನ್ನ ಮೈಸೂರು ರಾಜ್ಯದಿಂದ ಅದು ವಿಭಜಿಸುತ್ತಿತ್ತು. ದಟ್ಟಕಾಡು, ವರ್ಷದ ಹತ್ತು ತಿಂಗಳ ಧಾರಾಕಾರ ಮಳೆಯ ದೆಸೆಯಿಂದ ಜಿಗಣೆಗಳ ಕಾಟ, ಮಲೇರಿಯದಂತಹ ಜ್ವರದ ಕಾರಣಕ್ಕೆ ಮಲೆನಾಡು ಆಗ ಖ್ಯಾತವಾಗಿತ್ತು. ಅಂತಹ ದುರ್ಗಮ ದಾರಿಯಲ್ಲಿ ಡಕಾಯಿತರ ಹಾಗೂ ಕಾಡುಪ್ರಾಣಿಗಳ ಭೀತಿ ಸದಾ ಇರುತ್ತಿದ್ದರಿಂದ ಆ ಮಾರ್ಗವಾಗಿ ಸಾಗುವವರು ಧೈರ್ಯಕ್ಕೆ ಗುಂಪುಗಟ್ಟಿಕೊಂಡೆ ಘಾಟಿಯ ಹಾದಿಯಲ್ಲಿ ಸಾಗುತ್ತಿದ್ದರು. ಜನ ಕಡಿಮೆ ಇದ್ದರೆ ಇನ್ನಷ್ಟು ಮಂದಿ ಕೂಡುವವರೆಗೆ ಸೋಮೇಶ್ವರದಲ್ಲಿಯೇ ಕೂತು ಕಾಯುತ್ತಿದ್ದರಂತೆ.

ಮುಂದೆ ಮಂಗಳೂರಿನ ಸಿಪಿಸಿ ಕಂಪನಿಯವರು ಘಟ್ಟದ ಮೇಲಿನ ಸಾಗರದ ದೇವಂಗಿ ಮೋಟರ್ ಸರ್ವಿಸ್'ನವರೊಂದಿಗೆ ಜೊತೆ ಸೇರಿ "ಕಂಬೈಂಡ್ ಬುಕ್ಕಿಂಗ್ ಏಜೆನ್ಸಿ"ಯನ್ನ ಆರಂಭಿಸಿ ಇಲ್ಲಿ ಸಂಪರ್ಕಕ್ಕೆ ಅನುವು ಮಾಡಿಕೊಟ್ಟರಂತೆ. ಸಿಪಿಸಿಯವರ ದೊಡ್ಡ ಬಸ್ಸು ಸೋಮೇಶ್ವರದಲ್ಲಿ ತಂದಿಳಿಸಿದ ಪ್ರಯಾಣಿಕರು ನಾಲ್ಕಾಣೆ ಕೊಟ್ಟು ಅಲ್ಲಿರುತ್ತಿದ್ದ ಟ್ಯಾಕ್ಸಿಗಳಲ್ಲಿ ಕೂತು ಆಗುಂಬೆ ಸೇರಿದರೆ ಅಲ್ಲಿ ಕಾದಿರುತ್ತಿದ್ದ ಡಿಎಂಎಸ್ ತಾವಿಳಿಸಿದ ಪ್ರಯಾಣಿಕರ ಜಾಗದಲ್ಲಿ ಇವರನ್ನ ಹೊತ್ತು ತೀರ್ಥಹಳ್ಳಿ-ಶಿವಮೊಗ್ಗದ ದಿಕ್ಕಿಗೆ ಓಡುತ್ತಿದ್ದವು. ಎರಡನೆ ಮಹಾಯುದ್ದದ ಸಮಯ ಅದಾಗಿದ್ದರಿಂದ ಪೆಟ್ರೋಲ್-ಡೀಸಲ್ ಎಲ್ಲಾ ಸೈನ್ಯದ ಬಳಕೆಗೆ ಸೀಮಿತವಾಗಿ ತತ್ವಾರವಾಗಿತ್ತು. ಹೀಗಾಗಿ ಅಂದು ಓಡುತ್ತಿದ್ದುದು ಕಲ್ಲಿದ್ದಲ ಬಸ್ಸುಗಳು!

ಕಲ್ಲಿದ್ದಲ ಬಸ್ಸುಗಳೆಂದರೆ ಹನುಮಂತನ ಮೂತಿಯಂತೆ ಊದಿಕೊಂಡ ಮುಂಭಾಗದಲ್ಲಿ ಇಂಜಿನ್ ಇದ್ದು ಹಿಂದಿನ ಸೀಟಿನಡಿಯಲ್ಲಿ ಎರಡೋ ಮೂರೋ ಸಿಲೆಂಡರಿನ ಬಾಯ್ಲರ್'ಗಳಿರುತ್ತಿದ್ದ ವಿಶಿಷ್ಟ ತಂತ್ರಜ್ಞಾನದ ವಾಹನಗಳು. ಸಿಲೆಂಡರಿನ ಪಕ್ಕದಲ್ಲಿ ಮುಚ್ಚಿದ ಒಂದು ಓಲೆ ಇರುತ್ತಿದ್ದು ಅದಕ್ಕೆ ಕಲ್ಲಿದ್ದಲು ತುಂಬಿಸಿ ಮುಚ್ಚಿ ಚನ್ನಾಗಿ ಉರಿಯಲು ಹೊರಗಡೆಯಿರುತ್ತಿದ್ದ ಹ್ಯಾಂಡಲನ್ನು ಎಡೆಬಿಡದೆ ತಿರುಗಿಸ ಬೇಕಾಗುತ್ತಿತ್ತು, ನಿಗಿನಿಗಿ ಕಲ್ಲಿದ್ದಲ ಶಾಖಕ್ಕೆ ಸಿಲೆಂಡರಿನಲ್ಲಿದ್ದ ನೀರು ಕುದ್ದು ಆದರಿಂದೇಳುವ ಹಬೆಯ ಒತ್ತಡದ ಶಕ್ತಿಯಲ್ಲಿ ಬಸ್ಸಿನ ಇಂಜಿನ್ ಚಾಲನೆಗೊಂಡು ವಾಹನ ಮುಂದೋಡುತ್ತಿತ್ತು . ಓಡುತ್ತಿತ್ತು ಅನ್ನೋದಕ್ಕಿಂತ ತೆವಳುತ್ತಿತ್ತು ಅನ್ನೋದೇ ವಾಸಿ. ಏಕೆಂದರೆ ಕೇವಲ ಮೂವತ್ತು ಕಿಲೋಮೀಟರ್ ದೂರದ ತೀರ್ಥಹಳ್ಳಿ ಮುಟ್ಟಲು ಆಗುಂಬೆಯಿಂದ ಹೊರಟ ಅಂತಹ ಒಂದು ಬಸ್ಸಿಗೆ ಕೇವಲ ಎರಡು ಗಂಟೆ ಬೇಕಾಗುತ್ತಿತ್ತು. ತೀರ್ಥಹಳ್ಳಿಯಿಂದ ಅದರ ಎರಡು ಪಟ್ಟು ದೂರದ ಶಿವಮೊಗ್ಗ ಸೇರಲು ನಾಲ್ಕು ತಾಸು ಕಡಿಮೆಯೆಂದರೂ ಬೇಕೇ ಇತ್ತು. ಇದಷ್ಟೇ ಅಲ್ಲದೆ ಏರಿನಲ್ಲಿ ಬಸ್ಸು ಒತ್ತಡ ಸಾಲದೆ ಮುಂದೋಡಲು ಮುಷ್ಕರ ಹೂಡುತ್ತಲೂ ಇತ್ತು. ಆಗ ಬಸ್ಸಿನ ಕ್ಲೀನರ್ ಕೆಳಗಿಳಿದು ಬೆವರು ಕಿತ್ತು ಬರುವ ತನಕ ಒಲೆಯ ಹ್ಯಾಂಡಲ್ ತಿರುವುತ್ತಿದ್ದ. ಅಷ್ಟೂ ಸಾಕಾಗಾದಿದ್ದರೆ ಪ್ರಯಾಣಿಕರೆಲ್ಲ ಎದ್ದು ಒಂದು ಸುತ್ತು ಬಸ್ಸನ್ನ ತಳ್ಳಿ ಮುಂದೆ ತರಬೇಕಾಗುತ್ತಿತ್ತು!

ಹೀಗೆ ಗುರಿ ಮುಟ್ಟುವ ಭರದಲ್ಲಿ ಸೀಟು ಸರಿಯಾಗಿ ಸಿಕ್ಕದೆ ಹಿಂದಿನ ಸಾಲಿನಲ್ಲಿ ಸಿಲೆಂಡರ್ ಮೇಲಿನ ಸ್ಥಳದಲ್ಲಿ ಕೂತುಕೊಳ್ಳುವ ಅನಿವಾರ್ಯತೆಗೆ ಸಿಕ್ಕ ಪ್ರಯಾಣಿಕರದ್ದಂತೂ ನಾಯಿ ಪಾಡಾಗುತ್ತಿತ್ತು. ಕುದಿ ನೀರ ಸಿಲೆಂಡರಿನ ಉರಿಯಲ್ಲಿ ಸ್ವಲ್ಪ ಪಾಲು ಅವರಿಗೂ ಉಚಿತವಾಗಿ ಸಿಗುತ್ತಿತ್ತಲ್ಲ! ಮನಸಿಲ್ಲದಿದ್ದರೂ ಬಸ್ಸಿನೊಂದಿಗೆ ಖಡ್ಡಾಯವಾಗಿ ಅದನ್ನ ಹಂಚಿಕೊಳ್ಳಲೆಬೇಕಿತ್ತು! ಸಾಲದ್ದಕ್ಕೆ ಮೇಲೇಳುತ್ತಿದ್ದ ಕಲ್ಲಿದ್ದಲ ಹೊಗೆಯ ಕರಿ ಹಾಗೂ ಹಿಟ್ಟಿನಂತಾಗಿರುತ್ತಿದ್ದ ಮಣ್ಣು ಹಾದಿಯ ಧೂಳುಗಳೆಲ್ಲ ಸರಿ ಸಮವಾಗಿ ಬೆರೆತು ಅವರನ್ನ ಆವರಿಸಿ ಬಸ್ಸಿಳಿಯುವಾಗ ಅವರು ಥೇಟ್ ಆದಿಮಾನವನ ಅಪರಾವತಾರವಾಗಿ ಕಂಗೊಳಿಸುತ್ತಿದ್ದರು. ಆಗಿನ್ನೂ ಡಾಮರ್ ಅಥವಾ ಟಾರ್ ಎನ್ನುವ ಅದ್ಭುತ ವಸ್ತು ಮಲೆನಾಡಿನ ರಸ್ತೆಗಳನ್ನ ಮುತ್ತಿಟ್ಟಿರಲಿಲ್ಲ . ಮುಂದೆ ಕೂತವರಿಗೇನೂ ಹೆಚ್ಚು ವಿನಾಯತಿ ಇರುತ್ತಿರಲಿಲ್ಲ. ಅವರಿಗೆ ರಸ್ತೆ ಧೂಳಿಗೆ ಸಿಕ್ಕು ಕಂಚ್ಗಿನ ಪ್ರತಿಮೆಗಳಾಗುವ ವಿಶೇಷ ಯೋಗವಿರುತ್ತಿತ್ತು!. ಒಟ್ಟಿನಲ್ಲಿ ಯಾವ ಬಣ್ಣದ್ದೆಂದೆ ಗುರುತಿಸಲಾಗದ ಸ್ಥಿತಿಯಲ್ಲಿರುತ್ತಿದ್ದ ಅವರು ಹಾಕಿರ ಬಹುದಾದ ಬಿಳಿ ಅಂಗಿ ಹಾಗು ಮುಂಡನ್ನು ಹಿಂದೊಮ್ಮೆ ಅದು ಬಿಳಿಯದೇ ಆಗಿತ್ತು ಅಂತ ಯಾರಾದರೂ ಆಣೆ ಪ್ರಮಾಣ ಮಾಡಿ ಹೇಳಬೇಕಾಗುತ್ತಿತ್ತು?!



ಅಂತಹ ದುರ್ಗಮ ಹಾದಿಯನ್ನ ಹಿಡಿದು ಕೈಯಲ್ಲಿ ಮೂರು ಕಾಸಿಲ್ಲದ ಕರ್ಮಕ್ಕೆ ಎಂಟು ವರ್ಷದ ನಾರಾಯಣ ಹಾಗೂ ಐದು ವರ್ಷದ ನಾಗಪ್ಪ ಅನ್ನದ ತಲಾಶಿನಲ್ಲಿ ಮತ್ತು ಭವಿಷ್ಯದ ನೆಮ್ಮದಿಯ ಹುಡುಕಾಟದಲ್ಲಿ ಯಾತ್ರಾರ್ಥಿಗಳ ತಂಡವೊಂದರ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ನಡೆದೇ ತೀರ್ಥಹಳ್ಳಿ ಸೀಮೆ ಮುಟ್ಟಿದರು. ಮೇಳಿಗೆಯ ಸಾಹುಕಾರರಾದ ಐತಾಳರ ಅಡುಗೆ ಮನೆಯಲ್ಲಿ ಹುಡುಗರಿಗೆ ಅಡುಗೆ ಸಹಾಯಕರ ಕೆಲಸ ಸಿಕ್ಕಿತು. ಬಾಳಿನಲ್ಲಿ ಅವರ ಮುಂದಿನ ಅನ್ನದ ದಾರಿ ಅಲ್ಲೆ ಎಲ್ಲೋ ಇತ್ತು...

ಜಾತ್ರೆಯ ನೆನಪು....



ತೀರ್ಥಹಳ್ಳಿ ಪೇಟೆ ಮೂರು ಮುಕ್ಕಾಲು "ರಾಜ"ಬೀದಿ ಗಳಲ್ಲೇ ಮುಗಿದು ಹೋಗುವಂತದ್ದು. ಅಂದು ಅದರ ಒಟ್ಟು ಜನಸಂಖ್ಯೆ ಮೂರು ಸಾವಿರ ಮೀರಿರಲಿಕ್ಕಿಲ್ಲ. ಇಂದು ಹೆಚ್ಚೆಂದರೆ ಅದರ ಎರಡು ಪಟ್ಟು ಹೆಚ್ಚಾಗಿದ್ದರೆ ಅದೆ ಒಂದು ಸಾಧನೆ. ಊರಿನ ವಾಣಿಜ್ಯ ಚಟುವಟಿಕೆಗಳೆಲ್ಲ ಆಜಾದ್ ರಸ್ತೆ, ರಥಬೀದಿ, ಮಸೀದಿರಸ್ತೆಗೆ ಸೀಮಿತವಾಗಿದ್ದವು. ಊರೊಳಗೆ ಗದ್ದೆ ತೋಟಗಳಿದ್ದು ಅದರ ವ್ಯಾಪ್ತಿಯಾಚೆಗೆ ಸೊಪ್ಪುಗುಡ್ಡೆ-ಬೆಟ್ಟಮಕ್ಕಿಯಂತಹ ಬಡಾವಣೆಗಳು ವ್ಯಾಪಿಸಿರುತ್ತಿದ್ದರಿಂದ ಇದನ್ನ ಹಳ್ಳಿ ಎನ್ನಬೇಕೊ ಇಲ್ಲಾ ಪಟ್ಟಣ ಎನ್ನಬೇಕೊ ಅನ್ನುವ ಗೊಂದಲ ನಿರಂತರ ಕಾಡುತ್ತಿತ್ತು. ಆಗುಂಬೆ ಮಾರ್ಗವಾಗಿ ಕರಾವಳಿಯ ಮಂಗಳೂರು, ಉಡುಪಿಗಳನ್ನ ಮಲೆನಾಡಿನ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಊರಿನ ಮಧ್ಯ ಸಾಗಿ ಹೋಗುತ್ತಿದ್ದರಿಂದ ಊರಿಗೆ ಒಂದು ಗಡಿಬಿಡಿಯ ಕಳೆ ಬಂದಿತ್ತು.

ಇಲ್ಲದಿದ್ದರೆ ಇಡೀ ಊರಿನ ಜನ ಬಾಳಲ್ಲಿ ಅಷ್ಟೇನೂ ಅವಸರ ಇಲ್ಲದವರಂತೆ "ಸ್ಲೋಮೊಶನ್" ಸಿನೆಮಾದ ಪಾತ್ರಧಾರಿಗಳಂತೆಯೇ ವರ್ತಿಸುತ್ತಾ ಕಾಲ ಹಾಕುತ್ತಿದ್ದರು. ಊರಲ್ಲಿ ನಡೆದ ಯಾವುದಾದರೂ ಹಗರಣದ ಗಾಸಿಪ್ ಮಾತಾಡಿಕೊಳ್ಳುತ್ತಾ ಬಸ್'ಸ್ಟ್ಯಾಂಡ್'ನಲ್ಲೋ, ಇಲ್ಲಾ ಮಲ್ಯರ ಜವಳಿಅಂಗಡಿಯ ಬೆಂಚಿನ ಮೇಲೋ, ಇಲ್ಲಾ ಮೀನಾಕ್ಷಿಭವನ-ಲಕ್ಷ್ಮಿಪ್ರಸಾದ ಅಥವಾ ಕಾರಂತರ ಹೋಟೆಲ್ ಕಟ್ಟೆಯ ಮೇಲೋ ಕೂತು ಕಂಡವರ ಪುರಾಣದ ಪೋಸ್ಟ್'ಮಾರ್ಟಂ ಮಾಡುತ್ತಾ ಮೋಟು ಬೀದಿ ಸೇದುತ್ತಾ ಕುಳಿತ "ಊರಿನ ಹತ್ತು ಸಮಸ್ತ"ರನ್ನು ಸದಾಕಾಲವೂ ಕಾಣಬಹುದಾಗಿತ್ತು! ಯಾರದಾದರೂ ಸಂಸಾರದಲ್ಲಿ ಅತಿಚಿಕ್ಕ ಹಗರಣವೊಂದು ಬೆಳಕಿಗೆ ಬಂದರೂ ಸಾಕು. ಸ್ವಯಂ ಸ್ಪೂರ್ತಿಯಿಂದ ಚಿಟಿಕೆ ನಶ್ಯ-ಮೂರೇ ಮೂರು ಬೀಡಿ-ಅರ್ಧ ಲೋಟ ಕಾಪಿಗೆ (ಇದು ಕಾಫಿಯಲ್ಲ ಕಾಪಿ) ಇವರು ಸ್ಥಳದಲ್ಲೇ ವಿಚಾರಣೆ ನಡೆಸಿ ರಾಜಿ ಪಂಚಾಯ್ತಿ ಮಾಡಲು ಯಾವಾಗಲೂ ತುದಿ ಕಾಲಿನ ಮೇಲೆ ನಿಂತಿರುತ್ತಿದ್ದರು. ಟಿವಿ ಹಾವಳಿಯಿಲ್ಲದ ಆ ದಿನಗಳಲ್ಲಿ ಟಾಕೀಸಿನ ಸಿನೆಮಾ, ವರ್ಷಕ್ಕೊಂದಾವರ್ತಿ ಜಾತ್ರೆಗೆ ಬರುವ ನಾಟಕ ಹಾಗೂ ಆಗಾಗ ದಾಂಗುಡಿಯಿಡುವ ಯಕ್ಷಗಾನಗಳಷ್ಟೆ ಸೀಮಿತ ಮನರಂಜನೆಯ ಮಾರ್ಗಗಳಾಗಿರುತ್ತಿದ್ದರಿಂದ ಇಂತಹ "ಮನರಂಜಕ" ಪರ್ಯಾಯಗಳನ್ನು ಹುಡುಕಿಕೊಳ್ಳುವುದು ಅಂತವರಿಗೆ ಅನಿವಾರ್ಯವೂ ಆಗಿತ್ತನ್ನಿ. ಇಂತಹ ಪೂಟು ಲಾಯರಿಗಳ ಗುಂಪಿರುವ ಹಲವಾರು "ಸೋಮಾರಿ ಕಟ್ಟೆ"ಗಳು ಆಗ ಚಾಲ್ತಿಯಲ್ಲಿದ್ದು ಸಂದರ್ಭಾನುಸಾರ ಅವರಲ್ಲೇ ಒಬ್ಬರು ನ್ಯಾಯಾಧೀಶನ ಪಾತ್ರ ವಹಿಸಿಕೊಂಡು ಪ್ರಕರಣ ಇತ್ಯರ್ಥಗೊಳಿಸಿ ಕೈ ಕರ್ಚಿಗೆ ನಾಲ್ಕು ಕಾಸು ಮಾಡಿಕೊಳ್ಳುತ್ತಿದ್ದರು! ಮುಂದಿನ ಹಗರಣವೊಂದು ಕೈಗೆ ಸಿಗುವ ತನಕ ನಿತ್ಯ ಸಭೆ ಸೇರಿದಾಗಲೆಲ್ಲ ಈ ಪ್ರಕರಣದ ಕೂಲಂಕುಷ ಪೋಸ್ಟ್'ಮಾರ್ಟಂ ಮಾಡಿ ಬಾಯಿ ಚಪಲವನ್ನ ಆದಷ್ಟು ತೀರಿಸಿಕೊಳ್ಳುತ್ತಾ ರೋಮಾಂಚಿತರಾಗುತ್ತಿದ್ದರು!


ಸದ್ಯ ಅದೇ ರಾಜ್ಯ ಹೆದ್ದಾರಿಯ ಅರ್ಧಭಾಗ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ. ಸುತ್ತು ಬಳಸಿ ಶೃಂಗೇರಿ ಮಾರ್ಗವಾಗಿ ಸಾಗುವ ಈ ರಾಷ್ಟ್ರೀಯ ಹೆದ್ದಾರಿ ಹೈದರಾಬಾದಿನಿಂದ ಮಂಗಳೂರನ್ನ ಸಂಪರ್ಕಿಸುತ್ತದೆ. ಊರಿನ ಬಹುಸಂಖ್ಯಾತರು ದಕ್ಷಿಣಕನ್ನಡ ಮೂಲದ ಕೊರಗರು, ಹೊಲೆಯರು, ಬಂಟರು, ಜೈನರು, ಹವ್ಯಕ ಬ್ರಾಮ್ಹಣರು, ಕೊಂಕಣಿ ಸಾರಸ್ವತರು, ಪೂಜಾರಿಗಳು, ಬ್ಯಾರಿಗಳು ಹಾಗೂ ಕ್ಯಾಥೊಲಿಕ್ ಪರ್ಬುಗಳು. ರಾಜಕೀಯವಾಗಿ ಸಾಕಷ್ಟು ಪ್ರಭಾವಶಾಲಿಗಳಾಗಿದ್ದರೂ ಇವರ ಪ್ರತಿನಿಧಿಯೊಬ್ಬ ಇಲ್ಲಿಯ ತನಕ ಸ್ಥಳೀಯ ಶಾಸಕನಾಗೋದು ಸಾಧ್ಯವಾಗಿಲ್ಲ. ಆ ಪಟ್ಟ ಇಲ್ಲಿನ ಮೂಲ ನಿವಾಸಿಗಳಾದ ಗೌಡರಿಗೆ ಮೀಸಲು. ಏಕೆಂದರೆ ಅಲಿಖಿತ ಒಪ್ಪಂದಕ್ಕೆ ಬಂದವರಂತೆ ಎಲ್ಲಾ ರಾಜಕೀಯ ಪಕ್ಷಗಳೂ ಒಕ್ಕಲಿಗ ಅಭ್ಯರ್ಥಿಯನ್ನೇ ಚುನಾವಣಾ ಕಣಕ್ಕಿಳಿಸುತ್ತವೆ. ಈ ಒಕ್ಕಲಿಗರ ಕೋಟೆಯಲ್ಲಿ ಕೋಣಂದೂರು ಲಿಂಗಪ್ಪ ಒಂದು ಅವಧಿಗೆ ಶಾಸಕರಾದದ್ದೊಂದು ಪವಾಡ. ಏಕೆಂದರೆ ಅವರು ಈಡಿಗ. ಇದು ಊರಿನ ಜಾತಿವಾರು ವಿವರಣೆಯಾದರೂ ಇಲ್ಲಿ ಜಾತಿ-ಕೋಮು ಸಾಮರಸ್ಯಕ್ಕೆ ನನಗೆ ನೆನಪಿರುವಂತೆ ಎಂದೂ ಬೆಂಕಿ ಬಿದ್ದಿಲ್ಲ. ದೇಶವೆಲ್ಲ ಕೋಮುದ್ವೇಷದ ದಳ್ಳುರಿಗೆ ಹೊತ್ತು ಉರಿದರೂ ತೀರ್ಥಹಳ್ಳಿಯ ಮಂದಿ ಮಾತ್ರ ತಮ್ಮ ನಿತ್ಯ ಕರ್ಮಗಳಲ್ಲೇ ವ್ಯಸ್ಥರಾಗಿರುತ್ತಾರೆ.ಅಷ್ಟೊಂದು ಮುಗ್ಧರು ಹಾಗು ಆಲಸಿಗಳು ಇಲ್ಲಿನವರು.

ಇಲ್ಲಿಗೆ ಒಂದು ಸ್ಥಳ ಪುರಾಣ ಬೇರೆ ಇದೆ. ಇದು ಪರಶುರಾಮ ಕ್ಷೇತ್ರ ಅಂತೆ. ತನ್ನ ಪರಶುವಿಗೆ ಅಂಟಿದ್ದ ಕೊನೆ ಹನಿ ನೆತ್ತರು ಇಲ್ಲಿನ ತುಂಗಾನದಿಯ ನೀರಲ್ಲಿ ತೊಳೆದು ಹೋದದ್ದರಿಂದ ಮಾತೃಹತ್ಯಾ ದೋಷದಿಂದ ವಿಮೋಚಿತನಾದ ಪರಶುರಾಮ ಇಲ್ಲಿ ಲಿಂಗ ಸ್ಥಾಪಿಸಿ ಆರಾಧಿಸಿಧನಂತೆ. ಆ ಜಾಗದಲ್ಲಿಯೆ ಕೆಳದಿಯ ದೊರೆಗಳು ಕಟ್ಟಿಸಿದ "ರಾಮೇಶ್ವರ' ದೇವಸ್ಥಾನ ಇರೋದು. ಪ್ರತಿ ವರ್ಷಕ್ಕೊಮ್ಮೆ ಬಲು ವೈಭವದಿಂದ ರಾಮೇಶ್ವರನಿಗೆ ಎಳ್ಳಮವಾಸ್ಯೆ ತೇರನೆಳೆದು ಮೂರುದಿನದ ಜಾತ್ರೆ ಮಾಡಲಾಗುತ್ತದೆ. ಮೊದಲ ದಿನ ಸ್ನಾನ, ಮರುದಿನ ರಥ, ಕೊನೆದಿನ ತೆಪೋತ್ಸವ ಹೀಗೆ ಇಡಿ ತೀರ್ಥಹಳ್ಳಿ ಈ ಮೂರುದಿನಗಳಲ್ಲಿ ಥಳಥಳ ಹೊಳೆಯುತ್ತಿರುತ್ತದೆ. ಅಂತಹ ಜಾತ್ರೆಯಲ್ಲಿಯೇ ಖಾದರ್ ಸಾಬರ ಮೂರು ಮಾರ್ಕಿನ ಬೀಡಿಗಳ ವ್ಯಾನ್ ಮೇಲಿನ ದಿಲೀಪನ ಕ್ಯಾಬರೆಗೆ ವಿಶೇಷ ಕಳೆ ಕಟ್ಟುತ್ತಿತ್ತು. ಅಂದು ಬೆಳ್ಳಿ ಬಣ್ಣದ ಮಿರಿಮಿರಿ ಮಿಂಚುವ ದಿರಿಸು ಧರಿಸಿದ ದಿಲೀಪ ಹಾಗು ಕಡುಗಪ್ಪು ಹೊಳೆವ ಬಟ್ಟೆ ಹಾಕಿದ ಅವನ ರಂಗದ ಮೇಲಿನ ನಾಯಕ ಮೈಬಳುಕಿಸಿ ಕುಣಿದು ಜಾತ್ರೆಗೆ ನೆರೆದ "ಕಲಾರಸಿಕರ" ತೃಷೆ ತಣಿಸಲು "ಮೈಯಾರೆ" ಶ್ರಮಿಸುತ್ತಿದ್ದರು. ಅದರಿಂದ ವ್ಯಾಪಾರ ಖಾದರ್ ಸಾಬರ ವ್ಯಾಪಾರ ಅದೆಷ್ಟು ವೃದ್ಧಿಸಿತು ಎನ್ನುವ ಬಗ್ಗೆ ಯಾವುದೆ ಅಂಕಿ ಅಂಶಗಳು ಲಭ್ಯವಿಲ್ಲ!

ಇವೆಲ್ಲ ವಯಸ್ಕರ, ಮೀಸೆ ಚಿಗುರಿದವರ ಮಾತಾಯಿತು. ನನ್ನಂತಾ ಎಳೆಯರಿಗೆ ಜಾತ್ರೆಯೆಂದರೆ ಬೆಂಡು-ಬತಾಸು, ಬೊಂಬಾಯಿ ಮಿಠಾಯಿ ಹಾಗೂ ಮರದ ಕುದುರೆ ಚಕ್ರದಲ್ಲಿ ಕೂತು ವೇಗವಾಗಿ ಸಾಗೋದು ಹಾಗೂ ಬಾವಿಯಲ್ಲಿ ಬೈಕೋಡಿಸುವುದನ್ನ ಬಿಡುಗಣ್ಣಿನಲ್ಲಿ ಬೆರಗಾಗಿ ನೋಡೋದು. ಇವಕ್ಕೆಲ್ಲ ಬೇಕಾಗುವ ಚಿಲ್ಲರೆ ಕಾಸಿಗಾಗಿ ಮನೆಯ ಹಿರಿಯರನ್ನ ಕಾಡಿ ಬೇಡ ಬೇಕಾಗುತ್ತಿತ್ತು. ಅದೃಷ್ಟ ನೆಟ್ಟಗಿದ್ದರೆ ದೊಡ್ಡ ಪುಗ್ಗೆಯ ಬಲೂನು, ಪ್ಲಾಸ್ಟಿಕ್ ವಾಚು ಹಾಗೂ ಊದುಪ ಪೀಪಿಯೂ ಹಿರಿಯರ ಬಳುವಳಿಯಾಗಿ ದೊರಕುವ ಸಾಧ್ಯತೆಯಿತ್ತು. ವರ್ಷದ ಏಕೈಕ ಗಮ್ಮತ್ತಿನ ಹೊತ್ತು ಅದಾಗಿರುತ್ತಿದ್ದರಿಂದ ತಾಲೂಕಿನ ಶಾಲಾ-ಕಾಲೇಜುಗಳಿಗೂ ಅಂದು ರಜೆ ಘೋಷಿಸಿರಲಾಗುತ್ತಿತ್ತು . ಮನೆಗೆ ಪರವೂರಿನ ನೆಂಟರು ಬರಲು ಜಾತ್ರೆಯೊಂದು ನೆಪವಾಗುತ್ತಿತ್ತು. ಬಾಲ್ಯದುದ್ದ ಜೀವನದಾಲ್ಲಿ ಅತ್ಯಂತ ಸಂತಸಮಯವಾಗಿರುತ್ತಿದ್ದ ದಿನಗೆಂದರೆ ಅವೆ. ಕಣ್ಣಿ ಹರಿದ ಕರುವಿನಂತೆ ಊರಿನುದ್ದ ಜಿಗಿದಾಡಿ ನಲಿಯಲು ಆ ದಿನಗಳಲ್ಲಿ ಸ್ವಲ್ಪ ಮಟ್ಟಿನ ಸ್ವಾತಂತ್ರವಿರುತ್ತಿತ್ತು. ರಥಬೀದಿಯ ಇಕ್ಕೆಲಗಳಲ್ಲೂ ಯಾವ್ಯಾವುದೋ ಊರಿನಿಂದ ಬರುತ್ತಿದ್ದ ವ್ಯಾಪಾರಿಗಳು ಕಣ್ಸೆಳೆಯುವ ಅನೇಕ ಸಾಮಾನುಗಳ ಅಂಗಡಿಯ ಟೆಂಟ್ ಹಾಕುತ್ತಿದ್ದರು. ಹೆಂಗಸರ ಸರ ಬಿಂದಿ, ಗಂಡಸರ ಟೊಪ್ಪಿ ಬೆಲ್ಟು, ನಮ್ಮಂತಹ ಮಕ್ಕಳ ಬಾಯಲ್ಲಿ ನೀರೂರಿಸುವ ಸಕ್ಕರೆ ಮಿಠಾಯಿ ಐಸ್'ಕ್ಯಾಂಡಿ ಯಾವುದು ಕೇಳುತ್ತೀರಿ? ಸಾಕ್ಷಾತ್ ಇಂದ್ರನ ಅಮರಾವತಿಗೆ ಹೋದ ಹಾಗಾಗಿ ಮನಸು ನಿಯಂತ್ರಣ ಕಳೆದುಕೊಂಡ ಕುದುರೆಯಾಗುತ್ತಿತ್ತು. ಕಣ್ಣು ಹಾಯಿಸಿದಷ್ಟು ದೂರವೂ ಜನಾ ಜನಾ ಜನಾ. ಜಾತ್ರೆಯ ಕಥೆ ಇನ್ನೂ ಇದೆ.

12 September 2012

ಹೀಗಿತ್ತು ನಮ್ಮೂರು....





ನಮ್ಮೂರಿನ ಜನ ಬಡ ಭಾರತದ ಇನ್ಯಾವುದೇ ಹಳ್ಳಿಗಾಡಿನ ಪ್ರಜೆಗಳಂತೆ ಸಾಕಷ್ಟು ಎಬಡರಾಗಿದ್ದರು. ವಿಪರೀತವೆನ್ನುವಷ್ಟು ದೈವಭಕ್ತರು. ಸಾಲ ಮಾಡಿಯಾದರೂ ವರ್ಷಕ್ಕೊಂದಾವರ್ತಿ ಧರ್ಮಸ್ಥಳ, ಉಡುಪಿ, ಕಟೀಲು, ಮಂದಾರ್ತಿ, ಸುಬ್ರಮಣ್ಯಕ್ಕೆ ಯಾತ್ರೆ ಹೋಗಿ ಇಡೀ ವರ್ಷ ಹುಟ್ಟಿದ್ದಕ್ಕೆ-ಸತ್ತದ್ದಕ್ಕೆ-ಜಾನುವಾರು ಕಳೆದು ಹೋಗಿದ್ದಕ್ಕೆ-ಸೀಕಾದದ್ದಕ್ಕೆ ಹೀಗೆ ಹೊತ್ತ ಅಸಂಖ್ಯ ಹರಕೆಗಳನ್ನೆಲ್ಲ ತೀರಿಸಿ ತಲೆ ಬೋಳಿಸಿಕೊಂಡೆ ಬರುವವರು. ಮಾತುಮಾತಿಗೆ "ಕೆಳಗಿನ ದೇವರ ಆಣೆ" ( ಧರ್ಮಸ್ಥಳದ ಮಂಜುನಾಥನ ಭಕ್ತರಾಗಿದ್ದ ಎಲ್ಲರಿಗೂ ಅವನ ಹೆಸರನ್ನ ಹೇಳೋಕೂ ಅಂಜಿಕೆ!) ಹಾಕಿ ಭಯ ಹುಟ್ಟಿಸುವುದರಲ್ಲಿ ನಿಸ್ಸೀಮರು. ಅವರ ಭಕ್ತಿಯ ಬೆಳೆಯಲ್ಲಿ ದೇವರಿಗೆ ಕೊಟ್ಟಷ್ಟೇ ಮಹತ್ವ ಭೂತಕ್ಕೂ ಇತ್ತು,ಈಗಲೂ ಇದೆ. ಘಟ್ಟದ ಮೇಲಿನ ಊರಾಗಿದ್ಧರೂ ತೀರ್ಥಹಳ್ಳಿಯ ಬಹುಸಂಖ್ಯಾತರು ದಕ್ಷಿಣ ಕನ್ನಡ ಮೂಲದವರೆ ಆಗಿರೋದರಿಂದಲೂ ಏನೋ ಭೂತಾರಾಧನೆ ಅಲ್ಲಿ ಸಹಜವಾಗಿ ಬೇರುಬಿಟ್ಟಿತ್ತು. ತೀರ್ಥಹಳ್ಳಿ ಈಗೇನೋ ಬೆಳೆದು ದೊಡ್ಡ ಊರಾಗಿರಬಹುದು ಆದರೆ ಕೇವಲ ಇಪ್ಪತ್ತೇ-ಇಪ್ಪತ್ತು ವರ್ಷಗಳ ಹಿಂದೆ ಹೆಸರಿಗೆ ತಕ್ಕಂತೆ ದೊಡ್ಡದೊಂದು ಹಳ್ಳಿಯಾಗಿಯೆ ಇತ್ತು.


ಹೀಗಾಗಿ ಅಲ್ಲಿನ ಪ್ರತಿ ಬಡಾವಣೆಗಳಲ್ಲೂ ಭೂತರಾಯಸ್ವಾಮಿಯದ್ದೋ ಇಲ್ಲ ಚೌಡಿಯದ್ದೋ ಬನ ಇದ್ದೆ ಇರುತ್ತಿತ್ತು. ಆಗೆಲ್ಲ ಸಣ್ಣ ಮಕ್ಕಳು ಸಂಜೆ ಕವಿದ ಮೇಲೆ ಹೋಗಲು ಹೆದರುತ್ತಿದ್ದ ಇಂತಹ ಬನಗಳ ಸುತ್ತಮುತ್ತ ಇತ್ತೀಚಿಗೆ ಜೀವಂತ ಭೂತಗಳಂತ ಜನರು ಎರಡೋ-ಮೂರೋ ಅಂತಸ್ತಿನ ಉಪ್ಪರಿಗೆಯ ಮನೆ ಕಟ್ಟಿಕೊಂಡಿರೋದು ಇತ್ತೀಚಿಗೆ ಊರಿಗೆ ಹೋಗಿದ್ದಾಗ ನೋಡಿ ಬೇಜಾರಾಯಿತು. ನಾವೆಲ್ಲ ಚಿಕ್ಕವರಾಗಿದ್ಧಾಗ ಒಂದು ತರಹ ನಿಗೂಡ ಭಯ ಹುಟ್ಟಿಸುವ ಇಂತಹ ಪವರ್ ಫುಲ್(!) ಭೂತದ ಕಲ್ಲುಗಳಿದ್ದ ತಾಣಗಳೆಲ್ಲ ಇಂದು ಗತ ವೈಭವ ಕಳೆದುಕೊಂಡು ಪಳಯುಳಿಕೆಯಂತೆ ನಿಂತಿವೆ. ಹಿಂದೊಮ್ಮೆ ತಮಗೆ ಹೆದರುತ್ತಿದ್ದ ಹುಲುಮಾನವರಿಗೆ ಇದೀಗ ತಾವೇ ಹೆದರಿ ಸಾಯಬೇಕಾದ ದೈನೇಸಿ ಸ್ಥಿತಿ ಭೂತಗಳಿಗೆ! ಅದಕ್ಕೆ ಇರಬೇಕು ಇಂದಿನ ಮಕ್ಕಳಿಗೆ ನಮಗಿದ್ದಷ್ಟು ಕಲ್ಪನಾ ಸಾಮರ್ಥ್ಯವೂ ಇಲ್ಲ. ನಾವು ಕಂಡ ಚಂದದ ತೀರ್ಥಹಳ್ಳಿಯ ಕಾಣೋ ಭಾಗ್ಯವೂ ಅವರಿಗಿಲ್ಲ. ಒಟ್ಟಿನಲ್ಲಿ ನಾನು ಕಂಡು ಬೆಳೆದಿದ್ದ ಆ ತೀರ್ಥಹಳ್ಳಿ ಇವತ್ತು ಎಲ್ಲೋ ಕಳೆದೇಹೋಗಿದೆ. ಕಣ್ಣು ಮುಚ್ಚಿಕೊಂಡು ತೀರ್ಥಹಳ್ಳಿಯನ್ನು ನೆನಪಿಸಿಕೊಂಡರೆ ಮೊದಲಿಗೆ ನನಗೆ ನೆನಪಾಗೋದು ವೆಂಕಟೇಶ್ವರ ಟಾಕೀಸು, ಆಮೇಲೆ ಸೋಮವಾರದ ಸಂತೆ, ಅದರ ನಂತರ ರಾಮೇಶ್ವರ ದೇವಸ್ಥಾನ, ಅನಂತರ ತುಂಗಾ ಹೊಳೆ ಮಧ್ಯದ ರಾಮಮಂಟಪ, ಅದಾದ ಮೇಲೆ ನಮ್ಮ ಮನೆ ಕೆಳಗಿದ್ದ ನಾಗರಬನ. ಅದಾದ ನಂತರ ನಾನು ಇಷ್ಟಪಟ್ಟು ಹೋಗುತ್ತಿದ್ದ ಸರಕಾರಿ ಜೆ ಸಿ ಆಸ್ಪತ್ರೆ (ಸಣ್ಣಪುಟ್ಟ ಸೀಕಿಗೂ ಇಂಜೆಕ್ಷನ್ ಹಾಕಿಸಿಕೊಳ್ಳುವ ವಿಲಕ್ಷಣ ಖಯಾಲಿ ನನಗಿತ್ತು, ಸಾಮಾನ್ಯವಾಗಿ ಪುಟ್ಟ ಮಕ್ಕಳು ಸೂಜಿಗೆ ಅಂಜುತ್ತವೆ... ನಾನದಕ್ಕೆ ಅಪವಾದವಾಗಿದ್ದೆ. ನನ್ನ ಅಂಜಿಸುತ್ತಿದ್ದುದು ಕಹಿ ಸಿರಪ್ ಹಾಗು ಮಾತ್ರೆಗಳಷ್ಟೆ!). ಬಸ್'ಸ್ಟ್ಯಾಂಡ್'ನಲ್ಲಿದ್ದಕಾರಂತರ ಮಯೂರ ಹೋಟೆಲಿನಲ್ಲಿ ಅಜ್ಜ ಕೊಡಿಸುತ್ತಿದ್ದ ಮಸಾಲೆ ದೋಸೆ! ಹೀಗೆ ಇವೆಲ್ಲ ನನ್ನ ಸ್ಮ್ರತಿಯಲ್ಲಿ ಫ್ರೇಮ್ ಹಾಕಿದಂತೆ ಉಳಿದುಬಿಟ್ಟಿವೆ.ಬಹುಶಃ ನಾನೂ ಅಲ್ಲಿಯೇ ಫ್ರೀಜ್ ಆಗಿದ್ದೇನೆ!


ಹಾಗೆ ನೋಡಿದರೆ ನಮ್ಮ ಅಜ್ಜನಿಗೆ ಒಟ್ಟು ಆರು ಮಕ್ಕಳು. ನನ್ನ ಹೆತ್ತಮ್ಮ ಮೊದಲನೆಯವಳು, ನನ್ನ ಮೊದಲ ಚಿಕ್ಕಮ್ಮನಿಗೆ ಎರಡೆ-ಎರಡು ವರ್ಷ ವಯಸ್ಸಾಗಿದ್ದಾಗ ಕ್ಷುಲ್ಲಕ ಕಾರಣಕ್ಕಾಗಿ ನನ್ನಜ್ಜಿ ಆತ್ಮಹತ್ಯೆ ಮಾಡಿಕೊಂಡರಂತೆ. ಡ್ರೈವರ್ ಕೆಲಸ ಮಕ್ಕಳ ದೆಖಾರೇಖಿ ಮಾಡಿಕೊಳ್ಳಬೇಕಾದ ಸಂಕಟ ನೋಡಲಾರದೆ ಅಳಿಯನ ಮರು ಮದುವೆಯನ್ನ ತಾವೇ ಖುದ್ಧಾಗಿ ಹೆಣ್ಣು ನೋಡಿ ಅತ್ತೆ-ಮಾವನೆ ಮುಂದೆನಿಂತು ಮಾಡಿಸಿಕೊಟ್ಟರಂತೆ. ಶೀಘ್ರ ಕೋಪಿಯೂ, ಅವಿವೇಕಿಯೂ ಆದ ಮಗಳ ತಪ್ಪು ತಿಳಿದ ವಿವೇಕಿಗಳು ಅವರಿದ್ದಿರಬಹುದೇನೋ!. ಹೀಗೆ ನಮ್ಮ ಮನೆತುಂಬಿ ಬಂದವರೇ ನನ್ನಮ್ಮ. ಅವರಿಗೂ ಎರಡು ಗಂಡು ಹಾಗು ಎರಡು ಹೆಣ್ಣು ಮಕ್ಕಳಾದವು. ನನ್ನ ಹೆತ್ತಮ್ಮ ಅಹಲ್ಯ, ಚಿಕ್ಕಮ್ಮ ನಾಗರತ್ನ, ಮಾವಂದಿರಾದ ಸುರೇಶ-ಪ್ರಕಾಶ, ಕಿರಿಚಿಕ್ಕಮ್ಮಂದಿರು ಆಶಾ -ಪೂರ್ಣಿಮಾ ಇವರಿಷ್ಟೇ ಇದ್ದ ನಮ್ಮ ಮನೆಗೆ ಕಿರಿಯವನಾಗಿ ನಾನು ಹುಟ್ಟಿದ್ಧು ೨೬ ಆಗೋಸ್ಟ್ ೧೯೮೨ ರಂದು. ಮನೆಗೆ ಮೊದಲ ಮೊಮ್ಮಗ ನಾನಾಗಿದ್ದರಿಂದ ಆ ಕಾಲದ ಪದ್ದತಿಯಂತೆ ನಾನು ಮನೇಲೆ ಹುಟ್ಟಿದೆ.

ಇಲ್ಲೊಂದು ತಮಾಷೆಯೂ ಇದೆ.ನನ್ನ ಹುಟ್ಟಿನ ಕಾಲಕ್ಕೋ ನಮ್ಮಜ್ಜ ಡ್ಯೂಟಿ ಮೇಲಿದ್ದರು, ಅವರು ಬಂದು ನನ್ನ ಮೊದಲಿಗೆ ನೋಡಿದಾಗ ನಾನು ನಾಲ್ಕು ಧಿನ ದೊಡ್ಡವನಾಗಿದ್ದೆ. ಇವರು ಪುರಸಭೆಗೆ ಜನನ ನೋಂದಣಿ ಮಾಡಿಸೋಕೆ ಹೋದಾಗ ಅಲ್ಲಿನವರು ತಡವಾಗಿ ಬಂದುದಕ್ಕೆ "ಏನ್ರಿ ನಾಲ್ಕ್ ದಿನದಿಂದ ಮಗು ಹುಟ್ಟಲೇ ಇತ್ತ?" ಅಂತ ಸರಿಯಾಗಿ ಬೈದರಂತೆ.ಅವರ ಮಾತಿಗೆ ಬೆಪ್ಪಾಗಿ ನನ್ನ ಜನನ ದಿನವನ್ನ ಅಜ್ಜ ಅದೇ ದಿನಕ್ಕೆ ಅಂದರೆ ೧ನೆ ಸೆಪ್ಟೆಂಬರ್ ಅಂತಲೇ ಬರಿಸಿದ್ದಾರೆ. ಹೀಗಾಗಿ ದಾಖಲಾತಿಗಳಲ್ಲಿ ನಾನು ನಾಲ್ಕುದಿನ ತಡವಾಗಿ ಹುಟ್ಟಿದೆ! ನಾನು ಹುಟ್ಟುವಾಗ ಮೊದಲ ಚಿಕ್ಕಮ್ಮ ಅಲ್ಲೆ ಸಮೀಪದ ಕಟ್ಟೆಹಕ್ಕಲು ಎಂಬ ಊರಲ್ಲಿ ಟೀಚರ್ ಆಗಿದ್ದರು. ಮಾವಂದಿರು ಕಾಲೇಜಿನ ಮೆಟ್ಟಲು ಹತ್ಟಿದ್ದರೆ ಒಬ್ಬ ಚಿಕ್ಕಮ್ಮ ಹೈಸ್ಕೂಲಿನಲ್ಲೂ ಇನ್ನೊಬ್ಬಳು ನಾಲ್ಕನೇ ಕ್ಲಾಸಿನಲ್ಲೂ ಇದ್ದಳು. ಹೀಗಾಗಿ ನಾನೆಂದರೆ ಎಲ್ಲರಿಗೂ ವಿಪರೀತ ಪ್ರೀತಿ. ಅವರೆಲ್ಲರಿಗೂ ಆಡಲು ಒಂದು ಜೀವಂತ ಬೊಂಬೆ ಸಿಕ್ಕಂತೆ ಆಗಿತ್ತೇನೋ! ಅದೇನೇ ಇದ್ದರೂ ನನ್ನ ನೆನಪಿನಲ್ಲಿ ಭದ್ರವಾಗಿರುವ ಮೊದಲ ನಾಲ್ಕೈದು ವರ್ಷಗಳು ಸಂಭ್ರಮದಿಂದಲೇ ಕೂಡಿದ್ದವು.


ನನಗೆ ನೆನಪಿರುವ ಹಾಗೆ ನಮಗ್ಯಾರಿಗೂ ಬಾಲ್ಯದಲ್ಲೇನೂ ನಮ್ಮೆಲ್ಲರಿಗೆ ಸುಖ ಸಂತೋಷಕ್ಕೆ ಕೊರತೆಯಿರಲಿಲ್ಲ ಅಥವಾ ನೋವಿನ ಅರಿವೂ ಇರದ ಎಲ್ಲವೂ ಸುಂದರ ಎನಿಸೊ ಮುಗ್ಧ ಸ್ಥಿತಿಯದು ಎನ್ನೋದು ಹೆಚ್ಚು ಸರಿ. ಆಗಿನಿಂದಲೂ ನಾವು ಅಂದರೆ ನನ್ನಮ್ಮ, ಅಜ್ಜ, ಅಜ್ಜಿ. ಇಬ್ಬರು ಚಿಕ್ಕಮ್ಮಂದಿರು ಹಾಗೆ ಇಬ್ಬರು ಮಾವಂದಿರು ಜೊತೆಯಾಗಿಯೇ ಇದ್ದ ನೆಮ್ಮದಿಗೇನೂ ಕೊರತೆಯಿರದ ಸರಳ ಮಧ್ಯಮವರ್ಗದ ಕುಟುಂಬ ನಮ್ಮದು. ನನ್ನ ಪ್ರಪಂಚವೂ ಅಷ್ಟಕ್ಕೆ ಸೀಮಿತ. ಅದು ಬಿಟ್ಟರೆ ನಾನು ಹೋಗುತ್ತಿದ್ದ ಬಾಲವಾಡಿ, ಅಲ್ಲಿನ ಉದ್ದ ಜಡೆಯ ಟೀಚರ್ ಹಾಗು ತುರುಬಿನ ಟೀಚರ್ ಇವರಿಗೆ ನನ್ನ ಅರಿವಿನ ಪರಿಧಿ ಮುಗಿದಿರುತ್ತಿತ್ತು. ನಿಜವಾಗಿ ನಾನು ಅಂಟಿಕೊಂಡಿರುತ್ತಿದ್ದುದು ನನ್ನಜ್ಜಿಗೆ ಅವರನ್ನೇ ಅಮ್ಮ ಎಂದು ಕರೆಯುತ್ತಿದ್ದೆ, ಈಗಲೂ ಅವರನ್ನೇ ಅಮ್ಮ ಎನ್ನೋದು. ಬಡತನ ಸಾರ್ವತ್ರಿಕವಾಗಿದ್ದ ಆ ದಿನಗಳಲ್ಲಿ ಇಂದು ಎಲ್ಲರ ಮನೆಯಲ್ಲೂ ಕಾಣಸಿಗುವ ಐಶಾರಾಮಿ ಸಲಕರಣೆಗಳು ಎಲ್ಲೋ ಒಂದೆರಡು ಉಳ್ಳವರ ಮನೆಯ ಸ್ವತ್ತು ಮಾತ್ರ ಆಗಿದ್ದವು. ಹೀಗಾಗಿ ಯಾರಿಗೂ ಅದೊಂದು ಕೊರತೆ, ಅದಿಲ್ಲದ ಬಾಳು ಪರಿಪೂರ್ಣವಲ್ಲ ಅಂತ ಅನ್ನಿಸುತ್ತಲೇ ಇರಲಿಲ್ಲ ಅಂದುಕೊಳ್ಳುತ್ತೇನೆ.

ಮನೆಯಲ್ಲಿ ಆರು ಕರೆಯುವ ದನಗಳಿದ್ದವು ಅಜ್ಜ ಆಗಿನ್ನೂ ಗಜಾನನ ಕಂಪೆನಿಯಲ್ಲಿ ಡ್ರೈವರ್ ಆಗಿದ್ದರು. ನಿತ್ಯ ಉಡುಪಿಯಿಂದ ಶಿವಮೊಗ್ಗದ ರೂಟಲ್ಲಿ ಅವರದ್ದು ಪಾಪ ಗಾಣದೆತ್ತಿನ ದುಡಿತ. ಇತ್ತ ಮನೆಯಲ್ಲಿ ತಿನ್ನೋ ಕೈಗಳು ಹದಿನಾರು, ಅತ್ತ ದುಡಿಮೆ ಆಗುತಿದ್ದುದು ಎರಡೇ ಕೈಗಳಿಗೆ. ಹೀಗಾಗಿ ಅಷ್ಟಿಷ್ಟು ಮನೆ ಖರ್ಚು ಸರಿದೂಗಿಸಲು ಅಮ್ಮ ಮಾಡುತಿದ್ದ ಪ್ರಯತ್ನದ ಫಲವೆ ಹಾಲು ಮಾರಾಟಕ್ಕಾಗಿ ದನ ಸಾಕಣೆ. ಹೀಗೆ ಕರೆದ ಹಾಲನ್ನ ವರ್ತನೆಮನೆಗಳಿಗೆ ಕೊಟ್ಟು ಬರೊ ಜವಾಬ್ದಾರಿ ನನ್ನದಾಗಿತ್ತು. ಪುಟ್ಟ ಬುಟ್ಟಿಯಲ್ಲಿ ಅಮ್ಮ ತುಂಬಿಸಿಕೊಟ್ಟ ಚಟಾಕು ಬಾಟಲಿಗಳನ್ನೆಲ್ಲ ನನ್ನ ಪುಟ್ಟ ಅಂಗೈಯಲ್ಲಿ ಭದ್ರವಾಗಿ ತುಳುಕದಂತೆ ಹಿಡಿದು ಸಮೀಪದ ಮನೆಗಳಿಗೆ ಹೊತ್ತಿಗೆ ಸರಿಯಾಗಿ ನಾನು ಹಾಲು ಮುಟ್ಟಿಸುತ್ತಿದ್ದೆ.

ನನಗೆ ಹಿಡಿಸಿದ ಕೆಲವು ನಿಜಗಳು..... ನಿಮಗೂ ನಿಜವನಿಸೀತು...




ನಮ್ಮ ದೇಶದ ರೈತರ ಶಕ್ತಿಯನ್ನು ವೃತ್ತಿಪರ ನಿರ್ವಹಣೆಯೊಂದಿಗೆ ಕಲೆಹಾಕಿದರೆ ಏನಾಗಬಹುದು? ಅವರು ಏನನ್ನು ತಾನೆ ಸಾಧಿಸುವುದು ಅಸಾಧ್ಯ? ಭಾರತ ಏನನ್ನು ತಾನೆ ಹೊಂದಲಾರದು? ಆದರೆ ಇದನ್ನೆಲ್ಲಾ ಆಗ ಮಾಡುವ ಮುನ್ನ ಬಾರ್ಬರ ವಾರ್ಡ್ ಹೇಳಿದ "ಪಾಲ್ಗೊಂಡ, ಪೂರ್ಣ ಸಹಕಾರದ ನಿಜವಾದ ಅಸ್ತಿಭಾರ" ಹಾಕಬೇಕು. ಪಟ್ಟಣ ಮತ್ತು ಹಳ್ಳಿಗಳ ನಡುವೆ, ಕೈಗಾರಿಕೆ ಮತ್ತು ಕೃಷಿಗಳ ನಡುವೆ ಇರುವ ದಟ್ಟವಾದ ವ್ಯತ್ಯಾಸವನ್ನು ಸರಿಪಡಿಸಬೇಕಾದರೆ ರೈತರನ್ನು ಸಂಘಟಿಸುವುದು ಅತ್ಯಗತ್ಯವಾಗಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು "ಆನಂದ್"ನಲ್ಲಿ ನಮ್ಮ ಜನರನ್ನು ತೀರ್ಮಾನ ತೆಗೆದುಕೊಳ್ಳುವ ಕಾರ್ಯವಿಧಾನಗಳಲ್ಲಿ ತೊಡಗಿಸಿಕೊಳ್ಳುವ ವ್ಯವಸ್ಧೆಗಳನ್ನು ರೂಪಿಸುವ ಅಗತ್ಯತೆ ನಮಗೆ ಕಂಡುಬಂತು. ಜನ ಸಾಮಾನ್ಯರ ಮಟ್ಟದಲ್ಲಿ ನಾವು ಪ್ರಜಾಪ್ರಭುತ್ವವನ್ನು ಹೊಂದಿಲ್ಲವಾದರೆ ಡೆಲ್ಲಿಯಲ್ಲಿ ಅದು ಇದ್ದು ಏನು ಪ್ರಯೋಜನ? ತಮ್ಮತಮ್ಮ ವಿವಾದಗಳನ್ನು ಬಗೆಹರಿಸಿಕೊಳ್ಳುವುದನ್ನು ನಮ್ಮ ಭಾವಿ ನಾಯಕರು ಕಲಿಯುವ ಶಾಲೆ ಹಳ್ಳಿಯ ಸಹಕಾರಿ ಸಂಘಗಳಲ್ಲದೆ ಮತ್ತೆಲ್ಲಿ? ನಿರ್ವಹಣೆ ಮತ್ತು ವ್ಯಾಪಾರ ವಾಹಿವಾಟುಗಳ ಸ್ನಾತಕೋತ್ತರ ತರಬೇತಿಯನ್ನು ಚುನಾಯಿತ ಪ್ರತಿನಿಧಿಗಳಿಗೆ ನೀಡುವ ಕಾಲೇಜುಗಳು ತಾಲೂಕು ಅಥವಾ ಜಿಲ್ಲಾ ಯೂನಿಯನ್'ಗಳೇ ಅಲ್ಲವೆ?

ದೆಹಲಿಯಲ್ಲಿ ಫ್ಲೈ ಓವರ್ ಗಳನ್ನು ಕಟ್ಟುವುದು ತಪ್ಪಲ್ಲ, ನಮ್ಮ ಹಳ್ಳಿಗಳಿಗೆ ಸಂಪರ್ಕ ರಸ್ತೆಗಳನ್ನು ನಾಡಿನುದ್ದಕ್ಕೂ ನಾವು ನಿರ್ಮಿಸದಿರುವುದು ಅಪರಾಧ. ನಮ್ಮ ರಾಜಧಾನಿ ಬಣ್ಣ ಬಣ್ಣದ ಬೆಳಗು ಸೂಸುವ ಕಾರಂಜಿಗಳನ್ನು ಹೊಂದಿರುವುದು ಎಂದೂ ತಪ್ಪಲ್ಲ, ಏನೆ ಆದರೂ ದೆಹಲಿ ಸುಂದರವಾಗಿರಲೇಬೇಕು. ಆದರೆ ನಾವು ನಮ್ಮ ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರಿನ ವ್ಯವಸ್ಧೆ ಮಾಡದಿರುವುದು, ಹನಿ ನೀರಿಗಾಗಿ ಗ್ರಾಮೀಣ ಜನ ಮೈಲುಗಟ್ಟಲೆ ಅಂಡಲೆಯುವುದು ಅನ್ಯಾಯ. ಮುಂಬಯಿಯಲ್ಲಿ ಆಧುನಿಕ ಖಾಸಗಿ ಆಸ್ಪತ್ರೆ ಇರುವುದಾಗಲಿ ಇಲ್ಲವೇ ಏಮ್ಸ್ ದೆಹಲಿಯಲ್ಲಿರುವುದಾಗಲಿ ತಪ್ಪೇನೂ ಅಲ್ಲ, ಆದರೆ ಹಳ್ಳಿಯ ಬಡವನ ಆಗತಾನೆ ಜನಿಸಿದ ಮಗುವಿಗೆ ಸಂಭಾವ್ಯ ಕುರುಡು ತಪ್ಪಿಸಲು ಎರಡೇ ಎರಡು ಹನಿ ಔಷಧಿ ವ್ಯವಸ್ಥೆ ಮಾಡದಿರುವುದು ಪರಮ ಘಾತುಕತನ. ಇದ್ದಕ್ಕೆಲ್ಲ ಕೇವಲ ಮುಂದಾಲೋಚನೆಯ ಮುತುವರ್ಜಿ ಸಾಕೆ ಸಾಕು, ಹಣದ ಅಗತ್ಯ ತೀರಾ ಕಡಿಮೆ ಆದರೂ ಪಂಚತಾರಾ ಆಸ್ಪತ್ರೆಗಳನ್ನು ಕೋಟ್ಯಾಂತರ ಖರ್ಚು ಮಾಡಿ ಮಹಾನಗರಗಳಲ್ಲಿ ಕಟ್ಟಲು ಮುಂದಾಗುತ್ತೇವೆ. ಕುಗ್ರಾಮಗಳಲ್ಲಿ ಜೀವರಕ್ಷಕ ಮದ್ದುಗಳ ಕಿರು ಆರೋಗ್ಯ ಘಟಕಗಳನ್ನ ಸ್ಥಾಪಿಸಲು ಮರೆಯುತ್ತೇವೆ. ಹೀಗೆ ಆಗುತ್ತಿರುವುದಾದರೂ ಏಕೆ? ಏಕೆಂದರೆ ನೀತಿ ನಿರೂಪಿಸುವ ಅಧಿಕಾರ ನಮ್ಮ ಗಣ್ಯರ ಕೈಯಲ್ಲಿ ಇದ್ದು ಮತ್ತು ಸ್ವಾಭಾವಿಕವಾಗಿಯೋ ಇಲ್ಲವೇ ಅವರ ಅರಿವಿಗೆ ಬಾರದೆ ನಿರೂಪಿಸುವ ಕಾನೂನುಗಳೆಲ್ಲ ಅವರಿಗೆ ಹಾಗು ಇದನ್ನ ಓದುತ್ತಿರುವ ನಮ್ಮಂತಹ "ನಾಗರೀಕ"ರಿಗೆ ಮಾತ್ರ ಅನುಕೂಲವಾಗುವಂತೆಯೇ ಇರುತ್ತದೆ. ಹೀಗಾಗಿ ನಾಚಿಕೆಯೇ ಇಲ್ಲದೆ ಎಲ್ಲರಿಗೂ ಸೇರಿದ ಸಂಪತ್ತುಗಳನ್ನು ನಾವಷ್ಟೆ ನಿರ್ಲಜ್ಜರಾಗಿ ಅನುಭವಿಸುತ್ತಿದ್ದೇವೆ. ಇನ್ನೂ ದುರಂತವೆಂದರೆ ಇದರ ಅರಿವೇ ನಮಗಿಲ್ಲ!

-ವರ್ಗೀಸ್ ಕುರಿಯನ್ (ಅಮೂಲ್ ಯಶಸ್ಸಿನ ರೂವಾರಿ)