13 September 2012
ಜಾತ್ರೆಯ ನೆನಪು....
ತೀರ್ಥಹಳ್ಳಿ ಪೇಟೆ ಮೂರು ಮುಕ್ಕಾಲು "ರಾಜ"ಬೀದಿ ಗಳಲ್ಲೇ ಮುಗಿದು ಹೋಗುವಂತದ್ದು. ಅಂದು ಅದರ ಒಟ್ಟು ಜನಸಂಖ್ಯೆ ಮೂರು ಸಾವಿರ ಮೀರಿರಲಿಕ್ಕಿಲ್ಲ. ಇಂದು ಹೆಚ್ಚೆಂದರೆ ಅದರ ಎರಡು ಪಟ್ಟು ಹೆಚ್ಚಾಗಿದ್ದರೆ ಅದೆ ಒಂದು ಸಾಧನೆ. ಊರಿನ ವಾಣಿಜ್ಯ ಚಟುವಟಿಕೆಗಳೆಲ್ಲ ಆಜಾದ್ ರಸ್ತೆ, ರಥಬೀದಿ, ಮಸೀದಿರಸ್ತೆಗೆ ಸೀಮಿತವಾಗಿದ್ದವು. ಊರೊಳಗೆ ಗದ್ದೆ ತೋಟಗಳಿದ್ದು ಅದರ ವ್ಯಾಪ್ತಿಯಾಚೆಗೆ ಸೊಪ್ಪುಗುಡ್ಡೆ-ಬೆಟ್ಟಮಕ್ಕಿಯಂತಹ ಬಡಾವಣೆಗಳು ವ್ಯಾಪಿಸಿರುತ್ತಿದ್ದರಿಂದ ಇದನ್ನ ಹಳ್ಳಿ ಎನ್ನಬೇಕೊ ಇಲ್ಲಾ ಪಟ್ಟಣ ಎನ್ನಬೇಕೊ ಅನ್ನುವ ಗೊಂದಲ ನಿರಂತರ ಕಾಡುತ್ತಿತ್ತು. ಆಗುಂಬೆ ಮಾರ್ಗವಾಗಿ ಕರಾವಳಿಯ ಮಂಗಳೂರು, ಉಡುಪಿಗಳನ್ನ ಮಲೆನಾಡಿನ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಊರಿನ ಮಧ್ಯ ಸಾಗಿ ಹೋಗುತ್ತಿದ್ದರಿಂದ ಊರಿಗೆ ಒಂದು ಗಡಿಬಿಡಿಯ ಕಳೆ ಬಂದಿತ್ತು.
ಇಲ್ಲದಿದ್ದರೆ ಇಡೀ ಊರಿನ ಜನ ಬಾಳಲ್ಲಿ ಅಷ್ಟೇನೂ ಅವಸರ ಇಲ್ಲದವರಂತೆ "ಸ್ಲೋಮೊಶನ್" ಸಿನೆಮಾದ ಪಾತ್ರಧಾರಿಗಳಂತೆಯೇ ವರ್ತಿಸುತ್ತಾ ಕಾಲ ಹಾಕುತ್ತಿದ್ದರು. ಊರಲ್ಲಿ ನಡೆದ ಯಾವುದಾದರೂ ಹಗರಣದ ಗಾಸಿಪ್ ಮಾತಾಡಿಕೊಳ್ಳುತ್ತಾ ಬಸ್'ಸ್ಟ್ಯಾಂಡ್'ನಲ್ಲೋ, ಇಲ್ಲಾ ಮಲ್ಯರ ಜವಳಿಅಂಗಡಿಯ ಬೆಂಚಿನ ಮೇಲೋ, ಇಲ್ಲಾ ಮೀನಾಕ್ಷಿಭವನ-ಲಕ್ಷ್ಮಿಪ್ರಸಾದ ಅಥವಾ ಕಾರಂತರ ಹೋಟೆಲ್ ಕಟ್ಟೆಯ ಮೇಲೋ ಕೂತು ಕಂಡವರ ಪುರಾಣದ ಪೋಸ್ಟ್'ಮಾರ್ಟಂ ಮಾಡುತ್ತಾ ಮೋಟು ಬೀದಿ ಸೇದುತ್ತಾ ಕುಳಿತ "ಊರಿನ ಹತ್ತು ಸಮಸ್ತ"ರನ್ನು ಸದಾಕಾಲವೂ ಕಾಣಬಹುದಾಗಿತ್ತು! ಯಾರದಾದರೂ ಸಂಸಾರದಲ್ಲಿ ಅತಿಚಿಕ್ಕ ಹಗರಣವೊಂದು ಬೆಳಕಿಗೆ ಬಂದರೂ ಸಾಕು. ಸ್ವಯಂ ಸ್ಪೂರ್ತಿಯಿಂದ ಚಿಟಿಕೆ ನಶ್ಯ-ಮೂರೇ ಮೂರು ಬೀಡಿ-ಅರ್ಧ ಲೋಟ ಕಾಪಿಗೆ (ಇದು ಕಾಫಿಯಲ್ಲ ಕಾಪಿ) ಇವರು ಸ್ಥಳದಲ್ಲೇ ವಿಚಾರಣೆ ನಡೆಸಿ ರಾಜಿ ಪಂಚಾಯ್ತಿ ಮಾಡಲು ಯಾವಾಗಲೂ ತುದಿ ಕಾಲಿನ ಮೇಲೆ ನಿಂತಿರುತ್ತಿದ್ದರು. ಟಿವಿ ಹಾವಳಿಯಿಲ್ಲದ ಆ ದಿನಗಳಲ್ಲಿ ಟಾಕೀಸಿನ ಸಿನೆಮಾ, ವರ್ಷಕ್ಕೊಂದಾವರ್ತಿ ಜಾತ್ರೆಗೆ ಬರುವ ನಾಟಕ ಹಾಗೂ ಆಗಾಗ ದಾಂಗುಡಿಯಿಡುವ ಯಕ್ಷಗಾನಗಳಷ್ಟೆ ಸೀಮಿತ ಮನರಂಜನೆಯ ಮಾರ್ಗಗಳಾಗಿರುತ್ತಿದ್ದರಿಂದ ಇಂತಹ "ಮನರಂಜಕ" ಪರ್ಯಾಯಗಳನ್ನು ಹುಡುಕಿಕೊಳ್ಳುವುದು ಅಂತವರಿಗೆ ಅನಿವಾರ್ಯವೂ ಆಗಿತ್ತನ್ನಿ. ಇಂತಹ ಪೂಟು ಲಾಯರಿಗಳ ಗುಂಪಿರುವ ಹಲವಾರು "ಸೋಮಾರಿ ಕಟ್ಟೆ"ಗಳು ಆಗ ಚಾಲ್ತಿಯಲ್ಲಿದ್ದು ಸಂದರ್ಭಾನುಸಾರ ಅವರಲ್ಲೇ ಒಬ್ಬರು ನ್ಯಾಯಾಧೀಶನ ಪಾತ್ರ ವಹಿಸಿಕೊಂಡು ಪ್ರಕರಣ ಇತ್ಯರ್ಥಗೊಳಿಸಿ ಕೈ ಕರ್ಚಿಗೆ ನಾಲ್ಕು ಕಾಸು ಮಾಡಿಕೊಳ್ಳುತ್ತಿದ್ದರು! ಮುಂದಿನ ಹಗರಣವೊಂದು ಕೈಗೆ ಸಿಗುವ ತನಕ ನಿತ್ಯ ಸಭೆ ಸೇರಿದಾಗಲೆಲ್ಲ ಈ ಪ್ರಕರಣದ ಕೂಲಂಕುಷ ಪೋಸ್ಟ್'ಮಾರ್ಟಂ ಮಾಡಿ ಬಾಯಿ ಚಪಲವನ್ನ ಆದಷ್ಟು ತೀರಿಸಿಕೊಳ್ಳುತ್ತಾ ರೋಮಾಂಚಿತರಾಗುತ್ತಿದ್ದರು!
ಸದ್ಯ ಅದೇ ರಾಜ್ಯ ಹೆದ್ದಾರಿಯ ಅರ್ಧಭಾಗ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ. ಸುತ್ತು ಬಳಸಿ ಶೃಂಗೇರಿ ಮಾರ್ಗವಾಗಿ ಸಾಗುವ ಈ ರಾಷ್ಟ್ರೀಯ ಹೆದ್ದಾರಿ ಹೈದರಾಬಾದಿನಿಂದ ಮಂಗಳೂರನ್ನ ಸಂಪರ್ಕಿಸುತ್ತದೆ. ಊರಿನ ಬಹುಸಂಖ್ಯಾತರು ದಕ್ಷಿಣಕನ್ನಡ ಮೂಲದ ಕೊರಗರು, ಹೊಲೆಯರು, ಬಂಟರು, ಜೈನರು, ಹವ್ಯಕ ಬ್ರಾಮ್ಹಣರು, ಕೊಂಕಣಿ ಸಾರಸ್ವತರು, ಪೂಜಾರಿಗಳು, ಬ್ಯಾರಿಗಳು ಹಾಗೂ ಕ್ಯಾಥೊಲಿಕ್ ಪರ್ಬುಗಳು. ರಾಜಕೀಯವಾಗಿ ಸಾಕಷ್ಟು ಪ್ರಭಾವಶಾಲಿಗಳಾಗಿದ್ದರೂ ಇವರ ಪ್ರತಿನಿಧಿಯೊಬ್ಬ ಇಲ್ಲಿಯ ತನಕ ಸ್ಥಳೀಯ ಶಾಸಕನಾಗೋದು ಸಾಧ್ಯವಾಗಿಲ್ಲ. ಆ ಪಟ್ಟ ಇಲ್ಲಿನ ಮೂಲ ನಿವಾಸಿಗಳಾದ ಗೌಡರಿಗೆ ಮೀಸಲು. ಏಕೆಂದರೆ ಅಲಿಖಿತ ಒಪ್ಪಂದಕ್ಕೆ ಬಂದವರಂತೆ ಎಲ್ಲಾ ರಾಜಕೀಯ ಪಕ್ಷಗಳೂ ಒಕ್ಕಲಿಗ ಅಭ್ಯರ್ಥಿಯನ್ನೇ ಚುನಾವಣಾ ಕಣಕ್ಕಿಳಿಸುತ್ತವೆ. ಈ ಒಕ್ಕಲಿಗರ ಕೋಟೆಯಲ್ಲಿ ಕೋಣಂದೂರು ಲಿಂಗಪ್ಪ ಒಂದು ಅವಧಿಗೆ ಶಾಸಕರಾದದ್ದೊಂದು ಪವಾಡ. ಏಕೆಂದರೆ ಅವರು ಈಡಿಗ. ಇದು ಊರಿನ ಜಾತಿವಾರು ವಿವರಣೆಯಾದರೂ ಇಲ್ಲಿ ಜಾತಿ-ಕೋಮು ಸಾಮರಸ್ಯಕ್ಕೆ ನನಗೆ ನೆನಪಿರುವಂತೆ ಎಂದೂ ಬೆಂಕಿ ಬಿದ್ದಿಲ್ಲ. ದೇಶವೆಲ್ಲ ಕೋಮುದ್ವೇಷದ ದಳ್ಳುರಿಗೆ ಹೊತ್ತು ಉರಿದರೂ ತೀರ್ಥಹಳ್ಳಿಯ ಮಂದಿ ಮಾತ್ರ ತಮ್ಮ ನಿತ್ಯ ಕರ್ಮಗಳಲ್ಲೇ ವ್ಯಸ್ಥರಾಗಿರುತ್ತಾರೆ.ಅಷ್ಟೊಂದು ಮುಗ್ಧರು ಹಾಗು ಆಲಸಿಗಳು ಇಲ್ಲಿನವರು.
ಇಲ್ಲಿಗೆ ಒಂದು ಸ್ಥಳ ಪುರಾಣ ಬೇರೆ ಇದೆ. ಇದು ಪರಶುರಾಮ ಕ್ಷೇತ್ರ ಅಂತೆ. ತನ್ನ ಪರಶುವಿಗೆ ಅಂಟಿದ್ದ ಕೊನೆ ಹನಿ ನೆತ್ತರು ಇಲ್ಲಿನ ತುಂಗಾನದಿಯ ನೀರಲ್ಲಿ ತೊಳೆದು ಹೋದದ್ದರಿಂದ ಮಾತೃಹತ್ಯಾ ದೋಷದಿಂದ ವಿಮೋಚಿತನಾದ ಪರಶುರಾಮ ಇಲ್ಲಿ ಲಿಂಗ ಸ್ಥಾಪಿಸಿ ಆರಾಧಿಸಿಧನಂತೆ. ಆ ಜಾಗದಲ್ಲಿಯೆ ಕೆಳದಿಯ ದೊರೆಗಳು ಕಟ್ಟಿಸಿದ "ರಾಮೇಶ್ವರ' ದೇವಸ್ಥಾನ ಇರೋದು. ಪ್ರತಿ ವರ್ಷಕ್ಕೊಮ್ಮೆ ಬಲು ವೈಭವದಿಂದ ರಾಮೇಶ್ವರನಿಗೆ ಎಳ್ಳಮವಾಸ್ಯೆ ತೇರನೆಳೆದು ಮೂರುದಿನದ ಜಾತ್ರೆ ಮಾಡಲಾಗುತ್ತದೆ. ಮೊದಲ ದಿನ ಸ್ನಾನ, ಮರುದಿನ ರಥ, ಕೊನೆದಿನ ತೆಪೋತ್ಸವ ಹೀಗೆ ಇಡಿ ತೀರ್ಥಹಳ್ಳಿ ಈ ಮೂರುದಿನಗಳಲ್ಲಿ ಥಳಥಳ ಹೊಳೆಯುತ್ತಿರುತ್ತದೆ. ಅಂತಹ ಜಾತ್ರೆಯಲ್ಲಿಯೇ ಖಾದರ್ ಸಾಬರ ಮೂರು ಮಾರ್ಕಿನ ಬೀಡಿಗಳ ವ್ಯಾನ್ ಮೇಲಿನ ದಿಲೀಪನ ಕ್ಯಾಬರೆಗೆ ವಿಶೇಷ ಕಳೆ ಕಟ್ಟುತ್ತಿತ್ತು. ಅಂದು ಬೆಳ್ಳಿ ಬಣ್ಣದ ಮಿರಿಮಿರಿ ಮಿಂಚುವ ದಿರಿಸು ಧರಿಸಿದ ದಿಲೀಪ ಹಾಗು ಕಡುಗಪ್ಪು ಹೊಳೆವ ಬಟ್ಟೆ ಹಾಕಿದ ಅವನ ರಂಗದ ಮೇಲಿನ ನಾಯಕ ಮೈಬಳುಕಿಸಿ ಕುಣಿದು ಜಾತ್ರೆಗೆ ನೆರೆದ "ಕಲಾರಸಿಕರ" ತೃಷೆ ತಣಿಸಲು "ಮೈಯಾರೆ" ಶ್ರಮಿಸುತ್ತಿದ್ದರು. ಅದರಿಂದ ವ್ಯಾಪಾರ ಖಾದರ್ ಸಾಬರ ವ್ಯಾಪಾರ ಅದೆಷ್ಟು ವೃದ್ಧಿಸಿತು ಎನ್ನುವ ಬಗ್ಗೆ ಯಾವುದೆ ಅಂಕಿ ಅಂಶಗಳು ಲಭ್ಯವಿಲ್ಲ!
ಇವೆಲ್ಲ ವಯಸ್ಕರ, ಮೀಸೆ ಚಿಗುರಿದವರ ಮಾತಾಯಿತು. ನನ್ನಂತಾ ಎಳೆಯರಿಗೆ ಜಾತ್ರೆಯೆಂದರೆ ಬೆಂಡು-ಬತಾಸು, ಬೊಂಬಾಯಿ ಮಿಠಾಯಿ ಹಾಗೂ ಮರದ ಕುದುರೆ ಚಕ್ರದಲ್ಲಿ ಕೂತು ವೇಗವಾಗಿ ಸಾಗೋದು ಹಾಗೂ ಬಾವಿಯಲ್ಲಿ ಬೈಕೋಡಿಸುವುದನ್ನ ಬಿಡುಗಣ್ಣಿನಲ್ಲಿ ಬೆರಗಾಗಿ ನೋಡೋದು. ಇವಕ್ಕೆಲ್ಲ ಬೇಕಾಗುವ ಚಿಲ್ಲರೆ ಕಾಸಿಗಾಗಿ ಮನೆಯ ಹಿರಿಯರನ್ನ ಕಾಡಿ ಬೇಡ ಬೇಕಾಗುತ್ತಿತ್ತು. ಅದೃಷ್ಟ ನೆಟ್ಟಗಿದ್ದರೆ ದೊಡ್ಡ ಪುಗ್ಗೆಯ ಬಲೂನು, ಪ್ಲಾಸ್ಟಿಕ್ ವಾಚು ಹಾಗೂ ಊದುಪ ಪೀಪಿಯೂ ಹಿರಿಯರ ಬಳುವಳಿಯಾಗಿ ದೊರಕುವ ಸಾಧ್ಯತೆಯಿತ್ತು. ವರ್ಷದ ಏಕೈಕ ಗಮ್ಮತ್ತಿನ ಹೊತ್ತು ಅದಾಗಿರುತ್ತಿದ್ದರಿಂದ ತಾಲೂಕಿನ ಶಾಲಾ-ಕಾಲೇಜುಗಳಿಗೂ ಅಂದು ರಜೆ ಘೋಷಿಸಿರಲಾಗುತ್ತಿತ್ತು . ಮನೆಗೆ ಪರವೂರಿನ ನೆಂಟರು ಬರಲು ಜಾತ್ರೆಯೊಂದು ನೆಪವಾಗುತ್ತಿತ್ತು. ಬಾಲ್ಯದುದ್ದ ಜೀವನದಾಲ್ಲಿ ಅತ್ಯಂತ ಸಂತಸಮಯವಾಗಿರುತ್ತಿದ್ದ ದಿನಗೆಂದರೆ ಅವೆ. ಕಣ್ಣಿ ಹರಿದ ಕರುವಿನಂತೆ ಊರಿನುದ್ದ ಜಿಗಿದಾಡಿ ನಲಿಯಲು ಆ ದಿನಗಳಲ್ಲಿ ಸ್ವಲ್ಪ ಮಟ್ಟಿನ ಸ್ವಾತಂತ್ರವಿರುತ್ತಿತ್ತು. ರಥಬೀದಿಯ ಇಕ್ಕೆಲಗಳಲ್ಲೂ ಯಾವ್ಯಾವುದೋ ಊರಿನಿಂದ ಬರುತ್ತಿದ್ದ ವ್ಯಾಪಾರಿಗಳು ಕಣ್ಸೆಳೆಯುವ ಅನೇಕ ಸಾಮಾನುಗಳ ಅಂಗಡಿಯ ಟೆಂಟ್ ಹಾಕುತ್ತಿದ್ದರು. ಹೆಂಗಸರ ಸರ ಬಿಂದಿ, ಗಂಡಸರ ಟೊಪ್ಪಿ ಬೆಲ್ಟು, ನಮ್ಮಂತಹ ಮಕ್ಕಳ ಬಾಯಲ್ಲಿ ನೀರೂರಿಸುವ ಸಕ್ಕರೆ ಮಿಠಾಯಿ ಐಸ್'ಕ್ಯಾಂಡಿ ಯಾವುದು ಕೇಳುತ್ತೀರಿ? ಸಾಕ್ಷಾತ್ ಇಂದ್ರನ ಅಮರಾವತಿಗೆ ಹೋದ ಹಾಗಾಗಿ ಮನಸು ನಿಯಂತ್ರಣ ಕಳೆದುಕೊಂಡ ಕುದುರೆಯಾಗುತ್ತಿತ್ತು. ಕಣ್ಣು ಹಾಯಿಸಿದಷ್ಟು ದೂರವೂ ಜನಾ ಜನಾ ಜನಾ. ಜಾತ್ರೆಯ ಕಥೆ ಇನ್ನೂ ಇದೆ.
Subscribe to:
Post Comments (Atom)
No comments:
Post a Comment