25 September 2012

ಮುಂಜಾನೆಯ ಮೀನು ರಾಗ....













ಶ್ರಾವಣ ಬಂತೆಂದರೆ ಸಾಕು ನಮ್ಮ ಮನೆಯಂತೆ ಅಕ್ಕ ಪಕ್ಕದ ಮನೆಯವರಿಗೂ ಹೊಸ ಉತ್ಸಾಹ ಚಿಗುರುತ್ತಿತ್ತು. ಹಬ್ಬಗಳ ಸರಣಿ ಶುರುವಾಗುವ ಕಾಲ ಅದಲ್ಲವ? ಹಾಗಾಗಿ ಏನಾದರೊಂದು ಚಟುವಟಿಕೆಗಳು "ಅಡುಗೆ ಮನೆ" ಕಾರ್ಖಾನೆಯಲ್ಲಿ ನಡೆಯುತ್ತಲೇ ಇರುತ್ತಿದ್ದವು. ವರ್ಷದ ಇನ್ನುಳಿದ ದಿನಗಳಲ್ಲಿ ನಮ್ಮ ಬಡಾವಣೆಯ "ಮೀನುದಾತ" ಗಡ್ಡದ ಸಾಬರ ಸರ್ಕೀಟು ಸೊಪ್ಪುಗುಡ್ಡೆಯ ಪ್ರತಿ ಬೀದಿ ಬೀದಿಯ ಸರ್ವೇ ಮಾಡುತ್ತಾ ನಮ್ಮ ಬೀದಿಯನ್ನೂ ಎಡತಾಕುತ್ತಿದ್ದರೆ ಶ್ರಾವಣದಲ್ಲಿ ಮಾತ್ರ ಅದಕ್ಕೆ ತಾತ್ಕಾಲಿಕ ವಿರಾಮ. ಮಾಂಸಾಹಾರ ಹಾಗೂ ಮತ್ಸ್ಯ ಪ್ರಿಯರು ಶ್ರಾವಣದಲ್ಲಿ ಖಡ್ಡಾಯವಾಗಿ ಸಸ್ಯಾಹಾರವನ್ನ ಮಾತ್ರ ವೃತದಂತೆ ಸೇವಿಸುವುದರಿಂದ ಸಾಬರ ವ್ಯಾಪಾರ ಆ ಒಂದು ತಿಂಗಳು ಡಲ್ಲು ಹೊಡೆಯುತ್ತಿತ್ತು. ಬೀದಿಯ ಆರಂಭದಲ್ಲಿಯೇ ನಮ್ಮ ಮನೆಯಿರುತ್ತಿದ್ದುದರಿಂದಲೂ, ನಮ್ಮಂತೆ ಸಾಬರೂ ದಕ್ಷಿಣಕನ್ನಡದ ಮೂಲದ ಬ್ಯಾರಿಯಾಗಿದ್ದರಿಂದಲೂ ನನ್ನಜ್ಜ- ಅಮ್ಮನ ಬಳಿ ಮಾತಿನ ಸಲುಗೆ ಅವರಿಗೆ ಕುದುರಿತ್ತು. ಚೌಕುಳಿ ಮುಂಡು- ಕೊಕ್ಕರೆ ಬೆಳ್ಳನೆ ಅಂಗಿ ಹಾಕಿಕೊಂಡು ಸಾಬರು ತಮ್ಮ ಸೈಕಲ್ ರಥದ ಹ್ಯಾಂಡಲ್ ಹಿಡಕೊಂಡು ಅದಕ್ಕೆ ಕಟ್ಟಿರುವ ಹಸಿರು ಬಣ್ಣದ ದೊಡ್ಡ ಹಾರನನ್ನ ಊರೆಲ್ಲ ಬೆಚ್ಚಿ ಬೆದರುವಂತೆ "ಪೊಂಯ್ ಪೊಂಯ್" ಸದ್ದೆಬ್ಬಿಸುತ್ತಾ ಒತ್ತಿ ಹಿಡಿದು ಅದರ ಒಂದು ಪೆಡಲಿನ ಮೇಲೆ ಕೇವಲ ಬ್ಯಾಲೆನ್ಸಿಗೆ ನಿಂತು ವೆಂಕಟೇಶ ಟಾಕೀಸಿನ ಇಳಿಜಾರಿನಲ್ಲಿ ತೇಲಿಕೊಂಡು ಬರುವಾಗ ನಮ್ಮ ಬೀದಿಯ ಮತ್ಸ್ಯ ಪ್ರಿಯರ ಕಿವಿ ನೆಟ್ಟಗಾಗುತ್ತಿತ್ತು!



ಈ ಸುನಾದದ ಸಂಗೀತ ಕೇಳಿ ಅವರ ಸೈಕಲ್ಲಿನ ಬಳಿ ದೌಡಾಯಿಸುವ ಅವರ ಅಭಿಮಾನಿಗಳಲ್ಲಿ ಬೀದಿಯಲ್ಲಿ ಎಲ್ಲರ ಮನೆಯಲ್ಲೂ ಎಂಬಂತೆ ಸಾಕಿರಲಾಗುತ್ತಿದ್ದ ನಾಲ್ಕು ಕಾಲಿನ ಬೆಕ್ಕುಗಳ ಹಿಂಡೂ ಸೇರಿರುತ್ತಿತ್ತು. ನಮ್ಮ ಮನೆಯಿಂದ ಚೂರು ಮುಂದೆ ತಮ್ಮ ಸೈಕಲ್ಲಿಗೆ ಸ್ಟ್ಯಾಂಡ್ ಏರಿಸಿ ನಿಲ್ಲಿಸಿದ ಸಾಬರು ವ್ಯಾಪಾರದ ವಿವಿಧ ವಿನೋದಾವಳಿಗೆ ಇಳಿಯುತ್ತಿದ್ದರು. ನಡುನಡುವೆ ತಮ್ಮ ಅತಿ ಅಭಿಮಾನ ತೋರುವ ಭರದಲ್ಲಿ ಅವರ ಕಾಲಿಗೆ ತಮ್ಮ ಮೈಯುಜ್ಜುತಿದ್ದ ಮಾರ್ಜಾಲ ಭೂಪರನ್ನೂ ಅಟ್ಟಾಡಿಸುತ್ತಾ ಸಾಬರು ವ್ಯಾಪಾರ ಸನ್ನದ್ಧರಾಗುತ್ತಿದ್ದರು. ಅವರ ಬಹುತೇಕ ಗಿರಾಕಿಗಳೆಲ್ಲ ಬೀದಿಯ ಹೆಂಗಸರೆ. ಸಾಬರ ತುಳುಗನ್ನಡ ಹಾಗೂ ಹೆಂಗಸರ ಜವಾರಿ ಮಲೆನಾಡು ಕನ್ನಡದ ಚರ್ಚಾಕೂಟದಂತಹ ವ್ಯಾಪಾರದ ನಡುನಡುವೆ ಏಳುವ " ಯಾ ರಬ್ಬೆ!" "ಎನ್ ತಂಬಿರಾನೆ" ಶ್ರುತಿಗೆ ಚೌಕಾಸಿಗೆ ಇಳಿಯುತ್ತಿದ್ದ ಅವರ ಗ್ರಾಹಕ ಮಹಿಳಾಮಣಿಗಳೆಲ್ಲ ತಮ್ಮದೂ ಓತಪ್ರೋತ ತಾರಕದ ಧ್ವನಿ ಸೇರಿಸುತ್ತಾ ವ್ಯಾಪಾರದ ಕಳೆ ಹೆಚ್ಚಿಸುತ್ತಿದ್ದರು. ದೂರದಿಂದ ಇದನ್ನ ಗಮನಿಸುವ ಹೊಸಬರ್ಯಾರಾದರೂ ಬೆಳ್ಳಂಬೆಳಗ್ಯೆಯೆ ಅಲ್ಲಿ ಗಂಡಸೊಬ್ಬನಿಗೆ ಹೆಂಗಸರ ಹಿಂಡಿನೊಂದಿಗೆ ಭಾರಿ ಮಾರಾಮಾರಿ ನಡೆಯುತ್ತಿದೆ ಎಂದು ತಪ್ಪು ತಿಳಿಯುವಂತೆ ಭರ್ತಿ ರಂಗೇರಿರುತ್ತಿತ್ತು ಲಬ್ಬೆ ಸಾಬರ ಈ ಮೀನಿನ ವ್ಯಾಪಾರ. ವಾರದ ಆಯ್ದ ಕೆಲವು ದಿನಗಳನ್ನ ಹೊರತುಪಡಿಸಿ ನಿತ್ಯ ಬೆಳಗ್ಯೆ ಏಳರಿಂದ ಎಂಟರ ನಡುವೆ ಈ ಮೀನು ವ್ಯಾಪಾರವೆನ್ನುವ ದೊಂಬರಾಟವನ್ನು ಅಲ್ಲಿ ಕಾಣ ಬಹುದಾಗಿತ್ತು.



ಈ ವಿಶೇಷ ದಿನಗಳು "ದೇವರ ದಿನ"ಗಳಾಗಿದ್ದು ಅವತ್ತು ಮೀನು ತಿನ್ನೋದು ನಿಶಿದ್ಧವಂತೆ! ತಿನ್ನೋದೆ ಉಂಟಂತೆ ಈ ದಿನ, ವಾರ ಎಲ್ಲಾ ನೋಡುತ್ತಾ ಪಂಚಾಗ ಕೈಯಲ್ಲಿ ಹಿಡಿದು ಕೊಂಡೆ ಯಾಕೆ ಈ ಜನ ಮೀನು ತಿನ್ನೋದು ಅನ್ನುವುದು ಆಗೆಲ್ಲ ನನ್ನ ತಲೆ ಕೊರೆಯುತ್ತಿದ್ದ ಮಹತ್ವದ ಪ್ರಶ್ನೆಗಳಲ್ಲೊಂದಾಗಿತ್ತು, ಈಗಲೂ ಅದಕ್ಕೆ ಉತ್ತರ ಸಿಕ್ಕಿಲ್ಲ. ಬಹುಷಃ ತಮ್ಮ ವ್ಯಾಪಾರಕ್ಕೆ ಕಲ್ಲು ಹಾಕುತ್ತಿದ್ದ ಅಂತಹ ದಿನಗಳ ಬಗ್ಗೆ ಲಬ್ಬೆ ಸಾಬರಿಗೂ ಅದೆ ಅಭಿಪ್ರಾಯ ಇದ್ದರೂ ಇದ್ದೀತು ಅನ್ನಿಸುತ್ತೆ. ಅದೇ ಹೊತ್ತಿನಲ್ಲಿ ಮನೆಯ ಗಿಡಗಳಿಂದ ಹೂ ಕುಯ್ಯುತ್ತಲೋ ಇಲ್ಲವೆ ಬೆಳಗಿನ ಹಾಲನ್ನ ವರ್ತನೆ ಮನೆಗಳಿಗೆ ಮುಟ್ಟಿಸಿ ಆಗಷ್ಟೇ ಬಂದಿರುತ್ತಿದ್ದ ನಾನು ಮನೆಯ ದಣಪೆಯ ಕಲ್ಲಿಗೆ ಮೊಣಕೈ ಊರಿ ಅಂಗೈಯನ್ನ ಗಲ್ಲಕ್ಕೆ ಕೊಟ್ಟು ಆಸಕ್ತಿಯಿಂದ ಈ ಎಲ್ಲಾ ಪ್ರಹಸನವನ್ನ ಬಹಳ ತನ್ಮಯನಾಗಿ ನೋಡುತ್ತಿದ್ದೆ. ಕೆಲವು ನಿಮಿಷಗಳ ಈ ಅನುದಿನದ "ಜಂಗಿಕುಸ್ತಿ"ಯನಂತರ ತಮ್ಮ ಮನೆಯ ಗುಡಿಸುವ -ಒರೆಸುವ- ಮಕ್ಕಳಿಗೆ ಮೀಯಿಸುವ- ಅಂಗಳಕ್ಕೆ ಸಗಣಿ ಸಾರಿಸುವ ಸಕಲೆಂಟು ಕೆಲಸ ಗಳನ್ನ ಅರ್ಧರ್ಧಕ್ಕೆ ಬಿಟ್ಟು ಎತ್ತಿ ಸೊಂಟಕ್ಕೆ ಸಿಕ್ಕಿಸಿದ್ದ ಸೀರೆಯ ಅವತಾರದಲ್ಲಿಯೇ ಕೈಯಲ್ಲೊಂದು ಮಡಕೆ ಹೊತ್ತು ಸಾಬರ ಸೈಕಲ್ಲಿನ ರಣಾಂಗಣಕ್ಕೆ ಧಾವಿಸಿ ಧುಮುಕಿರುತ್ತಿದ್ದ ಮಹಿಳಾಮಣಿಗಳಿಗೂ, ಮೀನು ಸಾಬರಿಗೂ ಒಂದು ಮಧ್ಯಂತರ ಒಪ್ಪಂದ ಏರ್ಪಟ್ಟು ವ್ಯಾಪಾರದ ಬೆಲೆಯನ್ನು ಸಾಕಷ್ಟು ಹಗ್ಗ ಜಗ್ಗಾಟದ ನಂತರ ಇತ್ಯರ್ಥ ಗೊಳಿಸಿಕೊಳ್ಳುತ್ತಿದ್ದರು.



ಇಷ್ಟಾದರೂ ಬೆಲೆ ನಿಗದಿಯ ಬಗ್ಗೆ ಇತ್ತಂಡಗಳಿಗೂ ಸಾಕಷ್ಟು ಅಸಮಧಾನ ಹೊಗೆಯಾಡುತ್ತಲೇ ಇರುವುದನ್ನು ಗಮನಿಸ ಬಹುದಾಗಿತ್ತು. ಬೆಳ್ಳಿ ಬಣ್ಣದಲ್ಲಿ ಎಳೆ ಸೂರ್ಯನ ನವಿರು ಬಿಸಿಲಿಗೆ ಹೊಳೆಯುತ್ತಾ ಇರುತ್ತಿದ್ದ ಮಿರಿಮಿರಿ ಮಿಂಚುವ ಬೂತಾಯಿ, ಬಂಗುಡೆ, ಕಾಣೆ, ಅಂಜಲ್ ಹೀಗೆ ಥರೆವಾರಿ ಮೀನನ್ನು ಅಳೆದೂ ಸುರಿದು ಸಾಬರು ಹೆಂಗಸರ ಅಗಲ ಬಾಯಿಯ ಮಡಿಕೆಗೆ ದಾಟಿಸುವಾಗ ಅದನ್ನೊಂದು ತೀರ ನಿಷ್ಕೃಷ್ಟ ವಸ್ತುವನ್ನ ನೋಡುವಂತೆ ಸೋಗುಹಾಕುತ್ತಾ ತಮಗೆ ಇನ್ನೂ ಬೆಲೆಯಲ್ಲಿ ಭಾರಿ ಅನ್ಯಾಯವೇ ಆಗಿ ಹೋಗಿದೆ ಎನ್ನುವ ಮುಖಭಾವ ಹೊತ್ತು ಈ ಸನ್ಮಾನ್ಯ ಗೃಹಿಣಿಯರು ತಮ್ಮ ಗಡಿಗೆಗೆ ಮೀನು ಹಾಕಿಸಿಕೊಳ್ಳುತ್ತಿದ್ದರು. ಅವರ ಗ್ರಾಹಕ ಬಾಂಧವರ ಈ ಅಕಾಲ ಸಾಸಾರದ ದೃಷ್ಟಿಯ ರಹಸ್ಯ ಬಲ್ಲ ಲಬ್ಬೆ ಸಾಬರು ನಿಗದಿ ಪಡಿಸಿದ್ದಕ್ಕಿಂತ ಒಂದು ಮೀನು ಹೆಚ್ಚು ಕೇಳಿದರೂ ಆಕ್ಷೇಪದ ಧ್ವನಿ ಎಬ್ಬಿಸುತ್ತ ತಮ್ಮ ತುಳುಗನ್ನಡದಲ್ಲಿ ವ್ಯಾಪಾರ ಮುಗಿಸಿ. ಸ್ಥಳದಲ್ಲೇ ಕೊಟ್ಟವರಿಂದ ಹಣವನ್ನ ಪಡೆದು, ಸಾಲ ಹೇಳಿದವರಿಂದ ಲೆಕ್ಖಕ್ಕೆ ಬರೆದು ಕೊಂಡು, ಊರಿಂದ ನೆಂಟರು ಬರಲಿದ್ದ ಮನೆಯ ಯಜಮಾಂತಿಯನ್ನ ಒತ್ತಾಯಿಸಿ ನಾಲ್ಕು ಮೀನನ್ನ ಅವಳಿಗೂ ಮಾರಿ, ದೂರದ ಊರಲ್ಲಿ ಓದಲು ಹೋಗಿದ್ದ ಮಗ ಮನೆಗೆ ಬಂದದ್ದು ಕಣ್ಣಿಗೆ ಬಿದ್ದರೆ ಅವನ ಹೆಸರು ಹೇಳಿ ಅವನಮ್ಮನಿಗೆ ಮೀನನ್ನು ಶತಾಯಗತಾಯ ಮಾರಿ ಅಂತೂ ತಮ್ಮ ಸೈಕಲ್ಲಿನ ಕ್ಯಾರಿಯರಿಗೆ ಕಟ್ಟಿರುತ್ತಿದ್ದ ತಮ್ಮ ಮೀನು ಬುಟ್ಟಿಯನ್ನ ಖಾಲಿಗೊಳಿಸಿಯೆ ರಂಗಸ್ಥಳದಿಂದ ನಿರ್ಗಮಿಸುತ್ತಿದ್ದರು.


 'ನೀ ಬಿಡೆ ನಾ ಕೊಡೆ' ಶೈಲಿಯಲ್ಲಿ ನಡೆಯುತ್ತಿದ್ದ ಈ ಚೌಕಾಸಿ ಆಮೇಲೆ ಸಾಬರು ಮೂರು ಕಾಸು ಕಡಿಮೆ ಕೊಟ್ಟ ಹಾಗೆ ಮಾಡಿ, ಹೆಂಗಸರೆಲ್ಲ ಆರು ಕಾಸಿಗೆನೆ ಕೊಂಡಂತೆ ದಿಗ್ವಿಜಯದ ಗೆಲುವಿನ ಮುಗುಳ್ನಗೆ ಬೀರುವಂತೆ ಮಾಡುವಲ್ಲಿ ಪರಿ ಸಮಾಪ್ತಿಗೊಳಿಸುತ್ತಿದ್ದರು! ಈ ದಿನ ಬಿಟ್ಟು ದಿನ ನಡೆಯುತ್ತಿದ್ದ ಪುಕ್ಕಟೆ ನಾಟಕವನ್ನು ನಾನು ಬಾಲ್ಯದುದ್ದಕ್ಕೂ ನೋಡಿ ಆನಂದಿಸಿದ್ದೇನೆ! ಒಂದು ವೇಳೆ ಕಾರಣಾಂತರಗಳಿಂದ ಸಾಬರ ಸವಾರಿ ನಮ್ಮ ಬೀದಿಗೆ ಒಂದೆರಡು ದಿನ ಬರದಿದ್ದರೆ ನನ್ನ ಮನರಂಜನೆಗೆ ಭಾರಿ ಅನ್ಯಾಯವಾದಂತೆ ಪರಿತಪಿಸುತ್ತಿದ್ದೆ. ಮುಂಜಾನೆ ಸೂರ್ಯ ಹುಟ್ಟುವ ಮೊದಲೆ ಮೀನು ಮಾರ್ಕೆಟ್ಟಿನಿಂದ ಮೀನನ್ನ ಹೊತ್ತು ತಂದು. ಈ ಚಿಲ್ಲರೆ ಚೌಕಾಸಿ ವ್ಯಾಪಾರವನ್ನ ಅಷ್ಟೊಂದು ಜಗಳದ ಧಾಟಿಯಲ್ಲಿ ಮಾಡಿ ಸಾಬರಿಗೆ ಆಗುತ್ತಿದ್ದ ಲಾಭವಾದರೂ ಎಷ್ಟು? ಅನ್ನೋದು ಒಂದು ಚಿದಂಬರ ರಹಸ್ಯವಾಗಿಯೇ ಉಳಿದಿದೆ. ಆದರೂ ಸಾಬರ ಕರ್ಮಣ್ಯೇ ವಾಧಿಕಾರಸ್ತೆ ಎನ್ನುವಂತಿದ್ದ ರಸ್ತೆ ವ್ಯಾಪಾರದಲ್ಲಿ ಒಂದು ಶ್ರಮ ಜೀವಿಯ ಜೀವನಾಸಕ್ತಿಯನ್ನ ಕಂಡಿದ್ದೇನೆ.


ವ್ಯಾಪಾರ ಮುಗಿಸಿ ನಮ್ಮ ಮನೆಯ ಎದುರಿನ ಖಾಲಿ ಸೈಟಿನ ಬಳಿ ತಮ್ಮ ಸೈಕಲ್ಲನ್ನ ನಿಲ್ಲಿಸಿದ ನಂತರ ಸಾಬರು ಅದನ್ನ ಸ್ವಚ್ಛ ಗೊಳಿಸಲು ಅಮ್ಮನ ಹತ್ತಿರ ನಮ್ರ ಧ್ವನಿಯಲ್ಲಿ ನೀರನ್ನ ಬೇಡುತ್ತಿದ್ದರು. ಅವರ ಬೇಡಿಕೆ ಏನೆಂದು ಗೊತ್ತಿದ್ದ ನಾನು ಅಮ್ಮನ ಆಜ್ಞೆ ಕಿವಿ ತಲುಪುವ ಮೊದಲೆ ಹಿತ್ತಲಲ್ಲಿದ್ದ ಕೊಟ್ಟಿಗೆಯ ಕೊಡಪಾನದಲ್ಲಿ ನೀರನ್ನ ಹೊತ್ತು ತಂದು ಎತ್ತಿ ಅವರ ಕೈಗೆ ಸುರಿಯುತ್ತಿದ್ದೆ. ಸೈಕಲ್ ಟ್ಯೂಬುಗಳಿಂದ ಕ್ಯಾರಿಯರಿಗೆ ಕಟ್ಟಿರುತ್ತಿದ್ದ ಮೀನು ಬುಟ್ಟಿಯ ಕೆಳಸಂದಿಯಲ್ಲೆಲ್ಲೋ ಅವರು ಹುದುಗಿಸಿಡುತ್ತಿದ್ದ "ಲೈಫ್ ಬಾಯ್" ಸೋಪಿನ ತುಂಡಿನಿಂದ ತಮ್ಮ ಮೊಣಗೈಯಿಯವರೆಗೂ ಅವರು ತೋಳೇರಿಸಿ ಕೈ ಸ್ವಚ್ಛ ಗೊಳಿಸಿಕೊಂಡ ನಂತರ ಅದೆ ಕೊಡಪಾನದಲ್ಲಿ ಉಳಿದ ನೀರನ್ನ ತಮ್ಮ ಬುಟ್ಟಿಗೂ ಅಷ್ಟು ಸುರಿದು ಇಡಿ ಸೈಕಲ್ಲನ್ನೆ ಅಡ್ಡ ಬಗ್ಗಿಸಿದ ಹಾಗೆ ಮಾಡಿ ಆ ನೀರನ್ನೆಲ್ಲ ಚರಂಡಿಗೆ ಹರಿಯ ಬಿಡುತ್ತಿದ್ದರು. ಆಶ್ಚರ್ಯಕರವಾಗಿ ಅವರು ಬಲವಾಗಿ ಕ್ಯಾರಿಯರಿಗೆ ಬಿಗಿದಿರುತ್ತಿದ್ದ ಮೀನು ಬುಟ್ಟಿ ಸೈಕಲ್ಲನ್ನ ಅಷ್ಟು ತಗ್ಗಿಸಿದರೂ ಕಳಚಿಕೊಂಡು ಬೀಳುತ್ತಿರಲಿಲ್ಲ!


 ಇದಾದ ನಂತರ ಅವರ ಸವಾರಿ ನಮ್ಮ ಅಂಗಳಕ್ಕೆ ಬರುತ್ತಿತ್ತು ದಣಪೆಯ ಹತ್ತಿರದ ಕಲ್ಲಿನ ಮೆಟ್ಟಿಲಿನ ಮೇಲಷ್ಟೇ ಕೂರುತ್ತಿದ್ದ ಸಾಬರು ಒಂದೇ ಒಂದು ದಿನವೂ ನಮ್ಮ ಹೊಸಿಲು ತುಳಿದು ಮನೆಯ ಒಳಗೆ ಬಂದ ನೆನಪು ನನಗಿಲ್ಲ. ಅಮ್ಮ ಹಾಗೂ ಇದ್ದರೆ ಅಜ್ಜನ ನಡುವೆ ಸುಮಾರು ಅರ್ಧ ಘಂಟೆ ಶುದ್ಧ ತುಳುವಿನಲ್ಲಿ ಅವರ ಹರಟೆ ಸಾಗುತ್ತಿತ್ತು. ಅವರ ಊರು ಉಳ್ಳಾಲದ ಹತ್ತಿರ ಎಲ್ಲೋ ಅಂತೆ. ನಮ್ಮ ಅಜ್ಜನಂತೆ ಅವರೂ ಅನ್ನ ಅರಸಿ ಕೊಂಡು ತೀರ್ಥಹಳ್ಳಿಗೆ ವಲಸೆ ಬಂದವರೆ ಆಗಿದ್ದರಿಂದ ಬಹುಷಃ ಅಜ್ಜನ ಬಳಿ ಮಾತನಾಡುವಾಗ ಅವರಿಗೆ ತನ್ನ ಊರಿಗೆ ಹೋದಂತಾಗಿ ಮಾತಿನಲ್ಲಿ ಆತ್ಮೀಯತೆ ಒಸರುತ್ತಿತ್ತು ಅನ್ನಿಸುತ್ತೆ. ಒಂದು ಲಂಗೋಟಿ ಮಾತ್ರ ಕಟ್ಟಿ ಕೊಂಡು ತಮ್ಮ ಎಣ್ಣೆ ಮಾಲೀಸಿನ ನಂತರ ತಾವೆ ನೆಟ್ಟ ಗಿಡಗಂಟಿಗಳ ಯೋಗಕ್ಷೇಮ ವಿಚಾರಣೆಯಲ್ಲಿ ಮಗ್ನರಾಗಿರುವಂತೆಯೆ ಅಜ್ಜನ ಅವ್ಯಾಹತ ಹರಟೆ ಸಾಬರೊಂದಿಗೆ ಸಾಗುತ್ತಿತ್ತು. ಅಜ್ಜ ಗಿಡದ ಪಾತಿ ಮಾಡುತ್ತಾ ಮೋಟು ಬೀಡಿ ಎಳೆಯುತ್ತಾ ಎಳೆ ಬಿಸಿಲಲ್ಲಿ ಕುಕ್ಕುರುಗಾಲಲ್ಲಿ ಕೂತ ಸಾಬರೊಂದಿಗೆ ಹರಟುತ್ತಿರುವ ಆ ಸ್ಥಿರ ದೃಶ್ಯವನ್ನ ನನಗೆ ಎಂದೂ ಮರೆಯಲಾಗದು. ನಡುನಡುವೆ ಆಜ್ಜನ ಅಪರೂಪದ ನಶ್ಯ ಸೇವನೆ ನಡೆದು ಬೀಡಿ ಪ್ರಿಯ ಸಾಬರಿಗೂ ಅದು ಚೂರು ಸಂದಾಯವಾಗುತ್ತಿತ್ತು. ನಮ್ಮ ಅಂಗಳದಲ್ಲಿ ಹರಟೆಯನ್ನೂ ಮುಗಿಸಿದ ವ್ಯಾಪಾರ ಮುಗಿದ ಸಾಬರ ಸವಾರಿ ಮನೆ ಸೇರಲು ನಟಿಕೆಯ ಸದ್ದು ಮೂಡಿಸುತ್ತ ಕಾಲನ್ನ ಎತ್ತಿಡುವ ಮೊದಲು ಅಮ್ಮ ನನ್ನ ಮೂಲಕ ಅವರಿಗೊಂದು ಕಪ್ಪು ಚಾ ಕಳಿಸಿ ಕೊಡುತ್ತಿದ್ದರು. ತುಂಬು ಕೃತಜ್ಞತೆಯಿಂದ ಸಾಬರು ಈ ಹಬೆಯಾಡುವ ಚಾವನ್ನ ಚುಮುಚುಮು ಚಳಿಯಲ್ಲಿ ಅರೆಮುಚ್ಚಿದ ಸಂತೃಪ್ತ ಕಣ್ಣುಗಳಲ್ಲಿ ಆನಂದಿಸುವಾಗ ಅವರ ಗಂಟಲಿನ ಮಣಿಗಳು ಲಯಬದ್ಧವಾಗಿ ಏರಿಳಿಯುವುದನ್ನ ನಾನು ಕಾಣುತ್ತಿದ್ದೆ. 
ನನಗೆ ಸಾಬರ ಚರ್ಯೆಗೂ ನನ್ನಜ್ಜನ ಚರ್ಯೆಗೂ ಹೆಚ್ಚು ವ್ಯತ್ಯಾಸ ಕಂಡೆ ಇಲ್ಲ.



ಇಂತಹದ್ದೇ ಇನ್ನೊಬ್ಬ ಅಗೋಚರ ಬಾಂಧವರಾಗಿ ನಮ್ಮಲ್ಲಿಗೆ ಬರುತ್ತಿದ್ದ ಇನ್ನೊಬ್ಬ ಸಾಬರೆಂದರೆ "ಗುಜುರಿ ಸಾಬರು". ಮೀನು ಸಾಬರಿಗೆ ತಲೆಗೆ ಬಲೆಬಲೆ ಟೋಪಿಯಿದ್ದರೆ, ಗುಜುರಿ ಸಾಬರು ಒಂದು ಬಿಳಿ ಬೈರಾಸಿನಂತದ್ದನ್ನು ತಮ್ಮ ತಲೆಗೆ ಮುಂಡಾಸಿನಂತೆ ಕಟ್ಟಿ ಕೊಂಡಿರುತ್ತಿದ್ದರು. ಉಳಿದಂತೆ ಅವರ ವಸ್ತ್ರ ಸಂಹಿತೆ ಒಂದೆ ತೆರನಾಗಿತ್ತು. ನಾನು ನೋಡುವಾಗಲೆ ಇದ್ದ ಬದ್ದ ಹಲ್ಲೆಲ್ಲ ಉದುರಿ ಬೊಚ್ಚು ಬಾಯಿ ಬಿಟ್ಟು ನಗುತ್ತಿದ್ದ ಗುಜುರಿ ಸಾಬರ ಚೌಕಾಸಿಯ ವ್ಯಾಪಾರ ಅವರ ಅಸ್ಪಷ್ಟ ಮಾತುಗಳಿಂದ ನಮಗ್ಯಾರಿಗೂ ಅರ್ಥವೇ ಆಗದಿದ್ದರೂ ಅಜ್ಜನೊಂದಿಗಿನ ತುಳು ಹರಟೆಗೆ ಅವರು ಕಾತರಿಸುತ್ತಿದ್ದರು ಅನ್ನೋದು ನೆನಪು. ಇಂದು ಗುಜುರಿ ಸಾಬರಾಗಲಿ- ಮೀನು ಸಾಬರಾಗಲಿ ಬದುಕಿರುವಂತಿಲ್ಲ. ಈಗೆಲ್ಲ ಯಾರೂ ಮನೆಯ ಬಾಗಿಲಿಗೆ ಮೀನು ಮಾರಲು ಬರೋದಿಲ್ಲ ಅಂತ ಕಳೆದ ಬಾರಿ ಊರಿಗೆ ಹೋಗಿದ್ದಾಗ ಬೋಜ ಶೆಟ್ಟರ ಮನೆಯಾಕೆ ರಾಜೀವಕ್ಕ ಹೇಳುತ್ತಿದ್ದರು. ಸೂಪರ್ ಬಜಾರ್ ಈಗಾಗಲೆ ಕಣ್ಣು ಬಿಟ್ಟಿರುವ ತೀರ್ಥಹಳ್ಳಿಗೂ ಮಾಲ್ ಸಂಸ್ಕೃತಿ ಲಗ್ಗೆಯಿಡುವ ದಿನ ಖಂಡಿತ ದೂರವಿಲ್ಲ. ಚೌಕಾಸಿಯಿರಲಿ ಟಿಪ್ಸ್ ಕೊಟ್ಟು ತಮ್ಮ ಸಾಮಾನನ್ನ ತಾವೆ ಅಲ್ಲಿಂದ ಹೊತ್ತು ತರುವ ಹೊಸ ಪೀಳಿಗೆ ಅಲ್ಲೆಲ್ಲ ಆವರಿಸಿ ಕೊಳ್ಳಬಹುದೇನೋ. ವಿದೇಶಿ ನೇರ ಹೂಡಿಕೆಯ ದುಷ್ಪರಿಣಾಮಗಳನ್ನೆ ಎಲ್ಲಾ ಆಂಗ್ಲ ವಾರ್ತಾವಾಹಿನಿಗಳು- ವೃತ್ತ ಪತ್ರಿಕೆಗಳು ಎಡೆಬಿಡದೆ ಚರ್ಚಿಸುತ್ತಿರುವಾಗ ಈ ಹಳೆಯ " ನೇರ ವ್ಯಾಪಾರ"ದ ರಸವತ್ತಾದ ಹಳವಂಡಗಳೆಲ್ಲ ಆಯಾಚಿತವಾಗಿ ನೆನಪಿಗೆ ಬಂದವು. ಎಲ್ಲೋ ಹೊಸತರ ನಡುವೆ ಹಳೆಯ ಮಾನವೀಯ ಸಂಬಂಧಗಳು ಸಡಿಲವಾಗಿ ಕೇವಲ ವ್ಯಾಪಾರಿ ದುರಾಸೆಯೆ ನಮ್ಮನ್ನ ಆವರಿಸಿ ಕೊಳ್ಳುತ್ತಿರೋದನ್ನ ನೋಡುವಾಗ ನಿಜವಾಗಿಯೂ ವಿಷಾದವಾಗುತ್ತದೆ.

1 comment:

Anagha Kirana ಅನಘ ಕಿರಣ said...

ನನ್ನ ನೆನ್ನೆಯ ಲೇಖನದಲ್ಲಿ ಕೆಲವು ತಾಂತ್ರಿಕ ದೋಷಗಳು ನುಸುಳಿದ್ದವು. ಬ್ಯಾರಿಗಳ ಮೂಲ ನನಗೆ ಗೊತ್ತಿತ್ತಾದರೂ ಲಬ್ಬೆಗಳ ಕುರಿತು ನನ್ನ ಗ್ರಹಿಕೆ ತಪ್ಪಾಗಿತ್ತು. ಅವರೂ ಬ್ಯಾರಿಗಳೆ ಎನ್ನುವ ತಪ್ಪು ಅಭಿಪ್ರಾಯ ನನ್ನದಾಗಿತ್ತು. ಇನ್ನು ಸಾಬರ ಕುರಿತು ಗೊಂದಲಗಳಿಲ್ಲ. ನನ್ನ ಮನೆಯಲ್ಲಿನ ಮಾತುಗಳನ್ನ ಕೇಳಿ ನಾನು ನನ್ನ ಅಭಿಪ್ರಾಯವನ್ನ ರೂಪಿಸಿಕೊಂಡಿದ್ದೆ. ಅಲ್ಲದೆ ಬ್ಯಾರಿಗಳಂತೆಯೇ ಇರುತ್ತಿದ್ದ ಅವರ ಭಾಷೆಯ ಧಾಟಿಯೂ ನನ್ನನ್ನು ದಾರಿ ತಪ್ಪಿಸಿತ್ತು ಅನ್ನಬಹುದು. ಇದನ್ನ ಹಿರಿಯರಾದ ಲೇಖಕ- ರೈತ ಶ್ರೀಮಧುಸೂದನ ಪೆಜತ್ತಾಯರು ತಿದ್ದಿದ್ದಾರೆ. ಅವರದೆ ಮಾತುಗಳಲ್ಲಿ ಈ ಒಪ್ಪೋಲೆಯನ್ನ ಇಲ್ಲಿ ಹಾಕುತ್ತಿದ್ದೇನೆ.


ಪ್ರೀತಿಯ ಹರ್ಷ
ಮೀನಿನ ಬ್ಯಾರಿ ಮತ್ತು ಗುಜರಿ ಸಾಬರು.
ನಮ್ಮಲ್ಲಿ ನಾವು ಕಾಣುತ್ತಾ ಇದ್ದ ಮೀನಿನ ಬ್ಯಾರಿಗಳು ಮಾಪ್ಳೆ (Mopla) ಜನಾಂಗದವರು. ಅವರದು ಬ್ಯಾರಿ ಭಾಷೆ.
ನಮ್ಮ ಗುಜರೀ ಸಾಬರು ಉರ್ದು ಮಾತನಾಡುವ ಮುಸ್ಲಿಂ. ( ಸಾಬರು ಅಂದರೆ ಉರ್ದು ಮಾತಿನ ಮುಸ್ಲಿಮ್)
ಲಬ್ಬೆ ಅಂದರೆ ಆರ್ಕಾಟ್ ಕಡೆಯ ವ್ಯಾಪಾರೀ ಮುಸ್ಲಿಮರು. ತಲೆಯ ಮೇಲೆ ಕುರಿ ಚರ್ಮದ ಟೊಪ್ಪಿ.
ಇವರದು ತಮಿಳು ಬೆರೆತ ಅಶುದ್ಧ ಕನ್ನಡ. ನಮ್ಮೂರಿನಿಂದ ಗುಜರೀ ಸಾಬರು ಒಟ್ಟು ಹಾಕಿದ ಗುಜರಿ ಮತ್ತು ನಮ್ಮೂರಿನಲ್ಲಿ ಒಟ್ಟು ಹಾಕಿದ ಪ್ರಾಣಿಗಳ ಚರ್ಮಗಳನ್ನು ಕೊಳ್ಳುತ್ತಾ ಇದ್ದರು. ಇವರ ಠಿಕಾಣಿ ಹೆಚ್ಚಾಗಿ ಮೆಟ್ಟಿನ ಅಂಗಡಿಗಳಲ್ಲಿ. ಯಾಕೆಂದರೆ, ಮೆಟ್ಟಿನ ಅಂಗಡಿಯವರು ಪ್ರಾಣಿಗಳ ಚರ್ಮ ಕೊಳ್ಳುತ್ತಾ ಇದ್ದರು. ಈ ಚರ್ಮಗಳನ್ನು ಲಬ್ಬೆಗಳು ತಮ್ಮೂರಾದ ತಮಿಳುನಾಡಿನ ವಾನಿಯಂಬಾಡಿಗೆ ಕೊಂಡು ಹೋಗಿ ಹದ (Tan) ಮಾಡಿ ಮಾರುತ್ತಾ ಇದ್ದರು.
ಈ ಮೂರು ವರ್ಗದ ಜನರೂ ವ್ಯಾಪಾರಸ್ಥರು. ಚರ್ಚೆಯಲ್ಲಿ ಸದಾ ಗೆಲ್ಲುವ ಜನ. ಆದರೆ, ಕಪಟಿ ಮೋಸಗಾರರಲ್ಲ.
ಈ ವರ್ಗದ ಮೂರು ಪಂಗಡದವರಿಗೂ ನಮ್ಮೂರ ಅಂಗಳಗಳಿಗೆ ಸ್ವಾಗತ ಇತ್ತು.
ಇವರಾರನ್ನೂ ಯಾರೂ ಮನೆಯೊಳಗೆ ಸೇರಿಸುತ್ತಾ ಇಲ್ಲ.
ಇಂದು ನಮ್ಮೂರಿಗೆ ಮೀನು Ape ಏರಿಬರುತ್ತಾ ಇದೆ.
ಎಲ್ಲರೂ ಪ್ಯಾಂಟ್ ಧಾರಿಗಳು.
ಇಂದು ಎಲ್ಲರೂ ತ್ರಿಚಕ್ರಿಗಳು.
ಪ್ರೀತಿಯಿಂದ

ಪೆಜತ್ತಾಯ