28 September 2012

ವಲಿ.... (ಭಾಗ-3)

ಈ ಧಾರ್ಮಿಕ ಗುಪ್ತಸಂಘದ ಸದಸ್ಯರು ತಾವು ಕೇವಲ ಧಾರ್ಮಿಕ ಕಾರಣಗಳಿಂದ ಮಾತ್ರ ಹೀಗೆ ಮತಾಂತರಿತಗೊಂಡಿದ್ದೇವೆ ಎಂದು ಬಿಂಬಿಸುತ್ತಿದ್ದರೂ ಗುಲಾಮಗಿರಿಯೆಂಬ ನರಕದಿಂದ ಪಾರಾಗುವುದೆ ಬಹುತೇಕರ ಒಳ ಉದ್ದೇಶವಾಗಿತ್ತು. ಅಲ್ಲದೆ ಇಸ್ಲಾಮಿನಲ್ಲಿ ಪಾಪ- ಪುಣ್ಯಗಳಿಗೆ ಅತಿ ಹೆಚ್ಚಿನ ಮಹತ್ವವನ್ನು ನೀಡಿ, ಪುಣ್ಯವಂತರು ಸ್ವರ್ಗವಾಸಿಗಳಾಗುತ್ತಾರೆ ಹಾಗೂ ಪಾಪಿಗಳು ನರಕದ ಉರಿಜ್ವಾಲೆಯಲ್ಲಿ ಬೆಂದುಹೋಗುತ್ತಾರೆ ಎಂದು ನಂಬಿಕೆ ಹುಟ್ಟಿಸಿದ್ದು ಕೂಡ ಅತಿಹೆಚ್ಚಿನ ಸಂಖ್ಯೆಯ ಅನಕ್ಷರಸ್ತ ಬಡ ಅರಬ್ಬೀ ಧರ್ಮಭೀರುಗಳು ಮತಾಂತರವಾಗಿ ನರಕದ ಜ್ವಾಲೆಯಿಂದ ಪಾರಾಗಲು ಮಾಡಿದ್ದ ಲೌಕಿಕ ಪ್ರಯತ್ನವೆ ಅನ್ನುವುದು ಇತಿಹಾಸಗಾರ ಮಾರ್ಗೊಲಿಯತ್ತನ್ನ ಅನಿಸಿಕೆ. ಮಹಮದ್ ತನ್ನ ನೂತನ ಧರ್ಮಾನುಯಾಯಿಗಳಿಗೆ 'ಸಲಾಂ ಆಲೈಕುಂ' ಅಂದರೆ ಅರಬ್ಬಿಯಲ್ಲಿ 'ಶಾಂತಿಯಿರಲಿ ನಿನ್ನ ಮೇಲೆ"ಎಂಬ ಪರಸ್ಪರ ಹಾರೈಕೆಗಳ ವಿನಿಮಯದ ಆಚರಣೆ ಜಾರಿಗೆ ತರಲು ಅದಾಗಲೆ ಅಂತಹ ಹಾರೈಕೆಗಳ ಹಿನ್ನೆಲೆಯಿದ್ದ ಯಹೂದಿ ಹಾಗೂ ಕ್ರೈಸ್ತ ಧರ್ಮಗಳ ಪ್ರಭಾವದ ಕಾರಣದಿಂದಲೆ ಅನ್ನುವುದು ಮಾರ್ಗೊಲಿಯತ್ತನ್ನ ಹೇಳಿಕೆ. ಮಹಮದನ ಇಸ್ಲಾಮನ್ನು ಅಪ್ಪಿಕೊಂಡವರನ್ನ 'ಮುಸ್ಲಿಂ' ಇಲ್ಲವೆ 'ಹನೀಫಾ'ರೆಂದು ಕರೆಯಲಾಯಿತು. ಹೀಬ್ರೂ ಭಾಷೆಯಲ್ಲಿ 'ಹನೀಫಾ' ಎಂದರೆ 'ಆಷಾಢಭೂತಿ' ಎಂದೂ ಸಿರಿಯಾಕ್ ಭಾಷೆಯಲ್ಲಿ 'ಪಾಷಂಡಿ' ಎಂಬರ್ಥ ಬರುತ್ತದೆ. ಸಿರಿಯಾಕಿನಲ್ಲಿ 'ಮುಸ್ಲಿಂ' ಎಂದರೆ 'ವಿಶ್ವಾಸಘಾತುಕ' ಎಂದರ್ಥ! ಹಾಗೆ ನೋಡಿದರೆ ಇಸ್ಲಾಮಿಗಿಂತಲೂ ಹಿಂದೆಯೆ ಅರೇಬಿಯಾದಲ್ಲಿ ಏಕದೈವಾರಾಧಕರಿದ್ದು ಅವರನ್ನೂ ಸಹ 'ಹನೀಫಾ'ರೆಂದೆ ಕರೆಯಲಾಗುತ್ತಿತ್ತು, ಅನಂತರ ಇಸ್ಲಾಂ ಅನುಯಾಯಿಗಳಿಗೂ ಇದೆ ಹಣೆಪಟ್ಟಿ ಮುಂದುವರೆಯಿತಷ್ಟೆ. ಇದು ಮಹಮದನ ಧರ್ಮವಿರೋಧಿಗಳು ಕುಚೋದ್ಯದಿಂದ ಗೇಲಿಮಾಡಲು ಕೊಟ್ಟಿರಬಹುದಾದ ಹೆಸರಾಗಿರುವ ಸಾಧ್ಯತೆಯೂ ಇದೆ ಎನ್ನುವ ಇತಿಹಾಸಕಾರ ಮ್ಯೂರ್ ಹಂಗಿಸುವ ಅರ್ಥದಲ್ಲಿ ಹೀಗೆ ಕರೆಯಲಾಯಿತು ಎಂದಿದ್ದಾನೆ. ಆದರೆ ಮುಂದಿನ ದಿನಗಳಲ್ಲಿ ಮಹಮದ್ ಅದನ್ನೆ ಮುಸಲ್-ಉಲ್-ಇಮಾನ್ ಎಂದು ಉಚ್ಚರಿಸಿ ಹೊಸತೆ ಗೌರವಾರ್ಹವಾದ ಅ ರ್ಥಕಲ್ಪಿಸುವುದರಲ್ಲಿ ಸಫಲನಾದ. ಒಂದುದಿನ ಧೈರ್ಯ ಮಾಡಿ ಮಹಮದ್ ಕಾಬಾದ ಬಳಿಯೆ ನಿಂತು ಬಹಿರಂಗವಾಗಿ ತನ್ನ ಮತಪ್ರಚಾರವನ್ನು ಆರಂಭಿಸಿದ. ಅಲ್ಲಿ ನೆರೆದ ಜನರ- ಜಂಗುಳಿಯನ್ನು ಉದ್ದೇಶಿಸಿ "ಅಲ್ಲಾ ಒಬ್ಬನೆ ನಿಜವಾದ ದೈವ, ಅವನ ವಿನಃ ಇನ್ಯಾವ ದೈವವಿಲ್ಲ" (ಅಲ್ಲಾ ಹೋ ಅಕ್ಬರ್) ಎಂದು ನಿರಂತರವಾಗಿ ಕೂಗಿಕೂಗಿ ಹೇಳಲು ಆರಂಭಿಸಿದ. ಅವನ ಮಾತಿನಿಂದ ರೊಚ್ಚಿಗೆದ್ದ ಅಲ್ಲಿ ನೆರೆದಿದ್ದ ಬಹುಮಂದಿ ಅವನ ಮೇಲೆ ಹಲ್ಲೆ ನಡೆಸಲು ಶುರುವಿಟ್ಟರು. ಹೀಗೆ ಆತ ಆಪತ್ತಿನಲ್ಲಿ ಸಿಲುಕಿಕೊಂಡಿರುವ ಸಂಗತಿ ಖತೀಜಾ ಕುಟುಂಬಕ್ಕೆ ತಲುಪಿತು. ಆಕೆಯ ಮೊದಲ ಗಂಡ ಅಬು ಹಾಲತ್'ನ ಮಗ ಅಲ್ ಹಾರುಥ್ ತನ್ನ ಮಲತಂದೆಯ ರಕ್ಷಣೆಗಾಗಿ ಕೂಡಲೆ ಧಾವಿಸಿದ. ನಡೆದ ಕಾದಾಟದಲ್ಲಿ ವಿರೋಧಿಗಳು ಅವನನ್ನು ಅಲ್ಲಿಯೆ ಹೊಡೆದು ಕೊಂದರು. ಹೀಗಾಗಿ ಅವನು ಇಸ್ಲಾಮಿನ ಪ್ರಪ್ರಥಮ 'ಹುತಾತ್ಮ'ನ ಪಟ್ಟ ಗಳಿಸಿಕೊಂಡ ಅನ್ನುತ್ತಾನೆ ಇತಿಹಾಸಕಾರ ಮಾರ್ಗೊಲಿಯತ್. "ತಾನು ದೇವದೂತ,ಹೊಸ ಮತವೊಂದರ ಆರಂಭಕ್ಕೆ ದೇವರು ಪ್ರೇರೇಪಿಸಿ ತನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ" ಎಂಬ ಮಹಮದನ ಪ್ರಚಾರವನ್ನ ಕಾಬಾದ ಮುಖ್ಯ ಆರಾಧ್ಯ ದೈವ ಹುಬಾಬ್ ಸಹಿತ ಇನ್ನುಳಿದ 360 ದೇವರ ಅಚಲ ವಿಶ್ವಾಸಿಗಳಾಗಿದ್ದ ಬಹುತೇಕ ಮೆಕ್ಕಾ ನಿವಾಸಿಗಳು ಬಲವಾಗಿ ವಿರೋಧಿಸಲು ಆರಂಭಿಸಿದರು. ತಮಾಷೆಯೆಂದರೆ ಅವರು ಆರಾಧಿಸುತ್ತಿದ್ದ ಹುಬಾಬ್ ಹೊರತುಪಡಿಸಿದ ಇನ್ನುಳಿದ ಮೂರ್ತಿಗಳಲ್ಲಿ ಅಲ್ಲಾನದ್ದೂ ಒಂದು ಪ್ರತಿಮೆ ಇತ್ತು. ಅಂದರೆ ಅಲ್ಲಾ ಇಸ್ಲಾಂ ಪೂರ್ವದಿಂದಲೂ ಜನರ ವಿಶ್ವಾಸ ಸಂಪಾದಿಸಿದ್ದ ಒಬ್ಬ ದೈವವಾಗಿದ್ದ ಹಾಗೂ ಇಸ್ಲಾಂ ಪೂರ್ವದಲ್ಲಿ ಆತನ ಕಾಬಾದಲ್ಲಿ ಅಲ್ಲಾನ ಮೂರ್ತ ಸ್ವರೂಪವಿದ್ದು ಮೂರ್ತಿಯನ್ನೆ ಅಲ್ಲಿ ನಿತ್ಯ ಪೂಜಿಸಲಾಗುತ್ತಿತ್ತು. ಅದಕ್ಕೂ ನಿತ್ಯ ಪೂಜೆ ಸಲ್ಲುತ್ತಿತ್ತು! ಜನರು ಮಹಮದನಿಗೆ ಜಿನ್ ಅಂದರೆ ದೆವ್ವ ಮೆಟ್ಟಿಕೊಂಡಿದೆ ಎಂದು ತಲೆಗೊಬ್ಬರಂತೆ ಆಡಿಕೊಳ್ಳಲು ಆರಂಭಿಸಿದರು. ಅವರ ಈ ಆಪಾದನೆ ಮಹಮದನನ್ನು ತೀವ್ರವಾಗಿ ಘಾಸಿಗೊಳಿಸಿತು. ಇದರಿಂದ ಅವನು ಬೇಸರಕ್ಕೆ ತುತ್ತಾದ. ಅದನ್ನೆ ಅವನು ಕುರಾನಿನ ಸುರಾಗಳ ಮೂಲಕ (ಸುರಾ 67/24-27) ತೋಡಿಕೊಂಡ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ. ಸುಮಾರು ಹತ್ತುವರ್ಷಗಳವರೆಗೆ ಹೀಗೆಯೆ ವಿರೋಧಿಗಳ ನಡುವೆ ಮೆಕ್ಕಾದಲ್ಲಿಯೆ ಬಾಳಿ ಬದುಕಿದ ಮಹಮದ್ ತನ್ನ ಮತಪ್ರಚಾರ ಯಶಸ್ವಿಯಾಗಿ ಕೈಗೊಳ್ಳಲು ಮಹಮದನ ಪತ್ನಿ ಖತೀಜಳ ಅರ್ಪಣಾ ಭಾವದಿಂದ ಕೂಡಿದ ಭಕ್ತಿ ಹಾಗೂ ಆಕೆಯ ಸಂಪತ್ತಿನ ಪ್ರಭಾವದಿಂದ, ಅಲ್ಲದೆ ದೊಡ್ಡಪ್ಪ ಅಬು ತಾಲಿಬ್'ನ ಪ್ರೀತಿ ಒಲುಮೆ ವಿಶ್ವಾಸ ಹಾಗೂ ಅಬು ಬಾಕರ್'ನ ಪ್ರೇರೇಪಣಾಗುಣದಿಂದ ಹಾಗೂ ಅಂಧ ವಿಶ್ವಾಸಗಳಿಂದ ಮಾತ್ರ ಸಾಧ್ಯವಾಯಿತು ಅನ್ನೋದು ಇತಿಹಾಸಕಾರ ಮ್ಯೂರನ ಅಂಬೋಣ. ದೊಡ್ಡಪ್ಪ ಅಬುತಾಲೀಬನ ಸಮಯಪ್ರಜ್ಞೆಯಿಂದ ಅನೇಕಬಾರಿ ಖುರೈಷಿಗಳಿಂದ ಒದಗಿಬರಬಹುದಾಗಿದ್ದ ಅತಿ ಹಿಂಸೆ ಅಥವಾ ಪ್ರಾಣಹಾನಿಯಿಂದ ಮಹಮದ್ ತಪ್ಪಿಸಿಕೊಂಡ. ಆದರೆ ಅಪರೂಪವಾಗಿ ಇಸ್ಲಾಮಿಗೆ ಮತಾಂತರವಾದ ಖುರೈಶಿಗಳಲ್ಲಿ ಕೆಲವರು ತಾವು ಅಪ್ಪಿದ ಹೊಸ ಧರ್ಮಕ್ಕಾಗಿ ಸ್ವಂತ ಹೆತ್ತವರ- ಒಡಹುಟ್ಟಿದವರ ವಿರುದ್ಧವೆ ಹೋರಾಡಿದ ನಿದರ್ಶನಗಳೂ ಕಂಡುಬಂದವು. ಧರ್ಮಪ್ರಚಾರದ ಹೊತ್ತಲ್ಲಿ ಪ್ರವಚನ, ಭಾಷಣ ಇಲ್ಲವೆ ಜನರನ್ನು ಉದ್ದೇಶಿಸಿ ಮಾತನಾಡಲು ಉಧ್ಯುಕ್ತನಾಗುತ್ತಿದ್ದ ಸಂದರ್ಭಗಳಲ್ಲಿ ಮಹಮದನ ಕೆನ್ನೆ ಕೆಂಪಗಾಗುತ್ತಿತ್ತು ಮತ್ತು ಧ್ವನಿ ತಾರಕಕ್ಕೆ ಏರುತ್ತಿತ್ತು. ಆ ಕ್ಷಣ ಅವನ ನಿತ್ಯದ ನಿರ್ಲಿಪ್ತ ಸ್ವಭಾವ ಉಗ್ರವಾಗುತ್ತಿತ್ತು. ಆತ ಎಷ್ಟು ಪ್ರಬಲ ಭಾಷಣಕಾರನಾಗಿದ್ದನೊ ಅಷ್ಟೆ ಕೆಟ್ಟ ಚರ್ಚಾಪಟುವಾಗಿದ್ದನು. ತನ್ನ ಈ ನ್ಯೂನತೆಯನ್ನು ಬಹಳ ಚೆನ್ನಾಗಿ ಅರಿತಿದ್ದ ಆತ ಅಂತಹ ಪರಿಸ್ಥಿತಿಗಳಲ್ಲಿ ದೈವವಾಣಿಯ ಮೊರೆ ಹೋಗುತ್ತಿದ್ದ. ಅವಿಶ್ವಾಸಿಗಳ ಪ್ರಶ್ನೆಗಳಿಗೆ ತರ್ಕಬದ್ದ ಉತ್ತರ ನೀಡಲಾರದೆ ಅವರು ಅಲ್ಲಿಂದ ನಿರ್ಗಮಿಸುವಂತೆ ಸುರಾದ ಆಜ್ಞೆ ಪಡೆದುಕೊಂಡು ಅದನ್ನ ಪಾಲಿಸಿ ಪಾರಾಗುತ್ತಿದ್ದ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಈ ಪಲಾಯನವಾದದ ಕುರುಹು ಇಂದಿಗೂ ಇಸ್ಲಾಮಿನ ಅನುಯಾಯಿಗಳಿಗೆ ಬಳುವಳಿಯಾಗಿ ಸಂದಿರುವುದು ದುರಂತ. ಮುಂದಿನ ನಾಲ್ಕು ವರ್ಷಗಳಲ್ಲಿ ಕೇವಲ ನಲವತ್ತು ಮಂದಿಯಷ್ಟೆ ಇಸ್ಲಾಮಿಗೆ ಪರವಶವಾದರು. ಮೊದಮೊದಲು ಈ ಬಗ್ಗೆ ಉದಾಸೀನರಾಗಿದ್ದ ಮೆಕ್ಕಾದ ಖುರೈಷಿಗಳು ಕ್ರಮೇಣ ಅದನ್ನ ಅಸಹನೆಗೆ ತಿರುಗಿಸಿಕೊಂಡರು. ಅರೇಬಿಯಾದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಾಬಾದ ಪ್ರಾಮುಖ್ಯತೆ ಮಹಮದನ ಧರ್ಮೊಪದೇಶದಿಂದ ಮುಕ್ಕಾದೀತು ಎಂಬ ಆತಂಕ ಅವರದ್ದಾಗಿತ್ತು. ಹೀಗೆಯೆ ಮುಂದುವರೆಯಲು ಬಿಟ್ಟರೆ ಕಾಬಾದ ಅಸ್ತಿತ್ವಕ್ಕೆ ಖಂಡಿತ ಸಂಚಕಾರ ಬರಲಿದೆ ಎಂಬುದನ್ನು ಅರಿತ ಖುರೈಷಿಗಳು ಹಿಂಸಾತ್ಮಕವಾಗಿ ಮಹಮದನ ಧರ್ಮಪ್ರಚಾರಕ್ಕೆ ಎದಿರೇಟು ಕೊಡಲು ಆರಂಭಿಸಿದರು. ಮತಾಂತರಗೊಂಡ ಒಬ್ಬನ ವಿರುದ್ಧ ಅವರು ದೌರ್ಜನ್ಯ ಎಸಗುತ್ತಿದ್ದಾಗ ಬಿಡಿಸಿಕೊಳ್ಳಲು ಬರುವ ಅಂತವನ ನೆಂಟರೂ ಅವರ ಹಿಂಸೆಗೆ ತುತ್ತಾಗಬೇಕಾಗುತ್ತಿತ್ತು, ಯಾರೊಬ್ಬರ ನೈತಿಕ ಬೆಂಬಲವೂ ಸಿಗದ ಗುಲಾಮರ ಪರಿಸ್ಥಿತಿಯಂತೂ ತೀರಾ ಶೋಚನೀಯವಾಗಿದ್ದಿತು. ಹೀಗೆ ಶುರುವಾದ ಖುರೈಷಿಗಳ ಹಿಂಸಾ ವಿನೋದದ ವಿರುದ್ಧವಾಗಿ ನೂತನ ಧರ್ಮಾನುಯಾಯಿಗಳು ಆತ್ಮರಕ್ಷಣೆಗೆ ಮುಂದಾದರು. ಅವರೂ ಹಿಂಸಾಚಾರಕ್ಕಿಳಿದರು. ಮಹಮದ್ ಹಾಗೂ ಆತನ ಅನುಯಾಯಿಗಳಿಗೆ ಅದು ಕ್ರಮೇಣ ರೂಢಿಯಾಗಿ ಸಹನೆ, ತಾಳ್ಮೆಗಳನ್ನೆಲ್ಲ ಕಿತ್ತೊಗೆದು ವಿರೋಧಿಗಳ ವಿರುದ್ಧ ನೇರಕಾರ್ಯಾಚರಣೆಗೆ ಅವರಿಳಿಯಲು ಇದರಿಂದ ಮೊದಲಾಯಿತು. ಕ್ರಿಸ್ತಶಕ 613ರ ಸುಮಾರಿಗೆ ಅದೂವರೆಗೂ ಗುಪ್ತವಾಗಿ ಸಾಗುತ್ತಿದ್ದ ಮಹಮದನ ಮತಪ್ರಚಾರ ಅನಂತರದ ದಿನಗಳಲ್ಲಿ ಅನುಯಾಯಿಗಳ ಸಂಖ್ಯೆ ವೃದ್ಧಿಸಿದಂತೆ ತೀರ ಬಹಿರಂಗಗೊಂಡಿತು. ಆತ ಖುರೈಷಿಗಳ ವಿಗ್ರಹಾರಾಧನೆಯನ್ನ ಕಟುವಾಗಿ ಖಂಡಿಸಿದ. ಅವರ ಪಿತೃಗಳೂ ವಿಗ್ರಹಾರಾಧಕರಾಗಿ ಆತ್ಮನಾಶಕ್ಕೀಡಾಗಿದ್ದಾರೆ ಎಂದು ಆತ ಹೇಳಿದಾಗ ಖುರೈಷಿಗಳು ಕೆರಳಿ ನಿಂತರು. ಮೆಕ್ಕಾದ ಹೊರವಲಯದಲ್ಲಿ ಮಹಮದನ ಬಂಟ ಸಾದ್ ಬಹಿರಂಗವಾಗಿ ನಮಾಜ್ ಮಾಡುತ್ತಿದ್ದಾಗ ಅದನ್ನು ಕಂಡು ಕೋಪಗೊಂಡ ಖುರೈಷಿಗಳು ಕಲಹಕ್ಕೆ ನಾಂದಿ ಹಾಡಿದರು, ಜಗಳ ರಕ್ತಪಾತಕ್ಕೆ ತಿರುಗಿ ಒಂಟೆಯನ್ನು ಹೊಡೆಯುವ ಮೊನೆಗೋಲಿನಿಂದ ಸಾದ್ ವಿರೋಧಿಯೋಬ್ಬನನ್ನು ಅಲ್ಲಿಯೆ ಹೊಡೆದುಸಾಯಿಸಿದ. ಇತಿಹಾಸಕಾರ ಅಲ್ ತಮೀಮಿಯ ಪ್ರಕಾರ ಇದು 'ಇಸ್ಲಾಮಿಗಾಗಿ ಚಲ್ಲಿದ ಮೊತ್ತ ಮೊದಲನೆಯ ರಕ್ತ'. ಇದೆ ಸಮಯದಲ್ಲಿ ಪ್ರಾಯಶಃ ಮಹಮದ್ ನೂತನವಾಗಿ ಮತಾಂತರವಾಗಿದ್ದ ಅಕ್ರಂ ಎಂಬಾತನ ಮನೆಯನ್ನ ಆಶ್ರಯಕ್ಕಾಗಿ ಪಡೆದುಕೊಂಡು ಅಲ್ಲಿದ್ದುಕೊಂಡೆ ಮತಪ್ರಚಾರವನ್ನು ಮುಂದುವರೆಸಿದ. ಅದು ಕಾಬಾ ಗುಡಿಯ ಹತ್ತಿರದಲ್ಲೆ ಇದ್ದು ಅಲ್ಲಿಗೆ ಹೋಗಿ ಬರುವ ಯಾತ್ರಿಕರು ಸಾಗುವ ದಾರಿಯಲ್ಲೆ ಇದ್ದುದರಿಂದ ಜನಸಾಂದ್ರತೆ ಸಹಜವಾಗಿ ಹೆಚ್ಚಿದ್ದು ಪ್ರಚಾರಕ್ಕೆ ಹೆಚ್ಚಿನ ಅವಕಾಶಗಳು ಅಲ್ಲಿದ್ದವು. ಮುಂದೆ ಇದೆ 'ಇಸ್ಲಾಮಿನ ಮನೆ' ಎಂಬ ಪಟ್ಟ ಪಡೆಯಿತು. ಇತ್ತೀಚಿಗೆ ಕಾಬಾದ ಉಸ್ತುವಾರಿ ಹೊತ್ತ ಸೌದಿ ದೊರೆಯ ಆಡಳಿತ ಕಾಬಾಕ್ಕೆ ಸನಿಹದಲ್ಲಿಯೆ ಹಜ್ ಯಾತ್ರಿಕ ಸಿರಿವಂತರಿಗಾಗಿ ದೊಡ್ಡದೊಡ್ಡ ಬಹುಮಹಡಿ ಕಟ್ಟಡಗಳನ್ನ, ಪಂಚತಾರ ಹೋಟೆಲುಗಳನ್ನ ಕಟ್ಟಿಸುವ ಹುಮ್ಮಸ್ಸಿನಲ್ಲಿ ಅಬುಬಾಕರನ ಹಾಗೂ ಖತೀಜಾಳ ಮನೆಯನ್ನ ನೆಲಸಮಗೊಳಿಸಿತ್ತು ಅಕ್ರಮನ ಮನೆಗೂ ಸ್ಮಾರಕದ ಬೆಲೆ ಅರಿಯದ ಈ ಧ್ವಂಸಕರು ಒಂದು ಮೋಕ್ಷ ಕಾಣಿಸಿದ್ದಾರೆ ಏನೇನೂ ಅಚ್ಚರಿಯಿಲ್ಲ. (ಇನ್ನೂ ಇದೆ....)

2 comments:

prashu said...

i liked it.can u tell me the book name.i want to read it .please.nice writings

Anagha Kirana ಅನಘ ಕಿರಣ said...

ಖಂಡಿತಾ, ಪುಸ್ತಕದ ಹೆಸರು "ಮಹಮದ್ ಪೈಗಂಬರ್ ಹಾಗೂ ಖಲೀಫರು", ಲೇಖಕರು: ಆಗುಂಬೆ ಎಸ್ ನಟರಾಜ್. ಅವರ ಸಂಪರ್ಕ ಸಂಖ್ಯೆ : 9449101086.